ಅಜಾಮಿಳನ ಕಥೆ
ಆಧಾರ: ಆರನೆಯ ಸ್ಕಂಧ, ಅಧ್ಯಾಯ ಒಂದು
– ಡಾ॥ ಬಿ.ಆರ್. ಸುಹಾಸ್
ಅಜಾಮಿಳ ವಿಷಘಳಿಗೆಯಲ್ಲಿ ಮತಿಗೆಟ್ಟು ವ್ಯಭಿಚಾರಕ್ಕಿಳಿದ. ವೇಶ್ಯೆಯ ಸಹವಾಸ ಮಾಡಿ ಕೆಟ್ಟ. ಮದ್ಯಪಾನ ಮಾಡಿ ಪತಿತನಾದ. ಕಳ್ಳತನ-ಸುಲಿಗೆಗಳನ್ನು ಮಾಡತೊಡಗಿದ. ಒಟ್ಟಿನಲ್ಲಿ ಬ್ರಾಹ್ಮಣತ್ವದ ಸಾತ್ವಿಕತೆಯನ್ನು ಕಳೆದುಕೊಂಡು ಭ್ರಷ್ಟನಾದ. ಮುಂದೆ ಓದಿ…
ಅಜಾಮಿಳನಿಗೆ ವೇಶ್ಯಾಸ್ತ್ರೀಯಲ್ಲಿ ಕ್ರಮೇಣ ಹತ್ತು ಪುತ್ರರು ಜನಿಸಿದರು. ಆ ಹತ್ತು ಪುತ್ರರಲ್ಲಿ ಕೊನೆಯವನಿಗೆ ನಾರಾಯಣ ಎಂದು ಹೆಸರಿಟ್ಟರು. ಎಲ್ಲರಿಗೂ ಚಿಕ್ಕವನೂ ಇನ್ನೂ ಮಗುವು ಆದ ಅವನು, ತಾಯ್ತಂದೆಯರಿಗೆ ಬಹಳ ಪ್ರೀತಿಪಾತ್ರದವನಾದನು. ಅವನು ಹುಟ್ಟುವ ಹೊತ್ತಿಗೆ ಎಂಬತ್ತೆಂಟು ವರ್ಷಗಳ ಮುದುಕನಾಗಿದ್ದ ಅಜಾಮಿಳನು, ಅವನ ತೊದಲು ಮಾತು, ಮುದ್ದಾದ ಆಟಪಾಟಗಳನ್ನು ಬಹಳ ಸವಿಯುತ್ತಿದ್ದನು. ಕ್ರಮೇಣ ಅವನಲ್ಲಿ ಬಹಳ ಪ್ರೀತಿ ಹೊಂದಿದ ಅಜಾಮಿಳನು ಅವನನ್ನು ಒಂದು ಕ್ಷಣವೂ ಬಿಟ್ಟಿರದಾದನು. ಊಟ ಮಾಡುವಾಗ, ಮಲಗುವಾಗ, ಯಾವಾಗಲೂ ಆ ಮಗುವನ್ನು ತನ್ನ ಬಳಿಯೇ ಇರಿಸಿಕೊಂಡಿರುತ್ತಿದ್ದನು.
ಹೀಗೆ, ದೀರ್ಘಕಾಲ ಪಾಪಜೀವನದಲ್ಲೇ ಕಳೆದು ಈಗ ಮಗುವಿನ ಬಾಲಲೀಲೆಗಳನ್ನು ಸವಿಯುತ್ತಿದ್ದ ಆ ಮೂಢ ಅಜಾಮಿಳನಿಗೆ ತನ್ನ ಕಾಲವು ಸಮೀಪಿಸುತ್ತಿರುವುದೂ ಅರಿವಾಗಲಿಲ್ಲ. ಕಡೆಗೂ ಆ ಮೃತ್ಯುಕಾಲ ಬಂದೇಬಿಟ್ಟಿತು.
ಅಜಾಮಿಳನು ಹಾಸಿಗೆಯ ಮೇಲೆ ಮಲಗಿದ್ದನು. ಆಗ ಸನಿಹದಲ್ಲೇ ಮಗುವಾದ ನಾರಾಯಣನು ಆಡಿಕೊಳ್ಳುತ್ತಿದ್ದನು. ಅವನನ್ನೇ ನೋಡುತ್ತಾ, ಅಜಾಮಿಳನು ಅವನನ್ನೇ ತನ್ನ ಮನಸ್ಸಿನಲ್ಲಿ ತುಂಬಿಕೊಂಡಿದ್ದನು. ಇದ್ದಕ್ಕಿದ್ದಂತೆ, ಭೀಕರ ಸ್ವರೂಪದ ಮೂವರು ವ್ಯಕ್ತಿಗಳು ಪ್ರತ್ಯಕ್ಷರಾದರು. ವಕ್ರವಾದ ಆಕೃತಿಗಳನ್ನೂ, ಉದ್ದುದ್ದ ಕೂದಲುಗಳನ್ನೂ ಮುಖಗಳನ್ನೂ ಹೊಂದಿದ್ದ ಅವರು, ಕೈಗಳಲ್ಲಿ ಪಾಶಗಳನ್ನು ಹಿಡಿದಿದ್ದರು. ಅಜಾಮಿಳನ ಆತ್ಮವನ್ನು ಸೆಳೆದೊಯ್ಯಲು ಬಂದಿದ್ದ ಯಮದೂತರಲ್ಲದೇ ಬೇರಾರೂ ಆಗಿರಲಿಲ್ಲ ಅವರು.
ಘೋರರೂಪಿಗಳಾದ ಯಮದೂತರನ್ನು ಕಂಡ ಅಜಾಮಿಳನು ಭಯಭೀತನಾದನು! ಅವನ ಕಂಗಳಲ್ಲಿ ನೀರು ತುಂಬಿಕೊಂಡಿತು. ತನ್ನ ಮುದ್ದು ಮಗನನ್ನು `ನಾರಾಯಣ! ನಾರಾಯಣ!’ ಎಂದು ವ್ಯಾಕುಲಭರಿತನಾಗಿ ಜೋರಾಗಿ ಕೂಗಿದನು.
ಅಜಾಮಿಳನು ಭಯಗೊಂಡು ನಾರಾಯಣ ಎಂದು ಕೂಗಿದುದು ಪುತ್ರನನ್ನು ಕರೆಯುವ ಸಲುವಾಗಿ. ಆದರೆ ತಿಳಿದೋ ತಿಳಿಯದೆಯೋ ಔಷಧಿಯನ್ನು ಸೇವಿಸಿದರೆ ಅದು ಕೆಲಸ ಮಾಡುವಂತೆ, ಅವನು ಮಾಡಿದ ನಾಮೋಚ್ಚಾರಣೆ, ಹರಿಕೀರ್ತನೆಯೇ ಆಯಿತು!! ಕೂಡಲೇ, ಅದನ್ನು ಕೇಳಿದ ವಿಷ್ಣುದೂತರು ಅಲ್ಲಿಗೆ ಆಗಮಿಸಿದರು. “ನಿಲ್ಲಿಸಿ! ನಿಲ್ಲಿಸಿ!” ಎಂದು ಜೋರಾಗಿ ಕೂಗುತ್ತಾ ಯಮದೂತರನ್ನು ತಡೆದರು!
ಯಮದೂತರಿಗೆ ಆಶ್ಚರ್ಯವಾಯಿತು. ಬೆರಗುಗಣ್ಣುಗಳಿಂದ ವಿಷ್ಣುದೂತರನ್ನು ನೋಡುತ್ತಾ ಅವರು ಕೇಳಿದರು, “ಪೀತಾಂಬರಗಳನ್ನು ಧರಿಸಿಕೊಂಡು, ಕಿರೀಟ ಕುಂಡಲ ಕಮಲಪುಷ್ಪ ಮಾಲೆಗಳಿಂದ ಸಮಲಂಕೃತರಾಗಿ, ಬಹಳ ಸುಂದರ ಯುವಕರಂತೆ ಕಾಣುವ ನೀವು ಯಾರು? ಶಂಖಚಕ್ರಗದಾ ಖಡ್ಗಗಳನ್ನು ಹಿಡಿದು ಉಜ್ವಲ ಕಾಂತಿಯಿಂದ ಕೊಳೆಯುತ್ತಿರುವ ನೀವು ಯಾರು?! ನಮ್ಮನ್ನೇಕೆ ಹೀಗೆ ತಡೆಯುತ್ತಿರುವಿರಿ!”
ವಿಷ್ಣುದೂತರು ಮುಗುಳ್ನಗುತ್ತಾ ಮೇಘದಂತೆ ಗಂಭೀರವಾದ ಧ್ವನಿಯಿಂದ ನುಡಿದರು, “ನೀವು ನಿಜವಾಗಿಯೂ ಯಮಧರ್ಮರಾಜನ ದೂತರೇ ಆಗಿದ್ದರೆ, ಧರ್ಮ ಮತ್ತು ಅಧರ್ಮದ ಲಕ್ಷಣ, ಸ್ವರೂಪಗಳನ್ನು ವಿವರಿಸಿ ಹೇಳಿ. ಯಾವ ಕಾರಣಗಳಿಂದ ಒಬ್ಬನನ್ನು ರಕ್ಷಿಸಲಾಗುತ್ತದೆ? ಶಿಕ್ಷೆಯ ಆಧಾರವೇನು? ಕರ್ಮಗಳಲ್ಲಿ ತೊಡಗಿರುವ ಎಲ್ಲರೂ ಶಿಕ್ಷಾರ್ಹರೋ ಅಥವಾ ಕೆಲವರು ಮಾತ್ರವೋ? ಇವೆಲ್ಲವನ್ನೂ ಹೇಳಿ.”
“ಎಲೈ ದೇವತೆಗಳೇ!” ಯಮದೂತರು ಹೇಳಿದರು,” ವೇದಗಳು ಯಾವುದನ್ನು ಆಚರಿಸಲು ಪ್ರತಿಪಾದಿಸಿರುವವೋ ಅದೇ ಧರ್ಮ. ವೇದಗಳಾದರೋ, ಭಗವಂತನಾದ ನಾರಾಯಣನಿಂದ ಹೊರ ಹೊಮ್ಮಿರುವುದರಿಂದ, ಅವು ಸ್ವಯಂಭೂ ಎನಿಸಿವೆ, ಮತ್ತು ಭಗವಂತನಿಗೆ ಸಮವಾಗಿವೆ. ಇದನ್ನು ನಾವು ಯಮರಾಜನಿಂದಲೇ ಕೇಳಿದ್ದೇವೆ. ಭಗವಂತನು ತನ್ನ ಧಾಮದಲ್ಲೇ ಇದ್ದರೂ ಪ್ರಕೃತಿಯ ಮೂರು ಗುಣಗಳಾದ ಸತ್ತ್ವ, ರಜಸ್ಸು, ತಮಸ್ಸುಗಳನ್ನು ನಿಯಂತ್ರಿಸುತ್ತಾನೆ. ಈ ಗುಣಗಳ ಸಂಗದಿಂದಲೇ ಜೀವಿಗಳು ವಿವಿಧ ನಾಮ, ರೂಪಗಳಲ್ಲಿ ಪ್ರಕಟಗೊಂಡು ಆಯಾ ಗುಣಸಂಗಕ್ಕೆ ತಕ್ಕಂತೆ ಪುಣ್ಯ ಅಥವಾ ಪಾಪಕಾರ್ಯಗಳಲ್ಲಿ ತೊಡಗುತ್ತಾರೆ. ಅವರ ವಿವಿಧ ಕಾರ್ಯಗಳಿಗೆ ಸಾಕ್ಷಿಗಳೆಂದರೆ, ಸೂರ್ಯ, ಅಗ್ನಿ, ವಾಯು, ದೇವತೆಗಳು, ಚಂದ್ರ, ಸಂಧ್ಯಾಕಾಲ, ಹಗಲುರಾತ್ರಿಗಳು, ದಿಕ್ಕುಗಳು, ನೀರು, ಭೂಮಿ, ಮತ್ತು ಸಾಕ್ಷಾತ್ ಧರ್ಮನೆನಿಸಿದ ಯಮ! ಈ ವಿವಿಧ ಸಾಕ್ಷಿಗಳಿಂದ ಜೀವಿಯ ಅಧರ್ಮಾಚರಣೆ ವಿದಿತವಾಗುತ್ತದೆ; ಹಾಗಾಗಿ ಅವನು ಯಾರಿಗೂ ತಿಳಿಯದೇ ಏನನ್ನೂ ಮಾಡಲಾರ! ಜೀವಿಗಳಿಗೆ, ತಂತಮ್ಮ ತಪ್ಪುಗಳಿಗೆ ಅನುಸಾರವಾಗಿ ಶಿಕ್ಷೆಯಾಗುತ್ತದೆ. ಅವರವರ ಕರ್ಮಗಳಿಗೆ ತಕ್ಕಂತೆ ಅವರು ಮುಂದಿನ ಜನ್ಮದಲ್ಲೂ ಫಲಗಳನ್ನು ಅನುಭವಿಸುತ್ತಾರೆ. ಇದಕ್ಕೆಲ್ಲಾ ಕಾರಣ, ಜೀವಿಗಳು ಗುಣಗಳ ಸಂಗ ಮಾಡುವುದು. ಈ ಗುಣಗಳ ಸಂಗದಲ್ಲಿರುವವನು ಒಳ್ಳೆಯ ಅಥವಾ ಕೆಟ್ಟ ಕೆಲಸಗಳನ್ನು ಮಾಡುತ್ತಿರುತ್ತಾನೆಯೇ ಹೊರತು, ಕೆಲಸವನ್ನೇ ಮಾಡದಿರಲಾರ. ಈ ಸತ್ತ್ವ, ರಜಸ್ಸು, ತಮಸ್ಸು, ಎಂಬ ಗುಣಗಳ ಸಂಗಕ್ಕೆ ತಕ್ಕಂತೆ, ವ್ಯಕ್ತಿಯು ಶಾಂತನಾಗಿರುತ್ತಾನೆ, ಇಲ್ಲವೇ ಅವಿಶ್ರಾಂತನಾಗಿರುತ್ತಾನೆ, ಅಥವಾ ಮೌಢ್ಯತೆಯಿಂದ ಕೂಡಿರುತ್ತಾನೆ. ಅವನು ಮಾಡುವ ಗುಣಸಂಗಕ್ಕೆ ತಕ್ಕಂತೆ ಅವನ ಭವಿಷ್ಯವೂ ನಿರ್ಧರಿತವಾಗುತ್ತದೆ. ಈಗಿರುವ ಋತು, ಹಿಂದೆ ಇದ್ದ ಅಥವಾ ಮುಂದೆ ಬರುವ ಅದೇ ಋತು ಹೇಗಿರುತ್ತದೆಂದು ಸೂಚಿಸುವುದಿಲ್ಲವೇ? ಹಾಗೆಯೇ ಇದೂ ಕೂಡ! ಈಗಿರುವ ಸ್ಥಿತಿ, ಮುಂದೆ ಹೇಗೆಂಬುದನ್ನು ಸೂಚಿಸುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡಿದರೆ ಒಳ್ಳೆಯ ಫಲ, ಒಳ್ಳೆಯ ಜನ್ಮ; ಕೆಟ್ಟ ಕೆಲಸಗಳನ್ನು ಮಾಡಿದರೆ ಕೆಟ್ಟ ಫಲ, ಕೆಟ್ಟ ಜನ್ಮ. ಆದರೆ ಒಬ್ಬ ವ್ಯಕ್ತಿಗೆ ತನ್ನ ಜನ್ಮದ ಅಥವಾ ತಾನು ಅನುಭವಿಸುತ್ತಿರುವ ಫಲಗಳ ಕಾರಣವು ತನ್ನದೇ ಆದಂಥ ಒಳ್ಳೆಯ ಅಥವಾ ಕೆಟ್ಟ ಕೆಲಸಗಳು ಎಂದು ತಿಳಿದಿರುವುದಿಲ್ಲವಲ್ಲಾ… ಏಕೆ ಎಂದು ಕೇಳುವಿರೋ? ಉತ್ತರ ಹೀಗಿದೆ: ಒಬ್ಬ ವ್ಯಕ್ತಿಯು ಮಲಗಿ ನಿದ್ರಿಸಿದಾಗ, ಕನಸಿನಲ್ಲಿ ಸೃಷ್ಟಿಯಾಗುವ ದೇಹ, ತಾನೇ ಎಂದು ಕಲ್ಪಿಸಿಕೊಂಡು ಅದರಲ್ಲಿ ಸುಖದುಃಖಗಳನ್ನು ಅನುಭವಿಸುತ್ತಾನೆ. ಈ ಕನಸಿನ ಕಲ್ಪನೆಗೆ ಎಚ್ಚರದಲ್ಲಿ ತಾನು ಅಳವಡಿಸಿಕೊಂಡ ಮನೋವ್ಯಾಪಾರಗಳು ತಾನೇ ಕಾರಣ? ಅಂತೆಯೇ ಅವನು ಮಾಡುವ ಪಾಪ, ಪುಣ್ಯಗಳಿಗೆ ತಕ್ಕಂತೆ ಒಂದು ನೂತನ ದೇಹವನ್ನು ಸ್ವೀಕರಿಸಿ ತಾನೇ ಆ ದೇಹವೆಂದು ಭ್ರಮಿಸಿ ಅವುಗಳ ಫಲಗಳನ್ನು ಆ ದೇಹದ ಮೂಲಕ ಅನುಭವಿಸುತ್ತಾನೆ. ಕನಸಿನಲ್ಲಿರುವಾಗ ವ್ಯಕ್ತಿಗೆ ಹಳೆಯ ವಾಸ್ತವಗಳು ಮರೆಯುವಂತೆ, ಹೊಸ ಜನ್ಮಕ್ಕೆ ಬಂದ ವ್ಯಕ್ತಿಗೆ ತನ್ನ ಹಳೆಯ ಕರ್ಮಗಳು ಮರೆತುಹೋಗುತ್ತವೆ. ಜೀವಾತ್ಮನನ್ನು ಹೊಸ ಜನ್ಮಕ್ಕೆ ಕೊಂಡೊಯ್ಯುವುದು ಸೂಕ್ಷ್ಮವಾದ ಲಿಂಗದೇಹವಾಗಿದೆ; ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಇಂದ್ರಿಯಗೋಚರ ಪಂಚ ವಿಷಯಗಳು, ಮತ್ತು ಮನಸ್ಸು – ಇವುಗಳಿಂದ ಆಗಿರುವ ಈ ಲಿಂಗದೇಹವೇ ಜೀವಿಯ ಪುನರ್ಜನ್ಮಕ್ಕೆ ಕಾರಣ. ಲಿಂಗದೇಹದ ಈ ಹದಿನಾರು ಕಲೆಗಳೊಂದಿಗೆ ಜೀವಿಯು ತಾನೊಬ್ಬನೇ ಕಷ್ಟ, ಸುಖಗಳನ್ನು ಅನುಭವಿಸುತ್ತಾನೆ. ಈ ಲಿಂಗದೇಹವು ಪ್ರಕೃತಿಯ ಮೂರು ಗುಣಗಳಿಂದಲೇ ಉಂಟಾಗುತ್ತವೆ; ಹೀಗೆ, ಜೀವಿಯ ಎಲ್ಲಾ ಕಾರ್ಯಗಳಿಗೂ ಪ್ರಕೃತಿಯ ಗುಣಗಳೇ ನಿಜವಾಗಿ ಕಾರಣ. ಅವನು ಈ ಗುಣಗಳ ಸಂಗ ಮಾಡುವುದರಿಂದ, ಅವು ಅವನನ್ನು ಒಂದು ಕ್ಷಣವೂ ಸುಮ್ಮನಿರಲು ಬಿಡದೇ ಕೆಲಸ ಮಾಡಿಸುತ್ತಲೇ ಇರುತ್ತವೆ. ಅವನು ಯಾವ ಗುಣಕ್ಕೆ ಹೆಚ್ಚು ಅಂಟಿಕೊಳ್ಳುವನೋ, ಅದಕ್ಕೆ ತಕ್ಕಂತಹ ಕೆಲಸ ಮಾಡುತ್ತಾನೆ; ಸತ್ತ್ವಗುಣದ ಸಂಗ ಮಾಡಿದರೆ ಶಾಂತವಾದ, ವಿವೇಕಯುತ ಕಾರ್ಯಗಳನ್ನು ರಜೋ, ತಮೋಗುಣಗಳ ಸಂಗಮಾಡಿದರೆ ಕಾಮಯುತ, ಅವಿಶ್ರಾಂತ, ನಾಶ ಮತ್ತು ಕ್ರೋಧ ಪ್ರವೃತ್ತಿಯ ಕಾರ್ಯಗಳನ್ನು ಜೀವನು ಮಾಡುತ್ತಾನೆ. ಆದರೆ ಮಾನವ ಜನ್ಮ ದೊರೆತಾಗ ಅವನು ಭಗವಂತನ ಸಂಗ ಮಾಡತೊಡಗಿದರೆ ನಿಧಾನವಾಗಿ ಈ ಗುಣಗಳ ಸಂಗದಿಂದ ಬಿಡುಗಡೆಗೊಂಡು ಪುಣ್ಯಪಾಪಗಳನ್ನು ಮೀರುತ್ತಾನೆ.
ಇನ್ನು ಈ ಅಜಾಮಿಳನ ವಿಚಾರ…! ಇವನು ಮೊದಲಿಗೆ ಸದಾಚಾರಸಂಪನ್ನನಾದ ಬ್ರಾಹ್ಮಣನಾಗಿದ್ದು ಸತ್ತ್ವಗುಣದಲ್ಲಿದ್ದ. ಆದರೆ ಒಬ್ಬ ವೇಶ್ಯೆಯನ್ನು ನೋಡಿ ರಜೋ ತಮೋಗುಣಗಳಿಗೆ ವಶನಾದ. ಅವಳನ್ನು ಬೆರೆತ; ಶೀಲವತಿಯಾದ ಸುಂದರ ಪತ್ನಿಯನ್ನು ತೊರೆದ; ಹಲವಾರು ಪಾಪಕೃತ್ಯಗಳನ್ನು ಮಾಡಿ ಮಹಾಪತಿತನಾದ. ಹೋಗಲಿ ಸಾಯುವ ಮೊದಲು ಪ್ರಾಯಶ್ಚಿತ್ತವನ್ನೂ ಮಾಡಿಕೊಳ್ಳಲಿಲ್ಲ. ಆದ್ದರಿಂದ ಈ ಪಾಪಿಯನ್ನು ಯಮಲೋಕಕ್ಕೆ ಸೆಳೆದೊಯ್ದು ಶಿಕ್ಷಿಸಿ ಶುದ್ಧಗೊಳಿಸಲು ನಾವು ಬಂದಿದ್ದೇವೆ. ಈಗಲಾದರೂ ಹೇಳಿ! ದೇವತೆಗಳಂತೆ ಹೊಳೆಯುತ್ತಿರುವ ನೀವು ನಿಜವಾಗಿ ಯಾರು?”
“ಅಯ್ಯಾ ಯಮದೂತರೇ, ನಾವು ವಿಷ್ಣುದೂತರು!” ವಿಷ್ಣುದೂತರು ನಗುತ್ತಾ ಹೇಳಿದರು, “ಕರ್ಮಗಳ ಬಗ್ಗೆ, ಪಾಪಪುಣ್ಯಗಳ ಮತ್ತು ಅವುಗಳ ಫಲಗಳ ಬಗ್ಗೆ, ತ್ರಿಗುಣಗಳ ಸಂಗದ ಬಗ್ಗೆ ಬಹಳ ಸೊಗಸಾಗಿ, ಸರಿಯಾಗಿ ಹೇಳಿದಿರಿ. ಆದರೆ ನೀವು ಮಾಡುತ್ತಿರುವುದೇನು?! ಧರ್ಮಸಭೆಯಲ್ಲಿ ಅಧರ್ಮವನ್ನು ತಂದಂತಿದೆ! ದಂಡಿಸಬಾರದವನನ್ನು, ನಿಷ್ಪಾಪವನ್ನು, ದಂಡಿಸಲು ಹೊರಟಿರುವಿರಲ್ಲಾ…?! ರಾಜನಾಗಲೀ ಶಾಸಕನಾಗಲೀ ಪ್ರಜೆಗಳನ್ನು ಸಮದೃಷ್ಟಿಯಿಂದ, ತಂದೆಯಂತೆ ಪ್ರೀತಿಸಬೇಕು. ಆದರೆ ಅವನೇ ಅವರಲ್ಲಿ ವೈಷಮ್ಯ ತೋರಿ ಅವರನ್ನು ದಂಡಿಸಿದರೆ, ಅವರು ಇನ್ನಾರಲ್ಲಿ ಶರಣಾಗಬೇಕು? ಒಡೆಯನು ರಕ್ಷಿಸುತ್ತಾನೆಂಬ ಭರವಸೆಯಿಂದ ತೊಡೆಯ ಮೇಲೆ ತಲೆಯಿಟ್ಟು ಮಲಗಿರುವ ಪಶುವಿನಂತೆ, ಧರ್ಮಾಧರ್ಮಗಳ ಸ್ವರೂಪವನ್ನು ಸರಿಯಾಗಿ ತಿಳಿಯದೇ ಒಡೆಯನಲ್ಲಿ ವಿಶ್ವಾಸವಿರಿಸಿರುವ ಪ್ರಜೆಗಳನ್ನು ಆ ಒಡೆಯನೇ ಹೇಗೆ ಕೊಲ್ಲಲು ಸಾಧ್ಯ? ನೀವೇ ಹೇಳಿ!”
“ನೀವೇನು ಹೇಳುತ್ತಿರುವಿರಿ?” ಯಮದೂತರು ಅವಾಕ್ಕಾಗಿ ಕೇಳಿದರು, “ಸಾಕ್ಷಾತ್ ಧರ್ಮಸ್ವರೂಪನಾದ ಯಮರಾಜನ ಭೃತ್ಯರು ನಾವು! ನಾವು ಇಲ್ಲಿ ಅಧರ್ಮ ತಂದೆವೇ?! ಮಹಾಪಾಪಿಯಾದ ಅಜಾಮಿಳನನ್ನು ಶಿಕ್ಷಿಸಲು ಬಂದಿರುವೆವು ನಾವು! ಇದು ತಪ್ಪೇ ಅವನು ದಂಡಿಸಬಾರದವನೇ? ನಿಷ್ಪಾಪನೇ? ಹೇಳಿ?”
ವಿಷ್ಣುದೂತರು ಹೇಳಿದರು, “ಯಮದೂತರೇ! ಈ ಅಜಾಮಿಳನು ಈ ಒಂದು ಜನ್ಮವಷ್ಟೇ ಅಲ್ಲ. ಕೋಟಿಕೋಟಿ ಜನ್ಮಗಳ ಪಾಪಗಳನ್ನು ಪರಿಹರಿಸಿಕೊಂಡಾಗಿದೆ! ಅವನು ಅಸಹಾಯಕ ಸ್ಥಿತಿಯಲ್ಲಿ ಹರಿನಾಮವನ್ನು ಉಚ್ಚರಿಸಿದನಲ್ಲವೇ? ಅಷ್ಟೇ ಸಾಕಾಯಿತು! ಅವನ ಪಾಪಗಳೆಲ್ಲ ನಾಶವಾದವು! ಇವನು ಮಹಾಪಾಪಿಯೇ ಆಗಿದ್ದರೂ `ನಾರಾಯಣ’ ಎಂಬ ನಾಲ್ಕು ಅಕ್ಷರಗಳನ್ನು ಉಚ್ಚರಿಸಿದ ಕೂಡಲೇ ಇವನ ಪಾಪಗಳೆಲ್ಲವೂ ನಾಶವಾದವು! ಅವನಿಗೆ ತಕ್ಕ ಪ್ರಾಯಶ್ಚಿತ್ತವಾಯಿತು. ಕಳ್ಳ, ಕುಡುಕ, ಮಿತ್ರದ್ರೋಹಿ, ಬ್ರಹ್ಮಹತ್ಯಾಪಾತಕಿ, ಗುರುಪತ್ನಿಯನ್ನು ಕಾಮಿಸಿದವನು, ಸ್ತ್ರೀಯನ್ನೂ, ರಾಜನನ್ನೂ, ತಂದೆಯನ್ನೂ, ಹಸುವನ್ನೂ ಕೊಂದವನು – ಈ ಎಲ್ಲಾ ಬಗೆಯ ಪಾಪಿಗಳಿಗೂ ಅತ್ಯುತ್ತಮ ಪ್ರಾಯಶ್ಚಿತ್ತವೆಂದರೆ ಶ್ರೀಹರಿಯ ನಾಮಗಳನ್ನುಚ್ಚರಿಸುವುದು. ಇದರಿಂದ, ಮನಸ್ಸು ಆ ಶ್ರೀಹರಿಯ ವಿಚಾರಗಳಲ್ಲಿ ನಿಲ್ಲುತ್ತದೆ. ಶ್ರೀಹರಿಗೂ ಇವರಲ್ಲಿ ಅನುಕಂಪವಾಗಿ ಇವರನ್ನು ರಕ್ಷಿಸುತ್ತಾನೆ. ಎಲೈ ಯಮದೂತರೇ, ಮನುವಾಗಲೀ ಇತರ ಬ್ರಹ್ಮರ್ಷಿಗಳಾಗಲೀ ವಿಧಿಸಿರುವ ಪ್ರಾಯಶ್ಚಿತ್ತಗಳು ಒಬ್ಬ ವ್ಯಕ್ತಿಯನ್ನು ಹರಿನಾಮೋಚ್ಚಾರಣೆಯು ಶುದ್ಧಗೊಳಿಸುವಂತೆ ಶುದ್ಧಗೊಳಿಸುವುದಿಲ್ಲ. ಒಂದು ವೇಳೆ ಆ ಪ್ರಾಯಶ್ಚಿತ್ತಗಳನ್ನು ಮಾಡಿಕೊಂಡರೂ, ಮನುಷ್ಯನು ಪುನಃ ಕುಮಾರ್ಗದಲ್ಲಿ ಹೋಗುವ ಸಾಧ್ಯತೆಯಿರುತ್ತದೆ! ಆದರೆ ಹರಿನಾಮಗಳನ್ನು ಉಚ್ಚರಿಸುತ್ತಿದ್ದರೆ, ಹೃದಯವು ಶುದ್ಧವಾಗುತ್ತಾ, ಶ್ರೀಹರಿಯ ಗುಣ, ಲೀಲೆಗಳಲ್ಲಿಯೇ ಆಸಕ್ತಿ ಹೆಚ್ಚುತ್ತಾ, ಮನಸ್ಸು ಪಾಪದ ಕಡೆ ಹೋಗುವುದೇ ಇಲ್ಲ. ಆದ್ದರಿಂದ, ಮನುಷ್ಯನು ಕರ್ಮಗಳ ಪ್ರಭಾವದಿಂದ ತನ್ನನ್ನು ಬಿಡಿಸಿಕೊಳ್ಳಬೇಕೆಂದರೆ ಹರಿನಾಮೋಚ್ಚಾರಣೆ ಮಾಡಬೇಕು. ಎಲೈ ಯಮದೂತರೇ, ಈ ಅಜಾಮಿಳನು ಸಾಯುವ ಸಮಯದಲ್ಲಿ ಭಗವಂತನ ನಾಮೋಚ್ಚಾರಣೆ ಮಾಡಿದ್ದಾನೆ. ಇದರಿಂದ ಅವನ ಪಾಪಗಳು ಅಶೇಷವಾಗಿ ನಿರ್ಮೂಲನೆಯಾಗಿವೆ. ಆದ್ದರಿಂದ ಇವನನ್ನು ಸೆಳೆದೊಯ್ಯಬೇಡಿ.”
“ಆಹಾ….! ಇದೆಂಥ ಆಶ್ಚರ್ಯ!” ಯಮದೂತರು ಹೇಳಿದರು, “ಈ ಅಜಾಮಿಳನು ನಾರಾಯಣನೆಂಬ ನಾಮೋಚ್ಚಾರಣೆ ಮಾಡಿದ್ದಾನೆ ನಿಜ; ಆದರೆ ಅವನು ತನ್ನ ಮಗನನ್ನು ಉದ್ದೇಶಿಸಿ ಈ ಹೆಸರನ್ನು ಕೂಗಿದನೇ ವಿನಾ ಭಗವಂತನಾದ ವಿಷ್ಣುವನ್ನು ಸ್ಮರಿಸಿ ಅಲ್ಲ. ಅಂದಮೇಲೆ ಅವನು ಭಗವಂತನ ನಾಮೋಚ್ಚಾರಣೆ ಮಾಡಿದಂತೆ ಹೇಗಾಗುತ್ತದೆ?!”
“ಯಮದೂತರೇ, ಹರಿನಾಮ ಮಹಿಮೆಯೇನೆಂದು ಕೇಳಿ!” ವಿಷ್ಣುದೂತರು ಹೇಳಿದರು, “ಯಾರಾದರೂ ಹರಿನಾಮವನ್ನು ಇನ್ನಾರನ್ನೋ ಕರೆಯುವ ಅಥವಾ ಸೂಚಿಸುವ ಸಾಂಕೇತಿಕ ರೀತಿಯಲ್ಲಿ, ಪರಿಹಾಸ್ಯ ಮಾಡುವ ನೆಪದಲ್ಲಿ, ಸಂಗೀತ ಹಾಡುವಾಗ ಮಧ್ಯದಲ್ಲಿ, ಅವಹೇಳನ ಮಾಡುವ ರೀತಿಯಲ್ಲಿ, ಈ ಯಾವುದೇ ರೀತಿಯಲ್ಲಿ ಉಚ್ಚರಿಸಿದರೂ ಅವನು ತನ್ನ ಪಾಪಗಳನ್ನು ಅಶೇಷವಾಗಿ ನೀಗಿಸಿಕೊಳ್ಳುತ್ತಾನೆ! ಯಾರಾದರೂ ಬೀಳುತ್ತಿರುವಾಗ, ಎಡವಿದಾಗ, ಕೆಳಗೆ ಬಿದ್ದು ಗಾಯ ಮಾಡಿಕೊಂಡೋ ಇಲ್ಲವೇ ಮೂಳೆ ಮುರಿದುಕೊಂಡಾಗಲೋ, ಹಾವು ಅಥವಾ ಚೇಳು ಕಚ್ಚಿದಾಗ, ನೋವು ಇಲ್ಲದೇ ಜ್ವರದಿಂದ ನರಳುತ್ತಿರುವಾಗ, ಯಾವುದಾದರೂ ಆಯುಧದಿಂದ ಗಾಯವಾದಾಗ, ತನಗರಿವಿಲ್ಲದೆಯೇ, `ಶ್ರೀಹರಿ….! ನಾರಾಯಣ…! ಕೃಷ್ಣ!` ಎಂದೇನಾದರೂ ಉದ್ಗರಿಸಿದರೆ, ಅಂಥವನು ನರಕಯಾತನೆಗಳನ್ನು ಎಂದಿಗೂ ಅನುಭವಿಸುವುದಿಲ್ಲ!”
ಯಮದೂತರು ಮೂಕವಿಸ್ಮಿತರಾದರು! ಅವರ ಬಾಯಿಂದ ಒಂದು ಮಾತೂ ಹೊರಡಲಿಲ್ಲ! ವಿಷ್ಣುದೂತರು ಮುಂದುವರಿಸಿದರು, “ಮಹರ್ಷಿಗಳು ದೊಡ್ಡ ದೊಡ್ಡ ಪಾಪಗಳಿಗೆ ದೊಡ್ಡ ದೊಡ್ಡ ಪ್ರಾಯಶ್ಚಿತ್ತಗಳನ್ನೂ ಚಿಕ್ಕ ಚಿಕ್ಕ ಪಾಪಗಳಿಗೆ ಚಿಕ್ಕ ಚಿಕ್ಕ ಪ್ರಾಯಶ್ಚಿತ್ತಗಳನ್ನು ವಿಧಿಸಿದ್ದಾರೆ. ತಪಸ್ಸು, ದಾನಗಳು, ವ್ರತಗಳು, ಮೊದಲಾದ ಅಂಥ ಪ್ರಾಯಶ್ಚಿತ್ತಗಳಿಂದ ಪಾಪಗಳು ನೀಗುತ್ತವೆ, ನಿಜ; ಆದರೆ, ಪಾಪಗಳನ್ನು ಪ್ರೇರೇಪಿಸುವ ಅಧರ್ಮಯುಕ್ತವಾದ ಹೃದಯವನ್ನು ಅವು ಶುದ್ಧೀಕರಿಸುವುದಿಲ್ಲ! ಭಗವಂತನ ಪಾದಪದ್ಮಗಳನ್ನು ಸೇವಿಸುವುದರಿಂದ ಅದೂ ಶುದ್ಧವಾಗುತ್ತದೆ. ತಿಳಿದೋ ತಿಳಿಯದೋ ಭಗವಂತನ ದಿವ್ಯ ನಾಮಗಳನ್ನು ಉಚ್ಚರಿಸಿದರೆ, ಬೆಂಕಿಯು ಹುಲ್ಲಿನ ಮೆದೆಯನ್ನು ಸುಟ್ಟು ಹಾಕುವಂತೆ, ಆ ದಿವ್ಯನಾಮಗಳೇ ಒಬ್ಬನ ಪಾಪರಾಶಿಯನ್ನು ಸುಟ್ಟು ಹಾಕುತ್ತವೆ! ಔಷಧಿಯು ಹೇಗೆ ಕೆಲಸ ಮಾಡುವುದೆಂದು ತಿಳಿಯದೆಯೇ ಅದನ್ನು ತೆಗೆದುಕೊಂಡರೂ ಅದು ಕೆಲಸ ಮಾಡುವುದಲ್ಲವೇ? ಹಾಗೆಯೇ, ತಿಳಿಯದೆಯೇ ಹರಿನಾಮವೆಂಬ ಮಹಾಮಂತ್ರವನ್ನು ಉಚ್ಚರಿಸಿದರೂ ಅದು ಕೆಲಸ ಮಾಡಿಯೇ ಮಾಡುತ್ತದೆ!”
ವಿಷ್ಣುದೂತರು ಇಷ್ಟು ಹೇಳಿ ಅಜಾಮಿಳನನ್ನು ಯಮಪಾಶದಿಂದ ಬಿಡಿಸಿ ಅವನನ್ನು ಸಾವಿನಿಂದ ತಪ್ಪಿಸಿದರು. ಯಮದೂತರು ಇನ್ನೇನೂ ವಾದಮಾಡಲಾರದೇ ಯಮಲೋಕಕ್ಕೆ ಹಿಂದಿರುಗಿದರು.
ಯಮದೂತರನ್ನು ಕಂಡು ಬಹಳ ಭಯಗೊಂಡಿದ್ದ ಅಜಾಮಿಳನು ಮೃತ್ಯುವಿನಿಂದ ಮುಕ್ತನಾಗಲು, ಭಯದೂರನಾಗಿ ನಿಧಾನವಾಗಿ ಮೇಲೆದ್ದನು; ಯಮದೂತರಿಂದ ತನ್ನನ್ನು ರಕ್ಷಿಸಿದ್ದ ವಿಷ್ಣುದೂತರ ಪಾದಗಳಿಗೆ ವಂದಿಸಿ ಏನನ್ನೋ ಹೇಳ ಹೊರಟನು. ಆದರೆ ಅಷ್ಟರಲ್ಲಿ, ಅವನು ನೋಡನೋಡುತ್ತಿದ್ದಂತೆಯೇ ಅವರು ಅಂತರ್ಧಾನರಾದರು.
(ಮುಂದುವರಿಯುತ್ತದೆ)