ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
ಸಂಸ್ಥಾಪನಾಚಾರ್ಯರು, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ
– ಸಂಗ್ರಹಾನುವಾದ: ಡಾ. ಕೆ. ವೈ. ಬಾಲರಾಜ್, ಆಧಾರ: “ರಾಜವಿದ್ಯೆ” (ಜ್ಞಾನ, ಗುರುವಿನಲ್ಲಿ ಶ್ರದ್ಧೆ ಮತ್ತು ಕೃಷ್ಣನಿಗೆ ಶರಣಾಗತನಾಗುವುದರಿಂದ)
ಒಬ್ಬ ವ್ಯಕ್ತಿ ಕೃಷ್ಣ ಪ್ರಜ್ಞೆಯಲ್ಲಿ ಪರಿಪೂರ್ಣನಾದರೆ ಕಾಲಕ್ರಮದಲ್ಲಿ ಜ್ಞಾನ, ವಿವೇಕಗಳು ಮೂಡುತ್ತವೆ ಅಂದರೆ ಅವನ ಸತತ ಪ್ರಯತ್ನದಿಂದ ಯಶಸ್ಸು ಸಾಧಿತವಾಗುತ್ತದೆ. ಯಶಸ್ಸಿಗೆ ನಿಜವಾದ ಶ್ರದ್ಧೆಯ ಅಗತ್ಯವಿದೆ. ಸಂದೇಹವುಳ್ಳವರಿಗೆ ಮತ್ತು ಶ್ರದ್ಧೆಯಿಲ್ಲದವರಿಗೆ ಕೃಷ್ಣಪ್ರಜ್ಞೆ ತುಂಬ ಕಷ್ಟವಾದ ಕೆಲಸ. ನಮ್ಮ ದಿನನಿತ್ಯದ ಬದುಕಿನಲ್ಲೂ ಒಂದು ಪ್ರಮಾಣದ ಶ್ರದ್ಧೆಯು ಅವಶ್ಯಕವಾಗಿದೆ.

ನಾವು ಒಂದು ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿಗಳ ವ್ಯವಹಾರ ಮಾಡುತ್ತೇವೆ. ಹಾಗೆಯೇ ಒಂದು ಪರದೇಶಕ್ಕೆ ಪ್ರಯಾಣ ಮಾಡಲು ಟಿಕೆಟ್ ಕೊಂಡಾಗ ಆ ವಾಯುಮಾನ ಸಂಸ್ಥೆಯು ನಮ್ಮನ್ನು ಹೋಗಬೇಕಾದ ಸ್ಥಳಗಳಿಗೆ ತಲಪಿಸುತ್ತದೆ ಎಂದು ನಂಬುತ್ತೇವೆ. ಈ ಬಗೆಯ ನಂಬಿಕೆ, ಶ್ರದ್ಧೆ ಇಲ್ಲದೆ ಹೋದರೆ ಈ ಲೌಕಿಕ ಜಗತ್ತಿನಲ್ಲಿ ಬದುಕಿರಲು ಬಹಳ ಕಷ್ಟವಿದೆ.
ಅಂದಮೇಲೆ, ಆಧ್ಯಾತ್ಮಿಕ ಪ್ರಗತಿಯ ವಿಚಾರವನ್ನು ಏನೆಂದು ಹೇಳಬಹುದು? ಯಾವುದರಲ್ಲಿ ನಾವು ಶ್ರದ್ಧೆಯಿಡಬೇಕು? ಶ್ರದ್ಧೆಯು ಮೊದಲು ಪ್ರಮಾಣೀಕೃತವಾಗಿರಬೇಕು. ನಾವು ಶ್ರದ್ಧೆಯಿಡಬೇಕೆಂದರೆ ಅದು ಕೃಷ್ಣನಲ್ಲಿ, ಭಗವದ್ಗೀತೆಯನ್ನು ಉಪದೇಶಿಸುತ್ತಿರುವ ಪ್ರಭುವಿನಲ್ಲಿ ಮಾತ್ರ. ಯಾವುದೇ ಅನಧಿಕೃತವಾದ ವಿಚಾರದಲ್ಲಿ ನಾವು ಶ್ರದ್ಧೆಯಿಡಬಾರದು.
ಹಾಗಾದರೆ ಶ್ರದ್ಧಾವಂತರಾಗುವುದು ಹೇಗೆ? ಅದಕ್ಕೆ ಇಂದ್ರಿಯ ನಿಗ್ರಹಬೇಕು. ನಾವು ಭೌತಿಕ ಜಗತ್ತಿನಲ್ಲಿರುತ್ತೇವೆ. ಹಾಗಂತ ನಮ್ಮ ಇಂದ್ರಿಯಗಳನ್ನು ಎಲ್ಲೆಂದರಲ್ಲಿ ಹರಿಯಬಿಡುವುದಲ್ಲ. ಬರೀ ಇಂದ್ರಿಯ ತೃಪ್ತಿಯಿಂದಲೇ ಶ್ರದ್ಧೆ ಬರುವುದಿಲ್ಲ. ನಮಗೆ ಕಾಯಿಲೆ ಬಂದಾಗ ವೈದ್ಯನ ಬಳಿ ಹೋಗುತ್ತೇವೆ.
ವೈದ್ಯನಾದವನು ನಮ್ಮ ರೋಗಕ್ಕೆ ಕೆಲವು ಪಥ್ಯಗಳನ್ನು ಹೇಳಿ ಅದು ಇದು ತಿನ್ನಬೇಡ ಎಂದು ಕೆಲವು ವಿಧಿಗಳನ್ನು ವಿಧಿಸುತ್ತಾನೆ. ಆ ವೈದ್ಯ ನಮ್ಮ ರೋಗವನ್ನು ಗುಣಪಡಿಸುತ್ತಾನೆ ಎಂಬ ಶ್ರದ್ಧೆ ನಂಬಿಕೆಯಿದ್ದು ಅದು ಇದು ತಿನ್ನುತ್ತಿದ್ದರೆ ನಮ್ಮದು ಅದೆಂತಹ ಶ್ರದ್ಧೆಯಾಗುತ್ತದೆ? ನಮಗೆ ನಂಬಿಕೆ ಇದ್ದರೆ ವೈದ್ಯರು ಹೇಳುವುದನ್ನು ನಾವು ಕಟ್ಟುನಿಟ್ಟಾಗಿ ಅನುಸರಿಸಲೇಬೇಕು.

ಇಲ್ಲಿ ಬಹಳ ಮುಖ್ಯವಾದ ವಿಷಯವೇನೆಂದರೆ ನಾವು ಅವರ ಸೂಚನೆಗಳನ್ನು ಶ್ರದ್ಧೆಯಿಂದ ಅನುಸರಿಸಬೇಕು, ಪಾಲಿಸಬೇಕು ಎನ್ನುವುದು. ಆಗ ಮಾತ್ರ ವಿವೇಕವು ಉದಿಸುತ್ತದೆ. ಜ್ಞಾನದ ಹಂತಕ್ಕೆ ಬಂದಾಗ ಅದು ಪರಮ ಶಾಂತಿಯ ಫಲವಾಗುತ್ತದೆ. ಇಂದ್ರಿಯಗಳನ್ನು ನಿಗ್ರಹಿಸಿದಾಗ ಅನತಿ ಕಾಲದಲ್ಲೇ ಶ್ರದ್ಧೆಯು ಬರುತ್ತದೆ ಎಂದು ಕೃಷ್ಣನು ಸೂಚಿಸುತ್ತಾನೆ.
ಕೃಷ್ಣನಲ್ಲಿ ಶ್ರದ್ಧೆಯು ಬಂದಾಗ ವ್ಯಕ್ತಿಯು ಜಗತ್ತಿನಲ್ಲಿ ತಾನು ಅತ್ಯಂತ ಹೆಚ್ಚು ಸಂತುಷ್ಟನಾದ ಮನುಷ್ಯ ಎಂದು ಭಾವಿಸುತ್ತಾನೆ. ಇದೇ ಕೃಷ್ಣ ಪ್ರಜ್ಞೆಯ ನೆಲೆ. ನಾವು ಈ ಸೂತ್ರವನ್ನು ಒಪ್ಪಿಕೊಂಡು ಶ್ರದ್ಧೆಯಿಂದ ಅದನ್ನು ಕಾರ್ಯಗತಗೊಳಿಸಬೇಕು. ಶ್ರದ್ಧೆಯನ್ನು ಪರಮಪ್ರಭುವಿನಲ್ಲಿ ಇಡಬೇಕೇ ಹೊರತು ಮೂರನೆಯ ದರ್ಜೆಯ ಮನುಷ್ಯನಲ್ಲಲ್ಲ. ನಾವು ಶ್ರದ್ಧೆಯಿಡಬಹುದಾದ ಗುರುವನ್ನು ಮೊದಲು ಹುಡುಕಿಕೊಳ್ಳಬೇಕು. ಅಂದರೆ ಇಲ್ಲಿ ಕೃಷ್ಣನೇ ಅತ್ಯಂತ ಅಧಿಕೃತ ಪ್ರಮಾಣ ಗುರು.
ಕೃಷ್ಣಪ್ರಜ್ಞೆಯಿರುವ ಯಾರನ್ನೇ ಆಗಲಿ ನಾವು ಗುರುವೆಂದು ಒಪ್ಪಿಕೊಂಡು ಶ್ರದ್ಧೆಯಿಡಬಹುದು. ಏಕೆಂದರೆ ಪೂರ್ತಿಯಾಗಿ ಕೃಷ್ಣಪ್ರಜ್ಞೆಯನ್ನು ಹೊಂದಿರುವ ವ್ಯಕ್ತಿಯು ಕೃಷ್ಣನ ಅಧಿಕೃತ ಪ್ರತಿನಿಧಿಯಾಗಿರುತ್ತಾನೆ.
ಗೀತೆಯಲ್ಲಿ ಹೇಳಿದ ಹಾಗೆ, ” ಅಜ್ಞಾನಿಗಳೂ, ಶ್ರದ್ಧೆಯಿಲ್ಲದವರೂ ಆದ ಜನರು ವೇದಾದಿಕೃತಿಗಳನ್ನು ಸಂದೇಹಿಸುತ್ತಾರೆ. ಆದ್ದರಿಂದ ಭಗವತ್ ಪ್ರಜ್ಞೆಯನ್ನು ಪಡೆಯದಾಗುತ್ತಾರೆ. ಏಕೆಂದರೆ ಸಂಶಯಾತ್ಮನಿಗೆ ಈ ಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಸುಖವಿಲ್ಲ.” (4.40)

ಇಂಥಹ ಕೃಷ್ಣಪ್ರಜ್ಞೆಯ ಜ್ಞಾನ ಮಾರ್ಗವನ್ನು ಅನುಸರಿಸಲು ಸಂಶಯ ಪಡುವವರಿಗೆ ಯಾವ ಅವಕಾಶವೂ ಇಲ್ಲ. ಸಂಶಯಕ್ಕೆ ಕಾರಣ ಅಜ್ಞಾನ. ಈ ರೀತಿಯ ಸಂಶಯಾತ್ಮಕನಿಗೆ ಈ ಲೌಕಿಕ ಜಗತ್ತಿನಲ್ಲಿ ಸುಖವಿರುವುದಿಲ್ಲ. ಇನ್ನು ಮುಂದಿನ ಜನ್ಮದ ವಿಷಯವೇನು? ಈಗಾಗಲೇ ಈ ಜಗತ್ತು ದುಃಖಮಯವಾಗಿದೆ.
ಶ್ರದ್ಧೆಯಿಲ್ಲದೆ ಹೋದರೆ ಈ ದುಃಖ ಇನ್ನೂ ಅಧಿಕವಾಗುತ್ತದೆ. ಶ್ರದ್ಧೆಯಿಲ್ಲದವನ ಪರಿಸ್ಥಿತಿ ಬಹು ಅಪಾಯಕಾರಿಯಾದದ್ದು. ವೈದಿಕ ಸಾಹಿತ್ಯ, ಅನೇಕಾನೇಕ ಋಷಿ ಮುನಿಗಳು ದೇವೋತ್ತಮ ಪರಮ ಪುರುಷನೆಂದು ಅಂಗೀಕರಿಸಿರುವ ಶ್ರೀ ಕೃಷ್ಣನಲ್ಲಿ ನಾವು ನಂಬಿಕೆ ಇಡಬೇಕು.
ರಾಮಾನುಜರು, ಚೈತನ್ಯ ಮಹಾಪ್ರಭುಗಳು ಇಂತಹ ಮಹಾತ್ಮರು ಹಾಕಿಕೊಟ್ಟಿರುವ ದಾರಿಯಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ಅವರ ಹೆಜ್ಜೆಯ ಗುರುತುಗಳನ್ನು ಹಿಡಿದು ನಡೆಯುತ್ತಿದ್ದರೆ ಯಶಸ್ಸು ಖಂಡಿತವಾಗಿಯೂ ದೊರಕುತ್ತದೆ.






Leave a Reply