ಜ್ಞಾನದ ಅರಳುವಿಕೆ

ದೇವರ ಅತ್ಯುನ್ನತವಾದ ಪ್ರೇಮದೆತ್ತರ ಬೆಳೆಯುವ ಮೂಲಕ ಮಾನವನಿಗೆ ಆಧ್ಯಾತ್ಮಿಕವಾಗಿ ಪರಿಪೂರ್ಣತೆ ಗಳಿಸುವ ಅವಕಾಶವಿದೆ.

– ಆಂಗ್ಲ ಮೂಲ : ಭಕ್ತಿಚಾರುಸ್ವಾಮಿ, ಅನುವಾದ: ಗೀತಾ ಶ್ರೀನಾಥ್‌

ವೈದಿಕ ಸಾಹಿತ್ಯವು ಜ್ಞಾನವನ್ನು ಐದು ವಿಭಾಗಗಳಾಗಿ ವಿಂಗಡಿಸಿದೆ. ಅವುಗಳನ್ನು ಮುಸುಕು ಹಾಕಿದ, ಸಂಕುಚಿತ, ಅರಳುತ್ತಿರುವ, ವಿಕಸಿತ ಹಾಗೂ ಪರಿಪೂರ್ಣತೆ ಹೊಂದಿದ ಎಂದು ವಿಭಾಗಿಸಲಾಗಿದೆ.

ಉದಾಹರಣೆಗೆ ಗಿಡ, ಮರಗಳು ಬಹುತೇಕ ನಿಶ್ಚಲವಾದವು. ಅವು ʼಮುಸುಕು ಹಾಕಿದ ಜ್ಞಾನ’ದ ವಿಭಾಗಕ್ಕೆ ಸೇರುತ್ತಿವೆ. ಜ್ಞಾನದ ಯಾವುದೇ ಲಕ್ಷಣಗಳನ್ನು ಅವು ತೋರಿಸದಿದ್ದರೂ ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವು ಸೀಮಿತವಾದ ಜ್ಞಾನವನ್ನು ಪಡೆದಿವೆ ಎನ್ನುವುದು ನಮಗೆ ತಿಳಿಯುತ್ತದೆ.

ಹುಳು, ಹುಪ್ಪಟೆ, ಕೀಟ ಮತ್ತು ಪ್ರಾಣಿಗಳು “ಸಂಕುಚಿತ ಜ್ಞಾನ” ದ ವಿಭಾಗಕ್ಕೆ ಸೇರುತ್ತವೆ. ಗಿಡ, ಮರಗಳ ಹಾಗೆ ಇವುಗಳ ಜ್ಞಾನ ಮುಸುಕು ಹಾಕಿಕೊಂಡಿರುವುದಿಲ್ಲ. ಆದರೂ ಅವುಗಳ ಜ್ಞಾನ ವಿಕಾಸಗೊಂಡಿರುವುದಿಲ್ಲ.

ಮಾನವನಿಗೆ ಅರಳುವ ಜ್ಞಾನವಿದೆ. ಒಂದು ಮೊಗ್ಗು ಮುಚ್ಚಿಕೊಂಡಿರುತ್ತಿದೆಯಾದರೂ ಹೂವಾಗಿ ಅರಳುವ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತದೆ. ಮಾನವನ ಜ್ಞಾನಕ್ಕೂ ಇಂತಹುದೇ ಸಾಮರ್ಥ್ಯವಿದೆ. ಪ್ರಾಣಿಗಳ ಹಾಗೆ ಮಾನವನ ಜ್ಞಾನವೂ ಸಂಕುಚಿತಗೊಂಡ ಹಾಗೆ ಕಂಡರೂ ಮಾನವನಿಗೆ ಆ ಜ್ಞಾನವನ್ನು ಪರಮ ಸತ್ಯವನ್ನು ಹೊಂದುವಷ್ಟು ಅಪರಿಮಿತವಾಗಿ ಅರಳಿಸುವ ಸ್ವಾಭಾವಿಕ ಸಾಮರ್ಥ್ಯವಿದೆ.

ಉಳಿದ ಜೀವಗಳಿಗೆ ಈ ವಿಶೇಷ ಸಾಮರ್ಥ್ಯವಿಲ್ಲ. ಆದ್ದರಿಂದಲೇ ವೈದಿಕ ಸಾಹಿತ್ಯವು ಮಾನವ ಜನ್ಮ ಅತ್ಯಂತ ಶ್ರೇಷ್ಠವಾದದ್ದು ಎಂದು ಪರಿಗಣಿಸಿದೆ. ಎಲ್ಲ ಧರ್ಮಗ್ರಂಥಗಳೂ ಮಾನವನ ಜೀವನವನ್ನು ಪವಿತ್ರವೆಂದೇ ಪರಿಗಣಿಸಿವೆ.

ಮಾನವ ಜೀವಿಯು ಪ್ರಾಮಾಣಿಕವಾಗಿ ಪರಮ ಸತ್ಯದ ಹುಡುಕಾಟಕ್ಕೆ ಮುಂದಾದಾಗ, ಮೊಗ್ಗಿನಂತಿರುವ ಅವನ ಪ್ರಜ್ಞೆ ಅರಳುವುದಕ್ಕೆ ಇಲ್ಲವೇ ವಿಕಾಸ ಹೊಂದುವುದಕ್ಕೆ ತೊಡಗುತ್ತದೆ. ಇದೇ ಜ್ಞಾನದ “ವಿಕಾಸ” ಸ್ಥಿತಿ. ಹುಡುಕಾಟದ ಫಲಿತಾಂಶದ ಫಲವಾಗಿ ಅವನು ಆಧ್ಯಾತ್ಮಿಕ ನಿಯಮ ಪಾಲನೆಯನ್ನು ಅಭ್ಯಾಸ ಮಾಡುತ್ತಾ ಇನ್ನಷ್ಟು, ಮತ್ತಷ್ಟು ಮುಂದೆ ಸಾಗುತ್ತದೆ. ಅಂತಿಮವಾಗಿ ಅವನು ಪರಿಪೂರ್ಣವಾದ ಭಗವಂತನ ಸಾಕ್ಷಾತ್ಕಾರವನ್ನು ಹೊಂದುತ್ತಾನೆ. ಅದು ಪರಿಪೂರ್ಣವಾಗಿ ಅರಳಿದ ಜ್ಞಾನ ಸ್ಥಿತಿ.

ಜೀವಿಯ ನಿಜವಾದ ಅಸ್ತಿತ್ವ ನೀಡುವುದು ಆತ್ಮದ ಚೇತನದಲ್ಲಿ, ಲೌಕಿಕವಾದ ದೇಹದಲ್ಲಲ್ಲ. ಆದ್ದರಿಂದಲೇ ಭಗವಂತನ ಸಾಕ್ಷಾತ್ಕಾರ ಪಡೆಯಲು ಸಾಧ್ಯವಾಗುತ್ತದೆ. ಆತ್ಮವು ಪ್ರಾಪಂಚಿಕ ಪ್ರಕೃತಿಯ ಉತ್ಪನ್ನವಲ್ಲ. ಅದು ಬರುವುದು ಆಧ್ಯಾತ್ಮಿಕ ಪ್ರಕೃತಿಯಿಂದ. ಆತ್ಮವು ಜ್ಞಾನದ ಕೆಳಹಂತಕ್ಕೆ ಇಳಿದಂತೆಲ್ಲ ಅದು ವಿಷಯದಿಂದ ಮುಚ್ಚಲ್ಪಡುತ್ತದೆ – ಮೊದಲು ಜಟಿಲ ಅಥವಾ ಪಾರಲೌಕಿಕದಿಂದ ಮುಚ್ಚಲ್ಪಡುತ್ತದೆ. ಭೌತಿಕ ದೇಹವು ಭೂಮಿ, ನೀರು, ಅಗ್ನಿ ವಾಯು ಮತ್ತು ವರ್ಣರಹಿತ ದ್ರವದಿಂದ ಮಾಡಲಾಗಿದೆ.

ಲೌಕಿಕ ದೃಷ್ಟಿಯಿಂದ ನಾವು ಗ್ರಹಿಸುವ ದೇಹಗಳೆಲ್ಲವೂ ಸ್ಥೂಲ ಭೌತಿಕ ದೇಹಗಳು ಸ್ಥೂಲ ದೇಹದೊಳಗೆ ಸೂಕ್ಷ್ಮ ದೇಹವಿರುತ್ತದೆ. ಅದನ್ನು ನಮ್ಮ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಆದರೆ ನಮ್ಮ ಜ್ಞಾನದ ಮೂಲಕ ಅದನ್ನು ಗ್ರಹಿಸಬಹುದು.

ಸೂಕ್ಷ್ಮ ಲೌಕಿಕ ದೇಹದ ಮನಸ್ಸಿಗಿಂತಲೂ ಸೊಗಸಾದ ಜ್ಞಾನ ಮತ್ತು ಅಹ೦ಕಾರವು ಅಲೌಕಿಕ ಆತ್ಮವಾಗಿದ್ದು ಅದು ದೇಹವನ್ನು ಜೀವಂತವಾಗಿರಿಸುತ್ತದೆ. ‘ನಾನು’ ಎನ್ನುವುದೇ ಆತ್ಮ. ಎಲ್ಲಿಯವರೆಗೂ ಆತ್ಮವು ದೇಹದಲ್ಲಿರುತ್ತದೆಯೋ ಅಲ್ಲಿಯವರೆಗೂ ದೇಹ ಜೀವದಿಂದಿರುವಂತೆ ತೋರುತ್ತದೆ. ಪ್ರಜ್ಞೆಯು ದೇಹದಲ್ಲಿ ಹರಿದು ಆತ್ಮವನ್ನು ಮುಚ್ಚಿ ಹಾಕಿ ನಾನೇ ದೇಹ ಎಂಬ ತಪ್ಪಾಗಿ ಗುರುತಿಸುವಂತೆ ಮೂಡುತ್ತದೆ.

ಮೂರ್ತ ರೂಪದಲ್ಲಿರುವ ಆತ್ಮವು ವ್ಯಕ್ತಿಯ ಹಿಂದಿನ ಕ್ರಿಯೆಯ ಪಲಿತಾಂಶವಾಗಿ ಒಂದು ದೇಹದಿಂದ ಇನ್ನೊಂದು ದೇಹಕ್ಕೆ ದೇಹಾಂತರ ಮಾಡುತ್ತದೆ. ಅವನ ಎಲ್ಲ ಕ್ರಿಯೆಗಳೂ ಮನಸ್ಸಿನಲ್ಲಿ ಅಥವಾ ಸೂಕ್ಷ್ಮ ದೇಹದಲ್ಲಿ ಮುದ್ರೆಯೊತ್ತಿರುತ್ತವೆ. ಅದರಂತೆ ಸೂಕ್ಷ್ಮ ದೇಹವು ರೂಪುಗೊಳ್ಳುತ್ತದೆ.

ಉದಾಹರಣೆಗೆ, ಒಬ್ಬ ವ್ಯಕ್ತಿ ದಯಾಳುವಿನಂತೆ ವರ್ತಿಸಿದರೆ ಅವನ ಸೂಕ್ಷ್ಮದೇಹವೂ ಹಾಗೇ ಆಗುತ್ತದೆ. ಹಾಗೆಯೇ ಒಬ್ಬ ಹಂದಿಯಂತೆ ವರ್ತಿಸಿದರೆ ಅವನ ಸೂಕ್ಷ್ಮ ದೇಹವೂ ಹಂದಿಯಾಗುತ್ತದೆ. ಮೃತ್ಯುವಿನ ಸಮಯದಲ್ಲಿ ಆತ್ಮವು ಸ್ಥೂಲ ದೇಹವನ್ನು ತೊರೆದಾಗ, ಸೂಕ್ಷ್ಮದೇಹವು ಆ ಆತ್ಮವನ್ನು ಹೊತ್ತು ಸಾಗುತ್ತದೆ. ಸೂಕ್ಷ್ಮ ದೇಹದ ರೂಪವು ನಿರ್ಣಯಿಸಿದ ನಿರ್ದಿಷ್ಟ ಗರ್ಭಕ್ಕೆ ಆತ್ಮವನ್ನು ಒಯ್ಯುತ್ತದೆ. ಜ್ಞಾನದ ಬೆಳವಣಿಗೆಯ ಹಂತವನ್ನು ಆಧರಿಸಿ ಆತ್ಮವು ಒಂದು ದೇಹದಿಂದ ಇನ್ನೊಂದು ದೇಹಕ್ಕೆ ದೇಹಾಂತರಗೊಳ್ಳುತ್ತದೆ.

ಎಂಟು ದಶಲಕ್ಷ ಕೆಳಹಂತದ ಜೀವಗಳನ್ನು ದಾಟಿದ ಮೇಲೆ ಮಾನವ ಜನ್ಮ ಲಭಿಸುತ್ತದೆ ಎಂದು ವೈದಿಕ ಸಾಹಿತ್ಯ ಹೇಳುತ್ತದೆ. ಪತನಗೊಂಡ ಪ್ರತಿಯೊಂದು ಆತ್ಮವೂ ಹಂತಹಂತವಾಗಿ ಪ್ರಜ್ಞೆಯ ವಿವಿಧ ಹಂತಗಳಾದ ಮುಸುಕು ಹಾಕಿದ, ಸಂಕುಚಿತ ಹಾಗೂ ಅರಳುವಿಕೆಯು ಪ್ರಕಟಗೊಳ್ಳುತ್ತದೆ.

ಅರಳುವಿಕೆಯ ಹಂತದಲ್ಲಿ ಸಶರೀರವಾಗಿರುವ ಆತ್ಮವು ಆ ವ್ಯಕ್ತಿಯ ಆಧ್ಯಾತ್ಮಿಕ ಜ್ಞಾನವನ್ನು ದೇವರೊಂದಿಗಿನ ಸಂಬಂಧದ ಮೂಲಕ ಪೂರ್ಣವಾಗಿ ಜಾಗೃತಿಗೊಳಿಸುವ ಅವಕಾಶ ಹೊಂದಿರುತ್ತದೆ. ಆ ಅವಕಾಶವನ್ನು ಅವನು ನಿರ್ಲಕ್ಷಿಸಿದ್ದೇ ಆದಲ್ಲಿ, ಅವನು ಮತ್ತೆ ಮುಸುಕು ಹಾಕಿದ, ಸಂಕುಚಿತ ಹಾಗೂ ಅರಳುವಿಕೆ ಹಂತಗಳನ್ನು ಪುನರ್ಜನ್ಮದ ಮೂಲಕ ಮತ್ತೆ ಹಾದು ಹೋಗಬೇಕಾಗುತ್ತದೆ.

ಮನುಷ್ಯ ಜಾತಿಗಿಂತ ಕೆಳಮಟ್ಟದ ಜೀವಿಗಳು ದೈಹಿಕ ಜ್ಞಾನದಲ್ಲೇ ಮಗ್ನವಾಗಿರುತ್ತದೆ. ಕೆಲವೊಮ್ಮೆ ಮನುಷ್ಯರೂ ಕೂಡ ಇದೇ ಸ್ಥಿತಿಯಲ್ಲಿರುತ್ತಾರೆ. ಆದರೆ ಮಾನವರು ತಮಗೆ ತಾವೇ ಉನ್ನತ ಹಂತಗಳಿಗೆ ಏರಬಹುದಾಗಿದೆ. ಮನುಷ್ಯ ಮತ್ತು ಪ್ರಾಣಿಗಳ ಬಹುಮುಖ್ಯ ವ್ಯತ್ಯಾಸವಿದು.

ಮನುಷ್ಯ ತನಗಿರುವ ಉನ್ನತ ಸಾಮರ್ಥ್ಯದ ನಡುವೆಯೂ ಪ್ರಾಣಿಗಳ ಪ್ರವೃತ್ತಿಯಾದ ತಿನ್ನುವುದು, ಮಲಗುವುದು, ಕೂಡುವುದು ಮತ್ತು ಸಮರ್ಥಿಸಿಕೊಳ್ಳುವುದನ್ನು ಬೆನ್ನಟ್ಟಿ ಹೋದಲ್ಲಿ, ಅವನು ಅದ್ಭುತವಾದ ಕೊಡುಗೆಯನ್ನು ಪೂರಾ ದುರುಪಯೋಗ ಪಡಿಸಿಕೊಂಡಂತೆ. ಸಿಕ್ಕ ಅಪರೂಪದ ಅವಕಾಶ ಕಳೆದುಕೊಂಡಂತೆ.

ಮಾನವ ಜೀವಿಯು ಉನ್ನತವಾದ ಜ್ಞಾನವನ್ನು ಹೊಂದಿರುವ ಕಾರಣ – ಲೌಕಿಕ ಪ್ರಜ್ಞೆಯಿಂದ ಹೊರಬರುವ ನಿಟ್ಟಿನಲ್ಲಿ ಆಧ್ಯಾತ್ಮಿಕವನ್ನು ಹೊಂದುವುದಾಗಲಿ ಅಥವಾ ಕೆಳಹಂತದ ಪ್ರಜ್ಞೆಗೆ ಕುಸಿಯುವುದಾಗಲಿ ಯಾವುದನ್ನು ಬೇಕಾದರೂ ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದ್ದಾನೆ.

ಅಲ್ಪ ಬುದ್ಧಿಯ ಜನರು ಇಂದ್ರಿಯ ಸಂತಸವೇ ಜೀವನದ ಗುರಿ ಎಂದು ಕೆಲವೊಮ್ಮೆ ಭಾವಿಸುತ್ತಾರೆ ಮತ್ತು ತಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸುವ ವಸ್ತುಗಳನ್ನು ಪಡೆಯುವ ಹೋರಾಟದಲ್ಲಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಲೌಕಿಕ ಬಯಕೆಗಳಲ್ಲಿ ಮುಳುಗುವ ಮೂಲಕ ಕರ್ತವ್ಯಲೋಪದಿಂದ ಕೆಳ ಹಂತದ ಜ್ಞಾನವನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ.

ದೈಹಿಕ ಆನಂದವನ್ನು ಪಡೆಯಲು ನಡೆಸುವ ಹೋರಾಟ ನಿರರ್ಥಕವಾದದ್ದು ಎನ್ನವುದನ್ನು ಬುದ್ಧಿವಂತ ಜನರು ಮನಗಾಣುತ್ತಾರೆ. ಲೌಕಿಕ ಪ್ರಪಂಚದಲ್ಲಿರುವ ಪ್ರತಿಯೊಂದು ಕೂಡ ತಾತ್ಕಾಲಿಕವಾದದ್ದು ಎನ್ನುವುದನ್ನು ಮನಗಾಣುತ್ತಾರೆ. ಆನಂದವನ್ನು ಗಳಿಸಲು ನಡೆಸುವ ಪ್ರಯತ್ನಗಳೆಲ್ಲವೂ ದಾಸ್ಯ ಮತ್ತು ದುಃಖದಲ್ಲಿ ಕೊನೆಗೊಳ್ಳುತ್ತವೆ ಎನ್ನುವುದನ್ನು ತಮ್ಮ ಉತ್ತಮ ಜ್ಞಾನದಿಂದ ಅವನು ಅರಿತಿರುತ್ತಾರೆ. ಆದ್ದರಿ೦ದಲೇ ಇತಿಹಾಸದಲ್ಲಿ ಆಗಿಹೋದ ಎಲ್ಲ ಮಹಾನ್ ಚಿಂತಕರೂ ಲೌಕಿಕ ಸುಖದ ಆನಂದಕ್ಕೆ ವಿರುದ್ಧವಾಗಿದ್ದರು.

ಕೇವಲ ಅದಕ್ಕೆ ವಿರುದ್ಧವಾಗಿದ್ದರಷ್ಟೇ ಸಾಲದು. ಲೌಕಿಕ ಸುಖದ ಆನಂದಗಳಿಗೆ ವಿರುದ್ಧವಾಗಿ ವ್ಯಕ್ತಿಯು ಜಗತನ್ನೇ ತ್ಯಜಿಸಬಹುದು, ಆದರೆ ಸಂತಸವನ್ನು ಪಡೆಯುವ ಬಯಕೆ ಸಹಜವಾದದ್ದು. ಆತ್ಮವು ಪರಮಾನಂದಮಯಿಯಾದ ಕೃಷ್ಣನ ಕಾಂತಿಯಂತಹ ಅತಿ ಸೂಕ್ಷ್ಮ ಭಾಗವಾಗಿರುವುದರಿಂದ, ಆತ್ಮದಲ್ಲಿ ಅವನ ಎಲ್ಲ ಗುಣಗಳೂ ಅತಿ ಸೂಕ್ಷ್ಮ ಪ್ರಮಾಣದಲ್ಲಿ ಇರುತ್ತದೆ.

ಆದ್ದರಿಂದ ಆನಂದವನ್ನು ಪಡೆಯುವ ಸಹಜ ಪ್ರವೃತ್ತಿಯನ್ನು ಆತ್ಮದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಆತ್ಮವನ್ನು ಅರ್ಥಮಾಡಿಕೊಳ್ಳುವುದೆಂದರೆ ಆನಂದದ ಬಯಕೆಯನ್ನು ವರ್ಜಿಸುವುದಾಗಲಿ ಅಥವಾ ಮಾಡುವುದಾಗಲಿ ಸಾಧ್ಯವಿಲ್ಲ ಎನ್ನುವುದನ್ನು ತಿಳಿಯಬೇಕು.

ಆದ್ದರಿಂದ ನಿಜವಾದ ಬುದ್ಧಿವಂತ ವ್ಯಕ್ತಿಯು ನೈಜ ಆನಂದದನುಭವವನ್ನು ಹುಡುಕಲು ಪ್ರಯತ್ನಿಸುತ್ತಾನೆ. ಅಂತಹ ವ್ಯಕ್ತಿ ವಿಚಾರಶೀಲನಾಗಿ ಮತ್ತು ಉತ್ತಮ ಸುಯೋಗ ಉಳ್ಳವನಾಗಿದ್ದಾನೆ. ಅವನು ನಿಜವಾದ ಆಧ್ಯಾತ್ಮಿಕ ಗುರುವಿನ ಸಂಪರ್ಕವನ್ನು ಪಡೆಯುತ್ತಾನೆ. ಅಂತಹ ಗುರುವಿನ ಕಾರುಣ್ಯದ ಮೂಲಕ ನಿಜವಾದ ಆನಂದ ಯಾವುದು ಎಂದು ತಿಳಿದುಕೊಳ್ಳುತ್ತಾನೆ. ಆಧ್ಯಾತ್ಮಿಕ ಗುರುವಿನ ಮಾರ್ಗದರ್ಶನದ ಮೂಲಕ ಭಗವಂತನೊಂದಿಗೆ ದೀರ್ಘ ಕಾಲದ ಸಂಬಂಧವನ್ನು ಪುನರ್ ಸ್ಥಾಪಿಸುವ ಅವಕಾಶ ಪಡೆದುಕೊಳ್ಳುತ್ತಾನೆ.

ಆತ್ಮದಲ್ಲಿ ಸುಪ್ತವಾಗಿರುವ ಭಗವತ್ಪ್ರೇಮವನ್ನು ಜಾಗೃತಿಗೊಳಿಸುವುದು ಅನಿವಾರ್ಯ. ಏಕೆಂದರೆ, ಆತ್ಮವು ಭಗವಂತನ ಕಾಂತಿಯಂತಹ ಅತಿ ಸೂಕ್ಷ್ಮ ಭಾಗವಾಗಿದ್ದು ಅವನಲ್ಲಿ ಒಂದಾಗುವವರೆಗೂ ಪೂರ್ಣ ತೃಪ್ತಿ ಹೊಂದುವುದಿಲ್ಲ. ವೈದಿಕ ಸಾಹಿತ್ಯದ ಕೇಂದ್ರ ಸಂದೇಶವಿದು.

ಲೌಕಿಕ ವಿಷಯಗಳ ಆನಂದವನ್ನು ನಾವು ಪಡೆಯುವುದೇ ಆದಲ್ಲಿ, ನಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ವೈಯಕ್ತಿಕ ಪ್ರಯತ್ನಗಳನ್ನು ಮಾಡುವ ಬದಲು ಭಕ್ತಿಸೇವೆ ಮಾಡುತ್ತಾ ಮತ್ತು ದೇವರನ್ನು ಪ್ರಾರ್ಥಿಸುವ ಮೂಲಕ ಆ ಬಯಕೆಗಳನ್ನು ಈಡೇರಿಸಿಕೊಳ್ಳಬಹುದು ಎಂದು ವೈದಿಕ ಸಾಹಿತ್ಯವು ಸಲಹೆ ಮಾಡುತ್ತದೆ.

ಇದು ಶುದ್ಧ ಗುಣಮಟ್ಟದ ಪ್ರೇಮ ಭಕ್ತಿಯಲ್ಲ, ಆದರೂ ಇದು ಕನಿಷ್ಠ ಪಕ್ಷ ಭಗವಂತನನ್ನು ದೇವೋತ್ತಮ ಒಡೆಯ ಎನ್ನುವುದನ್ನು ಒಪ್ಪಿಕೊಂಡಂತೆ. ಸ್ವಾಭಾವಿಕವಾಗಿ ಯಾರು ಈ ಜಾಗೃತಿಯನ್ನು ಬೆಳೆಸಿಕೊಳ್ಳುತ್ತಾರೆ ಅಂತಹವರು ನಿಜವಾದ ಒಡೆಯನಿಗೆ ಎಲ್ಲವನ್ನು ಸಮರ್ಪಿಸುವುದನ್ನು ಮನಗಾಣುತ್ತಾರೆ. ಅಂತಹ ಸಮರ್ಪಣೆಯೇ ಭಗವಂತನ ಭಕ್ತಿಸೇವೆಯ ಆರಂಭ.

ಭಕ್ತಿ ಎನ್ನುವ ಪದವು ಉತ್ಕಟವಾದ, ಭಾವ ಸಮಾಧಿಯ ಒಲವು ಎಂದು ಸೂಚಿಸುತ್ತದೆ ಅತ್ಯಂತ ಬೆಲೆ ಬಾಳುವಂತಹದ್ದು ಅಥವಾ ಸುಂದರವಾದದ್ದೆಂದು ನಾವು ಪರಿಗಣಿಸುವ ವಸ್ತುಗಳನ್ನು ಭಗವಂತನಿಗೆ ಸಮರ್ಪಿಸುವ ಮೂಲಕ ನಾವು ಆ ಪ್ರೀತಿಯನ್ನು ಅನುಭವಿಸುತ್ತೇವೆ.

ಯುವ ಪ್ರೇಮಿಗಳ ಉತ್ಕಟವಾದ ಪ್ರೇಮವನ್ನು ನಾವು ನೋಡಿದ್ದೇವೆ. ಆದರೆ, ಭಗವಂತನಿಗಾಗಿ ನಮ್ಮ ಒಲವು ಅಷ್ಟು ಗಾಢತೆಯನ್ನು ಪಡೆಯುವುದಾದರೂ ಹೇಗೆ? ಆದರೂ, ಗಂಡು- ಹೆಣ್ಣಿನ ಪ್ರೀತಿಯು ವ್ಯಕ್ತಿಯ ಆತ್ಮವು ಭಗವಂತನಿಗಾಗಿ ತೋರಿಸುವ ನಿಜವಾದ ಪ್ರೀತಿಯ ವಿಕೃತ ಬಿಂಬ.

ಲೌಕಿಕ ಸ್ವಭಾವ ಎನ್ನುವುದೇ ಆಧ್ಯಾತ್ಮಿಕ ಸತ್ಯತೆಯ ವಿಕೃತ ಬಿಂಬ. ಇದು ಭ್ರಮೆಯಿಂದ ಕೂಡಿದ ಕನಸಿನಂತೆ, ಒಂದೇ ಒಂದು ವ್ಯತ್ಯಾಸವೆಂದರೆ ಕನಸು ವೈಯಕ್ತಿಕವಾದದ್ದಾರೆ ಈ ಸ್ವಪ್ನವನ್ನು ಭೌತಿಕ ಸತ್ಯತೆ ಎನ್ನುತ್ತಾರೆ. ಇದು ಸಾಮುದಾಯಿಕವಾದದ್ದು. ಇದರಾಚೆಗಿನ ಸತ್ಯತೆಯೇ ಪರಮ ಸತ್ಯತೆ.

ಇದರ ಆಧಾರದ ಮೇಲೆಯೇ ವಿಕೃತ ಬಿಂಬ ನಿಂತಿರುವುದು. ನಮ್ಮ ಪ್ರಜ್ಞೆಯು ಅರಳಿದಾಗ ನಾವು ಅತಿಶಯದಿಂದ ಲೌಕಿಕ ದೇಹದ ಬಂಧನಕ್ಕೊಳಗಾಗುವ ಮೂಲಕ ಭಗವಂತನೊಂದಿಗೆ ಪ್ರೇಮ ಸಂಬಂಧ ಬೆಳೆಸಿಕೊಳ್ಳಬಹುದಾಗಿದೆ. ಆ ಬಳಿಕ ನಾವು ಆ ಸತ್ಯತೆಯನ್ನು ಪ್ರವೇಶಿಸುವ ಅರ್ಹತೆಯನ್ನು ಗಳಿಸುತ್ತೇವೆ. ಅಲ್ಲಿ ನಿಜವಾದ ಆನಂದವು ಸದಾ ಕಾಣಿಸುತ್ತಿರುತ್ತದೆ.

ಈ ಲೌಕಿಕ ಪ್ರಪಂಚದಲ್ಲಿ ನಿಜವಾದ ಸಂತೋಷ ಇಲ್ಲ. ಸಂತೋಷ ಇಲ್ಲೇ ಇರುವಂತೆ ಕಾಣುತ್ತಿದ್ದರೂ ಅದಕ್ಕಾಗಿ ನಾವು ಅದರ ಬೆನ್ನು ಹತ್ತಿದಾಗ ಅದು ನಮ್ಮಿಂದ ದೂರ ಓಡಿ ಹೋಗುತ್ತದೆ. ಆದ್ದರಿಂದಲೇ ಪ್ರತಿಯೊಬ್ಬನೂ ಕೂಡ ಅಧಿಕವಾಗಿ ಇಲ್ಲವೇ ಕನಿಷ್ಠವಾಗಿ ಬೇಗ ಇಲ್ಲವೇ ನಿಧಾನವಾಗಿ ಲೌಕಿಕ ಬದುಕಿನಲ್ಲಿ ಹತಾಶೆ ಅನುಭವಿಸುತ್ತಾನೆ. ನಮ್ಮ ಮನದಾಸೆಯನ್ನು ನಾವು ಪಡೆಯುವುದಿಲ್ಲ. ಈ ಹತಾಶೆಗೆ ಮುಖ್ಯ ಕಾರಣ ನಾವು ಲೌಕಿಕರಾಗದೆ ಆಧ್ಯಾತ್ಮಗಳಾಗಿರುವುದು.

ನಮ್ಮ ಸಂತೋಷದ ಹಂಬಲಿಕೆಯು ಕೂಡ ಆಧ್ಯಾತ್ಮಿಕವಾದದ್ದು. ಆದರೆ ನಮ್ಮ ಆಧ್ಯಾತ್ಮಿಕ ಸ್ವಭಾವವನ್ನು ಮರೆತವರಾಗಿ ಲೌಕಿಕ ಜಗತ್ತಿನೊಳಗೇ ಸಂತೋಷಕ್ಕಾಗಿ ವ್ಯರ್ಥ ಹುಡುಕಾಟವನ್ನು ಮಾಡುತ್ತೇವೆ. ಐಹಿಕ ದೇಹದೊಂದಿಗೆ ಗುರುತಿಸಿಕೊಳ್ಳುವ ನಾವು ವಿಷಯಗಳ ಆನಂದವನ್ನು ಪಡೆಯಲು ಪ್ರಯತ್ನಿಸುತ್ತೇವೆ.

ಆದರೆ ಅದು ಸಾಧ್ಯವಾಗುವುದಿಲ್ಲ. ಸಹಜವಾಗಿಯೇ ನಾವು ಹತಾಶೆಗೆ ಒಳಗಾಗುತ್ತೇವೆ. ಮೀನನ್ನು ನೀರಿನಿಂದ ಹೊರಗೆ ತೆಗೆದು ಭೂಮಿಯ ಮೇಲಿನ ಎಲ್ಲ ಅನುಕೂಲಗಳನ್ನು ಅದಕ್ಕೆ ನೀಡಿದರೆ ಅದು ಸಂತಸದಿಂದಿರುವುದೇ? ಅದೇ ರೀತಿ ನಾವೂ ಕೂಡ ಆಧ್ಯಾತ್ಮಿಕ ಪ್ರಕೃತಿಯಿಂದ ಹೊರಗಿರಲು ಸಾಧ್ಯವಿಲ್ಲ. ಲೌಕಿಕ ಸಂತಸದಿಂದ ನಾವು ನಿಜವಾದ ಆನಂದವನ್ನು ಹೊಂದಲು ಸಾಧ್ಯವಿಲ್ಲ.

ಆಧುನಿಕ ಯುಗದಲ್ಲಿ ನಾವು ಸಾಕಷ್ಟು ವೈಜ್ಞಾನಿಕ ಪ್ರಗತಿ ಸಾಧಿಸಿದ್ದೇವೆ. ಅಂತಿಮವಾಗಿ ಅದು ಜನರನ್ನು ಇನ್ನಷ್ಟು ಗೊಂದಲಗೊಳಿಸಿದೆ. ನಮ್ಮ ಆನಂದದ ಅನ್ವೇಷಣೆಗೆ ವಿಜ್ಞಾನ ಉತ್ತರಗಳನ್ನು ಒದಗಿಸುತ್ತದೆ ಎಂಬ ಹುಸಿ ನಿರೀಕ್ಷೆ ಮನುಷ್ಯರನ್ನು ನಿರೀಶ್ವರ ವಾದಿಗಳನ್ನಾಗಿ ಮಾಡಿದೆ.

ಅಂದರೆ ಮನುಷ್ಯರು ಹೆಚ್ಚು ಲೌಕಿಕವಾದಿಗಳಾಗುತ್ತಿದ್ದಾರೆ. ಮೂಲ ಸೌಲಭ್ಯಗಳು, ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ನಡುವೆಯೂ ಆತ್ಮಹತ್ಯೆ, ನರಹತ್ಯೆ, ಅತ್ಯಾಚಾರ, ಗರ್ಭಪಾತ ಮೊದಲಾದ ಅಪರಾಧಿ ಕೃತ್ಯಗಳು ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇವೆಲ್ಲವೂ ಅಸಂತುಷ್ಟ ಸಮಾಜದ ಲಕ್ಷಣಗಳು.

ನಿಜವಾದ ಆನಂದವನ್ನು ಅನುಭವಿಸಬಯಸುವವನು ಆಧ್ಯಾತ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಅದು ಭಗವತ್ಪ್ರೇಮದ ಉಚ್ಫ್ರಾಯವನ್ನು ತಲಪುತ್ತದೆ. ಆದ್ದರಿಂದಲೇ ಪ್ರತಿಯೊಂದು ಧರ್ಮವೂ ನಮಗೆ ಪ್ರಾರ್ಥನೆಯನ್ನು ಬೋಧಿಸುತ್ತದೆ. ಶ್ರದ್ಧಾಪೂರ್ವಕವಾಗಿ ಭಗವಂತನ ನಾಮಸ್ಮರಣೆ ಮಾಡುವ ಮೂಲಕ ನಾವು ಅವನ ದಿವ್ಯ ಸ್ವರೂಪದ ಜ್ಞಾನವನ್ನು ಹೊಂದುತ್ತೇವೆ.

ಭಗವಂತನ ದಿವ್ಯ ನಾಮ ಸ್ಮರಣೆ ಮಾಡುವಂತೆ ಪ್ರತಿಯೊಂದು ಧರ್ಮಗ್ರಂಥವೂ ಸೂಚಿಸುತ್ತದೆ. ಆ ಆಧ್ಯಾತ್ಮಿಕ ಶಬ್ದವು ಒಳತೂರಿ ವಿಷಯಗಳ ಮುಸುಕು ತೆರೆದು ಆಧ್ಯಾತ್ಮಿಕತನವನ್ನು ನೋಡಲು ಅವಕಾಶ ಮಾಡಿಕೊಡುತ್ತದೆ. ಆ ಮೂಲಕ ಪರಮ ಸತ್ಯವನ್ನು ಮುಖಾಮುಖಿಯಾಗಿ ನೋಡಬಹುದು. ಇದೇ ಅತ್ಯುನ್ನತವಾದ ಪ್ರಜ್ಞೆಯ ಹಂತ. ಇಲ್ಲಿ ಪ್ರಜ್ಞೆಯು ಪೂರ್ಣ ಪ್ರಮಾಣದಲ್ಲಿ ಅರಳಿರುತ್ತದೆ. ಮನುಷ್ಯನ ಅಂತಿಮವಾದ ವಿಕಾಸ ಇದೇ. ಇಂದಿಗೆ ಮಾತ್ರವಲ್ಲ ಎಂದೆಂದಿಗೂ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi