ಮಧ್ಯ ದ್ವೀಪ

ನವದ್ವೀಪ ಪರಿಕ್ರಮ (ಭಾಗ-7)

– ಡಾ.ಬಿ.ಆರ್‌.ಸುಹಾಸ್‌

ಬ್ರಾಹ್ಮಣಪುಷ್ಕರ: ಈ ಪುಣ್ಯ ಪ್ರದೇಶವು ಭಕ್ತಿವಿನೋದಠಾಕುರರ ಮನೆಯಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿದೆ. ರಸ್ತೆಯಿಂದ ಸ್ವಲ್ಪ ಆಚೆಗಿರುವ ಇದು, ಒಂದು ಸುಂದರ ಅರಣ್ಯದಿಂದ ಸುತ್ತುವರಿಯಲ್ಪಟ್ಟಿರುವ ಒಂದು ಕೆರೆಯ ಸಮೀಪವಿದೆ. ಈ ಕೆರೆಯಲ್ಲಿ ನೈದಿಲೆ ಪುಷ್ಪಗಳು ತುಂಬಿರುತ್ತವೆ. ಬ್ರಾಹ್ಮಣಪುಷ್ಕರವೆಂದು ಕರೆಯಲ್ಪಟ್ಟಿರುವ ಈ ಕ್ಷೇತ್ರಕ್ಕೆ ಬ್ರಾಹ್ಮಣಪುರವೆಂದೂ ಹೆಸರಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು ಕಥೆಯು ಹೀಗಿದೆ:

ಸತ್ಯಯುಗದಲ್ಲಿ ದಿವೋದಾಸನೆಂಬ ಬ್ರಾಹ್ಮಣನು ವೈರಾಗ್ಯ ತಾಳಿ ತೀರ್ಥಯಾತ್ರೆಗೆ ಹೊರಟ. ತೀರ್ಥಯಾತ್ರೆ ಮಾಡುತ್ತಾ ಅವನು ನವದ್ವೀಪಕ್ಕೆ ಬಂದು ಅಲ್ಲೊಂದು ಪುಟ್ಟ ಗುಡಿಸಲು ಕಟ್ಟಿಕೊಂಡು ಇರತೊಡಗಿದ. ಅವನಿಗೆ ಪುಷ್ಕರಕ್ಷೇತ್ರಕ್ಕೆ ಹೋಗಬೇಕೆಂದು ಬಹಳ ಆಸೆಯಿತ್ತು.

ಆದರೆ ತೀರ್ಥಯಾತ್ರೆ ಮುಂದುವರಿಸಲಾರದೇ ನವದ್ವೀಪದಲ್ಲೇ ನೆಲೆಸಿದ್ದ. ಆಗ ಅವನಿಗೊಂದು ಕನಸು ಬಿದ್ದು ಅದರಲ್ಲಿ, ಅವನು ನವದ್ವೀಪದಲ್ಲೇ ಇದ್ದು ಭಗವಂತನ ನಾಮಸ್ಮರಣೆ ಮಾಡುತ್ತಿದ್ದರೆ ಅವನ ಆಸೆ ಪೂರೈಸುವುದೆಂಬ ವಾಣಿಯಾಯಿತು. ಅವನು ಹಾಗೆಯೇ ಮಾಡುತ್ತಿದ್ದರೂ ಪುಷ್ಕರಕ್ಕೆ ಹೋಗಲಾಗಲಿಲ್ಲ.

ಏತನ್ಮಧ್ಯೆ ಅವನು ಬಹಳ ವೃದ್ಧನಾಗಿ ಹೋಗುವುದು ಬಹಳ ಕಷ್ಟವಾಯಿತು. ಆಗ ಅವನ ಆಸೆಯನ್ನು ಪೂರೈಸಲು, ಪುಷ್ಕರ ತೀರ್ಥವೇ ಪುಷ್ಕರರಾಜನಾಗಿ ವ್ಯಕ್ತರೂಪ ಧರಿಸಿ ಕನಸಿನಲ್ಲಿ ಅವನ ಮುಂದೆ ಪ್ರತ್ಯಕ್ಷವಾಯಿತು. ಆ ಪುಷ್ಕರ ರಾಜನು ಅವನಿಗೆ, ಅವನ ಗುಡಿಸಲಿನ ಮುಂದೆ ಪ್ರತ್ಯಕ್ಷವಾಗಿರುವ ಸರೋವರದಲ್ಲಿ ಸ್ನಾನ ಮಾಡಲು ಹೇಳಿದ.

ಅದರಂತೆ ಆ ಬ್ರಾಹ್ಮಣ ದಿವೋದಾಸನು ಮರುದಿನ ಗುಡಿಸಲಿನ ಮುಂದೆ ಪ್ರತ್ಯಕ್ಷವಾಗಿದ್ದ ಒಂದು ಸರೋವರದಲ್ಲಿ ಮಿಂದನು. ಆಗ ಪುಷ್ಕರ ರಾಜನು ಪ್ರತ್ಯಕ್ಷನಾಗಿ ತನ್ನ ದಿವ್ಯಕ್ಷೇತ್ರವು ಅವನ ಕಂಗಳಿಗೆ ಗೋಚರಿಸುವಂತೆ ಮಾಡಿದನು. ಆಗ ಆ ಬ್ರಾಹ್ಮಣನು ಸಂತೋಷಗೊಂಡನು; ಆದರೆ ತನಗಾಗಿ ದೂರ ಬರಬೇಕಾಯಿತಲ್ಲಾ ಎಂದು ಅವನನ್ನು ತೊಂದರೆಪಡಿಸಿದುದಕ್ಕಾಗಿ ಅವನ ಕ್ಷಮೆ ಯಾಚಿಸಿದನು.

ಆದರೆ ಅದಕ್ಕೆ ಪುಷ್ಕರ ರಾಜನು ತಾನು ಅಷ್ಟೊಂದು ದೂರದಿಂದ ಬರುತ್ತಿಲ್ಲವೆಂದೂ ತಾನು ಅಲ್ಲಿಯೇ ಇರುವುದಾಗಿಯೂ ಹೇಳಿ, ನವದ್ವೀಪವು ಎಲ್ಲ ತೀರ್ಥಕ್ಷೇತ್ರಗಳ ಸಂಗಮವೆಂದೂ ಹೇಳಿದನು. ತಾನು ಪಶ್ಚಿಮದಲ್ಲಿ ಪುಷ್ಕರದ ಒಂದು ರೂಪವನ್ನು ಪ್ರದರ್ಶಿಸಿರುವುದಾಗಿಯೂ ವಾಸ್ತವವಾಗಿ ತಾನು ಅಲ್ಲಿಯೇ ಇರುವುದಾಗಿಯೂ ಹೇಳಿದನು.

ಇತರ ಕ್ಷೇತ್ರಗಳಲ್ಲಿ ನೂರಾರು ಬಾರಿ ಸ್ನಾನ ಮಾಡುವುದರಿಂದ ದೊರೆಯುವ ಫಲವು ನವದ್ವೀಪಧಾಮದಲ್ಲಿ ಒಂದು ರಾತ್ರಿ ವಾಸಿಸುವುದರಿಂದ ದೊರೆಯುವುದೆಂದೂ ಹೇಳಿದನು. ಹೀಗೆ ಹೇಳಿ ಪುಷ್ಕರರಾಜನು ಅದೃಶ್ಯನಾದನು. ಆಗ ಒಂದು ಅಶರೀರವಾಣಿಯು ಮೊಳಗಿ ಕಲಿಯುಗದಲ್ಲಿ ಆ ಬ್ರಾಹ್ಮಣನು ಪುನಃ ಹುಟ್ಟಿ ಗೌರಾಂಗದೇವನ ಲೀಲೆಗಳಲ್ಲಿ ಭಾಗವಹಿಸುವನೆಂದು ಹೇಳಿತು.

ಪುಷ್ಕರಕ್ಷೇತ್ರವು ರಾಜಸ್ಥಾನದಲ್ಲಿದೆ. ಇದು, ಅಜ್ಮೀರಕ್ಕೆ ವಾಯವ್ಯ ದಿಕ್ಕಿನಲ್ಲಿ ಹತ್ತು ಕಿ.ಮೀ. ದೂರದಲ್ಲಿ ಹಾಗೂ ದೆಹಲಿಗೆ ನೈಋತ್ಯ ದಿಕ್ಕಿನಲ್ಲಿ 400 ಕಿ.ಮೀ. ದೂರದಲ್ಲಿ ಹಾಗೂ ಜೈಪುರಕ್ಕೆ ನೈಋತ್ಯದಲ್ಲಿ 145 ಕಿ.ಮೀ. ದೂರದಲ್ಲಿದೆ. ಇದು ಮರುಭೂಮಿಯೊಂದರ ತುದಿಯಲ್ಲಿದೆ.

ಇಲ್ಲೊಂದು ಸರೋವರವಿದ್ದು ಅದರ ಸುತ್ತಲೂ ದೇವಾಲಯಗಳಿವೆ. ಪುಷ್ಕರದಲ್ಲಿ ಸುಮಾರು 400 ದೇವಾಲಯಗಳಿವೆ. ಕೆಲವು ಪ್ರಮುಖ ದೇವಾಲಯಗಳೆಂದರೆ, ಬ್ರಹ್ಮನ ದೇವಾಲಯ, ರಂಗನಾಥ ದೇವಾಲಯ, ವರಾಹ, ಸಾವಿತ್ರಿ ಮತ್ತು ಗಾಯತ್ರಿ ದೇವಾಲಯಗಳು.

ಶ್ರೀಮನ್ಮಹಾಭಾರತದಲ್ಲಿ ಪುಷ್ಕರ ತೀರ್ಥದ ಬಗ್ಗೆ, ‘ಪುಷ್ಕರತೀರ್ಥವೆಂಬ ಮಹಾ ವಿಷ್ಣುವಿನ ಈ ಪವಿತ್ರ ಕ್ಷೇತ್ರವು ಮೂರು ಲೋಕಗಳಲ್ಲೂ ಪ್ರಸಿದ್ಧವಾಗಿದೆ. ಪುಣ್ಯವಂತರು ಇಲ್ಲಿಗೆ ಬರುತ್ತಾರೆ. ಪ್ರಾತಃಕಾಲದಲ್ಲೂ ಸಾಯಂಕಾಲದಲ್ಲೂ ಲಕ್ಷಾಂತರ ತೀರ್ಥಗಳು ಇಲ್ಲಿ ಸೇರುತ್ತವೆ.

ಸ್ತ್ರೀ ಪುರುಷರ ಸಕಲ ಪಾಪಗಳೂ ಈ ಕ್ಷೇತ್ರದಲ್ಲಿ ಸುಮ್ಮನೆ ಸ್ನಾನ ಮಾಡುವುದರಿಂದ ನಾಶವಾಗುತ್ತವೆ. ಮಧುಸೂದನನು ಮೂಲ ಭಗವಂತನಾಗಿರುವಂತೆ ಪುಷ್ಕರವು ಮೂಲ ತೀರ್ಥವಾಗಿದೆ – ಎಂದು ಹೇಳಿದೆ.

ಪುಷ್ಕರ ತೀರ್ಥದಲ್ಲಿ ಕಾರ್ತಿಕ ಪೌರ್ಣಿಮೆಯಂದು ಸ್ನಾನ ಮಾಡುವುದರಿಂದ ಮೋಕ್ಷಲಭಿಸುತ್ತದೆಯೆಂದು ಹೇಳಲಾಗಿದೆ. ಕಾರ್ತಿಕ ಮಾಸದ ಮೊದಲ ಐದು ದಿನಗಳಂದು ಇಲ್ಲಿ ಸ್ನಾನ ಮಾಡುವುದರಿಂದ ಪೂರ್ಣ ಫಲವು ಪ್ರಾಪ್ತಿಯಾಗುವುದೆಂದು ಹೇಳುತ್ತಾರೆ.

ಪುಷ್ಕರಕ್ಕೆ ಸಂಬಂಧಿಸಿದಂತೆ ಒಂದು ಕಥೆಯಿದೆ. ಸೃಷ್ಟಿಕರ್ತನಾದ ಬ್ರಹ್ಮದೇವನು ಈ ಸ್ಥಳದಲ್ಲಿ ಸಂಚರಿಸುತ್ತಿದ್ದಾಗ ಒಂದು ಕಮಲಪುಷ್ಪವನ್ನು ಜಾರಿಸಿ ಕೆಳಗೆ ಬೀಳಿಸಿದನಂತೆ. ಅದು ಮೂರು ಪ್ರದೇಶಗಳಲ್ಲಿ ಬಿದ್ದು, ಅದು ಬಿದ್ದ ಕಡೆಯಲ್ಲಾ ನೆಲದಿಂದ ನೀರು ಉದ್ಭವಿಸಿತು. ಅಲ್ಲಲ್ಲಿ ಒಂದೊಂದು ಕೆರೆಯುಂಟಾಯಿತು.

ಈ ಕೆರೆಗಳು ಆರು ಮೈಲಿಗಳ ವ್ಯಾಪ್ತಿಯಲ್ಲಿವೆ. ಪದ್ಮಪುರಾಣದ ಪ್ರಕಾರ, ಬ್ರಹ್ಮನು ಒಬ್ಬ ರಾಕ್ಷಸನನ್ನು ಸಂಹರಿಸಲು ಇಲ್ಲಿ ಕಮಲಪುಷ್ಪವನ್ನು ಬೀಳಿಸಿದನು. ಆ ಪುಷ್ಪದ ದಳಗಳು ಮೂರು ಕಡೆಗಳಲ್ಲಿ ಬಿದ್ದು ಮೂರು ಕೆರೆಗಳುಂಟಾದವು. ಹೀಗೆ ಎಲ್ಲಿ ಬ್ರಹ್ಮನ ಕರದಿಂದ ಪುಷ್ಪವು ಜಾರಿಬಿದ್ದಿತೋ, ಅಲ್ಲಿ ಪುಷ್ಕರವೆಂಬ ಪವಿತ್ರ ಕ್ಷೇತ್ರವಾಯಿತು.

ಹೀಗೆ ಈ ಹೆಸರು ಪುಷ್ಪ ಮತ್ತು ಕರ ಎಂಬ ಎರಡು ಪದಗಳಿಂದ ಬಂದಿದೆ. ಬ್ರಹ್ಮನು ಈ ಸ್ಥಳದಲ್ಲಿ ಕಾರ್ತಿಕ ಮಾಸದ (ಅಕ್ಟೋಬರ್-ನವೆಂಬರ್ ) ಪೌರ್ಣಿಮೆಯ ದಿನ ಒಂದು ಯಜ್ಞ ಮಾಡಿದನು. ಬ್ರಹ್ಮನು ತಾನು ಯಜ್ಞ ಮಾಡುವುದಕ್ಕೆ ಸೂಕ್ತ ಸ್ಥಳವೊಂದನ್ನು ಹುಡುಕುತ್ತಿದ್ದನು.

ಅವನ ಕೈಯಿಂದ ಕಮಲವು ಜಾರಿ ಈ ಸ್ಥಳದಲ್ಲಿ ಬಿದ್ದು ಮತ್ತೆ ಮತ್ತೆ ಪುಟಿದು ಮೂರು ಕಡೆ ಬಿದ್ದಿತು, ಹಾಗೂ ಅದು ಬಿದ್ದ ಕಡೆಗಳಲ್ಲಿ ನೀರು ಚಿಮ್ಮಿ ಕರೆಗಳಾದವು. ಹಾಗಾಗಿ ಬ್ರಹ್ಮದೇವನು ಈ ಪುಷ್ಕರ ಕ್ಷೇತ್ರದಲ್ಲಿ ಯಜ್ಞವನ್ನು ಮಾಡಿದನು. ಬ್ರಹ್ಮನು ಇಲ್ಲಿ ಯಜ್ಞವನ್ನು ಮಾಡಲು ನಿರ್ಧರಿಸಿದಾಗ ಅದು ತನ್ನ ಪತ್ನಿ ಸಾವಿತ್ರಿಯಿಲ್ಲದೇ ಮಾಡುವಂತಿಲ್ಲವೆಂದು ಅವನಿಗೆ ಹೊಳೆಯಿತು.

ಆದರೆ ಅವಳು ಬರುವುದು ಬಹಳ ತಡವಾಗುತ್ತಿತ್ತು. ಅದಕ್ಕಾಗಿ ಬ್ರಹ್ಮನು ಇಂದ್ರನಿಗೆ ಕೂಡಲೇ ತನಗೊಬ್ಬ ಪತ್ನಿಯನ್ನು ಒದಗಿಸುವಂತೆ ಹೇಳಿದನು. ಆಗ ಪುರೋಹಿತನ ಒಬ್ಬ ಕನ್ಯೆಯನ್ನು ಪ್ರಕಟಿಸಿದನು. ಆದರೆ ಅವಳು ಅಸ್ಪೃಶ್ಯಳಾದುದರಿಂದ ಅವಳನ್ನು ಹಸುವಿನ ಬಾಯಲ್ಲಿ ಹಾಕಿ, ಹಸುವಿನ ಹಿಂಭಾಗದಿಂದ ಹೊರತೆಗೆದರು.

ಹೀಗೆ ಗೌ (ಹಸು) ವಿನ ಮೂಲಕ ತ್ರಿ (ಹಾದು ಬಂದುದರಿಂದ), ಅವಳಿಗೆ ಗಾಯತ್ರಿ ಎ೦ದು ಹೆಸರಾಯಿತು! ಬ್ರಹ್ಮನು ಅವಳನ್ನು ಅಲ್ಲಿಯೇ ಮದುವೆಯಾದನು. ಅನಂತರ ಸಾವಿತ್ರಿಯು ಬಂದು, ತನ್ನ ಪತಿ ಬ್ರಹ್ಮದೇವನು ತನ್ನನ್ನು ಕೇಳದೆಯೇ ಇನ್ನೊಂದು ಮದುವೆಯಾದುದಕ್ಕೆ ಕುಪಿತಗೊಂಡು, ಇನ್ನು ಮುಂದೆ ಅವನು ಪುಷ್ಕರಕ್ಷೇತ್ರದಲ್ಲಿ ಮಾತ್ರ ಪೂಜೆಗೊಳ್ಳುವಂತಾಗಲಿ ಎಂದು ಬ್ರಹ್ಮನಿಗೆ ಶಪಿಸಿದಳು.

ಅನಂತರ ಅವಳು ಅಲ್ಲಿಂದ ಹೊರಟು ರತ್ನಗಿರಿ ಎಂಬಲ್ಲಿ ಒಂದು ಬೆಟ್ಟದ ಮೇಲೆ ತನಗಾಗಿ ಒಂದು ದೇವಾಲಯವನ್ನು ನಿರ್ಮಿಸಿಕೊಂಡಳು. ಇದು ಪುಷ್ಕರಕ್ಕೆ ದಕ್ಷಿಣದಲ್ಲಿದೆ. ಈಗಲೂ ಬ್ರಹ್ಮದೇವನಿಗೆ ಇಡೀ ಭಾರತದಲ್ಲಿ ಪುಷ್ಕರಕ್ಷೇತ್ರದಲ್ಲಿ ಮಾತ್ರ ಪೂಜೆಯಾಗುತ್ತದೆ.

ಉಚ್ಚಹಟ್ಟ

ಮುಖ್ಯರಸ್ತೆಯಲ್ಲಿ ಹೋಗುತ್ತಾ ನವದ್ವೀಪ ಅಥವಾ ಕೃಷ್ಣಾನಗರ ಹೆದ್ದಾರಿಗೆ ಬಂದು, ಗೌರಾಂಗ ಸೇತುವೆಗೆ ಇನ್ನೂ ಒಂದು ಕಿ.ಮೀ. ಇರುವವರೆಗೆ ಬಂದರೆ, ರಸ್ತೆಯ ಬಲಭಾಗಕ್ಕೆ ಉಚ್ಚಹಟ್ಟ ಎಂಬ ಈ ಪ್ರದೇಶವಿದೆ. ಉಚ್ಚಹಟ್ಟ, ಉಚ್ಚ ಎಂದರೆ ಎತ್ತರವಾದ ಅಥವಾ ಜೋರಾದ ಮತ್ತು ಹಟ್ಟ ಎಂದರೆ ಸಮೂಹ ಎಂಬ ಎರಡು ಪದಗಳಿಂದ ಉಂಟಾಗಿದೆ.

ಇಲ್ಲಿ ದೇವತೆಗಳ ಸಮೂಹ ಸೇರಿ ಎತ್ತರದ ಧ್ವನಿಯಲ್ಲಿ ಜೋರಾಗಿ ಶ್ರೀ ಚೈತನ್ಯರ ನಾಮೋಚ್ಛಾರಣೆ ಮಾಡುತ್ತಿದ್ದರೆಂದು ಹೇಳುತ್ತಾರೆ. ಹಾಗಾಗಿ ಈ ಕ್ಷೇತ್ರಕ್ಕೆ ಉಚ್ಚಹಟ್ಟ ಎನ್ನುತ್ತಾರೆ. ಈ ಸ್ಥಳವು ಮಹಾಭಾರತ ಯುದ್ಧ ನಡೆದ ಕುರುಕ್ಷೇತ್ರಕ್ಕಿಂತ ಬೇರೆಯಲ್ಲವೆಂದು ಭಕ್ತರು ನಂಬುತ್ತಾರೆ.

ಸರಸ್ವತಿ ಮತ್ತು ದೃಶ್ಯವತಿ ಎಂಬ ಪವಿತ್ರ ನದಿಗಳೂ ಸೇರಿದಂತೆ ಕುರುಕ್ಷೇತ್ರದ ಎಲ್ಲ ಪವಿತ್ರ ಸ್ಥಳಗಳೂ ಇಲ್ಲೇ ಇವೆ ಎಂದು ಹೇಳುತ್ತಾರೆ. ಕುರುಕ್ಷೇತ್ರದಲ್ಲಿ ನೂರು ವರ್ಷಗಳ ಕಾಲ ನೆಲೆಸುವುದರಿಂದ ಬರುವ ಫಲವು ಇಲ್ಲಿ ಒಂದೇ ರಾತ್ರಿ ನೆಲೆಸುವುದರಿಂದ ಬರುತ್ತದೆ. ಈ ಸ್ಥಳವನ್ನು ಸಂದರ್ಶಿಸುವುದರಿಂದ ಭಕ್ತರಲ್ಲಿ ಸಾಗರದಷ್ಟು ಕೃಷ್ಣಪ್ರೇಮ ಉಕ್ಕುತ್ತದೆ.

ಈ ಸ್ಥಳವನ್ನು ಹಟ್ಟ ಎಂದಾಗ, ಅಂದರೆ, ದೇವತೆಗಳ ವ್ಯಾಪಾರ ಕ್ಷೇತ್ರ ಎಂತಲೂ ಕರೆಯುತ್ತಾರೆ. ಈ ಸ್ಥಳವನ್ನು ಚಕ್‌ಪನ್ ಶಿಲ ಎಂದೂ ಕರೆಯುತ್ತಾರೆ. ಇಲ್ಲಿಗೆ ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಭಕ್ತಸಂಗಡಿಗರೊಂದಿಗೆ ಬಂದು ನಾಮಸಂಕೀರ್ತನೆ ಮಾಡುತ್ತಿದ್ದರು.

ಮಹಾಭಾರತ ಯುದ್ಧ ನಡೆದ ಕುರುಕ್ಷೇತ್ರವು ದೆಹಲಿಗೆ ಉತ್ತರದಲ್ಲಿ 160 ಕಿ.ಮೀ. ದೂರದಲ್ಲಿದೆ. ಇದು ನೂರು ಮೈಲಿಗಳಷ್ಟು ಸ್ಥಳದ ವಿಸ್ತಾರ ಹೊಂದಿದ್ದು, ಮಹಾಭಾರತಕ್ಕೆ ಸಂಬಂಧಿಸಿದ ಹಲವಾರು ತೀರ್ಥಕ್ಷೇತ್ರಗಳು ಇಲ್ಲಿವೆ. ಮಹಾಭಾರತದ ಮಹಾಯುದ್ಧ ಈ ಸ್ಥಳದಲ್ಲೇ ನಡೆದಿದ್ದು, ಯುದ್ಧಾರಂಭಕ್ಕೆ ಮೊದಲು ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದ್ದು ಇಲ್ಲಿಯೇ.

ಭಗವದ್ಗೀತೆಯಲ್ಲಿ ಈ ಸ್ಥಳಕ್ಕೆ ಧರ್ಮಕ್ಷೇತ್ರವೆಂದು ಹೇಳಲಾಗಿದೆ. ಒಂದು ನಿರ್ದಿಷ್ಟ ಗ್ರಹಣಕಾಲದಲ್ಲಿ ಭಾರತದ ಎಲ್ಲ ಪವಿತ್ರ ನದಿಗಳೂ ಇಲ್ಲಿನ ಒಂದು ಕೆರೆಗೆ ಹರಿದು ಬರುತ್ತವೆ ಎಂದು ಹೇಳುತ್ತಾರೆ. ಆ ಸಮಯದಲ್ಲಿ ಸುಮಾರು ಒಂದು ದಶಲಕ್ಷ ಜನರು ಇಲ್ಲಿಗೆ ಸ್ನಾನ ಮಾಡಲು ಬರುತ್ತಾರೆ.

ಶ್ರೀಕೃಷ್ಣನೂ ಸಂಪೂರ್ಣ ಸೂರ್ಯಗ್ರಹಣವೊಂದರ ಸಮಯದಲ್ಲಿ ತನ್ನ ಬಂಧು ಬಾಂಧವರೊಂದಿಗೆ ಇಲ್ಲಿಗೆ ಬಂದಿದ್ದು ಆ ಸಮಯದಲ್ಲಿ ಇಲ್ಲಿಗೆ ಬಂದಿದ್ದ ಅವನ ಬಾಲ್ಯ ಸ್ನೇಹಿತರಾದ ಗೋಪ, ಗೋಪಿಯರೊಡನೆ ಅವನು ಭೇಟಿಯಾದುದರ ವರ್ಣನೆ ಭಾಗವತದಲ್ಲಿದೆ.

ಈ ಪವಿತ್ರಕ್ಷೇತ್ರದಿಂದಲೇ ಬ್ರಹ್ಮನು ಯಜ್ಞಾಚರಣೆಯ ಬಳಿಕ ವಿಶ್ವವನ್ನು ಸೃಷ್ಟಿಸಿದನೆಂದು ಹೇಳುತ್ತಾರೆ. ಮನುವು ಮನುಸ್ಮೃತಿಯನ್ನು ಬರೆದುದು ಇಲ್ಲಿಯೇ ಎಂದು ಹೇಳುತ್ತಾರೆ. ಋಗ್ವೇದ ಮತ್ತು ಸಾಮವೇದಗಳನ್ನು ಸಂಕಲಿಸಲಾದುದು ಇಲ್ಲಿಯೇ ಎಂದು ಹೇಳುತ್ತಾರೆ. ಮಹಾರಾಜ ಕುರುವು ಇಲ್ಲಿ ಒಂದು ಮಹಾಯಜ್ಞವನ್ನು ಮಾಡಿದುದರಿಂದ ಈ ಸ್ಥಳಕ್ಕೆ ಕುರುಕ್ಷೇತ್ರ ಎಂಬ ಹೆಸರು ಪ್ರಾಪ್ತವಾಯಿತು.

ಕುರುಕ್ಷೇತ್ರದ ಪ್ರಸ್ತಾಪ, ಮಹಾಭಾರತ, ಋಗ್ವೇದ, ಪದ್ಮಪುರಾಣ, ನಾರದಪುರಾಣ, ಮತ್ಸ್ಯ ಮತ್ತು ವಾಮನಪುರಾಣಗಳಲ್ಲಿ ಬಂದಿದೆ. ಮಹಾಭಾರತದ ಪ್ರಕಾರ, ಇಲ್ಲಿ ಮರಣ ಹೊಂದಿದವರಿಗೆ ಮುಕ್ತಿ ದೊರೆಯುತ್ತದೆ.

ಇಲ್ಲಿಯೇ ಭೀಷ್ಮಕುಂಡವಿದೆ. ಇದು ಭೀಷ್ಮರು ಶರತಲ್ಪದಲ್ಲಿ ಮಲಗಿದ ಸ್ಥಳ. ಹಿಂದೊಮ್ಮೆ ಅರ್ಜುನನು ಸೃಷ್ಟಿಸಿದ್ದ ಬಾಣಗಂಗೆ ಮತ್ತು ಸರಸ್ವತೀ ನದಿ ಇಲ್ಲಿ ಹರಿಯುತ್ತಿದ್ದವು. ಈಗ ಸರಸ್ವತೀ ನದಿಯು ಭೂಮಿಯ ಕೆಳಗೆ ಹರಿಯುತ್ತಿದೆ ಎಂದು ಹೇಳುತ್ತಾರೆ. ಮಹಾರಾಜ ಪೃಥುವು ಇಲ್ಲಿ ಶ್ರಾದ್ಧ ಮಾಡಿದ್ದನು ಎಂದು ಹೇಳುತ್ತಾರೆ. ಭೂಮಿಯನ್ನು ವಿಭಾಗಿಸುವ ಗೆರೆ, ಕುರುಕ್ಷೇತ್ರ, ಮಥುರಾ ಮತ್ತು ಉಜ್ಜಯಿನಿಯ ಮುಖಾಂತರ ಹಾದು ಹೋಗುತ್ತದೆ.

ಪಂಚವೇಣಿ

ಪ೦ಚವೇಣಿ ಎನ್ನುವುದು, ಗಂಗೆ, ಅಲಕನಂದಾ, ಮಂದಾಕಿನೀ ಮತ್ತು ಸರಸ್ವತಿ ನದಿಗಳ ಸಂಗಮಸ್ಥಳ. ಸರಸ್ವತಿಯು ಗುಪ್ತಗಾಮಿನಿಯಾಗಿದೆ. ಪಶ್ಚಿಮ ದಿಕ್ಕಿನಲ್ಲಿ ಯಮುನಾ, ಭಗವತಿ ಮತ್ತು ಮಾನಸಗಂಗಾ ನದಿಗಳೂ ಸೇರಿಕೊಳ್ಳುತ್ತವೆ. ಈ ಕ್ಷೇತ್ರವನ್ನು ಮಹಾಪ್ರಯಾಗ ಎಂದೂ ಕುಲಿಯಾಪಹಾಡ ಎಂದೂ ಕರೆಯುತ್ತಾರೆ.

ಬ್ರಹ್ಮದೇವನು ಅನೇಕ ಋಷಿಮುನಿಗಳೊಂದಿಗೆ ಇಲ್ಲಿ ಹಲವು ಲಕ್ಷ ಯಜ್ಞಗಳನ್ನು ಆಚರಿಸಿದ್ದಾರೆ ಎಂದು ನಂಬುತ್ತಾರೆ. ಶ್ರೀ ಚೈತನ್ಯ ಮಹಾಪ್ರಭುಗಳನ್ನು ಸೇವಿಸಲು ಇಲ್ಲಿ ಎಲ್ಲ ಪವಿತ್ರ ನದಿಗಳೂ ಸೇರುತ್ತವೆ ಎಂದು ಹೇಳುತ್ತಾರೆ. ವ್ರಜಭೂಮಿಯಲ್ಲಿರುವ ಶ್ರೀ ರಾಧಾಕುಂಡವನ್ನು ಬಿಟ್ಟರೆ, ಈ ಪ೦ಚವೇಣಿಯಷ್ಟು ಪವಿತ್ರವಾದ ಕ್ಷೇತ್ರ ಯಾವುದೂ ಇಲ್ಲವೆಂದು ಹೇಳುತ್ತಾರೆ.

ಇಲ್ಲಿ ಯಾರಾದರೂ ಮೃತರಾದರೆ ಸುಲಭವಾಗಿ ಯಾವುದೇ ಕಷ್ಟವಿಲ್ಲದೇ ಗೋಲೋಕವೃಂದಾವನ ಧಾಮವನ್ನು ಸೇರುತ್ತಾರೆ ಎ೦ದೂ, ಇಲ್ಲಿ ಸ್ನಾನ ಮಾಡಿದವರಿಗೆ ಪುನರ್ಜನ್ಮವಿರುವುದಿಲ್ಲವೆಂದೂ ಹೇಳುತ್ತಾರೆ.

ಈ ಸ್ಥಳವು ಉಚ್ಚಹಟ್ಟಕ್ಕೆ ಸಮೀಪವೇ, ಗೌರಾಂಗ ಸೇತುವೆಗೆ ಸ್ವಲ್ಪ ಮೊದಲೇ ಇದೆ. ಹೀಗೆ, ಮಧ್ಯದ್ವೀಪವು ಅನೇಕ ಪವಿತ್ರ ಸ್ಥಳಗಳಿಂದ ಕೂಡಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi