ಶ್ರೀ ಬ್ರಹ್ಮಣ್ಯ ತೀರ್ಥರು

(ಮುಂದುವರಿದ ಭಾಗ)

– ಮಾಧವಾನಂದ ದಾಸ

ಶ್ರೀ ಬ್ರಹ್ಮಣ್ಯತೀರ್ಥರು ಶ್ರೀವ್ಯಾಸ ತೀರ್ಥರ ಗುರುಗಳು. ತಮ್ಮ ಅವತರಣ ಕಾಲದಲ್ಲಿ ಅತ್ಯದ್ಭುತ ಲೀಲೆಯನ್ನು ತೋರಿದವರು. ಇವರು ಶಿಷ್ಯ ಪರಂಪರೆಯಲ್ಲಿ ಅತ್ಯಂತ ಕೀರ್ತಿವಂತರಾದ ವ್ಯಾಸತೀರ್ಥರಿಗೆ ದೀಕ್ಷೆ ನೀಡಿದ್ದಕ್ಕಾಗಿ ವೈಭವದಿಂದ ಸುತ್ತಿಸಲ್ಪಡುತ್ತಾರೆ. ಇವರು ಜನಿಸಿದ್ದು ಅಬ್ಬೂರು ಗ್ರಾಮದಲ್ಲಿ. ತಮ್ಮ ಲೀಲಾವತರಣದ ಬಹುಪಾಲು ಕಳೆದಿದ್ದೂ ಇಲ್ಲಿಯೇ…”

ಬನ್ನೂರಿನಲ್ಲಿ ಬ್ರಹ್ಮಣ್ಯತೀರ್ಥರು

ಅಬ್ಬೂರಿಗೆ ಹೋಗುವ ಮಾರ್ಗದಲ್ಲಿ ಬ್ರಹ್ಮಣ್ಯತೀರ್ಥರು ಬನ್ನೂರು ಎನ್ನುವ ಗ್ರಾಮಕ್ಕೆ ಭೇಟಿ ನೀಡಿದರು. (ಮೈಸೂರಿನಿಂದ 30.ಕಿ.ಮೀ ದೂರ). ಈ ಪ್ರಾಂತ್ಯವು ವೆಂಕಟಗಿರಿನಾಯಕ ಎಂಬ ಪಾಳೇಗಾರನ ಆಳ್ವಿಕೆಗೆ ಒಳಪಟ್ಟಿತ್ತು. ಅವನಿಗೆ ಬಿಲ್ಹಣ ಸುಮತಿ ಎನ್ನುವ ಮಂತ್ರಿಯಿದ್ದ. ಸುಮತಿಯು ಶಾಸ್ತ್ರಾರ್ಥ ಪಂಡಿತನಾಗಿದ್ದರೂ ನಿರಾಕಾರ ತತ್ತ್ವದ ಅನುಯಾಯಿಯಾಗಿದ್ದ.

ಬನ್ನೂರು ಕ್ಷೇತ್ರವನ್ನು ಶ್ರೀರಾಮ ಇಲ್ಲಿಗೆ ಭೇಟಿ ನೀಡಿದಾಗ ನಿರ್ಮಿಸಿದನೆಂದು ಹೇಳಲಾಗುತ್ತದೆ. ಬನ್ನೂರಿನಲ್ಲಿ ಪ್ರಪ್ರಾಚೀನ ಶ್ರೀರಾಮದೇಗುಲವೊಂದಿದೆ. ಬ್ರಹ್ಮಣ್ಯ ತೀರ್ಥರ ಆಗಮನದಿಂದ ಹರ್ಷಿತನಾದ ವೆಂಕಟಗಿರಿನಾಯಕ, ಬಿಲ್ಹಣ ಸುಮತಿಯನ್ನು ಅವರ ಸ್ವಾಗತಕ್ಕೆ ಕಳುಹಿಸಿಕೊಟ್ಟ.

