ಭೌತಿಕ ಪಂಜರದಾಚೆಯ ನೆಲೆ

ಲೌಕಿಕ ಬಂಧನದಿಂದ ಮುಕ್ತವಾದ ಆತ್ಮವು ನಿರಾಕಾರ ಏಕರೂಪತೆಯಲ್ಲಿ ಆಶ್ರಯ ಕಂಡುಕೊಳ್ಳುವುದು ಸಾಧ್ಯವಿಲ್ಲ.

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1974ರ ಮಾರ್ಚ್‌ 18ರಂದು ವೃಂದಾವನದಲ್ಲಿ ನೀಡಿದ ಉಪನ್ಯಾಸ.

ನಿದ್ರಯಾ ಹ್ರಿಯತೇ ನಕ್ತಂ ವ್ಯವಾಯೇನ ಚ ವಾ ವಯಃ ।
ದಿವಾ ಚಾರ್ಥೇಹಯಾ ರಾಜನ್‌ ಕುಟುಂಬಭರಣೇನ ವಾ ॥

“ಮಾತ್ಸರ್ಯವುಳ್ಳ ಗೃಹಸ್ಥನ ಆಯುಷ್ಯವು ರಾತ್ರಿಯ ವೇಳೆ ನಿದ್ರೆ ಅಥವಾ ಲೈಂಗಿಕ ಭೋಗದಲ್ಲಿ ಕಳೆಯುತ್ತದೆ. ಹಗಲಿನ ವೇಳೆ ಹಣ ಸಂಪಾದನೆಯಲ್ಲಿ ಅಥವಾ ಕುಟುಂಬ ಪಾಲನೆಯಲ್ಲಿ ಕಳೆಯುತ್ತದೆ.”

(ಶ್ರೀಮದ್‌ ಭಾಗವತ 2.1.3)

ಗೃಹಸ್ಥ ಅಥವಾ ವಿವಾಹಿತನಾಗಿರುವುದು ತಪ್ಪೇನಲ್ಲ. ಅದನ್ನು ಖಂಡಿಸುವುದಿಲ್ಲ. ಹಾಗಾದರೆ ಯಾವುದನ್ನು ಖಂಡಿಸಲಾಗುವುದು? ಅಪಶ್ಯತಾಂ ಆತ್ಮ ತತ್ತ್ವಂ : ಬದುಕಿನ ಗುರಿಯನ್ನು ಅರಿಯದಿರುವುದು.

“ಬದುಕಿನ ಗುರಿ ಏನು?” ಎಂದು ಯಾರನ್ನಾದರೂ ಕೇಳಿ. “ಹಣ ಸಂಪಾದನೆ, ಮಕ್ಕಳ ನಿರ್ವಹಣೆ, ಅವರಿಗೆ ಶಿಕ್ಷಣ, ಭವಿಷ್ಯಕ್ಕಾಗಿ ಅವರಿಗೆ ಉತ್ತಮ ಅವಕಾಶ ಒದಗಿಸುವುದು. ಇವು ನನ್ನ ಕರ್ತವ್ಯ. ನನ್ನ ಬಳಿ ಹೆಚ್ಚುವರಿ ಹಣವಿದ್ದರೆ ಬಡವರಿಗೆ ದಾನವಾಗಿ ನೀಡುವೆ” ಎಂದು ಅವರು ಉತ್ತರಿಸುತ್ತಾರೆ. ಇವು ಅವರ ಯೋಜನೆಗಳು. ಆದರೆ ಲೌಕಿಕ ಹೊದಿಕೆಯಿಂದ ನಿಯಂತ್ರಿಸಲ್ಪಟ್ಟಿರುವ ಆತ್ಮದ ವಿಮೋಚನೆಯ ಅಗತ್ಯದ ಬಗೆಗೆ ಯಾರಿಗೂ ತಿಳಿಯದು. ಯಾರಿಗೂ ಗೊತ್ತಿಲ್ಲ. ದೊಡ್ಡ ದೊಡ್ಡ ಪ್ರಾಧ್ಯಾಪಕರಿಗೂ ಕೂಡ ತಿಳಿದಿಲ್ಲ. ನೀವು ಅವರನ್ನು “ಏಕೆ ದೊಡ್ಡ ಯೋಜನೆಗಳನ್ನು ರೂಪಿಸುತ್ತಿದ್ದೀರಾ?” ಎಂದು ಕೇಳಿದರೆ, ಅವರು “ಓ, ಅದು ಮುಂದಿನ ಪೀಳಿಗೆಗೆ” ಎಂದು ಉತ್ತರಿಸುತ್ತಾರೆ. ಅಷ್ಟೇ.

ಆತ್ಮದ ಪ್ರಾಮುಖ್ಯದ ಬಗೆಗೆ ಯಾರಿಗೂ ತಿಳಿಯದು. ಆತ್ಮ ವಿಜ್ಞಾನ, ಆತ್ಮ ತತ್ತ್ವದ ಬಗೆಗೆ ಯಾರಿಗೂ ಕಲ್ಪನೆಯೇ ಇಲ್ಲ. ಎಲ್ಲರೂ ಸುಮ್ಮನೆ ಅನಾವಶ್ಯಕವಾಗಿ ಮಾತನಾಡುತ್ತಾರೆ. ಅದೇ ಈಗಿನ ದೋಷ.

ಇಡೀ ವೈದಿಕ ಜ್ಞಾನವು “ನಾನು ಈ ದೇಹವಲ್ಲ” ಎಂಬ ಸತ್ಯದ ಮೇಲೆಯೇ ಕೇಂದ್ರೀಕೃತವಾಗಿದೆ. ಆದರೆ ಜನರಿಗೆ ಈ ಸತ್ಯವನ್ನು ಅರ್ಥ ಮಾಡಿಕೊಳ್ಳುವುದು ಬದುಕಿನ ಅಗತ್ಯ ಎಂದು ಗೊತ್ತಿಲ್ಲದ ಕಾರಣ, ದೊಡ್ಡ ದೊಡ್ಡ ಪತ್ರಿಕೆಗಳು ಅಸಂಬದ್ಧ ಅಥವಾ ಕಳಪೆ ಸುದ್ದಿ ಮತ್ತು ಜಾಹೀರಾತುಗಳಿಂದ ತುಂಬಿರುತ್ತವೆ. ಆದರೆ ಆಧ್ಯಾತ್ಮಿಕ ಜ್ಞಾನದ ಅಗತ್ಯದ ಬಗೆಗೆ ಚಕಾರವಿಲ್ಲ.

ಗೃಹಸ್ಥ, ವಿವಾಹಿತನಾಗಿರುವುದು ತಪ್ಪಲ್ಲ. ಆದರೆ ಆತ್ಮದ ಅಗತ್ಯದ ಬಗೆಗೆ ಅಜ್ಞಾನಿಯಾಗಿರುವುದು ತಪ್ಪು.

ನಿರಾಕಾರವಾದಿಗಳು ವೈವಾಹಿಕ ಜೀವನವನ್ನು ಮಾಯೆಯೆಂದು ನಿರಾಕರಿಸಿ ಸಂನ್ಯಾಸಿಗಳಾಗುತ್ತಾರೆ. ಆದರೆ ಅವರಿಗೆ ಬದುಕಿನ ಗುರಿ ಬಗೆಗೆ ಕಲ್ಪನೆಯೇ ಇಲ್ಲ. “ಈ ವೈವಾಹಿಕ ಜೀವನ ತೊಂದರೆಯದು” ಎಂದು ಸುಮ್ಮನೆ ನಕಾರಾತ್ಮಕವಾಗಿ ಯೋಚಿಸುತ್ತಾರೆ. ಅತ್ಯುನ್ನತ ಲೌಕಿಕ ಸ್ಥಾನದಲ್ಲಿಯೂ ಸುಖ ಸಂತೋಷವಿಲ್ಲ ಎಂಬುವುದನ್ನು ಅವರು ಗ್ರಹಿಸಿದ್ದಾರೆ. ಅತ್ಯಂತ ಶ್ರೀಮಂತ ರಾಷ್ಟ್ರದ ಅಧ್ಯಕ್ಷ ನಿಕ್ಸನ್‌ ಕೂಡ ಸುಖವಾಗಿಲ್ಲ. ಅವರಿಗೆ ಅನೇಕ ರೀತಿಯಲ್ಲಿ ಅಡೆತಡೆಗಳಾಗುತ್ತವೆ ಮತ್ತು ಅವರ ಮೇಲೆ ದಾಳಿಯಾಗುತ್ತದೆ. ಅವರಿಗೆ ತಮ್ಮನ್ನು ರಕ್ಷಿಸಿಕೊಳ್ಳುವುದು ಅಥವಾ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದು ಹೇಗೆಂದು ಗೊತ್ತಿಲ್ಲ.

ಪ್ರತಿಯೊಬ್ಬರೂ ಒಂದು ಅಂಶವನ್ನು ತಪ್ಪುತ್ತಿದ್ದಾರೆ. “ನನಗೇಕೆ ಅಡೆತಡೆ, ತೊಂದರೆ? ನಾನು ಅಮೆರಿಕದ ಅಧ್ಯಕ್ಷನಾದೆ. ಆದರೂ ನನಗೆ ಸಂಕಷ್ಟ. ನಾನು ಸಾಮಾನ್ಯ ವಕೀಲನಾಗಿದ್ದಾಗ, ಯಾರೂ ತಲೆ ಕೆಡಿಸಿಕೊಳ್ಳಲ್ಲ. ಆಗ ಕೂಡ ನನಗೆ ಸುಖ ಸಂತೋಷವಿಲ್ಲ. ನಾನು ನನ್ನ ಸ್ಥಾನವನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿದೆ. ಈಗ ನಾನು ಲೌಕಿಕ ಲೋಕದಲ್ಲಿ ಯಶಸ್ಸಿನ ಅತ್ಯುನ್ನತ ಸ್ಥಾನಕ್ಕೆ ಬಂದಿರುವೆ. ಆದರೂ ನನಗೆ ಸಂಕಷ್ಟವೇ.”

ಪ್ರತಿಯೊಬ್ಬರೂ ಕೂಡ ತಮ್ಮ ಬದುಕನ್ನು ಈ ರೀತಿ ಪ್ರಶ್ನಿಸಿಕೊಳ್ಳಬೇಕು. ಆದರೆ ಜನರು ವಿಷಯಗಳನ್ನು ಸರಿಯಾಗಿ ಗಮನಿಸುವುದಿಲ್ಲ. ಯಾರೂ ಈ ರೀತಿ ಯೋಚಿಸುವುದಿಲ್ಲ : “ನನ್ನ ಬದುಕಿನ ಆರಂಭದಿಂದಲೂ ನಾನು ಪೇಚಾಟಕ್ಕೆ ಒಳಗಾಗಿದ್ದೇನೆ. ನನ್ನ ತಾಯಿಯ ಗರ್ಭದಲ್ಲಿದ್ದಾಗಲೂ ನಾನು ತೊಂದರೆಗೆ ಸಿಲುಕಿದ್ದೆ. ಅದರೊಳಗೆ ನನ್ನನ್ನು ಅಡಕಿಸಲಾಗಿತ್ತು. ನಾನು ಗರ್ಭದಿಂದ ಹೊರಬಂದಾಗಲೂ ಮುಜುಗರಕ್ಕೆ ಒಳಪಟ್ಟೆ. ನನ್ನ ನೋವು ನಲಿವನ್ನು ವ್ಯಕ್ತಪಡಿಸುವುದು ನನಗೆ ಸಾಧ್ಯವಿರಲಿಲ್ಲ. ಇರುವೆ ನನ್ನನ್ನು ಕಚ್ಚುತ್ತಿತ್ತು. ನಾನು ಅಳುತ್ತಿದ್ದೆ. ಆದರೆ ನನ್ನ ಅಮ್ಮ ನನಗೆ ನನ್ನ ಹೊಟ್ಟೆ ತುಂಬಿದ್ದರೂ ಇನ್ನಷ್ಟು ಹಾಲು ಕೊಟ್ಟಳು.”

ಇದು ಮಗುವಿನ ಸಂಕಟ. ಅವನಿಗೆ ಬೇಕಾಗಿದ್ದು ಒಂದು, ಅಮ್ಮ ಕೊಟ್ಟದ್ದು ಮತ್ತೊಂದು. ಮಗುವಿಗೆ ವ್ಯಕ್ತಪಡಿಸಲು ಸಾಧ್ಯವಾಗದ ಕಾರಣ ತಾಯಿಗೆ ಅದರ ನೋವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಇಲ್ಲವಾದರೆ ಮಗು ಏಕೆ ಅಳಬೇಕು? ಅದಕ್ಕೆ ಏನೋ ನೋವು. ಆದರೆ ತಾಯಿಗೆ ಅದರ ಉಪಶಮನ ಗೊತ್ತಿಲ್ಲ.

ಅನಂತರ ಬಾಲ್ಯ. ನನಗೆ ಶಾಲೆಗೆ ಹೋಗಲು ಇಷ್ಟವಿಲ್ಲ. ಆದರೆ ನನ್ನ ತಂದೆ ತಾಯಿ ಒತ್ತಾಯಿಸುತ್ತಾರೆ. ಹೆಚ್ಚು ಕಷ್ಟ. ಅನಂತರ ನಾನು ವಿವಾಹಿತನಾಗುವೆ ಅಥವಾ ಲೈಂಗಿಕ ಜೀವನ ಆನಂದಿಸುವೆ ಮತ್ತು ಮಕ್ಕಳನ್ನು ಪಡೆಯುವೆ. ಇನ್ನಷ್ಟು ತೊಡಕುಗಳು. ಅನಂತರ ನಾನು ಸಾಯುವೆ ಮತ್ತು ತಾಯಿಯೊಬ್ಬಳ ಗರ್ಭವನ್ನು ಪ್ರವೇಶಿಸುವೆ. ಅಲ್ಲಿ ನನ್ನನ್ನು ಗರ್ಭಪಾತದಿಂದ ಕೊಲ್ಲಬಹುದು.

ನಮ್ಮ ಇಡೀ ಬದುಕು ತೊಡಕು, ಪೇಚಾಟ ಸಂಕಷ್ಟಗಳಿಂದ ತುಂಬಿದೆ. ಆದರೆ “ನನಗೆ ಯಾಕೆ ಸಂಕಷ್ಟ, ತೊಂದರೆ ಅಥವಾ ಅಡೆತಡೆ?” ಎಂಬ ಪ್ರಶ್ನೆ ಉದ್ಭವಿಸದು.

ಶೂನ್ಯ ಪರಿಹಾರ

“ನನ್ನನ್ನು ಸೊನ್ನೆ, ಶೂನ್ಯವನ್ನಾಗಿ ಮಾಡಿ. ಆಗ ನೋವು ನಲಿವು ಇರುವುದಿಲ್ಲ. ಸಂಕಷ್ಟಗಳೂ ಇರುವುದಿಲ್ಲ” ಎಂದು ಮಾಯಾವಾದಿಗಳು ಯೋಚಿಸುತ್ತಾರೆ. ನಿರಾಕಾರವಾದ ಮತ್ತು ಶೂನ್ಯವಾದ ಎರಡೂ ಒಂದೇ : “ಇದನ್ನು ಶೂನ್ಯ ಮಾಡಿ.” ಮಾಯಾವಾದಿಗಳು ಆತ್ಮಹತ್ಯೆ ಮಾಡಿಕೊಂಡು ಎಲ್ಲ ಸಂಕಷ್ಟಗಳನ್ನೂ ದೂರಮಾಡಿಕೊಳ್ಳಬಯಸುವ ಮೂರ್ಖ ಜನರಂತೆ. “ನಾವು ಈ ದೇಹವನ್ನು ಕೊನೆಗಾಣಿಸಿದರೆ ನನ್ನ ಕಷ್ಟಗಳು ಅಂತ್ಯಗೊಳ್ಳುತ್ತವೆ” ಎಂದು ಅವರು ಯೋಚಿಸುತ್ತಾರೆ.

ಎಲ್ಲ ಸಂಕಟಗಳಿಂದ ಆತ್ಮಕ್ಕೆ ಹೇಗೆ ಪರಿಹಾರ ದೊರೆಯುತ್ತದೆ ಎಂಬುವುದು ಜನರಿಗೆ ತಿಳಿಯದು. “ನಾನು ಆಧ್ಯಾತ್ಮಿಕ ಆತ್ಮ. ನನ್ನ ಅಗತ್ಯಗಳು ದೇಹದ ಅಗತ್ಯಕ್ಕಿಂತ ಭಿನ್ನ” ಎಂಬುವುದನ್ನು ಯಾರೂ ಗಮನಿಸುವುದಿಲ್ಲ.

ದೇಹವು ಆತ್ಮಕ್ಕೆ ತಾತ್ಕಾಲಿಕ ನಿವಾಸ. ಆದರೆ ನಾವು ಯಾವಾಗಲೂ ಈ ನಿವಾಸವನ್ನು ಶುದ್ಧವಾಗಿಡಲು ಪ್ರಯತ್ನಿಸುತ್ತೇವೆ. ಅದು ನಮ್ಮ ವ್ಯವಹಾರ. ಬೇರೊಂದು ವ್ಯವಹಾರವಿದೆ ಎಂಬುವುದು ನಮಗೆ ಗೊತ್ತಿಲ್ಲ. ಅದು ನಮ್ಮ ದೋಷ.

ಆತ್ಮದ ವಿಜ್ಞಾನ, ಆತ್ಮ ತತ್ತ್ವವನ್ನು ಅರ್ಥಮಾಡಿಕೊಳ್ಳುವುದು ಎಲ್ಲ ಮಾನವ ಜೀವಿಗಳ ಕರ್ತವ್ಯ. ಸನಾತನ ಗೋಸ್ವಾಮಿಯವರು ಶ್ರೀ ಚೈತನ್ಯ ಮಹಾಪ್ರಭುಗಳ ಬಳಿಗೆ ಹೋದಾಗ ಈ ಅಂಶವನ್ನು ಪ್ರಸ್ತಾವಿಸಿದರು. ಸನಾತನ ಗೋಸ್ವಾಮಿಯವರು ಹೇಳಿದರು, “ನಾನು ಸರಕಾರದಲ್ಲಿ ಸಚಿವನಾಗಿದ್ದೆ. ಹೀಗಾಗಿ ಸಾಕಷ್ಟು ಆರಾಮವಾಗಿದ್ದೆ. ಜನರು ನನ್ನನ್ನು ವಿದ್ವಾಂಸನೆಂದು ಕರೆಯುತ್ತಿದ್ದರು. ಆದರೆ ಸಚಿವನಾಗಿದ್ದರೂ ಕೂಡ ನಾನು ಏಕೆ ನೋವು ಅನುಭವಿಸುತ್ತಿದ್ದೆ ಗೊತ್ತಿರಲಿಲ್ಲ. ನಾನು ವಿದ್ವಾಂಸ ಎಂದು ಜನರು ಹೇಳುತ್ತಾರೆ. ಆದರೆ ಈ ಸಂಕಟದಿಂದ ಹೇಗೆ ಪಾರಾಗುವುದೆಂದು ನನಗೆ ತಿಳಿಯದು.”

ಸಂಕಷ್ಟದಿಂದ ಪಾರಾಗಲು ಜನರು ಪ್ರಯತ್ನಿಸುತ್ತಿದ್ದಾರೆ. ಆದರೆ ಹೇಗೆಂದು ಅವರಿಗೆ ಗೊತ್ತಿಲ್ಲ. ಅದರ ಬಗೆಗೆ ಅವರು ವಿಚಾರಿಸಬೇಕು. ಅವರಿಗೆ ಆತ್ಮದ ಸ್ವಭಾವ, ಅಥವಾ ಆತ್ಮಕ್ಕೆ ಏನು ಬೇಕು ಮತ್ತು ಆತ್ಮವು ಹೇಗೆ ನೆಮ್ಮದಿಯಿಂದ ಇರುತ್ತದೆ ಎಂಬುವುದು ಗೊತ್ತಿಲ್ಲ.

ಆತ್ಮದ ಬಗೆಗೆ ಶ್ರೀ ಚೈತನ್ಯರು ಮಾಹಿತಿ ನೀಡಿದ್ದಾರೆ. ಜೀವೇರ ಸ್ವರೂಪ ಹಯ ಕೃಷ್ಣೇರ ನಿತ್ಯ ದಾಸ : “ಪ್ರತಿಯೊಬ್ಬ ಜೀವಿಯೂ ಕೃಷ್ಣನ ಶಾಶ್ವತ ಸೇವಕ.” ಆದುದರಿಂದ ನಾವು ಕೃಷ್ಣನಿಗೆ ಸೇವೆ ಸಲ್ಲಿಸುವ ವೇದಿಕೆಗೆ ಬರದಿದ್ದರೆ ಸಂತೋಷ, ಸುಖದ ಪ್ರಶ್ನೆಯೇ ಇಲ್ಲ. ಕೃಷ್ಣನು ಅದನ್ನೇ ಹೇಳುತ್ತಾನೆ. ದುಃಖಾಲಯಂ ಅಶಾಶ್ವತಂ – “ಈ ಜಗತ್ತು ನೋವುಗಳಿಂದ ತುಂಬಿದೆ.”

ಪಂಜರ ಬದಲು

ನಾವು ದೇಹವಲ್ಲ ಎಂಬ ವಿಷಯವು ಇಡೀ ಜಗತ್ತಿಗೆ ಗೊತ್ತಿಲ್ಲ. ದೇಹವು ನಮ್ಮ ಪಂಜರ. ಕೆಲವು ಬಾರಿ ನಮಗೆ ಚಿನ್ನದ ಪಂಜರ, ಕೆಲವು ಬಾರಿ ಕಬ್ಬಿಣದ ಪಂಜರ, ಕೆಲವು ಬಾರಿ ಬೆಳ್ಳಿ ಪಂಜರ ಮತ್ತು ಕೆಲವು ಬಾರಿ ಮರದ ಪಂಜರ ಲಭ್ಯವಾಗುತ್ತದೆ. ಪಂಜರವನ್ನು ಬದಲಿಸುವುದರಿಂದ ನಾವು ಸಂತೋಷದಿಂದ ಇರಬಹುದೆಂದು ಭಾವಿಸುತ್ತೇವೆ. ಆದರೆ ಎಲ್ಲಿಯವರೆಗೆ ನಾವು ಸ್ವತಂತ್ರರಲ್ಲವೋ ಅಲ್ಲಿಯವರೆಗೆ ನಾವು ಸಂತೋಷದಿಂದ ಇರುವುದಿಲ್ಲ. ಪಂಜರದಲ್ಲಿರುವ ಪಕ್ಷಿಯು ಸಂತೋಷದಿಂದ ಇರುವುದಿಲ್ಲ. ಪಂಜರವು ಚಿನ್ನದ್ದಾಗಿರಬಹುದು, ಆದರೆ ಅದು ಗಣನೆಗೆ ಬರುವುದಿಲ್ಲ. ಅದೇ ರೀತಿ ನಾವು ಈ ಪಂಜರದಲ್ಲಿ ಸುಖವಾಗಿ ಇರಲಾಗದು. ನಾವು ಮುಕ್ತರಾಗಬೇಕು. ಅದನ್ನು ವಿಮೋಚನೆ, ಮುಕ್ತಿ ಎನ್ನುತ್ತಾರೆ. ಅದು ಅಗತ್ಯ.

“ನಾನು ಸ್ವತಂತ್ರನಾದರೆ ಎಲ್ಲಿಗೆ ಹೋಗಲಿ? ನಾನು ಆಕಾಶದಲ್ಲಿ ಸ್ವತಂತ್ರನಾಗಿರುವೆ.” ಅದು ನಿರಾಕಾರವಾದ. ಆಕಾಶವು ನಿರಾಕಾರ. ಹಕ್ಕಿಗೆ ಸ್ವಾತಂತ್ರ್ಯ ನೀಡಿದರೆ ಮತ್ತು ಅದು ಆಕಾಶದಲ್ಲಿ ಹಾರಾಡಿದರೆ ಅದು ಸಂತೋಷದಿಂದ ಇರುತ್ತದೆಯೆ? ಇಲ್ಲ. ಏಕೆಂದರೆ ಅದಕ್ಕೆ ಅದಕ್ಕಿಂತ ಹೆಚ್ಚಿನದು ಬೇಕು. ಆದುದರಿಂದ ಅದು “ಪಂಜರದಲ್ಲಿಯೇ ಚೆನ್ನಾಗಿತ್ತು. ಈ ಸ್ವಾತಂತ್ರ್ಯದ ಬೆಲೆಯಾದರೂ ಏನು? ನಾನು ಸಂತೋಷವಾಗಿಲ್ಲ.” ಅದು ಪುನಃ ಪಂಜರಕ್ಕೆ ಮರಳುತ್ತದೆ.

ಭಾರತದಲ್ಲಿ ಕೆಲವು ಬಾರಿ ಜನರು ಪಂಜರದೊಳಗಿನ ಒಂದು ಹಕ್ಕಿಯನ್ನು ಬಹಿರಂಗ ಮೈದಾನಕ್ಕೆ ಒಯ್ಯುವರು. ಅಲ್ಲಿ ಅವರು ಪಂಜರದ ಬಾಗಿಲು ತೆರೆಯುವರು ಮತ್ತು ಹಕ್ಕಿಯು ಸ್ವಲ್ಪ ಸಮಯ ಹಾರಾಡುತ್ತದೆ. ಅದಕ್ಕೆ ಸ್ವಾತಂತ್ರ್ಯ ಕೊಡಲಾಗಿದೆ. ಅನಂತರ ವ್ಯಕ್ತಿಯು ಹಕ್ಕಿಯನ್ನು ಕರೆಯುತ್ತಾನೆ ಮತ್ತು ಅದು ವಾಪಸಾಗುತ್ತದೆ. ಹಕ್ಕಿಯು ಯೋಚಿಸುತ್ತಿರುತ್ತದೆ, “ನನಗೆ ಈಗ ಸ್ವಾತಂತ್ರ್ಯವನ್ನು ನೀಡಲಾಗಿದೆ. ಆದರೆ ನಾನು ಎಲ್ಲಿಗೆ ಹೋಗಲಿ? ನಾನು ಉಣ್ಣಬೇಕು.” ಆದುದರಿಂದ ಅದು ಹಿಂದಿರುಗುತ್ತದೆ : “ಪಂಜರದಲ್ಲಿ ಬದುಕುವುದೇ ವಾಸಿ.”

ಮಾಯಾವಾದಿಗಳ ಸ್ಥಿತಿ ಹಾಗೆ ಇದೆ. ನಾವು ಕೃಷ್ಣನಲ್ಲಿಗೆ ಹೋಗುತ್ತಿದ್ದೇವೆ ಎಂಬುವುದು ನಮಗೆ, ಭಕ್ತರಿಗೆ ಖಚಿತವಾಗಿ ಗೊತ್ತು. ಆದರೆ ಮಾಯಾವಾದಿಗಳಿಗೆ ಕೃಷ್ಣನಿಲ್ಲ. ಆದುದರಿಂದ ಅವರು ಲೌಕಿಕ ಜಗತ್ತಿಗೆ ಹಿಂದಿರುಗುತ್ತಾರೆ. ಏಕೆಂದರೆ ಅವರಿಗೆ ನೆಲೆ ಇಲ್ಲ, ಅವರು ಹಿಂದಿರುಗುತ್ತಾರೆ. ಅವರಿಗೆ ಪರಾತ್ಪರನ ನಿರಾಕಾರ ಲಕ್ಷಣದಲ್ಲಿ ಹೆಚ್ಚು ಸಮಯ ಇರುವುದು ಸಾಧ್ಯವಿಲ್ಲ.

ಆದುದರಿಂದ ಮಾಯಾವಾದಿಗಳ ಶೂನ್ಯವಾದ ಅಥವಾ ನಿರಾಕಾರವಾದ ಸಿದ್ಧಾಂತವು ಒಳೆಯದಲ್ಲ. ನೀವು ನಿರಾಕಾರ ಅಥವಾ ಶೂನ್ಯದಲ್ಲಿ ಇರುವುದು ಸಾಧ್ಯವಿಲ್ಲ. ಏಕೆಂದರೆ ನೀವು ಜೀವಿ, ಪರಮ ಜೀವಿ ಕೃಷ್ಣನ ಅವಿಭಾಜ್ಯ ಅಂಗ. ಕೃಷ್ಣನು ಆನಂದಮಯೋ ಅಭ್ಯಾಸಾತ್‌ : ಅವನು ಸದಾ ಆನಂದೋಲ್ಲಾಸದಲ್ಲಿ ಇರುತ್ತಾನೆ. ಕೃಷ್ಣನ ಒಂದು ಭಾಗವಾಗಿ ನಿಮಗೂ ಅಂತಹ ಆನಂದ ಬೇಕೆನಿಸುತ್ತದೆ. ಆದರೆ ನೀವು ಆಕಾಶದಲ್ಲಿ, ಶೂನ್ಯದಲ್ಲಿ ಹೇಗೆ ಆನಂದೋಲ್ಲಾಸದಲ್ಲಿ ಇರಬಲ್ಲಿರಿ? ಅದೇ ಮಾಯಾವಾದಿ ಸಿದ್ಧಾಂತ ಮತ್ತು ಕೃಷ್ಣ ಪ್ರಜ್ಞಾ ತತ್ತ್ವದ ನಡುವಣ ವ್ಯತ್ಯಾಸ.

ನೀವು ಈ ಪಂಜರ, ಲೌಕಿಕ ಲೋಕದಿಂದ ಮುಕ್ತಿ ಹೊಂದಿದರೂ ಸುಖವಾಗಿರಲಾರಿರಿ. ಮತ್ತು ನಿಮ್ಮನ್ನು ನೀವು ನಿರಾಕಾರವಾದ ಮತ್ತು ಶೂನ್ಯವಾದದಲ್ಲಿ ನೆಲೆಸುವಂತೆ ಮಾಡಿದರೆ ಅದು ನಿಮಗೆ ಸಹಾಯ ಮಾಡುವುದಿಲ್ಲ.

ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಿರಾಕಾರವಾದ ಮತ್ತು ಶೂನ್ಯವಾದ ನಿಮಗೆ ಸಹಾಯ ಮಾಡುವುದಿಲ್ಲ. ಆಧ್ಯಾತ್ಮಿಕ ವೈವಿಧ್ಯದಲ್ಲಿ ಎಲ್ಲವೂ ಇರುವ ಭಗವದ್ಧಾಮಕ್ಕೆ, ಕೃಷ್ಣನಲ್ಲಿಗೆ ನೀವು ಹಿಂದಿರುಗಲೇ ಬೇಕು. ನೀವು ಕೃಷ್ಣನೊಂದಿಗೆ ಆಡಬಹುದು, ಕೃಷ್ಣನೊಂದಿಗೆ ನರ್ತಿಸಬಹುದು, ಕೃಷ್ಣನೊಂದಿಗೆ ಮಾತನಾಡಬಹುದು, ಕೃಷ್ಣನೊಂದಿಗೆ ಜಗಳವಾಡಬಹುದು. ಕೃಷ್ಣನ ಮಿತ್ರರಾದ ಗೋಪಾಲಕ ಬಾಲಕರು ಅವನೊಂದಿಗೆ ಜಗಳವಾಡುತ್ತಾರೆ. ಅವರು ಆ ರೀತಿ ಆನಂದೋಲ್ಲಾಸ ಅನುಭವಿಸುತ್ತಾರೆ. ಕೃಷ್ಣನೊಂದಿಗಿನ ಆಧ್ಯಾತ್ಮಿಕ ಲೋಕದಲ್ಲಿ ಎಲ್ಲವೂ ಸುಖಮಯವೇ.

ಅಪಶ್ಯತಾಂ ಆತ್ಮ ತತ್ತ್ವಂ ಎಂದು ಹೇಳಿರುವ, ಆತ್ಮದ ಸ್ವಭಾವ ಅರಿಯದವರಿಗೆ ಆತ್ಮಕ್ಕೆ ಏನು ಬೇಕು ಮತ್ತು ಆತ್ಮವು ಹೇಗೆ ಸಂತೋಷದಿಂದ ಇರಬಲ್ಲದು ಎಂಬ ಬಗೆಗೆ ಮಾಹಿತಿ ನೀಡಲು ಕೃಷ್ಣ ಪ್ರಜ್ಞಾ ಆಂದೋಲನವು ಪ್ರಯತ್ನಿಸುತ್ತಿದೆ. ಅವರು ಪಂಜರದಲ್ಲಿಯೇ ಸುಖದಿಂದ ಇರಲು ಪ್ರಯತ್ನಿಸುತ್ತಾರೆ. ಅಷ್ಟೇ. ಆದರೆ ಅದು ಸಾಧ್ಯವಿಲ್ಲ.

ಪಂಜರದಲ್ಲಿ ಇರಲಿ ಅಥವಾ ಹೊರಗಿರಲಿ, ಕೃಷ್ಣ ಪ್ರಜ್ಞಾ ಸಿದ್ಧಾಂತವನ್ನು ಅರಿಯದ ಜನರು ಅಸುಖಿಗಳು. ಪಂಜರದ ಹೊರಗಿನ ಅವರ ಕಲ್ಪಿತ ಸ್ವಾತಂತ್ರ್ಯವೂ ಅಸುಖವೇ. ಏಕೆಂದರೆ, ಅವರಿಗೆ ಎಲ್ಲಿಗೆ ಹೋಗಬೇಕೆಂಬುವುದೇ ಗೊತ್ತಿರುವುದಿಲ್ಲ. ಆದುದರಿಂದ ಆ ನಿರಾಕಾರ ಸ್ಥಿತಿಯಲ್ಲಿ ಕೆಲ ಸಮಯವಿದ್ದು ಅವರು ಪಂಜರಕ್ಕೇ ಹಿಂದಿರುಗುತ್ತಾರೆ. ಈ ರೀತಿ ಬರುವುದು ಮತ್ತು ಹೋಗುವುದರಿಂದ ಅವರಿಗೆ ಏನೂ ಸಹಾಯವಾಗದು.

ಆತ್ಮ ತತ್ತ್ವ ಎಂದರೆ ಆತ್ಮದ ಲಕ್ಷಣ ಅರಿಯುವುದು. ಅದನ್ನೆಲ್ಲಾ ಕೃಷ್ಣನು ಭಗವದ್ಗೀತೆಯಲ್ಲಿ ವಿವರಿಸಿದ್ದಾನೆ. ಅವನ ಬೋಧನೆ ಮತ್ತು ಸೂಚನೆಗಳ ಲಾಭವನ್ನು ನಾವು ಪಡೆದುಕೊಂಡರೆ ನಮ್ಮ ಬದುಕು ಯಶಸ್ವಿಯಾಗುತ್ತದೆ. ವಂದನೆಗಳು.

ಈ ಲೇಖನ ಶೇರ್ ಮಾಡಿ