ಕಾಯಕವನ್ನು ಕೈಲಾಸವಾಗಿಸುವುದು

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರ ನಡುವೆ ಜಿನೀವಾದಲ್ಲಿ, ಜೂನ್‌ 1974ರಲ್ಲಿ ಬೆಳಗಿನ ವಾಯು ಸಂಚಾರ ಸಮಯದಲ್ಲಿ ನಡೆದ ಸಂವಾದ.

ಭಕ್ತ : ನಾವು ಆಸೆ ರಹಿತರಾಗಿರಬೇಕೆಂದು ಕೃಷ್ಣನು ಭಗವದ್ಗೀತೆಯಲ್ಲಿ ಹೇಳುವಾಗ ಅವನ ಉದ್ದೇಶವೇನು?

ಶ್ರೀಲ ಪ್ರಭುಪಾದ : ಅದರರ್ಥ ನಾವು ಅವನ ಸೇವೆ ಮಾಡುವುದನ್ನೇ ಅಪೇಕ್ಷಿಸಬೇಕೆಂದು. ಶ್ರೀ ಚೈತನ್ಯ ಮಹಾಪ್ರಭು ಹೇಳಿದ್ದರು, ನ ಧನಂ ನ ಜನಂ ನ ಸುಂದರೀಂ ಕವಿತಾಂ ವಾ ಜಗದೀಶ ಕಾಮಯೇ : “ನನಗೆ ಸಂಪತ್ತು ಬೇಡ, ನನಗೆ ಅನುಯಾಯಿಗಳು ಬೇಡ. ನನಗೆ ಸುಂದರ ಸ್ತ್ರೀಯರು ಬೇಡ.” ಹಾಗಾದರೆ ಅವರಿಗೆ ಏನು ಬೇಕು? “ನಾನು ಕೃಷ್ಣನ ಸೇವೆ ಮಾಡಬೇಕು.” ಅವನು “ನನಗೆ ಇದು ಬೇಡ, ಅದು ಬೇಡ. ನಾನು ಶೂನ್ಯವಾಗುವೆ” ಎಂದೇನೂ ಅವರು ಹೇಳುವುದಿಲ್ಲ.

ಭಕ್ತ : ಭಕ್ತನಲ್ಲದವನೂ ಕೂಡ ತನಗೇನು ಬೇಕೆಂದು ಗೊತ್ತು ಎನ್ನುತ್ತಾನೆ. ಆದರೆ ಅವನು ಹೇಳುತ್ತಾನೆ, “ನಾನು ಕೃಷ್ಣನು ಇಲ್ಲದೆಯೂ ಅದೇ ಒಳ್ಳೆಯ ಫಲಿತಾಂಶವನ್ನು ಸಾಧಿಸುತ್ತೇನೆ.”

ಶ್ರೀಲ ಪ್ರಭುಪಾದ : ಹಾಗಾದರೆ ಅವನೊಬ್ಬ ಮೂರ್ಖ. ಏಕೆಂದರೆ, ಅವನಿಗೆ `ಒಳ್ಳೆಯ ಫಲಿತಾಂಶ’ ಎಂದರೆ ಏನೆಂದು ತಿಳಿಯದು. ಒಂದು ಒಳ್ಳೆಯ ಫಲಿತಾಂಶಕ್ಕಾಗಿ ಇಂದು ಅವನು  ಕಷ್ಟಪಟ್ಟು ಹೋರಾಡುತ್ತಿದ್ದಾನೆ. ಆದರೆ ನಾಳೆ ಅವನು ಇನ್ನೇನನ್ನೋ ಅಪೇಕ್ಷಿಸುತ್ತಾನೆ, ಏಕೆಂದರೆ ಸಾವನ್ನಪ್ಪಿದಾಗ ಅವನು ದೇಹಾಂತರಗೊಳ್ಳಬೇಕು. ಕೆಲವು ಸಂದರ್ಭದಲ್ಲಿ ಅವನು ನಾಯಿಯ ದೇಹ ತೆಗೆದುಕೊಳ್ಳುತ್ತಾನೆ ಮತ್ತು `ಒಂದು ಒಳ್ಳೆಯ ಫಲಿತಾಂಶ’ ಅಪೇಕ್ಷಿಸುತ್ತಾನೆ. ಮತ್ತೊಂದು ವೇಳೆಯಲ್ಲಿ ಅವನು ದೇವತೆಗಳ ದೇಹ ಪಡೆದು ಮತ್ತೊಂದು `ಒಳ್ಳೆಯ ಫಲಿತಾಂಶ’ ಅಪೇಕ್ಷಿಸುತ್ತಾನೆ. ಭ್ರಮತಾಂ ಉಪರಿ ಅಧಃ  : ಅವನು ಅದರಂತೆ… ವಿಶ್ವದಲ್ಲಿ ಮೇಲೆ ಕೆಳಗೆ ಅಲೆದಾಡುತ್ತಿದ್ದಾನೆ… ಏನದು?

ಭಕ್ತ : ರಾಟೆ ತೊಟ್ಟಿಲು.

ಶ್ರೀಲ ಪ್ರಭುಪಾದ : ಹೌದು. ಕೆಲವು ವೇಳೆ ಅವನು ಎತ್ತರದ ಸ್ಥಾನಕ್ಕೆ ಏರುತ್ತಾನೆ. ಮತ್ತು ಪುನಃ ಅವನು ಕೆಳಗೆ ಬರಲೇಬೇಕು ಹಾಗೂ ನಾಯಿ ಅಥವಾ ಹಂದಿಯ ದೇಹ ಪಡೆಯಬೇಕು. ಇದು ನಡೆಯುತ್ತಿದೆ.

ಬ್ರಹ್ಮಾಂಡ ಭ್ರಬಿತೇ ಕೋನೋ ಭಾಗ್ಯವಾನ್‌ ಜೀವ ।

ಗುರು ಕೃಷ್ಣ ಪ್ರಸಾದೇ ಪಾಯ ಭಕ್ತಿ ಲತಾ ಬೀಜ ॥

     (ಚೈತನ್ಯ ಚರಿತಾಮೃತ ಮಧ್ಯ 19.151)

“ಅನೇಕ ಜೀವಿತ ಕಾಲದಲ್ಲಿ , ವಿಶ್ವದಲ್ಲಿ ಮೇಲೆ ಕೆಳಗೆ ಅಲೆದಾಡಿದ ಮೇಲೆ, ತುಂಬ ಅದೃಷ್ಟವಂತರು ಆಧ್ಯಾತ್ಮಿಕ ಗುರು ಮತ್ತು ಕೃಷ್ಣನ ಕೃಪೆಯಿಂದ ಭಕ್ತಿ ಜೀವನಕ್ಕೆ ಬರುತ್ತಾರೆ.”

ಭಕ್ತ : ಸರಿಯೇ. ಭಕ್ತನಲ್ಲದವನು ಹೇಳುತ್ತಾನೆ, “ನಾವೂ ಕೂಡ ಒಳ್ಳೆಯ ಸೇವೆ ಮಾಡುತ್ತಿದ್ದೇವೆ. ನೀವು ಆಹಾರ ನೀಡುತ್ತಿರುವಿರಿ, ನಾವೂ ಕೂಡ ಊಟ ವಿತರಿಸುತ್ತೇವೆ. ನೀವು ಶಾಲೆಗಳನ್ನು ತೆರೆಯುತ್ತಿರುವಿರಿ, ನಾವೂ ಶಾಲೆಗಳನ್ನು ತೆರೆಯುತ್ತಿದ್ದೇವೆ.”

ಕೃಷ್ಣ ಪ್ರಜ್ಞೆ ಶಾಲೆ

ಶ್ರೀಲ ಪ್ರಭುಪಾದ : ಆದರೆ ನಾವು ಕೃಷ್ಣ ಪ್ರಜ್ಞೆ ಬೋಧಿಸುವ ಶಾಲೆಗಳನ್ನು ತೆರೆಯುತ್ತಿದ್ದೇವೆ. ಆದರೆ ನಿಮ್ಮ ಶಾಲೆಗಳು ಭ್ರಮೆಯನ್ನು ಬೋಧಿಸುತ್ತಿವೆ. ಸಮಸ್ಯೆ ಏನೆಂದರೆ, ಈ ಮೂರ್ಖರಿಗೆ ಭಕ್ತಿ ಮತ್ತು ಕರ್ಮದ (ಲೌಕಿಕ ಚಟುವಟಿಕೆ) ನಡುವಣ ವ್ಯತ್ಯಾಸ ಅರ್ಥವಾಗುವುದಿಲ್ಲ. ಭಕ್ತಿಯು ಕರ್ಮದಂತೆ ಕಾಣುತ್ತದೆ, ಆದರೆ ಅದು ಕರ್ಮವಲ್ಲ. ಭಕ್ತಿಯಲ್ಲಿಯೂ ನಾವು ದುಡಿಯುತ್ತೇವೆ, ಆದರೆ ಅದು ಕೃಷ್ಣನಿಗಾಗಿ. ಅದೇ ವ್ಯತ್ಯಾಸ.

ಉದಾಹರಣೆಗೆ, ಅರ್ಜುನನು ಕುರುಕ್ಷೇತ್ರ ಯುದ್ಧದಲ್ಲಿ ಹೋರಾಡಿದ. ಅವನು ಕೃಷ್ಣನಿಗಾಗಿ ಹೋರಾಡಿದ್ದರಿಂದ ಅವನನ್ನು ಶ್ರೇಷ್ಠ ಭಕ್ತನೆಂದು ಸ್ವೀಕರಿಸಲಾಗಿದೆ. ಕೃಷ್ಣ ಅವನಿಗೆ ಹೇಳಿದ, ಭಕ್ತೋಽಸಿ ಮೇ… ಪ್ರಿಯೋಽಸೀ ಮೇ. : “ಅರ್ಜುನ, ನೀನು ನನ್ನ ಪ್ರೀತಿಯ ಭಕ್ತ.” ಅರ್ಜುನ ಮಾಡಿದ್ದೇನು? ಅವನು ಹೋರಾಡಿದ, ಅಷ್ಟೆ. ಆದರೆ ಅವನು ಕೃಷ್ಣನಿಗಾಗಿ ಹೋರಾಡಿದ. ಅದೇ ರಹಸ್ಯ. ಅವನು ಒಬ್ಬ ಯೋಧನಾಗಿ ತನ್ನ ಹೋರಾಟದ ಸಾಮರ್ಥ್ಯವನ್ನು ಬದಲಿಸಿಕೊಳ್ಳಲಿಲ್ಲ. ಅವನು ತನ್ನ ಮನಸ್ಥಿತಿಯನ್ನು ಬದಲಿಸಿಕೊಂಡ. ಮೊದಲು ಅವನು, “ನನ್ನ ಬಂಧುಗಳನ್ನು ನಾನು ಯಾಕೆ ಕೊಲ್ಲಲಿ? ನಾನು ಯುದ್ಧ ಭೂಮಿಯನ್ನು ಬಿಟ್ಟು ಅರಣ್ಯಕ್ಕೆ ಹೋಗಿ ಭಿಕ್ಷೆ ಬೇಡುವೆ” ಎಂದು ಯೋಚಿಸಿದ. ಆದರೆ ಅರ್ಜುನ ಹೋರಾಡಬೇಕೆಂದು ಕೃಷ್ಣ ಬಯಸಿದ್ದ. ಅನಂತರ ಅರ್ಜುನ ಶರಣಾದ ಮತ್ತು ಅದನ್ನು ಕೃಷ್ಣನ ಸೇವೆಯಾಗಿ ಮಾಡಿದ. ಅದು ಅವನ ಇಂದ್ರಿಯ ತೃಪ್ತಿಗಾಗಿ ಅಲ್ಲ, ಕೃಷ್ಣನ ಇಂದ್ರಿಯ ತೃಪ್ತಿಗಾಗಿ.

ಭಕ್ತ : ಅಂದರೆ ಭಕ್ತಿ ಸೇವೆಯಲ್ಲಿಯೂ ಇಂದ್ರಿಯ ತೃಪ್ತಿ ಎಂಬುದಿದೆ?

ಶ್ರೀಲ ಪ್ರಭುಪಾದ : ಹೌದು. ಒಬ್ಬ ಕರ್ಮಿಯು ತನ್ನ ಇಂದ್ರಿಯ ತೃಪ್ತಿಗಾಗಿ ದುಡಿಯುತ್ತಾನೆ, ಮತ್ತು ಒಬ್ಬ ಭಕ್ತನು ಕೃಷ್ಣನ ಇಂದ್ರಿಯ ತೃಪ್ತಿಗಾಗಿ ದುಡಿಯುತ್ತಾನೆ.  ಭಕ್ತನಲ್ಲದವನ ಮತ್ತು ಭಕ್ತನ ನಡುವಣ ವ್ಯತ್ಯಾಸ ಅದೇ. ಎರಡೂ ಸಂದರ್ಭಗಳಲ್ಲಿ ಇಂದ್ರಿಯ ತೃಪ್ತಿ ಎಂಬುದಿದೆ. ಆದರೆ ನೀವು ನಿಮ್ಮ ವೈಯಕ್ತಿಕ ತೃಪ್ತಿಗಾಗಿ ದುಡಿದರೆ ಅದು ಕರ್ಮ. ನೀವು ಕೃಷ್ಣನ ಇಂದ್ರಿಯ ತೃಪ್ತಿಗಾಗಿ ಕೆಲಸ ಮಾಡಿದರೆ ಅದು ಭಕ್ತಿ. ಭಕ್ತಿ ಮತ್ತು ಕರ್ಮ ಒಂದೇ ಎಂಬಂತೆ ಕಾಣುತ್ತವೆ, ಆದರೆ ಗುಣದಲ್ಲಿ ವ್ಯತ್ಯಾಸವಿದೆ.

ಗೋಪಿಯರೊಂದಿಗೆ

ಮತ್ತೊಂದು ಉದಾಹರಣೆ ಎಂದರೆ ಗೋಪಿಯರ ವರ್ತನೆ. ಕೃಷ್ಣ ಸುಂದರ ಬಾಲಕ. ಮತ್ತು ಗೋಪಿಯರು ಅವನಿಂದ ಆಕರ್ಷಿತರಾದರು. ಅವನನ್ನು ತಮ್ಮ ಪ್ರಿಯತಮನೆಂದು ಭಾವಿಸಿದರು ಮತ್ತು  ಅವನೊಂದಿಗೆ ನರ್ತಿಸಲು ಮಧ್ಯರಾತ್ರಿಯಲ್ಲಿ ತಮ್ಮ ಮನೆಗಳನ್ನು ಬಿಟ್ಟು ಬಂದರು. ಅವರ ನಡೆ ಪಾಪದಂತೆ ಕಾಣಬಹುದು. ಆದರೆ ಅಲ್ಲ, ಏಕೆಂದರೆ ಕೃಷ್ಣನೇ ಕೇಂದ್ರ ವ್ಯಕ್ತಿ. ಆದುದರಿಂದ ಚೈತನ್ಯ ಮಹಾಪ್ರಭು ಶಿಫಾರಸು ಮಾಡುತ್ತಾರೆ, ರಮ್ಯಾ ಕಾಚಿದ್‌ ಉಪಾಸನಾ ವ್ರಜ-ವಧೂ-ವರ್ಗರ್ಭಿಯಾ ಕಲ್ಪಿತಾ, “ಕೃಷ್ಣನನ್ನು ಪೂಜಿಸಲು ಗೋಪಿಯರು ಆಚರಿಸಿದ ರೀತಿಗಿಂತ ಉತ್ತಮವಾದುದು ಬೇರೊಂದಿಲ್ಲ.”

ಆದರೆ ಮೂರ್ಖರು ಆಲೋಚಿಸುವುದೇ ಬೇರೆ, “ಓ, ಇದು ತುಂಬ ಒಳ್ಳೆಯದು. ಕೃಷ್ಣನು ಮಧ್ಯರಾತ್ರಿಯಲ್ಲಿ ಬೇರೊಬ್ಬರ ಪತ್ನಿಯರ ಜೊತೆ ನರ್ತಿಸಿದನಲ್ಲವೆ, ನಾವೂ ಕೂಡ ಕೆಲವು ಬಾಲಕಿಯರನ್ನು ಸೇರಿಸಿಕೊಂಡು ನರ್ತಿಸೋಣ. ಆಗ ನಾವೂ ಕೂಡ ಕೃಷ್ಣನಂತೆ ಆನಂದಿಸಬಹುದು.” ಗೋಪಿಯರೊಂದಿಗೆ ಕೃಷ್ಣನ ಲೀಲೆಗಳ ತಪ್ಪು ಗ್ರಹಿಕೆ ಇದು. ಇಂತಹ ತಪ್ಪು ಅಭಿಪ್ರಾಯಗಳಿಗೆ ತಡೆ ಹಾಕಲು ಶ್ರೀಲ ವ್ಯಾಸದೇವರು ದೇವೋತ್ತಮ ಪರಮ ಪುರುಷನಾಗಿ ಕೃಷ್ಣನ ಸ್ಥಾನವನ್ನು ವರ್ಣಿಸಲು ಭಾಗವತದ 9 ಸ್ಕಂಧಗಳನ್ನೇ ಮೀಸಲಿಟ್ಟಿದ್ದಾರೆ. ಅನಂತರ ಅವರು ಗೋಪಿಯರೊಂದಿಗೆ ಕೃಷ್ಣನ ವರ್ತನೆಯನ್ನು ವಿವರಿಸುತ್ತಾರೆ. ಆದರೆ ಮೂರ್ಖರು ತತ್‌ಕ್ಷಣ 10ನೆಯ ಸ್ಕಂಧಕ್ಕೆ ಧುಮುಕುತ್ತಾರೆ, ಗೋಪಿಯರೊಂದಿಗೆ ಕೃಷ್ಣನ ವ್ಯವಹಾರ ತಿಳಿದುಕೊಳ್ಳಲು. ಈ ರೀತಿ ಅವರು ಸಹಜೀಯರಾಗುತ್ತಾರೆ.

ಭಕ್ತ : ಯಾವುದೋ ಒಂದು ರೀತಿಯಲ್ಲಿ ಕೃಷ್ಣನೊಂದಿಗೆ ಸಂಪರ್ಕ ಉಳ್ಳ ಅಂತಹ ಜನರು ಹೃದಯ ಪರಿವರ್ತನೆಯನ್ನು ಅನುಭವಿಸುವರೇ?

ಶ್ರೀಲ ಪ್ರಭುಪಾದ : ಇಲ್ಲ. ಕಂಸ ಕೂಡ ಕೃಷ್ಣನೊಂದಿಗೆ ಸಂಪರ್ಕಹೊಂದಿದ್ದ. ಆದರೆ ಶತ್ರುವಾಗಿ. ಅದು ಭಕ್ತಿಯಲ್ಲ. ಭಕ್ತಿಯು ಆನುಕೂಲ್ಯೇನ ಕೃಷ್ಣಾನುಶೀಲನಂ : ಅನುಕೂಲಕರವಾಗಿರಬೇಕು. ಯಾರೂ ಕೂಡ ಕೃಷ್ಣನನ್ನು ಅನುಕರಣೆ ಅಥವಾ ಕೊಲ್ಲಲು ಪ್ರಯತ್ನಿಸಬಾರದು. ಅದೂ ಕೂಡ ಕೃಷ್ಣ ಪ್ರಜ್ಞೆಯೇ. ಆದರೆ ಅದು ಒಲವಿನದ್ದಲ್ಲ, ಆದುದರಿಂದ ಭಕ್ತಿಯಲ್ಲ. ಆದರೂ ಕೃಷ್ಣ ಶತ್ರುಗಳಿಗೆ ಪಾಪ ವಿಮೋಚನೆ ದೊರೆಯುತ್ತದೆ, ಏಕೆಂದರೆ, ಹೇಗೋ ಏನೋ ಅವರು ಕೃಷ್ಣನ ಬಗೆಗೆ ಯೋಚಿಸಿರುತ್ತಾರೆ. ಅವರಿಗೆ ನಿರಾಕಾರವಾದಿ ವಿಮೋಚನೆ ಸಿಗುತ್ತದೆ. ಆದರೆ ಆಧ್ಯಾತ್ಮಿಕ ಲೋಕದಲ್ಲಿ ಕೃಷ್ಣನ ಲೀಲೆಯನ್ನು ಪ್ರವೇಶಿಸಲು ಅವರಿಗೆ ಅವಕಾಶವಿಲ್ಲ. ಆ ವರವು ಕೃಷ್ಣನಲ್ಲಿ ಶುದ್ಧ ಪ್ರೇಮ ತೋರುವವರಿಗೆ ಮಾತ್ರ.

ಈ ಲೇಖನ ಶೇರ್ ಮಾಡಿ