ಪವಿತ್ರ ಶ್ರೀ ವೃಂದಾವನ ಧಾಮದಲ್ಲಿ ನಡೆದ ಶುಭ ಸಮಾರಂಭದಲ್ಲಿ, ಶ್ರೀಲ ಪ್ರಭುಪಾದರ ಇಸ್ಕಾನ್ ಸಂಸ್ಥೆಯ ಮೂವರು ಹಿರಿಯ ಭಕ್ತರು ಗೌಡೀಯ-ವೈಷ್ಣವ ಸಂಪ್ರದಾಯದ ಪ್ರಕಾರ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸುವ ಮೂಲಕ, ಸನ್ಯಾಸಾಶ್ರಮವನ್ನು ಪ್ರವೇಶಿಸಿದರು.

1. ಪರಮಪೂಜ್ಯ ಅಮಿತಾಶನ ಕೃಷ್ಣ ಸ್ವಾಮಿ, 2. ಪರಮಪೂಜ್ಯ ಸತ್ಯ ಗೌರ ಚಂದ್ರ ಸ್ವಾಮಿ, 3. ಪರಮಪೂಜ್ಯ ಶ್ರೀಧಾಮ ಕೃಷ್ಣ ಸ್ವಾಮಿ ಎಂದು ಹೊಸದಾಗಿ ಸನ್ಯಾಸ ಸ್ವೀಕರಿಸಿದವರಿಗೆ ಸನ್ಯಾಸ ನಾಮಗಳನ್ನು ನೀಡಲಾಯಿತು.
ಇಸ್ಕಾನ್ ಸಂಸ್ಥೆಯ ಹಿರಿಯ ಸನ್ಯಾಸಿಗಳಾದ ಪರಮಪೂಜ್ಯ ಸ್ತೋಕ ಕೃಷ್ಣ ಸ್ವಾಮಿ ಅವರು, ಸನ್ಯಾಸ ದೀಕ್ಷಾ ವಿಧಿಯನ್ನು ನೆರವೇರಿಸಿಕೊಟ್ಟರು. ವೈಷ್ಣವ ಹೋಮ, ಪವಿತ್ರ ಮಂತ್ರಗಳ ಪಠಣ, ಸಾಂಪ್ರದಾಯಿಕ ಸನ್ಯಾಸ ವಸ್ತ್ರಗಳ ಸ್ವೀಕಾರ ಮತ್ತು ಸನ್ಯಾಸ ದಂಡವನ್ನು ಸ್ವೀಕರಿಸುವ ಪ್ರಕ್ರಿಯೆಗಳು ನಡೆದವು. ಇವು ಸನ್ಯಾಸ ಜೀವನದ ಕಡೆಗಿನ ಅವರ ಬದ್ಧತೆಯನ್ನು ಸೂಚಿಸುತ್ತವೆ.
ಸಮಾರಂಭವು ಈ ಮೂವರು ಭಕ್ತರ ಆಧ್ಯಾತ್ಮಿಕ ಜೀವನದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ. ಇವರು ಸನ್ಯಾಸ ಆಶ್ರಮದ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದು, ಶ್ರೀ ಗುರು ಮತ್ತು ಗೌರಾಂಗರ ಸೇವೆಗೆ ಹಾಗೂ ವಿಶ್ವಗುರು ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಬೋಧನೆಗಳು ಮತ್ತು ಧ್ಯೇಯೋದ್ದೇಶಗಳನ್ನು ಪ್ರಸಾರ ಮಾಡುವ ಕಾರ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಮಧು ಪಂಡಿತ ದಾಸ, ಶ್ರೀ ಚಂಚಲಪತಿ ದಾಸ, ಶ್ರೀ ಜೈ ಚೈತನ್ಯ ದಾಸ ಮತ್ತು ಶ್ರೀ ವಾಸುದೇವ ಕೇಶವ ದಾಸ, ಶ್ರೀಲ ಪ್ರಭುಪಾದರ 1977ಕ್ಕೂ ಹಿಂದಿನ ಶಿಷ್ಯರಾದ ಶ್ರೀ ಸಾತ್ತ್ವಿಕ ದಾಸ, ಶ್ರೀ ತತ್ತ್ವ ದರ್ಶನ ದಾಸ ಮತ್ತು ಶ್ರೀ ಗೌರಾಂಗ ದಾಸ, ಶ್ರೀಲ ಪ್ರಭುಪಾದರ ಇಸ್ಕಾನ್ ಸಂಸ್ಥೆಯ ಜಿಬಿಸಿ ಸದಸ್ಯರು ಹಾಗೂ ದೇಶದಾದ್ಯಂತ ಆಗಮಿಸಿದ್ದ ಭಕ್ತರು ಪಾಲ್ಗೊಂಡಿದ್ದರು.






Leave a Reply