– ಆಧಾರ: ಸಮಗ್ರ ದಾಸ ಸಾಹಿತ್ಯ, ಸಂಪುಟ -3, ಭಾಗ -1 ಹಾಗೂ ಸಂಪುಟ -4
ಪುರಂದರದಾಸರು ಮತ್ತು ಕರ್ನಾಟಕ ಸಂಗೀತ

ಕರ್ನಾಟಕ ಸಂಗೀತ ಪಿತಾಮಹ ಎಂದು ಕರೆಯಿಸಿಕೊಂಡಿರುವ ಪುರಂದರದಾಸರು ಕರ್ನಾಟಕ ಸಂಗೀತಕ್ಕೆ ನೀಡಿದ ಕೊಡುಗೆ ಅಗಾಧವಾದುದು. ಈಗ ಕರ್ನಾಟಕ ಸಂಗೀತ ಸಂಪ್ರದಾಯದಲ್ಲಿ ಪ್ರಸಿದ್ಧರಾಗಿರುವ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಶಾಸ್ತ್ರಿಗಳಿಗೆ ತ್ರಿಮೂರ್ತಿಗಳೆಂದು ಹೆಸರು. ಇವರಲ್ಲಿ ತ್ಯಾಗರಾಜರು ಪುರಂದರದಾಸರನ್ನು ಅತ್ಯಂತ ಗೌರವದಿಂದ ಉಲ್ಲೇಖಿಸಿದ್ದಾರೆ.
ಹನ್ನೆರಡನೆಯ ಶತಮಾನದ ಚಾಲುಕ್ಯ ಸೋಮೇಶ್ವರ, ಹದಿನಾಲ್ಕನೇ ಶತಮಾನದ ವಿದ್ಯಾರಣ್ಯ ಮೊದಲಾದ ಶಾಸ್ತ್ರಕಾರರು, ಪುರಂದರದಾಸರಂತಹ ವಾಗ್ಗೇಯಕಾರರು ದಕ್ಷಿಣಭಾರತ ಸಂಗೀತವು ಕರ್ನಾಟಕ ಸಂಗೀತ” ವೆಂದೇ ಪ್ರಸಿದ್ಧವಾಗಲು ಪ್ರಮುಖವಾಗಿ ಕಾರಣರಾಗಿದ್ದಾರೆ.
ಪುರಂದರದಾಸರ ಪದಗಳನ್ನೇ ಮಾದರಿಯಾಗಿಟ್ಟುಕೊಂಡು ಮುಂದೆ, ವಾಗ್ಗೇಯಕಾರರುಗಳಾದ ಕ್ಷೇತ್ರಜ್ಞ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶಾಮಾಶಾಸ್ತ್ರಿಗಳು ತಮ್ಮ ಕೃತಿಗಳನ್ನು ರಚಿಸಿದರೆಂದು ತಿಳಿದುಬರುತ್ತದೆ. ತ್ಯಾಗರಾಜರಂತಹ ಪ್ರಸಿದ್ಧ ಸಂಗೀತಕಾರರ ಮೇಲೆ ಪುರಂದರದಾಸರ ದಟ್ಟ ಪ್ರಭಾವವಿದ್ದುದು ಇದರಿಂದ ಸ್ಪಷ್ಟವಾಗುತ್ತದೆ.
ಅನೇಕ ಸಂಗೀತ ವಿದ್ವಾಂಸರು ತಮ್ಮ ಲಕ್ಷಣ ಗ್ರಂಥಗಳಲ್ಲಿ ಪುರಂದರದಾಸರ ರಚನೆಗಳನ್ನು ಲಕ್ಷ್ಯಗಳನ್ನಾಗಿ ಉಲ್ಲೇಖಿಸಿದ್ದಾರೆ. ಪುರಂದರದಾಸರು ಶಾಸ್ತ್ರೀಯ ಸಂಗೀತಕ್ಕೆ ಕೊಟ್ಟ ಅತಿದೊಡ್ಡ ಕೊಡುಗೆಯೆಂದರೆ, ಅನೇಕ ಜಾನಪದ ರಾಗಗಳನ್ನು ಶಾಸ್ತ್ರೀಯವಾಗಿ ಅಳವಡಿಸಿದುದಾಗಿದೆ.
ಆದಿಕಾಲದಿಂದಲೂ ಜನಸಾಮಾನ್ಯರ ನಾಲಗೆಯ ಮೇಲೆ ಜೀವಂತವಾಗಿದ್ದ ಜನಪದ ಲಯಗಳನ್ನು ಪುರಂದರರು ಹಿಡಿದಿಟ್ಟುಕೊಂಡು ಅವುಗಳಿಗೆ ಶಾಸ್ತ್ರೀಯ ರೂಪಕೊಟ್ಟುದುದು ಮಹತ್ವದ ಅಂಶವಾಗಿದೆ. ಜಾನಪದವೆಂದರೆ ಮೂಗು ಮುರಿಯುತ್ತಿದ್ದ ಸಂದರ್ಭದಲ್ಲಿ ಪುರಂದರರು, ಜಾನಪದದ ಮೂಲ ಸತ್ತ್ವವನ್ನು ಪರಿಚಯಿಸಿದ್ದು, ಜಾನಪದ ಲಯಗಳನ್ನು ಸ್ವೀಕರಿಸಿದ್ದು ತುಂಬ ಮುಖ್ಯವಾಗುತ್ತದೆ.
ತ್ಯಾಗರಾಜರೂ ಅನೇಕ ಜನಪದ ಮಟ್ಟುಗಳನ್ನು ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿದ್ದಾರೆ. ಅವರಿಗಿಂತ ಪೂರ್ವದಲ್ಲಿಯೇ ಪುರ೦ದರದಾಸರು ಇಂತಹ ಕಾರ್ಯವನ್ನು ಕೈಕೊಂಡು ತ್ಯಾಗರಾಜರಂಥವರಿಗೆ ಮಾದರಿಯಾಗಿದ್ದಾರೆ. ಪುರಂದರದಾಸರು ಜಾನಪದದಿಂದ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿದ ರಾಗಗಳಲ್ಲಿ ಕುರಂಜಿ, ನವರಾಜ, ಮಂಜಿ (ಮಂಜೀಷ ಭೈರವಿ) ಈ ಮುಂತಾದವುಗಳು ಪ್ರಮುಖ ಉದಾಹರಣೆಗಳಾಗಿವೆ.
ಹೀಗೆ ಅನೇಕ ರಾಗಗಳನ್ನು ಸೃಷ್ಟಿಸುವುದರ ಮೂಲಕ, ಕನ್ನಡದಲ್ಲಿ ಹೊಸ ರಚನೆಗಳನ್ನು ಮಾಡುವುದರ ಮೂಲಕ ಪುರಂದರರು ಶಾಸ್ತ್ರೀಯ ಸ೦ಗೀತಕ್ಕೆ ಹೊಸ ತಿರುವು ನೀಡಿದ್ದಾರೆ.
ಪುರ೦ದರರಿಂದ ಪ್ರೇರಿತರಾದ ಶ್ರೀ ತ್ಯಾಗರಾಜರು ”ಪ್ರಹ್ಲಾದ ಭಕ್ತವಿಜಯ”ವೆಂಬ ಸಂಗೀತ ರೂಪಕದಲ್ಲಿ ದಾಸರನ್ನು ಮುಕ್ತಕಂಠದಿಂದ ಸ್ತುತಿಸಿದ್ದಾರೆ. ಕರ್ನಾಟಕ ಸಂಗೀತಕ್ಕೆ ಸಂಬಂಧಿಸಿದಂತೆ ಪುರಂದರದಾಸರ ಪ್ರಮುಖ ಕೊಡುಗೆಯ ಮಹತ್ವ ಇದರಿಂದ ತಿಳಿದು ಬರುತ್ತದೆ.

ಪುರ೦ದರದಾಸರಿಗಿಂತ ಪೂರ್ವದಲ್ಲಿ ಹನ್ನೆರಡನೆಯ ಶತಮಾನದ ಶಿವ ಶರಣರು, ನಿಜಗುಣಶಿವಯೋಗಿಗಳಂತಹ ತತ್ತ್ವಪದಕಾರರು ನರಹರಿತೀರ್ಥ- ಶ್ರೀಪಾದರಾಯ – ಶ್ರೀವ್ಯಾಸರಾಯರಂತೆ ಹರಿದಾಸರು ಕರ್ನಾಟಕ ಸಂಗೀತಕ್ಕೆ ತಮ್ಮದೇ ಆದಂತಹ ವಿಶಿಷ್ಟ ಕಾಣಿಕೆ ಕೊಟ್ಟಿದ್ದಾರೆ.
ಆದರೆ ಕರ್ನಾಟಕ ಸಂಗೀತ ಪಿತಾಮಹರೆಂಬ ಕೀರ್ತಿಗೆ ಪುರಂದರದಾಸರು ಮಾತ್ರ ಪಾತ್ರರಾಗಿದ್ದಾರೆ. ಕರ್ನಾಟಕ ಸಂಗೀತವನ್ನು ಅಭ್ಯಸಿಸಲು ಸೂತ್ರಬದ್ಧವಾದ ವ್ಯವಸ್ಥೆಯೊಂದನ್ನು ಮಾಡಿದ ಕೀರ್ತಿ ಪುರಂದರದಾಸರಿಗೆ ಸಲ್ಲುತ್ತದೆ.
ಪುರಂದರದಾಸರ ಸಮಕಾಲೀನರಾಗಿದ್ದ ರಾಮಾಮಾತ್ಯರು ರಾಗಗಳಲ್ಲಿಯೇ ಮಾಲವಗೌಡ ರಾಗ ಅತ್ಯುತ್ತಮವೆಂದು ಹೇಳಿದ್ದಾರೆ. ಈ ಮಾಲವಗೌಡ ಸ್ವರಾವಳಿಯನ್ನು ಪುರಂದರರೇ ಬಳಕೆಯಲ್ಲಿ ತಂದಿದ್ದಾರೆ. ಮುಂದೆ ಅರ್ಧಶತಮಾನದ ಆನಂತರ ಬಂದ ತಾನಸೇನನು ಭೈರವಿ ರಾಗವನ್ನು ಆದಿರಾಗವೆಂದು ಕರೆದಿದ್ದಾನೆ.
ಮಹಾನ್ ಸಂಗೀತ ವಿದ್ವಾಂಸರಿಗೆ ಪುರಂದರರು ಮಾದರಿಯಾಗಿದ್ದಾರೆ. ಪುರಂದರದಾಸರ ಸಾಹಿತ್ಯ ಒಂದು ಕಣ್ಣಾದರೆ, ಸಂಗೀತ ಮತ್ತೊಂದು ಕಣ್ಣಾಗಿದೆ. ಹೀಗೆ ಸಾಹಿತ್ಯ – ಸಂಗೀತ ಎರಡೂ ಕ್ಷೇತ್ರದಲ್ಲಿ ಪುರಂದರರ ಸಾಧನೆ ಗಮನಾರ್ಹವಾಗಿದೆ.
ಪುರಂದರದಾಸರ ಉಗಾಭೋಗಗಳು
ಉಗಾಭೋಗವು ಹರಿದಾಸ ಸಾಹಿತ್ಯದಲ್ಲಿ ತೀರ ಚಿಕ್ಕದಾದ ಚೊಕ್ಕವಾದ ಸಾರವತ್ತಾದ ಪ್ರಕಾರ. ಉಗಾಭೋಗವು ಲಘುವಾದ ಬಂಧ. ರಾಗ ಪ್ರಧಾನವಾಗಿ ಸಂಗೀತದ ತಳಗಟ್ಟಿಯ ಮೇಲೆ ರೂಪಿತವಾದ ಪುಟ್ಟ ರಸಗಟ್ಟಿ. ಸಂಸ್ಕೃತ ಶ್ಲೋಕಕ್ಕೆ ಸಂವಾದಿಯಾದ ಪ್ರಕಾರ. ಶರಣರ ವಚನಗಳಂತೆ ಕಂಡರೂ ಸಂಗೀತದ ಕಟ್ಟುಪಾಡುಗಳಿಂದ ಕೇಳುಗರಲ್ಲಿ ಆದರವನ್ನು ಮೂಡಿಸುವ ಸೊಬಗು ಇಲ್ಲಿದೆ.
ಇಲ್ಲಿರುವ ಬಿಗಿ ಬಂಧದಿಂದಾಗಿ ಉನ್ನತಮಟ್ಟದ ಆನಂದ ಪ್ರಾಪ್ತಿಗೆ ಅನುವು ಸಾಧ್ಯವಾಗುವುದು. ಕೀರ್ತನೆಗಳಲ್ಲಿ ಪಲ್ಲವಿ, ಅನುಪಲ್ಲವಿ ಹಾಗು ಚರಣ (ನುಡಿ)ಗಳಲ್ಲಿ ಭಾವವು ಚದುರಿಹೋದರೆ, ಇಲ್ಲಿ ಭಾವವು ಪಾದಗಳ ನಿಯತತೆ ಇತ್ಯಾದಿ ಕಟ್ಟುಪಾಡುಗಳಿಲ್ಲದೆ, ಅನುಭವವು ಹೆಚ್ಚಾದಂತೆ ಮಾತು ಹಿತ ಮಿತವಾಗಿ ಆತ್ಮದರ್ಶನವನ್ನು ಬೇಗನೆ ಪಡೆಯುವಲ್ಲಿ ಇಂಬು ನೀಡಿದೆ.
ಈ ಉಗಾಭೋಗಗಳ ಧಾಟಿಯನ್ನು ಕಂಡಾಗ ಜಾನಪದ ಗೀತೆಗಳಂತೆ, ಅನುಭವದಾಳದಿಂದ ಬಂದ ಭಾವಗೀತೆಗಳಂತೆ ಇವು ಶೋಭಿಸುತ್ತವೆ. ವಿಶೇಷವಾಗಿ ಜ್ಞಾನಾನುಭವಗಳಿಂದ ಮನಸ್ಸಿಗೆ ಸಮಾಧಾನವನ್ನು ನೀಡುವ ಮುಕ್ತಕಗಳು ಇವು.

ಹೀಗೆ ಉಗಾಭೋಗ ಪ್ರಕಾರವು, ಆತ್ಮ ಪರಿಶೀಲನೆಗೆ ತೊಡಗಿಸಿ ಪರಿಸರಜ್ಞಾನದ ಹಿನ್ನೆಲೆಯಲ್ಲಿ ಆತ್ಮಸ್ಥೈರ್ಯವನ್ನು ತುಂಬಿ, ಸಾಧನೆಗೆ ಶಕ್ತಿಯನ್ನು ನೀಡುವ ಅತ್ಯಂತ ಪ್ರಭಾವೀ ಪ್ರಕಾರವಾಗಿ, ಹರಿದಾಸ ಸಾಹಿತ್ಯದ ಮುಖಾಂತರ ಕನ್ನಡ ಸಾಹಿತ್ಯದ ವಿಶಿಷ್ಟ ಕೊಡುಗೆ.
ಹರಿದಾಸ ಸಾಹಿತ್ಯದ ಮತ್ತೊಂದು ವಿಶಿಷ್ಟ ಪ್ರಕಾರವು ಸುಳಾದಿ. ಈ ಪ್ರಕಾರದಲ್ಲಿಯೂ ಹರಿದಾಸರೆಲ್ಲರ ಕೃತಿ ಸಂಖ್ಯೆ, ಕೀರ್ತನ ಪ್ರಕಾರದಲ್ಲಿಯ ಸಂಖ್ಯೆಗಿಂತ ಕಮ್ಮಿಯೇ ಹೌದು. ಕೀರ್ತನೆಗಳಿಗಿಂತ ತೀರ ಭಿನ್ನವೆನಿಸುವ ಈ ಪ್ರಕಾರವು ಶಾಸ್ತ್ರೀಯವಾದ ಗೂಢ ಪ್ರಮೇಯಗಳ ಗಾಢ ಚಿಂತನೆಗೆ ಅವಕಾಶ ಮಾಡಿಕೊಡುತ್ತದೆ.
ಹರಿ ಸರ್ವೋತ್ತಮದಂತಹ ತತ್ತ್ವ ವಿಚಾರಗಳು ಇಲ್ಲಿ ಓತಪ್ರೋತವಾಗಿ ಹರಿದು ಅಲ್ಲಿರುವ ನಿಗೂಢತೆಯನ್ನು ಸರಳಗೊಳಿಸುತ್ತವೆ. ಗುರುಭಕ್ತಿ, ಗುರೂಪದೇಶ, ವೈರಾಗ್ಯ ಸಾಧನೆಗಳಂತಹ ವಿಚಾರಗಳು ಈ ಪ್ರಕಾರದಲ್ಲಿ ಸುಸ್ಪಷ್ಟವಾಗಿ ಚಿತ್ರಿತವಾಗುತ್ತವೆ.
ಸುಳಾದಿಯು ತಾಳ ಪ್ರಧಾನವಾಗಿರುವ ಬಂಧದ ಪ್ರಕಾರ ಎಂಬುದು ನಿರ್ವಿವಿವಾದ. ಇದರಲ್ಲಿ ಧ್ರುವ, ಮಠ್ಯ, ರೂಪಕ, ಝಂಪಕ, ತ್ರಿಪುಟ, ಅಡ್ಡತಾಲ ಮತ್ತು ಏಕತಾಲಗಳೆಂಬ ಸಪ್ತತಾಲಗಳಿರುತ್ತವೆ. ಕೆಲವು ಸಲ ಐದು ತಾಲಗಳು ಇರುತ್ತವೆ. ಕೊನೆಯಲ್ಲಿ ʼಜತೆ’ ಅಥವಾ ‘ಜೊತೆ’ ದ್ವಿಪದಿಯಂತಹುದು ಇರುತ್ತದೆ.
ಈ ಜೊತೆಯಲ್ಲಿ ಆ ಸುಳಾದಿಯ ಸಾರ ಸಂಗ್ರಹವು ಇರುತ್ತದೆ. ಸುಳಾದಿಯ ಸಾಲುಗಳು ಅವುಗಳ ವಿಸ್ತಾರ, ಶಬ್ದ, ಅಕ್ಷರಗಳೂ ಅನಿಮಿತವಾಗಿರುತ್ತವೆ. ಸುಳಾದಿಯ ಒಂದೊಂದು ನುಡಿಯ ಕೊನೆಯಲ್ಲಿ ಕರ್ತೃವಿನ ಅಂಕಿತವು ಬಂದೇ ಬರುತ್ತದೆ.
ಸುಳಾದಿಗಳು ತಾಳ ಮಾಲಿಕಾ ರಚನೆಗಳಾಗಿವೆ. ಅವುಗಳಲ್ಲಿ ಐದರಿಂದ ಮೊದಲ್ಗೊಂಡು ಒಂಬತ್ತು ಅಥವಾ ಹತ್ತರವರೆಗೆ ಅನೇಕ ಪದ್ಯಗಳಿರುತ್ತವೆ. ಒಂದೇ ಸುಳಾದಿಯಲ್ಲಿ ಹಾಗೂ ಸುಳಾದಿಯಿಂದ ಸುಳಾದಿಯಲ್ಲಿರುವ ಪದ್ಯಗಳ ಪಂಕ್ತಿ ಸಂಖ್ಯೆಗಳು ವ್ಯತ್ಯಾಸವಾಗುತ್ತವೆ. ಪದ್ಯದ ಪಂಕ್ತಿಯ ವಿಸ್ತಾರವೂ ಅನಿರ್ಬಂಧಿತವಾದದ್ದು.
ಸುಳಾದಿಗಳು ಹರಿದಾಸರ, ”ಮಧುರಭಾವ, ದಾಸ್ಯಭಾವ, ಹರಿಸರ್ವೋತ್ತಮ ತತ್ತ್ವದ ಪ್ರತಿಪಾದನೆ, ಗುರುಕರುಣೆಯ ಮಹತ್ವ, ಹರಿನಾಮ ಮಹಿಮೆ, ನವವಿಧ ಭಕ್ತಿನಿರೂಪಣೆ, ಹರಿಯ ದಶಾವತಾರಗಳು, ನಿಂದಾಸ್ತುತಿ ಎಲ್ಲವೂ ಈ ಸುಳಾದಿಯ ಪ್ರಣಾಲಿಯಲ್ಲಿ ಹರಿದು ಬಂದಿದೆ.
ಹಿರಿಯ ತತ್ತ್ವಗಳ ನಿರೂಪಣೆಗೆ ಮಾಧ್ಯಮಗಳಾಗಿವೆ. ಸಂಗೀತದ ಹಿನ್ನೆಲೆಯಲ್ಲಿ ಸಾಹಿತ್ಯದ ತತ್ತ್ವಗಳನ್ನು ಬಿತ್ತರಿಸುವ ಈ ಸುಳಾದಿಗಳು ನಿಜಕ್ಕೂ ಕನ್ನಡ ಸಾಹಿತ್ಯ, ಧರ್ಮ, ಹಾಗೂ ಸಂಗೀತ ಪ್ರಪಂಚಗಳಿಗೆ ಹರಿದಾಸರ ಅಮೂಲ್ಯ ಕೊಡುಗೆ.’ ಪುರಂದರದಾಸರ ಕೊಡುಗೆಯೂ ಸುಳಾದಿ ಪ್ರಕಾರಕ್ಕೆ ಅಸಾಧಾರಣವಾದದ್ದು.






Leave a Reply