ವಿಪತ್ತುಗಳು

ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

ಸಂಸ್ಥಾಪನಾಚಾರ್ಯರು, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ

ಸಾಮಾನ್ಯವಾಗಿ ದುಃಖಿಗಳು, ಬಡವರು, ಪುಣ್ಯ ಕೆಲಸ ಮಾಡುವ ಜಿಜ್ಞಾಸುಗಳು ದೇವರನ್ನು ಪೂಜಿಸುತ್ತಾರೆ, ಆರ್ತತೆಯಿಂದ ಬೇಡುತ್ತಾರೆ. ಇಂತಹ ಧರ್ಮಶ್ರದ್ಧೆಯ ವ್ಯಕ್ತಿಗಳು ಪರಮ ಪ್ರಭುವಿನ ಪಾದಕಮಲಗಳಿಗೆ ಶರಣಾಗುತ್ತಾರೆ. ಇವರಿಗೆ ಅನ್ಯಮಾರ್ಗವೇ ಇರುವುದಿಲ್ಲ. ಆದರೆ ಸ್ವಾರ್ಥ ದುಷ್ಕಾರ್ಯದಲ್ಲಿ ತೊಡಗಿರುವ ಜನ ಮಾಯೆಯ ಪ್ರಭಾವದಲ್ಲಿ ಸಿಲುಕಿ ಭಗವಂತನೊಡನೆ ಅನುಸಂಧಾನ ಮಾಡುವುದಿಲ್ಲ.

ಕಷ್ಟಗಳು ಬಂದಾಗ ಅದು ಸ್ವಾಗತಾರ್ಹವೇ, ಏಕೆಂದರೆ ಆಗಲಾದರೂ ಭಗವಂತನನ್ನು ನೆನೆಯುವ ಅವಕಾಶವನ್ನು ನಮಗೆ ಅವು ನೀಡುತ್ತವೆ. ನಮ್ಮನ್ನು ಆವರಿಸಿರುವ ಅವಿದ್ಯೆಯೆಂಬ ಕಡಲನ್ನು ದಾಟಲು ಭಗವಂತನ ಪಾದಕಮಲಗಳ ಆಶ್ರಯವೇ ನಮ್ಮ ರಕ್ಷಣೆಯ ನಾವೆ ಎನ್ನಬಹುದು.

ಬಹಳಷ್ಟು ಮುಗ್ಧ ಅಜ್ಞಾನಿಗಳು ತಮ್ಮ ಬದುಕಿನಲ್ಲಿ ಬರುವ ಕಷ್ಟಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವಿಸಲು ನಿರ್ಧರಿಸುತ್ತಾರೆ. ಆದರೆ ಸದಾ ಆನಂದವನ್ನು ಹೊಂದಿರುವ ಯಾವ ಕಷ್ಟಕೋಟಲೆಗಳ ಕುರುಹು ಕೂಡ ಇಲ್ಲದೆ ಇರುವ ಭಗವದ್ಧಾಮದ ಬಗ್ಗೆ ಅವರಿಗೆ ತಿಳಿದಿಲ್ಲ.

ಆದುದರಿಂದ ಎಲ್ಲ ಸಂದರ್ಭಗಳಲ್ಲೂ ಈ ಲೌಕಿಕ ವಿಪತ್ತುಗಳಿಂದ ಮನಃಶಾಂತಿಯನ್ನು ಕಳೆದುಕೊಳ್ಳದಿರುವುದೇ ವಿವೇಕಿಯಾದವನ ಕರ್ತವ್ಯ. ಅನಿವಾರ್ಯವಾಗಿ ಬರುವ ಈ ಯಾತನೆಗಳನ್ನು ಸಹಿಸುತ್ತಾ, ಎದುರಿಸುತ್ತಾ ಆತ್ಮ ಸಾಕ್ಷಾತ್ಕಾರದೆಡೆಗೆ ಮುನ್ನಡೆಯುವುದೇ ಮಾನವ ಜೀವನದ ಧ್ಯೇಯ.

ನಾವು ಈ ದೇಹವಲ್ಲ ಆತ್ಮಎಂದುಕೊಂಡರೂ, ಇನ್ನೊಬ್ಬರು ನಮ್ಮನ್ನು ಹಿಂಸಿಸಿದಾಗ ಅಥವಾ ಇನ್ನೊಬ್ಬರ ಹಿಂಸೆಯಿಂದ ಒಬ್ಬ ಸಾಯುವಾಗ, ಕಷ್ಟ ಬವಣೆ ಸಂಕಟಗಳನ್ನು ಪಡುವಾಗ, ದುಷ್ಟರ ಅತ್ಯಾಚಾರದಿಂದ ಮುಗ್ಧ ಜನರು, ನಿಸೆಸಹಾಯಕರು ಒದ್ದಾಡಿ ನರಳಿ ಸಾಯುವಾಗ, ಅವರು ಸಾಯುತ್ತಿಲ್ಲ ಈ ದೇಹಗಳನ್ನು ಬದಲಾಯಿಸುತ್ತಿದ್ದಾರೆ ಅಷ್ಟೆ ಎಂದು ಹೇಗೆ ಸಮಾಧಾನ ಮಾಡಿಕೊಳ್ಳಲು ಸಾಧ್ಯ? ಎಂದು ಗೀತೆಯಲ್ಲಿ ಅರ್ಜುನ ಕೃಷ್ಣನಿಗೆ ಪ್ರಶ್ನೆ ಮಾಡುತ್ತಾನೆ.

ನಮಗೆ ಎಲ್ಲಿಯವರೆಗೆ ಈ ಭೌತಿಕ ದೇಹ, ಇಂದ್ರಿಯತೃಪ್ತಿಯೇ ಜೀವನ ಎನ್ನುವ ಗ್ರಹಿಕೆ ಇರುವುದೋ ಅಲ್ಲಿಯವರೆಗೆ ಈ ಯಾತನೆ ತಪ್ಪಿದ್ದಲ್ಲ. ಆ ದುಃಖವನ್ನು ನಾವು ತಾಳಿಕೊಳ್ಳಲೇಬೇಕು. ಅದಕ್ಕೆ ಬೇರೆ ಇನ್ನಾವ ಪರಿಹಾರವೂ ಇಲ್ಲ ಎಂದು ಕೃಷ್ಣ ಹೇಳುತ್ತಾನೆ. ಹೇಗೆ ಉಷ್ಣ-ಶೀತ, ಸುಖ-ದುಃಖಗಳು, ಋತುಗಳು ಕಾಲಕ್ರಮದಲ್ಲಿ ಬಂದು ಹೋಗುತ್ತವೆಯೋ ಅವೆಲ್ಲ ನಮ್ಮ ಇಂದ್ರಿಯಗ್ರಹಿಕೆಗಳಿಂದ ಉಂಟಾಗುತ್ತವೆ.

ನಾವು ತಳಮಳಗೊಳ್ಳದೆ ಅದನ್ನು ಸಹಿಸಿಕೊಂಡು ಬಾಳುವುದನ್ನು ಕಲಿಯಬೇಕು. ಇದನ್ನೇ ತಪಸ್ಸು, ಉಗ್ರ ಸಂಯಮ ಎಂದು ಹೇಳುತ್ತಾರೆ. ಈ ಜಗತ್ತಿನಲ್ಲಿ ಎಲ್ಲ ಕಷ್ಟ ಆಪತ್ತುಗಳ ನಡುವೆಯೂ ನಮ್ಮ ಕರ್ತವ್ಯವಾದ ಕೃಷ್ಣ ಪ್ರಜ್ಞೆಯಲ್ಲಿ ಮುಂದುವರಿಯಬೇಕು. ಬದುಕಿನಲ್ಲಿ ಬರುವ ಕಷ್ಟ, ನಿಷ್ಠೂರಗಳನ್ನು ನಾವು ಸಹನೆಯಿಂದಲೇ ಸ್ವೀಕರಿಸಬೇಕು. ಅದೇ ನಿಜವಾದ ತಪಸ್ಸಾಗುತ್ತದೆ.

ಆದುದರಿಂದ ಪರಮ ಪ್ರಭುವಿನ ನಾಮವನ್ನು ಜಪಿಸಿ, ಕೀರ್ತಿಸಿ, ಪ್ರಸಾದ ಸ್ವೀಕರಿಸಬೇಕು. ಆದರೂ ಈ ಜಗತ್ತು ಐಹಿಕ ಜಗತ್ತಿಗೆ ಮರುಳಾಗುವಷ್ಟು, ಒಲವು ತೋರುವಷ್ಟು ಹರೇಕೃಷ್ಣ ಮಹಾಮಂತ್ರದ ಪಠಣದ ಬಗ್ಗೆ ಒಲವು ತೋರದಿರುವುದು ಅದರ ದುರ್ದೈವ ಎನ್ನದೇ ವಿಧಿಯಿಲ್ಲ.

ಸಂಗ್ರಹಾನುವಾದ : ಡಾ.ಕೆ. ವೈ. ಬಾಲರಾಜ್

ಆಕರ: ಕಾವನಾರು ಕೃಷ್ಣನಲ್ಲದೆ?’ ಕುಂತಿದೇವಿಯ ಧಾರ್ಮಿಕ ಬೋಧನೆಗಳು

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi