ನವದ್ವೀಪ ಪರಿಕ್ರಮ…

ಶ್ರೀಕ್ಷೇತ್ರ ಮಾಯಾಪುರ (ಭಾಗ-2)

– ಡಾ.ಬಿ.ಆರ್‌.ಸುಹಾಸ್‌

ಯೋಗಪೀಠ – ಶ್ರೀಕೃಷ್ಣಚೈತನ್ಯರ ಜನ್ಮಸ್ಥಳ

ಕ್ರಿ. ಶ. 1486 ರ ಫಾಲ್ಗುಣ ಮಾಸದ ಪೂರ್ಣಿಮೆಯ ದಿನದಂದು ಶ್ರೀ ಚೈತನ್ಯ ಮಹಾಪ್ರಭುಗಳು ಈ ಸ್ಥಳದಲ್ಲಿ ಒಂದು ನೀಮ ವೃಕ್ಷ ಅಥವಾ ಬೇವಿನ ಮರದ ಕೆಳಗೆ ಅವತರಿಸಿದರು. ನೀಮ ವೃಕ್ಷದ ಕೆಳಗೆ ಹುಟ್ಟಿದುದರಿಂದ ಮಗುವನ್ನು ನಿಮಾಯ್ ಎಂದು ಕರೆದರು. ಈಗ ಇಲ್ಲಿರುವ ಒಂದು ಬೇವಿನ ಮರ, ಮೊದಲಿದ್ದ ಬೇವಿನ ಮರದ ತುಂಡಿನಿಂದ ಹುಟ್ಟಿದುದಾಗಿದೆ.

ಇಲ್ಲೊಂದು ಪುಟ್ಟ ಮನೆಯಿದ್ದು, ಅದರಲ್ಲಿ ಚೈತನ್ಯರ ತಂದೆ ಶ್ರೀ ಜಗನ್ನಾಥಮಿಶ್ರ, ತಾಯಿ ಶಚೀದೇವಿ, ಮತ್ತು ಮಗು ನಿಮಾಯ್‌ನ ವಿಗ್ರಹಗಳಿವೆ. ಈ ಪುಟ್ಟ ಮನೆಯ ಹಿಂದೆ, ಒಂದು ಚಿಕ್ಕ ದೇವಾಲಯವಿದೆ. ಈ ದೇವಾಲಯದಲ್ಲಿ ಒಂದು ಶಿವಲಿಂಗವಿದ್ದು ಇದನ್ನು ಕ್ಷೇತ್ರಪಾಲ ಶಿವ, ವೃದ್ಧಶಿವ, ಶಿವದೋಬ, ಗೋಪೀಶ್ವರ ಮಹಾದೇವ, ಎಂಬ ಹೆಸರುಗಳಿಂದ ಕರೆಯುತ್ತಾರೆ.

ವೃಂದಾವನದ ಗೋಪೀಶ್ವರ ಮಹಾದೇವ ಲಿಂಗದಿಂದ ಇದು ಬೇರೆಯಲ್ಲ. ಇದು ಚೈತನ್ಯರ ಜನ್ಮಸ್ಥಳದಿಂದ ಹತ್ತು ಮೀಟರ್ ಗಳಷ್ಟು ದೂರದಲ್ಲಿದೆ. ಗೌರಮಂಡಲ ಪರಿಕ್ರಮವನ್ನಾರಂಭಿಸುವ ಮೊದಲು ಈ ಶಿವಲಿಂಗಕ್ಕೆ ನಮಸ್ಕರಿಸಿ, ಶಿವನ ಆಶೀರ್ವಾದ ಪಡೆಯುವುದು ಸಂಪ್ರದಾಯ. ಭಗವಂತನ ಯೋಗಮಾಯೆ ಅಥವಾ ಪ್ರೌಢಮಾಯೆ, ಸದಾ ಇಲ್ಲಿ ನೆಲೆಸಿರುತ್ತಾಳೆ.

ಚೈತನ್ಯರ ಜನ್ಮಸ್ಥಳ ಮಾಯಾಪುರ ಧಾಮದ ಮಧ್ಯದಲ್ಲಿದೆ. ಈ ಸ್ಥಳಕ್ಕೆ ಯೋಗಪೀಠವೆಂದು ಹೆಸರು ಯೋಗಪೀಠದಲ್ಲಿ ಚೈತನ್ಯ ಮಹಾಪ್ರಭುಗಳು ಒಂದು ರತ್ನ ಸಿಂಹಾಸನದಲ್ಲಿ ಮಂಡಿಸಿದ್ದಾರೆ. ಆವರ ಬಲಕ್ಕೆ ನಿತ್ಯಾನಂದಪ್ರಭುಗಳೂ ಎಡಕ್ಕೆ ಗದಾಧರಪಂಡಿತರೂ, ಎದುರಿನಲ್ಲಿ ಕೈಗಳನ್ನು ಮುಗಿಯುತ್ತಾ ಅದ್ವೈತಾಚಾರ್ಯರೂ, ಇವರೆಲ್ಲರಿಗೂ ಛತ್ರಿಯನ್ನು ಹಿಡಿದಿರುವ ಶ್ರೀವಾಸರೂ ಉಪಸ್ಥಿತರಾಗಿದ್ದಾರೆ.

ರಸ್ತೆಯಿಂದ ಮುಖ್ಯ ಬಾಗಿಲಿಗೆ ಬಂದಾಗ, ಬಲಗಡೆಗೆ ತಿರುಗಿದರೆ, ಶ್ರೀ ಭಕ್ತಿ ವಿನೋದ ಠಾಕುರರಿಗಾಗಿ ಒಂದು ದೇವಾಲಯವಿದೆ. ಎಡಗಡೆಯಲ್ಲಿರುವುದೇ ಪ್ರಮುಖ ದೇವಾಲಯ. ಇದು ನೂರು ಅಡಿಗಳಷ್ಟು ಎತ್ತರದ ಸ್ತಂಭವನ್ನು ಹೊಂದಿದೆ. ಈ ದೇವಾಲಯದಲ್ಲಿ ಎಡಗಡೆಯ ವೇದಿಕೆಯಲ್ಲಿ ರಾಧಾ ಮಾಧವ ವಿಗ್ರಹಗಳೂ ಶ್ರೀ ಕೃಷ್ಣಚೈತನ್ಯ ಮತ್ತು ಜಗನ್ನಾಥರ ವಿಗ್ರಹಗಳೂ ಇವೆ.

ಮಧ್ಯ ವೇದಿಕೆಯ ಮೇಲೆ ಭಗವಾನ್ ಚೈತನ್ಯರ (ಗೌರ ನಾರಾಯಣ) ಮತ್ತು ಅವರ ಪತ್ನಿಯರಾದ ವಿಷ್ಣುಪ್ರಿಯಾ, ಲಕ್ಷ್ಮೀಪ್ರಿಯಾರ ವಿಗ್ರಹಗಳೂ ಇವೆ. ಇದೇ ವೇದಿಕೆಯ ಮೇಲೆ ಚತುರ್ಭುಜ ಅಧೋಕ್ಷಜ ವಿಷ್ಣುವಿನ ವಿಗ್ರಹವೂ ಇದೆ. 1934ರಲ್ಲಿ ದೇವಾಲಯದ ಉತ್ಖನನದ ಸಮಯದಲ್ಲಿ ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀಗಳು ಈ ವಿಗ್ರಹವನ್ನು ಪತ್ತೆ ಮಾಡಿದರು.

ಎಂಟು ಅಂಗುಲಗಳ ಉದ್ದವಿರುವ ಈ ಕಪ್ಪು ವಿಗ್ರಹವು ತನ್ನ ಚತುರ್ಭುಜಗಳಲ್ಲಿ ಶಂಖ, ಚಕ್ರ, ಗದೆ, ಪದ್ಯಗಳನ್ನು ಹಿಡಿದಿದ್ದು ಗೌರನಾರಾಯಣ ವಿಗ್ರಹಗಳ ಮುಂದೆ ಇದೆ. ಈ ವಿಗ್ರಹದ ಇಬ್ಬದಿಗಳಲ್ಲಿ ಶ್ರೀದೇವಿ ಭೂದೇವಿಯರಿದ್ದಾರೆ.

ಬಲಗಡೆಯಿರುವ ವೇದಿಕೆಯ ಮೇಲೆ ಅದ್ವೈತಾಚಾರ್ಯ, ನಿತ್ಯಾನಂದ ಪ್ರಭು, ಚೈತನ್ಯ ಮಹಾಪ್ರಭು, ಗದಾಧರ ಮತ್ತು ಶ್ರೀವಾಸರ ವಿಗ್ರಹಗಳಿವೆ. ಈ ಐದು ವಿಗ್ರಹಗಳಿಗೆ ಪಂಚತತ್ತ್ವವೆನ್ನುತ್ತಾರೆ. ಈ ವಿಗ್ರಹಗಳ ಮುಂದೆ ಜಗನ್ನಾಥನ ವಿಗ್ರಹವಿದೆ. ಚೈತನ್ಯರ ಜೊತೆಯಿರುವ ಈ ನಾಲ್ವರು ಮಹಾಪುರುಷರು ಮಹಾಭಕ್ತರಾಗಿದ್ದು ಅವರ ಸಹವರ್ತಿಗಳಾಗಿದ್ದರು. ನಿತ್ಯಾನ೦ದ ಪ್ರಭುಗಳು, ಅವರ ಒಡಹುಟ್ಟಿದವರಲ್ಲದಿದ್ದರೂ ಶ್ರೀ ಕೃಷ್ಣನ ಸಹೋದರನಾದ ಬಲರಾಮನ ಅವತಾರವೆಂದು ಪರಿಗಣಿತ.

ಮುಖ್ಯ ಆಲಯದ ಹಿಂದೆ, ಲಕ್ಷ್ಮೀನರಸಿಂಹರ ವಿಗ್ರಹಗಳಿವೆ. ಇವು ಅರವತ್ತು ವರ್ಷಗಳಷ್ಟು ಪುರಾತನವಾದ ವಿಗ್ರಹಗಳು. ಇಲ್ಲಿ ಗೌರಗದಾಧರ ವಿಗ್ರಹಗಳೂ ಇವೆ.

ದೇವಾಲಯದ ಚೌಕಟ್ಟಿನ ಹೊರಗೆ ಗೌರಕುಂಡವೆಂಬ ತೀರ್ಥವಿದೆ.  ದೇವಾಲಯವು ಬೆಳಗ್ಗೆ 8:30 ರಿಂದ 11:00 ಗಂಟೆ ಹಾಗೂ ಮಧ್ಯಾಹ್ನ 3:30 ರಿಂದ ರಾತ್ರಿ 8:00ರವರೆಗೆ ತೆರೆದಿರುತ್ತದೆ.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi