ದೇವರನ್ನು ಕುರಿತು ಒಂದು ವ್ಯಾಖ್ಯೆ

ಮೂಲ : ಶ್ರೀಲ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

ದೇವರನ್ನು ಕುರಿತ ಆಧುನಿಕ ಮಾನವನ ಕಲ್ಪನೆಗಳು ಅನೇಕ ಹಾಗೂ ವೈವಿಧ್ಯಮಯ. ಮಕ್ಕಳು ಅವನೊಬ್ಬ ಬಿಳಿಯ ಗಡ್ಡದ ಮುದುಕನೆಂದು ಭಾವಿಸುತ್ತಾರೆ.

ದೊಡ್ಡವರು ಅನೇಕರು ಅವನೊಬ್ಬ ಅದೃಶ್ಯ ಶಕ್ತಿ ಅಥವಾ ಮನಸ್ಸಿನ ಒಂದು ಕಲ್ಪನೆ ಅಥವಾ ಇಡೀ ಮಾನವ ಜನಾಂಗ, ವಿಶ್ವ ಅಥವಾ ತಾನೇ ಎಂದು ಭಾವಿಸುತ್ತಾರೆ. ಈ ಉಪನ್ಯಾಸದಲ್ಲಿ ಶ್ರೀಲ ಪ್ರಭುಪಾದರು ಆಶ್ಚರ್ಯಕರವಾದ ರೀತಿಯಲ್ಲಿ ದೇವರ ನಿಕಟ ನೋಟವನ್ನು ನೀಡುತ್ತಾ ಕೃಷ್ಣ ಪ್ರಜ್ಞೆಯ ಕಲ್ಪನೆಯನ್ನು ವಿವರವಾಗಿ ವರ್ಣಿಸುತ್ತಾರೆ.

ಮಹಿಳೆಯರೇ ಮತ್ತು ಮಹನೀಯರೇ,

ಈ ಕೃಷ್ಣ ಪ್ರಜ್ಞಾ ಆಂದೋಲನದಲ್ಲಿ ಭಾಗವಹಿಸುತ್ತಿರುವ ನಿಮಗೆಲ್ಲಾ ನನ್ನ ಧನ್ಯವಾದಗಳು. 1966ರಲ್ಲಿ ನ್ಯೂಯಾರ್ಕಿನಲ್ಲಿ ಈ ಸಂಘವನ್ನು ನೋಂದಾಯಿಸಿದಾಗ, ಇದನ್ನು ದೈವಪ್ರಜ್ಞಾ ಸಂಘವೆಂದು ಕರೆಯಬೇಕೆಂದು ಮಿತ್ರರೊಬ್ಬರು ಸಲಹೆ ಮಾಡಿದ್ದರು. ಕೃಷ್ಣ ಎಂಬ ಹೆಸರು ಮತೀಯವಾಗುತ್ತದೆಂದು ಅವರು ಭಾವಿಸಿದಂತಿತ್ತು.

ನಿಘಂಟಿನಲ್ಲೂ ಕೂಡ ಕೃಷ್ಣ ಎಂದರೆ ಒಬ್ಬ ಹಿಂದೂ ದೇವರು ಎಂದು ಹೇಳಲಾಗಿದೆ. ಆದರೆ ದಿಟವಾಗಿ, ದೇವರಿಗೆ ಯಾವುದಾದರೂ ಒಂದು ಹೆಸರು ಕೊಡುವುದಾದರೆ ಅದು “ಕೃಷ್ಣ” ಎನ್ನುವುದೇ ಆಗಿದೆ.

ವಾಸ್ತವವಾಗಿ ದೇವರಿಗೆ ಯಾವ ನಿರ್ದಿಷ್ಟ ಹೆಸರೂ ಇಲ್ಲ. ಅವನಿಗೆ ಹೆಸರಿಲ್ಲ ಎಂದು ಹೇಳಿದರೆ, ಅವನಿಗೆ ಎಷ್ಟು ಹೆಸರುಗಳಿವೆ ಎಂದು ಯಾರಿಗೂ ತಿಳಿದಿಲ್ಲವೆಂದೇ ಅರ್ಥ. ದೇವರು ಅನಂತವಾಗಿರುವುದರಿಂದ ಅವನ ಹೆಸರುಗಳು ಕೂಡ ಆನಂತವಾಗಿರಬೇಕು. ಆದುದರಿಂದ ನಾವು ಒಂದೇ ಹೆಸರನ್ನು ನಿಷ್ಕರ್ಷೆ ಮಾಡುವಂತಿಲ್ಲ.

ಉದಾಹರಣೆಗೆ ಕೃಷ್ಣನನ್ನು ಕೆಲವು ಸಲ ಯಶೋದಾನಂದನ ಅಥವಾ ದೇವಕೀನಂದನ ಅಥವಾ ವಸುದೇವನಂದನ ಅಥವಾ ನಂದನಂದನ ಎಂದು ಕರೆಯುತ್ತಾರೆ. ಕೆಲವು ಸಲ ಅವನನ್ನು ಪಾರ್ಥಸಾರಥಿ (ಪೃಥೆಯ ಮಗನಾದ ಅರ್ಜುನನ ರಥದ ಸಾರಥಿ) ಎಂದು ಕರೆಯುವುದುಂಟು.

ದೇವರು ತನ್ನ ಅನೇಕ ಭಕ್ತರೊಡನೆ ಆನೇಕ ಬಗೆಯಲ್ಲಿ ವ್ಯವಹರಿಸುತ್ತಾನೆ. ಆ ಲೀಲೆಗಳಿಗೆ ಅನುಗುಣವಾಗಿ ಅವನಿಗೆ ಕೆಲವು ನಿರ್ದಿಷ್ಟ ಹೆಸರುಗಳು ಬಂದಿವೆ. ಅವನ ಭಕ್ತರು ಅಸಂಖ್ಯ. ಅವರೊಡನೆ ಅವನ ಸಂಬಂಧಗಳೂ ಅಸಂಖ್ಯ. ಆದುದರಿಂದ ಅವನಿಗೆ ಅಸಂಖ್ಯ ಹೆಸರುಗಳು ಬಂದಿವೆ. ನಾವು ಯಾವುದಾದರೂ ಒಂದೇ ಹೆಸರನ್ನು ಪಟ್ಟು ಹಿಡಿಯುವಂತಿಲ್ಲ.

ಆದರೆ ಕೃಷ್ಣ ಎಂಬ ಹೆಸರಿನ ಅರ್ಥ “ಸರ್ವಾಕರ್ಷಕ.” ದೇವರು ಪ್ರತಿಯೊಬ್ಬರನ್ನೂ ಆಕರ್ಷಿಸುತ್ತಾನೆ. ಅದೇ ದೇವರು ಎನ್ನುವ ಪದದ ವ್ಯಾಖ್ಯೆ. ನಾವು ಕೃಷ್ಣನ ಅನೇಕ ಚಿತ್ರಗಳನ್ನು ನೋಡಿದ್ದೇವೆ. ಅವನು ಗೋವುಗಳನ್ನೂ, ಕರುಗಳನ್ನೂ, ಪಕ್ಷಿಗಳನ್ನೂ, ಪಶುಗಳನ್ನೂ, ಮರಗಳನ್ನೂ, ಗಿಡಗಳನ್ನೂ ಅಷ್ಟೇಕ ವೃಂದಾವನದ ನೀರನ್ನೂ ಕೂಡ ಆಕರ್ಷಿಸುತ್ತಾನೆ.

ಅವನ ಗೋಪ ಬಾಲಕರಿಗೂ ಗೋಪಿಯರಿಗೂ, ನಂದ ಮಹಾರಾಜನಿಗೂ, ಪಾಂಡವರಿಗೂ ಮತ್ತು ಸಮಸ್ತ ಮಾನವ ಕುಲಕ್ಕೂ ಮೋಹಕನಾಗಿದ್ದಾನೆ. ಆದುದರಿಂದ ದೇವರಿಗೆ ಯಾವುದಾದರೂ ನಿರ್ದಿಷ್ಟ ಹೆಸರನ್ನು ಕೊಡಬೇಕೆಂದರೆ ಅದು ‘ಕೃಷ್ಣ’ನ ಹೆಸರೇ ಆಗಿರುತ್ತದೆ.

ಸಕಲ ವೇದಗಳನ್ನೂ ಸಂಕಲಿಸಿದ ವೇದವ್ಯಾಸರ ತಂದೆಯಾದ ಪರಾಶರ ಮುನಿಗಳು ದೇವರನ್ನು ಕುರಿತು ಕೆಳಕಂಡ ವ್ಯಾಖ್ಯೆಯನ್ನು ಕೊಟ್ಟಿದ್ದಾರೆ –

ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಃ ಪ್ರಿಯಃ |

ಜ್ಞಾನ ವೈರಾಗ್ಯಯೋಶ್ಚೈವ ಷಣ್ಣಾಮ್ ಭಗ ಇತೀಂಗನಾ || (ವಿಷ್ಣು ಪುರಾಣ 6.5.47)

ಪೂರ್ಣಶಕ್ತಿ, ಯಶಸ್ಸು, ಐಶ್ವರ್ಯ, ಜ್ಞಾನ, ಸೌಂದರ್ಯ ಮತ್ತು ವೈರಾಗ್ಯ ಈ ಆರು ಐಶ್ವರ್ಯಗಳಿಂದ ಪೂರ್ಣನಾಗಿರುವವನು ದೇವೋತ್ತಮ ಪರಮ ಪುರುಷನಾದ ಭಗವಂತ ಎಂದು ಪರಾಶರ ಮುನಿಗಳು ವ್ಯಾಖ್ಯೆ ನೀಡಿದ್ದಾರೆ.

ದೇವೋತ್ತಮ ಪರಮ ಪುರುಷನಾದ ಭಗವಂತನು ಸಕಲ ಐಶ್ವರ್ಯಗಳ ಸ್ವಾಮಿಯಾಗಿದ್ದಾನೆ. ಪ್ರಪಂಚದಲ್ಲಿ ಅನೇಕ ಶ್ರೀಮಂತರಿದ್ದಾರೆ. ಆದರೆ ಎಲ್ಲ ಐಶ್ವರ್ಯವನ್ನೂ ಹೊಂದಿರುವೆನೆಂದು ಯಾರೂ ಹೆಗ್ಗಳಿಕೆ ಹೇಳಿಕೊಳ್ಳಲಾಗುವುದಿಲ್ಲ. ತನಗಿಂತ ಶ್ರೀಮಂತರು ಬೇರೆ ಯಾರೂ ಇಲ್ಲ ಎಂದು ಯಾರೂ ಹೇಳಿಕೊಳ್ಳಲಾಗುವುದಿಲ್ಲ.

ಆದರೆ ಕೃಷ್ಣನು ಈ ಭೂಲೋಕದಲ್ಲಿದ್ದಾಗ 16,108 ಪತ್ನಿಯರನ್ನು ಹೊಂದಿದ್ದನೆಂದೂ, ಅವರಲ್ಲಿ ಪ್ರತಿಯೊಬ್ಬಳೂ ರತ್ನಾಭರಣಭೂಷಿತಳಾಗಿ ಅಮೃತಶಿಲೆಯ ಅರಮನೆಯಲ್ಲಿ ವಾಸಿಸುತ್ತಿದ್ದಳೆಂದೂ ಶ್ರೀಮದ್ಭಾಗವತದಿಂದ ನಮಗೆ ತಿಳಿದುಬರುತ್ತದೆ. ದಂತ ಮತ್ತು ಚಿನ್ನದಿಂದ ನಿರ್ಮಿತವಾದ ಪೀಠೋಪಕರಣಗಳು ಕೋಣೆಗಳಲ್ಲಿ ಇಡುಕಿರಿದಿದ್ದವು.

ಎಲ್ಲೆಲ್ಲಿಯೂ ಸಂಪತ್ಸಮೃದ್ಧಿಯು ತುಂಬಿ ತುಳುಕುತ್ತಿತ್ತು. ಈ ವರ್ಣನೆಗಳನ್ನೆಲ್ಲಾ ಶ್ರೀಮದ್ಭಾಗವತದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಹದಿನಾರು ಸಾವಿರ ಪತ್ನಿಯರು ಅಥವಾ ಹದಿನಾರು ಸಾವಿರ ಅರಮನೆಗಳನ್ನು ಹೊಂದಿದ್ದ ಬೇರೊಬ್ಬ ವ್ಯಕ್ತಿಯನ್ನು ನಾವು ಮಾನವಕುಲದ ಇತಿಹಾಸದಲ್ಲೇ ಕಾಣಲಾರವು.

ಕೃಷ್ಣ ಒಬ್ಬೊಬ್ಬ ಪತ್ನಿಯ ಬಳಿಗೆ ಒಂದೊಂದು ದಿನ ಹೋಗುತ್ತಿದ್ದನೆಂದಲ್ಲ. ಅವನು ಏಕ ಕಾಲದಲ್ಲಿ ಎಲ್ಲ ಅರಮನೆಗಳಲ್ಲೂ ಪ್ರತ್ಯಕ್ಷವಾಗಿ ಇರುತ್ತಿದ್ದ ಅಂದರೆ ಅವನು 16,108 ರೂಪಗಳಲ್ಲಿ ವಿಸೃತನಾಗುತ್ತಿದ್ದ. ಸಾಮಾನ್ಯ ಮನುಷ್ಯನಿಗೆ ಇದು ಅಸಾಧ್ಯ. ಆದರೆ ಭಗವಂತನಿಗೆ ಇದು ಅಂತಹ ಕಷ್ಟವೇನಲ್ಲ.

ಅವನು ಅನಂತ ರೂಪಗಳಲ್ಲಿ ತನ್ನನ್ನು ತಾನು ವಿಸ್ತರಿಸಿಕೊಳ್ಳಬಲ್ಲ. ಇಲ್ಲದಿದ್ದರೆ ಅನಂತ ಎಂಬ ಶಬ್ದಕ್ಕೆ ಅರ್ಥವಿಲ್ಲದಂತಾಗುವುದು. ಭಗವಂತನು ಸರ್ವಶಕ್ತ. ಕೇವಲ ಹದಿನಾರು ಸಾವಿರ ಪತ್ನಿಯರನ್ನಷ್ಟೇ ಅಲ್ಲ ಹದಿನಾರು ಕೋಟಿ ಪತ್ನಿಯರನ್ನೂ ನಿರಾಯಾಸವಾಗಿ ಅವನು ಸಂಬಾಳಿಸಬಲ್ಲ. ಇಲ್ಲದಿದ್ದರೆ ಸರ್ವಶಕ್ತ ಎಂಬ ಶಬ್ದವೂ ಅರ್ಥಹೀನವಾಗುವುದು.

ಇವೆಲ್ಲಾ ಅತ್ಯಾಕರ್ಷಕವಾದ ಲಕ್ಷಣಗಳು. ಈ ಲೌಕಿಕ ಪ್ರಪಂಚದಲ್ಲಿ ಯಾರಾದರೂ ಶ್ರೀಮಂತನಾಗಿದ್ದರೆ ಅವನು ಆಕರ್ಷಕ ವ್ಯಕ್ತಿಯಾಗಿರುತ್ತಾನೆಂದು ಅನುಭವದಿಂದ ಕಂಡಿದ್ದೇವೆ. ಉದಾಹರಣೆಗೆ ಅಮೆರಿಕದಲ್ಲಿ ರಾಕ್‌ ಫೆಲ್ಲರ್ ಮತ್ತು ಫೋರ್ಡ್ ಅವರು ತಮ್ಮ ಶ್ರೀಮಂತಿಕೆಯಿ೦ದಾಗಿ ಬಹಳ ಆಕರ್ಷಕರಾಗಿದ್ದಾರೆ. ಪ್ರಪಂಚದ ಸಮಸ್ತ ಐಶ್ವರ್ಯವೂ ಅವರ ಬಳಿ ಇಲ್ಲದಿದ್ದರೂ ಅವರು ಆಕರ್ಷಕರಾಗಿದ್ದಾರೆ ಎಂದ ಮೇಲೆ, ಸಕಲ ಐಶ್ವರ್ಯದ ಸ್ವಾಮಿಯಾದ ಭಗವಂತನು ಇನ್ನೆಷ್ಟು ಆಕರ್ಷಕವಾಗಿರಬೇಕು!

ಹೀಗೆಯೇ, ಕೃಷ್ಣನು ಅನಂತ ಸಾಮರ್ಥ್ಯವನ್ನು ಹೊ೦ದಿದ್ದಾನೆ. ಹುಟ್ಟಿದಾಗಿನಿಂದಲೇ ಅವನು ಶಕ್ತಿವಂತನಾಗಿದ್ದ. ಕೃಷ್ಣನು ಕೇವಲ ಮೂರು ತಿಂಗಳ ಮಗುವಾಗಿದ್ದಾಗ ಪೂತನಿಯೆಂಬ ರಾಕ್ಷಸಿ ಅವನನ್ನು ಕೊಲ್ಲಲು ಪ್ರಯತ್ನಿಸಿದಳು. ಆದರೆ ಕೃಷ್ಣನೇ ಅವಳನ್ನು ಕೊಂದ. ಇದೇ ದೇವರ ರೀತಿ. ದೇವರು ಪ್ರಾರಂಭದಿ೦ದಲೂ ದೇವರಾಗಿಯೇ ಇರುತ್ತಾನೆ. ಯಾವುದೋ ಧ್ಯಾನದಿಂದಲೋ ಅಥವಾ ಯೋಗಶಕ್ತಿಯಿಂದಲೋ ಅವನು ದೇವರಾಗುವುದಿಲ್ಲ. ಕೃಷ್ಣ ಅಂತಹ ದೇವರಲ್ಲ. ಕೃಷ್ಣನು ಅವತಾರ ಮಾಡಿದ ಮೊದಲಿನಿಂದಲೇ ದೇವರಾಗಿದ್ದನು.

ಕೃಷ್ಣನು ಅನಂತ ಕೀರ್ತಿಶಾಲಿಯೂ ಹೌದು. ನಾವೇನೋ ಕೃಷ್ಣನ ಭಕ್ತರಾಗಿರುವುದರಿಂದ ಅವನನ್ನು ಬಲ್ಲೆವು. ಅವನ ಗುಣಗಾನ ಮಾಡುತ್ತಿದ್ದೇವೆ ಎಂದು ಹೇಳಬಹುದು. ಆದರೆ ನಾವಲ್ಲದೆ ಪ್ರಪಂಚಾದ್ಯಂತ ಕೋಟ್ಯಂತರ ಜನ ಭಗವದ್ಗೀತೆಯ ಹೆಗ್ಗಳಿಕೆಯನ್ನು ಅರಿತಿದ್ದಾರೆ.

ಪ್ರಪಂಚಾದ್ಯಂತ ದಾರ್ಶನಿಕರು, ಮನಃಶಾಸ್ತ್ರಜ್ಞರು ಮತ್ತು ಧರ್ಮಪ್ರತಿಪಾದಕರು ಭಗವದ್ಗೀತೆಯನ್ನು ಅಧ್ಯಯನ ಮಾಡುತ್ತಾರೆ. “ಭಗವದ್ಗೀತಾ ಯಥಾರೂಪ’ ಎಂಬ ನಮ್ಮ ಪುಸ್ತಕವೂ ಬಹಳ ಚೆನ್ನಾಗಿ ಮಾರಾಟವಾಗುತ್ತಿದೆ. ಅದು ಶುದ್ಧ ಅಪರಂಜಿಯಾಗಿರುವುದೇ ಇದಕ್ಕೆ ಕಾರಣ. ಭಗವದ್ಗೀತೆಯ ಅನೇಕ ಆವೃತ್ತಿಗಳಿವೆ. ಆದರೆ ಅವು ಶುದ್ಧವಾಗಿಲ್ಲ. ಭಗವದ್ಗೀತೆಯನ್ನು ಯಥಾರೂಪವಾಗಿ ಕೊಟ್ಟಿರುವುದರಿಂದಲೇ ನಮ್ಮ ಪುಸ್ತಕ ಹೆಚ್ಚಾಗಿ ಮಾರಾಟವಾಗುತ್ತಿದೆ. ಭಗವದ್ಗೀತೆಯ ಕೀರ್ತಿಯೇ ಕೃಷ್ಣನ ಕೀರ್ತಿ.

ಮತ್ತೊಂದು ಐಶ್ವರ್ಯವಾದ ಸೌಂದರ್ಯ ಕೂಡ ಕೃಷ್ಣನಲ್ಲಿ ಅಪರಿಮಿತವಾಗಿದೆ. ಅವನ ಸಂಗಾತಿಗಳೆಲ್ಲರೂ ಸುಂದರವಾಗಿರುವಂತೆ ಕೃಷ್ಣನೂ ಬಲು ಚೆಲುವ. ಪೂರ್ವಜನ್ಮದಲ್ಲಿ ಪುಣ್ಯವಂತರಾದವರು ಈ ಜನ್ಮದಲ್ಲಿ ಲೌಕಿಕ ಪ್ರಪಂಚದಲ್ಲಿ ಒಳ್ಳೆಯ ರಾಷ್ಟ್ರಗಳಲ್ಲಿ, ಕುಲೀನ ವಂಶಗಳಲ್ಲಿ ಜನ್ಮ ತಳೆಯುವ ಅವಕಾಶವನ್ನು ಪಡೆಯುತ್ತಾರೆ.

ಅಮೆರಿಕದ ಜನ ಬಹಳ ಶ್ರೀಮಂತರು ಮತ್ತು ಸುಂದರರು. ಈ ಐಶ್ವರ್ಯವೆಲ್ಲ ಪುಣ್ಯ ಕಾರ್ಯಗಳ ಫಲ. ವಿಜ್ಞಾನದ ಅರಿವು, ಐಶ್ವರ್ಯ, ಸೌಂದರ್ಯ ಮೊದಲಾದವುಗಳಲ್ಲಿ ಅಮೆರಿಕನ್ನರು ಬಹಳ ಮುಂದುವರಿದಿರುವುದರಿಂದ ಪ್ರಪಂಚಾದ್ಯಂತ ಜನರು ಅವರೆಡೆಗೆ ಆಕರ್ಷಿತರಾಗುತ್ತಾರೆ.

ಬ್ರಹ್ಮಾಂಡದಲ್ಲಿ ಈ ಭೂಗ್ರಹವು ನಗಣ್ಯವಾದುದು. ಆದರೂ ಈ ಗ್ರಹದಲ್ಲಿ ಅಮೆರಿಕ ದೇಶವೊಂದೇ ಅನೇಕ ಆಕರ್ಷಕ ಲಕ್ಷಣಗಳನ್ನು ಹೊಂದಿದೆ. ಸಮಸ್ತ ಬ್ರಹ್ಮಾಂಡದ ಸೃಷ್ಟಿಕರ್ತನಾದ ಭಗವಂತನು ಎಷ್ಟೆಲ್ಲಾ ಆಕರ್ಷಕ ಲಕ್ಷಣಗಳನ್ನು ಹೊ೦ದಿರುತ್ತಾನೆ೦ದು ಊಹಿಸಬಹುದಾಗಿದೆ. ನಾವು ಸಕಲ ಸೌಂದರ್ಯಗಳ ಸೃಷ್ಟಿಕರ್ತನಾದ ಅವನು ಅದೆಷ್ಟು ಸುಂದರನಾಗಿರಬಹುದು!

ಒಬ್ಬ ವ್ಯಕ್ತಿಯು ಕೇವಲ ತನ್ನ ಸೌ೦ದರ್ಯದಿಂದಷ್ಟೆ ಅಲ್ಲ, ತನ್ನ ಜ್ಞಾನದಿಂದಲೂ ಆಕರ್ಷಕರಾಗಿರುತ್ತಾನೆ. ಒಬ್ಬ ವಿಜ್ಞಾನಿ ಅಥವಾ ದಾರ್ಶನಿಕ ತನ್ನ ಜ್ಞಾನದಿಂದ ಆಕರ್ಷಕನಾಗಿರಬಹುದು. ಆದರೆ ಭಗವದ್ಗೀತೆಯಲ್ಲಿ ಕೃಷ್ಣನು ನೀಡಿದ ಜ್ಞಾನಕ್ಕಿಂತ ಭವ್ಯವಾದದ್ದು ಬೇರೆ ಯಾವುದಿದೆ? ಅಂತಹ ಜ್ಞಾನಕ್ಕೆ ಸಮಾನವಾದದ್ದು ಈ ಪ್ರಪಂಚದಲ್ಲಿ ಬೇರಾವುದೂ ಇಲ್ಲ.

ಇಷ್ಟೆಲ್ಲಾ ಇದ್ದರೂ ಕೃಷ್ಣನು ಸಂಪೂರ್ಣ ವೈರಾಗ್ಯ ಸಂಪನ್ನನೂ ಆಗಿದ್ದಾನೆ. ಈ ಲೌಕಿಕ ಪ್ರಪಂಚದಲ್ಲಿ ಕೃಷ್ಣನ ನಿರ್ದೇಶನಕ್ಕೆ ಅನುಸಾರವಾಗಿ ಅನೇಕ ವಿಷಯಗಳು ಕಾರ್ಯಮಾಡುತ್ತಿವೆ. ಆದರೆ ಕೃಷ್ಣನು ಅಲ್ಲಿಲ್ಲ. ಒಡೆಯನು ಎದುರಿಗೆ ಇಲ್ಲದಿದ್ದರೂ ದೊಡ್ಡ ಕಾರ್ಖಾನೆಯೊಂದು ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿರಬಹುದು.

ಹಾಗೆಯೇ ಕೃಷ್ಣನ ಸಹಾಯಕರಾದ ದೇವತೆಗಳ ನಿರ್ದೇಶನದಲ್ಲಿ ಅವನ ಶಕ್ತಿಗಳು ಕೆಲಸ ಮಾಡುತ್ತಿರುತ್ತವೆ. ಹೀಗೆ ಕೃಷ್ಣನೇ ಈ ಲೌಕಿಕ ಪ್ರಪಂಚದಿಂದ ದೂರವಾಗಿದ್ದಾನೆ. ಇದನ್ನೆಲ್ಲಾ ಶಾಸ್ತ್ರಗ್ರಂಥಗಳಲ್ಲಿ ವರ್ಣಿಸಲಾಗಿದೆ.

ಆದುದರಿಂದ ದೇವರು ತನ್ನ ಲೀಲೆಗಳಿಗೆ ಅನುಗುಣವಾಗಿ ಅನೇಕ ಹೆಸರುಗಳನ್ನು ಹೊಂದಿದ್ದಾನೆ. ಅವನು ಎಲ್ಲ ಐಶ್ವರ್ಯಗಳನ್ನು ಹೊಂದಿರುವುದರಿಂದ ಮತ್ತು ಈ ಐಶ್ವರ್ಯಗಳ ಕಾರಣದಿ೦ದಾಗಿ ಪ್ರತಿಯೊಬ್ಬರನ್ನೂ ಆಕರ್ಷಿಸುವುದರಿಂದ ಅವನನ್ನು ಕೃಷ್ಣ ಎಂದು ಕರೆಯುತ್ತಾರೆ. ದೇವರಿಗೆ ಅನೇಕ ಹೆಸರುಗಳಿವೆಯೆಂದು

ವೈದಿಕ ಸಾಹಿತ್ಯವು ಪ್ರತಿಪಾದಿಸುತ್ತದೆ. ಆದರೆ “ಕೃಷ್ಣ” ಎನ್ನುವುದೇ ಪ್ರಧಾನ ಹೆಸರು.

ಈ ಕೃಷ್ಣ ಪ್ರಜ್ಞಾ ಆಂದೋಲನದ ಉದ್ದೇಶವು ದೇವರ ನಾಮ, ದೇವರ ಕೀರ್ತಿ, ದೇವರ ಲೀಲೆಗಳು, ದೇವರ ಸೌಂದರ್ಯ ಮತ್ತು ದೇವರ ಪ್ರೀತಿಯನ್ನು ಹರಡುವುದೇ ಆಗಿದೆ. ಈ ಲೌಕಿಕ ಪ್ರಪಂಚದಲ್ಲಿ ಅನೇಕ ವಸ್ತುಗಳಿವೆ. ಅವೆಲ್ಲವೂ ಕೃಷ್ಣನಲ್ಲಿಯೇ ಇವೆ. ಈ ಲೌಕಿಕ ಪ್ರಪಂಚದ ಅತ್ಯಂತ ಪ್ರಧಾನವಾದ ಲಕ್ಷಣವೆಂದರೆ ಲೈಂಗಿಕತೆ.

ಅದೂ ಕೂಡ ಕೃಷ್ಣನಲ್ಲಿದೆ. ನಾವು ರಾಧಾ-ಕೃಷ್ಣರನ್ನು ಆರಾಧಿಸುತ್ತೇವೆ. ಅವರಲ್ಲಿ ಪರಸ್ಪರ ಆಕರ್ಷಣೆಯಿದೆ. ಆದರೆ ಲೌಕಿಕ ಆಕರ್ಷಣೆ ಮತ್ತು ಆಧ್ಯಾತ್ಮಿಕ ಆಕರ್ಷಣೆಗಳು ಒಂದೇ ಅಲ್ಲ. ಕೃಷ್ಣನಲ್ಲಿ ಲೈಂಗಿಕತೆಯು ವಾಸ್ತವಿಕ. ಇಲ್ಲಿ ಲೌಕಿಕ ಪ್ರಪಂಚದಲ್ಲಿ ಅದು ಅವಾಸ್ತವಿಕ. ಇಲ್ಲಿ ನಾವು ವ್ಯವಹರಿಸುವ ಪ್ರತಿಯೊಂದೂ ಆಧ್ಯಾತ್ಮಿಕ ಪ್ರಪಂಚದಲ್ಲಿದೆ.

ಆದರೆ ಇಲ್ಲಿ ಅದಕ್ಕೆ ವಾಸ್ತವಿಕ ಮೌಲ್ಯವಿಲ್ಲ. ಅದು ಕೇವಲ ಪ್ರತಿಬಿಂಬ. ಪ್ರದರ್ಶನ ಮಳಿಗೆಗಳಲ್ಲಿ ನಾವು ಅನೇಕ ಬೊಂಬೆಗಳನ್ನು ನೋಡುತ್ತೇವೆ. ಆದರೆ ಯಾರೂ ಅವುಗಳ ಬಗ್ಗೆ ಲಕ್ಷ್ಯ ಕೊಡುವುದಿಲ್ಲ. ಏಕೆಂದರೆ ಅವು ಕೇವಲ ಬೊಂಬೆಗಳೆಂದು ಎಲ್ಲರಿಗೂ ಗೊತ್ತು. ಆ ಬೊಂಬೆ ಬಹಳ ಸುಂದರವಾಗಿರಬಹುದು.

ಆದರೂ ಅದು ನಿಜವಾದ ವ್ಯಕ್ತಿಯಲ್ಲ. ಆದರೆ ಸುಂದರವಾದ ಸ್ತ್ರೀಯನ್ನು ನೋಡಿದಾಗ ಜನರು ಆಕರ್ಷಿತರಾಗುತ್ತಾರೆ. ಏಕೆಂದರೆ ಅವಳು ವಾಸ್ತವವೆಂದು ಅವರು ಭಾವಿಸುತ್ತಾರೆ. ಆದರೆ ದಿಟದಲ್ಲಿ ಸಜೀವಿಗಳೆಂದು ಹೇಳಿಕೊಳ್ಳುವವರೂ ನಿರ್ಜಿವಿಗಳೇ. ಏಕೆಂದರೆ ಈ ದೇಹವು ಜಡವಾದ ಒಂದು ಮುದ್ದೆಯಷ್ಟೆ. ಆತ್ಮವು ದೇಹವನ್ನು ತೊರೆಯುತ್ತಿದ್ದಂತೆಯೇ ಆ ಸುಂದರ ದೇಹವನ್ನು ಯಾರೂ ನೋಡಬಯಸುವುದಿಲ್ಲ. ವಾಸ್ತವ ಸಂಗತಿಯೆಂದರೆ, ಚೇತನಾತ್ಮವೇ ನಿಜವಾದ ಆಕರ್ಷಣ ಶಕ್ತಿಯಾಗಿದೆ.

ಈ ಲೌಕಿಕ ಪ್ರಪಂಚದಲ್ಲಿ ಪ್ರತಿಯೊಂದೂ ಜಡಪದಾರ್ಥದಿಂದ ನಿರ್ಮಿತವಾಗಿದೆ. ಆದುದರಿಂದ ಅದು ಕೇವಲ ಅನುಕರಣೆ. ವಸ್ತುಗಳ ಸತ್ಯಸ್ವರೂಪವು ಆಧ್ಯಾತ್ಮಿಕ ಲೋಕದಲ್ಲಿದೆ. ಭಗವದ್ಗೀತೆಯನ್ನು ಓದಿದವರು ಆಧ್ಯಾತ್ಮಿಕ ಲೋಕವು ಹೇಗಿರುತ್ತದೆಂದು ಅರಿಯಬಲ್ಲರು. ಏಕೆಂದರೆ ಅಲ್ಲಿ ಹೀಗೆ ವರ್ಣಿಸಲಾಗಿದೆ-

ಪರಸ್ತಸ್ಮಾತ್ತು ಭಾವೋಽನ್ಯೋಽ

ವ್ಯಕ್ತೋಽವ್ಯಕ್ತಾತ್ ಸನಾತನಃ

ಯಃ ಸರ್ವೇಷು ಭೂತೇಷು

ನಶ್ಯತ್ಸು ವಿನಶ್ಯತಿ ||

‘ಇದಕ್ಕಿಂತ ಬೇರೆಯಾದ ಪ್ರಕೃತಿಯೊಂದಿದೆ. ಅದು ಈ ಪ್ರಕಟ ಮತ್ತು ಅಪ್ರಕಟ ವಸ್ತುಗಳಿಗಿಂತ ಅತೀತವಾದದ್ದು ಮತ್ತು ಶಾಶ್ವತವಾದದ್ದು. ಅದು ಪರಮೋನ್ನತವಾದದ್ದು. ಅದಕ್ಕೆ ನಾಶವೆಂಬುದಿಲ್ಲ. ಈ ಪ್ರಪಂಚವೆಲ್ಲಾ ನಾಶವಾದರೂ ಅದು ಯಥಾರೂಪದಲ್ಲಿ ಉಳಿದಿರುತ್ತದೆ.” (ಗೀತಾ 8.20)

ವಿಜ್ಞಾನಿಗಳು ಈ ಲೌಕಿಕ ಪ್ರಪಂಚದ ಉದ್ದಗಲಗಳನ್ನು ಅಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರಿಗೆ ಪ್ರಾರಂಭಿಸುವುದಕ್ಕೇ ಆಗುತ್ತಿಲ್ಲ. ಅತ್ಯಂತ ಸಮೀಪದ ನಕ್ಷತ್ರಕ್ಕೆ ಹೋಗುವುದಕ್ಕೆ ಅವರಿಗೆ ಸಾವಿರಾರು ವರ್ಷಗಳುಬೇಕು. ಇನ್ನು ಆಧ್ಯಾತ್ಮಿಕ ಲೋಕದ ಬಗ್ಗೆ ಹೇಳುವುದೇನು? ಲೌಕಿಕ ಪ್ರಪಂಚವನ್ನೇ ನಾವು ಅರಿಯಲು ಸಾಧ್ಯವಿಲ್ಲದಿರುವಾಗ, ಅದರ ಆಚೆಗಿರುವುದನ್ನು ಹೇಗೆ ತಿಳಿಯಲು ಸಾಧ್ಯ? ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಾವು ಅಧಿಕೃತ ಮೂಲಗಳಿಂದ ಇದನ್ನು ತಿಳಿಯಬೇಕು.

ಅತ್ಯಂತ ಅಧಿಕೃತವಾದ ಮೂಲವೆಂದರೆ ಕೃಷ್ಣನೇ. ಏಕೆಂದರೆ ಅವನೇ ಸಕಲ ಜ್ಞಾನಗಳ ನಿಧಿ. ಕೃಷ್ಣನಿಗಿಂತ ಬುದ್ಧಿವಂತರೂ ಅಥವಾ ಜ್ಞಾನಿಗಳೂ ಬೇರೆ ಯಾರೂ ಇಲ್ಲ. ಈ ಲೌಕಿಕ ಪ್ರಪಂಚದ ಆಚೆಗೆ ಆಧ್ಯಾತ್ಮಿಕ ಆಕಾಶವಿದೆಯೆಂದೂ, ಅದು ಅಸಂಖ್ಯಾತ ಗ್ರಹಗಳಿಂದ ತುಂಬಿದೆಯೆಂದೂ ಕೃಷ್ಣನು ನಮಗೆ ಹೇಳುತ್ತಾನೆ.

ಆ ಆಕಾಶವು ಲೌಕಿಕ ಅಂತರಿಕ್ಷಕ್ಕಿಂತ ಬಹುಪಾಲು ದೊಡ್ಡದಾಗಿದೆ. ಈ ಲೌಕಿಕ ಅಂತರಿಕ್ಷವು ಸಮಸ್ತ ಸೃಷ್ಟಿಯ ಕಾಲು ಭಾಗವನ್ನು ಮಾತ್ರ ಹೊಂದಿದೆ. ಹಾಗೆಯೇ ಈ ಲೌಕಿಕ ಪ್ರಪಂಚದಲ್ಲಿರುವ ಜೀವಿಗಳು, ಸಮಸ್ತ ಸೃಷ್ಟಿಯಲ್ಲಿರುವ ಜೀವಿಗಳ ಒಂದು ಸಣ್ಣ ಭಾಗ ಮಾತ್ರ. ಈ ಲೌಕಿಕ ಪ್ರಪಂಚವನ್ನು ಒಂದು ಸೆರೆಮನೆಗೆ ಹೋಲಿಸಲಾಗಿದೆ. ಅಲ್ಲಿರುವ ಬಂದಿಗಳು ಹೇಗೆ ಒಟ್ಟು ಜನಸಂಖ್ಯೆಯ ಒಂದು ಭಾಗವಾಗಿರುತ್ತಾರೋ ಹಾಗೆಯೇ ಈ ಲೌಕಿಕ ಪ್ರಪಂಚದಲ್ಲಿರುವ ಜೀವಿಗಳು ಸಮಸ್ತ ಜೀವಿಗಳ ಅತ್ಯಲ್ಪ ಪ್ರಮಾಣವಾಗಿದ್ದಾರೆ.

ದೇವರ ವಿರುದ್ಧ ಪ್ರತಿಭಟಿಸಿದ ಅಪರಾಧಿಗಳನ್ನು ಈ ಲೌಕಿಕ ಪ್ರಪಂಚಕ್ಕೆ ಹಾಕಲಾಗಿದೆ. ಕೆಲವು ಸಲ ಅಪರಾಧಿಗಳು ತಾವು ಸರಕಾರವನ್ನು ಲಕ್ಷಿಸುವುದಿಲ್ಲ ಎಂದು ಹೇಳುತ್ತಾರೆ. ಆದರೂ ಅವರನ್ನು ಸೆರೆಹಿಡಿದು ಶಿಕ್ಷಿಸಲಾಗುತ್ತದೆ. ಹಾಗೆಯೇ ದೇವರ ವಿರುದ್ಧ ಪ್ರತಿಭಟನೆಯನ್ನು ಸಾರುವ ಜೀವಿಗಳನ್ನು ಲೌಕಿಕ ಪ್ರಪಂಚದಲ್ಲಿ ಇರಿಸಲಾಗುತ್ತದೆ.

ಮೂಲತಃ ಎಲ್ಲ ಜೀವಿಗಳೂ ಭಗವಂತನ ವಿಭಿನ್ನಾಂಶಗಳೇ. ಭಗವಂತನೊಡನೆ ಅವರದು ತಂದೆ ಮಕ್ಕಳ ಸಂಬಂಧ. ಕ್ರಿಶ್ಚಿಯನ್ನರೂ ಕೂಡ ಭಗವಂತನನ್ನು ತಮ್ಮ ಶ್ರೇಷ್ಠ ತಂದೆಯೆಂದು ಭಾವಿಸುತ್ತಾರೆ. ಚರ್ಚುಗಳಿಗೆ ಹೋಗುವ ಕ್ರಿಶ್ಚಿಯನ್ನರು “ಸ್ವರ್ಗದಲ್ಲಿರುವ ನಮ್ಮ ತಂದೆಯೇ’ ಎಂದು ಪ್ರಾರ್ಥಿಸುತ್ತಾರೆ. ದೇವರು ತಂದೆಯೆಂಬ ಕಲ್ಪನೆ ಭಗವದ್ಗೀತೆಯಲ್ಲೂ( 14.4) ಬರುತ್ತದೆ –

ಸರ್ವಯೋನಿಷು ಕೌಂತೇಯ

ಮೂರ್ತಯಃ ಸಂಭವಂತಿ ಯಾಃ

ತಾಸಾಂ ಬ್ರಹ್ಮ ಮಹದ್‌ ಯೋನಿರ್‌

ಅಹಂ ಬೀಜಪ್ರದಃ ಪಿತಾ ||

‘ಕುಂತೀಪುತ್ರನೇ, ಈ ಲೌಕಿಕ ಪ್ರಕೃತಿಯಲ್ಲಿ ಎಲ್ಲ ಜೀವಜಾತಿಗಳೂ ಜನನದಿಂದ ವ್ಯಕ್ತರಾಗುತ್ತಾರೆ. ಅವರೆಲ್ಲರಿಗೂ ಬೀಜಪ್ರದನಾದ ತಂದೆ ನಾನೇ.”

ಜಲಚರಗಳು, ಸಸ್ಯಗಳು, ಪಕ್ಷಿಗಳು, ಪ್ರಾಣಿಗಳು, ಕ್ರಿಮಿಕೀಟಗಳು, ಮಾನವರು ಎಲ್ಲಸೇರಿ 84,00,000 ಜೀವಜಾತಿಗಳಿವೆ. ಮನುಷ್ಯ ಜಾತಿಯಲ್ಲಿ ಬಹುಪಾಲು ಮಂದಿ ಅನಾಗರಿಕರು. ನಾಗರಿಕರಾದ ಕೆಲವೇ ಮಂದಿಯಲ್ಲಿ ಅತ್ಯಲ್ಪ ಸಂಖ್ಯೆಯ ಜನರು ಮಾತ್ರ ಧಾರ್ಮಿಕ ಜೀವನವನ್ನು ಆರಿಸಿಕೊಳ್ಳುತ್ತಾರೆ.

ಹಾಗೆ ಧಾರ್ಮಿಕರೆಂದು ಹೇಳಿಕೊಳ್ಳುವವರಲ್ಲೂ ಕೂಡ, “ನಾನು ಹಿಂದೂ”, “ನಾನು ಮುಸ್ಲಿಂ”, “ನಾನು ಕ್ರಿಶ್ಚಿಯನ್” ಇತ್ಯಾದಿಯಾಗಿ ಹೇಳಿಕೊಳ್ಳುವವರೇ ಹೆಚ್ಚಾಗಿದ್ದಾರೆ. ಕೆಲವರು ಜನೋಪಕಾರ ಕಾರ್ಯಗಳಲ್ಲಿ ತೊಡಗುತ್ತಾರೆ. ಕೆಲವರು ಬಡಬಗ್ಗರಿಗೆ ದಾನಮಾಡುತ್ತಾರೆ.

ಶಾಲೆಗಳನ್ನೂ ಆಸ್ಪತ್ರೆಗಳನ್ನೂ ತೆರೆಯುತ್ತಾರೆ. ಈ ಲೋಕಹಿತ ಕಾರ್ಯವನ್ನು ಕರ್ಮಕಾಂಡ ಎಂದು ಕರೆಯುತ್ತಾರೆ. ಇಂತಹ ಲಕ್ಷಾಂತರ ಕರ್ಮಕಾಂಡಿಗಳಲ್ಲಿ ಒಬ್ಬನು ಜ್ಞಾನಿ ಇರಬಹುದು. ಇಂತಹ ಲಕ್ಷಾಂತರ ಜ್ಞಾನಿಗಳಲ್ಲಿ ಒಬ್ಬನು ಮುಕ್ತನಾಗಬಹುದು. ಇಂತಹ ಕೋಟ್ಯಂತರ ಮುಕ್ತಾತ್ಮರಲ್ಲಿ ಕೃಷ್ಣನನ್ನು ಅರಿಯಲು ಒಬ್ಬನಿಗೆ ಸಾಧ್ಯವಾದೀತು. ಇದು ಕೃಷ್ಣನ ಸ್ಥಾನ. ಭಗವದ್ಗೀತೆಯಲ್ಲಿ (7.3) ಕೃಷ್ಣನೇ ಹೀಗೆ ಹೇಳಿದ್ದಾನೆ –

ಮನುಷ್ಯಾಣಾಂ ಸಹಸ್ರೇಷು

ಕಶ್ಚಿದ್ ಯತತಿ ಸಿದ್ಧಯೇ |

ಯತತಾಮ್ ಅಪಿ ಸಿದ್ಧಾನಾಂ

ಕಶ್ಚಿನ್ ಮಾಂ ವೇತ್ತಿ ತತ್ತ್ವತಃ ||

“ಸಹಸ್ರಾರು ಮಾನವರಲ್ಲಿ ಪರಿಪೂರ್ಣತೆಗಾಗಿ ಒಬ್ಬನು ಪ್ರಯತ್ನಿಸಬಹುದು. ಹೀಗೆ ಪರಿಪೂರ್ಣತೆಯನ್ನು ಸಾಧಿಸಿದವರಲ್ಲಿ ನನ್ನನ್ನು ನಿಜವಾಗಿ ಬಲ್ಲವನು ಒಬ್ಬನು ಸಿಗಬಹುದೇನೋ.”

ಎಂದಮೇಲೆ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ ಎಂದಾಯಿತು. ಆದರೆ ದೇವರನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾದ ಸಂಗತಿಯಾದರೂ ಭಗವಂತನು ಭಗವದ್ಗೀತೆಯಲ್ಲಿ ತನ್ನನ್ನೇ ಕುರಿತು ಹೀಗೆ ವರ್ಣಿಸುತ್ತಾನೆ – “ನಾನು ಹೀಗೆ ಇದ್ದೇನೆ. ಲೌಕಿಕ ಪ್ರಕೃತಿಯು ಹೀಗಿದೆ.

ಆಧ್ಯಾತ್ಮಿಕ ಪ್ರಕೃತಿಯು ಹೀಗಿದೆ. ಜೀವಿಗಳು ಹೀಗಿದ್ದಾರೆ. ಪರಮಾತ್ಮನು ಹೀಗಿದ್ದಾನೆ.” ಹೀಗೆ ಪ್ರತಿಯೊಂದನ್ನೂ ಸಂಪೂರ್ಣವಾಗಿ ಭಗವದ್ಗೀತೆಯಲ್ಲಿ ವರ್ಣಿಸಲಾಗಿದೆ. ದೇವರನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟವಾದರೂ, ದೇವರೇ ತನ್ನನ್ನು ಕುರಿತು ತಿಳಿವಳಿಕೆಯನ್ನು ನೀಡುವಾಗ ಅದು ಕಠಿಣವಾಗುವುದಿಲ್ಲ.

ನಿಜವಾಗಿ ದೇವರನ್ನು ಅರ್ಥಮಾಡಿಕೊಳ್ಳಲು ಇರುವುದು ಅದೊಂದೇ ಮಾರ್ಗ. ನಮ್ಮ ಊಹಾತ್ಮಕ ಚಿಂತನೆಯಿಂದ ದೇವರನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ದೇವರು ಅಪರಿಮಿತ, ನಾವು ಪರಿಮಿತ. ನಮ್ಮ ತಿಳಿವಳಿಕೆ ಮತ್ತು ಗ್ರಹಣಶಕ್ತಿಗಳೆರಡೂ ಬಹಳ ಪರಿಮಿತವಾಗಿವೆ.

ಎಂದಮೇಲೆ ನಾವು ಅಪರಿಮಿತನನ್ನು ಹೇಗೆ ಅರ್ಥಮಾಡಿಕೊಳ್ಳಲು ಸಾಧ್ಯ? ಆ ಅಪರಿಮಿತನ ಹೇಳಿಕೆಯನ್ನು ನಾವು ಸುಮ್ಮನೆ ಸ್ವೀಕರಿಸಿದರೆ ಅವನನ್ನು ಅರಿತುಕೊಳ್ಳಲು ಸಾಧ್ಯವಾಗಬಹುದು. ಅಂತಹ ಅರಿವೇ ನಮ್ಮ ಪರಿಪೂರ್ಣತೆ.

ದೇವರನ್ನು ಕುರಿತ ಊಹಾತ್ಮಕ ಚಿಂತನೆಯು ನಮ್ಮನ್ನು ಎಲ್ಲಿಗೂ ತಲಪಿಸುವುದಿಲ್ಲ. ಒಬ್ಬ ಹುಡುಗನು ತನ್ನ ತಂದೆ ಯಾರೆಂದು ತಿಳಿಯಲು ಬಯಸಿದರೆ, ಅನುಸರಿಸಬೇಕಾದ ಸುಲಭ ವಿಧಾನ ತನ್ನ ತಾಯಿಯನ್ನು ಕೇಳುವುದು. ಆಗ ತಾಯಿಯು, “ಇವರೇ ನಿನ್ನ ತಂದೆ” ಎಂದು ಹೇಳುತ್ತಾಳೆ.

ಇದು ಪರಿಪೂರ್ಣ ತಿಳಿವಳಿಕೆಯ ವಿಧಾನ. ಹುಡುಗನು ತನ್ನ ತಂದೆ ಯಾರೆಂದು ತಿಳಿಯಲು ಊಹಾಪೋಹದ ಮಾರ್ಗವನ್ನೂ ಹಿಡಿಯಬಹುದು. ಈ ಮನುಷ್ಯನೇ, ಆ ಮನುಷ್ಯನೇ ಎಂದು ಕುತೂಹಲದಿಂದ ಇಡೀ ನಗರವನ್ನೆಲ್ಲ ಸುತ್ತುತ್ತಾ, “ನೀವು ನನ್ನ ತಂದೆಯೇ? ನೀವು ನನ್ನ ತಂದೆಯೇ?” ಎಂದು ಕೇಳಬಹುದು.

ಆದರೆ ಇಂತಹ ವಿಧಾನದಿಂದ ಪಡೆದ ತಿಳಿವಳಿಕೆಯು ಯಾವಾಗಲೂ ಅಪರಿಪೂರ್ಣವಾಗಿ ಉಳಿಯುತ್ತದೆ. ಈ ವಿಧಾನದಿಂದ ಯಾರೂ ತನ್ನ ತಂದೆಯನ್ನು ಕಂಡುಹಿಡಿಯುವುದು ಸಾಧ್ಯವಿಲ್ಲ. ಒಬ್ಬ ಅಧಿಕೃತ ವ್ಯಕ್ತಿಯಿಂದ ತಿಳಿವಳಿಕೆಯನ್ನು ಪಡೆಯುವುದೇ ಸರಳವಾದ ಮಾರ್ಗ.

ಮೇಲಿನ ಉದಾಹರಣೆಯಲ್ಲಿ ತಾಯಿ ಅಂತಹ ಅಧಿಕೃತ ವ್ಯಕ್ತಿ. ಅವಳು ನೇರವಾಗಿ, “ನನ್ನ ಮುದ್ದಿನ ಮಗುವೆ, ಇವರೇ ನಿನ್ನ ತಂದೆ” ಎಂದು ಹೇಳುತ್ತಾಳೆ. ಈ ರೀತಿಯಲ್ಲಿ ನಮ್ಮ ಅರಿವು ಪರಿಪೂರ್ಣವಾಗುತ್ತದೆ. ದಿವ್ಯಜ್ಞಾನವೂ ಹೀಗೆಯೇ ದೊರಕುತ್ತದೆ. ಈಗಷ್ಟೇ ನಾನು ಆಧ್ಯಾತ್ಮಿಕ ಪ್ರಪಂಚವನ್ನು ಕುರಿತು ಹೇಳುತ್ತಿದ್ದೆ.

ಈ ಆಧ್ಯಾತ್ಮಿಕ ಪ್ರಪಂಚವು ನಮ್ಮ ಊಹಾತ್ಮಕ ಚಿಂತನೆಗೆ ದಕ್ಕುವುದಿಲ್ಲ. “ಆಧ್ಯಾತ್ಮಿಕ ಲೋಕವೊಂದಿದೆ. ಅದೇ ನನ್ನ ಕೇಂದ್ರ ಸ್ಥಾನ” ಎಂದು ದೇವರು ಹೇಳುತ್ತಾನೆ. ಈ ರೀತಿಯಲ್ಲಿ ಶ್ರೇಷ್ಠಪ್ರಮಾಣವಾದ ಕೃಷ್ಣನಿಂದ ನಾವು ತಿಳಿವಳಿಕೆಯನ್ನು ಪಡೆಯುತ್ತೇವೆ. ನಾವು ಪರಿಪೂರ್ಣರಲ್ಲದಿರಬಹುದು. ಆದರೆ ನಮ್ಮ ತಿಳಿವಳಿಕೆ ಪರಿಪೂರ್ಣವಾಗುತ್ತದೆ. ಏಕೆಂದರೆ ಅದನ್ನು ಪರಿಪೂರ್ಣವಾದ ಆಕರದಿಂದ ಪಡೆದಿರುತ್ತೇವೆ.

ಮಾನವ ಸಮಾಜಕ್ಕೆ ಪರಿಪೂರ್ಣ ತಿಳಿವಳಿಕೆಯನ್ನು ನೀಡುವುದು ಕೃಷ್ಣಪ್ರಜ್ಞಾ ಆಂದೋಲನದ ಉದ್ದೇಶ. ಅಂತಹ ತಿಳಿವಳಿಕೆಯಿಂದ ಮಾನವನು ತಾನಾರು, ದೇವರು ಯಾರು, ಲೌಕಿಕ ಪ್ರಪಂಚವೆಂದರೇನು, ನಾವು ಇಲ್ಲೇಕೆ ಬಂದಿದ್ದೇವೆ, ನಾವೇಕೆ ಇಷ್ಟೆಲ್ಲಾ ಕಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕು ಮತ್ತು ನಾವೇಕೆ ಸಾಯಬೇಕು ಎಂದು ತಿಳಿಯಬಹುದು.

ಯಾರೂ ಸಾಯಲು ಬಯಸುವುದಿಲ್ಲ ಎಂಬುದೇನೋ ಆದರೆ ಸಾವು ಬಂದೇ ಬರುತ್ತದೆ. ಯಾರೂ ಮುದುಕರಾಗಲು ಬಯಸುವುದಿಲ್ಲ. ಆದರೂ ಬಂದೇ ಬರುತ್ತದೆ. ವ್ಯಾಧಿಗಳಿಂದ ನರಳಲು ಯಾರೂ ಬಯಸುವುದಿಲ್ಲ. ಆದರೆ ಕಾಯಿಲೆಗಳು ತಪ್ಪದೇ ಬರುತ್ತವೆ. ಇವೆಲ್ಲಾ ಮನುಷ್ಯ ಜೀವನದ ನಿಜವಾದ ಸಮಸ್ಯೆಗಳು.

ಇವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ನಾಗರಿಕತೆಯು ಆಹಾರ, ನಿದ್ರೆ, ಮೈಥುನ, ರಕ್ಷಣೆಗಳನ್ನು ಉತ್ತಮಪಡಿಸಲು ಪ್ರಯತ್ನಿಸುತ್ತದೆ. ಆದರೆ ಇವು ನಾಯಿಯೂ ನಿದ್ರಿಸುತ್ತದೆ. ಒಂದು ಸುಸಜ್ಜಿತವಾದ ಮನೆಯನ್ನು ಹೊಂದಿರುವ ಮಾತ್ರಕ್ಕೆ ಮನುಷ್ಯನು ಹೆಚ್ಚು ಪ್ರಗತಿ ಸಾಧಿಸಿದ್ದಾನೆ ಎಂದು ಅರ್ಥವಲ್ಲ.

ಈ ಎರಡೂ ಪ್ರಸಂಗಗಳಲ್ಲಿ ನಡೆಯುವ ಕ್ರಿಯೆಯಾದ ನಿದ್ರಿಸುವಿಕೆ ಒಂದೇ. ಮನುಷ್ಯನು ತನ್ನ ರಕ್ಷಣೆಗಾಗಿ ಅಣು ಬಾಂಬುಗಳನ್ನು ಕಂಡುಹಿಡಿದಿದ್ದಾನೆ. ನಾಯಿಗೆ ಕೋರೆಹಲ್ಲುಗಳು, ಪಂಜಗಳು ಇವೆ. ಅದೂ ಕೂಡ ತನ್ನನ್ನು ರಕ್ಷಿಸಿಕೊಳ್ಳಬಲ್ಲದು. ಈ ಎರಡು ಪ್ರಸಂಗಗಳಲ್ಲಿಯೂ ರಕ್ಷಣೆಯೇ ಉದ್ದೇಶವಾಗಿದೆ.

ತನ್ನಲ್ಲಿ ಅಣುಬಾಂಬ್ ಇರುವುದರಿಂದ ಇಡೀ ಪ್ರಪಂಚವನ್ನೇ ಅಥವಾ ಇಡೀ ಬ್ರಹ್ಮಾಂಡವನ್ನೇ ಗೆಲ್ಲಬಲ್ಲೆ ಎಂದು ಮನುಷ್ಯನು ಹೇಳಲಾರ. ಅದು ಸಾಧ್ಯವೂ ಅಲ್ಲ. ರಕ್ಷಣೆಗಾಗಿ ಮನುಷ್ಯನು ವ್ಯಾಪಕವಾದ ವಿಧಾನವನ್ನು ಹೊಂದಿರಬಹುದು. ಇಲ್ಲವೇ ಆಹಾರ, ನಿದ್ರೆ, ಮೈಥುನಗಳಿಗೆ ವೈಭವೋಪೇತವಾದ ವ್ಯವಸೆಯನ್ನು ಮಾಡಿಕೊಂಡಿರಬಹುದು. ಆದರೆ ಇವೆಲ್ಲಾ ಅವನನ್ನು ಪ್ರಗತಿಪರನನ್ನಾಗಿಸುವುದಿಲ್ಲ. ಅವನ ಪ್ರಗತಿಯನ್ನು, ನಯಗೊಳಿಸಿದ ಪಶುಜೀವನ ಎಂದು ಹೇಳಬಹುದಷ್ಟೆ.

ನಿಜವಾದ ಪ್ರಗತಿಯೆ೦ದರೆ ದೇವರನ್ನು ಅರಿತುಕೊಳ್ಳುವುದು. ದೇವರನ್ನು ನಾವು ತಿಳಿದುಕೊಳ್ಳದಿದ್ದರೆ ನಿಜವಾಗಿ ನಾವು ಪ್ರಗತಿ ಸಾಧಿಸಿದಂತಲ್ಲ. ಅನೇಕ ಮೂಢರು ದೇವರ ಅಸ್ತಿತ್ವವನ್ನೇ ಅಲ್ಲಗಳೆಯುತ್ತಾರೆ. ಏಕೆಂದರೆ, ದೇವರು ಇಲ್ಲದಿದ್ದರೆ ಪಾಪಕಾರ್ಯಗಳನ್ನು ಮುಂದುವರಿಸಲು ಅನುಕೂಲವಾಗುತ್ತದೆ.

ದೇವರು ಇಲ್ಲ ಎಂದು ಭಾವಿಸುವುದೇನೋ ಅವರಿಗೆ ಚೆನ್ನ ಎನ್ನಿಸಬಹುದು. ಆದರೆ ಅವರು ನಿರಾಕರಿಸಿದ ಮಾತ್ರಕ್ಕೆ ದೇವರು ಸಾಯುವುದಿಲ್ಲ. ದೇವರು ಇದ್ದಾನೆ. ಅವನ ಆಳ್ವಿಕೆಯೂ ಇದ್ದೇ ಇರುತ್ತದೆ. ಅವನ ಆಜ್ಞಾನುಸಾರ ಸೂರ್ಯ ಉದಯಿಸುತ್ತಾನೆ. ಚಂದ್ರ ಉದಯಿಸುತ್ತಾನೆ. ನೀರು ಹರಿಯುತ್ತದೆ.

ಸಾಗರವು ಉಬ್ಬರವಿಳಿತಗಳನ್ನು ಅನುಸರಿಸುತ್ತದೆ. ಹೀಗೆ ಪ್ರತಿಯೊಂದೂ ಅವನ ಅನುಸಾರ ಕಾರ್ಯ ಮಾಡುತ್ತದೆ. ಹೀಗೆ ಪ್ರತಿಯೊಂದೂ ಸೊಗಸಾಗಿ ನಡೆಯುತ್ತಿರುವುದರಿಂದ ದೇವರು ಸತ್ತಿದ್ದಾನೆಂದು ಯಾರಾದರೂ ನಿಜವಾಗಿ ಭಾವಿಸಬಹುದೇ? ಅವ್ಯವಸ್ಥೆ ಇರುವಾಗ ಸರಕಾರ ಅಸ್ತಿತ್ವದಲ್ಲಿಲ್ಲ ಎಂದು ನಾವು ಹೇಗೆ ತಾನೇ ಹೇಳಲು ಸಾಧ್ಯ? ಜನರು ದೇವರನ್ನು ಅರಿತಿಲ್ಲ.

ಅದಕ್ಕೆ ಅವರು ದೇವರು ಸತ್ತಿದ್ದಾನೆ, ದೇವರು ಅಸ್ತಿತ್ವದಲ್ಲಿಲ್ಲ, ದೇವರಿಗೆ ಯಾವ ರೂಪವೂ ಇಲ್ಲ ಎಂದು ಹೇಳುತ್ತಾರೆ. ಆದರೆ ದೇವರು ಇದ್ದಾನೆ ಎಂದು ನಮಗೆ ದೃಢವಾದ ನಂಬಿಕೆಯಿದೆ. ಆ ದೇವರೇ ಕೃಷ್ಣ. ಆದುದರಿಂದ ನಾವು ಅವನನ್ನು ಆರಾಧಿಸುತ್ತೇವೆ. ಇದೇ ಕೃಷ್ಣಪ್ರಜ್ಞೆಯ ವಿಧಾನ. ಇದನ್ನು ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸಿ.  ನಿಮಗೆ ಅನಂತ ಧನ್ಯವಾದಗಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi