ಆಲಾರನಾಥ ಮೆಚ್ಚಿದ ಬಾಲಕನ ಭಕ್ತಿ

ಮಕ್ಕಳೇ, ಒಡಿಶಾ ರಾಜ್ಯದ ಹೆಸರು ನಿಮಗೆ ತಿಳಿದಿದೆ. ಅಲ್ಲಿನ ಸುಪ್ರಸಿದ್ಧ ಪುರಿ ಜಗನ್ನಾಥ ಮಂದಿರದ ಬಗೆಗೂ ನೀವು ಅರಿತುಕೊಂಡಿರುತ್ತೀರಿ. ಈ ಜಗನ್ನಾಥ ಪುರಿಗೆ ಸುಮಾರು 25 ಕಿ.ಮೀ. ದೂರದಲ್ಲಿ ಬ್ರಹ್ಮಗಿರಿ ಎಂಬ ಗ್ರಾಮವಿದೆ. ತೆಂಗಿನ ಮರ ಮತ್ತು ಇತರ ಗಿಡಮರಗಳಿಂದ ಆವೃತವಾದ ಈ ಸ್ಥಳವು ಹಸಿರಿನಿಂದ ಕಂಗೊಳಿಸುತ್ತಿದೆ. ಇಲ್ಲಿ ಒಂದು ವಿಷ್ಣು ಮಂದಿರವಿದೆ. ಮಂದಿರದಲ್ಲಿ ಭಗವದ್ಭಕ್ತರಾದ ಆಳ್ವಾರರು ದೇವೋತ್ತಮನನ್ನು ಪೂಜಿಸಿದ್ದರಿಂದ ಆ ದೇವರನ್ನು ಆಳ್ವಾರನಾಥ ಅಥವಾ ಆಲಾರನಾಥ ಎಂದು ಕರೆಯುತ್ತಾರೆ.

ಈ ಗ್ರಾಮದಲ್ಲಿ ಶ್ರೀಕೇತನ ಎಂಬ ಬ್ರಾಹ್ಮಣನು ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಇದ್ದ. ಶ್ರೀ ಆಲಾರನಾಥನ ಸೇವೆಯಲ್ಲಿ ಅವನು ನಿರತನಾಗಿದ್ದ. ಹೀಗಿರಲಾಗಿ ಬ್ರಾಹ್ಮಣನು ಕೆಲಸದ ನಿಮಿತ್ತ ಪಕ್ಕದ ಹಳ್ಳಿಗೆ ಹೋಗಬೇಕಾಯಿತು. ದೇವರ ಸೇವೆಗೆ ಅಡ್ಡಿಯಾಗಬಾರದಲ್ಲವೇ? ಆದುದರಿಂದ ಅವನು ತನ್ನ ಮಗ ಮಧುವನ್ನು ಕರೆದು ಹೇಳಿದ, “ಭಗವಂತನಿಗೆ ನೈವೇದ್ಯ ನೀಡಬೇಕು. ಅದನ್ನು ಅರ್ಪಿಸುವ ಮುನ್ನ ನಿನ್ನ ಕೈ ಮತ್ತು ಕಾಲನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡ. ಆಲಾರನಾಥನ ಮುಂದೆ ನೈವೇದ್ಯ ಇಟ್ಟು ಅದನ್ನು ಸ್ವೀಕರಿಸುವಂತೆ ಪ್ರಾರ್ಥಿಸು. ಅರ್ಥವಾಯ್ತೆ?”

“ಹಾ, ಎಲ್ಲಾ ಗೊತ್ತಾಯ್ತು. ನಾನು ನೀವು ಹೇಳಿದಂತೆ ಮಾಡುವೆ”, ಎಂದು ಮಧು ನುಡಿದ.

ಮರುದಿನ ಮಧುವಿನ ತಾಯಿ ಭಗವಂತನಿಗೆ ನೈವೇದ್ಯ ನೀಡಲು ಆ ದಿನ ಮಾಡಿದ್ದ ಆಹಾರವನ್ನು ಎಲೆಯಲ್ಲಿ ಹಾಕಿ ಮಗನಿಗೆ ಕೊಟ್ಟಳು. ತನ್ನ ತಂದೆ ತಿಳಿಸಿದಂತೆ ಮಧು ಬಾಳೆಯ ಎಲೆಯನ್ನು ಭಗವಂತನ ಮುಂದಿಟ್ಟ. ಅವನು ಬಿಸಿ ಅನ್ನ, ಬೇಳೆ, ಸಬ್ಜಿ ಮತ್ತು ಖೀರ್‌ ಅರ್ಪಿಸಿದ. ಹೊಸ ಮಡಕೆಯಲ್ಲಿ ನೀರು ಇಟ್ಟ. ಅವುಗಳ ಮೇಲೆ ತುಳಸಿ ಎಲೆಯನ್ನು ಇರಿಸಿ ಪ್ರಾರ್ಥಿಸಿದ, “ನನ್ನ ಪ್ರೀತಿಯ ಭಗವಂತನೇ, ನಾನು ಪುಟ್ಟ ಹುಡುಗ. ನಿನಗೆ ಹೇಗೆ ಪ್ರಾರ್ಥನೆ ಸಲ್ಲಿಸಬೇಕೆಂಬುದೇ ತಿಳಿಯದು.  ದಯೆಯಿಟ್ಟು ಬಂದು ಊಟ ಮಾಡು.” ಮಧು ನಿಮ್ಮಂತೆ ಚಿಕ್ಕ ಹುಡುಗ. ಅವನಿಗೂ ನಿಮ್ಮಂತೆ ಆಟದ ಗೀಳು. ಅವನು ದೇವರ ಗರ್ಭಗುಡಿಯ ಬಾಗಿಲು ಹಾಕಿ ಆಡಲು ಓಡಿದ.

ಸ್ವಲ್ಪ ಸಮಯದ ಅನಂತರ ಅವನು ದೇವರ ಕೋಣೆಗೆ ಬಂದು ನೋಡಿದ. ಅವನಿಗೆ  ಗಾಬರಿಯಾಯಿತು. ಏಕೆಂದರೆ ಅವನು ಇಟ್ಟಿದ್ದ ಆಹಾರ ಹಾಗೇ ಇತ್ತು! ದೇವರು ಮುಟ್ಟಿರಲಿಲ್ಲ!  “ನನ್ನ ಪ್ರೀತಿಯ ದೇವರೇ, ನೀನು ಇದನ್ನು ಸ್ವೀಕರಿಸಬೇಕಲ್ಲವೇ? ದಯೆಯಿಟ್ಟು ಸೇವಿಸು…”, ಹೀಗೆಂದು ಹೇಳಿ ಮಧು ಮತ್ತೆ ಆಟವಾಡಲು ತನ್ನ ಸ್ನೇಹಿತರತ್ತ ಓಡಿದ.

ಪುನಃ ಮಧು ಬಂದು ನೋಡಿದ. ಆಗಲೂ ನೈವೇದ್ಯ ಹಾಗೇ ಇತ್ತು. ಮಧುವಿಗೆ ಅಳು ಬಂದಿತು. ಅವನು ಭಗವಂತನನ್ನು ಬೇಡಿಕೊಳ್ಳಲಾರಂಭಿಸಿದ, “ದಯೆಯಿಟ್ಟು ಇದನ್ನು ಸ್ವೀಕರಿಸು. ನನ್ನ ಅಪ್ಪನಿಗೆ ತಿಳಿದರೆ ಅವನಿಗೆ ತುಂಬ ಕೋಪ ಬರುತ್ತದೆ. ನಾನು ಏನಾದರೂ ತಪ್ಪು ಮಾಡಿದ್ದರೆ ನನ್ನನ್ನು ಕ್ಷಮಿಸು. ಆದರೆ, ಆಹಾರ ಸ್ವೀಕರಿಸು…” ಅವನು ಮತ್ತೆ ಆಡಲು ಓಡಿದ.

ಈ ಬಾರಿ ಮಧು ವಾಪಸು ಬಂದಾಗ ಎಲೆ ಖಾಲಿಯಾಗಿತ್ತು!  ಅವನಿಗೆ ಖುಷಿ. ಪುನಃ ಆಡಲು ಹೋದ. ಆಟದ ಅನಂತರ ಮನೆ ಒಳಗೆ ಬಂದ ಮಧುವನ್ನು ಅವನ ತಾಯಿ ಕೇಳಿದಳು, “ಮಧು, ಪ್ರಸಾದವೇನಾಯ್ತು?” ಅವನು ಖಾಲಿ ಎಲೆಯನ್ನು ತಂದು ತಾಯಿಗೆ ತೋರಿಸಿ ಹೇಳಿದ, “ಅಮ್ಮಾ… ಆಲಾರನಾಥ ಎಲ್ಲವನ್ನೂ ಸೇವಿಸಿದ್ದಾನೆ!”

ಮೂರು ದಿನ ಹೀಗೆ ನಡೆಯಿತು. ನಾಲ್ಕನೆಯ ದಿನ ಮಧುವಿನ ತಂದೆ, ಶ್ರೀಕೇತನ ವಾಪಸು ಬಂದನು. ಮಧುವಿನ ತಾಯಿಯಿಂದ ಅವನಿಗೆ ಎಲ್ಲ ತಿಳಿಯಿತು. ಅಚ್ಚರಿಗೊಂಡ ಅವನು ತಮ್ಮ ಮಗನನ್ನು ಕರೆದನು, “ಮಧು, ಇದೇನಾಗುತ್ತಿದೆ? ಆಲಾರನಾಥನ ಪ್ರಸಾದ ಎಲ್ಲಿ?” “ಅಪ್ಪ, ಆಲಾರನಾಥ ಅದನ್ನು ಸೇವಿಸಿಬಿಟ್ಟ. ನೀವು ಹೇಳಿಕೊಟ್ಟಂತೆ ನಾನು ಮಾಡಿದೆ.” ಅವನಿಗೆ ನಂಬಲಾಗಲಿಲ್ಲ. ಅವನು ಜೋರಾಗಿ ಹೇಳಿದ, “ಇದು ಹೇಗೆ ಸಾಧ್ಯ? ನಾನು ಇದನ್ನು ಖುದ್ದು ಪರಿಶೀಲಿಸುವೆ.”

ಮರು ದಿನ ಶ್ರೀಕೇತನ ಕಂಬದ ಹಿಂದೆ ಬಚ್ಚಿಟ್ಟುಕೊಂಡ. ಅವನ ಮಗ, ಮಧು ಅಲ್ಲಿಗೆ ಬಂದು ಬಿಸಿ ಅನ್ನ, ಬೇಳೆ, ಸಬ್ಜಿ, ಖೀರ್‌, ನೀರು ಎಲ್ಲವನ್ನೂ ದೇವರ ಮುಂದೆ ಇಟ್ಟು ಎಂದಿನಂತೆ ಪ್ರಾರ್ಥನೆ ಸಲ್ಲಿಸಿದ, “ನನ್ನ ದೇವರೇ, ಬಾ, ಬಂದು ನೈವೇದ್ಯ ಸ್ವೀಕರಿಸು.” ಅನಂತರ ಮಧು ಬಾಗಿಲು ಮುಚ್ಚಿ ಹೊರಗೆ ಹೋದ. ಭಗವಂತನು ಪ್ರತ್ಯಕ್ಷನಾದ ಮತ್ತು ಬಿಸಿ ಖೀರ್‌ ಇದ್ದ ದೊನ್ನೆ ತೆಗೆದುಕೊಳ್ಳಲು ಮುಂದಾದ. ಆಗ ಶ್ರೀಕೇತನ ಭಗವಂತನ ಮೇಲೆರಗಿ ಕೈ ಹಿಡಿದುಕೊಂಡ. ಈ ಗೊಂದಲದಲ್ಲಿ ಬಿಸಿ ಖೀರು ಭಗವಂತನ ಕೈ ಮೇಲೆ ಹರಿಯಿತು. “ದೇವರೇ, ಇದೇನಿದು?

ವಿಗ್ರಹ  ಆಹಾರ ಸೇವಿಸುವುದನ್ನು ಯಾರಾದರೂ ಕೇಳಿದ್ದಾರೆಯೇ? ನೀನು ಎಲ್ಲವನ್ನೂ ಸೇವಿಸಿದರೆ, ನಾವು ಹೇಗೆ ಬದುಕುವುದು?” ಗದ್ದಲ ಕೇಳಿ ಮಧು ಅಲ್ಲಿಗೆ ಬಂದ. ತನ್ನ ತಂದೆ ಭಗವಂತನ ಬಳಿ ವಾದಿಸುತ್ತಿರುವುದನ್ನು ಕಂಡ. ದೇವರನ್ನು ನೋಡಿ ತನ್ನ ಪ್ರಣಾಮ ಸಲ್ಲಿಸಿದ. ಭಗವಂತನೆಂದ, “ಬ್ರಾಹ್ಮಣನೇ, ಶ್ರದ್ಧಾ ಭಕ್ತಿ ಇಲ್ಲದವರಿಂದ ನಾನು ಏನೂ ಸ್ವೀಕರಿಸುವುದಿಲ್ಲ. ನಾನು ಮಧು ನೀಡಿದ್ದನ್ನು ಸ್ವೀಕರಿಸಿದೆ. ಏಕೆಂದರೆ ಅವನು ತುಂಬ ಪ್ರೀತಿಯಿಂದ ನನಗೆ ಅರ್ಪಿಸಿದ.” ಇಷ್ಟು ಹೇಳಿ ಭಗವಂತ ಅದೃಶ್ಯನಾದ.

ನೋಡಿದಿರಾ, ಬಾಲಕನ ಭಕ್ತಿ. ಭಗವಂತನಿಗೆ ಭಕ್ತಿ ಮತ್ತು ಪ್ರೀತಿಯಿಂದ ನೀರು ಕೊಟ್ಟರೂ ಅವನು ಅದನ್ನು ಸ್ವೀಕರಿಸುತ್ತಾನೆ.

ಮಕ್ಕಳೇ, ನೀವೂ ಆಲಾರನಾಥ ಮಂದಿರಕ್ಕೆ ಹೋಗಿ ಬನ್ನಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi