ಭಗವಂತನಲ್ಲಿ ಶರಣಾಗತಿ

ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು, ಮತ್ತು ಅಮೆರಿಕನ್ ವಿದ್ಯಾರ್ಥಿ ಹಾಗೂ ಅತಿಥಿಗಳ ನಡುವೆ ನಡೆದ ಸಂವಾದ

ಸ್ಥಳ :ಪ್ಯಾರಿಸ್, ದಿನಾಂಕ: 15 ಜೂನ್, 1974

ಶ್ರೀಲ ಪ್ರಭುಪಾದ: ಇರುವುದೊಂದೇ ಮಾರ್ಗ: ಭಗವಂತನಲ್ಲಿ ಶರಣಾಗತಿ. ನೀವೆಲ್ಲರೂ ಇದನ್ನು ಒಪ್ಪುತ್ತಿರೇನು?

ವಿದ್ಯಾರ್ಥಿ: ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದೊಂದು ದಾರಿಯನ್ನು ಕಂಡುಕೊಳ್ಳುತ್ತಾನೆ ಅನಿಸುತ್ತದೆ ನನಗೆ.

ಶ್ರೀಲ ಪ್ರಭುಪಾದ: ಇಲ್ಲ. ಇಲ್ಲ. ನೀನು – ಭಗವಂತನು ಅತ್ಯುನ್ನತನಾದವನೆಂಬ, ನಾವೆಲ್ಲರೂ ಅವರ ಕೆಳಗಿನವರೆಂಬ ತತ್ತ್ವವನ್ನು ನೀನು ಒಪ್ಪುವೆಯಾ?

ವಿದ್ಯಾರ್ಥಿ: ನನ್ನ ತತ್ತ್ವ ಬೆಳಕು – ಇರುವುದೊಂದೇ ಬೆಳಕು. ಕೆಲವು ಜನರು ಅದನ್ನು ದೇವರೆಂದು ಕರೆಯಲು ಬಯಸುತ್ತಾರೆ. ನನ್ನ ಪಾಲಿಗೆ ದೇವರು ಎನ್ನುವುದು ಒಂದು ಪದಮಾತ್ರ, ಇದೊಂದು ಯಾರೂ ಅರ್ಥೈಸಿಕೊಳ್ಳಲಾಗದ ಪದವಷ್ಟೆ.

ಶ್ರೀಲ ಪ್ರಭುಪಾದ: ಕೇವಲ ನಿನಗೆ ಮಾತ್ರ ಅರ್ಥವಾಗುವಂಥದ್ದು.

ವಿದ್ಯಾರ್ಥಿ: ನಾನು ಬೆಳಕನ್ನು ಅರಿತಿದ್ದೇನೆ.

ಶ್ರೀಲ ಪ್ರಭುಪಾದ: ಇಲ್ಲ, ನೀನು ದೇವರನ್ನು ಅಥವಾ ಪರಮ ಸತ್ಯವನ್ನು ಅರಿತಿರುವೆನೆಂದು ತಿಳಿದಿದ್ದೀಯಷ್ಟೆ. ನೀನು ಹೇಳುವೆ, ಖಂಡಿತವಾಗಿ, ”ದೇವರನ್ನುವುದು ಒಂದು ಪದ” ವೆಂದು. ಅದರರ್ಥ, ನೀನು ಪರಮಸತ್ಯ ಅಥವಾ ದೇವರನ್ನು ಅರಿತಿರುವೆ ಎಂದು ಯೋಚಿಸುತ್ತಿರುವೆಯೇನು?

ವಿದ್ಯಾರ್ಥಿ: ಅಲ್ಲ.

ಶ್ರೀಲ ಪ್ರಭುಪಾದ: ಮತ್ತೇಕೆ ನೀನು “ದೇವರು ಒಂದು ಪದ” ಎಂದು ಹೇಳುವೆ?

ವಿದ್ಯಾರ್ಥಿ: ನಾನು ದೇವರ ಕುರಿತು ಮಾತನಾಡಲಾಗುವುದಿಲ್ಲ. ಏಕೆಂದರೆ ಅದೊ೦ದು ಪದ ಮತ್ತದನ್ನು ವಿವರಿಸಲಾಗುವುದಿಲ್ಲ. ಆದ್ದರಿಂದಲೇ ನಾನು ಅದನ್ನೊಂದು ಪದ ಮಾತ್ರ ಎಂದು ತಿಳಿದಿರುವೆ.

ಶ್ರೀಲ ಪ್ರಭುಪಾದ: ಆದರೆ ನೀನು ಪದಗಳನ್ನು ಬಳಸುತ್ತಿರುವೆ, ಮತ್ತು ವಿವರಿಸುತ್ತಲೂ ಇರುವೆ. ಮತ್ತೇಕೆ ಇಂತಹ ವಿಪರ್ಯಾಸದ ಮಾತಾಡುತ್ತಿರುವೆ?

ವಿದ್ಯಾರ್ಥಿ: ಇಲ್ಲ, ನಾನು ಹೇಳುವುದು; ನಾನು ದೇವರ ಕುರಿತಾಗಿ ಮಾತಾಡಲು ಸಾಧ್ಯವಿಲ್ಲ ಏಕೆಂದರೆ ಅವನು ಪದ ಮಾತ್ರವಾಗಿರುವನು ಎಂದು.

ಶ್ರೀಲ ಪ್ರಭುಪಾದ: ನೀನೀಗ ಭಗವಂತ ಎಂದರೇನೆಂದು ನಿನಗೆ ಗೊತ್ತಿಲ್ಲವೆಂದು ಹೇಳುತ್ತಿರುವೆ. ಎಲ್ಲಕ್ಕಿಂತ ಮೊದಲು, ನಿನಗೆ ಗೊತ್ತಿಲ್ಲವೆನ್ನುವುದನ್ನು ಒಪ್ಪಿಕೋ.

ವಿದ್ಯಾರ್ಥಿ: ಅದು ಬೆಳಕು. ನಾನು ಬೆಳಕಿನ ಬಗ್ಗೆ ಹೇಳುತ್ತಿರುವೆ.

ಶ್ರೀಲ ಪ್ರಭುಪಾದ: ನೀನೀಗ ಮತ್ತೆ ನೀನು ದೇವರನ್ನು ತಿಳಿದಿರುವೆ ಎಂದು ಹೇಳುತ್ತಿರುವೆ. ನೀನು ಎರಡೂ ಬಗೆಯಲ್ಲಿ ಮಾತನಾಡುತ್ತಿರುವೆ; ನಿನಗೆ ಗೊತ್ತಿದೆಯೆಂದು, ನಿನಗೆ ಗೊತ್ತಿಲ್ಲವೆಂದು.

ವಿದ್ಯಾರ್ಥಿ: ಇಲ್ಲ, ಇಲ್ಲ, ಹಾಗಲ್ಲ.

ಶ್ರೀಲ ಪ್ರಭುಪಾದ: ಹೌದು, ಅದು ಹಾಗೆಯೇ.

ಶಿಷ್ಯ: ಹೌದು, ಮತ್ತು ಕೊನೆಯಲ್ಲಿ ನೀನು, ನಿನಗೆ ಗೊತ್ತಿದೆ ಎಂದು ಹೇಳುವೆ. ದೇವರು ಅಥವಾ ಅಂತಿಮ ಸತ್ಯವು ಬೆಳಕು ಎಂದು ನೀನು ನಿರ್ಧರಿಸಿಯಾಗಿದೆ. ಆದ್ದರಿಂದ ನೀನು ‘ಎಲ್ಲವೂ ಬೆಳಕು” ಎಂದು ಹೇಳಿದಾಗ, ವಾಸ್ತವದಲ್ಲಿ ನೀನು ದೇವರನ್ನು ಅರಿತಿರುವೆ ಎಂದೇ ಹೇಳಿದಂತಾಗುತ್ತದೆ.

ವಿದ್ಯಾರ್ಥಿ: (ಎದೆಯ ಮೇಲೆ ಕೈಯಿಟ್ಟುಕೊಂಡು) ಇಲ್ಲಿ ನಾನು ಏನನ್ನು ಅನುಭವಿಸುತ್ತೇನೋ ಅದನ್ನು ನಂಬುತ್ತೇನೆ. ಮತ್ತು ಅದೇ ನನ್ನ ಪಾಲಿನ ದೇವರು.

ಶ್ರೀಲ ಪ್ರಭುಪಾದ: ಅದರರ್ಥ, ಮತ್ತೆ ಬೇರೆ ಯಾವಾಗಲಾದರೂ ನಿನಗೆ ಬೇರೇನಾದರೂ ಎನಿಸಿದರೆ, ಆಗ ಅದೇ ದೇವರಾಗುತ್ತದೆ ಎಂದೇ?

ವಿದ್ಯಾರ್ಥಿ: ( ಎದೆಯ ಮೇಲ ಕೈಯಿಟ್ಟುಕೊಂಡೇ): ಇಲ್ಲಿ ನಾನು ಬೆಳಕನ್ನು ಅನುಭವಿಸುತ್ತಿರುವೆ.

ಶ್ರೀಲ ಪ್ರಭುಪಾದ: ನೀನು ಬೆಳಕನ್ನು ಎಲ್ಲಿ ಬೇಕಾದರೂ ಅನುಭವಿಸಬಹುದು.

ವಿದ್ಯಾರ್ಥಿ: ಈ ಮೇಜು ಬೆಳಕು, ಈ ನೆಲವೂ ಬೆಳಕು. ಎಲ್ಲವೂ ಬೆಳಕೇ.

ಶ್ರೀಲ ಪ್ರಭುಪಾದ: ಅದು ಸರಿ. ಹಾಗಾದರೆ ನೀನು ದೇವರನ್ನು ಅರಿತಿಲ್ಲವೆಂದು ಏಕೆ ಹೇಳಿದೆ? ನಿನಗೆ ದೇವರ ಅರಿವಿದೆ: ಅವನ ಪ್ರಾಥಮಿಕ ಸ್ವರೂಪದಲ್ಲಿ ಸರ್ವವ್ಯಾಪಿಯಾದ ಬೆಳಕಿನ ರೂಪದಲ್ಲಿ.

ವಿದ್ಯಾರ್ಥಿ: ಏಕೆಂದರೆ ನನ್ನ ಪಾಲಿಗೆ, ದೇವರು ಕೇವಲ ಒಂದು ಪದ ಮಾತ್ರ. ನೀವು ದೇವರನ್ನು ಒಂದು ಪದವಾಗಿ ಹೇಗೆ ವಿವರಿಸಲು ಸಾಧ್ಯ? ದೇವರು ಎಂದರೇನು? ನನಗೆ ವಿವರಿಸಿ, ದೇವರೆಂದರೇನು?

ಶ್ರೀಲ ಪ್ರಭುಪಾದ: (ತಮ್ಮ ಶಿಷ್ಯನಿಗೆ): ಅವನೊಡನೆ ಮಾತನಾಡು. ಆತ ಸುಮ್ಮನೆ ನನ್ನ ಸಮಯ ಪೋಲು ಮಾಡುತ್ತಿದ್ದಾನೆ.

ವಿದ್ಯಾರ್ಥಿ: ನೀವು ನನಗೆ ದೇವರನ್ನು ವಿವರಿಸಬಲ್ಲಿರಾದರೆ, ನಾನದನ್ನು ಮೆಚ್ಚಿಕೊಳ್ಳುತ್ತೇನೆ.

ಶ್ರೀಲ ಪ್ರಭುಪಾದ: (ಶಿಷ್ಯನಿಗೆ): ಸುಮ್ಮನೆ ಅವನ ಬಳಿ ನೀನು ಮಾತಾಡು (ವಿದ್ಯಾರ್ಥಿಗೆ) ನೀನು ಅವನ ಜೊತೆ ಹೋಗು, ನಿನಗೆ ಅವನು ವಿವರಿಸುವನು. ದಯವಿಟ್ಟು ಹೋಗು.

ವಿದ್ಯಾರ್ಥಿ: ಅವರು ನನಗೆ ವಿವರಿಸಲಾರರು.

ಶ್ರೀಲ ಪ್ರಭುಪಾದ: ಹಾಗಾದರೆ ನೀನಿಲ್ಲಿಂದ ಹೊರಟುಹೋಗು. ದಯವಿಟ್ಟು ನಾನೇನು ತಾನೆ ಮಾಡಲಿ? ಸುಮ್ಮನೆ ಸಮಯ ವ್ಯಯ ಮಾಡಲಾರೆ ನಾನು.

ವಿದ್ಯಾರ್ಥಿ: ನೀವು ನನಗೆ ದೇವರೆಂದರೇನು ಎಂದು ವಿವರಿಸಲಾರಿರಾದರೆ…..

ಶ್ರೀಲ ಪ್ರಭುಪಾದ: ಆದರೆ ನಿನಗೆಲ್ಲಾ ತಿಳಿದಿದೆ. ನಾನೇನು ತಾನೆ ವಿವರಿಸಲಿ? ನಿನಗೆ ಎಲ್ಲವೂ ತಿಳಿದಿದೆ. (ವಿದ್ಯಾರ್ಥಿಯು ನಿರ್ಗಮಿಸುವನು)

ಮೇಡಮ್ ದೇವಿ : ಶ್ರೀಲ ಪ್ರಭುಪಾದರೇ, ಕೆಲವು ಜನರು ದೈವಿಕತೆಯನ್ನು ಹೆಚ್ಚು ಗ್ರಹಿಸಲು ಹಾಗೂ ಕೆಲವರು ಕಡಮೆ ಗ್ರಹಿಸುವಂತಾಗಲು ಏನಾದರೂ ನಿರ್ದಿಷ್ಟ ಗುಣಗಳಿವೆಯೇ?

ಶ್ರೀಲ ಪ್ರಭುಪಾದ: ಹೌದು, ಅದನ್ನು ನಾನು ವಿವರಿಸಿದ್ದೇನೆ. ಸತ್ತ್ವಗುಣ, ರಜೋಗುಣ, ತಮೋಗುಣ, ಸಾತ್ತ್ವಿಕತೆ, ರಾಜಸ ಹಾಗೂ ಮೌಢ್ಯದ ಗುಣಗಳು. ಯಾರು ಸಾತ್ತ್ವಿಕ ಗುಣವನ್ನು ಹೊಂದಿರುತ್ತಾರೋ – ಅವರು ದೈವಿಕತೆಯನ್ನು ಸುಲಭವಾಗಿ ಅರ್ಥಮಾಡಿ- ಕೊಳ್ಳುವರು.

ರಾಜಸಗುಣದಲ್ಲಿರುವವರು ಕೊಂಚ ಕಷ್ಟಪಡುತ್ತಾರೆ. ಮೌಢ್ಯದಿಂದ ಆವೃತವಾಗಿರುವವರು ಅವರು ಅರ್ಥ ಮಾಡಿಕೊಳ್ಳಲಾಗುವುದಿಲ್ಲ.

ಮೇಡಮ್ ದೇವಿ: ದೈಹಿಕ ಶರೀರವನ್ನು ಆವರಿಸುವ ಪ್ರಶ್ನೆಯಿದೆಯೇನು? ಇದೇನು ಹಾರ್ಮೋನ್ ಅಥವಾ ರಾಸಾಯನಿಕ ಹಂತವೇನು? ಇದರಿಂದ ಕೆಲವರು ಅತಿಹೆಚ್ಚು ಹಾಗೂ ಕೆಲವರು ಅತಿ ಕಡಮೆ ಮೌಢ್ಯದಿಂದ ಆವರಿಸಲ್ಪಡುವರೇನು?

ಶ್ರೀಲ ಪ್ರಭುಪಾದ: ಆವರಿಸಲ್ಪಡುವುದು ಎಂದರೆ, ಹೃದಯದೊಳಗಿನ ಕಲ್ಮಷಗಳು ಅಷ್ಟೇ. ಸೂರ್ಯನನ್ನು ಮೋಡಗಳು ಆವರಿಸಿದಂತೆ.

ಮೇಡಮ್ ದೇವಿ: ಮಂತ್ರವನ್ನು ದೇವರ ಹೆಸರನ್ನು ಪುನರಾವರ್ತಿತವಾಗಿ ಜಪಿಸುವುದರಿಂದ ನಿಮ್ಮ ಹೃದಯವು ಹೆಚ್ಚು ….

ಶ್ರೀಲ ಪ್ರಭುಪಾದ: ನೀವು ಪರಿಶುದ್ಧರಾಗುತ್ತೀರಿ.

ಶಿಷ್ಯ: ಶ್ರೀಲ ಪ್ರಭುಪಾದ, ನೀವು ಬಹಳ ಬಾರಿ ಹೃದಯವು ಕನ್ನಡಿಯಂತೆ ಎಂಬ ಉದಾಹರಣೆ ಕೊಡುತ್ತೀರಿ. ಮತ್ತು ನಾವು ಕೃಷ್ಣನಾಮ ಜಪದಿಂದ ಕನ್ನಡಿಯನ್ನು ಹೆಚ್ಚು ಹೆಚ್ಚು ಹೊಳಪುಗೊಳಿಸಿಕೊಂಡಷ್ಟೂ ನಾವು ಹೆಚ್ಚಿನ ಜ್ಞಾನ ಪಡೆಯುತ್ತೇವೆ.

ಮೇಡಮ್ ದೇವಿ: ಆದ್ದರಿಂದ, ನಾವು ಪ್ರತಿದಿನವೂ ಭಗವಂತನ ಹೆಸರನ್ನು ಮತ್ತೆ ಮತ್ತೆ ಪಠಿಸಬೇಕು.

ಶ್ರೀಲ ಪ್ರಭುಪಾದ: ಹೌದು.

ಮೇಡಮ್ ದೇವಿ: ಶ್ರೀಲ ಪ್ರಭುಪಾದ, ನಾನು ಸಾವಿನ ಸಮಸ್ಯೆಯ ಬಗ್ಗೆ ಅರಿಯಲು ಬಯಸುತ್ತೇನೆ: ಸಾವಿನ ಸಮಯದಲ್ಲಿ ಏನಾಗುತ್ತದೆ?

ಶ್ರೀಲ ಪ್ರಭುಪಾದ: ಹೌದು, ನೀವು ನಿಮ್ಮನ್ನು ಸಿದ್ಧಗೊಳಿಸಿಕೊಳ್ಳಬೇಕು. ಕನಸಿನಲ್ಲಿ ನೀವು ಹಿಂದಿನದೆಲ್ಲ ಯೋಚಿಸುವಂತೆ, ಸಾವಿನ ಸಮಯದಲ್ಲಿ ನಾವು ನಮ್ಮ ದೈನಂದಿನ ಕೆಲಸಗಳ ಮೂಲಕ ನಮ್ಮ ಮಾನಸಿಕ ಸ್ಥಿತಿಯನ್ನು ಸಿದ್ಧಗೊಳಿಸಿಕೊಳ್ಳುತ್ತೇವೆ.

ಮೇಡಮ್ ದೇವಿ: ಹೌದಲ್ಲ. ಮತ್ತದು ನಿಜವೇ, ಅಂದರೆ, ಕ್ರಿಯೆಗಿಂತ ನಮ್ಮ ಆಲೋಚನೆಯೇ ಬಹಳ ಮುಖ್ಯವೆಂಬುದು?

ಶ್ರೀಲ ಪ್ರಭುಪಾದ: ಹೌದು ಯೋಚನೆಗಳು ಸೂಕ್ಷ್ಮಕ್ರಿಯೆಗಳಾಗಿರುತ್ತವೆ.

ಮೇಡಮ್ ದೇವಿ: ಹಾಗಾದರೆ, ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಮ್ಮ ಆಲೋಚನೆಗಳು ಕ್ರಿಯೆಗೆ ಮೂಲವಾಗುತ್ತವೆ. ಮತ್ತು ಅವು ಕೂಡ ಕ್ರಿಯೆಯನ್ನು ನಿಶ್ಚಯಿಸುತ್ತವೆ ಎಂದೇ?

ಶ್ರೀಲ ಪ್ರಭುಪಾದ: ಹೌದು, ಹಾಗಾದರೆ. ಆದ್ದರಿಂದ ನಾವು ನಿಮ್ಮ ಪ್ರಸ್ತುತ ಯೋಚನೆಗಳಿಂದ ಆಚೆ ಇರುವು ಯೋಚನೆಗಳನ್ನು ಕೊಡುತ್ತೇವೆ. ಅಧಿಕೃತ ವೈದಿಕ ಸಾಹಿತ್ಯದಿಂದ. ಉದಾಹರಣೆಗೆ, ಭಾಗವತವು ಬುದ್ಧನ ತಾರುಣ್ಯವನ್ನು ವಿವರಿಸುತ್ತದೆ; ವೃದ್ಧನನ್ನು ನೋಡಿ, ‘ವೃದ್ಧಾಪ್ಯದಲ್ಲಿ ನಾನು ಕೂಡಾ ಹೀಗೆ ತೆವಳುತ್ತೇನೆಯೇ? ನಾನು ಕೂಡಾ ಹೀಗೆ ಆಗುತ್ತೇನೆಯೇ? ಇಲ್ಲ.

ಇದರ ಮೌಲ್ಯವೇನು?” ಅನಂತರ ಅವನು ಧ್ಯಾನಕ್ಕೆ ತೊಡಗಿಕೊಂಡನು. ಈ ಲೌಕಿಕ ಜಗತ್ತಿನಿಂದ ಪಾರಾಗಲು, ಈ ಜನನ-ಮರಣ- ವೃದ್ಧಾಪ್ಯ -ರೋಗಗಳ ನಿರಂತರ ಚಕ್ರದಿಂದ ಪಾರಾಗಲು ಬಯಸಿದನು.

ಅವನು ವೇದಗಳಲ್ಲಿ ಅಧ್ಯಯನ ಮಾಡಿದಂತೆ, ಅವನು ಕುಕರ್ಮಗಳು ಲೌಕಿಕ ಸಂಕಷ್ಟಗಳಿಗೆ ಎಡೆ ಮಾಡಿಕೊಡುತ್ತದೆ ಎಂದು ಅರಿತುಕೊಂಡನು. ಮತ್ತು ಹೆಚ್ಚಿನ ಕರ್ಮಗಳು, ಅವನು ಯೋಚಿಸಿದಂತೆ, ಅವು ನಮ್ಮ ದೌಷ್ಟ್ಯದಿಂದ, ಪ್ರಾಣಿಹತ್ಯೆಯಂತಹ ಆಚರಣೆಗಳಿಂದ ಉಂಟಾದುದಾಗಿರುತ್ತದೆ.

ಆದ್ದರಿಂದ ಆತನು ಅದನ್ನು ನಿಲ್ಲಿಸಲು ಬಯಸಿದನು. ಬುದ್ಧನ ಮೊತ್ತ ಮೊದಲ ಬೋಧನೆ ಅದೇ ಆಗಿದೆ. ಸದಯ ಹೃದಯ ದರ್ಶಿತ ಪಶುಘಾತಮ್ – “ಪ್ರಾಣಿ ಹತ್ಯೆಯನ್ನು ನಿಲ್ಲಿಸಿ.”

ಶಿಷ್ಯ: ಶ್ರೀಲ ಪ್ರಭುಪಾದ, ನೀವು ನೆನೆಸಿಕೊಂಡಂತೆ, ಕಳೆದ ವರ್ಷ ಪ್ಯಾರಿಸ್ ನಲ್ಲಿ ಒಬ್ಬ ಮನುಷ್ಯ – ಪ್ಯಾರಿಸ್ ಕೋರ್ಟಿನ ಅಧ್ಯಕ್ಷ – ನಿಮ್ಮನ್ನು ಭೇಟಿ ಮಾಡಲು ಬಂದಿದ್ದನು. ಅವನು ಬೌದ್ಧ ಧರ್ಮೀಯನಾಗಿದ್ದುಕೊಂಡೂ ನಿಮಗೆ ಹೇಳಿದ್ದನು, ”ಭಾರತದ ವಾತಾವರಣದಲ್ಲಿ ನೀವು ಮಾಂಸಾಹಾರ ಸೇವನೆ ಮಾಡದೆ ನೀವು ಬದುಕಬಲ್ಲಿರಿ. ಆದರೆ, ಪಶ್ಚಿಮದ ವಾತಾವರಣದಲ್ಲಿ ನಾವು ಮಾಂಸಾಹಾರ ಸೇವಿಸಲೇಬೇಕು.

ಶ್ರೀಲ ಪ್ರಭುಪಾದ: ಇದು ಮೂರ್ಖತನ. ಅವನು ಅತಿದೊಡ್ಡ ಮೂರ್ಖ. ಆದ್ದರಿಂದ, ಈ ಎಲ್ಲ ಧಾರ್ಮಿಕ ಮತ್ತು ಸಾಮಾಜಿಕ ನೇತಾರರು ಮೂರ್ಖರು ಎನ್ನಬಹುದು. ಅವರನ್ನು ಆ ಮೂರ್ಖತನದಿಂದ ಪಾರುಮಾಡಲು ಕೃಷ್ಣಪ್ರಜ್ಞೆಯೊಂದೇ ದಾರಿ.

ಅತ್ಯುತ್ಕೃಷ್ಟ ಭಗವತ್ಪ್ರಜ್ಞೆ. ಅದಿಲ್ಲದೆ ಹೋದರೆ ನೀವು ಹೇಗೆ ಜನನ, ಮರಣ ಚಕ್ರದಿಂದ ಪಾರಾಗಲು ಸಾಧ್ಯ? ಅವರು ಆತ್ಮ ಘಾತುಕರು. ಆತ್ಮ-ಹನ ಎಂದರೆ “ತಮ್ಮನ್ನು ತಾವೇ ಕೊಂದುಕೊಳ್ಳುವುದು” ಆತ್ಮಹತ್ಯೆ. ನೀವೇ ನಿಮ್ಮ ಗಂಟಲು ಕೊಯ್ದುಕೊಂಡರೆ, ಮತ್ಯಾರು ನಿಮ್ಮನ್ನು ಕಾಪಾಡಲು ಸಾಧ್ಯ?

ಆದ್ದರಿಂದ, ಏಸುಕ್ರಿಸ್ತ ಅಥವಾ ಬುದ್ಧನ ಅನುಯಾಯಿಗಳೆಂದು ಹೇಳಿಕೊಳ್ಳುವ ಈ ಜನರು – ವಾಸ್ತವದಲ್ಲಿ ಕ್ರಿಸ್ತ, ಬುದ್ಧರ ತತ್ತ್ವಗಳನ್ನು ಅನುಸರಿಸದೆ ಇರುವವರು – ಅವರೆಲ್ಲರೂ ಮೂರ್ಖರು. ನಾವು ಯಾರನ್ನೂ ದ್ವೇಷಿಸುವುದಿಲ್ಲ, ನಾವು ಅವರನ್ನು ಮೇಲೆತ್ತಲು ಬಯಸುತ್ತೇವೆ. ಆದರೆ ವಾಸ್ತವವಾಗಿ ಅವರೆಲ್ಲರೂ ಮೂರ್ಖರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi