ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಸಂಸ್ಥಾಪನಾಚಾರ್ಯರು, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ
ಐಹಿಕ ಜಗತ್ತಿನ ಪ್ರತಿಯೊಬ್ಬ ಜೀವಿಗೂ ಅತ್ಯುನ್ನತ ಮಟ್ಟದ ಸುಖಾನುಭವ ಮಾಡುವ ಮಹದಾಸೆಯಿದೆ. ಆದರೂ ಇಲ್ಲಿನ ಎಲ್ಲರೂ ದುಃಖಿತರಾಗಿಯೇ ಇದ್ದಾರೆ. ಈ ಭೂಮಿಗಿಂತಲೂ ಅತ್ಯುನ್ನತ ಮಟ್ಟದ ದೀರ್ಘಾವಧಿಯ ಬದುಕು ಹಾಗೂ ಹೆಚ್ಚಿನ ಸುಖಸಾಧನಗಳಿರುವ ಬೇರೆ ಗ್ರಹಲೋಕಗಳಲ್ಲಿಯೂ ಅಸುಖವಿದೆ. ಹೀಗಿರುವುದು ಪ್ರಕೃತಿಯ ನಿಯಮ.

ವ್ಯಕ್ತಿಯು ತನ್ನ ಬದುಕಿನ ಅವಧಿಯನ್ನು ಹೆಚ್ಚು ಮಾಡಿಕೊಳ್ಳಬಹುದು ಹಾಗೂ ಅವನ ಬದುಕಿನ ಪರಿಯನ್ನು ಉತ್ತಮ ಮಟ್ಟಕ್ಕೆ ಒಯ್ಯಬಹುದು. ಆದರೂ ಪ್ರಕೃತಿಯ ನಿಯಮದಂತೆ ಜೀವಿಯು ಅಸುಖಿಯಾಗಿಯೇ ಇರುತ್ತಾನೆ. ಹೀಗಾಗಲು ಕಾರಣವೇನು? ನಮ್ಮ ಸ್ವಭಾವಕ್ಕೆ ಹೊಂದಿಕೊಳ್ಳುವ ಸುಖಕ್ಕೂ ಲೌಕಿಕ ಬದುಕಿನ ಕಾರಣ ಬರುವ ಸುಖಕ್ಕೂ ಗುಣಾತ್ಮಕವಾದ ವ್ಯತ್ಯಾಸವಿರುವುದು ಕಾರಣ.
ಜೀವಿಯು ಸಚ್ಚಿದಾನಂದ ವಿಗ್ರಹದ ಒಂದು ಅತಿ ಸಣ್ಣ ಕಣ. ಆದ್ದರಿಂದ ಆಧ್ಯಾತ್ಮಿಕ ಗುಣವುಳ್ಳ ಸಂತೋಷದ ಕಡೆ ಸ್ವಾಭಾವಿಕವಾಗಿಯೇ ಅವನ ಒಲವಿದೆ. ಆದರೆ ಅವನಿಗೆ ಬೇಕಾದ ಆಧ್ಯಾತ್ಮಿಕ ಆನಂದವನ್ನು ಪಡೆಯಲು ಅವನು ಐಹಿಕ ಪ್ರಕೃತಿಯ ಪರಕೀಯ ಪರಿಸರದಲ್ಲಿ ನಿರರ್ಥಕ ಪ್ರಯತ್ನ ನಡೆಸಿದ್ದಾನೆ.
ಜೀವನದಲ್ಲಿ ಆಧ್ಯಾತ್ಮಿಕ ಆನಂದವನ್ನು ಅನುಭವಿಸುವುದು ನಮ್ಮ ಮಹೋದ್ದೇಶವಾಗಬೇಕು. ಐಹಿಕಸುಖದ ಮಹತ್ವಾಕಾಂಕ್ಷೆ ಇರಬಾರದು. ಭಕ್ತಿಪರವಾದ ಕಾರ್ಯಗಳು ಆಧ್ಯಾತ್ಮಿಕ ಆನಂದವನ್ನು ಪಡೆಯಲು ಖಾತ್ರಿಯಾದ ಮತ್ತು ಅತ್ಯುತ್ತಮ ವಿಧಾನಗಳಾಗಿವೆ.
ಈ ವಿಧಾನಗಳು ಐಹಿಕ ಪ್ರಕೃತಿಯ ಚಹರೆಯನ್ನೇ ಬದಲಾಯಿಸಿ ಬಿಡುತ್ತವೆ. ಆದರೆ ಐಹಿಕ ಸುಖದಲ್ಲಿ ತನ್ಮಯವಾಗುವ ಕಾರ್ಯವು ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ಅರಿವನ್ನು ಕೊಲ್ಲುವುದು ನಿಶ್ಚಯ. ಆದ್ದರಿಂದ ಸ್ವಸ್ಥ ಬುದ್ಧಿಯ ವ್ಯಕ್ತಿಗೆ ಸುಖದ ನಿಜವಾದ ಮೂಲವನ್ನು ಕಂಡು ಹಿಡಿಯುವ ಮಹದಾಸೆ ಇರಬೇಕು.
ಈ ಐಹಿಕ ಜಗತ್ತು ಯಾತನಮಯವಾದುದಷ್ಟೇ ಅಲ್ಲ, ಅಸ್ಥಿರವೂ, ಕ್ಷಣ ಭಂಗುರವೂ, ದೀಪದ ಕುಡಿಯಂತೆ ಹೊಯ್ದಾಡುತ್ತಿರುವುದೂ ಆಗಿದೆ. ಇಂತಹ ಐಹಿಕ ಜಗತ್ತಿನಲ್ಲಿ ಶಾಶ್ವತ ಸುಖವನ್ನು ಹುಡುಕ ಹೊರಟಿರುವ ಭ್ರಮಾಧೀನ ಜೀವಿಯ ಅವಸ್ಥೆಯು ಬಿದುರಿನ ಕಡ್ಡಿಯಿಂದ ಕಬ್ಬಿನ ಹಾಲು ತೆಗೆಯ ಹೊರಟ ದಡ್ಡ ವ್ಯಕ್ತಿಯ ರೀತಿಯದೇ ಆಗಿದೆ.

ಐಹಿಕ ಜಗತ್ತು ಯಾತನಾಮಯವಾದದ್ದೆಂದು ಭಗವದ್ಗೀತೆಯಲ್ಲಿ ವರ್ಣಿಸಲಾಗಿದೆ. ಸುಖಾಪೇಕ್ಷೆಯೇನೋ ಒಳ್ಳೆಯದೆ. ಆದರೆ ವೈಜ್ಞಾನಿಕ ಸಾಧನಗಳು ಎಂದು ಕರೆಸಿಕೊಳ್ಳುವ ವಸ್ತುಗಳ ಮೂಲಕ ಸುಖವನ್ನು ಸಂಪಾದಿಸುವ ಪ್ರಯತ್ನವು ಭ್ರಮಾತ್ಮಕವಾದದ್ದು, ಭ್ರಮಾತ್ಮಕ ಮನೋಧರ್ಮದ ಜನರು ಇದನ್ನು ಅರ್ಥಮಾಡಿಕೊಳ್ಳಲಾರರು.
ಐಹಿಕ ಸುಖದ ಹುಚ್ಚು ಹಿಡಿದ ವ್ಯಕ್ತಿಯು – ಇಗೋ ಇವತ್ತಿನ ನನ್ನ ಸಂಪತ್ತು ಇಷ್ಟಿದೆ, ನಾನು ಈಗ ಹಾಕಿಕೊಂಡಿರುವ ಯೋಜನೆಗಳಿಂದ ಇನ್ನಷ್ಟು ಬರುತ್ತದೆ, ಈಗಿರುವುದಕ್ಕೆ ಮುಂದೆ ಬರುವುದೂ ಸೇರಿ ನಾನು ಧನಿಕನಾಗುತ್ತೇನೆ – ಹೀಗೆ ನಡೆದಿರುತ್ತದೆ ಅವನ ಆಲೋಚನೆ.
ಆಧುನಿಕ ನಾಗರಿಕತೆಯ ಹೆಸರಿನ ನಾಸ್ತಿಕತೆಯ ಬದುಕು ಕೇವಲ ಇಂದ್ರಿಯ ತುಷ್ಟಿಗಾಗಿ ನಡೆಯುತ್ತಿರುವ ಒಂದು ದೊಡ್ಡ ಆಟ. ಈ ಆಟದಲ್ಲಿ ಪ್ರತಿಯೊಬ್ಬರಿಗೂ ಹಣ ಬೇಕು. ಏಕೆ? ಏಕೆಂದರೆ ಹಣವು ಇಂದ್ರಿಯ ಭೋಗಕ್ಕೆ ಬೇಕಾದ ಸವಲತ್ತುಗಳನ್ನು ಕೊಳ್ಳಲು ಇರುವ ಒಂದು ವಿನಿಮಯ ವ್ಯವಸ್ಥೆ ಇಂದ್ರಿಯ ತುಷ್ಟಿಯ ಒಂದು ಹನಿಮಾತ್ರದ ಹುಟ್ಟಿರುವಷ್ಟು ಕಾಲವೂ ಶಾಂತಿಯೂ ದೂರ – ಬಹುದೂರ ಉಳಿಯುತ್ತದೆ.
ಅಲ್ಲಿರುವುದು ಕೇವಲ ಅಶಾಂತಿ, ಇಂದು ಅತ್ಯುನ್ನತ ಹುದ್ದೆಯಲ್ಲಿರುವ ಆಡಳಿತಗಾರನಿಂದ ಮೊದಲು ಮಾಡಿಕೊಂಡು ಕೆಳಮಟ್ಟದಲ್ಲಿ ರಸ್ತೆ ಗುಡಿಸುವವನ ತನಕ ಪ್ರತಿಯೊಬ್ಬನೂ ಅಕ್ರಮ ಆಸ್ತಿ ಹಣ ಸಂಪಾದನೆಯ ದಿಕ್ಕಿನಲ್ಲಿ ಆಲೋಚಿಸುತ್ತಿದ್ದಾನೆ. ಅಯುಕ್ತ ಮಾರ್ಗಗಳಿಂದ ಹಣ ಗಳಿಕೆಯಾಗುತ್ತಿರುವುದರ ಪರಿಣಾಮವಾಗಿ ಜಗತ್ತಿನಲ್ಲಿ ಹಣದ ಅಭಾವವಿಲ್ಲ.
ಆದರೆ ಶಾಂತಿಯ ಕೊರತೆಯಿದೆ. ಇಡೀ ಮನುಷ್ಯ ಪ್ರಯತ್ನವು ಹಣಗಳಿಕೆಯ ಕಡೆ ಹರಿದಿರುವ ಕಾರಣ ಒಟ್ಟು ಮನುಷ್ಯ ಕುಲದ ದ್ರವ್ಯಾರ್ಜನೆಯ ಸಾಮರ್ಥ್ಯವು ನಿಜವಾಗಿಯೂ ವರ್ಧಿಸಿದೆ. ಆದರೆ ನಿರ್ಬಂಧಿತ ಹಾಗೂ ಕಾನೂನು ಬಾಹಿರ ಹಣದುಬ್ಬರವು ಹದಗೆಟ್ಟ ಆರ್ಥಿಕ ಸ್ಥಿತಿಯಲ್ಲಿ ಪರ್ಯವಸಾನವಾಗಿದೆ. ಅಷ್ಟೇ ಅಲ್ಲ.

ಅಗಾಧ ಪ್ರಮಾಣದ ಅಸ್ತ್ರಗಳ ತಯಾರಿಕೆಗೆ ಅನುಕೂಲ ಮಾಡಿಕೊಟ್ಟಿದೆ. ಯಾವ ಉದ್ದೇಶಕ್ಕಾಗಿ ಹಣವನ್ನು ಸಂಪಾದಿಸಲಾಯಿತೋ ಆ ಉದ್ದೇಶವನ್ನೇ ಈ ಅಸ್ತ್ರಗಳು ನಾಶಪಡಿಸುತ್ತಿವೆ. ತೃಪ್ತಿಗೊಳಿಸಲಾಗದ ಅಪೇಕ್ಷೆಗಳನ್ನು ಪೂರೈಸಿಕೊಳ್ಳಲು ಈ ಜನಕ್ಕೆ ಈ ಹೊತ್ತು ಅನಿಯಮಿತ ಪ್ರಮಾಣದ ಹಣ ಬೇಕಾಗಿದೆ.
ಮತ್ತು ಅವನ ಅನುಚಿತ ಆಸೆಗಳ ಪ್ರಮಾಣಕ್ಕನುಗುಣವಾಗಿ ವ್ಯಕ್ತಿಯು ಸಂಚಯಿಸಿದ ಹಣವನ್ನು ಭ್ರಮೆಗೊಳಿಸುವ ಪ್ರಕೃತಿಯ ಕಾರಭಾರಿಗಳಾದ ವೈದ್ಯರು, ವಕೀಲರು, ತೆರಿಗೆ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಹೆಸರಿಗೆ ಮಾತ್ರದ ಧರ್ಮಿಷ್ಟರು ಕಸಿಯುತ್ತಿದ್ದಾರೆ. ಸಾಲದಕ್ಕೆ ಬರ, ಭೂಕಂಪ, ಮತ್ತಿತರ ಪ್ರಕೃತಿಯ ವಿಕೋಪಗಳು ಈ ಕಾರಭಾರಿಗಳ ನೆರವಿಗೆ ನಿಂತಿವೆ.
ನಾವು ಸುಗಮವಾಗಿ ಬಾಳಲು ಸಾಕಾಗುವಷ್ಟು ಹಣಕ್ಕಿಂತ ಹೆಚ್ಚಿನದನ್ನು ಸ್ವೀಕರಿಸಲು ಪ್ರಕೃತಿ ನಿಯಮವು ನಮ್ಮನ್ನು ಬಿಡುವುದಿಲ್ಲ. ಪ್ರತಿಯೊಬ್ಬ ಜೀವಿಗೂ ಅವನಿಗೆ ಬೇಕಾಗುವಷ್ಟು ಅನ್ನ ಹಾಗೂ ವಸತಿಯನ್ನು ನೀಡಲು ಪ್ರಕೃತಿಯ ನಿಯಮದಲ್ಲಿ ಸಾಕಷ್ಟು ಏರ್ಪಾಡಿದೆ. ಆದರೆ ಮನುಷ್ಯನಿಗಿರುವ ತೃಪ್ತಿಪಡಿಸಲಾಗದ ಕಾಮವು ಎಲ್ಲ ಜೀವಿಗಳ ಬಗ್ಗೆ ಭಗವಂತನ ಸರ್ವಶಕ್ತತೆಯ ಏರ್ಪಾಡು ಹಾಳಾಗುವಂತೆ ಮಾಡಿದೆ.
ಆದರೆ ವೈದಿಕ ಸಾಹಿತ್ಯದಲ್ಲಿ ಹೇಳಿರುವಂತೆ ಐಶ್ವರ್ಯ ದೇವತೆಯು ನೀಡುವ ಅನುಗ್ರಹ ನಾರಾಯಣನ ಅಥವಾ ಕೃಷ್ಣ ಸೇವೆ ಮಾಡದೆ, ಅದನ್ನು ನರರು ಅನುಭವಿಸಲಾರರು. ಒಂದು ವೇಳೆ ಐಶ್ವರ್ಯವನ್ನು ಅನುಭವಿಸಲು ಪ್ರಯತ್ನ ಪಟ್ಟರ ಪ್ರಾಕೃತಿಕ ನಿಯಮಗಳ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅವನ ಬದುಕೇ ಅಶಾಂತಿಯ ಮೂಲವಾಗುತ್ತದೆ.
– ಸಂಗ್ರಹಾನುವಾದ : ಡಾ.ಕೆ. ವೈ. ಬಾಲರಾಜ್, ಆಧಾರ : ಆತ್ಮಾನ್ವೇಷಣೆಯ ಪಯಣ






Leave a Reply