ಕಂಸನಿಗೆ ತನ್ನನ್ನು ಸಂಹರಿಸುವವನು ಇನ್ನೂ ಬದುಕಿದ್ದಾನೆ ಎಂಬ ಸಂಗತಿ ತಿಳಿದುಬಂದಿತು. ಅದಕ್ಕಾಗಿ ಆತನನ್ನೆ ಕೊಂದುಬಿಡಲು ಅವನು ತನ್ನ ಬಳಗದ ಹಲವು ಅಸುರರನ್ನು ಅವನತ್ತ ಕಳಿಸಿದ್ದ. ಆದರೆ ಅವರಲ್ಲಿ ಯಾರೊಬ್ಬರೂ ಜೀವಂತ ಮರಳಿ ಬರಲಿಲ್ಲ. ಬಕಾಸುರನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅವನು ಆತನ ಸಹೋದರ, ಅಸುರ ಸರ್ಪ ಅಘಾಸುರನನ್ನು ಕರೆಸಿದ. ತನ್ನ ಸಹೋದರನ ಸಾವಿನ ಬಗ್ಗೆ ಕೇಳಿದ ಅಘ ಕುದ್ದು ಹೋದ. ಅದೇ ಬಾಲಕನಿಂದ ಆತನ ಸಹೋದರಿ ಪೂತನಿ ಕೂಡ ಹತಳಾಗಿದ್ದಳು.
ತನ್ನ ಸಹೋದರಿ ಹಾಗೂ ಸಹೋದರನ ಸಾವಿನ ಸೇಡು ತೀರಿಸಿಕೊಳ್ಳುವ ರಚ್ಚಿನಿಂದ ಅಘಾಸುರ ವೃಂದಾವನದತ್ತ ಹೊರಟ. ಊರಿನ ಹೊರಗೆ ತನ್ನ ಅಗಾಧವಾದ ಶರೀರವನ್ನು ಹಿಗ್ಗಿಸಿ ಮಲಗಿಕೊಂಡ. ಅಲ್ಲಿಗೆ ತನ್ನ ಶತ್ರುವಾದ ಆ ಬಾಲಕ ಬರುವನೆಂದು ಕಾಯತೊಡಗಿದ. ತನ್ನೊಳಗೆ ಆ ಹುಡುಗರು ಪ್ರವೇಶಿಲು ಅನುಕೂಲವಾಗುವಂತೆ ಬಾಯನ್ನು ತೆರೆದು ಬಿದ್ದುಕೊಂಡ.

ಎಂದಿನಂತೆ ಕರುಗಳನ್ನು ಮೇಯಿಸಲು ಬಂದ ಕೃಷ್ಣ ಮತ್ತು ಅವನ ಗೆಳೆಯರು ಊರ ಹೊರಗೆ ಹೊಸತಾಗಿ ಕಾಣುತ್ತಿರುವ ವಿಚಿತ್ರ ಗುಹೆಯನ್ನು ಅಚ್ಚರಿಯಿಂದ ನೋಡಿದರು. ಅದರ ತಂಟೆಗೆ ಹೋಗಬೇಡಿರೆಂದು ಕೃಷ್ಣ ಎಚ್ಚರಿಸುವ ಮೊದಲೇ ಅವರು ಅದನ್ನು ಪರಿಶೀಲಿಸುವ ಕುತೂಹಲದಿಂದ ಗುಹೆಯತ್ತ ಓಡಿದರು. ಅಘಾಸುರನ ಹಲ್ಲುಗಳು ಕಂಬದಂತೆ ಎತ್ತರವೂ ದಪ್ಪವೂ ಆಗಿದ್ದು, ತುದಿಯಲ್ಲಿ ಚೂಪಾಗಿದ್ದವು. ಅವನ ನಾಲಗೆಯು ರಬ್ಬರಿನ ರಸ್ತೆಯ ಹಾಗೆ ತೋರುತ್ತಿತ್ತು. ಬಾವಲಿಗಳು ಆ ಗುಹೆಯಂಥ ಬಾಯಿಯಿಂದ ಹೊರಗೆ ಹಾರಿಬರುತ್ತಿದ್ದವು. ಅದರೊಳಗಿಂದ ಒಂದು ಬಗೆಯ ಗಬ್ಬು ವಾಸನೆ ಬರುತ್ತಿತ್ತು. ಅದರೊಳಗೆ ಹೋಗುತ್ತಿದ್ದ ಹುಡುಗರು ಇದ್ದಕ್ಕಿದ್ದ ಹಾಗೆ ಜಾರಿ ನುಂಗಲ್ಪಟ್ಟರು!
ಈಗ ಕೋಪಗೊಳ್ಳುವ ಸರದಿ ಕೃಷ್ಣನದ್ದು. ಅವನಿಗೆ ತನ್ನ ಮುಗ್ಧ ಗೆಳೆಯರು ಅಸುರನಿಂದ ವಂಚನೆಗೆ ಒಳಗಾಗುತ್ತಿದ್ದಾರೆ ಎಂಬುದು ಖಚಿತವಾಯಿತು.
ಅನಂತರ ರಾಕ್ಷಸನನ್ನು ಕೊಲ್ಲುವುದು ಹೇಗೆ ಮತ್ತು ಹುಡುಗರನ್ನೂ ಕರುಗಳನ್ನೂ ಉಳಿಸುವುದು ಹೇಗೆ ಎಂದು ಯೋಚಿಸಲು ಪ್ರಾರಂಭಿಸಿದ. ವಾಸ್ತವವಾಗಿ ಕೃಷ್ಣನಿಗೆ ಇದು ಸಂಬಂಧವಿಲ್ಲದಿದ್ದರೂ ಅವನು ಹೀಗೆ ಯೋಚನೆ ಮಾಡುತ್ತಿದ್ದ. ಹೀಗೆ ಸ್ವಲ್ಪ ಹೊತ್ತು ಯೋಚನೆ ಮಾಡಿ ತಾನೂ ರಾಕ್ಷಸನ ಬಾಯನ್ನು ಹೊಕ್ಕ. ಕೃಷ್ಣನೂ ಪ್ರವೇಶಿಸಿದಾಗ ಈ ವಿನೋದವನ್ನು ನೋಡಲು ಆಕಾಶದಲ್ಲಿ ನೆರೆದ ಮೋಡಗಳಲ್ಲಿ ಅಡಗಿಕೊಂಡಿದ್ದ ದೇವತೆಗಳು `ಅಯ್ಯೋ! ಅಯ್ಯೋ!’ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಆ ಹೊತ್ತಿನಲ್ಲೇ ಮಾಂಸ ಮತ್ತು ರಕ್ತಗಳನ್ನು ಸೇವಿಸುವ ಅಭ್ಯಾಸವಿದ್ದ ಅಘಾಸುರನ ಸ್ನೇಹಿತರೆಲ್ಲ ಮುಖ್ಯವಾಗಿ ಕಂಸನು, ಕೃಷ್ಣನು ಸಹ ರಾಕ್ಷಸನ ಬಾಯಿಯನ್ನು ಪ್ರವೇಶಿಸಿದ ಎಂದು ತಿಳಿದು ತಮ್ಮ ಹರ್ಷವನ್ನು ತೋರಲು ಪ್ರಾರಂಭಿಸಿದರು.

ರಾಕ್ಷಸನು ಕೃಷ್ಣನನ್ನೂ ಅವನ ಗೆಳೆಯನನ್ನೂ ನುಚ್ಚುನುರು ಮಾಡಲು ಪ್ರಯತ್ನಿಸುತ್ತಿದ್ದಾಗ ದೇವತೆಗಳು `ಅಯ್ಯೋ! ಅಯ್ಯೋ!’ ಎಂದದ್ದು ಕೃಷ್ಣನಿಗೆ ಕೇಳಿಸಿತು. ಅವನು ಕೂಡಲೇ ರಾಕ್ಷಸನ ಗಂಟಲಿನಲ್ಲಿಯೇ ತನ್ನ ದೇಹವನ್ನು ಬೆಳೆಸಲು ಪ್ರಾರಂಭಿಸಿದ. ರಾಕ್ಷಸನಿಗೆ ದೈತ್ಯ ದೇಹವಿದ್ದರೂ ಕೃಷ್ಣನು ಬೆಳೆಯುತ್ತ ಹೋದ ಹಾಗೆ ಅವನಿಗೆ ಉಸಿರುಕಟ್ಟಿತು. ಅವನ ದೊಡ್ಡ ಕಣ್ಣುಗಳು ರಭಸದಿಂದ ಚಲಿಸಿದವು ಮತ್ತು ಬೇಗ ಉಸಿರುಕಟ್ಟಿತು. ಅವನ ಪ್ರಾಣವಾಯುವು ಯಾವ ರೀತಿಯಲ್ಲಿಯೂ ಹೊರಕ್ಕೆ ಬರಲು ಸಾಧ್ಯವಾಗಲಿಲ್ಲ. ಕಡೆಗೆ ಅದು ಅವನ ತಲೆಯ ಚಿಪ್ಪಿನ ಮೇಲ್ಭಾಗದಲ್ಲಿ ಒಂದು ತೂತನ್ನು ಮಾಡಿಕೊಂಡು ಅದರಿಂದ ರಭಸವಾಗಿ ಹೊರಕ್ಕೆ ಹೋಯಿತು. ಹೀಗೆ ಅವನ ಪ್ರಾಣವಾಯುವು ಹೊರಟು ಹೋಯಿತು. ರಾಕ್ಷಸನು ಸತ್ತುಬಿದ್ದನಂತರ ಕೃಷ್ಣನು ತನ್ನ ಅಲೌಕಿಕ ಕಣ್ಣೋಟದಿಂದಲೇ ಎಲ್ಲ ಬಾಲಕರಿಗೂ ಕರುಗಳಿಗೂ ಮತ್ತೆ ಪ್ರಜ್ಞೆ ಬರುವಂತೆ ಮಾಡಿ ಅವರೊಡನೆ ರಾಕ್ಷಸನ ಬಾಯಿಂದ ಹೊರಕ್ಕೆ ಬಂದ. ಕೃಷ್ಣನು ಅಘಾಸುರನ ಬಾಯಲ್ಲಿ ಇದ್ದಾಗ ರಾಕ್ಷಸನ ಚೇತನವು ಎಲ್ಲ ದಿಕ್ಕುಗಳನ್ನು ಬೆಳಗುತ್ತ ಕಣ್ಣುಕೋರೈಸುವ ಜ್ಯೋತಿಯಾಗಿ ಹೊರಕ್ಕೆ ಬಂದು ಆಕಾಶದಲ್ಲಿ ಕಾದು ನಿಂತಿತು. ಕರುಗಳು ಮತ್ತು ಸ್ನೇಹಿತರೊಡನೆ ಕೃಷ್ಣನು ಹೊರಕ್ಕೆ ಬರುತ್ತಲೇ ಆ ಉಜ್ವಲ ದೀಪವು ದೇವತೆಗಳು ನೋಡುತ್ತಿರುವಂತೆಯೇ ಕೃಷ್ಣನ ದೇಹದಲ್ಲಿ ಲೀನವಾಯಿತು.
ದೇವತೆಗಳಿಗೆ ಹಿಡಿಸಲಾರದಷ್ಟು ಹರ್ಷವಾಯಿತು. ಅವರು ದೇವೋತ್ತಮ ಪರಮ ಪುರುಷನಾದ ಕೃಷ್ಣನ ಮೇಲೆ ಹೂವುಗಳನ್ನು ಸುರಿಸಿ ಅವನನ್ನು ಪೂಜಿಸಿದರು. ದೇವಲೋಕದ ನಿವಾಸಿಗಳು ಆನಂದದಿಂದ ನರ್ತಿಸಲಾರಂಭಿಸಿದರು ಮತ್ತು ಗಂಧರ್ವಲೋಕದ ನಿವಾಸಿಗಳು ಬಗೆಬಗೆಯಾಗಿ ಸ್ತುತಿಸಲು ಪ್ರಾರಂಭಿಸಿದರು. ನಗಾರಿ ಬಾರಿಸುವವರು ಹರ್ಷದಿಂದ ನಗಾರಿಗಳನ್ನು ಬಾರಿಸಿದರು. ಬ್ರಾಹ್ಮಣರು ವೈದಿಕ ಸ್ತುತಿಗಳನ್ನು ಪಠಿಸಿದರು ಮತ್ತು ಪ್ರಭುವಿನ ಎಲ್ಲ ಭಕ್ತರೂ `ಜಯ, ಜಯ ದೇವೋತ್ತಮ ಪರಮ ಪುರುಷನಿಗೆ ಎಲ್ಲ ಜಯವಾಗಲಿ!’ ಎಂದು ಘೋಷಿಸಿದರು.






Leave a Reply