ಭ್ರಮೆಯನ್ನು ಮೀರಿ ನಿಂತಿರುವ ಸಾಕ್ಷಾತ್ಕಾರ

ಮಾಂಟ್ರಿಯಲ್‌ನಲ್ಲಿರುವ ಹರೇಕೃಷ್ಣ ಕೇಂದ್ರದಲ್ಲಿ, 1968ರ ಜೂನ್‌ ತಿಂಗಳಲ್ಲಿ

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ನೀಡಿದ ಉಪನ್ಯಾಸ.

ಜನ್ಮ ಕರ್ಮ ಚ ಮೇ ದಿವ್ಯಂ ಏವಂ ಯೋ ವೇತ್ತಿ ತತ್ತ್ವತಃ

ತ್ಯಕ್ತ್ವಾ ದೇಹಂ ಪುನರ್‌ ಜನ್ಮ ನೈತಿ ಮಾಂ ಏತಿ ಸೋಽರ್ಜುನ

– ಭಗವದ್ಗೀತಾ 4.9

ದೇವರ ಸಾಮ್ರಾಜ್ಯ, ಅಂದರೆ ಆಧ್ಯಾತ್ಮಿಕ ಜಗತ್ತನ್ನು ಪ್ರವೇಶಿಸುವುದು ಎಷ್ಟೊಂದು ಸುಲಭ ಎಂಬುದನ್ನು ಶ್ರೀಕೃಷ್ಣನು ಇಲ್ಲಿ ವಿವರಿಸಿದ್ದಾನೆ. ಇದಕ್ಕೆ ಸರಳವಾದ ಸೂತ್ರವೆಂದರೆ, ಭಗವಂತನ ದೈವಿಕ ಅಸ್ತಿತ್ವ ಮತ್ತು ಪವಾಡಗಳನ್ನು ಪರಿಪೂರ್ಣವಾಗಿ ಅರಿತುಕೊಳ್ಳುವುದಾಗಿದೆ. ಅಂಥವರು ಮರಣಾನಂತರ ಸುಲಭವಾಗಿ ಆಧ್ಯಾತ್ಮಿಕ ಸಾಮ್ರಾಜ್ಯವನ್ನು ಪ್ರವೇಶಿಸಬಹುದಾಗಿದೆ.

ನಮ್ಮ ಪ್ರಸ್ತುತ ಇಂದ್ರಿಯಗಳನ್ನು ಭೌತಿಕತೆಯು ಮುಚ್ಚಿಹಾಕಿರುವುದರಿಂದ ಅವುಗಳ ಮೂಲಕ ಭಗವಂತನನ್ನು ತಿಳಿದುಕೊಳ್ಳುವುದು ಅಸಾಧ್ಯವಾಗಿದೆ. ಮೂಲತಃ ನಮ್ಮ ಇಂದ್ರಿಯಗಳು ಆಧ್ಯಾತ್ಮಿಕವಾಗಿದ್ದರೂ, ಲೌಕಿಕತೆಯ ಕಲಬೆರಕೆಯಿಂದಾಗಿ ಅಶುದ್ಧಗೊಂಡಿವೆ. ಆದ್ದರಿಂದ, ಭಗವಂತನನ್ನು ಅರಿತುಕೊಳ್ಳುವ ವಿಧಾನ ನಮ್ಮ ಇಂದ್ರಿಯಗಳನ್ನು ಲೌಕಿಕತೆಯ ಮುಸುಕಿನಿಂದ ಹೊರತಂದು, ಪರಿಶುದ್ಧಗೊಳಿಸುವುದಾಗಿದೆ. ಭಗವಂತನನ್ನು ಕುರಿತು ಸೇವಾಭಾವವನ್ನು ಬೆಳೆಸಿಕೊಳ್ಳುವುದರಿಂದ ಇದು ಸಾಧ್ಯ.  ಸೇವೋನ್ಮುಖೇ ಹಿ ಜಿಹ್ವಾದೌ ಸ್ವಯಂ ಏವ ಸುರತಿ ಅದಃ – “ನಾವು ಭಗವಂತನಿಗೆ ಶರಣಾಗತರಾಗಿ, ನಾಲಗೆಯಿಂದ ಪ್ರಾರಂಭಿಸಿ, ಸಕಲ ಇಂದ್ರಿಯಗಳನ್ನು ಆತನ ಸೇವೆಯಲ್ಲಿ ತೊಡಗಿಸಿದರೆ ನಿಧಾನವಾಗಿ ನಮಗೆ ಭಗವಂತನ ಸಾಕ್ಷಾತ್ಕಾರವಾಗುವುದು.”

ಹಾಗಾದರೆ, ಭಗವಂತನ ಜನನವನ್ನು ಕುರಿತು ತಿಳಿದುಕೊಳ್ಳಲು ನಮ್ಮಿಂದ ಹೇಗೆ ಸಾಧ್ಯವಿದೆ? ವಾಸ್ತವಿಕವಾಗಿ, ಭಗವಂತನಿಗಾಗಲಿ ಅಥವಾ ಸಕಲ ಜೀವಿಗಳಿಗಾಗಲಿ ಜನನದ ಪ್ರಶ್ನೆಯೇ ಬರುವುದಿಲ್ಲ. ಏಕೆಂದರೆ, ಭಗವಂತನೂ ಸಕಲ ಜೀವಿಗಳೂ ಶಾಶ್ವತರು.  ಇಲ್ಲಿ ಉತ್ತಮ ನಿದರ್ಶನವೆಂದರೆ ಸೂರ್ಯೋದಯ. ನಿಜವಾಗಿ ನೋಡಿದಾಗ, ಸೂರ್ಯೋದಯ ಎಂಬುದು ಇಲ್ಲ. ಅದು ನಮ್ಮ ಸ್ಥಾನದ ಹೊಂದಾಣಿಕೆ. ಇದೇ ತೆರನಾಗಿ ನಮಗಾಗಲಿ ಭಗವಂತನಿಗಾಗಲಿ ಜನ್ಮ ಅಥವಾ ಆದಿ ಎಂಬುದಿಲ್ಲ.  ನಾವೆಲ್ಲರೂ ಅಮರರಾಗಿದ್ದೇವೆ. ಶರೀರ ಪ್ರತ್ಯಕ್ಷವಾಗುವುದನ್ನೇ ನಾವು ಸರಳವಾಗಿ ಜನ್ಮ ಎಂಬ ಶಬ್ದದ ಮೂಲಕ ವರ್ಣಿಸುತ್ತೇವೆ.

ಆದರೆ ನಮ್ಮ ಜನ್ಮಕ್ಕೂ ಭಗವಂತನ ಜನನಕ್ಕೂ ವ್ಯತ್ಯಾಸವಿದೆ. ನಾವು ಎಸಗಿದ ಸ್ವಾರ್ಥಪೂರ್ಣವಾದ ಕೃತ್ಯಗಳು ಮತ್ತು ಕರ್ಮಗಳಿಗನುಗುಣವಾಗಿ ನಾವೆಲ್ಲರೂ ಲೌಕಿಕ ಪ್ರಕೃತಿಯು ನಮ್ಮ ಮೇಲೆ ಹೊರಿಸಿದ ದೇಹಗಳನ್ನು ಹೊತ್ತು ಜನ್ಮ ಪಡೆಯುತ್ತೇವೆ. ಆದರೆ ಭಗವಂತನು ತನ್ನದೇ ಆದ ಇಚ್ಛೆಯಿಂದ ತನ್ನ ವಾಸ್ತವಿಕ ರೂಪದಲ್ಲಿ ಮತ್ತೆ ಮತ್ತೆ ಪ್ರತ್ಯಕ್ಷನಾಗುತ್ತಾನೆ. ದೇವರು ಸದಾ ತನ್ನ ನಿಜ ರೂಪದಲ್ಲಿಯೇ ಕಾಣಿಸಿಕೊಳ್ಳುವುದರಿಂದ ಆತನ ಹಿಂದಿನ ಜನ್ಮಗಳ ಎಲ್ಲ ರೂಪಗಳ ನೆನಪು ಆತನಿಗೆ ಇರುತ್ತದೆ. ಅದೇ ಮನುಷ್ಯರು ಬೇರೆ ಬೇರೆ ಭೌತಿಕ ರೂಪಗಳಲ್ಲಿ ಕಾಣಿಸಿಕೊಳ್ಳುವುದರಿಂದ ನಮಗೆ ನಮ್ಮ ಗತ ಜೀವನಗಳ ನೆನಪು ಇರುವುದಿಲ್ಲ.

ಭಗವದ್ಗೀತೆಯ ಈ ಶ್ಲೋಕದಲ್ಲಿ ಶ್ರೀಕೃಷ್ಣನು ತನ್ನ ಜನನ ಮತ್ತು ಪವಾಡಗಳನ್ನು ಬಣ್ಣಿಸಲು ದಿವ್ಯಂ ಎಂಬ ಶಬ್ದವನ್ನು ಪ್ರಮುಖವಾಗಿ ಬಳಸುತ್ತಾನೆ. ದಿವ್ಯಂ ಎಂದರೆ “ದೈವಿಕ”, “ಸಾತ್ತ್ವಿಕ”, “ಅಭೌತಿಕ”, ಎಂದರ್ಥ. ನಮ್ಮ ಜನನವು ಸಾತ್ತ್ವಿಕ ಅಥವಾ ದೈವಿಕವಾದುದಲ್ಲ – ಅದು ನೋವು ಮತ್ತು ಸಂಕಟಗಳಿಂದ ತುಂಬಿಕೊಂಡಿದೆ. ಇದು ನಮ್ಮ ಮತ್ತು ಭಗವಂತನ  ಜನ್ಮದಲ್ಲಿ ಕಂಡು ಬರುವ ಇನ್ನೊಂದು ವ್ಯತ್ಯಾಸವಾಗಿದೆ.

ಒಬ್ಬ ಮನುಷ್ಯನು ದೇವರ ಸಾಮ್ರಾಜ್ಯವಾದ ಆಧ್ಯಾತ್ಮಿಕ ಸಾಮ್ರಾಜ್ಯಕ್ಕೆ ಮರಳಿ ಬರಲು ಬಯಸಿದ್ದೇ ಆದರೆ, ಕೃಷ್ಣನ ಅವತಾರ ಮತ್ತು ಅವನ ಪವಾಡಗಳನ್ನು ಆ ಮನುಷ್ಯ ಅರಿತುಕೊಳ್ಳಬೇಕು. ಆದರೆ, ಅವುಗಳನ್ನು ಅರಿತುಕೊಳ್ಳುವುದಾದರೂ ಹೇಗೆ? ಸುಮ್ಮನೆ ಭಗವಂತನ ಸೇವೆ ಮಾಡುವುದರಿಂದ ಅದು ಸಾಧ್ಯ. ಪಂಥಾಹ್ವಾನದಿಂದ ವಿನಮ್ರರಾಗಿ ಅವನ ಸೇವೆಯಲ್ಲಿ ತೊಡಗಿದರೆ ಭಗವಂತನು ನಮಗೆ ಕಾಣಿಸಿಕೊಳ್ಳಬಹುದು. ಭಗವಂತನ ಅರಿವು ಸಾಕ್ಷಾತ್ಕಾರದಿಂದ ಬರುತ್ತದೆ, ಪ್ರಾಯೋಗಿಕ ಪ್ರಕ್ರಿಯೆಯಿಂದಲ್ಲ.

ಅತಃ ಶ್ರೀಕೃಷ್ಣ ನಾಮಾದಿ ನ ಭವೇದ್‌ ಗ್ರಾಹ್ಯಂ ಇಂದ್ರಿಯೈಃ – ನಮ್ಮ ಇಂದ್ರಿಯಗಳೆಲ್ಲವೂ ಲೌಕಿಕತೆಯಿಂದ ಕಲುಷಿತಗೊಂಡಿದ್ದರಿಂದ  ನಾವು ಭಗವಂತನ ಅವತಾರ, ಹೆಸರು ಅಥವಾ ಲೀಲೆಗಳನ್ನು ಅವುಗಳ (ಇಂದ್ರಿಯಗಳ) ಮೂಲಕ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಇಂದ್ರಿಯ ಶುದ್ಧೀಕರಣದ ಆವಶ್ಯಕತೆಯನ್ನು ನಾವೆಲ್ಲ ಒಪ್ಪಿಕೊಳ್ಳಲೇಬೇಕು. ಈ ದಿಶೆಯಲ್ಲಿ ನಮ್ಮ ಚೊಚ್ಚಲ ಹೆಜ್ಜೆಯೆಂದರೆ, ನಮ್ಮನ್ನು ನಾವು ಎಲ್ಲ ಅವಾಸ್ತವಿಕವಾದ ಪದವಿಗಳು ಅಥವಾ ವಿಚಾರಗಳಿಂದ ಮುಕ್ತವಾಗಿಸಿಕೊಳ್ಳಬೇಕು (ಸರ್ವೋಪಾಧಿ ವಿನಿರ್ಮುಕ್ತಂ ತತ್‌ ಪರತ್ವೇನ ನಿರ್ಮಲಂ). ಬೇರೆ ಬೇರೆ ಉಪಾಧಿಗಳ ಹೆಸರಲ್ಲಿ ನಾವೆಲ್ಲರೂ ನಮ್ಮ ನಮ್ಮ ಪಾತ್ರ ನಿರ್ವಹಿಸುತ್ತಿದ್ದೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ವಿಚಾರಿಸುತ್ತಿರುವುದೆಂದರೆ, “ನಾನು ಅಂದರೆ ನನ್ನ ಶರೀರ. ಈ ಶರೀರವನ್ನು ಒಂದು ನಿರ್ದಿಷ್ಟವಾದ ಕುಟುಂಬದಲ್ಲಿ ಒಂದು ನಿರ್ದಿಷ್ಟವಾದ ಸಮಾಜದಲ್ಲಿ, ಒಂದು ನಿರ್ದಿಷ್ಟವಾದ ದೇಶದಲ್ಲಿ ಸೃಷ್ಟಿಸಲಾಗಿದೆ. ಆದ್ದರಿಂದ ನಾನು ಅನೇಕ ಉಪಾಧಿಗಳನ್ನು ಹೊಂದಿದ್ದೇನೆ.” ಈ ಎಲ್ಲ ಉಪಾಧಿಗಳಿಂದ ಮುಕ್ತಿ ಹೊಂದುವುದು ನಮ್ಮ ಧ್ಯೇಯವಾಗಬೇಕು. ಇದೇ ಭಗವಂತನನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಬೇಕಾಗಿರುವ ಮೊದಲನೆಯ ಅರ್ಹತೆ.

ಈ ಪಾತ್ರಗಳು ಅಥವಾ ಉಪಾಧಿಗಳಿಂದ ಮುಕ್ತಿ ಹೊಂದುವುದಾದರೂ ಹೇಗೆ? ಕೃಷ್ಣನಪ್ರಜ್ಞೆಯಿಂದ. ಕೃಷ್ಣನನ್ನು ಕುರಿತು ಪ್ರಜ್ಞೆ ಇರುವ ಒಬ್ಬ ವ್ಯಕ್ತಿಯು ಹೀಗೆ ವಿಚಾರ ಮಾಡುತ್ತಾನೆ, “ನಾನು ಭಾರತೀಯನಲ್ಲ, ನಾನು ಅಮೆರಿಕನ್‌ ಅಲ್ಲ, ನಾನು ಬಿಳಿಯನಲ್ಲ, ನಾನು ಕರಿಯನಲ್ಲ, ನಾನು ಕ್ರೈಸ್ತಧರ್ಮದವನಲ್ಲ, ಹಿಂದೂ ಅಲ್ಲ, ಅಥವಾ ಮುಸಲ್ಮಾನನಲ್ಲ. ನಾನು ಕೃಷ್ಣನ ಒಬ್ಬ ಸೇವಕನಷ್ಟೇ.” ಚೈತನ್ಯ ಮಹಾಪ್ರಭುಗಳು ತಮ್ಮನ್ನು ಈ ರೀತಿಯಾಗಿ ಬಣ್ಣಿಸಿಕೊಂಡರು. ಅವರು ಹೇಳಿದಂತೆ, “ನಾನು ಬ್ರಾಹ್ಮಣನಲ್ಲ , ನಾನು ಕ್ಷತ್ರಿಯನಲ್ಲ, ನಾನು ವೈಶ್ಯನಲ್ಲ ಅಥವಾ ಶೂದ್ರನಲ್ಲ. ನಾನು ಬ್ರಹ್ಮಚಾರಿಯಲ್ಲ, ನಾನು ಗೃಹಸ್ಥನಲ್ಲ, ನಾನು ವಾನಪ್ರಸ್ಥನಲ್ಲ ಅಥವಾ ಸಂನ್ಯಾಸಿಯಲ್ಲ.” ಹಾಗಾದರೆ ನೀನು ಯಾರು? ಚೈತನ್ಯ ಮಹಾಪ್ರಭು ಹೇಳಿದರು. ಗೋಪೀ ಭರ್ತುಃ ಪದ ಕಮಲಯೋರ್‌ ದಾಸ ದಾಸಾನುದಾಸಃ – “ನಾನು ಕೃಷ್ಣನ ಸೇವಕನ, ಸೇವಕನ ಸೇವಕನು.” ಇದು ನಮ್ಮ ಗುರುತಾಗಿರಬೇಕು. ಇಂತಹ ಅಸ್ತಿತ್ವವು ಬಹಳ ಉತ್ತಮವಾದದ್ದು.

ಕೃಷ್ಣಪ್ರಜ್ಞೆಯಲ್ಲಿ ನಮ್ಮ ಎಲ್ಲ ದೈವಸಹೋದರರನ್ನೂ ನಾವು “ಪ್ರಭು” ಎಂದು ಸಂಬೋಧಿಸುತ್ತೇವೆ. ಪ್ರಭು ಎಂದರೆ  “ಒಡೆಯ” (ಯಜಮಾನ) ಎಂದರ್ಥ. ಇಲ್ಲಿ ಕಂಡುಬರುವ ವಿಚಾರವೆಂದರೆ, ನೀನು ನನ್ನ ಗುರು ಮತ್ತು ನಾನು ನಿನ್ನ ಸೇವಕ ಎಂಬ ಅರಿವು ನನಗಿರುತ್ತದೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬನೂ ಯಜಮಾನನ ಸ್ಥಾನ ಅಲಂಕರಿಸಲು ಬಯಸುತ್ತಾನೆ. “ನಾನು ನಿನ್ನ ಯಜಮಾನ, ನೀನು ನನ್ನ ಸೇವಕ.” ಇದು ಭೌತಿಕ ಅಸ್ತಿತ್ವದ ಮನಃಸ್ಥಿತಿ. ಆದರೆ ಆಧ್ಯಾತ್ಮಿಕ ಜೀವನವೆಂದರೆ ವಿಚಾರಶೀಲತೆ, “ನಾನು ನಿನ್ನ ಸೇವಕ, ನೀನು ನನ್ನ ಯಜಮಾನ.”

ಮಾಯೆಯ ಅಥವಾ ಭ್ರಮೆಯ ಒತ್ತಡಕ್ಕೆ ಸಿಲುಕಿ ನಾವು ಅನೇಕ ಗುರುತುಗಳನ್ನು ಅಳವಡಿಸಿಕೊಳ್ಳುತ್ತೇವೆ: “ನಾನು ಒಬ್ಬ ಶ್ರೀಮಂತ ಮನುಷ್ಯ”, “ನಾನು ಒಬ್ಬ ಪ್ರಧಾನ ಮಂತ್ರಿ”, “ನಾನು ಇದು”, “ನಾನು ಅದು”, ಅಲ್ಲದೆ, ಈ ಎಲ್ಲ ಉಪಾಧಿಗಳಿಂದ ಬೇಸರಗೊಂಡಾಗ ನಾವು ದೇವರಾಗಲು ಪ್ರಯತ್ನಿಸುತ್ತೇವೆ. ಇದು ಮಾಯೆಯ ಕೊನೆಯ ಜಾಲವಾಗಿದೆ.

ಆದರೆ ಕೃಷ್ಣ ಪ್ರಜ್ಞೆಯ ತತ್ತ್ವವು ನಮ್ಮನ್ನು ವಿರುದ್ಧ ದಿಕ್ಕಿನಲ್ಲಿ ವಿಚಾರ ಮಾಡುವಂತೆ ಉಪದೇಶಿಸುತ್ತದೆ. ನಿನ್ನನ್ನು ದೇವರೆಂದು ಭಾವಿಸಿಕೊಳ್ಳದೆ, ದೇವರ ಸೇವಕನ ಸೇವಕನ ಸೇವಕನೆಂದು ತಿಳಿದುಕೊ. ಆದ್ದರಿಂದ, ಕೃಷ್ಣಪ್ರಜ್ಞೆ ತುಂಬ ಕಠಿಣವಾದದ್ದು. ಏಕೆಂದರೆ ಇಲ್ಲಿ ನೀವು ಬಹಳ ವಿನಮ್ರರಾಗಬೇಕಾಗುತ್ತದೆ. ತೃಣಾದಪಿ ಸುನೀಚೇನ  – ಬೀದಿಯಲ್ಲಿ ಸಿಗುವ ಒಂದು ಹುಲ್ಲು ಕಡ್ಡಿಗಿಂತಲೂ ನೀನು ಕೀಳು ಎಂದು ತಿಳಿಯಬೇಕು. ಬಹಳ ವಿನಮ್ರನಾಗಿರಬೇಕು. ತರೋರ್‌ ಇವ ಸಹಿಷ್ಣುನಾ – ಒಂದು ಮರಕ್ಕಿಂತಲೂ ಹೆಚ್ಚು ತಾಳ್ಮೆ ಹೊಂದಿದವನಾಗಿರಬೇಕು. ಮರಗಳಿಗೆ ತುಂಬ ತಾಳ್ಮೆಯಿರುತ್ತದೆ. ಅವುಗಳು ನಿಮಗೆ ಆಶ್ರಯ, ನೆರಳು, ಹಣ್ಣುಗಳು, ಹೂವುಗಳು ಮತ್ತು ಕಟ್ಟಿಗೆಗಳನ್ನು ನೀಡುತ್ತವೆ. ಆದರೂ ಸಹ ಮರಗಳು ಎಂದಿಗೂ ಪ್ರತಿರೋಧಿಸುವುದಿಲ್ಲ. ಅವು ಸದಾಕಾಲ ಶಾಂತವಾಗಿ ನಿಂತಿರುತ್ತವೆ. ಹಾಗಾಗಿ ಮರಗಳು ತಾಳ್ಮೆಗೆ ಅತ್ಯುತ್ತಮ ನಿದರ್ಶನಗಳು.

ಶ್ರೀ ಚೈತನ್ಯ ಪ್ರಭುಗಳು ಮತ್ತೆ ಹೇಳುತ್ತಾರೆ, ಅಮಾನಿನಾ ಮಾನದೇನ – “ಒಬ್ಬ ವ್ಯಕ್ತಿಯು ಎಲ್ಲ ಗೌರವಾದ್ಯತೆಗಳನ್ನು ತಿರಸ್ಕರಿಸಿ, ಬೇರೆಯವರಿಗೆ ತನ್ನ ಸಕಲ ಗೌರವವನ್ನು ಮುಡಿಪಾಗಿರಿಸಬೇಕು.” ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ನೀವು ಸಾಂಸಾರಿಕ ಚಟುವಟಿಕೆಗಳಲ್ಲಿ ಭಾಗವಹಿಸದೆ, ದೂರ ಉಳಿಯಬೇಕು. ಯಾರಾದರೂ ನಿಮ್ಮನ್ನು ಅವಾಚ್ಯ ಶಬ್ದಗಳಿಂದ ಅವಮಾನಿಸಿದರೆ – “ನೀನು ಹಾಗೆ, ನೀನು ಹೀಗೆ, ದುಷ್ಟ ವ್ಯಕ್ತಿ ನೀನು!” ನಿಮ್ಮ ಶರೀರವು ನಿಮ್ಮದಲ್ಲ, ಆ ಶರೀರದೊಂದಿಗೆ ನಿಮಗೆ ಯಾವ ಸಂಬಂಧವೂ ಇಲ್ಲ ಎಂಬ ಸತ್ಯವನ್ನು ನೀವು ಅರಿತದ್ದೇ ಆದರೆ ಬೇರೆಯವರು ನಿಮ್ಮನ್ನು “ದುಷ್ಟ” ಎಂದು ಬೈದರೂ ಅಷ್ಟೆ, “ದೇವರು” ಎಂದು ಹೊಗಳಿದರೂ ಅಷ್ಟೆ . ಅದರಿಂದ ಯಾವ ವ್ಯತ್ಯಾಸವೂ ಆಗದು ಇವು ಕೇವಲ ಈ ಶರೀರ ಹೊಂದಿರುವ ಉಪಾಧಿಗಳೆಂದು ತಮಗೆ ಅರಿವಾಗಿರುತ್ತದೆ.

ಇಂದು ಎಷ್ಟೋ ಜನ ಎಮ್‌.ಎ. ಅಥವಾ ಪಿಎಚ್‌.ಡಿ. ಗಳನ್ನು ಪಡೆಯಲು ಹಾತೊರೆಯುತ್ತಿದ್ದಾರೆ. ಹಾಗಾದರೆ, ಈ ಎಮ್‌.ಎ. ಅಥವಾ ಪಿಎಚ್‌.ಡಿ. ಗಳೆಂದರೇನು? ಇವು ನಮ್ಮ ಶರೀರ ಹೊಂದುವ ಉಪಾಧಿಗಳು ಅಷ್ಟೆ. ನಿಮ್ಮ ಶರೀರವು ಮಾಯವಾದೊಡನೆಯೆ ಈ ಎಮ್‌.ಎ.ಗಳು ಮತ್ತು ಪಿಎಚ್‌.ಡಿ. ಗಳು ಸಹ ಮಾಯವಾಗಿ ಹೋಗುತ್ತವೆ. ತದನಂತರ ನೀವು ಬೇರೆ ದೇಹಗಳನ್ನು ಸ್ವೀಕರಿಸಬೇಕಾಗುವುದು. ಆಗ ನೀವು ಎಂತಹ ದೇಹಗಳನ್ನು ಸ್ವೀಕರಿಸಬೇಕಾಗಿ ಬರುವುದು ಮತ್ತು ಪ್ರಕೃತಿ ನಿಮ್ಮ ಮೇಲೆ ಯಾವ ಪ್ರಕಾರದ ಶರೀರಗಳನ್ನು ಹೊರಿಸುವುದು ಎಂಬುವುದು ನಿಮಗೆ ತಿಳಿಯದು.

ಪ್ರಕೃತೇ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ – “ಎಲ್ಲ ಕಾರ್ಯ ಕಲಾಪಗಳೂ ಜರುಗುತ್ತಿರುವುದು ನಿಸರ್ಗದ ಶಕ್ತಿಯ ಆಧಾರದ ಮೇಲೆ.” ಹಾಗಾಗಿ, ಪ್ರಕೃತಿಯು ಒಂದರ ಅನಂತರ ಮತ್ತೊಂದು ಶರೀರವನ್ನು ನೀವು ಒಪ್ಪಿಕೊಳ್ಳುವಂತೆ ಮಾಡುತ್ತದೆ. ಪ್ರಕೃತಿಯು ಕೃಷ್ಣನ ಸರ್ಕಾರವಿದ್ದಂತೆ. ಅದರ ನಿಯಂತ್ರಣದಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಕೃತಿಯಲ್ಲಿ 84,00,000 ದಷ್ಟು ವಿವಿಧ ಪ್ರಕಾರದ ಶರೀರಗಳಿದ್ದು, ನಿಮಗೆ ಯಾವ ಶರೀರ ದೊರೆಯುವುದು ಎಂಬುದು ನೀವು ವರ್ತಮಾನದ ಜೀವನದಲ್ಲಿ ಮಾಡುವ ಕೃತ್ಯಗಳನ್ನು ಅವಲಂಬಿಸಿದೆ. ನಿಮ್ಮ ವರ್ತಮಾನದ ಜೀವನದ ಕೊನೆಯ ಘಳಿಗೆಯಲ್ಲಿ ನೀವು ಯಾವ ರೀತಿಯ ವಿಚಾರಗಳನ್ನು ಬೆಳೆಸಿಕೊಳ್ಳುವಿರೋ, ಅದರ ಆಧಾರದ ಮೇಲೆ ಮುಂದಿನ ಜನ್ಮದಲ್ಲಿ ನಿಮಗೆ ಒಂದು ನಿರ್ದಿಷ್ಟ ಪ್ರಕಾರದ ಶರೀರ ದೊರೆಯುವುದು. ಮನಸ್ಸು ನಿಮ್ಮ ಸೂಕ್ಷ್ಮ ಶರೀರವಾಗಿದೆ. ಮರಣದ ಅನಂತರ ಅದೇ ಮನಸ್ಸು ನಿಮ್ಮನ್ನು ಸೂಕ್ತವಾದ ತಾಯಿಯ ಗರ್ಭಕ್ಕೆ ಕರೆದೊಯ್ಯುತ್ತದೆ. ಇಲ್ಲಿ ನಿಮಗೆ ಇನ್ನೊಂದು ಸ್ಥೂಲ ಶರೀರ ದೊರೆಯುವುದು. ಆಗ ಅದೇ ಶರೀರವನ್ನು ಬೆಳೆಸಿ, ಬಳಸಿಕೊಂಡು ನೀವು ಗರ್ಭದಿಂದಾಚೆ ಬಂದು ನಿಮ್ಮ ಶರೀರದ ಸವಲತ್ತುಗಳಿಗನುಗುಣವಾಗಿ ಕಾರ್ಯಕಲಾಪಗಳನ್ನು ಪ್ರಾರಂಭಿಸುವಿರಿ. ಹೀಗೆ ಜನನದ ವಿಧಾನವು ತುಂಬ ಸಂಕಟದಿಂದ ಕೂಡಿದ್ದಾಗಿದೆ.

ಜನನ-ಮರಣದ ಚಕ್ರದಿಂದ ಪಾರಾಗಲು ಅಥವಾ ಮರು ಜನ್ಮ ಪಡೆಯುವುದನ್ನು ತಪ್ಪಿಸಲು ಕೃಷ್ಣಪ್ರಜ್ಞೆಯನ್ನು ನಾವೆಲ್ಲರೂ ತುಂಬ ಏಕಾಗ್ರತೆಯಿಂದ ಅಭ್ಯಸಿಸಬೇಕು. ಆಧ್ಯಾತ್ಮಿಕ ಸಾಮ್ರಾಜ್ಯವನ್ನು ಪ್ರವೇಶಿಸಲು ನಾವು ಅರ್ಹತೆ ಪಡೆಯಲು ಸುಲಭವಾದ ದಾರಿಯೆಂದರೆ ನಮ್ಮ ಮತ್ತು ಭಗವಂತನ ಮಧ್ಯೆ ಇರುವ ಸಂಬಂಧವನ್ನು ತಿಳಿದುಕೊಳ್ಳುವುದಾಗಿದೆ. ನಿಮ್ಮ ಪ್ರಸ್ತುತ ಶರೀರವನ್ನು ತ್ಯಾಗ ಮಾಡಿ ಆಧ್ಯಾತ್ಮಿಕ ಸಾಮ್ರಾಜ್ಯವನ್ನು ಪ್ರವೇಶಿಸಿದಾಗ, ಮರುಜನ್ಮದಿಂದ ಮುಕ್ತಿ ಶತಸ್ಸಿದ್ಧ  (ತ್ಯಕ್ತ್ವಾ ದೇಹಂ ಪುನರ್‌ ಜನ್ಮ ನೈತಿ ಮಾಮ್‌ ಏತಿ ಸೋಽರ್ಜುನ) ಭಗವದ್ಗೀತೆಯಲ್ಲಿ ಇನ್ನೊಂದೆಡೆ (8.15), ಕೃಷ್ಣನು ಇದೇ ಸಂಗತಿಯನ್ನು ಹೇಳಿದ್ದಾನೆ:

ಮಾಮ್‌ ಉಪೇತ್ಯ ಪುನರ್‌ ಜನ್ಮ ದುಃಖಾಲಯಂ ಅಶಾಶ್ವತಂ

ನಾಪ್ನುವಂತಿ ಮಹಾತ್ಮಾನಃ ಸಂಸಿದ್ಧಿಂ ಪರಮಾಂ ಗತಾಃ

“ಯಾರು ಮನೆಗೆ, ಅಂದರೆ ಭಗವದ್ಧಾಮಕ್ಕೆ  ತೆರಳುವರೋ, ಮರಳಿ ಈ ದುಃಖಪೂರ್ಣ, ನಿರ್ಬಂಧಗಳಿಂದ ಕೂಡಿರುವ ಲೌಕಿಕ ಜಗತ್ತಿಗೆ ಬರುವುದಿಲ್ಲ.”

ಈ ಲೌಕಿಕ ಜಗತ್ತು ಒಂದು ದುಃಖಾಲಯವಾಗಿದೆ. ಅಂದರೆ ಶೋಕದಿಂದ ತುಂಬಿಹೋಗಿರುವ ಸ್ಥಳ. ಆದರೆ ನಾವು ಸಂತೋಷದಿಂದಿದ್ದೇವೆ ಎಂದು ವಿಚಾರ ಮಾಡುತ್ತೇವೆ. ಇದನ್ನೇ “ಮಾಯೆ” ಎಂದು ಹೇಳುತ್ತಾರೆ. ನಮ್ಮೆಲ್ಲರ ದೃಷ್ಟಿಕೋನದಲ್ಲಿ ನಾವು ಪ್ರಗತಿ ಸಾಧಿಸುತ್ತಿದ್ದೇವೆ, ನಾವು ಸಂತೋಷದಿಂದಿದ್ದೇವೆ. ನಾವು ನಾಗರಿಕರಾಗಿದ್ದೇವೆ ಮತ್ತು ಅಭಿವೃದ್ಧಿ ಹೊಂದಿದವರಾಗಿದ್ದೇವೆ. ಇಲ್ಲ, ನೀವು ಅಭಿವೃದ್ಧಿ ಹೊಂದಿದವರಾಗಿಲ್ಲ, ನೀವು ನಾಗರಿಕರೂ ಅಲ್ಲ, ನೀವು ಸಂತುಷ್ಟರಾಗಿಲ್ಲ. ಅಷ್ಟೇ ಅಲ್ಲದೆ, ನೀವು ಬುದ್ಧಿವಂತರಲ್ಲ. ಏಕೆಂದರೆ, ನೀವು ಯಾರು ಎಂಬುದೇ ನಿಮಗೆ ಗೊತ್ತಿಲ್ಲ. ನೀವು ನಿಮ್ಮ ಶರೀರ ಎಂದು ಯೋಚಿಸುತ್ತಿದ್ದೀರಿ. ಹೀಗಾಗಿ ನೀವು ಮಾಡುವ ಎಲ್ಲ ಲೆಕ್ಕಾಚಾರಗಳೂ ಅರ್ಥಹೀನ, ಮಾಯೆ ಆಗಿದೆ.

ಮಾಯೆ ತುಂಬ ಪ್ರಬಲವಾದದ್ದು. ಮಾಯೆಯನ್ನು ಮೀರಿ ನಿಲ್ಲುವುದು ಬಹಳ ಕಠಿಣವಾದ ಕೆಲಸ. ಆದರೆ, ಭಗವದ್ಗೀತೆ (7.14)ಯ ಏಳನೆಯ ಅಧ್ಯಾಯದಲ್ಲಿ ಕೃಷ್ಣನು ಒಂದು ಸುಲಭ ಮಾರ್ಗವನ್ನು ತೋರಿಸಿದ್ದಾನೆ,

ದೈವೀ ಹಿ ಏಶಾ ಗುಣ-ಮಯೀ ಮಮ ಮಾಯಾ ದುರತ್ಯಯಾ

ಮಾಂ ಏವ ಯೇ ಪ್ರಪದ್ಯಂತೇ ಮಾಯಾಂ ಏತಾಂ ತರಂತಿ ತೇ

“ಈ ನನ್ನ ಮಾಯಾ ಶಕ್ತಿಯನ್ನು ಜಯಿಸಿ ಮುಂದೆ ಸಾಗುವುದು ಬಹಳ ಕಠಿಣವಾಗಿದೆ. ಆದರೆ, ನೀನು ನನಗೆ, ಕೃಷ್ಣನಿಗೆ, ಸಂಪೂರ್ಣವಾಗಿ ಶರಣಾಗತನಾದರೆ,  ಈ ಮಾಯಾಜಾಲವನ್ನು ಸುಲಭವಾಗಿ ಜಯಿಸಬಹುದು.”

ಮಾಯೆಯು ನಿಮ್ಮನ್ನು ಎಲ್ಲ ಕಡೆಯಿಂದ ಸೆರೆ ಹಿಡಿದಿರುವುದರಿಂದ, ಅವಳ ಬಂಧನದಿಂದ ಮುಕ್ತರಾಗುವುದು ಅಷ್ಟೊಂದು ಸುಲಭವಲ್ಲ. ಉದಾಹರಣೆಗಾಗಿ, ನೀವು ತುಂಬ ಬುದ್ಧಿವಂತರಾಗಿದ್ದು, ನಿಮ್ಮ ಆಧ್ಯಾತ್ಮಿಕ ಸ್ಥಾನಮಾನದ ಅರಿವು ನಿಮಗೆ ಇದ್ದರೂ ಸಹ – “ಅಹಂ ಬ್ರಹ್ಮಾಸ್ಮಿ – ನಾನು ಜಡವಸ್ತುವಲ್ಲ, ನಾನು ಬ್ರಹ್ಮನ್‌, ಚೇತನಾತ್ಮ” ಈ ಹಂತದಲ್ಲಿಯೂ ಮಾಯೆ ನಿಮ್ಮ ಮೇಲೆ ಪ್ರಭಾವಬೀರಬಲ್ಲಳು. ಏನು ಆ ಪ್ರಭಾವ? “ನಾನು ಬ್ರಹ್ಮನ್‌” ಎಂದು ನೀವು ತಿಳಿದುಕೊಂಡಾಗ “ನಾನು ಪರಬ್ರಹ್ಮನ್‌, ಅಂದರೆ ಭಗವಂತ”, ಎಂದು ಯೋಚಿಸಬಹುದು.  ಇದರರ್ಥ ಇಷ್ಟೆ , ನೀವು ಇನ್ನೂ ಅಂಧಕಾರದಲ್ಲಿದ್ದೀರಿ. ಏಕೆಂದರೆ, ನೀವು ಭಗವಂತನಲ್ಲ. ಭಗವದ್ಗೀತೆಯಲ್ಲಿ ಅಹಂ ಬ್ರಹ್ಮಾಸ್ಮಿ ಯ ನಿಜವಾದ ಅರ್ಥವನ್ನು ಕೃಷ್ಣನು ವಿವರಿಸುತ್ತಾನೆ. ಮೊದಲನೆಯದಾಗಿ ಅವನು ಹೇಳುವಂತೆ, ಬ್ರಹ್ಮ ಭೂತಃ ಪ್ರಸನ್ನಾತ್ಮಾ – ನೀವು ಬರಿ ಜಡವಸ್ತುವಲ್ಲ, ಆತ್ಮವೆಂಬ ಅರಿವು ನಿಮ್ಮಲ್ಲಿ ಮೂಡಿದಾಗ ಅದರ ಮೊದಲನೆಯ ಲಕ್ಷಣವೆಂದರೆ, ನೀವು ಸಂತುಷ್ಟರಾಗುವುದು (ಪ್ರಸನ್ನಾತ್ಮಾ). ನಿಮ್ಮಲ್ಲಿ ಯಾವ ತೆರನಾದ ಆತಂಕ ಇರುವುದಿಲ್ಲ. ಆಗ ನ ಶೋಚತಿ ನ ಕಾಂಕ್ಷತಿ – ನೀವು ದುಃಖಿಸುವುದಿಲ್ಲ ಮತ್ತು ಹಾತೊರೆಯುವುದಿಲ್ಲ.

ಆಮೇಲೆ, ಸಮಃ ಸರ್ವೇಶು ಭೂತೇಷು – ನೀವು ಆಧ್ಯಾತ್ಮಿಕ ದೃಷ್ಟಿ ಪಡೆದಿರುವುದರಿಂದ ಎಲ್ಲ ಜೀವಿಗಳನ್ನು ಸಮಾನವಾಗಿ ಕಾಣುವಿರಿ. ನೀವು ಶರೀರವನ್ನು ನೋಡುವುದಿಲ್ಲ, ಆತ್ಮವನ್ನು ನೋಡುವಿರಿ. ಒಂದು ನಾಯಿಯನ್ನು ನೋಡಿದಾಗ, ನೀವು ಯೋಚಿಸಿದಿರಿ, ಇದು ಒಂದು ಚೇತನಾತ್ಮ ಎಂದು. ನೀವು ಒಬ್ಬ ಬ್ರಾಹ್ಮಣನನ್ನು ನೋಡಿದಾಗ ಯೋಚಿಸುವಿರಿ ಇದೊಂದು ಚೇತನಾತ್ಮ ಎಂದು. ನೀವು ಒಬ್ಬ ಅಮೆರಿಕದವನನ್ನು ಕಾಣದೆ ಚೇತನಾತ್ಮವನ್ನು ಕಾಣುವಿರಿ. ಒಬ್ಬ ಭಾರತೀಯನನ್ನು ಕಾಣದೆ ಚೇತನಾತ್ಮವನ್ನು ಕಾಣುವಿರಿ. ಇದೇ ಬ್ರಹ್ಮನ್‌ ಸಾಕ್ಷಾತ್ಕಾರ. “ನನ್ನ ಸಹೋದರನು ಬ್ರಹ್ಮನ್‌ ಮತ್ತು ನಾನೂ ಬ್ರಹ್ಮನ್‌. ಆದರೆ ಉಳಿದವರಾರೂ ಬ್ರಹ್ಮನ್‌ ಅಲ್ಲ” ಎಂದು ತಿಳಿಯುವುದು ಬ್ರಹ್ಮನ್‌ ಸಾಕ್ಷಾತ್ಕಾರವಲ್ಲ. ಬ್ರಹ್ಮನ್‌ ಸಾಕ್ಷಾತ್ಕಾರವೆಂದರೆ, ಪ್ರತಿ ಜೀವಿಯ ಆಧ್ಯಾತ್ಮಿಕ ಅಸ್ತಿತ್ವವನ್ನು ನೋಡುವುದಾಗಿದೆ.

ಕೇವಲ ಎಲ್ಲ ಜೀವಿಗಳಲ್ಲಿ ಏಕತೆಯನ್ನು ಅಥವಾ ಸಮಾನತೆಯನ್ನು ಕಂಡರೆ ಸಾಲದು. ನೀವು ಬ್ರಹ್ಮನ್‌ ಚಟುವಟಿಕೆಗಳಲ್ಲಿ ತೊಡಗಬೇಕು. ಅದನ್ನೇ ಪರಿಪೂರ್ಣತೆ ಎನ್ನುತ್ತಾರೆ. ಆದ ಕಾರಣವೆ ಕೃಷ್ಣನು ಕೊನೆಯಲ್ಲಿ ಹೇಳುತ್ತಾನೆ, ಮದ್‌ ಭಕ್ತಿಂ ಲಭತೇ ಪರಾಂ – “ಬ್ರಹ್ಮನ್‌ ಸಾಕ್ಷಾತ್ಕಾರವಾದ ಮೇಲೆ ನಿಜವಾದ ಭಕ್ತಿ ಸೇವೆ ಪ್ರಾರಂಭವಾಗುವುದು.” ಬ್ರಹ್ಮನ್‌ ಅನ್ನು ಅರಿತುಕೊಳ್ಳುವುದು ಎಂದರೆ ತಿಳುವಳಿಕೆ ಅಥವಾ ಜ್ಞಾನೋದಯ ಎಂದರ್ಥ, “ನಾನು ಒಂದು ಚೇತನಾತ್ಮವಾಗಿದ್ದೇನೆ. ಭಗವಂತನು ಸರ್ವಶ್ರೇಷ್ಠ ಚೇತನಾತ್ಮ. ಆದ್ದರಿಂದ ನಾನು ಅವನ ಸೇವೆ ಮಾಡಬೇಕು” ಎಂಬ ಅರಿವು.

ವೇದಗಳಲ್ಲಿ ಹೇಳುವಂತೆ ನಿತ್ಯೋ ನಿತ್ಯಾನಾಂ ಚೇತನಃ ಚೇತನಾನಾಂ “ಅಸಂಖ್ಯಾತ ಜೀವಿಗಳಲ್ಲಿ ಒಬ್ಬನು ಮಾತ್ರ ಸರ್ವಶ್ರೇಷ್ಠನಾಗಿದ್ದಾನೆ.” ಜೀವಿಗಳು ಅನೇಕ ಆದರೆ ದೇವರು ಮಾತ್ರ ಒಬ್ಬನೆ. ಅಲ್ಲದೆ, ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್‌ – “ಒಂದು ಜೀವವು (ದೇವರು) ಇತರ ಅನೇಕ ಜೀವಿಗಳ ಆವಶ್ಯಕತೆಗಳನ್ನು ಪೂರೈಸುತ್ತಿದೆ.” ಕ್ರೈಸ್ತ ಧರ್ಮದಲ್ಲಿ ಈ ವಿಚಾರವು ಪ್ರಥಮ ಪ್ರಾಶಸ್ತ್ಯ ಪಡೆದಿದೆ. ಆದ್ದರಿಂದಲೇ ಚರ್ಚಿಗೆ ಹೋಗಿ ಕ್ರಿಶ್ಚಿಯನ್ನರು ಹೀಗೆ ಪ್ರಾರ್ಥಿಸುವರು, “ಓ ದೇವರೆ, ನಮಗೆ ನಮ್ಮ ಆಹಾರವನ್ನು ಒದಗಿಸು. ನಮ್ಮ ತಪ್ಪುಗಳನ್ನು ಕ್ಷಮಿಸು.” ದೇವರು ಸರ್ವಶ್ರೇಷ್ಠನಾಗಿರುವದರಿಂದಲೇ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಅವನಿಂದ ಸಾಧ್ಯ. ನಿಮಗೆ ಸೂರ್ಯನ ಬೆಳಕು ಬೇಕು, ಅದಕ್ಕೆ ದೇವರು ಸೂರ್ಯನ ಬೆಳಕನ್ನು ಸೃಷ್ಟಿಸಿದ್ದಾನೆ. ನಿಮಗೆ ನೀರು ಬೇಕು, ಅದಕ್ಕೆ ದೇವರು ಸಾಕಷ್ಟು ನೀರನ್ನು ಸೃಷ್ಟಿಸಿದ್ದಾನೆ. ನಿಮಗೆ ಗಾಳಿಯ ಆವಶ್ಯಕತೆಯಿದೆ, ಆದ್ದರಿಂದಲೇ ದೇವರು ಸಾಕಷ್ಟು ಗಾಳಿಯನ್ನು ನಿರ್ಮಿಸಿದ್ದಾನೆ. ನಿಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ನಿಮಗೆ ಸಹಾಯಹಸ್ತ ಚಾಚುತ್ತಿದ್ದಾನೆ.

ಮನುಷ್ಯರಲ್ಲದೆ ಪಕ್ಷಿಗಳು, ಕಾಡುಪ್ರಾಣಿಗಳು, ಹುಳುಗಳು, ಗಿಡಮರಗಳು ಇವೆಲ್ಲವುಗಳಿಗೂ ದೇವರು ಸಹಾಯ ಮಾಡುತ್ತಿದ್ದಾನೆ. ಅವುಗಳಿಗೆ ಯಾವ ಆರ್ಥಿಕ ಸಮಸ್ಯೆಯೂ ಇಲ್ಲ. ಭಾರತದಲ್ಲಿ ಚಿಂವ್‌ಗುಟ್ಟುವಂತೆ, ಕುಣಿಯುವಂತೆ, ತಿನ್ನುವಂತೆಯೇ ಗುಬ್ಬಿಗಳು ಇಲ್ಲಿಯೂ ಚಿಂವ್‌ಗುಟ್ಟುವುದನ್ನು, ಕುಣಿಯುವುದನ್ನು ಮತ್ತು ತಿನ್ನುವುದನ್ನು ನಾನು ಕಂಡಿದ್ದೇನೆ. ಭಾರತದಲ್ಲಿಯಾಗಲಿ, ಕೆನಡಾದಲ್ಲಿಯಾಗಲಿ ಗುಬ್ಬಿಗಳಿಗೆ ಆರ್ಥಿಕ ಸಮಸ್ಯೆಗಳಿಲ್ಲ. ಏಕೆಂದರೆ, ಅವುಗಳು ಪ್ರಕೃತಿಯ ನಿಯಮಗಳಿಗೆ ಸಂಪೂರ್ಣವಾಗಿ ಬದ್ಧವಾಗಿವೆ. ಆದರೆ ನಾವು, ನಿಸರ್ಗ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದರಿಂದ ಅನೇಕ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅಂದರೆ, ನಮ್ಮ ಆರ್ಥಿಕ ಸಮಸ್ಯೆಗಳಿಗೆ ನಾವೇ ಕಾರಣರು.

ಶ್ರೀಕೃಷ್ಣನು ಸೂರ್ಯ, ಚಂದ್ರರಲ್ಲದೆ ಇಡೀ ಬ್ರಹ್ಮಾಂಡವನ್ನೇ ಸೃಷ್ಟಿ ಮಾಡಿದ್ದಾನೆ. ಹಾಗಾದರೆ ಈ ಭೂಮಿ ಎಂಬ ಗ್ರಹವು ನಮ್ಮದೆಂದು ಹೇಳಲು ಹೇಗೆ ಸಾಧ್ಯ? ನಮ್ಮ ಜೀವನೋಪಾಯಕ್ಕಾಗಿ ಅದನ್ನು ನಮಗೆ ಎರವಲು (ಸಾಲವಾಗಿ) ಕೊಡಲಾಗಿದೆ ಅಷ್ಟೇ. ಒಬ್ಬ ಶ್ರೀಮಂತನ ಮಗನು ತನ್ನ ತಂದೆಯ ಆಸ್ತಿಯನ್ನು ಅನುಭವಿಸಲು ಅರ್ಹನಾಗಿರುತ್ತಾನೆ. ಆದರೆ ತನ್ನ ತಂದೆಯ ಮಾತು ಕೇಳದಿದ್ದರೆ, ಅವನು ತೊಂದರೆಗೀಡಾಗುತ್ತಾನೆ. ಇದೇ ರೀತಿ, ನಾವೆಲ್ಲರೂ ಭಗವಂತನ ಮಕ್ಕಳು, ಅವನ ಆಸ್ತಿಯನ್ನು ಅನುಭವಿಸುವ ಹಕ್ಕು ನಮಗೆಲ್ಲರಿಗೂ ಉಂಟು. ಆದರೆ, ಭಗವಂತನ ಆಜ್ಞೆಗಳನ್ನು ನಿರ್ಲಕ್ಷಿಸಿದ್ದರಿಂದ ನಮಗೆ ಅನೇಕ ಆರ್ಥಿಕ ಸಮಸ್ಯೆಗಳು ಎದುರಾಗುತ್ತಿವೆ.

ಈಶೋಪನಿಷದ್‌ನಲ್ಲಿ ಬಹಳ ಸೊಗಸಾಗಿ ವಿವರಿಸಲಾಗಿದೆ,

ಈಶಾವಾಸ್ಯಂ ಇದಂ ಸರ್ವಂ ಯತ್‌ ಕಿಂಚ ಜಗತ್ಯಾಂ ಜಗತ್‌

ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ತಸ್ಯಸ್ವಿದ್‌ ಧನಂ

“ನಿನ್ನ ಕಣ್ಣಿಗೆ ಕಾಣುವುದೆಲ್ಲವೂ ದೇವರಿಗೆ ಸೇರಿದ್ದು. ಆವಶ್ಯಕತೆಗಿಂತ ಹೆಚ್ಚು ಬಯಸಬೇಡ.” ಇದೇ ರೀತಿ, ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ, ಸರ್ವ ಲೋಕ ಮಹೇಶ್ವರಂ – “ನಾನು ಎಲ್ಲ ಗ್ರಹಗಳ ಒಡೆಯನಾಗಿದ್ದೇನೆ.”

ಆದ್ದರಿಂದ ದೇವರು ಈ ನಿರ್ದಿಷ್ಟವಾದ ಗ್ರಹ, ಭೂಮಿಯ, ಒಡೆಯನೂ ಆಗಿದ್ದಾನೆ. ಇದು ಅವನ ಆಸ್ತಿ. ನಾವು ಬದುಕುತ್ತೇವೆ, ಅಳಿದುಹೋಗುತ್ತೇವೆ. ಆದರೆ ದೇವರ ಆಸ್ತಿ ಮಾತ್ರ ಶಾಶ್ವತವಾಗಿರುತ್ತದೆ. ಇದು ಅರ್ಥಮಾಡಿಕೊಳ್ಳಲು ಸುಲಭ. ಯಾವಾಗ ನಾವೆಲ್ಲರೂ ದೇವರ ಮಕ್ಕಳು ಮತ್ತು ದೇವರೇ ಎಲ್ಲದಕ್ಕೂ ಒಡೆಯನೆಂದು ಅಂಗೀಕರಿಸುತ್ತೇವೆಯೋ ಅಲ್ಲಿ ಶಾಂತಿ-ಸಮಾಧಾನ ನೆಲೆಸುವುದು. ಇದನ್ನೇ ಆಧ್ಯಾತ್ಮಿಕ ಸಮತಾವಾದ ಎನ್ನುತ್ತಾರೆ.

ಪ್ರತಿಯೊಬ್ಬರಿಗೂ ದೇವರ ವೆಚ್ಚದಲ್ಲಿ ಅಥವಾ ಆಶ್ರಯದಲ್ಲಿ ಬದುಕುವ ಹಕ್ಕು ಇದೆ. ಆದರೆ, ಒಬ್ಬರು ಇನ್ನೊಬ್ಬರ ಆಸ್ತಿಯನ್ನು ಆಕ್ರಮಿಸಬಾರದು. ಈ ನಿಸ್ವಾರ್ಥ ನಡವಳಿಕೆಯೆ ಪರಿಪೂರ್ಣ ಸಾಮಾಜಿಕ ಸಮತೋಲನಕ್ಕೆ ಭದ್ರ ಬುನಾದಿಯಾಗುವುದು. ನಿಮ್ಮ ಪಾಲಿಗೆ ಏನು ಬಂದಿದೆ ಅದನ್ನು ಆನಂದದಿಂದ ಅನುಭವಿಸಿ ಮತ್ತು ಅದರಲ್ಲಿಯೆ ತೃಪ್ತಿ ಹೊಂದಿ. ನಿಮಗೆಂದೆ ದೇವರು ಭೂಮಿಯ ಒಂದು ಪಾಲನ್ನು ನೀಡಿದ್ದಾನೆ; ಅದರಲ್ಲಿಯೆ ಸಂತೋಷ ಹೊಂದಿ. ಬೇರೆಯವರ ಭೂಮಿಯನ್ನು ಕದಿಯುವ ದುಷ್ಟ ವಿಚಾರ ಮಾಡಬೇಡಿ. ಇದೇ ಕೃಷ್ಣಪ್ರಜ್ಞೆಯಾಗಿದೆ.

ಕೃಷ್ಣಪ್ರಜ್ಞೆಯು ರಹಸ್ಯಮಯ ಅಥವಾ ಜಟಿಲವಾದುದಲ್ಲ. ನಿಮ್ಮ ಪ್ರತಿ ವಿಚಾರವೂ ಕೃಷ್ಣನಿಗೆ ಸಂಬಂಧಿಸಿದ್ದಾಗಿರಬೇಕು. ಅಲ್ಲದೆ, ಎಲ್ಲವನ್ನೂ ಅವನ ಸೇವೆಗಾಗಿ ಬಳಸಬೇಕು (ನಿರ್ಬಂಧಃ ಕೃಷ್ಣ ಸಂಬಂಧೇ ಯುಕ್ತಂ ವೈರಾಗ್ಯಂ ಉಚ್ಯತೇ). ಭಕ್ತಿರಸಾಮೃತ ಸಿಂಧು ಗ್ರಂಥದಲ್ಲಿ ಶ್ರೀಲ ರೂಪ ಗೋಸ್ವಾಮಿ ಹೇಳುವಂತೆ, ಎಂದು ಕೃಷ್ಣನ ಸೇವೆಯಲ್ಲಿ ಎಲ್ಲವನ್ನೂ ಉಪಯೋಗಿಸುವಿರೋ ಅಂದು ಹುಟ್ಟು ಮತ್ತು ಸಾವಿನ ಚಕ್ರದಿಂದ ನೀವು ಮುಕ್ತಿ ಹೊಂದುವಿರಿ. ಕೃಷ್ಣಪ್ರಜ್ಞಾ ಸಂಘದಲ್ಲಿ ನಾವು ಮಾಡುತ್ತಿರುವುದೂ ಇದನ್ನೇ. ಉದಾಹರಣೆಗಾಗಿ, ಪ್ರತಿನಿತ್ಯ ನಾವು ಒಂದು ಧ್ವನಿಮುದ್ರಕ ಯಂತ್ರವನ್ನು ಬಳಸುತ್ತಿದ್ದೇವೆ. ಅದನ್ನು ಹೇಗೆ ಬಳಸುತ್ತಿದ್ದೇವೆ? ಅದರಲ್ಲಿ ಕೃಷ್ಣನನ್ನು ಕುರಿತು ಶಬ್ದಗಳನ್ನು ದಾಖಲಿಸುತ್ತಿದ್ದೇವೆ. ಅದೇ ಪ್ರಕಾರ, ಈ ಮನೆಯನ್ನು ಕೃಷ್ಣನಿಗಾಗಿ ಬಳಸಲಾಗುತ್ತಿದೆ ಮತ್ತು ಈ ಶರೀರ ಕೂಡ ಕೃಷ್ಣನಿಗಾಗಿ ಬಳಕೆಯಾಗುತ್ತಿದೆ. ಅಷ್ಟೇ ಅಲ್ಲದೆ, ನಾವು ಕೃಷ್ಣನಿಗಾಗಿ, ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದೇವೆ.

ಈ ಪ್ರಕಾರವಾಗಿ, ಎಲ್ಲವನ್ನೂ ಕೃಷ್ಣನಿಗಾಗಿ ಬಳಸುವುದರ ಮೂಲಕ ನೀವು ಕೃಷ್ಣಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಕೃಷ್ಣಪ್ರಜ್ಞೆಯು ಕೃತಕ ಅಥವಾ ನಿರುಪಯುಕ್ತವಾದುದಲ್ಲ: “ನಾನು ಸರ್ವಶ್ರೇಷ್ಠನಾದ ಪರಮಾತ್ಮನು. ಸೂರ್ಯ-ಚಂದ್ರರನ್ನು ಚಲಿಸುವಂತೆ ಮಾಡುವವನು ನಾನೆ.” ಈ ತೆರನಾದ ಅನಾವಶ್ಯಕ ಮತ್ತು ಸಮಯ ವ್ಯರ್ಥ ಮಾಡುವ ಚಟುವಟಿಕೆಗಳು “ಧ್ಯಾನ”ದ ಹೆಸರಿನಲ್ಲಿ ನಡೆದಿವೆ.

ನೀವು ಸದಾಕಾಲ ದೇವರ ಸೇವಕರು ಎಂಬ ಸಂಗತಿ ನಿಮಗೆ ತಿಳಿದರೆ ಸಾಕು. ಅದನ್ನು ತಿಳಿಯುವ ಪ್ರಯತ್ನ ನೀವು ಮಾಡಬೇಕು. ಆಗ ನೀವು ಪರಿಪೂರ್ಣರಾಗುವಿರಿ. ನೀವು ದೇವರ ಆಸ್ತಿಯನ್ನು ಆನಂದದಿಂದ ಅನುಭವಿಸಿ. ಇಲ್ಲಿ ಯಾವ ತರಹದ ಒತ್ತಡವೂ ಇಲ್ಲ. ಕೆಳವರ್ಗದ ಪ್ರಾಣಿಗಳು – ಹಕ್ಕಿಗಳು ಮತ್ತು ಕಾಡುಪ್ರಾಣಿಗಳು – ಭಗವಂತನ ಸಿರಿಯನ್ನು ಸಂತೋಷದಿಂದ ಅನುಭವಿಸುತ್ತಿರುವಾಗ, ನಿಮಗೆ ಅದನ್ನು ಅನುಭವಿಸುವುದು ಅಸಾಧ್ಯವೇ? ನಿಮ್ಮ ನಿಮ್ಮಲ್ಲಿಯೆ ಏಕೆ ಹೊಡೆದಾಡುತ್ತಿರುವಿರಿ? ಇದು ಅಭಿವೃದ್ಧಿಯೆ? ಇದು ನಾಗರಿಕತೆಯೆ?

ಆದ್ದರಿಂದ ದಯವಿಟ್ಟು ಕೃಷ್ಣಪ್ರಜ್ಞೆಯ ವಿಜ್ಞಾನವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಆಗ ನಿಮ್ಮ ಜೀವನ ಪರಿಪೂರ್ಣವಾಗುವುದು. ನೀವು ವರ್ತಮಾನದ ಜೀವನದಲ್ಲಿ ನೆಮ್ಮದಿ ಮತ್ತು ಸಂತೃಪ್ತಿಯನ್ನು ಅನುಭವಿಸುವಿರಲ್ಲದೆ, ನಿಮ್ಮ ಈ ಶರೀರವನ್ನು ತ್ಯಾಗ ಮಾಡಿದ ಅನಂತರ ಮತ್ತೆ ಈ ದುಃಖಮಯ ಭೌತಿಕ ಜಗತ್ತಿನಲ್ಲಿ ಮರುಜನ್ಮ ಪಡೆಯಲಾರಿರಿ. ಹಾಗಾದರೆ, ನೀವು ಹೋಗುವುದಾದರೂ ಎಲ್ಲಿಗೆ? ಕೃಷ್ಣ  ಹೇಳುವಂತೆ, ಮಾಂ ಏತಿ: “ನೀನು ನನ್ನ ಹತ್ತಿರ ಬರುವೆ.” ಕೃಷ್ಣನನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿರಿ. ಆಗ ಪ್ರಸ್ತುತ ಜನ್ಮದಲ್ಲಿಯೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi