ಶ್ರೀ ಸೀಮಂತ ದ್ವೀಪ
ಶ್ರೀಚೈತನ್ಯರು ನಿಮಾಯ್ ಪಂಡಿತರೆಂದು ಖ್ಯಾತರಾಗಿದ್ದಾಗ, ತಮಾಷೆಗಾಗಿ ಶ್ರೀಧರನೊಂದಿಗೆ ಜಗಳವಾಡುತ್ತಿದ್ದರು. ಶ್ರೀಧರನು ತನ್ನ ಬಾಳೆಯಹಣ್ಣು, ಎಲೆ ಇತ್ಯಾದಿಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದರೂ ನಿಮಾಯ್ ಪಂಡಿತರು ಅವಕ್ಕೆ ಅರ್ಧಬೆಲೆ ಕೊಟ್ಟೂ ಇಲ್ಲವೇ ಬೆಲೆಯನ್ನೇ ಕೊಡದೆಯೋ ಕಿತ್ತುಕೊಂಡು ಬಿಡುತ್ತಿದ್ದರು.

ಶ್ರೀಧರನು ನಿಮಾ ಪಂಡಿತರು ಶ್ರೇಷ್ಠ ಬ್ರಾಹ್ಮಣ ಪಂಡಿತರೆಂದು ಗೌರವಿಸಿ ಒಂದು ದಿನ ಅವರಿಗೆ ಉಚಿತವಾಗಿ ಒಂದಿಷ್ಟು ಬಾಳೆಯ ಉತ್ಪನ್ನಗಳನ್ನು ಕೊಟ್ಟು ಇನ್ನು ಮುಂದೆ ಹಾಗೆಲ್ಲಾ ಮಾಡಬಾರದೆಂದು ಕೇಳಿಕೊಂಡನು. ಆದರೂ ನಿಮಾಯ್ ಪಂಡಿತರು ಮತ್ತೆ ಮತ್ತೆ ಅವನೊಡನೆ ವಾಗ್ವಾದಮಾಡುವುದು, ಜಗಳವಾಡುವುದು ಮಾಡುತ್ತಿದ್ದರು.
ಅವನು ನಿಜವಾಗಿ ಬಹಳ ಶ್ರೀಮಂತನಿದ್ದನೆಂದೂ ತನ್ನ ಧನವನ್ನೆಲ್ಲಾ ಎಲ್ಲೋ ಬಚ್ಚಿಟ್ಟು ರಹಸ್ಯದಲ್ಲಿ ಮೃಷ್ಟಾನ್ನ ಭೋಜನ ಮಾಡುತ್ತಾ ಎಲ್ಲರಿಗೂ ಮೋಸ ಮಾಡುತ್ತಿದ್ದನೆಂದೂ ತಾವು ಒಂದು ದಿನ ಅದೆಲ್ಲವನ್ನೂ ಬಯಲುಮಾಡುವೆವೆಂದೂ ಹಂಗಿಸುತ್ತಿದ್ದರು. ಪಾಪ, ಶ್ರೀಧರನು ತಾನು ಕಡು ಬಡವನೆಂದೂ ಬೇಕಿದ್ದರೆ ತನ್ನ ಮುರುಕಲು ಗುಡಿಸಲಿಗೆ ಬಂದು ನೋಡಬಹುದೆಂದೂ ಚೈತನ್ಯರನ್ನು ಆಹ್ವಾನಿಸುತ್ತಿದ್ದನು.
ಒಂದು ದಿನ, ಶ್ರೀ ಚೈತನ್ಯರು ತಮ್ಮ ಮಹಾಪ್ರಕಾಶವೆಂಬ ಲೀಲೆಯಲ್ಲಿ ಶ್ರೀವಾಸ ಪಂಡಿತನ ಮನೆಯಲ್ಲಿ ಶ್ರೀಧರನಿಗೆ ತಾವು ವೃಂದಾವನದಲ್ಲಿ ರಾಧೆಯೊಂದಿಗೆ ಶ್ರೀಕೃಷ್ಣನೇ ಆಗಿರುವುದನ್ನು ತೋರಿಸಿದರು. ಆ ಅದ್ಭುತ ದೃಶ್ಯವನ್ನು ನೋಡಿ ಶ್ರೀಧರನು ಆನಂದದಲ್ಲಿ ಮೂರ್ಛೆ ಹೋದನು. ಚೈತನ್ಯರು ಅವನೊಡನೆ ಆಡಿದ ತಮಾಷೆಯ ಜಗಳವನ್ನು ನೆನಪಿಸಿದಾಗ ಶ್ರೀಧರನಿಗೆ ಹೃದಯವು ತುಂಬಿ ಬಂದು, ತಾನು ಸದಾಕಾಲವೂ ಚೈತನ್ಯರ ಈ ಲೀಲೆಯನ್ನು ಸ್ಮರಿಸುವಂತಾಗಲೆಂದು ಬೇಡಿಕೊಂಡನು.
ಈ ಸ್ಥಳವನ್ನು ವಿಶ್ರಾಮಸ್ಥಾನವೆಂದೂ ಕರೆಯುತ್ತಾರೆ; ಏಕೆಂದರೆ ಶ್ರೀಚೈತನ್ಯ ಮಹಾಪ್ರಭುಗಳು ಸಂಕೀರ್ತನೆ ಮಾಡಿದ ಬಳಿಕ ಇಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದರು. ಚಾಂದ್ ಖಾಜಿಯನ್ನು ಸೋಲಿಸಿದ ಬಳಿಕ ಇಲ್ಲಿಗೆ ಬಂದ ಚೈತನ್ಯರು, ಭಕ್ತಿಯ ಉನ್ಮಾದದಲ್ಲಿ ಇಲ್ಲಿ ಬಿದ್ದಿದ್ದ ಒಂದು ಮುರಿದ ಮಡಕೆಯಲ್ಲಿ ನೀರು ತುಂಬಿಕೊಂಡು ತಮಗೆ ತೃಪ್ತಿಯಾಗುವಷ್ಟು ಕುಡಿದು, ಆ ನೀರನ್ನು ಕುಡಿದದ್ದರಿಂದ ತಮಗೆ ಅಪಾರ ಕೃಷ್ಣಭಕ್ತಿ ಪ್ರಾಪ್ತವಾಯಿತೆಂದು ಹೇಳಿದರು.
ಶ್ರೀಧರನ ಉತ್ಕೃಷ್ಟ ಭಕ್ತಿಯನ್ನು ಎಲ್ಲರಿಗೂ ತೋರಿಸಲು ಅವರು ಹೀಗೆ ಮಾಡಿದರು. ಇದನ್ನು ನೋಡಿ ಶ್ರೀಧರನು ಬಹಳ ಭಾವುಕನಾಗಿಬಿಟ್ಟನು.
ಷಷ್ಟಿತೀರ್ಥ: ಶ್ರೀಧರನ ಮನೆಯ ಬಲಗಡೆಗೆ ಹಳ್ಳತಿಟ್ಟುಗಳಾಗಿ ಅಗೆದಿರುವ ಒಂದು ಹೊಲವನ್ನು ಕಾಣಬಹುದು. ಶ್ರೀ ಚೈತನ್ಯ ಮಹಾಪ್ರಭುಗಳ ಕಾಲದಲ್ಲಿ ಇದೊಂದು ಕುಂಡವಾಗಿತ್ತು. ಇದೇ ಷಷ್ಟತೀರ್ಥಕುಂಡ. ಇಂಥ ಒಂದು ಕುಂಡ. ಚಾಂದ್ ಖಾಜಿಯ ಹಳ್ಳಿಯಲ್ಲೂ ಇದೆ. ನಿಮಾಝ್, ತಮ್ಮ ಬಾಲ್ಯದಲ್ಲಿ ಇಲ್ಲಿ ಆಡುತ್ತಿದ್ದರು, ಮತ್ತು ಮುಂದೆ ಕೀರ್ತನೆಗಳನ್ನು ಮಾಡಿದಾಗ ವಿಶ್ರಮಿಸಿಕೊಳ್ಳುತ್ತಿದ್ದರು.
ಶ್ರೀ ಚೈತನ್ಯ ಮಹಾಪ್ರಭುಗಳು ನವದ್ವೀಪಧಾಮದಲ್ಲಿ ಅವತರಿಸುವರೆಂದೂ ನಗರ ಸಂಕೀರ್ತನೆಗಳನ್ನು ನಡೆಸುವರೆಂದೂ ತಿಳಿದಿದ್ದ ದೇವತೆಗಳ ಶಿಲ್ಪಿಯಾದ ವಿಶ್ವಕರ್ಮನು ಒಂದೇ ಸಂಜೆಯಲ್ಲಿ ಅರವತ್ತು ದೊಡ್ಡದಾದ ಸುಂದರ ನೀರಿನ ಕುಂಡಗಳನ್ನು ನಿರ್ಮಿಸಿದನೆಂದು ಹೇಳುತ್ತಾರೆ. ಚೈತನ್ಯರಿಗೂ ಅವರ ಭಕ್ತರಿಗೂ ಸಂಕೀರ್ತನೆಯ ಸಮಯದಲ್ಲಿ ತಂಪಾದ ಚೇತೋಹಾರಿಯಾದ ನೀರು ದೊರೆಯಲೆಂದು ಅವನ ಆಶಯವಾಗಿತ್ತು. ಈ ಆರವತ್ತು ಕುಂಡಗಳೇ ಷಷ್ಟಿತೀರ್ಥಕುಂಡಗಳು. ಇವುಗಳಲ್ಲಿ ಈಗ ಎರಡನ್ನು ಗುರುತಿಸಲಾಗಿದೆ.
ಮಯಮಾರಿ: ಶ್ರೀಧರನ ಮನೆಯ ಬಲಕ್ಕೆ, ಸರಸ್ವತೀ ನದಿಯ ಬಳಿ ಇರುವ ಹೊಲಗಳ ಪ್ರದೇಶವೇ ಮಯಮಾರಿ. ಇದಕ್ಕೆ ನಿರ್ದಿಷ್ಟವಾದ ಬೇರೆ ಗುರುತೇನೂ ಇಲ್ಲ. ಭಕ್ತರ ಪ್ರಕಾರ, ಇದು ವೃಂದಾವನದಲ್ಲಿ ಬಲರಾಮನು ಕತ್ತೆಯ ರೂಪದ ಧೇನುಕಾಸುರನನ್ನು ಕೊಂದ ತಾಳವನವಲ್ಲದೇ ಬೇರೆಯಲ್ಲ. ಪಾಂಡವ ಕೌರವರ ಯುದ್ಧ ಆರಂಭವಾದಾಗ ಅದನ್ನು ನೋಡಲಾರದೇ ಬಲರಾಮನು ತೀರ್ಥಯಾತ್ರೆಗೆ ಹೋದನು.
ಅವನು ತೀರ್ಥಯಾತ್ರೆ ಮಾಡುತ್ತಾ ನವದ್ವೀಪಕ್ಕೆ ಬಂದಾಗ, ಕೆಲವು ಬ್ರಾಹ್ಮಣರು ಅವನಿಗೆ ಮಯಾಸುರನೆಂಬ ದಾನವನು ಹೇಗೆ ತಮ್ಮ ಯಜ್ಞಯಾಗಾದಿಗಳಿಗೆ ಭಂಗವುಂಟು ಮಾಡುತ್ತಾ ತಮಗೆ ಕಂಟಕಪ್ರಾಯನಾಗಿದ್ದನೆಂದು ವಿವರಿಸಿದರು.

ಆಗ ಬಲರಾಮನು ಆ ರಾಕ್ಷಸನನ್ನೆದುರಿಸಿ ಘೋರ ಯುದ್ಧದ ಬಳಿಕ ಅವನನ್ನು ಸಂಹರಿಸಿದನು; ಅನಂತರ ಅವನು ಸರಸ್ವತಿ ನದಿಯಲ್ಲಿ ಸ್ನಾನ ಮಾಡಿ ಬ್ರಾಹ್ಮಣರ ಆಶೀರ್ವಾದ ಪಡೆದು ತನ್ನ ತೀರ್ಥಯಾತ್ರೆಯನ್ನು ಮುಂದುವರಿಸಿದನು. ಹೀಗೆ ಬಲರಾಮನು ಮಯಾಸುರನನ್ನು ಸಂಹರಿಸಿದ ಈ ಸ್ಥಳ ಮಯಮಾರಿಯೆಂದು ಪ್ರಸಿದ್ಧವಾಗಿದೆ.
ಸೀಮಂತಿದೇವಿ ದೇವಾಲಯ: ಇದು ಪಾರ್ವತಿ ದೇವಿಯ ದೇವಾಲಯ. ಇಲ್ಲಿ ಭಗವಾನ್ ಶಿವನೂ ಲಿಂಗರೂಪದಲ್ಲಿ ನೆಲೆಸಿದ್ದಾನೆ. ಪಾರ್ವತಿಗೆ ಸೀಮಂತಿನೀದೇವಿಯೆಂಬ ಹೆಸರು ಪ್ರಾಪ್ತವಾದುದಕ್ಕೆ ಕಾರಣವನ್ನು ಈ ಹಿಂದೆ ವಿವರಿಸಲಾಯಿತು. ಇದರಿಂದಲೇ ಈ ದ್ವೀಪಕ್ಕೆ ಸೀಮಂತದ್ವೀಪವೆಂಬ ಹೆಸರು ಪ್ರಾಪ್ತವಾಯಿತು. ಭಕ್ತಿವಿನೋದ ಠಾಕುರರು ಹೇಳುವಂತೆ, ಶ್ರೀ ಚೈತನ್ಯರ ಕಾಲದಲ್ಲಿ ಗಂಗಾ ನದಿಯು ಹರಿಯುತ್ತಿತ್ತಂತೆ.
ಜಗನ್ನಾಥ ದೇವಾಲಯದಿಂದ ಮುಖ್ಯರಸ್ತೆಗೆ ಹಿಂದಿರುಗಿ ಬಲಕ್ಕೆ ತಿರುಗಿ ಭಕ್ತಿಸಿದ್ಧಾಂತ ಸರಸ್ವತೀ ಮಾರ್ಗದಲ್ಲಿ ಮುಂದುವರಿಯುತ್ತಾ ಎಡಕ್ಕೆ ಇರುವ ಮೊದಲ ರಸ್ತೆಯಲ್ಲಿ ಹೋಗಬೇಕು. ಇದು ಸ್ವಲ್ಪ ಮಣ್ಣು ರಸ್ತೆಯಾಗಿದ್ದು ಒಂದು ಚಿಕ್ಕ ಹಳ್ಳಿಗೆ ಹೋಗುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ಬಿದಿರಿನ ಮರಗಳಿವೆ. ರಸ್ತೆಯಲ್ಲಿ ಹಾಗೆಯೇ ಮುಂದುವರಿಯುತ್ತಾ ಒಂದು ತೆರೆದ ಅಂಗಣ ಸಿಗುವವರೆಗೂ ಹೋಗಬೇಕು. ಈ ಅಂಗಣದಲ್ಲೇ ಪುಟ್ಟದಾದ ಕಾಂಕ್ರೀಟಿನ ದೇವಾಲಯವಿದೆ.
ದೇವಾಲಯದಲ್ಲಿ ದರ್ಶನವು ಬೆಳಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ ಹನ್ನೆರಡರವರೆಗಿರುತ್ತದೆ. ಆದರೆ ದೇವಾಲಯದ ಪೂಜಾರಿಯು ಎದುರಿಗೇ ಇರುವುದರಿಂದ, ಇತರ ವೇಳೆಯಲ್ಲೂ ದೇವಾಲಯವನ್ನು ತೆರೆದು ದರ್ಶನ ಮಾಡಿಸುತ್ತಾನೆ.
ಮೇಘಾರ್ ಚಡ: ಸೀಮಂತಿದೇವಿ ದೇವಾಲಯದ ಅಂಗಣವನ್ನು ಪ್ರವೇಶಿಸಿದ ಬಳಿಕ, ಎಡಗಡೆಯಲ್ಲಿ ಮೊದಲ ರಸ್ತೆಗೆ ತಿರುಗಿದರೆ, ಹಳ್ಳಿಯ ಕೊನೆಯಲ್ಲಿ ಕೆಲವು ಹೊಲಗಳು ಕಾಣುತ್ತವೆ.
ಇದೇ ಮೇಘಾ ಚಡ ಅಥವಾ ಸೋನಾದಾಂಗ ಪ್ರದೇಶ. ಒಮ್ಮೆ ಚೈತನ್ಯರು ಇಲ್ಲಿ ಕೀರ್ತನೆ ಮಾಡುತ್ತಿದ್ದಾಗ ಆಕಾಶದಲ್ಲಿ ಮೇಘಗಳು ತುಂಬಿಕೊಂಡವು; ಜೋರಾಗಿ ಮಳೆ ಸುರಿಯಬಹುದೆಂದು ಭಕ್ತರು ಆತಂಕಗೊಳ್ಳಲು, ಚೈತನ್ಯರು ತಮ್ಮ ಕೈಗಳನ್ನೆತ್ತಿ ಕರತಾಳಗಳನ್ನು ಬಡಿಯುತ್ತಾ ಮೇಘಗಳನ್ನು ನೋಡಲು, ಅವರ ಮನೋಭಿಪ್ರಾಯವನ್ನರಿತು ಅವು ಹೊರಟು ಹೋದವು. ಇದೇ ಈ ಸ್ಥಳದ ವಿಶೇಷ.
ಬೇಲ್ ಪುಕುರ್: ಮೇಘಾ ಚಡದ ರಸ್ತೆಯಲ್ಲೇ ಕೆಳಗೆ ಹೋದರೆ ಬೇಲ್ ಪುಕುರ ಎಂಬ ಸ್ಥಳ ಸಿಗುತ್ತದೆ. ಇದು, ಬೇಲ್ ಪುಕುರಿಯ ಅಥವಾ ಬಿಲ್ವಪುಷ್ಕರಿಣಿ ಎಂದೂ ಪ್ರಸಿದ್ಧವಾಗಿದೆ. ಇಲ್ಲಿ ಮದನಗೋಪಾಲ ಎಂಬ ಶ್ರೀಕೃಷ್ಣನ ವಿಗ್ರಹವಿದೆ. ಈ ವಿಗ್ರಹವನ್ನು ಶಚೀಮಾತೆಯ (ಚೈತನ್ಯರ ತಾಯಿ), ತಂದೆ ನೀಲಾಂಬರ ಚಕ್ರವರ್ತಿಯವರು ಇಲ್ಲಿ ಪ್ರತಿಷ್ಠಾಪಿಸಿದರು.
ಅವರು 1490ರಿಂದ 1495ರ ಮಧ್ಯೆ ಯಾವಾಗಲೋ, ತಮ್ಮ ಪತ್ನಿ ಮಗಳು ಶಚೀದೇವಿಯವರೊಂದಿಗೆ ಶ್ರೀಹಟ್ಟದಿಂದ ಇಲ್ಲಿಗೆ ಬಂದರೆಂದು ಹೇಳುತ್ತಾರೆ. ಈ ಹಳ್ಳಿಯು ಹಿಂದೆ, ಗಂಗಾನದಿಯ ಪಕ್ಕದಲ್ಲೇ ಇತ್ತಂತೆ; ಆದರೆ ಈಗ ಗಂಗಾನದಿಗೆ ಆರು ಕಿ.ಮೀ. ದೂರದಲ್ಲಿದೆ. ರಾಮತೀರ್ಥ (ರುಕುನ್ ಪುರ): ಬಲರಾಮನು ತೀರ್ಥಯಾತ್ರೆ ಮಾಡುತ್ತಾ ಗಂಗಾನದಿಯಲ್ಲಿ ಸ್ನಾನ ಮಾಡಲು ಈ ಸ್ಥಳಕ್ಕೆ ಬಂದಿದ್ದನು.
ಆ ಸಮಯದಲ್ಲಿ ಇಲ್ಲಿ ಕೋಲನೆಂಬ ರಾಕ್ಷಸನು ಇಲ್ಲಿನ ಜನರನ್ನು ತನ್ನ ಶಕ್ತಿಯಿಂದ ತನ್ನ ವಶದಲ್ಲಿಟ್ಟಿದ್ದನು. ಜನರೆಲ್ಲರೂ ಬಲರಾಮನನ್ನು ಆ ರಾಕ್ಷಸನನ್ನು ಕೊಲ್ಲುವಂತೆ ಕೇಳಿಕೊಂಡರು. ಬಲರಾಮನು ಅವನನ್ನು ಎದುರಿಸಲು ಹೋದಾಗ ಅವನು ಸಾವಿರಾರು ಆನೆ ಮತ್ತು ರಥಗಳೊಂದಿಗೆ ಬಲರಾಮನನ್ನು ನಾಲ್ಕು ಕಡೆಗಳಿಂದ ಸುತ್ತುವರಿದನು. ಬಲರಾಮನು ಅವನ ಸೈನ್ಯವನ್ನು ಧೂಳೀಪಟ ಮಾಡಿ ಅನಂತರ ಕೋಲಾಸುರನನ್ನು ಚೆನ್ನಾಗಿ ಹೊಡೆದು ಕೊಂದನು.

ಕಾರ್ತಿಕಮಾಸದಲ್ಲಿ ಹುಣ್ಣಿಮೆಯ ದಿನ, ಯಾರಾದರೂ ಇಲ್ಲಿ ಸ್ನಾನ ಮಾಡಿದರೆ, ಹರಿದ್ವಾರದಲ್ಲಿ ಸ್ನಾನ ಮಾಡಿದ ನೂರರಷ್ಟು ಫಲ ದೊರೆಯುವುದೆಂದು ಹೇಳುತ್ತಾರೆ.
ಶ್ರೀ ಗೋದ್ರುಮದ್ವೀಪ
ಶ್ರೀ ಗೋದ್ರುಮದ್ವೀಪವು ನವದ್ವೀಪಧಾಮದ ಮೂರನೆಯ ದ್ವೀಪವಾಗಿದೆ. ಈ ದ್ವೀಪವು ನವವಿಧ ಭಕ್ತಿಯ ಕೀರ್ತನವನ್ನು ಪ್ರತಿನಿಧಿಸುತ್ತದೆ. ಯಾವ ಮುಕ್ತಿಯನ್ನು ಕೃತಯುಗದಲ್ಲಿ ಧ್ಯಾನದಿಂದಲೂ ತ್ರೇತಾಯುಗದಲ್ಲಿ ಯಜ್ಞಗಳಿಂದಲೂ ದ್ವಾಪರಯುಗದಲ್ಲಿ ಅರ್ಚನೆಯಿಂದಲೂ ಪಡೆಯಬಹುದಿತ್ತೋ, ಅದನ್ನು ಕಲಿಯುಗದಲ್ಲಿ ಭಗವಂತನ ನಾಮ ಸಂಕೀರ್ತನೆಯಿಂದಲೇ ಪಡೆಯಬಹುದೆಂದು ಭಾಗವತ ವಿಷ್ಣುಪುರಾಣ, ಮೊದಲಾದ ಪುರಾಣಗಳು ಘೋಷಿಸುತ್ತವೆ. ಹೀಗೆ, ನಾಮ ಸಂಕೀರ್ತನೆಯು ಕಲಿಯುಗದಲ್ಲಿ ಬಹಳ ಮುಖ್ಯವಾದ ಭಕ್ತಿ ಪ್ರಕ್ರಿಯೆ.
ಗೋದ್ರುಮದ್ವೀಪವು ಗಂಗಾನದಿಯ ಪೂರ್ವಕ್ಕಿದೆ. ಇದು ದೇವನಲ್ಲಿ ನದಿಯಿಂದ ಜಾಲಂಗಿ ನದಿಯವರೆಗೆ ಹಬ್ಬಿದೆ. ಮಾಯಾಪುರದಿಂದ ಜಾಲಂಗಿ ನದಿಯ ಆಚೆ ದಡದವರೆಗಿದೆ. ಈ ದ್ವೀಪದ ಸ್ಥಳೀಯ ಹೆಸರು ಗಾದಿಗಾಚಾ. ಶ್ರೀ ಭಕ್ತಿವಿನೋದ ಠಾಕುರರು, ಗೋದ್ರುಮದ್ವೀಪವು ನಂದ ಮಹಾರಾಜನ ಮನೆಯಾದ ನಂದೀಶ್ವರ ಮತ್ತು ಗೋಪಜನರಿಂದ ಬೇರೆಯಲ್ಲ, ಎಂದು ಬರೆದಿದ್ದಾರೆ.
ಗೋದ್ರುಮದ್ವೀಪಕ್ಕೆ ಈ ಹೆಸರು ಬಂದುದರ ಹಿಂದೆ ಸ್ವಾರಸ್ಯಕರವಾದ ಕಥೆಯಿದೆ. ವೃಂದಾವನದಲ್ಲಿ ಶ್ರೀಕೃಷ್ಣನ ಸಲಹೆಯಂತೆ ಗೋಪಜನರೆಲ್ಲರೂ ದೇವೇಂದ್ರನನ್ನು ಪೂಜಿಸುವ ಬದಲಿಗೆ ಗೋವರ್ಧನಗಿರಿಯನ್ನು ಪೂಜಿಸಿದ ಕಥೆ ಭಾಗವತದಲ್ಲಿದೆಯಷ್ಟೇ? ಶ್ರೀಕೃಷ್ಣನು ದೇವೇಂದ್ರನ ಗರ್ವವನ್ನಿಳಿಸಲು ಹಾಗೆ ಮಾಡಿದ್ದನು.
ಆದರೆ ದೇವೇಂದ್ರನು ಬಹಳ ಕೋಪಗೊಂಡು ವ್ರಜವಾಸಿಗಳನ್ನು ನಿರ್ಮೂಲನೆ ಮಾಡಬೇಕೆಂದು ಸಂವರ್ತಕಗಳೆಂಬ ಮಹಾಮೇಘಗಳನ್ನು ಆಹ್ವಾನಿಸಿ ವೃಂದಾವನದ ಮೇಲೆ ಕುಂಭದ್ರೋಣ ಮಳೆ ಸುರಿಸಿದನು. ಆಗ ಶ್ರೀಕೃಷ್ಣನು ತನ್ನ ಕಿರುಬೆರಳಿನಿಂದಲೇ ಗೋವರ್ಧನಗಿರಿಯನ್ನು ಎತ್ತಿಹಿಡಿದು ಅದರ ನೆರಳಿನಲ್ಲಿ ತನ್ನ ಜನರನ್ನು ರಕ್ಷಿಸಿದನು.
ಮಾಯೆಯಿಂದ ಆವೃತನಾಗಿದ್ದ ಇಂದ್ರನು, ಬಾಲಕೃಷ್ಣನು ಭಗವಂತನೆಂಬುದನ್ನೂ ಮರೆತು ಸತತವಾಗಿ ಏಳು ದಿನಗಳ ಕಾಲ ಮಳೆಗರೆದನು. ಕಡೆಗೆ ಅವನಿಗೆ ಕೃಷ್ಣನ ಮಹಿಮೆಯ ಅರಿವಾಗಿ ಮಳೆ ನಿಲ್ಲಿಸಿದನು. ಆಗಸದಿಂದ ಧರೆಗಿಳಿದು ಕೃಷ್ಣನ ಪಾದಗಳಿಗೆರಗಿ ತನ್ನನ್ನು ಕ್ಷಮಿಸುವಂತೆ ಬೇಡಿಕೊಂಡನು.
ಶ್ರೀಕೃಷ್ಣನೇನೋ ಅವನನ್ನು ಕೂಡಲೇ ಕ್ಷಮಿಸಿಬಿಟ್ಟನು. ಆದರೆ ಇಂದ್ರನಿಗೆ ಸಮಾಧಾನವಾಗಲಿಲ್ಲ. ಇಲ್ಲಿಂದ ಮುಂದಿನ ಕಥೆ ನವದ್ವೀಪ ಮಹಾತ್ಮೆಯದು. ತಾನು ಮುಂದೆ ಪುನಃ ಭಗವಂತನಿಗೆ ಇಂಥ ಅಪಚಾರವೆಸಗಬಹುದೆಂದು ಇಂದ್ರನಿಗೆ ಭಯವಿತ್ತು. ಆದ್ದರಿಂದ ಅವನು ದೇವಲೋಕದ ದಿವ್ಯಧೇನು ಸುರಭಿಯ ಬಳಿ ಹೋಗಿ ತನ್ನ ತಪ್ಪನ್ನು ನಿವೇದಿಸಿಕೊಂಡನು; ತಾನು ಶ್ರೀಕೃಷ್ಣನ ಮುಂದಿನ ಅವತಾರದಲ್ಲೂ ಇಂಥ ಅಪಚಾರವೆಸಗಬಹುದೆಂದು ಹೆದರಿದ್ದನ್ನು ಹೇಳಿಕೊಂಡನು.
ಅದಕ್ಕೆ ಸುರಭಿಮಾತೆಯು ನವದ್ವೀಪಕ್ಕೆ ಹೋಗಿ ಗೌರಾಂಗದೇವನನ್ನು (ಚೈತನ್ಯರನ್ನು) ಕುರಿತು ಕೀರ್ತನೆ ಮಾಡೋಣ ಎಂದು ಸಲಹೆಯಿತ್ತಳು. ಗೌರಾಂಗದೇವನ ನಾಮಸ್ಮರಣೆ ಮಾಡುತ್ತಿದ್ದರೆ ತಪ್ಪುಗಳೂ ಪರಿಗಣಿಸಲ್ಪಡುವುದಿಲ್ಲ ಎಂದಳು. ಅದರಂತೆ ಇಬ್ಬರೂ ನವದ್ವೀಪಕ್ಕೆ ಹೋಗಿ ಮಹಾಪ್ರಭು ಗೌರಾಂಗದೇವನ ನಾಮಸಂಕೀರ್ತನೆ ಮಾಡತೊಡಗಿದರು.
ಅದರಿಂದ ಅವರಿಬ್ಬರ ಹೃದಯಗಳೂ ಪ್ರೇಮ, ಭಕ್ತಿಗಳಿಂದ ತುಂಬಿಹೋದವು. ಆಗ ಗೌರಸುಂದರನು ಪ್ರತ್ಯಕ್ಷನಾಗಿ, ತಾನು ನದಿಯಾ ಪ್ರಾಂತ್ಯದಲ್ಲಿ ಅವತರಿಸುವೆನೆಂದೂ ಇಂದ್ರನಿಗೆ ತನ್ನ ಸೇವೆ ಮಾಡಲು ಅವಕಾಶವಾಗುವುದೆಂದೂ ತನ್ನ ಲೀಲೆಗಳನ್ನು ನೋಡುವುದರಿಂದ ಮಾಯೆಯು ಅವನನ್ನು ಮುಟ್ಟುವುದಿಲ್ಲವೆಂದೂ ಹೇಳಿ ಅದೃಶ್ಯನಾದನು.
ಇದರಿಂದ ಇಂದ್ರನು ಸಂತುಷ್ಟನಾಗಿ ತಾನೂ ದೇವಲೋಕಕ್ಕೆ ಹಿಂದಿರುಗಿದನು. ಆದರೆ ದಿವ್ಯಧೇನು ಸುರಭಿ ಮಾತ್ರ ಅಲ್ಲೇ ಉಳಿಯಿತು. ಇಬ್ಬರೂ ಒಂದು ದೊಡ್ಡ ಆಲದ ಮರದ ಕೆಳಗೆ ಕುಳಿತು ಕೀರ್ತನೆ ನಡೆಸಿದ್ದರು. ಈಗ ಸುರಭಿಯು ಅದೇ ಆಲದ ಮರದ ಕೆಳಗೆ ಕುಳಿತು ಗೌರಾಂಗ ಪ್ರಭುವನ್ನು ಧ್ಯಾನಿಸುತ್ತಾ ಅಲ್ಲೇ ಉಳಿದಳು. ಹೀಗೆ ಗೋವು ಆದ ಸುರಭಿಯು ದ್ರುಮದ ( ದ್ರುಮ ಎಂದರೆ ಮರ) ಕೆಳಗೆ ಉಳಿದುದರಿಂದ ಈ ದ್ವೀಪಕ್ಕೆ ಗೋದ್ರುಮದ್ವೀಪ ಎಂದು ಹೆಸರಾಯಿತು.






Leave a Reply