– ಶ್ರೀಮತಿ ಸವಿತಾ ಗಂಗಾಧರ್, ಬೆಂಗಳೂರು
“ವೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ” ಎಂದು ಆರಂಭವಾಗುವ ಕವಿತೆಯಲ್ಲಿ ಕವಿಯು ವೃಂದಾವನದಲ್ಲಿ ಗೋವಿಂದನನ್ನು ಕಂಡು ಅವನಿಗೆ ಆತ್ಮವನ್ನು ಅರ್ಪಿಸುತ್ತಾ, ತನ್ನ ಭಕ್ತರಿಗೆ ತನ್ನನ್ನೇ ಕೊಟ್ಟು ಕೊಳ್ಳುವ ಮಾಧವನ ಹಿರಿತನವನ್ನು ಬಿಚ್ಚಿಟ್ಟಿದ್ದಾರೆ. ಇಂತಹ ವೃಂದಾವನವು ಭಕ್ತರ ಮನಸ್ಸಿಗೆ ಸಕಲ ಸುಖಸಂತೋಷಗಳನ್ನು ನೀಡುವ ಕಾಮಧೇನುವಾಗಿದೆ.

ಸೌಂದರ್ಯ, ಐಶ್ವರ್ಯ, ಬಲ, ಜ್ಞಾನ, ಕೀರ್ತಿ, ವೈರಾಗ್ಯ – ಈ ಷಡೈಶ್ವರ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಹೊಂದಿರುವ ಭಗವಂತನು ಮನುಷ್ಯನ ರೂಪ ಧರಿಸಿ ವೃಂದಾವನದ ಕಾಡುಗಳಲ್ಲಿ ಲೀಲೆಯಾಡಿದನು.
ಸಕಲ ಲೀಲೆಗಳನ್ನು ಪರಿಪಾಲಿಸುವವನು, ಏನೂ ಅರಿಯದ ಮುಗ್ಧನಂತೆ, ಗೋಕುಲದ ತೊಟ್ಟಿಲಲ್ಲಿ, ತನ್ನ ಕಿರುಬೆರಳನ್ನು ಬಾಯಲ್ಲಿಟ್ಟು ಚೀಪುತ್ತಾ, ಕೇಕೆ ಹಾಕುತ್ತಿದ್ದನು. ಅಂಬೆಗಾಲಿಡುತ್ತಾ ಮಣಿಗಟ್ಟಿನ ನೆಲದಲ್ಲಿ ಪ್ರತಿಬಿಂಬಿತವಾದ ತನ್ನ ಮುಖಾರವಿಂದವನ್ನು ಕಂಡು, ಅದನ್ನು ಹಿಡಿಯ ಹೋಗಿ ದೊರೆಯದ ಕಾರಣ ತಾಯಿಯ ಮುಖ ನೋಡಿ ಅಳುತ್ತಿದ್ದನು. (ಶ್ರೀಕೃಷ್ಣ ಕರ್ಣಾಮೃತದಿಂದ) ಹೀಗೆ ಶ್ರೀಕೃಷ್ಣನು ಬಾಲನಂತೆ ನಟಿಸುತ್ತಾ ತನ್ನ ತಾಯಿಗೆ ಮಹದಾನಂದವನ್ನುಂಟು ಮಾಡುತ್ತಿದ್ದನು.
ಶ್ರೀಕೃಷ್ಣನು, ಐಹಿಕ ಆಸೆಗಳನ್ನು ತೊರೆದು, “ನೀನೊಬ್ಬನೇ ನಮಗೆ ದಿಕ್ಕು” ಎಂದು ಭಾವಿಸಿರುವ ಭಕ್ತರಿಗೆ, ತನ್ನ ಬಳಿಗೆ ಬರಲು ತಾನೇ ದಾರಿ ತೋರುವನು. ಇಂತಹ ಭಕ್ತರಿಗೆ ಅವನು ಅತಿ ಸುಲಭನು. ಅವರ ಜನ್ಮಾಂತರಗಳಲ್ಲಿ ಅವನ ಸಂಗಭಾಗ್ಯವನ್ನು ನೀಡುವನು. ಅವನ ಲೀಲೆಗಳನ್ನು ಸವಿಯುತ್ತಾ ಉನ್ನತ ಮಟ್ಟದ ಸುಖವನ್ನನುಭವಿಸಲು ಅವಕಾಶ ನೀಡುವನು.

ಶ್ರೀಕೃಷ್ಣನಿಗೆ ಮೊಸರು ಬೆಣ್ಣೆಗಳನ್ನು ತಿನ್ನಿಸುತ್ತಾ ಅವನನ್ನು ಮುದ್ದಿಸುತ್ತಿದ್ದ ಗೋಪಿಯರು, ಕಾಡುಗಳಲ್ಲಿ ಅವನೊಡನೆ ಹಲವು ಬಗೆಯ ಆಟಗಳನ್ನಾಡುತ್ತಾ ವಿನೋದಿಸುತ್ತಿದ್ದ ಗೋಪಬಾಲರು, ಗೋಪಿಕೆಯರು ಎಲ್ಲರೂ ಇಂತಹ ಪವಿತ್ರಾತ್ಮರೇ.
ಮನುಷ್ಯರಷ್ಟೇ ಅಲ್ಲದೆ ವೃಂದಾವನದ ಎಲ್ಲ ಬಗೆಯ ಪಶುಪಕ್ಷಿಗಳೂ, ಮರ ಬಳ್ಳಿ ಹೂಗಳೂ, ನದಿ ತಟಾಕಗಳೂ ಅವನ ಕ್ರೀಡಾ ವಿನೋದಗಳಲ್ಲಿ ಭಾಗಿಯಾಗಿ ಕೃತಾರ್ಥವಾದವು.
“ಗೋಲೋಕ ನಾಮ್ನಿ ನಿಜಧಾಮ್ನಿ ತಲೇಚ ತಸ್ಯ, ದೇವೀ ಮಹೇಶ ಹರಿ ಧಾಮಸು ತೇಷು ತೇಷು ತೇ ತೇ ಪ್ರಭಾವ ನಿಚಯಾ ವಿಹಿತಾಶ್ಚಯೇನ ಗೋವಿಂದಂ ಆದಿಪುರುಷಂ ತಮಹಂ ಭಜಾಮಿ” (ಬ್ರಹ್ಮ ಸಂಹಿತೆಯಿಂದ) ಅ೦ದರೆ ಶ್ರೀಕೃಷ್ಣನು ನಿರಂತರವಾಗಿ ನೆಲೆಯಾಗಿರುವ ಗೋಲೋಕವು ದೇವಿಧಾಮ (ನಮ್ಮಂತಹ ಬದ್ಧಾತ್ಮರು ವಾಸಿಸುವ ಲೋಕಗಳು), ಮಹೇಶಧಾಮ (ಕೈಲಾಸ) ಆಧ್ಯಾತ್ಮಿಕ ಆಕಾಶದಲ್ಲಿರುವ ಅಗಣಿತ ವೈಕುಂಠ ಲೋಕಗಳಿಗಿಂತ ಅತಿ ಎತ್ತರದಲ್ಲಿದೆ.
ಈ ಎಲ್ಲ ಲೋಕಗಳನ್ನೂ ಪರಿಪಾಲಿಸುತ್ತಿರುವ ಆದಿಪುರುಷನಾದ ಗೋವಿಂದನನ್ನು ಬ್ರಹ್ಮದೇವನು ಭಜಿಸುತ್ತಿದ್ದಾನೆ.

ಶ್ರೀಕೃಷ್ಣನು ಈ ಭುವಿಯಲ್ಲಿ ಅವತಾರವೆತ್ತುವ ಮುನ್ನ ಗೋಲೋಕದ ಪಡಿಯಚ್ಚಾದ ಗೋಕುಲ (ವೃಂದಾವನಧಾಮ) ವನ್ನು ಈ ಭುವಿಗೆ ತಂದನು. ದೇವತೆಗಳು, ಅವನ ನಿರಂತರ ಸಂಗಾತಿಗಳು ಹಾಗೂ ಶರಣಾಗತಿ ಆತ್ಮಗಳು ಅಲ್ಲಿ ಜನಿಸಿದರು. ಅವನ ಸಂಗಭಾಗ್ಯವನ್ನು ಪಡೆದು ಧನ್ಯರಾದರು.
ಆದ್ದರಿಂದಲೇ ಮಥುರಾ, ದ್ವಾರಕಾಗಳಿಗಿಂತ ವೃಂದಾವನವೇ ಮಹತ್ತಾದುದು. ಕೃಷ್ಣನು ವ್ರಜವನ್ನು ತೊರೆದು ಮಥುರೆಗೆ ಹೋದನಂತರ ವೃಂದಾವನ ವಾಸಿಗಳು ಬಹು ದೀರ್ಘಕಾಲ ಕೃಷ್ಣನ ಅಗಲಿಕೆಯ ವೇದನೆಯನ್ನು ಅನುಭವಿಸಿದರು. ಅನಂತರ ಕೃಷ್ಣನು ಉದ್ಧವನನ್ನು ಕಳುಹಿಸಿ, ವೃ೦ದಾವನದ ಕಣಕಣದಲ್ಲೂ ತಾನೇ ಸಾಕ್ಷಾತ್ತಾಗಿರುವೆನೆಂಬ ಅರಿವು ನೀಡಿ ಅವರನ್ನು ಸಮಾಧಾನಪಡಿಸಿದನು.
ಶ್ರೀ ಚೈತನ್ಯ ಮಹಾಪ್ರಭುಗಳು ಕೂಡಾ ವೃಂದಾವನ ವಾಸಿಗಳು ಅನುಭವಿಸಿದ ವೇದನೆ ಕಾತರಗಳನ್ನು ಅಂತೆಯೇ ಅನುಭವಿಸಿ, ತಮ್ಮ ಭಕ್ತರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿರುವರು. ಹಾಗೂ ಈ ಹಂತವನ್ನು ಮುಟ್ಟಲು ನಾವಿರುವ ಈ ಕಲಹಯುಗಕ್ಕೆ ಹರೇಕೃಷ್ಣ ಮಹಾಮಂತ್ರ ಸಂಜೀವಿನಿಯನ್ನು ಉಪದೇಶಿಸಿರುವನು.
ಬನ್ನಿ ಮಹಾಮಂತ್ರವನ್ನು ಜಪಿಸೋಣ, ಭಗವದ್ಗೀತೆ ನುಡಿದ ಬಾಯಲ್ಲೇ, ತಾಯಿಗೆ ವಿಶ್ವರೂಪ ತೋರುತ್ತಾ, ಬೆಣ್ಣೆಕದ್ದು ತಿನ್ನುತ್ತಾ, ತೊದಲು ಮಾತಿನಲ್ಲಿ ಸುಳ್ಳು ನುಡಿಗಳನ್ನಾಡಿದ ದೇವನನ್ನು ವೃಂದಾವನದ ಕಾಡುಗಳಲ್ಲಿ ನೆನೆಯೋಣ. ಎಲ್ಲ ಸಿಹಿಗಳಿಗಿಂತ ಸಿಹಿಯಾದ ಅವನ ಲೀಲೆಗಳನ್ನು ಸವಿಯೋಣ.






Leave a Reply