ಪರಮೋನ್ನತ ಕಲಾವಿದ

ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಸಂಸ್ಥಾಪನಾಚಾರ್ಯ, ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾಸಂಘ

ಫೆಬ್ರವರಿ, 1972ರಲ್ಲಿ ನೀಡಿದ ಉಪನ್ಯಾಸ ಆಕ್ ಲ್ಯಾಂಡ್, ನ್ಯೂಜಿಲೆಂಡ್

ಪರಮೋನ್ನತ ಕಲಾವಿದನನ್ನು ಕುರಿತು ಮಾತನಾಡುವುದು ಒಂದು ಸುಯೋಗ, ವೇದಗಳು ಕೃಷ್ಣನು ಎಷ್ಟು ಉನ್ನತವಾದ ಕಲಾವಿದ ಎಂಬುದನ್ನು ವರ್ಣಿಸಿವೆ: ನ ತಸ್ಯ ಕಾರ್ಯಮ್ ಕರಣಮ್ ಚ ವಿದ್ಯತೇ ನ ತತ್ ಸಮಶ್ಚಾಭ್ಯಧಿಕಶ್ಚ ದೃಶ್ಯತೇ ಎಂದು. ದೇವೋತ್ತಮ ಪರಮಪುರುಷನಿಗಿಂತ ಉತ್ತಮರಾದವರನ್ನಾಗಲೀ, ಅವನಿಗೆ ಸಮನಾದವರನ್ನಾಗಲೀ ಯಾರೂ ಕಾಣಲು ಸಾಧ್ಯವಿಲ್ಲ. ಆತನು ಪರಮೋನ್ನತ ಕಲಾವಿದನಾಗಿದ್ದುಕೊಂಡು ಕೂಡ, ವೈಯಕ್ತಿಕವಾಗಿ ಆತ ಏನನ್ನೂ ಮಾಡಬೇಕಿಲ್ಲ.

ಈ ಜಗತ್ತಿನಲ್ಲಿ ನಾವೆಲ್ಲರೂ ನಮಗಿಂತ ಕಡಮೆಯ, ನಮ್ಮ ಸಮಾನರಾದ ಇಲ್ಲವೇ ನಮಗಿಂತ ಉನ್ನತರಾದ ಯಾರನ್ನಾದರೂ ಕಂಡೇ ಇದ್ದೇವೆ. ಅದು ನಮ್ಮ ಅನುಭವ. ನೀವು ಅದೆಷ್ಟೇ ಉನ್ನತರಾಗಿರಿ, ನಿಮಗೆ ಸಮಾನರಾದ ಅಥವಾ ನಿಮಗಿಂತ ಉನ್ನತರಾದ ಯಾರಾದರೂ ಇದ್ದೇ ಇರುವುದನ್ನು ಕಾಣುವಿರಿ. ಆದರೆ, ದೇವೋತ್ತಮ ಪರಮಪುರುಷನನ್ನು ಪರಿಗಣಿಸಿದಾಗ, ಮಹೋನ್ನತ ಋಷಿಗಳು ಅಧ್ಯಯನ ಮತ್ತು ಪ್ರಯೋಗಗಳಿಂದ, ಯಾರೂ ಅವನಿಗಿಂತ ಉನ್ನತರಾಗಲೀ ಸಮಾನರಾಗಲೀ ಇಲ್ಲವೆಂದು ನಿರ್ಧರಿಸಿರುವರು.

ಭಗವಂತನು ಅದೆಷ್ಟು ಮಹೋನ್ನತನೆಂದರೆ, ಆತನು ಏನನ್ನೂ ಮಾಡಬೇಕಿಲ್ಲ. ಆತನು ಮಾಡಲೇಬೇಕೆಂದಿರುವ ಕರ್ತವ್ಯಗಳಾವುವೂ ಇಲ್ಲ (ನ ತಸ್ಯ ಕಾರ್ಯಮ್ ಕರಣಮ್ ಚ ವಿದ್ಯತೇ). ಯಾಕೆ? ಪರಾಸ್ಯ ಶಕ್ತಿ‌ರ್‌ ವಿವಿಧೈವ ಶ್ರೂಯತೇ – ಅವನ ವಿವಿಧ ಶಕ್ತಿಗಳು ಆತನ ಬಯಕೆಯನ್ನರಿತು ತಾವೇ ತಾವಾಗಿ ಕಾರ್ಯನಿರ್ವಹಿಸುತ್ತವೆ. (ಸ್ವಾಭಾವಿಕಿ ಜ್ಞಾನಬಲ ಕ್ರಿಯಾಚ).

ನೀವೊಬ್ಬ ಕಲಾವಿದೆ ಎಂದಿಟ್ಟುಕೊಳ್ಳಿ. ಸುಂದರವಾದ ಗುಲಾಬಿಯೊಂದನ್ನು ನೀವು ಚಿತ್ರಿಸಬೇಕಾದರೆ, ಮೊದಲು ಬ್ರಶ್ ಅನ್ನು ಎತ್ತಿಕೊಳ್ಳಬೇಕು. ಬಣ್ಣಗಳನ್ನು ಮಿಶ್ರಮಾಡಬೇಕು. ಚಿತ್ರವು ಸುಂದರವಾಗಿ ಮೂಡುವಂತೆ ಮಿದುಳನ್ನು ಪಳಗಿಸಬೇಕು. ಆದರೆ ಹೂದೋಟದಲ್ಲಿ ನೀವು ಒಂದಲ್ಲ ಸಾವಿರಾರು ಗುಲಾಬಿಗಳು ಅರಳಿರುವುದನ್ನು ಕಾಣುವಿರಿ. ಅವೆಲ್ಲವೂ ಪ್ರಕೃತಿಯಿಂದ ಕಲಾತ್ಮಕವಾಗಿ ‘ಚಿತ್ರಿತ’ ಗೊಂಡವಾಗಿವೆ.

ಆದರೆ ನಾವು ವಿಷಯದ ಒಳಗೆ ಪ್ರವೇಶಿಸಬೇಕು. ಪ್ರಕೃತಿ ಎಂದರೆ ಏನು? ಪ್ರಕೃತಿಯೊಂದು ಕ್ರಿಯಾಶೀಲ ಸಾಧನ ಅಷ್ಟೇ. ಅದೊಂದು ಶಕ್ತಿ.

ಯಾವುದೇ ಶಕ್ತಿಯು ಪ್ರವೃತ್ತವಾಗದೆ, ಹೇಗೆ ಗುಲಾಬಿಯು ಮೊಗ್ಗಿನಿಂದ ಹೂವಾಗಿ ಅರಳಲು ಸಾಧ್ಯ? ಅಲ್ಲೊಂದು ಶಕ್ತಿವರ್ತಿಸುತ್ತಿರಲಿಕ್ಕೇ ಬೇಕು. ಮತ್ತು ಆ ಶಕ್ತಿಯು ಕೃಷ್ಣನ ಶಕ್ತಿಯಾಗಿರುವುದು. ಆದರೆ ಅದು ಎಷ್ಟು ಸೂಕ್ಷ್ಮವಾಗಿ, ನಿರಾಯಾಸವಾಗಿ ಕಾರ್ಯನಿರ್ವಹಿಸುತ್ತಿದೆಯೆಂದರೆ, ಅದು ಹೇಗೆ ವರ್ತಿಸುತ್ತಿದೆ ಎಂಬುದೇ ನಮ್ಮ ಅರಿವಿಗೆ ನಿಲುಕುವುದಿಲ್ಲ.

ಭೌತಿಕ ಶಕ್ತಿಗಳು ಯಾಂತ್ರಿಕವಾಗಿ ಕೆಲಸ ಮಾಡುತ್ತಿರುವಂತೆ ತೋರುತ್ತದಾದರೂ, ಅವುಗಳ ಹಿಂದೆ ಮಿದುಳೊಂದಿದೆ. ನೀವೊಂದು ಚಿತ್ರ ಬಿಡಿಸುವಾಗ, ಎಲ್ಲರೂ ನೀವು ಅದರಲ್ಲಿ ತೊಡಗಿರುವುದನ್ನು ನೋಡಬಹುದು. ಹಾಗೆಯೇ, ನಿಜವಾದ ಗುಲಾಬಿಯ ‘ಚಿತ್ರಣ’ವು ಹಲವಾರು ಶಕ್ತಿಗಳಿಂದ ಮೂಡಿಬಂದುದಾಗಿದೆ.

ಗುಲಾಬಿಯು ತನ್ನಿಂತಾನೆ ಹುಟ್ಟಿಬಂದಿರುವುದೆಂದು ಯೋಚಿಸಬೇಡಿ. ಇಲ್ಲ ಯಾವುದೂ ಯಾಂತ್ರಿಕವಾಗಿ ಹೊರಹೊಮ್ಮಲಾರದು. ಗುಲಾಬಿಯು ದೇವೋತ್ತಮ ಪರಮಪುರುಷನ ಶಕ್ತಿಗಳಿಂದ ಸೃಷ್ಟಿಯಾಗಿದೆ. ಆದರೆ, ಈ ಶಕ್ತಿಗಳು ಅದೆಷ್ಟು ಸೂಕ್ಷ್ಮ ಮತ್ತು ಕಲಾತ್ಮಕವಾಗಿವೆಯೆಂದರೆ, ಸುಂದರವಾದ ಹೂವೊಂದು ಇರುಳು ಕಳೆಯುವುದರೊಳಗೆ ಮೂಡಿ ಬರುವುದು.

ಶ್ರೀಕೃಷ್ಣ ಪರಮೋನ್ನತ ಕಲಾವಿದ. ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ವಿಜ್ಞಾನಿಯು ಕೇವಲ ಒಂದು ಬಟನ್ ಒತ್ತುವುದರಿಂದ ಯಂತ್ರವು ನಿಖರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದು. ವಿಮಾನಚಾಲಕನು ಕೇವಲ ಒಂದು ಬಟನ್ ಅನ್ನು ಎಳೆಯುವುದರಿಂದ ಚಿಕ್ಕ ಪಟ್ಟಣದಷ್ಟು ದೊಡ್ಡದಾದ ವಿಮಾನವು ಆಕಾಶದಲ್ಲಿ ಹಾರಾಡುವುದು.

ಈ ಜಗತ್ತಿನ ಸಾಮಾನ್ಯ ಮಾನವರಿಗೆ ಕೇವಲ ಬಟನ್ ಅದುಮುವುದರಿಂದ ಇಷ್ಟು ಅದ್ಭುತವಾಗಿ ಕೆಲಸ ಮಾಡಲು ಸಾಧ್ಯವಾಗುವುದಾದರೆ, ಭಗವಂತನ ಕಾರ್ಯ ಸಾಮರ್ಥ್ಯವು ಅದೆಷ್ಟು ಮಹೋನ್ನತವಾಗಿರಬೇಡ! ಸಾಧಾರಣ ಕಲಾವಿದ ಅಥವಾ ವಿಜ್ಞಾನಿಯ ಮೆದುಳಿಗಿಂತ ಆತನ ಮೆದುಳು ಅದೆಷ್ಟು ಪಕ್ವವಾದುದಾಗಿರಬೇಡ! ಕೇವಲ ಆತನು ಇಚ್ಛಿಸುವನು “ಸೃಷ್ಟಿಯಾಗಲಿ!” – ಎಂದು. ಪ್ರತಿಯೊಂದೂ ತತ್‌ಕ್ಷಣ ಅಭಿವ್ಯಕ್ತಗೊಳ್ಳುವವು. ಆದ್ದರಿಂದ ಕೃಷ್ಣನೊಬ್ಬ ಪರಮೋನ್ನತ ಕಲಾವಿದ ಎನಿಸಿರುವನು.

ಭಗವಾನ್‌ ಶ್ರೀಕೃಷ್ಣನ ಕಲಾತ್ಮಕ ಸಾಮರ್ಥ್ಯಕ್ಕೆ ಸೀಮೆಯಿಲ್ಲ. ಏಕೆಂದರೆ ಸ್ವತಃ ಕೃಷ್ಣನೇ ಎಲ್ಲ ಸೃಷ್ಟಿಯ (ಬೀಜಮ್ ಮಾಮ್ ಸರ್ವಭೂತಾನಾಮ್) ಮೂಲ ಬೀಜವಾಗಿರುವನು. ನೀವೆಲ್ಲರೂ ಅರಳೀಮರವನ್ನು ನೋಡಿರುವಿರಿ. ಅದೊಂದು ಚಿಕ್ಕ ಬೀಜದಿಂದ ಮೂಡಿ ಬಂದಿರುವುದು. ಈ ಚಿಕ್ಕ ಬೀಜಕ್ಕೆ ಅದೆಷ್ಟು ಶಕ್ತಿಯಿರುವುದೆಂದರೆ, ಫಲವತ್ತಾದ ನೆಲದಲ್ಲಿ ಬಿತ್ತಿ ನೀರೆರೆದರೆ ಮುಂದೊಂದು ದಿನ ಅದು ದೊಡ್ಡ ಅರಳೀಮರವಾಗಿ ಬೆಳೆದು ನಿಲ್ಲುವುದು.

ಹಾಗಾದರೆ, ಆ ಚಿಕ್ಕ ಬೀಜದಲ್ಲಿ ಇರಬಹುದಾದ ಕಲಾತ್ಮಕ ಹಾಗೂ ವೈಜ್ಞಾನಿಕ ಸಂಯೋಜನೆಗಳು ಯಾವುವು? ಯಾವುದು ಅದನ್ನು ಚಿಕ್ಕ ಬೀಜದಿಂದ ದೊಡ್ಡ ಮರವಾಗಿಸುವುದು? ಅಷ್ಟಲ್ಲದೆ, ಆ ಅರಳೀಮರದಲ್ಲಿ ಮತ್ತಷ್ಟು ಸಾವಿರ ಹಣ್ಣುಗಳು, ಪ್ರತಿ ಹಣ್ಣಿನ ಒಳಗೂ ಸಾವಿರಾರು ಬೀಜಗಳು, ಪ್ರತಿ ಬೀಜದಲ್ಲೂ ಮತ್ತೊಂದು ಮರವಾಗಿ ಬೆಳೆಯುವ ಸಾಮರ್ಥ್ಯವಿರುವುದು. ಈ ಬಗೆಯಲ್ಲಿ ಸೃಷ್ಟಿ ಮಾಡಬಲ್ಲ ವಿಜ್ಞಾನಿ ಯಾರಿದ್ದಾರೆ? ಈ ಲೌಕಿಕ ಜಗತ್ತಿನಲ್ಲಿ ಅರಳಿ ಮರದಂಥ ಮತ್ತೊಂದನ್ನು ಸೃಷ್ಟಿಸಬಲ್ಲ ಕಲಾವಿದ ಯಾರಿದ್ದಾರೆ? ಈ ಚಿಂತನೆಗಳನ್ನು ಮಾಡಬೇಕು.

ವೇದಾಂತ ಸೂತ್ರದ ಮೊದಲ ಘೋಷಣೆಯ ಅಥಾತೋ ಬ್ರಹ್ಮ ಜಿಜ್ಞಾಸಾ ಎಂದು – ಮಾನವ ಶರೀರ ಹೊಂದಿದ ಜೀವಿಯು ಪರಮಾರ್ಥದ ಜಿಜ್ಞಾಸೆ ನಡೆಸಬೇಕು” ಎಂದು ಇದರರ್ಥ. ಆದ್ದರಿಂದ ಎಲ್ಲರೂ ಈ ಪ್ರಶ್ನೆಗಳ ಬಗ್ಗೆ ಯೋಚನೆ ಮಾಡಬೇಕು. ನೀವು ತನ್ನಿಂದ ತಾನೆ ಅರಳೀಮರವಾಗಿ ಬೆಳೆಯಬಲ್ಲ ಯಂತ್ರವನ್ನು ತಯಾರಿಸಲಾರಿರಿ.

ನಿಮಗೆ ಅನಿಸುವುದಿಲ್ಲವೇನು, ಈ ಪ್ರಕೃತಿಯ ಹಿಂದೆ ಕಲಾತ್ಮಕ – ವೈಜ್ಞಾನಿಕ ಮಿದುಳೊಂದು ಇದೆ ಎಂದು? ನೀವು ಸರಳವಾಗಿ “ಪ್ರಕೃತಿಯು ಕಾರ್ಯಪ್ರವೃತ್ತವಾಗಿದೆ” ಎಂದು ಹೇಳಿಬಿಟ್ಟರೆ, ಅದು ಸೂಕ್ತ ವಿವರಣೆಯಾಗುವುದಿಲ್ಲ.

ವೇದಾಂತ ಸೂತ್ರದ ಎರಡನೆಯ ಘೋಷಣೆ – ಜನ್ಮಾದ್ಯಸ್ಯಯತಃ – “ಯಾರಿಂದ ಎಲ್ಲವೂ ಉತ್ಪನ್ನಗೊಂಡಿದೆಯೋ ಅವನು ಪರಮಸತ್ಯ ಅಥವಾ ಪರಬ್ರಹ್ಮನು. ನಾವು ಚಿಕ್ಕ ಪುಟ್ಟ ವಸ್ತುಗಳಿಂದ ದೊಡ್ಡದರತ್ತ ನಮ್ಮ ದೃಷ್ಟಿಯನ್ನು ಹಿಗ್ಗಿಸಿಕೊಳ್ಳಬೇಕು. ಚಿಕ್ಕದೊಂದು ಕೃತಕ ಉಪಗ್ರಹ ಆಕಾಶದಲ್ಲಿ ಸುತ್ತುವುದನ್ನು ಕಂಡು ನಾವು ಪುಳಕಗೊಳ್ಳುತ್ತೇವೆ.

ಅದು ಚಂದ್ರ ಅಥವಾ ಯಾವುದೇ ಗ್ರಹದ ಸುತ್ತ ಸುತ್ತುತ್ತದೆ, ಮತ್ತು ನಾವು ಎಲ್ಲ ಮೆಚ್ಚುಗೆಯನ್ನು ವಿಜ್ಞಾನಿಗಳ ಮೇಲೆ ಸುರಿಸುತ್ತೇವೆ. ಈ ವಿಜ್ಞಾನಿಗಳು ದೇವರು ಎಲ್ಲಿದ್ದಾನೆ? ವಿಜ್ಞಾನವೇ ಸರ್ವಸ್ವವಾಗಿದೆ” ಎಂದು ಸವಾಲೆಸೆಯುತ್ತಾರೆ.

ನೀವು ಬುದ್ಧಿವಂತರಾಗಿದ್ದರೆ, ಕೃತಕ ಉಪಗ್ರಹವನ್ನು ಕೋಟ್ಯಂತರ ಗ್ರಹ- ನಕ್ಷತ್ರಗಳೊಡನೆ ಹೋಲಿಸಿ ನೋಡುತ್ತೀರಿ. ಇದೊಂದು ಚಿಕ್ಕ ಗ್ರಹ. ಭೂಮಿಯ ಮೇಲೆಯೇ ಇಷ್ಟೊಂದು ಸಾಗರಗಳು, ಪರ್ವತಗಳು, ಗಗನ ಚುಂಬಿಗಳು ಇವೆ. ಆದರೆ ನೀವು ಈ ಗ್ರಹದಿಂದ ಹಲವು ಮೈಲಿಗಳ ದೂರ ಸಾಗಿದರೆ, ಇದೊಂದು ಚಿಕ್ಕ ಚುಕ್ಕೆಯಂತೆ ಕಾಣುತ್ತದೆಯಷ್ಟೆ.

ಆಕಾಶದ ಒಂದು ಚುಕ್ಕಿಯಂತೆ ಅದು ತೋರುವುದು. ಹತ್ತಿಯ ಉಂಡೆಯಂತೆ ಆಕಾಶದಲ್ಲಿ ಹಲವಾರು ಗ್ರಹಗಳು ತೇಲುತ್ತಿರುವವು. ಕೃತಕ ಉಪಗ್ರಹ ತಯಾರಿಸಿದ ವಿಜ್ಞಾನಿಗಳಿಗೆ ನಾವು ಇಷ್ಟೊಂದು ಮೆಚ್ಚುಗೆ ನೀಡುವುದಾದರೆ, ಈ ಇಡಿಯ ಬ್ರಹ್ಮಾಂಡ ಸಂರಚನೆ ಮಾಡಿದ ವ್ಯಕ್ತಿಗೆ ಅದೆಷ್ಟು ಹೆಚ್ಚಿನ ಮೆಚ್ಚುಗೆ ವ್ಯಕ್ತಪಡಿಸುವುದು ಬೇಡ? ಇದು ಕೃಷ್ಣಪ್ರಜ್ಞೆ- ಪರಮೋನ್ನತ ಕಲಾವಿದ, ಪರಮೋನ್ನತ ವಿಜ್ಞಾನಿಯನ್ನು ಸುತ್ತಿಸುವುದು.

ನಾವು ಬೇಕಿದ್ದರೆ ಹಲವು ಕಲಾವಿದರನ್ನು ಹೊಗಳಬಹುದು. ಆದರೆ, ನಾವು ಪರಮೋನ್ನತ ಕಲಾವಿದ ಶ್ರೀಕೃಷ್ಣನನ್ನು ಹೊಗಳದಿದ್ದರೆ ನಮ್ಮ ಜೀವನ ವ್ಯರ್ಥವಾಗುವುದು. ಈ ಹೊಗಳಿಕೆಯನ್ನು ನಾವು ಬ್ರಹ್ಮ ಸಂಹಿತೆಯಲ್ಲಿ ನೋಡಬಹುದು. ಗೋವಿಂದ – ಶ್ರೀಕೃಷ್ಣನ ಸ್ತುತಿಯಲ್ಲಿ ಬ್ರಹ್ಮನು ಹಾಡುವನು:

ಯಸ್ಯ ಪ್ರಭಾ ಪ್ರಭವತೋ ಜಗದಂಡ ಕೋಟಿ

ಕೋಟಿಷ್ವ ಶೇಷ ವಸುಧಾದಿ ವಿಭೂತಿ ಭಿನ್ನಮ್

ತದ್ ಬ್ರಹ್ಮ ನಿಷ್ಕಲಮ್ ಅನಂತಮ್ ಅಶೇಷಭೂತಮ್

ಗೋವಿಂದಮ್ ಆದಿ ಪುರುಷಮ್ ತಮ್ ಅಹಮ್ ಭಜಾಮಿ || (ಬ್ರ.ಸಂ. 5:40)

ನಾವೀಗ ಗ್ರಹ ವ್ಯವಸ್ಥೆಯನ್ನು ನಮ್ಮ ವೈಜ್ಞಾನಿಕ ಪದ್ಧತಿಯ ಮೂಲಕ ಅರಿಯಲು ಯತ್ನಿಸುತ್ತಿರುವೆವು. ಆದರೆ ನಾವಿನ್ನೂ ನಮ್ಮ ಅತ್ಯಂತ ಸಮೀಪದ ಗ್ರಹ – ಚಂದ್ರನ ಅಧ್ಯಯನವನ್ನು ಕೂಡ ಮಾಡಲಾಗಿಲ್ಲ. ಆದರೆ ಬ್ರಹ್ಮ ಸಂಹಿತೆಯಿಂದ ನಾವು ಈ ಜ್ಞಾನವನ್ನು ಪಡೆಯಬಹುದು. ಯಸ್ಯ ಪ್ರಭಾ ಪ್ರಭವತೋ ಜಗದಂಡ ಕೋಟಿ – ಭಗವಾನ್ ಶ್ರೀಕೃಷ್ಣನ ಶರೀರದಿಂದ ಹೊರಸೂಸುವ ಪ್ರಖರ ಪ್ರಕಾಶದಿಂದ ಬ್ರಹ್ಮಾಂಡದ ಅಸಂಖ್ಯಾತ ಲೋಕಗಳು ಸೃಷ್ಟಿಗೊಂಡಿವೆ.

ನಾವು ಒಂದು ಲೋಕವನ್ನೂ ಕೂಡ ಅಧ್ಯಯನ ಮಾಡಲಾಗಿಲ್ಲ. ಆದರೆ ಬ್ರಹ್ಮ ಸಂಹಿತೆಯು ನಮಗೆ ತಿಳಿಸುವುದೇನೆಂದರೆ, ಸೃಷ್ಟಿಯಲ್ಲಿ ಅಸಂಖ್ಯಾತ ಬ್ರಹ್ಮಾಂಡಗಳಿವೆ. ಪ್ರತಿಯೊಂದು ಬ್ರಹ್ಮಾಂಡವೂ ಅಗಣಿತ ಗ್ರಹಗಳನ್ನು ಹೊಂದಿದೆ ಎಂದು. ಸೃಷ್ಟಿಯಲ್ಲಿ ಅಸಂಖ್ಯಾತ ಬ್ರಹ್ಮಾಂಡಗಳು, ಅಗಣಿತ ಸೂರ್ಯರು, ಅಪರಿಮಿತ ಚಂದ್ರರು, ಮತ್ತಿತರ ಗ್ರಹಗಳು ಇರುವವು.

ಇವೆಲ್ಲವೂ ಕೃಷ್ಣನ ಶರೀರದ ‘ಬ್ರಹ್ಮಜ್ಯೋತಿ’ ಎಂದು ಕರೆಯಲ್ಪಡುವ ತೇಜಸ್ಸಿನಿಂದ ಉ೦ಟಾದುದು. ಮಾನಸಿಕ ಗ್ರಹಿಕೆಯ ಮೂಲಕ ಪರಮಸತ್ಯವನ್ನು ಸಮೀಪಿಸಲು ಯತ್ನಿಸುವ ಜ್ಞಾನಿಗಳು, ತಮ್ಮ ಪುಟ್ಟ ಮಿದುಳಿನ ಸಾಮರ್ಥ್ಯದಂತೆ ಈ ಬ್ರಹ್ಮಜ್ಯೋತಿಯವರೆಗೂ ತಲಪಲು ಸಾಧ್ಯವಾಗಿದೆ.

ಆದರೆ ಈ ಬ್ರಹ್ಮಜ್ಯೋತಿಯು ಕೇವಲ ಕೃಷ್ಣನ ದೇಹದ ತೇಜಸ್ಸು. ಇದಕ್ಕೆ ಉತ್ತಮ ಉದಾಹರಣೆ ಸೂರ್ಯ ಕಿರಣಗಳು. ಸೂರ್ಯ ಸ್ಥಳೀಯವಾಗಿ ಒಂದೆಡೆ ಇರುವನು. ಅವನ ಕಿರಣಗಳು ಜಗತ್ತಿನೆಲ್ಲೆಡೆ ವ್ಯಾಪಿಸಿರುವವು. ಚಂದ್ರನು ಸೂರ್ಯ ರಶ್ಮಿಯನ್ನು ಪ್ರತಿಫಲಿಸುವಂತೆ, ಸೂರ್ಯ ಕೂಡ ಬ್ರಹ್ಮಜ್ಯೋತಿಯನ್ನು ಪ್ರತಿಫಲಿಸುವನು. ಈ ಬ್ರಹ್ಮಜ್ಯೋತಿಯು ಭಗವಾನ್ ಶ್ರೀಕೃಷ್ಣನ ದೇಹದ ಪ್ರಖರ ತೇಜಸ್ಸು ಆಗಿರುವುದು.

ಆದ್ದರಿಂದ ಕೃಷ್ಣನನ್ನು ಅರಿಯುವುದೇ ಮಹೋನ್ನತ ಕಲೆಯಾಗಿದೆ. ಅದುವೇ ಮಹೋನ್ನತ ಕಲೆ. ನಾವು ನಿಜವಾಗಿಯೂ ಕಲಾವಿದನಾಗಲು ಬಯಸುವುದಾದರೆ, ಮೊದಲು ನಾವು ಪರಮೋನ್ನತ ಕಲಾವಿದನಾದ ಶ್ರೀಕೃಷ್ಣನನ್ನು ಅರಿಯಲು, ಅಥವಾ ಆತನ ಆಪ್ತಸಂಗದಲ್ಲಿರಲು ಯತ್ನಿಸಬೇಕು. ನಮ್ಮ ಈ ಸಂಘದ ಸದಸ್ಯರು ಪ್ರತಿಯೊಂದರಲ್ಲೂ ಕೃಷ್ಣನ ಕಲಾತ್ಮಕ ಗ್ರಹಿಕೆಯನ್ನು ಕಾಣುವಂತೆ ತರಬೇತಿ ಪಡೆದಿದ್ದಾರೆ. ಅದು ಕೃಷ್ಣಪ್ರಜ್ಞೆ – ಪ್ರತಿಯೊಂದರಲ್ಲಿಯೂ ಕೃಷ್ಣನ ಕಲಾತ್ಮಕತೆಯನ್ನು ಕಾಣುವುದು.

ಭಗವದ್ಗೀತೆಯಲ್ಲಿ (10.8) ಶ್ರೀಕೃಷ್ಣನು ಹೇಳಿರುವನು; ಅಹಮ್ ಸರ್ವಸ್ಯ ಪ್ರಭವೋ ಮತ್ತಃ ಸರ್ವಮ್ ಪ್ರವರ್ತತೇ – “ನೀನು ಕಾಣುತ್ತಿರುವುದೆಲ್ಲವೂ ನನ್ನಿಂದ ಹೊಮ್ಮಿದುದೇ ಆಗಿದೆ, ಎಲ್ಲವೂ ನನ್ನ ಶಕ್ತಿಯಿಂದಲೇ ಸೃಷ್ಟಿಗೊಂಡವಾಗಿವೆ.” ಕೃಷ್ಣನೇ ಪ್ರತಿಯೊಂದರ ಮೂಲವಾಗಿರುವನು ಎಂಬುದನ್ನು ಎಲ್ಲರೂ ಅರಿತಿರಬೇಕು. ಬ್ರಹ್ಮನು ಬ್ರಹ್ಮಸಂಹಿತೆಯಲ್ಲಿ (5.1) ಈಶ್ವರಃ ಪರಮಃ ಕೃಷ್ಣಃ ಎನ್ನುವ ಮೂಲಕ (ಕೃಷ್ಣನೇ ಪರಮ ನಿಯಂತ್ರಕ) ಅದನ್ನು ದೃಢಪಡಿಸಿರುವನು.

ಈ ಲೌಕಿಕ ಜಗತ್ತಿನಲ್ಲಿ ನಾವು ಹಲವಾರು ನಿಯಂತ್ರಕರ ಕೆಳಗೆ ಕೆಲಸ ಅನುಭವಿಸಿರುವೆವು. ನಾವು ಪ್ರತಿಯೊಬ್ಬರೂ ನಿಯಂತ್ರಕರೇ. ಆದರೆ, ನಮ್ಮ ಮೇಲೆ ಮತ್ತೊಬ್ಬ ನಿಯಂತ್ರಕನಿರುವನು. ಅವನ ಮೇಲೆ ಮತ್ತೊಬ್ಬನಿರುವನು. ಅದು ಹಾಗೆ ಮುಂದುವರಿಯುವುದು. ನೀವು ಒಬ್ಬರ ಅನಂತರ ಮತ್ತೊಬ್ಬ ನಿಯಂತ್ರಕನನ್ನು ಹುಡುಕುತ್ತ ಹೋಗಬಹುದು.

ಯಾವಾಗ ನೀವು ಪರಮ ನಿಯಂತ್ರಕನನ್ನು – ಯಾರು ಯಾರಿಂದಲೂ ನಿಯಂತ್ರಿತನಲ್ಲವೋ, ಆದರೆ ಪ್ರತಿಯೊಬ್ಬರನ್ನೂ ನಿಯಂತ್ರಿಸುವನೋ, ಅಂತಹ ವ್ಯಕ್ತಿಯನ್ನು ಕಾಣುವಿರೋ, ಆಗ ನೀವು ಭಗವಂತನನ್ನು ತಲಪಿದಿರೆಂದರ್ಥ. ಇದು ನಮ್ಮ ಭಗವಂತನ ನಿರ್ವಚನೆ: ‘ಪರಮ ನಿಯಂತ್ರಕ’ – ಎನ್ನುವುದು.

ಇಂದು ಬಹಳಷ್ಟು ಜನ ‘ದೇವರು’ ಗಳನ್ನು ಕಾಣುವುದು ಒಂದು ಅಗ್ಗದ ವ್ಯವಹಾರವಾಗಿಬಿಟ್ಟಿದೆ. ಆದರೆ ನೀವು ಅಂತಹ ವ್ಯಕ್ತಿಯು ನಿಜಕ್ಕೂ ದೇವರೇ ಎಂಬುದನ್ನು ಪರೀಕ್ಷಿಸಬಹುದು. ಅವನು ಯಾರಿಂದಲಾದರೂ ನಿಯಂತ್ರಿಸಲ್ಪಡುತ್ತಿದ್ದರೆ, ಆತನು ಖಂಡಿತ ದೇವರಲ್ಲ, ಆತನೇನಾದರೂ ಪರಮ ನಿಯಂತ್ರಕನಾಗಿದ್ದಲ್ಲಿ ನೀವು ಅವನನ್ನು ದೇವರೆಂದು ಒಪ್ಪಿಕೊಳ್ಳಬಹುದು.

ಭಗವಂತನ ಮತ್ತೊಂದು ಗುಣ ಅವನು ಸದಾ ಆನಂದಪೂರ್ಣ (ಆನಂದಮಯೋಽಭ್ಯಾಸಾತ್) ಎನ್ನುವುದು ಸ್ವಭಾವತಃ ಪರಬ್ರಹ್ಮನಾದ ಭಗವ೦ತನು ಆನಂದಮಯನು, ಆನಂದಪೂರ್ಣನು. ನೀವು ಕಲಾವಿದರಾಗಿದ್ದರೆ, ನೀವು ಆನಂದ ಪಡೆಯಲೋಸುಗ ಚಿತ್ರಕಲೆಯಲ್ಲಿ ತೊಡಗುವಿರಿ. ಚಿತ್ರವೊಂದನ್ನು ಬರೆಯುವ ಮೂಲಕ ನೀವು ಒಂದು ರಸಾನುಭವ ಪಡೆಯಿರಿ. ಇಲ್ಲವಾದರೆ, ನೀವೇಕೆ ಅಷ್ಟು ಕಷ್ಟಪಡುವಿರಿ? ಚಿತ್ರಕಲೆಯಲ್ಲಿ ಏನಾದರೊಂದು ಆನಂದ ಇರಲೇಬೇಕು.

ಆದ್ದರಿಂದ, ಕೃಷ್ಣನು ‘ರಸೋ ವೈಸಃ’ – ಎಲ್ಲ ಆನಂದಮಯ ರಸಗಳ ಗಣಿಯಾಗಿರುವನು. ಅವನು ಸಚ್ಚಿದಾನಂದ ವಿಗ್ರಹ – ನಿತ್ಯತೆ, ಜ್ಞಾನ ಹಾಗೂ ಆನಂದಗಳ ವಿಗ್ರಹವಾಗಿರುವನು. ಅವನ ಆನಂದ ಶಕ್ತಿಯೋ ರಾಧಾರಾಣಿ. ನೀವು ರಾಧಾ- ಕೃಷ್ಣನ ಚಿತ್ರಗಳನ್ನು ನೋಡಿರುವಿರಿ. ರಾಧಾರಾಣಿಯು ಕೃಷ್ಣನ ಆನಂದ ಶಕ್ತಿಯಾಗಿರುವಳು. ನಾನು ಈಗಾಗಲೇ ಕೃಷ್ಣನು ಅಸಂಖ್ಯಾತ ಶಕ್ತಿಗಳನ್ನು ಹೊಂದಿರುವನು ಎಂದು ವಿವರಿಸಿರುವನು. ರಾಧಾರಾಣಿಯು ಈ ಶಕ್ತಿಗಳಲ್ಲಿ ಒಂದಾದ ಆನಂದ ಶಕ್ತಿಯಾಗಿರುವಳು.

ಯಾರು ಭಗವಂತನೆಡೆಗೆ ಪ್ರೇಮವನ್ನು ಹೊಂದಿರುವರೋ ಅವರು ಪ್ರತಿಕ್ಷಣವೂ ಕೃಷ್ಣನ ಕಲೆಗಾರಿಕೆಯನ್ನು ಎಲ್ಲೆಡೆ ನೋಡುತ್ತ ನಿತ್ಯಾನಂದದಲ್ಲಿ ಮುಳುಗಿರುವರು. ಅದು ಭಕ್ತನ ಸ್ಥಾನ. ಆದ್ದರಿಂದ ನಾನು ನಿಮಗೆಲ್ಲರಿಗೂ ಭಕ್ತರಾಗುವಂತೆ, ಕೃಷ್ಣಪ್ರಜ್ಞಾವಂತರಾಗುವಂತೆ ಕೋರುತ್ತೇವೆ. ಇದರಿಂದ ನೀವು ಕೂಡ ಸರ್ವತ್ರ ಶ್ರೀಕೃಷ್ಣನ ಕಲೆಗಾರಿಕೆಯನ್ನು ಕಾಣಬಹುದು.

ಎಲ್ಲೆಡೆ ಕೃಷ್ಣನನ್ನು ಕಾಣುವುದೇನೂ ಕಷ್ಟವಿಲ್ಲ. ಉದಾ: ನೀವು ಬಾಯಾರಿರುವಾಗ ನೀರು ಕುಡಿಯುತ್ತೀರಿ. ಇದರಿಂದ ನಿಮಗೆ ಅಪೂರ್ವ ಸಮಾಧಾನ ಒದಗುವುದು. ಈ ಸಮಾಧಾನವೇ ‘ಕೃಷ್ಣ’

ಕೃಷ್ಣನು ಭಗವದ್ಗೀತೆಯಲ್ಲಿ (7.8) ರಸೋಽಹಮ್ ಅಪ್ಸು ಕೌಂತೇಯ – ” ನಾನು ನೀರಿನ ರುಚಿಯಾಗಿದ್ದೇನೆ.” ಎಂದಿರುವನು. ಯಾರು ಕೃಷ್ಣನನ್ನು ಸಂಪೂರ್ಣವಾಗಿ ಸುತ್ತಿಸಲಾರರೋ, ಅಂತಹ ಸಾಧಾರಣ ವ್ಯಕ್ತಿಗಳಿಗೆ ತಾನು ನೀರಿನಲ್ಲಿನ ರುಚಿ ಎಂದು ಕೃಷ್ಣನು ಬೋಧಿಸುತ್ತಾನೆ. ನೀವು ಸರಳವಾಗಿ ಕೃಷ್ಣನು ಈ ರುಚಿ ಎಂದು ಅರ್ಥಮಾಡಿಕೊಂಡರೆ ಸಾಕು, ನೀವು ಕೃಷ್ಣ ಪ್ರಜ್ಞಾವಂತರಾಗಿ ಮುಂದುವರಿಯುತ್ತೀರಿ.

ಆದ್ದರಿಂದ, ಕೃಷ್ಣಪ್ರಜ್ಞಾವಂತರಾಗುವುದು ಅಂತಹ ಕಷ್ಟವೇನಲ್ಲ. ನಿಮಗೆ ಕೊಂಚ ತರಬೇತಿ ಬೇಕಾದೀತಷ್ಟೆ. ನೀವು ಭಗವದ್ಗೀತಾ ಯಥಾರೂಪವನ್ನು ಓದಿದರೆ, ಕೃಷ್ಣನೇ ಸ್ವತಃ ಹೇಳಿರುವ ದಾರಿಯನ್ನು ಅನುಸರಿಸಿದರೆ, ನೀವೂ ಕೃಷ್ಣಪ್ರಜ್ಞಾವಂತರಾಗಬಹುದು.

ಆದ್ದರಿಂದ, ಕೃಷ್ಣ ಪ್ರಜ್ಞಾವಂತರಾಗುವುದರಿಂದ ನಷ್ಟವೇನೂ ಇಲ್ಲ. ಆದರೆ ಅದರ ಲಾಭ ಮಾತ್ರ ಬಹಳ ದೊಡ್ಡದು. ಈ ಕಾರಣದಿಂದಲೇ ನೀವೆಲ್ಲರೂ ಕೃಷ್ಣಪ್ರಜ್ಞಾವಂತರಾಗಲೆಂದು, ಭಗವದ್ಗೀತಾ ಯಥಾರೂಪ ಓದಲೆಂದು ಕೋರುತ್ತೇನೆ. ಗೀತೆಯನ್ನು ಓದಲಾಗದಿದ್ದರೆ ದಯವಿಟ್ಟು ಕೊನೆಯ ಪಕ್ಷ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಮಹಾ ಮಂತ್ರವನ್ನು ಜಪಿಸಿರಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi