– ಮಾಧವಾನಂದ ದಾಸ
ಕಂಸಧ್ವಂಸಿ ಪದಾಂಭೋಜ ಸಂಸತ್ತೋ ಹಂಸಪುಂಗವಃ |
ಬ್ರಹ್ಮಣ್ಯ ಗುರುರಾಜಾಭ್ಯೋ ವರ್ತನಾಮ್ ಮಮ ಮಾನಸೇ ||
ಬ್ರಹ್ಮಣ್ಯತೀರ್ಥರು, ಕಂಸಧ್ವಂಸಿ ಶ್ರೀಕೃಷ್ಣನ ಪಾದಪದ್ಮಗಳನ್ನು ಬಹುವಾಗಿ ನೆಚ್ಚಿಕೊಂಡಿರುವ ಹಂಸಸದೃಶ ಭಕ್ತರು. ಅವರು ಆಧ್ಯಾತ್ಮಿಕ ಆಚಾರ್ಯರುಗಳಲ್ಲೆಲ್ಲ ಮೊದಲಿಗರಾಗಿ ಸದಾ ನನ್ನ ಮಾನಸ ಸರೋವರದಲ್ಲಿ ನೆಲೆಸಿರಲಿ
– ವ್ಯಾಸತೀರ್ಥರು.

ಬ್ರಹ್ಮಣ್ಯತೀರ್ಥರು ವ್ಯಾಸತೀರ್ಥರ ಗುರುಗಳು. ತಮ್ಮ ಆವತರಣದ ಕಾಲದಲ್ಲಿ ಅದ್ಭುತವಾದ ಲೀಲೆಯನ್ನು ತೋರ್ಪಡಿಸಿದವರು. ಇವರು ಶಿಷ್ಯಪರಂಪರೆಯಲ್ಲಿ ಅತ್ಯಂತ ಕೀರ್ತಿವಂತರಾದ ವ್ಯಾಸತೀರ್ಥರಿಗೆ ದೀಕ್ಷೆ ನೀಡಿದ್ದಕ್ಕೆ ವೈಭವದಿಂದ ಸ್ತುತಿಸಲ್ಪಡುತ್ತಾರೆ. ಇವರು ಜನಿಸಿದ್ದು ಅಬ್ಬೂರು ಗ್ರಾಮದಲ್ಲಿ ತಮ್ಮ ಲೀಲಾವತರಣದ ಬಹುಪಾಲು ಕಳೆದಿದ್ದೂ ಇಲ್ಲಿಯೇ.
ಅಬ್ಬೂರು, ಬೆಂಗಳೂರು-ಮೈಸೂರು ನಗರಗಳ ನಡುವೆ ಮುಖ್ಯರಸ್ತೆಯಲ್ಲೇ ಕಾಣಸಿಗುವ ಸುಂದರ ಗ್ರಾಮ. ಇದು ಚನ್ನಪಟ್ಟಣದಿಂದ 6ಕಿ.ಮೀ. ದೂರದಲ್ಲಿದೆ. ಈ ಹಳ್ಳಿಯು ಗಿರಿವನಗಳು, ಇನಿದನಿಯ ಹಕ್ಕಿಗಳು, ಹಸುಗಳು, ಕಬ್ಬು ತೆಂಗು, ಬಾಳೆ ತೋಟಗಳಿಂದ ಆವೃತವಾದ ಪ್ರಶಾಂತ ವಾತಾವರಣದಲ್ಲಿದೆ.
ಮಂದವಾಗಿ ಹರಿಯುವ ಕಣ್ವ ನದಿಯು ಅಬ್ಬೂರಿನ ಸೊಬಗಿಗೆ ಇನ್ನೂ ಹೆಚ್ಚಿನ ಮೆರುಗು ನೀಡಿದೆ. (ಕಣ್ವ ಸಂಗ್ರಹಣಾ ಘಟಕದ ನಿರ್ಮಾಣದ ಅನಂತರ ನದಿಯು ಚಿಕ್ಕ ತೊರೆಯಂತೆ ಕಾಣುತ್ತದೆ. ಮಳೆಗಾಲದಲ್ಲಿ ಇಲ್ಲವೇ ಘಟಕದ ಗೇಟ್ ಗಳನ್ನು ತೆರೆದಾಗಲಷ್ಟೆ ಕಣ್ವ ಮೈತುಂಬಿಕೊಳ್ಳುವುದು).
ಬ್ರಹ್ಮಾಂಡ ಪುರಾಣದಲ್ಲಿ ಅಬ್ಬೂರು ಪ್ರಾಂತ್ಯವು ‘ಜ್ಞಾನ ಮಂಟಪʼಎಂದು ಕರೆಯಲ್ಪಟ್ಟಿದೆ. ಶ್ರೇಷ್ಠ ಋಷಿಗಳಾಗಿದ್ದ ಕಣ್ವ ಮಹರ್ಷಿಗಳು ಇಲ್ಲಿ ತಪಸ್ಸಾನ್ನಾಚರಿಸಿದ್ದರೆಂದು ಹೇಳಲಾಗುತ್ತದೆ. ಆದ್ದರಿಂದಲೇ ಇಲ್ಲಿ ಹರಿಯುವ ನದಿಗೆ ‘ಕಣ್ಣ’ ಎಂಬ ಹೆಸರು ಬಂದಿದ್ದು, ಈ ಸ್ಥಳಕ್ಕೆ ಭೇಟಿ ನೀಡಿದ ಜಯಧರ್ಮತೀರ್ಥರ ಶಿಷ್ಯ ಪುರುಷೋತ್ತಮ ತೀರ್ಥರು ಅಬ್ಬೂರಿನ ಪ್ರಶಾಂತ ಆಧ್ಯಾತ್ಮಿಕ ವಾತಾವರಣದಿಂದ ಆಕರ್ಷಿತರಾಗಿದ್ದರು.
ಇಲ್ಲಿ ಪ್ರಪ್ರಾಚೀನ ಮತ್ತು ಅಸಾಧಾರಣವಾದ ಶ್ರೀ ನರಸಿಂಹ ದೇಗುಲವೂ ಇದೆ. ಇಲ್ಲಿ ತಿರುವೆಂಗಲನಾಥ ಬೆಟ್ಟದ ಮೇಲೆ ಭಗವಾನ್ ನರಸಿಂಹನು ಗರ್ಭಗುಡಿಯಲ್ಲಿ ಕಂಬದ ಒಳಗೆ ಪೂಜಿಸಲ್ಪಡುತ್ತಾನೆ. ಈ ಕಂಬವು ಪೂರ್ವಭಾಗದಲ್ಲಿ ಭಗವಾನ್ ಶ್ರೀ ವಿಷ್ಣುವಿನ ಶಂಖ ಮತ್ತು ಚಕ್ರದ ಚಿಹ್ನೆಗಳನ್ನೂ, ದಕ್ಷಿಣದಲ್ಲಿ ಹನುಮಂತ, ಉತ್ತರದಲ್ಲಿ ಗರುಡವನ್ನು ಹೊಂದಿದೆ.
ಭಗವಂತನು ಕಂಬದೊಳಗಿಂದ ಆವಿರ್ಭವಿಸಿರುವ ಕಾರಣದಿಂದ ಇಲ್ಲಿ ನರಸಿಂಹನನ್ನು “ಕಂಬದ ನರಸಿಂಹ” ಎಂದು ಕರೆಯಲಾಗುತ್ತದೆ. ಪುರುಷೋತ್ತಮ ತೀರ್ಥರು ಇಲ್ಲಿ ಶ್ರೀ ನರಸಿಂಹನ ಪೂಜೆಯನ್ನು ಆರಂಭಿಸಿದುದಲ್ಲದೆ, ಆತನನ್ನು ತನ್ನ ಆರಾಧ್ಯ ದೈವವಾಗಿ ಸ್ವೀಕರಿಸಿದರು. ಅವರು ತಿರುವೆಂಗಲನಾಥ ಬೆಟ್ಟದ ಗುಹೆಯಲ್ಲಿ ಪ್ರವೇಶಿಸಿರುವವರೆಗೂ ಅಬ್ಬೂರಿನಲ್ಲಿಯೇ ನೆಲೆಸಿದ್ದರು.
ಈ ಸಮಯದಲ್ಲಿ ರಾಮಗಿರಿಯ ರಾಮಾಚಾರ್ಯ ಎಂಬ ಒಬ್ಬ ಧರ್ಮವಂತ ಬ್ರಾಹ್ಮಣನು ತನ್ನ ಸಾಧ್ವಿ ಪತ್ನಿಯೊಂದಿಗೆ ಅಬ್ಬೂರಿಗೆ ಬಂದನು. ಸಂತಾನಭಾಗ್ಯ ಕಾಣದ ಅವರು, ಮಕ್ಕಳಿಗಾಗಿ ಶ್ರೀ ನರಸಿಂಹದೇವನ ಮತ್ತು ವುರುಷೋತ್ತಮ ತೀರ್ಥರ ಆಶೀರ್ವಾದ ಪಡೆಯಲು ಬಂದಿದ್ದರು.
ಅವರ ಕರುಣೆಯ ಫಲವಾಗಿ ದಂಪತಿಗಳಿಗೆ ಅಸಾಧಾರಣನಾದ ಪುತ್ರನು ಜನಿಸಿದನು. ಅವನಿಗೆ ನರಸಿಂಹಾಚಾರ್ಯ ಎಂದು ಅವರು ಹೆಸರಿಟ್ಟರು. ನರಸಿಂಹಾಚಾರ್ಯನು ಬೆಳೆದಂತೆಲ್ಲ ಅಸಾಮಾನ್ಯ ಬುದ್ಧಿಮತ್ತೆಯನ್ನು ತೋರ್ಪಡಿಸಲಾರಂಭಿಸಿದನು. ಆತನು ವೈದಿಕ ಗ್ರಂಥಗಳ ಅಧ್ಯಯನದೆಡೆಗೆ ತೀಕ್ಷ್ಣ ಆಸಕ್ತಿ ಇರಿಸಿಕೊಂಡಿದ್ದನು.
ವ್ಯಾಸ ವಿಜಯದಲ್ಲಿ ವರ್ಣಿಸಿರುವಂತೆ –
ಗರ್ಭಾಷ್ಟಮೋ ಅಬ್ದೇ ಪೋತಮ್ ತಮ್ ಉಪನೀಯ ದ್ವಿಜೋತ್ತಮಃ |
ಪುರುಷೋತ್ತಮ ತೀರ್ಥಾಯ ನಿ ಕಟಮ್ ಪ್ರಾಹಿನೋದ್ ವಟುಮ್ ||

“ನರಸಿಂಹನಿಗೆ ಎಂಟು ವರ್ಷಗಳು ತುಂಬಿದಾದ ಬ್ರಾಹ್ಮಣ ಶ್ರೇಷ್ಠನಾದ ರಾಮಾಚಾರ್ಯನು ಪವಿತ್ರವಾದ ಉಪನಯನ ಸಂಸ್ಕಾರವನ್ನು ನೆರವೇರಿಸಿದನು ಮತ್ತು ಬ್ರಹ್ಮಚಾರಿಯನ್ನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಪುರುಷೋತ್ತಮ ತೀರ್ಥರ ಬಳಿ ಕಳುಹಿಸಿದನು.”
ಪುರುಷೋತ್ತಮ ತೀರ್ಥರು ನರಸಿಂಹನಿಗೆ ವೈದಿಕ ಶಾಸ್ತ್ರಗಳನ್ನು, ಹಿಂದಿನ ಆಚಾರ್ಯರುಗಳ ಉಪದೇಶಗಳನ್ನು ಬೋಧಿಸಿದರು. ಆಚಾರ್ಯರ ಬೋಧನೆಗಳನ್ನು ಸಮರ್ಥವಾಗಿ ಗ್ರಹಿಸಿ ಜ್ಞಾನವನ್ನು ಪಡೆದ ನರಸಿಂಹನಿಗೆ ಶಿಷ್ಯಪರಂಪರೆಯ ಮುಂದಿನ ಆಚಾರ್ಯ ಪಟ್ಟ ನೀಡಲು ಪುರುಷೋತ್ತಮ ತೀರ್ಥರು ಉತ್ಸುಕರಾದರು.
ಕಾವೇರಿ ನದೀ ತೀರದಲ್ಲಿ ನರಸಿಂಹನಿಗೆ ಸಂನ್ಯಾಸ ದೀಕ್ಷೆ ಪ್ರದಾನ ಮಾಡಿದ ಅವರು, ‘ಬ್ರಹ್ಮಣ್ಯತೀರ್ಥ’ ಎಂಬ ಅಭಿಧಾನವನ್ನು ನೀಡಿದರು. ತರುಣ ಸಂನ್ಯಾಸಿಯು ತೇಜಸ್ವಿಯಾಗಿ ಬೆಳಗುತ್ತಿದ್ದನು. ಮುಂದೆ ಪುರುಷೋತ್ತಮ ತೀರ್ಥರು 1443 ರಲ್ಲಿ ಚೈತ್ರ ಶುಕ್ಲ ಪ್ರತಿಪದೆಯಂದು ಅಬ್ಬೂರಿನಿಂದ 2.ಕಿ.ಮೀ ದೂರದಲ್ಲಿರುವ ತಿರುವೆಂಗಲನಾಥ ಬೆಟ್ಟದಲ್ಲಿ ಗುಹಾಪ್ರವೇಶ ಮಾಡಿದರು.
ಪುರುಷೋತ್ತಮ ತೀರ್ಥರು ವೃಂದಾವನವನ್ನೈದಿದ ಅನಂತರ ಬ್ರಹ್ಮಣ್ಯತೀರ್ಥರು ಪೀಠಾರೋಹಣ ಮಾಡಿದರು. ಅವರು ಅಬ್ಬೂರಿನಲ್ಲಿಯೇ ನೆಲೆಸಿದ್ದರು. ಬ್ರಹ್ಮಣ್ಯ ತೀರ್ಥರ ಶ್ರೇಷ್ಠತೆಯನ್ನು ಅರಿಯಲಾರಂಭಿಸಿದ ಭಕ್ತರು ಅವರ ದರ್ಶನಾಕಾಂಕ್ಷಿಗಳಾಗಿ ಅಬ್ಬೂರಿಗೆ ಯಾತ್ರೆ ಬರಲಾರಂಭಿಸಿದರು.
ಅಸಾಧಾರಣಾ ಲೀಲೆಗಳು : ಕಣ್ವ ನದಿ ತೀರದಲ್ಲಿ ಮಳೂರು ಎಂಬ ಗ್ರಾಮದಲ್ಲಿ ಶ್ರೀ ಅಪ್ರಮೇಯ ಸ್ವಾಮಿ ದೇಗುಲವಿದೆ. ಮಳೂರು ಗ್ರಾಮ ಅಬ್ಬೂರಿನಿಂದ 5.ಕಿ.ಮೀ. ಮತ್ತು ಚನ್ನಪಟ್ಟಣದಿಂದ 2. ಕಿ.ಮೀ ದೂರದಲ್ಲಿದೆ. ಮಳೂರು ಶ್ರೀ ಬ್ರಹ್ಮಣ್ಯತೀರ್ಥರು ಸಾವಿನ ಹೊಸ್ತಿಲಲ್ಲಿದ್ದ ರಾಜಕುಮಾರನನ್ನು ಬದುಕಿಸಿ ಪವಾಡ ಮೆರೆದ ಪುಣ್ಯ ಸ್ಥಳ.
ಒಮ್ಮೆ ಹೀಗಾಯ್ತು. ಬ್ರಹ್ಮಣ್ಯತೀರ್ಥರು ತಮ್ಮ ಶಿಷ್ಯರೊಡನೆ ಶ್ರೀ ಅಪ್ರಮೇಯಸ್ವಾಮಿ ದರ್ಶನಕ್ಕೆಂದು ಮಳೂರಿಗೆ ಬಂದರು. ಭಗವಂತನ ದರ್ಶನ ಪಡೆದು ನದೀ ತೀರಕ್ಕೆ ತೆರಳಿದರು. ಅಲ್ಲಿ ಅವರಿಗೊಂದು ಅಘಾತಕರ ದೃಶ್ಯ ಕಾಡಿತ್ತು. ಕೈಕಾಲು ಕತ್ತರಿಸಲ್ಪಟ್ಟ ವ್ಯಕ್ತಿಯೊಬ್ಬರಕ್ತಸಿಕ್ತನಾಗಿ ನದಿಯಲ್ಲಿ ತೇಲುತ್ತಿದ್ದ. ನೋವಿನಿಂದ ಕೂಗುತ್ತಿದ್ದ ಅವನ ಆರ್ತನಾದ ಅಲ್ಲಿ ಮಾರ್ದನಿಸುತ್ತಿತ್ತು.
ಬ್ರಹ್ಮಣ್ಯತೀರ್ಥರ ಆದೇಶದಂತೆ ಅವರ ಶಿಷ್ಯರು ಆ ವ್ಯಕ್ತಿಯನ್ನು ಹೊರಗೆಳೆದರು. ಆತ ತನ್ನನ್ನು ಈ ಪರಿಸ್ಥಿತಿಯಿಂದ ಪಾರುಮಾಡುವಂತೆ ಆರ್ತನಾಗಿ ಬೇಡಿಕೊಂಡ. ಅವನ ಮೇಲೆ ಕರುಣೆತೋರಿದ ಆಚಾರ್ಯರು ಅಪ್ರಮೇಯನನ್ನು ಪ್ರಾರ್ಥಿಸಿ, ನದೀತೀರದ ಮರಳನ್ನು ಆತನ ದೇಹಕ್ಕೆ ಲೇಪಿಸಿದರು.
ದೇವೋತ್ತಮನ ಅಕಾರಣ ಕರುಣೆ ಮತ್ತು ಅವನ ಶುದ್ಧ ಭಕ್ತನ ದಯೆಯಿಂದ ಆ ವ್ಯಕ್ತಿಗೆ ಕೈ-ಕಾಲುಗಳು ಮರಳಿ, ಆತ ಸಹಜ ಸ್ಥಿತಿಗೆ ಮರಳಿದ. ಅಲ್ಲಿ ನೆರೆದಿದ್ದವರೆಲ್ಲರೂ ಆಚಾರ್ಯರ ಈ ಅದ್ಭುತ ಪವಾಡಕ್ಕೆ ಬೆರಗಿನ ಸಾಕ್ಷಿಯಾಗಿ ನಿಂತರು.
ಬ್ರಹ್ಮಣ್ಯ ತೀರ್ಥರು ಆ ವ್ಯಕ್ತಿಯತ್ತ ಸಹಾನುಭೂತಿ ತೋರಿ, ಆತನ ಪೂರ್ವಾಪರ ವಿಚಾರಿಸಿದರು. ಆತ ತನ್ನ ಕರುಣಾಜನಕ ಕಥೆಯನ್ನು ಹೇಳಿಕೊಳ್ಳಲಾರಂಭಿಸಿದ.
ಆ ತರುಣನ ಹೆಸರು ಸಾರಂಗಧರ ಎಂದು. ಅವನು ಚಿಕ್ಕಗಂಗವಾಡಿ ಪ್ರಾಂತ್ಯದ ರಾಜ ತಿಮ್ಮರಸುವಿನ ಮಗ. ಚೆನ್ನಪಟ್ಟಣದ ಸುತ್ತಮುತ್ತಲ ಪ್ರದೇಶ ಅವನ ಆಡಳಿತಕ್ಕೊಳಪಟ್ಟಿತ್ತು. ತನ್ನ ಮೊದಲ ಪತ್ನಿ ಸಾರಂಗಧರನ ತಾಯಿ ನಿಧನಳಾದ ಅನಂತರ ತಿಮ್ಮರಸು ಇನ್ನೂ ತರುಣಿಯಾಗಿದ್ದ ರಾಜಕುಮಾರಿಯೊಬ್ಬಳನ್ನು ವಿವಾಹವಾದ.

ಮುಪ್ಪಿನ ಪತಿಯಿಂದ ಸುಖಕಾಣದ ಅವಳು ಯುವರಾಜ ಸಾರಂಗಧರನತ್ತ ಆಕರ್ಷಿತಳಾದಳು. ಅವನನ್ನು ಮೋಹಿಸತೊಡಗಿದಳು. ಚಿಕ್ಕಮ್ಮನ ನಡವಳಿಕೆಯಿಂದ ಆಘಾತಗೊಂಡ ಸಾರಂಗಧರ ತಾನು ಆಕೆಯನ್ನು ತಾಯಿಯಂತೆ ಕಾಣುವುದಾಗಿಯೂ ಆಕೆಯ ಬಯಕೆ ಸರಿಯಲ್ಲವೆಂದೂ ತಿಳಿಹೇಳಿದ.
ಇದರಿಂದ ಹತಾಶಳಾದ ಆಕೆ ತನ್ನ ಪತಿಯ ಬಳಿ ಸಾರಂಗಧರ ತನ್ನ ಬಳಿ ಅನೈತಿಕವಾಗಿ ನಡೆದುಕೊಂಡನೆಂದು ಮಿಥ್ಯಾರೋಪ ಹೊರಿಸಿ ದೂರಿದಳು. ಇದರಿಂದ ಕ್ರುದ್ಧನಾದ ರಾಜ ತನ್ನ ಮಗನನ್ನು ಬಂಧಿಸಿ, ಕೈಕಾಲು ಕತ್ತರಿಸಿ ಹಾಕಲು ಆದೇಶ ನೀಡಿದ. ಅದರಂತೆ ಸೇವಕರು ಮುಗ್ಧ ಸಾರಂಗಧರನ ಕೈಕಾಲು ಕಟ್ಟಿ ಬೆಟ್ಟದ ತುದಿಗೆ ಒಯ್ದರು. ಅಲ್ಲಿ ಅವನ ಕೈಕಾಲು ಕತ್ತರಿಸಿ ಕಣ್ವ ನದಿಗೆ ತಳ್ಳಿದರು. ನದಿಯ ಪ್ರವಾಹ ಅವನನ್ನು ಬ್ರಹ್ಮಣ್ಯ ತೀರ್ಥರು ಇದ್ದಲ್ಲಿಗೆ ಸೆಳೆದೊಯ್ದಿತು.
ಸಾರಂಗಧರನ ಅವಯವಗಳನ್ನು ಕತ್ತರಿಸಿ ನದಿಗೆ ತಳ್ಳಿದ ಸ್ಥಳವನ್ನು ಇಂದಿಗೂ ಅಬ್ಬೂರಿನಲ್ಲಿ ನೋಡಬಹುದಾಗಿದೆ. ಆ ಬೆಟ್ಟವನ್ನು ಇಂದಿಗೂ ‘ಸಾರಂಗಧರನ ಬೆಟ್ಟ’ ಎಂದೇ ಕರೆಯುತ್ತಾರೆ. ಇದು ಅಬ್ಬೂರಿನಿಂದ ಒಂದು ಕಿ.ಮೀ. ದೂರದಲ್ಲಿದೆ. ಅವನ ಕೈ ಕಾಲು ಕತ್ತರಿಸಿದ ಜಾಗದಲ್ಲಿ ಒಂದು ಶಿವಲಿಂಗ ನಿರ್ಮಿಸಲಾಗಿದ್ದು, ಮಂಟಪ ಕಟ್ಟಲಾಗಿದೆ.
ಬ್ರಹ್ಮಣ್ಯ ತೀರ್ಥರ ಕೃಪೆಯಿಂದ ಉಪಕೃತನಾದ ಸಾರಂಗಧರ ತಾನೂ ಅವರ ಶಿಷ್ಯನಾಗಿ ಅವರನ್ನು ಹಿಂಬಾಲಿಸುವುದಾಗಿ ಕೇಳಿಕೊಂಡ. ಆದರೆ ಆಚಾರ್ಯರು ಅದಕ್ಕೊಪ್ಪಲಿಲ್ಲ ಅವರು ಅವನಿಗೆ ಮರಳಿ ಅರಮನೆಗೆ ಹೋಗುವಂತೆಯೂ ಆ ಹೊತ್ತಿಗೆ ತಿಮ್ಮರಸುವಿಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುತ್ತಿರುವನೆಂದೂ ಹೇಳಿದರು. ಆಚಾರ್ಯರ ಭರವಸೆಯ ಮೇಲೆ ವಿಶ್ವಾಸವಿರಿಸಿ ಸಾರಂಗಧರ ಅರಮನೆಗೆ ಮರಳಿದ.
ಸುಸ್ಥಿತಿಯಲ್ಲಿ ಮರಳಿದ ಯುವರಾಜನನ್ನು ಕಂಡ ಎಲ್ಲರೂ ಆನಂದಾಶ್ಚರ್ಯಗಳಿಗೆ ಒಳಗಾದರು. ಸಂತೋಷಾತೀರೇಕದಿಂದ ತಿಮ್ಮರಸ, ಮಗನನ್ನು ಬರಸೆಳೆದು ಅಪ್ಪಿದ. ಮೃತ್ಯುವನ್ನು ಮೀರಿ ಮರಳಿದ ಸಾರಂಗಧರನನ್ನು ಕಂಡು ಮೂಕ ವಿಸ್ಮಿತನಾದ. ಸಾರಂಗಧರ ತನ್ನ ಇಂದಿನ ಈ ಸ್ಥಿತಿಗೆ ಕಾರಣರಾದ ಬ್ರಹ್ಮಣ್ಯತೀರ್ಥರ ಬಗ್ಗೆ ಹೇಳಿ, ಅವರು ತನ್ನನ್ನು ಕಷ್ಟದಿಂದ ಪಾರುಮಾಡಿದ ಬಗೆಯನ್ನು ವಿವರಿಸಿದ.
ಈ ಕಥೆಯನ್ನು ಕೇಳಿ ಬೆರಗಾದ ರಾಜ, ತಾನೂ ಆಚಾರ್ಯರ ದರ್ಶನ ಪಡೆಯಲು ಹಂಬಲಿಸಿದ. ಅವರ ದೈವೀಕಶಕ್ತಿಯ ಗುಣಗಾನ ಮಾಡುತ್ತ, ತನ್ನನ್ನು ಅವರಲ್ಲಿಗೆ ಕರೆದೊಯ್ಯುವಂತೆ ಬಿನ್ನವಿಸಿಕೊಂಡ. ಅದರಂತೆ, ತಿಮ್ಮರಸು ಬ್ರಹ್ಮಣ್ಯ ತೀರ್ಥರ ಆಶ್ರಮಕ್ಕೆ ಭೇಟಿ ನೀಡುವ ಕಾರ್ಯಕ್ರಮ ಏರ್ಪಾಟಾಯಿತು.
ಆಚಾರ್ಯರನ್ನು ಕಂಡ ರಾಜ ಅವರಿಗೆ ಪ್ರಣಾಮ ಸಲ್ಲಿಸಿ ಕಾಣಿಕೆಗಳನ್ನು ಅರ್ಪಿಸಿದ. ಅವರ ವಿಶೇಷ ಕೃಪೆಗೆ ತನ್ನ ಅನಂತಾನಂತ ಕೃತಜ್ಞತೆಗಳನ್ನು ಸೂಚಿಸಿದ. ತನ್ನ ಇಡಿಯ ರಾಜ್ಯವನ್ನು ಬ್ರಹ್ಮಣ್ಯತೀರ್ಥರ ಪದ್ಮಪದತಲದಲ್ಲಿ ಅರ್ಪಿಸಿದ. ಆಚಾರ್ಯರು ರಾಜನನ್ನು ಸಮಾಧಾನ ಪಡಿಸಿ, ಆಶೀರ್ವದಿಸಿದರು.
ಆದರೆ ಅವನ ರಾಜ್ಯವನ್ನು ಸ್ವೀಕರಿಸಲು ನಿರಾಕರಿಸಿದರು. ಕೊನೆಗೆ ತಿಮ್ಮರಸು ಅಬ್ಬೂರು ಗ್ರಾಮವನ್ನು ಸಾಂಕೇತಿಕವಾಗಿ ಆಚಾರ್ಯರಿಗೆ ಉಂಬಳಿಯಾಗಿ ನೀಡಿದ. ಆಚಾರ್ಯರು ಅದನ್ನು ಸ್ವೀಕರಿಸಿದರು. ಇಂದಿನವರೆಗೂ ಅಬ್ಬೂರು ಗ್ರಾಮವು ಶ್ರೀ ಮಠದ ಒಡೆತನಕ್ಕೆ ಒಳಪಟ್ಟಿದೆ.
ಕೆಲ ಕಾಲಾನಂತರ ಬ್ರಹ್ಮಣ್ಯ ತೀರ್ಥರು ಬದರೀನಾಥದ ದಿವ್ಯನೆಲೆಗೆ, ಶ್ರೀ ನಾರಾಯಣ ಮತ್ತು ವೇದವ್ಯಾಸರ ದರ್ಶನಕ್ಕೆಂದು ಯಾತ್ರೆ ಹೊರಟರು. ಮರಳುವ ಹಾದಿಯಲ್ಲಿ ಅವರು ಉತ್ತರ ಕರ್ನಾಟಕದ ಸಾತೇನಹಳ್ಳಿಯಲ್ಲಿ ಹನುಮಂತನ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.
(ಮುಂದುವರಿಯುವುದು)






Leave a Reply