ಸುಸಂಬದ್ಧ ಪ್ರಶ್ನೆಗಳು

ಆಧಾರ: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಆತ್ಮಸಾಕ್ಷಾತ್ಕಾರ ವಿಜ್ಞಾನ

ಯಾರು ನೀನು. . . .? ನೀನು ನಿನ್ನ ದೇಹವೇ? ಅಥವಾ ನಿನ್ನ ಮನಸ್ಸೇ? ಅಥವಾ ನೀನು ಅದಕ್ಕಿಂತ ಉನ್ನತವಾದ ಬೇರೇನೋ ವಸ್ತುವೇ? ನೀನು ಯಾರೆಂದು ನಿನಗೆ ಗೊತ್ತೇ? ಅಥವಾ ನಿನಗೆ ಗೊತ್ತೆಂದು ಕೇವಲ ಭಾವಿಸುತ್ತೀಯಾ? ಇದು ನಿಜವಾಗಿಯೂ ಮಹತ್ವದ ಸಂಗತಿಯೆ?

ಅಜ್ಞಾನಿಗಳ ನಾಯಕತ್ವ ಹೊಂದಿರುವ ನಮ್ಮ ಲೌಕಿಕ ಸಮಾಜವು ವಾಸ್ತವಿಕವಾದ ಉನ್ನತ ಆತ್ಮಜ್ಞಾನವನ್ನು ಕುರಿತು ಜಿಜ್ಞಾಸೆ ನಡೆಸುವುದನ್ನು ಕೂಡ ಬಹುತೇಕ ನಿಷಿದ್ಧಗೊಳಿಸಿದೆ. ಅದರ ಬದಲು ನಾವು ನಮ್ಮ ದೇಹವನ್ನು ಅದರ ಸಲುವಾಗಿಯೇ ಪೋಷಿಸಲು, ಅಲಂಕರಿಸಲು, ಮುದ್ದಿಸಲು ನಮ್ಮ ಅಮೂಲ್ಯವಾದ ಸಮಯವನ್ನು ಕಳೆಯುತ್ತಿದ್ದೇವೆ. ಅನ್ಯ ಮಾರ್ಗವೇನಾದರೂ ಇದೆಯೆ?

ತನ್ನ ತಂದೆಯೊಡನೆ ನಡೆಯುತ್ತಿರುವ ಮಗು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತದೆ. ಅದು ತಂದೆಗೆ ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತದೆ. ತಂದೆಯು ತಕ್ಕ ಉತ್ತರಗಳನ್ನು ನೀಡಿ ಮಗುವನ್ನು ಸಮಾಧಾನ ಪಡಿಸಬೇಕಾಗುತ್ತದೆ. ಹೀಗೆ ಜೊತೆಯಲ್ಲಿ ಸಾಗುವಾಗ ತಂದೆ – ಮಗನ ಪಕ್ಕದಲ್ಲಿ ಮದುವೆ ಮೆರವಣಿಗೆಯೊಂದು ಹಾದು ಹೋಗುತ್ತದೆ.

ಚಿಕ್ಕ ಮಗು ಎಂದಿನಂತೆ ಈ ಮದುವೆ ಮೆರವಣಿಗೆ ಏನೆಂದು ಕೇಳುತ್ತದೆ. ಅವನ ಸಾವಿರಾರು ಪ್ರಶ್ನೆಗಳಿಗೆ ಮದುವೆ ಮೆರವಣಿಗೆ ಕುರಿತು ಸಾಧ್ಯವಿದ್ದ ಎಲ್ಲ ಉತ್ತರಗಳನ್ನೂ ಕೊಡಲಾಗುತ್ತದೆ. ಕೊನೆಗೆ ಮಗನು ತನ್ನ ತಂದೆಯನ್ನೇ ಕುರಿತು ನೀನು ಮದುವೆಯಾಗಿದ್ದೀಯಾ ಎಂದು ಕೇಳುತ್ತಾನೆ! ಸುತ್ತ ಇರುವ ಜನರೆಲ್ಲ ಅವನ ಪ್ರಶ್ನೆಗೆ ಜೋರಾಗಿ ನಕ್ಕು ಬಿಡುತ್ತಾರೆ. ಆ ಮಗನಿಗಾದರೋ, ಅವರೇಕೆ ನಗುತ್ತಿರುವರೆಂದು ತಿಳಿಯದು. ಅಂತೂ ಮದುವೆಯಾಗಿದ್ದ ತಂದೆ ಅವನನ್ನು ಹೇಗೋ ಸಮಾಧಾನಪಡಿಸುತ್ತಾನೆ.

ಈ ಪ್ರಸಂಗದಿಂದ ತಿಳಿಯಬಹುದಾದ ಮುಖ್ಯ ಅಂಶವೆಂದರೆ, ಮಾನವನು ವಿಚಾರಶೀಲ ಜೀವಿ. ಪ್ರಶ್ನೆಗಳನ್ನು ಕೇಳುವುದೇ ಅವನ ಜಾಯಮಾನ. ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಕೇಳಿದಂತೆಲ್ಲಾ ಜ್ಞಾನ ವಿಜ್ಞಾನದಲ್ಲಿ ಹೆಚ್ಚು ಹೆಚ್ಚು ಪ್ರಗತಿಯನ್ನು ಸಾಧಿಸುತ್ತಾನೆ. ಈ ಲೌಕಿಕ ನಾಗರಿಕತೆಯೆಲ್ಲವೂ ಯುವಕರು ತಮ್ಮ ಹಿರಿಯರನ್ನು ಕೇಳಿದ ಅಪಾರವಾದ ಮೂಲಭೂತ ಪ್ರಶ್ನೆಗಳನ್ನೇ ಆಧರಿಸಿದೆ.

ಕಿರಿಯರು ಕೇಳಿದ ಪ್ರಶ್ನೆಗಳಿಗೆ ಹಿರಿಯರು ಸೂಕ್ತವಾದ ಉತ್ತರಗಳನ್ನು ನೀಡಿದಾಗ ನಾಗರಿಕತೆಯು ಒಂದೊಂದೇ ಹೆಜ್ಜೆ ಮುಂದಿಟ್ಟು ಪ್ರಗತಿ ಸಾಧಿಸುತ್ತದೆ. ಆದರೆ ಅತ್ಯಂತ ಬುದ್ಧಿಶಾಲಿಯಾದ ಮನುಷ್ಯ ಮರಣಾನಂತರ ಏನಾಗುತ್ತದೆ ಎಂಬ ಪ್ರಶ್ನೆಯನ್ನು ಕೇಳುತ್ತಾನೆ. ಮಂದಮತಿಗಳ ಪ್ರಶ್ನೆಯ ಮಟ್ಟ ಕಡಮೆ. ಆದರೆ ಬುದ್ಧವಂತರ ಪ್ರಶ್ನೆಗಳ ಮಟ್ಟ ಏರುತ್ತಾ ಹೋಗುತ್ತದೆ.

ಪರೀಕ್ಷಿತ ಮಹಾರಾಜನು ಅತ್ಯಂತ ಬುದ್ಧವಂತರಲ್ಲೊಬ್ಬನಾಗಿದ್ದ. ಅವನು ಸರ್ಪದಂಶನದಿಂದ ಮರಣಹೊಂದುವಂತೆ ಶಪಿತನಾಗಿದ್ದ. ಅವನಿಗೆ ಕೇವಲ ಏಳುದಿನಗಳ ಕಾಲಾವಕಾಶವಿತ್ತು. ಗಂಗಾತೀರದಲ್ಲಿ ಪ್ರಾಯೋಪವೇಶನಕ್ಕಾಗಿ ಮಹಾರಾಜನು ತೆರಳಿದ. ಅವನನ್ನು ಕಾಣಲು ಶ್ರೇಷ್ಠ ಋಷಿಗಳು, ವಿದ್ವಾಂಸರೆಲ್ಲರೂ ಬಂದು ಸೇರಿದರು.

ಮಹಾಮಹಿಮರಾದ ಶುಕಮುನಿಗಳು ಕೂಡ ಬಂದರು. ಮಹಾಭಕ್ತನಾಗಿದ್ದ ಪರೀಕ್ಷಿತ ಮಹಾರಾಜನು ಅವರನ್ನು ಕುರಿತು ಕೆಲವು ಪ್ರಶ್ನೆಗಳನ್ನು ಕೇಳಿದನು. ”ಮಹಾಸ್ವಾಮಿ, ತಾವು ಶ್ರೇಷ್ಠ ಆಧ್ಯಾತ್ಮಿಕವಾದಿಗಳಲ್ಲಿ ಅತ್ಯಂತ ಶ್ರೇಷ್ಠರು. ಆದುದರಿಂದ ಈ ಸಮಯದಲ್ಲಿ ನನ್ನ ಕರ್ತವ್ಯಗಳೇನು ಎಂದು ವಿನಯಪೂರ್ವಕವಾಗಿ ತಮ್ಮಲ್ಲಿ ವಿಜ್ಞಾಪಿಸಿಕೊಳ್ಳಲು ಬಯಸುತ್ತೇನೆ.

ನಾನು ಈಗ ಮೃತ್ಯುವಿನ ಹೊಸ್ತಿಲಲ್ಲಿದ್ದೇನೆ. ಆದುದರಿಂದ ಇಂತಹ ವಿಷಮ ಗಳಿಗೆಯಲ್ಲಿ ನಾನು ಏನು ಮಾಡಬೇಕು? ಹೇ ಪ್ರಭುಗಳೇ, ನನಗೆ ದಯವಿಟ್ಟು ಉಪದೇಶ ಮಾಡಿ. ಈಗ ನಾನು ಏನನ್ನು ಶ್ರವಣ ಮಾಡಬೇಕು? ಏನನ್ನು ಆರಾಧಿಸಬೇಕು? ಅಥವಾ ಯಾರನ್ನು ಸ್ಮರಣೆ ಮಾಡಬೇಕು?

ನಿಮ್ಮಂತಹ ಮಹಾಋಷಿಗಳು ಅಗತ್ಯಕ್ಕಿಂತ ಹೆಚ್ಚು ಕಾಲ ಗೃಹಸ್ಥರ ಮನೆಯಲ್ಲಿ ತಂಗುವುದಿಲ್ಲ. ಆದುದರಿಂದ, ನನ್ನ ಮರಣಕಾಲದಲ್ಲಿ ನೀವು ಇಲ್ಲಿಗೆ ದಯಮಾಡಿಸಿರುವುದು ನನ್ನ ಅದೃಷ್ಟವೇ ಸರಿ. ಆದುದರಿಂದ ತಾವು ದಯವಿಟ್ಟು ಈ ವಿಷಮಕಾಲದಲ್ಲಿ ನನಗೆ ನಿಮ್ಮ ಮಾರ್ಗದರ್ಶನ ನೀಡಬೇಕು.”

