ಅಹಂಕಾರದ ಫಲ – ಭಾಗ-2

ಆಧಾರ: ಭಾಗವತ, 6ನೇ ಸ್ಕಂಧ, 7 ರಿಂದ 9ನೇ ಅಧ್ಯಾಯ

– ಡಾ.ಬಿ.ಆರ್‌.ಸುಹಾಸ್‌

ದೇವಗುರು ಬೃಹಸ್ಪತಿಯನ್ನು ಅವಮಾನಿಸಿದ ಇಂದ್ರ, ಅವರ ಕೋಪಕ್ಕೆ ತುತ್ತಾಗುತ್ತಾನೆ. ದಾನವರಿಗೆ ಹವಿಸ್ಸು ಅರ್ಪಿಸುತ್ತಿದ್ದ ವಿಶ್ವರೂಪನನ್ನು ಕೊಂದು ಬ್ರಹ್ಮಹತ್ಯಾ ದೋಷ ಹೊಂದುತ್ತಾನೆ. ಹೀಗೆ ಇಂದ್ರನ ಅಹಂಕಾರದ ಪ್ರತಿಫಲದ ಕಷ್ಟ ಪರಂಪರೆ ಬೆಳೆಯುತ್ತ ಹೋಗುತ್ತದೆ. (ಮುಂದೆ ಓದಿ…)

ವಿಶ್ವರೂಪನು ಸತ್ತ ಸುದ್ದಿ ಅವನ ತಂದೆ ತ್ವಷ್ಟನಿಗೆ ಮುಟ್ಟಿತು. ಅವನು ಶೋಕಾವೇಶಗಳಿಗೊಳಗಾಗಿ ಬಹಳ ದುಃಖಿಸಿದನು.

“ಅಯ್ಯೋ ನನ್ನ ಒಬ್ಬನೇ ಮುದ್ದು ಮಗ ವಿಶ್ವರೂಪ ಇನ್ನಿಲ್ಲವೇ….. ?! ಬ್ರಹ್ಮಜ್ಞಾನಿಯೂ ಮಹಾ ವಿದ್ವಾಂಸನೂ ಆದ ನನ್ನ ಮಗನು ಅನ್ಯಾಯದಿಂದ ಕೊಲ್ಲಲ್ಪಟ್ಟನೇ….?” ಅವನು ಹಲುಬಿದನು, “ಪೌರೋಹಿತ್ಯವು ನಿಂದ್ಯಕಾರ್ಯವೆಂದು ತಿಳಿದಿದ್ದರೂ ಅವನು ಪ್ರೀತಿ ಗೌರವಗಳಿಂದ ದೇವತೆಗಳಿಗೆ ಪುರೋಹಿತನಾಗಲು ಒಪ್ಪಿಕೊಂಡ;

ಆದರೆ ಅದಕ್ಕೆ ಇಂದ್ರನು ಕೊಟ್ಟ ಪ್ರತಿಫಲ? ಅಯ್ಯೋ….! ತನ್ನ ಸ್ವಾರ್ಥ ಸಾಧನೆಗಾಗಿ ಗುರುವನ್ನೇ ಕೊಲ್ಲುವಷ್ಟು ನೀಚನಾದನೇ…..?! ಛೇ! ನನ್ನ ಮಗನು ಸಾಯುವಂಥ ತಪ್ಪನ್ನಾದರೂ ಏನು ಮಾಡಿದ್ದ?! ಇನ್ನೂ ಆ ದೇವತೆಗಳ ಬಲವನ್ನು ವರ್ಧಿಸಿ ರಾಕ್ಷಸರನ್ನು ಗೆಲ್ಲುವಂತೆ ಮಾಡಿ ಉಪಕಾರವನ್ನೇ ಮಾಡಿದ್ದ!

ಏನೋ ಬಂಧುಗಳೆಂದು ಅಸುರರಿಗೆ ಸ್ವಲ್ಪ ಹವಿರ್ಭಾಗ ನೀಡುತ್ತಿದ್ದರೆ ಅದಕ್ಕೆ ಕೊಲೆಯಂಥ ಶಿಕ್ಷೆಯೇ?! ಈ ತಪ್ಪಿನ ಫಲವನ್ನು ಇಂದ್ರನು ಖಂಡಿತ ಉಣ್ಣುತ್ತಾನೆ! ನನ್ನ ಮಗನ ಸಾವಿನ ಸೇಡನ್ನು ನಾನು ತೀರಿಸಿಕೊಳ್ಳುವೆ!!”

ಹೀಗೆ ಯೋಚಿಸಿ ತ್ವಷ್ಟನು ಇಂದ್ರನಿಗೊಬ್ಬ ಶತ್ರುವನ್ನು ಸೃಷ್ಟಿಸಲೆಂದು ಒಂದು ಯಜ್ಞ ಮಾಡಿದ. ಅವನು ಅಗ್ನಿಯಲ್ಲಿ ಹವಿಸ್ಸನ್ನರ್ಪಿಸುತ್ತಾ, ‘ಇಂದ್ರಶತ್ರೋ ವಿವರ್ಧಸ್ವ’ ಎಂಬ ಮಂತ್ರವನ್ನುಚ್ಚರಿಸಿ ಇಂದ್ರಶತ್ರುವಿನ ವರ್ಧನೆಯಾಗಲಿ ಎಂದು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡ.

ಆದರೆ ಅವನು ಮಂತ್ರೋಚ್ಚಾರಣೆ ಮಾಡುವಾಗ ಸ್ವಲ್ಪ ದೀರ್ಘವಾಗಿ ಎಳೆದು ಉಚ್ಚರಿಸಿದುದರಿಂದ, ‘ಇವನ ಶತ್ರುವಾದ ಇಂದ್ರನೇ, ವರ್ಧಿಸು’ ಎಂಬ ರೀತಿಯಲ್ಲಿ ಅರ್ಥ ಬೇರೆಯಾಗಿ ಹೋಯಿತು. ಹೀಗಾದುದರಿಂದ, ಇಂದ್ರನನ್ನು ವಧಿಸುವ ಪುತ್ರನು ಹುಟ್ಟುವ ಬದಲಿಗೆ ಇಂದ್ರನಿಂದಲೇ ವಧಿಸಲ್ಪಡುವ ಪುತ್ರನು ಹುಟ್ಟಿದನು. ಆದರೆ ತ್ವಷ್ಟನಿಗೆ ಇದು ಅರಿವಾಗಲಿಲ್ಲ.

ಅವನು ಹೀಗೆ ಮಂತ್ರೋಚ್ಚಾರಣೆ ಮಾಡಲು ಅಗ್ನಿಕುಂಡದಿಂದ ಅತ್ಯಂತ ಘೋರರೂಪಿಯಾದ ಒಬ್ಬ ರಾಕ್ಷಸನು ಆವಿರ್ಭವಿಸಿದನು. ಯುಗಾಂತದಲ್ಲಿ ಸಕಲ ಲೋಕಗಳನ್ನೂ ನಾಶಮಾಡಹೊರಟಿರುವ ಹಂತಕನಂತೆ ಅವನು ಬಹಳ ಭಯಂಕರವಾಗಿ ಕಾಣುತ್ತಿದ್ದನು.

ದಿನೇ ದಿನೇ ಅವನು ಬಾಣದ ವೇಗದಲ್ಲಿ ಬೆಳೆದನು. ಬಹಳ ಎತ್ತರವೂ ಕಡುಕಪ್ಪು ವರ್ಣವುಳ್ಳವನೂ ಆಗಿದ್ದ ಅವನು ದಗ್ಧಪರ್ವತದಂತೆ ಕಾಣುತ್ತಿದ್ದನು. ಸಂಧ್ಯಾಕಾಲದ ಮೇಘಗಳಂತೆ ಅವನು ಕಾಂತಿಯುಕ್ತವಾಗಿದ್ದನು. ಅವನ ತಲೆಗೂದಲೂ ಗಡ್ಡಮೀಸೆಗಳೂ ತಪ್ತತಾಮ್ರದಂತೆ ಕೆಂಪಾಗಿದ್ದವು.

ಮಧ್ಯಾಹ್ನದ ಪ್ರಖರ ಸೂರ್ಯನಂತೆ ಅವನ ಕಂಗಳು ಬಹಳ ತೀಕ್ಷ್ಣವಾಗಿದ್ದವು. ದೇದೀಪ್ಯಮಾನವಾಗಿದ್ದ ಅವನ ತ್ರಿಶೂಲದ ತುದಿಗಳಲ್ಲಿ ಮೂರು ಲೋಕಗಳನ್ನೂ ಹಿಡಿದಂತೆ ಕಾಣುತ್ತಿದ್ದ ಅವನು ದುರತಿಕ್ರಮನಂತೆ ತೋರುತ್ತಿದ್ದನು. ಭಯಂಕರವಾಗಿ ಗರ್ಜಿಸುತ್ತಲೂ ನರ್ತಿಸುತ್ತಲೂ ಅವನು ತನ್ನ ಪದಾಘಾತದಿಂದ ಇಡೀ ಭೂಮಿಯನ್ನೇ ನಡುಗಿಸಿಬಿಟ್ಟನು.

ಮತ್ತೆ ಮತ್ತೆ ಆಕಳಿಸುತ್ತಿದ್ದ ಅವನು, ದೊಡ್ಡ ಗುಹೆಯಂತಿದ್ದ ತನ್ನ ಅಗಲವಾದ ಬಾಯಿಂದ ಇಡೀ ಆಗಸವನ್ನೇ ನುಂಗಿಬಿಡುವಂತೆಯೂ, ತನ್ನ ದೀರ್ಘವಾದ ನಾಲಗೆಯಿಂದ ನಕ್ಷತ್ರಗಳನ್ನು ನೆಕ್ಕುವಂತೆಯೂ, ತೀಕ್ಷ್ಣವಾದ ತನ್ನ ರೌದ್ರದಂಷ್ಟ್ರಗಳಿಂದ ಮೂರು ಲೋಕಗಳನ್ನೂ ಆಗಿದುಬಿಡುವನೇನೋ ಎಂಬಂತೆಯೂ ಕಾಣುತ್ತಿದ್ದು ಬೀಭತ್ಸರೂಪಿಯಾಗಿದ್ದನು.

ಇಂಥ ಭಯಂಕರ ರಾಕ್ಷಸನನ್ನು ನೋಡಿ ಎಲ್ಲರೂ ಭಯಭೀತರಾಗಿ ದಶದಿಕ್ಕುಗಳಿಗೆ ಓಡಿಹೋದರು. ಅವನು ತ್ವಷ್ಟವಿನ ಮಗನೇ ಆಗಿದ್ದುದರಿಂದ ಅವನ ತಪೋಬಲದಿಂದ ಕೂಡಿದ್ದು ಸಕಲಲೋಕಗಳನ್ನೂ ತನ್ನ ಆಗಾಧ ಶರೀರದಿಂದ ಆವರಿಸಿಬಿಟ್ಟನು. ಆದ್ದರಿಂದ ಅವನಿಗೆ ವೃತ್ರಾಸುರನೆಂದು ಹೆಸರಾಯಿತು.

ಮಹಾದೈತ್ಯನಾದ ಆ ವೃತ್ರಾಸುರನು ಘನಘೋರವಾಗಿ ಗರ್ಜಿಸುತ್ತಾ ಅಮರಾವತಿಯ ಮೇಲೆ ದಾಳಿ ಮಾಡಿದನು. ದೂರದಿಂದಲೇ ಅವನ ಘೋರರೂಪವನ್ನು ನೋಡಿ ಇಂದ್ರಾದಿ ದೇವತೆಗಳು ನಡುಗಿಹೋದರು. ಇವನಿಂದ ಪಾರಾಗುವುದಾದರೂ ಸಾಧ್ಯವೇ ಎಂಬ ಭಯ ಎಲ್ಲರ ಮನಗಳನ್ನೂ ಆವರಿಸಿತು.

“ಅಯ್ಯೊ! ಮಗನ ಮರಣದಿಂದ ದುಃಖಿತನಾದ ತ್ವಷ್ಟಸ್ವಯಂ ದೇವತೆಯೇ ಆದರೂ, ಸೇಡು ತೀರಿಸಿಕೊಳ್ಳಲು ಇಂಥ ದೈತ್ಯನನ್ನು ಸೃಷ್ಟಿಸಿದ್ದಾನೆ.” ಇಂದ್ರನು ಅರಿತುಕೊಂಡನು, “ಈ ಅನರ್ಥಕ್ಕೆಲ್ಲಾ ನಾನೇ ಕಾರಣನಲ್ಲವೇ?! ಅಂದು ಸುಖವೈಭವಗಳಲ್ಲಿ ಮೈಮರೆತಿದ್ದ ನಾನು, ಅಹಂಕಾರದ ಮೋಡದೊಳಗೆ ಸೇರಿಕೊಂಡೆ. ನನ್ನ ಸಕಲ ಸಾಧನೆಗಳಿಗೂ ಕಾರಣೀಭೂತರಾಗಿದ್ದ ನನ್ನ ಗುರುಗಳನ್ನೇ ಅವಮಾನಿಸಿದೆ.

ಅನಂತರ ಕಳೆಯಿತು ಆ ಮೋಡದ ಕತ್ತಲು! ಆದರೇನು?! ಅದು ಕರಗುತ್ತಾ ಕಷ್ಟಪರಂಪರೆಗಳ ಮಳೆಯನ್ನೇ ಸುರಿಸಿದೆ. ಒಂದು ತಪ್ಪು, ಗುರುಹತ್ಯೆಯೆಂಬ ಮತ್ತೊಂದು ಪಾಪಕ್ಕೂ ಅದರ ಸಂಕಷ್ಟಕ್ಕೂ ದಾರಿಮಾಡಿತು. ಅದರಿಂದುಂಟಾದ ಬ್ರಹ್ಮಹತ್ಯಾದೋಷದಿಂದ ಹೇಗೋ ಪಾರಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ ಈ ಮಹಾದೈತ್ಯನ ಆವಿರ್ಭಾವ!

ನಿಜಕ್ಕೂ ನನ್ನ ಕಥೆಯಿಂದ ಎಲ್ಲರೂ ಪಾಠ ಕಲಿಯಬೇಕು. ಸುಖವಿದ್ದಾಗ ಮೆರೆಯಬಾರದು. ಗುರುಹಿರಿಯರನ್ನೂ ಭಗವಂತನನ್ನೂ ಮರೆಯಬಾರದು. ಅಹಂಕಾರಪಟ್ಟರೆ ಏನೇನಾಗಬಹುದೆಂಬುದಕ್ಕೆ ನಾನೇ ನಿದರ್ಶನ…!”

ಇದ್ದಕ್ಕಿದ್ದಂತೆ ದೇವತೆಗಳ ಹಾಹಾಕಾರ, ಅವನ ಯೋಚನಾಲಹರಿಗೆ ಭಂಗ ತಂದಿತು.

ದೇವತೆಗಳಿಗೂ ವೃತ್ರನಿಗೂ ಯುದ್ಧಾರಂಭವಾಗಿತ್ತು. ಎಲ್ಲರ ತಂತಮ್ಮ ದಿವ್ಯಾಸ್ತ್ರಗಳನ್ನು ಬಳಸಿ ಶಕ್ತಿಮೀರಿ ಹೋರಾಡುತ್ತಿದ್ದರೂ ವೃತ್ರನ ಎದುರು ಅವರೆಲ್ಲರೂ ಬೆಂಕಿಯ ಮುಂದಿನ ಪತಂಗಗಳಂತಾಗಿದ್ದರು. ವೃತ್ರನು ಅವರು ಎಸೆದ ಅಸ್ತ್ರಶಸ್ತ್ರಗಳೆಲ್ಲವನ್ನೂ ನುಂಗುತ್ತಾ ಮುಂದೆ ಮುಂದೆ ನುಗ್ಗಿ ಬರುತ್ತಿದ್ದನು.

ಅವನ ದಾಳಿಗೆ ಸಿಕ್ಕಿ ದೇವತೆಗಳು ಹಾಹಾಕಾರ ಮಾಡುತ್ತಿದ್ದರು. ಇಂದ್ರನೇ ಅವರ ನಾಯಕತ್ವ ವಹಿಸಿ ಅವನೊಡನೆ ಹೋರಾಡಿದನು. ಆದರೆ ದೇವತೆಗಳ ಯಾವ ಶಕ್ತಿಯೂ ಪ್ರಯೋಜನವಾಗಲಿಲ್ಲ. ತಮ್ಮ ಬಲತೇಜಗಳನ್ನು ಇನ್ನೂ ಕಳೆದುಕೊಂಡು ಬಹು ವಿಸ್ಮಿತರಾಗಿ ದೇವತೆಗಳು ತಮ್ಮ ಪ್ರಾಣವುಳಿಸಿಕೊಳ್ಳಲು ದಿಕ್ಕು ದಿಕ್ಕುಗಳಿಗೆ ಓಡಿಹೋದರು!!

ವೃತ್ರನಿಂದ ಸೋತುಹೋದ ದೇವತೆಗಳು ಒಂದೆಡೆ ಸೇರಿ, ಇಂಥ ಮಹಾದೈತ್ಯನನ್ನು ಸಂಹರಿಸುವುದಾದರೂ ಹೇಗೆಂದು ಸಮಾಲೋಚಿಸಿದರು; ಕಡೆಗೆ ಇದು ತಮ್ಮಿಂದಾಗದೆಂದು ಬಗೆದು ಆದಿಪುರುಷನಾದ ಶ್ರೀಮನ್ನಾರಾಯಣನ ನೆರವು ಪಡೆಯಬೇಕೆಂದು ನಿರ್ಧರಿಸಿದರು. ಅಂತೆಯೇ ಅವರು ಕ್ಷೀರಸಾಗರಕ್ಕೆ ತೆರಳಿ ಆ ಸರ್ವದೇವೋತ್ತಮ ಪುರುಷನನ್ನು ಸ್ತುತಿಸಿದರು.

“ಜಲಾಗ್ನಿ ವಾಯ್ವಾಕಾಶಭೂಮಿಗಳೆಂಬ ಪಂಚಭೂತಗಳಿಂದ ಉಂಟಾಗಿರುವ ಈ ಮೂರು ಲೋಕಗಳಿಗೂ ಪಾಲಕರಾಗಿರುವ ಬ್ರಹ್ಮನೇ ಆದಿಯಾಗಿ ನಾವೆಲ್ಲ ದೇವತೆಗಳೂ ಭಯಭೀತರಾಗಿ, ಯಾರ ಶಕ್ತಿಗೆ ಅಂತಕನೇ ಅಂಜುವನೋ, ಅಂಥ ದೇವೋತ್ತಮ ಪರಮಪುರುಷನಿಗೆ ಶರಣಾಗಿ ನಮಸ್ಕರಿಸುತ್ತೇವೆ.

ಆ ಭಗವಂತನು ಎಂದಿಗೂ ವಿಸ್ಮಯಗಳಿಗೊಳಗಾಗದೆ ಸಮಚಿತ್ತನೂ, ಪರಿಪೂರ್ಣಕಾಮನೂ, ಪ್ರಶಾಂತನೂ ಆಗಿರುತ್ತಾನೆ. ಇಂಥ ಭಗವಂತನನ್ನು ಬಿಟ್ಟು ಅನ್ಯರನ್ನಾಶ್ರಯಿಸುವವನು ನಾಯಿಯ ಬಾಲವನ್ನು ಹಿಡಿದು ಸಮುದ್ರವನ್ನು ದಾಟಲು ಯತ್ನಿಸುವವನಂತೆ ಮೂರ್ಖನೇ ಆಗಿರುತ್ತಾನೆ.

“ಹಿಂದೆ ಸತ್ಯವ್ರತನೆಂಬ ರಾಜನು ಇಡೀ ಜಗತ್ತಿನ ಜೀವರಾಶಿಗಳನ್ನು ತುಂಬಿದ ದೋಣಿಯೊಂದನ್ನು ಭಗವಂತನ ಅವತಾರವಾದ ಒಂದು ಮಹಾಮತ್ಸ್ಯದ ಕೊಂಬಿಗೆ ಕಟ್ಟಲು, ಆ ಮತ್ಸ್ಯರೂಪೀ ಭಗವಂತನು ಅವನನ್ನು ಪ್ರಳಯ ಜಲಧಿಯಿಂದ ರಕ್ಷಿಸಿದನು.

ಈಗ ವೃತ್ರಭಯದಿಂದ ತೊಳಲಾಡುತ್ತಿರುವ ನಮ್ಮನ್ನೂ ಜಲವಾಸಿಯಾದ ಆ ಆದಿ ಪುರುಷನೇ ರಕ್ಷಿಸಲಿ! ಸೃಷ್ಟಿಯ ಆದಿಯಲ್ಲಿ ಭಯಂಕರವಾದ ಬಿರುಗಾಳಿ ಬೀಸಲು, ಒಬ್ಬನೇ ಇದ್ದ ಬ್ರಹ್ಮದೇವನು ತನ್ನ ಕಮಲಾಸನದಿಂದ ಪ್ರವಾಹ ತುಂಬಿದ ನೀರಿನಲ್ಲಿ ಬೀಳುವುದರಲ್ಲಿದ್ದ…..! ಆಗಲೂ ಭಗವಂತನು ಅವನನ್ನು ಕಾಪಾಡಿದ! ಅದೇ ಭಗವಂತನು ನಮ್ಮನ್ನೂ ಈ ಕರಾಳ ಸ್ಥಿತಿಯಿಂದ ರಕ್ಷಿಸಲಿ!

“ಒಬ್ಬನೇ ಈಶನಾದ ಆ ಭಗವಂತನು ತನ್ನ ಮಾಯೆಯಿಂದಲೇ ನಮ್ಮನ್ನು ಸೃಜಿಸಿದ್ದಾನೆ. ಅವನ ದಯೆಯಿಂದ ನಾವು ಸೃಷ್ಟಿಯನ್ನು ವಿಸ್ತರಿಸುತ್ತೇವೆ! ಆ ಭಗವಂತನು ವಾಸ್ತವವಾಗಿ ನಮ್ಮ ಕಣ್ಮುಂದೆಯೇ ಇದ್ದರೂ ನಾವೆಲ್ಲರೂ ಮಾಯೆಯ ಪ್ರಭಾವದಿಂದ ಪ್ರತ್ಯೇಕ ಪ್ರತ್ಯೇಕವಾಗಿ ಸ್ವತಂತ್ರ ಈಶರೆಂದು ಭ್ರಮಿಸುವುದರಿಂದ ಅವನನ್ನು ಕಾಣಲಾರದಾಗಿದ್ದೇವೆ.

“ನಮ್ಮನ್ನು ಶತ್ರುಗಳಿಂದ ರಕ್ಷಿಸಲು ಆ ಭಗವಂತನು ತನ್ನ ಯೋಗಮಾಯೆಯಿಂದ ದೇವತೆಗಳ ಮಧ್ಯೆ ವಾಮನನಂಥ ರೂಪಗಳನ್ನೂ ಋಷಿಗಳ ಮಧ್ಯೆ ನರನಾರಾಯಣ, ಪರಶುರಾಮರೇ ಮೊದಲಾದ ರೂಪಗಳನ್ನೂ, ಪ್ರಾಣಿಗಳ ನಡುವೆ ಮತ್ಸ್ಯ, ಕೂರ್ಮಾದಿ ರೂಪಗಳನ್ನೂ, ಮನುಷ್ಯರ ನಡುವೆ ರಾಮ, ಕೃಷ್ಣಾದಿ ರೂಪಗಳನ್ನೂ ಸ್ವೀಕರಿಸುತ್ತಾನೆ.

ಯುಗಯುಗದಲ್ಲೂ ಇಂಥ ದಿವ್ಯ ಅವತಾರಗಳನ್ನೆತ್ತಿ ನಮ್ಮನ್ನು ಕಾಪಾಡುವ ಆ ಸರ್ವ ದೇವೋತ್ತಮ ಪುರುಷನು ಈ ಇಡೀ ವಿಶ್ವಕ್ಕೆ ಕಾರಣವಾದ ಮೂಲಪುರುಷ ಮತ್ತು ಅವನ ಪ್ರಕೃತಿಯೆಂಬ ಸ್ತ್ರೀಶಕ್ತಿಯ ರೂಪಗಳಲ್ಲಿದ್ದಾನೆ; ಈ ವಿಶ್ವಕ್ಕಿಂತ ಬೇರೆಯಾಗಿದ್ದೂ ಈ ವಿಶ್ವರೂಪವಾಗಿಯೂ ಇದ್ದಾನೆ. ಸಕಲ ಜೀವಿಗಳ ಅಂತರಾತ್ಮನೂ ಸರ್ವರಿಗೂ ಶರಣ್ಯನೂ ಆದ ಅವನಲ್ಲೇ ಶರಣಾಗುತ್ತೇವೆ. ಅವನೇ ತನ್ನ ಭಕ್ತರಾದ ನಮ್ಮನ್ನು ರಕ್ಷಿಸಿ ನಮಗೆ ಮಂಗಳವನ್ನುಂಟುಮಾಡಲಿ.”

ದೇವತೆಗಳೆಲ್ಲರೂ ಈ ರೀತಿ ಸ್ತುತಿಸಲು, ಅವರ ಸ್ತುತಿಯಿಂದ ಸಂಪ್ರೀತನಾದ ಶ್ರೀಮನ್ನಾರಾಯಣನು ಶಂಖಚಕ್ರಗದಾಧರನಾಗಿ ಪ್ರತ್ಯಕ್ಷನಾದನು. ಶ್ರೀವತ್ಸಕೌಸ್ತುಭಗಳೆರಡಿರದೇ, ಇನ್ನೆಲ್ಲಾ ವಿಧಗಳಲ್ಲೂ ಶ್ರೀಹರಿಯನ್ನೇ ಹೋಲುತ್ತಿದ್ದ ಹದಿನಾರು ಪಾರ್ಷದರಿಂದ ಶ್ರೀಹರಿಯು ಆವೃತನಾಗಿದ್ದನು.

ಶರತ್ಕಾಲದಲ್ಲಿ ಅರಳುವ ಕಮಲಪುಷ್ಪಗಳಂತೆ ಸುಂದರವಾದ ಕಂಗಳನ್ನು ಹೊಂದಿದ್ದು, ತಾಪಗಳನ್ನಾಧರಿಸುವಂತಹ ಕಿರುನಗೆಯಿಂದ ಕೂಡಿದ್ದ ಮಹಾವಿಷ್ಣುವಿನ ಮನಮೋಹಕ ರೂಪವನ್ನು ನೋಡಿ ಆಹ್ಲಾದಗೊಂಡ ದೇವತೆಗಳು ಶ್ರೀಹರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಭಕ್ತಿಪರವಶತೆಯಿಂದ ಮತ್ತೆ ಸ್ತುತಿಸತೊಡಗಿದರು.

“ಹೇ ಭಗವಂತ, ಯಜ್ಞಗಳ ಫಲಗಳನ್ನು ನೀಡುವವನು ನೀನೇ! ಅನಂತರ ಅವನ್ನು ಕಾಲವಶ ಮಾಡುವವನೂ ನೀನೆ! ಅಂಥ ನಿನಗೆ ನಮೋ ನಮಃ. ಸುದರ್ಶನ ಚಕ್ರವನ್ನು ಬಿಡುಗಡೆ ಮಾಡಿ ದೈತ್ಯರನ್ನು ಸಂಹರಿಸುವ ನಿನಗೆ ಬಹುವಿಧವಾದ ದಿವ್ಯ ನಾಮಗಳಿವೆ. ಮೂರು ಲೋಕಗಳನ್ನೂ ಸೃಜಿಸಿ ಅವನ್ನು ಪಾಲಿಸುವ ವಿಧಾತನಾದ ನಿನ್ನ ಪರಮಪದದ ವಿಚಾರ, ಅರ್ವಾಚೀನರಾದ ನಮಗೆ ಸುಲಭವಾಗಿ ಅರಿವಾಗುವುದಿಲ್ಲ.

“ಓ ನಾರಾಯಣ ! ಓ ವಾಸುದೇವ ! ಓ ಭಗವಾನ್ ! ಆದಿಪುರುಷ! ಮಹಾಪುರುಷ ಮಹಾನುಭಾವ ಪರಮಮಂಗಳ ದೇವ ! ಪರಮಕಲ್ಯಾಣ! ಪರಮಕಾರುಣಿಕ ! ಕೇವಲಸ್ವರೂಪ! ಜಗದಾಧಾರ ! ಲೋಕೈಕನಾಥ! ಸರ್ವೇಶ್ವರ! ಲಕ್ಷ್ಮೀನಾಥ ! ನಿನಗೆ ನಮೋ ನಮಃ ! ಪರಮಹಂಸ ಪರಿವ್ರಾಜಕರು ಪರಮ ಆತ್ಮಯೋಗಸಮಾಧಿಯಿಂದ ಮನಸ್ಸನ್ನು ಶುದ್ಧೀಕರಿಸಿಕೊಂಡು ಹೃದಯವನ್ನಾರಿಸಿರುವ ತಮಾಂಧಕಾರವನ್ನು ತೊಡೆದುಹಾಕಿ, ಆನಂದಮಯವಾದ ನಿನ್ನ ದರ್ಶನವನ್ನು ತಮ್ಮ ಹೃದಯಗಹ್ವರಗಳಲ್ಲೇ ಪಡೆಯುತ್ತಾರೆ.

”ಹೇ ಪ್ರಭು! ಭೌತಿಕ ದೇಹವಿರದ ನೀನು, ಭೌತಿಕ ಗುಣಗಳ ಸಂಸ್ಪರ್ಶವಿಲ್ಲದಿದ್ದರೂ, ನೀನು ಮಾತ್ರ ಯಾವುದೇ ವ್ಯತ್ಯಾಸ ಹೊಂದದೇ ಯಾವ ಆಧಾರವೂ ಇಲ್ಲದೇ ನಿನ್ನಿಂದಲೇ ನೀನು ಈ ವಿಶ್ವವನ್ನು ಸೃಜಿಸುವೆ, ಪಾಲಿಸುವೆ, ಮತ್ತು ಸಂಹರಿಸುವೆ! ಈ ನಿನ್ನ ಲೀಲೆಯನ್ನು ಅರಿಯುವುದು ಬಹುಕಷ್ಟ!

ಭಗವಾನ್, ನೀನೂ ಸಾಮಾನ್ಯ ಮನುಷ್ಯರಂತೆ ಗುಣಗಳ ಸಂಸರ್ಗಹೊಂದಿ ದೇಶ, ಕಾಲಗಳ ಪರಿಮಿತಿಯೊಳಗೆ ಸುಕೃತ ದುಷ್ಕೃತಗಳ ಫಲಾಫಲಗಳನ್ನು ಅನುಭವಿಸುವೆಯೋ, ಅಥವಾ ಆತ್ಮಾರಾಮನಾಗಿ, ಸದಾ ಆಧ್ಯಾತ್ಮ ಐಶ್ವರ್ಯಯುಕ್ತನಾಗಿ, ವಿಷಯಸಂಗದೂರನಾಗಿ, ಸರ್ವಕರ್ಮಸಾಕ್ಷಿಯಾಗಿ ಮಾತ್ರ ಇರುವೆಯೋ ಎಂದು ಸಂಶಯವಾಗುತ್ತದೆ ನಮಗೆ !

ಆದರೆ ಈ ವಿರೋಧಗಳು ನಿನ್ನಲ್ಲಿ ನಿಜವಾಗಿ ವಿರೋಧಗಳೇ ಅಲ್ಲ! ನಿನ್ನ ದಿವ್ಯಗುಣಗಳು ಅಪರಿಮಿತ, ನಿನ್ನ ದಿವ್ಯ ಶಕ್ತಿಗಳು ಅಪರಿಮಿತ ಈ ಶಕ್ತಿಗಳ ಮೂಲಕ ಸುಖ, ದುಃಖ, ಮೊದಲಾಗಿ ನೀನು ಏನೇ ಅನುಭವಿಸಿದರೂ ಅಥವಾ ಮಾಡಿದರೂ ಮಾಡದಿದ್ದರೂ ಅದು ನಿನ್ನಲ್ಲಿ ಅವಿಕಾರವಾದ ಆನಂದಸ್ವರೂಪವಾಗಿರುತ್ತದೆ.

ನಿಜವಾಗಿ ಯಾವುದೇ ದ್ವಂದ್ವಗಳಿಲ್ಲದ ನಿನ್ನನ್ನು ಸರಿಯಾಗಿ ಅರಿಯದೇ ಆಧುನಿಕ ವಿದ್ವಾಂಸರು ತಪ್ಪುತಪ್ಪಾಗಿ ವಾದ ಮಾಡುತ್ತಾರೆ. ಹಗ್ಗವು ಕೆಲವರಿಗೆ ಹಾವಂತೆ ಕಂಡರೆ ಕೆಲವರಿಗೆ ನಿಜ ಹಗ್ಗದಂತೆ ಕಾಣುವಂತೆ ನೀನೂ ಕೂಡ ಕೆಲವರಿಗೆ ಭೌತಿಕವಾಗಿಯೂ ನಿನ್ನ ಭಕ್ತರಿಗೆ ನಿಜಸ್ವರೂಪವಾಗಿಯೂ ಕಾಣುವೆ.

ಆದ್ದರಿಂದ ನಿಜವಾಗಿ ನಿನ್ನಲ್ಲಿ ವಿರೋಧಗಳಿಲ್ಲ! ಸಕಲ ವಸ್ತುಗಳಲ್ಲೂ ಇರುವ ಮೂಲವಸ್ತುವು ನೀನೇ; ಎಲ್ಲಕ್ಕೂ ಈಶ್ವರನೂ ನೀನೇ ! ಈ ವಿಶ್ವಕ್ಕೆ ಕಾರಣವಾದ ಪ್ರಕೃತಿಗೂ ಮೂಲಕಾರಣನು ನೀನೇ ! ಎಲ್ಲ ವಸ್ತುಗಳಲ್ಲೂ ಪರಮಾತ್ಮನಾಗಿ ನೀನಿರುವುದರಿಂದ ಪ್ರಾಕೃತಿಕ ಗುಣಗಳನ್ನು ತೆಗೆದುಬಿಟ್ಟರೆ ಉಳಿಯುವ ಪರಮಸತ್ಯ ನೀನೊಬ್ಬನೇ !

ಹೇ ಮಧುಸೂಧನ, ಅಂಥ ನಿನ್ನ ಮಧುರ ಲೀಲಾಮೃತಾಬ್ಧಿಯ ಒಂದು ಹನಿಯನ್ನು ಆಸ್ವಾದಿಸಿದರೂ, ಆಭಾಸವಾದ ವಿಷಯ ಸುಖಲೇಶವನ್ನು ಜನರು ಮರೆತುಬಿಡುತ್ತಾರೆ ! ನಿನ್ನನ್ನೇ ಪರಮಾತ್ಮನನ್ನಾಗಿ, ಪರಮಾಪ್ತರನ್ನಾಗಿ ಸ್ವೀಕರಿಸುವ ಈ ಸಾಧುಗಳು ನಿಜಕ್ಕೂ ಸಕಲ ಜೀವಿಗಳಿಗೂ ಮಿತ್ರರಾಗಿರುತ್ತಾರೆ! ಜೀವನದ ನಿಜವಾದ ಗುರಿಯನ್ನು ಅರಿತಿರುವ ಅವರು ಪುನಃ ಈ ಸಂಸಾರಕ್ಕೆ ಹಿಂದಿರುಗಲು ಇಚ್ಛಿಸುವುದಿಲ್ಲ.

“ಹೇ ತ್ರಿವಿಕ್ರಮ! ಈ ಮೂರು ಲೋಕಗಳೂ ನಿನ್ನಲ್ಲೇ ನೆಲೆಸಿರುವೆ! ಈ ತ್ರಿಲೋಕಗಳನ್ನೂ ನೋಡುತ್ತಿರುವ ತ್ರಿನಯನನೇ, ಈ ತ್ರಿಲೋಕಗಳಿಗೂ ನೀನು ಮನಮೋಹಕರೂಪಿಯಾಗಿರುವೆ!

ಹೇ ಪ್ರಭು ! ಇಂತಹ ನೀನು, ದುಷ್ಟದಾನವರು ಅಭ್ಯುದಯ ಹೊಂದಿದಾಗ ಸುರನಂತೆಯೂ, ಶ್ರೀರಾಮನಂಥ ನರನಂತೆಯೂ, ಜಲಚರ ಮತ್ಸ್ಯದಂತೆಯೂ, ಕೂರ್ಮ ವರಾಹಗಳಂಥ ಪ್ರಾಣಿಗಳಂತೆಯೂ, ನರ-ಪಶು ಮಿಶ್ರರೂಪದ ನರಸಿಂಹನಂತೆಯೂ ಹೀಗೆ ವಿವಿಧ ರೂಪಗಳಲ್ಲಿ ಅವತರಿಸಿ ಅವರಿಗೆ ದಂಡನೆ ನೀಡಲು ಅವರನ್ನು ನಿಗ್ರಹಿಸಿರುವೆ! ಆದ್ದರಿಂದ ಈಗಲೂ ನಿನಗೆ ಸರಿಕಂಡರೆ ಈ ವೃತ್ರಾಸುರರನ್ನು ನಿಗ್ರಹಿಸು.

‘ಓ ಪಿತಾಮಹ! ನಿನ್ನ ಚರಣಾರವಿಂದಗಳಿಗೆ ಅನವರತ ಶರಣಾಗತರಾಗಿರುವ ನಮ್ಮ ಮನಗಳು ಆ ಪಾದಪದ್ಮಗಳಿಗೆ ಪ್ರೇಮವೆಂಬ ಸಂಕೋಲೆಗಳಿಂದ ಬದ್ಧವಾಗಿವೆ! ಓ ಶ್ರೀಹರಿ, ದಯವಿಟ್ಟು ನೀನು ಅವತಾರವೆತ್ತು ! ನಮ್ಮನ್ನು ನಿನ್ನ ನಿತ್ಯ ಸೇವಕರೆಂದು ಪರಿಗಣಿಸಿ ನಮ್ಮಲ್ಲಿ ಅನುಕಂಪ ತೋರು!

ಸುಂದರ ನಗೆಯಿಂದ ಕೂಡಿರುವ ನಿನ್ನ ಸ್ನೇಹಪೂರ್ಣ ನೋಟ ಬೀರಿ ತಂಪುಂಟುಮಾಡುತ್ತಾ, ಮಧುರಮಯವಾದ ನುಡಿಗಳನ್ನು ನಿನ್ನ ಮುಖದಿಂದ ಸುರಿಯುತ್ತಾ ನಮ್ಮ ಹೃದಯಗಳಲ್ಲುಂಟಾಗಿರುವ ಆತಂಕದುರಿಯನ್ನಾಧರಿಸು.

”ಹೇ ಭಗವಂತ ! ಬೆಂಕಿಯ ಕಿಡಿಗಳು ಇಡೀ ಬೆ೦ಕಿಯ ಕಾರ್ಯಾರ್ಥವನ್ನಾಚರಿಸಲಾಗದಂತೆ, ನಿನ್ನ ಅಂಶಗಳಾದ ನಾವು ನಮ್ಮ ಅರ್ಥವಿಶೇಷವನ್ನು ನಿನ್ನ ಮುಂದೆ ವಿಜ್ಞಾಪನೆ ಮಾಡಲಾರದಾಗಿದ್ದೇವೆ! ಆದರೆ ಎಲ್ಲೆಲ್ಲೂ ಇರುವ ಪರಬ್ರಹ್ಮನೂ, ಎಲ್ಲರ ಹೃದಯಗಳಲ್ಲೂ ಇರುವ ಪರಮಾತ್ಮನೂ, ಪ್ರಕೃತಿಯ ರೂಪದಲ್ಲೂ ಇರುವ ನೀನೇ ಅದನ್ನು ಬಲ್ಲೆ!

ಪ್ರಭು, ಸರ್ವಾಂತರ್ಯಾಮಿಯಾದ ನೀನು, ನಾವೇಕೆ ನಿನ್ನ ಚರಣ ಕಮಲಗಳನ್ನಾಶ್ರಯಿಸಿರುವೆವೆಂದು ಬಲ್ಲೆ! ನಿನ್ನ ಚರಣ ಕಮಲಗಳು ಸಕಲ ಸಂಸಾರದುರಿತಗಳನ್ನು ನಾಶಪಡಿಸುತ್ತವೆ! ನಮ್ಮ ಸಕಲ ಕಾಮನೆಗಳನ್ನೂ ನಿನ್ನ ಚರಣಕಮಲಗಳು ಪೂರೈಸುತ್ತವೆ!

ಆದ್ದರಿಂದ ಹೇ ಈಶನೇ, ಮೂರು ಲೋಕಗಳನ್ನೂ ನುಂಗಿಹಾಕುತ್ತಿರುವ ಆ ವೃತ್ರಾಸುರನನ್ನು ಸಂಹರಿಸು! ಹೇ ಕೃಷ್ಣ, ಅವನು ಈಗಾಗಲೇ ನಮ್ಮ ಸಕಲ ಆಯುಧಗಳನ್ನೂ ಬಲತೇಜಸ್ಸುಗಳನ್ನೂ ನುಂಗಿಹಾಕಿದ್ದಾನೆ! ಆದ್ದರಿಂದ ಅವರನ್ನು ಬೇಗನೆ ಸಂಹರಿಸು!

“ಎಲ್ಲರ ಹೃದಯಗಹ್ವರಗಳಲ್ಲಿ ನೆಲೆಸಿರುವ ಸರ್ವಕರ್ಮಸಾಕ್ಷಿಯಾದ ಹಂಸರೂಪಿ ಶ್ರೀ ಭಗವಂತನಿಗೆ ನಮೋ ನಮಃ ! ಉಜ್ವಲ ಯಶಸ್ಸುಳ್ಳ, ಆದ್ಯಂತಗಳಿಲ್ಲದ, ನಿಜಭಕ್ತರ ಅರಿವಿಗೆ ಮಾತ್ರ ನಿಲುಕುವಂತಹ ಅಂತಿಮ ಗುರಿಯಾದ ಶ್ರೀಹರಿಗೆ, ಶ್ರೀಕೃಷ್ಣನಿಗೆ ನಮೋ ನಮಃ !”

ದೇವತೆಗಳು ಸರ್ವದೇವೋತ್ತಮ ಪುರುಷನಿಗೆ ಹೀಗೆ ಪ್ರಾರ್ಥನೆಗಳನ್ನು ಸಲ್ಲಿಸಿದಾಗ, ದಯಾಮಯನಾದ ಶ್ರೀ ಹರಿಯು ಅದೆಲ್ಲವನ್ನೂ ಆದರದಿಂದ ಕೇಳಿ ಸುಪ್ರೀತನಾಗಿ ಅವರಿಗೆ ಹೇಳಿದನು, “ಓ ಸುರಶ್ರೇಷ್ಠರೇ ! ನನಗೆ ಸಂಬಂಧಿಸಿದ ಅಧ್ಯಾತ್ಮವಿದ್ಯೆಯಿಂದ ಕೂಡಿರುವ ನಿಮ್ಮ ಪ್ರಾರ್ಥನೆಗಳಿಂದ ನಾನು ಸುಪ್ರೀತನಾಗಿದ್ದೇನೆ.

ಇಂಥ ಪ್ರಾರ್ಥನೆಗಳಿಂದ ಐಶ್ವರ್ಯಕ್ಕೆ ಸಮವಾದ ನನ್ನ ಸ್ಮೃತಿಯೂ ನನ್ನಲ್ಲಿ ಭಕ್ತಿಯೂ ಉಂಟಾಗುತ್ತದೆ ! ಹೇ ಬುದ್ಧಿಶಾಲಿ ದೇವತೆಗಳೇ ! ನಾನು ಪ್ರೀತನಾದರೆ ಯಾವುದು ತಾನೇ ದುರ್ಲಭವಾಗಿರುತ್ತದೆ?! ಯಾವುದೂ ಇಲ್ಲ! ಆದರೂ, ತತ್ತ್ವವಿದರಾದ ನನ್ನ ಏಕಾಂತಭಕ್ತರು ನನ್ನ ಭಕ್ತಿಯನ್ನಲ್ಲದೇ ಬೇರೇನನ್ನೂ ಬೇಡುವುದಿಲ್ಲ!

ಕೃಪಣನಾದವನು ನಿಜವಾದ ಶ್ರೇಯಸ್ಸನ್ನು ತಿಳಿಯದೇ, ತ್ರಿಗುಣಗಳ ಸಂಗದಿಂದ ಪ್ರೇರಿತನಾಗಿ ಭೌತಿಕ ಸುಖವನ್ನೇ ಅಪೇಕ್ಷಿಸಿದರೆ, ಅದನ್ನು ಕೊಡುವುದೂ ಮೂರ್ಖತನವಾಗುತ್ತದೆ! ಒಬ್ಬ ಅನುಭವಸ್ಥ ವೈದ್ಯನು ಹೇಗೆ ರೋಗಿಯು ಕೇಳಿದರೂ ಅಪಥ್ಯವನ್ನು ಬೋಧಿಸುವುದಿಲ್ಲವೋ, ಹಾಗೆಯೇ ನಿಜ ಶ್ರೇಯಸ್ಸನ್ನು ಅರಿತಿರುವ ಒಬ್ಬ ವಿದ್ವಾಂಸನು ಅರಿಯದ ವ್ಯಕ್ತಿಗೆ ಕಾಮ್ಯಕರ್ಮಗಳನ್ನು ಬೋಧಿಸುವುದಿಲ್ಲ. (ಭಕ್ತಿ ಸೇವೆ ಮಾಡಲು ಬೋಧಿಸುತ್ತಾನೆ)

”ಹೇ ದೇವೆಂದ್ರ ! ನಿಮ್ಮೆಲ್ಲರಿಗೂ ಮಂಗಳವಾಗಲಿ ! ನೀವೆಲ್ಲರೂ ಬೇಗನೆ ದಧೀಚಿ ಮಹರ್ಷಿಗಳ ಬಳಿಗೆ ಹೋಗಿ ವಿದ್ಯೆ, ತಪಸ್ಸುಗಳ ಸಾರದಿಂದ ಬಹಳ ಬಲಿಷ್ಠವಾಗಿರುವ ಅವರ ದೇಹವನ್ನೇ ಯಾಚಿಸಿ! ಹಿಂದೊಮ್ಮೆ ಅಶ್ವಿನೀ ದೇವತೆಗಳು ದಧೀಚಿಗಳನ್ನು ಬ್ರಹ್ಮವಿದ್ಯೆಗಾಗಿ ಯಾಚಿಸಿದಾಗ ಇಂದ್ರನು ಅಶ್ವಿನಿ ದೇವತೆಗಳಿಗೆ ಹಾಗೆ ಉಪದೇಶಿಸಿದರೆ ದಧೀಚಿಗಳ ಶಿರಚ್ಛೇದನ ಮಾಡುವುದಾಗಿ ಬೆದರಿಸಿದ!

ಆದರೆ ಜಾಣ ವೈದ್ಯರಾದ ಅಶ್ವಿನಿಗಳು ಮೊದಲೇ ದಧೀಚಿಗಳ ಶಿರಚ್ಛೇದನ ಮಾಡಿ ಅವರಿಗೆ ಅಶ್ವದ ಶಿರವನ್ನು ಜೋಡಿಸಿದರು. ಅವರು ಅಶ್ವದ ಶಿರದಿಂದಲೇ ಬೋಧಿಸಲು ಆ ಮಂತ್ರಗಳಿಗೆ ಆಶ್ವಶಿರ ಎಂದೇ ಹೆಸರಾಯಿತು ! ಆದರೆ ಆ ಆಶ್ವಶಿರವು ಛಿದ್ರವಾಗಲು, ಅಶ್ವಿನಿಗಳು ಪುನಃ ದಧೀಚಿಗಳ ಶಿರವನ್ನೇ ಅವರಿಗೆ ಜೋಡಿಸಿ ಬದುಕಿಸಿದರು !

ಈಗ ಈ ಅಶ್ವಿನೀ ದೇವತೆಗಳೇ ನಿಮಗಾಗಿ ಅವರ ದೇಹವನ್ನು ಬೇಡಿದರೆ ಧರ್ಮಜ್ಞರಾದ ಅವರು ಪ್ರೀತಿಯಿಂದ ತಮ್ಮ ದೇಹವನ್ನು ದಾನ ಮಾಡುತ್ತಾರೆ. ಅಥರ್ವರ ಪುತ್ರರಾದ ಈ ದಧೀಚಿಗಳೇ ನಾರಾಯಣಕವಚವೆಂಬ ಮಹಾಮಂತ್ರವನ್ನು ತ್ವಷ್ಟನಿಗೆ ಬೋಧಿಸಿದರು.

ತ್ವಷ್ಟವಿನಿಂದ ಅದು ಅವನ ಮಗ ವಿಶ್ವರೂಪನಿಗೂ ವಿಶ್ವರೂಪನಿಂದ ಇಂದ್ರನಿಗೂ ಬಂದಿದೆ. ಇಂಥ ಮಹಾಮಹಿಮರ ದೇಹವನ್ನು ಯಾಚಿಸಿ ! ಆಗ ವಿಶ್ವಕರ್ಮನು ಅವರ ಮೂಳೆಗಳಿಂದ ವಜ್ರಾಯುಧವೆಂಬ ಶ್ರೇಷ್ಠ ಆಯುಧವನ್ನು ರಚಿಸಿ ಕೊಡುತ್ತಾನೆ. ಈ ಮಹಾ ಆಯುಧದಲ್ಲಿ ನನ್ನ ಶಕ್ತಿಯನ್ನೂ ತುಂಬುತ್ತೇನೆ!

ಇದರಿಂದ ವೃತ್ರಾಸುರನನ್ನು ಖಂಡಿತವಾಗಿಯೂ ಸಂಹರಿಸಬಹುದು ! ಅವನನ್ನು ಸಂಹರಿಸಿದ ಬಳಿಕ, ನೀವು ಕಳೆದುಕೊಂಡಿದ್ದ ಆಯುಧ, ಐಶ್ವರ್ಯ ತೇಜೋಬಲಗಳನ್ನು ಮರಳಿ ಪಡೆಯುವಿರಿ! ಮೂರು ಲೋಕಗಳನ್ನು ನಾಶಪಡಿಸುವ ಶಕ್ತಿಯಿದ್ದರೂ ವೃತ್ರನು ಹಾಗೆ ಮಾಡುವುದಿಲ್ಲ; ಏಕೆಂದರೆ ಅವನೂ ನನ್ನ ಭಕ್ತ ! ಇನ್ನು ನೀವು ಹೊರಡಿ ! ನಿಮಗೆ ಮಂಗಳವಾಗಲಿ!”

ಹೀಗೆ ಹೇಳಿ ದೇವತೆಗಳು ನೋಡನೋಡುತ್ತಿರುವಂತೆಯೇ ಶ್ರೀಹರಿಯು ಅದೃಶ್ಯನಾದನು.

ಶ್ರೀಹರಿಯ ಮಧುರವಾದ ಮಾತುಗಳಿಂದ ಹರ್ಷಿತರಾದ ದೇವತೆಗಳು ದಧೀಚಿ ಮಹರ್ಷಿಗಳ ಆಶ್ರಮದ ಕಡೆಗೆ ಹೆಜ್ಜೆ ಹಾಕತೊಡಗಿದರು.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi