ಸತ್ಯಭಾಮಾ

ಭಾಗವತದ ಪಾತ್ರ ಪರಿಚಯ : ಮಾನಿನಿಯರು

(ಆಧಾರ – ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ  ಪ್ರಭುಪಾದರ ಭಾವಾರ್ಥಗಳು; ಭಾಗವತ ಪ್ರಥಮ ಸ್ವಂಧ; 14ನೇ ಅಧ್ಯಾಯ)

ಸತ್ಯಭಾಮೆಯು ದ್ವಾರಕೆಯಲ್ಲಿದ್ದ ಶ್ರೀಕೃಷ್ಣನ ಪ್ರಧಾನ ರಾಣಿಯರಲ್ಲಿ ಒಬ್ಬಳು. ಶ್ರೀಕೃಷ್ಣನು ನರಕಾಸುರನನ್ನು ಕೊಂದಬಳಿಕ ಸತ್ಯಭಾಮೆಯ ಜೊತೆಯಲ್ಲಿ ಅವನ ಅರಮನೆಗೆ ಹೋದನು.

ಅವಳ ಜೊತೆ ಇಂದ್ರ ಲೋಕಕ್ಕೂ ಹೋದನು. ಅಲ್ಲಿ ಶಚೀದೇವಿಯು ಅವಳನ್ನು ಸ್ವಾಗತಿಸಿದಳು ಮತ್ತು ದೇವತೆಗಳ ತಾಯಿಯಾದ ಅದಿತಿದೇವಿಗೆ ಸತ್ಯಭಾಮೆಯ ಪರಿಚಯ ಮಾಡಿಕೊಟ್ಟಳು.

ಅದಿತಿಗೆ ಸತ್ಯಭಾಮೆಯನ್ನು ಕಂಡು ತುಂಬ ಸಂತೋಷವಾಯಿತು. ಶ್ರೀಕೃಷ್ಣನು ಭೂಲೋಕದಲ್ಲಿ ಇರುವವರೆಗೂ ನಿತ್ಯ ಯೌವನದಿಂದ ಕೂಡಿರುವ೦ತೆ ಅವಳು ಸತ್ಯಭಾಮೆಯನ್ನು ಆಶೀರ್ವದಿಸಿದಳು.

ಸ್ವರ್ಗದಲ್ಲಿರುವ ದೇವತೆಗಳ ವಿಶೇಷ ಸೌಲಭ್ಯಗಳನ್ನು ತೋರಿಸಲು ಅದಿತಿಯು ಸತ್ಯಭಾಮೆಯನ್ನು ತನ್ನ ಜೊತೆ ಸ್ವರ್ಗಲೋಕಗಳಿಗೆಲ್ಲ ಕರೆದುಕೊಂಡು ಹೋದಳು. ಸತ್ಯಭಾಮೆ ಅಲ್ಲಿ ಪಾರಿಜಾತ ಪುಷ್ಪವನ್ನು ಕಂಡು ಅದಕ್ಕೆ ಆಸೆಪಟ್ಟಳು.

ಗಂಡನೊಂದಿಗೆ ದ್ವಾರಕೆಗೆ ಮರಳಿದ ಮೇಲೆ ಆ ಪಾರಿಜಾತ ಪುಷ್ಪವು ತನ್ನ ಅರಮನೆಯಲ್ಲಿಯೂ ಇರಬೇಕೆಂದು ಬಯಸಿದಳು. ಸತ್ಯಭಾಮೆಯ ಅರಮನೆಯು, ವಿಶೇಷವಾಗಿ, ಅಮೂಲ್ಯ ರತ್ನಗಳಿಂದ ಅಲಂಕರಣಗೊಂಡಿತ್ತು.

ಬೇಸಿಗೆ ಕಾಲದ ವಿಪರೀತ ಸೆಖೆಯ ದಿನಗಳಲ್ಲೂ ಅರಮನೆಯ ಒಳಭಾಗ ಹವಾನಿಯಂತ್ರಿತವಾಗಿದೆ ಎಂಬಂತೆ ತುಂಬ ತಂಪಾಗಿರುತ್ತಿತ್ತು. ಮಹಾನುಭಾವನಾದ ತನ್ನ ಪತಿ ಅಲ್ಲಿರುವುದನ್ನು ಸೂಚಿಸುವಂತೆ ಅವಳು ತನ್ನ ಅರಮನೆಯನ್ನು ಅನೇಕ ಧ್ವಜಗಳಿಂದ ಅಲಂಕರಿಸಿರುತ್ತಿದ್ದಳು.

ಸತ್ಯಭಾಮೆ ಒಮ್ಮೆ ಪತಿಸಮೇತಳಾಗಿ ದ್ರೌಪದಿಯನ್ನು ಭೇಟಿ ಮಾಡಿದಳು. ಪತಿಗೆ ಸಂತೋಷವಾಗುವಂತೆ ನಡೆದುಕೊಳ್ಳುವ ರೀತಿ ನೀತಿಗಳ ಬಗ್ಗೆ ದ್ರೌಪದಿಯು ತನಗೆ ತಿಳಿವಳಿಕೆ ನೀಡಬೇಕೆಂದು ಸತ್ಯಭಾಮೆಯು ಬಯಸಿದಳು.

ಈ ವಿಷಯದಲ್ಲಿ ದ್ರೌಪದಿ ಪರಿಣತಳಾದ ಸ್ತ್ರೀ. ಹಾಗೆಂದೇ ಅವಳಿಗೆ ಐದು ಜನ ಪತಿಗಳಿದ್ದರೂ ಅವರೆಲ್ಲ ಅವಳಿಂದ ಸಂತುಷ್ಟರಾಗಿದ್ದರು. ಸತ್ಯಭಾಮೆಯು ದ್ರೌಪದಿಯಿಂದ ಉಪದೇಶ ಪಡೆದು ಸಂತೋಷಗೊಂಡಳು. ಅವಳಿಗೆ ತನ್ನ ಶುಭಕಾಮನೆಗಳನ್ನು ತಿಳಿಸಿ ದ್ವಾರಕೆಗೆ ಹಿಂತಿರುಗಿದಳು.

ಸತ್ಯಭಾಮೆ ಸತ್ರಾಜಿತ ರಾಜನ ಮಗಳು. ಅರ್ಜುನನು ಶ್ರೀ ಕೃಷ್ಣನ ನಿರ್ಗಮನದನಂತರ ದ್ವಾರಕೆಗೆ ಬಂದನು. ಆಗ ಸತ್ಯಭಾಮೆ, ರುಕ್ಷ್ಮಿಣಿ ಮತ್ತು ಕೃಷ್ಣನ ಎಲ್ಲ ರಾಣಿಯರು ತುಂಬ ಭಾವೋದ್ವಿಗ್ನರಾಗಿ ದುಃಖಿಸಿದರು.

ಸತ್ಯಭಾಮೆಯು ತನ್ನ ಜೀವನದ ಕಡೆಯ ಹಂತದಲ್ಲಿ ಉಗ್ರವಾದ ತಪಸ್ಸನ್ನು ಮಾಡಲೆಂದು ಕಾಡಿಗೆ ತೆರಳಿದಳು.

ತನಗೆ ಸ್ವರ್ಗದಿಂದ ಪಾರಿಜಾತ ಪುಷ್ಪವನ್ನು ತಂದುಕೊಡಬೇಕೆಂದು ಸತ್ಯಭಾಮೆಯು ಕೃಷ್ಣನನ್ನು ಪ್ರಚೋದಿಸಿದ್ದುಂಟು. ತಮ್ಮ ಹೆಂಡತಿಯರನ್ನು ತೃಪ್ತಿಪಡಿಸಲು ಸಾಮಾನ್ಯ ಗಂಡಂದಿರು ಅವರು ಕೋರಿದ ವಸ್ತುವನ್ನು ತಂದುಕೊಡುವುದಿದೆ.

ಶ್ರೀಕೃಷ್ಣ ಕೂಡ ಅದೇ ರೀತಿ ಮಾಡಿದ. ಅವನು ದೇವತೆಗಳ ಮೇಲೆ ಬಲಪ್ರಯೋಗ ಮಾಡಿ ಪಾರಿಜಾತ ಪುಷ್ಪವನ್ನು ಸತ್ಯಭಾಮೆಗೆ ತಂದುಕೊಟ್ಟ. ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಪತ್ನಿಯ ಆದೇಶವನ್ನು ಪಾಲಿಸುವ ರೀತಿಯಲ್ಲಿ ಕೃಷ್ಣನಡೆದುಕೊಳ್ಳಬೇಕಾಗಿರಲಿಲ್ಲ.

ಏಕೆಂದರೆ ಭಗವಂತನು ತನ್ನ ಅಷ್ಟೆಲ್ಲ ಪತ್ನಿಯರೊಡನೆ ಆ ರೀತಿಯ ಯಾವ ಸಂಬಂಧವನ್ನೂ ಹೊಂದಿರಲಿಲ್ಲ. ಆದರೆ ಆ ರಾಣಿಯರು ಭಕ್ತಿಸೇವೆಯನ್ನು ಅದರ ಅತ್ಯುತ್ತಮ ನೆಲೆಯಲ್ಲಿ ಒಪ್ಪಿ ನಡೆಸಿದವರು. ಎಂದರೆ ಭಗವಂತನಿಗೆ ಬೇಕಾದ ಎಲ್ಲ ಹಿತ ಸೌಲಭ್ಯಗಳನ್ನೂ ಒದಗಿಸಿದವರು.

ಆದ್ದರಿಂದಲೇ ಭಗವಂತ ಕೂಡ ಪತ್ನಿಗೆ ನಿಷ್ಠನಾದ ಒಬ್ಬ ಪತಿಯ ಪಾತ್ರವನ್ನು ನಿರ್ವಹಿಸಿದ. ಪಾರಿಜಾತ ಎನ್ನುವುದು ದೇವತೆಗಳು ಮಾತ್ರವೇ ಬಳಸುವ ಪುಷ್ಪ. ಯಾವ ಮರ್ತ್ಯಜೀವಿಯೂ ಅಂತಹ ವಿಶೇಷ ವಸ್ತುವನ್ನು ಸ್ವರ್ಗದಿಂದ ಪಡೆದುಕೊಳ್ಳುವ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ.

ಆದರೆ ಅವರೆಲ್ಲ ಭಗವಂತನ ನಿಷ್ಠಾವಂತ ಪತ್ನಿಯರಾದುದರಿಂದ ಸ್ವರ್ಗದ ಪ್ರಜೆಗಳ ಭಾಗ್ಯವಂತ ಪತ್ನಿಯರಿಗೆ ಮಾತ್ರ ಸಾಧ್ಯವಿದ್ದ ವಿಶೇಷ ಸೌಲಭ್ಯಗಳನ್ನು ಪಡೆದು ಆನಂದಿಸಿದರು. ಭಗವಂತ ತನ್ನ ಸೃಷ್ಟಿಯೊಳಗೆ ಇರುವ ಎಲ್ಲ ವಸ್ತುಗಳ ಒಡೆಯ.

ಆದ್ದರಿಂದ ದ್ವಾರಕೆಯ ರಾಣಿಯರಿಗೆ ವಿಶ್ವದ ಯಾವುದೇ ಭಾಗದಲ್ಲಿರುವ ಯಾವುದೇ ಅಮೂಲ್ಯ ವಸ್ತುವನ್ನು ಪಡೆದುಕೊಳ್ಳುವುದು ಅಂತಹ ಆಶ್ಚರ್ಯದ ಸಂಗತಿಯೇನೂ ಆಗಲಿಲ್ಲ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi