ಶ್ರೀಕ್ಷೇತ್ರ ಮಾಯಾಪುರ
ಹೃಷೀಕೇಣ ಹೃಷೀಕೇಶ ಸೇವನಂ ಭಕ್ತಿರುಚ್ಯತೇ ಎಂಬ ಮಾತಿದೆ. ಇದರ ಅರ್ಥ, ‘ಇಂದ್ರಿಯಗಳಿಂದ ಇಂದ್ರಿಯಗಳ ಈಶ್ವರನಾದ ಹೃಷೀಕೇಶನನ್ನು ಸೇವಿಸುವುದಕ್ಕೆ ಭಕ್ತಿ ಎನ್ನುತ್ತಾರೆ’. ಭಗವಂತನಲ್ಲಿ ಭಕ್ತಿಯು ಮೂಡಲು ಇಂದ್ರಿಯನಿಗ್ರಹ ಅಗತ್ಯ. ಅನಿಯಂತ್ರಿತ ಕುದುರೆಗಳು ತಮ್ಮಿಚ್ಛೆ ಬಂದಲ್ಲಿಗೋಡಿ ರಥದ ದಿಕ್ಕನ್ನು ತಪ್ಪಿಸುವಂತೆ, ಅನಿಯಂತ್ರಿತ ಇಂದ್ರಿಯಗಳು ಮನುಷ್ಯನ ಗುರಿ ತಪ್ಪಿಸುತ್ತವೆ. ಆದರೆ, ಇಂದ್ರಿಯನಿಗ್ರಹಕ್ಕಾಗಿ ನಮ್ಮ ಇಂದ್ರಿಯಗಳಿಂದ ಕೆಲಸ ಮಾಡುವುದನ್ನು ನಿಲ್ಲಿಸಬೇಕಾಗಿಲ್ಲ.

ಅವುಗಳನ್ನು ದೇವೋತ್ತಮ ಪರಮಪುರುಷನ ಸೇವೆಯಲ್ಲಿ ನಿಯೋಜಿಸಿದರೆ ಅವನಲ್ಲಿ ಭಕ್ತಿಯು ಸುಲಭವಾಗಿ ಮೂಡುತ್ತದೆ. ಅಂತೆಯೇ ಇಂದ್ರಿಯಗಳ ಹಾಗೂ ಜೀವನದ ಸಾರ್ಥಕ್ಯ ಉಂಟಾಗುತ್ತದೆ.
ಎಲ್ಲ ಇಂದ್ರಿಯಗಳನ್ನೂ ಶ್ರೀಹರಿಯ ಸೇವೆಯಲ್ಲಿ ಹೇಗೆ ನಿಯೋಜಿಸಬಹುದೆಂದು ಶ್ರೀಮದ್ಭಾಗವತದಲ್ಲಿ ಬರುವ ಅಂಬರೀಷ ಮಹಾರಾಜನ ಕಥೆಯಿಂದ ತಿಳಿಯಬಹುದು. ಅಂಬರೀಷ ರಾಜನ ಕುರಿತಾದ ಅಲ್ಲಿನ ವರ್ಣನೆ ಹೀಗಿದೆ,
”ಅಂಬರೀಷನು ತನ್ನ ಮನಸ್ಸನ್ನು ಶ್ರೀಕೃಷ್ಣನ ಚರಣಾರವಿಂದಗಳಲ್ಲಿ ಲೀನಗೊಳಿಸಿದ್ದನು. ತನ್ನ ಮಾತುಗಳನ್ನು ಭಗವಂತನ ಗುಣಾನುವರ್ಣನೆಗೆ ಬಳಸುತ್ತಿದ್ದನು. ತನ್ನ ಕೈಗಳನ್ನು ಭಗವಂತನ ಮಂದಿರಗಳನ್ನು ಶುದ್ಧಗೊಳಿಸಲು ಉಪಯೋಗಿಸುತ್ತಿದ್ದನು. ತನ್ನ ಕಿವಿಗಳನ್ನು ಶ್ರೀಕೃಷ್ಣನ ದಿವ್ಯ ಕಥೆಗಳನ್ನು ಕೇಳಲು ಬಳಸುತ್ತಿದ್ದನು.
ತನ್ನ ಕಣ್ಣುಗಳನ್ನು ಮುಕುಂದನ ದಿವ್ಯಮೂರ್ತಿಗಳ ದರ್ಶನ ಮಾಡಲೂ, ಮೂಗನ್ನು ಹರಿಗೆ ಅರ್ಪಿಸಿದ ತುಳಸೀ, ಪುಷ್ಪಗಳ ಸುವಾಸನೆಯನ್ನಾಘ್ರಾಣಿಸಲೂ, ನಾಲಗೆಯನ್ನು ಭಗವಂತನಿಗೆ ಅರ್ಪಿಸಿದ ಪ್ರಸಾದವನ್ನು ಸೇವಿಸಲೆಂದೂ ಬಳಸುತ್ತಿದ್ದನು. ತನ್ನ ತಲೆಯನ್ನು ಬಾಗಿಸಿ ಭಗವಂತನ ಪಾದಕಮಲಗಳಿಗೆ ವಂದಿಸಲೆ೦ದೂ, ತನ್ನ ಕಾಲುಗಳನ್ನು ಭಗವಂತನ ಮಹಿಮೆಗಳನ್ನು ಸಾರುವ ಪವಿತ್ರಕ್ಷೇತ್ರಗಳಿಗೆ ಯಾತ್ರೆ ಮಾಡಲೆ೦ದೂ ಬಳಸುತ್ತಿದ್ದನು. ಭಗವಂತನ ದಾಸ್ಯಕ್ಕಾಗಿಯೂ ಅವನ ಭಕ್ತರ ಸಂಗಕ್ಕಾಗಿಯೂ ಆಸೆ ಪಡುತ್ತಿದ್ದನು.”
ಹೀಗೆ ಇಂದ್ರಿಯಗಳನ್ನು ಪರಮಪುರುಷನ ಸೇವೆಯಲ್ಲಿ ತೊಡಗಿಸಿದರೆ, ಅವು ಕೆಟ್ಟ ವಿಷಯಗಳ ಕಡೆಗೆ ಹೋಗುವುದು ತಪ್ಪುತ್ತದೆ.
ಎಲ್ಲ ಇಂದ್ರಿಯಗಳನ್ನೂ ಪರಮಪುರುಷನ ಸೇವೆಗೆ ಬಳಸುವಂತೆ, ಕಾಲುಗಳನ್ನು ತೀರ್ಥಯಾತ್ರೆ ಮಾಡಲು ಬಳಸಬೇಕು (ಪಾದೌ ಹರೇಃ ಕ್ಷೇತ್ರಪದಾನುಸರ್ಪಣೇ– ಭಾಗವತ – 9.4.20). ಆದರೆ ಭಗವಂತನು ಎಲ್ಲೆಡೆಯೂ ಇರುವಾಗ ನಿರ್ದಿಷ್ಟ ತೀರ್ಥಕ್ಷೇತ್ರಗಳೆಂಬ ಸ್ಥಳಗಳಿಗೇಕೆ ಹೋಗಿ ಅವನ ದರ್ಶನ ಹೊಂದಬೇಕು? ಈ ಪ್ರಶ್ನೆಯೇಳುವುದು ಸಹಜ. ಇದಕ್ಕೆ ಪದ್ಮಪುರಾಣ ಹೀಗೆ ಉತ್ತರ ನೀಡುತ್ತಿದೆ.
ತೀರ್ಥೇಶು ಲಭ್ಯತೇ ಸಾಧುಃ ರಾಮಚಂದ್ರಪರಾಯಣಃ |
ತಸ್ಮಾತ್ ತೀರ್ಥೇಷು ಗಂತವ್ಯಂ ನರೈಃ ಸಂಸಾರಭೀರುಭಿಃ ||
‘ತೀರ್ಥಕ್ಷೇತ್ರಗಳಲ್ಲಿ ದೇವೋತ್ತಮ ಪರಮಪುರುಷನಾದ ಶ್ರೀರಾಮನ ಭಕ್ತರಾದ ಸಾಧು ಸತ್ಪುರುಷರ ಸಂಗಮವಾಗುತ್ತದೆ. ಆದ್ದರಿ೦ದ, ಸಂಸಾರ ತಾಪತ್ರಯಗಳಿಂದ ನೊಂದಿರುವವರು ತೀರ್ಥಯಾತ್ರೆ ಮಾಡಬೇಕು.”
ತೀರ್ಥ ಎಂಬ ಪದವು, ತೃ ಪ್ಲವನತರಣಯೋಃ ಎಂಬ ಧಾತುವಿನಿಂದ ವ್ಯುತ್ಪತ್ತಿಯಾಗಿದೆ. ಇದರರ್ಥ, ವ್ಯಕ್ತಿಯನ್ನು ಕಷ್ಟಗಳಿಂದ ದಾಟಿಸುವುದೇ ತೀರ್ಥ ಎಂದು, ‘ತೀರ್ಯತೇ ಅನೇನ ಪಾಪಾತ್’, ”ಪಾಪಗಳಿಂದ ರಕ್ಷಿಸುವುದೇ ತೀರ್ಥ’.
ತೀರ್ಥಕ್ಷೇತ್ರಗಳಿಗೆ ಹೋದರೆ, ಗಂಗಾದಿ ಪುಣ್ಯನದಿಗಳಲ್ಲಿ ಸ್ನಾನ ಮಾಡಿದರೆ, ಪಾಪಶೇಷಗಳೆಲ್ಲವೂ ನಾಶವಾಗುವವೆಂದು ಹೇಳುತ್ತಾರೆ. ಶಾರೀರಕ ಶುದ್ಧಿ, ಮಾನಸಿಕ ಶುದ್ಧಿ, ಮೋಕ್ಷ ಸಿದ್ಧಿಗಳುಂಟಾಗುವವೆನ್ನುತ್ತಾರೆ. ತೀರ್ಥಕ್ಷೇತ್ರಗಳಿಗೆ ಇಂಥ ಮಹಿಮೆ ಹೇಗೆ ಬಂದಿತು? ಇದಕ್ಕೆ ಉತ್ತರ, ಪದ್ಮಪುರಾಣದ ಮೇಲಿನ ಶ್ಲೋಕದಲ್ಲಿದೆ. ಭಕ್ತರ, ಭಾಗವತರ, ಸಾಧುಗಳ ಸಂಗಮದಿಂದಲೇ ತೀರ್ಥಗಳಿಗೆ ಇಂಥ ಮಹಿಮೆಯುಂಟಾಗಿದೆ. ಇಂಥ ಭಕ್ತರ ಭಕ್ತಿಗೆ ಸೋತು ಭಗವಂತನು ತಾನೇ ಸ್ವಯಂ ಇಂಥ ತೀರ್ಥಕ್ಷೇತ್ರಗಳಲ್ಲಿ ನೆಲೆಸಿಬಿಟ್ಟಿದ್ದಾನೆ!
ಒಮ್ಮೆ ಗಂಗಾದೇವಿಯು ನಾರದ ಮಹರ್ಷಿಗಳನ್ನು ಕೇಳಿದಳು, ”ಪೂಜ್ಯರೇ, ಅನೇಕ ಪಾಪಿಷ್ಠರು ಬಂದು ನನ್ನ ನದಿಯ ನೀರಿನಲ್ಲಿ ಸ್ನಾನ ಮಾಡಿ ಪಾಪಗಳನ್ನು ಬಿಟ್ಟು ಹೋಗುತ್ತಾರೆ. ಇದರಿಂದ ಹೆಚ್ಚುತ್ತಿರುವ ನನ್ನ ಪಾಪಗಳನ್ನು ಕಳೆದುಕೊಳ್ಳುವುದು ಹೇಗೆ?”
ಅದಕ್ಕೆ ನಾರದರು ಹೀಗೆ ಉತ್ತರಿಸಿದರು, “ದೇವಿ! ನಿನ್ನ ನದಿಯ ನೀರಲ್ಲಿ ಸಾಧುಗಳೂ ಭಕ್ತರೂ ಸ್ನಾನ ಮಾಡಿದಾಗ ನಿನ್ನ ಪಾಪಗಳು ನಾಶವಾಗುತ್ತವೆ!” ಆದ್ದರಿಂದ ಭಾಗವತವು ಇಂಥ ಭಕ್ತಮಹಾಜನರನ್ನು ”ತೀರ್ಥೀಕುರ್ವ೦ತಿ ತೀರ್ಥಾನಿ ಸ್ವಾಂತಸ್ಥೇನ ಗದಾಭೃತಾ” (ತಮ್ಮ ಹೃತ್ಕಮಲಗಳಲ್ಲಿ ಶ್ರೀಹರಿಯನ್ನು ಸ್ಥಾಪಿಸಿರುವ ಭಕ್ತರು ತೀರ್ಥಕ್ಷೇತ್ರಗಳನ್ನೇ ಪಾವನಗೊಳಿಸುತ್ತಾರೆ) ಎಂದು ವರ್ಣಿಸುತ್ತದೆ. ತೀರ್ಥಕ್ಷೇತ್ರಗಳಿಗೆ ಹೋಗಿಯೂ ಅಂಥ ಭಗವದ್ಭಕ್ತರನ್ನು ಮಾತನಾಡಿಸದಿದ್ದರೆ, ಅವರ ಹಿತೋಪದೇಶಗಳನ್ನು ಕೇಳದಿದ್ದರೆ, ಅಂಥವನು ಒಬ್ಬ ಮೂರ್ಖನೆನ್ನುತ್ತದೆ ಭಾಗವತ.
ಆದ್ದರಿಂದ, ಲೌಕಿಕ ರೀತಿಯಲ್ಲಿ, ವಿಹಾರಸ್ಥಳಗಳಿಗೆ ಭೇಟಿ ನೀಡುವಂತೆ ತೀರ್ಥಯಾತ್ರೆ ಮಾಡದೆ, ಆಧ್ಯಾತ್ಮಿಕ ಉದ್ದೇಶದಿಂದ ಮಾಡಬೇಕು. ತೀರ್ಥಕ್ಷೇತ್ರಕ್ಕೆ ಹೋದಾಗ ಅಲ್ಲಿನ ಸ್ಥಳ ಮಹಿಮೆಯ ಬಗ್ಗೆ ಅರಿಯಲು ಪ್ರಯತ್ನಿಸಬೇಕು. ಸಾಧುಸಜ್ಜನರ ಸಂಗ ಮಾಡಬೇಕು. ಅವರ ಮಹಿಮಾನ್ವಿತ ಕಥೆಗಳನ್ನು ಕೇಳಬೇಕು. ಇದರಿಂದ ಭಗವಂತನಲ್ಲಿ ಭಕ್ತಿಯು ಹೆಚ್ಚಿ ಮನಸ್ಸ ಹೃದಯವೂ ನಿರ್ಮಲವಾಗುತ್ತವೆ.

ಭಾರತವು ಸಾಧುಸಂತರ ತವರೂರು. ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು, ಶ್ರೀಮಧ್ವಾಚಾರ್ಯರು, ನಿಂಬಾರ್ಕರು, ವಲ್ಲಭಾಚಾರ್ಯರು, ಆಳ್ವಾರರು, ಶಿವಶರಣರು, ಪುರಂದರ ಕನಕಾದಿ ಹರಿದಾಸರು, ಮಹಾರಾಷ್ಟ್ರದ ಏಕನಾಥ ನಾಮದೇವಾದಿ ಸಂತರು, ಶ್ರೀ ಚೈತನ್ಯ ಮಹಾಪ್ರಭುಗಳು, ಹೀಗೆ ಹಲವಾರು ಸಂತರು ಬಾರಿಬಾರಿಗೂ ಅವತರಿಸಿ ನಮ್ಮ ದೇಶವನ್ನು ಪಾವನಗೊಳಿಸಿದ್ದಾರೆ, ಜನರನ್ನು ಧರ್ಮದೆಡೆಗೆ ನಡೆಸಲು ಪ್ರಯತ್ನಿಸಿದ್ದಾರೆ.
ಭಕ್ತಿಗೆ ಹೆಚ್ಚು ಮಹತ್ವ ನೀಡಿದ ಪಂಥವೆಂದರೆ ಮಾಧ್ವ ಪಂಥ. ಮಧ್ವಾಚಾರ್ಯರು ಆರಂಭಿಸಿದ ದ್ವೈತಪಂಥದಲ್ಲಿ ಶ್ರೀಹರಿಯು ಸರ್ವೋತ್ತಮನು. ಮಿಕ್ಕೆಲ್ಲರೂ ಅವನ ಸೇವಕರು, ದಾಸರು, ಅಥವಾ ಭಕ್ತರು. ಶ್ರವಣ, ಕೀರ್ತನ, ಪಾದಸೇವನ, ಮೊದಲಾಗಿ ಅವನಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುವುದೇ ಜೀವನದ ಸಾರ್ಥಕ್ಯ.
ಮಧ್ವಾಚಾರ್ಯರು ಹುಟ್ಟು ಹಾಕಿದ ಈ ಭಕ್ತಿಬೀಜವು, ವಾದಿರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು, ರಾಘವೇಂದ್ರ ತೀರ್ಥರು, ಮೊದಲಾದ ಯತಿಗಳಿ೦ದಲೂ ಹರಿದಾಸರಿಂದಲೂ ಮೊಳಕೆಯೊಡೆದು ಗಿಡವಾಯಿತು. ಪುರಂದರ ದಾಸರ ಗುರುಗಳಾದ ವ್ಯಾಸತೀರ್ಥರ ಪರಂಪರೆಯಲ್ಲಿ ಬಂದ ಮಾಧವೇಂದ್ರ ಪುರಿಗಳೂ ಈಶ್ವರಪುರಿಗಳೂ ದ್ವೈತಸಿದ್ಧಾಂತದ ತತ್ತ್ವಗಳನ್ನು ಬಂಗಾಳದಲ್ಲಿ ಹರಡಿದರು. ಇವರ ಶಿಷ್ಯರಾದ ಶ್ರೀ ಚೈತನ್ಯ ಮಹಾಪ್ರಭುಗಳಲ್ಲಿ ಭಕ್ತಿಯು ಪರಾಕಾಷ್ಠೆಯನ್ನು ತಲಪಿ ಹೆಮ್ಮರವಾಗಿ ಬೆಳೆಯಿತು.
ಭಗವದ್ಭಕ್ತಿಯನ್ನು ದೇಶಾದ್ಯಂತ ಹರಡಿದ ಶ್ರೀಕೃಷ್ಣ ಚೈತನ್ಯರು ಶ್ರೀ ಕೃಷ್ಣನ ಅವತಾರವೇ ಹೌದು. ಚರಿತ್ರೆಕಾರರ ಪ್ರಕಾರ, ಅವರೊಬ್ಬ ಮಹಾನ್ ಸಂತರೂ, ಶ್ರೀಕೃಷ್ಣನ ಪರಮಭಕ್ತರೂ ಭಕ್ತಿಯ ಕ್ರಾಂತಿಕಾರಿಗಳೂ ಆದರೆ, ಭಕ್ತರ ದೃಷ್ಟಿಯಲ್ಲಿ ಅವರು ಇಷ್ಟೆಲ್ಲಾ ಅಲ್ಲದೆ, ಭಕ್ತರ ರೂಪದಲ್ಲಿರುವ ಭಗವಂತನೇ!
ಕಲಿಯುಗದಲ್ಲಿ ಮಿಂಚಿನಂತಹ ದೇಹಕಾಂತಿಯಿಂದ ಕೂಡಿದ್ದು ಹರಿನಾಮ ಸಂಕೀರ್ತನೆಯನ್ನು ಪ್ರಚುರಪಡಿಸುವ ಭಗವಂತನ ಅವತಾರವಾಗಲಿದೆಯೆಂಬ ಭವಿಷ್ಯವಾಣಿ ಭಾಗವತದಲ್ಲಿತ್ತು. ಅದು ಶ್ರೀಕೃಷ್ಣ ಚೈತನ್ಯರ ರೂಪದಲ್ಲಿ ನಿಜವಾಯಿತು. ಚೈತನ್ಯರು ಎಲ್ಲಿ ಹೋದರಲ್ಲಿ ಭಕ್ತರು ಗುಂಪುಗುಂಪಾಗಿ ಸೇರುತ್ತಿದ್ದರು.
ಹರಿನಾಮವು ದಿಕ್ಕು ದಿಕ್ಕುಗಳಲ್ಲಿ ಮಾರ್ದನಿಸಿತು. ಚೈತನ್ಯರು ಜಾತಿ, ಮತ, ಕುಲ, ಮೊದಲಾದ ಯಾವ ಭೇದಭಾವವನ್ನೂ ಮಾಡದೆ ಎಲ್ಲರನ್ನೂ ತಮ್ಮ ಪಂಥಕ್ಕೆ ಸೇರಿಸಿಕೊಂಡರು. ಮುಸಲ್ಮಾನರೂ ಅವರ ಅನುಯಾಯಿಗಳಾದರೆಂದರೆ, ಕಾಡಿನ ಹುಲಿ, ಕುರಿಗಳೂ ‘ಹರಿಬೋಲ್ ಹರಿಬೋಲ್’ ಎಂದು ಕುಣಿದವೆಂದರೆ, ಅವರ ಭಕ್ತಿಯ ಮಹಿಮೆ ಎಷ್ಟೆಂದು ತಿಳಿಯುತ್ತದೆ.
ಪ್ರೇಮಿಯು ಯಾವ ಪ್ರತಿಫಲವನ್ನೂ ಬಯಸದೆ ತನ್ನ ಪ್ರಿಯಕರನನ್ನು ಪ್ರೀತಿಸುವಂತೆ, ಭಗವಂತನಲ್ಲಿ ನಿರ್ಮಲವಾದ ಪ್ರೀತಿಯನ್ನು ತೋರಬೇಕೆಂಬುದೇ ಚೈತನ್ಯರ ಬೋಧನೆಯ ಸಾರ. ಶ್ರೀ ಕೃಷ್ಣನ ನಿರಂತರ ಪವಿತ್ರನಾಮ ಸ್ಮರಣೆಯ ಸರಳ ಮಾರ್ಗದಿಂದಲೇ ಪ್ರತಿಯೊಬ್ಬರಲ್ಲೂ ಭಗವಂತನ ಪ್ರೇಮಭಕ್ತಿ ಜಾಗೃತವಾಗುತ್ತದೆಂದು ಅವರು ಬೋಧಿಸಿದರು.
ಭಗವಂತನ ನಾಮಸ್ಮರಣೆ ಮಾಡುವಾಗ, ತೃಣಕ್ಕಿಂತಲೂ ವಿನೀತನಾಗಿಯೂ ವೃಕ್ಷಕ್ಕಿಂತಲೂ ಸಹನಶೀಲನಾಗಿಯೂ, ಯಾರಿಂದಲೂ ಗೌರವ, ಪ್ರತಿಷ್ಠೆಗಳನ್ನಪೇಕ್ಷಿಸದೆ ಎಲ್ಲರಿಗೂ ಗೌರವ ಸಲ್ಲಿಸುತ್ತಿರಬೇಕೆಂದು ಉಪದೇಶಿಸಿದರು. ಈ ಭಕ್ತಿಯಿಂದ ಸಕಲ ಪಾಪಗಳೂ, ಸಂಸಾರ ಕಲ್ಮಷಗಳೂ ನಾಶವಾಗಿ, ಭಕ್ತನು ಶ್ರೀಕೃಷ್ಣನಿಗೆ ಪ್ರಿಯನಾಗುತ್ತಾನೆ.
ಶ್ರೀ ಕೃಷ್ಣಚೈತನ್ಯರು, ಹರಿಭಕ್ತಿಯು ಇಡೀ ಭೂಮಿಯಲ್ಲಿ ಹರಡುತ್ತವೆಂದು ಭವಿಷ್ಯ ನುಡಿದರು. ಇದು ಇಂದಿನ ದಿನ ನಿಜವಾಗುತ್ತಿದೆ. ಚೈತನ್ಯ ಮಹಾಪ್ರಭುಗಳ ಪರಂಪರೆಯಲ್ಲಿ ಬಂದ ಶ್ರೀ ಶ್ರೀಮದ್ ಭಕ್ತಿಸಿದ್ಧಾಂತ, ಸರಸ್ವತೀ ಸ್ವಾಮಿಗಳ ಶಿಷ್ಯರಾದ ಶ್ರೀ ಶ್ರೀಮದ್ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದರು, ತಮ್ಮ ಎಪ್ಪತ್ತನೆಯ ಇಳಿವಯಸ್ಸಿನಲ್ಲಿ ಪಾಶ್ಚಾತ್ಯ ದೇಶಗಳಿಗೆ ಪ್ರಯಾಣ ಬೆಳೆಸಿ ಚೈತನ್ಯರ ತತ್ತ್ವಗಳನ್ನೂ ಕೃಷ್ಣಭಕ್ತಿಯನ್ನೂ ಪ್ರಚುರ ಪಡಿಸಿದರು.
ಅವರ ಪ್ರಯತ್ನದ ಫಲವೇ ಇಂದು ವಿಶ್ವಾದ್ಯಂತ ಇರುವ ಭಕ್ತರ ಒಕ್ಕೂಟವಾದ ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಸ್ಥೆ ಅಥವಾ ಇಸ್ಕಾನ್ (International Society for Krishna Consciousness – ISKCON)
ಭಾರತವು ಪುಣ್ಯಭೂಮಿ. ಇಲ್ಲಿ ಅನೇಕಾನೇಕ ತೀರ್ಥಕ್ಷೇತ್ರಗಳಿವೆ. ಪ್ರಸ್ತುತ ಲೇಖನದಲ್ಲಿ ನವದ್ವೀಪ ತೀರ್ಥಕ್ಷೇತ್ರದ ಬಗ್ಗೆ ಚರ್ಚಿಸಲಾಗಿದೆ. ಈ ದ್ವೀಪದ ಎಲ್ಲ ಪವಿತ್ರ ಕ್ಷೇತ್ರಗಳೂ ಶ್ರೀ ಚೈತನ್ಯ ಮಹಾಪ್ರಭುಗಳು ನಡೆಸಿದ ದಿವ್ಯ ಲೀಲೆಗಳಿಂದ ಮತ್ತಷ್ಟು ಪುನೀತವಾಗಿವೆ.
ನವದ್ವೀಪ
ಶ್ರೀ ಚೈತನ್ಯ ಮಹಾಪ್ರಭುಗಳು ಗೌರವವರ್ಣವುಳ್ಳವರಾಗಿದ್ದರಿಂದ, ಅವರನ್ನು ಗೌರಾಂಗ ಎಂದೂ ಕರೆಯಲಾಗುತ್ತದೆ. ಹೀಗಾಗಿ, ಚೈತನ್ಯರೂ ಅವರ ಅನುಯಾಯಿಗಳೂ ಲೀಲೆಗಳನ್ನು ನಡೆಸಿದ ಬಂಗಾಳ (ಗೌಡದೇಶ) ಮತ್ತು ಬಾಂಗ್ಲಾದೇಶದ ಕೆಲವು ಪ್ರದೇಶಗಳಿಗೆ ಗೌರಮಂಡಲ ಎಂದು ಹೆಸರು.

ಈ ಗೌರಮಂಡಲವು 168 ಮೈಲುಗಳಷ್ಟು ವಿಸ್ತೀರ್ಣ ಹೊಂದಿದ್ದು, ಇದರ ಮಧ್ಯದಲ್ಲಿ ಗಂಗಾನದಿಯು ಹರಿಯುತ್ತದೆ. ಒಂದು ನೂರು ದಳಗಳನ್ನುಳ್ಳ ಕಮಲದ ಆಕಾರದಲ್ಲಿರುವ ಗೌರಮಂಡಲದ ಮಧ್ಯೆ, ನವದ್ವೀಪ ಧಾಮವಿದೆ. ಇದನ್ನು ಔದಾರ್ಯಧಾಮವೆಂದೂ ಕರೆಯುತ್ತಾರೆ.
ನವದ್ವೀಪವೆಂದರೆ ಒಂಬತ್ತು ದ್ವೀಪಗಳೆಂದು ಅರ್ಥ. ಇಡಿಯ ನವದ್ವೀಪ ಒಂದು ಪವಿತ್ರ ತಾಣ. ಇಲ್ಲಿನ ಒಂಬತ್ತು ದ್ವೀಪಗಳೂ ನವವಿಧ ಭಕ್ತಿಗಳನ್ನು ಪ್ರತಿನಿಧಿಸುತ್ತವೆ. ಈ ನವದ್ವೀಪಗಳು ಎಂಟು ದಳಗಳುಳ್ಳ ಕಮಲದ ಆಕಾರದಲ್ಲಿದ್ದು ಅವು ಇಂತಿವೆ.
ಅಂತರದ್ವೀಪ (ಆತ್ಮನಿವೇದನೆ, ಅಥವಾ ಸರ್ವಸ್ವವನ್ನೂ ಭಗವಂತನಿಗೆ ಅರ್ಪಿಸುವುದು). ಸೀಮಂತದ್ವೀಪ (ಶ್ರವಣ, ಅಥವಾ ಭಗವಂತನ ಬಗ್ಗೆ ಕೇಳುವುದು), ಗೋದ್ರುಮದ್ವೀಪ (ಕೀರ್ತನೆ ಅಥವಾ ಭಗವಂತನ ಗುಣಗಾನ ಮಾಡುವುದು), ಮಧ್ಯದ್ವೀಪ (ಸ್ಮರಣೆ, ಅಥವಾ ಭಗವಂತನನ್ನು ಸ್ಮರಿಸುವುದು),
ಕೋಲದ್ವೀಪ (ಪಾದಸೇವನೆ, ಅಥವಾ ಭಗವಂತನ ಪಾದಪದ್ಮಗಳ ಸೇವೆ ಮಾಡುವುದು), ಋತುದ್ವೀಪ ( ಅರ್ಚನೆ, ಅಥವಾ ಭಗವಂತನ ಶ್ರೀಮೂರ್ತಿಯನ್ನು ಪೂಜಿಸುವುದು), ಜಹ್ನುದ್ವೀಪ (ವಂದನೆ, ಅಥವಾ ಭಗವಂತನ ಶ್ರೀಮೂರ್ತಿಗೆ ನಮಸ್ಕರಿಸುವುದು), ಮೋದದ್ರುಮದ್ವೀಪ (ದಾಸ್ಯ, ಅಥವಾ ಭಗವಂತನ ದಾಸನಾಗುವುದು), ರುದ್ರದ್ವೀಪ (ಸಖ್ಯ ಅಥವಾ ಭಗವಂತನ ಸ್ನೇಹಿತನಾಗುವುದು).
ಗಂಗಾ, ಯಮುನಾ, ಮತ್ತಿತರ ಪವಿತ್ರ ನದಿಗಳು ನವದ್ವೀಪದಲ್ಲಿ ಹರಿಯುತ್ತವೆ. ಪ್ರಯಾಗ ಮಥುರೆ, ಅಯೋಧ್ಯೆ, ಮಯ (ಹರಿದ್ವಾರ), ಕಾಶಿ (ವಾರಣಾಸೀ), ಕಾಂಚೀ, ಆವಂತೀ (ಉಜ್ಜೈನಿ), ದ್ವಾರಕೆ, ಮೊದಲಾದ ಪವಿತ್ರ ತಾಣಗಳು ನವದ್ವೀಪ ಧಾಮದಲ್ಲಿವೆ.
ವ್ರಜದೇಶದ ಹನ್ನೆರಡು ಪವಿತ್ರ ವನಗಳು ನವದ್ವೀಪದಲ್ಲಿಯೂ ಅಡಗಿವೆ. ಅಂತರದ್ವೀಪವೇ ಗೋಕುಲಮಹಾವನ. ಮಧುವನ ಮತ್ತು ಮಥುರೆ, ಪೃಥುಕುಂಡದ ಉತ್ತರಕ್ಕಿವೆ. ಗೋದ್ರುಮದ್ವೀಪವೇ ನಂದಗ್ರಾಮ. ಕೋಲದ್ವೀಪದಲ್ಲಿ ಬಹುಳ ವನವಿದೆ. ಈ ಕೋಲದ್ವೀಪದಲ್ಲಿ ಕುಲಿಯ ಎಂಬ ಗುಡ್ಡವಿದೆ.
ಈ ಗುಡ್ಡ, ಗೋವರ್ಧನಗಿರಿಯ ಪ್ರತಿರೂಪ. ಜಹ್ನುದ್ವೀಪವೇ ಭದ್ರವನ. ಮೋದದ್ರುಮದ್ವೀಪ ಭಾಂಡೀರವನ. ಮೋದದ್ರುಮದ್ವೀಪದಲ್ಲಿನ ಮಹತ್ಪುರವೇ ಕಾಮ್ಯವನ, ಸೀಮಂತದ್ವೀಪದಲ್ಲಿನ ಮಯಾಮಾರಿ ತಾಲವನ. ರುದ್ರದ್ವೀಪವೇ ಬೇಲವನ. ಖಾಂಡೀರವನ ಚಂಪಾಹಟ್ಟಿಯಲ್ಲಿದೆ. ರಾಧಾಕುಂಡ ಋತುದ್ವೀಪದಲ್ಲಿದೆ.
ಗಂಗಾನದಿಯ ಪ್ರಮುಖ ವಾಹಿನಿ ಸದಾ ನವದ್ವೀಪದ ಮಧ್ಯಭಾಗದಲ್ಲಿ ಹರಿಯುತ್ತದೆ. ಗಂಗೆಯ ಬಳಿಯೇ ಯಮುನಾ ನದಿ ಹರಿಯುತ್ತದೆ. ಯಮುನೆಗೆ ಪೂರ್ವದಿಕ್ಕಿನಲ್ಲಿ ತಾಮ್ರಪರ್ಣಿ, ಕೃತಮಾಲಾ ಮತ್ತು ಬ್ರಹ್ಮಪುತ್ರ ನದಿಗಳು ಹರಿಯುತ್ತವೆ. ಇದಲ್ಲದೆ, ಸರಯೂ, ಗೋಮತೀ, ನರ್ಮದಾ ಗೋದಾವರೀ, ಸಿಂಧು ಮತ್ತು ಕಾವೇರಿ ನದಿಗಳೂ ನವದ್ವೀಪದ ಮೂಲಕ ಹರಿಯುತ್ತವೆ.
ಈ ನದಿಗಳು ಒಂದಕ್ಕೊಂದು ಸೇರಿ ಒಂಬತ್ತು ದ್ವೀಪಗಳಾಗಿವೆ. ಗಂಗೆ ಮತ್ತು ಯಮುನೆಯ ಸಂಗಮದ ಸ್ಥಳದಲ್ಲಿರುವ ದ್ವೀಪ ಅಂತರದ್ವೀಪ. ಈ ಅಂತರ ದ್ವೀಪದಲ್ಲೇ, ಚೈತನ್ಯಮಹಾಪ್ರಭುಗಳು ಜನಿಸಿದ ಮಾಯಾಪುರ ಧಾಮವಿದೆ. ಹಿಂದೆ, ನವದ್ವೀಪದಲ್ಲಿ ಹದಿನಾರು ನದಿಗಳು ಹರಿಯುತ್ತಿದ್ದವೆಂದು ಹೇಳುತ್ತಾರೆ. ಕಾಲಕ್ರಮದಲ್ಲಿ ಅನೇಕ ನದಿಗಳು ಬತ್ತಿಹೋಗಿವೆ.
ಚೈತನ್ಯ ಚರಿತಾಮೃತ, ಚೈತನ್ಯ ಭಾಗವತ, ಭಕ್ತಿರತ್ನಾಕರ, ಮೊದಲಾದ ಪುರಾತನ ಗ್ರಂಥಗಳ ಹೇಳಿಕೆಯ ಪ್ರಕಾರ, ಚೈತನ್ಯರ ಜನ್ಮಸ್ಥಳವಾದ ಮಾಯಾಪುರವೂ ಅ೦ತರ್ದ್ವೀಪವೂ ಗಂಗಾನದಿಯ ಪೂರ್ವಕ್ಕಿದೆ. ಆದರೆ ಇಂದಿನ ನವದ್ವೀಪ ನಗರ, ಗಂಗಾನದಿಯ ಪಶ್ಚಿಮಕ್ಕಿದೆ. ಇದನ್ನು 1879ರಲ್ಲಿ ಸ್ಥಾಪಿಸಲಾಯಿತು.
ಶ್ರೀಚೈತನ್ಯ ಮಹಾಪ್ರಭುಗಳು ಅವತರಿಸಿದ ಕಳೆದ ಐನೂರು ವರ್ಷಗಳಲ್ಲಿ ಗಂಗಾನದಿ ಅನೇಕ ಬಾರಿ ತನ್ನ ದಿಕ್ಕನ್ನು ಬದಲಿಸಿದೆ. ಅನೇಕಬಾರಿ, ನದಿಯಲ್ಲಿ ಪ್ರವಾಹವುಂಟಾಗಿ ಮಾಯಾಪುರದ ಜನರು ನದಿಯನ್ನು ದಾಟಿ ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿದರು. ಈ ಪ್ರವಾಹಗಳ ಕಾರಣದಿಂದ, ಚೈತನ್ಯರ ಜನ್ಮಸ್ಥಳ ಮರೆಯಾಯಿತು.
1880ರ ಕಾಲದಲ್ಲಿ ಶ್ರೀಲ ಭಕ್ತಿವಿನೋದ ಠಾಕೂರರೆಂಬ ಸಂತರು, ಸರ್ಕಾರದ ದಾಖಲೆಗಳನ್ನೂ ನವದ್ವೀಪ ಶತಕ, ಊರ್ಧ್ವಮಾನಲ, ಮುಂತಾದ ಗ್ರಂಥಗಳನ್ನೂ ಪರಿಶೀಲಿಸಿ, ಚೈತನ್ಯರು ಹುಟ್ಟಿದ ಸ್ಥಳ ಗಂಗಾನದಿಯ ಪೂರ್ವಕ್ಕಿರುವುದೆಂದೂ, ಹಿಂದೆ ಅದನ್ನು ಮಾಯಾಪುರವೆನ್ನುತ್ತಿದ್ದರೆಂದೂ ಕಂಡುಹಿಡಿದರು.
ಅಲ್ಲಿನ ಪಂಡಿತರನ್ನೂ ಪ್ರಮುಖ ವೈಷ್ಣವರನ್ನೂ ವಿಚಾರಿಸಿ, ಒಂದು ದಿಬ್ಬವನ್ನು ಗುರುತಿಸಿದರು. ತುಳಸೀ ಎಲೆಗಳಿಂದ ಸಂವೃತವಾಗಿದ್ದ ಆ ಪ್ರದೇಶದಲ್ಲಿ ವಿಚಿತ್ರವಾದ ಬೆಳಕುಗಳೂ ಶಬ್ದಗಳೂ ಉಂಟಾಗುತ್ತಿದ್ದುದರಿಂದ ಅಲ್ಲಿ ಯಾರೂ ವಾಸ ಮಾಡುತ್ತಿರಲಿಲ್ಲ. ಅವರು ಕೂಡಲೇ ಹೋಗಿ, 142 ವರ್ಷ ವಯಸ್ಸಾಗಿದ್ದ ತಮ್ಮ ಗುರುಗಳನ್ನು ಕರೆತಂದು ಆ ಸ್ಥಳವನ್ನು ತೋರಿಸಲು ಗುರುಗಳು ಆನಂದದಿಂದ ಕುಣಿದಾಡಿದರು. ಅದೇ ಚೈತನ್ಯರ ಜನ್ಮಸ್ಥಳವೆಂದು ಖಾತ್ರಿಯಾಯಿತು.

