– ಆಂಗ್ಲಮೂಲ: ಶ್ರೀ ಯದುರಾಜ ದಾಸ, ಅನುವಾದ: ಸುರೇಶ್ ಮೂನ
ಕೃಷ್ಣ ಮತ್ತು ಬಲರಾಮರು ಮಥುರೆಯಲ್ಲಿದ್ದುದರಿಂದ ನಂದ ಮಹಾರಾಜನು ಯಶೋದೆಯೂ ಅಲ್ಲಿಯೇ ಇದ್ದರು. ಆದರೆ ಕೆಲವು ಕಾಲದ ಅನಂತರ ಅವರು ವೃಂದಾವನಕ್ಕೆ ಹಿಂದಿರುಗಲು ಬಯಸಿದರು. ಕೃಷ್ಣ ಮತ್ತು ಬಲರಾಮರು ಬಹು ಅಂತಃಕರಣದಿಂದ ಆಲಿಂಗಿಸಿದರು. ಅನಂತರ ಕೃಷ್ಣನು ಹೀಗೆಂದನು:

“ನನ್ನ ಪ್ರೀತಿಯ ತಂದೆ ತಾಯಿಯರೆ, ನಾನು ವಸುದೇವ ದೇವಕಿಯ ಮಗನಾದರೂ ನೀವು ನಮಗೆ ನಿಜವಾದ ತಂದೆ ತಾಯಿಯರಾಗಿದ್ದೀರಿ, ಜನನ ಮತ್ತು ಬಾಲ್ಯದಿಂದ ನಮ್ಮನ್ನು ಪ್ರೀತಿಯಿಂದ ಬೆಳೆಸಿದ್ದೀರಿ. ನಮ್ಮನ್ನು ಇಲ್ಲಿ ಬಿಟ್ಟು ವೃಂದಾವನಕ್ಕೆ ಹಿಂದಿರುಗಿದಾಗ ನಿಮಗೆ ದುಃಖವಾಗುತ್ತದೆ ಎಂದು ನನಗೆ ಗೊತ್ತು.
ಆದರೆ ನನ್ನ ನಿಜವಾದ ತಂದೆ ತಾಯಿಯರಾದ ವಸುದೇವ ದೇವಕಿ, ನನ್ನ ಅಜ್ಜ ಹಾಗೂ ಇತರ ಎಲ್ಲ ಕುಟುಂಬದ ಸದಸ್ಯರಿಗೂ ಸ್ವಲ್ಪವಾದರೂ ಸಂತೋಷಪಡಿಸಿ ವೃಂದಾವನಕ್ಕೆ ಹಿಂದಿರುಗುತ್ತೇವೆ ಎಂದು ಖಂಡಿತವಾಗಿ ನಂಬಿ. ಹೀಗೆ ಕೃಷ್ಣ ಮತ್ತು ಬಲರಾಮರು ಮಧುರ ಮಾತುಗಳಿಂದ ಮತ್ತು ಹಲವು ಬಗೆಯ ಉಡುಪುಗಳು, ಒಡವೆಗಳು ಹಾಗೂ ಪಾತ್ರೆಗಳು ಇವೆಲ್ಲವನ್ನು ಕೊಟ್ಟು ನಂದ ಯಶೋದೆಯರನ್ನು ಸಮಾಧಾನಗೊಳಿಸಿದರು.
ಇದಾದ ಅನಂತರ ವಸುದೇವನು ಮಗನಿಗೆ ಉಪನಯನ ಮಾಡಿದನು. ಕೃಷ್ಣ ಮತ್ತು ಬಲರಾಮರ ಜನನದ ಕಾಲದಲ್ಲೇ ಬ್ರಾಹ್ಮಣರಿಗೆ ಗೋದಾನ ಮಾಡಲು ವಸುದೇವನು ಬಯಸಿದ್ದನು. ಆದರೆ ಕಂಸನು ಬಂಧಿಸಿದ್ದರಿಂದ ಇದನ್ನು ತನ್ನ ಮನಸ್ಸಿನಲ್ಲಿಯೇ ಮಾಡಿಕೊಳ್ಳಬೇಕಾಯಿತು.
ಕಂಸನ ಸಾವಿನ ಅನಂತರ ಅವನ ಗೋವುಗಳೆಲ್ಲವನ್ನು ಬಿಡುಗಡೆ ಮಾಡಲಾಗಿತ್ತಾದ್ದರಿಂದ ಅವನು ಸ್ವತಂತ್ರವಾಗಿ ಈಗ ಬ್ರಾಹ್ಮಣರಿಗೆ ಗೋದಾನ ಮಾಡಿದನು. ಅನಂತರ ಅವರ ಕುಲಪುರೋಹಿತರಾದ ಗರ್ಗ ಮುನಿಗಳಿಂದ ಅವರಿಗೆ ಯಜ್ಞೋಪವೀತ ಧಾರಣೆ ಮಾಡಿಸಲಾಯಿತು. ಅವರು ಗಾಯತ್ರಿ ಮಂತ್ರವನ್ನು ಜಪಿಸಿದರು.
ಆಧ್ಯಾತ್ಮಿಕ ಬದುಕಿನಲ್ಲಿ ಶಿಕ್ಷಣ ಪಡೆಯಲು ಗಾಯತ್ರಿ ಮಂತ್ರದ ಉಪದೇಶವಾದ ಅನಂತರ ಮನೆಯಿಂದ ದೂರವಿದ್ದು ಒಬ್ಬ ಆಚಾರ್ಯರ ಮಾರ್ಗದರ್ಶನದಲ್ಲಿರುವುದು ರೂಢಿ. ಈ ಅವಧಿಯಲ್ಲಿ ಶಿಷ್ಯನು ಗುರುವಿನ ಸೇವಕನಂತೆಯೇ ಕೆಲಸ ಮಾಡಬೇಕು. ಅವರ ಪಾಲನೆಯಲ್ಲಿ ಅನೇಕ ನಿಯಮ ನಿಬಂಧನೆಗಳನ್ನು ಪಾಲಿಸಬೇಕು.
ತಮ್ಮ ಗುರು ಸಾಂದೀಪನಿ ಮುನಿಯ ಮಾರ್ಗದರ್ಶನದಲ್ಲಿದ್ದಾಗ ಕೃಷ್ಣ ಮತ್ತು ಬಲರಾಮರು ಈ ನಿಯಂತ್ರಕ ತತ್ತ್ವಗಳನ್ನು ಬಹು ಕಟ್ಟು ನಿಟ್ಟಾಗಿ ಅನುಸರಿಸಿದರು. ಸಾಂದೀಪನೀ ಮುನಿಗಳು ಉತ್ತರ ಭಾರತದ ಉಜ್ಜಯನಿ ಪ್ರಾಂತಕ್ಕೆ ಸೇರಿದ ಆವಂತಿ ಪುರದಲ್ಲಿದ್ದರು. ಶಾಸ್ತ್ರಗ್ರಂಥಗಳಲ್ಲಿ ಹೇಳಿರುವಂತೆ ಗುರುವಿಗೆ ಗೌರವವನ್ನು ಕೊಡಬೇಕು ಮತ್ತು ಅವನು ದೇವೋತ್ತಮ ಪರಮ ಪುರುಷನಿಗೆ ಸಮನೆಂದೇ ಕಾಣಬೇಕು.
ಕೃಷ್ಣ ಮತ್ತು ಬಲರಾಮ ಬಹು ನಿಷ್ಠೆಯಿಂದ ಈ ತತ್ತ್ವಗಳನ್ನು ಅನುಸರಿಸಿ ಬ್ರಹ್ಮಚರ್ಯದ ನಿಬಂಧನೆಗಳನ್ನು ಪಾಲಿಸಿದರು. ಕೃಷ್ಣ ಮತ್ತು ಬಲರಾಮರು ಕ್ಷತ್ರಿಯರಾದ್ದರಿಂದ ಅವರಿಗೆ ವಿಶೇಷವಾಗಿ ಯುದ್ಧಕೌಶಲ ರಾಜಕಾರಣ ಮತ್ತು ಗಣಿತಗಳನ್ನು ಹೇಳಿಕೊಡಲಾಯಿತು.
ರಾಜಕಾರಣದಲ್ಲಿ ಈ ಆರು ಶಾಖೆಗಳಿವೆ – ಶಾಂತಿಯನ್ನು ಮಾಡಿಕೊಳ್ಳುವುದು ಹೇಗೆ, ಯುದ್ಧ ಮಾಡುವ ಕ್ರಮ, ಸಮಾಧಾನ ಮಾಡುವ ಬಗೆ, ವಿಭಜಿಸಿ ಆಳುವ ರೀತಿ ಹಾಗೂ ಆಶ್ರಯ ನೀಡುವ ವಿಧಾನ, ಕೃಷ್ಣ ಮತ್ತು ಬಲರಾಮರಿಗೆ ಗುರುಗಳು ಇವೆಲ್ಲವನ್ನು ವಿವರಿಸಿ ಮಾರ್ಗದರ್ಶನ ಮಾಡಿದರು.
ಗುರುಗಳು ಒಮ್ಮೆ ಹೇಳಿಕೊಟ್ಟರೆ ಕೃಷ್ಣ ಬಲರಾಮರು ಎಲ್ಲ ಕಲೆ, ವಿಜ್ಞಾನಗಳನ್ನು ಬೇಗ ಕಲಿತು ಬಿಡುತ್ತಿದ್ದರು. ಅರವತ್ತನಾಲ್ಕು ಹಗಲು ರಾತ್ರಿಗಳಲ್ಲಿ ಅವರು ಮನುಷ್ಯ ಸಮಾಜಕ್ಕೆ ಅಗತ್ಯವಾದ ಕಲೆ ಮತ್ತು ವಿಜ್ಞಾನವನ್ನು ಕಲಿತರು. ಬೆಳಗ್ಗೆ ಕೇಳಿದ ಪಾಠದಲ್ಲಿ ರಾತ್ರಿಯ ವೇಳೆಗೆ ನಿಪುಣರಾಗಿ ಬಿಡುತ್ತಿದ್ದರು.
ಅವರು ಹಾಡುಗಾರಿಕೆ, ಅದರ ರಚನೆ, ರಾಗಗಳನ್ನು ಗುರುತಿಸುವ ಕ್ರಮಗಳನ್ನು ಕಲಿತರು. ಲಯಬದ್ಧವಾಗಿ ಮತ್ತು ರಾಗ ಬದ್ಧವಾಗಿ ಹಾಡುತ್ತಾ ನರ್ತಿಸುವುದನ್ನು ಕಲಿತರು. ವಿವಿಧ ಬಗೆಯ ಮೃದಂಗಗಳನ್ನು ಬಾರಿಸುವುದನ್ನು ಕಲಿತರು. ನಾಟಕ ರಚನೆ ಚಿತ್ರಕಲೆಯನ್ನು ಅವರು ಕಲಿತರು.
ಆಭರಣಗಳಲ್ಲಿ ಬೆಲೆಬಾಳುವ ಆಭರಣಗಳನ್ನು ಮಾಡುವುದನ್ನು ಜಲತರಂಗವನ್ನು ತಿಳಿದರು. ಪೂಜಾ ಮಂದಿರಗಳನ್ನು ಪುಷ್ಪಾಲಂಕಾರ ಮಾಡುವುದನ್ನು ಕಲಿತರು. ಸುಗಂಧ ಪುಷ್ಪಗಳನ್ನು ಕಾರಂಜಿಯಂತೆ ಜೋಡಿಸುವ ಈ ಕಲೆ ಇಂದಿಗೂ ವೃಂದಾವನದಲ್ಲಿ ಬೇಸಿಗೆ ಸಮಯದಲ್ಲಿ ಆಚರಣೆಯಲ್ಲಿದೆ.
ಅನ೦ತರ ಕೃಷ್ಣ ಬಲರಾಮರು ವಿವಿಧ ಬಗೆಯ ಕೇಶಾಲಂಕಾರಗಳನ್ನು ಕಿರೀಟವನ್ನು ತಲೆಯ ಮೇಲೆ ವಿವಿಧ ರೀತಿಯಲ್ಲಿ ಧರಿಸುವ ಬಗೆಯನ್ನು ಕಲಿತರು. ರಂಗಭೂಮಿಯ ಮೇಲಿನ ಅಭಿನಯ, ನಟರ ಕಿವಿಯ ಮೇಲೆ ಪುಷ್ಪಾಲಂಕಾರ ಮಾಡುವುದು ಮತ್ತು ಸುಗಂಧ ಬೀರುವುದಕ್ಕಾಗಿ ಶ್ರೀಗಂಧವನ್ನು ನೀರಿನಲ್ಲಿ ತೇಯುವುದು ಇವುಗಳನ್ನು ಕಲಿತರು. ಯಕ್ಷಿಣಿಯನ್ನು ಕಲಿತರು.
ಇದರಲ್ಲಿ ಬಹುರೂಪಿ ಎನ್ನುವ ವಿದ್ಯೆಯಿದೆ. ಇದನ್ನು ಕಲಿತವನು ತನ್ನ ಸ್ನೇಹಿತರು ಗುರಿತಿಸಲಾರದಂತೆ ವೇಷ ಮರೆಸಿಕೊಳ್ಳಬಲ್ಲ ಬೇರೆ ಬೇರೆ ಕಾಲಗಳನುಗುಣವಾಗಿ ವಿವಿಧ ರೀತಿಯ ಪಾನೀಯಗಳನ್ನು ಮಾಡುವುದನ್ನು ಅವರು ಕಲಿತರು. ಷರಬತ್ತುಗಳ ರುಚಿಗಳನ್ನು ಮದ್ಯಪಾನದ ಪರಿಣಾಮಗಳನ್ನು ಅವರು ತಿಳಿದರು.

ಕುಣಿಯುವ ಬೊಂಬೆಗಳ ಸೂತ್ರಗಳನ್ನು ಆಡಿಸುವುದು ಹೇಗೆ, ವೀಣೆ, ಸಿತಾರ ಮತ್ತು ತಂಬೂರಿಯಂತಹ ಸಂಗೀತ ವಾದ್ಯಗಳಿಗೆ ಇಂಪಾದ ನಾದ ಬರುವಂತೆ ತಂತಿಗಳನ್ನು ಕಟ್ಟುವ ಕ್ರಮಗಳನ್ನು ಕಲಿತರು. ಒಗಟುಗಳನ್ನು ರಚಿಸುವುದು ಮತ್ತು ಅವುಗಳನ್ನು ಬಿಡಿಸುವುದನ್ನು ಕಲಿತರು.
ಬಹು ದಡ್ಡ ವಿದ್ಯಾರ್ಥಿಯೂ ಬಹುಬೇಗ ವರ್ಣಮಾಲೆಯನ್ನು ಕಲಿತು ಬರಹವನ್ನು ಓದಿ ಅರ್ಥ ಮಾಡಿಕೊಳ್ಳುವುದನ್ನು ಸಾಧ್ಯ ಮಾಡುವ ಪುಸ್ತಕಗಳನ್ನು ಓದುವ ಕಲೆಯನ್ನು ತಿಳಿದರು. ಖಾಲಿಯಿರುವ ಸ್ಥಾನವನ್ನು ತುಂಬಿ ಪದಗಳನ್ನು ಪೂರ್ತಿ ಮಾಡಿ ಪದ ಬಂಧದ ಒಗಟುಗಳನ್ನು ಬಿಡಿಸುವುದನ್ನು ಅವರು ಅಭ್ಯಾಸ ಮಾಡಿದರು.
ಅವರು ಚಿತ್ರಕಲೆ, ಕಥನಗಳಿಗೆ ಚಿತ್ರಗಳನ್ನು ಬರೆಯುವ ಕ್ರಮಗಳನ್ನು ತಿಳಿದರು. ಕಟ್ಟಡಗಳನ್ನು ನಿರ್ಮಿಸಲು ಬೇಕಾದ ವಿನ್ಯಾಸಶಾಸ್ತ್ರವನ್ನು ಕಲಿತರು. ಆಭರಣಗಳ ಬಣ್ಣ ಮತ್ತು ಹೊಳಪನ್ನು ನೋಡಿ ಬೆಲೆಬಾಳುವಿಕೆಯನ್ನು ಕಂಡುಹಿಡಿಯುವ ಕ್ರಮವನ್ನು ಕಲಿತರು. ಭೂಮಿಯಲ್ಲಿರುವ ಮಣ್ಣು ಹಾಗೂ ಖನಿಜಗಳ ಬಗ್ಗೆ ತಿಳಿದರು.
ವಿವಿಧ ರೀತಿಯ ಸಸ್ಯಗಳನ್ನು ಅಭ್ಯಸಿಸಿ ಅವುಗಳು ವಿವಿಧ ಕಾಯಿಲೆಗಳಿಗೆ ಔಷಧವಾಗುವ ಬಗೆಯನ್ನು ತಿಳಿದರು. ಬೇರೆ ಬೇರೆ ಫಲ ಪುಷ್ಪಗಳನ್ನು ನೀಡುವ ಸಸ್ಯಗಳ ಮಿಶ್ರತಳಿಗಳನ್ನು ಬೆಳೆಸುವ ಬಗೆಯನ್ನು ಅರಿತರು. ಗಿಳಿಗಳಿಗೆ ಮಾತಾಡುವುದನ್ನು ಕಲಿಸುವ ರೀತಿಯನ್ನು ತಿಳಿದರು.
ಅವರು ಅನ್ವಯ ಮನಃಶಾಸ್ತ್ರ ಅಂದರೆ ಇತರರ ಪ್ರಭಾವವನ್ನು ಬೀರಿ ತಮ್ಮ ಅಪೇಕ್ಷೆಯಂತೆ ಅವರು ನಡೆದುಕೊಳ್ಳುವಂತೆ ಮಾಡುವುದನ್ನು ಕಲಿತರು. ಕೆಲವೊಮ್ಮೆ ಇದನ್ನು ವಶೀಕರಣ ಎಂದೂ ಕರೆಯುತ್ತಾರೆ. ಅವರು ಕೇಶವನ್ನು ಶುಭ್ರಗೊಳಿಸುವ ಬಣ್ಣ ಹಾಕುವ ಹಾಗು ಗುಂಗುರು ಮಾಡುವ ವಿದ್ಯೆಯನ್ನು ಕಲಿತರು. ಬೇರೆಯವರ ಪುಸ್ತಕವನ್ನು ನೋಡದೇ ಅದರಲ್ಲಿ ಬರೆದಿರುವುದನ್ನು ಹೇಳುವ ವಿದ್ಯೆಯನ್ನು ಕಲಿತರು. ಎದುರಿನಲ್ಲಿರುವವರ ಮುಷ್ಟಿಯಲ್ಲಿ ಏನಿದೆಯೆಂದು ಹೇಳುವುದನ್ನು ಅವರು ಕಲಿತರು.
ಹಾಗೆಯೇ ಬೇರೆ ಬೇರೆ ದೇಶಗಳ ಭಾಷೆಗಳನ್ನು ಮಾತನಾಡುವುದನ್ನು ಅರ್ಥ ಮಾಡಿಕೊಳ್ಳುವುದನ್ನು ಅವರು ಕಲಿತರು. ಮನುಷ್ಯರ ವಿವಿಧ ಭಾಷೆಗಳಷ್ಟೇ ಅಲ್ಲದೆ ಪ್ರಾಣಿಪಕ್ಷಿಗಳ ಭಾಷೆಯನ್ನು ಅವರು ತಿಳಿದರು. ಅನಂತರ ಅವರು ಪುಷ್ಪಗಳಿಂದ ರಥಗಳನ್ನು ವಿಮಾನಗಳನ್ನು ನಿರ್ಮಿಸುವುದನ್ನು ಕಲಿತರು (ರಾಮಾಯಣದಲ್ಲಿ ರಾವಣನನ್ನು ಸೋಲಿಸಿದ ಅನಂತರ ಶ್ರೀರಾಮಚಂದ್ರನನ್ನು ಲಂಕೆಯಿಂದ ಅಯೋಧ್ಯೆಗೆ ಪುಷ್ಪಗಳಿಂದ ಮಾಡಿದ ಪುಷ್ಪರಥದಲ್ಲಿ ಕರೆದೊಯ್ಯಲಾಯಿತೆಂದು ಹೇಳಲಾಗಿದೆ.
ಕೃಷ್ಣಬಲರಾಮರು ಶಕುನಗಳನ್ನು ನೋಡಿ ಭವಿಷ್ಯದಲ್ಲಿ ಏನಾಗುವುದೆಂದು ಹೇಳುವುದನ್ನು ಕಲಿತರು. ಉದಾಹರಣೆಗೆ ಮನೆಯಿಂದ ಹೊರಟಾಗ ಪಾತ್ರೆಭರ್ತಿ ನೀರು ತರುವವರನ್ನು ಕಂಡರೆ ಅದು ಶುಭ. ಖಾಲಿ ಪಾತ್ರೆಯನ್ನು ಕಂಡರೆ ಅದು ಅಶುಭ. ಕೃಷ್ಣಬಲರಾಮರು ಬೆಲೆಬಾಳುವ ವಜ್ರದಂತಹ ವಸ್ತುಗಳನ್ನು ಕತ್ತರಿಸುವ ಕ್ರಮವನ್ನು ಕಲಿತರು. ಅವರು ಒಬ್ಬರ ಅಭಿಲಾಷೆಗಳನ್ನು ಈಡೇರಿಸುವ, ಬಲವಂತಗಳಿಂದ ಬಿಡಿಸಿಕೊಳ್ಳುವ ರೀತಿಗಳನ್ನು ಅರಿತರು.
ಹೀಗೆ ಗುರುಕುಲವಾಸದ ಸಮಯದಲ್ಲಿ ಈ ಎಲ್ಲ ವಿದ್ಯೆಗಳನ್ನು ಕಲಿತ ಕೃಷ್ಣ ಬಲರಾಮರು ಸರ್ವವಿದ್ಯಾ ಪಾರಂಗತರಾದರು.
ಹೀಗೆ ಸರ್ವವಿದ್ಯಾಪಾರಂಗತರಾದ ಶ್ರೀಕೃಷ್ಣಬಲರಾಮರು ತಮ್ಮ ಗುರುವು ಬಯಸಿದುದನ್ನು ತಂದು ಕಾಣಿಕೆಯಾಗಿ ಒಪ್ಪಿಸುವುದಾಗಿ ತಮ್ಮ ಗುರುವಿಗೆ ಹೇಳಿದರು. ಶಿಷ್ಯನು ಗುರುವಿಗೆ ಅರ್ಪಿಸುವ ಕಾಣಿಕೆಯನ್ನು ಗುರುದಕ್ಷಿಣೆ ಎನ್ನುತ್ತಾರೆ. ತಾನು ಗುರುವಿನಿಂದ ಪಡೆದ ಭೌತಿಕ ಮತ್ತು ಆಧ್ಯಾತ್ಮಿಕ ವಿದ್ಯೆಗೆ ಪ್ರತಿಯಾಗಿ ಗುರುವನ್ನು ತೃಪ್ತಿ ಪಡಿಸುವುದು ಅಗತ್ಯ.
ಈ ರೀತಿ ತಾವು ಸೇವೆ ಸಲ್ಲಿಸುವುದಾಗಿ ಕೃಷ್ಣ ಮತ್ತು ಬಲರಾಮರು ಹೇಳಿದಾಗ ಅವರ ಗುರುಗಳಾದ ಸಾಂದೀಪನೀ ಮುನಿಗಳು ಅವರಿಂದ ಅಸಾಧಾರಣವಾದುದನ್ನು ಯಾವ ಶಿಷ್ಯನೂ ಕೊಡಲು ಸಾಧ್ಯವಿಲ್ಲದ್ದನ್ನು ಕೇಳುವುದು ವಿವೇಕ ಎಂದು ಭಾವಿಸಿದರು. ತಮ್ಮ ಹೆಂಡತಿಯೊಡನೆ ಯಾವ ಕಾಣಿಕೆ ಪಡೆಯಬೇಕೆಂಬ ಬಗ್ಗೆ ಸಮಾಲೋಚನೆ ಮಾಡಿದರು.
ಅವರು ಆಗಲೇ ಈ ಇಬ್ಬರೂ ದೇವೋತ್ತಮ ಪರಮ ಪುರುಷರೆಂಬುದನ್ನು ಅರ್ಥಮಾಡಿಕೊಂಡಿದ್ದರು. ಆದ್ದರಿಂದ ಅವರು ಪ್ರಭಾಸ ಕ್ಷೇತ್ರದಲ್ಲಿ ಸಮುದ್ರದಲ್ಲಿ ಮುಳುಗಿ ಹೋದ ತಮ್ಮ ಮಗನನ್ನು ಹಿಂದಕ್ಕೆ ಕರೆತರಬೇಕೆಂದು ಕೇಳಲು ನಿಶ್ಚಯಿಸಿದರು.
ಕೃಷ್ಣ ಬಲರಾಮರು ಗುರುಪುತ್ರನ ಸಾವಿನ ಸುದ್ದಿ ಕೇಳುತ್ತಲೆ, ಕೂಡಲೆ ತಮ್ಮ ರಥದಲ್ಲಿ ಪ್ರಭಾಸ ಕ್ಷೇತ್ರಕ್ಕೆ ಹೊರಟರು. ಆ ಸಮುದ್ರ ತೀರವನ್ನು ತಲಪುತ್ತಲೇ ಸಮುದ್ರರಾಜನನ್ನು ಕರೆದರು. ಸಮುದ್ರರಾಜನೂ ಕೂಡಲೆ ಅವರ ಮುಂದೆ ಬಂದು ನಿಂತು ವಿನಮ್ರವಾಗಿ ನಮಸ್ಕರಿಸಿದನು.

“ಸ್ವಲ್ಪ ಸಮಯದ ಹಿಂದೆ ನಮ್ಮ ಗುರುಗಳ ಪುತ್ರನನ್ನು ನೀನು ಮುಳುಗಿಸಿದೆಯಂತೆ. ಈಗ ಅವನನ್ನು ಹಿಂದಕ್ಕೆ ತಂದೊಪ್ಪಿಸು” ಎಂದು ಕೃಷ್ಣನು ಆಜ್ಞಾಪಿಸಿದನು. ಆಗ ಸಮುದ್ರರಾಜನು ಹೀಗೆ ಉತ್ತರಿಸಿದನು: ”ಈ ಬಾಲಕನನ್ನು ನಾನು ತೆಗೆದುಕೊಂಡು ಹೋಗಲಿಲ್ಲ. ಆದರೆ ಪಂಚಜನ ಎಂಬ ರಾಕ್ಷಸನು ಹಿಡಿದುಕೊಂಡನು. ಆ ಮಹಾರಾಕ್ಷಸನು ಸಾಮಾನ್ಯವಾಗಿ ಶಂಖದ ಆಕಾರದಲ್ಲಿ ಸಮುದ್ರದ ತಳದಲ್ಲಿರುತ್ತಾನೆ. ನಿಮ್ಮ ಗುರುಪುತ್ರನನ್ನು ಅವನು ತಿಂದು ಹಾಕಿದ್ದರಿಂದ ಅವನ ಹೊಟ್ಟೆಯಲ್ಲಿರಬಹುದು.”
ಇದನ್ನು ಕೇಳಿದ ಕೂಡಲೆ ಕೃಷ್ಣನು ಸಮುದ್ರದ ತಳಕ್ಕೆ ಹೋಗಿ ಪಂಚಜನ ರಾಕ್ಷಸನನ್ನು ಹಿಡಿದುಕೊಂಡನು. ಆದರೆ ಗುರುವಿನ ಮಗನು ಅವನ ಹೊಟ್ಟೆಯಲ್ಲಿ ಕಾಣಲಿಲ್ಲ. ಅವನು ರಾಕ್ಷಸನ ಶವವನ್ನು ತೆಗೆದುಕೊಂಡು ಪ್ರಭಾಸ ಕ್ಷೇತ್ರದ ತೀರದಲ್ಲಿದ್ದ ತಮ್ಮ ರಥಕ್ಕೆ ಹಿಂದಿರುಗಿದನು. ಅಲ್ಲಿಂದ ಅವನು ಸಾವಿನ ದೇವತೆಯಾದ ಯಮರಾಜನ ನಿವಾಸವಾದ ಸಂಯಮನೀಗೆ ಹೋದನು. ಅಲ್ಲಿ ಅವನು ತನ್ನ ಶಂಖವನ್ನು ಊದಿದನು.
ಕೃಷ್ಣ ಬಲರಾಮರು ಯಾರು ಎಂದು ಯಮರಾಜನಿಗೆ ತಿಳಿದಿದ್ದರಿಂದ ಅವನು ಕೂಡಲೆ ಅವರ ಮುಂದೆ ಬಂದು ನಮಸ್ಕರಿಸಿ ಪ್ರಭುವಿಗೆ ತನ್ನ ನಮ್ರ ಸೇವೆಯನ್ನು ಸಲ್ಲಿಸುವುದಾಗಿ ತಿಳಿಸಿದನು. ಆಗ ಕೃಷ್ಣನು ತನ್ನ ಗುರುಪುತ್ರನನ್ನು ಹಿಂತಿರುಗಿಸುವಂತೆ ಕೇಳಿದನು. ಅದರಂತೆ ಯಮರಾಜನು ಗುರುಪುತ್ರನನ್ನು ಹಿಂತಿರುಗಿಸಲು ಕೃಷ್ಣ ಬಲರಾಮರು ಅವನನ್ನು ತಮ್ಮ ಗುರುವಿನ ಬಳಿಗೆ ತಂದೊಪ್ಪಿಸಿದರು. ಅನಂತರ ತಾವಿನ್ನೇನ್ನಾದರೂ ತಂದೊಪ್ಪಿಸಬೇಕೆ ಎಂದು ಇಬ್ಬರು ಸಹೋದರರೂ ಗುರುವನ್ನು ಕೇಳಿದಾಗ ಅವರು ಹೀಗೆಂದರು.
”ಪ್ರಿಯ ಮಕ್ಕಳೆ, ನೀವು ನನಗಾಗಿ ಸಾಕಷ್ಟು ಮಾಡಿದ್ದೀರಿ. ನನಗೆ ಸಂಪೂರ್ಣ ತೃಪ್ತಿಯಾಗಿದೆ. ನಿಮ್ಮಂತಹ ಶಿಷ್ಯರಿರುವ ಗುರುವಿಗೆ ಮತ್ತೇನು ತಾನೇ ಬೇಕಾದೀತು? ಪ್ರಿಯ ಬಾಲಕರೆ, ನೀವೀಗ ಮನೆಗೆ ಹೋಗಬಹುದು. ನಿಮ್ಮ ಮಹತ್ಕಾರ್ಯಗಳು ಎಂದೂ ಜಗತ್ತಿನಲ್ಲಿ ಹೊಗಳಲ್ಪಡುವವು.
ನೀವು ಆಶೀರ್ವಾದವನ್ನು ಮೀರಿರುವವರು. ಆದರೂ ನಿಮ್ಮನ್ನು ಆಶೀರ್ವದಿಸುವುದು ನನ್ನ ಕರ್ತವ್ಯ. ನೀವು ಆಡುವ ಮಾತೆಲ್ಲವೇದಗಳ ಉಪದೇಶದಂತೆ ಸದಾ ಹೊಚ್ಚ ಹೊಸದಾಗಿರಲಿ ಎಂದು ನಾನು ಆಶೀರ್ವದಿಸುತ್ತೇನೆ. ನಿಮ್ಮ ಉಪದೇಶಗಳು ಈ ವಿಶ್ವದಲ್ಲಿ ಮತ್ತು ಈ ಯುಗದಲ್ಲಿ ಮಾತ್ರವಲ್ಲ ಎಲ್ಲ ಸ್ಥಳಗಳಲ್ಲಿ ಎಲ್ಲ ಕಾಲಗಳಲ್ಲಿ ಗೌರವಿಸಲ್ಪಡುವವು. ಎಂದಿಗೂ ಹೊಸತಾಗಿ ಪ್ರಧಾನವಾಗಿ ಉಳಿಯುವುವು.”
ಗುರುವಿನ ಆಶೀರ್ವಾದದಿಂದಾಗಿಯೇ ಶ್ರೀಕೃಷ್ಣನ ಭಗವದ್ಗೀತೆಯು ಎಂದೆಂದೂ ಹೊಸದಾಗಿ ಉಳಿದಿದೆ. ಅದರ ಕೀರ್ತಿಯು ಈ ವಿಶ್ವದಲ್ಲಿ ಮಾತ್ರವಲ್ಲದೆ ಇತರ ಲೋಕಗಳಿಗೂ ವಿಶ್ವಗಳಿಗೂ ಹಬ್ಬಿದೆ.
ತಮ್ಮ ಗುರುವಿನ ಅಪ್ಪಣೆಯಂತೆ ಕೃಷ್ಣ ಬಲರಾಮರು ಕೂಡಲೆ ತಮ್ಮ ರಥಗಳಲ್ಲಿ ಮನೆಗೆ ಹಿಂತಿರುಗಿದರು. ಅವರ ರಥಗಳು ವಾಯುವೇಗದಲ್ಲಿ ಓಡಿದವು. ಗುಡುಗಿನಂತೆ ಶಬ್ದ ಮಾಡಿದವು. ಕೃಷ್ಣ ಮತ್ತು ಬಲರಾಮರನ್ನು ಬಹುಕಾಲದಿಂದ ಕಾಣದಿದ್ದ ಮಥುರೆಯ ನಿವಾಸಿಗಳು ಬಹು ಸಂತೋಷಪಟ್ಟರು. ಕಳೆದುಕೊಂಡ ನಿಧಿಯನ್ನು ಮತ್ತೆ ಪಡೆದವರಂತೆ ಹರ್ಷಿಸಿದರು.
ವೃಂದಾವನದಲ್ಲಿ ಉದ್ಧವ
ನಂದ ಮಹಾರಾಜನು ಕೃಷ್ಣ ಬಲರಾಮರನ್ನು ಮಥುರೆಯಲ್ಲೇ ಬಿಟ್ಟು ಗೋಪಬಾಲರು ಮತ್ತು ಇತರರೊಂದಿಗೆ ವೃಂದಾವನಕ್ಕೆ ಹಿಂತಿರುಗಿದನು. ಕೃಷ್ಣನು ಅಕ್ರೂರನ ರಥದಲ್ಲಿ ಮಥುರೆಗೆ ಹೊರಟಾಗ ಗೋಪಿಯರು ಅವನನ್ನು ಹೋಗಬೇಡವೆಂದು ಹೇಳಿ ರಥವನ್ನು ತಡೆದಿದ್ದರು. ಕೃಷ್ಣನು ಅವರಿಗೆ ಮಥುರೆಯಲ್ಲಿ ತನ್ನ ಕೆಲಸ ಮುಗಿದ ಕೂಡಲೆ ಹಿಂತಿರುಗಿ ಬರುವುದಾಗಿ ಮಾತು ಕೊಟ್ಟಿದ್ದನು.
ಈಗ ಕೃಷ್ಣನು ಹಿಂದಕ್ಕೆ ಬರಲಿಲ್ಲವಾಗಿ ಮೇಲ್ನೋಟಕ್ಕೆ ಅವನು ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲವೆಂಬಂತೆ ತೋರುತ್ತದೆ. ಆದರೆ ವೃಂದಾವನ ವಾಸಿಗಳು ಕೃಷ್ಣನಿಲ್ಲದೆ ವಿರಹ ವೇದನೆಯನ್ನು ಅನುಭವಿಸಿ ತನ್ಮೂಲಕ ಉಂಟಾದ ಭಾವವು ಕೃಷ್ಣನು ತನ್ನ ಎಲ್ಲ ಲೀಲೆಗಳ ಮೂಲಕ ತಮ್ಮೊಂದಿಗಿದ್ದಾನೆಂಬಂತೆ ತೋರಿತ್ತು. ಹೀಗಾಗಿ ಕೃಷ್ಣನು ಅವರೊಂದಿಗೆ ಭಾವ ವಿಸ್ತರಣೆಯ ಮೂಲಕ ವೃಂದಾವನದಲ್ಲಿದ್ದನು.
ಹೇಗೆ ಗೋಪಿಯರು ವೃಂದಾವನದಲ್ಲಿ ಸದಾ ಕೃಷ್ಣನ ಬಗ್ಗೆಯೇ ಯೋಚಿಸುತ್ತಿದ್ದರೋ ಹಾಗೆ ಕೃಷ್ಣನೂ ತನ್ನ ಗೋಪಿಯರು ತಾಯಿ ಯಶೋದೆ, ನಂದ ಮಹಾರಾಜ, ಗೆಳೆಯರು ಹಾಗೂ ಎಲ್ಲ ವೃಂದಾವನ ವಾಸಿಗಳನ್ನು ನೆನಪಿಸಿಕೊಳ್ಳುತ್ತಿದ್ದನು. ದೈಹಿಕವಾಗಿ ಅವನು ಅವರಿಂದ ದೂರವಿದ್ದರೂ ಅವರೆಲ್ಲರ ಅಲೌಕಿಕ ದುಃಖವೂ ಅವನಿಗೆ ಅರ್ಥವಾಯಿತು. ಅವನು ಕೂಡಲೆ ಅವರನ್ನು ಸಮಾಧಾನ ಪಡಿಸಲು ಒಂದು ಮಾರ್ಗವನ್ನು ಅನುಸರಿಸಿದನು.
ಕೃಷ್ಣನಿಗೆ ಉದ್ಧವ ಎಂಬ ಅತ್ಯಂತ ಆತ್ಮೀಯ ಸ್ನೇಹಿತನಿದ್ದನು. ಅವನು ಬುದ್ಧಿವಂತನೂ ಬಹು ಧೀಮಂತನೂ ಆಗಿದ್ದನು. ಅವನು ಬಹು ಮಟ್ಟಿಗೆ ಕೃಷ್ಣನನ್ನೇ ಹೋಲುತ್ತಿದ್ದನು. ಕೃಷ್ಣನು ಉದ್ಧವನೊಂದಿಗೆ ಒಂದು ಸಂದೇಶವನ್ನು ವೃಂದಾವನಕ್ಕೆ ಕಳುಹಿಸಲು ನಿರ್ಧರಿಸಿದನು. ಅಲ್ಲದೆ ಉದ್ಧವನಿಗೆ ಕೃಷ್ಣನನ್ನು ಪ್ರೀತಿಸುವುದು ಹೇಗೆ ಎಂಬದನ್ನು ಗೋಪಿಯರಿಂದ ಮತ್ತು ವೃಂದಾವನದ ನಿವಾಸಿಗಳಿಂದ ತಿಳಿಯಬೇಕು ಎಂಬ ಉದ್ದೇಶವೂ ಕೃಷ್ಣನಿಗಿತ್ತು.

ಹೀಗಾಗಿ ಒಂದು ಸಂದೇಶದೊಂದಿಗೆ ಉದ್ಧವನನ್ನು ವೃಂದಾವನಕ್ಕೆ ಕಳುಹಿಸಿದ್ದು ಕೃಷ್ಣನು ಅವನಿಗೆ ತೋರಿದ ಕೃಪೆ. ಹೀಗೆ ಕೃಷ್ಣನ ಕೋರಿಕೆಯ ಮೇರೆಗೆ ಸಂದೇಶದೊಂದಿಗೆ ರಥದಲ್ಲಿ ಹೊರಟ ಉದ್ಧವನು ಸಂಜೆ ಹಸುಗಳು ಹುಲ್ಲುಗಾವಲುಗಳಿಂದ ಮನೆಗೆ ಬರುವ ವೇಳೆಗೆ ವೃಂದಾವನವನ್ನು ಸೇರಿದನು. ಅವನು ನಂದನ ಮನೆಗೆ ಬಂದಾಗ ನಂದನನು ಅವನನ್ನು ಬರಮಾಡಿಕೊಂಡು ಕೂರಲು ಪೀಠವನ್ನು ನೀಡಿದನು.
‘ನನ್ನ ಪ್ರಿಯ ಉದ್ಧವನೆ” ನ೦ದನು ಮಾತನಾಡಲು ಪ್ರಾರಂಭಿಸಿದನು. “ನನ್ನ ಸ್ನೇಹಿತ ವಸುದೇವನು ಜೀವನವನ್ನು ಹೇಗೆ ಕಳೆಯುತ್ತಿದ್ದಾನೆ? ಕಂಸನ ಕಾರಾಗೃಹದಿಂದ ಬಿಡಿಸಲ್ಪಟ್ಟ ಅವನು ಕೃಷ್ಣ ಬಲರಾಮ ಹಾಗೂ ತನ್ನ ಇತರ ಬಂಧುಗಳೊಂದಿಗೆ ಸುಖವಾಗಿರಬೇಕು.
ಅವನ ಯೋಗ ಕ್ಷೇಮದ ಬಗ್ಗೆ ನನಗೆ ತಿಳಿಸು. ಬಹಳ ಪಾಪಾತ್ಮನಾಗಿದ್ದ ಕಂಸನ ಸಂಹಾರವಾದದ್ದು ಸಮಾಧಾನದ ಸಂಗತಿ” ಎಂದನು. ಅನಂತರ ನಂದನು ಕೃಷ್ಣ ಬಲರಾಮರ ಅಗಲುವಿಕೆಯನ್ನು ಅವರು ಹೇಗೆ ಅನುಭವಿಸುತ್ತಿದ್ದಾರೆ ಹಾಗೂ ಅದನ್ನು ಮರೆಯಲು ಅವರ ಬಾಲಲೀಲೆಗಳನ್ನು ಹೇಗೆ ನೆನೆಸಿಕೊಳ್ಳುತ್ತಿದ್ದಾರೆಂಬುದನ್ನು ವಿವರಿಸಿದನು.
ಆಗ ಉದ್ಧವನು, ”ನನ್ನ ಪ್ರೀತಿಯ ತಾಯಿ ಯಶೋದೆ ಮತ್ತು ನಂದ ಮಹಾರಾಜ ನೀವು ಮಾನವರಲ್ಲೆಲ್ಲ ಅತ್ಯಂತ ಗೌರವಾನ್ವಿತರು. ಏಕೆಂದರೆ ನಿಮ್ಮಂತೆ ಬೇರೆಯವರು ಈ ರೀತಿಯ ಅಲೌಕಿಕ ಆನಂದವನ್ನು ಅನುಭವಿಸಲಾರರು. ಕೃಷ್ಣನು ಮಥುರೆಯಲ್ಲಿ ತನ್ನ ಕಾರ್ಯವನ್ನು ಮುಗಿಸಿಕೊಂಡು ವೃಂದಾವನಕ್ಕೆ ಹಿಂತಿರುಗುವುದಾಗಿ ಹೇಳಿದ್ದಾನೆ. ಅವನು ಖಂಡಿತವಾಗಿಯೂ ತನ್ನ ಮಾತಿನಂತೆ ನಡೆಯುತ್ತಾನೆ. ಆದ್ದರಿಂದ ನೀವಿಬ್ಬರೂ ಕೃಷ್ಣನಿಲ್ಲವೆಂದು ದುಃಖಿತರಾಗಬೇಡಿ.”
ಹೀಗೆ ನಂದ ಉದ್ಧವರು ಕೃಷ್ಣನ ಬಗ್ಗೆ ಮಾತನಾಡುತ್ತಾ ಅಂದಿನ ರಾತ್ರಿಯನ್ನು ಕಳೆದರು.
ಅವನ ವಿಷಯವನ್ನು ತಿಳಿಯುವ ಕುತೂಹಲದಿಂದ ಅವನನ್ನು ಸುತ್ತುಗಟ್ಟಿದರು. ಉದ್ಧವನು ಕೃಷ್ಣನಿಂದ ಸಂದೇಶವನ್ನು ತಂದಿದ್ದಾನೆ ಎಂದು ತಿಳಿದು ಗೋಪಿಯರಿಗೆ ಮತ್ತಷ್ಟು ಸಂತೋಷವಾಯಿತು. ಉದ್ಧವನನ್ನು ಅವರು ಒಂದು ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋದರು.
ಇದರಿಂದ ವೃಂದಾವನದ ಗೋಪಿಯರೆಲ್ಲ ಕೃಷ್ಣನ ಯೋಚನೆಯಲ್ಲಿ ಮತ್ತು ಅವನ ಬಾಲಲೀಲೆಗಳಲ್ಲಿ ಅದೆಷ್ಟು ತನ್ಮಯರಾಗಿದ್ದಾರೆ ಎಂಬುದು ಉದ್ಧವನಿಗೆ ಅರ್ಥವಾಯಿತು. ಅದರಲ್ಲೂ ಅವರಲ್ಲಿ ಒಬ್ಬಳಾದ ಶ್ರೀಮತಿ ರಾಧಾರಾಣಿಯು ಎಷ್ಟು ಮೈಮರೆತಿದ್ದಳೆಂದರೆ ಅಲ್ಲಿ ಹಾರಾಡುತ್ತ ಅವಳ ಚರಣ ಕಮಲಗಳನ್ನು ಸ್ಪರ್ಶಿಸಲು ಯತ್ನಿಸುತ್ತಿದ್ದ ದುಂಬಿಯೊಡನೆಯೇ ಮಾತನಾಡಲು ಪ್ರಾರಂಭಿಸಿದಳು – “ದುಂಬಿಯೇ, ಹೂಗಳ ಮಕರಂದವನ್ನು ಕುಡಿಯುವುದು ನಿನ್ನ ಅಭ್ಯಾಸ.
ಕೃಷ್ಣನದು ಇದೇ ಅಭ್ಯಾಸವಾದ್ದರಿಂದ ನೀನು ಕೃಷ್ಣನ ದೂತನಾಗಲು ಬಯಸಿದ್ದೀಯೆ. ನೀನು ನನಗೊಂದು ಸಂದೇಶವನ್ನು ತಂದಿದ್ದೀಯ. ಅದಕ್ಕೆ ನನ್ನ ಪಾದಸ್ಪರ್ಶ ಮಾಡಲು ಕಾತರನಾಗಿದ್ದೀಯೆ. ಆದರೆ ಪ್ರಿಯ ದುಂಬಿಯೇ, ನಾನು ನಿನ್ನನ್ನು ಎಚ್ಚರಿಸುತ್ತಿದ್ದೇನೆ. ನನ್ನನ್ನು ಮುಟ್ಟಬೇಡ! ನಂಬಿಕೆಗೆ ಅರ್ಹನಲ್ಲದ ನಿನ್ನ ಯಜಮಾನನಿಂದ ನನಗೆ ಯಾವ ಸಂದೇಶವೂ ಬೇಡ. ನೀನು ನೆಚ್ಚಲಾಗದ ಒಡೆಯನ ನೆಚ್ಚಲಾರದ ಬಂಟ.”
ಉದ್ಧವನನ್ನು ಕುರಿತು ಅವನೂ ಕೃಷ್ಣನಷ್ಟೇ ನಂಬಿಕೆಗೆ ಅರ್ಹನಲ್ಲ ಎಂದು ಪರೋಕ್ಷವಾಗಿ ಸೂಚಿಸಲೂ ಶ್ರೀಮತಿ ರಾಧಾರಾಣಿ ಹೀಗೆ ಮಾತನಾಡಿರಬಹುದು. ಅವಳು ಮತ್ತೆ ದುಂಬಿಯನ್ನು ಕುರಿತು ಹೇಳತೊಡಗಿದಳು . – “ನಿನ್ನ ಒಡೆಯ ಕೃಷ್ಣನ ಗುಣವು ನಿನ್ನ ಗುಣವೇ. ನೀನು ಒಂದು ಹೂವಿನ ಮೇಲೆ ಕೂರುತ್ತಿ ಒಂದಿಷ್ಟು ಮಕರಂದವನ್ನು ಹೀರಿ ಕೂಡಲೆ ಹಾರಿ ಹೋಗಿ ಇನ್ನೊಂದು ಹೂವಿನ ಮೇಲೆ ಕುಳಿತು ಅದರ ರುಚಿಯನ್ನು ನೋಡುತ್ತಿ.
ಕೃಷ್ಣನೂ ಹಾಗೆಯೇ ಅವನು ನಮಗೆ ಅವನ ತುಟಿಗಳನ್ನು ಸವಿಯುವ ಅವಕಾಶವನ್ನು ಕೊಟ್ಟನು. ಅನಂತರ ಸಂಪೂರ್ಣವಾಗಿ ಹೊರಟು ಹೋದನು. ಆದರೆ ಇನ್ನು ಮುಂದೆ ಕೃಷ್ಣನಿಂದ ಅಥವಾ ಅವನ ದೂತರಿಂದ ನಾವು ಮೋಸ ಹೋಗುವುದಿಲ್ಲ. ಕೃಷ್ಣನು ಈಗ ನಗರದಲ್ಲಿದ್ದಾನೆ. ಅರ್ಜುನನ ಗೆಳೆಯ ಎಂದೇ ಪ್ರಸಿದ್ಧನಾಗಿದ್ದಾನೆ.
ಈಗ ಅವನಿಗೆ ಅನೇಕ ಹೊಸ ಗೆಳತಿಯರಿದ್ದಾರೆ. ನಿಸ್ಸಂದೇಹವಾಗಿ ಅವನ ಸಹವಾಸದಲ್ಲಿ ಅವರು ಸಂತೋಷದಿಂದಿದ್ದಾರೆ. ಅವನ ದೂತನಾಗಿ ಬಂದು ನೀನು ಹೊಗಳು ಭಟ್ಟನಾಗಿ ನನ್ನನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದೀಯೆ. ಆದ್ದರಿಂದ ನೀನು ನನ್ನ ಪಾದದಡಿ ನಿನ್ನ ತಲೆಯನ್ನಿಟ್ಟಿದ್ದೀಯೆ. ಆದರೆ ನಿನ್ನ ಉಪಾಯ ನನಗೆ ಗೊತ್ತು ಬಹುದೊಡ್ಡ ಮೋಸಗಾರ ಕೃಷ್ಣನ ಕಡೆಯಿಂದ ಬಂದಿರುವ ದೂತ ನೀನು ಎಂದು ನನಗೆ ಗೊತ್ತು. ಆದುದರಿಂದ ದಯವಿಟ್ಟು ನನ್ನನ್ನು ಬಿಟ್ಟು ಹೋಗು.”
ಕೃಷ್ಣನು ಪರಿಪೂರ್ಣನಾದುದರಿಂದ ಅವನ ನಿರ್ದಯ ಕಾರ್ಯಗಳು ಎಂದು ಜನರು ಕರೆಯುವ ಕಾರ್ಯಗಳು ಅವನ ದಯಾಮಯ ಕಾರ್ಯಗಳಷ್ಟೇ ರುಚಿಯಾಗಿರುತ್ತವೆ. ಏನೇ ಆದರೂ ಸಂತರೂ ಗೋಪಿಯರಂತಹ ಮಹಾನ್ ಭಕ್ತರೂ ಕೃಷ್ಣನನ್ನು ಬಿಡಲು ಸಾಧ್ಯವೇ ಇಲ್ಲ. ಆದುದರಿಂದ ಚೈತನ್ಯ ಮಹಾ ಪ್ರಭುಗಳು, ‘ಕೃಷ್ಣ ನೀನು ಎಲ್ಲ ರೀತಿಗಳಲ್ಲಿ ಅನಿರ್ಬಂಧಿತನು ಮತ್ತು ಸ್ವತಂತ್ರನು.
ನೀನು ನಿನ್ನ ಮನ ಬಂದಂತೆ ನನ್ನನ್ನು ಆಲಿಂಗಿಸಬಹುದು. ಇಲ್ಲವೆ ನಿನ್ನ ಪಾದದ ಅಡಿಗಳಲ್ಲಿ ಪುಡಿಮಾಡಬಹುದು. ನನ್ನ ಇಡೀ ಜನ್ಮದಲ್ಲಿ ನಿನ್ನನ್ನು ಕಾಣಲಾಗದಂತೆ ಮಾಡಿ ನನ್ನ ಹೃದಯವು ಬಿರಿಯುವಂತೆ ಮಾಡಬಹುದು, ಆದರೆ ನಾನು ಪ್ರೀತಿಸುವುದು ನಿನ್ನೊಬ್ಬನನ್ನೇ” ಎಂದು ಪ್ರಾರ್ಥಿಸಿದರು.

ಶ್ರೀಮತಿ ರಾಧಾರಾಣಿಯು ಮುಂದುವರಿದು ಹೀಗೆ ಹೇಳಿದಳು: “ನನ್ನ ಅಭಿಪ್ರಾಯದಲ್ಲಿ ಕೃಷ್ಣನ ವಿಷಯವನ್ನು ಕೇಳಲೂಬಾರದು. ಏಕೆಂದರೆ ಅವನ ದಿವ್ಯಕಾರ್ಯಗಳ ಅಮೃತದ ಒಂದು ತೊಟ್ಟನ್ನು ಕಿವಿಯಲ್ಲಿ ಹಾಕಿದರೂ ಕೂಡಲೇ ಭೌತಿಕ ಮೋಹದಿಂದ ಸಂಪೂರ್ಣ ಬಿಡುಗಡೆಯಾಗಿ ಮನುಷ್ಯನು ಮನೆ, ಸಂಸಾರ, ಹೆಂಡತಿ ಮಕ್ಕಳು ಮತ್ತಿತರ ಎಲ್ಲ ವಸ್ತುಗಳ ಮೋಹವನ್ನು ಬಿಟ್ಟು ಬಿಡುತ್ತಾನೆ.
ಭೌತಿಕ ಸತ್ತ್ವಗಳನ್ನೆಲ್ಲಾ ದೂರ ಮಾಡುವುದರಿಂದ ಅವನ ನೆಂಟರೂ ಅವನೂ ಅಸುಖಿಗಳಾಗುತ್ತಾರೆ. ಅನಂತರ ಅವನು ಮನುಷ್ಯ ರೂಪದಲ್ಲಿ ಅಥವಾ ಪಕ್ಷಿಯಂತೆ ಬೇರೆ ಯಾವುದೇ ಜೀವದಲ್ಲಿ ಕೃಷ್ಣನನ್ನು ಹುಡುಕಿಕೊಂಡು ಅಲೆಯುತ್ತಾನೆ.
ಆದ್ದರಿಂದ ದಯವಿಟ್ಟು ಇನ್ನು ಕೃಷ್ಣನ ವಿಷಯವಾಗಿ ಮಾತನಾಡಬೇಡ. ಇನ್ನಾವುದಾದರೂ ವಿಷಯವನ್ನು ಕುರಿತು ಮಾತನಾಡುವುದು ಉತ್ತಮ. ನಮ್ಮ ಹಣೆಯ ಬರಹ ಆಗಲೆ ನಿರ್ಧಾರವಾಗಿದೆ. ಬೇಟೆಗಾರನ ಇಂಪಾದ ಸಂಗೀತದಿಂದ ಕಾಡಿನಲ್ಲಿ ಮಂತ್ರಮುಗ್ಧರಾದ ಕಪ್ಪು ಚುಕ್ಕೆಗಳುಳ್ಳ ಹೆಣ್ಣು ಜಿಂಕೆಗಳ ಸ್ಥಿತಿ ನಮ್ಮದು.
ಶ್ರೀಮತಿ ರಾಧಾರಾಣಿಯು ದುಂಬಿ ದೂತನೊಡನೆ ಆಡಿದ ಮಾತುಗಳು, ಕೃಷ್ಣನನ್ನು ಆಕ್ಷೇಪಿಸಿದ್ದು, ಆದರೆ ಅದೇ ಕಾಲದಲ್ಲಿ ಅವನನ್ನು ಕುರಿತು ಮಾತನಾಡುವುದನ್ನು ನಿಲ್ಲಿಸಲು ಸಾಧ್ಯವಾಗದೇ ಇದ್ದುದ್ದು ಇವೆಲ್ಲ ಮಹಾಭಾವ ಎನ್ನುವ ಅತ್ಯುನ್ನತ, ದಿವ್ಯ, ಹರ್ಷಾತಿರೇಕದ ಲಕ್ಷಣಗಳು.
ಈ ಹೊತ್ತಿಗೆ ಅತ್ತ ಇತ್ತ ಹಾರಾಡುತ್ತಿದ್ದ ದುಂಬಿಯು ಅವಳ ಬಳಿಗೇ ಬಂದಿತು. ಅವಳು ಮತ್ತೆ ಮಾತನಾಡತೊಡಗಿದಳು “ಕೃಷ್ಣನಿಗೆ ಇನ್ನೂ ನನ್ನಲ್ಲಿ ದಯೆಯಿದೆ. ದೂತನು ಮನಸ್ಸನ್ನು ಒಡೆಯುವಂತಹ ಸಂದೇಶಗಳನ್ನು ಕೊಂಡೊಯ್ಯದಿದ್ದರೂ ನನ್ನನ್ನು ಅವನ ಬಳಿಗೆ ಕರೆದುಕೊಂಡು ಹೋಗಲು ದುಂಬಿಯನ್ನು ಮತ್ತೆ ಕಳುಹಿಸಿದ್ದಾನೆ.” ಈ ಬಾರಿ ಶ್ರೀಮತಿ ರಾಧಾರಾಣಿ ಕೃಷ್ಣನಿಗೆ ವಿರುದ್ಧವಾಗಿ ಏನನ್ನೂ ಹೇಳದಂತೆ ಎಚ್ಚರವಹಿಸಿದಳು.
”ಪ್ರಿಯ ಸ್ನೇಹಿತನೆ! ನಿನಗೆ ಸ್ವಾಗತ. ಕೃಷ್ಣನು ಎಷ್ಟು : ದಯಾಮಯಿಯೆಂದರೆ ನಿನ್ನನ್ನು ಮತ್ತೆ ಕಳುಹಿಸಿದ್ದಾನೆ. ಅವನ ವಿರುದ್ಧವಾಗಿ ಮಾತನಾಡಿದ ಸಂದೇಶವನ್ನು ಅವನಿಗೆ ನೀನು ತಲಪಿಸಿದರೂ ಅವನು ಹೀಗೆ ಮಾಡಿದ್ದಾನೆ. ಸ್ನೇಹಿತನೇ ನೀನೇ ಯಾಕೆ ಮತ್ತೆ ನನ್ನನ್ನು ಕರೆದೊಯ್ಯಲು ಬಂದಿದ್ದೀಯೆಂದರೆ ಕೃಷ್ಣನು ಇಲ್ಲಿಗೆ ಬರಲಾರ. ಮಥುರೆಯಲ್ಲಿ ಹೊಸ ಗೆಳತಿಯರು ಅವನ ಸುತ್ತುಗಟ್ಟಿದ್ದಾರೆ. ಆದರೆ ನೀನು ಇಷ್ಟು ಪುಟ್ಟ ಪ್ರಾಣಿ. ನನ್ನನ್ನು ನೀನು ಅಲ್ಲಿಗೆ ಹೇಗೆ ಕರೆದುಕೊಂಡು ಹೋಗುತ್ತೀಯಾ?”
ಕೃಷ್ಣನ ಯೋಚನೆಯಲ್ಲಿ ಹುಚ್ಚು ಹಿಡಿದವಳಂತೆ ಶ್ರೀಮತಿ ರಾಧಾರಾಣಿಯು ಮಾತನಾಡುತ್ತ ಇದ್ದುದನ್ನು ಹತ್ತಿರವೇ ಇದ್ದ ಉದ್ಧವನ್ನು ಕೇಳಿಸಿಕೊಂಡನು. ಮಹಾಭಾವ ಪ್ರೇಮದ ಹರ್ಷೋನ್ಮಾದದಲ್ಲಿ ಗೋಪಿಯರು ಸದಾ ಕೃಷ್ಣನನ್ನೇ ಕುರಿತು ಹೇಗೆ ಯೋಚಿಸುತ್ತಿದ್ದರು ಎನ್ನುವುದನ್ನು ಕಂಡು ಅವನಿಗೆ ಅತ್ಯಾಶ್ಚರ್ಯವಾಯಿತು. ಕೃಷ್ಣನು ಬರೆದುಕೊಟ್ಟಿದ್ದ ಒಂದು ಸಂದೇಶವನ್ನು ಅವನು ತಂದಿದ್ದನು. ಅವರಿಗೆ ಸಮಾಧಾನ ಮಾಡಲು ಆ ಸಂದೇಶವನ್ನು ಅವರ ಮುಂದಿಡಲು ಬಯಸಿದನು. ಅವನು ಹೀಗೆ ಹೇಳಿದನು:
“…. ಪ್ರಿಯ ಗೋಪಿಯರೇ ನಿಮ್ಮ ಮಾನವ ಜೀವನದಲ್ಲಿನ ಮಹತ್ಕಾರ್ಯಗಳನ್ನೀಗ ಸಾಧಿಸಿದ್ದೀರಿ. ನೀವೆಲ್ಲ ದೇವೋತ್ತಮ ಪರಮ ಪುರುಷನ ಅಸಾಧಾರಣ ಭಕ್ತರು, ಕೃಷ್ಣನೊಡನೆ ನೀವು ಬೆಳೆಸಿಕೊಂಡಿರುವ ಸಂಬಂಧದಲ್ಲಿನ ಮನೋಭಾವವನ್ನು ಸಾಧಿಸುವುದು ಶ್ರೇಷ್ಠ ಋಷಿಗಳಿಗೂ ಸಂತರಿಗೂ ಮಹಾ ಕಠಿಣತರವಾದದ್ದು. ನಾನು ನಿಮ್ಮೆಲ್ಲರ ಕೃಪೆಯಿಂದ ನಿಮ್ಮನ್ನು ಈ ಸ್ಥಿತಿಯಲ್ಲಿ ಕಾಣುವ ಸುಯೋಗ ಪಡೆದಿದ್ದೇನೆ.”
ಉದ್ಧವನು ಕೃಷ್ಣನಿಂದ ಸಂದೇಶವೊಂದನ್ನು ತಂದಿದ್ದೇನೆ ಎಂದು ಹೇಳಿದಾಗ ಗೋಪಿಯರಿಗೆ ತಮ್ಮ ಉನ್ನತ ಸ್ಥಿತಿಯ ವಿಷಯವನ್ನು ಹೇಳುವುದಕ್ಕಿಂತ ಕೃಷ್ಣನ ಸಂದೇಶವನ್ನು ಕೇಳುವುದರಲ್ಲಿ ಹೆಚ್ಚು ಆಸಕ್ತಿಯುಂಟಾಯಿತು. ಆದ್ದರಿಂದ ಉದ್ಧವನು ಕೃಷ್ಣನ ಪತ್ರವನ್ನು ಓದಲೆಂದು ತೆಗೆದನು. ಅವನು, “ಇವು ದೇವೋತ್ತಮ ಪರಮ ಪುರುಷನ ಮಾತುಗಳು’ ಎಂದು ಓದಿದನು.
“ನನ್ನ ಪ್ರಿಯ ಗೋಪಿಯರೇ, ನನ್ನ ಪ್ರೀತಿಯ ಗೆಳತಿಯರೇ, ಎಂದೇ ಆಗಲಿ, ಎಲ್ಲಿಯೇ ಆಗಲಿ, ಯಾವ ಸನ್ನಿವೇಶದಲ್ಲೇ ಆಗಲಿ, ನಾವು ಬೇರೆಯಾಗುವುದು ಸಾಧ್ಯವೇ ಇಲ್ಲ. ಏಕೆಂದರೆ ನಾನು ಸರ್ವವ್ಯಾಪಿ. ನನ್ನಿಂದ ಯಾವುದೂ ಬೇರೆಯಾಗದು. ಪರಿಪೂರ್ಣತೆಯ ದಿವ್ಯಜ್ಞಾನವೂ ನಿಮಗಿನ್ನೂ ಅಗತ್ಯವಿಲ್ಲ. ಏಕೆಂದರೆ ನಿಮ್ಮ ಜೀವನದ ಪ್ರಾರಂಭದಿಂದ ನನ್ನನ್ನು ಪ್ರೀತಿಸುತ್ತಾ ಬಂದಿದ್ದೀರಿ…”
ಉದ್ಧವನು ಕೃಷ್ಣನ ಸಂದೇಶವನ್ನು ಗೋಪಿಯರಿಗೆ ತಿಳಿಸಿದ ಮೇಲೆ ಗೋಪಿಯರು ಮಥುರೆಯಲ್ಲಿ ಕೃಷ್ಣನು ಕಂಸನನ್ನು ವಧಿಸಿದ್ದು ಸೇರಿದಂತೆ ಅವನ ಹಲವಾರು ಚಟುವಟಿಕೆಗಳ ಬಗ್ಗೆ ಕೇಳಿ ತಿಳಿದರು. ಅವರು ಕೃಷ್ಣನು ಎಂದು ವೃಂದಾವನಕ್ಕೆ ಬರಬಹುದೆಂದು ವಿಚಾರಿಸಿಕೊಂಡರು.
ವೃಂದಾವನದಲ್ಲಿ ಸ್ವಲ್ಪಕಾಲವಿದ್ದ ಉದ್ಧವ ಕೃಷ್ಣನಡೆಗೆ ಹಿಂತಿರುಗಲು ಬಯಸಿದ. ಅಲ್ಲಿಂದ ಹೊರಡಲು ನಂದ ಮಹಾರಾಜ ಮತ್ತು ಯಶೋದೆಯರ ಅನುಮತಿಯನ್ನು ಪಡೆದ, ಗೋಪಿಯರ ಅಪ್ಪಣೆಯನ್ನು ಪಡೆದು ಅವರಿಂದ ಬೀಳ್ಕೊಡಲ್ಪಟ್ಟ. ಅನಂತರ ಮಥುರೆಗೆ ಹೊರಡಲು ರಥವೇರಿದ.
ಅವನನ್ನು ಬೀಳ್ಕೊಡಲು ನಂದ ಮಹಾರಾಜ ಯಶೋದೆ ಹಾಗೂ ವೃಂದಾವನದ ಎಲ್ಲ ನಿವಾಸಿಗಳಿಂದ ಆಧರಿಸಿ ಸತ್ಕರಿಸಿಲ್ಪಟ್ಟ ಉದ್ಧವನು ಮಥುರೆಯಲ್ಲಿದ್ದ ತನ್ನ ಒಡೆಯ ಕೃಷ್ಣನಲ್ಲಿಗೆ ಬಂದ. ಕೃಷ್ಣ ಬಲರಾಮರಿಗೆ ತಲೆಬಾಗಿ ಗೌರವ ಪೂರ್ವಕವಾಗಿ ನಮಸ್ಕರಿಸಿ ವೃಂದಾವನ ನಿವಾಸಿಗಳ ಭಕ್ತಿಪೂರ್ವಕ ಜೀವನವನ್ನು ವಿವರಿಸಿದ. ಅನಂತರ ವೃಂದಾವನದ ನಿವಾಸಿಗಳು ವಸುದೇವನಿಗೂ ಉಗ್ರಸೇನನಿಗೂ ಕಳುಹಿಸಿದ ಉಡುಗೊರೆಗಳನ್ನು ಅವರಿಗೆ ತಲಪಿಸಿದ.






Leave a Reply