ಶ್ರೀ ಚೈತನ್ಯ ಮಹಾಪ್ರಭುಗಳ ಜನನಕ್ಕೆ ಮೊದಲು, ಜಗನ್ನಾಥಮಿಶ್ರ ಹಾಗೂ ಶಚೀಮಾತಾ ದಂಪತಿಗಳಿಗೆ ಎಂಟು ಹೆಣ್ಣುಮಕ್ಕಳು ಜನಿಸಿ ಹುಟ್ಟಿದೊಡನೆಯೆ ಮರಣಿಸಿದ್ದರು.

ಹೀಗೆ ಮಕ್ಕಳನ್ನು ಕಳೆದುಕೊಂಡ ಭಕ್ತ ದಂಪತಿಗಳು ಭಗವಾನ್ ವಿಷ್ಣುವಿನ ಪದಕಮಲಗಳನ್ನು ಪೂಜಿಸಿ ಪುತ್ರನಿಗಾಗಿ ಪ್ರಾರ್ಥಿಸಿದರು. ತತ್ಫಲವಾಗಿ ಜನಿಸಿದ ಶಿಶುವೇ ವಿಶ್ವರೂಪ. ವಿಶ್ವರೂಪ ಉನ್ನತ ಗುಣಗಳ ಗಣಿಯಾಗಿದ್ದನು. ಆತನು ಸ್ವತಃ ಬಲದೇವನ ಅವತಾರವೇ ಆಗಿದ್ದನು.
ಶ್ರೀ ವಿಶ್ವರೂಪ ಪ್ರಭುವಿನ ಜನನದ ಅನಂತರ ಶ್ರೀ ಚೈತನ್ಯ ಮಹಾಪ್ರಭುಗಳು ಜನಿಸಿಬಂದರು. ತಮ್ಮ ಬಾಲಲೀಲೆಯಲ್ಲಿ ಸಹೋದರನ ಒಡನಾಟದ ಸವಿಯುಂಡರು.
ಅದ್ವೈತಾಚಾರ್ಯರಲ್ಲಿಗೆ ವಿಶ್ವರೂಪರು ಇಷ್ಟ ಗೋಷ್ಠಿಗಾಗಿ ತೆರಳಿದ್ದಾಗ, ಊಟಕ್ಕೆ ಕರೆತರಲು ಶಚೀಮಾತೆಯು ಪುಟ್ಟ ನಿಮಾಯಿಯನ್ನೆ ಕಳುಹಿಸುತ್ತಿದ್ದಳು. ಅಲ್ಲಿ ನೆರೆದಿರುತ್ತಿದ್ದ ಭಕ್ತರು ಈತನ ಸೌಂದರ್ಯವನ್ನು ಪ್ರಭೆಯನ್ನು ಕಂಡು ಭಾವಸಮಾಧಿಗೇರುತ್ತಿದ್ದುದೂ ಉಂಟು.
ಬಾಲ್ಯದಲ್ಲಿ ವಿಪರೀತ ತುಂಟನಾಗಿದ್ದ ನಿಮಾಯ್, ಸಹೋದರ ವಿಶ್ವರೂಪನನ್ನು ಕಂಡೊಡನೆಯೇ ತನ್ನ ಚೇಷ್ಟೆಗಳನ್ನು ನಿಲ್ಲಿಸಿಬಿಡುತ್ತಿದ್ದನು.

ಆಜನ್ಮವಿರಾಗಿಯಾಗಿದ್ದ ಶ್ರೀ ವಿಶ್ವರೂಪರು ಸಂಸಾರಾಸಕ್ತಿಗೆ ಸದಾ ವಿಮುಖರಾಗಿರುತ್ತಿದ್ದರು. ಹೀಗಿರುವಾಗ ಅವರ ಮದುವೆಯ ಸಿದ್ಧತೆಗಳು ನಡೆಯತೊಡಗಿತು. ಸಂಸಾರ ಬಂಧನಕ್ಕೆ ಸಿಲುಕಲು ಬಯಸದ ಅವರು ಮನೆಯನ್ನು ತೊರೆದು ಹೊರಟುಬಿಟ್ಟರು.
ಮುಂದೆ ಶ್ರೀವಿಶ್ವರೂಪ ಪ್ರಭುಗಳು ಸಂನ್ಯಾಸ ಸ್ವೀಕರಿಸಿ ಶಂಕರಾರಣ್ಯ ಎಂಬ ಹೆಸರನ್ನು ಪಡೆದರು. ತೀರ್ಥಕ್ಷೇತ್ರಗಳಲ್ಲಿ ಸಂಚರಿಸುತ್ತ ಭಕ್ತಿಸೇವೆಯಲ್ಲಿ ತೊಡಗಿದ್ದ ಪ್ರಭುಗಳು ಶಕಾಬ್ದ 1431 (ಕ್ರಿ.ಶ.1509)ರಲ್ಲಿ ಪಾಂಡುರಂಗ ವಿಠ್ಠಲನ ಸುಪ್ರಸಿದ್ಧ ಕ್ಷೇತ್ರ ಪಂಢರಾಪುರದಲ್ಲಿ ಅಂತರ್ಧಾನರಾದರು.
ಸಂಕಷರ್ಣನ ಅವತಾರವಾಗಿದ್ದ ವಿಶ್ವರೂಪರು ಚತುರ್ವ್ಯೂಹಕ್ಕೆ ಸೇರಿದವರು. ವಿಶ್ವರೂಪನಾಗಿ ತಮ್ಮ ಲೀಲೆ ಮುಗಿಸಿದ ಅನಂತರ ಶ್ರೀ ನಿತ್ಯಾನಂದ ಪ್ರಭುವಿನಲ್ಲಿ ಲೀನವಾದರೆಂದು ಗೌರಚಂದ್ರೋದಯ ಗ್ರಂಥವು ತಿಳಿಸುತ್ತದೆ.






Leave a Reply