ಗಡಿಬಿಡಿಯ ಇಂದಿನ ದಿನದಲ್ಲಿ ಲಘು ಉಪಾಹಾರಗಳು ಮುಖ್ಯವಾಗುತ್ತವೆ. ವಿಧ ವಿಧವಾದ ಲಘು ಉಪಾಹಾರಗಳನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀ ಕೃಷ್ಣನಿಗೆ ಅರ್ಪಿಸಿ, ಪ್ರಸಾದವನ್ನು ಮನೆ ಮಂದಿಗೆ ನೀಡಿ.
ಗರಿಗರಿಯಾದ ಆಲೂಗಡ್ಡೆ ಫಿಂಗರ್ಸ್

ಬೇಕಾಗುವ ಪದಾರ್ಥಗಳು
ಆಲೂಗಡ್ಡೆ – 2 ದೊಡ್ಡದು
ತರಿಯಾಗಿ ಪುಡಿ ಮಾಡಿದ ಕಾರ್ನ್‌ಫ್ಲೇಕ್ಸ್ – 2 1/2 ಬಟ್ಟಲು
ಮೈದಾ ಹಿಟ್ಟು – 1/2 ಬಟ್ಟಲು
ಮೆಕ್ಕೆ ಜೋಳದ ಹಿಟ್ಟು – 1 ಟೇಬಲ್ ಚಮಚ
ಚೂರು ಮಾಡಿದ ಹಸಿಮೆಣಸಿನಕಾಯಿ – 1
ಶುಂಠಿ – ಅರ್ಧ ಇಂಚು
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ
ಮಾಡುವ ವಿಧಾನ : ಹಿಟ್ಟು ಸಿದ್ಧಪಡಿಸಲು ಹಸಿ ಮೆಣಸಿನ ಕಾಯಿ, ಶುಂಠಿ ಮತ್ತು ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಪಾತ್ರೆಗೆ ಹಾಕಿ ಮೈದಾ ಹಿಟ್ಟು ಮತ್ತು ಜೋಳದ ಹಿಟ್ಟನ್ನು ಹಾಕಿ ಚೆನ್ನಾಗಿ ಬೆರೆಸಿ. ಗಟ್ಟಿಯಾದ ಹಿಟ್ಟು ಮಾಡಿಕೊಳ್ಳಲು ಎರಡು ಚಮಚ ನೀರು ಹಾಕಿಕೊಳ್ಳಿ.
ಆಲೂಗಡ್ಡೆಯ ಸಿಪ್ಪೆ ತೆಗೆದು ಉದ್ದುದ್ದಕ್ಕೆ ಚೂರು ಮಾಡಿಕೊಳ್ಳಿ. ಪಾತ್ರೆಯಲ್ಲಿ ನಾಲ್ಕು ಬಟ್ಟಲು ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಕುದಿಸಿ. ಇದಕ್ಕೆ ಚೂರು ಮಾಡಿದ ಆಲೂಗಡ್ಡೆಯನ್ನು ಹಾಕಿ ಸ್ವಲ್ಪ ಬೇಯಿಸಿ. ಆಲೂಗಡ್ಡೆ ಬೆಂದ ಮೇಲೆ ಪಾತ್ರೆಯನ್ನು ಕೆಳಗಿಳಿಸಿ ನೀರನ್ನು ಬಸಿಯಿರಿ.
ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಆಲೂಗಡ್ಡೆಯ ಚೂರುಗಳನ್ನು ಒಂದೊಂದಾಗಿ ಹಿಟ್ಟಿನಲ್ಲಿ ಅದ್ದಿ ಕಾರ್ನ್‌ಫ್ಲೇಕ್ಸ್ ಪುಡಿಯಲ್ಲಿ ಹೊರಳಿಸಿ ಎಣ್ಣೆಗೆ ಹಾಕಿ ಕರಿಯಿರಿ. ತೆಗೆದು ತಟ್ಟೆಗೆ ಹಾಕಿ. ಸಾಸ್ ಅಥವಾ ಚಟ್ನಿಯೊಂದಿಗೆ ಸವಿಯಲು ಕೊಡಿ.
ಮೊಳಕೆ ಮೂಡಿಸಿದ ಕಟ್‌ಲೆಟ್

ಬೇಕಾಗುವ ಪದಾರ್ಥಗಳು
ಮೊಳಕೆ ಮೂಡಿಸಿ ಬೇಯಿಸಿದ ಬಿಳಿ ಬಟಾಣಿ – 1/2 ಬಟ್ಟಲು
ಮೊಳಕೆ ಮೂಡಿಸಿ ಬೇಯಿಸಿದ ಕಂದು ಕಡಲೇ ಕಾಳು – 1/2 ಬಟ್ಟಲು
ಮೊಳಕೆ ಮೂಡಿಸಿ ಬೇಯಿಸಿದ ಹಸಿರು ಕಡಲೇ ಕಾಳು – 1/2 ಬಟ್ಟಲು
ಕತ್ತರಿಸಿದ ತಾಜಾ ಕೊತ್ತಂಬರಿ ಸೊಪ್ಪು – 2 ಟೇಬಲ್ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಒಣ ಮೆಣಸಿನಕಾಯಿ ಪುಡಿ – 1/2 ಟೀ ಚಮಚ
ಚಾಟ್ ಮಸಾಲ – 1/2 ಟೀ ಚಮಚ
ಜೀರಿಗೆ ಪುಡಿ – 1/2 ಟೀ ಚಮಚ
ಕರಿಯಲು ಎಣ್ಣೆ – ಸ್ವಲ್ಪ
ಬ್ರೆಡ್ ಚೂರಿನ ಪುಡಿ – 1/2 ಬಟ್ಟಲು
ಮಾಡುವ ವಿಧಾನ : ಕತ್ತರಿಸಿದ ಕೊತ್ತಂಬರಿ ಸೊಪ್ಪು, ಬಿಳಿ ಬಟಾಣಿ, ಕಂದು ಕಡಲೇ, ಹಸಿರು ಕಡಲೇ ಕಾಳು ಮತ್ತು ಉಪ್ಪನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕಲಸಿ. ಮೆದುವಾಗಲು ಸೌಟಿನಿಂದ ಚೆನ್ನಾಗಿ ಜಜ್ಜಿ. ಮೆಣಸಿನಕಾಯಿ ಪುಡಿ, ಚಾಟ್ ಮಸಾಲ ಮತ್ತು ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ. ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ಮೊಳಕೆ ಮೂಡಿಸಿದ ಮಿಶ್ರಣವನ್ನು ಎಂಟು ಭಾಗ ಮಾಡಿ ಸಣ್ಣ ಕಟ್ಲೆಟ್ ಆಕಾರ ನೀಡಿ. ಅದನ್ನು ಬ್ರೆಡ್ ಪುಡಿಯಲ್ಲಿ ಹೊರಳಿಸಿ ಪ್ಯಾನ್‌ನಲ್ಲಿ ಕರಿಯಬೇಕು. ಎರಡೂ ಬದಿಯಲ್ಲಿ ಕರಿದ ಮೇಲೆ ತೆಗೆದು ತಟ್ಟೆಯಲ್ಲಿ ಇಡಿ. ಟೊಮ್ಯಾಟೊ ಕೆಚಪ್ ಅಥವಾ ಹಸಿರು ಚಟ್ನಿಯ ಜೊತೆ ತಿನ್ನಲು ನೀಡಿ.
ಸೇವ್ ಬಟಾಟ ಪೂರಿ

ಬೇಕಾಗುವ ಪದಾರ್ಥಗಳು
ಗರಿಗರಿಯಾದ ಪೂರಿ – 24
ಬೇಯಿಸಿ, ಸಿಪ್ಪೆ ತೆಗೆದು ಚೂರು ಮಾಡಿದ ದೊಡ್ಡ ಆಲೂಗಡ್ಡೆ – 2
ಚೂರು ಮಾಡಿದ ಸಣ್ಣ ಮಾವಿನಕಾಯಿ – 1
ರುಚಿಗೆ ತಕ್ಕಷ್ಟು ಉಪ್ಪು
ಕೆಂಪು ಮೆಣಸಿನ ಪುಡಿ – 1/4 ಟೀ ಚಮಚ
ಕೊತ್ತಂಬರಿ ಸೊಪ್ಪು ಚಟ್ನಿ – 1/4 ಬಟ್ಟಲು
ಕೆಂಪು ಮೆಣಸಿನಕಾಯಿ ಚಟ್ನಿ – 2 ಟೇಬಲ್ ಚಮಚ
ಖರ್ಜೂರ ಮತ್ತು ಹುಣಸೆಹಣ್ಣಿನ ಚಟ್ನಿ – 1/4 ಬಟ್ಟಲು
ಸೇವ್ – 1 ಬಟ್ಟಲು
ಚಾಟ್ ಮಸಾಲ – 1/2 ಟೇಬಲ್ ಚಮಚ
ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೇಬಲ್ ಚಮಚ
ಮಾಡುವ ವಿಧಾನ : ಒಂದು ತಟ್ಟೆಯಲ್ಲಿ ಪೂರಿಗಳನ್ನು ಓರಣವಾಗಿರಿಸಿ. ಆಲೂಗಡ್ಡೆ, ಮಾವಿನ ಕಾಯಿ, ಉಪ್ಪು ಮತ್ತು ಕೆಂಪು ಮೆಣಸಿನ ಕಾಯಿ ಪುಡಿಯನ್ನು ಬೆರೆಸಿಡಿ. ಈ ಮಿಶ್ರಣದ ಭಾಗಗಳನ್ನು ಪೂರಿಗಳ ಮೇಲೆ ಇಡಿ. ಈ ಆಲೂಗಡ್ಡೆ ಮಿಶ್ರಣದ ಮೇಲೆ ಮೂರೂ ಚಟ್ನಿಗಳನ್ನು ಒಂದಾದ ಮೇಲೆ ಒಂದರಂತೆ ಹನಿಸಿ. ಸಾಕಷ್ಟು ಸೇವ್ ಅನ್ನು ಹಾಕಿ. ಚಾಟ್ ಮಸಾಲೆಯನ್ನು ಚುಮುಕಿಸಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ತತ್‌ಕ್ಷಣ ತಿನ್ನಲು ಕೊಡಿ.
ಸಬ್ಬಕ್ಕಿ ಆಲೂ ರೋಲ್ಸ್

ಬೇಕಾಗುವ ಪದಾರ್ಥಗಳು
ಸಬ್ಬಕ್ಕಿ – 3/4 ಬಟ್ಟಲು
ಬೇಯಿಸಿ ಚೂರು ಮಾಡಿದ ದೊಡ್ಡ ಆಲೂಗಡ್ಡೆ – 3
ಹುರಿದು ಸಿಪ್ಪೆ ತೆಗೆದು ಪುಡಿ ಮಾಡಿದ ಕಡಲೆಕಾಯಿ – 1/2 ಬಟ್ಟಲು
ಕತ್ತರಿಸಿದ ಹಸಿ ಮೆಣಸಿನಕಾಯಿ – 3
ಚೂರು ಮಾಡಿದ ಶುಂಠಿ – 1 ಇಂಚು
ನಿಂಬೆ ರಸ – 1 ಟೇಬಲ್ ಚಮಚ
ಕತ್ತರಿಸಿದ ತಾಜಾ ಕೊತ್ತಂಬರಿ ಸೊಪ್ಪು – 2-3 ಟೇಬಲ್ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ
ಹಸಿರು ಚಟ್ನಿ
ಮಾಡುವ ವಿಧಾನ : ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು ಸುಮಾರು ಒಂದು ತಾಸು ನೆನೆಸಿಡಿ. ಸಮಯವಿಲ್ಲದಿದ್ದರೆ ಬಿಸಿ ನೀರಿನಲ್ಲಿ ನೆನೆಸಿ ಸ್ವಲ್ಪ ಸಮಯದ ಅನಂತರ ಉಪಯೋಗಿಸಿ. ಹೆಚ್ಚಿನ ನೀರನ್ನು ಬಸಿದು ಸಬ್ಬಕ್ಕಿಯನ್ನು ಒಂದು ಪಾತ್ರೆಯಲ್ಲಿ ಹಾಕಿಡಿ. ಆಲೂಗಡ್ಡೆ, ಕಡಲೇಕಾಯಿ, ಹಸಿರು ಮೆಣಸಿನಕಾಯಿ, ಶುಂಠಿ, ನಿಂಬೆ ರಸ, ತಾಜಾ ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಸಬ್ಬಕ್ಕಿಗೆ ಹಾಕಿ ಚೆನ್ನಾಗಿ ಕಲಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ ಹಿಟ್ಟು ಕಲಸಿಕೊಳ್ಳಿ. ಇದು ಕೆಲವು ನಿಮಿಷ ಹಾಗೇ ಇರಲಿ. ಈ ಹಿಟ್ಟನ್ನು ಎಂಟು ಸಮ ಭಾಗ ಮಾಡಿ ಅದನ್ನು ಅಂಡಾಕೃತಿಯಲ್ಲಿ ಸುತ್ತಿ. ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ನಾಲ್ಕು ರೋಲ್‌ಗಳನ್ನು ಒಂದೊಂದು ಬಾರಿಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ಅನಂತರ ತೆಗೆದು ತಟ್ಟೆಯಲ್ಲಿ ಇಡಿ. ಹಸಿರು ಚಟ್ನಿಯೊಂದಿಗೆ ಸವಿಯಲು ನೀಡಿ.