ಮಹಾರಾಜನಿಂದ ಪ್ರಶ್ನಿಸಲ್ಪಟ್ಟ ಶುಕಮುನಿಗಳು ಅಧಿಕಾರವಾಣಿಯಿಂದ ಉತ್ತರಿಸತೊಡಗಿದರು. ವೇದವ್ಯಾಸರ ಪುತ್ರರೂ ಮಹಾಜ್ಞಾನಿಗಳು ಆಗಿದ್ದ ಅವರು ಪರೀಕ್ಷಿತನ ಪ್ರಶ್ನೆಗಳಿಂದ ಸಂತುಷ್ಟರಾಗಿದ್ದರು. ಮಹಾರಾಜನನ್ನು ಕುರಿತು, “ಪ್ರಿಯರಾಜನೇ, ನಿನ್ನ ಪ್ರಶ್ನೆಯು ಅತ್ಯಂತ ಸಮಯೋಚಿತವಾಗಿದೆ.

ಅದು ಎಲ್ಲಕಾಲಕ್ಕೂ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ಇಂತಹ ಪ್ರಶ್ನೆಗಳು ಅತ್ಯಂತ ಶ್ರೇಷ್ಠವಾದವು. ಏಕೆಂದರೆ ಅವು ವೇದಾಂತ ದರ್ಶನದ ಉಪದೇಶಗಳಿಂದ ದೃಢೀಕೃತವಾಗಿವೆ. ಆದುದರಿಂದ ಅವು ಸುಸಂಗತವಾಗಿವೆ. ಅವು ಆತ್ಮವಿತ್‌ ಸಮ್ಮತಃ ಕೂಡಾ ಆಗಿವೆ. ಅರ್ಥಾತ್, ತಮ್ಮ ಆಧ್ಯಾತ್ಮಿಕ ಸ್ವರೂಪದ ಪೂರ್ಣಜ್ಞಾನವನ್ನು ಹೊಂದಿರುವ ಮುಕ್ತಾತ್ಮರು ದಿವ್ಯತ್ವವನ್ನು ಕುರಿತು ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಇಂತಹ ಸುಸಂಗತವಾದ ಪ್ರಶ್ನೆಗಳನ್ನು ಕೇಳುತ್ತಾರೆ.” ಎಂದು ಮೆಚ್ಚುಗೆ ಸೂಚಿಸಿದರು.

ಶ್ರೀವೇದವ್ಯಾಸರು ರಚಿಸಿದ ಭಾಗವತವು ವೇದಾಂತ ಸೂತ್ರಗಳ ಮೇಲಿನ ಯಥಾರ್ಥ ವ್ಯಾಖ್ಯಾನವಾಗಿದೆ. ವೇದಾಂತ ಸೂತ್ರಗಳು ವೈದಿಕ ಸಾಹಿತ್ಯದ ಅಗ್ರಸ್ಥಾನದಲ್ಲಿವೆ ಮತ್ತು ಅವು ದಿಟ್ಟ ಆಧ್ಯಾತ್ಮ ಜ್ಞಾನದ ವಿಷಯದಲ್ಲಿ ಆಧಾರಭೂತವಾದ ಪ್ರಶ್ನೆಗಳನ್ನು ಒಳಗೊಂಡಿವೆ.

ಇದು ಬ್ರಹ್ಮನನ್ನು ಕುರಿತು ಮೂಲ ಜಿಜ್ಞಾಸೆಯಿಂದಲೇ ಪ್ರಾರಂಭವಾಗುತ್ತದೆ (ಅಥಾತೋ ಬ್ರಹ್ಮಜಿಜ್ಞಾಸಾ). ‘”ಮನುಷ್ಯನು ಬ್ರಹ್ಮನನ್ನು ಕುರಿತು ಜಿಜ್ಞಾಸೆ ಮಾಡಬೇಕು” ಈ ಶಾಶ್ವತವಾದ ಸಂಗತಿಯನ್ನು ಅಥವಾ ಸತ್ಯವನ್ನು ಅರಿತುಕೊಳ್ಳಲು ಮಾನವ ಜೀವನದಲ್ಲಿ ಅವಕಾಶ ದೊರೆಯುತ್ತದೆ.

ಆದುದರಿಂದ, ನಾವು ಈ ಅಮೂಲ್ಯವಾದ ಮಾನವ ಜನ್ಮವನ್ನು ಪಡೆದಿರುವುದರಿಂದ, ಪರಮ ಸತ್ಯ, ಬ್ರಹ್ಮನ್ ಎಂದರೆ ಏನು ಎಂಬುದನ್ನು ಕುರಿತು ಜಿಜ್ಞಾಸೆ ಮಾಡುವುದೇ ನಮ್ಮ ಈಗಿನ ಕರ್ತವ್ಯ ಎಂದು ವೇದಾಂತ ಸೂತ್ರವು ಪ್ರಾರಂಭದಲ್ಲಿಯೇ ಸೂಚಿಸುತ್ತದೆ.

ಬುದ್ಧಿವಂತನಲ್ಲದ ಮನುಷ್ಯನು ಈ ದಿವ್ಯ ಜೀವನವನ್ನು ಕುರಿತು ಜಿಜ್ಞಾಸೆ ಮಾಡುವುದಿಲ್ಲ. ಅದರ ಬದಲು ತನ್ನ ನಿತ್ಯ ಅಸ್ತಿತ್ವಕ್ಕೆ ಸಂಬಂಧಿಸಿಲ್ಲದ ಅನೇಕ ಅಸಂಬದ್ಧ ವಿಷಯಗಳನ್ನು ಕುರಿತು ಅವನು ವಿಚಾರ ಮಾಡುತ್ತಾನೆ. ಜೀವನದ ಪ್ರಾರಂಭದಿಂದಲೇ ಅವನು ತನ್ನ ತಾಯಿ, ತಂದೆ, ಉಪಾಧ್ಯಾಯರು, ಪ್ರಾಧ್ಯಾಪಕರು, ಗ್ರಂಥಗಳು ಮತ್ತು ಇತರ ಅನೇಕ ಆಕರಗಳಿಂದ ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ತನ್ನ ನಿಜವಾದ ಜೀವನದ ಬಗ್ಗೆ ಅವನಿಗೆ ಸರಿಯಾದ ಮಾಹಿತಿ ದೊರೆಯುವುದಿಲ್ಲ.

ಜೀವನ ಮತ್ತು ಮರಣಗಳನ್ನು ಕುರಿತ ಅಜ್ಞಾನವೇ ಪ್ರಾಣಿಯನ್ನು ಮನುಷ್ಯನಿಗಿಂತ ವಿಭಿನ್ನವಾಗಿ ನಿಲ್ಲಿಸುತ್ತದೆ. ಮನುಷ್ಯನು ಆ ಪದದ ನಿಜವಾದ ಅರ್ಥದಲ್ಲಿ ತಾನು ಯಾರು, ಎಲ್ಲಿಂದ ಬಂದೆ ಎಂದು ಜಿಜ್ಞಾಸೆ ಮಾಡುತ್ತಾನೆ. ಈ ಜೀವನಕ್ಕೆ ತಾನು ಬಂದುದು ಎಲ್ಲಿಂದ? ಮರಣಾನಂತರ ತಾನು ಹೋಗುವುದು ಎಲ್ಲಿಗೆ? ತನಗೆ ಇಷ್ಟವಿಲ್ಲದಿದ್ದರೂ ತನ್ನನ್ನು ಈ ತಾಪತ್ರಯಗಳಿಗೆ ಏಕೆ ಗುರಿಪಡಿಸಲಾಗಿದೆ?

ವ್ಯಕ್ತಿಯು ತನ್ನ ಬಾಲ್ಯದಿಂದಲೇ ಜೀವನದಲ್ಲಿನ ಅನೇಕ ಸಂಗತಿಗಳ ಬಗ್ಗೆ ಪ್ರಶ್ನಿಸುತ್ತಾ ಹೋಗುತ್ತಾನೆ. ಆದರೆ ಜೀವನದ ನಿಜವಾದ ಸಾರವೇನು ಎಂದು ಅವನು ಎಂದೂ ಪ್ರಶ್ನಿಸುವುದಿಲ್ಲ ಇದೇ ಪಶುತ್ವ. ಪ್ರಾಣಿ ಜೀವನಕ್ಕೆ ಸಂಬಂಧಿಸಿದ ನಾಲ್ಕು ವಿಷಯಗಳಲ್ಲಿ ಮನುಷ್ಯನಿಗೂ ಪ್ರಾಣಿಗಳಿಗೂ ಏನೂ ವ್ಯತ್ಯಾಸವಿಲ್ಲ ಏಕೆಂದರೆ ಪ್ರತಿಯೊಂದು ಜೀವಿಯೂ ಆಹಾರ, ನಿದ್ರೆ, ಭಯ ಮತ್ತು ಮೈಥುನಗಳ ಮೂಲಕ ಅಸ್ತಿತ್ವದಲ್ಲಿರುತ್ತದೆ.

ಆದರೆ ಶಾಶ್ವತ ಜೀವನ ಮತ್ತು ಬ್ರಹ್ಮನ್ ಕುರಿತ ಸತ್ಯಾಂಶಗಳ ಬಗ್ಗೆ ತಕ್ಕ ಜಿಜ್ಞಾಸೆ ಮಾಡಲು ಮಾನವ ಜೀವನ ಮಾತ್ರ ಉದ್ದಿಷ್ಟವಾಗಿದೆ. ಆದುದರಿಂದ ಶಾಶ್ವತ ಜೀವನವನ್ನು ಕುರಿತ ಸಂಶೋಧನೆ ಮಾಡಲು ಮಾನವ ಜೀವನವು ಉದ್ದಿಷ್ಟವಾಗಿದೆ. ಈ ಸಂಶೋಧನೆ ಈ ಜನ್ಮದಲ್ಲಿಯೇ ನಡೆಯಬೇಕು, ಇಲ್ಲದಿದ್ದರೆ ಎಂದೆಂದಿಗೂ ಸಾಧ್ಯವಿಲ್ಲ ಎಂದು ವೇದಾಂತಸೂತ್ರವು ಸೂಚಿಸುತ್ತದೆ.

ಜೀವನವನ್ನು ಕುರಿತ ಈ ಸುಸಂಗತವಾದ ವಿಷಯಗಳನ್ನು ಈಗ ಜಿಜ್ಞಾಸೆ ಮಾಡಲು ವ್ಯಕ್ತಿಯು ವಿಫಲನಾದರೆ, ಪ್ರಕೃತಿ ನಿಯಮಗಳಿಗೆ ಅನುಸಾರವಾಗಿ ಅವನು ಮತ್ತೆ ಪ್ರಾಣಿಲೋಕಗಳಿಗೆ ಹೋಗುವುದು ನಿಶ್ಚಿತ. ಆದುದರಿಂದ ಲೌಕಿಕ ವಿಜ್ಞಾನವಾದ ಆಹಾರ, ನಿದ್ರೆ, ಭಯ ಮತ್ತು ಮೈಥುನ ಮುಂತಾದವುಗಳಲ್ಲಿ ಮೂರ್ಖ ಮನುಷ್ಯನು ಪ್ರಗತಿ ಸಾಧಿಸಿದಂತೆ ಕಂಡುಬಂದರೂ, ಪ್ರಕೃತಿ ನಿಯಮಗಳಿಗೆ ಅನುಸಾರವಾಗಿ ಮೃತ್ಯುವಿನ ಕ್ರೂರ ಮುಷ್ಟಿಯಿಂದ ಅವನು ಮುಕ್ತನಾಗಲಾರ.

