ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಸಂಸ್ಥಾಪನಾಚಾರ್ಯ, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ, 1972ರಲ್ಲಿ ನೀಡಿದ ಉಪನ್ಯಾಸ, ಆಕ್ಲ್ಯಾಂಡ್ ಯೂನಿರ್ವಸಿಟಿ
ಕೃಷ್ಣಪಜ್ಞಾಂದೋಲನವು ‘ಸಂಕೀರ್ತನ ಚಳವಳಿ’ ಎಂದೂ ಕರೆಯಲ್ಪಡುತ್ತದೆ. ಇದು ಹರೇಕೃಷ್ಣ ಮಹಾಮಂತ್ರದ ಕೀರ್ತನೆಯ ವಿತರಣೆಗಾಗಿಯೇ ಇರುವಂಥದು. ಮೇಲ್ನೋಟಕ್ಕೆ ಈ ಪಠಣವು ಯಾವುದೋ ಸಾಧಾರಣ ಪದಗಳ ಪುನರಾವರ್ತನೆಯಂತೆ ಅನಿಸಬಹುದು. ಆದರದು ಹಾಗಲ್ಲ. ನಾವು ಅದರ ಪರಿಣಾಮ ಅರಿಯಬೇಕೆಂದರೆ ಕೊಂಚ ಅಭ್ಯಾಸ ನಡೆಸಬೇಕು.

ಹರೇಕೃಷ್ಣ ಮಹಾಮಂತ್ರದ ಪ್ರಭಾವವನ್ನು ಶ್ರೀ ಚೈತನ್ಯ ಮಹಾಪ್ರಭುಗಳು ‘ಚೇತೋದರ್ಪಣ ಮಾರ್ಜನಮ್’ ಎಂದು ವಿವರಿಸಿದ್ದಾರೆ. “ಅದು ನಿಮ್ಮ ಹೃದಯವನ್ನು ಶುಚಿಗೊಳಿಸುತ್ತದೆ.” ನಾವು ಹರೇಕೃಷ್ಣ ಮಂತ್ರವನ್ನು ಪಠಿಸುತ್ತ ಹೋದಂತೆ, ಕ್ರಮೇಣವಾಗಿ ನಮ್ಮ ಹೃದಯದಲ್ಲಿ ತುಂಬಿಕೊಂಡಿರುವ ಕಲ್ಮಷಗಳು ಶುದ್ಧವಾಗುತ್ತ ಸಾಗುತ್ತದೆ.
ಇದು ಮಹಾಪ್ರಭು ಚೈತನ್ಯರ ಭರವಸೆ. ನಮ್ಮ ಹೃದಯದೊಳಗಿನ ಅತ್ಯಂತ ಕಲ್ಮಷ ಸಂಗತಿಯೆಂದರೆ, ದೇಹಾತ್ಮ ಬುದ್ಧಿ, ವಾಸ್ತವವಾಗಿ, ಇಡಿಯ ಆಧುನಿಕ ಜಗತ್ತು ಈ ತಪ್ಪು ತಿಳುವಳಿಕೆಯಿಂದ ಯಾತನೆ ಪಡುತ್ತಿದೆ. ಲೌಕಿಕ ದೃಷ್ಟಿಕೋನದ ಬದುಕು ನಡೆಸುತ್ತಿರುವ ವ್ಯಕ್ತಿಯೊಬ್ಬ, ‘ನಾನು ಈ ದೇಹವಾಗಿರುವೆ’ ಎಂದು ತಿಳಿಯುತ್ತಿದ್ದರೆ, ಆಗ ಅವನ ಜೀವನದ ತತ್ತ್ವವೇ ಮಿಥ್ಯೆಯಾಗುತ್ತದೆ.
ಆದ್ದರಿಂದ, ಈ ದೈಹಿಕ ಗುರುತಿಸಿಕೊಳ್ಳುವಿಕೆ ನಮ್ಮ ಹೃದಯದೊಳಗಿನ ಅತಿದೊಡ್ಡ ಕಲ್ಮಷವಾಗಿದೆ. ಹರೇಕೃಷ್ಣ ಮಹಾಮಂತ್ರ ಜಪದಿಂದ ಕ್ರಮೇಣ ನಾವು, ” ನಾನು ನನ್ನ ಈ ದೇಹವಲ್ಲ: ನಾನು ಚೇತನಾತ್ಮ (ಅಹಂ ಬ್ರಹ್ಮಾಸ್ಮಿ) ಎಂಬುದನ್ನು ಅರಿಯತೊಡಗುತ್ತೇವೆ. ನಾವು ಈ ದೇಹವಲ್ಲ, ಚೇತನಾತ್ಮವೆಂದು ನಾವೊಮ್ಮೆ ಅರಿತುಬಿಟ್ಟರೆ, ಅನಂತರ ಉಳಿದೆಲ್ಲವೂ ಅದನ್ನು ಅನುಸರಿಸುತ್ತವೆ.
ಭಗವದ್ಗೀತೆಯಲ್ಲಿ ‘ಬ್ರಹ್ಮಭೂತಃ ಪ್ರಸನ್ನಾತ್ಮಾನ ಶೋಚತಿ ನ ಕಾಂಕ್ಷತಿ’ ಎಂದು ಹೇಳಲಾಗಿದೆ.
‘ಯಾವಾಗ ವ್ಯಕ್ತಿಯು ಬ್ರಹ್ಮನ್ ನನ್ನು ಅರಿಯುತ್ತಾನೋ, ಯಾವಾಗ ಅವನು ತಾನು ಚೇತನಾತ್ಮವೆಂದು ಅರಿಯುತ್ತಾನೋ, ಅದರಿಂದಾಗುವ ಮೊದಲ ಪ್ರಯೋಜನವೆಂದರೆ, ಆತನು ಎಲ್ಲ ಬಗೆಯ ವಿಷಾದ, ಬಯಕೆಗಳಿಂದ ಮುಕ್ತನಾಗುವುದು.” ಈ ಲೌಕಿಕ ಜಗತ್ತಿನಲ್ಲಿ ಎರಡು ಸಂಗತಿಗಳು ನಡೆಯುತ್ತವೆ; ಬಯಸುವುದು ಮತ್ತು ವಿಷಾದಿಸುವುದು. ನಮ್ಮ ಹತ್ತಿರ ಯಾವ ವಸ್ತು ಇಲ್ಲವೋ ಅದರ ಹಿಂದೆ ಬೀಳುತ್ತೇವೆ; ನಮ್ಮ ಬಳಿ ಇರುವ ವಸ್ತುವು ಒಂದು ವೇಳೆ ನಷ್ಟವಾದರೆ, ಅದಕ್ಕಾಗಿ ನಾವು ವಿಷಾದಿಸತೊಡಗುತ್ತೇವೆ. ವಾಸ್ತವವಾಗಿ ಇಡಿಯ ಸನ್ನಿವೇಶವೇ ವಿಷಾದದಿಂದ ತುಂಬಿಹೋಗಿದೆ.
ಏಕೆಂದರೆ, ನಾವು ನಿರಂತರವಾಗಿ ಕಳೆದುಕೊಳ್ಳುತ್ತಲೇ ಇದ್ದೇವೆ. ಉದಾಹರಣೆಗೆ, ನಮ್ಮ ದೇಹ. ನಮ್ಮ ತಾಯ್ತಂದೆಯರಿಂದ ನಿರ್ದಿಷ್ಟ ದಿನದಂದು ಈ ದೇಹವನ್ನು ಪಡೆದಿದ್ದೇವೆ. ಕ್ರಮೇಣವಾಗಿ ಅದನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ನೀವು ಇಪ್ಪತ್ತು ವರ್ಷದವರಾಗಿರುವಿರೆಂದು ತಿಳಿದುಕೊಳ್ಳಿ, ಅದರರ್ಥ, ನೀವಾಗಲೇ ನಿಮ್ಮ ಜೀವನದ 20 ವರ್ಷಗಳನ್ನು ಕಳೆದುಕೊಂಡಿರುವಿರಿ! ನಾನೀಗ 76 ವರ್ಷದವನಾಗಿರುವ, ಅದರರ್ಥ, ನಾನಾಗಲೇ ನನ್ನ ಬದುಕಿನ 76 ವರ್ಷಗಳನ್ನು ಕಳೆದುಕೊಂಡಿರುವೆ.
ನಮ್ಮ ಜೀವಿತಾವಧಿಯು ಸೀಮಿತವಾದುದು. ಪೂರ್ವನಿಯೋಜಿತ ದಿನದಂದು ಅದು ಕೊನೆಗೊಳ್ಳುವುದು. ನಿಮ್ಮ ಪೂರ್ವ ಕರ್ಮಗಳಿಗನುಸಾರವಾಗಿ ನಾವೊಂದು ದೇಹವನ್ನು ಪಡೆದಿರುವೆವು. ಮತ್ತದರ ಅವಧಿಯು ಆದಾಗಲೇ ನಿರ್ಧರಿತವಾಗಿರುವುದು.
ನಮ್ಮ ಸಂತೋಷ ದುಃಖಗಳ ಪ್ರಮಾಣವೂ ನಿರ್ಧರಿತವಾಗಿರುವುದು. ನೀವದನ್ನು ಬದಲಿಸಲಾಗದು. ನೀವೆಲ್ಲ ಆಕ್ಲೆಂಡ್ವಿಶ್ವವಿದ್ಯಾಲಯ ವಿದ್ಯಾರ್ಥಿಗಳು. ಜೀವಿತಾವಧಿಯನ್ನು ಹೆಚ್ಚಿಸುವ ಅಥವಾ ಮರಣವನ್ನು ತಡೆಯುವ ಯಾವುದಾದರೂ ವಿಜ್ಞಾನವನ್ನು ಇಲ್ಲಿ ಬೋಧಿಸಲಾಗುತ್ತಿದೆಯೇನು? ಇಲ್ಲ. ಅದು ಅಸಾಧ್ಯ.
ಜನನ, ವೃದ್ಧಾಪ್ಯ, ರೋಗ ಮತ್ತು ಮರಣ – ಇವು ಜೀವನದ ಮುಖ್ಯ ಸಮಸ್ಯೆಗಳು. ಯಾರೂ ಸಾವನ್ನು ಬಯಸುವುದಿಲ್ಲ. ಆದರೆ ಸಾವು ಖಚಿತ. ನಾವು ಸಾಯಲೇಬೇಕು. ಯಾರೂ ಹುಟ್ಟಿ ಬರಬೇಕೆಂದು ಬಯಸುವುದಿಲ್ಲ ಆದರೂ ಜನನವಿದೆ. ಜನನ ಪ್ರಮಾಣವನ್ನು ತಡೆಯಲು ಇಂದು ಬಹಳಷ್ಟು ಮಾರ್ಗಗಳಿವೆ.
ಆದರೂ ಜಾಗತಿಕ ಜನಸಂಖ್ಯಾ ಪ್ರಮಾಣವು ಏರುತ್ತಲೇ ನಡೆದಿದೆ. ಯಾರೂ ವೃದ್ಧಾಪ್ಯ ಬಯಸುವುದಿಲ್ಲ: ಪ್ರತಿಯೊಬ್ಬರೂ ಯುವಕರಾಗಿ, ತಾಜಾ ಆಗಿರಲು ಬಯಸುತ್ತಾರೆ. ಆದರೆ ಪ್ರತಿಯೊಬ್ಬರಿಗೂ ವೃದ್ಧಾಪ್ಯ ಬಂದೊದಗುತ್ತದೆ. ಹಾಗೆಯೇ ಕಾಯಿಲೆಗಳೂ ಕೂಡ. ವೈಜ್ಞಾನಿಕ ಅರಿವಿನಲ್ಲಿಂದು ಸಾಕಷ್ಟು ಪ್ರಗತಿ ನಡೆದಿದೆ. ಆದರೆ ಕಾಯಿಲೆಯನ್ನು ನಿಲ್ಲಿಸುವ ಅಥವಾ ಮರಣವನ್ನು ತಡೆಯುವ ಯಾವ ವಿಜ್ಞಾನವೂ ಇಲ್ಲ.

ಆದ್ದರಿಂದ ಜನನ, ವೃದ್ಧಾಪ್ಯ, ರೋಗ, ಮರಣಗಳೇ ವಾಸ್ತವ ಸಮಸ್ಯೆಗಳು. ಆದರೆ ಈ ಸಮಸ್ಯೆಗಳು ದೇಹಕ್ಕೆ ಸಂಬಂಧಪಟ್ಟವು. ಆತ್ಮವು ದೇಹಕ್ಕಿಂತ ಬೇರೆಯಾಗಿದೆ. ನಾನು ಆತ್ಮನ್, ನೀನು ಆತ್ಮ. ಆದರೆ ಹೇಗೋ ನಾವು ಈ ದೈಹಿಕ ಶರೀರಗಳೊಳಗೆ ಬಂದಿಯಾಗಿಬಿಟ್ಟಿರುವೆವು ಮತ್ತು ದೇಹದ ಬದಲಾವಣೆಗಳನ್ನು ಅನುಭವಿಸುತ್ತಿರುವೆವು.
ಆತ್ಮವಾದ ನೀವು ಹಾಗೆಯೇ ಇರುವಾಗಲೂ ನಿಮ್ಮ ದೇಹವು ನಿರಂತರ ಬದಲಾವಣೆಗೆ ಒಳಗಾಗುವುದನ್ನು ನೀವೆಲ್ಲ ಅರಿಯಬಲ್ಲಿರಿ. ಒಮ್ಮೆ ನೀವು ಶಿಶುವಿನ ಶರೀರ ಹೊಂದಿದ್ದಿರಿ. ಅನಂತರ ಮಗುವಿನ ಶರೀರ ನಿಮ್ಮದಾಯಿತು. ಈಗ ನೀವೆಲ್ಲ ತರುಣ ದೇಹ ಹೊಂದಿರುವಿರಿ, ಕೆಲ ಕಾಲಾನಂತರ ನೀವು ನನ್ನ ರೀತಿ ಮುದಿ ಶರೀರ ಪಡೆಯುವಿರಿ.
ದೇಹವು ಬದಲಾಗುತ್ತಿರುತ್ತದೆ. ಆದರೆ ನಾನು, ಆತ್ಮನು, ಹಾಗೆಯೇ ಇರುತ್ತೇನೆ. ಆದ್ದರಿಂದ ನಮ್ಮ ನೈಜ ಪರಿಚಯವು ನಮ್ಮ ಬದಲಾಗುವ ಶರೀರಗಳೊಳಗಿನ ನಿತ್ಯ ಆತ್ಮಗಳಾಗಿರುತ್ತದೆ. ಇದನ್ನು ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೀಗೆ ಹೇಳಿದ್ದಾನೆ;
ದೇಹಿನೋಽಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ।
ತಥಾ ದೇಹಾನ್ತರ ಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ || (ಭ.ಗೀ.2.13)
ಭಗವದ್ಗೀತೆಯ ಈ ಶ್ಲೋಕದಲ್ಲಿ ಶ್ರೀಕೃಷ್ಣನು, ನಮ್ಮ ಆತ್ಮವು ಹೇಗೆ ಒಂದು ದೇಹದಿಂದ ಮತ್ತೊಂದಕ್ಕೆ ವಲಸೆ ಹೋಗುತ್ತದೆ ಎಂದು ವಿವರಿಸಿದ್ದಾನೆ. ಇದೊಂದು ಶ್ಲೋಕವನ್ನು ನಾವು ಅಧ್ಯಯನ ಮಾಡಿದರೂ ಸಾಕು, ನಮ್ಮ ಜೀವನವು ವಿಭಿನ್ನವಾಗುತ್ತದೆ. ನಾವು ಈ ಆತ್ಮವು ನಿತ್ಯವೆಂದೂ, ಒಂದರಿಂದ ಮತ್ತೊಂದು ಬಗೆಯ ದೇಹಕ್ಕೆ ವಲಸೆ ಹೋಗುತ್ತಿರುತ್ತದೆಂದೂ ಅರಿಯುತ್ತೇವೆ.
ಒಟ್ಟು 84,00,000 ಬಗೆಯ ಜೀವರಾಶಿಗಳಿವೆ. ನಾವು ಅನಾದಿಕಾಲದಿಂದಲೂ ಇವುಗಳಲ್ಲಿ ಒಂದರಿಂದ ಮತ್ತೊಂದಕ್ಕೆ ವಲಸೆ ಬರುತ್ತಾ ಜನನ, ವೃದ್ಧಾಪ್ಯ, ರೋಗ, ಮರಣಗಳ ಯಾತನಾ ಚಕ್ರದಲ್ಲಿ ಸಿಲುಕಿಕೊಂಡಿದ್ದೇವೆ. ಇದು ನಮ್ಮ ನಿಜವಾದ ಸಮಸ್ಯೆ. ಆದರೆ ವಿಶ್ವವಿದ್ಯಾಲಯ ಅಥವಾ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ದೇಹದೊಳಗಿನ ಯಾವ ವಸ್ತುವು ಯಾವುದರಲ್ಲಿ ಸಿಲುಕಿಕೊಂಡಿದೆ ಎಂದು ಅಭ್ಯಸಿಸುವ ಇಲಾಖೆಯಿಲ್ಲ.
ಈ ಮಾಹಿತಿಯನ್ನು ಪಡೆಯಲು ನಾವು ಭಗವದ್ಗೀತೆಯ ಮೊರೆ ಹೋಗಬೇಕು: ‘ದೇಹಿನೋಽಸ್ಮಿನ್ ಯಥಾ ದೇಹೇ’ – ‘ದೇಹೇ’ ಎಂದರೆ ‘ ದೇಹದೊಳಗೆ’ ಮತ್ತು ‘ದೇಹಿನ’ – ‘ದೇಹವನ್ನು ಧರಿಸಿರುವಾತʼ. ಈ ದೇಹವು ಕೇವಲ ಒಂದು ವಸ್ತ್ರದ ಹಾಗೆ. ನೀವು ಅದನ್ನು ಧರಿಸುವವರೇ ಹೊರತು, ನೀವೇ ಆ ವಸ್ತವಾಗಿಲ್ಲ, ನೀವು ಆ ವಸ್ತ್ರದಿಂದ ಬೇರೆಯಾಗಿದ್ದೀರಿ.
ಹಾಗೆಯೇ, ನಾವು ಎರಡು ಬಗೆಯ ಶರೀರ ಹೊಂದಿದ್ದೇವೆ. ಸ್ಥೂಲ ಶರೀರ ಹಾಗೂ ಸೂಕ್ಷ್ಮಶರೀರ. ಸ್ಥೂಲ ಶರೀರವು ಮಣ್ಣು, ನೀರು, ಬೆಂಕಿ, ಗಾಳಿ ಮತ್ತು ಆಕಾಶಗಳಿಂದ ಸೃಷ್ಟಿಯಾಗಿದೆ. ಸೂಕ್ಷ್ಮಶರೀರವು ಬುದ್ಧಿ, ಮನಸ್ಸು ಮತ್ತು ಅಹಂಕಾರಗಳಿಂದ ನಿರ್ಮಿತವಾಗಿದೆ. ಯಾವಾಗ ನಾವು ಈ ಸ್ಥೂಲ ಶರೀರವನ್ನು ತೊರೆಯುತ್ತೇವೆಯೋ, ಆಗ ಸೂಕ್ಷ್ಮಶರೀರವು ನಮ್ಮನ್ನು ಮತ್ತೊಂದು ಸ್ಥೂಲ ಶರೀರಕ್ಕೆ ಕೊಂಡೊಯ್ಯುತ್ತದೆ. ಈ ಪ್ರಕ್ರಿಯೆಯು ‘ ಆತ್ಮದ ವಲಸೆ’ ಯೆಂದು ಕರೆಯಲ್ಪಡುತ್ತದೆ.
ವಲಸೆಯು ನಂಬಿಕೆಯ ಪ್ರಶ್ನೆಯಾಗಿಲ್ಲ. ಇದು ವಾಸ್ತವ ಸತ್ಯ. ನಾವು ಈ ವೈಜ್ಞಾನಿಕ ಜ್ಞಾನವನ್ನು ಕಡೆಗಣಿಸಿದರೆ, ನಾವು ದೊಡ್ಡದೊಂದು ಅವಕಾಶ ಕಳೆದುಕೊಂಡಂತೆ. ಏಕೆಂದರೆ, ಈ ಮಾನವ ಶರೀರದಲ್ಲಿ ಮಾತ್ರವೇ ನಾವು ಈ ದೇಹದೊಳಗೆ ಇರುವ ವಸ್ತುವನ್ನು ಅರಿಯಬಲ್ಲ ಉನ್ನತ ಬುದ್ಧಿವಂತಿಕೆಯನ್ನು ಪಡೆದಿರುತ್ತೇವೆ.
ಇದು ಬಹಳ ಮುಖ್ಯವಾದುದು. ಕೃಷ್ಣಪ್ರಜ್ಞಾಂದೋಲನವು ಆತ್ಮದ ಪ್ರಾಮುಖ್ಯವನ್ನು ಬೋಧಿಸುತ್ತದೆ. ಆತ್ಮವೆಂದರೇನು? ಆತ್ಮದ ಅಗತ್ಯಗಳೇನು? ಲೌಕಿಕ ಶರೀರದೊಳಗೆ ಆತ್ಮವು ಅದೇಕೆ ಬಂದಿಯಾಗಿದೆ? ಆತ್ಮವನ್ನು ಮುಕ್ತಿಗೊಳಿಸುವುದು ಹೇಗೆ? ಮುಕ್ತಿಯ ನಂತರ ಆತ್ಮದ ಕಾರ್ಯಗಳೇನಾಗಿರುತ್ತವೆ?

ಈ ಪ್ರಶ್ನೆಗಳನ್ನು ಅರಿಯುವಂಥದ್ದಾಗಿದೆ. ಇವೆಲ್ಲವೂ ಭಗವದ್ಗೀತೆಯೆಂಬ ಆಧ್ಯಾತ್ಮಿಕ ಅಧ್ಯಯನದಲ್ಲಿ ಬಹಳ ಚೆನ್ನಾಗಿ ಹೇಳಲ್ಪಟ್ಟಿವೆ. ಉನ್ನತ ಅಧ್ಯಯನಕ್ಕಾಗಿ ಸ್ನಾತಕ ಮಟ್ಟದ ಅಧ್ಯಯನಕ್ಕಾಗಿ ನಮ್ಮ ಬಳಿ ಭಾಗವತವಿದೆ. ನೀವು ಈ ಅಧ್ಯಯನ ವಸ್ತುವನ್ನು, ವಿಜ್ಞಾನವನ್ನು ಉಪೇಕ್ಷಿಸಬಾರದೆಂಬುದೇ ನಮ್ಮ ಕಳಕಳಿಯ ವಿನಂತಿ. ಆತ್ಮವನ್ನು ತಿಳಿಯಲು ಪ್ರಯತ್ನಿಸಿ.
ಪ್ರಸ್ತುತದಲ್ಲಿ ಯಾವ ವಿಜ್ಞಾನದ ಪ್ರಾಧ್ಯಾಪಕನೂ ಜೀವಿತ ಶರೀರದೊಳಗಿರುವ, ಹಾಗೂ ಮೃತ ಶರೀರದಿಂದ ಹೊರ ನಡೆದಿರುವ ಆ ವಸ್ತುವಿನ ವಿವರಣೆ ನೀಡಲು ಸಾಧ್ಯವಿಲ್ಲ. ವಾಸ್ತವವಾಗಿ, ವೈದಿಕ ಸಾಹಿತ್ಯದ ಪ್ರಕಾರ, ದೇಹವು ಯಾವಾಗಲೂ ಮೃತವೇ, ಆದರೆ, ಎಲ್ಲಿಯವರೆಗೆ ಈ ದೇಹದಲ್ಲಿ ಆತ್ಮವಿರುತ್ತದೆಯೋ, ಅದು ಜೀವಂತ ಎಂಬಂತೆ ತೋರುತ್ತದೆ.
ಎಲ್ಲಿಯವರೆಗೆ ನೀವು ಬಟ್ಟೆ ಧರಿಸಿರುತ್ತೀರೋ, ಅದು ಬದುಕಿದಂತೆ – ಚಲನಶೀಲವಾಗಿರುತ್ತದೆ. ಬಟ್ಟೆಗೆ ಜೀವವಿಲ್ಲ. ಆದರೆ ನಿಮ್ಮ ದೇಹ ಚಲಿಸಿದಂತೆಲ್ಲ, ಅದು ಕೂಡ ಚಲಿಸುತ್ತದೆ. ಹಾಗೆಯೇ, ದೇಹವು ಕೂಡ ಆತ್ಮದ ಚಲನೆಯನ್ನು ಅವಲಂಬಿಸಿದೆ. ಯಾವಾಗ ಆತ್ಮವು ದೇಹವನ್ನು ತೊರೆಯುತ್ತದೆಯೋ, ಆಗ ದೇಹವು ನಿಶ್ಚಲವಾಗುತ್ತದೆ. ನಾವದನ್ನು ‘ಮೃತʼ ಎಂದು ಕರೆಯುತ್ತೇವೆ.
ಆದರೆ ವಾಸ್ತವವಾಗಿ ದೇಹವು ಯಾವಾಗಲೂ ಮೃತವೇ. ಆದ್ದರಿಂದ, ಕೃಷ್ಣಪ್ರಜ್ಞಾ ವಿಜ್ಞಾನವು ಅತಿ ಮುಖ್ಯವಾದುದು. ಇದರ ಮೂಲ ತತ್ತ್ವವು ಆತ್ಮದ ಅರಿಯುವಿಕೆಯಾಗಿದೆ. ವ್ಯಕ್ತಿಯು ಆತ್ಮದ ಅಸ್ತಿತ್ವವನ್ನು ನಂಬಬಹುದು ಅಥವಾ ಇಲ್ಲದಿರಬಹುದು. ಆದರೆ ಸತ್ಯ-ಸತ್ಯವೇ. ಎರಡಕ್ಕೆ ಎರಡು ಸೇರಿಸಿದರೆ ಆಗುವುದು ನಾಲ್ಕೇ. ಯಾರು ಒಪ್ಪಿದರೂ, ಬಿಟ್ಟರೂ ಅಷ್ಟೆ. ಯಾರಾದರೂ ಎರಡಕ್ಕೆ ಎರಡು ಸೇರಿದರೆ ಮೂರು ಅಥವಾ ಐದು ಎಂದರೆ, ಸತ್ಯ ಬದಲಾಗಿ ಹೋಗುವುದಿಲ್ಲ.
ಹಾಗೆಯೇ, ನಾವು ಆತ್ಮದ ಅಸ್ತಿತ್ವವನ್ನು ನಂಬಿದರೂ ಬಿಟ್ಟರೂ, ಆತ್ಮದ ಅಸ್ತಿತ್ವವು ಸತ್ಯವೇ ಆಗಿರುತ್ತದೆ. ನಾವು ಈ ವಸ್ತು ವಿಷಯವನ್ನು ಗಂಭೀರವಾಗಿ, ವೈಜ್ಞಾನಿಕವಾಗಿ ಅಭ್ಯಸಿಸಿದರೆ, ಆತ್ಮವನ್ನು ಅರಿಯಲು ಸಾಧ್ಯವಾಗುತ್ತದೆ.
ವೈದಿಕ ಸಾಹಿತ್ಯದಲ್ಲಿ ಹೇಳಲಾಗಿರುವಂತೆ ಆತ್ಮವನ್ನು ಅರಿಯಲು ಇರುವ ಅತಿ ಸರಳ ವಿಧಾನ – ಹರೇಕೃಷ್ಣ ಮಂತ್ರ ಪಠಣ. ಇದರಿಂದ ಕ್ರಮೇಣ ನಿಮ್ಮ ಬುದ್ಧಿ ಅಥವಾ ಪ್ರಜ್ಞೆಯು ಶುದ್ಧಿಗೊಳ್ಳುತ್ತದೆ, ಮತ್ತು ನೀವು ನಿಮ್ಮ ದೇಹವಾಗಿರದೆ, ಚೇತನಾತ್ಮವಾಗಿದ್ದೀರಿ ಎಂದು ಅರಿಯುತ್ತೀರಿ. ನೀವು ಚೇತನಾತ್ಮ, ಬ್ರಹ್ಮನ್ ಎಂದು ಅರಿತ ಅನಂತರ, ಲೌಕಿಕ ಅಸ್ತಿತ್ವದ ಜ್ವಲಂತ ಅಗ್ನಿಯಿಂದ ಪಾರಾಗುತ್ತೀರಿ (ಭವ ಮಹಾ ದಾವಾಗ್ನಿ ನಿರ್ವಾಪಣಮ್ )
ಇಂದು ಬೆಳಗ್ಗೆ ನಮ್ಮ ಸಂನ್ಯಾಸಿಗಳಲ್ಲೊಬ್ಬರು, ಇಂದಿನ ಯುವಜನರಲ್ಲಿ ಆತ್ಮಹತ್ಯೆಯ ಪ್ರಮಾಣ ಹೆಚ್ಚಿರುವ ಬಗ್ಗೆ ಹೇಳಿದರು. ಹೀಗೇಕೆ? ಯಾಕೆ ಯುವ ಜನರು ಇಷ್ಟೆಲ್ಲ ವಿದ್ಯೆಯ ಹೊರತಾಗಿಯೂ ಗೊಂದಲಗಳಿಗೆ ಒಳಗಾಗುತ್ತಿರುವರು? ಪಾಶ್ಚಾತ್ಯ ದೇಶಗಳಲ್ಲಿ ಬಡತನದ ಪ್ರಶ್ನೆಯೇ ಇಲ್ಲ.
ನೀವೆಲ್ಲ ಉಂಡುಟ್ಟು ಸುಖವಾಗಿರುವವರು. ನಾನು ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಇಲ್ಲಿಗೆ ಬಂದಿರುವೆ. ಇಲ್ಲಿ ನಿಮ್ಮ ಅಗತ್ಯದ ಎಲ್ಲ ವಸ್ತುಗಳೂ ಲಭ್ಯವಿದೆ. ಹಾಗಾದರೆ ನಮ್ಮ ಸಂನ್ಯಾಸಿಯು ಹೇಳಿದಂತೆ, ಈ ಉದ್ವೇಗವೇಕೆ?
ವಾಸ್ತವವಾಗಿ, ಹತಾಶೆಗೆ ಕಾರಣಗಳೇ ಇಲ್ಲ – ಇರುವುದು ಸಂಭ್ರಮಕ್ಕೆ ಅತ್ಯುತ್ತಮ ಕಾರಣ ಮಾತ್ರ. ಯಾಕೆ? ಕೃಷ್ಣಪ್ರಜ್ಞಾ ಆಂದೋಲನ ಇರುವುದರಿಂದ ಹತಾಶೆಗೊಳಗಾಗಬೇಡಿ. ಕೃಷ್ಣಪ್ರಜ್ಞಾಂದೋಲನವನ್ನು ಅರಿಯಲು ಪ್ರಯತ್ನಿಸಿ. ಅದು ಹೇಗೆ ಮಹಾನ್ ಆಚಾರ್ಯರಿಂದ ವಿದ್ವಾಂಸರಿಂದ ಸ್ವೀಕರಿಸಲ್ಪಟ್ಟಿದೆ ಎಂದು, ಜಗತ್ತಿನ ಪ್ರಮುಖ ನೇತಾರರಿಂದ ಮನ್ನಣೆ ಪಡೆದಿದೆ ಎಂದು – ಅರಿಯಿತಿ.
ಹತಾಶೆಗೊಳ್ಳಬಾರದೆಂದು, ಗೊಂದಲಗೊಳ್ಳಬಾರದೆಂದು ಯುವ ಜನರಲ್ಲಿ ನನ್ನ ವಿನಂತಿ. ಕೃಷ್ಣಪ್ರಜ್ಞೆಯನ್ನು ಸ್ವೀಕರಿಸುವವರಲ್ಲಿ ಬಹುಪಾಲು ಯುವಜನರೇ ಆಗಿರುವರು.
ಅವರಲ್ಲಿ ಕೇಳಿನೋಡಿ, ಅವರೆಷ್ಟು ಭರವಸೆಯಿಂದ ಇರುವರು, ಸಂಭ್ರಮದಿಂದ ಇರುವರೆಂದು! ಈ ದೇಶದ ಪುಷ್ಪಗಳಂತಿರುವ ಎಲ್ಲ ತರುಣ ತರುಣಿಯರನ್ನು ಕೇಳಿಕೊಳ್ಳುತ್ತೇನೆ. ದಯವಿಟ್ಟು ಗೊಂದಲ, ಹತಾಶೆ ಬೇಡ. ಇಲ್ಲಿ ಸುಂದರವಾದ ಕೃಷ್ಣಪ್ರಜ್ಞೆಯಿದೆ. ಇದನ್ನು ನೀವು ಅರ್ಥೈಸಿಕೊಳ್ಳಲು ಯತ್ನಿಸಿ, ಮತ್ತು ಸಂತೋಷದಿಂದಿರಿ ಎನ್ನುವುದಷ್ಟೆ ನನ್ನ ವಿನಂತಿ.






Leave a Reply