ವೈವಿಧ್ಯಮಯವಾದ ತಿಂಡಿಗಳು

ಇಲ್ಲಿ ವಿಧ ವಿಧವಾದ ಉಪಾಹಾರಗಳನ್ನು ತಯಾರಿಸುವ ಬಗೆಯನ್ನು ವಿವರಿಸಲಾಗಿದೆ. ಇದನ್ನು ಶ್ರದ್ಧೆಯಿಂದ ಮಾಡಿ ಶ್ರೀ ಕೃಷ್ಣನಿಗೆ ಅರ್ಪಿಸಿ ಅನಂತರ ಮನೆ ಮಂದಿಗೆ ಪ್ರಸಾದವನ್ನು ತಿನ್ನಲು ನೀಡಿ.

ಹೆಸರು ಬೇಳೆ ಢೋಕ್ಲ

ಬೇಕಾಗುವ ಪದಾರ್ಥಗಳು

ನೆನೆಸಿದ ಹೆಸರು ಬೇಳೆ – 1 ಬಟ್ಟಲು

ಹಸಿರು ಮೆಣಸಿನಕಾಯಿ – 2-3

ಕತ್ತರಿಸಿದ ಮೆಂತ್ಯ ಸೊಪ್ಪು – 2 ಟೇಬಲ್‌ ಚಮಚ

ಕಡಲೆ ಹಿಟ್ಟು – 2 ಟೀ ಚಮಚ

ಇಂಗು – 2 ಚಿಟಿಕೆ

ಫ್ರೂಟ್‌ಸಾಲ್ಟ್‌ – 1/4 ಟೀ ಚಮಚ

ಸಕ್ಕರೆ – 2 ಚಿಟಿಕೆ

ಎಣ್ಣೆ – 2 ಟೀ ಚಮಚ + 1 ಟೇಬಲ್‌ ಚಮಚ + ತಟ್ಟೆಗೆ ಸವರಲು

ಉಪ್ಪು – ರುಚಿಗೆ ತಕ್ಕಷ್ಟು

ಸಾಸಿವೆ – 1/2 ಟೀ ಚಮಚ

ಕರಿಬೇವು – 10-12 ಎಲೆ

ಮಾಡುವ ವಿಧಾನ :

ನೆನೆಸಿದ ಹೆಸರು ಬೇಳೆಯನ್ನು ಹಸಿರು ಮೆಣಸಿನಕಾಯಿ ಮತ್ತು ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಿ. ಅದನ್ನು ಬಟ್ಟಲಿಗೆ ಹಾಕಿ. ಮೆಂತ್ಯ ಸೊಪ್ಪು, ಕಡಲೆ ಹಿಟ್ಟು, ಇಂಗು, ಫ್ರೂಟ್‌ಸಾಲ್ಟ್‌, ಸಕ್ಕರೆ, 2 ಟೀ ಚಮಚ ಎಣ್ಣೆ, ಉಪ್ಪು ಇವುಗಳನ್ನು ಹೆಸರು ಬೇಳೆಯೊಂದಿಗೆ ಸೇರಿಸಿ ಗಟ್ಟಿಯಾದ ಹಿಟ್ಟಾಗುವಂತೆ ಮಾಡಿಕೊಳ್ಳಿ. ಇದನ್ನು ಎಣ್ಣೆ ಸವರಿದ ತಟ್ಟೆಗೆ ಹಾಕಿ. ಇದನ್ನು 20 ನಿಮಿಷ ಹಬೆಯಲ್ಲಿ ಬೇಯಿಸಿ. ಹೊರತೆಗೆದು ಸ್ವಲ್ಪ ಆರಲು ಬಿಡಿ. ಅನಂತರ ಚೂರಾಗಿ ಕತ್ತರಿಸಿ. ಪ್ಯಾನ್‌ನಲ್ಲಿ 1 ಟೇಬಲ್‌ ಚಮಚ ಎಣ್ಣೆಯನ್ನು ಕಾಯಿಸಿ. ಸಾಸಿವೆ, ಕರಿಬೇವು ಮತ್ತು ಉಳಿದ ಇಂಗನ್ನು ಹಾಕಿ. ಅದು ಸಿಡಿದ ಮೇಲೆ ಢೋಕ್ಲ ಮೇಲೆ ಸುರಿಯಿರಿ. ಬಿಸಿ ಇರುವಾಗಲೇ ಹಸಿರು ಚಟ್ನಿಯೊಂದಿಗೆ ತಿನ್ನಲು ಕೊಡಿ.

ಕ್ಯಾರೆಟ್‌-ಟೊಮ್ಯಾಟೋ ಪೂರಿ

ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು – 1 1/2 ಬಟ್ಟಲು

ತುರಿದ ಕ್ಯಾರೆಟ್‌ – 1 ಬಟ್ಟಲು

ಗಟ್ಟಿಯಾಗಿ ರುಬ್ಬಿಕೊಂಡ ಟೊಮ್ಯಾಟೋ – 1 ಕಪ್‌

ಓಂ ಕಾಳು (ಅಜ್ವೈನ್‌) – 1/2 ಟೀ ಚಮಚ

ಒಣ ಮೆಣಸಿನಕಾಯಿ ಪುಡಿ – 1 ಟೀ ಚಮಚ

ಚಾಟ್‌ ಮಸಾಲ – 2 ಟೀ ಚಮಚ

ರುಚಿಗೆ ತಕ್ಕಷ್ಟು ಉಪ್ಪು

ಎಣ್ಣೆ – 2 ಟೇಬಲ್‌ ಚಮಚ ಮತ್ತು ಕರಿಯಲು

ಮಾಡುವ ವಿಧಾನ :

ಗೋಧಿ ಹಿಟ್ಟು, ಕ್ಯಾರೆಟ್‌, ಓಂ ಕಾಳು, ಮೆಣಸಿನಕಾಯಿ ಪುಡಿ, ಚಾಟ್‌ ಮಸಾಲ, ಉಪ್ಪು ಮತ್ತು ಎರಡು ಟೇಬಲ್‌ ಚಮಚ ಎಣ್ಣೆಯನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ರುಬ್ಬಿಕೊಂಡ ಟೊಮ್ಯಾಟೋ ಹಾಕಿ ಕಲಸಿ. ಪೂರಿ ಹಿಟ್ಟಿನ ಹದಕ್ಕೆ ಇರಲಿ. ಕಲಸಿದ ಹಿಟ್ಟನ್ನು ಒಂದೇ ಅಳತೆಯಲ್ಲಿ ಪೇಡಾದಂತೆ ಭಾಗ ಮಾಡಿ ಇಡಿ. ಒಂದೊಂದೇ ಪೂರಿಯನ್ನು ಲಟ್ಟಿಸಿ ಎಣ್ಣೆಯಲ್ಲಿ ಕರಿಯಿರಿ. ಎಣ್ಣೆ ಹೀರುವ ಹಾಳೆಯಲ್ಲಿ ಇಡಿ. ಬಿಸಿ ಇರುವಾಗಲೇ ತಿನ್ನಲು ಕೊಡಿ.

ಬೇಕ್ಡ್‌ ಬೀನ್ಸ್‌ ರಾಪ್ಸ್‌

ಬೇಕಾಗುವ ಪದಾರ್ಥಗಳು

ಗೋಧಿ ರೋಟಿ – 4

ಬೆಂದ ಹುರುಳಿಕಾಯಿ – 1 1/2 ಬಟ್ಟಲು

ಎಣ್ಣೆ – 1 ಟೇಬಲ್‌ ಚಮಚ

ಕತ್ತರಿಸಿದ ಹಸಿರು ದೊಣ್ಣೆ ಮೆಣಸಿನಕಾಯಿ – 1

ಕತ್ತರಿಸಿದ ಕೊತ್ತಂಬರಿ ಸೊಪ್ಪು – 3 ಟೇಬಲ್‌ ಚಮಚ

ಟೊಮ್ಯಾಟೋ ಕೆಚಪ್‌ – ಅಗತ್ಯವಿದ್ದಷ್ಟು

ಕೆಂಪು ಮೆಣಸಿನಕಾಯಿ ಸಾಸ್‌ – ಅಗತ್ಯವಿದ್ದಷ್ಟು

ಕತ್ತರಿಸಿದ ಲೆಟಿಸ್‌ – ಸ್ವಲ್ಪ

ಸಂಸ್ಕರಿಸಿದ ತುರಿದ ಚೀಸ್‌ – 4 ಟೇಬಲ್‌ ಚಮಚ

ಮಾಡುವ ವಿಧಾನ :

ಪ್ಯಾನ್‌ನಲ್ಲಿ ಎಣ್ಣೆಯನ್ನು ಕಾಯಿಸಿ ದೊಣ್ಣೆ ಮೆಣಸಿನಕಾಯಿಯನ್ನು ಹಾಕಿ ಹುರಿಯಿರಿ. ಅನಂತರ ಅದಕ್ಕೆ ಬೆಂದ ಹುರುಳಿಕಾಯಿಯನ್ನು ಹಾಕಿ ಹುರಿಯಿರಿ. ಇದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಕಲಸಿ. ರೋಟಿಗಳನ್ನು ಸಮತಲದ ಮೇಲೆ ಇಡಿ. ಅದರ ಮೇಲೆ ಸ್ವಲ್ಪ ಟೊಮ್ಯಾಟೋ ಕೆಚಪ್‌ ಮತ್ತು ಕೆಂಪು ಮೆಣಸಿನಕಾಯಿ ಸಾಸ್‌ ಅನ್ನು ಹರಡಿ. ರೋಟಿಯ ಒಂದು ಭಾಗದಲ್ಲಿ ಬೆಂದ ಹುರುಳಿಯ ಸ್ವಲ್ಪ ಭಾಗವನ್ನು ಇಡಿ. ಈ ಹುರುಳಿ ಕಾಯಿಯ ಮೇಲೆ ಲೆಟಸ್‌ ಸೊಪ್ಪು ಮತ್ತು ತುರಿದ ಚೀಸ್‌ ಅನ್ನು ಚುಮುಕಿಸಿ. ಅನಂತರ ಸುತ್ತಿ. ಉಳಿದ ರೋಟಿಗಳಿಗೂ ಇದೇ ರೀತಿ ಮಾಡಿ. ಹೀಗೆ ಸುತ್ತಿದ ಪ್ರತಿಯೊಂದು ಸುರುಳಿಯನ್ನೂ ಸಮಾನಾಂತರವಾಗಿ ಕತ್ತರಿಸಿ ತಿನ್ನಲು ಕೊಡಿ.

ವೆಜಿಟಬಲ್‌ ರೋಲ್ಸ್‌

ಬೇಕಾಗುವ ಪದಾರ್ಥಗಳು

ಸಣ್ಣಗೆ ಕತ್ತರಿಸಿದ ಹುರುಳಿಕಾಯಿ – 10-12

ಸಣ್ಣಗೆ ಕತ್ತರಿಸಿದ ಕ್ಯಾರೆಟ್‌ – 2

ಸಣ್ಣಗೆ ಕತ್ತರಿಸಿದ ಆಲೂಗಡ್ಡೆ – 2

ಎಣ್ಣೆ – 2 ಟೇಬಲ್‌ ಚಮಚ ಮತ್ತು ಕರಿಯಲು

ಗರಂ ಮಸಾಲ ಪುಡಿ – 1/2 ಟೀ ಚಮಚ

ಒಣ ಮೆಣಸಿನಕಾಯಿ ಪುಡಿ – 1 1/2 ಟೀ ಚಮಚ

ಒಣ ಮಾವಿನ ಪುಡಿ – 1 1/4 ಟೀ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಬ್ರೆಡ್‌ ಸ್ಲೈಸ್‌ – 4

ರವೆ – 50 ಗ್ರಾಂ

ಹಸಿರು ಚಟ್ನಿ – ಅಗತ್ಯವಿದ್ದಷ್ಟು

ಮಾಡುವ ವಿಧಾನ :

ಪ್ಯಾನ್‌ನಲ್ಲಿ 2 ಟೇಬಲ್‌ ಚಮಚ ಎಣ್ಣೆಯನ್ನು ಕಾಯಿಸಿ. ಹುರುಳಿಕಾಯಿ, ಕ್ಯಾರೆಟ್‌ ಮತ್ತು ಆಲೂಗಡ್ಡೆಯನ್ನು ಹಾಕಿ ಹುರಿಯಿರಿ. ತರಕಾರಿಗಳು ಮೃದುವಾದ ಮೇಲೆ ಸ್ವಲ್ಪ ಜಜ್ಜಿ. ಅದಕ್ಕೆ ಗರಂ ಮಸಾಲ ಪುಡಿ, ಮೆಣಸಿನಕಾಯಿ ಪುಡಿ, ಮಾವಿನ ಪುಡಿ ಮತ್ತು ಉಪ್ಪನ್ನು ಸೇರಿಸಿ. ಚೆನ್ನಾಗಿ ಕಲಸಿ. ಬ್ರೆಡ್‌ ಚೂರುಗಳನ್ನು ಕೆಲವು ಸೆಕೆಂಡುಗಳ ಕಾಲ ನೀರಿನಲ್ಲಿ ಅದ್ದಿ. ಅನಂತರ ನೀರು ಹಿಂಡಿ, ಈ ಬ್ರೆಡ್‌ ಅನ್ನು ತರಕಾರಿಗೆ ಸೇರಿಸಿ. ಚೆನ್ನಾಗಿ ಕಲಸಿ ಉದ್ದನೆಯ ದಪ್ಪವಾದ ಸುರುಳಿ ಸುತ್ತಿ. ಬಾಣಲೆಯಲ್ಲಿ ಸಾಕಷ್ಟು ಎಣ್ಣೆ ಕಾಯಿಸಿ. ತರಕಾರಿ ಸುರುಳಿಗೆ ರವೆಯನ್ನು ಲೇಪಿಸಿ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಇರುವಾಗಲೇ ಹಸಿರು ಚಟ್ನಿಯೊಂದಿಗೆ ತಿನ್ನಲು ಕೊಡಿ.

ಈ ಲೇಖನ ಶೇರ್ ಮಾಡಿ