ಅಜಾಮಿಳನ ಕಥೆ (ಭಾಗ-1)
ಆಧಾರ: ಆರನೆಯ ಸ್ಕಂಧ, ಅಧ್ಯಾಯ ಒಂದು
– ಡಾ॥ ಬಿ.ಆರ್. ಸುಹಾಸ್
ಅಜಾಮಿಳ, ಜನ್ಮತಃ ಬ್ರಾಹ್ಮಣ. ವೇಶ್ಯೆಯ ಸಂಗಕ್ಕೆ ಬಿದ್ದು ಪತಿತನಾಗುತ್ತಾನೆ. ಮದ್ಯಪಾನದ ವ್ಯಸನಕ್ಕೆ ಸಿಲುಕಿ ಭ್ರಷ್ಟನಾಗುತ್ತಾನೆ. ಆದರೂ ಅವನು ಸಾಯುವ ವೇಳೆಗೆ ವಿಷ್ಣುದೂತರು ಬಂದು ಯಮಕಿಂಕರರಿಂದ ಅವನನ್ನು ಪಾರು ಮಾಡುವುದು ಹೇಗೆ? ಯಾವ ಕಾರಣಕ್ಕಾಗಿ? ವೃದ್ಧನಾಗಿ, ಸಾವಿನ ಹೊಸ್ತಿಲಲ್ಲಿ ನಿಂತಿದ್ದ ಅಜಾಮಿಳ ಬದುಕುವುದು ಹೇಗೆ? ನರಕದಿಂದ ಪಾರಾಗಿದ್ದು ಹೇಗೆ? ಅನಂತರ ಅವನಲ್ಲಿ ಪರಿವರ್ತನೆಗಳೇನಾದವು?
ಇವೆಲ್ಲವೂ ಇದೆ.
ಶ್ರೀಮದ್ಭಾಗವತ ಕಥಾಪ್ರವಚನ ನಿರಂತರವಾಗಿ ನಡೆದಿತ್ತು. ಏಳು ದಿನಗಳಲ್ಲಿ ತಕ್ಷಕನೆಂಬ ಸರ್ಪಕಚ್ಚಿ ಸಾವು ಉಂಟಾಗುವುದೆಂಬ ಶಾಪವು ಪರೀಕ್ಷಿತನಿಗೆ ಋಷಿಕುಮಾರನೊಬ್ಬನಿಂದ ಪ್ರಾಪ್ತವಾಗಿರಲು, ವ್ಯಾಸಪುತ್ರರಾದ ಶುಕಮುನಿಗಳು ಅವನಿಗೆ ದಿನವೂ ಭಗವಂತನ ಲೀಲೆಗಳ, ಭಕ್ತಭಾಗವತರ ಕಥೆಗಳನ್ನು ಹೇಳುತ್ತಿದ್ದರು. ಸಾವು ಖಚಿತವಾದರೂ, ಪುನರ್ಜನ್ಮದಿಂದಲೂ ಸಂಸಾರದಿಂದಲೂ ಬಿಡುಗಡೆ ಹೊಂದುವುದು ಮಾನವಜನ್ಮದ ಮೂಲೋದ್ದೇಶ; ಇದಕ್ಕೆ ಭಗವಂತನಲ್ಲಿ ಭಕ್ತಿ ತೋರುವುದೇ ಅತ್ಯಂತ ಸುಲಭ ಮತ್ತು ಶ್ರೇಷ್ಠ ಮಾರ್ಗವೆಂದು ಶುಕಮುನಿಗಳು ಉಪದೇಶಿಸಿದರು. ಅವರು, ಯೋಗದ ಮೂಲಕ ಮುಕ್ತಿಯನ್ನು ಹೊಂದುವ ನಿವೃತ್ತಿಯ ವಿಚಾರವನ್ನೂ, ತ್ರಿಗುಣಗಳ ಆಶ್ರಯದಿಂದ ಕರ್ಮಗಳನ್ನಾಚರಿಸಿ ಸ್ವರ್ಗಸ್ಥರಾಗಿ ಪುನಃ ಜನಿಸುವ ಪ್ರವೃತ್ತಿಯ ವಿಚಾರವನ್ನೂ, ವಿವಿಧ ರೀತಿಯ ಅಧರ್ಮಾಚರಣೆಗಳು ಹಾಗೂ ಅವುಗಳಿಂದ ಪ್ರಾಪ್ತವಾಗುವ ನರಕಗಳ ವಿಚಾರಗಳನ್ನೂ, ಪ್ರಥಮ ಮನ್ವಂತರವಾದ ಸ್ವಾಯಂಭುವ ಮನ್ವಂತರ ಮತ್ತು ಆ ಮನುವಿನ ಪುತ್ರರಾದ ಉತ್ತಾನಪಾದ ಮತ್ತು ಪ್ರಿಯವ್ರತರ ವಂಶಾವಳಿಗಳ ಸುದೀರ್ಘ ಕಥನವನ್ನೂ, ಭೂಮಂಡಲದ ವಿವಿಧ ವಿಭಾಗಗಳು ಮತ್ತು ಜ್ಯೋತಿಷ್ಚಕ್ರ ಹಾಗೂ ಅಧೋಲೋಕಗಳ ವಿಚಾರಗಳನ್ನೂ ಸವಿವರವಾಗಿ ಹೇಳಿದರು.
ಅಂದು ಮುಂಜಾನೆ, ಪ್ರಾತವಿಧಿಗಳು ಪೂರೈಸುವ ಹೊತ್ತಿಗೆ ಪರೀಕ್ಷಿತ ಮಹಾರಾಜನು, ಶುಕಮುನಿಗಳು ಇದುವರೆಗೆ ಹೇಳಿದ ವಿಚಾರಗಳನ್ನೆಲ್ಲಾ ಒಮ್ಮೆ ಮನದಲ್ಲೇ ಮೆಲುಕು ಹಾಕಿದನು; ಅವನ ಮುಖ ಸ್ವಲ್ಪ ಬಾಡಿತು. ಅವನು ಏನೋ ಆಲೋಚನೆಯ ಲಹರಿಗೆ ಒಳಗಾದನು.
ಪ್ರವಚನವನ್ನು ಆರಂಭಿಸಹೊರಟ ಶುಕಮುನಿಗಳು, ಪರೀಕ್ಷಿತನು ಏನೋ ದೀರ್ಘಾಲೋಚನೆಯಲ್ಲಿದ್ದುದನ್ನು ಕಂಡು ಅವನತ್ತ ಪ್ರಶ್ನಾರ್ಥಕ ದೃಷ್ಟಿ ಹಾಯಿಸಿದರು,
ಶುಕಮುನಿಗಳ ಭಾವವನ್ನರಿತ ಪರೀಕ್ಷಿತನು ಅವರಿಗೆ ನಮಿಸಿ ಹೇಳಿದನು, “ಪೂಜ್ಯರೇ ಇದುವರೆಗೆ ನೀವು ಅನೇಕ ವಿಚಾರಗಳನ್ನು ಹೇಳಿದಿರಿ ಅವುಗಳಲ್ಲಿ ನರಕಗಳ ವಿಚಾರವೂ ಸುದೀರ್ಘವಾಗಿ ಬಂದಿತು. ಒಂದೊಂದು ರೀತಿಯ ತಪ್ಪಿಗೆ ಒಂದೊಂದು ರೀತಿಯ ಘೋರ ನರಕಯಾತನೆ! ಅವುಗಳ ಬಗ್ಗೆ ಕೇಳಿದಾಗ ನೋಡಿದಂತೆಯೇ ಆಯಿತು. ಇದರಿಂದ ನನ್ನ ಮನಸ್ಸಿಗೆ ಬಹಳ ಖೇದವಾಯಿತು. ತಿಳಿದೋ ತಿಳಿಯದೆಯೋ ಮನುಷ್ಯನು ತಪ್ಪುಗಳನ್ನು ಮಾಡುತ್ತಾನೆ. ಆದರೆ ಅವನು ಈ ನರಕ ಶಿಕ್ಷೆಯಿಂದ, ಈ ಉಗ್ರಯಾತನೆಗಳಿಂದ ರಕ್ಷಿಸಿಕೊಳ್ಳಲಾಗದೇ? ಹಾಗೆ ರಕ್ಷಿಸಿಕೊಳ್ಳಲು ಸಾಧ್ಯವಾಗುವುದಾದರೆ ದಯವಿಟ್ಟು ಹೇಳಿ.”
“ಮಹಾರಾಜ!” ಶುಕಮುನಿಗಳು ಹೇಳಿದರು, “ಮನುಷ್ಯನು ತನ್ನ ಮನಸ್ಸು, ಮಾತು, ಮತ್ತು ಕೃತ್ಯಗಳಿಂದ ಮಾಡಿದ ಪಾಪಗಳಿಗೆ ಸಾಯುವ ಮೊದಲೇ ಇಲ್ಲೇ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು; ಇಲ್ಲವಾದರೆ, ನಾನು ವರ್ಣಿಸಿದಂಥ ನರಕಗಳಿಗೆ ಹೋಗಿ ಘೋರ ಶಿಕ್ಷೆಯನುಭವಿಸುವುದು ಖಂಡಿತ. ಆದ್ದರಿಂದ, ವೈದ್ಯನು ರೋಗವನ್ನು ಗುರುತಿಸಿ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡುವಂತೆ, ತಪ್ಪಿಗೆ ತಕ್ಕ ಪ್ರಾಯಶ್ಚಿತ್ತವನ್ನು ಸಾಯುವ ಮೊದಲೇ, ದೇಹವು ಆರೋಗ್ಯದಿಂದ ಚೆನ್ನಾಗಿರುವಾಗಲೇ ಮಾಡಿಕೊಂಡುಬಿಡಬೇಕು.”
“ಆದರೆ ಪೂಜ್ಯರೇ…,” ಪರೀಕ್ಷಿತನು ಪುನಃ ಸಂಶಯದಿಂದ ಕೇಳಿದ, “ನೋಡುವುದರಿಂದಲೂ, ಶಾಸ್ತ್ರಗ್ರಂಥಗಳಿಂದಲೂ ಹಿರಿಯರಿಂದಲೂ ಕೇಳುವುದರಿಂದಲೂ, ಪಾಪಕಾರ್ಯವು ತನಗಾಗಲೀ ಇತರರಿಗಾಗಲೀ ಅಹಿತಕರವಾದುದೆಂದು ತಿಳಿದೂ ಮನುಷ್ಯನು ಪಾಪ ಮಾಡುವನಲ್ಲಾ…?! ಆಗ ಪ್ರಾಯಶ್ಚಿತ್ತದಿಂದೇನುಪಯೋಗ? ಕೆಲವರು ಪಾಪಕಾರ್ಯ ಮಾಡಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ. ಆನಂತರ ಪುನಃ ಪಾಪಕಾರ್ಯವನ್ನು ಮಾಡುತ್ತಾರೆ! ಹೀಗೆ ಪದೇ ಪದೇ ಮಾಡಿದರೆ ಏನು ಪ್ರಯೋಜನ? ಇದೊಂದು ರೀತಿ, ಆನೆಯು ಸ್ನಾನ ಮಾಡಿ ಆನಂತರ ತನ್ನ ತಲೆಯ ಮೇಲೆ ಮಣ್ಣೆರಚಿಕೊಂಡಂತೆ, ವ್ಯರ್ಥವೆನಿಸುತ್ತದೆ!”
ಪರೀಕ್ಷಿತನು ಬುದ್ಧಿವಂತಿಕೆಯಿಂದ ಹೀಗೆ ಪ್ರಶ್ನಿಸಲು, ಶುಕಮುನಿಗಳು ಮೆಚ್ಚಿ ಮುಗುಳ್ನಕ್ಕು ನುಡಿದರು, “ಮಹಾರಾಜ! ಈ ಪಾಪಗಳಿಗೆ ವಿಧಿಸಿರುವ ಪ್ರಾಯಶ್ಚಿತ್ತಗಳೆಲ್ಲವೂ ಕರ್ಮಗಳೇ ಆಗಿವೆ; ಕರ್ಮಗಳಿಂದಲೇ ಕರ್ಮಫಲಗಳನ್ನು ಪರಿಹರಿಸಲಾಗುವುದಿಲ್ಲ. ಆದ್ದರಿಂದ ಇವು ನಿಜವಾದ ಪ್ರಾಯಶ್ಚಿತ್ತಗಳಾಗುವುದಿಲ್ಲ. ನಿಜವಾದ ಪ್ರಾಯಶ್ಚಿತ್ತವೆಂದರೆ ಅಜ್ಞಾನವನ್ನು ಕಳೆಯುವ ಬ್ರಹ್ಮಜ್ಞಾನ ಪಡೆಯುವುದಾಗಿದೆ. ಪಥ್ಯವಾದ ಆಹಾರವನ್ನೇ ತಿನ್ನುತ್ತಿದ್ದರೆ ರೋಗರುಜಿನಗಳು ಒಬ್ಬನನ್ನು ತಟ್ಟುವುದಿಲ್ಲ. ಅಂತೆಯೇ, ಜ್ಞಾನವನ್ನು ಹೊಂದುವಲ್ಲಿ ಯಥಾವತ್ತಾಗಿ ನಿಯಮಗಳನ್ನು ಪಾಲಿಸಿದರೆ ಕ್ರಮೇಣ ಕ್ಷೇಮವಾಗುತ್ತದೆ. ತಪಸ್ಸು, ಬ್ರಹ್ಮಚರ್ಯ, ಶಮದಮಗಳು, ತ್ಯಾಗ, ಸತ್ಯ, ಶೌಚ, ಯಮನಿಯಮಗಳಿಂದ, ಧರ್ಮಜ್ಞರೂ ಶ್ರದ್ಧಾವಂತರೂ ಆದ ಧೀರರು, ಬಹಳ ದೊಡ್ಡದಾದ ಪಾಪವನ್ನೂ, ಬೆಂಕಿಯು ಒಣಗಿದ ಬಿದಿರುಗಳನ್ನು ಸುಟ್ಟುಹಾಕುವಂತೆ ನೀಗಿಸಿಕೊಳ್ಳುತ್ತಾರೆ. ಆದ್ದರಿಂದ ಈ ಎಲ್ಲ ನಿಯಮಗಳನ್ನು ನಿತ್ಯ ಪಾಲಿಸುವುದರಿಂದ ಪಾಪಗಳು ಒಬ್ಬನನ್ನು ತಟ್ಟುವುದಿಲ್ಲ.
“ಕೆಲವು ಮಹಾತ್ಮರು ಕೇವಲ ಭಕ್ತಿಯಿಂದಲೇ ಸೂರ್ಯನು ಮಂಜನ್ನು ಕರಗಿಸುವಂತೆ ಪಾಪಗಳನ್ನು ಕಳೆದುಕೊಳ್ಳುತ್ತಾರೆ. ಎಲೈ ರಾಜ, ಮನಸ್ಸನ್ನು ಶ್ರೀಕೃಷ್ಣನ ಅಡಿದಾವರೆಗಳಿಗರ್ಪಿಸಿ ಆ ಪರಮಪುರುಷನ ಸೇವೆಯಲ್ಲಿ ನಿಯೋಜಿಸುವುದರಿಂದ ಒಬ್ಬನು ಪಾಪಗಳನ್ನು ಕಳೆದುಕೊಂಡು ಶುದ್ಧವಾಗುವಂತೆ, ತಪಸ್ಸು, ವ್ರತಗಳಿಂದ ಶುದ್ಧವಾಗುವುದಿಲ್ಲ. ಶ್ರೀಮನ್ನಾರಾಯಣನ ಭಕ್ತರಾದ ಸಾಧುಸಂತರು ನಡೆಯುವ ಪಥವು ಬಹಳ ಶ್ರೇಷ್ಟವಾಗಿದೆ, ಮಂಗಳಕರವಾಗಿದೆ, ಭಯರಹಿತವಾಗಿದೆ, ಕ್ಷೇಮಕರವಾಗಿದೆ ಮತ್ತು ಸೌಶೀಲ್ಯತೆಯಿಂದ ಕೂಡಿದೆ. ಮದ್ಯದಿಂದ ತುಂಬಿರುವ ಕೊಡವನ್ನು ಅನೇಕ ನದಿಗಳ ನೀರಿನಿಂದಲೂ ಶುದ್ಧೀಕರಿಸಲಾಗುವುದಿಲ್ಲ; ಅಂತೆಯೇ, ನಾರಾಯಣನಿಗೆ ಪರಾಙ್ಮುಖವಾಗಿ ಮಾಡಿದ ಪ್ರಾಯಶ್ಚಿತ್ತಗಳು ಒಬ್ಬನನ್ನು ಶುದ್ಧೀಕರಿಸುವುದಿಲ್ಲ. ಅವು ಎಷ್ಟೇ ಚೆನ್ನಾಗಿ ಮಾಡಲ್ಪಟ್ಟರೂ ಅಷ್ಟೇ, ಭಗವಂತನಿಗೆ ವಿಮುಖವಾಗಿದ್ದರೆ ಪ್ರಯೋಜನವಿಲ್ಲ. ಎಲೈ ರಾಜ, ಒಂದೇ ಒಂದು ಬಾರಿ ಮನಸ್ಸನ್ನು ಶ್ರೀಕೃಷ್ಣನ ಪಾದಾರವಿಂದಗಳಲ್ಲಿ ನಿಯೋಜಿಸಿ ಅವನ ನಾಮ, ಗುಣ, ಲೀಲೆಗಳಿಗೆ ಆಕರ್ಷಿತರಾಗಿರುವವರು ಯಮನನ್ನಾಗಲೀ, ಪಾಶಗಳನ್ನು ಹಿಡಿದ ಅವನ ಭಟರನ್ನಾಗಲೀ ಕನಸಿನಲ್ಲೂ ನೋಡುವುದಿಲ್ಲ. ಆದ್ದರಿಂದ ಈ ಭಕ್ತಿಯೇ ಅತ್ಯಂತ ಶ್ರೇಷ್ಠ ಪ್ರಾಯಶ್ಚಿತ್ತ.”
ಪರೀಕ್ಷಿತನು ಆಶ್ಚರ್ಯದಿಂದ ಕೇಳುತ್ತಿದ್ದಂತೆ, ಶುಕಮುನಿಗಳು ಮತ್ತೆ ಹೇಳಿದರು, “ರಾಜ! ಈ ವಿಷಯದಲ್ಲಿ ವಿಷ್ಣುದೂತರಿಗೂ ಯಮದೂತರಿಗೂ ವಾದಗಳು ನಡೆಯುವುದಕ್ಕೆ ಕಾರಣವಾದ ಒಂದು ಪುರಾತನ ಇತಿಹಾಸವನ್ನು ವಿದ್ವಾಂಸರು ಉದಾಹರಿಸುತ್ತಾರೆ; ಅದನ್ನೇ ನಿನಗೂ ಹೇಳುತ್ತೇನೆ. ಗಮನವಿಟ್ಟು ಕೇಳು.”
ಶುಕಮುನಿಗಳು ಆ ಕಥೆಯನ್ನು ಹೇಳತೊಡಗಿದರು.
* * *
ಕನ್ಯಾಕುಬ್ಜವೆಂಬ ನಗರದಲ್ಲಿ ಅಜಾಮಿಳನೆಂಬ ಬ್ರಾಹ್ಮಣನಿದ್ದನು; ವೇದಾಧ್ಯಯನ ಸಂಪನ್ನನಾದ ಅವನು, ವ್ರತ ನಿಯಮಗಳನ್ನು ಪಾಲಿಸುತ್ತಾ ಉತ್ತಮ ಶೀಲ, ಸದಾಚಾರಗಳಿಂದ ಕೂಡಿದ್ದನು. ಮಂತ್ರವಿದನೂ ಸತ್ಯವಂತನೂ ಸಂಯಮಿಯೂ ಸದಾ ಶುಚಿಯಾಗಿಯೂ ಇರುತ್ತಿದ್ದ ಅವನು ಮೃದುಸ್ವಭಾವದವನಾಗಿದ್ದನು. ಗುರುಗಳಲ್ಲಿಯೂ, ಅಗ್ನಿದೇವನಲ್ಲೂ, ವೃದ್ಧರಲ್ಲೂ, ಅತಿಥಿಗಳಲ್ಲೂ ಬಹಳ ಶ್ರದ್ಧೆಯಿಂದಿರುತ್ತಿದ್ದ ಅವನು ಸದಾ ಅವರ ಸೇವೆಗೆ ನಿಲ್ಲುತ್ತಿದ್ದನು; ಅಹಂಕಾರ ರಹಿತನಾಗಿದ್ದ ಅವನು ಯಾರಲ್ಲೂ ಅಸೂಯೆ ತೋರುತ್ತಿರಲಿಲ್ಲ; ಸಕಲ ಜೀವಿಗಳಲ್ಲೂ ಸ್ನೇಹಭಾವದಿಂದಿರುತ್ತಿದ್ದ ಅವನು ಮಿತಭಾಷಿಯಾಗಿದ್ದು, ನಿಜವಾಗಿ ಸಾಧುವೇ ಆಗಿದ್ದನು.
ಒಂದು ದಿನ, ಅಜಾಮಿಳನು ತಂದೆಯ ಮಾತಿನಂತೆ ಫಲಪುಷ್ಪ ಸಮಿತ್ಕುಶಗಳನ್ನು ಆರಿಸಿ ತರಲು ಕಾಡಿಗೆ ಹೋದನು. ಅವನು ಹಾಗೆ ಅವುಗಳನ್ನು ಆರಿಸಿಕೊಂಡು ಹಿಂದಿರುಗುತ್ತಿದ್ದಾಗ, ಮರಗಳ ಮರೆಯಲ್ಲಿನ ದೃಶ್ಯವೊಂದನ್ನು ನೋಡಿ ಸ್ತಂಭೀಭೂತನಾಗಿ ನಿಂತನು. ಕಾಮುಕನಾದ ಶೂದ್ರನೊಬ್ಬನು ವೇಶ್ಯೆಯೊಬ್ಬಳನ್ನು ಗಟ್ಟಿಯಾಗಿ ಆಲಂಗಿಸಿಕೊಂಡು ಚುಂಬಿಸುತ್ತಿದ್ದನು. ಮದ್ಯಪಾನ ಮಾಡಿ ಮತ್ತಳಾಗಿದ್ದ ಆ ವೇಶ್ಯೆಯು ಕಂಗಳನ್ನು ಅತ್ತಿಂದಿತ್ತ ತೂರಾಡಿಸುತ್ತಿದ್ದಳು. ಮದನಾವೇಶಕ್ಕೊಳಗಾಗಿದ್ದ ಅವಳ ಸೀರೆಯು ಜಾರಿಹೋಗಿತ್ತು. ಅವರಿಬ್ಬರೂ ಪರಸ್ಪರ ಕ್ರೀಡಿಸುತ್ತಾ ನಗುನಗುತ್ತಾ ಹಾಡುತ್ತಿದ್ದರು. ಇಂಥ ದೃಶ್ಯವನ್ನು ಕಂಡ ಅಜಾಮಿಳನ ಮನಸ್ಸು ವಿಚಲಿತವಾಯಿತು. ತಿಳಿನೀರಿನಂತೆ ಪ್ರಶಾಂತವಾಗಿದ್ದ ಅವನ ನಿರ್ಮಲ ಮನಸ್ಸು ಕಲ್ಲು ಬಿದ್ದು ಅಲೆಗಳೇಳುವಂತೆ ಕಾಮವಿಕಾರದಿಂದ ಚಂಚಲವಾಯಿತು. ಶಾಸ್ತ್ರಗಳ ಉಕ್ತಿಯಂತೆ ಇಂಥ ಕಾಮವು ತಪ್ಪೆಂದು ಅವನ ಅಂತರಂಗ ಮತ್ತೆ ಮತ್ತೆ ಹೇಳುತ್ತಿದ್ದರೂ, ಅವನು ತನ್ನ ಮನಸ್ಸನ್ನು ನಿಗ್ರಹಿಸಲಶಕ್ತನಾದನು.
ಹಾಗೂ ಹೀಗೂ ಅಜಾಮಿಳನು ಮನೆಯನ್ನು ತಲುಪಿದರೂ, ಅವನ ಮನಸ್ಸು, ಕಾಡಿನಲ್ಲಿ ಕಂಡ ಆ ಕಾಮಿನಿಯಲ್ಲೇ ನೆಟ್ಟು ಹೋಯಿತು. ಅವನ ಹೃದ್ಗತನಾಗಿದ್ದ ಮದನನು ಮತ್ತೆ ಮತ್ತೆ ಅವಳ ಮುಖವೇ ಅವನ ಕಣ್ಮುಂದೆ ಸುಳಿಯುವಂತೆ ಮಾಡಿದನು. ಅವಳ ಯೋಚನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ, ಅಜಾಮಿಳನು, ಜಪ, ತಪ, ಅಧ್ಯಯನ, ಅಧ್ಯಾಪನವೇ ಮೊದಲಾದ ತನ್ನ ಬ್ರಾಹ್ಮಣ ಕಾರ್ಯಗಳನ್ನು ಬಿಟ್ಟುಬಿಟ್ಟನು. ಸೂರ್ಯಚಂದ್ರರು ಕಾಂತಿಯುಕ್ತವಾಗಿದ್ದರೂ ಗ್ರಹಣಕ್ಕೆ ಒಳಗಾಗುವುದಿಲ್ಲವೇ? ಅಂತೆಯೇ ಅಜಾಮಿಳನೂ ಆ ವೇಶ್ಯಾಗ್ರಹಣಗ್ರಸ್ತನಾದನು. ಅವಳ ಸಂಗ ಅವನಿಗೆ ಅನಿವಾರ್ಯವೆನಿಸಿತು. ಒಂದು ದಿನ, ಅವಳನ್ನು ಹುಡುಕಿಕೊಂಡು ಹೋದನು. ಮನಸ್ಸಿಟ್ಟರೆ ಯಾವುದು ತಾನೇ ಅಸಾಧ್ಯ? ಯಾರು ತಾನೇ ಸಿಗುವುದಿಲ್ಲ? ಆ ಮನಸ್ಸನ್ನು ಉತ್ತಮ ವಿಚಾರಗಳತ್ತ ಹರಿಸಬೇಕಷ್ಟೆ. ಆದರೆ ಅಜಾಮಿಳನು ಹಾಗೆ ಮಾಡದೇ, ಸತ್ವನಾಶವನ್ನೂ ದುಷ್ಟವಿಚಾರಗಳನ್ನೂ ಪ್ರೇರೇಪಿಸುವ ವೇಶ್ಯಾಸಂಗವನ್ನರಿಸಿಕೊಂಡು ಹೋದ. ಅವಳು ಸಿಕ್ಕಿದಳು ಕೂಡ. ಪಿತ್ರಾರ್ಜಿತವಾಗಿ ತನಗೆ ದಕ್ಕಿದ್ದ ಹಣವನ್ನು ಅವಳಿಗಾಗಿ ಸುರಿದು ಅವಳೊಂದಿಗೆ ಸುಖಿಸಿದ. ಆದರೆ ಅವನು ಅಷ್ಟಕ್ಕೆ ತೃಪ್ತನಾಗಲಿಲ್ಲ. ದಿನವೂ ಅವಳ ಮನೆಗೆ ಹೋಗಿಬರತೊಡಗಿದ. ತಂದೆಯು ಸಂಪಾದಿಸಿದ್ದ ಸಂಪತ್ತನ್ನು ನೀರಿನಂತೆ ಸುರಿದ. ಕ್ರಮೇಣ ಆ ವೇಶ್ಯೆಯಲ್ಲಿಯೇ ಬಹಳ ಅನುರಕ್ತನಾದ ಅವನು, ಉತ್ತಮ ಕುಲದ ತನ್ನ ಸುಂದರ, ಸುಶೀಲ ಪತ್ನಿಯನ್ನೂ ತೊರೆದು ಅವಳ ಮನೆಯಲ್ಲೇ ವಾಸಿಸತೊಡಗಿದ.
ಕುಳಿತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದಲ್ಲವೇ? ಇನ್ನು ಅಜಾಮಿಳನಿಗೆ ಅವನ ಅಪ್ಪನ ಆಸ್ತಿ ಎಲ್ಲಿ ಸಾಕಾದೀತು? ಅದೆಲ್ಲವೂ ಖಾಲಿಯಾಗಲು, ಏನು ಮಾಡುವುದೆಂದು ಅವನು ಯೋಚಿಸಿದನು. ವೇಶ್ಯೆಯು ಹೆಂಡತಿಯಂತಲ್ಲ. ವಿಟನ ಬಳಿ ಹಣವು ಖಾಲಿಯಾಗುತ್ತಲೇ ಅವನನ್ನು ಓಡಿಸಿಬಿಡುತ್ತಾಳೆ. ಅವಳನ್ನು ತೃಪ್ತಿಪಡಿಸಲು ಅಜಾಮಿಳನು ಧನಾರ್ಜನೆ ಮಾಡಲೇಬೇಕಿತ್ತು.
ಯಾವುದೇ ವಿಷಯವನ್ನು ಕುರಿತು ಸತತವಾಗಿ ಚಿಂತಿಸುತ್ತಿದ್ದರೆ, ಅದರ ಸಂಗದ ಬಯಕೆಯಾಗುತ್ತದೆ; ಆ ಬಯಕೆ, ಕ್ರಮೇಣ ಉತ್ಕಟ ಇಚ್ಛೆಯಾಗುತ್ತದೆ; ಅದು ನೆರವೇರದಿದ್ದರೆ ಕೋಪ ಬರುತ್ತದೆ; ಕೋಪದಿಂದ ಮನಸ್ಸನ್ನು ಮುಸುಕುವ ಸಂಮೋಹ, ಸಂಮೋಹದಿಂದ ಸರಿತಪ್ಪುಗಳ ವಿವೇಚನಾಶಕ್ತಿಯ ನಾಶ, ಅದರಿಂದ ಬುದ್ಧಿನಾಶ, ಮತ್ತು ಅದರಿಂದ ಕಡೆಗೆ ಮನುಷ್ಯನ ಪತನ. ಅಜಾಮಿಳನ ವಿಷಯದಲ್ಲಿ ಆದುದೂ ಹಾಗೆಯೇ! ಕೆಲವು ಮುಳ್ಳುಕಂಟಿಗಳು ಉತ್ತಮ ಸಸ್ಯಗಳ ಒಂದು ಗುಂಪನ್ನೇ ನಾಶಪಡಿಸುವಂತೆ, ವೇಶ್ಯಾಸಂಗವೆಂಬ ಅಜಾಮಿಳನ ಒಂದು ಪಾಪಕಾರ್ಯ, ಅವನ ಸದ್ಗುಣ ಸಮೂಹವನ್ನೇ ನಾಶಮಾಡಿ, ಅವನಲ್ಲಿ ಹೊಸ ಹೊಸ ಪಾಪಕಾರ್ಯಗಳನ್ನು ಹುಟ್ಟು ಹಾಕಿತು.
ಅಜಾಮಿಳನು ಹೀಗೆ ಧನಾರ್ಜನೆಗಾಗಿ ಜನರನ್ನು ದರೋಡೆ ಮಾಡತೊಡಗಿದನು, ಕಳ್ಳತನ ಮಾಡತೊಡಗಿದನು, ಜೂಜಾಡತೊಡಗಿದನು. ಹೀಗೆ ಇತರರಿಗೆ ಮೋಸಮಾಡಿ, ತೊಂದರೆಯನ್ನುಂಟು ಮಾಡಿ ಆ ವೇಶ್ಯೆಯನ್ನು ಪೋಷಿಸತೊಡಗಿದನು. ತನ್ನ ಪೂರ್ವಾಚಾರಗಳನ್ನು ಸಂಪೂರ್ಣ ಮರೆತು, ಶಾಸ್ತ್ರವಿರುದ್ಧವಾಗಿಯೂ ಲೋಕವಿರುದ್ಧವಾಗಿಯೂ ನಡೆದುಕೊಳ್ಳುತ್ತಾ, ಅಶುದ್ಧವಾದ, ಅಭಕ್ಷ್ಯ ಆಹಾರಪಾನೀಯಗಳನ್ನು ಸೇವಿಸುತ್ತಾ, ಬಹಳ ಅಶುಚಿಯಾಗಿಯೂ ಪಾಪಭೂಯಿಷ್ಠನಾಗಿಯೂ ಜೀವಿಸತೊಡಗಿದನು. ಹೀಗೆ ಒಬ್ಬ ಸದ್ಬ್ರಾಹ್ಮಣನು ಭ್ರಷ್ಟನಾದನು.
(ಮುಂದುವರಿಯುವುದು)