ವ್ಯೂಹಗಳು ಮತ್ತು ನಿಯಮಗಳು
‘ವ್ಯೂಹ’ ವೆಂದರೆ ಯುದ್ಧಸಂದರ್ಭದಲ್ಲಿ ರೂಪಿಸಲಾಗುವ ನಿರ್ದಿಷ್ಟ ಆಕಾರದ ಸೇನಾ ರಚನೆಗಳು. ಎದುರಾಳಿಗಳು ರಚಿಸುವ ಇಂತಹ ವ್ಯೂಹಗಳನ್ನು ಭೇದಿಸಿ ಒಳನುಗ್ಗಿ ಗೆದ್ದು ಬರುವುದು ಕೂಡ ಯುದ್ಧದ ನಿರ್ಣಾಯಕ ಅಂಶವಾಗಿರುತ್ತದೆ.
ಮಹಾಭಾರತದಲ್ಲಿ ಉಲ್ಲೇಖಗೊಂಡ ಕೆಲವು ವ್ಯೂಹಗಳು ಹೀಗಿವೆ:

1. ಕ್ರೌಂಚ ವ್ಯೂಹ
2. ಮಕರ ವ್ಯೂಹ
3. ಕೂರ್ಮವ್ಯೂಹ
4. ತ್ರಿಶೂಲ ವ್ಯೂಹ
5. ಚಕ್ರವ್ಯೂಹ
6. ಕಮಲ ವ್ಯೂಹ
7. ಗರುಡ ವ್ಯೂಹ
8. ಊರ್ಮಿವ್ಯೂಹ
9. ಮಂಡಲ ವ್ಯೂಹ
10. ವಜ್ರವ್ಯೂಹ
11. ಶಕಟವ್ಯೂಹ
12. ಆಸುರ ವ್ಯೂಹ
13. ದೇವ ವ್ಯೂಹ
14. ಸೂಜಿ ವ್ಯೂಹ
15. ಶೃಂಗಟಕ ವ್ಯೂಹ
16. ಚಂದ್ರಕಲಾ ವ್ಯೂಹ
ಮಹಾಭಾರತದಲ್ಲಿ ಉಲ್ಲೇಖಗೊಂಡಿರುವ ಕುರುಕ್ಷೇತ್ರ ಯುದ್ಧದ ನೀತಿಸಂಹಿತೆಗಳು:

ಯುದ್ಧಾರಂಭಕ್ಕೆ ಮುನ್ನ ಎರಡೂ ಬಣಗಳ ಮುಖ್ಯಸ್ಥರು ಕೂಡಿ ಧರ್ಮಯುದ್ಧಕ್ಕಾಗಿ ಕೆಲವು ನಿಯಮಾವಳಿಗಳನ್ನು ರೂಪಿಸಿದರು. ಅವು ಹೀಗಿವೆ:
- ಸೂರ್ಯೋದಯಕ್ಕೆ ಮುನ್ನ ಯುದ್ಧ ಶುರುವಾಗುವಂತಿಲ್ಲ ಹಾಗೂ ಸೂರ್ಯಾಸ್ತದ ಅನಂತರ ಮುಂದುವರಿಯುವಂತಿಲ್ಲ.
- ಒಬ್ಬಯೋಧನ ಮೇಲೆ ಹಲವಾರು ಜನ ಒಮ್ಮೆಲೆ ಮುಗಿ ಬೀಳುವಂತಿಲ್ಲ.
- ಇಬ್ಬರು ಯೋಧರು ದ್ವಂದ್ವ ಯುದ್ಧದಲ್ಲಿ ತೊಡಗಬಹುದು. ಇಬ್ಬರೂ ಒಂದೇ ಬಗೆಯ ಆಯುಧ ಹಾಗೂ ಸವಾರಿಗಳನ್ನು ಹೊಂದಿರಬೇಕು.
- ಶರಣಾಗತನಾದ ಯೋಧನನ್ನು ಕೊಲ್ಲುವಂತಿಲ್ಲ.
- ಶರಣಾಗತನಾದವನು ಯುದ್ಧ ಖೈದಿಯಾಗುವನು ಹಾಗೂ ಯುದ್ಧ ಖೈದಿಗಳ ರಕ್ಷಣಾ ನಿಯಮಗಳಿಗೆ ಒಳಗಾಗುವನು.
- ನಿಶ್ಯಸ್ತ್ರನಾಗಿರುವ ಯೋಧನನ್ನು ಕೊಲ್ಲುವುದಾಗಲೀ ಘಾಸಿಗೊಳಿಸುವುದಾಗಲೀ ಮಾಡಕೂಡದು.
- ಪ್ರಜ್ಞಾಹೀನ ಯೋಧನನ್ನು ಘಾಸಿಗೊಳಿಸುವುದಾಗಲೀ, ಕೊಲ್ಲುವುದಾಗಲೀ ಸಲ್ಲದು.
- ಯುದ್ಧದಲ್ಲಿ ಭಾಗಿಯಾಗಿರದ ವ್ಯಕ್ತಿಯನ್ನಾಗಲೀ, ಪ್ರಾಣಿಯನ್ನಾಗಲೀ ಕೊಲ್ಲುವುದು, ಘಾಸಿಗೊಳಿಸುವುದು ಕೂಡದು.
- ಯುದ್ಧಕ್ಕೆ ಬೆನ್ನು ತಿರುಗಿಸಿದ ಯೋಧನನ್ನು ಕೊಲ್ಲಬಾರದು, ಘಾಸಿಗೊಳಿಸಬಾರದು.
- ಯೋಧರು ಮಹಿಳೆಯರ ಮೇಲೆ ಆಕ್ರಮಣ ಮಾಡಕೂಡದು.
- ನೇರವಾಗಿ ಬೆದರಿಕೆಯೊಡ್ಡದ ಪ್ರಾಣಿಗಳನ್ನು ಯೋಧರು ಹಿಂಸಿಸಕೂಡದು.
- ಪ್ರತಿ ಆಯುಧಕ್ಕೂ ನಿರ್ದೇಶಿಸಲ್ಪಟ್ಟ ನಿಯಮಗಳನ್ನೇ ಅನುಸರಿಸಬೇಕು. ಉದಾ: ಯುದ್ಧದಲ್ಲಿ ಗದೆಯನ್ನು ಸೊಂಟದ ಕೆಳಗೆ ಪ್ರಹಾರ ಮಾಡಕೂಡದು.
- ಯೋಧರು ಅಕ್ರಮ ಯುದ್ಧದಲ್ಲಿ ನಿರತರಾಗಬಾರದು.






Leave a Reply