ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ ಕೆಲವು ಶಿಷ್ಯರ ನಡುವೆ 1975 ರ ಜುಲೈನಲ್ಲಿ, ಸ್ಯಾನ್ ಫ್ರಾನ್ಸ್‌ಸಿಸ್ಕೋದಲ್ಲಿ ಬೆಳಗಿನ ವಾಯು ಸಂಚಾರ ಸಮಯದಲ್ಲಿ ನಡೆದ ಸಂವಾದ.
ಭಕ್ತ : ಶ್ರೀಲ ಪ್ರಭುಪಾದ, ಈಗಿನ ಯುವಜನರಿಗೆ ವಿಜ್ಞಾನದಲ್ಲಿ ಆಸಕ್ತಿಯೇ ಇಲ್ಲ ಎಂದು ಹೈಡ್ರೋಜನ್ ಬಾಂಬ್ ಕಂಡುಹಿಡಿದ ವಿಜ್ಞಾನಿಗಳಲ್ಲಿ ಒಬ್ಬರು ಗೋಳಾಡುತ್ತಿದ್ದಾರೆ.
ಶ್ರೀಲ ಪ್ರಭುಪಾದ : ಹೋ. ಹುಟ್ಟು-ಸಾವಿನ ಸಮಸ್ಯೆಯನ್ನು ಪರಿಹರಿಸಲು ವಿಜ್ಞಾನಿಗಳಿಗೆ ಸಾಧ್ಯವಿಲ್ಲ. ಆದುದರಿಂದ ಯುವಜನರು ವಿವೇಕಿಗಳಾಗುತ್ತಿದ್ದಾರೆ. “ಈ ರೀತಿ ನಮ್ಮ ಸಮಯವನ್ನು ಹಾಳು ಮಾಡಿಕೊಳ್ಳುವುದರಿಂದ ಏನು ಪ್ರಯೋಜನ?” ಎಂದು ಅವರು ಯೋಚಿಸುತ್ತಿದ್ದಾರೆ. “ಯಾವುದೇ ನೈಜ ಸಮಸ್ಯೆಗಳನ್ನು ವಿಜ್ಞಾನ ಪರಿಹರಿಸದು.” ಅದು ವಿವೇಚನೆಯುತವಾದುದು. ಆ ಪ್ರಾಧ್ಯಾಪಕ ಇನ್ನೂ ಬದುಕಿದ್ದಾರೆಯೇ?
ಭಕ್ತ : ಹಾ, ಅವರು ಬದುಕಿದ್ದಾರೆ.
ಶ್ರೀಲ ಪ್ರಭುಪಾದ : ಹಾಗಾದರೆ, ಸಾವನ್ನು ತಡೆಯುವ ಯಾವುದಾದರೂ ಬಾಂಬ್ ಅನ್ನು ಕಂಡು ಹಿಡಿಯಲು ಅವರಿಗೆ ತಿಳಿಸಿ. “ಜನರು ಈಗಾಗಲೇ ಸಾಯುತ್ತಿದ್ದಾರೆ, ಜನರು ಸಾಮೂಹಿಕವಾಗಿ ಸಾಯುವಂತೆ ಮಾಡುವ ಏನನ್ನೋ ನೀವು ಕಂಡು ಹಿಡಿದಿರುವಿರಿ. ಜನರು ಸಾಯಲೇಬಾರಂತಹದಕ್ಕೆ ಅನುಕೂಲವಾಗುವ ಯಾವುದನ್ನಾದರೂ ಕಂಡು ಹಿಡಿಯಿರಿ. ಅದನ್ನು ನಿಮಗೆ ಮಾಡಲಾದೀತೆ? ಇಲ್ಲ? ಹಾಗಾದರೆ, ನಮಗೆ ನಿಮ್ಮ ವಿಜ್ಞಾನದಲ್ಲಿ ಯಾವುದೇ ಆಸಕ್ತಿ ಇಲ್ಲ.”

ಈ ಅಧ್ಯಾಪಕರಲ್ಲಿಗೆ ಹೋಗಿ ಹೇಳಿ, “ನಮಗೆ, ಯುವಜನರಿಗೆ , ವಿಜ್ಞಾನದಲ್ಲಿ ಆಸಕ್ತಿ ಉಳಿದಿಲ್ಲದಿರುವುದಕ್ಕೆ ನೀವು ವಿಷಾದ ವ್ಯಕ್ತಪಡಿಸಿರುವಿರಿ. ಇದು ಕಾರಣ : ನಾವು ಸತ್ತಾಗ ಎಲ್ಲವೂ ಅಂತ್ಯಗೊಳ್ಳುವುದರಿಂದ ನಿಮ್ಮ ವಿಜ್ಞಾನವನ್ನು ಓದುವುದರಿಂದ ಪ್ರಯೋಜನವೇನು? ನೀವು ಯಾವುದನ್ನೂ ಸುಧಾರಿಸಿಲ್ಲ. ಪ್ರಾಣಿಗಳೂ ಹುಟ್ಟುತ್ತವೆ, ಸಾಯುತ್ತವೆ. ನಾವೂ ಹುಟ್ಟುತ್ತೇವೆ, ಸಾಯುತ್ತೇವೆ. ವ್ಯತ್ಯಾಸವೇನಿದೆ? ಆದುದರಿಂದ ನಿಮ್ಮ ವಿಜ್ಞಾನವು ತಪ್ಪು ಪ್ರಚಾರ. ನಮಗೆ ಏನೂ ಆಸಕ್ತಿ ಇಲ್ಲ.”
ಭಕ್ತ : ಇನ್ನು 25 ವರ್ಷಗಳಲ್ಲಿ ವಿಜ್ಞಾನದ ಅಂತ್ಯ ಎಂದು ನೀವು ಲಾಸ್ ಏಂಜಲ್ಸ್‌ನಲ್ಲಿ ಹೇಳಿದಿರಿ.
ಶ್ರೀಲ ಪ್ರಭುಪಾದ : ಹೌದು. ಅದು ಈಗಾಗಲೇ ಅಂತ್ಯ ಕಂಡಿದೆ. ಅವರ ಧರ್ಮ ಎನ್ನುವುದು, ಅವರ ರಾಜಕೀಯ ಎನ್ನುವುದು ಕೂಡ ಅಂತ್ಯಗೊಂಡಿದೆ. ಅವರು ದೇವರೊಂದಿಗೆ ಎಲ್ಲವನ್ನೂ ಅಂತ್ಯಗೊಳಿಸಿರುವುದರಿಂದ ಅವರದೆಲ್ಲವೂ ಅತಿ ಶೀಘ್ರ ಕೊನೆಗೊಳ್ಳಲಿದೆ-ಶೂನ್ಯ, ಬರೀ ಶೂನ್ಯ.
ಭಕ್ತ : ಶ್ರೀಲ ಪ್ರಭುಪಾದರೇ, ಇಡೀ ನಾಗರಿಕತೆ?
ಶ್ರೀಲ ಪ್ರಭುಪಾದ : ಆ ನಾಗರಿಕತೆ ಎಲ್ಲಿದೆ? ತಾಯಿ ಮಗುವನ್ನು ಗರ್ಭದಲ್ಲೇ ಕೊಲ್ಲುತ್ತಿದ್ದಾಳೆ. ಇದು ನಾಗರಿಕತೆಯೇ? ಎಲ್ಲಿದೆ ಅವರ ನಾಗರಿಕತೆ? ಅದು ನಾಯಿ-ನಾಗರಿಕತೆಗಿಂತ ಕೀಳು. ನಾಯಿಗಳು ತಮ್ಮ ಮರಿಗಳನ್ನು ಕೊಲ್ಲುವುದಿಲ್ಲ. ಮೂರ್ಖರು! ಅವರು ಗರ್ಭದಲ್ಲಿ ಮಗುವನ್ನು ಕೊಲ್ಲಲು ತಾಯಂದಿರನ್ನು ಉತ್ತೇಜಿಸುತ್ತಿದ್ದಾರೆ ಮತ್ತು ಇದು ನಾಗರಿಕತೆ ಎಂದು ಅವರು ಹೇಳಿಕೊಳ್ಳುತ್ತಾರೆ. ಅವರು ನಾಯಿ, ಬೆಕ್ಕಿಗಿಂತ ಕೀಳು. ನಾಯಿ, ಬೆಕ್ಕುಗಳು ತಮ್ಮ ಮರಿಗಳನ್ನು ರಕ್ಷಿಸುತ್ತವೆ. ನಿಮಗದು ಗೊತ್ತೆ? ಬೆಕ್ಕುಗಳು ಗಂಡು ಬೆಕ್ಕಿನಿಂದ ರಕ್ಷಿಸಲು ತಮ್ಮ ಮರಿಗಳನ್ನು ಸ್ಥಳಾಂತರಿಸುತ್ತವೆ. ಹುಲಿಗಳೂ ಕೂಡ ತಮ್ಮ ಮರಿಗಳನ್ನು ರಕ್ಷಿಸುತ್ತವೆ.
ಭಕ್ತ : ಇಲಿಗಳೂ ಕೂಡ.

ಶ್ರೀಲ ಪ್ರಭುಪಾದ : ಹೌದು. ಮಗುವಿಗೆ ತಾಯಿಯ ಪ್ರೀತಿ ಸ್ವಾಭಾವಿಕ. ಆದರೆ ನಾಗರಿಕರೆನಿಸಿಕೊಂಡ ತಾಯಂದಿರು ತಮ್ಮ ಮಕ್ಕಳನ್ನು ಕೊಲ್ಲುತ್ತಿದ್ದಾರೆ. ಇದು ನಿಮ್ಮ ನಾಗರಿಕತೆ. ಇದು ನಿಮ್ಮ ಧರ್ಮ, ನಿಮ್ಮ ವಿಜ್ಞಾನ, ನಿಮ್ಮ ತತ್ತ್ವ – ಎಲ್ಲವೂ. ಜನರು ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಕೊಳ್ಳದಿದ್ದರೆ ಈ `ನಾಗರಿಕತೆ’ ಅಂತ್ಯಗೊಂಡಂತೆ.
(ಕೆಳಗೆ ಬಿದ್ದಿದ್ದ ಪೈನ್ ಬೀಜಗಳತ್ತ ತೋರಿಸುತ್ತ) ಇದೇನು?
ಭಕ್ತ : ಇವು ಪೈನ್ ಮರದ ಬೀಜ.
ಶ್ರೀಲ ಪ್ರಭುಪಾದ : ವಿಜ್ಞಾನಿಗಳು ಇಂತಹ ಒಂದು ಬೀಜವನ್ನು ಉತ್ಪಾದಿಸಲಿ, ನೋಡೋಣ.
ಅದನ್ನು ಮಾಡಬಲ್ಲಂತಹ ವಿಜ್ಞಾನಿಗಳು ಎಲ್ಲಿದ್ದಾರೆ? ಪ್ರತಿ ನಿಮಿಷಕ್ಕೆ ಲಕ್ಷಾಂತರ ಜೀವಿಗಳು ಹುಟ್ಟುತ್ತಾರೆ, ಆದರೂ ಅವರು ಪ್ರಯೋಗಾಲಯದಲ್ಲಿ ಒಂದೇ ಒಂದು ಜೀವಿಯನ್ನು ಸೃಷ್ಟಿಸಲು ವರ್ಷಾಂತರಗಳಿಂದ ಪ್ರಯತ್ನಿಸುತ್ತಿದ್ದಾರೆ. ಆದರೂ ಜೀವ ಸೃಷ್ಟಿಯ ಮನ್ನಣೆ ಪಡೆಯುತ್ತಾರೆ. ಅವರು ಯಶಸ್ವಿಯಾದರೂ ಏನದು? ಜೀವಿಗಳನ್ನು ಸೃಷ್ಟಿಸಲು ಯತ್ನಿಸುವ ವಿಜ್ಞಾನಿಗಳು ಮೂರ್ಖರು ಮತ್ತು ಅವರು ಮೂರ್ಖರನ್ನಾಗಿಸುತ್ತಿರುವ ಜನರೂ ಮೂರ್ಖರು.
ಭಕ್ತ : ದೇವರಿಲ್ಲದೆ ಸೃಷ್ಟಿಯನ್ನು ತಾವು ವಿವರಿಸಬಲ್ಲೆವು ಎಂದವರು ಹೇಳುತ್ತಾರೆ. ಎಲ್ಲವೂ ಪ್ರಕೃತಿ ಮಾತೆಯಿಂದ ಬಂದದ್ದು ಎಂದು ಅವರು ವಾದಿಸುತ್ತಾರೆ.

ಶ್ರೀಲ ಪ್ರಭುಪಾದ : ಆದರೆ ತಂದೆ ಇಲ್ಲದೆ ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡುವುದು ಸಾಧ್ಯವೇ? ತಂದೆ ಎಲ್ಲಿ? ಈ ಮೂರ್ಖ ವಿಜ್ಞಾನಿಗಳನ್ನು ಪ್ರಶ್ನಿಸಿ.
ಭಕ್ತ : ದೇವರು ಸತ್ತಿದ್ದಾನೆಂದು ಅವರು ಕೆಲವು ಬಾರಿ ಹೇಳುತ್ತಾರೆ.
ಶ್ರೀಲ ಪ್ರಭುಪಾದ : ಆದರೆ, ಒಬ್ಬ ವ್ಯಕ್ತಿಯ ತಂದೆ ಸತ್ತಿದ್ದರೆ ಆ ವ್ಯಕ್ತಿ ತಂದೆ ಇಲ್ಲದೆ ಜನ್ಮ ತಳೆದ ಎಂದು ಅರ್ಥವಲ್ಲ. ನೀವು ಹಾಗೆ ಹೇಳಲಾಗದು. ತಂದೆಯು ಸತ್ತಿರಬಹುದು – ಅದನ್ನು ನಾವು ಮುಂದೆ ಯಾವಾಗಲಾದರು ಚರ್ಚಿಸೋಣ. ಆದರೆ ತಂದೆ ಇಲ್ಲದೆ ಮಹಿಳೆ ಮಗುವಿಗೆ ಜನ್ಮ ನೀಡಲಾರಳು ಎಂಬುವುದನ್ನು ಮೊದಲು ನೀವು ಒಪ್ಪಿಕೊಳ್ಳಬೇಕು. ಆ ತಂದೆ ಯಾರು?
ಭಕ್ತ : ಪ್ರಕೃತಿಯು ತನ್ನಷ್ಟಕ್ಕೇ ತಾನು ಎಲ್ಲವನ್ನೂ ಸೃಷ್ಟಿಸಿದ್ದಾಳೆ. ಅಣು ಮತ್ತು ಸಣ್ಣ ಕಣಗಳ ಸಂಯೋಜನೆಯಿಂದ, ಯಾವುದೋ ಆಕಸ್ಮಿಕ/ಅದೃಷ್ಟದಿಂದ ಎಲ್ಲವೂ ಮೊದಲು ಆರಂಭವಾಯಿತು.
ಶ್ರೀಲ ಪ್ರಭುಪಾದ : ಈ ಸೃಷ್ಟಿಯು ಆಕಸ್ಮಿಕವಾಗಿ ಆರಂಭವಾಯಿತೆಂದು ಯಾರಾದರೂ ಹೇಳಿದರೆ ಅವರು ಮೂರ್ಖರು. ಯಾವುದೂ ಆಕಸ್ಮಿಕವಾಗಿ ನಡೆಯುವುದಿಲ್ಲ. ಭಗವದ್ಗೀತೆಯಲ್ಲಿ ಇದಕ್ಕೆ ಉತ್ತರವಿದೆ, ಕೃಷ್ಣ ಹೇಳುತ್ತಾನೆ, ಬೀಜಂ ಮಾಂ ಸರ್ವಭೂತಾನಾಂ : “ಎಲ್ಲ ಅಸ್ತಿತ್ವಗಳಿಗೆ ನಾನೇ ಮೂಲ ಬೀಜ.” ಈ ಮೂರ್ಖರಿಗೆ ಸವಾಲು ಹಾಕಿ. ಅವರು ಅನೇಕ ಜನರನ್ನು ಮೋಸಗೊಳಿಸುತ್ತಿದ್ದಾರೆ.
ಭಕ್ತ : ಈಗ ವಿಜ್ಞಾನಿಗಳು ಅಣುವಿನ ಅಧ್ಯಯನ ಮಾಡುತ್ತಿದ್ದಾರೆ. ಅವರು ಒಪ್ಪುತ್ತಾರೆ –
ಶ್ರೀಲ ಪ್ರಭುಪಾದ : ಮೊಟ್ಟ ಮೊದಲು ಅವರು ಏನು ಒಳ್ಳೆಯ ಕೆಲಸ ಮಾಡಿದ್ದಾರೆಂಬುದನ್ನು ಅರಿತುಕೊಳ್ಳೋಣ. ಅವರೆಷ್ಟು ಅವಿವೇಕವಾಗಿ ಪ್ರಸ್ತಾವಗಳನ್ನು ಇಡುತ್ತಾರೆ – ಪ್ರಕೃತಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ, ಮಾನವ ಜೀವಿಗಳು ವಾನರರಿಂದ ಬಂದವರು – ಆದರೆ ಅವರು ನಮ್ಮನ್ನು ಐಹಿಕ ಲೋಕದ ಸಂಕೋಲೆಯಿಂದ ಮುಕ್ತಗೊಳಿಸಿದ್ದಾರೆಯೇ? ಆಗಲಿ, ದೇವರಿಲ್ಲ ಮತ್ತು ಪ್ರಕೃತಿಯೇ ಪರಮ ಎಂಬುವುದನ್ನು ನೀವು ಒಪ್ಪಿಕೊಂಡರೂ ನೀವು ಅಧೀನರೇ. ನೀವು ಸ್ವತಂತ್ರರಲ್ಲ. ಇದನ್ನು ಭಗವದ್ಗೀತೆಯಲ್ಲಿಯೂ ವಿವರಿಸಲಾಗಿದೆ, (3.27) “ಕಾರ್ಯಗಳು ವಾಸ್ತವವಾಗಿ ಕೃಷ್ಣನ ನಿಯಂತ್ರಣದಲ್ಲಿ ನಡೆಯುತ್ತಿವೆ. ಆದರೆ ಅಹಂಕಾರದಿಂದ ಮೂರ್ಖರಾದವನು ತಾನೇ ಕಾರ್ಯಗಳನ್ನು ಮಾಡುತ್ತೇನೆ ಎಂದು ಭಾವಿಸುತ್ತಾನೆ.” ನೀವು ಸ್ವತಂತ್ರರೆಂದು ಏಕೆ ಭಾವಿಸುವಿರಿ? ಲೌಕಿಕ ಪ್ರಕೃತಿಯು ನಿಮ್ಮ ಕಿವಿ ಎಳೆಯುತ್ತಿದೆ, “ಬಾ ಇಲ್ಲಿ!” ನೀವು “ನಾನು ವೃದ್ಧನಾಗುವುದಿಲ್ಲ. ನಾನು ಸಾಯುವುದಿಲ್ಲ” ಎಂದು ಹೇಳಲಾಗದು. ನೀವು ವೃದ್ಧರಾಗಬೇಕು ಮತ್ತು ಸಾವನ್ನು ಸ್ವೀಕರಿಸಬೇಕು. ನೀವು ದೇವರನ್ನಲ್ಲ, ಪ್ರಕೃತಿಯ ಅಸ್ತಿತ್ವವನ್ನು ಸ್ವೀಕರಿಸಿದರೂ ನೀವು ಪ್ರಕೃತಿಯ ಪಾರಮ್ಯವನ್ನು ಒಪ್ಪಿಕೊಳ್ಳಬೇಕು. ಹಾಗಾದರೆ, ನಿಮ್ಮ ಸ್ವಾತಂತ್ರ್ಯವೆಲ್ಲಿದೆ?
ಭಕ್ತ : ಆದುದರಿಂದಲೇ ಅವರು ವಿಜ್ಞಾನದಲ್ಲಿ ತೊಡಗಿಕೊಂಡಿದ್ದಾರೆ – ಪ್ರಕೃತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು.

ಶ್ರೀಲ ಪ್ರಭುಪಾದ : ಇದು ಇನ್ನೊಂದು ಮೂರ್ಖತನ. ಈ ಮೂಢರಿಂದ ನಾವು ತಪ್ಪುದಾರಿಗೆಳೆಯಲ್ಪಡಬೇಕೆ? ಅವರು ಭವಿಷ್ಯಕ್ಕಾಗಿ ಎಲ್ಲ ಭರವಸೆಯನ್ನೂ ನೀಡುತ್ತಾರೆ. “ಭವಿಷ್ಯದಲ್ಲಿ ಇದನ್ನು ಮಾಡುತ್ತೇವೆ, ಅದನ್ನು ಮಾಡುತ್ತೇವೆ.” ಇದು ಮುಂದಿನ ತೇದಿಯ ಚೆಕ್ ನಂತೆ. “ನಾನು ಆರು ತಿಂಗಳು ಮುಂದಿನ ತೇದಿಯ ಮಿಲಿಯನ್ ಡಾಲರ್ ಚೆಕ್ ನೀಡುವೆ. ಅದನ್ನು ಪಡೆದುಕೊಳ್ಳಿ.” ಮೂರ್ಖರಿಗಷ್ಟೇ ಅದರಿಂದ ತೃಪ್ತಿ : “ನಾನು ಶ್ರೀಮಂತ.”
ಭಕ್ತ : ಅಂದರೆ ವಿಜ್ಞಾನಿಯ ಚೆಕ್ “ಸಾಕಷ್ಟು ಮೊತ್ತ ಇಲ್ಲ” ಎಂದು ವಾಪಸು ಬರುತ್ತದೆ?
ಶ್ರೀಲ ಪ್ರಭುಪಾದ : ಅದು `ಸಾಕಷ್ಟು ಮೊತ್ತ ಇಲ್ಲ’ ಎಂದಲ್ಲ. `ಮೊತ್ತವೆ ಇಲ್ಲ’ ಎಂದು.
ಭಕ್ತ : ಖಾತೆ ಮುಚ್ಚಲಾಗಿದೆ.






Leave a Reply