– ಆಂಗ್ಲಮೂಲ: ಶ್ರೀ ಯದುರಾಜ ದಾಸ, ಅನುವಾದ: ಸುರೇಶ್ ಮೂನ
ಮಥುರೆಯಲ್ಲಿ ಜನಿಸಿದ ಕೃಷ್ಣನನ್ನು ವಸುದೇವ ತತ್ಕ್ಷಣ ಗೋಕುಲಕ್ಕೆ ಕರೆತಂದು ಯಶೋದೆಯ ಮಡಿಲಲ್ಲಿಟ್ಟ. ಅಂದಿನಿಂದ ಕೃಷ್ಣ ನಂದಗೋಪನ ಮಗನಾಗಿ ಬೆಳೆಯತೊಡಗಿದ. ಒಂದು ವರ್ಷವೂ ಪೂರೈಸಿತು. ಇತ್ತ ಕಂಸ ನವಜಾತ ಶಿಶುಗಳನ್ನು ಕೊಲ್ಲುವ ಸಂಚು ಹಾಕಿದ್ದ. ಪೂತನಿ ಅದಕೆಂದೇ ಗೋಕುಲಕ್ಕೆ ಬಂದಳು. ಕೃಷ್ಣ ಅವಳ ಮೊಲೆಹಾಲಿನ ಜೊತೆ ಜೊತೆಗೆ ಅವಳ ಜೀವವನ್ನೂ ಹೀರಿಬಿಟ್ಟ. ಈಗ ತೃಣಾವರ್ತನ ಸರದಿ… (ಮುಂದೆ ಓದಿ)

ಇತ್ತ ಕೃಷ್ಣನನ್ನು ಹೆಗಲ ಮೇಲೆ ಇಟ್ಟುಕೊಂಡ ತೃಣಾವರ್ತನು ಆಕಾಶದಲ್ಲಿ ಬಹು ಎತ್ತರಕ್ಕೆ ಹಾರಿದನು. ಆದರೆ ಇದ್ದಕ್ಕಿದ್ದಂತೆ ಮಗು ಎಷ್ಟು ಭಾರವಾಯಿತೆಂದರೆ ಅವನಿಗೆ ಮುಂದೆ ಹೋಗಲು ಸಾಧ್ಯವಾಗಲೇ ಇಲ್ಲ. ತನ್ನ ಸುಂಟರಗಾಳಿಯನ್ನು ಅವನು ನಿಲ್ಲಿಸಬೇಕಾಯಿತು. ಕೃಷ್ಣನು ಮತ್ತಷ್ಟು ಭಾರವಾಗಿ ರಾಕ್ಷಸನನ್ನು ಇನ್ನೂ ಹೆಚ್ಚು ಅಮುಕಿದ.
ಅನಂತರ ಅವನ ಕುತ್ತಿಗೆಯನ್ನು ಬಲವಾಗಿ ಅದುಮತೊಡಗಿದ. ತೃಣಾವರ್ತನಿಗೆ ಮಗುವು ಪರ್ವತದಂತೆ ಭಾಸವಾಯಿತು. ಕಣ್ಣುಗುಡ್ಡೆಗಳು ಗುಳಿಯಿಂದ ಹೊರಕ್ಕೆ ಬಂದವು. ಭಯಂಕರವಾಗಿ ಅರಚುತ್ತಾ ಅವನು ವೃಂದಾವನದ ಭೂಮಿಗೆ ಬಿದ್ದು ಬಿಟ್ಟ. ಕಲ್ಲಿನ ಮೇಲೆ ಬಿದ್ದು ಅವನ ದೇಹದ ಅಂಗಾಂಗಗಳೆಲ್ಲ ಜಜ್ಜಿಹೋದವು. ವೃಂದಾವನದ ನಿವಾಸಿಗಳಿಗೆ ಅವನ ದೇಹವು ಕಾಣಿಸಿತು.
ಸುಂಟರಗಾಳಿಯಿಂದಾಗಿ ಎದ್ದಿದ್ದ ಧೂಳೂ ಕಡಮೆಯಾಯಿತು. ರಾಕ್ಷಸನು ಸತ್ತು ಬಾಲಕೃಷ್ಣನು ಅವನ ದೇಹದ ಮೇಲೆ ಸಂತೋಷದಿಂದ ಆಡುತ್ತಿರುವುದನ್ನು ಕಂಡ ಗೋಪಿಯರು ಕೂಡಲೇ ಅವನನ್ನು ಬಹಳ ಪ್ರೀತಿಯಿಂದ ಎತ್ತಿಕೊಂಡರು. ಅವರಿಗೆಲ್ಲ ತಮ್ಮ ಮುದ್ದಿನ ಮಗುವಿಗೇನೂ ಆಗಿಲ್ಲದಿದ್ದುದು ಕಂಡು ಬಹಳ ಸಂತೋಷವಾಗಿತ್ತು.
ರಾಕ್ಷಸನು ಮಗುವನ್ನು ತಿಂದು ಹಾಕಲು ತೆಗೆದುಕೊಂಡು ಹೋದರೂ ಹಾಗೆ ಮಾಡಲಾರದೆ ತಾನೇ ಸತ್ತು ಬಿದ್ದಿರುವುದನ್ನು ಕಂಡು ಇದೊಂದು ಬಹಳ ಆಶ್ಚರ್ಯದ ಸಂಗತಿಯೆಂದು ಅವರು ಮಾತನಾಡಲಾರಂಭಿಸಿದರು. ಇದು ಸರಿಯೇ ಆಯಿತು. ”ಬಹು ಪಾಪಿಗಳು ತಮ್ಮ ಪಾಪ ಕಾರ್ಯಗಳ ಫಲವಾಗಿಯೇ ಸಾಯುತ್ತಾರೆ. ಮಗು ಕೃಷ್ಣನು ಧರ್ಮಿಷ್ಠನಾದುದರಿಂದಲೇ ಎಲ್ಲ ಭಯಂಕರ ಸನ್ನಿವೇಶಗಳಲ್ಲಿಯೂ ಅವನು ಪಾರಾಗುತ್ತಾನೆ.’ ಎಂದು ಅವರೆಲ್ಲರೂ ಅಭಿಪ್ರಾಯಪಟ್ಟರು.
ಸುಂಟರಗಾಳಿ ರಾಕ್ಷಸನ ಘಟನೆ ನಡೆದ ಅನಂತರ ಮತ್ತೆ ಮತ್ತೆ ನಂದ ಮಹಾರಾಜನಿಗೆ ವಸುದೇವನ ಎಚ್ಚರಿಕೆಯ ಮಾತುಗಳು ನೆನಪಿಗೆ ಬಂದವು.
ಇನ್ನೊಮ್ಮೆ ಯಶೋದೆಯು ಮಗುವನ್ನು ಮಮತೆಯಿಂದ ಲಾಲಿಸಿ ತಟ್ಟುತ್ತಿದ್ದಾಗ ಅವಳ ಸ್ತನದಿಂದ ಆಗಾಧವಾಗಿ ಹಾಲು ಹರಿಯತೊಡಗಿತು. ಆಗ ಅವಳು ಅದನ್ನು ಕೃಷ್ಣನಿಗೆ ಕುಡಿಸಲು ತನ್ನ ಬೆರಳುಗಳಿಂದ ಮಗುವಿನ ಬಾಯನ್ನು ಅಗಲ ಮಾಡಿದಳು. ಆಗ ಅವಳಿಗೆ ಅತ್ಯಾಶ್ಚರ್ಯವಾಯಿತು ಏಕೆ೦ದರೆ ಮಗುವಿನ ಬಾಯಿಯೊಳಗೆ ಇಡೀ ಬ್ರಹ್ಮಾಂಡವೇ ಗೋಚರವಾಯಿತು.
ನೀಲಿಯ ಆಕಾಶ ಅದರಲ್ಲಿನ ಚಂದ್ರ ಸೂರ್ಯ ಮಿನುಗುವ ನಕ್ಷತ್ರಗಳು, ಗಾಳಿ, ಬೆಂಕಿ, ಸಮುದ್ರಗಳು, ದ್ವೀಪಗಳು, ಪರ್ವತಗಳು, ನದಿಗಳು, ಕಾಡುಗಳು ಹಾಗೂ ಅದರಲ್ಲಿನ ಸಕಲ ಚರಾಚರ ವಸ್ತುಗಳು ಹೀಗೆ ಎಲ್ಲವನ್ನೂ ಕಂಡ ಯಶೋದೆಯ ಹೃದಯವು ಡವ ಡವನೆ ಹೊಡೆದುಕೊಳ್ಳಲಾರಂಭಿಸಿತು. ಇದು ಎಷ್ಟು ಬೆರಗುಗೊಳಿಸುವಂತಹ ದೃಶ್ಯ” ಎಂದು ಅವಳು ತನಗೆ ತಾನೇ ಹೇಳಿಕೊಂಡಳು. ಅವಳಿಗೆ ಮುಂದೆ ಮಾತನಾಡಲೂ ಆಗದೆ ಕಣ್ಣುಗಳನ್ನು ಮುಚ್ಚಿಕೊಂಡು ಅಚ್ಚರಿಯ ಯೋಚನೆಗಳಲ್ಲಿ ಮುಳುಗಿ ಹೋದಳು.
ಇದರಿಂದ ನಮಗೆ ತಿಳಿಯುವುದಿಷ್ಟು: ತಾಯಿಯ ತೊಡೆಯ ಮೇಲೆ ಮಲಗಿರುವ ಹಸುಳೆಯ ರೂಪದಲ್ಲಿರಲಿ ಅಥವಾ ಕುರುಕ್ಷೇತ್ರದ ರಣಭೂಮಿಯಲ್ಲಿ ಸಾರಥಿಯಾಗಿರಲಿ ದೇವೋತ್ತಮ ಪರಮ ಪುರುಷನು ದೇವೋತ್ತಮ ಪರಮ ಪುರುಷನೇ.
ಧ್ಯಾನದಿಂದ ಅಥವಾ ಯಾವುದೋ ಕೃತಕ ಭೌತಿಕ ಚಟುವಟಿಕೆಗಳಿಂದ ಮನುಷ್ಯನು ದೇವರಾಗಬಹುದು ಎನ್ನುವ ನಿರಾಕಾರವಾದಿಯ ಕಲ್ಪನೆಯು ಸುಳ್ಳು, ಎಂದು ಇದು ಸಾರುತ್ತದೆ. ಯಾವ ಸ್ಥಿತಿಯಲ್ಲಿಯೇ ಆಗಲಿ, ಯಾವ ಅಂತಸ್ತಿನಲ್ಲೇ ಆಗಲಿ ದೇವರು ದೇವರೇ. ಜೀವಿಗಳು ಯಾವಾಗಲೂ ಪರಮ ಪ್ರಭುವಿನ ವಿಭಿನ್ನಾಂಶಗಳು, ಅಷ್ಟೇ. ದೇವೋತ್ತಮ ಪರಮ ಪುರುಷನಿಗೆ ನಾವೆಂದೂ ಸಮವಾಗಲಾರೆವು.
ಈ ಮಧ್ಯೆ ವಸುದೇವನು ಜ್ಯೋತಿಷ್ಯಾಸ್ತ್ರದ ಪ್ರಕಾರ ಕೃಷ್ಣನ ಭವಿಷ್ಯವನ್ನು ಗುಣಿಸಿ ನೋಡಲು ನಂದಮಹಾರಾಜನ ಮನೆಗೆ ಹೋಗಿ ಬರುವಂತೆ ತನ್ನ ಮನೆಯ ಪುರೋಹಿತರಾದ ಗರ್ಗಮುನಿಯನ್ನು ಕೇಳಿಕೊಂಡನು. ಮಹಾಸಾಧುಸಂತರಾದ ಗರ್ಗಮುನಿಗಳು ದೀರ್ಘಕಾಲ ತಪಸ್ಸು ಮಾಡಿದ್ದವರು. ಅವರು ಯದುಕುಲದ ಪುರೋಹಿತರಾಗಿದ್ದರು.
ಇಂತಹ ಮಹಾತ್ಮರು ತನ್ನ ಮನೆಗೆ ಬಂದುದನ್ನು ಕಂಡು ನಂದ ಮಹಾರಾಜನಿಗೆ ಬಹಳ ಸಂತೋಷವಾಯಿತು. ಅವರಿಗೆ ಕೈಮುಗಿದು ಒಳಗೆ ಬರಮಾಡಿಕೊಂಡು ಗೌರವ ಪೂರ್ವಕ ಪ್ರಣಾಮಗಳನ್ನು ಸಲ್ಲಿಸಿದನು. ಆತ್ಮೀಯತೆಯಿಂದ ಸ್ವಾಗತಿಸಿ ಒಳ್ಳೆಯ ಪೀಠವನ್ನು ನೀಡಿ ಕುಳಿತುಕೊಳ್ಳುವಂತೆ ಕೋರಿದನು.

ಅನಂತರ ಬಹಳ ವಿನಮ್ರವಾಗಿ “ಪ್ರೀತಿಯ ವಿಪ್ರರೇ, ತಾವು ಗೃಹಸ್ಥನೊಬ್ಬನ ಮನೆಗೆ ಬರುವುದು ದೀಪ ಬಂದಂತೆ. ನಾವು ಸದಾ ಗೃಹಕೃತ್ಯದಲ್ಲಿ ಮಗ್ನರಾಗಿ ನಮ್ಮ ನಿಜವಾದ ಕರ್ತವ್ಯವಾದ ಆತ್ಮಸಾಕ್ಷಾತ್ಕಾರವನ್ನು ಮರೆತುಬಿಡುತ್ತೇವೆ. ತಾವು ನಮ್ಮ ಮನೆಗೆ ಬರುವುದು ನಮಗೆ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಅನುಗ್ರಹಿಸಲು, ನಮ್ಮಂತಹ ಗೃಹಸ್ಥರ ಮನೆಗೆ ಇದಲ್ಲದೆ ತಾವು ಬೇರಾವ ಉದ್ದೇಶದಿಂದಲೂ ಬರುವುದಿಲ್ಲ’ ಎಂದು ಹೇಳಿದನು.
ಆನಂತರ ತನ್ನ ಜ್ಯೋತಿಶಾಸ್ತ್ರದ ಲೆಕ್ಕಾಚಾರಗಳಿಂದ ಗರ್ಗಮುನಿಗೆ ಕೃಷ್ಣನು ದೇವಕಿಯ ಮಗ, ಆದರೆ ನಂದ ಮಹಾರಾಜನ ಮನೆಯಲ್ಲಿ ರಕ್ಷಣೆಗಾಗಿ ಬಿಟ್ಟಿದ್ದಾರೆ ಎಂದು ಅರ್ಥವಾಯಿತು. ಇದು ನಂದ ಮಹಾರಾಜನಿಗೆ ತಿಳಿದಿರಲಿಲ್ಲ. ನಂದನು ಕೃಷ್ಣನ ನಾಮಕರಣವನ್ನು ವೈಭವದಿಂದ ಎಲ್ಲರಿಗೂ ತಿಳಿಯುವಂತೆ ಮಾಡಿದರೆ ಕಂಸನಿಗೆ ಕೃಷ್ಣನು ವಸುದೇವ ದೇವಕಿಯರ ಮಗನೇ ಎಂಬುದು ತಿಳಿದು ಬಿಡುತ್ತದೆ.
ಆ ರಾಕ್ಷಸನಿಗೆ ಈ ವಿಷಯ ಗೊತ್ತಾಗದಿರಲೆಂದು ನಂದ ಮಹಾರಾಜನ ಪ್ರಾರ್ಥನೆಯಂತೆ ಗರ್ಗ ಮುನಿಗಳು ಬಹಳ ಗುಟ್ಟಾಗಿ ನಂದ ಮಹಾರಾಜನ ಗೋಶಾಲೆಯಲ್ಲಿ ನಾಮಕರಣವನ್ನು ನಡೆಸಿಕೊಟ್ಟರು. ಹಾಗೆಯೇ ನಂದ ಮಹಾರಾಜನಿಗೆ ರೋಹಿಣಿಯ ಮಗನು ಮುಂದೆ ತನ್ನ ಕುಟುಂಬದವರಿಗೆ ಮತ್ತೆ ನೆಂಟರಿಷ್ಟರಿಗೆ ಬಹು ಸಂತೋಷವನ್ನು ಕೊಡುವನೆಂದೂ ಅವನಿಗೆ ರಾಮ ಎಂದು ಹೆಸರಿಡುವುದಾಗಿಯೂ ಹಾಗೂ ಅವನು ಬಹಳ ಬಲಶಾಲಿಯಾಗುವುದರಿಂದ ಅವನನ್ನು ಬಲರಾಮ ಎಂದು ಕರೆಯುವುದು ಸರಿಯೆ೦ದು ತಿಳಿಸಿದರು.
ಅನಂತರ ಅವರು ನಂದ ಮಹಾರಾಜನನ್ನು ಕುರಿತು ಹೀಗೆ ನುಡಿದರು: “ನಿನ್ನ ಮಗನು ಬೇರೆ ಬೇರೆ ಯುಗಗಳಲ್ಲಿ ಬೇರೆ ಬೇರೆ ಮೈಬಣ್ಣಗಳನ್ನು ತಳೆದಿದ್ದಾನೆ. ಮೊಟ್ಟಮೊದಲು ಅವನು ಬಿಳಿಯ ಬಣ್ಣದವನಾಗಿದ್ದ. ಅನಂತರ ಕೆಂಪು ಬಣ್ಣವನ್ನು ತಳೆದ, ಅನಂತರ ಹಳದಿ, ಈಗ ನೀಲವರ್ಣದವನಾಗಿದ್ದಾನೆ.
ಅಷ್ಟೇ ಅಲ್ಲ ನಿನ್ನ ಮಗುವಿಗೆ ಅವನ ವಿವಿಧ ಲೀಲೆಗಳಿಂದಾಗಿ ಅನೇಕಾನೇಕ ಹೆಸರುಗಳೂ ಉಂಟು. ತನ್ನ ಹಿಂದಿನ ಜನ್ಮಗಳಲ್ಲಿ ಈ ಮಗುವು ಸಮಾಜದಲ್ಲಿ ತೊಂದರೆಯಿದ್ದಾಗ ನೀಚರು ಮತ್ತು ಕಳ್ಳರ ಕೈಯಿಂದ ಧರ್ಮಿಷ್ಟರನ್ನು ಕಾಪಾಡಿದ್ದಾನೆ. ನಿನ್ನ ಮಗನು ಎಷ್ಟು ಶಕ್ತಿವಂತನೆಂದರೆ ಅವನ ಭಕ್ತರಾದವರಿಗೆ ಶತ್ರುಗಳ ಬಾಧೆ ಇರುವುದಿಲ್ಲ.
ವಿಷ್ಣುವು ಸದಾ ದೇವತೆಗಳನ್ನು ರಕ್ಷಿಸುವಂತೆ ದೇವೋತ್ತಮ ಪರಮ ಪುರುಷನಾದ ನಾರಾಯಣನು ಸದಾ ನಿನ್ನ ಮಗನನ್ನು ರಕ್ಷಿಸುತ್ತಾನೆ. ಶಕ್ತಿ ಸಂಪತ್ತು ಚೆಲುವು ಎಲ್ಲದರಲ್ಲಿಯೂ ಈ ಮಗುವು ದೇವೋತ್ತಮ ಪರಮ ಪುರುಷ ನಾರಾಯಣನಿಗೆ ಸಮನಾಗುವಂತೆ ಬೆಳೆಯುತ್ತಾನೆ. ಆದುದರಿಂದ ಮಗುವಿಗೆ ಯಾವುದೇ ಕ್ಷೋಭೆಯಿಲ್ಲದಂತೆ ಬೆಳೆಯುವ ಹಾಗೆ ಬಹು ಎಚ್ಚರಿಕೆಯಿಂದ ನೋಡಿಕೋ.
ಇದು ನಿನಗೆ ನಾನು ಕೊಡುವ ಸಲಹೆ.” ಇದೆಲ್ಲವನ್ನೂ ತಿಳಿಸಿಕೊಟ್ಟ ಗರ್ಗಮುನಿಗಳು ಮನೆಗೆ ಹಿಂದಿರುಗಿದರು. ನಂದ ಮಹಾರಾಜನಿಗೆ ಈ ವೃತ್ತಾಂತವನ್ನೆಲ್ಲಾ ಮುನಿಗಳ ಬಾಯಿಂದ ಕೇಳಿ ತಾನು ಮಹಾಭಾಗ್ಯಶಾಲಿ ಎನ್ನಿಸಿತು. ಹೀಗೆ ತನಗೆ ಅನುಗ್ರಹವಾದುದಕ್ಕೆ ಅವನ ಮನಸ್ಸಿಗೆ ಬಹಳ ಸಂತೋಷವುಂಟಾಯಿತು.
ಸ್ವಲ್ಪ ಕಾಲದನಂತರ ಕೃಷ್ಣ ಮತ್ತು ಬಲರಾಮರು ಅಂಬೆಗಾಲನ್ನು ಇಡಲು ಪ್ರಾರಂಭಿಸಿದರು. ಅದನ್ನು ಕಂಡ ಅವರ ತಾಯಿಗೆ ಬಹಳ ಸಂತೋಷವಾಯಿತು. ಹಾಗೆ ಅವರು ಚಲಿಸುವಾಗ, ಅವರ ಸೊಂಟ ಮತ್ತು ಕಾಲಂದಿಗೆಗೆ ಕಟ್ಟಿದ್ದ ಗಂಟೆಗಳ ನಾದ ಬಹಳ ಮನಮೋಹಕವಾಗಿರುತ್ತಿತ್ತು.
ಅವರಿಬ್ಬರೂ ಕೆಲವೊಮ್ಮೆ ಸಾಮಾನ್ಯ ಮಕ್ಕಳಂತೆ ಇತರರಿಗೆ ಹೆದರಿಕೊ೦ಡು ಕೂಡಲೇ ರಕ್ಷಣೆಗಾಗಿ ತಾಯಿಯ ಬಳಿಗೆ ಓಡಿ ಬರುವರು. ಕೆಲವೊಮ್ಮೆ ಅವರು ವೃಂದಾವನದ ಮಣ್ಣಿನಲ್ಲಿ ಬಿದ್ದು ಮೈಗೆಲ್ಲ ಜೇಡಿ ಮಣ್ಣು ಮತ್ತು ಕೆಸರನ್ನು ಹತ್ತಿಸಿಕೊಂಡು ತಾಯಿಯರ ಬಳಿಗೆ ಬರುವರು. ಅವರ ತಾಯಿಯರಾದರೋ ಆ ಮಕ್ಕಳ ಮೈಗೆ ಕೇಸರಿ ಮತ್ತು ಶ್ರೀಗಂಧದ ಪುಡಿಯನ್ನು ಹೆಚ್ಚಿರುತ್ತಿದ್ದರು.
ಆದರೆ ಮೈಯೆಲ್ಲಾ ಮಣ್ಣು ಮಾಡಿಕೊಂಡು ಬಂದಾಗ ಅದನ್ನು ತೊಳೆದು ಮಕ್ಕಳನ್ನು ತೊಡೆಯ ಮೇಲೆತ್ತಿಕೊಂಡು ಸೀರೆಯ ಅಂಚನ್ನು ಮರೆ ಮಾಡಿ ಹಾಲುಣಿಸುತ್ತಿದ್ದರು. ಮಕ್ಕಳು ಹಾಲನ್ನು ಕುಡಿಯುತ್ತಿರುವಾಗ ಅವರ ಬಾಯಲ್ಲಿ ಮೂಡುತ್ತಿರುವ ಪುಟ್ಟ ಹಲ್ಲುಗಳನ್ನು ಕಂಡು ಅವರಿಗೆ ಹರ್ಷವಾಗುತ್ತಿತ್ತು.

ಒಮ್ಮೊಮ್ಮೆ ಈ ಬಾಲಕರು ಗೋ ಶಾಲೆಗೆ ಅಂಬೆಗಾಲಿನಲ್ಲಿ ಹೋಗಿ ಕರುವಿನ ಬಾಲವನ್ನು ಹಿಡಿದುಕೊಂಡು ನಿಲ್ಲುತ್ತಿದ್ದರು. ಗಲಿಬಿಲಿಗೊಂಡ ಕರುಗಳು ಅಲ್ಲಿಂದಿಲ್ಲಿಗೆ ಓಡಿಹೋಗುತ್ತಿದ್ದವು. ಆಗ ಹುಡುಗರನ್ನು ಮಣ್ಣಿನಲ್ಲಿ ಹಾಗೂ ಸಗಣಿಯಲ್ಲಿ ಎಳೆಯುವುದು. ಈ ದೃಶ್ಯವನ್ನು ನೋಡಲು ಯಶೋದೆ ಮತ್ತು ರೋಹಿಣಿಯರು ತಮ್ಮ ನೆರೆಹೊರೆಯವರನ್ನೆಲ್ಲಾ ಕರೆಯುತ್ತಿದ್ದರು. ಶ್ರೀಕೃಷ್ಣನ ಬಾಲಲೀಲೆಗಳನ್ನು ನೋಡಿದ ಗೋಪಿಯರು ಅಲೌಕಿಕ ಆನಂದದಲ್ಲಿ ಮೈಮರೆಯುತ್ತಿದ್ದರು.
ಶ್ರೀಕೃಷ್ಣ ಮತ್ತು ಬಲರಾಮರು ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಇದರಿಂದ ಅವರ ತಾಯಿಯರಿಗೆ ಮನೆಗೆಲಸಗಳೊಂದಿಗೆ ಮಕ್ಕಳನ್ನು ನಿಯಂತ್ರಿಸುವುದೂ ಕಷ್ಟವಾಗುತ್ತಿತ್ತು. ಹಸುಗಳು, ಎತ್ತುಗಳು, ಕೋತಿಗಳು, ನೀರು, ಬೆಂಕಿ ಮತ್ತು ಪಕ್ಷಿಯಾವುದರಿಂದಲೂ ಅಪಾಯವಾಗದಂತೆ ರಕ್ಷಿಸಲು ಪ್ರಯತ್ನಿಸುತ್ತಿದ್ದರು.
ಒಂದು ಕಡೆ ಕೆಲಸ ಇನ್ನೊಂದು ಕಡೆ ಮಕ್ಕಳ ಬಗ್ಗೆ ಆತಂಕ. ಆದ್ದರಿಂದ ಅವರು ಯಾವತ್ತೂ ನಿರಾಳವಾಗಿರಲಿಲ್ಲ. ಇನ್ನೂ ಸ್ವಲ್ಪ ಕಾಲ ಕಳೆದ ಮೇಲೆ ಈ ಮಕ್ಕಳಿಬ್ಬರೂ ಎದ್ದು ನಿಂತುಕೊಳ್ಳುವಂತಾದರು ಮತ್ತು ದಟ್ಟಡಿಯಿಡಲು ಆರಂಭಿಸಿದರು. ಕ್ರಮೇಣ ನಡೆಯಲೂ ಪ್ರಾರಂಭಿಸಿದರು. ಇದಾದ ಮೇಲಂತೂ ಅದೇ ವಯಸ್ಸಿನ ಇತರ ಹುಡುಗರೂ ಅವರೊಡನೆ ಸೇರಿಕೊಂಡರು.
ಯಶೋದೆ ಮತ್ತು ರೋಹಿಣಿಯರ ಗೆಳತಿಯರಾದ ಗೋಪಿಯರು ಒಂದು ಕಡೆ ಕೃಷ್ಣ ಬಲರಾಮರ ತುಂಟ ಬಾಲಲೀಲೆಗಳಿಂದ ಒಂದು ರೀತಿಯ ಅಲೌಕಿಕ ಆನಂದವನ್ನು ಪಡೆಯುತ್ತಿದ್ದರು. ಇನ್ನೊಂದು ಕಡೆ ಇದ್ದಲ್ಲಿ ಇರಲೊಲ್ಲದ ಈ ಬಾಲಕರ ಮೇಲೆ ದೂರು ಕೊಡಲೂ ತಾಯಿ ಯಶೋದೆಯ ಬಳಿಗೆ ಹೋಗುತ್ತಿದ್ದರು.
ಒಮ್ಮೆ ಕೃಷ್ಣನು ತಾಯಿ ಯಶೋದೆಯ ಮುಂದೆ ಕುಳಿತಿದ್ದಾಗ ಗೋಪಿಯರೆಲ್ಲ ಬಂದು ಅವನಿಗೆ ಕೇಳುವಂತೆಯೇ ದೂರು ಹೇಳಲಾರಂಭಿಸಿದರು…” ಪ್ರಿಯ ಯಶೋದೆ, ನಿನ್ನ ತುಂಟ ಕೃಷ್ಣನನ್ನು ಅಂಕೆಯಲ್ಲಿ ಏಕೆ ಇಟ್ಟುಕೊಳ್ಳುವುದಿಲ್ಲ? ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಕೃಷ್ಣ ಬಲರಾಮರು ನಮ್ಮ ಮನೆಗಳಿಗೆ ಬರುತ್ತಾರೆ.
ಹಸುಗಳ ಹಾಲು ಕರೆಯುವ ಮೊದಲೇ ಕರುಗಳನ್ನು ಬಿಟ್ಟು ಬಿಡುತ್ತಾರೆ. ಕರುಗಳು ಹಾಲನ್ನೆಲ್ಲಾ ಕುಡಿದು ಬಿಡುವುದರಿಂದ ನಮಗೆ ಕರೆಯಲು ಹಸುಗಳಲ್ಲಿ ಹಾಲು ಇರುವುದೇ ಇಲ್ಲ. ನಾವು ಬರಿಯ ಪಾತ್ರೆಗಳನ್ನು ಹಿಡಿದು ಕೊಂಡು ಹಿಂತಿರುಗಬೇಕಾಗುತ್ತದೆ. ಹೀಗೆಲ್ಲಾ ಮಾಡಬೇಡಿ ಎಂದು ಹೇಳಿದರೆ ಅವರು ಮೋಹಕವಾಗಿ ನಕ್ಕು ಬಿಡುತ್ತಾರೆ ಅಷ್ಟೇ.
ಆಗ ನಮಗೇನೂ ಮಾಡಲಾಗುವುದಿಲ್ಲ. ನಾವು ಮೊಸರು ಬೆಣ್ಣೆಗಳನ್ನು ಎಲ್ಲಿಯೇ ಇಡಲಿ ಅದನ್ನು ಕದಿಯುವುದೆಂದರೆ ಅವರಿಗೆ ಬಹಳ ಆನಂದ. ಹಾಗೆ ಕದಿಯುವಾಗ ಸಿಕ್ಕಿಬಿದ್ದರೆ ‘ನಾವು ಕದಿಯುತ್ತೇವೆ ಎಂದು ಏಕೆ ಆಪಾದನೆ ಹೊರಿಸುವಿರಿ. ನಮ್ಮ ಮನೆಯಲ್ಲಿ ಸಾಕಷ್ಟು ಮೊಸರು ಬೆಣ್ಣೆ ಇಲ್ಲ ಎಂದು ಕೊಂಡಿದ್ದೀರೇನು?’ ಎಂದು ಕೇಳುತ್ತಾರೆ.
ಒಮ್ಮೊಮ್ಮೆ ಹೀಗೆ ಕದ್ದ ಮೊಸರು ಬೆಣ್ಣೆಗಳನ್ನು ಕೋತಿಗಳಿಗೆ ಹಾಕಿ ಬಿಡುತ್ತಾರೆ. ಕೋತಿಗಳೂ ತಿಂದು ಸಾಕಾಗಿ ಹಾಗೇ ಬಿಟ್ಟಾಗ ನಿಮ್ಮ ಹುಡುಗರು ನಿಮ್ಮ ಮೊಸರು ಬೆಣ್ಣೆಗಳು ಕೆಲಸಕ್ಕೆ ಬಾರದವು. ಅವನ್ನು ಕೋತಿಗಳೂ ಸಹ ಮುಟ್ಟುವುದಿಲ್ಲ!’ ಎಂದು ಛೀ ಪೆಟ್ಟು ಹಾಕುತ್ತಾರೆ. ಮಡಕೆಗಳನ್ನು ಒಡೆದು ಅವನ್ನು ಎಲ್ಲೆಲ್ಲೂ ಬಿಸಾಡುತ್ತಾರೆ.
ನಾವು ನಮ್ಮ ಮೊಸರು ಬೆಣ್ಣೆಗಳ ಸಂಗ್ರಹವನ್ನು ಕತ್ತಲಲ್ಲಿಟ್ಟರೆ ನಿಮ್ಮ ಮಕ್ಕಳು ಅವರು ಧರಿಸುವ ಆಭರಣಗಳ ಕಣ್ಣು ಕೊರೈಸುವ ಬೆಳಕಿನಿಂದಾಗಿ ಕತ್ತಲಲ್ಲಿಯೂ ಅವನ್ನು ಕಂಡುಕೊಳ್ಳುತ್ತಾರೆ. ಒಂದು ವೇಳೆ ಅವರಿಗೆ ಬೆಣ್ಣೆ ಮೊಸರು ಸಿಕ್ಕದಿದ್ದರೆ ನಮ್ಮ ಪುಟ್ಟ ಮಕ್ಕಳ ಹತ್ತಿರ ಹೋಗಿ ಅವರ ಮೈಯ್ಯನ್ನು ಚಿವುಟಿ ಅವು ನೋವಿನಿಂದ ಅಳುವಂತೆ ಮಾಡಿ ಹೊರಟು ಹೋಗುತ್ತಾರೆ.
ಇನ್ನು ನಮ್ಮ ಮೊಸರು ಬೆಣ್ಣೆಯನ್ನು ಎತ್ತರದ ಚಾವಣಿಯಲ್ಲಿಟ್ಟರೆ ಅದು ಅವರಿಗೆ ನಿಲುಕದಿದ್ದರೂ,ಇರುವ ಮರದ ಪೆಟ್ಟಿಗೆಗಳನ್ನೆಲ್ಲಾ ಬೀಸುವ ಕಲ್ಲಿನ ಮೇಲೆ ಜೋಡಿಸಿ ಎಟುಕಿಸಿಕೊಳ್ಳುತ್ತಾರೆ. ಒಂದು ವೇಳೆ ಅದೂ ನಿಲುಕದಿದ್ದರೆ ಮಡಕೆಯಲ್ಲಿ ರಂಧ್ರಮಾಡಿ ಬಿಡುತ್ತಾರೆ. ಆದುದರಿಂದ ನಿಮ್ಮ ಮಕ್ಕಳು ಧರಿಸುವ ಒಡವೆಗಳನ್ನೆಲ್ಲಾ ನೀವು ತೆಗೆದಿಟ್ಟು ಬಿಡುವುದು ಒಳ್ಳೆಯದು ಎಂದು ನಮಗೆ ತೋರುತ್ತದೆ.”

ಇದನ್ನು ಕೇಳಿ ಯಶೋದೆಯು “ಆಗಬಹುದು. ಕತ್ತಲಲ್ಲಿ ಬಚ್ಚಿಟ್ಟಿರುವ ಬೆಣ್ಣೆಯು ಕೃಷ್ಣನಿಗೆ ಕಾಣದ ಹಾಗೆ ಅವನ ಒಡವೆಗಳನ್ನೆಲ್ಲಾ ತೆಗೆದಿಟ್ಟು ಬಿಡುತ್ತೇನೆ” ಎನ್ನುತ್ತಾಳೆ. ಅದಕ್ಕೆ ಗೋಪಿಯರು ” ಬೇಡ ಬೇಡ ಒಡವೆಗಳನ್ನು ತೆಗೆದಿಟ್ಟರೆ ಏನು ಪ್ರಯೋಜನ? ಇವರು ಅದೆಂತಹ ಹುಡುಗರೋ ನಾವು ತಿಳಿಯೆವು.
ಏಕೆಂದರೆ ಒಡವೆಗಳಿಲ್ಲದೆಯೂ ಅವರು ಯಾವುದೋ ಒಂದು ಬಗೆಯ ಕಾಂತಿಯನ್ನು ಬೀರುತ್ತಾರೆ. ಅದರಿಂದ ಕತ್ತಲಲ್ಲಿ ಸಹ ಅವರಿಗೆ ಪ್ರತಿಯೊಂದು ವಸ್ತುವೂ ಕಾಣುತ್ತದೆ” ಎನ್ನುವರು. ಆಗ ತಾಯಿ ಯಶೋದೆಯು ಸರಿ. ಹಾಗಾದರೆ ಇನ್ನು ಮೇಲೆ ಅವರ ಕೈಗೆ ಎಟುಕದಂತೆ ನಿಮ್ಮ ಮೊಸರು ಬೆಣ್ಣೆಗಳನ್ನು ಎಚ್ಚರದಿಂದಿಡಿ” ಎಂದು ತಿಳಿಸುವಳು.
ಆದರೂ ಗೋಪಿಯರು ತಮ್ಮ ದೂರನ್ನು ಮುಂದುವರಿಸುತ್ತಾರೆ. “ನಾವು ಹಾಗೆಯೇ ಮಾಡುತ್ತೇವೆ. ಆದರೆ, ಈ ತುಂಟಪೋರರು ಅದ್ಹೇಗೋ ನಮ್ಮ ಮನೆಗಳೊಳಗೆ ಪ್ರವೇಶಿಸಿ ಬೆಣ್ಣೆ ಮೊಸರುಗಳಿಗಾಗಿ ಹುಡುಕುತ್ತಾರೆ ಒಮ್ಮೊಮ್ಮೆ ಅದು ಸಿಗದಿದ್ದಾಗ ಕೋಪಗೊಂಡು ನೆಲದ ಮೇಲೆ ಉಗುಳುತ್ತಾರೆ.
ಮೂತ್ರ ಮಾಡಿಬಿಡುತ್ತಾರೆ. ಇಗೋ ನಿನ್ನ ಮಗನನ್ನು ನೋಡು. ನಾವು ಹೇಳುವುದನ್ನೆಲ್ಲಾ ಏನೂ ತಿಳಿಯದವನ ಹಾಗೆ ಕುಳಿತು ಕೇಳುತ್ತಿದ್ದಾನೆ. ದಿನವೆಲ್ಲ ಮೊಸರು ಬೆಣ್ಣೆಯನ್ನು ಕದಿಯಲು ಯೋಚನೆ ಮಾಡುವುದು ಆಮೇಲೆ ಮನೆಗೆ ಬಂದು ಒಳ್ಳೆಯ ಹುಡುಗರ ಹಾಗೆ ಕುಳಿತು ಬಿಡುವುದು. ನಿನ್ನ ಮಗನ ಮುಖವನ್ನೇ ನೋಡು.” ತಾಯಿ ಯಶೋದೆಗೆ ಗೋಪಿಯರ ಈ ದೂರುಗಳನ್ನೆಲ್ಲಾ ಕೇಳಿದಾಗ ತನ್ನ ಮಗನಿಗೆ ತಕ್ಕ ಶಿಕ್ಷೆ ಮಾಡಬೇಕೆನಿಸುತ್ತದೆ.
ಆದರೆ ಕರುಣೆ ಹುಟ್ಟಿಸುವ ಅವನ ಮುಖವನ್ನು ಕಂಡಾಗ ಶಿಕ್ಷಿಸುವ ಯೋಚನೆಯನ್ನು ಬಿಟ್ಟು ಕೃಷ್ಣನನ್ನು ನೋಡಿ ನಸು ನಕ್ಕು ಬಿಡುತ್ತಾಳೆ.
ಇನ್ನೊಂದು ದಿನ ಕೃಷ್ಣ ಮತ್ತು ಬಲರಾಮರು ತಮ್ಮ ಗೆಳೆಯರೊಂದಿಗೆ ಆಡುತ್ತಿದ್ದಾಗ, ಬಲರಾಮನೂ ಸೇರಿದಂತೆ ಎಲ್ಲ ಹುಡುಗರೂ ಯಶೋದೆಯ ಬಳಿಗೆ ಬಂದು ಕೃಷ್ಣನು ಮಣ್ಣನ್ನು ತಿಂದಿದ್ದಾನೆ ಎಂದು ಹೇಳಿದರು. ಇದನ್ನು ಕೇಳಿದ ಆ ತಾಯಿಯು ಕೃಷ್ಣನ ಕೈಯನ್ನು ಹಿಡಿದುಕೊಂಡು ‘ಮುದ್ದು ಕೃಷ್ಣ ಯಾರೂ ಇಲ್ಲದ ಸ್ಥಳದಲ್ಲಿ ಮಣ್ಣನ್ನೇಕೆ ತಿಂದೆ? ನೋಡು, ಬಲರಾಮನು ನಿನ್ನ ಇತರ ಸ್ನೇಹಿತರೂ ನಿನ್ನ ಮೇಲೆ ದೂರು ಹೇಳುತ್ತಿದ್ದಾರೆ” ಎಂದಳು.
ಆಗ ಕೃಷ್ಣನು “ಪ್ರೀತಿಯ ಅಮ್ಮ, ನನ್ನ ಅಣ್ಣ ಬಲರಾಮ ಮತ್ತು ಇವರೆಲ್ಲ ಸೇರಿ ನನ್ನ ಮೇಲೆ ಸುಳ್ಳು ಹೇಳುತ್ತಿದ್ದಾರೆ. ನಾನು ಮಣ್ಣನ್ನು ತಿಂದೇ ಇಲ್ಲ. ಬಲರಾಮನು ನನ್ನ ಜೊತೆ ಆಡುವಾಗ ನನ್ನ ಮೇಲೆ ಸಿಟ್ಟು ಮಾಡಿಕೊಂಡ. ಆದ್ದರಿಂದ ತನ್ನ ಗೆಳೆಯರನ್ನು ಕೂಡಿಕೊಂಡು ಬಂದು ನನ್ನ ಮೇಲೆ ಚಾಡಿ ಹೇಳುತ್ತಿದ್ದಾನೆ.
ನೀನು ಸಿಟ್ಟು ಮಾಡಿಕೊಂಡು ನನಗೆ ಶಿಕ್ಷೆ ಕೊಡಬೇಕೆಂಬುದು ಅವರೆಲ್ಲರ ಆಸೆ. ಅವರು ಹೇಳುವುದು ನಿಜ ಎಂದು ನೀನು ನಂಬುವುದಾದರೆ ನನ್ನ ಬಾಯಿಯೊಳಗೆ ನೋಡು. ನಾನು ಮಣ್ಣು ತಿಂದಿದ್ದೇನೆಯೋ ಇಲ್ಲವೋ ಎಂದು ನಿನಗೇ ತಿಳಿಯುತ್ತದೆ” ಎಂದು ಹೇಳಿದ.
ಯಶೋದೆಯು ದೇವೋತ್ತಮ ಪರಮ ಪುರುಷನಿಗೆ ಬಾಯಿಯನ್ನೇ ತೋರಿಸುವಂತೆ ಅಪ್ಪಣೆ ಮಾಡಿದಾಗ ಸಾಮಾನ್ಯ ಹುಡುಗನಂತೆ ಅವನು ಬಾಯಿಯನ್ನು ತೆರೆದನು. ಆ ಪುಟ್ಟ ಬಾಯಿಯ ಒಳಗೆ ತಾಯಿ ಯಶೋದೆ ಸೃಷ್ಟಿಯ ಸಕಲ ಸಂಪತ್ತನ್ನು ಕಂಡಳು. ಎಲ್ಲ ದಿಕ್ಕುಗಳನ್ನು ಆಕಾಶವನ್ನು, ಪರ್ವತಗಳು, ದ್ವೀಪಗಳು, ಸಮುದ್ರಗಳು, ಗ್ರಹಗಳು, ವಾಯು, ಅಗ್ನಿ, ಚಂದ್ರ ಮತ್ತು ನಕ್ಷತ್ರಗಳನ್ನು ಕಂಡಳು.
ಎಲ್ಲ ಜೀವಿಗಳು, ಅನಂತ ಕಾಲ, ಭೌತಿಕ ಪ್ರಕೃತಿ ಆಧ್ಯಾತ್ಮಿಕ ಪ್ರಕೃತಿ ಸಕಲ ಚರಾಚರಗಳ ಚಟುವಟಿಕೆಗಳು, ಪ್ರಜ್ಞೆ ಮತ್ತು ಸಮಸ್ತ ಬ್ರಹ್ಮಾಂಡದ ವಿವಿಧ ರೂಪಗಳು ಹೀಗೆ ವಿಶ್ವರೂಪ ದರ್ಶನವಾಯಿತು. ಯಶೋದೆ ತನ್ನ ಮಗನ ಬಾಯಲ್ಲಿ ಇವೆಲ್ಲದರೊಂದಿಗೆ ತಾನು ಕೃಷ್ಣನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಎದೆಯ ಹಾಲನ್ನು ಕುಡಿಸುತ್ತಿರುವುದನ್ನು ಅವನ ಬಾಯಲ್ಲಿ ಕಂಡಳು.

ಇದರಿಂದಾಗಿ ಅವಳ ಮನಸ್ಸಿನಲ್ಲಿ ಭಕ್ತಿಗೌರವಗಳು ತುಂಬಿ ಹೋದವು. ತನಗೆ ಕನಸೋ ಅಥವಾ ಅಸಾಧಾರಣವಾದುದನ್ನೇನಾದರೂ ವಾಸ್ತವವಾಗಿ ಕಾಣುತ್ತಿದ್ದೇನೋ ಎಂದು ಅವಳಿಗೆ ಸಂದೇಹವಾಯಿತು. ತಾನು ಕನಸನ್ನೇ ಕಾಣುತ್ತಿರಬೇಕು. ಇಲ್ಲವಾದರೆ ದೇವೋತ್ತಮ ಪರಮ ಪುರುಷನ ಮಾಯಾಶಕ್ತಿಯ ಆಟವನ್ನು ನೋಡುತ್ತಿದ್ದೇನೆ ಎಂದೆನಿಸಿತು ಅವಳಿಗೆ.
ಈ ಅದ್ಭುತ ಸಂಗತಿಗಳನ್ನು ಕಂಡು ತಾನು ಹುಚ್ಚಿಯಾಗಿದ್ದೇನೋ ಎಂಬ ಅನುಮಾನವೂ ಅವಳಿಗೆ ಬಂದಿತು. ಅನಂತರ ‘ನನ್ನ ಮಗುವು ಪಡೆದುಕೊಂಡ ಯಾವುದೋ ಅದ್ಭುತವಾದ ನಿಗೂಢ ವಿಶ್ವ ಶಕ್ತಿ ಇದಾಗಿರಬಹುದು. ಆದುದರಿಂದಲೇ ಇಂತಹ ದೃಶ್ಯಗಳನ್ನು ಅವನ ಬಾಯಲ್ಲಿ ಕಂಡು ನನಗೆ ದಿಕ್ಕು ತೋರದಂತಾಗಿದೆ’ ಎನಿಸುವುದು.
”ಆ ಪರಮ ದೇವೋತ್ತಮ ಪುರುಷನಿಗೆ ನನ್ನ ವಿನಮ್ರ ಪ್ರಣಾಮಗಳನ್ನು ಸಲ್ಲಿಸಿ, ಅವನು ನಿನ್ನನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದಳು.
ತಾಯಿ ಯಶೋದೆ ಹೀಗೆ ಉನ್ನತ ಚಿಂತನೆಯಲ್ಲಿ ಮುಳುಗಿರಲು ಶ್ರೀಕೃಷ್ಣನು ಅವಳನ್ನು ಮಾತೃಪ್ರೇಮದಿಂದ ಆಲಂಗಿಸಿಕೊಂಡನು.
ಒಮ್ಮೆ ಮನೆಕೆಲಸದವಳು ಬೇರೆ ಕಾರ್ಯಗಳಲ್ಲಿ ನಿರತಳಾಗಿದ್ದುದರಿಂದ ಯಶೋದೆಯೇ ಬೆಣ್ಣೆ ಕಡೆಯುವ ಕೆಲಸಕ್ಕೆ ನಿಂತಳು. ಆ ಕೆಲಸವನ್ನು ಮಾಡುತ್ತಿರುವಾಗ ಕೃಷ್ಣನ ಲೀಲೆಗಳನ್ನು ಕುರಿತು ಹಾಡುತ್ತಾ ಮಗನ ಬಗ್ಗೆಯೇ ಯೋಚಿಸುತ್ತಾ ಆನಂದ ಪಡುತ್ತಿದ್ದಳು.
ಬೆಣ್ಣೆ ಕಡೆಯುವಾಗ ಅಡ್ಡಿಯಾಗದಿರಲೆಂದು ಸೀರೆಯ ಸೆರಗನ್ನು ಬಿಗಿಯಾಗಿ ಕಟ್ಟಿಕೊಂಡಿದ್ದಳು. ತನ್ನ ಮಗನ ಮೇಲಿದ್ದ ತೀವ್ರ ಪ್ರೇಮದಿಂದ ಎರಡೂ ಸ್ತನಗಳಿಂದ ತಾನಾಗಿಯೇ ಹಾಲು ಹರಿಯುತ್ತಿತ್ತು. ಕೈಬಳೆಗಳು ಒಂದಕ್ಕೊಂದು ತಗಲಿ ಜರಾಜರಾ ಶಬ್ದ ಮಾಡುತ್ತಿದ್ದವು. ಕೈ ಚಲನೆಗೆ ಅನುಗುಣವಾಗಿ ಕಿವಿಯ ಓಲೆಗಳೂ ಅಲ್ಲಾಡುತ್ತಿದ್ದವು.
ಮುಖದ ಮೇಲೆ ಬೆವರಿನ ಹನಿಗಳು ಬಂದಿದ್ದವು. ಮುಡಿದಿದ್ದ ಹೂವುಗಳೂ ಬಿದ್ದು ಹೋಗಿದ್ದವು. ಈ ದೃಶ್ಯ ಮನ ಮೋಹಕವಾಗಿತ್ತು. ಬಾಲಕೃಷ್ಣನು ಅಲ್ಲಿಗೆ ಬಂದನು. ಅವನಿಗೆ ಹಸಿವಾಗಿತ್ತು. ತನ್ನ ಮೇಲಿದ್ದ ತಾಯಿಯ ಪ್ರೀತಿಯನ್ನು ಹೆಚ್ಚಿಸಲು ಆಕೆ ಮೊದಲು ತನಗೆ ಎದೆಹಾಲು ಕುಡಿಸಬೇಕು, ಅನಂತರ ಬೆಣ್ಣೆ ಕಡೆಯುವ ಕೆಲಸ ಎಂದು ಸೂಚಿಸಿದ.
ಕೂಡಲೇ ತಾಯಿ ಯಶೋದೆ ಕುಳಿತು ತನ್ನ ತೊಡೆಯ ಮೇಲೆ ಅವನನ್ನು ಮಲಗಿಸಿಕೊಂಡು ಹಾಲು ಕುಡಿಸಲಾರಂಭಿಸಿದಳು. ಹಾಗೆಯೇ ತನ್ನ ಮಗುವಿನ ಮುಖದ ಚೆಲುವನ್ನು ಸವಿಯುತ್ತಾ ಮುಗುಳ್ನಗುತ್ತಿದ್ದಳು. ಆಗ ಒಲೆಯ ಮೇಲೆ ಕಾಯಲು ಇಟ್ಟಿದ್ದ ಹಾಲು ಕುದಿಯಲಾರಂಭಿಸಿತು. ಇನ್ನು ಅದು ಮೇಲಕ್ಕೆ ಉಕ್ಕಿ ಹರಿದು ಬಿಡುತ್ತದೆಂದು ಯಶೋದೆಯು ಕೃಷ್ಣನನ್ನು ಕೆಳಗೆ ಮಲಗಿಸಿ ಒಲೆಯ ಬಳಿಗೆ ಓಡಿದಳು.
ತಾನು ಹಾಲು ಕುಡಿಯುತ್ತಿರುವಾಗ ಮಧ್ಯದಲ್ಲಿ ನಿಲ್ಲಿಸಿ ತಾಯಿ ಹೋದದ್ದರಿಂದ ಕೃಷ್ಣನಿಗೆ ಕೋಪವುಂಟಾಯಿತು ಮತ್ತು ಕಣ್ಣುಗಳು ಕೆಂಪಾದವು. ತುಟಿಗಳು ಅದುರತೊಡಗಿದವು. ಅವನು ಅವುಡುಗಚ್ಚಿ ಕೈಗೆ ಸಿಕ್ಕಿದ ಒಂದು ಸಣ್ಣ ಕಲ್ಲನ್ನು ತೆಗೆದುಕೊಂಡು ಬೆಣ್ಣೆಯ ಮಡಕೆಯನ್ನು ಒಡೆದನು. ಆದರಿಂದ ಬೆಣ್ಣೆಯನ್ನು ತೆಗೆದುಕೊಂಡು ನಟನೆಯ ಕಣ್ಣೀರು ಸುರಿಸುತ್ತಾ ಯಾರೂ ಇಲ್ಲದ ಸ್ಥಳದಲ್ಲಿ ಬೆಣ್ಣೆಯನ್ನು ತಿನ್ನಲಾರಂಭಿಸಿದನು.
ಆ ವೇಳೆಗೆ ತಾಯಿ ಯಶೋದ ಕುದಿಯುವ ಹಾಲಿನ ಪಾತ್ರೆಯನ್ನು ಕೆಳಗಿಳಿಸಿ ಬೆಣ್ಣೆ ಕಡೆಯುವ ಸ್ಥಳಕ್ಕೆ ಬಂದಳು. ಕಡೆಯಲೆಂದು ಇಟ್ಟಿದ್ದ ಮೊಸರಿನ ಮಡಕೆಯು ಒಡೆದು ಹೋಗಿತ್ತು. ತನ್ನ ಮಗನೂ ಅಲ್ಲಿ ಕಾಣದ್ದರಿಂದ ಅದು ಅವನ ಕೆಲಸವೇ ಎಂದು ಅವಳಿಗೆ ತಿಳಿಯಿತು.

ಮಗು ಬಹಳ ಬುದ್ಧಿವಂತ, ಮಡಕೆಯನ್ನು ಒಡೆದು ಶಿಕ್ಷೆಯಾಗುವುದೆಂದು ಹೆದರಿ ಈ ಸ್ಥಳವನ್ನು ಬಿಟ್ಟು ಹೋಗಿದ್ದಾನೆ ಎಂದು ಮುಗುಳ್ನಗೆಯೊಂದಿಗೆ ಯೋಚಿಸುತ್ತಾ ಅವನನ್ನು ಹುಡುಕುತ್ತಾ ಬಂದು ಅವಳು ಒಂದು ಮರದ ಒರಳು ಕಲ್ಲಿನ ಮೇಲೆ ಮಗನು ಕುಳಿತದ್ದನ್ನು ನೋಡಿದಳು. ಅವನು ಛಾವಣಿಯಿಂದ ತೂಗುಹಾಕಿದ್ದ ಪಾತ್ರೆಯಿಂದ ಬೆಣ್ಣೆಯನ್ನು ತೆಗೆದು ಕೋತಿಗಳಿಗೆ ಕೊಡುತ್ತಿದ್ದ.
ತಾನು ಮಾಡುತ್ತಿರುವುದು ತುಂಟತನವೆಂದು ಅರಿತಿದ್ದ ಅವನು ಯಾರಾದರೂ ಇದನ್ನು ನೋಡಿಯಾರೆಂದು ಅತ್ತಿತ್ತ ಗಮನಿಸುತ್ತಿದ್ದ. ತನ್ನ ಮಗನ ಚರ್ಯೆಯನ್ನು ಗಮನಿಸಿದ ಯಶೋದೆ ಸದ್ದಿಲ್ಲದೆ ಹಿಂದಿನಿಂದ ಅವನ ಬಳಿಗೆ ಹೋದಳು. ಆದರೆ ತಾಯಿಯು ಕೈಯಲ್ಲಿ ಕೋಲು ಹಿಡಿದು ಬರುವುದು ಕೃಷ್ಣನಿಗೆ ಗೊತ್ತಾಗಿ ಹೋಯಿತು. ಕೂಡಲೇ ಅವನು ಕೆಳಕ್ಕೆ ಇಳಿದು ಓಡಿದ.
ಮಹಾಯೋಗಿಗಳು ತಪಸ್ಸಿನಿಂದಲೂ ಪಡೆಯಲಾಗದ ದೇವೋತ್ತಮ ಪರಮ ಪುರುಷನನ್ನು ಹಿಡಿಯುವ ಪ್ರಯತ್ನದಲ್ಲಿ ಯಶೋದೆ ಅವನ ಹಿಂದೆಯೇ ಓಡತೊಡಗಿದಳು. ಅವಳಿಗೆ ಆಯಾಸವಾದರೂ ಹೇಗೋ ಅಂತೂ ಕೊನೆಗೆ ತನ್ನ ಮಗನನ್ನು ಹಿಡಿದಳು. ಅವಳ ಕೈಗೆ ಸಿಕ್ಕಿ ಬಿದ್ದ ಕೃಷ್ಣ ಅಳುವುದರಲ್ಲಿದ್ದ.
ಕಪ್ಪು ಕಾಡಿಗೆ ಹಚ್ಚಿದ್ದ ಕಣ್ಣುಗಳನ್ನು ಉಜ್ಜತೊಡಗಿದ. ತಾಯಿ ತನ್ನ ಕಡೆಯೇ ನೋಡುತ್ತಿರುವುದನ್ನು ಕಂಡು ಭಯದಿಂದ ಅತ್ತಿತ್ತ ಕಣ್ಣಾಡಿಸಿದ. ಇದೆಲ್ಲವನ್ನೂ ಕಂಡ ತಾಯಿ ಯಶೋದೆಯ ಹೃದಯ ಕರಗಿತು. ಮಗನು ಅನಾವಶ್ಯಕವಾಗಿ ಭಯಪಟ್ಟಿದ್ದಾನೆ, ಅವನ ಭಯವನ್ನು ಹೋಗಲಾಡಿಸಬೇಕೆಂದುಕೊಂಡಳು.
ಮಗನ ಒಳಿತೇ ತನ್ನ ಸರ್ವಸ್ವವೆಂದು ಅರಿತಿದ್ದ ಅವಳಿಗೆ ಅವನು ಹೆದರಿಬಿಟ್ಟರೆ ಏನಾಗಿಬಿಡುವುದೋ ಎಂಬ ಯೋಚನೆ. ಆದರೂ ಅವನ ತುಂಟಾಟವನ್ನು ತಡೆಯಲು ಕೊಂಚವಾದರೂ ಶಿಕ್ಷೆಕೊಡಬೇಕು. ಹಾಗೆನಿಸಿ ಅವನ ಕೈಗಳನ್ನು ಹಗ್ಗದಿಂದ ಕಟ್ಟಿಹಾಕಲು ಯೋಚಿಸಿದಳು. ಕೈಯಲ್ಲಿದ್ದ ಕೋಲನ್ನು ಬಿಸಾಡಿದಳು. ದೇವೋತ್ತಮ ಪರಮ ಪುರುಷನ ಕೈಯನ್ನು ಕಟ್ಟಿ ಹಾಕುವುದು ಯಾರಿಂದ ತಾನೇ ಸಾಧ್ಯ? ಅದು ಯಶೋದೆಗೆ ತಿಳಿಯದು. ಅವಳ ಪಾಲಿಗೆ ಕೃಷ್ಣನು ತನ್ನ ಮಗು. ಆದರೆ ಆ ಮಗುವಿಗೆ ಯಾವ ಇತಿಮಿತಿಗಳೂ ಇಲ್ಲವೆಂಬ ಅರಿವು ಅವಳಿಗಿರಲಿಲ್ಲ.
ಆದ್ದರಿಂದ ಕೃಷ್ಣನನ್ನು ಯಶೋದೆಯು ಒಂದು ಒರಳಿಗೆ ಕಟ್ಟಿ ಹಾಕಲು ನಿರ್ಧರಿಸಿದಳು. ಹಾಗೆ ಮಾಡಲು ಹೋದಾಗ ಕೈಯಲ್ಲಿದ್ದ ಹಗ್ಗವು ಎರಡು ಅಂಗುಲದಷ್ಟು ಚಿಕ್ಕದಾಗಿತ್ತು. ಅದಕ್ಕೆ ಇನ್ನೊಂದು ಹಗ್ಗವನ್ನು ಸೇರಿಸಿ ಅವನನ್ನು ಕಟ್ಟಲು ಪ್ರಯತ್ನಿಸಿದಳು. ಆಗಲೂ ಹಗ್ಗ ಸಾಲದಾಯಿತು. ಮನೆಯಲ್ಲಿದ್ದ ಹಗ್ಗವನ್ನೆಲ್ಲಾ ಸೇರಿಸಿದಳು.
ಆದರೂ ಕಡೆಯ ಗಂಟು ಹಾಕುವ ವೇಳೆಗೆ ಎರಡು ಅಂಗುಲ ಕಡಮೆ ಬರುತ್ತಿತ್ತು. ಇದನ್ನು ಕಂಡು ಅವಳಿಗೆ ಬಹಳ ಆಶ್ಚರ್ಯವಾಯಿತು. ಹಾಗೆಯೇ ಆಯಾಸವೂ ಉಂಟಾಯಿತು. ಅವಳು ಬೆವರಲಾರಂಭಿಸಿದಳು. ಇದೆಲ್ಲವನ್ನೂ ಗಮನಿಸಿದ ಕೃಷ್ಣನಿಗೆ ತಾಯಿಯ ವಿಷಯದಲ್ಲಿ ಮರುಕವುಂಟಾಯಿತು.
ಹಗ್ಗದಿಂದ ತನ್ನನ್ನು ಕಟ್ಟಿಹಾಕಲು ಅವನು ಒಪ್ಪಿದನು. ಯಾರೂ ದೇವೋತ್ತಮ ಪರಮ ಪುರುಷನನ್ನು ನಿಯಂತ್ರಿಸುವುದು ಸಾಧ್ಯವಿಲ್ಲವೆಂಬುದು ಸತ್ಯವಾದರೂ, ಆ ಪ್ರಭುವು ಭಕ್ತರ ರಕ್ಷಣೆಗೆ ತನ್ನನ್ನು ಒಪ್ಪಿಸಿಕೊಂಡು ದಿವ್ಯಾನಂದವನ್ನು ಅನುಭವಿಸುತ್ತಾನೆ ಎಂಬುದಕ್ಕೆ ಇದೊಂದು ಉದಾಹರಣೆ.
ಮಗನನ್ನು ಕಟ್ಟಿ ಹಾಕಿದ ಯಶೋದೆ ಮತ್ತೆ ತನ್ನ ಮನೆಗೆಲಸದಲ್ಲಿ ನಿರತಳಾದಳು. ಒರಳು ಕಲ್ಲಿಗೆ ಕಟ್ಟಿಹಾಕಲ್ಪಟ್ಟಿದ್ದ ಕೃಷ್ಣನಿಗೆ ಸ್ವಲ್ಪ ದೂರದಲ್ಲೇ ಅರ್ಜುನ ವೃಕ್ಷಗಳೆಂಬ ಎರಡು ಮರಗಳು ಕಂಡುಬಂದವು. ‘ತಾಯಿ ಯಶೋದೆ ನನಗೆ ಹಾಲು ಕೊಡುವುದನ್ನು ಮಧ್ಯದಲ್ಲೇ ನಿಲ್ಲಿಸಿ ಹೊರಟು ಹೋದಳು.
ಅದಕ್ಕೆ ಮೊಸರಿನ ಗಡಿಗೆ ಒಡೆದು ಅದರಲ್ಲಿನ ಬೆಣ್ಣೆಯನ್ನು ಕೋತಿಗಳಿಗೆ ನೀಡಿಬಿಟ್ಟೆ. ಈಗ ಅವಳು ನನ್ನನ್ನು ಈ ಒರಳುಕಲ್ಲಿಗೆ ಬಂಧಿಸಿದ್ದಾಳೆ. ಆದ್ದರಿಂದ ಮೊದಲಿಗಿಂತ ಹೆಚ್ಚಿಗೆ ಚೇಷ್ಟೆಯನ್ನು ಮಾಡುತ್ತೇನೆ’ ಎಂದುಕೊಂಡ ಕೃಷ್ಣನು ಎತ್ತರವಾಗಿದ್ದ ಆ ಎರಡೂ ವೃಕ್ಷಗಳನ್ನು ಕೆಳಕ್ಕುರುಳಿಸಲು ಯೋಚಿಸಿದನು.
ಈ ಜೋಡಿ ಅರ್ಜುನ ವೃಕ್ಷಗಳಿಗೂ ಒಂದು ಹಿನ್ನಲೆಯುಂಟು. ದೇವತೆಗಳ ಕೋಶಾಧಿಕಾರಿಯಾಗಿದ್ದ ಕುಬೇರನ ಮಕ್ಕಳು ಶ್ರೇಷ್ಠ ದೇವತೆಗಳಾದ ನಳಕುವರ ಮತ್ತು ಮಣಿಗ್ರೀವರು. ಕುಬೇರನು ಶಿವನ ಪರಮ ಭಕ್ತ. ಶಿವನ ಕೃಪೆಗೆ ಒಳಗಾಗಿದ್ದ ಅವನ ಭೌತಿಕ ಸಂಪತ್ತಿಗೆ ಮಿತಿಯೇ ಇರಲಿಲ್ಲ.
ಶ್ರೀಮಂತರ ಪುತ್ರರು ಹಲವೊಮ್ಮೆ ದುಶ್ಚಟಗಳಿಗೆ ಬಲಿಯಾಗುವಂತೆ ಕುಬೇರನ ಈ ಇಬ್ಬರು ಮಕ್ಕಳೂ ಮದ್ಯ ಮತ್ತು ಕಾಮಗಳ ದಾಸರಾಗಿದ್ದರು. ಒಮ್ಮೆ ಸಂತೋಷವಾಗಿರಬೇಕೆಂದು ಅವರು ಕೈಲಾಸದಲ್ಲಿ ಮಂದಾಕಿನಿ ಗಂಗೆಯ ದಡದಲ್ಲಿರುವ ಶಿವನ ವನವನ್ನು ಹೊಕ್ಕರು. ಪರಿಮಳ ಬೀರುವ ಪುಷ್ಪಗಳಿಂದ ಕೂಡಿದ ಉದ್ಯಾನದಲ್ಲಿ ಮದ್ಯಪಾನ ಮಾಡುತ್ತಾ ಸುಂದರ ಸ್ತ್ರೀಯರ ಇಂಪಾದ ಸಂಗೀತವನ್ನು ಕೇಳುತ್ತಿದ್ದರು. ಈ ಉನ್ಮತ್ತ ಸ್ಥಿತಿಯಲ್ಲಿ ಅವರಿಬ್ಬರೂ ತಾವರೆ ಪುಷ್ಪಗಳು ತುಂಬಿದ್ದ ಗಂಗಾ ನದಿಯಲ್ಲಿ ಪ್ರವೇಶಿಸಿ ತರುಣಿಯರೊಂದಿಗೆ ಕ್ರೀಡಿಸುತ್ತಿದ್ದರು.

ಹೀಗೆ ಅವರು ವಿಹರಿಸುತ್ತಿದ್ದಾಗ ಇದಕ್ಕಿದ್ದಂತೆ ಮಹರ್ಷಿ ನಾರದರು ಅತ್ತ ಬಂದರು. ಆದರೆ ಪಾನಮತ್ತರಾಗಿದ್ದ ನಳಕುವರ ಮತ್ತು ಮಣಿಗ್ರೀವರು ಮಹರ್ಷಿಗಳು ಹೋಗುತ್ತಿರುವುದನ್ನೂ ಕಾಣದ ಸ್ಥಿತಿಯಲ್ಲಿದ್ದರು. ಆದರೆ ತರುಣಿಯರು ಆ ದೇವತೆಗಳಷ್ಟು ಮದ್ಯಪಾನ ಮಾಡಿರಲಿಲ್ಲ. ಅವರು ನಾಚಿಕೆಯಿಂದ ಆತುರರಾಗಿ ತಮ್ಮ ವಸ್ತ್ರಗಳನ್ನು ಧರಿಸಿದರು.
ಆದರೆ ಇಬ್ಬರು ದೇವತೆಗಳು ಮಾತ್ರ ಮತ್ತರಾಗಿಯೇ ಇದ್ದರು. ಮದ್ಯಪಾನವು ಈ ಇಬ್ಬರು ದೇವತೆಗಳನ್ನು ಇಂತಹ ಹೀನ ಸ್ಥಿತಿಗೆ ತಂದದ್ದನ್ನು ಕಂಡು ನಾರದರು ಅವರ ಬಗ್ಗೆ ಕರುಣೆ ಮೂಡಿ, ಅವರ ಹಿತ ಚಿಂತಕರಾಗಿ ಶಾಪವನ್ನಿತ್ತರು. ಅದರ ಪ್ರಕಾರ ಆ ಇಬ್ಬರು ದೇವತೆಗಳು, ದೇವತೆಗಳ ಕಾಲಮಾನಕ್ಕನುಗುಣವಾಗಿ ಒಂದು ನೂರು ವರ್ಷಗಳ ಕಾಲ ಮರಗಳ ರೂಪದಲ್ಲಿರಬೇಕು.
ಅನಂತರ ದೇವೋತ್ತಮ ಪರಮ ಪುರುಷನ ನಿಷ್ಕಾರಣ ಕರುಣೆಯಿಂದ ಅವರನ್ನು ನೋಡುವ ಭಾಗ್ಯವು ಬರುವುದೆಂದು ನಾರದರು ಸೂಚಿಸಿದರು. ಅನಂತರ ಇಬ್ಬರೂ ದೇವತೆಗಳು ಹಿಂತಿರುಗಿ ಪ್ರಭುವಿನ ಮಹಾಭಕ್ತರಾಗುವರೆಂದೂ ತಿಳಿಸಿದರು.
ಇದಾದ ಅನಂತರ ಮಹರ್ಷಿಗಳು ನಾರಾಯಣಾಶ್ರಮ ಎಂಬ ಹೆಸರಿನ ತಮ್ಮ ಆಶ್ರಮಕ್ಕೆ ಹಿಂದಿರುಗಿದರು. ಇಬ್ಬರು ದೇವತೆಗಳು ಜೋಡಿ ವೃಕ್ಷಗಳಾಗಿ ಅರ್ಜುನ ವೃಕ್ಷಗಳೆಂದು ಹೆಸರು ಪಡೆದರು. ನಂದನ ಮನೆಯಂಗಳದಲ್ಲಿ ಬೆಳೆದು ಶ್ರೀಕೃಷ್ಣನನ್ನು ತಮ್ಮೆದುರಿಗೆ ಕಾಣುವ ಅವಕಾಶಕ್ಕಾಗಿ ಕಾಯುತ್ತಿದ್ದರು. ನಾರದರ ಅವ್ಯಾಜ ಕರುಣೆಯಿಂದಾಗಿ ಇಬ್ಬರು ದೇವತೆಗಳಿಗೆ ಈ ರೀತಿಯ ಉಪಕಾರವಾಯಿತು.
ಬಾಲಕೃಷ್ಣನನ್ನು ಒರಳಿಗೆ ಕಟ್ಟಿಹಾಕಿದ್ದರೂ ಅವನು ತನ್ನ ಭಕ್ತಶ್ರೇಷ್ಠ ನಾರದರ ಭವಿಷ್ಯವಾಣಿಯನ್ನು ನಡೆಸಿಕೊಡುವ ಸಲುವಾಗಿ ಬೆಳೆಯುತ್ತಿದ್ದ ಮರಗಳ ಕಡೆಗೆ ತೆವಳಲು ಪ್ರಾರಂಭಿಸಿದನು. ತನ್ನೆದುರಿಗೆ ವೃಕ್ಷಗಳಾಗಿ ನಿಂತಿರುವವರು ಕುಬೇರನ ಮಕ್ಕಳು ಎಂಬುದು ಕೃಷ್ಣನಿಗೆ ತಿಳಿದಿತ್ತು. ʼಈಗ ನಾನು ನನ್ನ ಪರಮಭಕ್ತನಾರದನ ಮಾತನ್ನು ನಡೆಸಿಕೊಡಬೇಕು’ ಎಂದು ಯೋಚಿಸಿದನು ಶ್ರೀಕೃಷ್ಣ.
ಅನಂತರ ಎರಡೂ ಮರಗಳ ನಡುವಿನ ಸ್ಥಳದಲ್ಲಿ ತೆವಳಲು ಪ್ರಾರಂಭಿಸಿದ. ಮರಗಳ ನಡುವೆ ಕೃಷ್ಣನು ದಾಟಲು ಸಾಧ್ಯವಾಯಿತಾದರೂ ದೊಡ್ಡ ಒರಳುಕಲ್ಲು ಮರಗಳ ನಡುವೆ ಅಡ್ಡಡ್ಡಲಾಗಿ ಸಿಕ್ಕಿಕೊಂಡಿತು. ಅದನ್ನೂ ಮರದಿಂದಾಚೆ ತೆಗೆಯಲು ಕೃಷ್ಣನು ಒರಳಿಗೆ ಕಟ್ಟಿದ್ದ ಹಗ್ಗವನ್ನು ಎಳೆಯಲಾರಂಭಿಸಿದ.
ಬಹಳ ಬಲವಾಗಿ ಎಳೆದದ್ದರಿಂದ ಎರಡೂ ಮರಗಳು, ತಮ್ಮ ಕೊಂಬೆಗಳು ಮತ್ತೆಲ್ಲ ಭಾಗಗಳ ಸಹಿತವಾಗಿ ದೊಡ್ಡ ಶಬ್ದ ಮಾಡುತ್ತಾ ನೆಲಕ್ಕುರುಳಿದವು. ಮುರಿದುಬಿದ್ದ ಮರಗಳಿಂದ ಪ್ರಜ್ವಲಿಸುವ ಬೆಂಕಿಯಂತೆ ತೇಜಸ್ವಿಗಳಾಗಿದ್ದ ಇಬ್ಬರು ದೇವತೆಗಳು ಹೊರಬಂದರು. ಅವರ ಇರುವಿಕೆಯಿಂದ ಎಲ್ಲ ದಿಕ್ಕುಗಳಲ್ಲೂ ಬೆಳಕು ಹರಡಿತು. ಶಾಪ ಮುಕ್ತರಾಗಿ ಕೃಷ್ಣನ ದಯೆಯಿಂದ ಪರಿಶುದ್ಧತೆಯನ್ನು ಪಡೆದ ಆ ಇಬ್ಬರೂ ಬಾಲಕೃಷ್ಣನ ಮುಂದೆ ಕೂಡಲೇ ಬಂದು ತಲೆಬಾಗಿ ತಮ್ಮ ಗೌರವವನ್ನು ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಿದರು.
ಸಿಡಿಲಿನಂತೆ ಶಬ್ದ ಮಾಡುತ್ತಾ ಜೋಡಿ ಅರ್ಜುನ ವೃಕ್ಷಗಳು ಭೂಮಿಗುರುಳಿದಾಗ ನಂದ ಮಹಾರಾಜನೂ ಸೇರಿದಂತೆ ವೃಂದಾವನದ ವಾಸಿಗಳೆಲ್ಲ ಅಲ್ಲಿಗೆ ಬಂದರು. ಎರಡು ಮಹಾವೃಕ್ಷಗಳೂ ಇದ್ದಕ್ಕಿದ್ದ ಹಾಗೆ ಬಿದ್ದು ಹೋಗಿರುವುದನ್ನು ಕಂಡು ಅವರಿಗೆ ಬಹಳ ಆಶ್ಚರ್ಯವಾಯಿತು. ಆದರೆ ಅವು ಏಕೆ ಮತ್ತು ಹೇಗೆ ಉರುಳಿದವೆಂದು ತಿಳಿಯದೆ ಗೊಂದಲವಾಯಿತು.
ಯಶೋದೆಯು ಹಗ್ಗಗಳಿಂದ ಕೃಷ್ಣನನ್ನು ಒರಳಿಗೆ ಕಟ್ಟಿದ್ದಳು. ಅದು ಹಾಗೆಯೇ ಇತ್ತು. ಹಾಗಾದರೆ ಇದು ಯಾವುದೋ ರಾಕ್ಷಸನ ಕೆಲಸವಿರಬೇಕೆಂದು ಕೊಂಡರು. ಇಲ್ಲವಾದರೆ ಇಂತಹ ಕೆಲಸ ಯಾರು ತಾನೇ ಮಾಡಲು ಸಾಧ್ಯ ಎನ್ನಿಸಿತು. ಅಲ್ಲದೆ ಬಾಲಕೃಷ್ಣನ ವಿಷಯದಲ್ಲೇ ಇಂತಹ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿರುವುದು ಅವರಿಗೆ ಕಳವಳ ಉಂಟು ಮಾಡಿತ್ತು. ಹೀಗೆ ಎಲ್ಲರೂ ಗೊಂದಲದಲ್ಲಿದ್ದಾಗ ಅಲ್ಲಿ ಆಡುತ್ತಿದ್ದಪುಟ್ಟ ಹುಡುಗರು, ಕೃಷ್ಣನು ತನ್ನನ್ನು ಕಟ್ಟಿ ಹಾಕಿದ ಹಗ್ಗಗಳನ್ನು ಎಳೆದುದರಿಂದ ಮರಗಳು ಉರುಳಿದವು ಎಂದು ಅವರಿಗೆ ಹೇಳಿದರು.
ಗೋಪಾಲಕರಲ್ಲಿ ಬಹು ಮಂದಿ ಆ ಮಕ್ಕಳ ಮಾತನ್ನು ನಂಬಲಿಲ್ಲ. ಇಂತಹ ಸಂಗತಿಗಳು ನಡೆಯುವುದು ಸಾಧ್ಯ ಎಂದು ಅವರಿಗನಿಸಲಿಲ್ಲ. ಕೆಲವರು ಮಾತ್ರ ಆ ಮಾತುಗಳನ್ನು ನಂಬಿದರು. ಅವರು ನಂದ ಮಹಾರಾಜನಿಗೆ ನಿನ್ನ ಮಗ ಇತರ ಮಕ್ಕಳಂತಲ್ಲ. ಅವನು ಇದನ್ನು ಮಾಡಿದ್ದರೂ ಮಾಡಿರಬಹುದು” ಎಂದರು.
ತನ್ನ ಮಗನ ಅಸಾಧಾರಣ ಶಕ್ತಿಯ ವಿಷಯವನ್ನು ಕೇಳಿ ನಂದ ಮಹಾರಾಜನು ಮುಗುಳ್ನಕ್ಕನು. ಮುಂದೆ ಬಂದು ಎಲ್ಲರನ್ನೂ ಬೆರಗುಗೊಳಿಸಿದ ತನ್ನ ಮಗುವನ್ನು ಮುಕ್ತಗೊಳಿಸಲು ಹಗ್ಗದ ಗಂಟನ್ನು ಬಿಡಿಸತೊಡಗಿದನು. ಹೀಗೆ ಬಿಡುಗಡೆಯಾದ ಬಾಲಕೃಷ್ಣನನ್ನು ಗೋಪಿಯರು ತೊಡೆಯ ಮೇಲೆ ಮಲಗಿಸಿಕೊಂಡರು.
ಅವನನ್ನು ಮನೆಯ ಮುಂದಿನ ಅಂಗಳಕ್ಕೆ ಕರೆದುಕೊಂಡು ಚಪ್ಪಾಳೆ ತಟ್ಟುತ್ತಾ ಅವನ ಲೀಲೆಗಳನ್ನು ಹೊಗಳಲು ಪ್ರಾರಂಭಿಸಿದರು. ಕೃಷ್ಣನು ಸಾಮಾನ್ಯ ಮಗುವಿನಂತೆ ಚಪ್ಪಾಳೆ ತಟ್ಟುತ್ತಾ ನರ್ತಿಸಿದನು. ಗೋಪಿಯರ ನಿಯಂತ್ರಣಕ್ಕೆ ಸಂಪೂರ್ಣವಾಗಿ ಒಳಗಾದ ಪರಮ ಪ್ರಭು ಅವರ ಕೈಗಳಲ್ಲಿ ಒಂದು ಬೊಂಬೆಯಂತೆ ಹಾಡುತ್ತಾ ಕುಣಿಯಲು ಪ್ರಾರಂಭಿಸಿದನು.






Leave a Reply