ಶ್ರೀ ಚೈತನ್ಯರ ಕಾಲದಲ್ಲಿ, ನವದ್ವೀಪವು ಮುಸಲ್ಮಾನರ ಆಳ್ವಿಕೆಗೆ ಒಳಗಾಗಿತ್ತು. ಕ್ರಿ.ಶ. 1478ರಲ್ಲಿ ಹುಸ್ಸೇನ್ ಶಾ ಎಂಬ ಮುಸ್ಲಿಮ್ ಮುಖ್ಯಾಧಿಕಾರಿ ಬಂಗಾಳದ ರಾಜನಾಗಿದ್ದ ಸುಬುದ್ಧಿರಾಯನನ್ನು ಸಿಂಹಾಸನದಿಂದ ಕೆಳಗಿಳಿಸಿ ರಾಜ್ಯಾಧಿಕಾರ ವಹಿಸಿಕೊಂಡ. ಈ ಮುಸಲ್ಮಾನ ರಾಜರು ಕಾಜಿಗಳೆಂಬ ಅಧಿಕಾರಿಗಳ ಮೂಲಕ ರಾಜ್ಯವಾಳುತ್ತಿದ್ದರು. ಕಾಜಿಗಳು ಆಡಳಿತ ನಡೆಸುತ್ತಾ ತೆರಿಗೆಗಳನ್ನು ವಸೂಲು ಮಾಡುತ್ತಿದ್ದರು. ಇದರಲ್ಲಿ ಒಂದಂಶವನ್ನು ಖಜಾನೆಗೆ ಸೇರಿಸಿ ಮಿಕ್ಕಿದ್ದನ್ನು ತಾವೇ ಇರಿಸಿಕೊಳ್ಳುತ್ತಿದ್ದರು.
ನಾಡಿಯಾ ಎಂದೂ ಕರೆಯಲಾಗುತ್ತಿದ್ದ ನವದ್ವೀಪ, ಜನಪ್ರಿಯ ವಿದ್ಯಾಭ್ಯಾಸ ಕೇಂದ್ರವಾಗಿತ್ತು. ಚೈತನ್ಯರ ಕಾಲದಲ್ಲಿ ಇಲ್ಲಿ ಅನೇಕ ಶಾಲೆಗಳಿದ್ದವು. ಭಾರತದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಬರುತ್ತಿದ್ದರು.
ನವದ್ವೀಪ ಮಂಡಲದ ಪರಿಕ್ರಮ
ಒಂದು ಪವಿತ್ರ ಕ್ಷೇತ್ರಕ್ಕೆ ಪ್ರದಕ್ಷಿಣೆ ಹಾಕಿ, ಅಲ್ಲಿನ ಮಹಿಮಾನ್ವಿತ ಸ್ಥಳಗಳಿಗೆ ಭೇಟಿ ನೀಡುವುದೇ ಪರಿಕ್ರಮ. ನವದ್ವೀಪದ ಪರಿಕ್ರಮ, ಮಾಯಾಪುರದಿಂದ ಆರಂಭವಾಗುತ್ತದೆ. ಮಾಯಾಪುರದಲ್ಲಿನ ಜಗನ್ನಾಥಮಿಶ್ರ ಮತ್ತು ಶಚೀದೇವಿಯರ (ಚೈತನ್ಯರ ತಾಯ್ತಂದೆಯರು) ಮನೆಗೆ ಮೊದಲು ಭೇಟಿ ನೀಡಿ ಉತ್ತರಕ್ಕೆ ಹೋಗಿ ಸೀಮಂತದ್ವೀಪಕ್ಕೆ ಭೇಟಿ ನೀಡಬೇಕು.
ಅನಂತರ, ದಕ್ಷಿಣಕ್ಕೆ ಹೋದರೆ ಗೋದ್ರುಮದ್ವೀಪ ಸಿಗುತ್ತದೆ. ಇದಾದ ಬಳಿಕ ಮಧ್ಯದ್ವೀಪ. ಈ ನಾಲ್ಕು ದ್ವೀಪಗಳು ಗಂಗಾನದಿಯ ಪೂರ್ವದಲ್ಲಿವೆ. ಅನಂತರ ಗಂಗಾನದಿಯನ್ನು ದಾಟಿ ಕೋಲದ್ವೀಪ ಮತ್ತು ಋತುದ್ವೀಪಗಳನ್ನು ಸಂದರ್ಶಿಸಬೇಕು. ಇದಾದ ಬಳಿಕ, ಜಹ್ನುದ್ವೀಪ, ಮೋದದ್ರುಮದ್ವೀಪ ಹಾಗೂ ರುದ್ರದ್ವೀಪಗಳಿಗೆ ಭೇಟಿ ನೀಡಬೇಕು. ತದನಂತರ ಗಂಗೆಯನ್ನು ದಾಟಿ ಪುನಃ ಮಾಯಾಪುರಕ್ಕೆ ಹಿಂದಿರುಗಿ ಚೈತನ್ಯರ ಜನ್ಮಸ್ಥಳವನ್ನು ಸಂದರ್ಶಿಸಬೇಕು.
ಇಡಿಯ ಪರಿಕ್ರಮ ಹದಿನಾರು ಕ್ರೋಶಗಳಷ್ಟು ದೂರವಾಗುತ್ತದೆ. ಪರಿಕ್ರಮದ ವೇಳೆಯಲ್ಲಿ ವೃಂದಾವನದ ಹನ್ನೆರಡು ವನಗಳ ಮೂಲಕ ಹಾದುಹೋಗಲಾಗುತ್ತದೆ. ವೃಂದಾವನದಲ್ಲಿ ಇವು ನಿರ್ದಿಷ್ಟ ಕ್ರಮದಲ್ಲಿದ್ದರೆ, ನವದ್ವೀಪದಲ್ಲಿ ಹಾಗಿರದೆ ಹಿಮ್ಮುಖವಾಗಿರುತ್ತವೆ.
ಪರಿಕ್ರಮವನ್ನು ಯಾವಾಗಲಾದರೂ ಮಾಡಬಹುದಾದರೂ, ಫಾಲ್ಗುಣ ಮಾಸದ (ಮಾರ್ಚ್) ಶುಕ್ಲ ಸಪ್ತಮೀ ದಿನದಿಂದ, ಚೈತನ್ಯರು ಹುಟ್ಟಿದ ದಿನವಾದ ಪೂರ್ಣಿಮೆಯವರೆಗೆ ಮಾಡಿದರೆ ಬಹಳ ಒಳ್ಳೆಯದು. ನಿತ್ಯಾನಂದ ಪ್ರಭುಗಳ ಪ್ರಕಾರ, ಒಂದೊಂದು ದ್ವೀಪದಲ್ಲೂ ಒಂದೊಂದು ದಿನವನ್ನು ಕಳೆಯುತ್ತಾ ಒಂಬತ್ತು ದಿನಗಳ ಕಾಲ ಪರಿಕ್ರಮ ಮಾಡಬೇಕು. ಕಾಲುಗಳಿಗೆ ತೊಂದರೆಯಾದ ಹೊರತು, ಬರಿಗಾಲಿನಲ್ಲಿ ಪರಿಕ್ರಮ ಮಾಡುವುದೊಳ್ಳೆಯದು. ತೊಗಲಿನ ಪಾದರಕ್ಷೆಗಳನ್ನು ಧರಿಸಲೇ ಕೂಡದು.
ಶ್ರೀ ಭಕ್ತಿವಿನೋದ ಠಾಕೂರರ ಶ್ರೀ ನವದ್ವೀಪ ಧಾಮ ಮಹಾತ್ಮೆ ಎಂಬ ಗ್ರಂಥವನ್ನಾಧರಿಸಿ, ಶ್ರೀ ಭಕ್ತಿಸಿದ್ಧಾಂತ ಸರಸ್ವತೀ ಠಾಕೂರರು 1918ರಲ್ಲಿ ಈ ಪರಿಕ್ರಮವನ್ನಾರಂಭಿಸಿದರು.
ನವದ್ವೀಪದ ಮಹಿಮೆ
ನವದ್ವೀಪದ ಒಂದು ಚಿಕ್ಕ ಪ್ರದೇಶದಲ್ಲಿ ಎಲ್ಲ ಪವಿತ್ರ ಕ್ಷೇತ್ರಗಳೂ ಮುನಿಗಳೂ ದೇವತೆಗಳೂ ವೈದಿಕ ಗ್ರಂಥಗಳೂ ಪವಿತ್ರ ಮಂತ್ರಗಳೂ ನೆಲೆಸಿವೆಯೆಂದು ನವದ್ವೀಪ ಮಹಾತ್ಮೆಯಲ್ಲಿ ಹೇಳಿದೆ. ಸಾವಿರಾರು ಯಾಗಯಜ್ಞಗಳನ್ನು ಮಾಡಿ ಪಡೆಯುವ ಫಲವನ್ನು ನವದ್ವೀಪವನ್ನು ನೆನೆಯುವುದರಿಂದಲೇ ಪಡೆಯಬಹುದು! ಇನ್ನು ಅದನ್ನು ಸಂದರ್ಶಿಸುವುದರಿಂದ ದೊರೆಯುವ ಫಲವೆಷ್ಟಿರಬಹುದು !?
ಮಾಯಾಪುರಕ್ಕೆ ಭೇಟಿ ನೀಡುವವನು ಸುಲಭವಾಗಿ ಮಾಯಾಪಾಶದಿಂದ ಬಿಡುಗಡೆ ಹೊಂದುತ್ತಾನೆ. ಅಲ್ಲಿ ನಡೆದಾಡಿದರೆ ಜನನ ಮರಣದ ಚಕ್ರದಿಂದ ಬಿಡುಗಡೆಯಾಗುತ್ತದೆ.
ವೃಂದಾವನದ ಆನಂದಮಯ ಭಕ್ತಿ ರಸಾಮೃತವನ್ನನುಭವಿಸಲು ಬೇಕಾಗುವ ಯೋಗ್ಯತೆಯನ್ನು ನವದ್ವೀಪದಲ್ಲಿ ಪಡೆದು ಅನಂತರ ವೃಂದಾವನದಲ್ಲಿ ಆ ದಿವ್ಯ ರಸಾಸ್ವಾದನೆ ಮಾಡಬೇಕು.
ಇತರ ಪವಿತ್ರಕ್ಷೇತ್ರಗಳಲ್ಲಿ ದೇಹವನ್ನು ತ್ಯಜಿಸಿದರೆ ಪ್ರಾಪಂಚಿಕ ಸುಖವನ್ನೋ, ಮೋಕ್ಷವನ್ನೋ ಪಡೆಯಬಹುದು. ಆದರೆ ನವದ್ವೀಪದಲ್ಲಿ ಪ್ರಾಣಬಿಟ್ಟರೆ ಮೋಕ್ಷಕ್ಕಿಂತಲೂ ಮಿಗಿಲಾದ ಭಕ್ತಿಯನ್ನು ಪಡೆಯಬಹುದು. ಪ್ರಯಾಗ ಅಥವಾ ವಾರಣಾಸಿಯಲ್ಲಿ ಒಂದು ಕಲ್ಪದವರೆಗೆ ವಾಸಿಸುವುದಕ್ಕಿಂತಲೂ ನವದ್ವೀಪದಲ್ಲಿ ಒಂದು ದಿನವಿದ್ದರೆ ಶ್ರೇಷ್ಠ ಎನ್ನಲಾಗಿದೆ.

ಭಗವಂತನ ಮಹಿಮೆಯನ್ನರಿಯಲು ಭಕ್ತನಿಗೆ ವಿಶೇಷ ಅರ್ಹತೆಗಳೇನೂ ಬೇಕಿಲ್ಲ. ನವದ್ವೀಪದಲ್ಲಿ ಭಗವಂತ ಭಕ್ತನ ಅಪರಾಧಗಳನ್ನು ಪರಿಗಣಿಸುವುದೇ ಇಲ್ಲ.
ಈಗ ಈ ನವದ್ವೀಪದ ಒಂಬತ್ತು ದ್ವೀಪಗಳ ಕಿರುಪರಿಚಯ ಮಾಡಿಕೊಳ್ಳೋಣ.
ಅಂತರ್ದ್ವೀಪ
ಅಂತರ್ದ್ವೀಪವು ನವದ್ವೀಪಧಾಮದ ಮೊದಲ ದ್ವೀಪವಾಗಿದೆ. ಇದು, ಆತ್ಮನಿವೇದನಾ ಭಕ್ತಿರಸವನ್ನೊಳಗೊಂಡಿದೆ. ಭಗವಾನ್ ಚೈತನ್ಯ ಮಹಾಪ್ರಭುಗಳು ಅವತರಿಸಿದ್ದು ಈ ದ್ವೀಪದಲ್ಲಿಯೇ. ಈ ಪವಿತ್ರ ದ್ವೀಪವು ವ್ರಜದೇಶದ ಮಹಾವನದಿಂದ ಬೇರೆಯಲ್ಲ. ಅಂತರ್ದ್ವೀಪವು, ಭರದ್ವಾಜತಿಲವೆಂಬ ಸ್ಥಳದಿಂದ ವಾಮನಪುಕರವ ಕೆಲ ಪ್ರದೇಶಗಳ, ಮಾಯಾಪುರ, ಗಂಗಾನಗರ, ಮತ್ತು ಚಾಂದ್ ಕಾಜಿಯ ಸಮಾಧಿಯ ಸ್ಥಳಗಳವರೆಗೆ ವಿಸ್ತೃತವಾಗಿದೆ.
ಅಂತರ್ದ್ವೀಪವು ಗಂಗಾನದಿಯ ಪೂರ್ವದಂಡೆಯ ಮೇಲಿದೆ. ಶಾಸ್ತ್ರಗಳ ಪ್ರಕಾರ, ಪರಿಕ್ರಮವನ್ನು ಇಲ್ಲಿಂದಲೇ ಆರಂಭಿಸಬೇಕು.
ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಅಂತರಂಗದ ಭಾವನೆಗಳನ್ನು ಬ್ರಹ್ಮದೇವನಿಗೆ ಇಲ್ಲಿ ನಿವೇದಿಸಿಕೊಂಡರು. ಈ ಕಾರಣದಿಂದ ಈ ದ್ವೀಪಕ್ಕೆ ಅಂತರ್ದ್ವೀಪವೆಂಬ ಹೆಸರು ಬಂದಿದೆ. ಅಂತರ್ದ್ವೀಪವನ್ನು ಮಾಯಾಪುರವೆಂದೂ ಕರೆಯುತ್ತಾರೆ. ಮಾಯಾಪುರವು, ಕಲಕತ್ತೆಯಿಂದ 130 ಕಿ.ಮೀ ಉತ್ತರಕ್ಕಿದ್ದು, ಇಲ್ಲಿನ ಭಕ್ತಿಸಿದ್ಧಾಂತ ರಸ್ತೆಯಲ್ಲಿ ಹಲವಾರು ದೇವಾಲಯಗಳನ್ನೊಳಗೊಂಡಿದೆ.
ಇದು ಅತ್ಯಂತ ಪವಿತ್ರ ಸ್ಥಳವಾಗಿದ್ದು ಪ್ರತಿವರ್ಷವೂ ಇಲ್ಲಿಗೆ ಸಾವಿರಾರು ಯಾತ್ರಿಗಳು ಬರುತ್ತಾರೆ. ಗಂಗಾ ಮತ್ತು ಜಾಲಂಗೀ ನದಿಗಳ ಸಂಗಮಿಸುವುದು ಈ ಮಾಯಾಪುರದ ಬಳಿಯಲ್ಲಿಯೇ, ಮಾಯಾಪುರವು 3 1/2 ಮೈಲುಗಳ ವಿಸ್ತಾರವಿದೆ.
ಇಸ್ಕಾನ್ ಚಂದ್ರೋದಯ ದೇವಾಲಯ : ಇದು ವಿಶ್ವ ಇಸ್ಕಾನ್ ಸಂಸ್ಥೆಗಳ ಪ್ರಮುಖ ಕೇಂದ್ರ. ಭಾರತದಲ್ಲೇ ಅತ್ಯಂತ ದೊಡ್ಡ ದೇವಾಲಯವನ್ನು ಇಲ್ಲಿ ಕಟ್ಟಬೇಕೆಂಬ ಯೋಜನೆಯಿದೆ. ಈಗ ಇಲ್ಲಿ ಒಂದು ದೇವಾಲಯ, ಅನೇಕ ಅತಿಥಿಗೃಹಗಳು, ಶ್ರೀಲಪ್ರಭುಪಾದರ ಪುಷ್ಪಸಮಾಧಿ, ಅವರು ಇರುತ್ತಿದ್ದ ಕೋಣೆಗಳು, ಅವರು ವಾಸಿಸುತ್ತಿದ್ದ ಒಂದು ಗುಡಿಸಲು, ಗುರುಕುಲ ಶಾಲೆ, ಗೋಶಾಲೆ, ಮತ್ತು ಉದ್ಯಾನಗಳಿವೆ.
ದೇವಾಲಯದ ಮುಖ್ಯ ವಿಗ್ರಹಗಳು ಶ್ರೀರಾಧಾಮಾಧವರು. ರಾಧಾಮಾಧವರ ಎರಡೂ ಬದಿಗಳಲ್ಲಿ ನಾಲ್ವರು ಗೋಪಿಯರಿದ್ದಾರೆ. ಶ್ರೀಮತಿ ತುಂಗವಿದ್ಯಾದೇವಿ, ಶ್ರೀಮತಿ ಚಿತ್ರಾದೇವಿ, ಶ್ರೀಮತಿ ಚಂಪಕಲತಾದೇವಿ, ಶ್ರೀಮತಿ ಲಲಿತಾದೇವಿ, ಶ್ರೀಮತಿ ವಿಶಾಖಾದೇವಿ, ಶ್ರೀಮತಿ ಇಂದುಲೇಖಾದೇವಿ, ಶ್ರೀಮತಿ ರಂಗಾದೇವಿ, ಶ್ರೀಮತಿ ಸುದೇವಿ, ಇವರೇ ಅಷ್ಟಗೋಪಿಯರು. ಇವಲ್ಲದೆ, ರಾಧಾಕೃಷ್ಣರ ಪುಟ್ಟ ವಿಗ್ರಹಗಳೂ ಇವೆ. ಎಡಗಡೆಯ ವೇದಿಕೆಯ ಮೇಲೆ ಪಂಚತತ್ತ್ವ ವಿಗ್ರಹಗಳಿವೆ.
ನರಸಿಂಹ ವಿಗ್ರಹ: 1986ರಲ್ಲಿ ಇಲ್ಲೊಂದು ನರಸಿಂಹ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ದೇವಾಲಯದೊಳಗೆ ಬರುತ್ತಿದ್ದಂತೆ ಮೊದಲು ದರ್ಶನ ಪಡೆಯುವುದು, ಗರುಡದೇವರ ಹಾಗೂ ನರಸಿಂಹದೇವರ ವಿಗ್ರಹಗಳನ್ನು. ಇಲ್ಲಿನ ನರಸಿಂಹ ವಿಗ್ರಹವು ಉಗ್ರವಾಗಿದ್ದು, ಕಂಬದಿಂದ ಹೊರಬರುವ ಶೈಲಿಯಲ್ಲಿದೆ.
ಇದನ್ನು ಸ್ಥಾಣುನರಸಿಂಹನೆಂದೂ ಕರೆಯುತ್ತಾರೆ. ನರಸಿಂಹ ವಿಗ್ರಹದ ಎದುರಿನಲ್ಲಿ ಒಂದು ಯಜ್ಞಶಾಲೆಯಿದ್ದು, ಅಲ್ಲಿ ದಿನವೂ ಯಜ್ಞಯಾಗಾದಿಗಳು ನಡೆಯುತ್ತವೆ. ಇಲ್ಲೊಂದು ವೇದಿಕೆಯಿದ್ದು, ಬ್ರಹ್ಮ ಮಧ್ವ ಗೌಡೀಯ ವೈಷ್ಣವ ಸಂಪ್ರದಾಯವನ್ನು ತೋರಿಸುತ್ತದೆ. ಮಧ್ಯವೇದಿಕೆಯ ಮೇಲೆ ಅಷ್ಟಧಾತುಗಳಿಂದ ಮಾಡಲ್ಪಟ್ಟ ಏಳು ಅಡಿಗಳ ಎತ್ತರದ ಪಂಚತತ್ತ್ವ ವಿಗ್ರಹಗಳಿವೆ.
ಹೆಬ್ಬಾಗಿಲನ್ನು ಪ್ರವೇಶಿಸಿದಂತೆ, ಎಡಕ್ಕೆ ಒಂದು ಪುಟ್ಟ ಗುಡಿಸಲು ಕಾಣುತ್ತದೆ. ಇಸ್ಕಾನ್ ದೇವಾಲಯ ಇಲ್ಲಿ ರಚಿತವಾಗುವ ಮೊದಲು ಪ್ರಭುಪಾದರು ಇಲ್ಲಿಯೇ ವಾಸಿಸುತ್ತಿದ್ದರು. ಇಲ್ಲಿ ನಿತಾಯ್ ಗೌರಸುಂದರ ವಿಗ್ರಹಗಳೂ ಇವೆ. ಪದ್ಮ ಕಟ್ಟಡ ಪೂರ್ತಿಯಾದ ಅನಂತರ, ಅವರು ಎರಡನೆಯ ಮಹಡಿಗೆ ಹೋದರು. ಇಲ್ಲಿ ಅವರು ಕೆಲಸ ಮಾಡುತ್ತಿದ್ದ ಹಾಗೂ ಮಲಗುತ್ತಿದ್ದ ಕೋಣೆಗಳನ್ನೂ ಅವರ ಕೆಲವು ವಸ್ತುಗಳನ್ನೂ ಕಾಣಬಹುದು.
ಇಲ್ಲಿ ಶ್ರೀಲ ಪ್ರಭುಪಾದರ ಪುಷ್ಪ ಸಮಾಧಿ ಇದೆ. ಪ್ರಭುಪಾದರು ಧರಿಸಿದ್ದ ಕಡೆಯ ಹೂವಿನ ಹಾರವನ್ನು ಈ ಸ್ಥಳದಲ್ಲಿ ಸಮಾಧಿ ಮಾಡಿ ಈ ಸ್ಮಾರಕವನ್ನು ಕಟ್ಟಲಾಯಿತು. ಇಲ್ಲಿ ಒಂದು ಸಭಾಂಗಣ, ಉದ್ಯಾನ, ಮತ್ತು ಒಂದು ಚಿಕ್ಕ ಕೊಳವಿದೆ. ಸಮಾಧಿಯ ಮೇಲ್ಛಾವಣಿಯಲ್ಲಿ ಗಂಗಾನದಿಯ ಸುಂದರ ದೃಶ್ಯ ಕಾಣುತ್ತದೆ. ಸಭಾಂಗಣದಲ್ಲಿ ಭಾಗವತದ ಅನೇಕ ಕಥೆಗಳನ್ನು ಸೂಚಿಸುವ ಚಿತ್ರಗಳಿವೆ. ಇಲ್ಲೊಂದು ಸುಂದರವಾದ ಪ್ರಭುಪಾದರ ವಿಗ್ರಹವಿದೆ.
ಇಲ್ಲಿ ಒಂದೊಂದು ಕಲ್ಲಿನ ಮೇಲೂ ಹರೇಕೃಷ್ಣ ಮಂತ್ರ ಜಪಿಸುವ 108 ಕಲ್ಲುಗಳ ಪಾದಯಾತ್ರಾ ಸ್ಮಾರಕ, ಪುಟ್ಟ ಮೃಗಾಲಯ, ದೇವಾಲಯದ ಹೊರಗೆ ಗೋಶಾಲೆ, ಮತ್ತು ಗುರುಕುಲಗಳೂ ಇವೆ.
(ಮುಂದುವರಿಯುವುದು)






Leave a Reply