ಸುಖದ ನಡುವೆ ಸಂಕಷ್ಟಗಳು…

– ಆಂಗ್ಲಮೂಲ: ಶ್ರೀ ಯದುರಾಜ ದಾಸ, ಅನುವಾದ: ಸುರೇಶ್‌ ಮೂನ

ಬ್ರಹ್ಮನು ತೆರಳಿದನಂತರ ಶ್ರೀಕೃಷ್ಣನು ಯಮುನಾ ತೀರಕ್ಕೆ ಹಿಂತಿರುಗಿ ತನ್ನ ಗೆಳೆಯರನ್ನೂ ಕರುಗಳನ್ನೂ ಸೇರಿಕೊಂಡನು. ಅವರೆಲ್ಲರೂ ಮಾಯವಾದಾಗ ಹೇಗಿದ್ದರೋ ಹಾಗೇ ಇದ್ದರು. ಅವರೆಲ್ಲರೂ ಊಟಮಾಡುತ್ತಿದ್ದಾಗ ಕೃಷ್ಣನು ಅವರನ್ನು ಬಿಟ್ಟು ಹೋಗಿದ್ದನು. ಈಗ ಕೃಷ್ಣನು ಅವರ ಮುಂದೆ ಕಾಣಿಸಿಕೊಂಡಾಗ ಹುಡುಗರು ಕೃಷ್ಣನು ಒಂದು ನಿಮಿಷದಲ್ಲಿ ಹಿಂತಿರುಗಿದ್ದಾನೆ ಎಂದುಕೊಂಡರು.

ಊಟ ಮಾಡುವಾಗ ಕೃಷ್ಣನು ತಮ್ಮ ಸಹವಾಸವನ್ನು ಬಿಟ್ಟಿರಲಾರ ಎಂದುಕೊಂಡು ಅವರು ನಗಲು ಪ್ರಾರಂಭಿಸಿದರು. ಅವರೆಲ್ಲರೂ ಬಹಳ ಸಂತೋಷದಿಂದಿದ್ದರು. ”ಪ್ರಿಯ ಗೆಳೆಯ ಕೃಷ್ಣ, ಇಷ್ಟು ಬೇಗ ನೀನು ಹಿಂದಕ್ಕೆ ಬಂದಿದ್ದೀಯ! ಆಗಲಿ, ನಾವಿನ್ನೂ ಊಟವನ್ನು ಪ್ರಾರಂಭಿಸಿಯೇ ಇಲ್ಲ. ಒಂದು ತುತ್ತನ್ನೂ ತಿಂದಿಲ್ಲ.

ದಯವಿಟ್ಟು ನಮ್ಮ ಜೊತೆ ಸೇರಿಕೋ. ನಾವೆಲ್ಲ ಒಟ್ಟಿಗೆ ಊಟ ಮಾಡೋಣ” ಎಂದು ಕರೆದರು. ಕೃಷ್ಣನು ನಸುನಗುತ್ತಾ ಅವರ ಆಹ್ವಾನವನ್ನು ಒಪ್ಪಿಕೊಂಡು ತನ್ನ ಸ್ನೇಹಿತರೊಂದಿಗೆ ಕುಳಿತು ಊಟ ಮಾಡಿದನು. ಊಟ ಮಾಡುತ್ತಿರುವಾಗ ಕೃಷ್ಣನು “ನಾನು ಒಂದು ಕ್ಷಣದಲ್ಲಿ ಹಿಂದಕ್ಕೆ ಬಂದು ಬಿಟ್ಟೆ ಎಂದು ಈ ಸ್ನೇಹಿತರು ನಂಬಿದ್ದಾರೆ. ಒಂದು ವರ್ಷ ಕಾಲ ಬ್ರಹ್ಮನ ನಿಗೂಢ ಕಾರ್ಯಗಳಲ್ಲಿ ನಾನು ತೊಡಗಿದ್ದೆ ಎಂದು ಅವರಿಗೆ ತಿಳಿಯದು” ಎಂದು ಯೋಚಿಸಿದ.

ಊಟ ಮಾಡಿದನಂತರ ಕೃಷ್ಣನೂ ಅವನ ಸ್ನೇಹಿತರೂ ಕರುಗಳೂ ವ್ರಜಭೂಮಿಯಲ್ಲಿನ ತಮ್ಮ ತಮ್ಮ ಮನೆಗಳಿಗೆ ಹೊರಟರು. ದಾರಿಯಲ್ಲಿ ಬೃಹದಾಕಾರದ ಸರ್ಪದಂತೆ ಬಿದ್ದಿದ್ದ ಅಘಾಸುರನ ಹೆಣವನ್ನು ನೋಡಿ ಸಂತೋಷಪಟ್ಟರು. ಕೃಷ್ಣನು ತಮ್ಮ ಮಕ್ಕಳೊಂದಿಗೆ ಹಿಂತಿರುಗಿದುದನ್ನು ವೃಂದಾವನ ವಾಸಿಗಳು ಕಂಡರು.

ಕೃಷ್ಣನ ಶಿರಸ್ತ್ರಾಣದಲ್ಲಿ ಒಂದು ನವಿಲುಗರಿಯಿತ್ತು. ಅಲ್ಲದೆ ಕಾಡಿನ ಹೂಗಳಿಂದಲೂ ಅಲಂಕರಿಸಿತ್ತು. ಅವನು ಹೂಮಾಲೆಯನ್ನೂ ಧರಿಸಿದ್ದ ಹಾಗೂ ಗೋವರ್ಧನ ಗಿರಿಯ ಗುಹೆಗಳಿಂದ ತಂದಿದ್ದ ಖನಿಜಗಳ ಬಣ್ಣಗಳನ್ನು ಧರಿಸಿದ್ದ. ಗೋವರ್ಧನ ಗಿರಿಯು ಸಹಜವಾದ ಕೆಂಪು ಬಣ್ಣಗಳಿಗೆ ಪ್ರಸಿದ್ಧವಾಗಿತ್ತು. ಕೃಷ್ಣನೂ ಅವನ ಸ್ನೇಹಿತರೂ ತಮ್ಮ ದೇಹಗಳಿಗೆ ಆ ಬಣ್ಣಗಳನ್ನು ಹಚ್ಚಿಕೊಂಡಿದ್ದರು.

ಪ್ರತಿಯೊಬ್ಬರ ಕೈಯಲ್ಲೂ ಎಮ್ಮೆಯ ಕೊಂಬಿನ ಕಹಳೆ, ಒಂದು ಕೋಲು ಮತ್ತು ಕೊಳಲು ಇದ್ದವು. ಅವರು ತಮ್ಮ ತಮ್ಮ ಕರುಗಳನ್ನು ಅವುಗಳ ಹೆಸರು ಹಿಡಿದು ಕರೆಯುತ್ತಿದ್ದರು. ಕೃಷ್ಣನ ಲೀಲೆಗಳಲ್ಲಿ ಅವರಿಗೆ ಎಷ್ಟೊಂದು ಹೆಮ್ಮೆಯೆಂದರೆ ಹಳ್ಳಿಯನ್ನು ಪ್ರವೇಶಿಸುತ್ತಾ ಅವನ ಮಹಿಮೆಯನ್ನು ಕುರಿತು ಹಾಡುತ್ತಿದ್ದರು.

ವೃಂದಾವನದ ಗೋಪಿಯರೆಲ್ಲಾ ರಮಣೀಯನಾದ ಕೃಷ್ಣ ಹಿಂತಿರುಗಿದುದನ್ನು ಕಂಡು ಸಂತೋಷಪಟ್ಟರು. ಬೃಹದಾಕಾರದ ಸರ್ಪವು ತಮ್ಮನ್ನು ನುಂಗುವುದನ್ನು ಹೇಗೆ ತಪ್ಪಿಸಿಕೊಂಡೆವು ಮತ್ತು ಕೃಷ್ಣನು ಸರ್ಪವನ್ನು ಹೇಗೆ ಕೊ೦ದ ಎನ್ನುವುದನ್ನು ಕುರಿತು ಅವನ ಗೆಳೆಯರೂ ಸೊಗಸಾದ ಹಾಡುಗಳನ್ನು ರಚಿಸಿದ್ದರು.

ಕೆಲವರು ಕೃಷ್ಣನು ಯಶೋದೆಯ ಮಗನೆಂದು ಕರೆದರೆ ಇನ್ನು ಕೆಲವರು ಅವನು ನಂದನ ಮಗನೆಂದು ಕರೆದರು. ಅವರೆಲ್ಲಾ, “ಅವನು ಎಷ್ಟು ಆಶ್ಚರ್ಯಕರ ವ್ಯಕ್ತಿಯೆಂದರೆ ನಮ್ಮನ್ನು ಬೃಹತ್ ಸರ್ಪ ದಿಂದ ಕಾಪಾಡಿ ಸರ್ಪವನ್ನು ಕೊಂದನು” ಎಂದು ಹೇಳಿದರು. ಆದರೆ ಅಘಾಸುರನನ್ನು ಕೊಂದು ಒಂದು ವರ್ಷ ಕಳೆದಿತ್ತು. ಎಂಬುದು ಮಾತ್ರ ಅವರಿಗೆ ತಿಳಿದಿರಲಿಲ್ಲ.

ಹೀಗೆ ಕೃಷ್ಣ ಮತ್ತು ಬಲರಾಮರು ಕೌಮಾರ್ಯವನ್ನು ಕಳೆದು ಪೌಗಂಡವನ್ನು ಸ್ವೀಕರಿಸಿದರು. ಆಗ ಗೋಪಾಲಕರೆಲ್ಲ ಐದು ವರ್ಷ ಕಳೆದಿದ್ದ ಬಾಲಕರಿಗೆಲ್ಲ ಹಸುಗಳನ್ನು ಮೇಯಿಸುವ ಜವಾಬ್ದಾರಿಯನ್ನು ಕೊಡಲು ನಿರ್ಧರಿಸಿದರು. ಹಸುಗಳನ್ನು ಮೇಯಿಸುವ ಜವಾಬ್ದಾರಿಯನ್ನು ಹೊತ್ತ ಕೃಷ್ಣ ಮತ್ತು ಬಲರಾಮರು ವೃಂದಾವನದಲ್ಲಿ ಓಡಾಡುತ್ತಾ ಆ ಭೂಮಿಯನ್ನು ಪಾವನಗೊಳಿಸಿದರು.

ವೃಂದಾವನದ ಕಾಡು, ಹೂವುಗಳು, ತರಕಾರಿಗಳು ಮತ್ತು ಮೇಯುವ ಹುಲ್ಲುಗಳಿಂದ ತುಂಬಿ ಹೋಗಿತ್ತು. ಗೋಪಬಾಲರು ಮತ್ತು ಬಲರಾಮರೊಂದಿಗೆ ಕೃಷ್ಣನು ಹಸುಗಳನ್ನು ಮುಂದಿಟ್ಟುಕೊಂಡು ಕಾಡಿನಲ್ಲಿ ಕೊಳಲನ್ನು ನುಡಿಸುತ್ತಿದ್ದನು. ವೃಂದಾವನದ ಕಾಡು, ಭಕ್ತನ ನಿರ್ಮಲ ಮನಸ್ಸಿನಂತೆ ಪವಿತ್ರವಾಗಿತ್ತು ಮತ್ತು ದುಂಬಿಗಳು, ಹೂವುಗಳು ಮತ್ತು ಹಣ್ಣುಗಳಿಂದ ತುಂಬಿಹೋಗಿತ್ತು.

ಅಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳಿದ್ದವು. ಮನುಷ್ಯನ ಆಯಾಸವನ್ನು ಹೋಗಲಾಡಿಸುವ ತಿಳಿನೀರಿನ ಕೆರೆಗಳಿದ್ದವು. ಸುಗಂಧಮಯವಾದ ತಂಗಾಳಿಯು ಸದಾ ಮೈಮನಗಳಿಗೆ ಹೊಸ ಚೈತನ್ಯವನ್ನು ಕೊಡುತ್ತಿತ್ತು. ಇಂತಹ ಸುಂದರವಾದ ಕಾಡಿಗೆ ಕೃಷ್ಣನು ತನ್ನ ಅಣ್ಣ ಬಲರಾಮ ಹಾಗೂ ಗೆಳೆಯರೊಂದಿಗೆ ಪ್ರವೇಶಿಸಿದನು.

ಕಾಡಿನ ಹಿತಕರವಾದ ವಾತಾವರಣವನ್ನು ಅವನು ಸಂಪೂರ್ಣವಾಗಿ ಸಂತೋಷದಿಂದ ಸವಿದನು. ತನ್ನ ಚರಣಕಮಲಗಳನ್ನು ಸ್ಪರ್ಶಿಸಿ ಸ್ವಾಗತ ಬಯಸುವಂತೆ ಎಲ್ಲ ಮರಗಳೂ ಹಣ್ಣುಗಳು ಮತ್ತು ಹೊಸ ಕುಡಿಗಳಿಂದ ತಡೆಯಲಾರದಷ್ಟು ಭಾರವಾಗಿ ಭೂಮಿಯನ್ನು ಮುಟ್ಟಲು ಕೆಳಕ್ಕೆ ಬಾಗಿದುದನ್ನು ಕೃಷ್ಣನು ಕಂಡನು. ಮರಗಳೂ, ಹಣ್ಣುಗಳೂ, ಹೂವುಗಳೂ ಈ ರೀತಿ ಇರುವುದನ್ನು ಕಂಡು ಅವನಿಗೆ ಸಂತೋಷವಾಯಿತು. ಅವುಗಳ ಅಪೇಕ್ಷೆಯನ್ನು ಅರ್ಥಮಾಡಿಕೊಂಡ ಅವನು ನಸು ನಕ್ಕನು.

ಆಗ ಕೃಷ್ಣನು ತನ್ನ ಅಣ್ಣ ಬಲರಾಮನಿಗೆ ಹೀಗೆಂದು ಹೇಳಿದನು. “… ಪ್ರೀತಿಯ ಅಣ್ಣ ನೀನು ನಮಗೆಲ್ಲರಿಗಿಂತ ಶ್ರೇಷ್ಠನು, ದೇವತೆಗಳು ನಿನ್ನ ಚರಣಕಮಲಗಳನ್ನು ಪೂಜಿಸುತ್ತಾರೆ. ಹಣ್ಣುಗಳು ತುಂಬಿದ ಈ ಮರಗಳು ನಿನ್ನ ಚರಣ ಕಮಲಗಳನ್ನು ಸ್ಪರ್ಶಿಸಲು ಹೇಗೆ ಬಾಗಿವೆ ನೋಡು. ಮರಗಳ ರೂಪವನ್ನು ಒಪ್ಪಿಕೊಳ್ಳಲೇಬೇಕಾಗಿ ಬಂದು ಕತ್ತಲಿನಿಂದ ಅವು ಹೊರ ಬರಲು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ.

ವೃಂದಾವನದ ನೆಲದಲ್ಲಿ ಹುಟ್ಟಿದ ಮರಗಳು ಸಾಮಾನ್ಯ ಜೀವಿಗಳು, ತಮ್ಮ ಹಿಂದಿನ ಜನ್ಮಗಳಲ್ಲಿ ನಿರಾಕಾರವಾಗಿ ದೃಷ್ಟಿಯನ್ನು ತಳೆದಿದ್ದರಿಂದ ಈಗ ಅವು ಚಲಿಸಲಾಗದ ಸ್ಥಿತಿಯಲ್ಲಿ ಇವೆ. ಆದರೆ ಈಗ ಅವು ನಿನ್ನನ್ನು ವೃಂದಾವನದಲ್ಲಿ ಕಾಣುವ ಅವಕಾಶವನ್ನು ಪಡೆದಿವೆ. ನಿನ್ನ ಸಹವಾಸದಿಂದ ಆಧ್ಯಾತ್ಮಿಕ ಜೀವನದಲ್ಲಿ ಮುನ್ನಡೆಯಲು ಪ್ರಾರ್ಥನೆ ಮಾಡುತ್ತಿವೆ.

ನಿನ್ನ ಸುತ್ತ ಝೇಂಕಾರ ಮಾಡುತ್ತಿರುವ ದುಂಬಿಗಳು ತಮ್ಮ ಹಿಂದಿನ ಜನ್ಮಗಳಲ್ಲಿ ನಿನ್ನ ಭಕ್ತರಾಗಿದ್ದಿರಬೇಕೆಂದು ನನಗನ್ನಿಸುತ್ತದೆ. ನಿನಗಿಂತ ಶ್ರೇಷ್ಠರಾದ ಮತ್ತು ಪ್ರೀತಿಯನ್ನು ಸೂಸುವ ಒಡೆಯನು ದೊರೆಯುವುದು ಸಾಧ್ಯವಿಲ್ಲ. ಆದುದರಿಂದ ಅವು ನಿನ್ನ ಸಹವಾಸವನ್ನು ಬಿಡಲಾರವು. ನೀನೇ ದೇವೋತ್ತಮ ಮತ್ತು ಮೂಲ ಪುರುಷನು. ಹಾಗೆಯೇ ನವಿಲುಗಳು ಹೇಗೆ ದೈವೋನ್ಮಾದದಿಂದ ಕುಣಿಯುತ್ತಿವೆ ನೋಡು.

ಗೋಪಿಯರಂತೆ ನರ್ತಿಸುತ್ತಿರುವ ಜಿಂಕೆಗಳು ಅದೇ ಒಲುಮೆಯಿಂದ ನಿನ್ನನ್ನು ಸ್ವಾಗತಿಸುತ್ತಿವೆ. ನೀನು ಕಾಣಿಸಿಕೊಂಡದ್ದು ಶುಭಕರ ಎಂದು ಕಾಡಿನಲ್ಲಿರುವ ಕೋಗಿಲೆಗಳು ಸಂತೋಷದಿಂದ ಸಹ ನಿನ್ನ ಮಹಿಮೆಯನ್ನು ಹೇಳುತ್ತಿವೆ. ಇನ್ನು ಭೂಮಿಯ ವಿಷಯ ಹೇಳುವುದಾದರೆ ನಿನ್ನ ಚರಣ ಕಮಲಗಳ ಗುರುತುಗಳು ಅದರ ಮೇಲೆ ಮೂಡುತ್ತಿವೆ. ಇದು ಅದರ ದೈವ ಭಕ್ತಿಗೆ ಮತ್ತು ಭಾಗ್ಯಕ್ಕೆ ಸಾಕ್ಷಿ.”

ಕೃಷ್ಣ ಮತ್ತು ಬಲರಾಮರು ಕಾಡು ಹೂಗಳ ಹಾರವನ್ನು ಧರಿಸಿದ್ದರು. ನಡೆಯುವಾಗ, ಹುಡುಗರು ಕೆಲವೊಮ್ಮೆ ಕೆರೆಗಳ ಹಂಸಗಳ ಧ್ವನಿಯನ್ನು ಅನುಕರಿಸುತ್ತಿದ್ದರು. ನವಿಲುಗಳು ನೃತ್ಯ ಮಾಡುವುದನ್ನು ಕಂಡಾಗ ಅವರು ಕೃಷ್ಣನ ಮುಂದೆ ಆ ನವಿಲುಗಳನ್ನು ಅನುಕರಿಸುತ್ತಿದ್ದರು. ಅದಕ್ಕೆ ಪ್ರತಿಕ್ರಿಯಿಸುತ್ತಾ ಕೃಷ್ಣನೂ ಸಹ ಆ ನೃತ್ಯವನ್ನು ಅನುಕರಿಸಿ ಕೊರಳನ್ನು ಚಲಿಸುತ್ತಾ ತನ್ನ ಸ್ನೇಹಿತರನ್ನು ಸಂತೋಷಗೊಳಿಸುತ್ತಿದ್ದನು.

ಕೃಷ್ಣನು ನೋಡಿಕೊಳ್ಳುತ್ತಿದ್ದ ಹಸುಗಳಿಗೆ ಬೇರೆ ಬೇರೆ ಹೆಸರುಗಳಿದ್ದವು. ಕೃಷ್ಣನು ಅವುಗಳನ್ನು ಪ್ರೀತಿಯಿಂದ ಕರೆಯುತ್ತಿದ್ದನು. ಅದನ್ನು ಕೇಳಿ ಹಸುಗಳೂ ಪ್ರತಿಯಾಗಿ ಅಂಬಾ ಎಂದು ಕೂಗುತ್ತಿದ್ದವು. ಕೃಷ್ಣನ ಮತ್ತು ಹಸುಗಳ ಪ್ರತಿಕ್ರಿಯೆಗಳನ್ನು ಕಂಡು ಹುಡುಗರು ಹೃತ್ಪೂರ್ವಕವಾಗಿ ಸಂತೋಷಪಡುತ್ತಿದ್ದರು.

ಹಲವು ಪಕ್ಷಿಗಳು ಮುಖ್ಯವಾಗಿ ಚಕೋರ, ನವಿಲು, ಕೋಗಿಲೆ ಮತ್ತು ಭಾರದ್ವಾಜಗಳ ಕೂಗನ್ನೂ ಸಹ ಅವರು ಅನುಕರಿಸುತ್ತಿದ್ದರು. ಹುಲಿಗಳು ಮತ್ತು ಸಿಂಹಗಳ ಗರ್ಜನೆಯಿಂದ ಬೆದರಿ ದುರ್ಬಲ ಪ್ರಾಣಿಗಳು ಓಡುತ್ತಿದ್ದಾಗ ಹುಡುಗರು ಅವುಗಳನ್ನು ಅನುಕರಿಸಿ ತಾವೂ ಓಡುತ್ತಿದ್ದರು. ಅವರಿಗೆ ಆಯಾಸವಾದಾಗ ಕೆಳಗೆ ಕೂಡುವರು.

ಬಲರಾಮನು ವಿಶ್ರಾಂತಿ ಪಡೆಯಲೆಂದೇ ಒಬ್ಬ ಹುಡುಗನ ತೊಡೆಯ ಮೇಲೆ ತಲೆಯಿಟ್ಟು ಮಲಗುವನು. ಕೃಷ್ಣನು ಕೂಡಲೇ ಬಂದು ಬಲರಾಮನ ಕಾಲನ್ನು ಒತ್ತುವನು. ಒಮ್ಮೊಮ್ಮೆ ಅವನು ತಾಳೆಯ ಬೀಸಣಿಗೆಗಳನ್ನು ತಂದು ಬಲರಾಮನಿಗೆ ಹಿತವಾಗುವಂತೆ ಗಾಳಿ ಬೀಸಿ ಅವನ ಆಯಾಸವು ಶಮನವಾಗುವಂತೆ ಮಾಡುತ್ತಿದ್ದನು.

ಬಲರಾಮನು ಹೀಗೆ ವಿಶ್ರಾಂತಿ ಪಡೆಯುತ್ತಿದ್ದಾಗ ಕೆಲವು ಹುಡುಗರು ಕುಣಿಯುವರು, ಹಾಡುವರು, ಇನ್ನು ಕೆಲವರು ಕುಸ್ತಿ ಮಾಡುವರು ಅಥವಾ ಹಾರುವರು. ಗೆಳೆಯರು ಹೀಗೆ ಖುಷಿಯಲ್ಲಿದ್ದಾಗ ಕೃಷ್ಣನೂ ಅವರ ಜೊತೆ ಸೇರಿ ಅವರ ಕೈಗಳನ್ನು ಹಿಡಿದುಕೊಳ್ಳುವನು. ಅವರ ಸಹವಾಸದಲ್ಲಿ ಸಂತೋಷಪಟ್ಟು ಅವರ ಆಟೋಟಗಳನ್ನು ಹೊಗಳುವನು.

ಕೃಷ್ಣನಿಗೇ ಆಯಾಸವಾದಾಗ ಒಂದು ದೊಡ್ಡ ಮರದ ಬುಡದಲ್ಲಿ ಬಂದು ಮಲಗುವನು ಅಥವಾ ಒಬ್ಬ ಗೋಪಬಾಲನ ತೊಡೆಯ ಮೇಲೆ ತಲೆಯಿಟ್ಟು ಮಲಗುವನು. ಹೀಗೆ ಕೃಷ್ಣನು ಮಲಗಿದಾಗ ಕೆಲವು ಹುಡುಗರು ಬಂದು ಅವನ ಕಾಲನ್ನು ಒತ್ತುವರು. ಕೆಲವರು ಎಲೆಗಳಿಂದ ಮಾಡಿದ ಬೀಸಣಿಗೆಗಳ ಗಾಳಿ ಬೀಸುವರು.

ಸಾಮರ್ಥ್ಯವುಳ್ಳ ಕೆಲವು ಹುಡುಗರು  ಅವನಿಗೆ ಸಂತೋಷವಾಗಲೆಂದು ಹಾಡುವರು. ಬಹುಬೇಗ ಅವನ ಆಯಾಸವು ಮಾಯವಾಗುವುದು. ದೇವೋತ್ತಮ ಪರಮ ಪುರುಷನಾದ ಕೃಷ್ಣನ ಕಾಲುಗಳನ್ನು ಭಾಗ್ಯದೇವತೆಯೇ ಒತ್ತುತ್ತಿದ್ದಳು. ಈಗ ಅವನು ಒಬ್ಬ ಹಳ್ಳಿಯ ಹುಡುಗನಂತೆ ಕಾಣಲು ತನ್ನ ಅಂತರಂಗದ ಶಕ್ತಿಯನ್ನು ವಿಸ್ತರಿಸಿಕೊಂಡು ಗೋಪಬಾಲರಲ್ಲಿ ಒಬ್ಬನಾಗಿದ್ದ.

ಆದರೆ ಅವನು ಹಳ್ಳಿಯ ಹುಡುಗನಂತೆ ಕಂಡರೂ ಹಲವು ಸನ್ನಿವೇಶಗಳಲ್ಲಿ ತಾನು ದೇವೋತ್ತಮ ಪರಮ ಪುರುಷ ಎಂಬುದನ್ನು ತೋರಿಸಿಕೊಂಡಿದ್ದನು. ಒಮ್ಮೊಮ್ಮೆ ಕೆಲವು ಜನರು ದೇವೋತ್ತಮ ಪರಮ ಪುರುಷರಂತೆ ತೋರಿಸಿಕೊಳ್ಳುತ್ತಾರೆ. ಮುಗ್ಧಜನರಿಗೆ ಮೋಸ ಮಾಡುತ್ತಾರೆ. ಆದರೆ ಅವರು ಕೇವಲ ಮೋಸ ಮಾಡಬಲ್ಲರಷ್ಟೇ. ಅವರೆಂದೂ ದೇವರ ಸಾಮರ್ಥ್ಯವನ್ನು ತೋರಲಾರರು.

ಕೃಷ್ಣನು ತನ್ನ ಬಾಲ ಲೀಲೆಗಳಲ್ಲಿ ತೊಡಗಿದ್ದಾಗ ಅವನು ತನ್ನ ಮಾನವ ಶಕ್ತಿಯನ್ನು ಮೀರಿದ ದೈವತ್ವದ ಶಕ್ತಿಗಳನ್ನು ತೋರಿಸಲು ಅವನಿಗೆ ಮತ್ತೊಂದು ಅವಕಾಶ ದೊರೆಯಿತು. ಅವನ ಅತ್ಯಂತ ಆತ್ಮೀಯ ಸ್ನೇಹಿತರಾದ ಶ್ರೀಧಾಮ ಸುಬಲ ಮತ್ತು ಸ್ತೋಕ ಕೃಷ್ಣರು ತಾವು ಎದುರಿಸುತ್ತಿದ್ದ ಒಂದು ಸಮಸ್ಯೆಯ ಬಗ್ಗೆ ಹೀಗೆ ಹೇಳಿದರು.

”ಕೃಷ್ಣ ಮತ್ತು ಬಲರಾಮ, ನೀವು ಮಾನವರಿಗೆ ಹಿಂಸೆ ಮಾಡುವ ಯಾವುದೇ ರಾಕ್ಷಸರನ್ನು ಕೊಲ್ಲುವುದರಲ್ಲಿ ನಿಪುಣರಾಗಿದ್ದೀರಿ. ಈ ಸ್ಥಳದ ಹತ್ತಿರವೇ ತಾಳೆವನ ಎನ್ನುವ ದೊಡ್ಡ ಕಾಡಿದೆ. ಅದರ ತುಂಬ ತಾಳೇ ಮರಗಳಿವೆ. ಅವುಗಳೆಲ್ಲಾ ಹಣ್ಣಿನಿಂದ ತುಂಬಿವೆ. ಮಾಗಿದ ಹಣ್ಣುಗಳು ಕೆಳಕ್ಕೆ ಉದುರುತ್ತಿವೆ.

ಹೀಗೆ ಅದೊಂದು ಸುಂದರ ಪ್ರದೇಶ. ಆದರೆ ಅಲ್ಲಿರುವ ಧೇನಕಾಸುರ ಎಂಬ ಒಬ್ಬ ದೊಡ್ಡ ಕತ್ತೆಯ ರೂಪದ ರಾಕ್ಷಸನಿಂದಾಗಿ ಅಲ್ಲಿಗೆ ಹೋಗುವುದೆ ಅಸಾಧ್ಯವಾಗಿದೆ. ಅವನೊಂದಿಗೆ ಅದೇ ಆಕಾರದ ಇನ್ನೂ ಅನೇಕ ರಾಕ್ಷಸರಿದ್ದಾರೆ. ಅವರೆಲ್ಲರೂ ಮಹಾ ಬಲಶಾಲಿಗಳು. ಬೇರೆ ಪ್ರಾಣಿ ಪಕ್ಷಿಗಳೂ ಅಲ್ಲಿ ಸುಳಿದಾಡಲಾರವು.

ಆ ಹಣ್ಣುಗಳು ಬಹಳ ಸುವಾಸನಾಯುಕ್ತವಾಗಿವೆ. ಆದರೆ ಆ ರಾಕ್ಷಸರಿರುವವರೆಗೆ ನಾವು ಅಲ್ಲಿಗೆ ಹೋಗುವಂತಿಲ್ಲ. ಕೃಷ್ಣಮತ್ತು ಬಲರಾಮ ನೀವು ಮಾತ್ರ ಅವರನ್ನು ಸದೆ ಬಡೆಯಬಲ್ಲಿರಿ. ನೀವಿಷ್ಟ ಪಟ್ಟರೆ ಅನಂತರ ನಾವೆಲ್ಲರೂ ಅಲ್ಲಿಗೆ ಹೋಗಿ ಆಹಾರವನ್ನು ಸವಿಯೋಣ”

ಈ ಮಾತುಗಳನ್ನು ಕೇಳಿದ ಕೃಷ್ಣ ಮತ್ತು ಬಲರಾಮರಿಗೆ ತಮ್ಮ ಸ್ನೇಹಿತರ ಈ ಕೋರಿಕೆಯನ್ನು ಈಡೇರಿಸಬೇಕೆನಿಸಿತು. ಅವರು ಮುಗುಳನ್ನು ತಾವು ಈ ಕಾರ್ಯವನ್ನು ಕೈಗೊಳ್ಳುವುದಾಗಿ ಹೇಳಿ ಅವರೆಲ್ಲರೊಂದಿಗೆ ಆ ತಾಳವನಕ್ಕೆ ಹೊರಟರು. ತಾಳವನವನ್ನು ಪ್ರವೇಶಿಸುತ್ತಲೆ ಬಲರಾಮನು ಆನೆಯ ಬಲವನ್ನು ಪ್ರದರ್ಶಿಸುತ್ತಾ ತಾಳೆ ಮರಗಳನ್ನು ಅಲ್ಲಾಡಿಸಿದನು.

ಇದರಿಂದಾಗಿ ಮರದಲ್ಲಿನ ಹಣ್ಣುಗಳೆಲ್ಲ ಕೆಳಕ್ಕುದುರಿದವು, ಹಣ್ಣುಗಳು ಉದುರುವ ಶಬ್ದ ಕೇಳಿದ ಧೇನಕಾಸುರನು ವೇಗವಾಗಿ ಅವರಲ್ಲಿಗೆ ಬಂದನು. ಅವನು ಬಂದ ರಭಸಕ್ಕೆ ಭೂಕಂಪವಾದಂತ ಮರಗಳು ಅಲ್ಲಾಡಿದವು. ಅವನು ಬಂದೊಡನೆ ಬಲರಾಮನ ಎದೆಗೆ ತನ್ನ ಹಿಂಗಾಲುಗಳಿಂದ ರಭಸವಾಗಿ ಒದ್ದನು.

ಬಲರಾಮನು ಅದಕ್ಕೆ ಪ್ರತಿಕ್ರಿಯೆ ತೋರಲಿಲ್ಲ. ಆಗ ರಾಕ್ಷಸನು ಮತ್ತಷ್ಟು ರಭಸವಾಗಿ ಒದ್ದನು. ಈಗ ಬಲರಾಮನು ತನ್ನ ಒಂದೇ ಕೈಯಲ್ಲಿ ಅವನ ಎರಡೂ ಕಾಲುಗಳನ್ನು ಹಿಡಿದು ಜೋರಾಗಿ ತಿರುಗಿಸಿ ಮರಗಳ ಮೇಲಕ್ಕೆ ಎಸೆದನು. ಅವನು ರಾಕ್ಷಸನನ್ನು ತಿರುಗಿಸುತ್ತಿದ್ದಾಗಲೆ ಅವನ ಪ್ರಾಣ ಹೊರಟು ಹೋಗಿತ್ತು ಮರಗಳ ಮೇಲೆ ಬಿದ್ದ ಆ ರಾಕ್ಷಸನ ದೇಹ ಎಷ್ಟು ಭಾರವಾಗಿತ್ತೆಂದರೆ ಆ ಮರಗಳು ಬಿದ್ದಾಗ ಅಲ್ಲಿ ಬಿರುಗಾಳಿ ಬೀಸಿದಂತಾಯಿತು.

ಬಲರಾಮನ ಈ ಶಕ್ತಿಯು ಅಸಾಧಾರಣವೇನಲ್ಲ, ಏಕೆಂದರೆ ಬಲರಾಮನೂ ಅನಂತನಾಗನೆಂಬ ದೇವ ಪುರುಷನೇ, ತನ್ನ ಸಹಸ್ರ ಹೆಡೆಗಳ ಮೇಲೆ ಅವನು ಎಲ್ಲ ಗ್ರಹಗಳನ್ನು ನಿಲ್ಲಿಸಿಕೊಂಡಿದ್ದಾನೆ.

ಬಲರಾಮನು ಧೇನಕಾಸುರನನ್ನು ಸಂಹರಿಸಿದ ಮೇಲೆ ಅವನ ಸಹಚರರೆಲ್ಲರೂ ಬಲರಾಮ ಮತ್ತು ಕೃಷ್ಣರ ಮೇಲೆ ಒಟ್ಟಾಗಿ ಎರಗಿದರು. ತಮ್ಮ ಸ್ನೇಹಿತನ ಸಂಹಾರದ ಸೇಡು ತೀರಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು ಆದರೆ ಕೃಷ್ಣ ಬಲರಾಮರು ಆ ಕಗಳ ಹಿಂಗಾಲುಗಳನ್ನು ಹಿಡಿದು ದೇನಕಾಸುರನನ್ನು ತಿರುಗಿಸಿ ಎಸೆದಂತೇ ಎಸೆದು ಕೊಂದು ಹಾಕಿದರು.

ಅವರೆಲ್ಲರ ದೇಹಗಳು ವಿವಿಧ ಬಣ್ಣದ ಮೋಡಗಳು ಮರಗಳ ಮೇಲೆ ಸೇರಿರುವಂತೆ ತೋರುತ್ತಿತ್ತು. ಈ ಮಹಾ ಘಟನೆಯ ವಿಷಯವನ್ನು ತಿಳಿದ ಮೇಲಿನ ಲೋಕದ ದೇವತೆಗಳು ಕೃಷ್ಣ ಮತ್ತು ಬಲರಾಮರ ಮೇಲೆ ಹೂಮಳೆಗರೆದು ತಮ್ಮ ನಗಾರಿಗಳನ್ನು ಪ್ರದರ್ಶಿಸಿ ಅವರನ್ನು ಪ್ರಾರ್ಥನೆಯ ಮೂಲಕ ಕೊಂಡಾಡಿದರು.

ಈ ರಾಕ್ಷಸರ ವಧೆಯ ಅನಂತರ ತಾಳವನದ ಹಣ್ಣುಗಳನ್ನು ಸಂಗ್ರಹಿಸಲು ಜನರೂ ಬರಲಾರಂಭಿಸಿದರು. ಅಲ್ಲಿನ ಹಚ್ಚ ಹಸಿರು ಹುಲ್ಲನ್ನು ಮೇಯಲು ಇತರ ಪ್ರಾಣಿಗಳೂ ಬರಲಾರಂಭಿಸಿದವು. ಇದಾದ ಅನಂತರ ಕೃಷ್ಣ ಮತ್ತು ಬಲರಾಮ ಹಾಗೂ ಅವರ ಗೆಳೆಯರು ತಮ್ಮ ಕೊಳಲುಗಳನ್ನು ಊದುತ್ತಾ ವೃಂದಾವನವನ್ನು ಪ್ರವೇಶಿಸಿದರು.

ಹುಡುಗರು ಅವರ ಕಾಡಿನಲ್ಲಿನ ಆಸಾಧಾರಣ ಘಟನೆಗಳನ್ನು ಹೊಗಳಲಾರಂಭಿಸಿದರು. ವೃಂದಾವನದಲ್ಲಿ ಎಲ್ಲರೂ ಕೃಷ್ಣನು ಇಲ್ಲದಿದ್ದುದರಿ೦ದ ಮಂಕಾಗಿದ್ದರು. ದಿನವೆಲ್ಲ ಅವರು ಅವನ ಕಾಡಿನಲ್ಲಿನ ಚಟುವಟಿಕೆಗಳ ಬಗ್ಗೆ ಅಥವಾ ಅವನು ಗೋವುಗಳನ್ನು ಮೇಯುವುದನ್ನು ಕುರಿತು ಯೋಚಿಸುತ್ತಿದ್ದ.

ಕೃಷ್ಣನ ಹಿಂತಿರುಗುತ್ತಿರುವುದನ್ನು ಕಂಡು ಅವರ ಆತಂಕವೆಲ್ಲಾ ದೂರವಾಯಿತು. ಕಮಲ ಪುಷ್ಪದ ಮಕರಂದದ ಸುತ್ತದುಂಬಿಗಳು ಹಾರಾಡುವಂತೆ ಕೆಲವರು ಅವನ ಮುಖವನ್ನು ದೃಷ್ಟಿಸಿ ನೋಡಿದರು. ಕೃಷ್ಣನು ವೃಂದಾವನವನ್ನು ಪ್ರವೇಶಿಸುತ್ತಿದ್ದಂತೆ ಗೋಪ ತರುಣಿಯರು ಮಂದಹಾಸ ಬೀರಿ ನಕ್ಕರು. ಕೊಳಲನ್ನು ನುಡಿಸುತ್ತಿದ್ದ ಕೃಷ್ಣನೂ ಆ ಬಾಲಿಕೆಯರ ಸುಂದರ ಮುಖಗಳನ್ನು ಕಂಡು ಸಂತೋಷಪಟ್ಟನು.

ಕೃಷ್ಣ ಮತ್ತು ಬಲರಾಮರನ್ನು ಅವರ ಪ್ರೀತಿಯ ತಾಯಂದಿರಾದ ಯಶೋದೆ ಮತ್ತು ರೋಹಿಣಿಯರು ಬರಮಾಡಿಕೊಂಡರು. ಅವರಿಗೆ ಸ್ನಾನ ಮಾಡಿಸಿ ಸ್ವಾದಿಷ್ಟವಾದ ಆಹಾರವನ್ನು ನೀಡಿದರು. ಅವರೂ ಸಂತೋಷದಿಂದ ಅವನ್ನು ಸೇವಿಸಿದರು. ಅನಂತರ ತಾಯಿಯರು ಅವರನ್ನು ಸ್ವಚ್ಛವಾದ ಪಲ್ಲಂಗದ ಮೇಲೆ ಕೂರಿಸಿ ಅವರ ಸಾಹಸಗಳ ಕತೆಗಳ ಹಾಡುಗಳನ್ನು ಹಾಡಿದರು. ಹಾಡನ್ನು ಕೇಳುತ್ತಲೇ ಅವರು ನಿದ್ರಾವಶವಾದರು.

ಕೃಷ್ಣನ ಪೌಗ೦ಡ ಲೀಲೆ ಹೀಗೆ ಸುಮಧುರವಾಗಿ ಸಾಗಿದ್ದಾಗ ಒಂದು ದಿನ…

ಬೇಸಿಗೆ ಕಾಲದ ಒ೦ದು ದಿನ. ಗೋಪಬಾಲರೂ, ಹಸುಗಳೂ ಬಾಯಾರಿಕೆಯಿಂದಾಗಿ ಯಮುನಾ ನದಿಯ ನೀರನ್ನು ಕುಡಿಯತೊಡಗಿದರು. ಆದರೆ ನದಿಯ ಆ ಭಾಗದಲ್ಲಿ ಕಾಳೀಯ ಎ೦ಬ ವಿಷ ಸರ್ಪವಿದ್ದುದರಿಂದ ನೀರೆಲ್ಲ ವಿಷಮಯವಾಗಿತ್ತು. ಇದನ್ನು ತಿಳಿಯದೆ ಹಸುಗಳೂ ಬಾಲಕರೂ ಆ ನೀರನ್ನು ಕುಡಿದಿದ್ದರಿಂದ ನೆಲದ ಮೇಲೆ ಬಿದ್ದು ಬಿಟ್ಟರು.

ನೋಡಲು ಅವರು ಸತ್ತುಹೋದಂತೇ ತೋರುತ್ತಿತ್ತು. ಆಗ, ಅವರೊಂದಿಗಿದ್ದ ಹಾಗೂ ಎಲ್ಲ ಜೀವಿಗಳಿಗೆ ಜೀವನಾದ ಕೃಷ್ಣನು ತನ್ನ ಕರುಣಾಮಯವಾದ ಕಡೆಗಣ್ಣಿನ ನೋಟವನ್ನು ಅವರೆಡೆಗೆ ಹರಿಸಿದನು. ಅವರಿಗೆಲ್ಲ ಪ್ರಜ್ಞೆಯು ಬಂದು ಅತ್ಯಾಶ್ಚರ್ಯದಿಂದ ಒಬ್ಬರನ್ನೊಬ್ಬರು ನೋಡಲಾರಂಭಿಸಿದರು. ಯಮುನಾ ನದಿಯ ನೀರನ್ನು ಕುಡಿದು ತಾವು ಸತ್ತು ಹೋದುದು ಕೃಷ್ಣನ ಕೃಪಾದೃಷ್ಟಿಯಿಂದ ಮತ್ತೆ ಬದುಕ್ಕಿದ್ದು ಎಲ್ಲವೂ ಅವರಿಗೆ ಅರ್ಥವಾಯಿತು. ಯೋಗೀಶ್ವರನಾದ ಕೃಷ್ಣನ ಶಕ್ತಿಯನ್ನು ಅವರು ಮೆಚ್ಚಿಕೊಂಡರು.

ಯಮುನಾ ನದಿಯೊಳಗೆ ಒಂದು ಸರೋವರವಿತ್ತು. ಅದರಲ್ಲಿ ಕಾಳೀಯನೆಂಬ ಭಯಂಕರ ಸರ್ಪ ವಾಸಿಸುತ್ತಿತ್ತು. ಅದರ ವಿಷದಿಂದ ಇಡೀ ಪ್ರದೇಶವು ಎಷ್ಟು ಕಲ್ಮಷಗೊಂಡಿತ್ತೆಂದರೆ ದಿನಪೂರ್ತಿ ಅಲ್ಲಿಂದ ವಿಷವಾಯುವು ಹೊರ ಹೊಮ್ಮುತ್ತಿತ್ತು.

ಆ ಸ್ಥಳದ ಮೇಲೆ ಒಂದು ಪಕ್ಷಿಯು ಹಾರಿ ಹೋದರೆ ಕೂಡಲೇ ಅದು ನೀರಿನಲ್ಲಿ ಬಿದ್ದು ಸಾಯುತ್ತಿತ್ತು. ಇದರಿಂದಾಗಿ ನದಿಯ ತೀರದ ಹುಲ್ಲು ಮತ್ತು ಗಿಡ ಮರಗಳು ಒಣಗಿ ಹೋಗಿದ್ದವು. ಹೀಗೆ ವೃಂದಾವನದ ಮುಂದೆ ಹರಿಯುತ್ತಿದ್ದ ನದಿಯು ಘಟ ಸರ್ಪದ ವಿಷದ ಪರಿಣಾಮದಿಂದ ವಿಷಮಯವಾಗಿದ್ದುದು ಕೃಷ್ಣನಿಗೆ ತಿಳಿಯಿತು.

ಪ್ರಪಂಚದಲ್ಲಿ ಇರಲು ಯೋಗ್ಯವಲ್ಲದ ಎಲ್ಲ ಪ್ರಾಣಿಗಳನ್ನು ಕೊಲ್ಲಲು ಅವತರಿಸಿದ ಕೃಷ್ಣನು ಕೂಡಲೇ ಯಮುನಾ ನದಿಯ ತೀರದಲ್ಲಿದ್ದ ಒಂದು ಕದಂಬ ವೃಕ್ಷವನ್ನು ಹತ್ತಿದನು. ಕದಂಬವು ಸಾಮಾನ್ಯವಾಗಿ ವೃಂದಾವನದ ಪ್ರದೇಶದಲ್ಲಿ ಮಾತ್ರ ಬೆಳೆಯುವ, ಗುಂಡಾದ ಹಳದೀ ಬಣ್ಣದ ಹೂವನ್ನು ಬಿಡುವ ಒಂದು ವೃಕ್ಷ.

ಕೃಷ್ಣನು ಏರಿದ ಈ ವೃಕ್ಷವೊಂದೇ ಇಲ್ಲಿ ಸಾಯದೇ ಉಳಿದಿದ್ದ ಮರ. ಕೃಷ್ಣನ ಪಾದ ಸ್ಪರ್ಶದಿಂದ ಅದಕ್ಕೆ ಜೀವ ಬಂದಿತು ಎಂದೂ ಕೆಲವು ವ್ಯಾಖ್ಯಾನಕಾರರು ಹೇಳುತ್ತಾರೆ. ಇನ್ನು ಕೆಲವು ಪುರಾಣಗಳಲ್ಲಿ, ಕೃಷ್ಣನ ನಿರಂತರ ವಾಹನವಾದ ಗರುಡನಿಗೆ ಕೃಷ್ಣನು ಈ ಮರವನ್ನು ಏರುವನೆಂದು ತಿಳಿದಿತ್ತು.

ಆದುದರಿಂದ ಅದನ್ನು ಉಳಿಸಲು ಸ್ವಲ್ಪ ಅಮೃತವನ್ನು ಎರೆದಿದ್ದನು ಎಂದು ಹೇಳಿದೆ. ಹೀಗೆ ಉಳಿದುಕೊಂಡಿದ್ದ ಕದಂಬವನ್ನು ಹತ್ತಿದ ಕೃಷ್ಣನು ಸೊಂಟಕ್ಕೆ ಕಟ್ಟಿದ ಬಟ್ಟೆಯ ಪಟ್ಟಿಯನ್ನು ಬಿಗಿಮಾಡಿಕೊಂಡನು. ಒಬ್ಬ ಜಟ್ಟಿಯಂತೆ ವೀರಾವೇಶದಿಂದ ಕೈಗಳನ್ನು ಆಡಿಸುತ್ತಾ ವಿಷಮಯವಾದ ಆ ಸರೋವರಕ್ಕೆ ಹಾರಿದನು.

ಅವನು ಹಾರಿದ ರಭಸಕ್ಕೆ ದೊಡ್ಡ ವಸ್ತುವೊಂದು ಬಿದ್ದಂತೆ ನದಿಯ ನೀರು ದಡದ ಮೇಲೆ ಉಕ್ಕಿ ಹರಿಯಿತು. ಕೃಷ್ಣನೇ ಎಲ್ಲ ಬಲದ ಮೂಲನಾದ್ದರಿಂದ ಅವನ ಶಕ್ತಿಯ ಈ ಪ್ರದರ್ಶನವು ಅಸಾಧಾರಣವೇನೂ ಅಲ್ಲ.

ನೀರಿಗೆ ಬಿದ್ದ ಕೃಷ್ಣನು ಒಂದು ಬಲಶಾಲಿ ಆನೆಯಂತೆ ಈಜಾಡತೊಡಗಿದಾಗ ಬಹುದೊಡ್ಡ ಶಬ್ದವಾಗತೊಡಗಿತು. ಇದು ಘಟಸರ್ಪ ಕಾಳೀಯನಿಗೂ ಕೇಳಿಸಿತು. ಈ ಅಲ್ಲೋಲ ಕಲ್ಲೋಲವನ್ನು ಅವನಿಗೆ ತಡೆದುಕೊಳ್ಳಲಾಗಲಿಲ್ಲ. ತನ್ನ ವಾಸ ಸ್ಥಾನದ ಮೇಲೆ ಆಗಿರುವ ಆಕ್ರಮಣ ಎಂದು ಆ ಸರ್ಪಕ್ಕೆ ಅರ್ಥವಾಯಿತು.

ಕೂಡಲೇ ಅವನೂ ನೀರಿನಿಂದ ಹೊರಬಂದು ಕೃಷ್ಣನ ಮುಂದಕ್ಕೆ ಬ೦ದನು. ಕೂಡಲೇ ಅವನಿಗೆ ಕೃಷ್ಣನು ವೀಕ್ಷಣೀಯ ವ್ಯಕ್ತಿ ಎಂದೆನಿಸಿತು. ಕೃಷ್ಣನದು ಸುಂದರ ಹಾಗೂ ಸೂಕ್ಷ್ಮವಾದ ಕಾಯ, ಮೋಡದ ಬಣ್ಣ ಕಮಲದಂತಹ ಪಾದಗಳು. ಅವನು ಶ್ರೀವತ್ಸ, ಆಭರಣಗಳು ಮತ್ತು ಪೀತಾಂಬರದಿಂದ ಅಲಂಕೃತನಾಗಿದ್ದನು.

ಅವನು ನಸುನಗುತ್ತಾ ಯಾವ ಆತಂಕವೂ ಇಲ್ಲದೆ ಲೀಲಾಜಾಲವಾಗಿ ನದಿಯಲ್ಲಿ ಈಜಾಡುತ್ತಿದ್ದನು. ಕೃಷ್ಣನು ಹೀಗೆ ಬಲು ಸುಂದರನಾಗಿ ಕಂಡರೂ, ತನ್ನ ಪ್ರದೇಶದ ಮೇಲೆ ಆಕ್ರಮಣ ಮಾಡಿರುವ ಕೃಷ್ಣನ ಮೇಲೆ ಕಾಳೀಯನಿಗೆ ರೋಷ ಉಕ್ಕಿತು. ಅವನು ಕೂಡಲೇ ಕೃಷ್ಣನ ಮೈಯನ್ನು ಸುತ್ತಿದನು.

ನಂಬಲಾರದ ರೀತಿಯಲ್ಲಿ ಈ ಸರ್ಪವು ಕೃಷ್ಣನ ಮೈಯನ್ನು ಸುತ್ತುವರಿದುದನ್ನು ಕಂಡು ನದೀ ತೀರದಲ್ಲಿದ್ದ ಗೋಪಬಾಲರು ಮತ್ತು ವೃಂದಾವನ ವಾಸಿಗಳು ಸ್ತಂಭೀಭೂತರಾದರು. ಅವರೆಲ್ಲರೂ ತಮ್ಮ ಸರ್ವಸ್ವವನ್ನೂ ಕೃಷ್ಣನಿಗೆ ಅರ್ಪಿಸಿದ್ದರು. ಅಂತಹ ತಮ್ಮ ನೆಚ್ಚಿನ ಕೃಷ್ಣನನ್ನು ಆ ಸ್ಥಿತಿಯಲ್ಲಿ ನೋಡಿದಾಗ ಇನ್ನೇನಾಗುವುದೋ ಎಂಬ ಭಯದಿಂದ ಅವರು ನೆಲದ ಮೇಲೆ ಬಿದ್ದುಬಿಟ್ಟರು. ಗೂಳಿಗಳೂ, ಹಸುಕರುಗಳೂ ದುಃಖವನ್ನು ತಡೆಯಲಾರದೇ ಹೋದವು. ಬಹು ಆತಂಕದಿಂದ ಅವು ಕೃಷ್ಣನ ಕಡೆ ನೋಡಲಾರಂಭಿಸಿದವು.

ತಮ್ಮ ಪ್ರೀತಿಯ ಕೃಷ್ಣನಿಗೆ ನೆರವಾಗಲಾರದೆ ಅವು ಯಾತನೆಯಿಂದ ದಡದ ಮೇಲೆ ನಿಂತಿದ್ದವು. ಯಮುನಾ ನದಿ ಹಾಗೂ ಅದರ ತೀರದಲ್ಲಿ ಇದೆಲ್ಲ ನಡೆಯುತ್ತಿದ್ದಾಗ ಅನೇಕ ಅಪಶಕುನಗಳೂ ಗೋಚರಿಸಿದವು. ಭೂಮಿಯು ನಡುಗಿತು. ಆಕಾಶದಿಂದ ಧೂಮಕೇತುಗಳು ಉದುರಿದವು. ಮನುಷ್ಯರ ದೇಹಗಳು ಕಂಪಿಸಲಾರಂಭಿಸಿದವು.

ದುಶ್ಯಕುನಗಳನ್ನು ಕ೦ಡ ನ೦ದ ಮಹಾರಾಜನೂ, ಇತರ ಗೋಪಾಲಕರೂ ಭಯದಿಂದ ತತ್ತರಿಸಿದರು. ಕೃಷ್ಣನು ಅಣ್ಣ ಬಲರಾಮನಿಲ್ಲದೇ ಒಬ್ಬನೇ ಹಸುಗಳೊಂದಿಗೆ ಹೋಗಿದ್ದಾನೆಂದು ಅವರಿಗೆ ತಿಳಿಯಿತು. ಇದರಿಂದ ಯಶೋದ ಮತ್ತು ಗೋಪಾಲಕರಿಗೆ ವಿಪರೀತವಾದ ಆತಂಕವಾಯಿತು.

ಅವರಿಗೆ ಕೃಷ್ಣನಿಗಿಂತ ಪ್ರಿಯವಾದದ್ದು ಏನೂ ಇರಲಿಲ್ಲ. ಕೃಷ್ಣನ ಮೇಲಿನ ಅಪಾರ ಪ್ರೀತಿಯಿಂದ ಹಾಗೂ ಕೃಷ್ಣನ ಸಾಮರ್ಥ್ಯವನ್ನು ತಿಳಿಯದೆ ಅವರು ದುಃಖ ಮತ್ತು ಆತಂಕಗಳಿಂದ ದಿಕ್ಕುಗೆಟ್ಟಿದ್ದರು. ನಿಶ್ಚಯವಾಗಿಯೂ ಇಂದು ಕೃಷ್ಣನು ಸೋಲುತ್ತಾನೆ ಎಂಬ ಭಯ ಅವರನ್ನು ಆವರಿಸಿಕೊಂಡಿತ್ತು.

ವೃಂದಾವನದಿಂದ ಮಕ್ಕಳು, ತರುಣರು, ವೃದ್ಧರು, ಹೆಂಗಸರು, ಗಂಡಸರು, ಪ್ರಾಣಿಗಳು ಹೀಗೆ ಎಲ್ಲ ಜೀವಿಗಳೂ ತಮಗೊಬ್ಬನೇ ಆಧಾರವಾಗಿದ್ದ ಕೃಷ್ಣನನ್ನು ನೋಡಲು ಧಾವಿಸಿ ಬಂದರು. ಇದೆಲ್ಲಾ ಆಗುತ್ತಿದ್ದಾಗ ಎಲ್ಲ ಜ್ಞಾನದ ಪ್ರಭುವಾದ ಬಲರಾಮನು ಸುಮ್ಮನೆ ಮುಗುಳುನಗೆ ನಗುತ್ತಾ ಅಲ್ಲಿ ನಿಂತಿದ್ದನು.

ತನ್ನ ತಮ್ಮನ ಬಲ ಎಷ್ಟೆಂದು ಅವನಿಗೆ ತಿಳಿದಿತ್ತು. ಈ ಭೌತಿಕ ಜಗತ್ತಿನ ಒಂದು ಸಾಮಾನ್ಯ ಸರ್ಪದೊಂದಿಗೆ ಹೋರಾಡುತ್ತಿರುವ ಕೃಷ್ಣನ ಬಗ್ಗೆ ಆತಂಕವಿಲ್ಲ ಎಂದು ಅವನಿಗೆ ತಿಳಿದಿತ್ತು. ಹೀಗಾಗಿ ಅವನು ಇತರರಂತೆ ಚಿಂತೆಗೊಳಗಾಗಲಿಲ್ಲ. ಇತ್ತ ವೃಂದಾವನ ವಾಸಿಗಳೆಲ್ಲಾ ದುಗುಡದಿಂದ ಧ್ವಜ, ಧನುಸ್ಸು ಮತ್ತು ಶಂಖಗಳನ್ನುಳ್ಳ ಕೃಷ್ಣನ ಹೆಜ್ಜೆಯ ಗುರುತುಗಳನ್ನು ಅನುಸರಿಸುತ್ತಾ ಯಮುನಾ ನದಿಯ ತೀರಕ್ಕೆ ಧಾವಿಸಿದರು.

ಅಲ್ಲಿ ಕಾಳೀಯ ಸರ್ಪದ ಹಿಡಿತಕ್ಕೆ ಸಿಕ್ಕಿರುವ ಕೃಷ್ಣನನ್ನು ನೋಡಿ ಅಳುತ್ತಿರುವ ಗೋವುಗಳನ್ನು, ಗೋಪಬಾಲರನ್ನು ಕಂಡು ಅವರ ದುಃಖ ಮತ್ತಷ್ಟು ಹೆಚ್ಚಾಯಿತು. ಕೃಷ್ಣನ ಸಾಮರ್ಥ್ಯದ ಬಗ್ಗೆ ಅವರಿಗೆ ಅರಿವಿಲ್ಲದಿದ್ದರೂ ಅವನ ಮೇಲಿನ ಅಪರಿಮಿತವಾದ ಪ್ರೀತಿಯಿಂದಾಗಿ ಕೃಷ್ಣನ ಅಂತ್ಯ ಬಂತೆಂದು ತಿಳಿದರು.

ತಮ್ಮೊಂದಿಗೆ ಅವನಿಗಿದ್ದ ಸ್ನೇಹ, ಅವನ ಮಂದಸ್ಮಿತ ಮುಖ, ಮಧುರ ಮಾತುಗಳು, ತಮ್ಮೊಡನೆ ಅವನು ನಡೆದುಕೊಳ್ಳುತ್ತಿದ್ದ ರೀತಿ ಇವೆಲ್ಲವನ್ನೂ ಅವರು ಮತ್ತೆ ಮತ್ತೆ ಸ್ಮರಿಸಿಕೊಳ್ಳಲಾರಂಭಿಸಿದರು. ಅಂತಹ ಜೀವನದ ಆತ್ಮೀಯ ಕೃಷ್ಣನು ಇಂದು ಕಾಳೀಯನ ಕ್ರೂರ ಮುಷ್ಟಿಯಲ್ಲಿ ಸಿಕ್ಕಿಬಿದ್ದಿರುವುದು ಅವರ ಪಾಲಿಗೆ ಮೂರು ಲೋಕಗಳೂ ಬರಿದಾದಂತೆ ತೋರಿದವು ಎಂದು ಚೈತನ್ಯ ಮಹಾಪ್ರಭುಗಳು ಹೇಳಿದ್ದಾರೆ. ಇದೇ ಕೃಷ್ಣ ಪ್ರಜ್ಞೆಯ ಅತ್ಯಂತ ಉನ್ನತ ಘಟ್ಟ.

ವೃಂದಾವನ ವಾಸಿಗಳೊಂದಿಗೆ ಅಲ್ಲಿಗೆ ಬಂದ ತಾಯಿ ಯಶೋದೆಯಂತೂ ತಾನೇ ನದಿಯನ್ನು ಪ್ರವೇಶಿಸಿ ಮಗನನ್ನು ಉಳಿಸಿಕೊಳ್ಳುತ್ತೇನೆಂದಳು. ಆದರೆ ಇತರರು ಅವಳನ್ನು ತಡೆದಾಗ ದುಃಖ ತಪ್ತಳಾಗಿದ್ದ ಅವಳು ಮೂರ್ಛೆ ಹೋದಳು. ಅಷ್ಟೇ ದುಃಖಿತರಾದ ಇತರರೂ ಧಾರಾಕಾರವಾಗಿ ಸುರಿಯುವ ಮಳೆಯಂತೆ ಅಥವಾ ನದಿಯ ಅಲೆಗಳಂತೆ ಕಣ್ಣೀರನ್ನು ಸುರಿಸಿದರು.

ಆದರೂ ತಾಯಿ ಯಶೋದೆಗೆ ಮತ್ತೆ ಪ್ರಜ್ಞೆ ಬರುವಂತೆ ಮಾಡಲು ಅವರು ಶ್ರೀಕೃಷ್ಣನ ದಿವ್ಯ ಬಾಲ ಲೀಲೆಗಳನ್ನು ಕುರಿತು ಗಟ್ಟಿಯಾಗಿ ಮಾತನಾಡಲಾರಂಭಿಸಿದರು. ಕೃಷ್ಣನೇ ತನ್ನ ಸರ್ವಸ್ವವೆಂದು ಅವಳು ತಿಳಿದಿದ್ದರಿಂದ ದುಃಖ ತಡೆಯಲಾರದೆ ಪ್ರಜ್ಞೆ ಕಳೆದುಕೊಂಡಿದ್ದಳು. ಅದೇ ಭಾವನೆಯನ್ನು ಹೊಂದಿದ್ದ ನಂದನೂ ಇತರರೂ ಕೃಷ್ಣನನ್ನು ಬಿಡಿಸುವ ಸಲುವಾಗಿ ನದಿಯನ್ನು ಪ್ರವೇಶಿಸಲನುವಾದರು. ಇದೆಲ್ಲವನ್ನೂ ಬಲರಾಮನು ನೋಡುತ್ತಿದ್ದನು. ಮುಂದೇನಾಗುವುದೆಂದು ತಿಳಿದಿದ್ದ ಅವನು ಅವರನ್ನೆಲ್ಲಾ ನದಿಗಿಳಿಯದಂತೆ ತಡೆದನು.

ಕಾಳೀಯನ ಸುರುಳಿಯಲ್ಲಿ ಸಿಕ್ಕಿಕೊಂಡ ಕೃಷ್ಣನು ಸಾಮಾನ್ಯ ಮಗುವಿನಂತೆ ಎರಡು ಗಂಟೆಗಳ ಕಾಲವಿದ್ದನು. ಆದರೆ ತನ್ನ ತಾಯಿ ತಂದೆಯರು, ಗೋಪಿಯರು, ಹುಡುಗರು ಮತ್ತು ಗೋವುಗಳು ಹೀಗೆ ಗೋಕುಲದ ಸಮಸ್ತ ನಿವಾಸಿಗಳು ಸಾಯುವ ಸ್ಥಿತಿಯಲ್ಲಿದ್ದುದನ್ನು ಕಂಡು ತಾನು ಹಾವಿನ ಹಿಡಿತದಿಂದ ತಪ್ಪಿಸಿಕೊಂಡನು.

ಅನಂತರ ತನ್ನ ದೇಹವನ್ನು ಹಿಗ್ಗಿಸಲಾರಂಭಿಸಿದನು. ಮತ್ತೆ ಕೃಷ್ಣನನ್ನು ಹಿಡಿತದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಿದಾಗ ಕಾಳೀಯನಿಗೆ ಬಹಳ ಸೆಳೆತವಾಯಿತು. ಇದರಿಂದಾಗಿ ಕೃಷ್ಣನ ಮೇಲಿನ ಅವನ ಹಿಡಿತವೂ ಸಡಿಲವಾಯಿತು. ದೇವೋತ್ತಮ ಪರಮಪುರುಷನಾದ ಕೃಷ್ಣನನ್ನು ತನ್ನ ಹಿಡಿತದಿಂದ ಸಡಿಲಗೊಳಿಸದೆ ಅವನಿಗೆ ಬೇರೆ ದಾರಿಯೇ ಉಳಿದಿರಲಿಲ್ಲ.

ಇದರಿಂದ ಕಾಳೀಯನ ರೋಷ ಉಕ್ಕಿತು. ಅವನ ಬೃಹದಾಕಾರದ ಹೆಡೆಗಳು ಹಿಗ್ಗಿದವು. ತನ್ನ ಹೆಡೆಗಳಿಂದ ಅವನು ವಿಷವಾಯುವನ್ನು ಹೊರ ಹೊಮ್ಮಿಸಿದ. ಅವನ ಕಣ್ಣುಗಳು ಬೆಂಕಿಯಂತೆ ಉರಿಯುತ್ತಿದ್ದವು. ಬಾಯಿಂದ ಉರಿಯು ಚಾಚಿ ಹೊರಬರುತ್ತಿತ್ತು. ಕವಲೊಡೆದ ತನ್ನ ನಾಲಿಗೆಗಳನ್ನು ಸವರಿಕೊಳ್ಳುತ್ತಾ ಕಾಳೀಯನು ತನ್ನ ಎರಡೆರಡು ಹೆಡೆಗಳಿಂದಲೂ ಕೃಷ್ಣನನ್ನು ನೋಡಿದನು.

ಅವನ ನೋಟದಲ್ಲೂ ವಿಷ ತುಂಬಿತ್ತು. ಆಗ, ಗರುಡನು ಹಾವುಗಳ ಮೇಲೇರುವಂತೆ ಕೃಷ್ಣನು ಕಾಳೀಯ ಮೇಲೆರಗಿದನು. ಕಾಳೀಯನು ತನ್ನ ಮೇಲೆರಗಿದ ಕೃಷ್ಣನನ್ನು ಕಚ್ಚಲು ಹವಣಿಸಿದ. ಆದರೆ ಹಾಗಾಗಗೊಡದೆ ಕೃಷ್ಣನು ಅವನ ಸುತ್ತ ಸುತ್ತು ಹಾಕಿದ. ಕೃಷ್ಣ ಮತ್ತು ಕಾಳೀಯರು ಹೀಗೆ ಸುತ್ತಲಾರಂಭಿಸಿದಾಗ ಕಾಳೀಯನಿಗೆ ಆಯಾಸವಾಯಿತು.

ಶಕ್ತಿಯು ಕ್ರಮೇಣ ಕುಂದಿದಂತೆ ಕಂಡು ಬಂದಿತು. ಕೂಡಲೇ ಕೃಷ್ಣನು ಅವನ ಹೆಡೆಗಳನ್ನು ಕೆಳಕ್ಕೆ ಒತ್ತಿ ತಾನು ಅವುಗಳ ಮೇಲಕ್ಕೆ ಹಾಕಿದನು. ಸರ್ಪದ ಹೆಡೆಗಳಲ್ಲಿನ ಆಭರಣಗಳಲ್ಲಿನ ಕಾಂತಿಯಿಂದ ಪ್ರಭುವಿನ ಚರಣ ಕಮಲಗಳಿಗೆ ಕೆಂಪುರಂಗು ಬಂದಿತು. ನೃತ್ಯದಂತಹ ಎಲ್ಲ ಕಲೆಗಳ ಮೂಲ ಕಲಾವಿದನಾದ ಪ್ರಭುವು ಸರ್ಪದ ಹೆಡೆಗಳು ಅತ್ತಿಂದಿತ್ತ ಚಲಿಸುತ್ತಿದ್ದರೂ ಅವುಗಳ ಮೇಲೆ ನರ್ತನ ಮಾಡಿದನು.

ಇದನ್ನು ಕಂಡು ಮೇಲಿನ ಲೋಕದ ನಿವಾಸಿಗಳು ಪುಷ್ಪವೃಷ್ಟಿ ಮಾಡಿದರು. ನಗಾರಿಗಳನ್ನು ಬಾರಿಸಿದರು. ಬಗೆ ಬಗೆಯ ಕೊಳಲನ್ನೂದಿದರು. ವಿಧ ವಿಧವಾದ ಪ್ರಾರ್ಥನೆಯ ಹಾಡುಗಳನ್ನು ಹಾಡಿದರು. ಹೀಗೆ ಗಂಧರ್ವರು, ಸಿದ್ಧರು, ದೇವತೆಗಳು ಸ್ವರ್ಗದ ಎಲ್ಲ ನಿವಾಸಿಗಳೂ ಅತೀವ ಆನಂದವನ್ನು ಅನುಭವಿಸಿದರು.

ಇತ್ತ ಕೃಷ್ಣನು ಹೆಡೆಗಳ ಮೇಲೆ ನರ್ತನ ಮಾಡಲು ಪ್ರಾರಂಭಿಸಿದಾಗ ಕಾಳೀಯನು ಅವನನ್ನು ಕೆಳಕ್ಕೆ ತಳ್ಳಲು ಯತ್ನಿಸಿದನು. ಕಾಳೀಯನಿಗೆ ನೂರು ಹೆಡೆಗಳಿದ್ದರೂ ಕೃಷ್ಣನು ಅವುಗಳನ್ನೆಲ್ಲಾ ತನ್ನ ಚರಣ ಕಮಲಗಳಿಂದ ತುಳಿಯುತ್ತಾ ಅವುಗಳನ್ನು ವಶಪಡಿಸಿಕೊಂಡು ಮಣಿಸಿದನು. ಇದನ್ನು ತಡೆದುಕೊಳ್ಳಲಾಗದ ಕಾಳೀಯ ತನ್ನ ಪ್ರಾಣವನ್ನೇ ಉಳಿಸಿಕೊಳ್ಳಲು ಹೆಣಗಾಡಬೇಕಾಯಿತು.

ಅವನು ಎಲ್ಲ ಬಗೆಯ ಹೊಲಸನ್ನು ವಾಂತಿ ಮಾಡಿದನು. ಬೆಂಕಿಯ ಉರಿಯನ್ನು ಉಗುಳಿದನು. ಹೀಗೆ ಅವನಿಂದ ವಿಷಪೂರಿತ ವಸ್ತುಗಳು ಹೊರಬರುತ್ತಲೇ ಅವನ ಪಾಪದ ಹೊರೆ ಕಡಮೆಯಾಯಿತು. ಆದರೂ ಅವನು ಬಹುರೋಷದಿಂದ ತನ್ನ ಪ್ರಾಣವುಳಿಸಿಕೊಳ್ಳಲು ಹೋರಾಡುತ್ತಾ ಪ್ರಭುವನ್ನು ಕೊಲ್ಲಲು ಒಂದು ಹೆಡೆಯೆತ್ತಿದನು.

ಕೃಷ್ಣನು ಕೂಡಲೇ ಅದನ್ನು ಒದ್ದು ಅದರ ಮೇಲೆ ಹತ್ತಿಕುಣಿದು ಮಣಿಸಿದನು. ಈಗ ಕಾಳೀಯನು ವಿಷದ ಬದಲು ರಕ್ತವನ್ನು ಕಕ್ಕಲು ಪ್ರಾರಂಭಿಸಿದನು. ಪ್ರಭುವಿನ ಒದೆತಗಳಿಂದ ಅವನ ದೇಹವು ಮುರಿದು ಹೋಗಿರುವಂತೆ ಆಗಿತ್ತು.

ಸಂಪೂರ್ಣವಾಗಿ ದಣಿದು ಹೋಗಿದ್ದ ಅವನು ಕಡೆಗೆ ಕೃಷ್ಣನು ದೇವೋತ್ತಮ ಪರಮ ಪುರುಷ ಎಂದು ಅರ್ಥಮಾಡಿಕೊಳ್ಳಲಾರಂಭಿಸಿದನು. ಅವನಿಗೆ ತಾನು ಶರಣಾಗಬೇಕೆಂದೆನಿಸಿತು. ಈಗ ಅವನ ಬಾಯಿಂದ ಬಂದ ವಿಷಮಯ ವಸ್ತುಗಳು ಪುಷ್ಪಗಳ೦ತೆ ಗೋಚರಿಸಿ ಮಹಾವಿಷ್ಣುವಿಗೆ ಅರ್ಚನೆಯಾಗುತ್ತಿರುವಂತೆ ಕಂಡಿತು.

(ಮುಂದುವರಿಯುತ್ತದೆ)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi