ಕೃಷ್ಣ ಪಾಕಶಾಲೆ

ರಾಮನವಮಿ ವಿಶೇಷ

ಆರೋಗ್ಯಕರ ಕೋಸಂಬರಿಗಳು

ರಾಮನವಮಿ ವಿಶೇಷ ಎಂದರೆ ಪಾನಕ ಕೋಸಂಬರಿಗಳ ನಿರಂತರ ಪಾರಣೆಯೇ ಸರಿ. ಎಲ್ಲರ ಮನೆ ಕೋಸಂಬರಿಯಲ್ಲೂ ಬರಿ ಹೆಸರುಬೇಳೆ, ಕಡಲೇಬೇಳೆಯನ್ನೇ ನೋಡಿ ಬೇಸರಬರಬಹುದು. ಹಬ್ಬದ ದಿನ ಮನೆಗೆ ಬರುವ ಅತಿಥಿಗಳಿಗೆ ಹೊಸಬಗೆಯ ಪ್ರಸಾದ ನೀಡಿ ಅಚ್ಚರಿ ಪಡಿಸುವ ಅವಕಾಶ ನಿಮ್ಮದಾಗಲು ಇಲ್ಲಿದೆ ಒಂದಷ್ಟು ಸ್ವಾದಿಷ್ಟ ಕೋಸಂಬರಿ ವಿಧಾನಗಳು. ಇವನ್ನು ಶ್ರದ್ಧಾಭಕ್ತಿಗಳಿಂದ ಶ್ರೀರಾಮನಿಗರ್ಪಿಸಿ, ಪ್ರಸಾದವಾಗಿ ಸ್ವೀಕರಿಸಿದರೆ, ಸ್ವತಃ ಶ್ರೀರಾಮನಿಗೂ ತೃಪ್ತಿಯಾದೀತು. ಅಂದ ಹಾಗೆ, ಈ ಕೋಸಂಬರಿಗಳು ಆರೋಗ್ಯಕ್ಕೂ ಒಳ್ಳೆಯದು.

ಮೆಂತ್ಯ – ದಾಳಿಂಬೆ ಕೋಸಂಬರಿ

ಬೇಕಾಗುವ ಪದಾರ್ಥ:

ಮೆಂತ್ಯ ಸೊಪ್ಪು – 1 ಕಟ್ಟು

ದಾಳಿಂಬೆ ಹಣ್ಣು – ಹದಗಾತ್ರದ್ದು

ತೆಂಗಿನಕಾಯಿ – 1/2 ಹೋಳು

ಕ್ಯಾರೆಟ್ – 200ಗ್ರಾಂ

ಉಪ್ಪು – ರುಚಿಗೆ ತಕ್ಕಷ್ಟು

ಸಕ್ಕರೆ – 1 ಚಿಕ್ಕ ಚಮಚ

ಹಸಿಮೆಣಸಿನಕಾಯಿ – 2-3

ಮಾಡುವ ವಿಧಾನ: ಮೆಂತ್ಯೆಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ, ದಾಳಿಂಬೆಯನ್ನು ಬಿಡಿಸಿಡಿ, ಕ್ಯಾರೆಟ್‌ನ ಸಿಪ್ಪೆ ತೆಗೆದು, ತೊಳೆದು ತುರಿದಿಡಿ, ಹಸಿಮೆಣಸಿನಕಾಯಿಯನ್ನು ಕತ್ತರಿಸಿಟ್ಟುಕೊಳ್ಳಿ, ಮೆಂತ್ಯೆಸೊಪ್ಪಿಗೆ, ದಾಳಿಂಬೆ ಹಣ್ಣು ಕ್ಯಾರೆಟ್ ತುರಿ, ತೆಂಗಿನತುರಿ, ಹಸಿಮೆಣಸಿನಕಾಯಿ, ಉಪ್ಪು ಮತ್ತು ಸಕ್ಕರೆ ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿ.

ಮೊಳೆತ ಹೆಸರುಕಾಳಿನ ಕೋಸಂಬರಿ

ಬೇಕಾಗುವ ಪದಾರ್ಥ:

ಹೆಸರುಕಾಳು – 250 ಗ್ರಾಂ

ತೆಂಗಿನ ತುರಿ – 1 ಬಟ್ಟಲು

ಸಾಸಿವೆ – 1/2 ಚಿಕ್ಕ ಚಮಚ

ಕರಿಬೇವು – 2 ಎಸಳು

ನಿಂಬೆಹಣ್ಣು – 1/2 ಹೋಳು

ಹಸಿಮೆಣಸಿನಕಾಯಿ – 2-3

ಉಪ್ಪು – ರುಚಿಗೆ ತಕ್ಕಷ್ಟು

ಖಾದ್ಯ ತೈಲ – 2 ಚಿಕ್ಕ ಚಮಚ

ಇಂಗು – 2 ಚಿಟಿಕೆ

ಬೆಲ್ಲದ ಪುಡಿ – 1 ಚಿಕ್ಕ ಚಮಚ

ಮಾಡುವ ವಿಧಾನ : ಹೆಸರುಕಾಳನ್ನು ತೊಳೆದು 2 ದಿನದ ಹಿಂದೆಯೇ ನೆನೆಸಿಡಿ. ಮಾರನೆಯ ದಿನ ಒಂದು ಶುಭ್ರವಾದ ತೆಳುಬಟ್ಟೆಯಲ್ಲಿ ಕಟ್ಟಿ ಬಿಸಿಲಿಗಿಟ್ಟರೆ ಚೆನ್ನಾಗಿ ಮೊಳಕೆ ಬರುವುದು.

ಚೆನ್ನಾಗಿ ಮೊಳೆತ ಹೆಸರುಕಾಳಿಗೆ ನಿಂಬೆರಸವನ್ನು ಹಿಂಡಿ, ತುರಿದಿಟ್ಟ ತೆಂಗಿನಕಾಯಿ, ಹಸಿಮೆಣಸಿನಕಾಯಿ ಚೂರು, ಅಗತ್ಯಕ್ಕೆ ತಕ್ಕ ಉಪ್ಪು, ಬೆಲ್ಲದ ಪುಡಿಗಳನ್ನು ಬೆರೆಸಿ, ಖಾದ್ಯ ತೈಲವನ್ನು ಬಿಸಿ ಮಾಡಿ ಸಾಸಿವೆ, ಕರಿಬೇವು, ಇಂಗಿನ ಒಗ್ಗರಣೆ ಹಾಕಿ ಎಲ್ಲವನ್ನು ಚೆನ್ನಾಗಿ ಬೆರೆಸಿ ಮೊಳೆತ ಹೆಸರುಕಾಳಿನ ಕೋಸಂಬರಿ ಸಿದ್ಧ. ಬೇಕಾದಲ್ಲಿ ಹಸಿಮೆಣಸಿನಕಾಯಿ ಬದಲು 1/2 ಚಿಕ್ಕ ಚಮಚ ಕರಿಮೆಣಸಿನ ಪುಡಿಯನ್ನು ಬಳಸಬಹುದು.

ಇದೇ ಕ್ರಮದಲ್ಲಿ ಹೆಸರುಕಾಳಿನ ಬದಲಿಗೆ  ಹೆಸರುಬೇಳೆಯನ್ನು ಬಳಸಿ ½ ಗಂಟೆ ಮೊದಲು ನೆನೆಸಿ. ಹೆಸರು ಬೇಳೆಯ ಕೋಸಂಬರಿ ಮಾಡಬಹುದು.

ಕ್ಯಾರೆಟ್‌ ಕೋಸಂಬರಿ

ಬೇಕಾಗುವ ಪದಾರ್ಥ:

ಕ್ಯಾರೆಟ್ – 200ಗ್ರಾಂ

ಟೊಮ್ಯಾಟೋ – 100ಗ್ರಾಂ

ಸಾಸಿವೆ – 1/2 ಚಿಕ್ಕ ಚಮಚ

ಕರಿಬೇವು – 2 ಎಸಳು

ಒಣಮೆಣಸಿನಕಾಯಿ – 2

ತೆಂಗಿನ ತುರಿ – 1 ಬಟ್ಟಲು

ಇಂಗಿನಪುಡಿ – 2 ಚಿಟಿಕೆ

ಉಪ್ಪು – ರುಚಿಗೆ ತಕ್ಕಷ್ಟು

ಖಾದ್ಯ ತೈಲ – 2 ಚಮಚ

ಮಾಡುವ ವಿಧಾನ : ಕ್ಯಾರೆಟ್ ಸಿಪ್ಪೆತೆಗೆದು ತೊಳೆದು ಸಣ್ಣಗೆ ತುರಿಯಿರಿ, ಟೊಮ್ಯಾಟೋ ಹಸಿಮೆಣಸಿನಕಾಯಿ ತೊಳೆದು ಸಣ್ಣಗೆ ಹೆಚ್ಚಿಡಿ. ಖಾದ್ಯ ತೈಲವನ್ನು ಬಿಸಿಮಾಡಿ ಕರಿಬೇವು, ಸಾಸಿವೆ ಮತ್ತು ಇಂಗಿನ ಒಗ್ಗರಣೆ ಕೊಡಿ. ಕ್ಯಾರೆಟ್, ಟೊಮ್ಯಾಟೊ, ತೆಂಗಿನತುರಿ, ಉಪ್ಪು, ಹಸಿಮೆಣಸಿನಕಾಯಿ ಚೂರು, ಒಗ್ಗರಣೆ ಬೆರೆಸಿರಿ.

ತರಕಾರಿ ಕೋಸಂಬರಿ

ಬೇಕಾಗುವ ಪದಾರ್ಥ:

ಕ್ಯಾರೆಟ್ – 100ಗ್ರಾಂ

ಬೀಟ್ರೂಟ್‌ –  100ಗ್ರಾಂ

ಒಂದು ಸಣ್ಣ ಸೌತೆಕಾಯಿ

 ಒಂದು ಸಣ್ಣ ಸೀಮೆಬದನೆಕಾಯಿ

ಒಂದು ಹೋಳು ತೆಂಗಿನಕಾಯಿ

ಐದು ಹಸಿಮೆಣಸಿನಕಾಯಿ

ಕೊತ್ತಂಬರಿ ಸೊಪ್ಪು ಒಂದು ಕಟ್ಟು

ಚೂರು ಹಸಿ ಶುಂಠಿ, ಸಾಸಿವೆ

ಕಡಲೆಕಾಯಿ ಎಣ್ಣೆ ಮತ್ತು ಪುಡಿ ಉಪ್ಪು.

ಮಾಡುವ ವಿಧಾನ: ತೊಳೆದ ಕ್ಯಾರೆಟ್‌ನ್ನು ತುರಿದುಟ್ಟುಕೊಳ್ಳಿ, ಬೀಟ್ರೂಟ್, ಸಿಪ್ಪೆ ತೆಗೆದ ಸೌತೆಕಾಯಿ ಹಾಗೂ ಸೀಮೆಬದನೆಕಾಯಿ, ಶುಂಠಿ ಮತ್ತು ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು – ಇವುಗಳನ್ನು ಸೇರಿಸಿ ಒಂದು ಪಾತ್ರೆಯಲ್ಲಿಡಿ. ಬಾಣಲೆಯನ್ನು ಒಲೆಯ ಮೇಲಿರಿಸಿ ಮೂರುಚಮಚ ಎಣ್ಣೆಯನ್ನು ಹಾಕಿ.

ಎಣ್ಣೆ ಕಾದ ಅನಂತರ ಸಾಸಿವೆ ಹಾಕಿ, ಅದು ಸಿಡಿದ ಅನಂತರ ಹಸಿಮೆಣಸಿನಕಾಯಿ ಸಣ್ಣ ಸಣ್ಣ ತುಂಡುಗಳನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಪಾತ್ರೆಯಲ್ಲಿನ ತರಕಾರಿ ಮಿಶ್ರಣಕ್ಕೆ ಒಗ್ಗರಣೆ ಹಾಕಿ ರುಚಿಗೆ ತಕ್ಕಷ್ಟು ಪಡಿ ಉಪ್ಪು ಸೇರಿಸಿ.

ಊಟಕ್ಕೆ ತರಕಾರಿ ಕೋಸಂಬರಿ ಒಂದು ಆಕರ್ಷಣೆ. ಚಪಾತಿ ಪೂರಿ ಇವುಗಳೊಡನೆ ನೆಂಚಿಕೊಳ್ಳಲು ತರಕಾರಿ ರುಚಿಯಾಗಿರುತ್ತದೆ. ಶ್ರೀರಾಮನವಮಿಯಂದು ನೀವು ಭುಜಿಸಲೇ ಬೇಕಾದ ವಿಶಿಷ್ಟ ತಿನಿಸೊಂದಿದೆ. “ರಾಮನಾಮ ಪಾಯಸಕ್ಕೆ – ಕೃಷ್ಣನಾಮ ಸಕ್ಕರೆ, ವಿಠಲನಾಮ ತುಪ್ಪವ ಬೆರೆಸಿ” ಬಾಯಿ ಚಪ್ಪರಿಸಿರಿ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi