ವರ ರೂಪದಲ್ಲಿ ಶಾಪ

ದಕ್ಷನ ವಂಶಾವಳಿ (ಭಾಗ-1)

ಪ್ರಚೇತಸರು ತಮ್ಮ ಸಮಪತ್ನಿ ಮಾರಿಷೆಯಲ್ಲಿ ದಕ್ಷನನ್ನು ಪಡೆದರು. ದಕ್ಷನು ಶ್ರೀವಿಷ್ಣುವಿನ ತಪಸ್ಸು ಮಾಡಿ, ಅವನ ಆದೇಶದಂತೆ ಪಂಚಜನ ಪ್ರಜಾಪತಿಯ ಮಗಳು ಅಸಿಕ್ನಿಯನ್ನು ವಿವಾಹವಾಗಿ ಹತ್ತು ಸಾವಿರ ಹರ್ಯಶ್ವರನ್ನು ಪುತ್ರರನ್ನಾಗಿ ಪಡೆದ. ಅವರು ನಾರದರ ಉಪದೇಶದಿಂದ ಪ್ರಭಾವಿತರಾಗಿ ಸಂನ್ಯಾಸಿಗಳಾಗಿ ಹೋದರು. ದುಃಖಿತನಾದ ದಕ್ಷ ಮತ್ತೆ ಅಸಿಕ್ನಿಯ ಗರ್ಭದಲ್ಲಿ ಸವಲಾಶ್ವರೆಂಬ ಒಂದು ಸಾವಿರ ಪುತ್ರರನ್ನು ಪಡೆದ. ಅವರ ಕಥೆಯೂ ಹಿಂದಿನಂತೆಯೇ ಮುಕ್ತಾಯವಾಯಿತು. ಕುಪಿತನಾದ ದಕ್ಷ ನಾರದರನ್ನು `ಅಲೆಮಾರಿಯಾಗಿರು’ ಎಂದು ಶಪಿಸಿದ.

ಚಾಕ್ಷುಷ ಮನ್ವಂತರ ಆರಂಭವಾಗಿತ್ತು. ನೂತನ ಸೃಷ್ಟಿ ಆರಂಭವಾಗಬೇಕಿತ್ತು. ಆದರೆ ಭೂಮಿಯೆಲ್ಲವೂ ಮರಗಳಿಂದ ಆವೃತವಾಗಿತ್ತು! ಏಕೆ?!

ಭೂಮಂಡಲವು ದೀರ್ಘಕಾಲ ಅರಾಜಕವಾಗಿಬಿಟ್ಟಿತ್ತು! ಭೂಮಿಯನ್ನಾಳುತ್ತಿದ್ದ ಪ್ರಾಚೀನಬರ್ಹಿಯೆಂಬ ಮಹಾರಾಜನು ನಾರದಮುನಿಯ ಉಪದೇಶದಂತೆ, ತಾನು ನಿರರ್ಥಕವಾಗಿ ಮಾಡುತ್ತಿದ್ದ ಬಹುವಿಧ ಯಜ್ಞಗಳನ್ನು ನಿಲ್ಲಿಸಿ ಮೋಕ್ಷಪ್ರಾಪ್ತಿಗಾಗಿ ತಪಸ್ಸು ಮಾಡಲು ಹೊರಟು ಹೋದನು. ಅವನ ಹತ್ತು ಮಕ್ಕಳಾದ ಪ್ರಚೇತಸರೆಂಬುವರು, ತಂದೆಯ ಆಜ್ಞೆಯಂತೆ ಸೃಷ್ಟಿರಹಸ್ಯವನ್ನರಿಯಲು, ವಿಷ್ಣುವನ್ನು ಕುರಿತು ತಪಸ್ಸು ಮಾಡಲು ಹೋಗಿದ್ದರು. ಅವರು ದೀರ್ಘ ಕಾಲದವರೆಗೂ ಹಿಂದಿರುಗಲಿಲ್ಲ! ಹೀಗಾಗಿ ಭೂಮಂಡಲವು ಅರಾಜಕವಾಗಿ, ಸೃಷ್ಟಿಯೂ ಬಹುತೇಕ ನಿಂತುಹೋಗಿತ್ತು! ಎಲ್ಲೆಲ್ಲೂ ಮರಗಳು ಬೆಳೆದಿದ್ದವು!

ಪ್ರಚೇತಸರು ಸಮುದ್ರದ ಮಧ್ಯೆ ನಿಂತು ದೀರ್ಘಕಾಲ ತಪಸ್ಸನ್ನಾಚರಿಸಿ ಹರಿದರ್ಶನ ಪಡೆದು ಸೃಷ್ಟಿರಹಸ್ಯವನ್ನು ಅರಿತರು; ತುಷ್ಟರಾದ ಅವರು ಹಿಂದಿರುಗಲು, ಎಲ್ಲೆಲ್ಲೂ ಬೆಳೆದಿದ್ದ ಮರಗಳನ್ನು ಕಂಡು ಕ್ರುದ್ಧರಾದರು! ತಮ್ಮ ತಪೋಮಹಿಮೆಯಿಂದ ಮರಗಳನ್ನು ಸುಟ್ಟು ಹಾಕಲು ನಿಶ್ಚಯಿಸಿ ತಮ್ಮ ಮುಖಗಳಿಂದಲೇ ವಾಯ್ವಗ್ನಿಗಳನ್ನು ಬಿಡುಗಡೆ ಮಾಡಿದರು!

ಪ್ರಚೇತಸರ ಕ್ರೋಧಾಗ್ನಿಯಿಂದ ಮರಗಳು ಅವ್ಯಾಹತವಾಗಿ ಸುಟ್ಟುಹೋಗುತ್ತಿರಲು, ಲತೆಗಳಿಗೂ ವೃಕ್ಷಗಳಿಗೂ ಅಧಿಪತಿಯಾದ ಚಂದ್ರನು ಭಯಗೊಂಡು ಆಗಸದಿಂದ ಧರೆಗಿಳಿದು ಬಂದನು!

“ನಿಲ್ಲಿ! ದಯವಿಟ್ಟು ನಿಮ್ಮ ಕ್ರೋಧವನ್ನು ತ್ಯಜಿಸಿರಿ!” ಚಂದ್ರನು ಮರಗಳ ಮೇಲಿನ ಅನುಕಂಪದಿಂದ ಪ್ರಚೇತಸರ ಕೋಪೋಪಶಮನ ಮಾಡಲು ಬೇಡಿಕೊಂಡನು; “ಪ್ರಜಾಸೃಷ್ಟಿ ಮಾಡಬೇಕೆಂದಿರುವ ನೀವು ದೀನರಾದ ಈ ವೃಕ್ಷಗಳನ್ನು ನಾಶಮಾಡಬಾರದು! ಎಲ್ಲರ ಕ್ಷೇಮಕ್ಕಾಗಿ ಅವುಗಳನ್ನು ವರ್ಧಿಸಬೇಕು! ಪ್ರಜಾಪತಿಗಳಿಗೂ ಪತಿಯಾದ ಶ್ರೀಹರಿಯು ಎಲ್ಲರಿಗೂ ಆಹಾರವಾಗಲೆಂದು ಮರಗಳನ್ನೂ ವನಸ್ಪತಿಗಳನ್ನೂ ಔಷಧಿಗಳನ್ನೂ ಸೃಷ್ಟಿಸಿದ್ದಾನೆ! ಚಲಿಸುವ ಪ್ರಾಣಿಗಳಿಗೆ ಚಲಿಸದ ಈ ಸಸ್ಯಗಳೇ ಆಹಾರ; ಮುಂಗಾಲುಗಳನ್ನು ಬಳಸದ ಸಸ್ಯಾಹಾರಿ ಪ್ರಾಣಿಗಳು ಪಂಜುಸಹಿತವಾದ ಮುಂಗಾಲುಗಳನ್ನು ಬಳಸುವ ಮಾಂಸಾಹಾರಿ ಪ್ರಾಣಿಗಳಿಗೆ ಆಹಾರ; ಎರಡು ಕಾಲ್ಗಳ ಮೇಲೆ ನಡೆಯುವ ಮನುಷ್ಯರಿಗೆ ಸಸ್ಯಗಳೂ ಪಶುಗಳೂ ಆಹಾರ! ಹೀಗೆ ಎಲ್ಲರ ಆಹಾರಕ್ಕೂ ಸಸ್ಯಗಳೇ ಮೂಲ! ನಿಮ್ಮ ತಂದೆಯಾದರೋ ನಿಮಗೆ ಪ್ರಜಾಸೃಷ್ಟಿ ಮಾಡಲು ಆಜ್ಞಾಪಿಸಿ ಹೋಗಿದ್ದಾರೆ! ಹರಿಯಾಜ್ಞೆಯೂ ಅದೆ ಆಗಿದೆ! ಹೀಗಿರಲು, ಪ್ರಜೆಗಳಿಗೆ ಆಹಾರವನ್ನೊದಗಿಸುವ ಮರಗಳನ್ನೇ ಸುಟ್ಟುಬಿಟ್ಟರೆ ಹೇಗೆ?!

“ಪ್ರಚೇತಸರೆ, ಈ ಕೋಪವನ್ನು ಬಿಡಿ! ನಿಮ್ಮ ತಂದೆ, ತಾತಂದಿರು ನಡೆದ ಸನ್ಮಾರ್ಗದಲ್ಲಿ ನೀವೂ ನಡೆಯಿರಿ! ಮಕ್ಕಳಿಗೆ ತಾಯ್ತಂದೆಯರೇ ಬಾಂಧವರು; ಕಂಗಳಿಗೆ ರೆಪ್ಪೆಗಳೇ ಮಿತ್ರರು! ಸ್ತ್ರೀಯರಿಗೆ ಪತಿಯೇ ರಕ್ಷಕನು! ಭಿಕ್ಷುಗಳಿಗೆ ಗೃಹಸ್ಥ ಹಾಗೂ ಅಜ್ಞಾನಿಗಳಿಗೆ ಜ್ಞಾನಿಯೇ ಮಿತ್ರರು! ಇವರಂತೆ ಈ ಮರಗಳನ್ನೂ ರಾಜನು ರಕ್ಷಿಸಬೇಕು! ಭಗವಂತನು ಸಕಲ ಜೀವರಾಶಿಗಳಲ್ಲೂ ಇರುವನೆಂಬುದನ್ನು ಮನಗಾಣಿರಿ! ಈ ಜ್ಞಾನದಿಂದ ಆ ಶ್ರೀಹರಿಯೂ ಸಂತೋಷಗೊಳ್ಳುವನು! ಆಕಾಶದಿಂದ ಬೀಳುವ ಉಲ್ಕೆಯಂತೆ ಈ ದೇಹದಲ್ಲಿ ಹಠಾತ್ತನೆ ಹೊಮ್ಮುವ ಈ ಕೋಪವನ್ನು ನಿಗ್ರಹಿಸುವವನು ತ್ರಿಗುಣಗಳನ್ನು ಮೀರಿ ಜ್ಞಾನಿಯಾಗುತ್ತಾನೆ!”

ಚಂದ್ರನ ಮಾತುಗಳನ್ನು ಕೇಳಿ ಪ್ರಚೇತಸರು ಶಾಂತರಾಗಿ ತಮ್ಮ ಕ್ರೋಧಾಗ್ನಿಯನ್ನು ಹಿಂತೆಗೆದುಕೊಂಡರು. ಆಗ ಚಂದ್ರನು, ದುಂಡಾದ ನಿತಂಬಗಳನ್ನು ಹೊಂದಿದ್ದ ಅಂದವಾದ ಹೆಣ್ಣೊಬ್ಬಳನ್ನು ಕರೆತಂದು ಅವಳನ್ನು ತೋರಿಸುತ್ತಾ ಪ್ರಚೇತಸರಿಗೆ ಹೇಳಿದನು, “ಪುತ್ರರೇ! ನಿಮಗೆ ಮಂಗಳವಾಗಲಿ! ಈ ಸುಂದರ ಕನ್ಯೆ, ಪ್ರಮ್ಲೋಚೆಯೆಂಬ ಅಪ್ಸರೆ ಮತ್ತು ಕಂಡು ಮಹರ್ಷಿಗಳ ಸಮಾಗಮದಿಂದ ಜನಿಸಿದ ಮಾರಿಷೆಯೆಂಬ ಸ್ತ್ರೀರತ್ನ! ಅನಾಥವಾಗಿದ್ದ ಈ ಮಗುವನ್ನು ನಾನೂ ಈ ವೃಕ್ಷಗಳೂ ಪೋಷಿಸಿ ಬೆಳೆಸಿದ್ದೇವೆ! ವೃಕ್ಷಗಳಿಂದ ಪೋಷಿಸಲ್ಪಟ್ಟುದರಿಂದ ಇವಳನ್ನು ವಾರ್ಕ್ಷೀ ಎಂದೂ ಕರೆಯುತ್ತೇವೆ! ಈ ವೃಕ್ಷ ಪುತ್ರಿಯನ್ನು ನೀವು ಪರಿಗ್ರಹಿಸಿ! ಇವಳು ನಿಮ್ಮೆಲ್ಲರಿಗೂ ಸಮಾನ ಪತ್ನಿಯಾಗುವಳು!”

ಚಂದ್ರನ ಮಾತಿನಂತೆ ಪ್ರಚೇತಸರು ಮಾರಿಷೆಯನ್ನು ತಮ್ಮ ಸಮಾನ ಪತ್ನಿಯನ್ನಾಗಿ ಸ್ವೀಕರಿಸಿದರು. ಕಾಲಕ್ರಮದಲ್ಲಿ ಅವಳು ಅವರಿಂದ ಗರ್ಭಧರಿಸಿ ದಕ್ಷನೆಂಬ ಮಗನನ್ನು ಪಡೆದಳು. ಹಿಂದೆ, ಸ್ವಾಯಂಭುವ ಮನ್ವಂತರದಲ್ಲಿ ಹುಟ್ಟಿ ಶಿವನಿಂದೆ ಮಾಡಿ ಶಿಕ್ಷಿತನಾಗಿದ್ದ ಬ್ರಹ್ಮಪುತ್ರ ದಕ್ಷನೇ ಈಗ ಪುನಃ ಪ್ರಚೇತಸರಿಂದ ಮಾರಿಷೆಯಲ್ಲಿ ಜನ್ಮ ತಾಳಿದ. ಇವನಿಂದ ಚಾಕ್ಷುಷ ಮನ್ವಂತರದ ಸೃಷ್ಟಿ ನಡೆದು, ಮೂರು ಲೋಕಗಳೂ ಆ ಸೃಷ್ಟಿಯಿಂದ ತುಂಬಿಹೋಯಿತು!

ದಕ್ಷ ಪ್ರಜಾಪತಿಯು ಮೊದಲು ತನ್ನ ಮನಸ್ಸಿನಿಂದಲೇ ದೇವಾಸುರ ಮನುಷ್ಯರನ್ನೂ ಖೇಚರ, ವನಚರ, ಜಲಚರಗಳೇ ಮೊದಲಾದ ಪ್ರಾಣಿವಿಶೇಷಗಳನ್ನೂ ಸೃಷ್ಟಿಸಿದ! ಆದರೆ ಅವನ ಸೃಷ್ಟಿ ಮುಂದುವರಿಯಲಿಲ್ಲ! ಇದರಿಂದ ಚಿಂತೆಗೀಡಾದ ಅವನು, ಸೃಷ್ಟಿ ಮಾಡುವ ಮಾರ್ಗವನ್ನರಿಯಲು ವಿಂಧ್ಯಪರ್ವತದ ಸನಿಹವಿದ್ದ ಅಘಮರ್ಷಣವೆಂಬ ತೀರ್ಥಕ್ಷೇತ್ರಕ್ಕೆ ಹೋಗಿ ವಿಷ್ಣುವನ್ನು ಕುರಿತು ದುಷ್ಕರ ತಪಸ್ಸನ್ನಾಚರಿಸಿದ; ಹಂಸಗುಹ್ಯವೆಂಬ ಸ್ತೋತ್ರದಿಂದ ಶ್ರೀಹರಿಯನ್ನು ಸ್ತುತಿಸಿದ;

“ತ್ರಿಗುಣಗಳಿಂದ ಕೂಡಿರುವ ಮಾಯೆಯಿಂದ ಉಂಟಾಗಿರುವ ಆಭಾಸವನ್ನೇ ಸತ್ಯವೆಂದು ಭ್ರಮಿಸುವ ಜೀವಿಗಳ ಅನುಭವಕ್ಕೆ ಸಿಲುಕದ, ಮಾಯೆಯಿಂದ ಆಚೆಗಿರುವ, ಸ್ವಯಂಭುವಾದ ಆ ಪರಮಪುರುಷನಿಗೆ ನನ್ನ ನಮಸ್ಕಾರ! ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ವಿಷಯಗಳು ತಮ್ಮನ್ನು ಅನುಭವಿಸುವ ಇಂದ್ರಿಯಗಳನ್ನು ತಿಳಿಯಲಾರದಂತೆ ಜೀವನೂ ತನ್ನೊಂದಿಗೇ ಈ ದೇಹದಲ್ಲಿರುವ ಯಾವ ಪರಮಾತ್ಮನನ್ನು ತಿಳಿಯುವುದಿಲ್ಲವೋ, ಅಂಥ ಪರಮಾತ್ಮನಿಗೆ ನನ್ನ ನಮಸ್ಕಾರ! ಪಂಚಭೂತಗಳು, ಪಂಚತನ್ಮಾತ್ರೆಗಳು, ಮನಸ್ಸು, ಮತ್ತು ತಮ್ಮನ್ನೂ ತಿಳಿಯುವ ಜೀವರು ಸರ್ವಜ್ಞನಾದ ಆ ಪರಮಪುರುಷನನ್ನು ತಿಳಿಯಲಾರರು. ಅಂಥ ಪರಮಾತ್ಮನಿಗೆ ನನ್ನ ನಮಸ್ಕಾರ! ಯಾವಾಗ ಜೀವನು ತನ್ನ ಮನಸ್ಸನ್ನು ಜಾಗೃತ, ಸ್ವಪ್ನ, ಸುಷುಪ್ತಿ (ಗಾಢನಿದ್ರೆ) ಅವಸ್ಥೆಗಳಿಂದ ಉಪರಮಿಸುವನೋ, ಆಗ ವಿವಿಧ ನಾಮರೂಪಾದಿಗಳ ಭಾವವನ್ನು ಮೀರಿ ಸಮಾಧಿಸ್ಥಿತಿಯಲ್ಲಿ ಯಾವ ಶುದ್ಧಸ್ವರೂಪಿ ಪರಮಪುರುಷನನ್ನು ಕಾಣುತ್ತಾನೋ, ಅಂಥ ಹಂಸನಿಗೆ ನನ್ನ ನಮಸ್ಕಾರ!

“ವಿದ್ವಾಂಸರಾದ ಬ್ರಾಹ್ಮಣಶ್ರೇಷ್ಠರು ಹದಿನೈದು ಸಾಮಿಧೇನೀ ಮಂತ್ರಗಳ ಉಚ್ಚಾರಣೆಯಿಂದಲೇ ದಾರುವಿನಲ್ಲಿ ಅಗ್ನಿಯನ್ನು ಹೊಮ್ಮಿಸುವಂತೆ, ಜ್ಞಾನಿಗಳು ತಮ್ಮ ಹೃದಯಗಹ್ವರಗಳಲ್ಲೇ ನಿಗೂಢನಾಗಿರುವ ಪರಮಾತ್ಮನನ್ನು ಕಂಡುಕೊಳ್ಳುತ್ತಾರೆ! ಅರಿಯಲು ದುಸ್ಸಾಧ್ಯನಾದ ಆ ಭಗವಂತನು ನನ್ನಲ್ಲಿ ಪ್ರಸೀದನಾಗಲಿ!

“ಆ ಭಗವಂತನನ್ನು ಭೌತಿಕವಾದ ಮಾತು, ವರ್ಣನೆಗಳಿಂದಾಗಲೀ, ಬುದ್ಧಿ, ಕಣ್ಣು, ಮನಸ್ಸುಗಳಿಂದ ಅರಿಯಲಾಗುವುದಿಲ್ಲ. ಭೌತಿಕವಾದ ಇವೆಲ್ಲಾ ಸೃಷ್ಟಿಯೊಳಗಿರುವುದರಿಂದ, ಸೃಷ್ಟಿಯಾಚೆಗಿರುವ ಪರತತ್ತ್ವವಾದ ಅವನನ್ನು ಇವುಗಳಿಂದ ಅರಿಯಲಾಗುವುದಿಲ್ಲ! ಯಾರಿಂದ, ಯಾರಲ್ಲಿ, ಯಾರಿಗಾಗಿ, ಯಾರ, ಯಾರ ದೆಸೆಯಿಂದ, ಯಾರೇ ಆಗಲಿ, ಯಾವ ಕಾರ್ಯವನ್ನು ಮಾಡುವರೋ ಅದು ಆ ಪರಬ್ರಹ್ಮನಿಗೇ ಸಂಬಂಧಿಸಿರುತ್ತದೆ; ಏಕೆಂದರೆ, ಅನನ್ಯನಾದ ಅವನೊಬ್ಬನೇ ಎಲ್ಲಕ್ಕೂ ಕಾರಣನಾಗಿದ್ದಾನೆ! ಯಾವ ಭಗವಂತನ ಬಹುವಿಧವಾದ ಶಕ್ತಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಾದ, ಪ್ರತಿವಾದಗಳನ್ನು ಮಾಡುತ್ತಾ ಅವನ ನಿಜಸ್ವರೂಪವನ್ನು ಅರಿಯಲಾರದೇ ಮರುಳಾಗುವರೋ, ಅಂಥ ಭಗವಂತನಿಗೆ ನನ್ನ ನಮಸ್ಕಾರ! ಪರಮಪುರುಷನು ಇದ್ದಾನೆ ಎಂದು ಕೆಲವರೂ, ಇಲ್ಲ ಎಂದು ಕೆಲವರೂ, ಯೋಗ ಮತ್ತು ಸಾಂಖ್ಯ ದೃಷ್ಟಿಗಳಿಂದ ಒಬ್ಬರ ಪಕ್ಷವನ್ನು ಇನ್ನೊಬ್ಬರು ವಿರೋಧಿಸುತ್ತಿದ್ದರೂ, ಒಬ್ಬರು ಪರಮಾತ್ಮನನ್ನು ಅರಿಯಲು, ಮತ್ತು ಇನ್ನೊಬ್ಬರು ಭೌತಿಕ ವಸ್ತುಗಳೆಲ್ಲದರ ಮೂಲವನ್ನು ಹುಡುಕುತ್ತಲೂ, ಆ ಪರಮಸತ್ಯವನ್ನೇ ಹುಡುಕುತ್ತಿರುತ್ತಾರೆ! ಅಂಥ ಭಗವಂತನಿಗೆ ನನ್ನ ನಮಸ್ಕಾರ!

“ಭಕ್ತರ ಅನುಗ್ರಹಕ್ಕಾಗಿ, ತನ್ನ ಪಾದಮೂಲಗಳನ್ನು ಭಜಿಸುವ ಅವರಿಗೆ, ತಾನು ಭೌತಿಕ ನಾಮರೂಪರಹಿತನಾಗಿ ಅನಂತನಾಗಿದ್ದರೂ, ತನ್ನ ದಿವ್ಯ ನಾಮ, ರೂಪ, ಜನ್ಮಗಳಿಂದ ಭೂಮಿಯಲ್ಲಿ ಆವತರಿಸುತ್ತಾನೆ! ಅಂಥ ಭಗವಂತನು ನನ್ನಲ್ಲಿ ಪ್ರಸೀದನಾಗಲೀ! ಗಾಳಿಯು ವಿವಿಧ ಗಂಧಗಳನ್ನಾಶ್ರಯಿಸುವಂತೆ, ವಿವಿಧ ವರ್ಗಗಳ ಜನರನ್ನು ಅನುಗ್ರಹಿಸಲು, ಅವರ ಆಶಯಗಳಿಗೆ ತಕ್ಕಂತೆ ವಿವಿಧ ದೇವತೆಗಳ ಮೂಲಕ ಅವರ ಪೂಜೆಗಳನ್ನು ಸ್ವೀಕರಿಸುತ್ತಾನೆ! ಅಂಥ ಮೂಲ ಸ್ವರೂಪದ ಭಗವಂತನು ನನ್ನಲ್ಲಿ ಪ್ರಸೀದನಾಗಲಿ!”

ದಕ್ಷ ಪ್ರಜಾಪತಿಯ ಸ್ತುತಿಯಿಂದ ಪ್ರಸೀದನಾದ ಶ್ರೀಮನ್ನಾರಾಯಣನು ಗರುಡಾರೂಢನಾಗಿ ಅವನ ಮುಂದೆ ಪ್ರತ್ಯಕ್ಷನಾದನು! ಅಷ್ಟಭುಜಗಳಲ್ಲಿ ಶಂಖ, ಚಕ್ರ, ಖಡ್ಗ ಗುರಾಣಿಗಳನ್ನೂ ಧನುರ್ಬಾಣಪಾಶಗದೆಗಳನ್ನೂ ಹಿಡಿದಿದ್ದ ಆ ಮಹಾವಿಷ್ಣುವಿನ ಮಂಗಳಮಯ ರೂಪ, ಶ್ಯಾಮಲವರ್ಣದ ತನುಕಾಂತಿಯಿಂದಲೂ ಅದಕ್ಕೊಪ್ಪುವ ಪೀತಾಂಬರದಿಂದಲೂ ಶೋಭಿಸುತ್ತಾ, ಆಕಂಠಪಾದಗಳವರೆಗೆ ಇಳಿಬಿದ್ದಿದ್ದ ಸುಂದರ ವನಮಾಲೆಯಿಂದಲೂ ವಿಶಾಲವಕ್ಷಸ್ಥಳವನ್ನು ಅಲಂಕರಿಸಿದ್ದ ಶ್ರೀವತ್ಸಕೌಸ್ತುಭಗಳಿಂದಲೂ, ಜಾಜ್ವಲ್ಯಮಾನವಾದ ಕಿರೀಟಕುಂಡಲಗಳಿಂದಲೂ, ಝಣಝಣತ್ಕರಿಸುವ ಒಡ್ಯಾಣ, ಕಡಗ, ಕಂಕಣ, ನೂಪುರಗಳಿಂದಲೂ ಹೊಳೆ ಹೊಳೆಯುತ್ತಿತ್ತು! ಸುಂದರ ಮಂದಹಾಸದಿಂದ ಪ್ರಸನ್ನವದನನಾಗಿ ಪ್ರೇಮಪೂರಿತ ನೋಟ ಬೀರುತ್ತಿದ್ದ ಸ್ವಾಮಿಯನ್ನು ನಂದ ಸುನಂದಾದಿ ದೇವತೆಗಳೂ ನಾರದಾದಿ ದೇವರ್ಷಿಗಳೂ ಸಿದ್ಧಚಾರಣಗಂಧರ್ವಲೋಕ ನಿವಾಸಿಗಳೂ ಸುತ್ತುವರಿದು ಸ್ತುತಿಸುತ್ತಿದ್ದರು!

ಭಗವಂತನ ಇಂಥ ದಿವ್ಯವೂ ಆಶ್ಚರ್ಯಕರವೂ ಆದ ಅದ್ಭುತ ರೂಪವನ್ನು ಕಂಡು ದಕ್ಷನಿಗೆ ಮೊದಲು ಸ್ವಲ್ಪ ಭಯವಾಯಿತಾದರೂ, ಅವನು ಪ್ರಹೃಷ್ಟನಾಗಿ ಪ್ರಭುವಿಗೆ ದೀರ್ಘದಂಡ ನಮಸ್ಕಾರ ಮಾಡಿದನು!

ಬೆಟ್ಟದಿಂದ ಧುಮುಕುವ ನೀರಿನ ಝರಿಗಳು ನದಿಯನ್ನು ಸೇರಿ ತುಂಬುವಂತೆ, ದಕ್ಷನ ಮನೇಂದ್ರಿಯಗಳು ಅತ್ಯಂತ ಆನಂದಭರಿತವಾಗಿ ಅವನು ಏನನ್ನೂ ಮಾತನಾಡಲಾರದಾದ! ಅವನು ಹಾಗೆ ಭಕ್ತಿ ತುಂಬಿ ಬಂದು ವಿನೀತನಾಗಿ ಬಿದ್ದಿದ್ದನ್ನು ನೋಡಿ, ಎಲ್ಲ ಜೀವಿಗಳ ಮನದಾಳವನ್ನು ಅರಿಯಬಲ್ಲ ದೇವೋತ್ತಮ ಪರಮಪುರುಷನು ಅವನಿಗೆ ಹೇಳಿದನು,

“ಹೇ ಪ್ರಚೇತಸ! ನೀನು ನನ್ನಲ್ಲಿರಿಸಿರುವ ಅಪಾರವಾದ ಶ್ರದ್ಧೆಯಿಂದ ನಿನ್ನ ತಪಃಫಲವಾದ ನನ್ನ ಪ್ರೇಮವನ್ನು ಸಾಧಿಸಿರುವೆ! ನೀನು ಪರಮ ಭಾಗ್ಯವಂತ! ನಿನ್ನಲ್ಲಿ ನಾನು ಸುಪ್ರೀತನಾಗಿದ್ದೇನೆ! ಈ ಜಗತ್ತಿನ ಕ್ಷೇಮಕ್ಕಾಗಿಯೇ ನೀನು ಇಂಥ ತಪಸ್ಸನ್ನಾಚರಿಸಿರುವೆ; ಸಕಲ ಜೀವಿಗಳಿಗೂ ಕ್ಷೇಮವಾಗಲೆಂದೇ ನನ್ನ ಇಚ್ಛೆಯೂ ಆಗಿದೆ! ಬ್ರಹ್ಮದೇವನೂ, ಶಿವನೂ, ಮನುಗಳೂ, ಇತರ ದೇವತೆಗಳೂ, ಪ್ರಜಾಪತಿಗಳಾದ ನೀವೂ ಜೀವಿಗಳ ಕ್ಷೇಮಕ್ಕಾಗಿ ಕಾರ್ಯತತ್ಪರರಾಗಿರುವ ನನ್ನ ವಿಭೂತಿಗಳು (ಶಕ್ತ್ಯಾಂಶಗಳು). ತಪಸ್ಸು ನನ್ನ ಹೃದಯ! ವೈದಿಕ ಜ್ಞಾನವೇ ನನ್ನ ದೇಹ! ಯಜ್ಞಯಾಗಗಳೇ ನನ್ನ ಅಂಗಾಂಗಗಳು! ಧರ್ಮವೇ ನನ್ನ ಆತ್ಮ! ದೇವತೆಗಳು ನನ್ನ ಪ್ರಾಣಗಳು!

“ದಕ್ಷ ! ಈ ಸೃಷ್ಟಿಗೆ ಮೊದಲು ನಾನೊಬ್ಬನೇ ಇದ್ದೆ! ನನ್ನ ಹೊರತು ಬಾಹ್ಯಾಂತರಗಳಲ್ಲಿ ಬೇರೇನೂ ಇರಲಿಲ್ಲ! ಚಿತ್‌ಶಕ್ತಿ (ಜೀವಶಕ್ತಿ) ಅವ್ಯಕ್ತವಾಗಿ ಸುಪ್ತವಾದಂತಿತ್ತು! ಆಗ, ಅನಂತಗುಣನಾದ ನನ್ನಲ್ಲಿ ನನ್ನ ಬಾಹ್ಯಶಕ್ತಿಯಾದ ಮಾಯೆಯಿಂದ ಈ ತ್ರಿಗುಣಮಯವಾದ ವಿಶ್ವವು ಪ್ರಕಟವಾಯಿತು! ಈ ವಿಶ್ವದಲ್ಲಿ, ಮೊಟ್ಟಮೊದಲ ವ್ಯಕ್ತಿಯಾದ ಬ್ರಹ್ಮದೇವನು ಪ್ರಕಟವಾದನು! ಅವನು ಪ್ರಾಕೃತಿಕ ಜನ್ಮದಂತಲ್ಲದೇ, ತಾನಾಗಿಯೇ ನನ್ನಿಂದ ಹೊಮ್ಮಿದುದರಿಂದ ಸ್ವಯಂಭೂ ಮತ್ತು ಅಜ (ಜನ್ಮರಹಿತ) ಎನಿಸಿದನು! ನನ್ನ ಶಕ್ತಿಯಿಂದ ಕೂಡಿದ್ದ ಅವನು ಸೃಷ್ಟಿ ಮಾಡಲು ಉಪಕ್ರಮಿಸಿದರೂ ಅವನಿಗೆ ಅದು ಸಾಧ್ಯವಿಲ್ಲವೆನಿಸಿತು! ಆಗ ನಾನು ಅವನಿಗೆ ತಪಸ್ಸು ಮಾಡಲು ಉಪದೇಶಿಸಲು, ಅದರಂತೆ ಅವನು ತಪಸ್ಸನ್ನಾಚರಿಸಿ ನೀನೂ ಸೇರಿದಂತೆ ಒಂಬತ್ತು ವ್ಯಕ್ತಿಗಳನ್ನು (ನವಬ್ರಹ್ಮರನ್ನು) ಸೃಷ್ಟಿಸಿದನು. ನಿಮ್ಮಿಂದ ಸೃಷ್ಟಿ ಮುಂದುವರಿಯಿತು. ಹೀಗೆ ತಪಸ್ಸು, ಯಾವುದೇ ಕಾರ್ಯಸಾಧನೆಗೆ ಅತ್ಯಗತ್ಯ.

“ದಕ್ಷ! ಹಿಂದೆ ಬ್ರಹ್ಮನಿಂದ ಹುಟ್ಟಿದ್ದ ನೀನು ಈಗ ಪುನಃ ಪ್ರಚೇತಸರಿಂದ ಹುಟ್ಟಿರುವೆ. ವತ್ಸ, ಪಂಚಜನನೆಂಬ ಪ್ರಜಾಪತಿಯ ಮಗಳಾದ, ಅಸಿಕ್ನೀ ಎಂಬುವಳನ್ನು ನಿನ್ನ ಪತ್ನಿಯಾಗಿ ಪರಿಗ್ರಹಿಸು! ಅವಳೊಂದಿಗೆ ಗೃಹಸ್ಥ ಧರ್ಮ ಪಾಲಿಸಿ ಸಂತಾನ ಪಡೆಯುತ್ತಾ ಪ್ರಜಾಸೃಷ್ಟಿ ಮಾಡು! ನೀನು ಹೀಗೆ ಅನೇಕ ಪ್ರಜೆಗಳನ್ನು ಸೃಷ್ಟಿಸಿದ ಬಳಿಕ, ಅವರೂ ಇನ್ನು ಮುಂದೆ, ಗೃಹಸ್ಥ ಧರ್ಮದಲ್ಲಿ ತೊಡಗಿ ನನ್ನ ಮಾಯೆಯ ಪ್ರಭಾವದಿಂದ ಸಂತಾನ ಪಡೆಯುತ್ತಾರೆ! ಆದರೆ ನನ್ನ ಕೃಪೆಯಿಂದ ನನ್ನಲ್ಲಿ ಭಕ್ತಿಯುಳ್ಳವರೂ ಆಗಿ ನನಗೆ ಆಹುತಿಗಳನ್ನರ್ಪಿಸುತ್ತಾರೆ!”

ಭಗವಾನ್‌ ನಾರಾಯಣನು ಹೀಗೆ ಹೇಳಿ, ಕನಸಿನಲ್ಲಿ ಕಂಡ ವಸ್ತುವಿನಂತೆ, ದಕ್ಷನು ನೋಡ ನೋಡುತ್ತಿರುವಂತೆಯೇ ಅಂತರ್ಧಾನನಾದನು!

* * *

ತಪಸ್ಸು ಮುಗಿಸಿ ಮರಳಿದ ದಕ್ಷಪ್ರಜಾಪತಿಯು, ಭಗವಂತನು ಹೇಳಿದಂತೆ, ಪಂಚಜನ ಪ್ರಜಾಪತಿಯ ಮಗಳಾದ ಅಸಿಕ್ನಿಯನ್ನು ವರಿಸಿದ. ವಿಷ್ಣು ಮಾಯೆಯಿಂದ ಪ್ರಭಾವಿತನಾದ ಅವನು, ಅಸಿಕ್ನಿಯೊಡನೆ ರತ್ಯಾಸಕ್ತಿಯಿಂದ ಸಮಾಗಮ ಮಾಡಿ, ಹರ್ಯಶ್ವರೆಂಬ ಹತ್ತುಸಾವಿರ ಪುತ್ರರನ್ನು ಪಡೆದ! ಅವರೆಲ್ಲರೂ ಸಮಾನವಾದ ಧರ್ಮ, ಶೀಲಗಳಿಂದ ಕೂಡಿದ್ದರು, ದಕ್ಷನು ಅವರಿಗೆ ಪ್ರಜೆಗಳನ್ನು ಸೃಷ್ಟಿಸಲು ಆಜ್ಞಾಪಿಸಲು, ಅವರೆಲ್ಲರೂ ಪಶ್ಚಿಮ ದಿಕ್ಕಿನ ಕಡೆ ಹೊರಟರು; ಹಾಗೆ ಸಂಚರಿಸುತ್ತಾ ಅವರು, ಸಿಂಧೂ ನದಿಯು ಸಮುದ್ರದೊಂದಿಗೆ ಕೂಡಿಕೊಳ್ಳುವ ಪವಿತ್ರವಾದ ನಾರಾಯಣಸರಸ್ಸೆಂಬ ತೀರ್ಥಕ್ಷೇತ್ರಕ್ಕೆ ಆಗಮಿಸಿದರು. ಸಿದ್ಧರೂ ಮುನಿಗಳೂ ವಾಸಿಸುತ್ತಿದ್ದ ಆ ಪವಿತ್ರ ತಾಣದಲ್ಲಿ ಅವರು ನೆಲೆಸಿ, ದಿನವೂ ಆ ಸರಸ್ಸಿನ ಪವಿತ್ರ ಜಲವನ್ನು ಸ್ಪರ್ಶಿಸುತ್ತಾ ಪರಿಶುದ್ಧರಾಗಿ ಕ್ರಮೇಣ ಪಾರಮಹಂಸ್ಯಧರ್ಮದಲ್ಲಿ ಆಸಕ್ತರಾದರು. ಆದರೆ ಅವರ ತಂದೆಯು ಪ್ರಜಾಸೃಷ್ಟಿ ಮಾಡಲು ಆಜ್ಞಾಪಿಸಿದ್ದರಿಂದ ಅವರು ಉಗ್ರತಪಗಳನ್ನು ಆಚರಿಸತೊಡಗಿದರು!

ದಕ್ಷಪುತ್ರರು ಹೀಗೆ ಉಗ್ರತಪಗಳನ್ನಾಚರಿಸುತ್ತಿದ್ದಾಗ, ಒಂದು ದಿನ, ದೇವರ್ಷಿಗಳಾದ ನಾರದರು ಅವರನ್ನು ನೋಡಿ ಅವರ ಬಳಿಗೆ ಆಗಮಿಸಿದರು. ದಕ್ಷಪುತ್ರರು ಅವರನ್ನು ಸ್ವಾಗತಿಸಿ ಅರ್ಘ್ಯಪಾದ್ಯಗಳನ್ನಿತ್ತು ಸತ್ಕರಿಸಿದರು. ನಾರದರು ಅವರ ಕುಶಲವನ್ನು ವಿಚಾರಿಸಿ ಅವರು ತಪಸ್ಸು ಮಾಡುತ್ತಿದ್ದ ಕಾರಣವನ್ನು ತಿಳಿದುಕೊಂಡರು. ಆದರೆ ನಾರಾಯಣ ಸರಸ್ಸಿನಲ್ಲಿ ವಾಸಿಸುತ್ತಾ ಮುನಿಜನರ ಸಹವಾಸದಿಂದ ಪರಿಶುದ್ಧ ಹೃದಯರಾದ ಅವರು ಮುಕ್ತಿಪಥವನ್ನರಿಯಲು ಸೂಕ್ತವೆಂದು ನಾರದರ ದಿವ್ಯದೃಷ್ಟಿಗೆ ಗೋಚರಿಸಿತು! ಆತ್ಮಜ್ಞಾನವನ್ನು ಅರಿಯುವ ಯೋಗ್ಯತೆಯಿರುವವರು ಸಂಸಾರದಲ್ಲೇಕೆ ಬಳಲಬೇಕು? ಮತ್ತೆ ಮತ್ತೆ ಆಸೆಗಳು ಚಿಗುರೊಡೆಯುವಂತೆ ಮಾಡಿ ಪುನರ್ಜನ್ಮಗಳಿಗೆ ಕಾರಣವಾಗುವ ಈ ಸಂಸಾರದ ಮಾಯೆಯ ಬಿಗಿಹಿಡಿತದಿಂದ ಬಿಡಿಸಿಕೊಳ್ಳುವುದೇ ಜಾಣತನ! ಅದಕ್ಕೆ ಅವಕಾಶ ಸಿಕ್ಕಾಗ ಉಪಯೋಗಿಸಿಕೊಳ್ಳುವುದೇ ಲೇಸು! ಹೀಗೆ ತರ್ಕಿಸಿ ನಾರದರು ಹರ್ಯಶ್ವರಿಗೆ ಜ್ಞಾನೋಪದೇಶ ಮಾಡಹೊರಟರು. ಜ್ಞಾನಾಧಿಕಾರಿಗಳಿಗೆ ಜ್ಞಾನವನ್ನು (ನಾರ) ನೀಡುವುದೇ(ದ) ನಾರದರ ಕಾರ್ಯವಲ್ಲವೇ?!

“ಎಲೈ ಹರ್ಯಶ್ವರೇ!” ನಾರದರು ಹೇಳಿದರು, “ಬಾಲಿಶ ಸ್ವಭಾವದ ರಾಜಕುಮಾರರಾದ ನೀವು ಈ ಭೂಮಿಯ ಮಿತಿಗಳನ್ನೇ ಅರಿತಿಲ್ಲ! ಇನ್ನು ಪ್ರಜಾಸೃಷ್ಟಿಯನ್ನು ಹೇಗೆ ಮಾಡುವಿರಿ? ಒಬ್ಬನೇ ಪುರುಷನಿರುವ ಒಂದೇ ರಾಷ್ಟ್ರವಿದೆ! ಒಳಗೆ ಹೊಕ್ಕರೆ ಹೊರಬರಲಾರದ ಬಲವೊಂದಿದೆ! ಬಹುವಿಧ ವೇಷಗಳನ್ನು ಧರಿಸುವ ವೇಶ್ಯಾಸ್ತ್ರೀಯೊಬ್ಬಳಿದ್ದಾಳೆ! ಅವಳಿಗೊಬ್ಬ ಪತಿಯಿದ್ದಾನೆ! ಎರಡೂ ಕಡೆಗಳಲ್ಲಿ ಹರಿಯುವ ನದಿಯೊಂದಿದೆ! ಇಪ್ಪತ್ತೈದು ವಸ್ತುಗಳನ್ನು ಬಳಸಿ ಕಟ್ಟಿರುವ ಮನೆಯೊಂದಿದೆ! ಎಲ್ಲೋ ಒಂದೆಡೆಯಲ್ಲಿ ವಿಚಿತ್ರ ಕಥೆಯ ಹಂಸವೊಂದಿದೆ! ತೀಕ್ಷ್ಣ ಅಲಗುಗಳಿರುವ ಚಕ್ರವೊಂದು ತಾನೇ ತಾನಾಗಿ ತಿರುಗುತ್ತಿದೆ! ಅಯ್ಯೋ! ಬಹಳ ಬುದ್ಧಿವಂತನಾದ ನಿಮ್ಮ ತಂದೆಯ ನಿಜವಾದ ಆದೇಶವನ್ನು ಅರಿಯದೇ ನೀವು ಹೇಗೆ ತಾನೇ ಸೃಷ್ಟಿ ಮಾಡುವಿರಿ?”

ನಾರದ ಮುನಿಗಳು ಹೀಗೆ ಒಗಟೊಗಟಾಗಿ ಮಾತನಾಡಲು ಬುದ್ಧಿವಂತರಾದ ಹರ್ಯಶ್ವರು ಯಾರ ಸಹಾಯವೂ ಇಲ್ಲದೇ ತಾವಾಗಿಯೇ ಆ ಮಾತುಗಳನ್ನು ವಿಮರ್ಶಿಸಿ, ಅವುಗಳ ಒಳ ಅರ್ಥವನ್ನು ತಿಳಿದುಕೊಂಡರು.

ಹರ್ಯಶ್ವರು, ನಾರದರು ಭೂಮಿ ಎಂದು ಹೇಳಿದುದನ್ನು ಕ್ಷೇತ್ರ ಎಂದು ಅರ್ಥಮಾಡಿಕೊಂಡರು. ಕರ್ಮಗಳನ್ನು ಆಚರಿಸುವ ದೇಹವೇ ಕ್ಷೇತ್ರ. ವಿವಿಧ ಕರ್ಮಗಳಿಗನುಸಾರವಾಗಿ ವಿವಿಧ ದೇಹಗಳನ್ನು ಪಡೆಯುವ ಜೀವಾತ್ಮನಿಗೆ ವಿವಿಧ ರೀತಿಯ ಸಂಜ್ಞೆಗಳಾಗುತ್ತವೆ. (ಪಶು, ಪಕ್ಷಿ, ಗಂಡು, ಹೆಣ್ಣು, ರಾಜ, ಪ್ರಜೆ ಇತ್ಯಾದಿ), ಮತ್ತು ಅವನನ್ನು
ಬಂಧಿಸುತ್ತವೆ! ಈ ಕ್ಷೇತ್ರದ ಪರಿಮಿತಿಯನ್ನು ಯಾರೂ ಅರಿಯಲಾರರು. ಆಧ್ಯಾತ್ಮಿಕತೆಯತ್ತ ಮನಸ್ಸನ್ನು ತಿರುಗಿಸದೇ ಬರಿದೇ ಕರ್ಮಗಳನ್ನು ಮಾಡುತ್ತಿದ್ದರೆ, ಈ ಕ್ಷೇತ್ರದ ಬಂಧನದಿಂದ ಮುಕ್ತಿ ದೊರೆಯುವುದಿಲ್ಲ.

ರಾಷ್ಟ್ರವೊಂದರಲ್ಲಿರುವ ಒಬ್ಬನೇ ಪುರುಷನೆಂದರೆ, ಸರ್ವದೇವೋತ್ತಮ ಪುರುಷನೆಂದು ಅವರು ಅರ್ಥೈಸಿಕೊಂಡರು. ಜನ್ಮರಹಿತನಾದ, ಸರ್ವಸ್ವತಂತ್ರನಾದ, ತನಗೆ ತಾನೇ ಆಶ್ರಯನಾದ ಅವನು ಈ ಭೌತಿಕ ಸೃಷ್ಟಿಯನ್ನು ಮೀರಿದವನು. ಅವನನ್ನು ದರ್ಶಿಸದೇ, ಕೇವಲ ಕ್ಷಣಿಕ ಸುಖಕ್ಕಾಗಿ ಅಸತ್ಕರ್ಮಗಳನ್ನು ಮಾಡುತ್ತಿದ್ದರೆ ಏನು ಪ್ರಯೋಜನ?

ಒಮ್ಮೆ ಹೊಕ್ಕು ಹೊರಬರಲಾರದ ಬಿಲವೆಂದರೆ ಅಧೋಲೋಕ. ಅಂತೆಯೇ ಒಮ್ಮೆ ಪ್ರವೇಶಿಸಿದರೆ, ಪುನಃ ಈ ಅಜ್ಞಾನದ ಸಂಸಾರಕ್ಕೆ ಹಿಂದಿರುಗದಿರುವುದೆಂದರೆ ಭಗವಂತನ ದಿವ್ಯಧಾಮ!

ನಾನಾರೂಪಗಳನ್ನು ಧರಿಸುವ ವೇಶ್ಯೆಯೆಂದರೆ ತ್ರಿಗುಣಾನ್ವಿತವಾದ ಬುದ್ಧಿ! ಈ ವೇಶ್ಯೆಯೊಡನೆ ಸೇರಿ ಐಶ್ವರ್ಯನಾಶ ಹೊಂದುವ ಅವಳ ಪತಿಯೆಂದರೆ, ಬುದ್ಧಿಗೆ ಅಡಿಯಾಳಂತಾಗುವ ಜೀವನೇ! ಬುದ್ಧಿಯ ಸೂಚನೆಯಂತೆ ಅವನು ಅಸತ್ಕರ್ಮಗಳಲ್ಲಿ ತೊಡಗಿ ಕೆಟ್ಟ ಹೆಂಡತಿಯೊಂದಿಗೆ ಕಷ್ಟದಿಂದ ಬಾಳುವವನಂತಾಗುತ್ತಾನೆ!

ಇಲ್ಲಿ ಎರಡೂ ದಿಕ್ಕುಗಳಲ್ಲಿ ಹರಿಯುವ ನದಿಯೆಂದರೆ, ಸೃಷ್ಟಿಯನ್ನೂ ನಾಶವನ್ನೂ ಒಟ್ಟಿಗೆ ಮಾಡುತ್ತಿರುವ ಮಾಯೆಯೇ ಆಗಿದೆ (ಕೆಲವರು ಹುಟ್ಟುತ್ತಿದ್ದರೆ ಕೆಲವರು ಸಾಯುತ್ತಿರುತ್ತಾರೆ.)! ಮತ್ತನಾದ ಅಜ್ಞಾನಿಯು ಇದರಲ್ಲಿ ಮುಳುಗಿದರೆ ಹೊರಬರುವುದು ಕಷ್ಟಸಾಧ್ಯ! ಈ ಮಾಯೆಯಿಂದ ಹೊರಬರುವುದನ್ನರಿಯದೇ ಬರಿದೇ ಅಸತ್ಕರ್ಮಗಳನ್ನು ಮಾಡುತ್ತಿದ್ದರೆ ಏನು ಫಲ?

ಇಲ್ಲಿ ಇಪ್ಪತ್ತೈದು ತತ್ತ್ವಗಳಿಂದ ಮಾಡಿರುವ ಮನೆಯೆಂದರೆ, ಈ ಸೃಷ್ಟಿಗೆ ಕಾರಣವಾಗಿರುವ ಇಪ್ಪತ್ತನಾಲ್ಕು ತತ್ತ್ವಗಳು (ಪಂಚಭೂತಗಳು – ಅಗ್ನಿ, ವಾಯು, ಭೂಮಿ, ನೀರು, ಆಕಾಶ; ಪಂಚತನ್ಮಾತ್ರೆಗಳು – ರೂಪ, ಸ್ಪರ್ಶ, ಗಂಧ, ರಸ, ಶಬ್ಧ; ಪಂಚ ಜ್ಞಾನೇಂದ್ರಿಯಗಳು – ವಾಕ್‌, ಕೈ, ಕಾಲು, ಗುದ, ಜನನೇಂದ್ರಿಯಗಳು; ಅಂತಃಕರಣದ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ) ಮತ್ತು ಇವುಗಳಿಗೆ ಆಧಾರನಾಗಿರುವ ಭಗವಂತ (ಇಪ್ಪತ್ತೈದನೆಯ ತತ್ತ್ವ; ಜೀವಾತ್ಮ ಭಗವಂತನ ಅಂಶವೇ ಆಗಿರುತ್ತಾನೆ.)! ಭಗವಂತನೇ ಈ ಎಲ್ಲಾ ತತ್ತ್ವಗಳು ಪ್ರಕಟಗೊಳ್ಳುವಂತೆ ಮಾಡಿ ಈ ಸೃಷ್ಟಿಗೆ ಕಾರಣೀಭೂತನಾಗಿದ್ದಾನೆ!

ಇಲ್ಲಿ ಹಂಸವೆಂದು ಹೇಳಿದ್ದು ಅಧ್ಯಾತ್ಮ ಮತ್ತು ಭಗವಂತನ ಬಗ್ಗೆ ತಿಳಿಸುವ ಐಶ್ವರ್ಯಯುಕ್ತ ಶಾಸ್ತ್ರ. ಹಂಸವು ಹಾಲು, ನೀರುಗಳನ್ನು ಬೇರೆಯಾಗಿ ತಿಳಿಯುವಂತೆ, ಈ ಸಚ್ಛಾಸ್ತ್ರಗಳು ಆಧ್ಯಾತ್ಮಿಕ ಪ್ರಗತಿಗೆ ಉಪಯುಕ್ತವಾದುದನ್ನು ಅನುಪಯುಕ್ತ ಕಾರ್ಯಗಳಿಂದ ಬೇರ್ಪಡಿಸಿ ತಿಳಿಯುತ್ತದೆ. ಮೂರ್ಖನಾದವನು ಇಂಥ ಸಚ್ಛಾಸ್ತ್ರಗಳ ಪಠಣವನ್ನು ಬಿಟ್ಟು ಬರಿದೇ ಅಸತ್ಕರ್ಮಗಳಲ್ಲಿ ತೊಡಗಿದರೆ ಏನು ಪ್ರಯೋಜನ?

ತೀಕ್ಷ್ಣವಾದ ಅಲಗುಗಳುಳ್ಳ ಚಕ್ರವೆಂದರೆ, ಕಾಲಚಕ್ರವೇ ಆಗಿದೆ! ಸ್ವತಂತ್ರವಾಗಿರುವ ಈ ಕಾಲಚಕ್ರವು ಇಡೀ ಜಗತ್ತನ್ನು ನಡೆಸುತ್ತಿದೆ! ಸನಾತನವಾದ ಈ ಕಾಲಚಕ್ರದಲ್ಲಿ ಪ್ರತಿಯೊಬ್ಬರ ಆಯುಷ್ಯವೂ ಅತ್ಯಲ್ಪವಾಗಿರುವಾಗ, ಆ ಅಮೂಲ್ಯ ಆಯುಸ್ಸನ್ನು ಆಧ್ಯಾತ್ಮಿಕ ಪ್ರಗತಿಗೆ ಬಳಸದೇ ಎಲ್ಲರೂ ತಾವು ಶಾಶ್ವತವೆಂದು ಭಾವಿಸಿ ಬರಿದೇ ಅಸತ್ಕರ್ಮಗಳಲ್ಲಿ ತೊಡಗಿದರೇನು ಪ್ರಯೋಜನ?

ತಂದೆಯ ನಿಜಾದೇಶವನ್ನು ಅರಿತಿಲ್ಲವೆಂದರೇನು? ಇಲ್ಲಿ ತಂದೆಯೆಂದರೆ ಭೌತಿಕ ಜನ್ಮಕ್ಕೆ ಕಾರಣನಾದ ತಂದೆಯಲ್ಲ. ಉಪನಯನದ ಮೂಲಕ ಎರಡನೆಯ ಜನ್ಮಕ್ಕೆ ಕಾರಣವಾಗುವ (ವ್ಯಕ್ತಿಗೆ ಹುಟ್ಟಿರುವ ಜನ್ಮ ಒಂದಾದರೆ, ಆಧ್ಯಾತ್ಮಿಕ ಜೀವನಕ್ಕೆ ಕಾಲಿಡಲು ಮಾಡುವ ಉಪನಯನ ಎರಡನೆಯ ಜನ್ಮ ನೀಡುತ್ತದೆ. ಆಗ ಗಾಯಿತ್ರೀ ಮಂತ್ರವೇ ತಾಯಿ ಮತ್ತು ವೈದಿಕ ಸಾಹಿತ್ಯವೇ ತಂದೆ. ಹೀಗಾಗಿ ಅಂಥ ವ್ಯಕ್ತಿಗೆ ದ್ವಿಜ ಎನ್ನುತ್ತಾರೆ) ಶಾಸ್ತ್ರವೇ ನಿಜವಾದ ತಂದೆ! ಆದ್ದರಿಂದ ಇಲ್ಲಿ ತಂದೆಯ ನಿಜ ಆದೇಶವನ್ನು ಅರ್ಥಮಾಡಿಕೊಂಡಿಲ್ಲವೆಂದರೆ, ನಿಜತಂದೆಯಾದ ಶಾಸ್ತ್ರದ ಆದೇಶವಾದ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬೇಕೆಂಬ ಮಾತನ್ನು ಅರಿತಿಲ್ಲವೆಂದರ್ಥ!

ನಾರದರ ಕೂಟೋಕ್ತಿಗಳನ್ನು ಹೀಗೆ ಅರ್ಥೈಸಿಕೊಂಡ ಹರ್ಯಶ್ವರು ಎಲ್ಲರೂ ಒಂದೇ ನಿರ್ಧಾರಕ್ಕೆ ಬಂದು ಅವರಿಗೆ ಪ್ರದಕ್ಷಿಣೆ ನಮಸ್ಕಾರಗಳನ್ನರ್ಪಿಸಿ, ಪುನಃ ಭವಕ್ಕೆ ಬಾರದಂಥ ಮುಕ್ತಿಮಾರ್ಗವನ್ನು ಹಿಡಿದು ಹೊರಟುಹೋದರು! ನಾರದರು ತಮ್ಮ ದಿವ್ಯವೀಣೆಯನ್ನು ಮೀಟುತ್ತಾ ಸ್ವರಬ್ರಹ್ಮನೇ ಆದ ಶ್ರೀಕೃಷ್ಣನ ಪಾದಾರವಿಂದಗಳಲ್ಲಿ ಮನಸ್ಸನ್ನು ನೆಟ್ಟು ಲೋಕಸಂಚಾರಕ್ಕೆ ತೊಡಗಿದರು.

* * *

“ಹರ್ಯಶ್ವರು ಅರಣ್ಯ ವಾಸಿಗಳಾದರು!”

ಸಿಡಿಲಿನ ಹೊಡೆತಕ್ಕೆ ಸಿಕ್ಕಿ ನೆಲಕಚ್ಚುವ ಮರದಂತೆ ಈ ಅಪ್ರಿಯವಾರ್ತೆಯನ್ನು ಕೇಳಿ ಕುಳಿತಲ್ಲೇ ಕುಸಿದನು ದಕ್ಷ!

“ಅದು ಹೇಗೆ? ನನ್ನ ಮಕ್ಕಳು … ಶ್ರೇಷ್ಠ ಪುತ್ರರಾಗಿದ್ದರು … ಅವರಿಗೇನಾಯಿತು?” ದಕ್ಷನು ಗದ್ಗದಿತ ಸ್ವರದಿಂದ ಶೋಕಾಕುಲನಾಗಿ ಕೇಳಿದ!

“ಪ್ರಭು!” ದೂತನು ಹೇಳಿದ, “ನಿಮ್ಮ ಪುತ್ರರೇನೋ ನೀವು ಹೇಳಿದಂತೆ ಪ್ರಜಾಸೃಷ್ಟಿ ಮಾಡಲೆಂದೇ ತಪಸ್ಸನ್ನಾಚರಿಸುತ್ತಿದ್ದರು. ಆದರೆ ನಾರದರು ಬಂದು….. ಅವರೆಲ್ಲರಿಗೂ ವೈರಾಗ್ಯ ಬೋಧನೆ ಮಾಡಿಬಿಟ್ಟರು! ಅನಂತರ ನಿಮ್ಮ, ಪುತ್ರರೆಲ್ಲರೂ ಅವಧೂತರಾಗಿ ಹೊರಟುಹೋದರು! ಈ ವಿಚಾರ ನಾರಾಯಣ ಸರಸ್ಸಿನಿಂದ ಬಂದಿತು. ಇದನ್ನು ಕೇಳಿ ಮಂತ್ರಿಗಳು ಅವರನ್ನು ಎಲ್ಲೆಡೆ ಹುಡುಕಿಸಿದರು…. ಆದರೆ ಅವರು ಎಲ್ಲಿಯೂ ಕಾಣಸಿಗಲಿಲ್ಲ!”

“ಅಯ್ಯೊಯ್ಯೋ…. ನಿಜವೇ?!” ದಕ್ಷನು ಕಂಗಳಲ್ಲಿ ಕಂಬನಿ ತುಂಬಿಕೊಂಡು ಕೇಳಿದನು.

“ನಿಜ ಮಹಾರಾಜ!” ಮಂತ್ರಿಗಳೇ ಆಗಮಿಸಿ ಹೇಳಿದರು.

ಪುತ್ರರ ಮೇಲೆ ಬಹಳ ಆಸೆಯಿಟ್ಟುಕೊಂಡಿದ್ದ ದಕ್ಷನು ರೋದಿಸತೊಡಗಿದನು. ಅವನ ದುಃಖಕ್ಕೆ ಸಮಾಧಾನ ಹೇಳುವವರಾದರೂ ಯಾರು?!

ದಿನೇ ದಿನೇ ದಕ್ಷನ ಶೋಕವು ಹೆಚ್ಚಾಯಿತು! ಕಡೆಗೆ ಬ್ರಹ್ಮ ದೇವನೇ ಸತ್ಯಲೋಕದಿಂದಿಳಿದು ಬಂದು ಅವನನ್ನು ಸಮಾಧಾನ ಪಡಿಸಬೇಕಾಯಿತು!

ದಕ್ಷನು ಪುನಃ ಅಸಿಕ್ನಿಯ ಗರ್ಭದಲ್ಲಿ ಒಂದು ಸಾವಿರ ಪುತ್ರರನ್ನು ಪಡೆದನು. ಇವರಿಗೆ ಸವಲಾಶ್ವರೆಂದು ಹೆಸರಾಯಿತು. ಇವರಿಗೂ ದಕ್ಷನು ಪ್ರಜಾಸೃಷ್ಟಿ ಮಾಡಲು ಆಜ್ಞಾಪಿಸಲು, ಅವರೂ ತಮ್ಮ ಅಣ್ಣಂದಿರಂತೆ ನಾರಾಯಣ ಸರಸ್ಸಿಗೆ ಹೋಗಿ ತಪಶ್ಚರ್ಯೆಯಲ್ಲಿ ತೊಡಗಿದರು. ಅವರೂ ಆ ಸರಸ್ಸಿನ ಪುಣ್ಯಜಲದಲ್ಲಿ ಮಿಂದಕೂಡಲೇ ಪಾಪಗಳನ್ನು ಕಳೆದುಕೊಂಡು ಪರಿಶುದ್ಧರಾದರು! ಓಂಕಾರದಿಂದಾರಂಭವಾಗುವ ಪವಿತ್ರ ಮಂತ್ರಗಳನ್ನುಚ್ಚರಿಸುತ್ತಾ ಜಲ, ವಾಯುಗಳನ್ನಷ್ಟೇ ಸೇವಿಸುತ್ತಾ ಉಗ್ರತಪಸ್ಸಿಗೆ ತೊಡಗಿದರು.

ಪರಿಶುದ್ಧ ಮನಸ್ಕರಾದ ಈ ಸವಲಾಶ್ವರಿಗೂ ಮುಕ್ತಿಮಾರ್ಗವನ್ನು ತೋರಬೇಕೆಂಬ ಆಸೆಯಾಯಿತು ನಾರದರಿಗೆ; ಅವರು ಅದಕ್ಕೆ ತಕ್ಕವರೇ ಆಗಿದ್ದರು ಕೂಡ! ಅವರ ಬಳಿ ಹೋಗಿ, ಹರ್ಯಶ್ವರಿಗೆ ಹೇಳಿದ್ದ ಕೂಟೋಕ್ತಿಗಳನ್ನೇ ಹೇಳಿದರು.

ಸವಲಾಶ್ವರೂ ಆ ಕೂಟೋಕ್ತಿಗಳನ್ನು ವಿಮರ್ಶಿಸಿ ಅರ್ಥಮಾಡಿಕೊಂಡರು. ಆಗ ನಾರದರು ಹೇಳಿದರು, “ದಕ್ಷಪುತ್ರರೇ! ನನ್ನ ಮಾತನ್ನು ಸ್ವಲ್ಪ ಗಮನವಿಟ್ಟು ಕೇಳಿ! ನೀವೆಲ್ಲರೂ ಭ್ರಾತೃವತ್ಸಲರಾದುದರಿಂದ, ನಿಮ್ಮ ಅಣ್ಣಂದಿರು ತುಳಿದ ಹಾದಿಯನ್ನೇ ನೀವೂ ತುಳಿಯಬೇಕು! ಅವರು ಅನುಸರಿಸಿದ ಮಾರ್ಗವನ್ನೇ ನೀವೂ ಅನುಸರಿಸಬೇಕು. ಧರ್ಮವಿದರು ಹೀಗೆಯೇ ಮಾಡುವರು! ಹೀಗೆ ತಮ್ಮ ಅಣ್ಣಂದಿರನ್ನು ಅನುಸರಿಸುವ ಸಹೋದರರು ಮಹತ್ಪುಣ್ಯವನ್ನು ಸಂಪಾದಿಸಿ ಸ್ವರ್ಗಲೋಕದಲ್ಲಿ ಮರುದ್ಗಣಗಳೊಂದಿಗೆ ಸುಖಿಸುವರು!”

ಹೀಗೆ ಹೇಳಿ ನಾರದರು ತೆರಳಲು, ಸವಲಾಶ್ವರು ಅವರ ಮಾತಿನಂತೆ, ತಾವೂ ತಮ್ಮ ಅಣ್ಣಂದಿರಂತೆ ಮುಕ್ತಿಮಾರ್ಗ ಹಿಡಿದರು! ನಾರದರ ದರ್ಶನ, ವ್ಯರ್ಥವಾಗುವುದಿಲ್ಲವಷ್ಟೇ?!

ಈ ಹೊತ್ತಿನಲ್ಲಿ ದಕ್ಷನಿಗೆ ಅನೇಕ ಅಪಶಕುನಗಳಾಗತೊಡಗಿದವು! ಈ ಅಪಶಕುನಗಳ ಹಿಂದೆ ಯಾವ ವಿಪತ್ತು ಕಾದಿರಬಹುದೆಂದು ದಕ್ಷ ವಿಸ್ಮಿತನಾದನು. ಅಷ್ಟರಲ್ಲಿ ಅವನ ಕರ್ಣಗಳಿಗೆ ಕಠೋರಪ್ರಾಯವಾದ ಸುದ್ಧಿಯು ಹಿಂದೆ ಬಂದಂತೆಯೇ ಪುನಃ ಬಂದು ಅಪ್ಪಳಿಸಿತು! ಸವಲಾಶ್ವರರೂ ಪರಮಹಂಸ ಮಾರ್ಗವನ್ನು ತುಳಿದರು ಎಂಬ ಆ ಸುದ್ದಿಯನ್ನು ಕೇಳಿ ಅವನು ಮೂರ್ಛೆ ತಾಳಿದನು.

ಪುತ್ರಶೋಕವೆಂಬುದು ಸಾಮಾನ್ಯವೇ? ದಕ್ಷನನ್ನು ಕಿತ್ತು ತಿಂದಿತು! ಪುತ್ರರ ಮೇಲೆ ಅತಿಯಾದ ವ್ಯಾಮೋಹವಿಟ್ಟುಕೊಂಡಿದ್ದನು ಅವನು! ಈಗ ಅದು ನಾರದರ ಮೇಲಿನ ಕೋಪವಾಗಿ ಪರಿಣಮಿಸಿತು!

“ಆ ಬಡಜೋಗಿ ನಾರದ….! ಅಂತೂ ಕಲಹಪ್ರಿಯನೆಂಬ ತನ್ನ ಹೆಸರನ್ನು ಸಾರ್ಥಕ ಪಡಿಸಿಕೊಂಡ! ನಾನೇನು ದ್ರೋಹ ಮಾಡಿದ್ದೆ ಅವನಿಗೆ? ನನ್ನ ಪುತ್ರರಾದರೂ ಅವನಿಗೇನು ಅನ್ಯಾಯ ಮಾಡಿದ್ದರು? ಹುಟ್ಟಿದ ಪ್ರತಿಯೊಬ್ಬರಿಗೂ ಸುಖಾಪೇಕ್ಷೆಯಿರುವುದು ಸಹಜವೇ! ಪ್ರಕೃತಿ ಸಹಜವಾದ ಆ ಸುಖಾನುಭವವನ್ನು ತಪ್ಪಿಸಲು ಇವನಾರು? ಕೆಲಸಕಾರ್ಯವಿಲ್ಲದ ಇವನು ತರ್ಕಕುತರ್ಕಗಳ ಬಣ್ಣಬಣ್ಣದ ಮಾತುಗಳಿಂದ ನನ್ನ ಮಕ್ಕಳ ಅರಿಯದ ಮುಗ್ಧ ಮನಸ್ಸುಗಳನ್ನು ಕೆಡಿಸಿ ಸ್ವಾರ್ಥ ಸಾಧಿಸಿಕೊಂಡ! ಒಬ್ಬರ ಮನೆಯನ್ನು ಹಾಳುಗೆಡವದಿದ್ದರೆ ಇವನಿಗೆ ಸಮಾಧಾನವೇ ಇಲ್ಲವೇನೋ….!”

ಚಂಡಮಾರುತಕ್ಕೆ ಸಿಕ್ಕಿ ತೊಯ್ದಾಡುವ ಧ್ವಜದಂತೆ, ದಕ್ಷನ ಮನಸ್ಸು ಪುತ್ರಶೋಕವೆಂಬ ಬಿರುಗಾಳಿಗೆ ಸಿಕ್ಕಿ ತೀವ್ರ ಆಂದೋಳನಕ್ಕೊಳಗಾಗಿತ್ತು! ತಾನೇನು ಯೋಚಿಸುತ್ತಿದ್ದೇನೆಂದು ಅವನಿಗೆ ತಿಳಿಯದಂತಾಯಿತು! ಅವನಿಗೆ ಭೌತಿಕವಾಗಿ ಪುತ್ರರು ಇಲ್ಲದಂತಾಗಿದ್ದರೂ ನಾರದರಿಂದ ಅವರಿಗೆ ಪರಮಲಾಭವಾಗಿತ್ತೆಂಬುದನ್ನು ಅವನು ಮನಗಾಣದಂತಾದನು! ಜನ್ಮಜನ್ಮಗಳ ತಪಸ್ಸಿನಿಂದಲೂ ದುರ್ಲಭವಾದ ಮುಕ್ತಿಯು, ಪರಮ ಭಾಗವತರಾದ ನಾರದರ ದಿವ್ಯದರ್ಶನದಿಂದ ಅವನ ಪುತ್ರರಿಗೆ ಲಭಿಸಿತ್ತು! ಎಷ್ಟು ಅನುಭವಿಸಿದರೂ ಕೊರತೆಯೇ ಕಾಣುವ ಸಂಸಾರ ಸುಖದ ಮುಂದೆ, ಪರಮಶಾಂತಿಯನ್ನು ನೀಡುವ ಅಖಂಡ ಬ್ರಹ್ಮಾನಂದದ ಸರ್ವಶ್ರೇಷ್ಠತೆಯನ್ನೂ ಅದನ್ನು ಪಡೆದ ತನ್ನ ಪುತ್ರರ ಭಾಗ್ಯವೆಷ್ಟೆಂಬುದನ್ನೂ ಅವನು ಅರಿಯಲಾರದಾದನು!

ಹುಲ್ಲಿನ ಮೆದೆಗೆ ಬಿದ್ದ ಬೆಂಕಿಯ ಕಿಡಿ, ಅದನ್ನು ಸುಟ್ಟು ಭಸ್ಮ ಮಾಡುವವರೆಗೂ ಧಗಧಗಿಸಿ ಉರಿಯುವುದೇ ಹೊರತು, ಆರಿ ನಂದಿಹೋಗದು! ಅಂತೆಯೇ ನಾರದರ ಮೇಲೆ ಕಿಡಿಕಾರುತ್ತಿದ್ದ ದಕ್ಷನ ಕೋಪಾಗ್ನಿ, ಅವರನ್ನೇ ಕಂಡು ನಿಂದಿಸಿದ ಹೊರತು, ಆರದಂತಾಯಿತು!

ದಕ್ಷ, ತಾನೇ ನಾರದರನ್ನು ಭೇಟಿಯಾದನು!

“ಎಲೈ ನಾರದ!” ಕ್ರೋಧದಿಂದ ಅಧರಗಳು ಅದುರುತ್ತಿರಲು ದಕ್ಷನು ಅಬ್ಬರಿಸಿದ, “ಆಹಾ! ಸಾಧುವಿನ ವೇಷವನ್ನು ಧರಿಸಿರುವ ನೀನು ನಮ್ಮಂಥ ಸಾಧುಗಳ ಮಧ್ಯೆ ಸಂಚರಿಸುತ್ತಿರುವ ಅಸಾಧುವೇ ಆಗಿರುವೆ! ಏನೂ ಅರಿಯದ ನನ್ನ ಮುಗ್ಧ ಮಕ್ಕಳಿಗೆ ಭಿಕ್ಷುಗಳ ಮಾರ್ಗ ತೋರಿದೆಯಲ್ಲಾ….? ಇದರಿಂದ ನೀನು ನನ್ನ ವಿಷಯದಲ್ಲಿ ಮಹಾ ಅಪಕಾರವನ್ನೇ ಮಾಡಿದ್ದೀಯೆ! ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬನೂ ದೇವಋಣ, ಋಷಿಋಣ, ಪಿತೃಋಣಗಳೆಂಬ ಮೂರು ಋಣಗಳಿಂದ ಬದ್ಧನಾಗಿರುತ್ತಾನೆ! ಆ ಋಣಗಳಿಂದ ಮುಕ್ತರಾಗದ ನನ್ನ ಮಕ್ಕಳಿಗೆ ಶ್ರೇಯಸ್ಸಿನ ಮಾರ್ಗವನ್ನು ತಪ್ಪಿಸಿ ಇಹ, ಪರಗಳೆರಡರ ಸುಖವನ್ನೂ, ತಪ್ಪಿಸಿದ ಪಾಪಿ ನೀನು! ಕರುಣೆಯಿಲ್ಲದೇ ಆ ಬಾಲಕರ ಮತಿಭ್ರಂಶ ಮಾಡಿದ ನೀನು, ನಾಚಿಕೆಯಿಲ್ಲದೇ ಶ್ರೀಹರಿಯ ಪಾರ್ಷದರೊಂದಿಗೇ ಇರುತ್ತಾ ಅವನ ಯಶಸ್ಸನ್ನೂ ನಾಶಪಡಿಸುತ್ತಿರುವೆ! ಭಗವಂತನ ಭಕ್ತರು ಸಕಲ ಜೀವಿಗಳಿಗೂ ಉಪಕಾರ ಮಾಡಲು ಕಾತರರಾಗಿರುತ್ತಾರೆ! ಆದರೆ ನಿನ್ನೊಬ್ಬನನ್ನು ಬಿಟ್ಟು ….. ನೀನಾದರೋ, ಸ್ನೇಹಿತರ ನಡುವಿನ ಸ್ನೇಹವನ್ನು ಒಡೆದು, ವೈರವಿಲ್ಲದವರಲ್ಲೂ ವೈರತ್ವ ಹುಟ್ಟಿಸುವ ಕಲಹಪ್ರಿಯನಾಗಿರುವೆ!”

“ಪ್ರಾಚೇತಸ …..” ನಾರದರು ಪ್ರೀತಿಯಿಂದ ಏನೋ ಹೇಳಹೊರಟರು.

“ನೀನೇನೂ ಹೇಳಬೇಕಿಲ್ಲ!” ದಕ್ಷನು ನಾರದರಿಗೆ ಮಾತಾಡಲು ಅವಕಾಶವನ್ನೇ ಕೊಡದೇ, ಕೆಂಡಾಮಂಡಲವಾಗಿ ಖಂಡಿಸತೊಡಗಿದ, “ಈ ರೀತಿ ಸುಮ್ಮನೆ ವೇಷ ಬದಲಿಸುವುದರಿಂದ ಜನರಿಗೆ ವೈರಾಗ್ಯ ಬಂದುಬಿಡುವುದಿಲ್ಲ! ವಿಷಯಗಳನ್ನು ಸ್ವಯಂ ಅನುಭವಿಸಿದ ಹೊರತು ಮನುಷ್ಯನಿಗೆ ಅವುಗಳ ತೀಕ್ಷ್ಣತೆಯ ಅರಿವಾಗುವುದಿಲ್ಲ! ತಾನಾಗಿಯೇ ಅವುಗಳನ್ನು ಅನುಭವಿಸಿದ ಬಳಿಕ ಉಂಟಾಗುವ ವಿರಕ್ತಿ, ಬರಿದೇ ಇತರರ ಉಪದೇಶದಿಂದ ಉಂಟಾಗುವುದಿಲ್ಲ! ಅದು ತೋರಿಕೆಯ ವೈರಾಗ್ಯವಷ್ಟೇ ಆಗಿರಬಹುದು! ಎಲೈ ನಾರದ, ನಾವಾದರೋ, ಹೆಂಡಿರು ಮಕ್ಕಳೊಡನಿದ್ದು ಸಂಸಾರಿಗಳಾಗಿದ್ದರೂ, ವೈದಿಕ ಧರ್ಮಗಳನ್ನು ನೇಮನಿಷ್ಠೆಗಳಿಂದ ಪಾಲಿಸುವ ಸಾಧು ಗೃಹಸ್ಥರೇ ಆಗಿದ್ದೇವೆ! ಆದರೆ ಅಂಥ ನನಗೆ ನಿನ್ನಿಂದ ಸಹಿಸಲಾರದ ದುಷ್ಕಾರ್ಯವಾಗಿದೆ! ಈ ಹಿಂದೆಯೂ ನೀನು ಹೀಗೆಯೇ ಮಾಡಿದ್ದೆ! ಆಗ ನಾನು ಹೇಗೋ ಸಹಿಸಿಕೊಂಡು ಸುಮ್ಮನಾದೆ! ಆದರೆ ಪದೇ ಪದೇ ಅಂಥದ್ದೇ ತಪ್ಪು ಮಾಡುತ್ತಿರುವ ನಿನಗೆ ಸದಾಚಾರವೇ ತಿಳಿದಿಲ್ಲ! ಇನ್ನು ನಾನು ತಾಳಲಾರೆ! ಹೀಗೆ ಸಂಚರಿಸುತ್ತಿರುವ ನೀನು ಸದಾ ಅಲೆಮಾರಿಯಾಗಿರು! ನಿನಗೆ ಎಲ್ಲಿಯೂ ಒಂದು ನೆಲೆಯಿಲ್ಲದಂತಾಗಲಿ! ಇದು ನನ್ನ ಶಾಪ!!”

ದಕ್ಷನು ಹೀಗೆ ಶಪಿಸಿ, ಕೋಪದಲ್ಲಿ ಹೊರಟೇ ಹೋದನು!

ಪರಮ ವೈಷ್ಣವರಾದ ನಾರದಮುನಿಗಳು ಮುಗುಳ್ನಕ್ಕು, `ಹಾಗೇ ಆಗಲಿ!’ ಎಂದು ಆ ಶಾಪವನ್ನು ಸ್ವೀಕರಿಸಿದರು!

ದಕ್ಷನು ಹೇಳಿದುದು ನಿಜವಾಗಿತ್ತಾದರೂ, ಅದು ಸಂಸಾರ ಸುಖಾಪೇಕ್ಷಿಗಳಾದ ಸಾಮಾನ್ಯ ಜನರಿಗೆ ಅನ್ವಯಿಸುವುದಾಗಿತ್ತೇ ಹೊರತು, ಪಾರಮಹಂಸ್ಯ ಧರ್ಮದಲ್ಲಿ ಆಸಕ್ತಿ ಹೊಂದಿದ್ದ ದಕ್ಷಪುತ್ರರಿಗಲ್ಲ. ಭೂಪ್ರದೇಶವು ಸೂಕ್ತವಾಗಿದ್ದರೆ, ಅಲ್ಲಿ ಬಿತ್ತಿದ ಬೀಜವು ಮೊಳೆತು ಬೆಳೆಯುತ್ತದೆ; ಅಂತೆಯೇ ಸಂಸ್ಕಾರವಿರುವವರ ಮನಸ್ಸಿಗೆ ಸದುಪದೇಶವು ನಾಟುತ್ತದೆಯೇ ಹೊರತು, ಅನ್ಯರ ಮನಸ್ಸಿಗಲ್ಲ! ನಾರದರಿಗೆ ಇದು ತಿಳಿದಿತ್ತಾದ್ದರಿಂದಲೇ, ದಕ್ಷಪುತ್ರರನ್ನು ಸಂಸಾರಚಕ್ರದಿಂದ ಬಿಡಿಸಲು ಆ ರೀತಿ ಉಪದೇಶ ಮಾಡಿದರು. ಆದರೆ ಅವರಿಗೆ ಸಿಕ್ಕ ಪ್ರತಿಫಲ? ನಿಂದನೆ ಮತ್ತು ಶಾಪ! ಆದರೆ ಸಾಧುವರೇಣ್ಯರಾದ ಅವರು ಕೋಪ ಮಾಡಿಕೊಳ್ಳಲಿಲ್ಲ; ಪ್ರತಿಶಾಪ ಕೊಡಬಹುದಿತ್ತಾದರೂ ಅವರು ಹಾಗೆ ಮಾಡಲಿಲ್ಲ. ಪುತ್ರಶೋಕದಿಂದ ನೊಂದ ದಕ್ಷನು ಕೋಪದಲ್ಲಿ ಹಾಗೆ ಮಾತನಾಡುತ್ತಿದ್ದನೆಂದು ತಿಳಿದೇ ಅವರು ಅವನು ಅಷ್ಟು ಮಾತನಾಡಲು ಅವಕಾಶಕೊಟ್ಟು ಅವನ ಕೋಪ ಕರಗಲು ಅನುವು ಮಾಡಿಕೊಟ್ಟರು. ಅವನ ಶಾಪವನ್ನು ವರವೆಂಬಂತೆ ಸ್ವೀಕರಿಸಿದರು!

ಭಕ್ತರನ್ನು ಉದ್ಧರಿಸುವ, ಲೋಕಕಲ್ಯಾಣವನ್ನೇ ಸದಾ ಬಯಸುವ ನಾರದರಿಗೆ ಈ ಶಾಪ ಒಂದು ವರವೇ ಆದಂತಾಗಲಿಲ್ಲವೇ? ಸದಾ ತ್ರಿಲೋಕ ಸಂಚಾರ ಮಾಡುತ್ತಾ ವಿಶೇಷಗಳನ್ನು ನೋಡುತ್ತಾ, ಭಕ್ತರ ಉದ್ಧಾರ ಮಾಡಲು ಸಹಾಯ ಮಾಡಿದಂತಾಯಿತಲ್ಲವೇ?!

ನಾರದರು ತಮ್ಮ ಮಹತೀ ವೀಣೆಯನ್ನು ಮೀಟುತ್ತಾ, ಸೂತ್ರಧಾರನ ಸೂತ್ರದ ಬೊಂಬೆ ತಾವೆಂಬ ಭಾವನೆಯಲ್ಲಿ ತಲೆಯಲ್ಲಾಡಿಸಿ, ಆ ಸರ್ವದೇವೋತ್ತಮ ಪುರುಷನ ದಿವ್ಯಮಂಗಳ ನಾಮಗಳನ್ನುಚ್ಚರಿಸುತ್ತಾ ಮುನ್ನಡೆದರು!

“ನಾರಾಯಣ! ನಾರಾಯಣ!”

ಈ ಲೇಖನ ಶೇರ್ ಮಾಡಿ