ಭ್ರಷ್ಟನಾದ ಬ್ರಾಹ್ಮಣ (ಭಾಗ-3)

ಆಧಾರ: ಆರನೆಯ ಸ್ಕಂಧ, ಅಧ್ಯಾಯ ಒಂದು

– ಡಾ॥ ಬಿ.ಆರ್‌. ಸುಹಾಸ್‌

ಯಮದೂತರು ಪಾಶ ಹಿಡಿದು ಬಂದಾಗ ಅಜಾಮಿಳ `ನಾರಾಯಣ’ ಎಂಬ ಹೆಸರನ್ನು ಉಚ್ಚರಿಸುತ್ತಿದ್ದ. ಇದರಿಂದ ವಿಷ್ಣುದೂತರು ಬಂದು ಆತನನ್ನು ರಕ್ಷಿಸಿದರು. ಜ್ಞಾನೋದಯ ಹೊಂದಿದ ಅಜಾಮಿಳ ಪಶ್ಚಾತ್ತಾಪ ಪಟ್ಟು ಪ್ರಾಯಶ್ಚಿತ್ತ ಮಾಡಿಕೊಂಡು ಶುದ್ಧನಾದ. ಅನಂತರ ಆತನನ್ನು ವಿಷ್ಣುದೂತರು ವೈಕುಂಠಕ್ಕೆ ಕರೆದೊಯ್ದರು. ಹೀಗೆ ಭ್ರಷ್ಟನಾಗಿದ್ದ ಬ್ರಾಹ್ಮಣ ಅಜಾಮಿಳ, ಹರಿನಾಮದ ಬಲದಿಂದ ಸದ್ಗತಿ ಪಡೆದ.

ಸದ್ಗುಣ ಸಂಪನ್ನ ಬ್ರಾಹ್ಮಣನಾಗಿದ್ದ ಅಜಾಮಿಳನು, ವೇಶ್ಯೆಯೊಬ್ಬಳ ಸಂಗದಿಂದ ಪತಿತನಾಗಿ ಮಹಾಪಾಪಗಳನ್ನೇ ಮಾಡಿದ! ಆದರೆ ಸಾಯುವ ಗಳಿಗೆಯಲ್ಲಿ, ಮಗನನ್ನು ಕೂಗುವ ನೆಪದಲ್ಲಿ ನಾರಾಯಣನೆಂಬ ಭಗವನ್ನಾಮವನ್ನುಚ್ಚರಿಸಿ ಯಮದೂತರಿಂದ ಪಾರಾಗಿಬಿಟ್ಟ! ಅವನನ್ನು ಸೆಳೆಯಹೊರಟಿದ್ದ ಯಮದೂತರನ್ನು ವಿಷ್ಣುದೂತರು ಬಂದು ತಡೆದುಬಿಟ್ಟರು!

ಯಮದೂತರಿಗೆ ಪರಮಾಶ್ಚರ್ಯ! ಯಮಧರ್ಮನ ಆಜ್ಞೆಯೇ ನಡೆಯಲಿಲ್ಲವಲ್ಲ? ಅವನನ್ನೇ ವಿಚಾರಿಸಬೇಕೆಂದು ಸಂಯಮನೀಪುರಕ್ಕೆ ಹೊರಟರು!

ಸಂಯಮನೀಪುರ, ಯಮಧರ್ಮನ ನಗರಿ! ದಕ್ಷಿಣ ದಿಕ್ಕಿನಲ್ಲಿ, ಭೂಮಿಗೆ ಕೆಳಗೂ ಜಲರಾಶಿಯ ಮೇಲ್ಭಾಗದಲ್ಲೂ ಇದೆ! ಒಂದು ಕಡೆ, ಪಿತೃಗಳು ತಮ್ಮ ವಂಶಜರನ್ನು ಹರಸುತ್ತಾ ನೆಲೆಸಿದ್ದಾರೆ…! ಇನ್ನೊಂದು ಕಡೆ, ಪಾಪಿಗಳು ಶಿಕ್ಷೆಯನುಭವಿಸುವ ಚಿತ್ರವಿಚಿತ್ರ ನರಕಗಳು! ದೂರದಲ್ಲಿ ನಿಂತು ನೋಡುತ್ತಿದ್ದ ಯಮದೂತರಿಗೆ ಆ ನರಕಗಳನ್ನು ಒಮ್ಮೆ ಅವಲೋಕಿಸಬೇಕೆನಿಸಿತು! ನಿಧಾನವಾಗಿ ನಡೆಯುತ್ತಾ ಹೋದರು…

ಅದು ತಾಮಿಸ್ರವೆಂಬ ನರಕ! ಮತ್ತೊಬ್ಬರ ಹಣ, ಹೆಂಡತಿ, ಮಕ್ಕಳನ್ನು ಅಪಹರಿಸಿರುವವರನ್ನು ಇಲ್ಲಿನ ಕಡುಕತ್ತಲೆಯ ಪ್ರದೇಶದಲ್ಲಿ ತಳ್ಳಿ ಅನ್ನ ನೀರುಗಳನ್ನು ಕೊಡದೇ ಹೊಡೆದು ಬಡಿದು ಹೆದರಿಸುವ ತಾಣ! ಹೀಗೆಯೇ ಪರರಿಗೆ ಮೋಸ ಮಾಡಿದವರು ಬೀಳುವ ಇಂತಹ ಇನ್ನೊಂದು ಭಯಂಕರ ನರಕ, ಅಂಧತಾಮಿಸ್ರ!

ಅಲ್ಲಿದೆ ರೌರವ ಮತ್ತು ಮಹಾರೌರವ ನರಕಗಳು….! ಯಾರು ತಾನು ಈ ದೇಹ, ತನ್ನ ಪತ್ನೀಸುತರು ತನ್ನವರೇ ಎಂಬ ಅಹಂಕಾರದಿಂದ ಇತರ ಜೀವಿಗಳಿಗೆ ಹಿಂಸೆ ಕೊಡುತ್ತಾ ತನ್ನವರನ್ನು ಮಾತ್ರ ಪೋಷಿಸುವನೋ, ಅಂಥವನನ್ನು ಇಲ್ಲಿ ರುರು ಎಂಬ ಹಾವಿಗಿಂತ ಕ್ರೂರ ಜಂತುಗಳು ಕಿತ್ತು ತಿನ್ನುತ್ತವೆ!

ಅಬ್ಬಾ…! ಅದು ಕುಂಭೀಪಾಕ…! ಕ್ರೂರಿಯಾದವನು ತನ್ನ ಹೊಟ್ಟೆ ಹೊರೆಯಲು, ಬದುಕಿರುವ ಪ್ರಾಣಿಪಕ್ಷಿಗಳನ್ನು ಬೇಯಿಸುವನಲ್ಲಾ…, ಅಂಥವನನ್ನು ಇಲ್ಲಿ ಕುದಿಯುತ್ತಿರುವ ಎಣ್ಣೆಯ ಪಾತ್ರೆಯಲ್ಲಿ ಬೇಯಿಸುವರು! ಅಯ್ಯೋ…! ಅಲ್ಲಿದೆ ಕಾಲಸೂತ್ರನರಕ…! ಯಾರು ತಾಯ್ತಂದೆಯರಿಗೂ, ಬ್ರಾಹ್ಮಣರಿಗೂ ವೇದಗಳಿಗೂ ದ್ರೋಹ ಮಾಡಿರುವರೋ, ಅವರನ್ನು ಇಲ್ಲಿ ತಾಮ್ರದ ಕಾದ ಕಾವಲಿಯಲ್ಲಿ ಕೂರಿಸಲಾಗುವುದು…! ಯಾವುದೇ ಆಪತ್ತಿಲ್ಲದಿದ್ದರೂ ವೈದಿಕಮಾರ್ಗ ಬಿಟ್ಟು, ಪಾಷಂಡಮಾರ್ಗ (ನಾಸ್ತಿಕ ಮತ್ತು ದುಷ್ಟಮಾರ್ಗ) ವನ್ನು ಅನುಸರಿಸುವವನನ್ನು ಅಸಿಪತ್ರವನವೆಂಬ ನರಕಕ್ಕೆ ತಳ್ಳಲಾಗುವುದು…! ಚಾವಟಿಯಿಂದ ಹೊಡೆಯುತ್ತಿದ್ದಂತೆ ಕತ್ತಿಯಂತೆ ತೀಕ್ಷ್ಣವಾದ ತಾಳೆಯಲೆಗಳು ಅಂಥವನನ್ನು ತರಿಯುವವು! ನಿರಪರಾಧಿಯಾದ ವ್ಯಕ್ತಿಗೆ ಶಿಕ್ಷೆ ಕೊಟ್ಟರೆ ಯಮದೂತರು ತುಳಿಯುವ ಸೂಕರಮುಖವೆಂಬ ನರಕದಲ್ಲಿ ಬೀಳುವನು! ಸರ್ಪಗಳಂತೆ ಕ್ರೂರರಾಗಿ ಇತರ ಜೀವಿಗಳನ್ನು ಯಾರು ಪೀಡಿಸುವರೋ, ಅಂಥವರು ಅನೇಕಾನೇಕ ಹೆಡೆಗಳ ಹಾವುಗಳು ನುಂಗುವ ದಂಡಶೂಕವೆಂಬ ನರಕದಲ್ಲಿ ಬೀಳುವರು!

ಒಂದೊಂದಾಗಿ ಇಂಥ ಇಪ್ಪತ್ತೆಂಟು ನರಕಗಳನ್ನು ನೋಡಿದ ಯಮದೂತರು, ತಾವೇ ಭಯಂಕರಾಕಾರರಾಗಿದ್ದರೂ ಭಯಭೀತರಾದರು! ಎಲ್ಲೆಲ್ಲೂ ಜೀವಿಗಳ ಆರ್ತನಾದ ಕೇಳಿ ಅವರಿಗೂ ಕನಿಕರವಾಯಿತು! ಹರಿನಾಮೋಚ್ಚಾರಣೆ ಮಾತ್ರದಿಂದಲೇ ಇಂಥ ಭಯಂಕರ ನರಕಗಳನ್ನು ಅಜಾಮಿಳನು ತಪ್ಪಿಸಿಕೊಂಡನೆಂದರೆ, ಹರಿನಾಮದ ಮಹಿಮೆಯಿನ್ನೆಷ್ಟಿರಬಹುದು….? ಯೋಚನಾ ಲಹರಿಯಲ್ಲಿ ಮುಳುಗಿದ ಯಮದೂತರು ಅಷ್ಟರಲ್ಲಿ ತಮಗೇ ತಿಳಿಯದೇ ಯಮ ರಾಜನ ಆಸ್ಥಾನದಲ್ಲಿ ಕಾಲಿಟ್ಟಿದ್ದರು! ಯಮಧರ್ಮನನ್ನು ಕಾಣುತ್ತಲೇ ಜಾಗೃತರಾದ ಅವರು ಕೂಡಲೇ ಅವನಿಗೆ ವಂದಿಸಿದರು.

ಯಮಧರ್ಮರಾಜನಿಗೆ ವಂದಿಸಿ ಖಿನ್ನಮನಸ್ಕರಾಗಿ ನಿಂತಿದ್ದ ದೂತರನ್ನು ಕಂಡು ಯಮನು ಮೇಘದಂತೆ ಗಂಭೀರವಾದ ಧ್ವನಿಯಿಂದ ಕೇಳಿದನು, `ಪಾಪಿಗಳ ಎದೆಯಲ್ಲಿ ಭೀತಿಯನ್ನು ಹುಟ್ಟಿಸುವ ಘೋರರೂಪಿಗಳಾದ ನೀವು ಹೀಗೇಕೆ ಖಿನ್ನರಾಗಿ ನಿಂತಿರುವಿರಿ? ಯಾರನ್ನು ಕರೆತರಬೇಕಿತ್ತು ಇಂದು?’

ಕೆಲಕಾಲ ಮೌನವಾಗಿದ್ದ ಯಮದೂತರು, ಅನಂತರ ಧೈರ್ಯದಿಂದ ಹೇಳಿದರು, “ಪ್ರಭು! ನಮಗೊಂದು ದೊಡ್ಡ ಸಂದೇಹ… ಈ ಜೀವಲೋಕಕ್ಕೆ ಎಷ್ಟು ಅಧಿಪತಿಗಳಿದ್ದಾರೆ? ಒಂದು ವೇಳೆ ಅನೇಕ ಅಧಿಪತಿಗಳಿದ್ದರೆ, ಯಾರ ಶಾಸನವನ್ನು ಒಪ್ಪಿಕೊಳ್ಳಬೇಕು, ಯಾರ ಶಾಸನವನ್ನು ನಿರಾಕರಿಸಬೇಕು ಎಂಬುದೇ ತಿಳಿಯುವುದಿಲ್ಲ! ಒಬ್ಬರ ಶಾಸನಕ್ಕೆ ವಿರುದ್ಧವಾದ ಇನ್ನೊಬ್ಬರ ಶಾಸನದ ದೆಸೆಯಿಂದ ಯಾರನ್ನು ಶಿಕ್ಷಿಸುವುದು, ಯಾರನ್ನು ಬಹುಮಾನಿಸುವುದು ಎಂಬುದೇ ತಿಳಿಯುವುದಿಲ್ಲ! ಒಂದು ವೇಳೆ ಶಾಸಕರು ಅನೇಕರಿದ್ದರೂ, ಸಾರ್ವಭೌಮನಾದ ರಾಜನೊಬ್ಬನಿರುವಂತೆ, ಈ ಎಲ್ಲಾ ಶಾಸಕರಿಗೂ ಅಧಿಪತಿಯಾದ ಒಬ್ಬನಿರಲೇಬೇಕು! ಅನೇಕ ಕರ್ಮಿಗಳಿಗೆ ತಕ್ಕಂತೆ ಅನೇಕ ಶಾಸಕರಿರಬಹುದಾದರೂ, ಅವರೆಲ್ಲರೂ ಒಂದು ಶಾಸನದಂತೆಯೇ ನಡೆಯಬೇಕು! ಪ್ರಭು, ನಾವು ನಿನ್ನನ್ನೇ ಎಲ್ಲರಿಗಿಂತಲೂ ದೊಡ್ಡ ಅಧಿಪತಿಯೆಂದು ತಿಳಿದಿದ್ದೆವು! ದೇವತೆಗಳ ಮೇಲೂ ಪ್ರಭಾವ ಬೀರುವ ನೀನು ಜನರ ಶುಭಾಶುಭಕರ್ಮಗಳನ್ನು ಪರಿಗಣಿಸಿ ಅವರಿಗೆ ಬಹುಮಾನ ಅಥವಾ ಶಿಕ್ಷೆ ನೀಡುವವನೆಂದು ಭಾವಿಸಿದ್ದೆವು. ಆದರೆ ಇಂದೇನಾಯಿತು?! ನೀನು ವಿಧಿಸಿದ ದಂಡವು ಇಂದು ಭೂಲೋಕದಲ್ಲಿ ನಡೆಯಲೇ ಇಲ್ಲ! ನಾಲ್ಕು ಅದ್ಭುತ ಸಿದ್ಧಪುರುಷರಿಂದ ನಿನ್ನ ಆಜ್ಞೆ ಭಂಗವಾಯಿತು!”

“ಏಕೆ?! ಅಂಥದ್ದೇನಾಯಿತು?” ಯಮನು ತುಸು ಕೋಪಾಶ್ಚರ್ಯಗಳಿಂದ ಕೇಳಿದ.

“ಪ್ರಭು!” ಯಮದೂತರು ವಿವರಿಸಿದರು, “ಇಂದು ನಾವು ಆ ಪರಮಪಾಪಿಯಾದ ಅಜಾಮಿಳನನ್ನು ನಿನ್ನ ಆಜ್ಞೆಯಂತೆಯೇ ಈ ನರಕಕ್ಕೆ ಎಳೆದು ತರುತ್ತಿದ್ದವು! ಆದರೆ ಅಷ್ಟರಲ್ಲಿ, ಅವನು `ನಾರಾಯಣ’ ಎಂಬ ನಾಮೋಚ್ಚಾರಣೆ ಮಾಡಿದ! ಆಗ ನಾಲ್ಕು ದಿವ್ಯ ಪುರುಷರು ಪ್ರತ್ಯಕ್ಷರಾಗಿ ಅವನಿಗೆ `ಹೆದರಬೇಡ… ಹೆದರಬೇಡ…’ ಎಂಬ ಆಶ್ವಾಸನೆಯನ್ನು ಕೊಟ್ಟು ನಮ್ಮ ಪಾಶಗಳನ್ನೇ ಕತ್ತರಿಸಿ ನಮ್ಮನ್ನು ತಡೆದುಬಿಟ್ಟರು! ಪ್ರಭು ! ಅವರಾರೆಂದು ತಿಳಿಯಲಿಚ್ಛಿಸುತ್ತೇವೆ! ನಮಗೆ ಹೇಳತಕ್ಕದ್ದೆನಿಸಿದರೆ ಹೇಳು!”

ದಟ್ಟ ಮೇಘಗಳಂತೆ ಕರಾಳ ಕಪ್ಪು ವರ್ಣದ ಬೆಟ್ಟದಂಥ ಅಜಾನುಬಾಹು ಶರೀರ! ಬೆಂಕಿಯ ಚೆಂಡುಗಳಂತೆ ಅತ್ತಿತ್ತ ತಿರುಗುವ ಭಯಂಕರ ಕಂಗಳು…! ಬೆಂಕಿಯ ಜ್ವಾಲೆಗಳಂತೆ ಆಡುವ ಕೆಂಜೆಡೆ ಮೀಸೆಗಳು…! ಅತ್ಯಂತ ಬೀಭತ್ಸನಾಗಿ ಕಾಣುತ್ತಾ ಬಹು ಎತ್ತರದ ಆಸನದಲ್ಲಿ ಮಂಡಿಸಿದ್ದ ಮೃತ್ಯುದೇವತೆ, ತಮ್ಮ ಮಾತಿನಿಂದ ಕ್ರುದ್ಧನಾಗಬಹುದೆಂದು ಭಾವಿಸಿ ದೂತರು ನಿಶ್ಚಲಪ್ರತಿಮೆಗಳಂತೆ ನಿಂತಿದ್ದರು! ಆದರೆ ಕಾರ್ಮೋಡಗಳ ಮಧ್ಯೆ ಕಿರುಮಿಂಚು ಹೊಳೆಯುವಂತೆ ಮುಗುಳ್ನಕ್ಕ ಯಮ! `ಶ್ರೀಹರಿ…!’ ಎಂದು ಪ್ರೀತಿಯಿಂದ ಮೆಲ್ಲನೆ ಉದ್ಗರಿಸಿ ಕಣ್ಮುಚ್ಚಿದ! ಅನಂತರ, ದೂತರ ಕಡೆ ತಿರುಗಿ ಹೇಳಿದ, “ಎಲೈ ದೂತರೇ! ನನಗಿಂತಲೂ ಮೇಲಿನವನಾದ, ಸ್ಥಾವರ ಜಂಗಮಗಳೆಲ್ಲರಿಗೂ ದೊಡ್ಡವನಾದ ಈಶ್ವರನೊಬ್ಬನಿದ್ದಾನೆ! ಈ ಜಗತ್ತೆಲ್ಲವೂ ಅವನಲ್ಲಿ ಬಟ್ಟೆಯಂತೆ ಓತಪ್ರೋತವಾಗಿ ಬೆಸೆದುಕೊಂಡಿದೆ! ಈ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳನ್ನು ನಡೆಸುವ ಬ್ರಹ್ಮ, ವಿಷ್ಣು, ಮಹೇಶ್ವರರು ಆ ಸರ್ವದೇವೋತ್ತಮ ಪುರುಷನ ಅಂಶಗಳು! ಒಂದು ಎತ್ತು ಮೂಗುದಾರದಿಂದ ನಿಯಂತ್ರಿಸಲ್ಪಡುವಂತೆ ಈ ಜಗತ್ತು ಆ ಪರಮಾತ್ಮನಿಂದ ನಿಯಂತ್ರಿಸಲ್ಪಡುತ್ತದೆ!”

“ದೂತರೇ!” ಯಮದೂತರು ಆಶ್ಚರ್ಯದಿಂದ ನೋಡುತ್ತಿದ್ದಂತೆ ಯಮರಾಜನು ಮುಂದುವರಿಸಿದ, “ಎತ್ತುಗಳಿಗೆ ಮೂಗುದಾರ ಹಾಕಿ ಅವನ್ನು ನಿಯಂತ್ರಿಸುವಂತೆ, ಭಗವಂತನು, ತನ್ನದೇ ವಾಣಿಯಾದ ವೇದಗಳಿಂದ ಜನರನ್ನು ನಿಯಮಬದ್ಧವಾಗಿರಿಸಿದ್ದಾನೆ! ಅವನಿಗೆ ಹೆದರಿಯೇ ಎಲ್ಲಾ ವರ್ಣಾಶ್ರಮಧರ್ಮಗಳ ಜನರೂ ತಮ್ಮ ಕರ್ಮಗಳ ಮೂಲಕ ಅವನಿಗೆ ಪೂಜೆ ಸಲ್ಲಿಸುತ್ತಾರೆ! ಎಲೈ ದೂತರೇ, ನಾನಾಗಲೀ, ದೇವೇಂದ್ರನಾಗಲೀ, ನಿರ್ಋತಿಯಾಗಲೀ, ವರುಣನಾಗಲೀ, ಚಂದ್ರನಾಗಲೀ, ಅಗ್ನಿಯಾಗಲೀ, ಶಿವನಾಗಲೀ, ವಾಯುವಾಗಲೀ, ಬ್ರಹ್ಮನಾಗಲೀ, ಸೂರ್ಯನಾಗಲೀ, ವಿಶ್ವಾವಸುವಿನಂಥ ಗಂಧರ್ವರಾಗಲೀ, ಸಿದ್ಧಸಾಧ್ಯರಾಗಲೀ, ಮರುದ್ಗುಣಗಳಾಗಲೀ, ರುದ್ರಗಣಗಳಾಗಲೀ, ಅಷ್ಟವಸುಗಳಾಗಲೀ, ಮರೀಚಿಯೇ ಮೊದಲಾದ ಪ್ರಜಾಪತಿಗಳಾಗಲೀ, ಬೃಹಸ್ಪತಿಗಳಂಥ ಜ್ಞಾನಿಗುರುಗಳಾಗಲೀ, ಭೃಗ್ವಾದಿ ಮಹರ್ಷಿಗಳಾಗಲೀ, ರಜಸ್ತಮೋಗುಣಗಳ ಸೋಂಕಿಲ್ಲದೇ ಸತ್ತ್ವಗುಣದಲ್ಲೇ ನೆಲೆಸಿರುತ್ತೇವೆ; ಆದರೂ ಆ ಭಗವಂತನ ಲೀಲೆಯನ್ನು ಅರಿಯಲಾರದವರಾಗಿದ್ದೇವೆ! ಇನ್ನು ಮಾಯಾಬಂಧಿತರಾದ ಇತರರ ಬಗ್ಗೆ ಏನು ಹೇಳುವುದು?! ಜೀವಿಗಳು ಈ ಭಗವಂತನನ್ನು ಇಂದ್ರಿಯಗಳಿಂದಾಗಲೀ, ಪ್ರಾಣಗಳಿಂದಾಗಲೀ, ಮನಸ್ಸಿನಿಂದಾಗಲೀ, ಹೃದಯದಿಂದಾಗಲೀ, ಮಾತಿನಿಂದಾಗಲೀ ತಿಳಿಯಲಾರರು! ದೇಹದ ಇತರ ಅಂಗಗಳು ಕಣ್ಣನ್ನು ಹೇಗೆ ಕಾಣಲಾರೆವೋ, ಹಾಗೆಯೇ ಜೀವಿಗಳು, ತಮ್ಮಲ್ಲೇ ಪರಮಾತ್ಮನಾಗಿ ನೆಲೆಸಿರುವ ಅವನನ್ನು ಕಾಣಲಾರರು!

“ಹೇ ದೂತರೇ! ನೀವು ನೋಡಿದ ನಾಲ್ವರು ಸುಂದರ ಪುರುಷರು ಬೇರಾರೂ ಅಲ್ಲ ಸರ್ವತಂತ್ರಸ್ವತಂತ್ರನಾದ ಆ ಶ್ರೀಹರಿಯ ದೂತರು! ಆವರೂ ಅವನಂತೆಯೇ ಮನೋಹರವಾದ ರೂಪವನ್ನು ಹೊಂದಿರುತ್ತಾರೆ; ಅವನಂತೆಯೇ ಗುಣಸ್ವಭಾವಗಳನ್ನು ಪಡೆದಿರುತ್ತಾನೆ, ಭಗವದ್ಭಕ್ತರನ್ನು ದುಷ್ಟರಿಂದಲೂ ಇತರ ಎಲ್ಲಾ ರೀತಿಯ ತೊಂದರೆಗಳಿಂದಲೂ ನನ್ನಿಂದಲೂ ರಕ್ಷಿಸುತ್ತಾರೆ! ಆದರೆ ಇವರ ದರ್ಶನ ದುರ್ಲಭ!

“ಹೇ ದೂತರೇ! ಧರ್ಮವು ಸಾಕ್ಷಾತ್‌ ಭಗವತ್ಪ್ರಣೀತವಾದುದು! ಅದು ಎಷ್ಟು ಸೂಕ್ಷ್ಮವೆಂದರೆ, ಋಷಿಗಳಾಗಲೀ, ದೇವತೆಗಳಾಗಲೀ, ಸಿದ್ಧಪುರುಷರಾಗಲೀ, ಅಸುರರಾಗಲೀ ಅದನ್ನು ಸರಿಯಾಗಿ ತಿಳಿದಿಲ್ಲ! ಇನ್ನು ಸದಾ ಭೋಗಿಗಳಾದ ಗಂಧರ್ವಚಾರಣ ವಿದ್ಯಾಧರರೂ ಸಾಮಾನ್ಯ ಮಾನವರೂ ತಿಳಿಯುವುದೆಂತು? ಹೇಳಿ…..!

“ಯಾವ ಭಾಗವತ ಧರ್ಮವನ್ನು ಅರಿತರೆ ಒಬ್ಬನು ಅಮೃತತ್ತ್ವವನ್ನನುಭವಿಸುವನೋ, ಆ ಧರ್ಮವನ್ನು ಬ್ರಹ್ಮದೇವ, ನಾರದ, ಶಿವ, ಸನಕಾದಿ ಕುಮಾರರು, ಕಪಿಲಮುನಿ, ಸ್ವಾಯಂಭುವ ಮನು, ಪ್ರಹ್ಲಾದ, ಜನಕರಾಜ, ಭೀಷ್ಮ, ಬಲಿಚಕ್ರವರ್ತಿ, ವ್ಯಾಸರ ಪುತ್ರ ಶುಕಮುನಿ, ಮತ್ತು ನಾನು – ಈ ಹನ್ನೆರಡು ಮಂದಿ ತಿಳಿದಿದ್ದೇವೆ. ಈಗ ಈ ಲೋಕದಲ್ಲಿ ಜನರಿಗೆಲ್ಲಾ ಅತ್ಯಂತ ಶ್ರೇಷ್ಠವಾದ ಧರ್ಮವು ಯಾವುದೆಂದು ಹೇಳುತ್ತೇನೆ, ಕೇಳಿ; ಭಗವಂತನ ನಾಮೋಚ್ಚಾರಣೆ, ಸ್ಮರಣೆ, ಲೀಲೆಗಳನ್ನು ಕೇಳುವುದು, ಮೊದಲಾದ ಕಾರ್ಯಗಳಿಂದ ಅವನಲ್ಲಿ ಭಕ್ತಿಯೋಗವನ್ನು ಆಚರಿಸುವುದು – ಇದೇ ಆ ಶ್ರೇಷ್ಠ ಧರ್ಮ! ಇವುಗಳಲ್ಲಿ ಭಗವಂತನ ನಾಮೋಚ್ಚಾರಣೆ ಬಹಳ ಶ್ರೇಷ್ಠವಾದುದು! ಓ ದೂತರೇ! ಹರಿನಾಮೋಚ್ಚಾರಣೆಯ ಮಹಿಮೆಯಷ್ಟೆಂಬುದನ್ನು ನೀವೇ ನೋಡಿ! ಇದರಿಂದ ಪಾಪಿಯಾದ ಅಜಾಮಿಳನೂ ಮುಕ್ತನಾದ! ನೋಡಿ, ಅವನಾದರೋ ಮಗನನ್ನು ಕರೆಯುವ ನೆಪದಿಂದ ಹರಿನಾಮೋಚ್ಚಾರಣೆ ಮಾಡಿದರೂ ಪಾಪಗಳಿಂದ ಮುಕ್ತನಾದ! ಆದ್ದರಿಂದ ಅರಿತುಕೊಳ್ಳಿ! ಭಗವಂತನ ನಾಮೋಚ್ಚಾರಣೆ, ಅವನ ಗುಣ, ಲೀಲೆಗಳ ಕೀರ್ತನೆ, ಇವಿಷ್ಟೇ ಸಾಕು ಸಕಲ ಪಾಪಗಳನ್ನೂ ತೊಳೆಯುವುದಕ್ಕೆ…! ತಿಳಿಯಿತೇ?”

ಯಮದೂತರು ಆಶ್ಚರ್ಯದಿಂದ ತಲೆಯಾಡಿಸಿದರು. ಯಮನು ಮುಂದುವರಿಸಿದ, “ದೂತರೇ, ಜೈಮಿನಿಯೇ ಮೊದಲಾದ ಮೀಮಾಂಸವಾದಿಗಳು ವೇದಗಳ ಪುಷ್ಟದಂಥ ವಾಕ್ಯಗಳಿಗೆ ಮಾಯೆಯಿಂದ ಮರುಳಾಗಿ ಅವು ಹೇಳುವ ಯಜ್ಞ ಯಾಗಾದಿ ಕರ್ಮಗಳಿಗೆ ಮತ್ತು ಸ್ವರ್ಗದಂಥ ಭೋಗಫಲಗಳಿಗೇ ಅಂಟಿಕೊಂಡು ಬಿಡುತ್ತಾರೆ! ಪಾರಮಾರ್ಥಿಕ ಸತ್ಯವನ್ನು ಅರಸಿ ಹೋಗುವುದಿಲ್ಲ. ಇವೆಲ್ಲವನ್ನೂ ವಿಮರ್ಶಿಸಿ ಬುದ್ಧಿವಂತರಾದವರು ಎಲ್ಲೆಲ್ಲೂ ಎಲ್ಲರಲ್ಲೂ ಇರುವ ಅನಂತನಾದ ಭಗವಂತನಲ್ಲಿ ಭಾವಪೂರ್ಣ ಭಕ್ತಿಯನ್ನಾಚರಿಸುತ್ತಾರೆ. ಇಂಥ ಭಕ್ತರು ನನ್ನ ಶಾಸನಕ್ಕೊಳಪಟ್ಟಿರುವುದಿಲ್ಲ. ಅವರು ಅಕಸ್ಮಾತ್ತಾಗಿ ಮಾಯೆಗೆ ಸಿಕ್ಕಿ ಒಮ್ಮೊಮ್ಮೆ ತಪ್ಪು ಮಾಡಿದರೂ, ಅವರು ಉಚ್ಚರಿಸುವ ಹರಿನಾಮಗಳೇ ಅವರನ್ನು ಆ ಪಾಪಗಳಿಂದ ರಕ್ಷಿಸುತ್ತವೆ. ಓ ದೂತರೇ, ದಯವಿಟ್ಟು ನೀವು ಹರಿಭಕ್ತರ ಬಳಿಗೆ ಹೋಗಬೇಡಿ! ಅವರು ಭಗವಂತನಿಗೆ ಸಂಪೂರ್ಣವಾಗಿ ಶರಣಾಗುತ್ತಾರೆ. ಆ ಸಾಧುಶಿರೋಮಣಿಗಳು ಎಲ್ಲರನ್ನೂ ಸಮದೃಷ್ಟಿಯಿಂದ ನೋಡುವಂಥವರಾಗಿರುತ್ತಾರೆ. ಅವರ ಮಹಿಮೆಯನ್ನು ದೇವತೆಗಳೂ ಸಿದ್ಧಪುರುಷರೂ ಗಾನ ಮಾಡುತ್ತಾರೆ! ಅಂಥವರ ಬಳಿ ನೀವು ಹೋಗಬೇಡಿ! ಅವರನ್ನು ಶ್ರೀಹರಿಯು ಸದಾ ತನ್ನ ಗದೆಯಿಂದ ರಕ್ಷಿಸುತ್ತಿರುತ್ತಾನೆ! ಅವರ ಮೇಲೆ ನನ್ನ ಅಥವಾ ಬ್ರಹ್ಮನ, ಅಥವಾ ಕಾಲದ ಪ್ರಭಾವವೂ ನಡೆಯುವುದಿಲ್ಲ! ಓ ದೂತರೇ, ಪ್ರಾಪಂಚಿಕ ಆಸೆಗಳನ್ನು ತೊರೆದಿರುವ ಪರಮಹಂಸರು ಯಾವ ಶ್ರೀಕೃಷ್ಣನ ಪಾದಪದ್ಮಗಳ ಮಕರಂದವನ್ನು ಸವಿಯುವರೋ, ಆ ಮಕರಂದಕ್ಕೆ ವಿಮುಖರಾಗಿ ಕೇವಲ ಕುಟುಂಬ ಪೋಷಣೆಯಲ್ಲಿಯೇ ನಿರತರಾಗಿ ದುಷ್ಕರ್ಮಗಳಲ್ಲಿ ತೊಡಗುವವರನ್ನು ಮಾತ್ರ ಇಲ್ಲಿಗೆ ಕರೆತನ್ನಿ! ಯಾರ ನಾಲಗೆಯು ಒಮ್ಮೆಯಾದರೂ ಆ ಭಗವಂತನ ನಾಮಗುಣಗಳನ್ನು ಕೀರ್ತಿಸುವುದಿಲ್ಲವೋ, ಯಾರ ಮನಸ್ಸು ಅವನ ಚರಣಾರವಿಂದಗಳನ್ನು ಸ್ಮರಿಸುವುದಿಲ್ಲವೋ, ಯಾರ ಶಿರವು ಶ್ರೀಕೃಷ್ಣನಿಗೆ ಒಮ್ಮೆಯಾದರೂ ಬಾಗಿ ನಮಿಸುವುದಿಲ್ಲವೋ, ಯಾರು ವಿಷ್ಣುವಿಗಾಗಿ ಕಾರ್ಯಗಳನ್ನು ಮಾಡುವುದಿಲ್ಲವೋ, ಅಂಥ ಮೂಢರನ್ನು ಇಲ್ಲಿಗೆ ಕರೆತನ್ನಿ!”

ಯಮದೂತರು ನೋಡುತ್ತಿದ್ದಂತೆ, ಯಮಧರ್ಮನು ಆಕಾಶಕ್ಕೆ ಮುಖಮಾಡಿ ಭಗವಂತನನ್ನು ಕುರಿತು ಪ್ರಾರ್ಥಿಸಿದನು, “ಪುರಾಣಪುರುಷನಾದ ಶ್ರೀಮನ್ನಾರಾಯಣನೇ! ನನ್ನ ದೂತರು ನಿನ್ನ ನಾಮೋಚ್ಚಾರಣೆ ಮಾಡಿದ ಅಜಾಮಿಳನನ್ನು ಬಂಧಿಸಹೋಗಿ ತಿಳಿಯದೇ ತಪ್ಪು ಮಾಡಿದ್ದಾರೆ! ಇದರ ಹಿಂದೆ ನನ್ನ ತಪ್ಪೂ ಇದೆ! ಕ್ಷಮಿಸುವುದರಲ್ಲಿ ನೀನು ಪ್ರಸಿದ್ಧನು! ಆದ್ದರಿಂದ ಹೇ ದೇವ! ದಯವಿಟ್ಟು ನಮ್ಮ ತಪ್ಪನ್ನು ಮನ್ನಿಸು! ಓ ಪುರುಷೋತ್ತಮನೇ ನಿನಗೆ ನಮೋ ನಮಃ!”

ಯಮಧರ್ಮರಾಜನು ತನ್ನ ದೂತರಿಗೆ ಹೀಗೆ ಉಪದೇಶಿಸಲು, ಅವರು ಭಗವಂತನ ಮಹಿಮೆಯನ್ನರಿತು ವಿಸ್ಮಿತರಾಗಿ ಹೊರಟುಹೋದರು. ಅಲ್ಲಿಂದ ಮುಂದೆ, ಅವರು ಹರಿಭಕ್ತರ ಬಳಿಗೆ ಸುಳಿಯುತ್ತಲೂ ಇರಲಿಲ್ಲ! ಹರಿಭಕ್ತನನ್ನು ಕಂಡರೆ ಅವರೇ ಹೆದರುತ್ತಾರೆ!

* * *

ಇತ್ತ, ಅಜಾಮಿಳನನ್ನು ಯಮದೂತರಿಂದ ರಕ್ಷಿಸಿ ವಿಷ್ಣುದೂತರು ಅದೃಶ್ಯರಾದರು! ಅವರು ನಿಂತಿದ್ದ ತಾಣವನ್ನೇ ಮೂಕವಿಸ್ಮಿತನಾಗಿ ನೋಡುತ್ತಿದ್ದ ಅಜಾಮಿಳನ ಮನದಲ್ಲಿ ಪರಿವರ್ತನೆಯ ಅಲೆಗಳೆದ್ದವು! ಯಮದೂತರಿಗೂ ವಿಷ್ಣುದೂತರಿಗೂ ನಡೆದ ವಾದಗಳು ಇವನ ಮನದಲ್ಲಿ ಮತ್ತೆ ಮತ್ತೆ ಸುಳಿದವು! ಭಗವಂತನ ಮಹಿಮೆಯನ್ನು ಕೇಳಿದ ಅವನ ಮನವು ಈಗ ಶುದ್ಧವಾಯಿತು! ಪರಮಪಾವನವಾದ ಭಾಗವತ ಧರ್ಮವನ್ನೂ ವೇದಗಳ ಸಾರವನ್ನೂ ಕೇಳಿ ಅವನ ಮನದ ಕಲ್ಮಷಗಳೆಲ್ಲಾ ನಾಶವಾದವು! ತಾನು ಅದುವರೆಗೆ ಮಾಡಿದ್ದ ಮಾಡಬಾರದ ಅನುಚಿತ ಅಶುಭಕಾರ್ಯಗಳೆಲ್ಲಾ ಸ್ಮರಣೆಗೆ ಬಂದು ಅವನಿಗೆ ಈಗ ಪಶ್ಚಾತ್ತಾಪವುಂಟಾಯಿತು…!

“ಅಯ್ಯೊ! ನನ್ನಿಂದ ಎಂಥ ಅನಾಚಾರವುಂಟಾಗಿ ಹೋಯಿತು…!” ಅಜಾಮಿಳನು ತನ್ನಲ್ಲೇ ಹೇಳಿಕೊಂಡನು, “ಇಂದ್ರಿಯಗಳ ದಾಸನಾಗಿ ನಾನು ಒಬ್ಬ ವೇಶ್ಯೆಯ ಸಹವಾಸ ಮಾಡಿದೆ! ಉನ್ನತವಾದ ಬ್ರಾಹ್ಮಣತ್ವದಿಂದ ಪತಿತನಾದೆ…! ಛೇ! ನನಗೆ ಧಿಕ್ಕಾರವಿರಲಿ! ಸತ್ಪುರುಷರು ಖಂಡಿಸುವಂಥ ನೀಚ ಕಾರ್ಯಗಳನ್ನು ನಾನು ಮಾಡಿದೆ! ನನ್ನ ಕುಲಕ್ಕೆ ಕಳಂಕ ತರುವಂಥ ಹೀನ ಕೃತ್ಯಗಳನ್ನೆಸಗಿದೆ! ಪಾಪ, ಇನ್ನೂ ಕಿರಿಯಳೂ ಪತಿವ್ರತೆಯೂ ಆಗಿದ್ದ ನನ್ನ ಸುಂದರ ಪತ್ನಿಯನ್ನು ತೊರೆದು, ಮದ್ಯಪಾನದಂಥ ವ್ಯಸನಗಳಲ್ಲೇ ಸದಾ ಆಸಕ್ತಳಾಗಿದ್ದ ಒಬ್ಬ ಪತಿತ ವೇಶ್ಯೆಯನ್ನು ಕೂಡಿದೆ…! ಛೆ! ಪಾಪ, ವೃದ್ಧರಾಗಿದ್ದ ನನ್ನ ತಾಯ್ತಂದೆಯರನ್ನೂ ನಾನು ತೊರೆದುಬಿಟ್ಟೆ! ಅವರನ್ನು ಕಡೆಗಾಲದಲ್ಲಿ ನೋಡಿಕೊಳ್ಳಲು ಒಬ್ಬ ಬಂಧುವೂ ಇರಲಿಲ್ಲ…! ನನ್ನನ್ನು ಕಷ್ಟಪಟ್ಟು ಬೆಳೆಸಿದ್ದ ಅವರನ್ನು ನಾನು ನೀಚನಂತೆ ತೊರೆದುಬಿಟ್ಟೆ! ನನಗೆ ಧಿಕ್ಕಾರ…! ಖಂಡಿತವಾಗಿಯೂ ಧರ್ಮಘಾತುಕರೂ ಕಾಮಿಗಳೂ ಆದ ನನ್ನಂಥವರು ಭಯಂಕರ ನರಕವನ್ನು ಅನುಭವಿಸಲು ತಕ್ಕವರು! ಅಂತೆಯೇ ಪಾಶವನ್ನು ಹಿಡಿದು ನಾಲ್ವರು ಭಯಂಕರ ವ್ಯಕ್ತಿಗಳು ನನ್ನನ್ನು ಸೆಳೆದೊಯ್ಯಲು ಬಂದಿದ್ದರು…! ಆದರೆ ಇದೇನು?! ಕನಸಿನಂತೆ ಅವರು ಮಾಯವಾಗಿ ಹೋದರು! ಇವರಿಂದ ನನ್ನನ್ನು ಬಿಡಿಸಿದ ಆ ನಾಲ್ವರು ಸುಂದರ ಸಿದ್ಧಪುರುಷರು ಎಲ್ಲಿ ಹೋದರು?! ಇದೆಲ್ಲಾ ಕನಸೋ ನನಸೋ ತಿಳಿಯದಂತಿದೆ…! ಆದರೆ…, ನಾನಿಷ್ಟು ಪಾಪಗಳನ್ನು ಮಾಡಿದ್ದರೂ ಹಿಂದೆ ನಾನು ಮಾಡಿದ್ದ ಶುಭಕಾರ್ಯಗಳಿಂದ ಇಂದು ಆ ಮಹಾಪುರುಷರನ್ನು ಕಾಣುವಂತಾಯಿತು! ಇದರಿಂದ ನನ್ನ ಮನಸ್ಸು ಆನಂದದಿಂದ ತುಂಬಿದೆ…! ಧರ್ಮ, ಭಕ್ತಿಗಳನ್ನು ಸ್ವಲ್ಪ ಆಚರಿಸಿದರೂ ಅವುಗಳ ಮಹಿಮೆ ಅಪಾರ! ಖಂಡಿತವಾಗಿಯೂ ನಾನು ಹಿಂದೆ ಸ್ವಲ್ಪ ಧರ್ಮವನ್ನಾಚರಿಸುತ್ತಿದ್ದುದರಿಂದ ಇಂದು ಮಹಾಪಾಪಿಯಾದರೂ ನಾರಾಯಣ ನಾಮ ನನ್ನ ನಾಲಗೆಗೆ ಸಾಯುತ್ತಿದ್ದಾಗ ಒದಗಿತು…! ಇಲ್ಲವಾದರೆ ಮೋಸಗಾರನೂ ಬ್ರಹ್ಮಘ್ನನೂ ಆದ ನಾನೆಲ್ಲಿ? ಪರಮ ಮಂಗಲಕರವಾದ ನಾರಾಯಣ ನಾಮವೆಲ್ಲಿ?! ನಿಜವಾಗಿಯೂ, ನನ್ನಂಥ ಪಾಪಿಗೂ ಈಗ ತಿದ್ದಿಕೊಳ್ಳಲು ಒಂದು ಉತ್ತಮ ಅವಕಾಶ ದೊರಕಿದೆ…! ಈ ಅವಕಾಶವನ್ನು ಬಳಸಿಕೊಂಡು ನಾನು ನನ್ನ ಇಂದ್ರಿಯಗಳನ್ನೂ ಮನಸ್ಸನ್ನೂ ನಿಗ್ರಹಿಸಿ ಸದಾ ಭಕ್ತಿಯೋಗವನ್ನಾಚರಿಸುತ್ತೇನೆ; ಪುನಃ ತಮಸ್ಸಿನ ಅಂಧಕಾರದಲ್ಲಿ ಬೀಳದಂತೆ ಎಚ್ಚರ ವಹಿಸುತ್ತೇನೆ. ಕಾಮ್ಯಕರ್ಮಗಳಿಂದಲೂ ಅವಿದ್ಯೆಯಿಂದಲೂ ಉಂಟಾಗಿರುವ ಈ ಬವಬಂಧನವನ್ನು ಕಳಚುತ್ತೇನೆ…! ಹೆಣ್ಣಿನ ಮೋಹವೆಂಬ ಮಾಯೆಗೆ ಸಿಲುಕಿ ಕ್ರೀಡಾಮೃಗದಂತೆ ಆಡುತ್ತಿದ್ದ ನಾನು ಈಗ ಆ ಮಾಯೆಯಿಂದ ಹೊರಬರಲು ಯತ್ನಿಸಿ, ಎಲ್ಲಾ ಜೀವಿಗಳಲ್ಲೂ ಮೈತ್ರಿ, ಕರುಣೆಗಳನ್ನು ತೋರುತ್ತಾ ಶಾಂತಮನಸ್ಕನಾಗುತ್ತೇನೆ! ನಾನು, ನನ್ನದು ಎಂಬ ದೇಹಸಂಬಂಧಿತ ಅಹಂಕಾರ ಭಾವಗಳನ್ನು ತೊರೆದು, ಸದಾ ಪರಿಶುದ್ಧವಾದ ಹರಿಕೀರ್ತನೆ, ಹರಿಸ್ಮರಣೆಗಳಲ್ಲಿ ತೊಡಗುತ್ತಾ ಮನಸ್ಸನ್ನು ಆ ಭಗವಂತನಲ್ಲಿ ನಿಯೋಜಿಸುತ್ತೇನೆ!”

ಪತಿತನಾಗಿದ್ದ ಅಜಾಮಿಳನು ಹೀಗೆ ಕ್ಷಣಮಾತ್ರದ ಸಾಧುಸಂಗದಿಂದ ಪಾವನವಾಗಿ ಸರ್ವಸಂಗಗಳನ್ನೂ ತೊರೆದು ಹರಿದ್ವಾರಕ್ಕೆ ಹೋದನು. ಅಲ್ಲಿ ಒಂದು ವಿಷ್ಣು ದೇವಾಲಯದಲ್ಲಿ ಭಕ್ತಿಯೋಗದಲ್ಲಿ ತೊಡಗಿ ಇಂದ್ರಿಯಗಳನ್ನೂ ಮನಸ್ಸನ್ನೂ ನಿಗ್ರಹಿಸಿ ಅವುಗಳನ್ನು ಭಗವಂತನ ಸೇವೆಯಲ್ಲಿ ನಿಯೋಜಿಸಿದನು; ನಿಧಾನವಾಗಿ ತನ್ನನ್ನು ತ್ರಿಗುಣಗಳ ಬಂಧನದಿಂದ ಬಿಡಿಸಿಕೊಂಡು ಮನಸ್ಸನ್ನು ಸಂಪೂರ್ಣವಾಗಿ ಭಗವಂತನ ದಿವ್ಯರೂಪದಲ್ಲಿ ತಲ್ಲೀನಗೊಳಿಸಿದನು. ಆಗ ಅವನು ಬ್ರಹ್ಮಾನಂದವನ್ನು ಅನುಭವಿಸಿದನು. ಹೀಗೆ ಅವನ ಮನೋಬುದ್ಧಿಗಳು ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯಲ್ಲಿ ನೆಲೆಸಿದಾಗ, ಅವನು ಪುನಃ ತಾನು ಹಿಂದೆ ನೋಡಿದ್ದ ನಾಲ್ವರು ವಿಷ್ಣುದೂತರನ್ನು ಕಂಡನು! ಅವರು ಈಗ ಅವನನ್ನು ವೈಕುಂಠಕ್ಕೆ ಕರೆದೊಯ್ಯಲು ಬಂದಿದ್ದರು! ಅವರನ್ನು ನೋಡಿದ ಕೂಡಲೇ, ಅಜಾಮಿಳನು ಗಂಗಾನದಿಯ ದಡದ ಮೇಲೆ ತನ್ನ ದೇಹವನ್ನು ತ್ಯಜಿಸಿ ದಿವ್ಯದೇಹಧಾರಿಯಾದನು! ಅನಂತರ, ಅವನು ಆ ವಿಷ್ಣುದೂತರೊಂದಿಗೆ ಹೊನ್ನಿನ ವಿಮಾನವನ್ನೇರಿ ಶ್ರೀಪತಿಯಾದ ಮಹಾವಿಷ್ಣುವಿನ ದಿವ್ಯಧಾಮವಾದ ವೈಕುಂಠಕ್ಕೆ ಹೋದನು.

ಶುಕಮುನಿಗಳು ಈ ಕಥೆಯನ್ನು ಪರೀಕ್ಷಿತ ಮಹಾರಾಜನಿಗೆ ಹೀಗೆ ಹೇಳಿ, ಕೆಲಕಾಲ ಮೌನವಾದರು. ಭಗವಂತನ ನಾಮದ ಮಹಿಮೆಯೆಷ್ಟೆಂಬುದನ್ನು ಮನದಲ್ಲೇ ಯೋಚಿಸುತ್ತಾ ಸ್ತಂಭೀಭೂತನಾಗಿ ಕುಳಿತುಬಿಟ್ಟಿದ್ದನು! ಶುಕಮುನಿಗಳ ಮನವು ಭಕ್ತಿಯಿಂದ ತುಂಬಿ ಬಂದಿತ್ತು! ಅವರ ಕಣ್ಣಂಚುಗಳಲ್ಲಿ ನೀರು ಹನಿಸಿತು! ನಿಧಾನವಾಗಿ ಅವರು ಹೇಳಿದರು, “ನೋಡು ಮಹಾರಾಜ! ಹರಿನಾಮದ ಮಹಿಮೆಯೆಷ್ಟೆಂಬುದನ್ನು ನೋಡು! ಅಜಾಮಿಳನು ಬ್ರಾಹ್ಮಣನಾಗಿದ್ದರೂ ಸ್ವಧರ್ಮದಿಂದ ಪತಿತನಾಗಿ, ವೇಶ್ಯಾಸಂಗ, ಜೂಜು, ಮದ್ಯಪಾನ, ಕಳ್ಳತನ, ಮೊದಲಾಗಿ ಹಲವಾರು ಪಾಪಗಳನ್ನು ಮಾಡಿ ನರಕದಲ್ಲಿ ಬೀಳುವವನಿದ್ದನು! ಆದರೆ ಕಡೆಯ ಗಳಿಗೆಯಲ್ಲಿ ಪುತ್ರನನ್ನುದ್ದೇಶಿಸಿ ನಾರಾಯಣನೆಂಬ ನಾಮೋಚ್ಚಾರಣೆ ಮಾಡಿದ ಮಾತ್ರದಿಂದಲೇ ಸಕಲ ಪಾಪಗಳಿಂದಲೂ ಅವನು ಮುಕ್ತನಾದ! ಇನ್ನು ಶ್ರದ್ಧೆಯಿಂದ, ಭಕ್ತಿಯಿಂದ ಹರಿನಾಮಸ್ಮರಣೆ ಮಾಡುವವರ ಭಾಗ್ಯವೇನೆಂದು ಹೇಳಲೇಬೇಕಿಲ್ಲ…!

“ರಾಜನ್‌, ಕರ್ಮಬಂಧನದಿಂದ ಬಿಡಿಸಿಕೊಳ್ಳಲಿಚ್ಛಿಸುವ ಮುಮುಕ್ಷುಗಳಿಗೆ ಹರಿನಾಮ ಸ್ಮರಣೆ, ಹರಿಕೀರ್ತನೆ, ಹರಿಲೀಲಾ ಶ್ರವಣಗಳಿಗಿಂತ ಉತ್ತಮ ಮಾರ್ಗವಿಲ್ಲ! ಭಕ್ತಿಯೋಗದ ಪಥದಲ್ಲಿರುವವರು, ಇತರ ಪಥಗಳವರ ಹಾಗೆ ರಜಸ್ತಮೋಯುಕ್ತವಾದ ಕರ್ಮಗಳಿಗೆ ಪುನಃ ಅಂಟಿಕೊಳ್ಳುವುದಿಲ್ಲ! ಭಕ್ತಿಯೋಗವು ಬಹಳ ಸರಳವೂ, ಶ್ರೇಷ್ಠವೂ, ಎಲ್ಲರಿಗೂ ಅನುಸರಣೀಯವೂ ಆಗಿದೆ!

“ಪರೀಕ್ಷಿತ, ಪರಮಗುಹ್ಯವಾದ ಈ ಅಜಾಮಿಳೋಪಾಖ್ಯಾನವನ್ನು ಶ್ರದ್ಧೆಯಿಂದ ಯಾರು ಕೇಳುವರೋ, ಅಥವಾ ಭಕ್ತಿಯಿಂದ ಯಾರು ಹೇಳುವರೋ, ಅವರು ನರಕಕ್ಕೆ ಹೋಗುವುದಿಲ್ಲ; ಯಮದೂತರು ಅವರನ್ನು ಕಣ್ಣೆತ್ತಿಯೂ ನೋಡುವುದಿಲ್ಲ; ಈ ಮೊದಲು ಅಂಥವರು ಅಮಂಗಳ, ಅಶುದ್ಧ ವ್ಯಕ್ತಿಗಳಾಗಿದ್ದರೂ ವೈಕುಂಠಕ್ಕೆ ಹೋಗಿ, ಅಲ್ಲಿ ಗೌರವಿಸಲ್ಪಡುತ್ತಾರೆ.”

ಅಜಾಮಿಳನ ಕಥೆಯನ್ನೂ ಅದರ ಫಲಶ್ರುತಿಯನ್ನೂ ಕೇಳಿ ಪರೀಕ್ಷಿತರಾಜನು ತೃಪ್ತನಾದ.

ಈ ಲೇಖನ ಶೇರ್ ಮಾಡಿ