– ಡಾ.ಕೃಷ್ಣ ಕಟ್ಟಿ, ಕನ್ನಡ ವಿಶ್ವ ವಿದ್ಯಾಲಯ, ಹಂಪಿ
ಕಡೆಗೋಲು ಕಡೆ- ದಾರ ಹಿಡಿದ ಸಿದ್ದನೇ! ಕೃಷ್ಣ! ಕಡಲು ದೂರಲ್ಲಿವೋ ಕಡೆಯ ಬಾ ಮತ್ತೆ ಮಂಥನ ಮುಹೂರ್ತವನೆ ಚಿಂತಿಸುತ ನಿಂತೆಯೋ? ಪೌರಸಾಗರದಲ್ಲಿ ಉಪ್ಪು ಇತ್ತೆ?

ಒಡೆದ ಸಾಗರದಲ್ಲಿ ಸಿಡಿದ ಸಾಗರದಲ್ಲಿ ನುಡಿವ ಸಾಗರದಲ್ಲಿ ಕೋಟಿ ಮೀನ ಉಣಿಸುವನ ಉಪಕಾರಿ ಬಲೆಗೆ ಬಾಯಿಗೆ ತುತ್ತು ಉಣಿಸುವವನು ಇಂದಿಗೂ ಕೊಂಗ ದೀನ
ಸ್ಮರಣೆಯ ಸ್ಮರನು ರುಚಿ, ಕರುಣೆಯು ಗಂಗೆ ಶುಚಿ ಕಡಲು ವಡವಾನಲದ ಪಾಲುಗಾರ ಆಲದೆಲೆ ಬಾಲನೆ ಉಂಗುಟದ ಹಾಲನೇ ಪ್ರಳಯ ಜಲಧಿಯ ಕಡೆದು, ಎತ್ತಿ ತೋರ
ಶ್ರೀ ಚರಣಗಳಿಗೆ ನೆಲೆ ಮಾಬಲಿಯ ಎತ್ತು ತಲೆ ಅವನ ಪಾದಕೆ ಕಲಿಯ ಚೆಂಡು ಹೂವು ಸಿರಿಯ ತೊಡೆ ಕಾಲಿನಡೆ, ಹಾಲ್ಗಡಲು ಜೋಗುಳವು ಯೋಗನಿದ್ರೆಗನಂತಶಯನ ಹಾವು
ಆನಂದ ತೀರ್ಥದಲಿ ಆಚೆ-ಈಚೆಗೆ ವೀಟಿ ಸಂಬಂಧ ಐಕ್ಯವೋ ವೇದ್ಯ ಸಾಧ್ಯ ವೇದಪಾಣಿಯ ಮನೆಗು ಆದಿವಾಣಿಯ ಧ್ವನಿಗು ಊರ್ಧ್ವಕ್ಕು ಅಧ್ವಮಧ್ವ-ಮಧ್ಯ!
ರಾಮಕೃಷ್ಣ ಹರೀ ವಿಟ್ಠಲ, ಪತಿತೋದ್ದಾರಿ ಅಹಮೆಂಬಕಾರ ಪಾತಕಕ್ಕೆ ಮುಖ್ಯ ನೀನೇ ಸರಣ್ಯನೈ, ನಾನು ಅಶರಣರ ಭಕ್ತ ಇಲ್ಲಿ ಕೂಡಿದೆ ನಿಮ್ಮ – ನಮ್ಮ ಸಖ್ಯ
ಕಾಲಿನಿಂದಲೇ ಮೆಟ್ಟು ಕೈಯಿಂದಲೇ ಮುಟ್ಟು ನಿನ್ನ ಸ್ಪರ್ಶದ ಬೆಲೆಯು ತೆತ್ತಲಾರೆ ಕಾಳಿ೦ದ ಮಡುವಿನಲಿ ಕಾಳಿಂಗ ನಿರಲುಂಟು ಆ ಕಾಲ ನೆಲೆಗೆ ತಲೆ ಎತ್ತವಾದೆ
ನೀನಾಗು ಅವತಾರಿ, ನಾನು ಗುಡ್ಡದ ಏರಿ ಮಲೆಮಲೆಗೆ ಅಭಿಷೇಕ ನಿನ್ನ ಝಾರಿ ಮುತ್ತುರುಳಿದಂತೆ ನಾ ಮುತ್ತರಳೆ, ಚಿತ್ತರಳಿ ಶರಣು ಶರಣೆನ್ನುವೆನು ಲಕ್ಷಬಾರಿ (ಇದು ನಭೋವಾಣಿ)
ಬೇಂದ್ರೆಯವರ ಸರ್ವಾರ್ಪಣ ಸಿದ್ಧ ಕೃಷ್ಣ ಭಕ್ತಿಯನ್ನು ಸಾರುವ ಕವಿತೆ ಇದು. ಶಿರೋನಾಮೆಯೇ ಹೇಳುವ ಹಾಗೆ ಸಂಕಷ್ಟಗಳನ್ನು ಹರಣಗೊಳಿಸುವ ಸ್ತೋತ್ರ ಇದು. ಎಂಟು ನುಡಿಗಳಿಂದ ಕೂಡಿದ್ದಾಗಿರುವುದರಿಂದ ಇದನ್ನು ಅಷ್ಟಕ ಎಂದು ಬೇಂದ್ರೆಯವರು ಕರೆದಿದ್ದಾರೆ. ಸ್ತೋತ್ರ ಸಾಹಿತ್ಯದಲ್ಲಿ ಅನೇಕ ಅಷ್ಟಕಗಳನ್ನು ಕಾಣುತ್ತೇವೆ.
ವಾದಿರಾಜರು ಉಡುಪಿ ಹಾಗೂ ಉಡುಪಿ ಶ್ರೀಕೃಷ್ಣನನ್ನು ಕುರಿತು ‘ಕೃಷ್ಣಾಷ್ಟಕವೆಂಬ ಸ್ತೋತ್ರ’ ರಚಿಸಿದ್ದು, ನಿತ್ಯವೂ ಅದನ್ನು ಉಡುಪಿಯಲ್ಲಿ ಶ್ರೀಕೃಷ್ಣನ ಮುಂದೆ ಹಾಡುತ್ತಾರೆ. ಆ ಅಷ್ಟಕಕ್ಕೆ ಮ್ಯೂಸಿಕಲ್ ರೀದಮ್ ಇದೆ. ಅದನ್ನು ನರ್ತನಕ್ಕೆ, ನರ್ತನಸೇವೆಗೆ ಬಳಸುತ್ತಾರೆ. ಸಾಮಾನ್ಯವಾಗಿ ಕರ್ನಾಟಕದ ಎಲ್ಲ ಮಾಧ್ವರ ಮನೆಯಲ್ಲಿ ಕೃಷ್ಣಾಷ್ಟಕವನ್ನು ಸಮೂಹವಾಗಿ ಹಾಡುವ ಕ್ರಮವಿದೆ.

ಪಾಲಯಾಚ್ಚುತ ಪಾಲಯಾಜಿತ ಪಾಲಯ ಕಮಲಾಲಯ
ಲೀಲಯಾಧೃತ ಭೂಧರಾಂಬುರು ಹೋದರ ಸ್ವಜನೋದರ (ಕೃಷ್ಣಾಷ್ಟಕ)
ಜಗತ್ತಿನ ಜನರ ಎಲ್ಲ ಕಷ್ಟಗಳನ್ನು ತೊಡೆದು ಹಾಕುವನು ಕೃಷ್ಣ ಎಂಬ ಬಲವಾದ ನಂಬಿಕೆ ಬೇಂದ್ರೆಯವರದು. ಕಡಗೋಲನ್ನು ಕಡೆಯಲು ಸನ್ನದ್ಧಗೊಳಿಸಿ ಕೈಯಲ್ಲಿ ಕಡೆಯುವ ದಾರದ ಎರಡು ತುದಿಗಳನ್ನು ಆ ಕೈಯಲ್ಲೊಂದು ಈ ಕೈಯಲ್ಲೊಂದು ಹಿಡಿದು ಸಿದ್ಧನಾದವನು ಶ್ರೀಕೃಷ್ಣ ಈಗಾಗಲೇ ಭಗವಂತ ಸಮುದ್ರ ಮಂಥನ ಮಾಡಿದ ವಿಷಯ ಎಲ್ಲರಿಗೂ ತಿಳಿದದ್ದಾಗಿದೆ.
ಆದ್ದರಿಂದಲೇ “ಕಡಲದೂರಿಲ್ಲವೋ ಕಡೆಯ ಬಾ ಮತ್ತೆʼ ಮತ್ತೆ ಬಾ ಎಂದು ಹೇಳುವುದಿದೆಯಲ್ಲ, ಅದು ಈಗಾಗಲೇ ಆ ಕೆಲಸ ನಿನ್ನಿಂದಾಗಿದೆ. ಮತ್ತೆ ಕಡೆಯ ಬಾ ಎಂದು ಹೇಳುವಂತಿದೆ. ಎಲ್ಲ ಕಾಲವೂ ಶುಭ ಎಂದು ಹೇಳುವವ ನೀನು ಮಂಥನಕ್ಕೆ ಮುಹೂರ್ತವನ್ನು ನೋಡುತ್ತಿದ್ದೀಯಾ? ಎಂದು ಪ್ರಶ್ನಿಸುವುದು ಒಂದೆಡೆಯಾದರೆ ಉಪಯುಕ್ತ ಕೆಲಸಗಳಿಗೆ ಎಂದೂ ಸಮಯ ನೋಡಬಾರದು.
ಸೂಕ್ತವಾದ ಕಾರ್ಯ, ಸೂಕ್ತ ಸಮಯಕ್ಕೆ ಆಗಬೇಕು. ಯಾವುದು ಒಂದನ್ನೊಂದು ಕೂಡಲು ಸಾಧ್ಯವಿಲ್ಲವೋ? ಒಂದು ವೇಳೆ ಕೂಡಿದರು ಅದು ತನ್ನ ಸ್ಪರ್ಶವನ್ನು ಕಳೆದುಕೊಳ್ಳುವುದೋ, ಅದನ್ನು ಬೇಂದ್ರೆಯವರು ಹೀಗೆ ಪ್ರಶ್ನಿಸುತ್ತಾರೆ. ಉಪ್ಪು ಇತ್ತೆ? ಎಂದು.
ಭಗವತ್ ಲೀಲೆಯಿಂದ ಈ ಭೂಮಿಯು ರೂಪುಗೊಂಡಿತು. ಜಗತ್ತಿನ ಬಹುಭಾಗ ನೀರಿನಿಂದ ಆವೃತವಾಗಿದೆ. ನಾವು ಇಂದು ನೋಡುವ ಸಾಗರಗಳು ರೂಪುಗೊಂಡಿದ್ದು ಸೃಷ್ಟಿ ರಚನಾ ಸಮಯದಲ್ಲಿ, ಒಡೆದು ಹಾಗೂ ಸಿಡಿದು. ಇದರ ಜೊತೆಗೆ ಬೇಂದ್ರೆಯವರು ನುಡಿಯನ್ನು ಸಾಗರಕ್ಕೆ ಹೋಲಿಸುತ್ತಾರೆ.
ಭಗವಂತನ ನುಡಿ ಸಾಗರಕ್ಕೆ ಸಮಾನವಾದದ್ದು. ಒಡೆದ ಸಿಡಿದ ಸಾಗರದಲ್ಲಿ ಬದುಕಲು ಅವಶ್ಯವಿರುವ ಆಹಾರವು ಲಭ್ಯವಾದರೆ, ನುಡಿಸಾಗರದಲ್ಲಿಯ ವಿಚಾರಗಳು ಜಿಜ್ಞಾಸುಗಳಿಗೆ ಆಹಾರವಿದ್ದ ಹಾಗೆ. ದೇವರು ಸದಾ ಪರೋಪಕಾರಿ. ಅವನ ಉಪಕಾರವಿಲ್ಲದಿದ್ದರೆ ನಮ್ಮ ಜೀವನವೇ ಇಲ್ಲ. ತುತ್ತು ನೀಡಿ ತುತ್ತುಣಿಸುವವ ಅವನು. ಆ ತುತ್ತುಣಿಸುವನನ್ನು “ಕೊಂಗ” ಕರೆದಿದ್ದಾರೆ. ಕೃಷ್ಣನನ್ನು ಕೊಂಗದೇಶದವ ಎಂದು ಹೇಳಿದ್ದಾರೆ.
ಅಧರಂ, ಮಧುರಂ, ನಯನಂ, ಮಧುರಂ, ಹಸಿತಂ ಮಧುರಂ ಮಧುರಾಧಿ ಪತೆ ಅಖಿಲಂಮಧುರಂ ಇವು ಕೃಷ್ಣನನ್ನು ಕುರಿತು ಇರುವ ಹಾಡಿನ ಪ್ರಾರಂಭದ ಸಾಲುಗಳು. ಅವನ ನಾಮಸ್ಮರಣವು ರುಚಿಯಿಂದ ಕೂಡಿದ್ದು ಸ್ಮರಣೆಯ ಪ್ರಕ್ರಿಯೆಯಲ್ಲಿ ಭಕ್ತ ಮತ್ತು ಭಗವಂತ ಇಬ್ಬರು ಆ ರುಚಿಯನ್ನು ಆನಂದಪಡುತ್ತಿರುತ್ತಾರೆ.
ಯಾರಿಗೂ ಹೇಳದ ದಿವ್ಯಾನುಭವ ಅದು. ಶಿಷ್ಟರ ರಕ್ಷಣೆ ದುಷ್ಟರ ಶಿಕ್ಷೆಗಾಗಿಯೇ ನಾನು ಬಂದಿದ್ದೆ, ಬಂದಿದ್ದೇನೆ, ಬರುತ್ತೇನೆ ಎಂದು ಹೇಳಿದ ಹಾಗೆ ನಡಿತಾ ಇದೆ. ತನ್ನಿಂದಲೇ ಸೃಷ್ಟಿಯಾದದ್ದನ್ನೆಲ್ಲಾ ಮತ್ತೆ ತನ್ಹೊಟ್ಟೆಯಲ್ಲಿ ಹಾಕಿಕೊಂಡು ಪ್ರಳಯಕಾಲವನ್ನು ಸೃಷ್ಟಿ ಮಾಡಿ ಸತಿಯಾದ ಲಕ್ಷ್ಮೀಪತಿಯನ್ನು ಆಲದೆಲೆಯಾಗಿ ಮಾಡಿಕೊಂಡು ಬಲಗಾಲಿನ ಹೆಬ್ಬೆರಳನ್ನು ಬಾಯಲ್ಲಿಟ್ಟುಕೊಂಡು ಚೀಪುತ್ತಾ ಯೋಗನಿದ್ರೆಯಲ್ಲಿರುತ್ತಾನೆ.
ವಟಸ್ಯ ಪತ್ರಸ್ಯ ಪುಟೇಶಯಾನಂ
ಬಾಲಂ ಮುಕುಂದಂ ಮನಸಾ ಸ್ಮರಾಮೀ ||

ತಾವು ಕಂಡ ಕೃಷ್ಣನನ್ನು ತನ್ನವರನ್ನೆಲ್ಲಾ ಕಣ್ತುಂಬ ನೋಡಲಿ ಎಂದು ಆನಂದ ತೀರ್ಥರು, ತಮಗೆ ಕಂಡ ಕೃಷ್ಣನನ್ನು ತಂದು ಉಡುಪಿಯಲ್ಲಿ ನಿಲ್ಲಿಸಿದರು. ನಮ್ಮನ್ನೆಲ್ಲಾ ಕೇಳಿದರು ದೇವರನ್ನು ಭೇಟಿಯಾಗಬೇಕೆ, ನೋಡಬೇಕೆ, ಮಾತಾಡಬೇಕೆ ಹಾಗಾದರೆ ನಾ ಹೇಳಿದ ಹಾದಿಯಲ್ಲಿ ನಡೆಯಿರಿ ಎಂದು!
ಅವರು ಹೇಳಿದ ಹಾದಿ ಭಕ್ತಿಪಂಥ, ನಿಮ್ಮ ಮತ್ತು ದೇವರ ನಡುವೆ ಬಾಂಧವ್ಯ ಬೆಳೆಯಬೇಕು, ಸಂಬಂಧ ಏರ್ಪಡಬೇಕು ಅಂದರೆ ನೀವು ಜ್ಞಾನವನ್ನು ಪಡೆಯಬೇಕು, ಜ್ಞಾನ ಪಡೆದು ಭಕ್ತಿ ಮಾಡಬೇಕು, ಆಗ ನಿಮಗೆ ಸಿಗುತ್ತದೆ ಮುಕ್ತಿ. ಈ ಜ್ಞಾನದ ವೃಕ್ಷ ಯಾವುದು ವೇದವಾಣಿ, ಈ ವೇದಗಳ ತಾಯಿ ಗಾಯತ್ರಿ, ಗಾಯತ್ರಿ ಉಪಾಸನೆ ಪ್ರಾರಂಭವಾಗುವುದು ಓಂಕಾರದಿಂದ.
ಊರ್ಧ್ವಕ್ಕು ಅಧ್ವಕ್ಕು ಮಧ್ವಮಧ್ಯೆ
ಮಧ್ವ = ಮಧ್ವಾಚಾರ್ಯರು
ಅಧ್ವ+ಮಧ್ವ+ಊರ್ಧ್ವ = ಅ+ಉ+ಮಂ=ಓಂ
ಮಧ್ವಾಚಾರ್ಯರು ತೋರಿದ ದಾರಿಯೊಳಗೆ ನಡೆದರೆ ನಮಗೆಲ್ಲಾ ಸಿಗುತ್ತಾನೆ ನಮ್ಮ ಕೃಷ್ಣ.
ಪಂಥ ಹೇಳಿದ ಬೀಜ ವಾಕ್ಯ ‘ನಾ’ ಹೋಗಬೇಕು. ‘ನಾ’ ಎಂದರೆ ‘ಅಹಂ’ ‘ಅಹಮೆಂಬಹಂಕಾರ’ ಪಾತಕಕೆ ಮುಖ್ಯ. ನಾನು ಅಶರಣ, ನೀನು ಶರಣ.
ಸುರೇಶಃ ಶರಣಂಶರ್ಮ ವಿಶ್ವರೇತಾಃ ಪ್ರಜಾಭವಃ |
‘ಶರಣ’ ಎಂದರೆ ಎಲ್ಲರನ್ನು ರಕ್ಷಿಸುವವ ನೆಲೆ ಮನೆ ನೀಡುವವ ಇದೆ ಸಖ್ಯ. ಕೃಷ್ಣಾರ್ಜುನರ ಸಖ್ಯ ಯೋಗ.
ಭಾಗವತದ ಹತ್ತನೇ ಸ್ಕಂಧದ ಕಥೆಗಳಲ್ಲಿ ಬರುವ ಎಲ್ಲ ಪಾತ್ರ ಚಿತ್ರಗಳನ್ನು ಮಾತಾಡಿಸಿದರೆ, ಭಗವಂತನ ಸ್ಪರ್ಶಕ್ಕಾಗಿ ಹಾಗೂ ಜೀವನೋದ್ಧಾರಕ್ಕಾಗಿ ಭೂಮಿಗೆ ಬಂದಂಥವು. ಬೇರೆ ಕಾಲದಲ್ಲಿ ಅಪರಾಧಮಾಡಿ ಶರಣ ಬಂದ ಜಗತ್ತಿಗೆ ದೇವರು ಹೇಳಿದ್ದು ಬಾ ಕೃಷ್ಣಾವತಾರದಲ್ಲಿ ಎಂದು. ಆದ್ದರಿಂದ ಬೇಂದ್ರೆಯವರು ಬಲು ಸೂಚ್ಯವಾಗಿ ಹೇಳುತ್ತಾರೆ. ‘ಕಾಲಿನಿಂದಲೇ ಮೆಟ್ಟು ಕೈಯಿಂದಲೇ ಮುಟ್ಟು ನಿನ್ನ ಸ್ಪರ್ಶದ ಬೆಲೆ ತೆತ್ತಲಾರೆ’ ಎಂದು ಕಾಳಿಂಗನ ಉದಾಹರಣೆಯನ್ನು ಇಲ್ಲಿ ನೀಡಿದ್ದಾರೆ.
ನಿನ್ನ ಜ್ಞಾನದಿಂದ ನಾನು ಧನ್ಯನಾಗಬಯಸುತ್ತೇನೆ. ನೀನಲ್ಲದೆ ಜಗತ್ತಿಲ್ಲ. ಕಂಡ ಕಂಡದ್ದೆಲ್ಲಾ ಕಮಲಾಭಿನಮೂರ್ತಿ. ದೇವರಿಲ್ಲದ ಜಾಗವೇ ಇಲ್ಲ. ಹಾಗೆ ಎಲ್ಲೇ ನೀರು ಹರಿದರೆ ನಿನ್ನ ಪ್ರಕೃತಿ ತತ್ತ್ವಕ್ಕೆ ಅಭಿಷೇಕವಿದ್ದ ಹಾಗೆ. ನೀರಿನ ಹರಿಯುವಿಕೆ ಸೃಜನಶೀಲವಾದದ್ದು, ಕೊಳೆಯನ್ನೆಲ್ಲಾ ಕೊಚ್ಚಿಕೊಂಡು ಹೋಗಿ ಹಾದಿಯನ್ನು ಸ್ವಚ್ಛಮಾಡುತ್ತದೆ.
ನನ್ನ ಚಿತ್ರವು ಅರಳಬೇಕು. ಅರಳಿಸುವ ಕಲೆ ಗೊತ್ತಿದದ್ದು ನಿನಗೆ ಮಾತ್ರ. ನನ್ನ ಚಿತ್ರದಲ್ಲಿಯ ‘ಅಹಂ’ ಹೋಯಿತು. ಅಂದರೆ ನಾನು ನಿನಗೆ ಶರಣು ಎನ್ನುವೆನು, ಎಷ್ಟು ಬಾರಿ? ಲಕ್ಷಬಾರಿ, ಇಲ್ಲಿ ಲಕ್ಷ ಅಂದರೆ ಬರಿ ಸಂಖ್ಯೆಯಲ್ಲ’ ಲಕ್ಷ’ ಎಂದರೆ ಮನಸ್ಸು, ಹೌದು. ಲಕ್ಷವಿಟ್ಟು ನಡೆದಲ್ಲಿ ಲಕ್ಷ್ಮಣಾಗ್ರಜನನ್ನು ಕಾಣಬಹುದು.






Leave a Reply