ಪ್ರಕೃತಿ ನಿಯಮವು ಸತ್ತ್ವ, ರಾಜಸ ಮತ್ತು ತಾಮಸಗಳೆಂಬ ತ್ರಿಗುಣಗಳಲ್ಲಿ ಕಾರ್ಯಮಾಡುತ್ತದೆ. ಸತ್ತ್ವಗುಣದಲ್ಲಿ ಜೀವನ ಮಾಡುವವರಿಗೆ ಉನ್ನತವಾದ ಆಧ್ಯಾತ್ಮಿಕ ಸ್ಥಿತಿಗೆ ಉನ್ನತಿ ದೊರೆಯುತ್ತದೆ. ರಾಜಸ ಗುಣದಲ್ಲಿ ಜೀವನ ಮಾಡುವವರು ಈಗಿರುವ ಲೌಕಿಕ ಪ್ರಪಂಚದಲ್ಲಿಯೇ ಉಳಿದುಕೊಳ್ಳುತ್ತಾರೆ. ಆದರೆ ತಾಮಸಗುಣದಲ್ಲಿ ಜೀವನ ಮಾಡುವವರು ಕೀಳು ಪ್ರಾಣಿಜಾತಿಗಳಿಗೆ ಅವನತಿ ಹೊಂದುವುದರಲ್ಲಿ ಅನುಮಾನವೇ ಇಲ್ಲ.

ಆಧುನಿಕ ಮಾನವನ ನಾಗರಿಕತೆಯ ವ್ಯವಸ್ಥೆಯು ಅಪಾಯಕಾರಿಯಾದದ್ದಾಗಿದೆ. ಏಕೆಂದರೆ ಅದು ಜೀವನದ ಅತ್ಯವಶ್ಯವಾದ ತತ್ತ್ವಗಳನ್ನು ಕುರಿತ ಸೂಕ್ತಜಿಜ್ಞಾಸೆಯ ವಿಷಯದಲ್ಲಿ ಯಾವ ಶಿಕ್ಷಣವನ್ನೂ ಕೊಡುವುದಿಲ್ಲ. ಪ್ರಕೃತಿನಿಯಮಗಳಿಂದಾಗಿ, ಪ್ರಾಣಿಗಳಂತೆ ಮನುಷ್ಯರೂ ವಧೆಗೀಡಾಗುತ್ತಾರೆಂದು ಅವರು ಅರಿತಿಲ್ಲ. ವಧಾಗಾರದಲ್ಲಿ ಕಾಯುತ್ತಿರುವ ಮೇಕೆಯಂತೆ ಅವರು ಒಂದು ಹಿಡಿ ಹಸಿರುಹುಲ್ಲಿನಿಂದ ಅಥವಾ ಜೀವನದ ಸುಖವೆಂಬುದರಿ೦ದ ಸಂತೃಪ್ತರಾಗುತ್ತಾರೆ.

ಶುಕಮುನಿಗಳು ಹೇಳುವಂತೆ ವಧಾಗಾರದ ಆಡಿನ ಹಾಗೆ ಬದ್ಧಜೀವಿ ಅಥವಾ ‘ಗೃಹಮೇಧಿ’ ಯು ಪಶುಜೀವನದ ಸಮಸ್ಯೆಗಳಾದ ಆಹಾರ, ನಿದ್ರಾ, ಭಯ, ಮೈಥುನಾದಿಗಳನ್ನೇ ಯೋಚಿಸುತ್ತಿರುತ್ತಾನೆ. ಕುಟುಂಬ, ಸಮಾಜ, ಸಮುದಾಯ, ರಾಷ್ಟ್ರ ಅಥವಾ ಇಡೀ ಮನುಕುಲದ ಜಂಜಾಟವನ್ನು ಕಟ್ಟಿಕೊಂಡು ಹೆಣಗಾಡುತ್ತಾನೆ.

ಅವನು ಭೌತಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಇನ್ನಿತರ ಅನೇಕ ತಾತ್ಕಾಲಿಕ ಪ್ರಾಪಂಚಿಕ ವಿಷಯಗಳನ್ನು ಕುರಿತು ಚಿಂತಿಸಬಹುದು. ಆದರೆ ಅವನು ದಿವ್ಯಜೀವನ ತತ್ತ್ವಗಳ ಬಗ್ಗೆ ಆಲೋಚಿಸಬಲ್ಲವನಾಗಿರದೆ ಹೋದರೆ, ಅವನು ನಿಯಂತ್ರಣವರಿಯದ ಇಂದ್ರಿಯಾರ್ಥಗಳಿಂದ ಸೆಳೆಯಲ್ಪಟ್ಟ ಕುರುಡನೆಂದೇ ಅರ್ಥ.

ಇಂತಹವರಲ್ಲಿ ಪ್ರತಿಯೊಬ್ಬನೂ ಗಳಿಕೆ ಮತ್ತು ವೆಚ್ಚವನ್ನು ಅವೇ ಪ್ರಶ್ನೆಗಳಿಂದ ದಿಗ್ಭ್ರಮೆಗೊಂಡಿದ್ದಾನೆ. ಆದರೆ ಅಂತಿಮವಾಗಿ ಪ್ರಕೃತಿ ಮಾತೆಯ ಕರುಣೆಯನ್ನೇ ವ್ಯಕ್ತಿಯು ಆಶ್ರಯಿಸಬೇಕಾಗುತ್ತದೆ. ಉತ್ಪಾದನೆಯಲ್ಲಿ ಕೊರತೆಯುಂಟಾದಾಗ ಅಥವಾ ದೈವೀ ವಿಪತ್ತುಗಳು ಉಂಟಾದಾಗ ಯೋಜನೆಗಳನ್ನು ಮಾಡುವ ಬಡಪಾಯಿ ರಾಜಕಾರಣಿಯು ಕ್ರೂರ ಪ್ರಕೃತಿಯನ್ನು ನಿಂದಿಸುತ್ತಾನೆ.

ಆದರೆ ಪ್ರಕೃತಿಯ ನಿಯಮಗಳು ಯಾರಿಂದ ಹೇಗೆ ನಿಯಂತ್ರಿತವಾಗಿವೆ ಎಂಬುದನ್ನು ಅಧ್ಯಯನ ಮಾಡುವುದನ್ನು ನಾಜೂಕಾಗಿ ತಪ್ಪಿಸಿಕೊಳ್ಳುತ್ತಾನೆ. ಪ್ರಕೃತಿ ನಿಯಮಗಳನ್ನು ದೇವೋತ್ತಮ ಪರಮಪುರುಷನು ನಿಯಂತ್ರಿಸುತ್ತಾನೆಂದು ಭಗವದ್ಗೀತೆಯು ವಿವರಿಸುತ್ತದೆ. ಪ್ರಕೃತಿಯನ್ನು ಮತ್ತು ಪ್ರಕೃತಿ ನಿಯಮಗಳನ್ನು ನಿಯಂತ್ರಿಸುವವನು ದೇವರೊಬ್ಬನೇ.

ಮಹತ್ವಾಕಾಂಕ್ಷಿಗಳಾದ ಪ್ರಾಪಂಚಿಕರು ಕೆಲವು ಸಲ ಪ್ರಕೃತಿ ನಿಯಮದ ಒಂದು ಸಣ್ಣ ಅಂಶವನ್ನು ಪರಿಶೀಲಿಸುತ್ತಾರೆ. ಆದರೆ ಈ ನಿಯಮಗಳ ಸೃಷ್ಟಿಕರ್ತನು ಯಾರೆಂದು ತಿಳಿಯಲು ಅವರು ಪ್ರಯತ್ನ ಮಾಡುವುದಿಲ್ಲ. ಪ್ರಕೃತಿ ನಿಯಮಗಳನ್ನು ನಿಯಂತ್ರಿಸುವ ಪರಮಪುರುಷ ಅಥವಾ ದೇವರು ಒಬ್ಬನು ಇದ್ದಾನೆಂದು ಅವರಲ್ಲಿ ಬಹುಪಾಲು ಜನರು ನಂಬುವುದಿಲ್ಲ.

ಅದಕ್ಕೆ ಬದಲಾಗಿ ವಿವಿಧ ಧಾತುಗಳು ಪರಸ್ಪರ ಕ್ರಿಯೆಯಲ್ಲಿ ಪ್ರವರ್ತಿಸುವ ಸೂತ್ರಗಳು ಯಾವುವು ಎಂಬುದನ್ನು ವಿಚಾರಿಸುವುದರಲ್ಲಿಯೇ ಮಗ್ನರಾಗಿರುತ್ತಾರೆ. ಇಂತಹ ಪರಸ್ಪರ ಕ್ರಿಯೆಗಳು ಸಾಧ್ಯವಾಗುವುದಕ್ಕೆ ಹಿಂದಿರುವ ಮೂಲ ಶಕ್ತಿಯನ್ನು ಕುರಿತು ವಿಚಾರವನ್ನೇ ಮಾಡುವುದಿಲ್ಲ.

ಈ ವಿಚಾರವಾಗಿ ಅವರಲ್ಲಿ ಸೂಕ್ತ ಪ್ರಶ್ನೆಗಳೂ ಇಲ್ಲ ಅಥವಾ ಸಮರ್ಪಕ ಉತ್ತರಗಳೂ ಇಲ್ಲ. ಆದರೆ ಎರಡನೆಯ ವೇದಾಂತ ಸೂತ್ರವು ಬ್ರಹ್ಮನ್ ನನ್ನು ಕುರಿತ ಮೂಲ ಪ್ರಶ್ನೆಗೆ ಉತ್ತರ ನೀಡುತ್ತದೆ. ಪರಮ ಬ್ರಹ್ಮನಿಂದಲೇ ಈ ಸಮಸ್ತವೂ ಸೃಷ್ಟಿಯಾಗಿದೆ, ಅವನೇ ಪರಮಪುರುಷ ಎಂದು ಅದು ಹೇಳುತ್ತದೆ.

ಮೂಢ ಗೃಹಮೇಧಿಯು ತಾನು ಪಡೆದಿರುವ ವಿಶಿಷ್ಟ ಮಾದರಿಯ ದೇಹವು ಅನಿತ್ಯವೆಂದು ತಿಳಿದಿಲ್ಲ. ಅಷ್ಟೇ ಅಲ್ಲ, ತನ್ನ ದೈನಂದಿನ ಜೀವನದಲ್ಲಿ ಏನೇನು ನಡೆಯುತ್ತಿದೆಯೋ ಅದರ ವಾಸ್ತವಿಕ ಸ್ವಭಾವವೇನು ಎಂಬುದರ ಬಗ್ಗೆ ಅವನು ಕುರುಡಾಗಿದ್ದಾನೆ. ಅವನು ತನ್ನ ತಂದೆ ಸಾಯುವುದನ್ನು ನೋಡುತ್ತಾನೆ.

ತನ್ನ ತಾಯಿ ಸಾಯುವುದನ್ನು ನೋಡುತ್ತಾನೆ. ಅಥವಾ ತನ್ನ ಬಂಧುವೋ ನೆರೆಹೊರೆಯವರೋ ಸಾಯುವುದನ್ನೂ ನೋಡುತ್ತಾನೆ. ಆದರೂ ತನ್ನ ಕುಟುಂಬದ ಇತರರು ಸಾಯುತ್ತಾರೆಯೋ ಎಂದು ವಿಚಾರ ಮಾಡುವುದಿಲ್ಲ. ಇಂದಲ್ಲ ನಾಳೆ ತನ್ನ ಕುಟುಂಬದ ಸದಸ್ಯರೆಲ್ಲಾ ಸಾಯುತ್ತಾರೆ, ತಾನು ಸಾಯುತ್ತೇನೆ ಎಂದು ಕೆಲವು ಸಲ ಅವನು ಯೋಚಿಸುತ್ತಾನೆ, ತಿಳಿದುಕೊಳ್ಳುತ್ತಾನೆ.

ಇಡೀ ಕುಟುಂಬ – ಅಥವಾ ಹಾಗೆ ನೋಡಿದರೆ ಇಡೀ ಸಮುದಾಯ, ಸಮಾಜ, ರಾಷ್ಟ್ರ ಮತ್ತು ಅಂತಹುದೆಲ್ಲ – ಗಾಳಿಯಲ್ಲಿರುವ ಒಂದು ಕ್ಷಣ ಭಂಗುರವಾದ ಗುಳ್ಳೆ. ಅದಕ್ಕೆ ಶಾಶ್ವತವಾದ ಮೌಲ್ಯವಿಲ್ಲ ಎಂದು ಅವನು ತಿಳಿದಿರಬಹುದು. ಆದರೂ ಅಂತಹ ತಾತ್ಕಾಲಿಕವಾದ ವ್ಯವಸ್ಥೆಯ ಬಗ್ಗೆ ಅವನು ಹುಚ್ಚನಾಗಿದ್ದಾನೆ.

ಸೂಕ್ತ ಜಿಜ್ಞಾಸೆಯಲ್ಲಿ ತೊಡಗುವುದಿಲ್ಲ. ಮರಣಾನಂತರ ತಾನು ಎಲ್ಲಿಗೆ ಹೋಗಬೇಕು ಎಂಬುದರ ಅರಿವು ಅವನಿಗಿಲ್ಲ. ತನ್ನ ಕುಟುಂಬ, ಸಮಾಜ ಅಥವಾ ರಾಷ್ಟ್ರದ ತಾತ್ಕಾಲಿಕ ವ್ಯವಸ್ಥೆಗಾಗಿ ಅವನು ಕಷ್ಟಪಟ್ಟು ಕೆಲಸ ಮಾಡುತ್ತಾನೆ. ಆದರೆ ಪ್ರಸ್ತುತ ಜೀವನವನ್ನು ದಾಟಿಕೊಂಡು ಮುಂದೆ ಹೋಗುವ ತನಗಾಗಲಿ ಅಥವಾ ಇತರರಿಗಾಗಲೀ ಭಾವೀ ವ್ಯವಸ್ಥೆಯನ್ನೇನು ಅವನು ಮಾಡುವುದಿಲ್ಲ.

ರೈಲುಭೋಗಿಯಂತಹ ಸಾರ್ವಜನಿಕ ವಾಹನದಲ್ಲಿ ನಾವು ಕೆಲವರು ಅಪರಿಚಿತರನ್ನು ಭೇಟಿಯಾಗುತ್ತೇವೆ. ಗೆಳೆಯರಾಗುತ್ತೇವೆ. ಅವರೊಡನೆ ಕೂಡುತ್ತೇವೆ. ಕೆಲಕಾಲ ನಾವೆಲ್ಲಾ ಆ ವಾಹನದ ಸದಸ್ಯರಾಗುತ್ತೇವೆ. ಸ್ವಲ್ಪ ಸಮಯದ ಅನಂತರ ನಾವು ಬೇರೆಯಾಗುತ್ತೇವೆ. ಮತ್ತೆಂದೂ ಭೇಟಿಯಾಗುವುದಿಲ್ಲ.

ಹಾಗೆಯೇ ನಮ್ಮ ಜೀವನವೆಂಬ ದೀರ್ಘ ಪಯಣದಲ್ಲಿ ಈ ಕುಟುಂಬ, ದೇಶ ಅಥವಾ ಸಮಾಜ ಎಂಬುದರಲ್ಲಿ ತಾತ್ಕಾಲಿಕವಾಗಿ ಕುಳಿತುಕೊಳ್ಳುವ ಅವಕಾಶ ನಮಗೆ ಸಿಗುತ್ತದೆ. ಆದರೆ ಕಾಲ ತೀರಿದೊಡನೆಯೇ ಮನಸ್ಸಿಲ್ಲದೆಯೇ ಪರಸ್ಪರ ಅಗಲುತ್ತೇವೆ. ಮತ್ತೆಂದೂ ಭೇಟಿಯಾಗುವುದಿಲ್ಲ. ಜೀವನದಲ್ಲಿ ನಮ್ಮ ಈ ತಾತ್ಕಾಲಿಕ ವ್ಯವಸ್ಥೆಯನ್ನು ಕುರಿತಂತೆ ವಿಚಾರಿಸಬೇಕಾದ ಅನೇಕ ಪ್ರಶ್ನೆಗಳಿವೆ.

ಆದರೆ ಗೃಹಮೇಧಿಯಾದ ಮನುಷ್ಯನು ಶಾಶ್ವತವಾದ ಸಂಗತಿಗಳನ್ನು ಕುರಿತು ಎಂದೂ ಪ್ರಶ್ನಿಸುವುದಿಲ್ಲ. ಅಸ್ತಿತ್ವದಲ್ಲಿರುವ ವಸ್ತುಗಳ ಶಾಶ್ವತ ಸ್ವರೂಪವನ್ನು ಅರಿಯದೆಯೇ ನಾವೆಲ್ಲಾ ನಾಯಕತ್ವದ ವಿವಿಧ ಹಂತಗಳಲ್ಲಿ ಶಾಶ್ವತ ಯೋಜನೆಗಳನ್ನು ರೂಪಿಸುವುದರಲ್ಲಿ ಮಗ್ನರಾಗಿದ್ದೇವೆ.

ಸಮಾಜದಲ್ಲಿರುವ ಈ ಅಜ್ಞಾನವನ್ನು ನಿವಾರಿಸಲು ವಿಶೇಷವಾಗಿ ಶ್ರಮಿಸಿದವರು ಶ್ರೀಪಾದ ಶಂಕರಾಚಾರ್ಯರು. ಅವರು ಸರ್ವಾಂತರ್ಯಾಮಿಯಾದ ನಿರಾಕಾರ ಬ್ರಹ್ಮನನ್ನು ಕುರಿತ ಆಧ್ಯಾತ್ಮಿಕ ಜ್ಞಾನವನ್ನು ಪ್ರತಿಪಾದಿಸಿದರು. ಅವರು ಹತಾಶರಾಗಿ ಹೀಗೆ ಹೇಳಿದ್ದಾರೆ. “ಮಕ್ಕಳು ಆಟದಲ್ಲಿ ತೊಡಗಿದ್ದಾರೆ. ತರುಣರು ತರುಣಿಯರೊಡನೆ ಪ್ರಣಯ ಎಂಬುದರಲ್ಲಿ ಮಗ್ನರಾಗಿದ್ದಾರೆ.

ವೃದ್ಧರು ಈ ವಿಹ್ವಲಕಾರಿಯಾದ ಜೀವನವೆಂಬ ಹೋರಾಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಗಂಭೀರವಾಗಿ ಯೋಚನೆ ಮಾಡುತ್ತಿದ್ದಾರೆ. ಆದರೆ ಪರಮ ಸತ್ಯನಾದ ನಿರಾಕಾರ ಬ್ರಹ್ಮನ್ ನನ್ನು ಕುರಿತು ಯಾರೂ ವಿಚಾರ ಮಾಡದಿರುವುದು ವಿಷಾದಕರವಾಗಿದೆ.”

ಪರೀಕ್ಷಿತ ಮಹಾರಾಜನು ತನಗೆ ಮಾರ್ಗದರ್ಶನ ನೀಡಬೇಕೆಂದು ಶುಕಮುನಿಗಳಲ್ಲಿ ಕೇಳಿದನು. ಆಗ ಅವರು ರಾಜನ ಸುಸಂಗತ ಪ್ರಶ್ನೆಗಳಿಗೆ ಹೀಗೆ ಉತ್ತರ ನೀಡಿದರು:

ತಸ್ಮಾದ್ ಭಾರತ ಸರ್ವಾತ್ಮಾಭಗವಾನ್ ಈಶ್ವರೋ ಹರಿಃ|

ಶ್ರೋತವ್ಯಃ ಕೀರ್ತಿತವ್ಯಶ್ಚ ಸ್ಮರ್ತವ್ಯಚ್ಛತಾಭಯಮ್ ||

”ಭರತಕುಲ ಸಂಭೂತನೇ, ದೇವೋತ್ತಮ ಪುರುಷನು ಐಶ್ವರ್ಯ ಸಂಪನ್ನನಾದುದರಿಂದ ಅತ್ಯಂತ ಆಕರ್ಷಕ ಪುರುಷನಾಗಿದ್ದಾನೆ. ಅವನನ್ನು ಕುರಿತು ಜಿಜ್ಞಾಸೆ ಮಾಡುವುದು, ಶ್ರವಣ ಮಾಡುವುದು, ಕೀರ್ತನೆ ಮಾಡುವುದು ಹಾಗೂ ಧ್ಯಾನ ಮಾಡುವುದು ಮರ್ತ್ಯರಾದ ಮಾನವರ ಕರ್ತವ್ಯವಾಗಿದೆ.

ಅವನನ್ನು ಹರಿ ಎಂದು ಕರೆಯುತ್ತಾರೆ. ಏಕೆಂದರೆ ಜೀವಿಯನ್ನು ಬದ್ಧಸ್ಥಿತಿಯಿಂದ ಪಾರುಮಾಡಬಲ್ಲವನು ಅವನೊಬ್ಬನೇ. ನಾವು ಈ ಬದ್ಧಸ್ಥಿತಿಯಿಂದ ವಿಮೋಚನೆಯನ್ನು ಹೊಂದಬೇಕೆಂದು ಏನಾದರೂ ಬಯಸಿದರೆ, ಪರಮ ಸತ್ಯನನ್ನು ಕುರಿತು ಜಿಜ್ಞಾಸೆ ಮಾಡಬೇಕು. ಆಗ ಅವನು ಅದರಿಂದ ಸುಪ್ರೀತನಾಗಿ ನಮ್ಮ ಜೀವನದಲ್ಲಿ ಪರಿಪೂರ್ಣ ಮುಕ್ತಿಯನ್ನು ಅನುಗ್ರಹಿಸುತ್ತಾನೆ.” (ಭಾಗವತ 2.1.5)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi