– ಜಾನಕೀ ವಲ್ಲಭ ದಾಸ
“ನಮ್ಮೆಲ್ಲ ಚಟುವಟಿಕೆಗಳೂ ಇಂದ್ರಿಯ ತೃಪ್ತಿಯ ಕಡೆಗೇ ಕೇಂದ್ರೀಕೃತವಾಗಿವೆ. ವರ್ತನೆಯ ಸರಿಯಾದ ಮಾರ್ಗವನ್ನು ನಾವು ಅರಿತಿಲ್ಲ. ಆದ್ದರಿಂದ ಶಾಸ್ತ್ರಗಳು ನಮಗೆ ಹಿತಕಾರಿಯಾದ ಕೆಲವು ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಾ ಅಹಿತಕಾರಿಯಾಗಿ ಪರಿಣಮಿಸುವ ನಿರ್ದಿಷ್ಟ ಚಟುವಟಿಕೆಗಳನ್ನು ಮಾಡದಿರುವಂತೆ ನಿರ್ದೇಶನ ಮಾಡಿವೆ.”

ಕ್ರಿಯೆ ಹಾಗೂ ಪ್ರತಿಫಲಾತ್ಮಕ ಪ್ರತಿಕ್ರಿಯೆ: ಇದು ಅರ್ಥೈಸಿಕೊಳ್ಳಲು ಅತ್ಯಂತ ಕಷ್ಟಕರವಾದ ಸಂಗತಿಯಾಗಿದೆ. ಕೃಷ್ಣನು ಭಗವದ್ಗೀತೆಯಲ್ಲಿ (4:17) ‘ಗಹನಾ ಕರ್ಮಣೋ ಗತಿಃ’ ಎಂದು ಹೇಳಿರುವನು. ಅವನು ‘ಕವಯೋಽಪ್ಯತ್ರಮೋಹಿತಿಃʼ (4:16) ʼಬುದ್ಧಿವಂತರು ಕೂಡ ಈ ವಿಷಯ ವಸ್ತುವನ್ನು ಅರ್ಥೈಸಿಕೊಳ್ಳುವಲ್ಲಿ ದಾರಿ ತಪ್ಪುವರು’ – ಎಂದು ಕೂಡ ಹೇಳಿರುವನು.
ನಾವು ನಡೆಸುವ ಚಟುವಟಿಕೆಗಳನ್ನು ವಿಸ್ತಾರವಾಗಿ ಕರ್ಮ (ಶಾಸ್ತ್ರೋಕ್ತಚಟುವಟಿಕೆಗಳು), ವಿಕರ್ಮ (ನಿರ್ಬಂಧಿತ ಚಟುವಟಿಕೆಗಳು), ಅಕರ್ಮ (ಋಜುಫಲವನ್ನಾಗಲೀ ಪಾಪಕರ ಪ್ರತಿಫಲವನ್ನಾಗಲೀ ನೀಡದ ಚಟುವಟಿಕೆಗಳು: ಕೃಷ್ಣಪ್ರಜ್ಞಾವಂತ ಕಾರ್ಯಗಳು) ಎಂದು ವಿಭಾಗಿಸಬಹುದು.
ಶ್ರೀಲ ಪ್ರಭುಪಾದರು ಭಗವದ್ಗೀತೆಯ (4:17) ತಮ್ಮ ತಾತ್ಪರ್ಯದಲ್ಲಿ ಹೀಗೆ ಉಲ್ಲೇಖಿಸಿರುವರು:
ಭೌತಿಕ ಬಂಧನದಿಂದ ಬಿಡುಗಡೆ ಪಡೆಯಬೇಕೆಂದು ಮನುಷ್ಯನಿಗೆ ನಿಜವಾಗಿ ಅನ್ನಿಸಿದ್ದರೆ ಆತನು ಕರ್ಮ, ಅಕರ್ಮ ಮತ್ತು ವಿಕರ್ಮಗಳಲ್ಲಿನ ವ್ಯತ್ಯಾಸಗಳನ್ನು ತಿಳಿದುಕೊಳ್ಳಬೇಕು. ಕ್ರಿಯೆ, ಪ್ರತಿಕ್ರಿಯೆ ಮತ್ತು ವಿಕೃತಕ್ರಿಯೆಯನ್ನು ವಿಶ್ಲೇಷಿಸಲು ಗಮನಕೊಡಬೇಕು. ಇದು ಬಹಳ ಕ್ಲಿಷ್ಟವಾದ ವಿಷಯ.
ಕೃಷ್ಣಪ್ರಜ್ಞೆಯನ್ನು ಮತ್ತು ಅದಕ್ಕನುಗುಣವಾಗಿ ಹೇಗೆ ಕಾರ್ಯಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಮನುಷ್ಯನು ಪರಮ ಪುರುಷನೊಂದಿಗೆ ತನ್ನ ಸಂಬಂಧವನ್ನು ತಿಳಿದುಕೊಳ್ಳಬೇಕು. ಪರಿಪೂರ್ಣನಾದ ಜ್ಞಾನವಿರುವವನಿಗೆ ಪ್ರತಿಯೊಂದು ಜೀವಿಯೂ ಭಗವಂತನ ನಿತ್ಯಸೇವಕ.
ಆದುದರಿಂದ ಮನುಷ್ಯನು ಕೃಷ್ಣಪ್ರಜ್ಞೆಯಲ್ಲಿ ಕಾರ್ಯಮಾಡಬೇಕು ಎಂದು ತಿಳಿದಿರುತ್ತದೆ. ಇಡೀ ಭಗವದ್ಗೀತೆಯು ಈ ನಿರ್ಣಯದತ್ತ ಸಾಗುತ್ತದೆ. ಈ ಪ್ರಜ್ಞೆಗೆ ಮತ್ತು ಅದಕ್ಕೆ ಸಂಬಂಧಿಸಿದ ಕರ್ಮಗಳಿಗೆ ವಿರುದ್ಧವಾದ ಯಾವುದೇ ನಿರ್ಣಯವು ವಿಕರ್ಮ ಎಂದರೆ ನಿಷೇಧಿಸಿದ ಕರ್ಮ. ಇದನ್ನೆಲ್ಲ ಅರ್ಥಮಾಡಿಕೊಳ್ಳಲು ಮನುಷ್ಯನು ಕೃಷ್ಣಪ್ರಜ್ಞೆಯಲ್ಲಿ ಅಧಿಕಾರ ಪಡೆದವರ ಸಹವಾಸ ಮಾಡಬೇಕು ಮತ್ತು ಅವರಿಂದ ರಹಸ್ಯವನ್ನು ತಿಳಿದುಕೊಳ್ಳಬೇಕು.
ಇದು ಭಗವಂತನಿಂದ ನೇರವಾಗಿ ಕಲಿತುಕೊಳ್ಳುವುದಕ್ಕೆ ಸಮಾನ. ಇಲ್ಲವಾದರೆ ಅತ್ಯಂತ ಬುದ್ಧಿವಂತರಿಗೂ ದಿಗ್ಭ್ರಮೆಯಾಗುತ್ತದೆ.

ಯಾವಾಗ ನಾವು ಕೃಷ್ಣಪ್ರಜ್ಞೆಯಲ್ಲಿ ವರ್ತಿಸುತ್ತೇವೆಯೋ ಆಗ ಪ್ರತಿಫಲಾತ್ಮಕ ಪ್ರತಿಕ್ರಿಯೆಗಳು, ಒಳ್ಳೆಯ ಅಥವಾ ಕೆಟ್ಟದು – ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಭಗವದ್ಗೀತೆಯ 5ನೇ ಅಧ್ಯಾಯವು ಕೃಷ್ಣಪ್ರಜ್ಞಾವಂತ ಚಟುವಟಿಕೆಗಳ ವಿಷಯ ವಸ್ತುವಿಗೆ ಮೀಸಲಾಗಿದೆ. ಆದರೆ ಅದನ್ನು ವಿವರಿಸುವುದಕ್ಕೂ ಮುನ್ನ ಶ್ರೀಕೃಷ್ಣನು ಕರ್ಮಯೋಗವೆಂದರೇನು ಎಂಬುದನ್ನು ಭಗವದ್ಗೀತೆಯ 5ನೇ ಅಧ್ಯಾಯದಲ್ಲಿ ವಿವರಿಸಿದ್ದಾನೆ.
ಈ ಲೌಕಿಕ ಜಗತ್ತಿನಲ್ಲಿ ನಮ್ಮ ಪ್ರತಿಯೊಂದರ ಸ್ವತಂತ್ರ ಯಜಮಾನನಾಗಿದ್ದರೂ ಸಹ ನಾವು ನಮ್ಮ ಚಿಕ್ಕ ಪುಟ್ಟ ಸಂಗತಿಗಳಿಗೂ ಇತರರನ್ನು ಅವಲಂಬಿಸುತ್ತೇವೆ. ‘ಜೀವೋ ಜೀವಸ್ಯ ಜೀವಾನಮ್’ – ನಾವು ಇತರರ ಮೇಲೆ ಅವಲ೦ಬಿತರಾಗಿ ಬದುಕುತ್ತೇವೆ. ನಾವು ಸೇವಿಸುವ ಆಹಾರ ಕೂಡ ಪಾಪದ ಮುದ್ದೆಯೆಂದು ಹೇಳಲಾಗುತ್ತದೆ.
ಬೆಳೆ ಬಿತ್ತುವಲ್ಲಿ ಧಾನ್ಯ ಶೇಖರಣೆಯಲ್ಲಿ ಅಡುಗೆ ಮಾಡುವ ವಿವಿಧ ಹಂತಗಳಲ್ಲಿ ಬಹಳಷ್ಟು ಪಾಪಕಾರ್ಯಗಳು ನಡೆದುಹೋಗಿರುತ್ತವೆ. ಈ ಬಗೆಯ ಚಟುವಟಿಕೆಗಳ ದುಷ್ಪರಿಣಾಮಗಳಿಂದ ನಾವು ಕಲುಷಿತಗೊಳ್ಳುತ್ತೇವೆ. ಅದರಿಂದ ಪರಿಶುದ್ಧಗೊಳ್ಳಲು ಶಾಸ್ತ್ರಗಳು ನಮಗೆ ಹಲವಾರು ವ್ರತಾಚರಣೆಗಳ ನಿರ್ದೇಶನ ನೀಡಿವೆ. ಈ ಆಚರಣೆಗಳ ಹೊರತಾಗಿ ನಾವು ಯಾವುದೇ ಚಟುವಟಿಕೆಗಳನ್ನು ನಡೆಸಿದರೂ ಅವು ಪರಿಣಾತ್ಮಕವಾಗಿ ಅಹಿತಕರವಾಗಿಯೇ ಇರುತ್ತವೆ.
ಆಧುನಿಕ ಮಾನವನು, ತಾನು ಇತರರಿಗೆ ಒಳಿತನ್ನು ಮಾಡಿದರೆ ತನಗೂ ಒಳ್ಳೆಯ ಫಲವೇ ದೊರಕುತ್ತದೆಯೆಂದು ಹೇಳುತ್ತಾ ವೇದೋಕ್ತ ವ್ರತಾಚರಣೆಗಳನ್ನು ನಿರಾಕರಿಸಬಹುದು; ಆದರೆ ಶಾಸ್ತ್ರಗಳ ಪ್ರಕಾರ ಅದು ನಿಜವಲ್ಲ. ಆದರೆ, ಸದಾ ಕಾಲಕ್ಕೂ ವಿಕರ್ಮವನ್ನು ಅವು ಖಂಡಿಸಿವೆ.
ಯಾರೊಬ್ಬನೂ “ನಾನು ಯಾವಾಗಲೂ ಎಲ್ಲರಿಗೂ ಒಳಿತನ್ನೇ ಮಾಡಿದೆ. ಮತ್ತೇಕೆ ಭಗವಂತನು ನನ್ನನ್ನು ಯಾತನೆಗೆ ನೂಕಿರುವನು?” ಎಂದು ಕೇಳುವಂತಿಲ್ಲ. ಈ ಲೌಕಿಕ ಜಗತ್ತಿನಲ್ಲಿ ಒಳಿತೆಂಬುದಿಲ್ಲ. ಯಾವುದನ್ನಾದರೂ ಒಳ್ಳೆಯದು ಅಥವಾ ಕೆಟ್ಟದೆಂದು ತಿಳಿಯುವುದು ನಮ್ಮ ಮನಸಿನ ಭ್ರಾಂತಿಯಾಗಿವೆಯಷ್ಟೆ. ಈ ಲೌಕಿಕ ಜಗತ್ತಿನ ಪ್ರತಿಯೊಂದೂ ಅಮಂಗಳಕರವಾಗಿದ್ದು, ಯಜ್ಞಾಚರಣೆಯು ಈ ಎಲ್ಲ ಪ್ರತಿಫಲಾತ್ಮಕ ಅಹಿತಕರ ಪ್ರತಿಕ್ರಿಯೆಗಳಲ್ಲಿ ಸಿಲುಕಿಕೊಳ್ಳುವುದರಿಂದ ಮುಕ್ತಗೊಳಿಸಿ ಶುದ್ಧವಾಗಿಸುತ್ತವೆ.
ಈ ಲೌಕಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಮೋಹ ವಾ೦ಛೆಗಳ ಕಾರ್ಯಗಳಲ್ಲಿ ನಿರತರಾಗಿದ್ದೇವೆ. ಅದರ ಫಲಿತಾಂಶವಾಗಿ ಹೆಚ್ಚು ಹೆಚ್ಚು ಬಂಧನಕ್ಕೊಳಗಾಗುತ್ತ ಸಾಗಿದ್ದೇವೆ. ನಮ್ಮ ನಿತ್ಯ ಶತ್ರುವಾದ ಮೋಹವು ನಮ್ಮ ಇಂದ್ರಿಯಗಳನ್ನು, ಮನೋ ಬುದ್ಧಿಗಳನ್ನು ಸೆರೆಹಿಡಿದು, ನಮ್ಮ ನೈಜ ಜ್ಞಾನವನ್ನು ಮುಸುಕಿ ದಾರಿತಪ್ಪಿಸುತ್ತದೆ.

ನಮ್ಮೆಲ್ಲ ಚಟುವಟಿಕೆಗಳೂ ಇಂದ್ರಿಯ ತೃಪ್ತಿಯ ಕಡೆಗೇ ಕೇಂದ್ರೀಕೃತವಾಗಿವೆ. ವರ್ತನೆಯ ಸರಿಯಾದ ಮಾರ್ಗವನ್ನು ನಾವು ಅರಿತಿಲ್ಲ. ಆದ್ದರಿಂದ ಶಾಸ್ತ್ರಗಳು ನಮಗೆ ಹಿತಕಾರಿಯಾದ ಕೆಲವು ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಾ ಅಹಿತಕಾರಿಯಾಗಿ ಪರಿಣಮಿಸುವ ನಿರ್ದಿಷ್ಟ ಚಟುವಟಿಕೆಗಳನ್ನು ಮಾಡದಿರುವಂತೆ ನಿರ್ದೇಶನ ಮಾಡಿವೆ. ಆದರೆ ನಮ್ಮ ಗುರಿ ಇಂದ್ರಿಯ ತೃಪ್ತಿ! ಅದು ಹೇಗೆ ನಾನು ಲೌಕಿಕ ಜಗತ್ತಿನ ನಿಯಮಗಳನ್ನು ಮೀರಿ ಶಿಕ್ಷೆಗಳನ್ನು ಆಕರ್ಷಿಸದೆ ನನ್ನ ಇಂದ್ರಿಯಗಳನ್ನು ಸಂತೈಸಲು ಸಾಧ್ಯ?
ಮತ್ತೊಂದೆಡೆ ವಿಕರ್ಮವನ್ನು ಖಂಡಿಸಲಾಗುತ್ತದೆ. ಲೌಕಿಕ ಜಗತ್ತಿನ ನಿಯಮಗಳನ್ನು ನಾವು ಅರಿಯದೆ ಇರುವುದರಿಂದ, ಯಾವುದು ಸರಿ ಯಾವುದು ತಪ್ಪೆನ್ನುವುದನ್ನು ನಿರ್ಧರಿಸಲಾರೆವು. ಆದ್ದರಿಂದ ನಾವು ವೇದದ ಉಪದೇಶಗಳನ್ನು ಅನುಸರಿಸಿ ಮಹಾತ್ಮರ ಹೆಜ್ಜೆ ಜಾಡಿನಲ್ಲಿ ಸಾಗಬೇಕಾದುದು ಅವಶ್ಯಕ.
ಕೃಷ್ಣನು ಅರ್ಜುನನಿಗೆ ಮಹಾತ್ಮನೂ ಆತ್ಮ ಸಾಕ್ಷಾತ್ಕಾರ ಪಡೆದವನೂ ಆದ ಜನಕ ಮಹಾರಾಜನನ್ನು ಅನುಸರಿಸಿ ಕಾರ್ಯ ನಿರ್ವಹಿಸುವಂತೆ ಹೇಳುತ್ತಾನೆ. ಕೃಷ್ಣನು ಮಾಡಬೇಕೆಂದು ನಿರ್ದೇಶಿತವಾದ ಯಾವುದೇ ಕೆಲಸವಿಲ್ಲದೆ ಹೋದರೂ, ಅವನು ಇತರರು ತನ್ನನ್ನು ಅನುಸರಿಸಲಿ ಎಂಬ ಕಾರಣಕ್ಕಾಗಿಯೇ ಕಾರ್ಯವ್ಯಸ್ತನಾಗಿರುತ್ತಾನೆ.
ಮೌಢ್ಯದಿಂದಾಗಿ ನಾವು ನಮ್ಮನ್ನು ಲೌಕಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತೇವೆ. ಲೌಕಿಕ ಪ್ರಕೃತಿಯ ಮೇಲೆ ಒಡೆತನ ಸಾಧಿಸುವ ಅದಮ್ಯ ಬಯಕೆಯನ್ನು ಹೊಂದಿರುತ್ತೇವೆ. ನಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸುವ ಬಯಕೆ ಹೊಂದಿರುತ್ತೇವೆ. ಫಲಾಪೇಕ್ಷಿತ ಕೆಲಸಗಳನ್ನು ಮಾಡಲು ಉತ್ಸುಕರಾಗಿರುತ್ತೇವೆ.
ಇಂದ್ರಿಯ ತೃಪ್ತಿಗಾಗಿ ನಡೆಸುವ ಫಲಾಪೇಕ್ಷಿತ ಚಟುವಟಿಕೆಗಳನ್ನು ಮಾಡುವ ಈ ಎಲ್ಲ ಉತ್ಸುಕತೆಗಳಿಂದ ನಮ್ಮನ್ನು ನಾವು ಪರಿಶುದ್ಧಗೊಳಿಸಿಕೊಳ್ಳುವುದೇ ಮೊದಲ ಹೆಜ್ಜೆ. ಪರಿಶುದ್ಧೀಕರಣದ ಈ ಪ್ರಕ್ರಿಯೆಯನ್ನು ನಡೆಸುವುದಕ್ಕಾಗಿ ಶ್ರೀಕೃಷ್ಣನು ವರ್ಣಾಶ್ರಮವೆಂಬ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿರುವನು.
ಶಾಸ್ತ್ರಗಳಲ್ಲಿ ವ್ಯಕ್ತಿಯು ತನ್ನ ವರ್ಗದ ಅಥವಾ ಸ್ತರದ ನಿರ್ದೇಶಿತನ ನೀತಿ ನಿಯಮಗಳನ್ನು ಅನುಸರಿಸಿ ವರ್ತಿಸಬೇಕೆಂದು ಹೇಳಲಾಗಿದೆ. ಹಲವು ಬಗೆಯ ಯಜ್ಞ ಯಾಗಾದಿಗಳನ್ನೂ ಶಿಫಾರಸು ಮಾಡಲಾಗಿದೆ. ಇವೆಲ್ಲವುಗಳಿಂದ ನಾವು ಹಂತ ಹಂತವಾಗಿ ಪ್ರತಿಫಲಕ್ಕೆ ಅಂಟಿಕೊಳ್ಳದೆ ಕರ್ತವ್ಯ ನಡೆಸುವ ಉನ್ನತ ವೇದಿಕೆಗೆ ಏರುವೆವು.

ಎರಡನೇ ಹೆಜ್ಜೆ – ಪಾರಮಾರ್ಥಿಕ ಜ್ಞಾನಾರ್ಜನೆ. ಇದಕ್ಕಾಗಿ ಶಿಫಾರಸು ಮಾಡಿರುವ ಮಾರ್ಗವೆಂದರೆ – ಆಧ್ಯಾತ್ಮಿಕ ಗುರುವನ್ನು ಅರಸಿ ಹೋಗುವುದು, ಸೇವೆ ಮಾಡುತ್ತಾ ಉಪದೇಶಗಳನ್ನು ಪಡೆಯುವುದು.
ವ್ಯಕ್ತಿಯು ತನ್ನ ಆಧ್ಯಾತ್ಮಿಕ ಗುರುವಿನ ಮುಖೇನ ಕೃಷ್ಣನು ದೇವೋತ್ತಮ ಪರಮಪುರುಷನೆಂದೂ ಎಲ್ಲ ಜೀವರಾಶಿಗಳು ಅವನ ಅಭಿನ್ನ ಅಂಶಗಳೆಂದೂ ಅರಿತುಕೊಳ್ಳಬೇಕು. ಅಂಗವು ಸಮಸ್ತವಾದುದಕ್ಕೆ ಸೇವೆ ಸಲ್ಲಿಸಬೇಕು. ಆದ್ದರಿಂದ ನಮ್ಮೆಲ್ಲ ಕಾರ್ಯಗಳೂ ಪರಮಪ್ರಭು ಶ್ರೀಕೃಷ್ಣನನ್ನು ತೃಪ್ತಿಪಡಿಸುವ ಉದ್ದೇಶವನ್ನೇ ಹೊಂದಿರಬೇಕು.
ಯಾವಾಗ ನಾವು ಇದನ್ನು ಅರಿತುಕೊಳ್ಳುತ್ತೇವೆಯೋ, ಆಗ ನಮ್ಮೆಲ್ಲ ಕಾರ್ಯಗಳ ಪ್ರತಿಫಲಗಳನ್ನು ಕೃಷ್ಣನಿಗೆ ಸಮರ್ಪಿಸುವುದು ಸಾಧ್ಯವಾಗುತ್ತದೆ. ನಾವು ಇಂತಹ ದಿಟ್ಟ ಪ್ರಜ್ಞೆಯಲ್ಲಿ ವರ್ತಿಸಿದಾಗ ಎಲ್ಲ ಕಾರ್ಯಗಳ ಪ್ರತಿಫಲಾತ್ಮಕ ಪ್ರತಿಕ್ರಿಯೆಗಳೂ ಕಾಳ್ಗಿಚ್ಚಿಗೆ ಸಿಕ್ಕ ಕಾಡಿನಂತೆ ನಾಶವಾಗಿ ಹೋಗುತ್ತವೆ. ಕೃಷ್ಣಪ್ರಜ್ಞೆಯಲ್ಲಿ ದಾರಿ ಮತ್ತು ಗುರಿಗಳೆರಡೂ ಒಂದೇ ಆಗಿವೆ.
ನಾವು ಶ್ರೀಲ ಪ್ರಭುಪಾದರ ಮಾರ್ಗದರ್ಶನದಡಿಯಲ್ಲಿ ವರ್ತಿಸತೊಡಗಿದಾಗ, ಕ್ರಮೇಣವಾಗಿ ಪಾಪಕಾರ್ಯಗಳಿಂದ ವಿಮುಖರಾಗಿ ಹಿತಕರ ಫಲವನ್ನು ಪಡೆಯತೊಡಗುವೆವು. ಯಾವಾಗ ನಾವು ಶ್ರೀಲ ಪ್ರಭುಪಾದರ ಮಾರ್ಗದರ್ಶನದಂತೆ ಪವಿತ್ರನಾಮಜಪ, ಪೂಜೆ, ನೈವೇದ್ಯ, ಮಂಗಳಾರತಿ ಮೊದಲಾದ ಆಚರಣೆಗಳಲ್ಲಿ ತೊಡಗಿಕೊಳ್ಳುತ್ತೇವೆಯೋ ಆಗ ಕೂಡ ನಾವು ಹಿತಕಾರಿಯಾದ ಫಲಗಳನ್ನೇ ಪಡೆಯುತ್ತೇವೆ.
ನಮ್ಮ ಕರ್ತವ್ಯಗಳು ಶ್ರೀಲ ಪ್ರಭುಪಾದರಿಂದ ನಿರ್ದೇಶಿತವಾಗಿವೆ ಹಾಗೂ ಅವರ ಆದೇಶದಂತೆ ನಡೆದರೆ ಕ್ರಮೇಣವಾಗಿ ಪರಿಶುದ್ಧಗೊಂಡು ನೈಜ ಜ್ಞಾನವನ್ನು ಅರ್ಥೈಸಿಕೊಳ್ಳುವ ಹಂತಕ್ಕೆ ಏರುವುದು ಸಾಧ್ಯವಾಗುತ್ತದೆ. ಅವರ ಪುಸ್ತಕಗಳು ಹಾಗೂ ಉಪನ್ಯಾಸಗಳ ಮೂಲಕ ನಾವು ಪರಮಸತ್ಯವನ್ನು ಅರಿಯುವ ಪ್ರಯತ್ನವನ್ನು ಕೂಡ ಮಾಡಬಹುದು.
ಯಾವಾಗ ನಾವು ದಿವ್ಯ ಪ್ರಜ್ಞೆಯಲ್ಲಿ ಪೂರ್ಣ ಜ್ಞಾನದಲ್ಲಿ ವರ್ತಿಸುವ ಆ ಹಂತವನ್ನು ತಲಪುತ್ತೇವೆಯೋ, ಆಗ ಲೌಕಿಕ ಇಂದ್ರಿಯ ತೃಪ್ತಿಯ ಎಲ್ಲ ಉತ್ಸುಕತೆಗಳೂ ನಾಶವಾಗುತ್ತದೆ. ನಮಗೆ ಇಂದ್ರಿಯ ತೃಪ್ತಿಯ ಪ್ರಯತ್ನವು ಯಾತನೆಯ ಮೂಲವೆಂಬುದರ ಅರಿವಾಗತೊಡಗುತ್ತದೆ.
ಮೋಹ ಹಾಗೂ ಕ್ರೋಧದ ರೂಪದಲ್ಲಿರುವ ರಜ ಹಾಗೂ ತಮೋಗುಣಗಳೆಂಬ ಲೌಕಿಕ ಪ್ರಕೃತಿಯ ಗುಣಗಳು ಕ್ರಮೇಣ ಹಿಂದೆ ಸರಿಯುತ್ತವೆ. ನಾವು ಒಳಗಿನ ಆನಂದವನ್ನು ಹೊಂದಲಾರಂಭಿಸುತ್ತೇವೆ. ಈ ಹಂತದಲ್ಲಿ ಆ ಎಲ್ಲ ಕಾರ್ಯಗಳನ್ನು ನಿರಂತರ ಭಕ್ತಿಸೇವೆಯ ವೇದಿಕೆಯಲ್ಲಿ ನಿಂತು ನೆರವೇರಿಸಲು ಸಾಧ್ಯವಾಗುತ್ತದೆ.






Leave a Reply