ಆತ್ಮ ನಿವೇದನ

ನವ ವಿಧ ಭಕ್ತಿ – 9

– ಶ್ರೀಮತಿ ಶಶಿಕಲಾ ಶ್ರೀಧರ

ಸ್ವರೂಪ

ನವವಿಧ ಭಕ್ತಿಯಲ್ಲಿ ಒಂಬತ್ತನೆಯ ಹಾಗೂ ಕೊನೆಯ ಭಕ್ತಿಸೇವಾ ರೂಪವೇ ‘ಆತ್ಮನಿವೇದನʼ ಎಂಬ ಪರಿಪಕ್ವ ಭಕ್ತಿ. ಭಕ್ತಿಯುಕ್ತವಾದ ಜ್ಞಾನ ಹಾಗೂ ಜ್ಞಾನಯುಕ್ತವಾದ ಭಕ್ತಿಯೇ ಪರಿಪಕ್ವ ಭಕ್ತಿ. ಇದು ಸರ್ವಸಮರ್ಪಣ ಭಾವ, ಸಂಪೂರ್ಣ ಶರಣಾಗತಿ. ಯಾವುದರಲ್ಲೂ ತನ್ನತನವಿಲ್ಲದೆ ಭಗವಂತ ಕರುಣಿಸಿದುದನ್ನು ಅವನಿಗೇ ಅರ್ಪಿಸಿ ತಾನು ಋಣಮುಕ್ತನಾಗಿ ಸ್ವರೂಪಾನಂದದಲ್ಲಿ ನಿರತನಾಗಬೇಕು.

ಆತ್ಮನಿವೇದನೆ ಮಾಡಿಕೊಳ್ಳುವ ಭಕ್ತನ ದಿವ್ಯಚರ್ಯೆಗಳೆಲ್ಲಾ ಭಗವಂತನ ಪೂಜೆಯಾಗುತ್ತದೆ. ಇಂದ್ರಿಯಗಳೆಲ್ಲವನ್ನು ಭಗವದ್ವಿಷಯಕವಾಗಿಸಿಕೊಳ್ಳಬೇಕು. ”ಎಲ್ಲವೂ ನಿನ್ನಿಚ್ಛೆ ನನ್ನದೆಂಬುದೇನೂ ಇಲ್ಲ” ಎಂಬ ಗಾಢ ಭಕ್ತಿಯಿಂದ ತನ್ನನ್ನು ಸಂಪೂರ್ಣವಾಗಿ ಭಗವಂತನಿಗೆ ಅರ್ಪಿಸಿಕೊಳ್ಳಬೇಕು. ನಾನು ಜೀವ ಪರತಂತ್ರ; ಶ್ರೀಹರಿ ಸರ್ವತಂತ್ರ ಸ್ವತಂತ್ರ, ನಾನು ಸಂಪೂರ್ಣವಾಗಿ ಅವನ ಅಧೀನ ಎಂದು ತಿಳಿದು ನಿರಾತಂಕದಿಂದಿರುವುದೇ ‘ಆತ್ಮನಿವೇದನ’ ಭಕ್ತಿ.

ಪುರಾಣಕಥೆಯಲ್ಲಿ ಆತ್ಮನಿವೇದನ ಭಕ್ತಿ : ಬಲಿ ಚಕ್ರವರ್ತಿ

ಬಲಿಚಕ್ರವರ್ತಿ ಪ್ರಹ್ಲಾದನ ಮಗನಾದ ವಿರೋಚನನ ಪುತ್ರ. ಜನ್ಮತಃ ವೈಷ್ಣವ. ಆದರೆ ದುಸ್ಸಂಗದಿಂದ ದೇವ ವಿರೋಧಿಯಾಗುತ್ತಾನೆ. ಆದರೂ ಹಿಂದೆ ನರಸಿಂಹದೇವರು ಪ್ರಹ್ಲಾದನಿಗೆ ಅವನ ಕುಲದಲ್ಲಿ ಹುಟ್ಟುವವರು ಯಾವ ಅಪರಾಧ ಮಾಡಿದರೂ ಕ್ಷಮಿಸುವುದಾಗಿ ವಚನವಿತ್ತಿದ್ದುದರಿಂದ ತನ್ನ ಮಾತಿನ ಪ್ರಕಾರ ಬಲಿಚಕ್ರವರ್ತಿಯನ್ನು ಅನುಗ್ರಹಿಸಿ ತನ್ನ ಭಕ್ತವಾತ್ಸಲ್ಯವನ್ನು ಪ್ರಕಟಪಡಿಸುತ್ತಾನೆ.

ದೇವತೆಗಳೂ ದಾನವರೂ ಮಾಡಿದ ಸಮುದ್ರ ಮಂಥನದಲ್ಲಿ ಉದ್ಭವಿಸಿದ ಅಮೃತ ಶ್ರೀಹರಿಯ ಮಾಯೆಯಿಂದ ದೇವತೆಗಳಿಗೆ ಮಾತ್ರ ದಕ್ಕಿತು. ಕೋಪಗೊಂಡ ರಾಕ್ಷಸರು ದೇವತೆಗಳ ಮೇಲೆ ಯುದ್ಧ ಹೂಡಿದರು. ರಾಕ್ಷಸ ರಾಜನಾದ ಬಲೀಂದ್ರನಿಗೆ ಕೋಪ ಕೆರಳಿ ದೇವತೆಗಳೊಡನೆ ಯುದ್ಧ ಮಾಡಿ ಅನಂತರ ನೇರವಾಗಿ ದೇವೇಂದ್ರನ ಬಳಿಗೆ ಹೋಗಿ ಯುದ್ಧ ಮಾಡಿದ.

ದೇವೇಂದ್ರನು ಬಲಿಯನ್ನು ಯುದ್ಧದಲ್ಲಿ ಹೊಡೆದು ನೆಲಕ್ಕುರುಳಿಸಿದ. ರಾಕ್ಷಸರು ಬಲೀಂದ್ರನ ದೇಹವನ್ನು ಹೊತ್ತು ತಂದು ಕುಲಗುರುಗಳಾದ ಶುಕ್ರಾಚಾರ್ಯರಿಗೆ ಒಪ್ಪಿಸಿದರು. ಶುಕ್ರಾಚಾರ್ಯರು ಸತ್ತ ಬಲೀಂದ್ರನನ್ನು ತಮ್ಮ ಸಂಜೀವಿನಿ ವಿದ್ಯೆಯಿಂದ ಮತ್ತೆ ಬದುಕಿಸಿದರು. ಅನಂತರ ಬಲೀಂದ್ರನಿಂದ ‘ವಿಶ್ವಜಿತ್’ ಯಾಗವನ್ನು ಮಾಡಿಸಿದರು.

ಯಾಗ ಫಲವಾಗಿ ಒಂದು ಸುಸಜ್ಜಿತ ಚಿನ್ನದ ರಥ, ಬ್ರಹ್ಮದೇವರಿಂದ ಬಾಡದ ಕಮಲದ ಮಾಲೆ, ಗುರುಗಳಿತ್ತ ದಿವ್ಯವಾದ ಶಂಖ ಇವುಗಳನ್ನು ಪಡೆದು ಮತ್ತೆ ದೇವಲೋಕಕ್ಕೆ ಪ್ರವೇಶಿಸಿದನು. ಇವನ ಪರಾಕ್ರಮಕ್ಕೆ ಹೆದರಿದ ದೇವತೆಗಳು ಪಲಾಯನಗೈದು ಅಡಗಿಕೊಂಡರು. ಬಲೀಂದ್ರನಾದರೋ ಸ್ವರ್ಗಲೋಕದ ಅಧಿಪತಿಯಾಗಿ ಗುರು ಶುಕ್ರಾಚಾರ್ಯರ ಸಹಾಯದಿಂದ ನೂರು ಯಾಗಗಳನ್ನು ಮಾಡಿದನು. ಅವನ ಕೀರ್ತಿ ಮೂರು ಲೋಕದಲ್ಲೂ ಹರಡಿತು.

ಇತ್ತ ದೇವತೆಗಳ ತಾಯಿಯಾದ ಅದಿತಿ ಬಲೀಂದ್ರನಿಂದ ತನ್ನ ಮಕ್ಕಳಿಗಾದ ಕಷ್ಟವನ್ನು ತಡೆಯಲಾಗದೆ ಶ್ರೀಹರಿಯನ್ನು ಪ್ರಾರ್ಥಿಸಿದಾಗ ಆ ದೇವದೇವನು ಕಶ್ಯಪ ಅದಿತಿಯಾಗಿ ತಾನೇ ಪುತ್ರನಾಗಿ ಜನಿಸಿ ದೇವತೆಗಳನ್ನು ರಕ್ಷಿಸುವುದಾಗಿ ಅಭಯವಿತ್ತನು. ಅದರಂತೆ ಕಶ್ಯಪ- ಅದಿತಿಯರ ಮಗನಾಗಿ ವಾಮನಾವತಾರವಾಯಿತು.

ಕಶ್ಯಪರ ಆಶ್ರಮದಲ್ಲಿ ವಾಮನರೂಪೀ ಶ್ರೀಹರಿ ಬ್ರಹ್ಮತೇಜಸ್ಸಿನಿಂದ ತೊಳಗಿ ಬೆಳೆಯುತ್ತಿದ್ದಂತೆ ಇತ್ತ ಬಲಿಚಕ್ರವರ್ತಿ ಶುಕ್ರಾಚಾರ್ಯರ ನೇತೃತ್ವದಲ್ಲಿ ಅಶ್ವಮೇಧ ಯಾಗವನ್ನು ಕೈಗೊಂಡನು. ಇದನ್ನು ಕೇಳಿದ ವಾಮನಮೂರ್ತಿ ಅವನ ಯಜ್ಞಶಾಲೆಗೆ ಬಂದು ನಿಂತನು. ಒಂದು ಕೈಲಿ ಕೊಡೆ, ಮತ್ತೊಂದು ಕೈಯಲ್ಲಿ ಕಮಂಡಲು, ಕೊರಳಲ್ಲಿ ಜನಿವಾರ, ಸೊಂಟದಲ್ಲಿ ಮೌಂಜಿ, ಮೈಮೇಲೆ ಉತ್ತರೀಯ ಇವನ್ನು ಧರಿಸಿ ಸೂರ್ಯನಂತೆ ತೇಜಸ್ಸಿನಿಂದ ಬೆಳಗುತ್ತಿದ್ದ ಈ ಬಾಲವಟುವನ್ನು ಕಾಣುತ್ತಲೇ ಯಜ್ಞಶಾಲೆಯಲ್ಲಿದ್ದವರೆಲ್ಲರೂ ತಮಗರಿವಿಲ್ಲದೆಯೇ ಎದ್ದು ನಿಂತರು.

ಬಲಿ ಚಕ್ರವರ್ತಿಗೂ ಈ ಬಾಲಕನಲ್ಲಿ ಅಪಾರವಾದ ಭಕ್ತಿ ಗೌರವಗಳು ಮೂಡಿದವು. ಆ ಬಾಲವಟುವಿನ ಪಾದಗಳನ್ನು ತೊಳೆದು ತನ್ನಿಂದ ಏನನ್ನು ಬೇಕಾದರೂ ಕೇಳಿ ಪಡೆಯಬಹುದೆಂದು ಹೇಳಿದಾಗ ವಾಮನನು ಅವನ ಹೆಜ್ಜೆಯಲ್ಲಿ ಮೂರು ಹೆಜ್ಜೆಯಾಗುವಷ್ಟು ಭೂಮಿಯನ್ನು ದಾನವಾಗಿ ನೀಡಿದರೆ ಸಾಕೆಂದು ಹೇಳಿದನು.

ಬಲಿಚಕ್ರವರ್ತಿ ಒಡನೆಯೇ ಸಮ್ಮತಿಸಿ ಧಾರೆಯೆರೆಯಲು ಪಾತ್ರೆಯನ್ನು ತೆಗೆದುಕೊಂಡಾಗ ಶುಕ್ರಾಚಾರ್ಯರು ಅವನನ್ನು ತಡೆದು “ಬಂದಿರುವ ವ್ಯಕ್ತಿ ಸಾಮಾನ್ಯನಲ್ಲ, ಅವನು ಸಾಕ್ಷಾತ್ ವಿಷ್ಣು ಇದರಿ೦ದ ನಿನಗೇನೋ ಅಪಾಯ ಸಂಭವಿಸುವಂತಿದೆ.

ನೀನು ದಾನಕಾರ್ಯ ನಿಲ್ಲಿಸು” ಎಂದಾಗ ದಾನಗುಣವನ್ನೇ ಹುಟ್ಟುಗುಣವಾಗಿ ಹೊಂದಿದ್ದ ಬಲಿಚಕ್ರವರ್ತಿ ಇದಕ್ಕೆ ಸಮ್ಮತಿಸದೆ ಬಾಲವಟುವಿಗೆ ಧಾರೆಯೆರೆದಾಗ ಆ ವಾಮನ ಮೂರ್ತಿ ಒಡನೆಯೇ ತ್ರಿವಿಕ್ರಮನಾಗಿ ಬೆಳೆದು ಒಂದು ಹೆಜ್ಜೆಯಿಂದ ಇಡೀ ಭೂಮಂಡಲವನ್ನೂ, ಎರಡನೆಯ ಹೆಜ್ಜೆಯಿಂದ ನಭೋಮಂಡಲವನ್ನು ಅಳೆದು ಮೂರನೆಯ ಹೆಜ್ಜೆಯನ್ನು ಎಲ್ಲಿಡಬೇಕೆಂದು ಕೇಳಿದಾಗ ಬಲೀಂದ್ರ ಅದನ್ನು ತನ್ನ ತಲೆಯ ಮೇಲಿಡಬೇಕೆಂದು ಪ್ರಾರ್ಥಿಸಿದನು.

ಸಂಪತ್ತಿನಿಂದಲೂ ಶಕ್ತಿಯಿಂದಲೂ ಹೆಚ್ಚಿದ್ದ ಅವನ ಅಹಂಕಾರವನ್ನಿಳಿಸಲು ಶ್ರೀಹರಿಯು ಅವನ ತಲೆಯ ಮೇಲೆ ಮೂರನೆಯ ಹೆಜ್ಜೆಯಿಟ್ಟು ಅವನನ್ನು ಪಾತಾಳಕ್ಕೆ ಕಳುಹಿಸಿದನು. ಆದರೆ ಅವನ ಭಕ್ತಿ ಸತ್ಯವ್ರತಗಳಿಗೆ ಮೆಚ್ಚಿ ಅವನಿಗೆ ಸಾಲೋಕ್ಯವನ್ನನುಗ್ರಹಿಸಿ, ಸುತಲಲೋಕದ ಸ್ವಾಮಿಯನ್ನಾಗಿ ಮಾಡಿ ಅವನನ್ನು ಕಾಣಲು ತಾನೇ ಬರುವುದಾಗಿ ವರವನ್ನಿತ್ತು ಅನುಗ್ರಹಿಸಿದನು.

ಸಂಪೂರ್ಣವಾಗಿ ತನ್ನನ್ನು ಅತ್ಮಸಮರ್ಪಣೆ ಮಾಡಿಕೊಂಡ ಬಲಿ ಚಕ್ರವರ್ತಿ ಶ್ರೀಹರಿಯ ಕೃಪೆಗೆ ಪಾತ್ರನಾಗಿ ಧನ್ಯನಾದ!

ಶ್ರೀಮದ್ಭಾಗವತದಲ್ಲಿ “ಆತ್ಮನಿವೇದನ” ಭಕ್ತಿ

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾವಾ ಪ್ರಕೃತೇಃ ಸ್ವಭಾವ |  

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ ||

(ಭಾಗವತ – 11.2.36)

ಭಾಗವತ ಧರ್ಮದ ಅನುಯಾಯಿಯು ತಾನು ದೇಹದಿಂದಾಗಲೀ ಮಾತಿನಿ೦ದಾಗಲೀ ಮನಸ್ಸಿನಿಂದಾಗಲೀ ಇಂದ್ರಿಯಗಳಿಂದಾಗಲೀ ಬುದ್ಧಿಯೇ ಮುಂತಾದವುಗಳಿಂದಾಗಲೀ ಏನೇನು ಮಾಡುತ್ತಾನೆಯೋ ಅವೆಲ್ಲವನ್ನು ಪರತತ್ತ್ವವಾದ ನಾರಾಯಣನಿಗೆ ಸಮರ್ಪಿಸಿಬಿಡಬೇಕು.

ಭಗವಂತನಿಂದ ವಿಮುಖನಾಗಬಾರದು. ವಿಧಿಪೂರ್ವಕವಾಗಿ ಮಾಡಿದ ಕರ್ಮಗಳನ್ನಲ್ಲದೆ ಸ್ವಭಾವವನ್ನು ಅನುಸರಿಸಿ ಬ೦ದ ಲೌಕಿಕ ಕರ್ಮಗಳನ್ನು ಕೂಡ ನಾರಾಯಣನಿಗೆ ಸಮರ್ಪಿಸಿ ಬಿಡಬೇಕು ಎಂಬುದಾಗಿ ಯೋಗೀಶ್ವರರಲ್ಲಿ ಒಬ್ಬರಾದ ಕವಿ ಎಂಬ ಋಷಿ ವಿದೇಹರಾಜನಿಗೆ ಹಿಂದೆ ಹೇಳಿದ್ದರೆಂದು ಶ್ರೀಮದ್ಭಾಗವತದಲ್ಲಿ ನಾರದ ಮಹರ್ಷಿಗಳು ವಸುದೇವನಿಗೆ ಹೇಳುತ್ತಾರೆ.

ದಾಸರ ನುಡಿಗಳಲ್ಲಿ ಆತ್ಮನಿವೇದನ ಭಕ್ತಿ

ಸರ್ವಸಮರ್ಪಣಭಾವ ಹೇಗಿರಬೇಕು? ಇದಕ್ಕುತ್ತರವಾಗಿ ದಾಸವರ ಪುರಂದರದಾಸರು ಹೀಗೆ ಹೇಳುತ್ತಾರೆ:

ತನುವೆಂಬ ತಟ್ಟೆಯಲಿ ಮನವೆಂಬ ಸೊಡರನು ಇರಿಸಿ

ಘನಶಾಂತಿಯೆಂಬ ಆಜ್ಯವನು ತುಂಬಿ

ಆನಂದವೆಂತೆಂಬ ಜ್ಯೋತಿಯನು ಹಚ್ಚಿಟ್ಟು

ಚಿನುಮಯ ಹರಿಗೆ ಆರತಿಯೆತ್ತಿರೇ

ಏಕೋಭಾವ ಏಕೋಭಕ್ತಿ ಏಕನಿಷ್ಠೆಯಿಂದಲಿ

ಬೇಕಾದಂಥ ಮುಕುತಿಯ ನೀಡುವ ಪುರಂದರವಿಠಲ

ಇಂತಹ ಏಕನಿಷ್ಠೆಯಿಂದ ಭಗವಂತನಲ್ಲಿ ಶರಣಾದವರನ್ನು ಅವನು ರಕ್ಷಿಸಿಯೇ ತೀರುತ್ತಾನೆಂಬ ವಿಶ್ವಾಸದಿಂದ,

ಎಂದಿಗಾದರೂ ನಿನ್ನ ಪಾದಾರವಿಂದವೇ ಗತಿಯೆಂದು ನಂಬಿದೆನೋ

ಬಂಧು ಬಳಗವ ಬಿಟ್ಟು ಬಂದೆ ನಿನ್ನ ಮನೆಗಿಂದು

ಮಂದರ ಧರ ಗೋವಿಂದ ಪುರಂದರ ವಿಠಲನೇ

ನೀ ಬಂಧು

ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ

ಆಪನ್ನ ರಕ್ಷಕನೆ ಪರಿಪಾಲಿಸೊ

ಇನ್ನು ಪನ್ನಂಗಶಯನ ಶ್ರೀ ಪುರಂದರ

ವಿಠಲನೆ ಬಂಧು

ಮತ್ತು

ತಮ್ಮ ನವವಿಧ ಭಕ್ತಿ ಸುಳಾದಿಯಲ್ಲಿ ಶಬ್ದಸರ್ಶ ರೂಪ ರಸ ಗಂಧಾದಿ ತನ್ಮಾತ್ರೆಗಳಲ್ಲಿ ಭಗವಂತನ ಮಹಿಮೆಯನ್ನು ತಿಳಿದು ಹಾಗೇ ಪೃಥಿವ್ಯಾದಿ ಪಂಚ ಭೂತಗಳಲ್ಲೂ ಶ್ರೀಹರಿಯ ಮಹಿಮೆಯನ್ನು ಮನಗಾಣುತ್ತಾ

ಹರಿಗೆ ತನ್ನಾತ್ಮ ನಿವೇದನದಿಂದ

ಉರಿಜಲ ಮಣ್ಣು ಬಯಲು ಗಾಳಿ ಹೊಂದ

ಸ್ವರೂಪವ ಹರಿಯಂಘ್ರಿಗರ್ಪಿಸಿ ನಿಂದ

ಹರುಷವನುಂಬ ಉನ್ನಾಹಗಳಿಂದ

ಪುರಂದರ ವಿಠಲರಾಯನ ದಯದಿಂದ

ಸುರ ಋಷಿ ನರರಿಗೆಲ್ಲವೂ ನಿಜಾನಂದ

ಎಂದು ವರ್ಣಿಸುತ್ತಾರೆ.

ಭಗವದ್ಗೀತೆಯಲ್ಲಿ ‘ಆತ್ಮನಿವೇದನ’ ಭಕ್ತಿ

ಮನ್ಮನಾ ಭವ ಮದ್ಭಕ್ತೋ

ಮದ್ಯಾಜೀ ಮಾಂ ನಮಸ್ಕುರು |

ಮಾಮೇವೈಷ್ಯಸಿ ಯುಕ್ತ್ವೇವಮಾತ್ಮಾನಂ

ಮತ್ಪರಾಯಣಃ ||

(ಭಗವದ್ಗೀತೆ.9.34)

ನನ್ನಲ್ಲಿ ಮನಸ್ಸಿಡು, ನನ್ನ ಭಕ್ತನಾಗು, ನನ್ನನ್ನು ಪೂಜಿಸು, ನನ್ನನ್ನ ನಮಸ್ಕರಿಸು ನನ್ನಲ್ಲಿ ಪರಾಯಣನಾಗಿ ನನ್ನೊಂದಿಗೆ ಆತ್ಮವನ್ನು ಸೇರಿಸು. ನೀನು ನನ್ನನ್ನು ಹೊಂದುತ್ತೀಯೆ.

ಭಗವದ್ಭಕ್ತರಾಗಿ ಭಗವಂತನಲ್ಲೇ ಮನಸ್ಸಿಟ್ಟು ಅವನನ್ನೇ ಪೂಜಿಸಿ ನಮಸ್ಕರಿಸಬೇಕು. ನಮ್ಮ ಮನಸ್ಸಿನಲ್ಲಿ ಅವನಲ್ಲದೆ ಬೇರೆ ಯಾವುದೂ ಇರಕೂಡದು. ಭಗವಂತನ ದಾಸರಾಗಿ ಅವನ ಆಣತಿಯನ್ನು ಪಾಲಿಸುತ್ತಾ ಅವನ ಸೇವೆಯಲ್ಲೇ ನಮ್ಮ ಬಾಳನ್ನು ಸವೆಸಬೇಕು. ನಾವು ಭಗವಂತನಿಗಾಗಿ ಭಗವಂತನನ್ನು ಪೂಜಿಸಬೇಕು. ನಮಗೆ ಆ ಸರ್ವೇಶ್ವರ ಬೇಕು. ಅವನ ಐಶ್ವರ್ಯ ಬೇಡ. ಆಗ ಮಾತ್ರ ಕೊನೆಗಾಲದಲ್ಲೂ ಅವನ ಸ್ಮರಣೆ ಬರುವುದು ತನ್ನತನವನ್ನು ಕಳೆದುಕೊಂಡು ಅವನಲ್ಲೇ ಒಂದಾಗುವ ಭಾಗ್ಯ ನಮ್ಮದಾಗುವುದು.

ಆತ್ಮನಿವೇದನ ಭಕ್ತಿ’ ಗೊಂದು ದೃಷ್ಟಾಂತ

ಒಮ್ಮೆ ಶ್ರೀಕೃಷ್ಣಾರ್ಜುನರು ತಿರುಗಾಡುತ್ತಾ ಬರುತ್ತಿರುವಾಗ ಕೃಷ್ಣ ಅರ್ಜುನನಿಗೆ ‘ಭಾವ! ಆ ಮರದ ಮೇಲೆ ಒಂದು ನವಿಲು ಕುಳಿತಿದೆ ನೋಡು’ ಎಂದ. ಅರ್ಜುನ ಅಲ್ಲಿ ನೋಡದೆಯೇ ‘ಹೌದು ಕೃಷ್ಣನವಿಲು!” ಎಂದ. ಮರುಕ್ಷಣದಲ್ಲೇ ಕೃಷ್ಣ “ಅರ್ಜುನ, ಸರಿಯಾಗಿ ನೋಡು ಅದು ನವಿಲಲ್ಲ ಕೋಳಿ” ಎಂದ.

ಅದಕ್ಕೆ ಅರ್ಜುನ “ಹೌದು ಕೃಷ್ಣ ಅದು ನವಿಲಲ್ಲ ಕೋಳಿ’ ಎಂದ. ಮತ್ತೆ ಶ್ರೀಕೃಷ್ಣ “ಅದು ಕೋಳಿಯಲ್ಲ ಗಿಳಿ” ಎಂದಾಗ, ಅರ್ಜುನ ”ಹೌದು ಕೃಷ್ಣ ಅದು ಗಿಳಿ” ಎಂದ. ಕೃಷ್ಣ ಪುನಃ ”ಅದು ಗಿಳಿಯಲ್ಲ ಗಿಡುಗ” ಎಂದ. ಅದಕ್ಕೆ ಅರ್ಜುನ “ಹೌದು ಹೌದು ಅದು ಗಿಡುಗ” ಎಂದ. ಆಗ ಕೃಷ್ಣ  “ಅರ್ಜುನ, ಸರಿಯಾಗಿ ನೋಡಿ ಹೇಳು. ನಿನಗೆ ಕಣ್ಣಿಲ್ಲವೇ, ಬುದ್ಧಿಯಿಲ್ಲವೇ? ನಾನು ಹೇಳಿದುದಕ್ಕೆಲ್ಲಾ ಹೌದು ಎನ್ನುತ್ತಿರುವೆಯಲ್ಲ?” ಎಂದು ಕೇಳಿದ.

ಆಗ ಅರ್ಜುನ ಕೈ ಮುಗಿದು “ಕೃಷ್ಣ ನಾನು ನಿನ್ನ ಕಣ್ಣಿಂದ ನೋಡುವವನು ನಿನ್ನ ಕಿವಿಯಿಂದ ಕೇಳುವವನು, ನಿನಗೆ ಸರ್ವಸ್ವವನ್ನು ಅರ್ಪಿಸಿರುವೆ, ನಿನ್ನ ಮಹಿಮೆ ನನಗೆ ಗೊತ್ತು ನೀನು ನವಿಲನ್ನು ಕೋಳಿ ಮಾಡಬಲ್ಲೆ ಕೋಳಿಯನ್ನು ಗಿಡುಗವನ್ನಾಗಿಯೂ ಮಾಡಬಲ್ಲೆ. ಆದ್ದರಿಂದ ನೀನು ಹೇಳಿದ್ದೇ ಸರಿ. ನಿನ್ನ ಮತವೇ ನನಗೆ ಸಮ್ಮತ” ಎಂದಾಗ ತನಗೆ ಸರ್ವಸ್ವವನ್ನು ಸಮರ್ಪಿಸಿ ಆತ್ಮನಿವೇದನೆಗೈದ ಅರ್ಜುನನನ್ನು ಕೃಷ್ಣ ಗಾಢವಾಗಿ ಆಲಂಗಿಸಿದ. ಅವನನ್ನು ತನ್ನವನ್ನಾಗಿ ಮಾಡಿ ಪರಮ ಸೌಖ್ಯವನ್ನು ಅನುಗ್ರಹಿಸಿದ.

ಆತ್ಮನಿವೇದನ ಭಕ್ತಿ’ ಮಹಿಮೆ

ಗಾನಯೋಗಿ ತ್ಯಾಗರಾಜರು ತಮ್ಮ ‘ಜಯ ಜಯ ಶ್ರೀ ರಘುರಾಮ’ ಎಂಬ ಕೀರ್ತನೆಯಲ್ಲಿ “ರಾಮ, ನಾನು ನಿನ್ನನ್ನು ಮಾತ್ರ ಬಯಸಿ ಬ೦ದಿರುವಾಗ ನನಗೆ ಪರಿತಾಪವನ್ನುಂಟು ಮಾಡಬೇಡ. ನನ್ನನ್ನು ನೋಡಿಕೊಳ್ಳಲು ನೀನಲ್ಲದೆ ಬೇರೆ ಯಾರೂ ಇಲ್ಲ. ನನ್ನ ಸರ್ವಸ್ವವನ್ನೂ ನಿನಗೊಪ್ಪಿಸಿಕೊಂಡಿರುವಾಗ ನನ್ನ ಗೌರವವನ್ನು ಕಾಪಾಡುವುದು ನಿನ್ನ ಹೊಣೆ.

ನೀನೇ ಗತಿಯೆಂದು ನಿನ್ನನ್ನು ನಂಬಿ ಬಂದಿರುವ ನನ್ನನ್ನು ರಕ್ಷಿಸು” ಎಂದು ಪ್ರಾರ್ಥಿಸುತ್ತಾರೆ. ‘ನನ್ನ ವಿಡಚಿ’ ಎಂಬ ಮತ್ತೊಂದು ಕೃತಿಯಲ್ಲಿ ತ್ಯಾಗರಾಜರು ಭಗವಂತನಿಗೆ ”ನನ್ನನ್ನು ಚೆನ್ನಾಗಿ ಎತ್ತಿಕೊಳ್ಳಯ್ಯ, ಈ ಶರೀರ ಹಾಗೂ ನನ್ನದೆಲ್ಲವೂ ನಿನ್ನ ಸ್ವತ್ತಾಗಿದೆ,  ನನ್ನನ್ನು ಬಿಟ್ಟು ಹೋಗಬೇಡ” ಎಂದು ಹೃದಯ ತುಂಬಿ ಪ್ರಾರ್ಥಿಸುತ್ತಾರೆ. “ಆತ್ಮನಿವೇದನ’ ಭಕ್ತಿಯ ಉತ್ಕೃಷ್ಟ ಅನುಭವ ಶ್ರೀ ತ್ಯಾಗರಾಜರದು!

ಶ್ರೀ ಸಮರ್ಥ ರಾಮದಾಸರು ತಮ್ಮ ಒಂದು “ಅಭಂಗ’ ದಲ್ಲಿ

ಹೇ ರಾಘವ ದೇಯಿ ತುಝೇ ಭಜನ

ಅನುತಾಪ ತ್ಯಾವರೀ ಭಕ್ತಿಯೋಗ

ಮಾನಿತಿ ಹೇ ಸಜ್ಜನ

ಕೀರ್ತನ ಕರಾವೇ ನಾಮ ಉಚ್ಚಾರಾವೇ

ಅಂತರೀ ಲಾಗೋ ಧ್ಯಾನ

ದಾಸಮ್ಹಣೇ ಮನ ಆತ್ಮನಿವೇದನ

ಸಗುಣ ಸಮಾಧಾನ

ಹೇರಾಮ, ತನ್ನ ತಪ್ಪಿನ ಅರಿವಾಗಿ ಮನಸ್ಸಿನಲ್ಲಿ ಅನುತಾಪ ಉಂಟಾದಾಗಲೇ ‘ಭಕ್ತಿಯೋಗ’ ಎನಿಸುವುದೆಂದು ಸಜ್ಜನರು ಮಾನ್ಯ ಮಾಡಿದ್ದಾರೆ. ನಿನ್ನನ್ನು ಕೀರ್ತಿಸುತ್ತಾ, ನಿನ್ನ ನಾಮೋಚ್ಚಾರವನ್ನು ಮಾಡುತ್ತಾ, ಅಂತರಂಗದಲ್ಲಿ ನಿನ್ನ ಧ್ಯಾನವೇ ನೆಲೆಸಲೆಂದು ನನ್ನನ್ನು ನಿನಗೆ ಸಮರ್ಪಿಸಿಕೊಂಡಿದ್ದೇವೆ. ನಿನ್ನ ದಿವ್ಯ ಭಜನೆಯನ್ನು ಎನಗೀವುದಲ್ಲದೆ ನನಗೆ ಸಮಾಧಾನವನ್ನುಂಟು ಮಾಡುವ ನಿನ್ನ ಸಗುಣ ರೂಪವನ್ನು ತೋರಿ ದಾಸನಾದ ನನ್ನನ್ನು ಉದ್ಧಾರ ಮಾಡು.

ಆತ್ಮನಿವೇದನ ಭಕ್ತಿ’ಗೆ ಮಂಗಳಾ ಶಾಸನ

ಹೇ ಗೋಪಾಲಕ ಹೇ ಕೃಪಾಜಲನಿಧೇ

ಹೇ ಸಿಂಧು ಕನ್ಯಾಪತೇ

ಹೇ ಕಂಸಾಂತಕ ಹೇ ಗಜೇಂದ್ರ

ಕರುಣಾಪಾರೀಣ ಹೇ ಮಾಧವ |

ಹೇ ರಾಮಾನುಜ ಹೇ ಜಗತ್ತ್ರೆಯಗುರೋ

ಹೇ ಪುಂಡರೀಕಾಕ್ಷಮಾಂ

ಹೇ ಗೋಪಿಜನನಾಥ ಪಾಲಯ ಪರಂ

ಜಾನಾಮಿ ನತ್ವಾ ವಿನಾ ||

ಶ್ರೀಕುಲಶೇಖರ ಆಳ್ವಾರರು ತಮ್ಮ ‘ಮುಕುಂದಮಾಲಾ’ ಸ್ತೋತ್ರದಲ್ಲಿ ʼಆತ್ಮನಿವೇದನ ಭಕ್ತಿʼಯನ್ನು ಪ್ರಕಟಿಸುವ ಈ ಸುಂದರ ಸ್ತೋತ್ರದಲ್ಲಿ, “ಹೇ ಗೋಪಾಲಕನೇ, ಕೃಪಾ ಜಲನಿಧಿಯೇ, ಲಕ್ಷ್ಮೀಪತಿಯೇ, ಕಂಸಾಂತಕನೇ, ಗಜೇಂದ್ರನಿಗೆ ಕರುಣೆ ತೋರಿದವನೇ, ಮಾಧವನೇ, ಬಲರಾಮನ ಸೋದರನೇ, ಮೂರು ಲೋಕಗಳಿಗೂ ಗುರುವಾದವನೇ, ಪುಂಡರೀಕಾಕ್ಷನೇ, ಗೋಪೀ ಜನನಾಥನೇ ನನ್ನನ್ನು ಪಾಲಿಸು, ನಿನ್ನನ್ನು ಬಿಟ್ಟರೆ ಬೇರೆ ಯಾರನ್ನು ನಾನು ಕಾಣೆ’ ಎಂದು ಭಕ್ತಿ ತುಂಬಿ ಪ್ರಾರ್ಥಿಸುತ್ತಾರೆ.

ನವವಿಧ ಭಕ್ತಿಸೇವೆ : ಉಪಸಂಹಾರ

ಇದುವರೆಗೂ ಭಗವದ್ಭಕ್ತಿ ಸೇವೆಯ ಒಂಬತ್ತು ರೂಪಗಳನ್ನು ತಿಳಿದೆವು. ಈ ಒಂಬಕ್ಕೂ ಭಕ್ತಿರೂಪಗಳು ಬೇರೆ ಬೇರೆಯಾಗಿ ಕಂಡರೂ ಒಂದು ಮತ್ತೊಂದಕ್ಕೆ ಪೂರಕವಾಗುತ್ತದೆ. ಶ್ರವಣದಿಂದ ಆರಂಭವಾದ ಭಕ್ತಿಯು ಶ್ರೀಹರಿಯ ಮಹಿಮಾನ್ವಿತ ಲೀಲೆಗಳನ್ನು ಕೇಳುತ್ತಾ ಅನಂದದಿಂದ ತನಗರಿವಿಲ್ಲದಂತೆಯೇ ಭಗವಂತನ ಲೀಲಾ ವಿನೋದಗಳನ್ನು ಕೀರ್ತಿಸಬಹುದು.

ಹಾಡುತ್ತಾ ಹಾಡುತ್ತಾ ಅವನ ಸ್ಮರಣೆಯಲ್ಲಿಯೇ ಮುಳುಗಿ, ಅವನ ಪಾದಸೇವೆಯಲ್ಲಿ ನಿರತನಾಗಿ ಅವನನ್ನು ಭಕ್ತಿಯಿಂದ ಅರ್ಚಿಸಿ ಆ ತನ್ನ ಸ್ವಾಮಿಯನ್ನು ಹೃದಯ ತುಂಬಿ ವಂದಿಸಿ, ಜೀವಿತದ ಕಡೆಯವರೆಗೂ ಅವನ ದಾಸನಾಗಿಯೆ ಉಳಿದು ಸೇವಿಸಬೇಕು. ಆಗ ಅವನಲ್ಲಿ ಆತ್ಮೀಯತೆ ಮೂಡಿ ಅವನೇ ಪರಮಸಖನಾಗುತ್ತಾನೆ. ಕೊನೆಗೆ ಆ ದೇವದೇವನ ದಿವ್ಯಶಕ್ತಿಯ ಅರಿವಾಗಿ ಅವನ ತಿರುವಡಿಗಳಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ಆತ್ಮನಿವೇದನ ಮಾಡಿಕೊಳ್ಳುತ್ತಾನೆ.

ಭಗವಂತನನ್ನು ಪಡೆಯಲು ಶಾಸ್ತ್ರಗಳಲ್ಲಿ ಭಕ್ತಿಮಾರ್ಗವನ್ನೇ ತುಂಬಾ ಪ್ರಶಂಸಿಸಲಾಗಿದೆ. ಈ ನವವಿಧ ಭಕ್ತಿಯಲ್ಲಿ ಒಂದು ಭಕ್ತಿರೂಪವನ್ನು ಅಭ್ಯಸಿಸಿ ಸಾಧನೆ ಮಾಡುವ ಭಕ್ತ ಸಂಸಾರ ಸಾಗರದಿ೦ದ ನಿರಾಯಾಸವಾಗಿ ಪಾರಾಗಿ ಭಗವಂತನನ್ನು ಪಡೆದುಕೊಳ್ಳುತ್ತಾನೆ. ಶ್ರೀಮದ್ಭಾಗವತದಲ್ಲಿ ಶ್ರವಣಾದಿ ಭಕ್ತಿಯ ಮಹಿಮೆಯನ್ನು ಹೇಳುತ್ತಾ,

ಶೃಣ್ವಂತಿ ಗಾಯಂತಿ ಗೃಣಂತ್ಯ ಭೀಕ್ಷ್ಣಶಃ

ಸ್ಮರಂತಿ ನಂದಂತಿ ತವೇಹಿತಂ ಜನಾಃ |

ಏವ ಪಶ್ಯಂತ್ಯಚಿರೇಣ ತಾವಕಂ

ಭವಪ್ರವಾಹೋಪರಮಂ ಪದಾಂಬುಜಮ್ ||

(ಭಾ. 1.8.36)

ಯತ್ಕೀರ್ತನಂ ಯತ್ಸ್ಮರಣಂ ಯದೀಕ್ಷಣಂ

ಯದ್ವಂದನಂ ಯಚ್ಛ್ರವಣಂ ಯದರ್ಹಣಮ್ |

ಲೋಕಸ್ಯ ಸದ್ಯೋ ವಿಧುನೋತಿ ಕಲ್ಮಷಂ

ತಸ್ಮೈ ಸುಭದ್ರಶ್ರವಸೇ ನಮೋನಮಃ ||

(ಭಾ.2.4.15)

ಯಾವ ಭಾಗ್ಯಶಾಲಿಗಳು ಬಾರಿ ಬಾರಿಗೂ ನಿನ್ನ ದಿವ್ಯ ಲೀಲೆಗಳನ್ನು ಶ್ರವಣ ಮಾಡುತ್ತಾರೋ, ಗಾನ ಸ್ಮರಣೆ ಮಾಡುತ್ತಾರೋ, ಸಂಕೀರ್ತನೆ ಮಾಡುತ್ತಾರೋ, ಸ್ಮರಣೆ ಮಾಡುತ್ತಾರೋ ಮತ್ತು ಇವುಗಳಿಂದ ಆನಂದಪೂರಿತರಾಗುತ್ತಾರೋ ಅಂತಹವರು ಜನನ-ಮರಣ ಪ್ರವಾಹವನ್ನು ಎಂದೆಂದಿಗೂ ತಡೆಗಟ್ಟುವ ನಿನ್ನ ದಿವ್ಯವಾದ ಅಡಿದಾವರೆಗಳನ್ನು ಶೀಘ್ರವಾಗಿ ದರ್ಶಿಸುವರು.

ಯಾರ ಕೀರ್ತನೆ, ಸ್ಮರಣೆ, ದರ್ಶನ, ವಂದನ, ಶ್ರವಣ ಮತ್ತು ಪೂಜೆಗಳು ಜೀವರ ಪಾಪಗಳನ್ನು ತತ್‌ಕ್ಷಣದಲ್ಲಿಯೇ ಧ್ವಂಸ ಮಾಡುತ್ತವೆಯೋ ಅಂತಹ ಪುಣ್ಯ ಕೀರ್ತಿಯಾದ ಭಗವಂತನಿಗೆ ನಮೋನಮಃ

ಶ್ರೀಕೃಷ್ಣನೇ ಉದ್ಧವನನ್ನು ಕುರಿತು “ಯಾರ ವಾಣಿಯು ನನ್ನ ನಾಮಗುಣ ಮತ್ತು ಲೀಲೆಗಳ ವರ್ಣನೆ ಮಾಡುತ್ತಾ ಗದ್ಗದಿತವಾಗುತ್ತದೆಯೋ, ಯಾರ ಚಿತ್ತವು ನನ್ನ ಮಹಿಮೆಗಳನ್ನು ಸ್ಮರಣೆ ಮಾಡುತ್ತಾ ದ್ರವೀಭೂತವಾಗುತ್ತದೆಯೋ, ಕಣ್ಣುಗಳಲ್ಲಿ ಧಾರಕಾರವಾಗಿ ಕಣ್ಣೀರು ಸುರಿಯುತ್ತದೆಯೋ, ಯಾರು ಲಜ್ಜೆಯನ್ನು ತೊರೆದು, ಪ್ರೇಮದಲ್ಲಿ ಮಗ್ನನಾಗಿ ಹುಚ್ಚನಂತೆ ಗಟ್ಟಿಯಾಗಿ ಹಾಡುತ್ತಾ ಕುಣಿಯುತ್ತಾ ನನ್ನ ಭಾವದಲ್ಲೇ ಮಗ್ನನಾಗಿರುತ್ತಾನೆಯೋ ಅಂತಹ ನನ್ನ ಭಕ್ತನು ಜಗತ್ತನ್ನು ಪವಿತ್ರವಾಗಿಸಿಬಿಡುತ್ತಾನೆ.

ಕೃಷ್ಣಾಯ ವಾಸುದೇವಾಯ

ದೇವಕೀನಂದನಾಯ

ನಂದಗೋಪ ಕುಮಾರಾಯ

ಗೋವಿಂದಾಯ ನಮೋನಮಃ

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi