– ಆಂಗ್ಲಮೂಲ: ಶ್ರೀ ಯದುರಾಜ ದಾಸ, ಅನುವಾದ: ಸುರೇಶ್ ಮೂನ
ಹಲವು ದಿನಗಳ ಕಾಲ ಕೃಷ್ಣನು ಉದ್ಧವನಿಂದ ವೃಂದಾವನ ಭೇಟಿ, ತನ್ನ ತಂದೆ ತಾಯಿಯರ ಸ್ಥಿತಿ, ಗೋಪಿಯರ ಮತ್ತು ಗೋಪಬಾಲರ ಸ್ಥಿತಿ ಇವುಗಳ ವಿವರಗಳನ್ನು ಕೇಳಿದನು. ತನ್ನ ಮಾರ್ಗದರ್ಶನದಿಂದ ಮತ್ತು ತಾನು ಕೊಂಡೊಯ್ದ ಸಂದೇಶದಿಂದ ಉದ್ಧವನು ಅವರನ್ನು ಸಮಾಧಾನಪಡಿಸಿದ ಎಂದು ಕೃಷ್ಣನಿಗೆ ಮನವರಿಕೆಯಾಯಿತು.

ಅನಂತರ ಕೃಷ್ಣನು ಉದ್ಧವನೊಂದಿಗೆ ಕುಬ್ಜೆಯ ಮನೆಗೆ ಹೋಗಲು ನಿರ್ಧರಿಸಿದನು. ಶ್ರೀಕೃಷ್ಣನು ಮಥುರಾ ನಗರವನ್ನು ಪ್ರವೇಶಿಸುತ್ತಿದ್ದಾಗ ಅವನಿಗೆ ಶ್ರೀಗಂಧವನ್ನು ಅರ್ಪಿಸಿದ ಗೂನುಬೆನ್ನಿನ ಯುವತಿಯೇ ಕುಬ್ಜೆ.
ಕೃಷ್ಣನು ತಾನು ಕೊಟ್ಟ ಮಾತಿನಂತೆ ತನ್ನ ಮನೆಗೆ ಬಂದುದನ್ನು ಕಂಡು ಕುಬ್ಜೆ ಮಹದಾನಂದದಿಂದ ಬಂದು ಕೃಷ್ಣನನ್ನು ಅವನ ಗೆಳೆಯ ಉದ್ಧವನನ್ನು ಆತ್ಮೀಯವಾಗಿ ಬರಮಾಡಿಕೊಂಡಳು. ಅವರಿಗೆ ಕೂರಲು ಸೂಕ್ತವಾದ ಪೀಠವನ್ನು ಕೊಟ್ಟಳು. ಉದ್ಧವನು ಕೃಷ್ಣನಿಗೆ ಸಮನಾಗಿ ಪೀಠದ ಮೇಲೆ ಕೂರದೆ ನೆಲದ ಮೇಲೆಯೇ ಕುಳಿತನು.
ಕುಬ್ಜೆಯು ತನ್ನ ಗೆಳೆತಿಯರೊಂದಿಗೆ, ಕೃಷ್ಣನೊಂದಿಗೆ ಗೌರವಾದರಗಳೊಂದಿಗೆ ಮಾತನಾಡತೊಡಗಿದಳು. ಕುಬ್ಜೆಯ ಮನೆಯಲ್ಲಿ ಸ್ವಲ್ಪ ಸಮಯ ಕಳೆದು ತನ್ನ ಮಧುರ ಮಾತುಗಳು ಹಾಗೂ ದಿವ್ಯ ಸಾನ್ನಿಧ್ಯದಿಂದ ಅವಳನ್ನು ಸಂತೋಷಗೊಳಿಸಿದ ಕೃಷ್ಣನು ಉದ್ಧವನೊಂದಿಗೆ ಅಲ್ಲಿಂದ ಹೊರಟನು.
ಸ್ವಲ್ಪ ಸಮಯದ ಅನಂತರ ಇದೇ ರೀತಿ ಅಕ್ರೂರನ ಮನೆಗೂ ಬರುವುದಾಗಿ ಮಾತುಕೊಟ್ಟಿದ್ದನ್ನು ನಡೆಸಿಕೊಡಲು ಬಲರಾಮ ಮತ್ತು ಉದ್ಧವರೊಂದಿಗೆ ಕೃಷ್ಣನು ಅಕ್ರೂರನ ಮನೆಗೆ ಹೋದನು. ಅವರು ತನ್ನ ಮನೆಯ ಬಳಿಗೆ ಬರುತ್ತಿದ್ದಂತೆ ಅಕ್ರೂರನು ಮುಂದೆ ಬಂದು ಉದ್ಧವನನ್ನು ಆಲಿಂಗಿಸಿದನು ಮತ್ತು ಕೃಷ್ಣ ಬಲರಾಮರಿಗೆ ತಲೆಬಾಗಿ ‘ಗೌರವಪೂರ್ವಕ ಪ್ರಣಾಮಗಳನ್ನು ಅರ್ಪಿಸಿದನು.
ಆ ಮೂವರೂ ಪ್ರತಿಯಾಗಿ ಅವನಿಗೆ ನಮಸ್ಕರಿಸಿದರು. ಅಕ್ರೂರನು ಅವರಿಗೆ ಉಚಿತವಾದ ಆಸನಗಳನ್ನು ನೀಡಿದನು. ಆ ಅನಂತರ ಅವರ ಪಾದಗಳನ್ನು ತೊಳೆದು ನೀರನ್ನು ತಲೆಗೆ ಪ್ರೋಕ್ಷಿಸಿಕೊಂಡನು. ಅನ೦ತರ ಕ್ರಮವಾಗಿ ಪೂಜೆಯಲ್ಲಿ ಒಳ್ಳೆಯ ಹೂಗಳನ್ನು, ತೇಯ್ದ ಶ್ರೀಗಂಧವನ್ನು ಅರ್ಪಿಸಿದನು.
ಅಕ್ರೂರನು ಸತ್ಕರಿಸಿದ ರೀತಿಯಿಂದ ಈ ಮೂವರಿಗೂ ತೃಪ್ತಿಯಾಯಿತು. ಅನಂತರ ಅಕ್ರೂರನು ಭೂಮಿಗೆ ತಲೆ ತಾಗಿಸಿ ಕೃಷ್ಣನಿಗೆ ನಮಸ್ಕರಿಸಿದನು. ಕೃಷ್ಣನ ಚರಣಕಮಲಗಳನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಅವುಗಳನ್ನು ಮೃದುವಾಗಿ ಒತ್ತಿದನು. ಕೃಷ್ಣನ ಪ್ರೇಮದಿ೦ದ ಅವನ ಕಣ್ಣುಗಳು ಹನಿಗೂಡಿದವು. ಅಕ್ರೂರನ ಸತ್ಕಾರ ಹಾಗೂ ಪ್ರಾರ್ಥನೆಗಳು ಮುಗಿದ ಅನಂತರ ಕೃಷ್ಣನು ಅಕ್ರೂರನನ್ನು ಕುರಿತು ಹೀಗೆಂದನು:

”ಪ್ರಿಯ ಅಕ್ರೂರ, ನೀನು ಸದಾ ನಮ್ಮ ಸ್ನೇಹಿತ ಮತ್ತು ಹಿತೈಷಿ. ನಮ್ಮ ಒಳಿತಿಗಾಗಿ ಕೆಲಸ ಮಾಡಲು ನೀನು ಸದಾ ಸಿದ್ಧ. ಆದ್ದರಿಂದ ದಯವಿಟ್ಟು ಹಸ್ತಿನಾಪುರಕ್ಕೆ ಹೋಗಿ ಪಾಂಡವರಿಗೆ ಯಾವ ವ್ಯವಸ್ಥೆಯಾಗಿದೆ ಎಂದು ನೋಡಿಕೊಂಡು ಬಾ.”
ಪಾಂಡವರು ಚಿಕ್ಕ ವಯಸ್ಸಿನಲ್ಲಿ ತಮ್ಮ ತಂದೆ ಪಾಂಡುವನ್ನು ಕಳೆದುಕೊಂಡಿದ್ದರು. ಆದುದರಿಂದ ಕೃಷ್ಣನಿಗೆ ಅವರ ವಿಷಯದಲ್ಲಿ ಬಹು ಕಾಳಜಿ. ಕೃಷ್ಣನು ಮುಂದುವರಿದು ಹೇಳಿದನು: “ಅರಸು ಪಾಂಡುವಿನ ಸಾವಿನ ಅನಂತರ ಅವನ ಚಿಕ್ಕ ಮಕ್ಕಳು ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವರು ವಿಧವೆಯಾದ ತಮ್ಮ ತಾಯಿಯೊಂದಿಗೆ ಧೃತರಾಷ್ಟ್ರನ ಪಾಲನೆಯಲ್ಲಿದ್ದಾರೆ.
ಅವರ ಪೋಷಕನಾಗಿ ಅವರನ್ನು ಅವನು ನೋಡಿಕೊಳ್ಳಬೇಕು. ಆದರೆ ಧೃತರಾಷ್ಟ್ರನು ಹುಟ್ಟಿನಿಂದ ಕುರುಡು ಮಾತ್ರವಲ್ಲ ಅವನ ಕ್ರೂರಿಯಾದ ಮಗ ದುರ್ಯೋಧನನ ವಿಷಯದಲ್ಲಿ ಪ್ರೀತಿಯಿಂದ ಸಹ ಕುರುಡಾಗಿದ್ದಾನೆ ಎಂದು ಕೇಳಿದ್ದೇನೆ. ಐದು ಮಂದಿ ಪಾಂಡವರು ಪಾಂಡುವಿನ ಮಕ್ಕಳು.
ಆದರೆ ತನ್ನದೇ ಯೋಜನೆಗಳನ್ನು ಉದ್ದೇಶಗಳನ್ನು ಇಟ್ಟುಕೊಂಡಿರುವ ದುರ್ಯೋಧನನಿಂದಾಗಿ ಪಾಂಡವರಿಗೆ ಧೃತರಾಷ್ಟ್ರನು ಹಿತೈಷಿಯಲ್ಲ. ದಯವಿಟ್ಟು ಅಲ್ಲಿಗೆ ಹೋಗಿ ಧೃತರಾಷ್ಟ್ರನು ಪಾಂಡವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾನೆ ಎಂದು ನೋಡಿಕೊಂಡು ಬಾ.
ನಿನ್ನ ಅಭಿಪ್ರಾಯವನ್ನು ಕೇಳಿದ ಅನಂತರ ಪಾಂಡವರಿಗೆ ನೆರವಾಗುವುದು ಹೇಗೆ ಎಂದು ಯೋಚಿಸುತ್ತೇನೆ” ಹೀಗೆ ದೇವೋತ್ತಮ ಪರಮ ಪುರುಷನಾದ ಕೃಷ್ಣನು ಅಕ್ರೂರನಿಗೆ ಹಸ್ತಿನಾಪುರಕ್ಕೆ ಹೋಗುವಂತೆ ಅಪ್ಪಣೆ ಮಾಡಿದನು. ಅನಂತರ ಬಲರಾಮ ಮತ್ತು ಉದ್ಧವರೊಂದಿಗೆ ತನ್ನ ನಿವಾಸಕ್ಕೆ ಹಿಂತಿರುಗಿದನು.
ಧೃತರಾಷ್ಟ್ರನ ದುರುದ್ದೇಶ

ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನಿಂದ ಅಪ್ಪಣೆ ಪಡೆದ ಅಕ್ರೂರನು ಹಸ್ತಿನಾಪುರಕ್ಕೆ ಭೇಟಿಕೊಟ್ಟನು. ಹಸ್ತಿನಾಪುರವು ಈಗ ದೆಹಲಿಯಿರುವ ಪ್ರದೇಶದಲ್ಲಿ ಇದ್ದಿತೆಂದು ಜನರು ಹೇಳುತ್ತಾರೆ. ಹೊಸದೆಹಲಿಯ ಒಂದು ಭಾಗಕ್ಕೆ ಈಗಲೂ ಇಂದ್ರಪ್ರಸ್ಥ ಎಂದು ಹೆಸರು. ಜನಸಾಮಾನ್ಯರು ಇದನ್ನು ಪಾಂಡವರ ರಾಜಧಾನಿಯೆಂದೇ ನಂಬುತ್ತಾರೆ.
ಹಸ್ತಿನಾಪುರ ಎಂದರೆ ಬಹುಸಂಖ್ಯೆಯ ಹಸ್ತಿಗಳು ಎಂದರೆ ಆನೆಗಳು ಇದ್ದುಕೊಂಡಿದ್ದ ಜಾಗ ಎಂದರ್ಥ. ಆನೆಗಳನ್ನು ಸಾಕುವುದು ಬಹು ಖರ್ಚಿನ ಕೆಲಸ. ಅಷ್ಟೊಂದು ಸಂಖ್ಯೆಯ ಆನೆಗಳನ್ನು ಸಾಕಲು ರಾಜ್ಯವು ಶ್ರೀಮಂತವಾಗಿರಬೇಕು.
ಅದು ಆನೆಗಳು, ಕುದುರೆಗಳು, ರಥಗಳು ಮತ್ತು ಇತರ ಬಗೆಯ ಶ್ರೀಮಂತಿಕೆಯಿಂದ ತುಂಬಿಹೋಗಿತ್ತು. ಆಗ ಹಸ್ತಿನಾಪುರದ ಅರಸರು ಇಡೀ ಜಗತ್ತಿನ ಅರಸರೆಂದೇ ಖ್ಯಾತಿ ಪಡೆದಿದ್ದರು. ಅವರ ರಾಜ್ಯದಲ್ಲೂ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿದ್ದವು. ಬ್ರಾಹ್ಮಣರು ಮತ್ತು ವಿದ್ವಾಂಸರ ಮಾರ್ಗದರ್ಶನದಲ್ಲಿ ಆಡಳಿತವು ನಡೆಯುತ್ತಿತ್ತು.
ಹೀಗೆ ಸಮೃದ್ಧಿಯಿಂದ ಕೂಡಿದ್ದ ರಾಜಧಾನಿಯನ್ನು ನೋಡಿದ ಅಕ್ರೂರನು ಅರಸ ಧೃತರಾಷ್ಟ್ರನನ್ನು ಅವನೊಡನೆ ಕುಳಿತಿದ್ದ ಭೀಷ್ಮನನ್ನೂ ಭೇಟಿ ಮಾಡಿದನು. ಅನಂತರ ವಿದುರ, ಅವನ ಅತ್ತಿಗೆ ಕುಂತಿ, ಬಾಹ್ಲಿಕದ ರಾಜ, ಅವನ ಮಗನಾದ ಸೋಮದತ್ತ ದ್ರೋಣಾಚಾರ್ಯ, ಕೃಪಾಚಾರ್ಯ, ಕರ್ಣ, ಸುಯೋಧನ, ಹೀಗೆ ಒಬ್ಬರಾದ ಮೇಲೊಬ್ಬರನ್ನು ಕಂಡನಂತರ ಪಂಚ ಪಾಂಡವರನ್ನು ನಗರದಲ್ಲಿದ್ದ ಇತರ ಬಂಧು ಮಿತ್ರರನ್ನು ಕಂಡನು.
ಅಕ್ರೂರನು ಪಾಂಡವರ ಸ್ಥಿತಿಗತಿಗಳ ಬಗ್ಗೆ ಕೃಷ್ಣನಿಗೆ ವರದಿ ಕೊಡಬೇಕಾಗಿದ್ದುದರಿಂದ ಹಸ್ತಿನಾಪುರದ ರಾಜಕೀಯ ವಾತಾವರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದನು. ಅರಸು ಪಾಂಡುವಿನ ಮರಣದ ಅನಂತರ, ಧೃತರಾಷ್ಟ್ರನು ಪಾಂಡುವಿನ ಮಕ್ಕಳಿದ್ದರೂ ನ್ಯಾಯಕ್ಕೆ ವಿರುದ್ಧವಾಗಿ ತಾನೇ ಸಿಂಹಾಸನವನ್ನು ಆಕ್ರಮಿಸಿಕೊಂಡಿದ್ದನು.
ದುರುದ್ದೇಶದಿಂದ ಧೃತರಾಷ್ಟ್ರನು ತನ್ನ ಮಕ್ಕಳ ಪರವಾಗಿದ್ದಾನೆಂದು ಅಕ್ರೂರನಿಗೆ ಅರ್ಥವಾಯಿತು. ಹೀಗಾಗಿ ಅವನು ಪಂಚ ಪಾಂಡವರನ್ನು ನಿರ್ಲಕ್ಷಿಸಿದ್ದನು. ಧೃತರಾಷ್ಟ್ರನ ಗಂಡು ಮಕ್ಕಳಲ್ಲಿ ಹಿರಿಯವನಾದವನು ದುರ್ಯೋಧನ. ಅವನೂ ಸೇರಿದಂತೆ ಅವರೆಲ್ಲರೂ ದುಷ್ಟ ರಾಜಕಾರಣಿಗಳೆಂದು ಅಕ್ರೂರನಿಗೆ ತಿಳಿದಿತ್ತು.

ಧೃತರಾಷ್ಟ್ರನು ಭೀಷ್ಮ ಮತ್ತು ವಿದುರರ ಸದ್ಬೋಧನೆಗೆ ಅನುಗುಣವಾಗಿ ನಡೆದುಕೊಳ್ಳುತ್ತಿರಲಿಲ್ಲ. ಕರ್ಣ ಮತ್ತು ಶಕುನಿಯಂತಹವರ ದುರ್ಬೋಧನೆಯನ್ನು ಅನುಸರಿಸುತ್ತಿದ್ದನು. ಕೆಲವು ತಿಂಗಳುಗಳ ಕಾಲ ಹಸ್ತಿನಾಪುರದಲ್ಲಿಯೇ ಇದ್ದು ರಾಜಕೀಯ ಸನ್ನಿವೇಶವನ್ನು ಸಮಗ್ರವಾಗಿ ಅಧ್ಯಯನ ಮಾಡಲು ಅಕ್ರೂರನು ತೀರ್ಮಾನಿಸಿದನು.
ಪಂಚಪಾಂಡವರ ಅಸಾಧಾರಣ ಯುದ್ಧ ಕೌಶಲ ಮತ್ತು ಅವರ ದೈಹಿಕ ಶಕ್ತಿಯಿಂದಾಗಿ ಧೃತರಾಷ್ಟ್ರನಿಗೆ ಬಹಳ ಅಸೂಯೆ ಉಂಟಾಗಿತ್ತೆಂದು ಕುಂತಿ ಮತ್ತು ವಿದುರರಿ೦ದ ಅಕ್ರೂರನಿಗೆ ಕ್ರಮೇಣ ತಿಳಿಯಿತು. ಪಾಂಡವರು ವೀರೋಚಿತ ವರ್ತನೆಯ ಧೀರರು, ಕ್ಷತ್ರಿಯರ ಎಲ್ಲ ಗುಣಗಳು ಅವರಲ್ಲಿ ಕಾಣುತ್ತಿದ್ದವು.
ಅವರು ಸದಾ ಪ್ರಜೆಗಳ ಹಿತವನ್ನೇ ಯೋಚಿಸುತ್ತಿದ್ದ, ಹೊಣೆಗಾರಿಕೆ ಅರಿತ ರಾಜಕುಮಾರರು, ಅಸೂಯೆಯಿಂದ ಪ್ರೇರಿತನಾದ ಧೃತರಾಷ್ಟ್ರ ದುರ್ಬೋಧನೆಗೆ ಒಳಗಾದ ತನ್ನ ಮಗನೊಡನೆ ಯೋಚಿಸಿ ಪಾಂಡವರಿಗೆ ವಿಷಹಾಕಿ ಕೊಲ್ಲಲು ಪ್ರಯತ್ನಿಸಿದನೆಂದು ಅಕ್ರೂರನಿಗೆ ತಿಳಿಯಿತು.
ಅಕ್ರೂರನು ಕುಂತಿಯ ಸಂಬಂಧಿ. ಆದುದರಿಂದ ಅವಳನ್ನು ಭೇಟಿಯಾದಾಗ ಅವಳು ತನ್ನ ತಂದೆಯ ಕಡೆಯ ಬಂಧುಗಳ ವಿಷಯವಾಗಿ ವಿಚಾರಿಸಿದಳು. ಅವಳು ತನ್ನ ಮಹಾನ್ ಸೋದರಳಿಯಂದಿರಾದ ಕೃಷ್ಣ ಬಲರಾಮರ ಬಗ್ಗೆ ವಿಶೇಷವಾಗಿ ವಿಚಾರಿಸಿಕೊಂಡಳು. ಅವಳು ದೇವೋತ್ತಮ ಪರಮ ಪುರುಷನಾದ ಮತ್ತು ತನ್ನ ಭಕ್ತರಲ್ಲಿ ವಿಶೇಷ ಪ್ರೀತಿಯಿಟ್ಟುಕೊಳ್ಳುವ ಕೃಷ್ಣನಿಗೆ ನನ್ನ ಮಕ್ಕಳ ನೆನಪಿದೆಯೇ? ಬಲರಾಮ ನಮ್ಮನ್ನು ಜ್ಞಾಪಿಸಿಕೊಳ್ಳುತ್ತಾನೆಯೇ” ಎಂದು ಕೇಳಿದಳು.
ಕುಂತಿಗೆ ತಾನು ಹುಲಿಗಳ ಮಧ್ಯೆ ಇರುವ ಹೆಣ್ಣು ಜಿಂಕೆಯಂತೆ ಭಾಸವಾಗುತ್ತಿತ್ತು. ಆ ಸ್ಥಿತಿಯಲ್ಲೂ ತನ್ನ ಗಂಡ ಪಾಂಡುವಿನ ಸಾವಿನ ಅನಂತರ ಐವರು ಪಾಂಡವರನ್ನು ಪೋಷಿಸುವುದು ಅವಳ ಕರ್ತವ್ಯವಾಗಿತ್ತು.
ಆದರೆ ಸದಾ ಧೃತರಾಷ್ಟ್ರನಿಗೆ ಅವರನ್ನು ಕೊಲ್ಲುವ ಯೋಚನೆ. ಕೃಷ್ಣನ ಪರಮಭಕ್ತಳಾದ್ದರಿಂದ ಅವಳು ಅವನನ್ನೇ ಕುರಿತು ಯೋಚಿಸುತ್ತಿದ್ದಳು ಮತ್ತು ಎಂದಾದರೊಂದು ದಿನ ಕೃಷ್ಣನು ಬಂದು ತಮ್ಮನ್ನೆಲ್ಲಾ ವಿಪತ್ತಿನ ಸ್ಥಿತಿಯಿಂದ ಪಾರು ಮಾಡುತ್ತಾನೆ ಎಂದು ನಿರೀಕ್ಷಿಸುತ್ತಿದ್ದಳು.

ಈ ಎಲ್ಲ ವಿಷಯಗಳನ್ನು ಕುರಿತು ಅಕ್ರೂರನೊಡನೆ ಮಾತನಾಡಿದಾಗ ಅವಳಿಗೆ ತಾವು ನಿಸ್ಸಹಾಯಕರು ಎನ್ನಿಸಿತು. ಅವಳು ಹೀಗೆ ಉದ್ಗಾರ ಮಾಡಲು ಪ್ರಾರಂಭಿಸಿದಳು – “ನನ್ನ ಪ್ರೀತಿಯ ಕೃಷ್ಣ ನೀನು ಪರಮ ಯೋಗಿಯು, ವಿಶ್ವದ ಪರಮಾತ್ಮನು, ನೀನು ಇಡೀ ವಿಶ್ವದ ನಿಜವಾದ ಹಿತಚಿಂತಕನು.
ತಂದೆಯಿಲ್ಲದ ನನ್ನ ಐದು ಗಂಡು ಮಕ್ಕಳ ವಿಷಯವನ್ನು ಯೋಚಿಸುತ್ತಾ ನಾನು ಬಹು ಸಂಕಟದಲ್ಲಿದ್ದೇನೆ. ನಿನ್ನ ಚರಣಕಮಲಗಳನ್ನು ಬಿಟ್ಟರೆ ಆಶ್ರಯವಿಲ್ಲ. ಬೇರೆ ರಕ್ಷಣೆಯಿಲ್ಲ ಎಂದು ಚೆನ್ನಾಗಿ ನನಗೆ ತಿಳಿದಿದೆ. ದಯವಿಟ್ಟು ನಿನಗೆ ಶರಣಾಗತಳಾದ ಭಕ್ತಳೆಂದು ನನ್ನನ್ನು ಸ್ವೀಕರಿಸು.”
ಕೃಷ್ಣನು ತನ್ನೆದುರಿಗೆ ಇಲ್ಲವೆಂದು ತಿಳಿದಿದ್ದರೂ ಅವನು ತನ್ನೆದುರಿಗೆ ಇದ್ದಾನೆ ಎನ್ನುವಂತೆ ಕುಂತಿಯು ಪ್ರಾರ್ಥಿಸಿದಳು. ಕುಂತಿಯ ಹೆಜ್ಜೆಗಳನ್ನು ಅನುಸರಿಸುವ ಯಾರಿಗೇ ಆಗಲಿ ಇದು ಸಾಧ್ಯ. ಕೃಷ್ಣನು ದೈಹಿಕವಾಗಿ ಎಲ್ಲೆಲ್ಲೂ ಇರಬೇಕಾಗಿಲ್ಲ. ಆಧ್ಯಾತ್ಮಿಕ ಶಕ್ತಿಯಿಂದ ಅವನು ಎಲ್ಲೆಲ್ಲಿಯೂ ಇದ್ದಾನೆ.
ಕುಂತಿಯು ಭಾವಪೂರ್ಣಳಾಗಿ ಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಅವಳಿಗೆ ತಡೆಯಲಾರದೆ ಅಕ್ರೂರನ ಎದುರಿನಲ್ಲಿಯೇ ಅಳಲಾರಂಭಿಸಿದಳು. ಆಗ ವಿದುರನೂ ಅಲ್ಲಿದ್ದನು. ಅಕ್ರೂರನಿಗೂ ವಿದುರನಿಗೂ ಪಾಂಡವರ ಮಾತೆಯ ವಿಷಯದಲ್ಲಿ ಅನುಕಂಪವಾಯಿತು. ಅವಳ ಮಕ್ಕಳಾದ ಯುಧಿಷ್ಠಿರ, ಅರ್ಜುನ ಮತ್ತು ಭೀಮರನ್ನು ಹೊಗಳಿ ಅವಳನ್ನು ಸಂತೈಸಲಾರಂಭಿಸಿದರು.
ಅವಳ ಮಕ್ಕಳು ಅಸಾಧಾರಣ ಬಲಶಾಲಿಗಳು. ಅವರು ಯಮರಾಜ, ಇಂದ್ರ ಮತ್ತು ವಾಯುವಿನಂತಹ ಮಹಾನ್ ದೇವತೆಗಳ ಮಕ್ಕಳಾದ್ದರಿಂದ ಅವಳು ಅವರ ವಿಷಯದಲ್ಲಿ ಕಳವಳಪಡಬೇಕಾಗಿಲ್ಲ ಎಂದು ಸಮಾಧಾನ ಹೇಳಿದರು.
ಅಕ್ರೂರನು ಹಿಂದಕ್ಕೆ ಹೋದನಂತರ ಕೃಷ್ಣನಿಗೆ ಕುಂತಿಯ ಈ ಸ್ಥಿತಿಯನ್ನು ತಿಳಿಸಲು ತೀರ್ಮಾನಿಸಿದನು. ಅಕ್ರೂರನು ಧೃತರಾಷ್ಟ್ರನಿಗೆ ಹಿತೋಪದೇಶವನ್ನು ಮಾಡಬೇಕೆಂದು ಕೊಂಡನು. ಕೇವಲ ತನ್ನ ಮಕ್ಕಳ ಬಗ್ಗೆ ಮಾತ್ರ ಚಿಂತಿಸುತ್ತಾ ಪಾಂಡವರನ್ನು ಅವನು ಕಡೆಗಣಿಸಿರುವುದು ಅಕ್ರೂರನಿಗೆ ಸರಿಯಲ್ಲವೆಂದೆನಿಸಿತು. ಆದ್ದರಿಂದ ಧೃತರಾಷ್ಟ್ರನು ತನ್ನ ಬಂಧು ಬಳಗದವರೊಂದಿಗೆ ಕುಳಿತಿರುವಾಗಲೇ ಅಕ್ರೂರನು ಅವನನ್ನು ಕುರಿತು ಹೀಗೆ ಹೇಳಿದನು:
“ಪ್ರಿಯ ವಿಚಿತ್ರವೀರ್ಯನ ಮಗನೆ, ನೀನು ನ್ಯಾಯ ವಿರೋಧವಾಗಿ ಪಾಂಡವರ ಸಿಂಹಾಸನವನ್ನು ಆಕ್ರಮಿಸಿಕೊಂಡಿದ್ದೀಯೆ. ಹೇಗೋ ಸಿಂಹಾಸನವನ್ನು ಏರಿದ್ದಾಗಿದೆ. ಆದರೆ ರಾಜ್ಯವನ್ನು ನೈತಿಕ ಸೂತ್ರಗಳಿಗೆ ಅನುಗುಣವಾಗಿ ಆಳು ಎಂದು ನಿನಗೆ ಸಲಹೆ ಮಾಡಲು ವಿನಯದಿಂದ ಅಪ್ಪಣೆ ಕೇಳುತ್ತಿದ್ದೇನೆ.

ನೀನು ಆ ರೀತಿ ಮಾಡಿದರೆ ಮತ್ತು ನಿನ್ನ ಪ್ರಜೆಗಳಿಗೂ ಅದೇ ಮಾರ್ಗವನ್ನು ತಿಳಿಸಿಕೊಡಲು ಪ್ರಯತ್ನಿಸಿದರೆ ನಿನ್ನ ಕೀರ್ತಿಯು ಶಾಶ್ವತವಾಗಿರುವುದು. ನೀನು ಪಾಂಡವರಿಗೆ ರಾಜ್ಯಭಾರವನ್ನು ಕೊಡದಿದ್ದರೂ ಅವರ ಯೋಗಕ್ಷೇಮವನ್ನು ನಿನ್ನ ಮಕ್ಕಳಂತೆ ನೀನು ನೋಡಿಕೊಳ್ಳಬೇಕು.
ನೀನು ಈ ತತ್ತ್ವವನ್ನು ಅನುಸರಿಸದೆ ಇದಕ್ಕೆ ವಿರುದ್ಧವಾದ ರೀತಿಯಲ್ಲಿ ನಡೆದುಕೊಂಡರೆ ನಿನ್ನ ಪ್ರಜೆಗಳಲ್ಲಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತೀಯೆ. ಅಲ್ಲದೆ ಮುಂದಿನ ಜನ್ಮದಲ್ಲಿ ನರಕ ಸದೃಶವಾದ ರೀತಿಯಲ್ಲಿ ಬದುಕಬೇಕಾಗುತ್ತದೆ. ಆದುದರಿಂದ ನೀನು ನಿನ್ನ ಮಕ್ಕಳನ್ನು ಪಾಂಡುವಿನ ಮಕ್ಕಳನ್ನು ಒಂದೇ ರೀತಿಯಲ್ಲಿ ಕಾಣುತ್ತೀಯೆ ಎಂದು ಭರವಸೆ ಇಟ್ಟುಕೊಂಡಿದ್ದೇನೆ.”
ಅಕ್ರೂರನ ಈ ನೀತಿಬೋಧನೆಯನ್ನು ಕೇಳಿ ಧೃತರಾಷ್ಟ್ರನು ಹೀಗೆ ಉತ್ತರ ಕೊಟ್ಟನು: ‘ಪ್ರಿಯ ಅಕ್ರೂರ, ನನಗೆ ನೀನು ಉದಾರ ಬುದ್ಧಿಯಿಂದ ಬುದ್ಧಿವಾದವನ್ನು ನೀಡಿರುವೆ. ಆದರೆ ನಾನು ದೂರದೃಷ್ಟಿಯಿಂದ ಅದನ್ನು ಒಪ್ಪಿಕೊಳ್ಳಲಾರೆ. ಸಾಯಲೇಬೇಕಾದ ಮನುಷ್ಯನಿಗೆ ಅಮೃತವನ್ನು ಕೊಟ್ಟರೆ ಅದರಿಂದೇನೂ ಉಪಯೋಗವಿಲ್ಲ.
ನಿನ್ನ ಉಪದೇಶ ಅಮೂಲ್ಯವಾದದ್ದೇ. ಆದರೆ ಆಕಾಶದಲ್ಲಿ ಕಾಣಿಸಿಕೊಳ್ಳುವ ಮಿಂಚು ನಿಶ್ಚಲವಾದ ಮೋಡದಲ್ಲಿ ಹೇಗೆ ಉಳಿಯುವುದಿಲ್ಲವೋ ಹಾಗೆ ನಿನ್ನ ಬೋಧನೆ ನನ್ನ ಚಂಚಲವಾದ ಮನಸ್ಸಿನಲ್ಲಿ ನಿಲ್ಲುತ್ತಿಲ್ಲ. ಪರಮ ಸಂಕಲ್ಪದ ಮುನ್ನಡೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂಬುದಷ್ಟನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.
ಭೂಭಾರವು ಮಿತಿಮೀರಿದ್ದರಿಂದ ಅದನ್ನು ಕಡಮೆ ಮಾಡಲು ದೇವೋತ್ತಮ ಪರಮಪುರುಷನಾದ ಶ್ರೀಕೃಷ್ಣನು ಯದುವಂಶದಲ್ಲಿ ಹುಟ್ಟಿದ್ದಾನೆ ಎಂದು ನನಗೆ ತಿಳಿದು ಬಂದಿದೆ…”
ಧೃತರಾಷ್ಟ್ರನ ಮಾತನ್ನು ಕೇಳಿದ ಅನಂತರ ಅಕ್ರೂರನಿಗೆ ಅವನು ಪಾ೦ಡವರ ಬಗ್ಗೆ ಪಕ್ಷವಾತ ಮಾಡುವ ತನ್ನ ನೀತಿಯನ್ನು ಬದಲಿಸುವುದಿಲ್ಲವೆಂಬುದು ಅರ್ಥವಾಯಿತು. ಅವನು ಕೂಡಲೆ ಹಸ್ತಿನಾಪುರದಲ್ಲಿ ತನ್ನ ಸ್ನೇಹಿತರಿಂದ ಬೀಳ್ಕೊಡಲ್ಪಟ್ಟು ಯದುರಾಜ್ಯದ ತನ್ನ ಮನೆಗೆ ಹಿಂತಿರುಗಿದನು.
ಅನಂತರ ಕೃಷ್ಣ ಮತ್ತು ಬಲರಾಮರನ್ನು ಭೇಟಿ ಮಾಡಿ ಹಸ್ತಿನಾಪುರದಲ್ಲಿರುವ ವಾಸ್ತವ ಸ್ಥಿತಿಯನ್ನು ವಿವರಿಸಿದನು.






Leave a Reply