ನಮ್ಮ ಇಚ್ಛೆಯಂತೆ ಕೃಷ್ಣನು ಅವನನ್ನು ಮರೆಯುವ ಅವಕಾಶವನ್ನು ನಮಗೆ ನೀಡುತ್ತಾನೆ.
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ನವೆಂಬರ್ 20, 1972ರಂದು ಟೋಕಿಯೋದಲ್ಲಿ ನೀಡಿದ ಉಪನ್ಯಾಸ
ಆತ್ಮಮಾಯಾಮೃತೇ ರಾಜನ್ ಪರಸ್ಯಾನುಭವಾತ್ಮನಃ ।
ನ ಘಟೇತಾರ್ಥ ಸಂಬಂಧಃ ಸ್ವಪ್ನದ್ರಷ್ಟುರ್ ಇವಾಂಜಸಾ ॥
ಶ್ರೀ ಶುಕಮುನಿಗಳು ಹೇಳಿದರು : ಎಲೈ ರಾಜನೇ, ದೇವೋತ್ತಮ ಪರಮ ಪುರುಷನ ಶಕ್ತಿಯಿಂದ ಪ್ರಭಾವಿತರಾಗುವ ಹೊರತು ಶುದ್ಧ ಪ್ರಜ್ಞೆಯಲ್ಲಿರುವ ಶುದ್ಧಾತ್ಮನು ಐಹಿಕ ಶರೀರದೊಂದಿಗೆ ಹೊಂದಿರುವ ಸಂಬಂಧಕ್ಕೆ ಯಾವ ಅರ್ಥವೂ ಇಲ್ಲ. ಅಂತಹ ಸಂಬಂಧವು ಕನಸುಗಾರ ತನ್ನ ಶರೀರದ ಕಾರ್ಯನಿರ್ವಹಣೆಯನ್ನು ನೋಡಿದಂತೆ.
“ಶ್ರೀ ಕೃಷ್ಣನೊಂದಿಗಿರುವ ಜೀವಿಯು ಅದು ಹೇಗೆ ಐಹಿಕ ಜಗತ್ತಿನೊಳಗೆ ಬೀಳುತ್ತಾನೆ?” ಎಂದು ಅನೇಕ ಜನರು ಕೇಳುತ್ತಾರೆ. ಆ ಪ್ರಶ್ನೆಗೆ ಇಲ್ಲಿ ಉತ್ತರಿಸಲಾಗಿದೆ. ಜೀವಿಯ ಸ್ಥಿತಿಯು ಲೌಕಿಕ ಶಕ್ತಿಯ ಪ್ರಭಾವವೇ ಆಗಿದೆ. ವಾಸ್ತವವಾಗಿ ಅವನು ಪತನಹೊಂದಿಲ್ಲ. ಉದಾಹರಣೆಯನ್ನು ನೀಡಬಹುದು : ಚಂದ್ರನ ಮುಂದೆ ಮೋಡಗಳು ಹೋಗುತ್ತಿರುವಾಗ ಚಂದ್ರನೇ ಚಲಿಸುತ್ತಿರುವಂತೆ ಕಾಣುತ್ತದೆ. ವಾಸ್ತವವಾಗಿ ಚಂದ್ರ ಚಲಿಸುತ್ತಿಲ್ಲ. ಅದೇ ರೀತಿ, ಪರಾತ್ಪರನ ಆಧ್ಯಾತ್ಮಿಕ ಕಿಡಿಯಾದ ಜೀವಿಯು ಪತನಹೊಂದಿಲ್ಲ. ಆದರೆ ಅವನು ಯೋಚಿಸುತ್ತಾನೆ, “ನಾನು ಪತನಗೊಂಡಿದ್ದೇನೆ. ನಾನು ಐಹಿಕ. ನಾನು ಈ ದೇಹ.”

ದೇಹಕ್ಕೆ ಆತ್ಮದೊಂದಿಗೆ ಸಂಬಂಧವಿಲ್ಲ. ಅದು ನಮ್ಮ ಅನುಭವಕ್ಕೇ ಬರುತ್ತದೆ. ದೇಹವು ಬದಲಾಗುತ್ತಿರುತ್ತದೆ, ಸಾಯುತ್ತದೆ. ಆದರೆ ನಾನು ಮಾತ್ರ ಅದೇ ರೀತಿ ಇರುತ್ತೇನೆ. ಕೃಷ್ಣನ ಬಹಿರಂಗ ಶಕ್ತಿಯೇ ದೇಹದೊಂದಿಗೆ ನಮಗೆ ಸಂಪರ್ಕವಿದೆ ಎಂಬ ಅಭಿಪ್ರಾಯಕ್ಕೆ ಕಾರಣ. ನಾವು ಕೃಷ್ಣನನ್ನು ಮರೆತಾಗ ಆ ಮಾಯಾ ಶಕ್ತಿಯು ಹೊರಹೊಮ್ಮುತ್ತದೆ. ನಮಗೆ ಮರೆಯುವುದು ಬೇಕಾಗಿತ್ತು. ಕೃಷ್ಣನನ್ನು ಕೈ ಬಿಟ್ಟು ಐಹಿಕ ಲೋಕದಲ್ಲಿ ಸುಖಿಸುವುದು ನಮಗೆ ಬೇಕಾಗಿತ್ತು. ಆದುದರಿಂದ ಕೃಷ್ಣನು ನಮಗೆ ಅವಕಾಶ ನೀಡುತ್ತಿದ್ದಾನೆ. ಉದಾಹರಣೆಗೆ, ನಾಟಕದಲ್ಲಿ ಪಾತ್ರ ವಹಿಸುವಾಗ, `ನಾನು ರಾಜ’ ಎಂಬ ಭಾವನೆ ನಿಮಗೆ ಉಂಟಾದರೆ ಆಗ ನೀವು ಅದ್ಭುತವಾಗಿ ನಿರ್ವಹಿಸುವಿರಿ. `ನಾನು ಸಾಮಾನ್ಯ ಮನುಷ್ಯ’ ಎಂದು ನೀವು ಭಾವಿಸಿಕೊಂಡರೆ ನೀವು ರಾಜನ ಪಾತ್ರವನ್ನು ಚೆನ್ನಾಗಿ ನಿರ್ವಹಿಸುವುದು ಸಾಧ್ಯವಿಲ್ಲ. ಪಾತ್ರದ ಬಗೆಗೆ ಭಾವನೆ ಇರಬೇಕು. ನೀವು ರಾಜನ ಪಾತ್ರ ವಹಿಸುವಾಗ ನೀವು ರಾಜನೆಂಬ ನಂಬಿಕೆಯಿಂದ ನಿರ್ವಹಿಸಬೇಕು. ನೀವು ಸಾಮಾನ್ಯ ವ್ಯಕ್ತಿ ಎಂಬುವುದನ್ನು ಮರೆಯಬೇಕು. ಆಗ ನೀವು ರಾಜನ ಪಾತ್ರವನ್ನು ಚೆನ್ನಾಗಿ ನಿರ್ವಹಿಸಬಹುದು ಮತ್ತು ಪ್ರೇಕ್ಷಕರು ಮೆಚ್ಚುತ್ತಾರೆ. ಆದರೆ ನೀವು “ನಾನು ಸಾಮಾನ್ಯ ವ್ಯಕ್ತಿ, ರಾಜನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ” ಎಂದು ಯೋಚಿಸಿದರೆ ಅಭಿನಯ ಚೆನ್ನಾಗಿರುವುದಿಲ್ಲ.
ಹರಿ ನೀಡುವ ಅವಕಾಶ
ಆದುದರಿಂದ, ಭೋಕ್ತನಾದ ಕೃಷ್ಣನ ಪಾತ್ರವನ್ನು ನಿರ್ವಹಿಸುವ ಇಚ್ಛೆ ನಮಗಿರುವುದರಿಂದ ಕೃಷ್ಣನು ನಮಗೆ ಅವಕಾಶ ನೀಡುತ್ತಿದ್ದಾನೆ “ನೀವು ನನ್ನ ಹಾಗೆ ಭಾವಿಸಿಕೊಳ್ಳಿ.” ಎಂತಹ ಭಾವನೆ? “ನಾನೇ ಮಾಲೀಕ, ನಾನೇ ರಾಜ, ನಾನೇ ಕೃಷ್ಣ, ನಾನೇ ದೇವರು” ಎಂದು ಕೃಷ್ಣನೇ ಸೃಷ್ಟಿಸಿರುವ ಭಾವನೆ. ಅವನು ಹೇಳುತ್ತಾನೆ, “ಒಳ್ಳೆಯದು, ನಿಮಗೆ ರಾಜನ ಪಾತ್ರ ವಹಿಸುವ ಇಚ್ಛೆ ಇದೆಯಾ? ಹಾಗಾದರೆ ನಾನು ನಿಮಗೆ ಅದಕ್ಕಾಗಿ ತರಬೇತಿ ನೀಡುವೆ.”
ನೀವು ವಹಿಸುವ ಪಾತ್ರದ ಭಾವನೆ ನಿಮ್ಮಲ್ಲಿ ಉಂಟಾಗುವಂತೆ ನಾಟಕ ನಿರ್ದೇಶಕನು ಪ್ರಯತ್ನಿಸುತ್ತಾನೆ. ನಾನು ಚಿಕ್ಕವನಾಗಿದ್ದಾಗ ಶ್ರೀ ಚೈತನ್ಯರನ್ನು ಕುರಿತ ನಾಟಕದಲ್ಲಿ ಪಾತ್ರ ವಹಿಸಿದ್ದೆ. `ಆ ಪಾತ್ರದ ಭಾವನೆ ಹೊಂದಿ’ ಎಂದು ನಮ್ಮ ನಾಟಕದ ನಿರ್ದೇಶಕ ಅಮೃತ್ ಲಾಲ್ ಪದೇ ಪದೇ ಹೇಳುತ್ತಿದ್ದರು. ಹೀಗಾಗಿ, ನಾವು ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದಾಗ ಪ್ರೇಕ್ಷಕರು ಅಳುತ್ತಿದ್ದರು. ನಾಟಕ ಕೃತಕವಾಗಿತ್ತು. ಆದರೆ ಪ್ರೇಕ್ಷಕರ ಮೇಲೆ ಗಾಢ ಪ್ರಭಾವ ಬೀರಿತ್ತು.
ಅದೇ ರೀತಿ ನಮಗೆ ಲೌಕಿಕ ಜಗತ್ತಿನಿಂದ ಆಗಬೇಕಾದುದು ಏನೂ ಇಲ್ಲ. ಆದರೆ ಭಗವಂತನ ಬಹಿರಂಗ ಶಕ್ತಿಯಿಂದ ನಾವೆಷ್ಟು ತರಬೇತಿ ಪಡೆದಿದ್ದೇವೆ ಎಂದರೆ ನಾವು `ನಾನು ಭಾರತೀಯ’, `ನಾನು ಅಮೆರಿಕದವ’, `ನಾನು ಬ್ರಾಹ್ಮಣ’, `ನಾನು ಶೂದ್ರ’, `ನಾನು ಇದು, ನಾನು ಅದು’, `ನಾನು ಇದನ್ನು ಮಾಡಬೇಕು’, `ನನಗೆ ಎಷ್ಟೊಂದು ಕರ್ತವ್ಯಗಳಿವೆ’ ಎಂದೆಲ್ಲಾ ಯೋಚಿಸುತ್ತೇವೆ. ಇವೆಲ್ಲಾ ಭ್ರಮೆ. ಈ ಅಸಂಬದ್ಧಗಳಿಂದ ನಮಗೆ ಆಗಬೇಕಾದುದು ಏನೂ ಇಲ್ಲ. ಆದರೂ ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. `ನಾನು ಈ ರೀತಿ ಮಾಡಬೇಕು, ನಾನು ಇದು, ನಾನು ಅದು’ ಎಂದೇ ಯೋಚಿಸುತ್ತೇವೆ.
ಅದನ್ನು ಇಲ್ಲಿ ವಿವರಿಸಲಾಗಿದೆ. ಆತ್ಮಮಾಯಾಂ ರುತೇ ರಾಜನ್ ಪರಸ್ಯಾನುಭವಾತ್ಮನಃ – ದೇವೋತ್ತಮ ಪರಮ ಪುರುಷನ ಶಕ್ತಿಯಿಂದ ಪ್ರಭಾವಿತರಾಗುವ ಹೊರತು ಶುದ್ಧ ಪ್ರಜ್ಞೆಯಲ್ಲಿರುವ ಶುದ್ಧಾತ್ಮನು ಐಹಿಕ ಶರೀರದೊಂದಿಗೆ ಹೊಂದಿರುವ ಸಂಬಂಧಕ್ಕೆ ಯಾವ ಅರ್ಥವೂ ಇಲ್ಲ.

ಒಬ್ಬನ ಕನಸಿನ ಉದಾಹರಣೆಯನ್ನು ನೀಡಲಾಗಿದೆ. “ಓ, ಹುಲಿ ಇದೆ, ಹುಲಿ ಇದೆ, ಕಾಪಾಡಿ!” ಎಂದು ಅವನು ಕೂಗಿಕೊಳ್ಳುತ್ತಿದ್ದಾನೆ. ಎಚ್ಚರದಿಂದ ಇರುವ ವ್ಯಕ್ತಿಯು ಕೇಳುತ್ತಾನೆ, “ಹುಲಿ ಎಲ್ಲಿದೆ? ನೀನು ಯಾಕೆ ಕೂಗಿಕೊಳ್ಳುತ್ತಿರುವೆ?” ಆದರೆ ಕನಸು ಕಾಣುತ್ತಿರುವ ವ್ಯಕ್ತಿ ಅನುಭವಿಸುತ್ತಿದ್ದಾನೆ, “ಹುಲಿ ನನ್ನ ಮೇಲೆ ಎರಗಿದೆ” ಎನ್ನುತ್ತಾನೆ.
ಆದುದರಿಂದ ಈ ಉದಾಹರಣೆ ನೀಡಲಾಗಿದೆ : ನ ಘಟೇತಾರ್ಥ ಸಂಬಂಧಃ. ಶುದ್ಧಾತ್ಮನು ಐಹಿಕ ಶರೀರದೊಂದಿಗೆ ಹೊಂದಿರುವ ಸಂಬಂಧಕ್ಕೆ ಯಾವ ಅರ್ಥವೂ ಇಲ್ಲ. ಅಂತಹ ಸಂಬಂಧವು ಕನಸುಗಾರ ಪರಿಸ್ಥಿತಿಯನ್ನು ಸೃಷ್ಟಿಸಿದಂತೆ. ಹುಲಿ ಇದೆ ಎಂದು ಅವನು ಕನಸು ಕಾಣುತ್ತಿದ್ದಾನೆ ಮತ್ತು ಅವನು ಭಯಾನಕ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದಾನೆ. ವಾಸ್ತವವಾಗಿ ಹೆದರಲು ಕಾರಣವೇ ಇಲ್ಲ. ಅಲ್ಲಿ ಹುಲಿ ಇಲ್ಲ. ಕನಸಿನಿಂದ ಸೃಷ್ಟಿಯಾದ ಸ್ಥಿತಿಯದು.
ಐಹಿಕದ ಸೃಷ್ಟಿ
ಅದೇ ರೀತಿ ನಾವು ಐಹಿಕ ಲೋಕ ಮತ್ತು ಐಹಿಕ ಕ್ರಿಯೆಗಳನ್ನು ಸೃಷ್ಟಿಸಿದ್ದೇವೆ. “ನಾನು ವ್ಯವಸ್ಥಾಪಕ, ನಾನು ಕಾರ್ಖಾನೆ ಮಾಲೀಕ. ನಾನು ಇದು, ನಾನು ಅದು. ನಮಗೆ ಈ ರಾಜಕೀಯ ಗೊತ್ತು. ನಾವು ನಮ್ಮ ಸ್ಪರ್ಧಿಗಳನ್ನು ಸೋಲಿಸಬೇಕು” ಎಂದು ಹೇಳಿಕೊಳ್ಳುತ್ತ ಓಡಾಡುತ್ತಿರುತ್ತೇವೆ. ವ್ಯಕ್ತಿ ಕನಸಿನಲ್ಲಿ ಪರಿಸ್ಥಿತಿಯನ್ನು ಸೃಷ್ಟಿಸಿದಂತೆ ಇವೆಲ್ಲವನ್ನೂ ಸೃಷ್ಟಿಸಲಾಗುತ್ತಿದೆ.
“ಲೌಕಿಕ ಜಗತ್ತಿನೊಂದಿಗೆ ನಾವು ಯಾವಾಗ ಸಂಪರ್ಕ ಹೊಂದಿದೆವು?” ಎಂದು ಯಾರಾದರೂ ಪ್ರಶ್ನಿಸಿದರೆ, ನಾವು ಸಂಪರ್ಕ ಹೊಂದಿಲ್ಲ ಎನ್ನುವುದೇ ಅದಕ್ಕೆ ಉತ್ತರ. ಬಹಿರಂಗ ಶಕ್ತಿಯ ಪ್ರಭಾವದಿಂದ ನಾವು ಸಂಪರ್ಕಹೊಂದಿದ್ದೇವೆ ಎಂದು ಭಾವಿಸುತ್ತೇವೆ. ವಾಸ್ತವವಾಗಿ ನಾವು ಕುಸಿದಿಲ್ಲ. ನಾವು ಪತನವಾಗುವುದು ಸಾಧ್ಯವೂ ಇಲ್ಲ. ನಾವು ಸುಮ್ಮನೆ ಪರಿಸ್ಥಿತಿಯನ್ನು ಸೃಷ್ಟಿಸಿದ್ದೇವೆ. ನಮಗೆ ಕೃಷ್ಣನನ್ನು ಅನುಕರಿಸುವ ಇಚ್ಛೆ ಇದ್ದುದರಿಂದ ಕೃಷ್ಣನು ನಮಗೆ ಅವಕಾಶ ನೀಡಿದ್ದಾನೆ : “ನೀವು ಅನುಕರಣೆ ಮಾಡಬೇಕೆ? ಸರಿ. ವೇದಿಕೆಯ ಮೇಲೆ ಅನುಕರಣೆಯ ರಾಜನಾಗಬೇಕೆ? ಹಾಗೇ ಭಾವಿಸಿ, ಹಾಗೇ ಪಾತ್ರ ನಿರ್ವಹಿಸಿ. ಜನರು ಚಪ್ಪಾಳೆ ತಟ್ಟುವರು. `ಓ, ಎಷ್ಟು ಒಳ್ಳೆಯ ರಾಜ’ ಎನ್ನುವರು.”
ಐಹಿಕ ಲೋಕದಲ್ಲಿ ಪ್ರತಿಯೊಬ್ಬರೂ ಯಾವುದಾದರೊಂದು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. `ನಾನು ಪ್ರಧಾನಿಯಾಗಬೇಕು’, `ನಾನು ದೊಡ್ಡ ವಾಣಿಜ್ಯೋದ್ಯಮಿಯಾಗಬೇಕು’, `ನಾನು ನಾಯಕನಾಗಬೇಕು`, `ನಾನು ತತ್ತ್ವಜ್ಞಾನಿಯಾಗಬೇಕು’, `ನಾನು ವಿಜ್ಞಾನಿಯಾಗಬೇಕು.’ ಅವರು ಈ ಅಸಂಬದ್ಧ, ಅವಿವೇಕ ಪಾತ್ರಗಳನ್ನು ನಿರ್ವಹಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತು ಕೃಷ್ಣ `ಸರಿ’ ಎಂದು ಅವಕಾಶ ನೀಡುತ್ತಿದ್ದಾನೆ.
ಆದರೆ ಇವೆಲ್ಲವೂ ಅವಿವೇಕತನದ್ದು. ಕನಸು ಕಾಣುವುದು. ನೀವು ಕನಸು ಕಂಡಾಗ ಮರು ಕ್ಷಣವೇ ಕನಸು ಮಾಯವಾಗುತ್ತದೆ ಮತ್ತು ಕನಸಿನಲ್ಲಿನ ಎಲ್ಲವೂ ಅಂತ್ಯಗೊಳ್ಳುತ್ತದೆ. ಹುಲಿಯೂ ಇಲ್ಲ, ಕಾಡೂ ಇಲ್ಲ. ಅದೇ ರೀತಿ, ದೇಹ ಮುಂದುವರಿದಂತೆ, “ನಾನು ಜವಾಬ್ದಾರಿಯುತ ನಾಯಕ. ನಾನು ಇದು, ನಾನು ಅದು” ಎಂದು ಯೋಚಿಸುತ್ತೇವೆ. ಆದರೆ ದೇಹ ನಶಿಸಿದ ಕೂಡಲೇ ಇವೆಲ್ಲಾ ಕಣ್ಮರೆಯಾಗುತ್ತವೆ.
ಕೃಷ್ಣನು ಹೇಳುತ್ತಾನೆ, ಮೃತ್ಯು ಸರ್ವ ಹರಸ್ ಚಾಹಂ, “ನಾನೇ ಸಾವು. ನಾನು ಎಲ್ಲವನ್ನೂ ತೆಗೆದುಕೊಂಡು ಹೋಗುತ್ತೇನೆ.” ನಮ್ಮ ಹಿಂದಿನ ಜೀವನದ ಬಗೆಗೆ ಯೋಚಿಸಿ ನೋಡಿ. ನಾನು ರಾಜನೋ ಅಂಥದ್ದು ಏನೋ ಎಂದುಕೊಳ್ಳಿ. ಭೃಗು ಸಂಹಿತೆಯ ಪ್ರಕಾರ, ನನ್ನ ಹಿಂದಿನ ಜನ್ಮದಲ್ಲಿ ನಾನು ವೈದ್ಯನಾಗಿದ್ದೆ. ಯಾವುದೇ ಪಾಪ ಮಾಡದ ಶುದ್ಧವಾದ ಜೀವನ ಇರಬಹುದು, ನನಗಂತೂ ತಿಳಿಯದು. ವೈದ್ಯನಾಗಿದ್ದ ಬಗೆಗೆ ನನಗೆ ಕಿಂಚಿತ್ತೂ ನೆನಪಿಲ್ಲ. ಹಾಗಾದರೆ ನಮಗೆ ಏನು ತಿಳಿದಿದೆ? ನಾನು ಪ್ರಭಾವಿ ವೈದ್ಯನಾಗಿ ಒಳ್ಳೆಯ ಸಂಪಾದನೆ ಮಾಡಿರಬಹುದು. ಅದೆಲ್ಲಾ ಈಗೆಲ್ಲಿ? ಎಲ್ಲ ಕಣ್ಮರೆ.

ಆದುದರಿಂದ ವಸ್ತುವಿನ ಜೊತೆಗಿನ ನಮ್ಮ ಸಂಪರ್ಕ ಕನಸಿನಂತೆ. ನಾವು ಪತನಗೊಂಡಿಲ್ಲ. ಯಾವುದೇ ಕ್ಷಣದಲ್ಲಿ ನಾವು ಕೃಷ್ಣ ಪ್ರಜ್ಞೆಯನ್ನು ಪುನರ್ ಸ್ಥಾಪಿಸಿಕೊಳ್ಳಬಹುದು. “ವಸ್ತುವಿನಿಂದ ನನಗೆ ಆಗಬೇಕಾದುದು ಏನೂ ಇಲ್ಲ. ನಾನು ಕೃಷ್ಣನ ಶಾಶ್ವತ ಸೇವಕ” ಎಂಬುದನ್ನು ಅರ್ಥ ಮಾಡಿಕೊಂಡ ಕೂಡಲೇ ನಾವು ವಿಮೋಚನೆಗೊಳ್ಳುತ್ತೇವೆ. ಕೆಲವು ಬಾರಿ ಭಯಾನಕ ಕನಸನ್ನು ತಾಳಲಾರದಿದ್ದಾಗ ನಾವು ಅದನ್ನು ಅಂತ್ಯಗೊಳಿಸುತ್ತೇವೆ. ಅದೇ ರೀತಿ ನಾವು ಕೃಷ್ಣ ಪ್ರಜ್ಞೆಗೆ ಬಂದಾಗ, ಲೌಕಿಕ ಸಂಪರ್ಕವನ್ನು ಕಡಿದುಹಾಕಬಹುದು. “ಕೃಷ್ಣನೇ ನನ್ನ ಶಾಶ್ವತ ಮಾಲೀಕ. ನಾನು ಅವನ ಸೇವಕ” ಎಂದಷ್ಟೇ ಅರ್ಥಮಾಡಿಕೊಳ್ಳಬೇಕು. ಅದೇ ಮಾರ್ಗ.
ವಾಸ್ತವವಾಗಿ ನಾವು ಕುಸಿದಿಲ್ಲ. ನಾವು ಪತಿತರಾಗುವುದಿಲ್ಲ. ಅದೇ ಉದಾಹರಣೆ : ವಾಸ್ತವವಾಗಿ ಹುಲಿ ಇಲ್ಲ. ಅದು ಕನಸು. ಅದೇ ರೀತಿ, ನಮ್ಮ ಪತಿತ ಸ್ಥಿತಿಯೂ ಕೂಡ ಕನಸು. ನಾವು ಕುಸಿದಿಲ್ಲ. ನಾವು ಯಾವುದೇ ಕ್ಷಣದಲ್ಲಿ ಆ ಭ್ರಮೆಯ ಸ್ಥಿತಿಯನ್ನು ಬಿಟ್ಟುಬಿಡಬಹುದು.
ಬಹಿರಂಗ ಶಕ್ತಿ ಪ್ರಭಾವ
(ಶಿಷ್ಯನೊಬ್ಬ ಓದುತ್ತಾನೆ) : “ಜೀವಿಯು ಐಹಿಕ ದೇಹ ಮತ್ತು ಮನಸ್ಸಿನಿಂದ ಬೇರೆಯಾಗಿದ್ದರೂ ಅವನು ಐಹಿಕ ಜೀವನವನ್ನು ಹೇಗೆ ಆರಂಭಿಸಿದನು ಎಂಬ ಪರೀಕ್ಷಿತ ಮಹಾರಾಜನ ಪ್ರಶ್ನೆಗೆ ಪರಿಪೂರ್ಣವಾಗಿ ಉತ್ತರಿಸಲಾಗಿದೆ. ಚೇತನಾತ್ಮನು ತನ್ನ ಐಹಿಕ ಜೀವನ ಕಲ್ಪನೆಯಿಂದ ಭಿನ್ನನು. ಆದರೆ ಆತ್ಮಮಾಯಾ ಎಂದು ಕರೆಯಲಾಗುವ ಭಗವಂತನ ಬಹಿರಂಗ ಶಕ್ತಿಯಿಂದ ಪ್ರಭಾವಿತನಾದುದರಿಂದ ಅವನು ಅಂತಹ ಐಹಿಕ ಕಲ್ಪನೆಯಲ್ಲಿ ಮಗ್ನನು. ವೇದವ್ಯಾಸರು ಪರಮ ಪ್ರಭು ಭಗವಂತನ ಹಾಗೂ ಅವನ ಬಹಿರಂಗ ಶಕ್ತಿಯ ಸಾಕ್ಷಾತ್ಕಾರ ಪಡೆದುದಕ್ಕೆ ಸಂಬಂಧಿಸಿದಂತೆ ಪ್ರಥಮ ಸ್ಕಂಧದಲ್ಲಿ ಇದನ್ನು ಈಗಾಗಲೇ ವಿವರಿಸಲಾಗಿದೆ. ಬಹಿರಂಗ ಶಕ್ತಿಯು ಭಗವಂತನಿಂದ ನಿಯಂತ್ರಿತವಾಗಿದೆ ಹಾಗೂ ಜೀವಿಗಳು ಭಗವಂತನ ಇಚ್ಛಾನುಸಾರ ಬಹಿರಂಗ ಶಕ್ತಿಯಿಂದ ನಿಯಂತ್ರಿತರಾಗಿದ್ದಾರೆ.”
ಪ್ರಭುಪಾದ : ಕೃಷ್ಣನು ಹೇಳುತ್ತಾನೆ, ಮಾಂ ಏವ ಯೇ ಪ್ರಪದ್ಯಂತೇ ಮಾಯಾಂ ಏತಾಂ ತರಂತಿ ತೇ, “ನನಗೆ ಶರಣಾದ ಕೂಡಲೇ ಅವನಲ್ಲಿ ಭ್ರಮೆ ಇರುವುದಿಲ್ಲ.” ಜನರು ಬದ್ಧಾತ್ಮರು, ನಿರ್ಬಂಧದಲ್ಲಿರುವವರು. ಮಾಯಾವಾದಿಗಳು ಅಥವಾ ನಿರಾಕಾರವಾದಿಗಳು, ಮುಕ್ತಿ ಪಡೆಯಲೆಂದೇ ವ್ರತಾಚರಣೆ ಮತ್ತು ತಪಸ್ಸು ಮಾಡುವರು. ಯೋಗಿಗಳೂ ಪ್ರಯತ್ನಿಸುತ್ತಾರೆ. ಆದುದರಿಂದ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಆದರೆ ಸರಳ ವಿಧಾನವೆಂದರೆ, ನೀವು ಶರಣಾದ ಕೂಡಲೇ ನೀವು ಪತನಹೊಂದಿಲ್ಲ. “ಅದು ಭ್ರಮೆ. ನಾನು ಕನಸು ಕಾಣುತ್ತಿದ್ದೆ. ನಾನು ಕೃಷ್ಣನಿಗೆ ಸೇರಿದವ.” ಈ ರೀತಿ ಯೋಚಿಸುವುದರಿಂದ ನೀವು ಮುಕ್ತರಾಗಬಹುದು. ಕೃಷ್ಣನ ಆದೇಶಕ್ಕೆ ಬದ್ಧರಾದರೆ ಮಾತ್ರ ಕ್ಷಣ ಮಾತ್ರದಲ್ಲಿ ಮುಕ್ತಿ ಸಾಧ್ಯ. ಸರ್ವ ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ ಇದು ವಾಸ್ತವಸ್ಥಿತಿ. ನಾವು ಕುಸಿದಿಲ್ಲ. ನಾವು ಪತನ ಹೊಂದಿದ್ದೇವೆಂದು ಯೋಚಿಸುತ್ತೇವೆ. ಈ ಅವಿವೇಕದ ಚಿಂತನೆಯನ್ನು ನಾವು ಬಿಡಬೇಕು. ಆಗ ನಾವು ಮುಕ್ತರಾದಂತೆ.

ಭಾವಾರ್ಥ ಓದಿ.
(ಶಿಷ್ಯನು ಓದುತ್ತಾನೆ) : “ಬಹಿರಂಗ ಶಕ್ತಿಯು ಭಗವಂತನಿಂದ ನಿಯಂತ್ರಿತವಾಗಿದೆ ಹಾಗೂ ಜೀವಿಗಳು ಭಗವಂತನ ಇಚ್ಛಾನುಸಾರ ಬಹಿರಂಗ ಶಕ್ತಿಯಿಂದ ನಿಯಂತ್ರಿತರಾಗಿದ್ದಾರೆ. ಆದ್ದರಿಂದ ಜೀವಿಯು ತನ್ನ ಶುದ್ಧ ಸ್ಥಿತಿಯಲ್ಲಿ ಶುದ್ಧ ಪ್ರಜ್ಞೆಯುಳ್ಳವನಾಗಿದ್ದರೂ ಭಗವಂತನ ಬಹಿರಂಗ ಶಕ್ತಿಯ ಪ್ರಭಾವಕ್ಕೊಳಗಾಗುವುದರಲ್ಲಿ ಭಗವಂತನ ಇಚ್ಛೆಗೆ ಅಧೀನನಾಗಿರುತ್ತಾನೆ. ಭಗವದ್ಗೀತೆಯಲ್ಲೂ (15.15) ಇದನ್ನೇ ದೃಢಪಡಿಸಲಾಗಿದೆ. ಭಗವಂತ ಪ್ರತಿಯೊಬ್ಬ ಜೀವಿಯ ಹೃದಯದಲ್ಲಿ ಇದ್ದಾನೆ. ಮತ್ತು ಎಲ್ಲ ಜೀವಿಗಳ ಪ್ರಜ್ಞೆ ಮತ್ತು ವಿಸ್ಮೃತಿಗಳು ಭಗವಂತನಿಂದ ಪ್ರಭಾವಿತವಾಗಿವೆ.”
ಪ್ರಭುಪಾದ : “ಕೃಷ್ಣನು ಹೃದಯದೊಳಗೆ ಒಬ್ಬರಿಗೆ ಒಂದು ರೀತಿ ಪ್ರಜ್ಞೆ ಮತ್ತು ಮತ್ತೊಬ್ಬರಿಗೆ ಇನ್ನೊಂದು ರೀತಿಯ ಪ್ರಜ್ಞೆ ನೀಡುವುದೇಕೆ?” ಎಂದು ಜನರು ಪ್ರಶ್ನಿಸಬಹುದು. ಅದು ಅವನ ದಯೆ. ನನಗೆ ಕೃಷ್ಣನನ್ನು ಮರೆಯಬೇಕಾಗಿದೆ, ಆದುದರಿಂದ ಕೃಷ್ಣನು ಸೂಕ್ತವಾದ ಪ್ರಜ್ಞೆ ನೀಡುತ್ತಾನೆ : “ಸರಿ, ನೀವು ಈ ರೀತಿ ನನ್ನನ್ನು ಮರೆಯಬಹುದು.”
ಕರ್ಮಿಯರು ಅಥವಾ ಸಾಮಾನ್ಯ ಐಹಿಕವಾದಿಗಳು, ಮಾಯಾವಾದಿಗಳು ಮತ್ತು ಯೋಗಿಗಳೆಂದು ಕರೆಸಿಕೊಳ್ಳುವವರಿಗೆ ಕೃಷ್ಣನನ್ನು ಮರೆಯುವ ಇಚ್ಛೆ. ಆದುದರಿಂದ ಕೃಷ್ಣನು ಅವರಿಗೆ ಬುದ್ಧಿ ನೀಡುತ್ತಾನೆ, “ಸರಿ, ನೀವು ಈ ರೀತಿ ನನ್ನನ್ನು ಮರೆಯಿರಿ.” ಕೃಷ್ಣನೊಂದಿಗೆ ಸಂಬಂಧವನ್ನು ಪುನಃ ಸ್ಥಾಪಿಸಿಕೊಳ್ಳಬೇಕೆನಿಸಿದರೆ, ಅವನು ಅದಕ್ಕೂ ಬುದ್ಧಿ ನೀಡುತ್ತಾನೆ. ದದಾಮಿ ಬುದ್ಧಿಯೋಗಂ ತಂ ಯೇನ ಮಾಂ ಉಪಯಾಂತಿ ತೇ, “ನೀನು ನನ್ನ ಬಳಿಗೆ ಬರಲು ಅಗತ್ಯವಾದ ಬುದ್ಧಿಯನ್ನು ನಾನು ಕೊಡುವೆ.” ಯೇ ಯಥಾ ಮಾಂ ಪ್ರಪದ್ಯಂತೇ. ನಿಮಗೆ ಬೇಕಾದಂತೆ ಕೃಷ್ಣನು ನಿಮಗೆ ಸೌಲಭ್ಯ ನೀಡುತ್ತಾನೆ.
ಓದು ಮುಂದುವರಿಸಿ.
(ಶಿಷ್ಯನು ಓದುತ್ತಾನೆ) : “ಈಗ ತಾನಾಗಿಯೇ ಉದ್ಭವಿಸುವ ಮುಂದಿನ ಪ್ರಶ್ನೆಯೆಂದರೆ ಭಗವಂತ ಜೀವಿಯ ಪ್ರಜ್ಞೆ ಮತ್ತು ವಿಸ್ಮೃತಿಗಳ ಮೇಲೆ ಏಕೆ ಪ್ರಭಾವ ಬೀರುತ್ತಾನೆ ಎಂಬುದು. ಇದಕ್ಕೆ ಉತ್ತರವೆಂದರೆ ಪ್ರತಿಯೊಬ್ಬ ಜೀವಿಯು ಭಗವಂತನ ವಿಭಿನ್ನಾಂಶನಾಗಿ ಮತ್ತು ಸ್ವರೂಪತಃ ಶುದ್ಧ ಪ್ರಜ್ಞಾವಸ್ಥೆಯಲ್ಲಿ ಭಗವಂತನ ಪ್ರೇಮಯುತ ಸೇವೆಯಲ್ಲಿ ನಿರತನಾಗಿರಬೇಕು ಎಂದು ಭಗವಂತ ಸ್ಪಷ್ಟವಾಗಿ ಇಚ್ಛಿಸುತ್ತಾನೆ. ಆದರೆ ಜೀವಿಯು ಭಾಗಶಃ ಸ್ವತಂತ್ರನಾದ್ದರಿಂದ ಅವನು ಭಗವಂತನ ಸೇವೆ ಮಾಡಲು ಇಚ್ಛಿಸದೆ ಭಗವಂತನಂತೆಯೇ ಸ್ವತಂತ್ರನಾಗಲು ಪ್ರಯತ್ನಿಸಬಹುದು. ಭಕ್ತರಲ್ಲದ ಎಲ್ಲ ಜೀವಿಗಳು ಭಗವಂತನಷ್ಟೇ ಶಕ್ತಿಶಾಲಿಗಳಾಗಲು ಯೋಗ್ಯರಲ್ಲದಿದ್ದರೂ ಹಾಗೆ ಆಗಲು ಅವರು ಬಯಸುತ್ತಾರೆ.”
ಜೀವಿ ದೇವರಲ್ಲ
ಪ್ರಭುಪಾದ: ಜೀವಿಗಳು ಭಗವದಿಚ್ಛಾನುಸಾರ ಮಾಯೆಯಿಂದ ಆವೃತರು. ಏಕೆಂದರೆ ಅವರೂ ಭಗವಂತನಂತೆ ಆಗಬಯಸುತ್ತಾರೆ. ಜೀವಿಯು ಎಂದಿಗೂ ದೇವರಲ್ಲ. ಆದರೆ `ನಾನು ದೇವರು’ ಅಥವಾ `ನನ್ನ ಮೂಗನ್ನು ಹೀಗೆ ಒತ್ತಿಕೊಳ್ಳುವ ಮೂಲಕ ನಾನು ದೇವರಾಗಬೇಕು’ ಎಂದು ಬಹಿರಂಗ ಶಕ್ತಿಯ ಪ್ರಭಾವದಿಂದ ಜನರು ಯೋಚಿಸಬಹುದು. ಇದು ಅನಾದಿಕಾಲದಿಂದಲೂ ಮುಂದುವರಿದಿದೆ. ಆದರೆ ಅವರು ದೇವರಾಗುವುದು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರೂ ದೇವರಾಗುವುದು ಸಾಧ್ಯವಾದರೆ ದೇವರೆಂಬುವುದಕ್ಕೆ ಅರ್ಥವೇ ಇಲ್ಲ.
ಕರ್ಮಿಗಳು ಹೇಳುತ್ತಾರೆ, “ನಾನು ಲಕ್ಷಾಧೀಶನಾಗಬೇಕು, ನಾನು ಕೋಟ್ಯದೀಶನಾಗಬೇಕು. ನಾನು ಸರ್ಕಾರದ ಮುಖ್ಯಸ್ಥನಾಗಬೇಕು. ನಾನು ಪ್ರಧಾನಿಯಾಗಬೇಕು.” ಇದನ್ನು ಹೊಂದಲು ಅವರು ಹೋರಾಡುತ್ತಾರೆ.
“ನಾನು ದೇವರಾಗಬೇಕು” ಎಂದು ಯೋಗಿಗಳು ಯೋಚಿಸಿದರೆ ಅದು ಮತ್ತೊಂದು ಹೋರಾಟವಷ್ಟೆ. ಅದು ಭ್ರಮೆ. ಕೃಷ್ಣನು ಅವರಿಗೆ ಒಂದಷ್ಟು ಯಶಸ್ಸನ್ನು ನೀಡಬಹುದು. ಭಾರತದಲ್ಲಿ ಒಬ್ಬ ಮೂರ್ಖನು ಚಿನ್ನ ಸೃಷ್ಟಿಯಾಗುವಂತೆ ಮಾಡುತ್ತಾನೆ. “ಅವನು ದೇವರು, ಅವನು ದೇವರು” ಎಂದು ಜನರು ಅವನ ಹಿಂದೆ ಓಡುತ್ತಾರೆ. ಸ್ವಲ್ಪ ಚಿನ್ನ ಉತ್ಪಾದಿಸಿ ಅವನು ದೇವರಾಗುತ್ತಾನೆ.

ಮತ್ತೊಬ್ಬ ಯೋಗಿ ರಸಗುಲ್ಲಾಗಳು ಕಾಣುವಂತೆ ಮಾಡುತ್ತಾನೆ. ಒಂದು 30 ರೂಪಾಯಿಗಳ ರಸಗುಲ್ಲಾ ಉತ್ಪಾದಿಸಿ ಅವನು ದೇವರಾಗುತ್ತಾನೆ. ನೋಡಿದಿರಾ? ಇದು ಭ್ರಮೆ. ನಾನು 30 ರೂಪಾಯಿ ನೀಡಿ ಅಂಗಡಿಯಿಂದ ಎರಡು ರಸಗುಲ್ಲಾ ತರಬಲ್ಲೆ. ಆದುದರಿಂದ ಅವನು 30 ರೂಪಾಯಿಗಳಿಗೆ ದೇವರಾಗಿಬಿಟ್ಟಿದ್ದಾನೆ. “ಅವನು ದೇವರು. ಅವನು ರಸಗುಲ್ಲಾ ತಯಾರಿಸಬಲ್ಲ” ಎಂದು ಜನರು ಯೋಚಿಸುತ್ತಾರೆ. ಅವರಿಗೆ ವಿವೇಕವಿಲ್ಲ. ನಾನು ನಮ್ಮ ಅಡುಗೆ ಮನೆಯಲ್ಲಿ ರಸಗುಲ್ಲಾ ಮಾಡಬಲ್ಲೆ. ಆದರೆ “ಈ ಯೋಗಿ ಅದ್ಭುತ” ಎಂದು ಅವಿವೇಕಿಗಳು ಯೋಚಿಸುತ್ತಾರೆ.
ಕೃಷ್ಣನು ವ್ಯಕ್ತಿಗೆ ಯೋಗ ಸಿದ್ಧಿ ಅಥವಾ ಪರಿಪೂರ್ಣತೆಯನ್ನು ನೀಡಬಹುದು. ಆಗ ಅವನು “ನಾನು ದೇವರಾಗಿಬಿಟ್ಟೆ” ಎಂದು ಯೋಚಿಸುತ್ತಾನೆ. ಮತ್ತು ಕೆಲವರು “ನೀನು ದೇವರು” ಎಂದು ಅವನನ್ನು ಪ್ರಚೋದಿಸುತ್ತಾರೆ. ಅಂತಹ ಯೋಗಿಗಳು ಕರ್ಮಿಗಳಂತೆ ಕನಸಿನಲ್ಲಿರುವವರು. ಸಾವು ಬಂದಾಗ ಎಲ್ಲವೂ ಮುಗಿದಂತೆ. ನಿಮ್ಮ ದೇವತ್ವ ಮತ್ತು ಎಲ್ಲವೂ ಕಣ್ಮರೆ. ಈಗ ಬರುತ್ತದೆ ನಾಯಿತ್ವ. ಮತ್ತೊಂದು ಕನಸು, “ನಾನು ನಾಯಿ.” ಮೊದಲು “ನಾನು ದೇವರು.” ಈಗ “ನಾನು ನಾಯಿ.” ಇದು ಹೀಗೆ ಮುಂದುವರಿಯುತ್ತದೆ.
ಮಾಯೆಯ ಅಲೆ
ಆದುದರಿಂದ ಭಕ್ತಿವಿನೋದ ಠಾಕುರರು ಹೇಳಿದ್ದಾರೆ, ಮಾಯಾರ್ ಬೋಶೇ, ಜಾಚೋ ಬೇಶೇ, “ಮಾಯೆಯ ಅಲೆಗಳಿಂದ ಏಕೆ ಕೊಚ್ಚಿ ಹೋಗುವೆ? ಎದ್ದು ನಿಲ್ಲು.” ಜೀವ ಕೃಷ್ಣ ದಾಸ, ಐ ಬಿಸ್ವಾಸ್, ಕೋರ್ಲೇ ತೋ ಆರ್ ದುಃಖೋ ನಾಯ್, “ನಾನು ಕೃಷ್ಣನ ಶಾಶ್ವತ ಸೇವಕ ಎಂಬ ಅಂಶದ ಮೇಲೆಯೇ ನೆಲೆಗೊಳ್ಳಿ. ಆಗ ಕನಸು ಇರುವುದಿಲ್ಲ.” ನೀವು ಕೊಚ್ಚಿ ಹೋಗಲೇ ಇಷ್ಟಪಟ್ಟರೆ ಕೃಷ್ಣನು ನಿಮಗೆ ಸೌಲಭ್ಯ ಒದಗಿಸುತ್ತಾನೆ, “ಸರಿ. ಬನ್ನಿ ಕೊಚ್ಚಿ ಹೋಗಿ.”
ಅನಂತರ?
(ಶಿಷ್ಯ ಓದುತ್ತಾನೆ) : “ದೇವರಂತೆ ಆಗಬೇಕೆಂದು ಬಯಸಿದ್ದರಿಂದ ಜೀವಿಯು ಭಗವಂತನ ಇಚ್ಛೆಯಂತೆ ಭ್ರಮಾಧೀನನಾಗುತ್ತಾನೆ. ಅಗತ್ಯ ಅರ್ಹತೆಗಳಿಲ್ಲದಿದ್ದರೂ ರಾಜನಾಗ ಬಯಸುವ ವ್ಯಕ್ತಿಯಂತೆ ಜೀವಿಯು ತಾನೇ ಭಗವಂತನಾಗಬಯಸಿದಾಗ ಅವನು ತಾನೇ ರಾಜನೋ ಎಂಬಂತೆ ಕನಸು ಕಾಣುವ ಸ್ಥಿತಿಗೆ ದೂಡಲ್ಪಡುತ್ತಾನೆ. ಆದ್ದರಿಂದ ಜೀವಿಯ ಪ್ರಥಮ ಪಾಪಪೂರ್ಣ ಇಚ್ಛೆಯೆಂದರೆ ಭಗವಂತನಾಗಲು ಬಯಸುವುದು. ಪರಿಣಾಮವಾಗಿ ಭಗವಂತನ ಇಚ್ಛೆಯಂತೆ ಜೀವಿಯು ವಾಸ್ತವಿಕ ಜೀವನವನ್ನು ಮರೆತು ತಾನು ಭಗವಂತ ಆಗಬಹುದಾದ ಕಲ್ಪನಾ ಸಾಮ್ರಾಜ್ಯದ ಕನಸು ಕಾಣುತ್ತಾನೆ. ಮಗು, ತಾಯಿ ಚಂದ್ರನನ್ನು ತಂದುಕೊಡಬೇಕೆಂದು ಅಳುತ್ತದೆ. ತಾಯಿ ಕನ್ನಡಿಯೊಂದನ್ನಿತ್ತು ಅದರೊಳಗಿನ ಚಂದ್ರ ಬಿಂಬದಿಂದ ಅಳುವ ಮಗುವನ್ನು ಸಮಾಧಾನ ಪಡಿಸುತ್ತಾಳೆ. ಅಂತೆಯೇ ಭಗವಂತನ ಅಳುವ ಮಗುವಿಗೆ ಐಹಿಕ ಜಗತ್ತೆಂಬ ಪ್ರತಿಬಿಂಬವನ್ನು ನೀಡಲಾಗುತ್ತದೆ. ಕರ್ಮಿಯು ಅದರ ಮೇಲೆ ಹಿಡಿತ ಸಾಧಿಸಲು ಹೋಗಿ ಅನಂತರ ಹತಾಶನಾಗಿ ಅದನ್ನು ತ್ಯಜಿಸಿ ಭಗವಂತನಲ್ಲಿ ಒಂದಾಗಲು ಪ್ರಯತ್ನಿಸುತ್ತಾನೆ. ಈ ಎರಡು ಹಂತಗಳೂ ಕನಸಿನ ಮಾಯೆ ಮಾತ್ರ. ಜೀವಿಯು ಯಾವಾಗ ಇದನ್ನು ಬಯಸಿದ ಎಂಬುದನ್ನು ತಿಳಿಯಲು ಇತಿಹಾಸವನ್ನು ಶೋಧಿಸಬೇಕಾದ ಅಗತ್ಯವಿಲ್ಲ. ಆದರೆ ವಾಸ್ತವಾಂಶವೆಂದರೆ ಅವನು ಇದನ್ನು ಬಯಸಿದ ಕೂಡಲೇ ಭಗವಂತನ ನಿರ್ದೇಶಾನುಸಾರ ಅವನನ್ನು ಆತ್ಮಮಾಯಾ ನಿಯಂತ್ರಣಕ್ಕೆ ಒಳಪಡಿಸಲಾಯಿತು. ಆದ್ದರಿಂದಲೇ ಜೀವಿಯು ತನ್ನ ಐಹಿಕ ಸ್ಥಿತಿಯಲ್ಲಿ ಇದು `ನನ್ನದು’ ಮತ್ತು ಇದು `ನಾನು’ ಎಂಬ ಹುಸಿ ಕನಸು ಕಾಣುತ್ತಾನೆ. ಬದ್ಧಾತ್ಮನು ತನ್ನ ಐಹಿಕ ಶರೀರವನ್ನು `ನಾನು’ ಎಂದು ಭಾವಿಸುವುದು ಅಥವಾ ತಾನು ಒಡೆಯ ಹಾಗೂ ಆ ಐಹಿಕ ಶರೀರಕ್ಕೆ ಸಂಬಂಧಿಸಿದ್ದೆಲ್ಲ `ನನ್ನದು’ ಎಂದು ಭಾವಿಸುವುದೇ ಕನಸು. ಹೀಗೆ ಕನಸಿನಲ್ಲಿ ಮಾತ್ರ `ನಾನು’ ಮತ್ತು `ನನ್ನದು’ ಎಂಬ ತಪ್ಪು ಕಲ್ಪನೆಯು ಜನ್ಮಜನ್ಮಗಳಲ್ಲೂ ಮುಂದುವರಿಯುತ್ತದೆ. ಜೀವಿಯು ತಾನು ಭಗವಂತನ ಅಧೀನ, ಅವನ ವಿಭಿನ್ನಾಂಶ ಎಂಬ ತನ್ನ ವ್ಯಕ್ತಿತ್ವದ ಶುದ್ಧ ಪ್ರಜ್ಞೆಯನ್ನು ಬೆಳೆಸಿಕೊಳ್ಳುವವರೆಗೆ ಇದು ಜನ್ಮಜನ್ಮಾಂತರಗಳಲ್ಲಿ ಮುಂದುವರಿಯುತ್ತಲೇ ಇರುತ್ತದೆ.

“ಆದರೆ ಜೀವಿಗೆ ತನ್ನ ಶುದ್ಧ ಪ್ರಜ್ಞೆಯಲ್ಲಿ ಅಂತಹ ಯಾವ ತಪ್ಪು ಕಲ್ಪನೆಯ ಕನಸೂ ಇಲ್ಲ. ಮತ್ತು ಜೀವಿಯು ಶುದ್ಧ ಪ್ರಜ್ಞೆಯಲ್ಲಿ ತಾನು ಎಂದೆಂದಿಗೂ ಭಗವಂತನಲ್ಲ; ತಾನೇನಿದ್ದರೂ ದಿವ್ಯಪ್ರೇಮದಲ್ಲಿ ಶಾಶ್ವತವಾಗಿ ಭಗವಂತನ ದಾಸ ಎಂಬುದನ್ನು ಮರೆಯುವುದಿಲ್ಲ.”






Leave a Reply