ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಹಾಗೂ ಅತಿಥಿಗಳ ನಡುವೆ ನಡೆದ ಸಂವಾದ
ಸ್ಥಳ: ಗೋರಖ್ ಪುರ, ದಿನಾಂಕ ಫೆಬ್ರವರಿ 17, 1971
– ಅನುವಾದ : ಚೇತನಾ ತೀರ್ಥಹಳ್ಳಿ
ಅತಿಥಿ: ಆತ್ಮವು ಯಾವಾಗಲೂ ಒಂದು ದೇಹದಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತಲೇ ಇರುತ್ತದೆ ಎಂದಾದರೆ, ಆತ್ಮವು ಹೇಗೆ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ?

ಶ್ರೀಲ ಪ್ರಭುಪಾದ: ಈ ಲೌಕಿಕ ಜಗತ್ತಿನಲ್ಲಿ ಆತ್ಮವು ಲೌಕಿಕ ಶರೀರಗಳನ್ನು ಅಂಗೀಕರಿಸುತ್ತದೆ. ಅದು ಶ್ರೀಕೃಷ್ಣನ ಅರ್ಹ ಸೇವಕನಾದ ಹಂತದಲ್ಲಿ, ಅದಕ್ಕೆ ಆಧ್ಯಾತ್ಮಿಕ ಶರೀರವನ್ನು ನೀಡಲಾಗುತ್ತದೆ. ಎಲ್ಲಿಯವರೆಗೆ ವ್ಯಕ್ತಿಯೊಬ್ಬ ಸೈನಿಕನಾಗುವುದಿಲ್ಲವೋ, ಅಲ್ಲಿಯವರೆಗೆ ಅವನಿಗೆ ಸಮವಸ್ತ್ರವನ್ನು ನೀಡಲಾಗುವುದಿಲ್ಲ.
ಅವನು ಸೈನಿಕ ವೃತ್ತಿಯನ್ನು ಸ್ವೀಕರಿಸಿದ ತತ್ ಕ್ಷಣದಲ್ಲೇ ಅವನಿಗೆ ಸಮವಸ್ತ್ರವನ್ನು ನೀಡಲಾಗುತ್ತದೆ. ನೀವಿಗೆ ಲೌಕಿಕ ಜಗತ್ತಿನ ವಿವಿಧ ಶರೀರಗಳನ್ನು ಹೊಂದುತ್ತಿರುವಿರಿ. ‘ಭೂತ್ವಾ ಭೂತ್ವಾ ಪ್ರಳೀಯತೇ’ ಎಂಬಂತೆ; ನೀವು ಒಂದು ಬಗೆಯ ಶರೀರವನ್ನು ಹೊಂದುವಿರಿ, ಅದು ನಶಿಸುತ್ತದೆ.
ಅನಂತರ ನೀವು ಮತ್ತೊಂದನ್ನು ಅಂಗೀಕರಿಸುವಿರಿ. ಆದರೆ, ಎಷ್ಟು ಶ್ರೀಘ್ರವಾಗಿ ನೀವು ಪರಿಪೂರ್ಣ ಕೃಷ್ಣಪ್ರಜ್ಞಾವಂತರಾಗಿ ಹೊರಹೊಮ್ಮುತ್ತೀರೋ, ಈ ದೇಹವನ್ನು ತೊರೆದ ಅನಂತರ ನೀವು ಈ ಲೌಕಿಕ ಜಗತ್ತಿಗೆ – ತ್ಯಕ್ತ್ವಾ ದೇಹಮ್ ಪುನರ್ಜನ್ಮ ನೈತಿ – ಬರಲಾರಿರಿ. ನೀವು ತತ್ಕ್ಷಣವೇ ವರ್ಗಾವಣೆಗೊಳ್ಳುವಿರಿ (ಆಧ್ಯಾತ್ಮಿಕ ಜಗತ್ತಿಗೆ) ಮತ್ತು ನೀವು ಆಧ್ಯಾತ್ಮಿಕ ಶರೀರವನ್ನು ಹೊಂದುವಿರಿ.
ಇದು ಸ್ಪಷ್ಟವಾಯಿತೇ, ಇಲ್ಲವೇ? ಈಗ ನೀವು ಲೌಕಿಕ ಶರೀರಗಳನ್ನು ಜನ್ಮ ಜನ್ಮಾಂತರಗಳಲ್ಲಿ ಪಡೆಯುತ್ತ ಬಂದಿರುವಿರಿ. ಅದು ವಲಸೆ ಬಂದಂತೆ ಇದೆ. ಕೆಲವೊಮ್ಮೆ ನೀವು ಮಾನವ ಶರೀರವನ್ನು ಪಡೆದರೆ, ಕೆಲವು ಬಾರಿ ನಾಯಿಯ ಶರೀರವನ್ನು ಕೆಲವು ಬಾರಿ ರಾಜನ ಶರೀರವನ್ನು ಪಡೆಯುವಿರಿ. ಹೀಗೆ ವಿವಿಧ ಬಗೆಯ ಶರೀರಗಳನ್ನು ಹೊಂದುವಿರಿ.

ನೀವು ಕೃಷ್ಣಪ್ರಜ್ಞಾವಂತರಾದಾಗ ಮಾತ್ರ, ನೀವು ಲೌಕಿಕ ಶರೀರವನ್ನು ಹೊಂದುವುದಿಲ್ಲ. ನೀವು ನೇರವಾಗಿ ಕೃಷ್ಣನಲ್ಲಿಗೆ ತೆರಳಿ, ಆಧ್ಯಾತ್ಮಿಕ ಶರೀರವನ್ನು ಪಡೆಯುವಿರಿ. ಆಗ ನಿಮ್ಮ ಜೀವನವು ಶಾಶ್ವತವಾಗುತ್ತದೆ.
ಅತಿಥಿ: ಅನಂತರದಲ್ಲಿ ಮತ್ತೆ ನೀವು ಲೌಕಿಕ ಶರೀರವನ್ನು ಹೊಂದುವುದಿಲ್ಲವೆ?
ಶ್ರೀಲ ಪ್ರಭುಪಾದ: ಇಲ್ಲ. ‘ತ್ಯಕ್ತ್ವಾ ದೇಹಮ್ ಪುನರ್ಜನ್ಮ ನೈತಿ’ ನೀವು ಕೃಷ್ಣಪ್ರಜ್ಞಾವಂತರಾಗಿರುವಾಗ, ನೀವು ಲೌಕಿಕ ಶರೀರವನ್ನು ಪಡೆಯಲಾರಿರಿ. ಕೃಷ್ಣನು ಹೇಳುತ್ತಾನೆ, ‘ಮಾಮ್ಏತಿ’ – “ಆತ್ಮವು ನನ್ನೆಡೆಗೆ ಬರುತ್ತದೆ.” ‘ಮಾಮ್ಏತಿ’ ಅಂದರೆ – ಯಾರೆಲ್ಲರು ಕೃಷ್ಣನೆಡೆಗೆ ತೆರಳುತ್ತಾರೋ, ಅವರೆಲ್ಲರೂ ಕೃಷ್ಣನ ಶರೀರದಂತಹ ಶರೀರವನ್ನು ಹೊಂದುತ್ತಾರೆ.
ಅತಿಥಿ: ಮತ್ತೀಗ ಕೃಷ್ಣನು ರಣರಂಗದಲ್ಲಿ ಅರ್ಜುನನಿಗೆ ಹೇಳುವ, “ನಾನು ಮತ್ತು ನೀನು ಅಸ್ತಿತ್ವದಲ್ಲಿಲ್ಲದ ಕಾಲವೇ ಇರಲಿಲ್ಲ” – ಎಂಬ ಮಾತಿನ ಅರ್ಥವೇನು?
ಶ್ರೀಲ ಪ್ರಭುಪಾದ: ಕೃಷ್ಣಾರ್ಜುನರು ಅಸ್ತಿತ್ವದಲ್ಲಿರುವರು, ನೀವು ಕೂಡ ಅಸ್ತಿತ್ವದಲ್ಲಿರುವಿರಿ. ನೀವು ಶಾಶ್ವತರು. ನೀವು ಸುಮ್ಮನೆ ಶರೀರಗಳನ್ನು ಬದಲಿಸುತ್ತಿರುವಿರಿ. ಇಲ್ಲಿ ಅರ್ಥಮಾಡಿಕೊಳ್ಳಲು ಕಠಿಣವಾದುದೇನಿದೆ? ಆದರೆ ಕೃಷ್ಣನು ತನ್ನ ದೇಹವನ್ನು ಬದಲಿಸುತ್ತಿಲ್ಲ. ಅದೇ ವ್ಯತ್ಯಾಸ.

ಅತಿಥಿ: ಆತ್ಮವು ಕೃಷ್ಣ ಪ್ರಕಾಶದೊಡನೆ ಸೇರಿ ಹೋಗುವುದಿಲ್ಲವೆ?
ಶ್ರೀಲ ಪ್ರಭುಪಾದ: ಆತ್ಮವು ದೇಹಗಳನ್ನು ಬದಲಿಸುತ್ತಿರುತ್ತದೆ. ನೀವೇಕೆ ಒಂದಾಗುವ ಮಾತನ್ನಾಡುತ್ತಿರುವಿರಿ? ನೀವು ನಿಮ್ಮ ದೇಹವನ್ನು ಬದಲಿಸುತ್ತಿರುವಿರಿ. ನಾನು ನನ್ನ ದೇಹ ಬದಲಿಸುತ್ತಿರುವೆ. ಆದರೆ ನಾವಿಬ್ಬರೂ ಪ್ರತ್ಯೇಕ ವ್ಯಕ್ತಿಗಳು. ನಾನು ನಾಯಿಯ ಶರೀರಕ್ಕೆ ವರ್ಗಾವಣೆಯಾಗಬಹುದು, ನೀವು ದೇವತೆಯ ಶರೀರ ಪಡೆಯಬಹುದು. ಅದು ನಡೆಯುತ್ತಲೇ ಇದೆ. ಪ್ರತಿಯೊಬ್ಬನೂ ತನ್ನ ಕರ್ಮಾನುಸಾರ ದೇಹಗಳನ್ನು ಬದಲಿಸುತ್ತಿರುತ್ತಾನೆ.
ಈಗ, ನೀವು ಸಂಪೂರ್ಣ ಕೃಷ್ಣಪ್ರಜ್ಞಾವಂತರಾಗಿರುವ ಪಕ್ಷದಲ್ಲಿ ಕೂಡ ದೇಹದ ಬದಲಾವಣೆ ನಡೆಯುತ್ತದೆ. ಆದರೆ, ಆ ಹೊಸ ದೇಹವು ಆಧ್ಯಾತ್ಮಿಕವಾದುದಾಗಿರುತ್ತದೆ. ಎಲ್ಲಿಯವರೆಗೆ ನೀವು ಲೌಕಿಕ ಶರೀರಗಳನ್ನು ಪಡೆಯುತ್ತಿರುತ್ತೀರೋ, ನೀವು ಒಂದರಿಂದ ಮತ್ತೊಂದಕ್ಕೆ ಅದರಿಂದ ಇನ್ನೊಂದಕ್ಕೆ ಹೀಗೆ ಬದಲಾಯಿಸುತ್ತಲೇ ಇರಬೇಕಾಗುತ್ತದೆ.
ಉದಾ: ನೀವು ಅಗ್ಗದ ವಸ್ತುವನ್ನು ಕೊಂಡರೆ ಅದು ಬಹಳ ಬೇಗ ಹಾಳಾಗುತ್ತದೆ ಮತ್ತು ನೀವು ಹೊಸತನ್ನು ಕೊಳ್ಳಬೇಕಾಗುತ್ತದೆ. ಆದರೆ ನೀವು ನಿಜವಾದ, ಒಳ್ಳೆಯ ವಸ್ತುವನ್ನು ಕೊಂಡಿದ್ದಾದಲ್ಲಿ, ಅದು ಬಹಳ ಕಾಲ ಬಾಳುತ್ತದೆ. ಹಾಗೆಯೇ, ಎಲ್ಲಿಯವರೆಗೆ ನೀವು ಅಗ್ಗದ – ಲೌಕಿಕ ದೇಹವನ್ನು ಪಡೆಯುತ್ತಿರುತ್ತೀರೋ, ಅಲ್ಲಿಯವರೆಗೆ ನೀವು ಬದಲಿಸುತ್ತಲೇ ಇರುತ್ತೀರಿ.
ಆದರೆ ಯಾವಾಗ ನೀವು ಅತ್ಯಮೂಲ್ಯವಾದ ಆಧ್ಯಾತ್ಮಿಕ ಶರೀರವನ್ನು ಪಡೆಯುತ್ತೀರೋ, ಆಗ ಅಲ್ಲಿ ಮತ್ತೆ ಬದಲಾಯಿಸಬೇಕಾದ ಪ್ರಸಂಗ ಒದಗಿ ಬರುವುದಿಲ್ಲ. ಯಾರು ಕೃಷ್ಣನ ಬಗೆಗೆ ಏನನ್ನೂ ಅರಿತಿರುವುದಿಲ್ಲವೋ, ಆತನು ಕೃಷ್ಣನಿಗಿಂತ ದೊಡ್ಡವನಾದ ಮತ್ತೊಬ್ಬನಿರುವನೆಂದು ತಪ್ಪಾಗಿ ಭಾವಿಸುತ್ತಾನೆ. ಆದರೆ ಯಾರು ಕೃಷ್ಣನನ್ನು – ಅವನು ಇರುವಂತೆಯೇ ಅರ್ಥೈಸಿಕೊಳ್ಳುತ್ತಾರೋ, ಅವರು ಕೂಡಲೇ ಕೇವಲ ಕೃಷ್ಣನನ್ನು ಅರಿಯುವ ಮಾತ್ರದಿಂದಲೇ ಶಾಶ್ವತ ಶರೀರವನ್ನು ಪಡೆದುಬಿಡುತ್ತಾರೆ.

ಜನ್ಮ ಕರ್ಮ ಚ ಮೇ ದಿವ್ಯಮ್ ಏವಮ್ ಯೋ ವೇತ್ತಿ ತತ್ತ್ವತಃ |
ತ್ಯಕ್ತ್ವಾದೇಹಮ್ ಪುನರ್ಜನ್ಮ ನೈತಿ ಮಾಮ್ ಏತಿ ಸೋಽರ್ಜುನ ||
“ಅರ್ಜುನನೇ, ಯಾರು ಹೀಗೆ ನನ್ನ ಹುಟ್ಟಿನ ಮತ್ತು ಕರ್ಮಗಳ ದಿವ್ಯ ಸ್ವರೂಪವನ್ನು ಯಥಾರ್ಥವಾಗಿ ತಿಳಿದುಕೊಳ್ಳುವರೋ ಅವರು ದೇಹತ್ಯಾಗ ಮಾಡಿದನಂತರ ಮತ್ತೆ ಈ ಐಹಿಕ ಜಗತ್ತಿನಲ್ಲಿ ಹುಟ್ಟುವುದಿಲ್ಲ. ಅವರು ನನ್ನ ನಿತ್ಯ ನಿವಾಸಕ್ಕೆ ಬರುತ್ತಾರೆ.”
ಆದ್ದರಿಂದ ನೀವು ಕೃಷ್ಣನನ್ನು ಅರಿತರಷ್ಟೆ ಸಾಕು. ಆಗ ಎಲ್ಲ ಸಮಸ್ಯೆ ಗಳು ತನ್ನಿಂದ ತಾನೆ ಬಗೆಹರಿಯುತ್ತವೆ.
ಕೃಷ್ಣನನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿ. ಕೃಷ್ಣನನ್ನು ಕೇವಲ ಭಕ್ತಿಸೇವೆಯಿಂದಲೇ ಅರಿತುಕೊಳ್ಳಬಹುದು. ಸ್ವತಃ ಕೃಷ್ಣನೇ ‘ಭಕ್ತ್ಯಾಮಾಮ್ ಅಭಿಜಾನಾತಿ’ ಎಂದು ಹೇಳಿರುವನು. ಅದು ಕೃಷ್ಣನಿಗೆ ಶರಣಾಗತರಾಗುವ ಮೂಲಕ ಆರಂಭವಾಗುತ್ತದೆ.
‘ಸರ್ವಧರ್ಮಾನ್ ಪರಿತ್ಯಜ್ಯ’ – ಯಾವೆಲ್ಲ ಅಸಂಬಂದ್ಧಗಳು ನಿನಗೆ ತಿಳಿದಿವೆಯೋ, ಅವೆಲ್ಲವನ್ನೂ ಬಿಸುಟುಬಿಡು. ಕೇವಲ ಕೃಷ್ಣನಿಗೆ ಶರಣಾಗು. ಅದು ಭಗವದ್ಗೀತೆಯ ಆರಂಭವಾಗಿದೆ.






Leave a Reply