ಆದರ್ಶ ದಂಪತಿ

ಕರ್ದಮ ದೇವಹೂತಿ ಪ್ರಸಂಗ

ಸರಸ್ವತೀ ನದಿಯ ಪುಣ್ಯತೀರ. ಪ್ರಶಾಂತವಾಗಿಯೂ ರಮಣೀಯವಾಗಿಯೂ ಕಂಗೊಳಿಸುವ ದಿವ್ಯತಾಣ! ಪುಷ್ಪಾಭರಣಗಳಿಂದಲೂ ಲತೆಗಳ ಆಲಿಂಗನದಿಂದಲೂ ಅಲಂಕೃತಗೊಂಡು ತಂಪಾದ ನೆರಳನ್ನೂ ಹಿತವಾದ ತಂಗಾಳಿಯನ್ನೂ ನೀಡುವ ಕದಂಬ, ಚಂಪಕ, ಅಶೋಕ, ಕರಂಜ, ಬಕುಲ, ಆಸನ, ಕುಂದ, ಮಂದಾರ, ಕುಟಜ, ಚೂತ, ಮೊದಲಾದ ಸುಂದರ ವೃಕ್ಷಗಳಿರುವ ರಮ್ಯತಾಣ! ಸರ್ವಋತುಗಳ ಫಲಗಳಿಂದಲೂ ಸದಾ ಪರಿಪ್ಲುತವಾದ ಆ ವೃಕ್ಷಗಳ ಆಸರೆ ಪಡೆದು ಪ್ರಾಣಿಪಕ್ಷಿಗಳು ಧನ್ಯತೆಯಿಂದ ಮೆರೆಯುವ ಸ್ಥಳ! ಮಧುಪಾನದಿಂದ ಮತ್ತೇರಿದ ಭ್ರಮರಗಳ ಝೇಂಕಾರ, ಚೂತರಸಸವಿಯನ್ನುಂಡು ಹಾಡುವ ಕೋಗಿಲೆಗಳ ಇಂಚರ, ಸೌಂದರ್ಯಖನಿಗಳಂತಿದ್ದ ಮಯೂರಗಳ ನರ್ತನ, ಪ್ರೇಮರಸವನ್ನು ಪಸರಿಸುವ ಹಂಸ, ಕಾರಂಡಕ, ಕುರರ, ಸಾರಸ, ಚಕ್ರವಾಕ, ಚಕೋರಗಳ ಕ್ರೀಡಾವಿಲಾಸ, ಹರಿಣಗಳ ಜಿಗಿತ, ಕಸ್ತೂರಿಮೃಗಗಳ ಶೃಂಗಾರ, ಮರ್ಕಟಗಳ ಹಾಸ್ಯ, ಗಜಗಳ ಗೀಳುವಿಕೆ, ಸಿಂಹಗಳ ಗರ್ಜನೆಗಳಿಂದ ಸ್ವರ್ಗಸಮವೆನಿಸುವ ಸುಂದರಪ್ರದೇಶ! ಹಸಿರು ವನರಾಜಿಯಿಂದ ಶೋಭಿಸುವ ಮನೋಹರ ರಸತಾಣ! ಭಗವಂತನ ಕಲಾತ್ಮಕ ಕುಂಚದಿಂದ ರೂಪುಗೊಂಡ ಅನುಪಮ ತಾಣ!

ಅದು ಕೃತಯುಗದ ಕಾಲ.

ಆ ಸುಂದರ ಸ್ಥಳದಲ್ಲಿ ಆಶ್ರಮವನ್ನು ನಿರ್ಮಿಸಿಕೊಂಡು ಋಷಿಯೋರ್ವನು ತಪಸ್ಸಿಗೆ ಕುಳಿತಿದ್ದ. ಜಟಾಜೂಟಗಳನ್ನು ಧರಿಸಿ, ನಿದ್ರಾಹಾರಗಳನ್ನೂ ನಿರ್ಲಕ್ಷಿಸಿ, ಕ್ರಮೇಣವಾಗಿ ಇಂದ್ರಿಯಗಳನ್ನು ನಿಗ್ರಹಿಸುತ್ತಾ ಭಕ್ತಿಯೋಗವನ್ನಾಶ್ರಯಿಸಿ ಹರಿಧ್ಯಾನದಲ್ಲಿ ಅವನು ಸಮಾಧಿಸ್ಥನಾದ. ಅವನ ತಪಸ್ಸು ಹತ್ತು ಸಾವಿರ ವರ್ಷಗಳ ಕಾಲ ಮುಂದುವರಿಯಿತು!

ಯಾರು ಆ ಮಹರ್ಷಿ?

ಅವನು ಕರ್ದಮ ಪ್ರಜಾಪತಿ. ಬ್ರಹ್ಮದೇವನು ಸೃಷ್ಟಿಕಾರ್ಯವನ್ನು ಆರಂಭಿಸಿದಾಗ, ಅವನ ನೆರಳಿನಿಂದ ಹುಟ್ಟಿದವನು! ಹೀಗೆ ಜನಿಸಿದ ಕರ್ದಮನಿಗೆ ಬ್ರಹ್ಮನು, “ಪ್ರಜೆಗಳ ಸೃಷ್ಟಿಯನ್ನು ಮಾಡು!” ಎಂದು ಆಜ್ಞೆ ಮಾಡಿದನು. ಪ್ರಜೆಗಳ ಸೃಷ್ಟಿಗೆ ಯೋಗ್ಯ ಕನ್ಯೆಯು ಬೇಕಲ್ಲವೇ? ಕರ್ದಮಮುನಿಯು ಕನ್ಯಾರ್ಥಿಯಾಗಿ ದೇವೋತ್ತಮ ಪರಮ ಪುರುಷನಾದ ಶ್ರೀಹರಿಯನ್ನೇ ಕುರಿತು ಕಠಿಣ ತಪಸ್ಸನ್ನಾಚರಿಸಿದನು. ಹತ್ತು ಸಹಸ್ರ ವರ್ಷಗಳ ಕಠಿಣ ತಪಶ್ಚರ್ಯೆಯ ಬಳಿಕ, ದೇವೋತ್ತಮ ಪರಮ ಪುರುಷನು, ವೇದಗಳಿಂದ ಮಾತ್ರ ಅರಿಯಬಹುದಾದ ತನ್ನ ದಿವ್ಯ ರೂಪವನ್ನು ಪ್ರಕಟಿಸಿದನು!

ಅಕಳಂಕಿತವಾದ ಆ ವಿಷ್ಣುರೂಪ, ಸೂರ್ಯನಂತೆ ಪ್ರಜ್ವಲಿಸುತ್ತಿತ್ತು!

ಶ್ರೀಹರಿಯು ಬಿಳಿಯ ತಾವರೆಗಳಿಂದಲೂ ನೈದಿಲೆಗಳಿಂದಲೂ ಯುಕ್ತವಾಗಿದ್ದ ಸುಂದರ ಹಾರವನ್ನು ಧರಿಸಿದ್ದನು! ಅವನ ತಾವರೆಯಂತಹ ಸುಂದರ ಮುಖ, ತಾವರೆದಳಗಳಂಥ ಕೆಂಗಣ್ಣುಗಳಿಂದಲೂ, ಕಡುಕಪ್ಪಾದ ಮುಂಗುರುಳಿನಿಂದಲೂ ಶೋಭಿಸುತ್ತಾ ಭಕ್ತರನ್ನು ಬಹುಬೇಗನೆ ಆಕರ್ಷಿಸುವ ನಸುನಗೆಯಿಂದ ಕೂಡಿತ್ತು! ಕಿರೀಟಕುಂಡಲಗಳನ್ನೂ ಪಟ್ಟೆಪೀತಾಂಬರವನ್ನೂ ಧರಿಸಿದ್ದ ಅವನು, ತನ್ನ ನಾಲ್ಕು ಕೈಗಳಲ್ಲಿ ಶಂಖಚಕ್ರಗದಾಪದ್ಮಗಳನ್ನು ಹಿಡಿದಿದ್ದನು. ಅವನ ವಿಶಾಲ ವಕ್ಷಸ್ಥಳದಲ್ಲಿ ಶ್ರೀವತ್ಸ ಲಾಂಛನವೂ ಕೌಸ್ತುಭಮಣಿಯೂ ಹೊನ್ನಿನ ಕಾಂತಿಯಿಂದ ಹೊಳೆಯುತ್ತಿದ್ದವು! ದೇದೀಪ್ಯಮಾನವಾಗಿ ಕಂಗೊಳಿಸುತ್ತಿದ್ದ ಶ್ರೀಮನ್ನಾರಾಯಣನು ಗರುಡನ ಬೆನ್ನಿನ ಮೇಲೆ ತನ್ನ ಪಾದಪದ್ಮಗಳನ್ನಿರಿಸಿ ಆಕಾಶದಲ್ಲಿ ನಿಂತಿದ್ದನು!

ತನ್ನ ಮನೋರಥವು ಈಡೇರಲು ಕರ್ದಮಮುನಿಯು ಅತ್ಯಂತ ಹರ್ಷಚಿತ್ತನಾದನು. ಒಡನೆಯೇ ಅವನು ಶ್ರೀಹರಿಗೆ ಸಾಷ್ಟಾಂಗಪ್ರಣಾಮ ಸಲ್ಲಿಸಿದನು; ಭಕ್ತಿಪರವಶತೆಯಿಂದ ಭಗವಂತನನ್ನು ಸ್ತುತಿಸಿದನು,

“ಪರಮ ಪುರುಷನೇ! ಯಾವ ನಿನ್ನ ಈ ದಿವ್ಯದರ್ಶನವನ್ನು ಪಡೆಯಲು ಮಹಾಯೋಗಿಗಳೂ ಅನೇಕ ಜನ್ಮಗಳ ಕಾಲ ಧ್ಯಾನ, ತಪಸ್ಸುಗಳನ್ನು ಆಚರಿಸುವರೋ, ಅಂಥ ದರ್ಶನದಿಂದ ನನ್ನ ಕಣ್ಣುಗಳು ಸಾರ್ಥಕಗೊಂಡವು! ನಿನ್ನ ಪಾದಾರವಿಂದಗಳು ಭಯಂಕರವಾದ ಈ ಭವಾಂಬುಧಿಯನ್ನು ದಾಟಿಸುವ ದೋಣಿಯಂತಿವೆ! ಆದರೆ ನಿನ್ನ ಮಾಯೆಯಿಂದ ಪ್ರಭಾವಿತರಾದ ಜನರು ಮತಿಗೆಟ್ಟು, ನರಕದಲ್ಲೂ ಸಿಗಬಹುದಾದ ಬರಿಯ ಅಶಾಶ್ವತ ಕಾಮನೆಗಳಿಗಾಗಿ ಅವನ್ನು ಪೂಜಿಸುತ್ತಾರೆ. ನೀನು ಎಷ್ಟು ದಯಾವಂತನೆಂದರೆ ಅವರನ್ನೂ ನೀನು ಕರುಣೆಯಿಂದ ಕಾಣುವೆ. ಈಗ ನಾನೂ ಅಂತಹ ಜನರಂತೆ, ಒಬ್ಬ ಯೋಗ್ಯ ಕನ್ಯೆಯನ್ನು ವರಿಸುವ ಆಸೆಯಿಂದ ಎಲ್ಲಕ್ಕೂ ಮೂಲವಾಗಿರುವ ನಿನ್ನ ಪಾದಮೂಲಗಳನ್ನು ಆಶ್ರಯಿಸಿದ್ದೇನೆ. ನನ್ನ ಗುಣಗಳಿಗೆ ಅನುರೂಪಳಾದ ಅಂತಹ ಹೆಣ್ಣು, ಧೇನುವಿನಂತೆ ನನ್ನ ಮನೆಯಲ್ಲಿ ಸುಖಸಮೃದ್ಧಿಯನ್ನು ಉಂಟುಮಾಡಬೇಕು.

“ಪ್ರಭು! ನಿನ್ನ ನಿರ್ದೇಶನಕ್ಕನುಸಾರವಾಗಿ ಲೋಕದ ಜನರೆಲ್ಲರೂ ಹಗ್ಗದಿಂದ ಬಿಗಿಯಲ್ಪಟ್ಟವರಂತೆ ಇದ್ದು ತಮ್ಮ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಾರೆ. ನಾನಾದರೂ ನಿನ್ನ ನಿರ್ದೇಶನಕ್ಕೆ ಬದ್ಧನಾಗಿದ್ದೇನೆ. ಆದರೆ ಲೌಕಿಕ ವಿಷಯಗಳನ್ನೂ ವಿಷಯಾಸಕ್ತರ ಸಂಗವನ್ನೂ ತ್ಯಜಿಸಿ ಸದಾ ನಿನ್ನ ದಿವ್ಯಗುಣಗಳೆಂಬ ಅಮೃತವನ್ನು ಪಾನಮಾಡುತ್ತಾ ನಿನ್ನ ಪಾದಪದ್ಮಗಳಲ್ಲಿ ಸಂಪೂರ್ಣ ಶರಣಾಗತಿ ಹೊಂದಿರುವವರು, ಪಶುಸಹಜವಾದ ದೈಹಿಕಕಾಮನೆಗಳಿಂದ ಬಿಡುಗಡೆ ಹೊಂದಬಹುದು.

“ಸರ್ವ ದೇವೋತ್ತಮ ಪುರುಷನೇ, ಕಾಲವೆಂಬ ಈ ನಿನ್ನ ಚಕ್ರವು ಪರಬ್ರಹ್ಮವೆಂಬ ಅಚ್ಚಿನ ಸುತ್ತಲೂ ಸುತ್ತುತ್ತಿರುತ್ತದೆ. ಅದಕ್ಕೆ ಭೂತ, ಭವಿಷ್ಯತ್‌, ವರ್ತಮಾನಗಳೆಂಬ ಮೂರು ನಾಭಿಗಳೂ, ಅಧಿಕಮಾಸವೂ ಸೇರಿ ಹದಿಮೂರು ಮಾಸಗಳೆಂಬ ಕೀಲುಗಳೂ, ಮುನ್ನೂರ ಅರವತ್ತು ದಿನಗಳೆಂಬ ಗಿಣ್ಣುಗಳೂ, ಆರು ಋತುಗಳೆಂಬ ಅಂಚುಪಟ್ಟಿಗಳೂ ಅಸಂಖ್ಯ ಕ್ಷಣಗಳೆಂಬ ಎಲೆಗಳ ಕೆತ್ತನೆಗಳೂ ಇವೆ! ಈ ಚಕ್ರವು ಸುತ್ತುತ್ತಾ ಇಡೀ ಸೃಷ್ಟಿಯ ಆಯುಷ್ಯವನ್ನು ಕತ್ತರಿಸುತ್ತಿರುತ್ತದೆ! ಆದರೆ ಇಂಥ ಚಕ್ರವು ನಿನ್ನ ಭಕ್ತರ ಆಯುಷ್ಯವನ್ನು ಸೋಕುವುದಿಲ್ಲ!

“ಹೇ ಪ್ರಭು, ಜೇಡವು ತಾನೊಂದೇ, ತನ್ನ ಶಕ್ತಿಯಿಂದ ಬಲೆಯನ್ನು ಹೆಣೆದು, ರಕ್ಷಿಸಿ, ಕಡೆಗೆ ನುಂಗಿಹಾಕುವಂತೆ, ನೀನೊಬ್ಬನೇ ನಿನ್ನ ಯೋಗಮಾಯೆಯೆಂಬ ಶಕ್ತಿಯಿಂದ ಈ ವಿಶ್ವವನ್ನು ಸೃಷ್ಟಿಸಿ, ರಕ್ಷಿಸಿ, ಕಡೆಗೆ ನಿನ್ನಲ್ಲೇ ಲೀನವಾಗಿಸಿಕೊಳ್ಳುವೆ! ಇಂಥ ನಶ್ವರವಾದ ವಿಶ್ವವನ್ನು ಸೃಷ್ಟಿಸಬೇಕೆಂಬುದು ನಿನ್ನ ಅಪೇಕ್ಷೆಯೇನಲ್ಲವಾದರೂ ನಮ್ಮ ಕಾಮನೆಗಳ ಪೂರೈಕೆಗಾಗಿ ಹೀಗೆ ಸೃಷ್ಟಿ ಮಾಡುವೆ. ಈ ಐಹಿಕ ಕಾಮನೆಗಳಿಂದ ಎಲ್ಲರೂ ಮುಕ್ತರಾಗಲೆಂದೇ ನಿನ್ನ ಮಾಯಾಶಕ್ತಿಯಿಂದ ವಿಶ್ವವನ್ನು ಸೃಷ್ಟಿಸಿ ಅದನ್ನು ವ್ಯಾಪಿಸಿಕೊಂಡಿರುವೆ. ಪ್ರಭು! ಅಲ್ಪರ ಮೇಲೂ ಅಪಾರ ಕರುಣೆ ಬೀರುವ ನೀನು ಈಗ ತುಲಸೀಮಾಲೆಯನ್ನು ಧರಿಸಿ ನಿನ್ನ ದಿವ್ಯರೂಪದಿಂದ ಪ್ರಕಟಗೊಂಡಿರುವೆ! ಎಲ್ಲರಿಗೂ ನಮನೀಯವಾಗಿರುವ ನಿನ್ನ ಪಾದಪದ್ಮಗಳಿಗೆ ಮತ್ತೆ ಮತ್ತೆ ನನ್ನ ನಮಸ್ಕಾರಗಳು!”

ಕರ್ದಮಮುನಿಯು ಹೀಗೆ ಸ್ತುತಿಸಿದಾಗ, ಮಹಾವಿಷ್ಣುವು ಬಹಳ ಸಂತುಷ್ಟನಾದನು. ಕರ್ದಮನ ಭಕ್ತಿಯಿಂದ ಅವನ ಹೃದಯವು ಕರಗಿ ಅವನ ಕಣ್ಣುಗಳು ತುಂಬಿಬಂದವು! ಭಕ್ತನ ಮೇಲಿನ ಪ್ರೀತಿಯಿಂದ ಅವನ ಕಣ್ಣುಗಳಿಂದ ಎರಡು ಹನಿಗಳು ಮುತ್ತುಗಳಂತೆ ಉದುರಿದವು! ಅವು ಭೂಮಿಯನ್ನು ಸೋಕಿದ ಕೂಡಲೇ ಒಂದು ಪವಿತ್ರ ಸರೋವರವನ್ನುಂಟುಮಾಡಿದವು! ಭಗವಂತನ ಅಶ್ರುಬಿಂದುಗಳಿಂದ ಉಂಟಾದ ಆ ಸರೋವರ, ಬಿಂದುಸರೋವರವೆಂದು ಖ್ಯಾತವಾಯಿತು! ಆ ಸರೋವರವು ಸರಸ್ವತೀ ನದಿಯ ನೀರಿನಿಂದಲೂ ಪರಿಪ್ಲುತವಾಗಿ ಪಾಪನಾಶಕ ತೀರ್ಥವಾಯಿತು! ಅದರ ದಡದ ಮೇಲಿದ್ದ ಪ್ರಾಣಿಪಕ್ಷಿಗಳೂ ಗಿಡಮರಗಳೂ ಪುಣ್ಯವಿಶೇಷದಿಂದ ಕೂಡಿದವು!

ಭಗವಂತನ ಮಹಿಮೆ ವರ್ಣಿಸಲಸದಳ! ಅವನ ಪಾದವನ್ನು ತೊಳೆದ ನೀರು ಪವಿತ್ರ ಗಂಗೆಯಾಯಿತು! ಅವನ ಅಶ್ರುಬಿಂದುಗಳು ಪಾಪವನ್ನು ತೊಳೆಯುವ ಬಿಂದುಸರೋವರವಾದವು! ಅವನ ವಾಣಿ, ಮೂರು ಲೋಕಗಳನ್ನೂ ಉದ್ಧರಿಸುವ ಭಗವದ್ಗೀತೆಯಾಯಿತು!

ಭಗವಂತನು ತನ್ನ ಭ್ರೂಲತೆಗಳನ್ನು ವಿಲಾಸದಿಂದ ಆಡಿಸುತ್ತಾ, ಭಕ್ತರ ಸಂಕಷ್ಟಗಳೆಂಬ ಕತ್ತಲನ್ನು ಒಮ್ಮೆಲೇ ಹರಿಸಿಬಿಡುವ ತನ್ನ ಕಿರುನಗೆಯೆಂಬ ಮಿಂಚನ್ನು ಸುರಿಸುತ್ತಾ ಪ್ರೀತಿ ತುಂಬಿದ ಮಧುರ ನುಡಿಗಳನ್ನಾಡಿದನು,

“ವತ್ಸ, ನಿನ್ನ ಮನಸ್ಸಿನಲ್ಲೇನಿದೆಯೆಂದು ನಾನು ಬಲ್ಲೆ. ಯಾವುದಕ್ಕಾಗಿ ನೀನು ಯಮ, ನಿಯಮಗಳಿಂದ ನನ್ನನ್ನು ಅರ್ಚಿಸಿದೆಯೋ, ಅದಕ್ಕಾಗಿ ನಾನೀಗಾಗಲೇ ವ್ಯವಸ್ಥೆ ಮಾಡಿದ್ದೇನೆ. ಎಲೈ ಪ್ರಜಾಪತಿ, ನಿನ್ನಂತೆ ಭಕ್ತರು ಸರ್ವಸ್ವವನ್ನೂ ತ್ಯಜಿಸಿ ನನ್ನನ್ನು ಅರ್ಚಿಸುತ್ತಾರೆ. ಅಂಥವರ ಪೂಜೆ ಎಂದಿಗೂ ವ್ಯರ್ಥವಾಗುವುದಿಲ್ಲ. ಕರ್ದಮ, ಬ್ರಹ್ಮದೇವನ ಪುತ್ರನಾದ ಸ್ವಾಯಂಭುವಮನುವು ಬ್ರಹ್ಮಾವರ್ತದಲ್ಲಿ ನೆಲೆಸಿ, ಸಪ್ತಸಾಗರಗಳಿಂದ ಆವೃತವಾಗಿರುವ ಈ ಪೃಥ್ವಿಯನ್ನು ಆಳುತ್ತಿದ್ದಾನೆ. ಸದಾ ಮಂಗಳಕರ ಕಾರ್ಯಗಳಲ್ಲೇ ನಿರತನಾಗಿರುವ ಅವನು, ತನ್ನ ರಾಣಿಯಾದ ಶತರೂಪೆ ಹಾಗೂ ತನ್ನ ಮಗಳೊಂದಿಗೆ ನಾಳಿದ್ದು ಇಲ್ಲಿಗೆ ಆಗಮಿಸಲಿದ್ದಾನೆ. ದೇವಹೂತಿಯೆಂಬ ಅವನ ಪುತ್ರಿ, ಕಪ್ಪು ಕಂಗಳನ್ನುಳ್ಳ ಕಡುಸುಂದರಿ; ಪ್ರಾಪ್ತವಯಸ್ಕಳಾದ ಅವಳು ತನ್ನ ಸದ್ಗುಣಗಳಿಂದ ಅಲಂಕರಿಸಲ್ಪಟ್ಟು ನಿನಗೆ ಅನುರೂಪಳಾಗಿದ್ದಾಳೆ. ತನ್ನ ಮಗಳಿಗೆ ಯೋಗ್ಯ ವರನನ್ನರಸುತ್ತಿರುವ ಮನುವು ಅವಳನ್ನು ನಿನಗೆ ಧಾರೆಯೆರೆದುಕೊಡುತ್ತಾನೆ. ನೀನು ಎಂತಹ ಕನ್ಯೆಯನ್ನು ಆಶಿಸುತ್ತಿರುವೆಯೋ, ಅವಳು ಅಂಥವಳೇ ಆಗಿದ್ದು, ನಿನ್ನ ಮನೋಭೀಷ್ಟದಂತೆ ನಿನ್ನನ್ನು ಸೇವಿಸುತ್ತಾಳೆ.”

ಭಗವಂತನ ನಲ್ನುಡಿಗಳನ್ನು ಕೇಳಿ ಕರ್ದಮ ಮುನಿಯು ಹರ್ಷಿತನಾದನು. ಧರ್ಮಾರ್ಥಕಾಮಮೋಕ್ಷಗಳನ್ನು ನೀಡುವ ಪ್ರಭು ಅವನೇ ಅಲ್ಲವೇ?

ಶ್ರೀಹರಿಯು ಮತ್ತೂ ಹೇಳಿದನು, “ಕರ್ದಮ ಪ್ರಜಾಪತಿ, ನೀನು ದೇವಹೂತಿಯಲ್ಲಿ ಒಂಬತ್ತು ಸುಲಕ್ಷಣಸಂಪನ್ನೆಯರಾದ ಹೆಣ್ಣುಮಕ್ಕಳನ್ನು ಪಡೆಯುವೆ. ಅವರೆಲ್ಲರೂ ಮಹಾನ್‌ ಋಷಿಗಳನ್ನು ವರಿಸಿ ಅನೇಕ ಮಕ್ಕಳನ್ನು ಪಡೆಯುತ್ತಾರೆ. ನೀನಾದರೋ, ನಿನ್ನ ಎಲ್ಲ ಕರ್ಮಗಳನ್ನೂ ನನಗೆ ಸಮರ್ಪಿಸಿ ಶುದ್ಧ ಹೃದಯವುಳ್ಳವನಾಗಿ ನನ್ನನ್ನೇ ಪಡೆಯುವೆ. ಸಕಲ ಜೀವಿಗಳಿಗೂ ಅಭಯವಿತ್ತು, ಆ ಎಲ್ಲ ಜೀವಿಗಳಲ್ಲಿ ನನ್ನನ್ನೂ ನನ್ನಲ್ಲಿ ಎಲ್ಲ ಜೀವಿಗಳನ್ನೂ ಕಾಣುತ್ತಾ ಆತ್ಮಜ್ಞಾನ ಹೊಂದುವೆ. ಎಲೈ ಮುನಿಯೇ, ನಾನೇ ನನ್ನ ಅಂಶದಿಂದ ನಿನ್ನ ಮಗನಾಗಿ ಜನಿಸಿ ನಿನ್ನ ಪತ್ನಿಗೆ ಸಾಂಖ್ಯವೆಂಬ ಅಧ್ಯಾತ್ಮಶಾಸ್ತ್ರವನ್ನು ಬೋಧಿಸುತ್ತೇನೆ.”

ಕರ್ದಮ ಮುನಿಯ ಆನಂದಕ್ಕೆ ಪಾರವೇ ಇರಲಿಲ್ಲ!

“ಭಗವಂತನು ನನಗೆ ಮಗನಾಗಿ ಜನಿಸುವನೇ?! ಆಹಾ! ನನ್ನ ಭಾಗ್ಯಕ್ಕೆ ಎಣೆಯೇ ಇಲ್ಲ!” ಕರ್ದಮನು ಹೀಗೆ ಯೋಚಿಸಿ ಭಗವಂತನಿಗೆ ನಮಸ್ಕರಿಸುತ್ತಿರುವಾಗಲೇ ಶ್ರೀಹರಿಯು ಅಲ್ಲಿಂದ ನಿರ್ಗಮಿಸಿದನು.

ಸಿದ್ಧರಿಗೆ ಮಾತ್ರ ದೊರಕುವ ಅಲೌಕಿಕ ಧಾಮವಾದ ವೈಕುಂಠಕ್ಕೆ ಶ್ರೀಹರಿಯನ್ನು ಸಾಗಿಸುತ್ತಿದ್ದಂತೆ ಗರುಡನ ರೆಕ್ಕೆಗಳ ಬಡಿತದಿಂದ ಉಂಟಾದ ಸಾಮವೇದದ ಮಂತ್ರಗಳನ್ನಾಲಿಸುತ್ತಾ ಕರ್ದಮನು ನಿಂತಲ್ಲೇ ನಿಂತ.

* * *

ದೇವೋತ್ತಮ ಪರಮ ಪುರುಷನ ನಿರ್ಗಮನದ ಅನಂತರ, ಕರ್ದಮನು ಬಿಂದುಸರೋವರದ ದಡದ ಮೇಲೆ, ಮನುವಿಗಾಗಿ ಕಾಯುತ್ತಾ ಕುಳಿತನು. ಭಗವಂತನು ಹೇಳಿದ್ದಂತೆ, ಸ್ವಾಯಂಭುವ ಮನು, ತನ್ನ ಪತ್ನಿ ಹಾಗೂ ಮಗಳೊಂದಿಗೆ ರಥದಲ್ಲಿ ಲೋಕಸಂಚಾರ ಮಾಡುತ್ತಾ ಆಗಮಿಸಿದ. ಬಿಂದುಸರೋವರದ ಪ್ರಶಾಂತ, ಪವಿತ್ರ ತಾಣವನ್ನು ಕಂಡು ಅವನಿಗೂ ಅವನ ಕುಟುಂಬಕ್ಕೂ ದಿವ್ಯಾನಂದವಾಯಿತು. ಆಗತಾನೇ ಅಗ್ನಿಕಾರ್ಯವನ್ನು ಮುಗಿಸಿ ಆಶ್ರಮದಲ್ಲಿ ಕುಳಿತಿದ್ದ ಕರ್ದಮಮುನಿಯನ್ನು ಮನುವು ನೋಡಿದ. ದೀರ್ಘಕಾಲ ತಪಸ್ಸು ಮಾಡಿದ್ದರೂ, ಭಗವಂತನ ಕೃಪಾಕಟಾಕ್ಷದಿಂದಲೂ, ಅಮೃತವಚನಗಳಿಂದಲೂ ಪೋಷಿಸಲ್ಪಟ್ಟು, ಕೃಶವಾಗಿ ಕಾಣದೆ, ಅವನು ತೇಜಸ್ಸಿನಿಂದ ಬೆಳಗುತ್ತಿದ್ದನು.

“ಶತರೂಪಾ, ಆ ಮುನಿಯನ್ನು ನೋಡಿದೆಯಾ? ಬ್ರಹ್ಮತೇಜಸ್ಸಿನಿಂದ ಬೆಳಗುತ್ತಿರುವ ಅವನೇ ಕರ್ದಮಮುನಿ!” ಸ್ವಾಯಂಭುವ ಮನು ಹೇಳಿದನು, “ನಾರದರು ಹೇಳಿದಂತೆಯೇ ಅವನು ಎತ್ತರವಾಗಿದ್ದಾನೆ. ಕಮಲದಳಗಳಂತೆ ವಿಶಾಲವಾದ ಕಂಗಳನ್ನು ಹೊಂದಿರುವ ಅವನು, ಬಹಳ ಸುಂದರವಾಗಿದ್ದಾನೆ ಕೂಡ! ಆದರೆ ಜಟೆಗಳನ್ನೂ ವಲ್ಕಲಗಳನ್ನೂ ಧರಿಸಿರುವ ಅವನು, ಮಲಿನವಾದ ರತ್ನದಂತೆ ಇದ್ದಾನೆ!”

“ನಿಜ ಆರ್ಯಪುತ್ರ!” ಶತರೂಪೆ ಹೇಳಿದಳು, “ಆದರೆ ಮುನಿಗಳು ಮಹಾಮಹಿಮರಲ್ಲವೇ? ಅಂದು ನಾರದರು ನಮ್ಮ ಅರಮನೆಯಲ್ಲಿ ಈ ಋಷಿಯ ವಿದ್ಯೆ, ಗುಣ, ರೂಪಗಳನ್ನು ಬಣ್ಣಿಸಿದಾಗ ನಮ್ಮ ಮಗಳು ಇವನನ್ನು ಪ್ರತ್ಯಕ್ಷ ಕಂಡಿರದಿದ್ದರೂ ಇವನಲ್ಲೇ ತನ್ನ ಮನಸ್ಸನ್ನು ನೆಟ್ಟಳು. ಇದು ಭಗವಂತನ ಚಿತ್ತವೇ ಇರಬೇಕು. ಗುಣವಂತೆಯೂ ನಿರಹಂಕಾರಿಯೂ ಆದ ನಮ್ಮ ಮಗಳ ಆಶಯವನ್ನು ನಾವು ಪೂರೈಸಬೇಕು. ಇವನಿಗಿಂತಲೂ ಅನುರೂಪ ವರ ಯಾರು ದೊರೆತಾರು? ಈಗ ಈ ಮುನಿಯು ನಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳಬೇಕು, ಅಷ್ಟೆ!”

ಹೀಗೆ ಮಾತನಾಡಿಕೊಳ್ಳುತ್ತಾ ಅವರು ಕರ್ದಮನ ಆಶ್ರಮಕ್ಕೆ ಬಂದರು; ಮುನಿಯನ್ನು ಕಂಡ ಕೂಡಲೇ ಅವನಿಗೆ ಪ್ರಣಾಮ ಸಲ್ಲಿಸಿದರು. ಕರ್ದಮ ಮುನಿಯೂ ಅವರಿಗೆ ಪ್ರತಿವಂದಿಸಿ ಸ್ವಾಗತಿಸಿದನು. ಅವರೀರ್ವರೂ ಕುಳಿತುಕೊಳ್ಳಲು, ಕರ್ದಮನು ಮೃದುನುಡಿಗಳನ್ನಾಡಿದನು, “ಮಹಾರಾಜ! ದುಷ್ಟರನ್ನು ಶಿಕ್ಷಿಸಲೂ ಶಿಷ್ಯರನ್ನು ರಕ್ಷಿಸಲೂ ಲೋಕಸಂಚಾರ ಮಾಡುತ್ತಿರುವ ನೀನು ಆ ಶ್ರೀಹರಿಯ ಶಕ್ತಿಯಿಂದ ಕೂಡಿರುವೆ! ಅಗತ್ಯವಿದ್ದಾಗ ಇಂದ್ರಾಗ್ನಿವಾಯುವರುಣ ಸೂರ್ಯಚಂದ್ರಯಮಧರ್ಮರೇ ಮೊದಲಾದ ದೇವತೆಗಳ ಸ್ಥಾನವನ್ನು ತುಂಬುವ ನೀನು ಸಾಕ್ಷಾತ್‌ ವಿಷ್ಣುವಿನ
ಪ್ರತಿನಿಧಿ! ನೀನು ರತ್ನಖಚಿತವಾದ ನಿನ್ನ ವಿಜಯರಥವನ್ನೇರಿ ನಿನ್ನ ಧನುಸ್ಸಿನ ಠೇಂಕಾರದಿಂದ ಮಹಾಶಬ್ದವನ್ನುಂಟುಮಾಡದಿದ್ದರೆ, ಪಾದಾಘಾತದಿಂದ ಭೂಮಿಯನ್ನೇ ಕಂಪನಗೊಳಿಸುವ ನಿನ್ನ ಸೈನ್ಯದ ಮುಂದಾಳತ್ವ ವಹಿಸಿ ನೀನು ಸೂರ್ಯನಂತೆ ಸಂಚರಿಸದಿದ್ದರೆ, ಆಗ ಭಗವಂತನಿಂದ ಸ್ಥಾಪಿತವಾದ ವರ್ಣಾಶ್ರಮಧರ್ಮಗಳೆಲ್ಲವೂ ದಸ್ಯುಗಳಿಂದ ನಾಶವಾಗಿಬಿಡುತ್ತಿದ್ದವು! ರಾಜನೇ, ನೀನೇನಾದರೂ ಜಗತ್ತಿನ ಚಿಂತೆಯನ್ನು ಮಾಡದೇ ಬರಿದೇ ವಿಲಾಸಿಯಾಗಿಬಿಟ್ಟರೆ, ಅಧರ್ಮಿಗಳೂ ಕುಕರ್ಮಿಗಳೂ ಹೆಚ್ಚಾಗಿ ಲೋಕವನ್ನು ಅಧೋಗತಿಗೊಯ್ಯುತ್ತಾರೆ! ಹಾಗಾಗಬಾರದೆಂದೇ ನೀನು ಲೋಕಸಂಚಾರ ಮಾಡುತ್ತಿರುವೆಯೆಂದು ನಾನು ಬಲ್ಲೆ. ಆದರೂ ನೀನಿಲ್ಲಿಗೆ ಆಗಮಿಸಿರುವ ಕಾರಣವನ್ನು ಕೇಳುತ್ತಿದ್ದೇನೆ. ನನ್ನಿಂದ ಏನಾದರೂ ಸಹಾಯವಾಗಬೇಕೇ? ಹಾಗಿದ್ದಲ್ಲಿ, ನಿಸ್ಸಂಕೋಚದಿಂದ ಕೇಳು; ನನಗೆ ಸಾಧ್ಯವಾದಮಟ್ಟಿಗೆ ನಡೆಸಿಕೊಡುತ್ತೇನೆ.”

“ಮಹಾಮುನಿಗಳೇ!” ಸ್ವಾಯಂಭುವ ಮನು, ವಿನಯಪೂರ್ವಕವಾಗಿ ಹೇಳಿದ, “ವಿರಾಟ್‌ಪುರುಷನು ತನ್ನನ್ನು ತಾನೇ ವಿಸ್ತರಿಸಿಕೊಳ್ಳಲು ನಿಮ್ಮಂತಹ ಬ್ರಾಹ್ಮಣರನ್ನು ತನ್ನ ಮುಖದಿಂದ ಸೃಷ್ಟಿಸಿದ. ನಿಮ್ಮಂತಹ ಬ್ರಾಹ್ಮಣರು ವಿದ್ಯೆ, ತಪಸ್ಸು, ಯೋಗಶಕ್ತಿಗಳಿಂದ ಸಂಪನ್ನರಾಗಿದ್ದು, ಇಂದ್ರಿಯನಿಗ್ರಹದಿಂದ ಕೂಡಿರುವಿರಿ! ನಿಮ್ಮಂತಹ ಬ್ರಾಹ್ಮಣರನ್ನು ರಕ್ಷಿಸಲೋಸುಗವಾಗಿ, ಸಹಸ್ರಪಾದಗಳಿರುವ ಆ ಪುರುಷೋತ್ತಮನು ತನ್ನ ಸಹಸ್ರಬಾಹುಗಳಿಂದ ನಮ್ಮಂತಹ ಕ್ಷತ್ರಿಯರನ್ನು ಸೃಷ್ಟಿಸಿದ. ಆದ್ದರಿಂದ, ಬ್ರಾಹ್ಮಣರು ಅವನ ಹೃದಯವೆಂದೂ ಕ್ಷತ್ರಿಯರು ಅವನ ಬಾಹುಗಳೆಂದೂ ಪರಿಗಣಿಸಲಾಗುತ್ತದೆ. ಹೀಗೆ ಬ್ರಾಹ್ಮಣರೂ ಕ್ಷತ್ರಿಯರೂ ಒಬ್ಬರನ್ನೊಬ್ಬರು ರಕ್ಷಿಸುತ್ತಾ ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ. ಆದರೆ ನಿಜವಾಗಿ ಕಾರಣನೂ ಕಾರ್ಯನೂ ಆಗಿದ್ದರೂ ಅವ್ಯಯನಾಗಿ ಉಳಿಯುವ ಆ ಭಗವಂತನೇ ಇಬ್ಬರನ್ನೂ ರಕ್ಷಿಸುತ್ತಿರುತ್ತಾನೆ.”

“ಖಂಡಿತವಾಗಿಯೂ ರಾಜ! ನಿನ್ನ ಒಂದೊಂದು ಮಾತೂ ಅಕ್ಷರಶಃ ಸತ್ಯ!” ಕರ್ದಮ ಮುನಿಯು ತಲೆದೂಗಿದ.

“ಮುನಿಗಳೇ”, ಮನು ಸಂತೋಷಗೊಂಡು ಹೇಳಿದ, “ಇಂದು ನಿಮ್ಮನ್ನು ಕಂಡು ನಾನು ಕೃತಾರ್ಥನಾದೆ! ಮನೋನಿಗ್ರಹವಿಲ್ಲದವರಿಗೆ ನಿಮ್ಮ ದರ್ಶನ ದುಸ್ಸಾಧ್ಯ! ಹೀಗಿರಲು, ನೀವು ಬಹಳ ಪ್ರೀತಿಯಿಂದ ರಾಜನ ಕರ್ತವ್ಯದ ಬಗ್ಗೆ ಉಪದೇಶಿಸಿದಿರಿ. ನಿಮ್ಮ ಪಾದಧೂಳಿನಿಂದ ಪವಿತ್ರನಾದ ನಾನು ಭಾಗ್ಯವಂತ! ಮುನಿಗಳೇ, ಈಗ ತಮ್ಮಲ್ಲಿ ನಾನೊಂದು ಅರಿಕೆ ಮಾಡಿಕೊಳ್ಳಬಯಸುವೆ.”

“ಹೇಳು ಮಹಾರಾಜ! ನಿನ್ನ ಮನದಿಂಗತವನ್ನು ಹೇಳು!” ಭಗವಂತನ ಮಾತನ್ನು ಸ್ಮರಿಸುತ್ತಾ ಕರ್ದಮನು ಹೇಳಿದ.

ಸ್ವಾಯಂಭುವ ಮನು, ತನ್ನ ಮಗಳು ದೇವಹೂತಿಯನ್ನು ಕರ್ದಮನಿಗೆ ತೋರಿಸುತ್ತಾ ಹೇಳಿದ, “ಇವಳು ನನ್ನ ಮುದ್ದಿನ ಮಗಳು ದೇವಹೂತಿ. ಪ್ರಿಯವ್ರತ, ಉತ್ತಾನಪಾದರ ತಂಗಿಯಾದ ಇವಳು ತನ್ನ ಗುಣ, ಶೀಲಗಳಿಗೆ ಅನುರೂಪನಾದ ವರನೊಬ್ಬನ ಅನ್ವೇಷಣೆಯಲ್ಲಿದ್ದಾಳೆ. ಒಂದು ದಿನ, ನಾರದರು ನಿಮ್ಮ ರೂಪ, ವಿದ್ಯೆ, ಗುಣಗಳನ್ನು ಕುರಿತು ಪ್ರಶಂಸೆಯ ಮಾತುಗಳನ್ನಾಡಿದಾಗ ಇವಳ ಮನಸ್ಸು ನಿಮ್ಮಲ್ಲಿಯೇ ನೆಟ್ಟುಹೋಯಿತು. ಅಂದಿನಿಂದ ಇವಳಿಗೆ ನಿಮ್ಮದೇ ಚಿಂತೆಯಾಗಿದೆ. ಆದ್ದರಿಂದ ದ್ವಿಜವರ್ಯರೇ, ನಿಮಗೆ ಸದ್ಗೃಹಿಣಿಯಾಗಿರಲು ತಕ್ಕವಳಾಗಿರುವ ಇವಳನ್ನು ಅರ್ಪಿಸುತ್ತಿದ್ದೇನೆ; ದಯವಿಟ್ಟು ಸ್ವೀಕರಿಸಬೇಕು.”

ಕೆಲನಿಮಿಷ ಮೌನವಾವರಿಸಿತು. ಮನುವು ಮುಂದುವರಿಸಿದ, “ಮುನಿಗಳೇ, ಸಕಲಕಾಮನೆಗಳಿಂದ ದೂರವಾದವರಿಗೂ ತಾನಾಗಿ ಬಂದ ಅದೃಷ್ಟವನ್ನು ದೂರ ಮಾಡುವುದು ಯುಕ್ತವಲ್ಲ. ಇನ್ನು ಕಾಮನೆಗಳಿಂದ ಕೂಡಿರುವವರಿಗೆ ಏನು ಹೇಳುವುದು? ತಾನಾಗಿ ಬಂದುದನ್ನು ತಿರಸ್ಕರಿಸಿ ಅನಂತರ ಲೋಭಿಯೊಬ್ಬನಿಂದ ಅದನ್ನೇ ಬೇಡಿ ಅವನು ಉಪೇಕ್ಷಿಸಿದರೆ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ! ಮಹಾಮುನಿಗಳೇ, ನೀವೂ ವಿವಾಹದ ಯೋಚನೆಯಲ್ಲೇ ಇರುವಿರೆಂದು ಕೇಳಿದೆ. ನೀವೇನೂ ಆಜನ್ಮ ಬ್ರಹ್ಮಚರ್ಯೆಯ ವ್ರತದಲ್ಲಿಲ್ಲವಲ್ಲವೇ? ಆದ್ದರಿಂದ ದಯವಿಟ್ಟು ನನ್ನ ಪುತ್ರಿಯನ್ನು ಸ್ವೀಕರಿಸಿ.”

ಕರ್ದಮ ಮುನಿಯು ಸಂತೋಷದಿಂದ ಹೇಳಿದನು, “ನಿಜ! ನನಗೂ ವಿವಾಹಮಾಡಿಕೊಳ್ಳಬೇಕೆಂಬ ಬಯಕೆಯಾಗಿದೆ. ನಿನ್ನ ಮಗಳು ಯಾರೊಂದಿಗೂ ವಿವಾಹವಾಗಿಲ್ಲ ಅಥವಾ ಯಾರಿಗೂ ಮಾತುಕೊಟ್ಟಿಲ್ಲ. ವೈದಿಕ ಪದ್ಧತಿಯಂತೆ ನಮ್ಮ ಈ ವಿವಾಹ ನಡೆಯಬಹುದು.  ರಾಜ, ತಾನು ಧರಿಸಿರುವ ಆಭರಣಗಳ ಕಾಂತಿಯನ್ನೂ ಮೀರಿಸುವ ಕಾಂತಿಯುಳ್ಳ ನಿನ್ನ ಮಗಳನ್ನು ಯಾರು ತಾನೇ ವರಿಸುವುದಿಲ್ಲ? ಒಂದು ದಿನ, ಈ ನಿನ್ನ ಸುಂದರ ಮಗಳು ಅರಮನೆಯ ಉಪ್ಪರಿಗೆಯ ಮೇಲೆ ಚೆಂಡಾಡುತ್ತಿರಲು, ಕಿಣಿಕಿಣಿಸುವ ಗೆಜ್ಜೆಗಳ ಸದ್ದಿನಿಂದಲೂ ಪುಟಿಯುತ್ತಿದ್ದ ಚೆಂಡನ್ನೇ ಹಿಂಬಾಲಿಸುತ್ತಿದ್ದ ಅವಳ ಚಂಚಲ ಕಂಗಳ ಅಂದದಿಂದಲೂ ಭೂಷಿತಳಾಗಿದ್ದ ಅವಳನ್ನು ಮೇಲಿನಿಂದ ಕಂಡು ಬೆರಗಾದ ವಿಶ್ವಾವಸುವೆಂಬ ಗಂಧರ್ವನು ಮೈಮರೆತು, ತನ್ನ ವಿಮಾನದಿಂದ ಕೆಳಗೆ ಬಿದ್ದನೆಂದು ಕೇಳಿದ್ದೇನೆ! ರಾಜ, ಸ್ತ್ರೀರತ್ನವಾದ ಈ ನಿನ್ನ ಪ್ರೀತಿಯ ಕುವರಿಯನ್ನು ಬುದ್ಧಿವಂತನಾದ ಯಾವನು ತಾನೇ ಸ್ವೀಕರಿಸನು? ಐಶ್ವರ್ಯದೇವತೆಯಾದ ಲಕ್ಷ್ಮೀದೇವಿಯ ಚರಣಾರವಿಂದಗಳನ್ನು ಸೇವಿಸದವರಿಗೆ ಇವಳ ದರ್ಶನವೂ ದುರ್ಲಭ!”

ತನ್ನ ಹೊಗಳಿಕೆಯನ್ನು ಕೇಳಿ ದೇವಹೂತಿಯು ನಾಚಿ ತಲೆತಗ್ಗಿಸಿ ಮೆಲ್ಲನೆ ಮುಗುಳ್ನಕ್ಕಳು! ಅದು ಅವಳ ಸೌಂದರ್ಯವನ್ನು ಹೆಚ್ಚಿಸಿತು!

“ಆದ್ದರಿಂದ ಈ ಸಾಧ್ವೀಮಣಿಯನ್ನು ನಾನು ಪತ್ನಿಯನ್ನಾಗಿ ಸ್ವೀಕರಿಸುತ್ತೇನೆ,” ಕರ್ದಮನು ಮುಂದುವರಿಸಿದನು, “ಆದರೆ ಒಂದು ನಿಬಂಧನೆಯ ಮೇಲೆ! ನನ್ನಿಂದ ಇವಳಲ್ಲಿ ಸಂತಾನವಾದ ಬಳಿಕ, ನಾನು ಮಹಾವಿಷ್ಣುವು ನನಗೆ ಹೇಳಿದಂತೆ ಅವನ ಸೇವೆಯನ್ನೇ ಮಾಡುತ್ತಾ ಪರಮಹಂಸರ ಧರ್ಮವನ್ನನುಸರಿಸಲು ಹೋಗುತ್ತೇನೆ. ಯಾರಿಂದ ಈ ವಿಚಿತ್ರವಾದ ಜಗತ್ತು ಹೊರಹೊಮ್ಮುವುದೋ, ಯಾರಿಂದ ಅದು ನಿಂತಿರುವುದೋ, ಕಡೆಗೆ ಯಾರಲ್ಲಿ ಅದು ಲೀನವಾಗುವುದೋ, ಯಾರು ನನಗೂ ಪ್ರಜಾಪತಿಗಳೆಲ್ಲರಿಗೂ ಈಶನೋ, ಆ ಸರ್ವೇಶ್ವರನಾದ ಶ್ರೀಹರಿಯೇ ನನಗೆ ಅತ್ಯಂತ ದೊಡ್ಡ ಪ್ರಮಾಣನು!”

ಕರ್ದಮಪ್ರಜಾಪತಿಯು ಹೀಗೆ ಹೇಳಿ, ಕಮಲನಾಭನನ್ನೇ ಮನದಲ್ಲಿ ಧ್ಯಾನಿಸುತ್ತಾ ಮುಗುಳ್ನಗೆ ಬೀರುತ್ತಾ ಮೌನವಾದನು. ಅವನ ಮುಗುಳ್ನಗೆ, ದೇವಹೂತಿಯ ಮನವನ್ನಾಕರ್ಷಿಸಿತು! ಅವಳು ಅವನ ಧ್ಯಾನದಲ್ಲೇ ಕ್ಷಣಕಾಲ ಮೈಮರೆತಳು!

ಅನಂತರ, ಸ್ವಾಯಂಭುವ ಮನುವು ಶತರೂಪೆ ಹಾಗೂ ದೇವಹೂತಿಯ ಅಭಿಪ್ರಾಯಗಳನ್ನು ಮತ್ತೊಮ್ಮೆ ಸ್ಪಷ್ಟವಾಗಿ ಕೇಳಿ ತಿಳಿದುಕೊಂಡನು. ಅವರು ಈ ಮದುವೆಗೆ ಮನಃಪೂರ್ವಕವಾಗಿ ತಮ್ಮ ಒಪ್ಪಿಗೆ ನೀಡಲು, ಅವನು ಕರ್ದಮನಿಗೆ, ಗುಣವಂತೆಯಾದ ತನ್ನ ಮಗಳನ್ನು ವಿಧಿವತ್ತಾಗಿ ಧಾರೆಯೆರೆದು ಕೊಟ್ಟನು.

ಅದ್ದೂರಿಯಾಗಿಯೇ ನಡೆದ ಆ ಮದುವೆ ಸಮಾರಂಭದಲ್ಲಿ ಮಹಾರಾಣಿ ಶತರೂಪೆಯು ಅಮೂಲ್ಯ ವಸ್ತ್ರಾಭರಣಗಳನ್ನು ನೂತನ ವಧೂವರರಿಗೆ ನೀಡಿದಳು!

ತನ್ನ ಜವಾಬ್ದಾರಿಯು ಕಳೆಯಲು ಮನುವು ಸಂತೋಷಗೊಂಡು ತನ್ನೆರಡೂ ಬಾಹುಗಳನ್ನು ಚಾಚಿ ಮಗಳನ್ನು ಅಪ್ಪಿಕೊಂಡನು! ತನ್ನ ಮಗಳು ಇನ್ನು ಅವನಿಂದ ದೂರವಾಗಬೇಕೆಂದು ಅರಿತು ಅವನ ಮನವು ದುಃಖದಿಂದ ತುಂಬಿ ಅವನ ಕಂಠವು ಗದ್ಗದಿತವಾಯಿತು!

“ಅಮ್ಮಾ ಮಗಳೇ! ನಿನ್ನನ್ನು ಬಿಟ್ಟು ನಾವು ಹೇಗಮ್ಮಾ ಇರುವುದು?!” ಎಂದು ಅಳುತ್ತಾ ಮನುವು ದೇವಹೂತಿಯ ಶಿರವನ್ನು ತನ್ನ ಕಣ್ಣೀರಿನಿಂದ ತೋಯಿಸಿಬಿಟ್ಟನು!

ಅನಂತರ ಸ್ವಾಯಂಭುವ ಮನುವು ಕರ್ದಮಮುನಿಯ ಅನುಮತಿ ಪಡೆದು ತನ್ನ ಪತ್ನಿ ಶತರೂಪೆಯೊಡನೆ ರಥದಲ್ಲಿ ಕುಳಿತು ತನ್ನ ಪರಿವಾರವು ಹಿಂಬಾಲಿಸುತ್ತಿರಲು ತನ್ನ ರಾಜಧಾನಿಗೆ ಹೊರಟನು. ಅವನು ಹಾಗೆ ಹೋಗುತ್ತಿರುವಾಗ ಪವಿತ್ರ ಸರಸ್ವತೀ ನದಿಯ ಎರಡೂ ದಂಡೆಗಳ ಮೇಲೆ ಇದ್ದ ಅನೇಕ ಋಷ್ಯಾಶ್ರಮಗಳನ್ನು ಕಂಡು ಮನಶ್ಶಾಂತಿ ಹೊಂದಿದನು!

ಮಗಳ ವಿವಾಹದ ಮಂಗಳಕಾರ್ಯವನ್ನು ಮುಗಿಸಿ ರಾಜಧಾನಿಗೆ ಹಿಂದಿರುಗಿದ ಮನುವನ್ನು ಸ್ವಾಗತಿಸಲು ಅವನ ಪ್ರಜೆಗಳು ಓಡೋಡಿ ಬಂದರು! ವಾದ್ಯಗಳನ್ನು ನುಡಿಸುತ್ತಾ ಹಾಡುಗಳನ್ನು ಹಾಡುತ್ತಾ ಅವರು ಮನುವನ್ನು ವೈಭವದಿಂದ ಸ್ವಾಗತಿಸಿದರು! ಇದರಿಂದ ಬಹಳ ಸಂತೋಷಗೊಂಡ ಮನುವು ಬರ್ಹಿಷ್ಮತೀ ಎಂಬ ತನ್ನ ರಾಜಧಾನಿಯನ್ನು ಪ್ರವೇಶಿಸಿದನು. ಅಲ್ಲಿ ಅವನು ಕುಶಕಾಶಗಳೆಂಬ ಹಸಿರು ಹುಲ್ಲಿನ ಆಸನವನ್ನು ಕಲ್ಪಿಸಿ ಭಗವಂತನನ್ನು ಅರ್ಚಿಸಿದನು. ನಿತ್ಯ ಹರಿದ್ವರ್ಣದಿಂದ ಶೋಭಿಸುತ್ತಿದ್ದ ಆ ಹುಲ್ಲು ನಿಜವಾಗಿ ಭಗವಂತನು ಹಿರಣ್ಯಾಕ್ಷನನ್ನು ಸಂಹರಿಸಲು ವರಾಹಾವತಾರವೆತ್ತಿದಾಗ ಅವನ ತನುವಿನ ರೋಮಗಳು ಬಿದ್ದು ಉಂಟಾಗಿದ್ದವು! ಋಷಿಮುನಿಗಳು ಅಂಥ ಹುಲ್ಲಿನಿಂದಲೇ ಅವನನ್ನು ಅರ್ಚಿಸುತ್ತಿದ್ದರು! ಹಾಗಾಗಿ, ಆ ರಾಜಧಾನಿಗೆ ಬರ್ಹಿಷ್ಮತೀ ಎಂಬ ಹೆಸರು ಪ್ರಾಪ್ತವಾಗಿತ್ತು! ಯಾವ ಭಗವಂತನ ದಯೆಯಿಂದ ಅಖಂಡ ಭೂಮಂಡಲದ ಆಳ್ವಿಕೆಯ ಭಾಗ್ಯವೂ ಬರ್ಹಿಷ್ಮತಿಯಂಥ ನಗರದಲ್ಲಿ ವಾಸಿಸುವ ಸೌಭಾಗ್ಯವೂ ದೊರೆತಿತ್ತೋ, ಅಂಥ ಶ್ರೀಹರಿಯನ್ನು ಅರ್ಚಿಸಿದ ಮನುವು ತನ್ನ ವಿಶಾಲವಾದ ಅರಮನೆಯನ್ನು ಪ್ರವೇಶಿಸಿದನು. ತನ್ನ ಪತ್ನೀಪುತ್ರರೊಂದಿಗೆ ಶ್ರೀಹರಿಯನ್ನು ಅರ್ಚಿಸುತ್ತಾ, ಅವನನ್ನೇ ಧ್ಯಾನಿಸುತ್ತಾ ಕೀರ್ತಿಸುತ್ತಾ ಒಂದು ಇಡೀ ಮನ್ವಂತರದ ತನ್ನ ದೀರ್ಘಾಯುಷ್ಯವನ್ನು ಸುಖಸಂತೋಷಗಳಿಂದ ಕಳೆದನು; ಮುನಿಗಳು ಕೇಳಲಾಗಿ ವಿವಿಧ ವರ್ಣಾಶ್ರಮಧರ್ಮಗಳನ್ನು ವಿವರಿಸಿದನು. ರಾಜನಾದ ಅವನ ಕೀರ್ತಿಯು ಎಲ್ಲೆಡೆ ಹರಡಿತು!

* * *

ಮಾತಾಪಿತೃಗಳ ನಿರ್ಗಮನದ ಅನಂತರ, ದೇವಹೂತಿಯು ಶುದ್ಧವಾದ ಮನಸ್ಸಿನಿಂದಲೂ ಪ್ರೀತಿಗೌರವಗಳಿಂದಲೂ ಪತಿಯ ಇಂಗಿತವನ್ನು ಅರ್ಥಮಾಡಿಕೊಳ್ಳುತ್ತಾ ಮಧುರವಾಗಿ ಮಾತನಾಡುತ್ತಾ, ಪಾರ್ವತಿಯು ಶಿವನನ್ನು ಸೇವಿಸುವಂತೆ ಕರ್ದಮ ಮುನಿಯನ್ನು ಸೇವಿಸಿದಳು. ಅತಿಯಾಸೆ, ಅಹಂಕಾರ, ಲೋಭ, ದ್ವೇಷ, ಮದಗಳಿಲ್ಲದೆ ಶಾಂತಚಿತ್ತದಿಂದ ಕೂಡಿದ್ದ ಅವಳು ಮುನಿಯ ಮನಸ್ಸಿಗೆ ಬಹುವಾದ ಸಂತೋಷವನ್ನುಂಟುಮಾಡಿದಳು. ರಾಜಕುಮಾರಿಯಾಗಿದ್ದ ದೇವಹೂತಿ, ಕರ್ದಮಮುನಿಯನ್ನು ದೈವಕ್ಕಿಂತಲೂ ಹೆಚ್ಚಾಗಿ ನೋಡಿಕೊಂಡಳು! ಅರಮನೆಯ ಸುಖದಲ್ಲಿ ಬೆಳೆದ ಸುಕುಮಾರಿಯಾಗಿದ್ದರೂ ಆಶ್ರಮದ ಕಠಿಣಜೀವನಕ್ಕೆ ಹೊಂದಿಕೊಂಡು ವ್ರತಗಳನ್ನಾಚರಿಸುತ್ತಾ ಕೃಶಳಾದಳು!

ದೇವಹೂತಿಯ ಭಕ್ತಿ, ಸೇವೆಗಳಿಂದ ಸಂತುಷ್ಟನಾದ ಕರ್ದಮನು ಒಂದು ದಿನ ಅವಳಿಗೆ ಹೇಳಿದನು, “ಮನುಪುತ್ರಿ, ನಿನ್ನ ಭಕ್ತಿಯುತ ಸೇವೆಯಿಂದ ನಾನು ಬಹಳ ಸಂತುಷ್ಟನಾಗಿದ್ದೇನೆ! ದೇಹವು ಎಲ್ಲರಿಗೂ ಅತ್ಯಂತ ಪ್ರಿಯವಾದುದು. ಆದರೆ ನೀನು ನನಗಾಗಿ ನಿನ್ನ ಸುಕುಮಾರ ತನುವನ್ನೂ ಉಪೇಕ್ಷಿಸಿ ಇಷ್ಟು ಕೃಶಳಾಗಿರುವೆ! ನಾನಾದರೋ, ಭಗವಂತನ ಕೃಪೆಯಿಂದ  ಸ್ವಧರ್ಮದಲ್ಲಿ ನಿರತನಾಗಿದ್ದೇನೆ; ತಪಸ್ಸಿದ್ಧಿಯನ್ನು ಪಡೆದಿದ್ದೇನೆ. ಭಯ, ಶೋಕಗಳನ್ನು ದೂರಮಾಡುವ ಅಂಥ ಸಿದ್ಧಿಯನ್ನು ಪಡೆದಿದ್ದೇನೆ. ಭಯ, ಶೋಕಗಳನ್ನು ದೂರಮಾಡುವ ಅಂಥ ಸಿದ್ಧಿಯನ್ನು ನಿನಗೂ ಕರುಣಿಸುತ್ತೇನೆ! ಪ್ರಿಯ ಪತ್ನಿಯೇ, ಭಗವಂತನ ದಯೆಗಿಂತಲೂ ಮಿಗಿಲಾದ ಭಾಗ್ಯ ಯಾವುದಿದೆ? ಎಲ್ಲ ಭೋಗಭಾಗ್ಯಗಳೂ ಅವನು ಒಮ್ಮೆ ತನ್ನ ಹುಬ್ಬೇರಿಸುವುದರಿಂದಲೇ ನಾಶವಾಗಿಬಿಡಬಲ್ಲವು! ಯಾವ ಪಾರಮಾರ್ಥಿಕ ಸಿರಿಸಂಪತ್ತನ್ನು ಶ್ರೀಮಂತರಿಗೂ ರಾಜರಿಗೂ ಪಡೆಯಲು ಬಹು ದುರ್ಲಭವಾಗಿರುವುದೋ, ಅಂಥ ಅಪೂರ್ವ ಸಂಪತ್ತನ್ನು ನಿನ್ನ ಎಣೆಯಿಲ್ಲದ ಪತಿಭಕ್ತಿಯಿಂದ ನೀನು ಪಡೆದಿರುವೆ. ಅದನ್ನು ನೀನು ಅನುಭವಿಸು!”

ಪತಿಯ ಮಾತನ್ನು ಕೇಳಿ ದೇವಹೂತಿಯು ಬಹಳ ಸಂತೋಷಗೊಂಡಳು. ನಾಚಿಕೆಯ ಮೆಲುನಗೆ ಬೀರುತ್ತಾ ಅವಳು ತಲೆಬಾಗಿಸಿ ನಿಧಾನವಾಗಿ ನುಡಿದಳು, “ಪತಿದೇವ! ಬ್ರಾಹ್ಮಣೋತ್ತಮ! ನೀವು ತಪಸ್ಸಿದ್ಧಿಯನ್ನು ಪಡೆದವರೆಂದೂ ಮಹಾಯೋಗಿಗಳೆಂದೂ ನಾನು ಬಲ್ಲೆ! ಆದರೆ ನೀವು ಹಿಂದೆ ವಚನವಿತ್ತಂತೆ ನನಗೆ ತಾಯ್ತನವನ್ನು ಕರುಣಿಸಬೇಕಾಗಿದೆ! ಪತಿದೇವ, ಸ್ತ್ರೀಯರಿಗೆ ಮಕ್ಕಳೇ ಭೂಷಣ! ಆದರೆ ನನ್ನ ದೇಹ ಬಹಳ ಕೃಶವಾಗಿಬಿಟ್ಟಿದೆ! ಅಂತೆಯೇ, ಒಂದು ಉತ್ತಮ ಗೃಹವೂ ಅಗತ್ಯವಾಗಿದೆ!”

ಹೀಗೆ ಹೇಳಿ ದೇವಹೂತಿಯು ಮೌನವಾದಳು.

ಪ್ರಿಯೆಯ ಮಾತುಗಳನ್ನು ಕೇಳಿ ಕರ್ದಮಮುನಿಯು ಅವಳ ಆಸೆಯನ್ನು ಪೂರೈಸಲು ಯೋಗದಿಂದ ಒಂದು ಅದ್ಭುತ ವಿಮಾನವನ್ನು ಸೃಷ್ಟಿಸಿದನು! ಮನಬಂದೆಡೆಗೆ ಚಲಿಸಬಹುದಾಗಿದ್ದ ಆ ವಿಮಾನದಲ್ಲೇ ಒಂದು ಭವ್ಯ ಭವನವೂ ಇತ್ತು! ವಜ್ರವೈಡೂರ್ಯಭರಿತ ಆಸನಗಳೂ, ಮಣಿಮಯ ಸ್ತಂಭಗಳೂ, ವಿವಿಧ ರತ್ನಾಭರಣಗಳೂ ಆ ಭವನದಲ್ಲಿದ್ದವು! ಸರ್ವಕಾಲಗಳಲ್ಲೂ ಸುಖಪ್ರದವಾಗಿದ್ದ ಆ ಸುಂದರ ಭವನವು ಧ್ವಜಪತಾಕೆಗಳಿಂದಲೂ ದುಂಬಿಗಳನ್ನಾಕರ್ಷಿಸುತ್ತಿದ್ದ ಸುಗಂಧಭರಿತ ಪುಷ್ಪಮಾಲಿಕೆಗಳಿಂದಲೂ ಅಲಂಕೃತವಾಗಿತ್ತು! ಉಪ್ಪರಿಗೆಯ ಮೇಲೆ ಉಪ್ಪರಿಗೆಯುಳ್ಳ ಏಳಂತಸ್ತಿನ ಆ ವೈಭವಯುತ ಅರಮನೆಯಲ್ಲಿ ಬಹು ಮೆತ್ತಗಿನ ಹಾಸಿಗೆಗಳುಳ್ಳ ರಮ್ಯ ಮಂಚಗಳಿದ್ದವು! ಬೆರಗುಗೊಳಿಸುವ ಅತ್ಯಂತ ಸುಂದರ ಶಿಲ್ಪಾಕೃತಿಗಳುಳ್ಳ ವಜ್ರನಿರ್ಮಿತ ಗೋಡೆಗಳೂ ಮರಕತವಿದ್ರುಮಗಳಿಂದ ಕೂಡಿದ್ದ ನೆಲಗಳೂ ತೊಳತೊಳಗಿ ಬೆಳಗುತ್ತಿದ್ದವು! ಗೋಡೆಗಳಲ್ಲಿ ಅಲ್ಲಲ್ಲಿ ಇದ್ದ ಪದ್ಮರಾಗ ಕಲ್ಲುಗಳು, ಕಣ್ಣುಗಳಂತೆ ಹೊಳೆಯುತ್ತಿದ್ದವು! ಚಿನ್ನದ ತೋರಣಗಳೂ ಬಾಗಿಲುಗಳೂ ಇದ್ದವು! ಅಲ್ಲಲ್ಲಿ ಹಂಸಪಾರಿವಾಳಗಳು ಮಧುರವಾಗಿ ಕೂಗುತ್ತಾ ಹಾರಾಡುತ್ತಿದ್ದರೆ, ಅವುಗಳಿಗೇ ಭ್ರಮೆಯಾಗುವಂತೆ, ನೈಜವೆಂಬಂತೆಯೇ ಕಾಣುತ್ತಿದ್ದ ಜೀವರಹಿತ ಕೃತ್ರಿಮ ಪಕ್ಷಿಗಳೂ ಇದ್ದವು! ಆ ಅರಮನೆಯಲ್ಲಿ ರಮ್ಯಮನೋಹರವಾದ ವಿಶ್ರಾಂತ ಕೊಠಡಿಗಳು, ವಿಲಾಸ ಕೊಠಡಿಗಳು, ಸುಂದರ ಪ್ರಾಂಗಣಗಳಿದ್ದು, ಅದನ್ನು ಸೃಷ್ಟಿಸಿದ ಕರ್ದಮಮುನಿಯನ್ನೇ ಬೆರಗುಗೊಳಿಸಿತು!

ಅಂಥ ಅದ್ಭುತವಾದ ಭವನವನ್ನು ಕಂಡ ದೇವಹೂತಿ, ಬಹು ವಿಸ್ಮಯಗೊಂಡಳು! ಆದರೆ ಒಡನೆಯೇ, ಕೃಶವಾದ ತನ್ನ ದೇಹವನ್ನೂ, ಜಟೆಗಟ್ಟಿದ್ದ ತನ್ನ ತಲೆಗೂದಲನ್ನೂ, ಮಲಿನವಾಗಿದ್ದ ತನ್ನ ವಸ್ತ್ರಗಳನ್ನೂ ನೋಡಿಕೊಂಡು ಆ ಮನೆಯಲ್ಲಿ ತಾನು ಹೇಗೆ ವಾಸಿಸಬಲ್ಲೆನೆಂದು ಖಿನ್ನಮುಖಿಯಾದಳು.

ದೇವಹೂತಿಯ ಮನವನ್ನು ಗ್ರಹಿಸಿದ ಕರ್ದಮನು ಹೇಳಿದ, “ಭೀರು! ಮಹಾವಿಷ್ಣುವಿನಿಂದಲೇ ಸೃಷ್ಟಿಸಲಾದ ಈ ಬಿಂದುಸರೋವರದಲ್ಲಿ ಮೊದಲು ಸ್ನಾನಮಾಡಿ ಅನಂತರ ಆ ಭವ್ಯ ವಿಮಾನವನ್ನೇರು!”

ಪತಿಯ ಮಾತನ್ನು ಒಪ್ಪಿ ದೇವಹೂತಿಯು ಬಿಂದುಸರೋವರದಲ್ಲಿ ಮಿಂದಳು. ಆ ಸರೋವರದಲ್ಲಿ ಅವಳಿಗೆ ಮತ್ತೊಂದು ಅಚ್ಚರಿ ಕಾದಿತ್ತು. ಅವಳು ಆ ಸರೋವರದಲ್ಲೊಂದು ಮನೆಯನ್ನು ಕಂಡಳು! ಆ ಮನೆಯಲ್ಲಿ ತಾವರೆಯಂತೆ ಪರಿಮಳ ಸೂಸುತ್ತಿದ್ದ, ನವಯೌವನದಿಂದ ಕೂಡಿದ್ದ ಸಾವಿರ ಕನ್ಯೆಯರಿದ್ದರು!

ದೇವಹೂತಿಯು ಅತ್ಯಾಶ್ಚರ್ಯದಿಂದ ನೋಡುತ್ತಿರಲು, ಅವರು ಅವಳಿಗೆ ನಮಸ್ಕರಿಸುತ್ತಾ ತಾವೆಲ್ಲಾ ಅವಳ ದಾಸಿಯರೆಂದೂ ಅವಳು ಹೇಳಿದಂತೆ ಮಾಡುವೆವೆಂದೂ ಹೇಳುತ್ತಾ ಅವಳಿಗೆ ಪರಿಮಳದ್ರವ್ಯಗಳಿಂದ ಸ್ನಾನಮಾಡಿಸಿ ಸುಂದರವಾದ ನೂತನ ವಸಾ್ತ್ರಭರಣಗಳನ್ನು ತೊಡಿಸಿದರು! ಅನಂತರ ಅವಳಿಗೆ ತಿನ್ನಲು ಉತ್ತಮವಾದ ಆಹಾರವನ್ನೂ ಕುಡಿಯಲು ಆಸವವೆಂಬ ಪಾನೀಯವನ್ನೂ ಕೊಟ್ಟರು!

ತೃಪ್ತಳಾದ ದೇವಹೂತಿಯು ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿಕೊಂಡಳು. ಅವಳು ಈಗ ಹಿಂದಿನ ರಾಜಕುಮಾರಿಯಂತೆಯೇ ಬಹಳ ಸುಂದರಳಾಗಿ ಕಂಗೊಳಿಸುತ್ತಿದ್ದಳು! ಮಲಿನರಹಿತವಾದ ಅವಳ ಕೋಮಲ ತನು, ತೊಳತೊಳಗಿ ಬೆಳಗುತ್ತಿತ್ತು! ಸ್ವರ್ಣಹಾರದಿಂದ ಅವಳ ಕೈಗಳು, ಘಲುಘಲುರೆನುತ್ತಿದ್ದ ಕಿರುಗೆಜ್ಜೆಗಳಿಂದ ಅಲಂಕರಿಸಲ್ಪಟ್ಟಿದ್ದ ಅವಳ ಚಿಗುರಿನಂಥ ಕೋಮಲ ಕಾಲ್ಗಳು, ರತ್ನಗಳಿಂದ ಕೂಡಿದ್ದ ಕಾಂಚೀದಾಮದಿಂದ ಅಲಂಕರಿಸಲ್ಪಟ್ಟಿದ್ದ ದುಂಡುನಿತಂಬಗಳು ಬಹುವಾಗಿ ಶೋಭಿಸಿದವು! ಮುತ್ತಿನ ಸಾಲಿನಂತಹ ಬಿಳಿಯ ದಂತಪಂಕ್ತಿಯಿಂದಲೂ, ಸುಂದರ ಭ್ರೂಲತೆಗಳಿಂದಲೂ, ಕಮಲದಳಗಳನ್ನೂ ಸೌಂದರ್ಯದಲ್ಲಿ ಸೋಲಿಸುತ್ತಿದ್ದ ಕಂಗಳಿನಿಂದಲೂ, ಭ್ರಮರಸಮೂಹದಂಥ ಕಪ್ಪು ಮುಂಗುರುಳಿನಿಂದಲೂ ಅವಳ ಮುಖ, ಹೊಳೆಹೊಳೆಯುತ್ತಿತ್ತು!

ದೇವಹೂತಿಗೆ ಕೂಡಲೇ ತನ್ನ ಪ್ರಿಯಪತಿಯ ನೆನಪಾಗಲು, ಅವಳು ಆ ಸಾವಿರ ದಾಸಿಯರೊಂದಿಗೆ ತನಗೇ ತಿಳಿಯದಂತೆ ಅವನಿದ್ದಲ್ಲಿ ಬಂದಳು! ಪವಾಡಸದೃಶದಂತೆ ಎಲ್ಲವೂ ನಡೆಯುತ್ತಿರಲು ಆಶ್ಚರ್ಯಗೊಂಡ ದೇವಹೂತಿ, ಪತಿಯನ್ನು ಕಂಡಕೂಡಲೇ ಲಜ್ಜಾನ್ವಿತೆಯಾಗಿ ಮುಗುಳ್ನಗುತ್ತಾ ನಿಂತಳು.

ಸಾವಿರ ವಿದ್ಯಾಧರಿಯರಿಂದ ಸುತ್ತುವರಿಯಲ್ಪಟ್ಟಿದ್ದ ದೇವಹೂತಿಯು ದಿವ್ಯಾಲಂಕಾರಭೂಷಿತಳಾಗಿ, ಉತ್ತಮೋತ್ತಮ ವಸ್ತ್ರಗಳನ್ನು ಧರಿಸಿ, ಪೂರ್ಣಚಂದ್ರನಂಥ ಮುದ್ದುಮುಖದಿಂದಲೂ, ಕಮಲದ ಮೊಗ್ಗುಗಳಂತೆ ದುಂಡಾದ ರುಚಿರಸ್ತನಗಳಿಂದಲೂ, ಬಳುಕುತ್ತಿದ್ದ ಬಳ್ಳಿನಡುವಿನಿಂದಲೂ ಕೂಡಿರಲು, ಕರ್ದಮನು ಅವಳಲ್ಲಿ ಅನುರಕ್ತನಾಗಿ ಅವಳನ್ನು ವಿಮಾನಕ್ಕೆ ಹತ್ತಿಸಿಕೊಂಡನು. ಆದರೆ ಆಗಲೂ ಅವನ ಆತ್ಮಜ್ಞಾನ ಲುಪ್ತವಾಗಲಿಲ್ಲ!

ಯೋಗಶಕ್ತಿಯಿಂದ ತಾನು ಸೃಷ್ಟಿಸಿದ ಆ ವಿಮಾನದಲ್ಲಿ ತನ್ನ ಪತ್ನಿಯೊಂದಿಗೆ ಸಾವಿರ ಕನ್ಯೆಯರ ನಡುವೆ ಕುಳಿತ ಕರ್ದಮನು, ನಕ್ಷತ್ರಗಳ ನಡುವಿನ ಚಂದ್ರನಂತೆ ಶೋಭಿಸಿದನು! ಆ ವಿಮಾನದಲ್ಲಿ ಅವನು, ಕುಬೇರನೂ ಇತರ ದಿಕ್ಪಾಲಕರೂ ವಿಹರಿಸುವ ಮೇರು ಪರ್ವತಕ್ಕೆ ಹೋದನು! ಸುರತಸುಖವನ್ನು ವರ್ಧಿಸುವಂಥ ತಂಗಾಳಿ ಬೀಸುತ್ತಿದ್ದ ಆ ಸುಂದರ ಸ್ಥಳದಲ್ಲಿ ಅವನು ತನ್ನ ಪತ್ನಿಯೊಂದಿಗೆ ಅನೇಕ ವರ್ಷಗಳ ಕಾಲ ರಮಿಸಿದನು. ಅನಂತರ ಅವನು ವೈಶ್ರಂಭಕ, ಸುರಸನ, ನಂದನ, ಪುಷ್ಪಭದ್ರಕ, ಮಾನಸ ಸರೋವರ, ಚೈತ್ರರಥ, ಮೊದಲಾದ ರಮ್ಯಮನೋಹರ ಸ್ಥಳಗಳಲ್ಲಿ ತನ್ನ ಪತ್ನಿಯೊಂದಿಗೆ ವಿಹರಿಸಿದನು! ಅನಂತರ, ಗಾಳಿಯು ಅನಿರ್ಬಂಧಿತವಾಗಿ ಎಲ್ಲೆಡೆ ಚಲಿಸುವಂತೆ, ಅವನು ವಿವಿಧ ಲೋಕಗಳಿಗೆ ಪ್ರಯಾಣ ಮಾಡಿದನು! ದೇವಹೂತಿಗೆ ಇಡೀ ವಿಶ್ವವನ್ನು ತೋರಿಸುತ್ತಾ ಅವಳನ್ನು ಬಹಳ ಸಂತೋಷಪಡಿಸುತ್ತಾ ಅವನು ವೈಭವದಲ್ಲಿ ದೇವತೆಗಳನ್ನೂ ಮೀರಿಸಿದನು!

ಪಾಪಹರವಾದ ಗಂಗೆಗೂ ಮೂಲವಾಗಿರುವ ಆ ದೇವೋತ್ತಮ ಪರಮ ಪುರುಷನ ಚರಣಾರವಿಂದಗಳಲ್ಲಿ ಆಶ್ರಯ ಪಡೆದಿರುವವರಿಗೆ ಪಡೆಯಲಶಕ್ಯವಾದುದಾದರೂ ಏನಿದೆ?

ಭೂಲೋಕ ಮತ್ತು ಇತರ ಲೋಕಗಳ ವಿಸ್ಮಯಗಳನ್ನೆಲ್ಲಾ ದೇವಹೂತಿಗೆ ಹೀಗೆ ತೋರಿಸಿದ ಬಳಿಕ, ಮಹಾಯೋಗಿಯಾದ ಕರ್ದಮನು ಪುನಃ ತನ್ನ ಆಶ್ರಮಕ್ಕೆ ಹಿಂದಿರುಗಿದನು. ಅಲ್ಲಿ ಅವನು ತನ್ನನ್ನೇ ಒಂಬತ್ತು ರೂಪಗಳಾಗಿ ವಿಸ್ತರಿಸಿಕೊಂಡು ಸುರತಸುಖಕ್ಕಾಗಿ ಬಹಳ ಕಾತರಿಸುತ್ತಿದ್ದ ದೇವಹೂತಿಯೊಡನೆ ದೀರ್ಘಕಾಲ ರಮಿಸಿದನು! ಮತ್ತೆ ಮತ್ತೆ ಸುರಿಸುತ್ತಿದ್ದ ಅನುರಾಗದಿಂದ ಅವರೀರ್ವರೂ ಹಾಗೆ ರಮಿಸುತ್ತಿರಲು, ನೂರು ಶರದೃತುಗಳು ಒಂದು ಕ್ಷಣದಂತೆ ಕಳೆದುಹೋದವು!

ರತಿಕ್ರೀಡೆಯ ಅಂತ್ಯದಲ್ಲಿ, ಒಂಬತ್ತು ರೂಪಗಳಲ್ಲಿದ್ದ ಕರ್ದಮನು ದೇವಹೂತಿಯೊಡನೆ ಒಂಬತ್ತು ಬಾರಿ ಸಂಯೋಗ ಹೊಂದಿ ಅವಳಿಗೆ ಅತೀವ ಆನಂದವುಂಟುಮಾಡಿದನು!

ಅದೇ ದಿನವೇ, ದೇವಹೂತಿಯು ಒಂಬತ್ತು ಸುಂದರ ಪುತ್ರಿಯರಿಗೆ ಜನ್ಮವಿತ್ತಳು! ಆ ಒಂಬತ್ತು ಹೆಣ್ಣು ಮಕ್ಕಳೂ ಸುಂದರವಾದ ಅಂಗಾಂಗಗಳನ್ನು ಹೊಂದಿದ್ದು, ಕೆಂದಾವರೆಯ ಪರಿಮಳ ಬೀರುತ್ತಿದ್ದರು!

          (ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi