– ಆಧಾರ: ಸಮಗ್ರ ದಾಸ ಸಾಹಿತ್ಯ
“ದಾಸರೆಂದರೆ ಪುರಂದರ ದಾಸರಯ್ಯ” ಎಂದು ಗುರುಗಳಾದ ವ್ಯಾಸರಾಯರಿಂದ ಪ್ರಶಂಸೆಗೆ ಪಾತ್ರರಾಗಿರುವ ಪುರಂದರ ದಾಸರು ಕನ್ನಡ ಸಾಹಿತ್ಯಕ್ಕೆ, ಕರ್ನಾಟಕ ಸಂಗೀತಕ್ಕೆ ಮೌಲಿಕವಾದ ಕೊಡುಗೆಯನ್ನಿತ್ತಿದ್ದಾರೆ. ಪುರಂದರರು ರಚಿಸಿರುವ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ.

ಅವರು ಕರ್ನಾಟಕ ಸಂಗೀತಕ್ಕೆ ನೀಡಿದ ಕೊಡುಗೆ ಇಂದಿಗೂ ಹಸಿರಾಗಿದೆ. ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದ ಪುರಂದರದಾಸರು ಭಾರತೀಯ ಸಂಸ್ಕೃತಿಗೆ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದ ಮಹತ್ವದ ಸಾಧಕರಲ್ಲೊಬ್ಬರಾಗಿದ್ದಾರೆ.
ಪುರಂದರ ದಾಸರ ಚರಿತ್ರೆಗೆ ಸಂಬಂಧಿಸಿದಂತೆ ಅನೇಕ ಲೇಖನಗಳು ಲಭ್ಯವಿವೆ. ಮೈಸೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳು ಪ್ರಕಟಿಸಿರುವ ಕನ್ನಡ ಸಾಹಿತ್ಯ ಚರಿತ್ರೆಗಳಲ್ಲಿಯೂ ಪುರಂದರರ ಬಗೆಗೆ ಅನೇಕ ಮಾಹಿತಿಗಳಿವೆ.
ಮಹಾರಾಷ್ಟ್ರದಲ್ಲಿರುವ ಪುರಂದರಗಡದಲ್ಲಿ ಪುರಂದರದಾಸರ ಪೂರ್ವಜರು ವ್ಯಾಪಾರ ಮಾಡುತ್ತಿದ್ದರು. ಪುರಂದರದಾಸರ ಊರು ಪುರಂದರಗಡ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲವೆಂದು ಡಾ.ಪಿ.ಬಿ.ದೇಸಾಯಿಯವರು ಸ್ಪಷ್ಟಪಡಿಸಿರುವರಾದರೂ ಸದ್ಯಕ್ಕೆ ಪುರಂದರಗಡವನ್ನೇ ಪುರಂದರರ ಜನ್ಮಸ್ಥಳವೆಂದು ಪರಿಗಣಿಸಬೇಕಾಗುತ್ತದೆ.
ಹೀಗೆ ಕ್ರಿ.ಶ. 1480ರಲ್ಲಿ ವರದಪ್ಪನಾಯಕ ಮತ್ತು ಲಕ್ಷ್ಮೀದೇವಿ ದಂಪತಿಯ ಉದರದಲ್ಲಿ ಪುರಂದರರು ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ಶೀನಪ್ಪನಾಯಕ. ಈ ಶೀನಪ್ಪನಾಯಕ ವೈಶ್ಯ ಮನೆತನದಲ್ಲಿ ಜನಿಸಿ ವ್ಯಾಪಾರ ಮಾಡುತ್ತಾ ಬದುಕುತ್ತಿದ್ದರು. ಇವರು ಚಿನ್ನದ ವ್ಯಾಪಾರ ಮಾಡುತ್ತಿದ್ದರೆಂದು ತಿಳಿದು ಬರುತ್ತದೆ. ಇವರ ಹೆಂಡತಿಯ ಹೆಸರು ಸರಸ್ವತೀಬಾಯಿ.
ತುಂಬಾ ಜಿಪುಣರಾಗಿದ್ದ ಈ ಶೀನಪ್ಪನಾಯಕರು ತಮ್ಮ ಹೆ೦ಡತಿಯ ಒತ್ತಾಸೆಯಿಂದ ಮನಪರಿವರ್ತನೆಗೊಂಡು ಪುರಂದರದಾಸರಾಗಿರಬೇಕೆಂಬುದಕ್ಕೆ ಅವರೇ ರಚಿಸಿರುವ ಕೀರ್ತನೆ ಆಧಾರವಾಗಿದೆ. ವಿಜಯದಾಸರ ಕೀರ್ತನೆಯಲ್ಲಿ ಬರುವ ಮೂಗುತಿಯ ಕತೆಗೂ ಇದಕ್ಕೂ ಸಂಬಂಧವಿದೆ.
ಆದರೆ ಅಲ್ಲಿ ನಡೆದ ಪವಾಡ ಕತೆಯನ್ನು ಹೊರತುಪಡಿಸಿ ವಾಸ್ತವದ ನೆಲೆಯಲ್ಲಿ ನೋಡಿದರೆ, ಜಿಪುಣ ವ್ಯಾಪಾರಿಯಾಗಿದ್ದ ಶೀನಪ್ಪನಾಯಕ ಸರಸ್ವತೀಬಾಯಿಯ ವ್ಯಕ್ತಿತ್ವದ ಪರಿಣಾಮದಿಂದ ಆಧ್ಯಾತ್ಮದತ್ತ ಸಾಗಿಬಂದಿರಲು ಸಾಧ್ಯವಿದೆ. ಕೇವಲ ಹಣಗಳಿಸುವ ಜಿಪುಣತನದ ಬದುಕಿಗಿಂತ ಮುಕ್ತಿಗಳಿಸುವ ಆಧ್ಯಾತ್ಮದ ಜೀವನ ಅವರಿಗೆ ಮುಖ್ಯವಾಗಿ ಕಂಡಂತಿದೆ.
ಹೀಗೆ ಪುರಂದರದಾಸರು ಸಂಸಾರವನ್ನು ತೊರೆದು ಸಂಪತ್ತನ್ನು ಬಿಟ್ಟು ದಾಸರಾಗಿ ಬೆಳೆದು ಬಂದುದನ್ನು ಗಮನಿಸಬಹುದಾಗಿದೆ. ಅನೇಕ ಮಹಾಪುರುಷರ ಹೆಗ್ಗಳಿಕೆಯ ಹಿಂದೆ ಅವರ ಪತ್ನಿಯರ ಸಾಧನೆಯಿರುವಂತೆ ಪುರಂದರದಾಸರ ಹಿರಿಮೆಯ ಹಿಂದೆ ಅವರ ಪತ್ನಿ ಸರಸ್ವತೀಬಾಯಿಯವರ ಮಹತ್ವದ ಸಾಧನೆಯಡಗಿದೆ.

ಹೀಗೆ ಪುರಂದರಗಡವನ್ನು ತೊರೆದು ಹಂಪೆಗೆ ಬಂದ ಪುರಂದರರು ವ್ಯಾಸರಾಯರಿಂದ ದೀಕ್ಷೆ ಪಡೆದು ಮಾಧ್ವ ಸಂಪ್ರದಾಯಕ್ಕೆ ಬದ್ಧರಾದರೆಂದು ತಿಳಿದುಬರುತ್ತದೆ. ವ್ಯಾಸತೀರ್ಥರು ಕಟ್ಟಿದ ದಾಸಕೂಟ ಪರಂಪರೆಯನ್ನು ಬೆಳೆಸಿದ ಕೀರ್ತಿ ಪುರಂದರದಾಸರಿಗೆ ಸಲ್ಲುತ್ತದೆ.
ಈ ರೀತಿ ಶೀನಪ್ಪನಾಯಕರಾಗಿದ್ದವರು ಪುರಂದರದಾಸರಾಗಿ ಒಂದು ಲಕ್ಷ ಎಪ್ಪತ್ತೈದು ಸಾವಿರ ಕೃತಿ ರಚನೆ ಮಾಡಿದರೆಂಬ ಪ್ರತೀತಿಯಿದೆ. ಆದರೆ ಈಗ ದೊರೆತಿರುವ ಅವರ ಕೀರ್ತನೆಗಳ ಸಂಖ್ಯೆ ಸಾವಿರಕ್ಕಿಂತ ಕಡಮೆಯಿದೆ.
ಮಾಧ್ವಮತ ಪ್ರಚಾರವನ್ನು ತಮ್ಮ ಕೀರ್ತನೆಗಳ ಮೂಲಕ ಕೈಕೊಂಡ ಪುರಂದರದಾಸರು ಅನೇಕ ಪವಿತ್ರ ಕ್ಷೇತ್ರಗಳನ್ನು ಸುತ್ತಾಡಿದ್ದಾರೆ. ತಿರುಪತಿ, ಶ್ರೀರಂಗಪಟ್ಟಣ, ಅರುಣಗಿರಿ, ಉಡುಪಿ, ಕಂಚಿ, ಕನಕಾಚಲ, ಕಾಶಿ, ಕುಂಭಕೋಣ, ಕೊಡಲಿಪುರ, ಹಸ್ತಗಿರಿ, ಸಿಂಹಗಿರಿ, ಕಾಳಹಸ್ತಿ, ಶ್ರೀಶೈಲ, ಘಟಿಕಾಚಲ, ಗದಗ, ಬೇಲೂರು, ಮನ್ನಾರು, ಮಳೂರು, ಪಂಢರಾಪುರ, ಮೇಲುಕೋಟೆ, ಹಂಪಿ, ಹರಿಹರ, ಈ ಮುಂತಾದ ಪುಣ್ಯಕ್ಷೇತ್ರಗಳನ್ನು ಸುತ್ತಾಡಿದ ಪುರಂದರದಾಸರು ಜನಸಾಮಾನ್ಯರಿಗೆ ಅನುಭವದೆತ್ತರವನ್ನು ತಿಳಿಸಿದವರಾಗಿದ್ದಾರೆ.
ಪುರಂದರದಾಸರಿಗೆ ವರದ, ಗುರುರಾಯ, ಅಭಿನವ, ಮಧ್ವಪತಿ ಎಂಬ ನಾಲ್ವರು ಗಂಡು ಮಕ್ಕಳು ಹಾಗೂ ಒಬ್ಬ ಮಗಳೂ ಇದ್ದರೆಂದು ತಿಳಿದುಬರುತ್ತದೆ. ಆದರೆ ಕಮಲಾಪುರ ತಾಮ್ರಶಾಸನದಲ್ಲಿ ಲಕ್ಷ ಣದಾಸ, ಹೇಬಣದಾಸ ಮತ್ತು ಮಧ್ವಪದಾಸ ಎಂಬ ಮೂವರು ಮಕ್ಕಳ ಹೆಸರು ಮಾತ್ರ ಉಲ್ಲೇಖವಾಗಿದೆ. ಹಂಪೆಯಲ್ಲಿ ದೊರೆತಿರುವ ಪುರಂದರದಾಸರ ಶಿಲಾಮೂರ್ತಿಯನ್ನು ಗಮನಿಸಿದರೆ ಪುರ೦ದರರು ಹಂಪಿಯಲ್ಲಿ ಕ್ರಿ.ಶ. 1565ರಲ್ಲಿ ನಿಧನರಾದರೆಂದು ತಿಳಿದುಬರುತ್ತದೆ.
ಕೀರ್ತನೆಗಳು:
ಪುರಂದರದಾಸರ ಸಾಮಾಜಿಕ ಕಳಕಳಿಯನ್ನು ಇಂದು ಗಮನಿಸಲೇಬೇಕಾಗಿದೆ. ಅವರು ಜಾತಿ-ಮತಗಳನ್ನು ಖಂಡಿಸಿದರು. ಯಾಗ- ಯಜ್ಞಗಳನ್ನು ತಿರಸ್ಕರಿಸಿದರು. ಮೂಢನಂಬಿಕೆಗಳನ್ನು ಅಲ್ಲಗಳೆದರು ಡಾಂಭಿಕತೆಯನ್ನು ವಿಡಂಬಿಸಿದರು.
“ಯಾಗ ಯಜ್ಞ ಮಾಡಲೇಕೆ ಯೋಗಿ ಯತಿಯು ಆಗಲೇಕೆ?”
“ಹೊಲೆಯ ಹೊರಗಿಹನೆ ಊರೊಳಗಿಲ್ಲವೆ |
ಸಲೆ ಶಾಸ್ತ್ರವನ್ನು ತಿಳಿದು ಬಲ್ಲವರು ನೋಡಿ!!”
“ಸತ್ಯ ಶೌಚವಿಲ್ಲದ ಆಚಾರವೇಕೆ? ಚಿತ್ತಶುದ್ಧಿಯಿಲ್ಲದ ಜ್ಞಾನವಿನ್ನೇಕೆ?”
“ಹೀನಗುಣಂಗಳ ಬಿಡದೆ ನದಿಯೊಳು ಸ್ನಾನವ ಮಾಡಿದರೇನು ಫಲ?”

ಇಂತಹ ಅನೇಕ ಕೀರ್ತನೆಗಳಲ್ಲಿ ಪುರಂದರದಾಸರ ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ. ಭಕ್ತಿಗೆ ವಿಶಾಲ ಅರ್ಥವನ್ನು ತಂದುಕೊಟ್ಟ ಅವರು, ಸಾಮಾಜಿಕ ಪರಿವರ್ತನೆಗೆ ವಿಶಾಲ ಮನಸ್ಸು ಬಹಳ ಮುಖ್ಯವೆಂದು ಹೇಳಿದರು. ಭಕ್ತಿ-ಮನಸ್ಸು-ಸಮಾಜ ಇವುಗಳಲ್ಲಿರುವ ಅಂತರಿಕ ಸಂಬಂಧವನ್ನು ಬಿಚ್ಚಿತೋರಿಸಿದರು.
ಪುರ೦ದರದಾಸರು ಸ್ವವಿಡಂಬನೆ ಹಾಗೂ ಸಾಮಾಜಿಕ ವಿಡಂಬನೆಗಳೆರಡನ್ನೂ ಜತೆಜತೆಯಾಗಿಯೇ ಮಾಡಿದ್ದಾರೆ. ಕೆಲವು ಡಾಂಭಿಕ ವೀರಶೈವ ಭಕ್ತರನ್ನು ಕುರಿತು ಬಸವಣ್ಣನವರು ವಿಡಂಬಿಸಿದಂತೆ, ಕೆಲವು ಡಾಂಭಿಕ ವೈದಿಕರನ್ನು ಕುರಿತು ಪುರಂದರದಾಸರು ವಿಡಂಬಿಸಿದ್ದಾರೆ.
ತುಡುಗ ಮುಂಡೇಗಂಡರು ಗಡ್ಡಮೀಸೆ ಬೋಳಿಸಿಕೊಂಡು ಗೊಡ್ಡುನಾಮ ತೀಡಿಕೊಂಡು ಅಡ್ಡಾದಿಡ್ಡಿ ಮುದ್ರೆಗಳ ಬಡಿದುಕೊಂಡು ದೊಡ್ಡ ದೊಡ್ಡ ಮಾತುಗಳಾಡಿ ದೊಡ್ಡವರೆಂದು ಹೇಳಿಕೊಂಡು ಬಡ್ಡಿಧಗಡೀ ಮಕ್ಕಳು ಸೋಗಿಲಿರುವ ಜೋಗೀ ತೊತ್ತಿನ ಮಕ್ಕಳು
ಎಂದು ಹೇಳುವ ಅವರ ಕೀರ್ತನೆಗಳಲ್ಲಿ ವಿಡಂಬನೆಯ ಹರಿತವನ್ನು ಕಾಣಬಹುದಾಗಿದೆ. ತುಡುಗಮುಂಡೇರು, ಬಡ್ಡಿಧಗಡಿ ಮಕ್ಕಳು, ಈ ಮುಂತಾದ ಮಾತುಗಳಲ್ಲಿ ಕಾಣುವ ವಿಡಂಬನೆಯಲ್ಲಿ ಸಾತ್ತ್ವಿಕವಾದ ಸಿಟ್ಟಿರುವುದನ್ನು ಕಾಣಬಹುದಾಗಿದೆ.
ದಂಡದೋಷಕೆ ಉಂಟು ಪುಂಡುಪೋಕರಿಗುಂಟು ಹೆಂಡಿರುಮಕ್ಕಳಿಗಿಲ್ಲವೀ ಕಲಿಕಾಲ।
ಭಂಡೆಯರಿಗುಂಟು ಮಿಂಡೆಯರಿಗುಂಟು ಬೇಡಿ ಕೊಂಡವರಿಗಿಲ್ಲ ಈ ಕಲಿಕಾಲ ||
ಈ ಕೀರ್ತನೆಯಲಿ ಕಲಿಕಾಲದ ವಿಡಂಬನೆಯಿದೆ. ಅಂದಿನ ಸಾಮಾಜಿಕ ಜೀವನದ ಡೋಂಗಿತನವನ್ನು ಇಲ್ಲಿ ಪ್ರಸ್ತಾವಿಸಿದ್ದಾರೆ.
ಪುರಂದರದಾಸರು ದುರ್ಜನರನ್ನು ಜಾಲಿಯ ಮರಕ್ಕೆ ಹೋಲಿಸಿದ್ದಾರೆ. ಆ ಜಾಲಿಮರದ ಪ್ರತಿಮೆ ಇಡಿಯಾಗಿ ಬಿಚ್ಚಿಕೊಂಡು ಅದರ ಮುಳ್ಳುಗಿಡದ ಕೆಳಗಿರುವ ಬಿಸಿಲು, ಆಸರೆಯಿಲ್ಲದ ಸ್ಥಿತಿ ಇವೆಲ್ಲಾ ದುರ್ಜನರ ಗುಣ ಸ್ವಭಾವವನ್ನು ತೆರೆದಿಡುತ್ತವೆ. ಇಂತಹ ದುರ್ಜನರಿಂದ ದೂರವಾಗಿರುವುದೇ ಒಳ್ಳೆಯದೆಂದು ದಾಸರು ಅಭಿಪ್ರಾಯಪಟ್ಟಿದ್ದಾರೆ.

ನಿಂದೆಯಾಡುವವರನ್ನು ಕಟುವಾಗಿ ಟೀಕಿಸುತ್ತಾ, ಕಾಗೆ – ಗೂಗೆಗಳಿಗೆ ಹೋಲಿಸಿದ್ದಾರೆ. ನಿಂದೆಯಾಡುವವರಿಗೆ ನಿಜಮೋಕ್ಷ ದೊರೆಯದೆಂದು ಸ್ಪಷ್ಟಪಡಿಸಿದ್ದಾರೆ. ಸೇಡಿಗೆ ಪ್ರತಿಯಾಗಿ ಸೇಡು, ದ್ವೇಷಕ್ಕಾಗಿ- ದ್ವೇಷ ಇರಬಾರದೆಂದು ತಿಳಿಸಿ ಹೇಳಿದ ಪುರಂದರರು ‘ಧರ್ಮವೇ ಜಯವೆಂಬ ದಿವ್ಯಮಂತ್ರ’ ಎಂಬ ಕೀರ್ತನೆಯಲ್ಲಿ ಇದಕ್ಕೆ ಪ್ರತಿಯಾಗಿ ಏನು ಮಾಡಬೇಕೆಂಬುದನ್ನು ಹೀಗೆ ಹೇಳಿದ್ದಾರೆ.
ವಿಷವನುಣಿಸಿದವಗೆ ಷಡುರಸವನುಣಿಸಲುಬೇಕು
ದ್ವೇಷಮಾಡುವವನ ಪೋಷಿಸಲು ಬೇಕು
ಹುಸಿದುಮನೆಕೊಂಬುವನ ಹಾಡಿ ಹರಿಸಲುಬೇಕು
ಅಸುಹೀರಿದವನ ಹೆಸರ ಮಗನಿಗಿಡಬೇಕು
ಇಹದ ಅನುಭವದ ಮೂಲಕವೇ, ಪರದ ಅನುಭಾವವನ್ನು ಕಟ್ಟಿಕೊಡುವ ಪುರಂದರರ ಕೀರ್ತನೆಗಳು ಗಮನಾರ್ಹವಾಗಿವೆ.
ತುಂಟರೈವರ ತುಳಿದು ಕಂಟಕನೊಬ್ಬನ ಕಳೆದು
ಎಂಟುಮಂದಿಯ ಗರುವನಳಿದು
ವೆಂಕಟ ನೀ ಬಂದೆನ್ನ ಕಂಟಕವನೆ ಬಿಡಿಸಿ
ಉಂಟಾದ ವೈಕುಂಠ ಬಂಟನೆಂದೆನಿಸೊ
ಕಾಮ, ಕ್ರೋಧ, ಲೋಭ, ಮೋಹ, ಮದಗಳೆಂಬ ಐದು ತುಂಟರು ಮತ್ತು ಮತ್ಸರನೆಂಬೊಬ್ಬ ಕಂಟಕ ಇದ್ದಾರೆ. ಈ ಆರರಿಂದ ಪಾರುಮಾಡಿ ಅಷ್ಟಮದಗಳನ್ನು ಮುರಿದು ಹಾಕಿ ನೀನೆನ್ನ ಕಾಪಾಡಬೇಕೆಂದು ಪುರಂದರದಾಸರು ವಿಠಲನನ್ನು ಕೇಳಿಕೊಳ್ಳುತ್ತಾರೆ.
‘ಗಿಳಿಯು ಪ೦ಜರದೊಳಿಲ್ಲ’ ಎನ್ನುವ ಕೀರ್ತನೆಯಂತೂ ಅನುಭಾವದ ಉತ್ಕಟತೆಗೆ ಪ್ರಮುಖ ಉದಾಹರಣೆಯಾಗಿದೆ. ಗಿಳಿಯನ್ನು ಸಾಕಿ, ಅದನ್ನು ಮುದ್ದಿನಿಂದ ಬೆಳೆಸಿ, ಬಣ್ಣಿಸಿ ಸಂತೋಷಪಟ್ಟು ಕೊನೆಗೆ ಅದು ಹೇಳದೆ ಕೇಳದೆ ಹಾರಿಹೋದಾಗ ಪರಿತಪಿಸುವ ಕ್ರಿಯೆ ತುಂಬಾ ಪರಿಣಾಮಕಾರಿಯಾಗಿದೆ.
‘ಬೇವು ಬೆಲ್ಲದೊಳಿಡಲೇನು ಫಲ’, ‘ಹರಿಯ ನೆನೆಯದ ಜನ್ಮವೇಕೆ,ʼ ‘ವಿಷಯದ ವಿಚಾರಬಿಡು ವಿಹಿತ ಕರ್ಮವ ಮಾಡು’, ‘ಈಸಬೇಕು ಇದ್ದು ಜಯಿಸಬೇಕು’, ‘ಸ್ನಾನವ ಮಾಡಿರೋ ಜ್ಞಾನ ತೀರ್ಥದಲಿʼ, ‘ರಾಮನಾಮವನು ನುಡಿ ನುಡಿ’, ‘ಕಂಡು ಕಂಡು ನೀಯೆನ್ನ ಕೈಬಿಡುವರೆʼ, ‘ನಾನೆಕೆ ಬಡವನು ನಾನೇಕೆ ಪರದೇಶಿ’ ಇಂತಹ ಅನೇಕ ರಚನೆಗಳಲ್ಲಿ ಅವರು ಹೇಳಿದ ಅನುಭಾವದ ವಿಸ್ತಾರವಿದೆ. ಪುರಂದರದಾಸರ ಇಂತಹ ಅನೇಕ ಕೀರ್ತನೆಗಳು ಪ್ರಸ್ತುತ ಸಾಮಾಜಿಕ ಸಂದರ್ಭಕ್ಕೆ ತುಂಬಾ ಅನಿವಾರ್ಯವಾಗಿವೆ.






Leave a Reply