ಬ್ರಹ್ಮಣ್ಯ ತೀರ್ಥರು ಬನ್ನೂರಿನಲ್ಲಿ ಕೆಲಕಾಲ ನೆಲೆನಿಂತರು. ಅವರ ಸಾನ್ನಿಧ್ಯದಲ್ಲಿ ಬಿಲ್ಹಣ ಸುಮತಿ ನಿರಾಕಾರ ತತ್ತ್ವದ ಮಿಥ್ಯತೆಯನ್ನು ಕಂಡುಕೊಂಡ. ವೈಷ್ಣವ ತತ್ತ್ವವನ್ನು ಮೆಚ್ಚಿಕೊಂಡು, ಬ್ರಹ್ಮಣ್ಯ ತೀರ್ಥರ ಶಿಷ್ಯತ್ವ ಸ್ವೀಕರಿಸಿದ.

ಮತ್ತೊಂದು ವಿಶಿಷ್ಟ ಲೀಲೆ : ಒಮ್ಮೆ , ಬ್ರಹ್ಮಣ್ಯತೀರ್ಥರು ಬನ್ನೂರಿನ ಶ್ರೀರಾಮ ದೇಗುಲದಲ್ಲಿ ಪೂಜಾನಿರತರಾಗಿದ್ದಾಗ ಹೆಂಗಸೊಬ್ಬಳ ಆಕ್ರಂದನವನ್ನು ಕೇಳಿದರು. ಬ್ರಹ್ಮಣ್ಯತೀರ್ಥರು ಅತ್ತ ಗಮನ ಹರಿಸುವ ವೇಳೆಗೆ ತಮ್ಮ ಆರಾಧ್ಯದೈವ ಶ್ರೀನರಸಿಂಹ ದೇವನ ಮುಡಿಯಿಂದ ಗುಲಾಬಿ ಹೂವು ಕೆಳಗೆ ಬಿತ್ತು. ಅವರು ಆ ಮಹಾ ಪ್ರಸಾದವನ್ನು ಪಡೆದು ದೇವಾಲಯದ ಹೊರಬಂದರು.

ದುಃಖಿಸುತ್ತಿದ್ದ ಮಹಿಳೆಯು ಆಚಾರ್ಯರ ಕಾಲಿಗೆ ಬಿದ್ದು ಪ್ರಣಾಮ ಸಲ್ಲಿಸಿದಳು. ಬ್ರಹ್ಮಣ್ಯತೀರ್ಥರು ಅವಳಿಗೆ ‘ದೀರ್ಘ ಸುಮಂಗಲಿ’ ಯಾಗಿರು ಎಂದು ಆಶೀರ್ವದಿಸಿ, ಮಹಾಪ್ರಸಾದವನ್ನು ನೀಡಿದರು. ಅವರ ಆಶೀರ್ವಚನವನ್ನು ಕೇಳುತ್ತಲೇ ಆಕೆ ಮತ್ತಷ್ಟು ಕರುಣಾಜನಕವಾಗಿ ಆಳಲಾರಂಭಿಸಿದಳು.

ಅಲ್ಲಿದ್ದ ಜನರಲ್ಲಿ ಒಬ್ಬನು ಆಗ ತಾನೇ ಆಕೆಯ ಪತಿ ತೀರಿಕೊಂಡಿರುವನೆಂದು ಅದುವೇ ಆಕೆಯ ದುಃಖಕ್ಕೆ ಕಾರಣವೆಂದು ಹೇಳಿದ. ಇದನ್ನು ಕೇಳಿದ ಆಚಾರ್ಯರು ಒಂದು ಕ್ಷಣ ಆಲೋಚನಾಮಗ್ನರಾದರು. ಅನಂತರ, ತಾವು ದೇವೋತ್ತಮನ ಪ್ರೇರಣೆಯಿಂದ ಹೇಳಿದ ಮಾತು ಸುಳ್ಳಾಗಲು ಸಾಧ್ಯವೇ ಇಲ್ಲವೆಂದು ಹೇಳುತ್ತ ಆ ಮಹಿಳೆಗೆ ನರಸಿಂಹದೇವನ ತೀರ್ಥವನ್ನು ನೀಡಿ, ಆಕೆಯ ಪತಿಯ ದೇಹದ ಮೇಲೆ ಪ್ರೋಕ್ಷಿಸುವಂತೆ ಹೇಳಿದರು.

ಜೊತೆಗೆ ತಾವಿತ್ತ ಮಹಾಪ್ರಸಾದವನ್ನು ಸೋಕಿಸುವಂತೆ ಸೂಚಿಸಿದರು. ಆಕೆ ಅವರ ನಿರ್ದೇಶನದಂತೆಯೇ ಮಾಡಿದಳು ಎಲ್ಲರೂ ಬೆರಗಿನಿಂದ ನೋಡುತ್ತಿರುವಂತೆಯೇ ಪವಾಡ ನಡೆದುಹೋಯಿತು. ಮೃತನಾಗಿದ್ದ ವ್ಯಕ್ತಿ ನಿದ್ದೆಯಿಂದ ಎಚ್ಚೆತ್ತವನಂತೆ ಎದ್ದು ಬಂದ!

ಭಗವಂತನ ಮತ್ತವನ ಶುದ್ಧಭಕ್ತನ ಆಕಾರಣ ಕೃಪೆಗೆ ಪಾತ್ರರಾದ ಆ ದಂಪತಿಯ ಹೆಸರು ರಾಮಾಚಾರ್ಯ ಮತ್ತು ಲಕ್ಷ್ಮೀದೇವಿ, ಅಪಾರ ಐಶ್ವರ್ಯವಂತರಾಗಿದ್ದರೂ ಅವರು ಸಂತಾನಭಾಗ್ಯವಿಲ್ಲದೆ ದುಃಖಿತರಾಗಿದ್ದರು. ಈ ನಿಟ್ಟಿನಲ್ಲಿ ಅನೇಕಾನೇಕ ದಾನ-ಧರ್ಮಗಳನ್ನು ಮಾಡಿದರೂ ಫಲ ನೀಡಿರಲಿಲ್ಲ.

ಅಂತಿಮವಾಗಿ ಅವರು ತಮ್ಮ ಮನೋಕಾಮನೆಯ ಪೂರೈಕೆಯಾಗಿ ಕಾಶಿಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದರು. ಅವರು ಯಾತ್ರೆಗೆ ಹೊರಡುತ್ತಿದ್ದಂತೆ, ರಾಮಾಚಾರ್ಯ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದಿದ. ಆದರೆ ಬ್ರಹ್ಮಣ್ಯತೀರ್ಥರ ಅದ್ಭುತ ಪವಾಡದಿಂದ ಆತನ ಜೀವ ಮರಳಿತು.

ಆನಂದಾತಿಶಯದಿಂದ ಆ ದಂಪತಿ ಆಚಾರ್ಯರಿಗೆ ತಮ್ಮ ಕೃತಜ್ಞತೆ ಸಲ್ಲಿಸಿದರು. ರಾಮಾಚಾರ್ಯನು ಬ್ರಹ್ಮಣ್ಯತೀರ್ಥರಿಗೆ ತಾನು ಅರ್ಪಿಸುವ ಕಾಣಿಕೆಯನ್ನು ಸ್ವೀಕರಿಸುವಂತೆ ಕೋರಿದ. ಆದರ ಆಚಾರ್ಯರು ಆ ಕೋರಿಕೆಯನ್ನು ತಳ್ಳಿಹಾಕಿದರು. ಉಪಕೃತ ದಂಪತಿ ಮತ್ತೆ ಮತ್ತೆ ಒತ್ತಾಯ ಪಡಿಸಲು, ಬ್ರಹ್ಮಣ್ಯತೀರ್ಥರು – ಅವರು ಶೀಘ್ರದಲ್ಲೇ ಪುತ್ರಭಾಗ್ಯ ಪಡೆಯುವರೆಂದೂ, ಆ ಶಿಶುವನ್ನು ತನಗೆ ಕಾಣಿಕೆಯಾಗಿ ನೀಡಬೇಕೆಂದು ಹೇಳಿದರು.

ಆ ಸಂತಾನಹೀನ ದಂಪತಿಗಳು ತಮಗೆ ಪುತ್ರ ಜನನವಾಗುವುದೆಂದು ತಿಳಿದು ಸಂತೋಷದಿಂದ ಅವರ ಮಾತಿಗೆ ಸಮ್ಮತಿಸಿದರು. ಬ್ರಹ್ಮಣ್ಯತೀರ್ಥರು, ಅವರಿಗೆ ಜನಿಸಲಿರುವ ಮಗು ಮುಂದೆ ವಿಶ್ವವೇ ಗೌರವಿಸುವಂತಹ ಶ್ರೇಷ್ಠ ಆಚಾರ್ಯನಾಗುವನೆಂದು ಘೋಷಿಸಿದರು. ಈ ಘಟನೆಯ ಕೆಲಕಾಲದ ಅನಂತರ ಆಚಾರ್ಯರು ಅಬ್ಬೂರಿಗೆ ಮರಳಿದರು.

ಅವರು ಅಲ್ಲಿಂದ ಹೊರಡುವ ವೇಳೆಗೆ ಪಾಳೆಗಾರ ವೆಂಕಟಗಿರಿ ನಾಯಕನು ಗೌರವಾರ್ಥವಾಗಿ ಬಂಗಾರದ ಹರಿವಾಣದಲ್ಲಿ ಹಣ್ಣುಗಳನ್ನು ಸಮರ್ಪಿಸಿದನು. ಬ್ರಹ್ಮಣ್ಯತೀರ್ಥರು ಹಣ್ಣುಗಳನ್ನು ಸ್ವೀಕರಿಸಿ, ಹರಿವಾಣವನ್ನು ರಾಮಾಚಾರ್ಯ ದಂಪತಿಗಳಿಗೆ ನೀಡಿದರು. ಅವರಿಗೆ ಜನಿಸಲಿರುವ ಮಗುವನ್ನು ಭೂಮಿಗೆ ಸೋಕಿಸದೆ, ಆ ಬಂಗಾರದ ಹರಿವಾಣದಲ್ಲಿರಿಸಬೇಕೆಂದು ಮತ್ತು ಅದರಲ್ಲಿಟ್ಟುಕೊಂಡೇ ತಮ್ಮ ಬಳಿ ಕರೆತರಬೇಕೆಂದು ನಿರ್ದೇಶಿಸಿದರು.

ಕೆಲಕಾಲನಂತರ ಲಕ್ಷ್ಮೀದೇವಿಯು ಗರ್ಭವತಿಯಾದಳು. ದೈವೀ ಶಿಶುವನ್ನು ಗರ್ಭದಲ್ಲಿ ಹೊತ್ತ ಆಕೆ ಅಸಾಧಾರಣ ತೇಜಸ್ಸಿನಿಂದ ಕಂಗೊಳಿಸುತ್ತಿದ್ದಳು. ಪ್ರಸವದ ದಿನ ಸಮೀಪಿಸುತ್ತಿದ್ದಂತೆ ಬ್ರಹ್ಮಣ್ಯತೀರ್ಥರು ಮಂಗಳಕಾರ್ಯಗಳನ್ನು ನೆರವೇರಿಸಲು ಬ್ರಾಹ್ಮಣರನ್ನು ಕಳುಹಿಸಿಕೊಟ್ಟರು.

ಪ್ರಭವ ಸಂವತ್ಸರದ ವೈಶಾಖ ಅಧಿಕ ಮಾಸದ ಶುಕ್ಲಪಕ್ಷ ಸಪ್ತಮಿಯ ದಿನದಂದು (1447 ನೇ ಇಸವಿ, ಏಪ್ರಿಲ್ 22) ಶಿಶುವಿನ ಜನನವಾಯಿತು. ಬ್ರಾಹ್ಮಣರು ಆ ದಿವ್ಯ ಶಿಶುವನ್ನು ಬಂಗಾರದ ಹರಿವಾಣದಲ್ಲಿರಿಸಿ, ವೇದಮಂತ್ರಗಳನ್ನು ಪಠಿಸಿದರು. ಬ್ರಹ್ಮಣ್ಯರ ದಿವ್ಯದೃಷ್ಟಿಗೆ ಶಿಶುಜನನದ ವಿದ್ಯಮಾನ ಗೋಚರಿಸಿತು.

ಜನನದ 11 ದಿನಗಳ ಅನಂತರ, ಮಗುವಿನ ಮಂಗಳ ಸ್ನಾನ ನೆರವೇರಿಸಿ, ರಾಮಾಚಾರ್ಯ ಲಕ್ಷ್ಮಿದೇವಿಯರು ಬ್ರಹ್ಮಣ್ಯತೀರ್ಥರ ಬಳಿ ಅಬ್ಬೂರಿಗೆ ಕರೆತಂದು, ಬಂಗಾರದ ಹರಿವಾಣದಲ್ಲಿ ಮಗುವನ್ನಿರಿಸಿ ಅವರಿಗೆ ಅರ್ಪಿಸಿದರು.

ಬ್ರಹ್ಮಣ್ಯ ತೀರ್ಥರು ನುರಿತ ಅರ್ಚಕರನ್ನು ಕರೆಯಿಸಿ ಜಾತಕರ್ಮಾದಿಗಳನ್ನು ನೆರವೇರಿಸಿದರು. ಕೆಲವು ಬ್ರಾಹ್ಮಣರು ಶಿಶುವು ಮುಂದೆ ಮಹಾರಾಜನಾಗುವನೆಂದು ನುಡಿದರು. ಕೆಲವರು ಆತ ದೊಡ್ಡ ಯತಿಯಾಗುವನೆಂದು ಅಭಿಪ್ರಾಯಪಟ್ಟರು. ಮಗುವಿನ ಉಜ್ವಲ ಭವಿಷ್ಯದ ಅರಿವಿದ್ದ ಬ್ರಹ್ಮಣ್ಯತೀರ್ಥರು ನಸುನಗುತ್ತ ಅವರ ಮಾತುಗಳನ್ನು ಆಲಿಸಿದರು.

ಕೆಲವು ದಿನಗಳ ಅನಂತರ ಮಗುವಿನ ನಾಮಕರಣ ಸಮಾರಂಭ ನಡೆಸಿದರು. ಮಗುವು ರಾಜನಾಗುವನೆಂದು ಕೆಲವರು, ಯತಿಯಾಗುವನೆಂದು ಕೆಲವರು ಹೇಳುತ್ತಿದ್ದುದರಿಂದ ಬ್ರಹ್ಮಣ್ಯತೀರ್ಥರು “ ಯತಿರಾಜ” ಎಂದು ಹೆಸರಿಟ್ಟರು. ಆ ಮಗು ಮುಂದೆ ಯತಿಗಳಲ್ಲಿ ರಾಜನಾದ ‘ವ್ಯಾಸತೀರ್ಥ’ರಾಗಿ ಪ್ರಸಿದ್ಧಿ ಹೊಂದುವುದೆಂದು ಅವರು ಮುಂಗಂಡಿದ್ದರು. ಸಮಾರಂಭದ ಕೆಲವು ದಿನಗಳ ಅನಂತರ ರಾಮಾಚಾರ್ಯ – ಲಕ್ಷ್ಮಿದೇವಿಯರು ಬನ್ನೂರಿಗೆ ಮರಳಿದರು.

ಪುಟ್ಟ ಮಗುವು ಬ್ರಹ್ಮಣ್ಯತೀರ್ಥರ ವಿಶೇಷ ಕಾಳಜಿಯಲ್ಲಿ ಬೆಳೆಯತೊಡಗಿತು. ಅವರು ಮಗುವಿಗೆ, ದೇವರಿಗೆ ನೈವೇದ್ಯ ಮಾಡಿದ ಹಾಲನ್ನು ಕುಡಿಸುತ್ತಿದ್ದರು. ಪುರುಷೋತ್ತಮ ತೀರ್ಥರು ಅಂತರ್ಧಾನರಾದ ಗುಹೆಯ ಮುಂದಿನ ಮರಕ್ಕೊಂದು ಕಾವಿ ಬಟ್ಟೆ ಕಟ್ಟಿ ಜೋಳಿಗೆ ಮಾಡಿ, ಮಗುವನ್ನು ತೂಗುತ್ತಿದ್ದರು. ಕಣ್ವ ನದಿಯಲ್ಲಿ ಸ್ನಾನ ಮಾಡಿಸುತ್ತಿದ್ದರು. ಹೀಗೆ ಬ್ರಹ್ಮಣ್ಯ ತೀರ್ಥರು ಯತಿರಾಜರಿಗೆ ಸ್ನಾನ ಮಾಡಿಸುತ್ತಿದ್ದ ಜಾಗವನ್ನು ಶ್ವೇತ ಶಿಲಾಗೃಹ ಅಥವಾ ಬಿಳಿಕಲ್ಲು ಮಡು ಎಂದು ಕರೆಯಲಾಗುತ್ತದೆ. (ಪ್ರಸ್ತುತ ಈ ಜಾಗವು ಕಾಣಸಿಗದು)

ಮಗುವಿಗೆ ಐದು ವರ್ಷಗಳಾದಾಗ ಬ್ರಹ್ಮಣ್ಯತೀರ್ಥರು ಉಪನಯನ ಸಂಸ್ಕಾರ ನೆರವೇರಿಸಿದರು. ಏಳನೇ ವಯಸ್ಸಿನಲ್ಲಿ ಸಂನ್ಯಾಸ ದೀಕ್ಷೆಯನ್ನು ನೀಡಿದರು. ಯತಿರಾಜರು ಸಂನ್ಯಾಸಿಯಾದ ಅನಂತರ ಅವರಿಗೆ ವ್ಯಾಸತೀರ್ಥ ಎಂಬ ಅಭಿಧಾನ ನೀಡಿದರು ಮತ್ತು ಮುಂದಿನ ಅಧ್ಯಯನಕ್ಕಾಗಿ ಮುಳುಬಾಗಿಲಿಗೆ ಶ್ರೀಪಾದರಾಜ ತೀರ್ಥರಲ್ಲಿಗೆ ಕಳುಹಿಸಿದರು.

ಒಂದು ದಿನ ಬ್ರಹ್ಮಣ್ಯತೀರ್ಥರಿಗೆ ಪಂಡರಾಪುರ ಶ್ರೀ ಪಾಂಡುರಂಗ ವಿಠಲನ ದರ್ಶನ ಮಾಡುವ ಬಯಕೆಯಾಯಿತು. ಆದರೆ ತಮ್ಮ ವಾರ್ಧಕ್ಯದ ಕಾರಣದಿಂದ ಯಾತ್ರೆ ಕೈಗೊಳ್ಳುವುದು ಸಾಧ್ಯವಾಗಲಿಲ್ಲ. ಅವರ ಬಯಕೆ ಹಾಗೆಯೇ ಉಳಿಯಿತು. ಆ ದಿನ ರಾತ್ರಿ ಕನಸಿನಲ್ಲಿ ಪಾಂಡುರಂಗ ವಿಠಲನು ದರ್ಶನವಿತ್ತು, ಅವರು ಪಂಡರಾಪುರಕ್ಕೆ ಬರುವ ಅಗತ್ಯವಿಲ್ಲವೆಂದೂ, ತಾನು ಅಬ್ಬೂರಿನಲ್ಲಿಯೇ ಇರುವುದಾಗಿಯೂ ತಿಳಿಸಿದನು.

ಅನಂತರ ಬೆಟ್ಟದ ಮೇಲೆ ತನ್ನನ್ನು ತಾನು ಬ್ರಾಹ್ಮಣ ರೂಪದಲ್ಲಿ ತೋರ್ಪಡಿಸಿಕೊಂಡು, ಅರ್ಚಾವಿಗ್ರಹ ರೂಪತಾಳಿ ಭೂಮಿಯೊಳಕ್ಕೆ ಹೊರಟು ಹೋದನು.

ಬ್ರಹ್ಮಣ್ಯ ತೀರ್ಥರು ಎಚ್ಚರಗೊಂಡರು. ಅವರಿಗೆ ಬ್ರಾಹ್ಮಣ ನಿಂತಿದ್ದ ಸ್ಥಳ ಅಬ್ಬೂರು ಬೆಟ್ಟವೆಂದು ತಿಳಿಯಿತು. ಭಕ್ತಿಯ ಉನ್ಮಾದದಿಂದ ಅವರು ತಮ್ಮ ಶಿಷ್ಯರೊಡಗೂಡಿ ಅಬ್ಬೂರು ಬೆಟ್ಟಕ್ಕೆ ಬಂದರು. ಕನಸಿನಲ್ಲಿ ಕಂಡ ಸ್ಥಳವನ್ನು ಉತ್ಖನನ ಮಾಡಲಾಯಿತು. ಅಲ್ಲಿ ಮನಮೋಹಕರಾಗಿ ಕಂಗೊಳಿಸುವ ವಿಠಲನ ಮೂರ್ತಿ ದೊರೆಯಿತು. ಬ್ರಹ್ಮಣ್ಯತೀರ್ಥರು ತಮ್ಮ ಮೆಚ್ಚಿನ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಮಠಕ್ಕೆ ಕರೆತಂದರು.

ಈ ದಿವ್ಯಲೀಲೆಯನ್ನು ವ್ಯಾಸ ವಿಜಯದಲ್ಲಿ ಹೀಗೆ ವರ್ಣಿಸಲಾಗಿದೆ;

ಅಬ್ಬೂರು ಕ್ಷೇತ್ರ ಯೇ ವಸೌ ಭೂಮೌ ಲೀನಾ ತನುಮ್ ಹರೀಮ್|

ವಿಠಲಮ್ ಲಬ್ದವಾನ್ ಸ್ವಪ್ನೇ ವಿಪ್ರಾತ್ಮಾ ಹರಿ ಚೋದಿತಾಃ ||

ಪಾಂಡುರಂಗ ವಿಠಲನ ಈ ದಿವ್ಯ ಮೂರ್ತಿಯು ಇಂದಿಗೂ ಕುಂದಾಪುರದ ವ್ಯಾಸರಾಜಮಠದಲ್ಲಿ “ಶ್ರೀ ಬ್ರಹ್ಮಣ್ಯತೀರ್ಥ ಸ್ವಪ್ನಾವಲಬ್ಧ ವಿಟ್ಠಲ ವಿಗ್ರಹ’ ಎಂದು ಪೂಜಿಸಲ್ಪಡುತ್ತದೆ.

ಬ್ರಹ್ಮಣ್ಯತೀರ್ಥರ ಬೃಂದಾವನದಲ್ಲಿ ಭಕ್ತಿಯಿಂದ ಸೇವೆ ಸಲ್ಲಿಸುವುದರಿಂದ ವ್ಯಕ್ತಿಯು ಅತ್ಯಂತ ಯಾತನಾದಾಯಕವಾದ ಕುಷ್ಠ ರೋಗದಿಂದ ಮುಕ್ತನಾಗಬಹುದು. ಬೃಂದಾವನಕ್ಕೆ ಸೇವೆ ಸಲ್ಲಿಸುವುದರಿಂದ ಭೂತ-ಪ್ರೇತ, ದುಷ್ಟ ಗ್ರಹಗಳ ಕಾಟಗಳಿಂದಲೂ ಎಲ್ಲ ಬಗೆಯ ಕೆಟ್ಟ ದೃಷ್ಟಿಗಳಿಂದಲೂ ಮುಕ್ತಿ ಪಡೆಯಬಹುದು.

ಅವರ ಬೃಂದಾವನವು ಎಲ್ಲ ಸೇವಕರ ಬಯಕೆಗಳನ್ನು ಪೂರೈಸುವ ಮಧು ತುಂಬಿದ ಕೊಳವಾಗಿದೆ. ಅವರ ಪುಣ್ಯನಾಮವು ಅತ್ಯಂತ ಮಂಗಳಕರವೂ ವೈಭವಯುತವೂ ಆಗಿದೆ. ಆಚಾರ್ಯ ಪರಂಪರೆಯ ಮುಕುಟಮಣಿಯಾಗಿರುವ ಬ್ರಹ್ಮಣ್ಯತೀರ್ಥರು ನನ್ನ ಮೇಲೆ ಕೃಪೆ ಹರಿಸಿ, ಶ್ರೇಯಸ್ಸನ್ನು ಕರುಣಿಸಲಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi