ಆಂಗ್ಲ ಮೂಲ: ಬ್ಯಾಕ್ ಟು ಗಾಡ್‌ಹೆಡ್
ಮಾನವ ಜೀವಿಗಳಿಗೆ ಯಾವುದಾದರೂ ಒಂದು ರೀತಿಯ ಶಿಕ್ಷಣದ ಅಗತ್ಯವಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ವಿದ್ಯಾರ್ಥಿಗಳನ್ನು ಉದ್ಯೋಗಕ್ಕಾಗಿ ಸಿದ್ಧಪಡಿಸಬೇಕೆಂದು ಕೆಲವು ಶಿಕ್ಷಕರು ಹೇಳುತ್ತಾರೆ. ಜ್ಞಾನದ ಅನ್ವೇಷಣೆಯೇ ಶಿಕ್ಷಣವನ್ನು ಸಾಕಷ್ಟು ಸಮರ್ಥಿಸುತ್ತದೆ ಎಂದು ಇತರರು ಪ್ರತಿಪಾದಿಸುತ್ತಾರೆ. ವ್ಯಕ್ತಿಯ ಔದ್ಯೋಗಿಕ ಶಿಕ್ಷಣ ಅಥವಾ ಜ್ಞಾನ ಶೋಧನೆಯು ಅವನ ಪರಿಚಯವನ್ನು, ಜೀವನದ ಉದ್ದೇಶ, ಭಗವಂತ ಮತ್ತು ವಿಶ್ವದೊಂದಿಗೆ ಅವನ ಬಾಂಧವ್ಯ ಹಾಗೂ ಲೌಕಿಕ ಸಂಕಟಗಳಿಂದ ಮುಕ್ತಿ ಪಡೆಯುವ ಮಾರ್ಗವನ್ನು ತೋರದಿದ್ದರೆ ಅವನು ಇನ್ನು ಏನೇ ಕಲಿತರೂ ಅದು ಸಮಯ ವ್ಯರ್ಥವಷ್ಟೆ.
ವಿದ್ವಾಂಸ – ಅಂಬಿಗ
ಅನುಚಿತ ಗರ್ವ ತೋರಿದ ವಿದ್ವಾಂಸ ಮತ್ತು ಅಂಬಿಗನ ಘಟನೆಯು ಈ ಅಂಶವನ್ನು ಸ್ಪಷ್ಟಪಡಿಸುತ್ತದೆ. ಒಮ್ಮೆ ಒಬ್ಬ ವಿದ್ವಾಂಸನು ನದಿಯನ್ನು ದಾಟಲು ಒಬ್ಬ ದೋಣಿ ನಡೆಸುವವನನ್ನು ನಿಯೋಜಿಸಿಕೊಂಡನು. ಅಂಬಿಗನು ಅಶಿಕ್ಷಿತ ಎನ್ನುವುದನ್ನು ಗಮನಿಸಿದ ಆ ವಿದ್ವಾಂಸನು ತನ್ನ ಜ್ಞಾನವನ್ನು ಪ್ರದರ್ಶಿಸಲಾರಂಭಿಸಿದ ಮತ್ತು ಅದೇ ವೇಳೆ ಅಂಬಿಗನನ್ನು ಟೀಕಿಸತೊಡಗಿದ.
ಆ ವಿದ್ವಾಂಸನು ಹೇಳಿದ, “ಅಂಬಿಗನೇ, ನೋಡು, ಆಕಾಶದಲ್ಲಿ ಮೊದಲ ತಾರೆಗಳು ಕಾಣತೊಡಗಿವೆ. ಗ್ರಹಗಳು ಮತ್ತು ತಾರೆಗಳು ಒಂದು ಪ್ರಮಾಣದಲ್ಲಿ ಅಕ್ಕಪಕ್ಕ ಬರುವ ಅದ್ಭುತವಾದ ದೃಶ್ಯವನ್ನು ನಾವು ನೋಡಬಹುದು. ನಿನಗೆ ಖಗೋಳ ವಿಜ್ಞಾನ ಗೊತ್ತೇ?”
ಅಂಬಿಗನು ಉತ್ತರಿಸಿದ, “ಇಲ್ಲ, ಸ್ವಾಮಿ.” ತನಗೆ ದೋಣಿ ನಡೆಸುವುದನ್ನು ಬಿಟ್ಟು ಬೇರೇನೂ ತಿಳಿಯದು ಎಂದು ಅವನು ಹೇಳಿದ.
ವಿದ್ವಾಂಸ ಆಶ್ಚರ್ಯದಿಂದ ಹೇಳಿದ, “ಏನು, ನಿನಗೆ ಖಗೋಳ ವಿಜ್ಞಾನ ಗೊತ್ತಿಲ್ಲವೇ? ಅದೃಷ್ಟಹೀನನೇ! ನಿನ್ನ ಬದುಕು ಶೇಕಡ 25ರಷ್ಟು ವ್ಯರ್ಥವಾಗಿ ಹೋಯಿತು.”
ಸ್ವಲ್ಪ ಸಮಯ ಕಳೆಯಿತು. ವಿದ್ವಾಂಸನು ತನ್ನ ಸುತ್ತಮುತ್ತಲಿನ ಭೂಮಿಯನ್ನು ಕುರಿತು ಮಾತನಾಡಲಾರಂಭಿಸಿದ. ತನಗೆ ಭೂ ವಿಜ್ಞಾನ ಚೆನ್ನಾಗಿ ಗೊತ್ತು ಎಂದು ಅವನು ಜಂಭದಿಂದ ನುಡಿದ. “ನಿನಗೆ ಭೂ ವಿಜ್ಞಾನ ಗೊತ್ತೇ?” ಎಂದು ವಿದ್ವಾಂಸನು ಕೇಳಿದಾಗ ಅಂಬಿಗನು ತನಗೆ ತಿಳಿಯದೆಂದು ಉತ್ತರಿಸಿದ. “ಹಾಗಾದರೆ ನಿನ್ನ ಬದುಕಿನ ಶೇಕಡ 50 ಭಾಗ ವ್ಯರ್ಥವಾಗಿ ಹೋಯಿತು” ಎಂದು ವಿದ್ವಾಂಸನು ಘೋಷಿಸಿದ. ಅನಂತರ ವಿದ್ವಾಂಸನು ಮನೋ ವಿಜ್ಞಾನದ ಬಗೆಗೆ ಮಾತನಾಡಿದ. ಅದರ ಬಗೆಗೆ ತನಗೇನೂ ತಿಳಿಯದೆಂದು ಅಂಬಿಗನು ಹೇಳಿದಾಗ, ವಿದ್ವಾಂಸನು, “ನಿನ್ನ ಬದುಕಿನ ಶೇಕಡ 75 ಭಾಗ ವ್ಯರ್ಥವಾಯಿತು” ಎಂದು ಸಾರಿದ.
ದಿಢೀರನೆ ಕಪ್ಪು ಮೋಡಗಳು ಮಳೆಯನ್ನು ಸುರಿಸಲಾರಂಭಿಸಿದವು. ಅನಂತರ ಬಿರುಗಾಳಿಯು ಸಣ್ಣ ದೋಣಿಯನ್ನು ಅಲ್ಲಾಡಿಸಿತು. ಕೆಲವೇ ನಿಮಿಷಗಳಲ್ಲಿ ಬಿರುಗಾಳಿಯು ಎಷ್ಟು ತೀವ್ರವಾಯಿತೆಂದರೆ ಅಲೆಗಳು ದೋಣಿಯ ಎರಡೂ ಬದಿಗಳಲ್ಲಿ ಅಪ್ಪಳಿಸಿದವು. ತಾವು ದೋಣಿಯನ್ನು ಬಿಟ್ಟು ಹೊರಡಬೇಕೆಂದು ಅಂಬಿಗನಿಗೆ ಅರಿವಾಯಿತು. ಅವನು ವಿದ್ವಾಂಸನತ್ತ ತಿರುಗಿ ಹೇಳಿದ, “ಸ್ವಾಮಿ, ಈ ದೋಣಿಯಲ್ಲಿ ಇನ್ನು ಸಾಗಲಾಗದು. ನಾವು ಈಜಿಕೊಂಡು ಹೋಗಬೇಕು. ನಿಮಗೆ ಈಜಲು ಬರುತ್ತದೆಯೇ?”
ಆದರೆ ವಿದ್ವಾಂಸನು ಉತ್ತರಿಸಿದ, “ನನಗೆ ಈಜಲು ಬರುವುದಿಲ್ಲ.”
ಅಂಬಿಗನು ನುಡಿದ, “ಸ್ವಾಮಿ, ನಿಮ್ಮ ಬದುಕಿನ ಶೇಕಡ 100 ಭಾಗ ವ್ಯರ್ಥವಾಯಿತು!” ಅನಂತರ ಅವನು ನದಿಗೆ ಹಾರಿದ ಮತ್ತು ಈಜಿಕೊಂಡು ಹೋದ. ಆದರೆ ವಿದ್ವಾಂಸನು ನದಿಯಲ್ಲಿ ಮುಳುಗಿಹೋದ.
ಈ ರೀತಿ ಒಬ್ಬನು ತಾನು ವಿದ್ಯಾವಂತನೆಂದು ನಟಿಸಿದರೂ ಬದುಕಿನ ಸಂಕಟಗಳಿಂದ ಮತ್ತು ಕೊನೆಗೆ ಸಾವಿನಿಂದ ತನ್ನನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗದಿದ್ದರೆ ಅವನ ಶಿಕ್ಷಣವು ವ್ಯರ್ಥ. ತನ್ನ ಬದುಕಿನ ಗೊಂದಲ, ನೋವುಗಳನ್ನು ನಿವಾರಿಸಿಕೊಳ್ಳಲು ತನ್ನ ಮಾನವ ಜೀವನವನ್ನು ಬಳಸಿಕೊಳ್ಳದ ಕೃಪಣ ಅಥವಾ ಜಿಪುಣ ಮಾನವ ಜೀವಿಯ ಬಗೆಗೆ ವೈದಿಕ ಸಾಹಿತ್ಯವು ಪ್ರಸ್ತಾಪಿಸುತ್ತದೆ. ಗರ್ಗ ಉಪನಿಷತ್ ಹೇಳುತ್ತದೆ, “ಅವನು ಬದುಕಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದೆ ಮತ್ತು ಆತ್ಮ ಸಾಕ್ಷಾತ್ಕಾರ ವಿಜ್ಞಾನವನ್ನು ಅರ್ಥಮಾಡಿಕೊಳ್ಳದೆ ಬೆಕ್ಕು ಮತ್ತು ನಾಯಿಗಳಂತೆ ಈ ಲೋಕವನ್ನು ತ್ಯಜಿಸುವ ಜಿಪುಣ.” ಜ್ಞಾನೋದಯವಾಗುವುದರಲ್ಲಿ ಮತ್ತು ಬದುಕಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದರಲ್ಲಿ ನಿಜವಾದ ಸಂಪತ್ತು ಅಡಗಿದೆ. ಈ ಅವಕಾಶವನ್ನು ಕಳೆದುಕೊಳ್ಳುವ ಅಥವಾ ನಿರ್ಲಕ್ಷಿಸುವ ಶಿಕ್ಷಣವನ್ನು ಮಾನವ ಜಾತಿಗಿಂತ ಕೀಳು ಎಂದು ಪರಿಗಣಿಸಬೇಕು.
ಸಮಸ್ಯೆ ಎದುರಿಸುವುದು
ಹಾಗಾದರೆ ಅಸ್ತಿತ್ವದ ಸಮಸ್ಯೆಗಳಾವುವು? ಮೊದಲನೆಯದಾಗಿ ನಾಲ್ಕು ಸುತ್ತಿನ ಸಂಕಟಗಳಿವೆ: ಹುಟ್ಟು, ಸಾವು, ರೋಗ ಮತ್ತು ವೃದ್ಧಾಪ್ಯ. ಕ್ರಿಮಿ ಕೀಟಗಳು ಮತ್ತು ಮಾನವ ಶತ್ರುಗಳಂತಹ ಇತರ ಜೀವಿಗಳಿಂದ ಉಂಟಾಗುವ ನೋವು; ಮಾನಸಿಕ ಆತಂಕ, ಅಜೀರ್ಣ ಮತ್ತು ಅವಯವಗಳ ಮುರಿಯುವಿಕೆಯಂತಹ ನಮ್ಮ ದೇಹ ಪ್ರಕೃತಿಯಿಂದ ಉಂಟಾಗುವ ನೋವು; ಭೂಕಂಪನ, ಬರ ಮತ್ತು ಪ್ರವಾಹಗಳಂತಹ ಮಾನವ ಹತೋಟಿಯನ್ನು ಮೀರಿದ ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ನೋವು. ನಮ್ಮ ಶಿಕ್ಷಣವು ಫಲಪ್ರದವಾಗಬೇಕಾದರೆ, ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅದು ನಮಗೆ ಸಹಾಯ ಮಾಡಬೇಕು.
ಮಾನವ ಜೀವನವು ನೋವುಗಳಿಂದ ಮುಕ್ತವಾಗಿರಬೇಕು ಎನ್ನುವ ನಮ್ಮ ಕಲ್ಪನೆಯನ್ನು ಕೆಲವರು ಆಕ್ಷೇಪಿಸುತ್ತಾರೆ. ಸಂಕಷ್ಟಗಳು ಮಾನವನಿಗೆ ಸಹಜವಾದವು ಎಂದು ಹೇಳುವ ಕೆಲವರು, ನಾವು ನೋವು ಅನುಭವಿಸಲೆಂದೇ ಇರುವುದು ಎಂದು ವಾದಿಸುತ್ತಾರೆ. ಏನಾದರಾಗಲಿ, ಎಲ್ಲ ಜಾತಿ, ವರ್ಗಗಳ ಜೀವಿಗಳಿಗೆ ನೋವನ್ನು ತಪ್ಪಿಸಿಕೊಂಡು ಸುಖವಾಗಿರಬೇಕು ಎನ್ನುವ ಅಪೇಕ್ಷೆ ಉಂಟು. ಯಾರೂ ಕೂಡ ಸಂಕಷ್ಟವನ್ನು ಸಹಜವಾಗಿ ಸ್ವೀಕರಿಸುವುದಿಲ್ಲ. ನೋವು ಅನಿವಾರ್ಯ ಇರಬಹುದು, ಆದರೂ ತತ್ತ್ವಜ್ಞಾನಿಗಳು, ಮಾನವತಾವಾದಿಗಳು ಮತ್ತು ರಾಜಕಾರಣಿಗಳು ಇದಕ್ಕೆ ಪರಿಹಾರವನ್ನು ಹುಡುಕುತ್ತಾರೆ. ಮಾನವ ಜೀವಿಗಳಷ್ಟೇ ಅಲ್ಲ, ಇರುವೆ ಕೂಡ ಹತ್ಯೆಯನ್ನು ಪ್ರತಿರೋಧಿಸುತ್ತದೆ. ವೃದ್ಧಾಪ್ಯದೊಂದಿಗೆ ಹೀನಸ್ಥಿತಿಗೆ ಬರಲು ಕಾತರದಿಂದ ಇರುವಿರಾ ಎಂದು ಯಾರನ್ನಾದರೂ ಕೇಳಿ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಯಾರೂ ಕೂಡ ಇಲ್ಲ ಎನ್ನಬೇಕು. ರೋಗ ಅಥವಾ ಸಾವಿನ ಕುರಿತು ಏನು? ಈ ಕ್ಷಣದಲ್ಲಿ ಸಾಯಲು ಯಾರಿಗಾದರೂ ಇಷ್ಟವಿರುತ್ತದೆಯೇ? “ಇಲ್ಲ, ವಂದನೆಗಳು.” ಕೆಲವು ಬಾರಿ ಜನರು ಇಂದ್ರಿಯ ಸುಖದ ಮೂಲಕ ನೋವಿಗೆ ತಡೆಹಾಕಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ, ಮಾದಕ ದ್ರವ್ಯ ಅಥವಾ ಮದ್ಯದ ಮೂಲಕ ತಮ್ಮ ಆತಂಕಗಳನ್ನು ತಾತ್ಕಾಲಿಕವಾಗಿ ಮರೆಯಲು ಪ್ರಯತ್ನಿಸುತ್ತಾರೆ. ಆದರೆ ಅಮಲು ಇಳಿದ ಮೇಲೆ ಆತಂಕಗಳು ಮರಳುತ್ತವೆ.
ಹುಟ್ಟು, ಸಾವು ವೃದ್ಧಾಪ್ಯ ಮತ್ತು ರೋಗಗಳ ನೋವನ್ನು ಜಯಿಸದ ವ್ಯಕ್ತಿಯು ತಾನು ಸುಖವಾಗಿದ್ದೇನೆ ಮತ್ತು ತೃಪ್ತನಾಗಿದ್ದೇನೆ ಎಂದು ಹೇಳಿಕೊಂಡರೆ ಅದು ಆತ್ಮ ವಂಚನೆಯಷ್ಟೆ. ಉದಾಹರಣೆಗೆ, ಆಸ್ಪತ್ರೆಯಲ್ಲಿರುವ ಸ್ನೇಹಿತನನ್ನು ನೋಡಲು ನಾವು ಹೋಗುತ್ತೇವೆ. ಅವನ ಕಾಲನ್ನು ಮೇಲಕ್ಕೆ ಎತ್ತಿ ಕಟ್ಟಿರುತ್ತಾರೆ, ನರ್ಸ್ ಬೆಡ್ ಪ್ಯಾನ್ ತರದಿದ್ದರೆ ಅವನಿಗೆ ಮೂತ್ರ ವಿಸರ್ಜನೆ ಕೂಡ ಕಷ್ಟ, ಅವನಿಗೆ ಕ್ರಮವಾಗಿ ಚುಚ್ಚು ಮದ್ದುಗಳನ್ನು ನೀಡಬೇಕು ಮತ್ತು ಅವನಿಗೆ ಗಟ್ಟಿ ಆಹಾರ ಸೇವನೆ ಕಷ್ಟವಾಗಿರುತ್ತದೆ. ಅವನು ಹೇಗಿದ್ದಾನೆಂದು ಕೇಳಿದಾಗ “ನಾನು ಚೆನ್ನಾಗಿದ್ದೇನೆ” ಎಂದು ಅವನು ಉತ್ತರಿಸುತ್ತಾನೆ. “ಚೆನ್ನಾಗಿದ್ದೇನೆ” ಎಂದರೆ ಏನು ಎಂದು ನಾವು ಕೇಳಬಹುದು. ಅಷ್ಟೊಂದು ನೋವುಗಳ ಮಧ್ಯೆ ಅವನು ತಾನು ಚೆನ್ನಾಗಿದ್ದೇನೆ ಎಂದು ಹೇಗೆ ಭಾವಿಸುವುದು ಸಾಧ್ಯ? ಯೋಗ ಕ್ಷೇಮ ಮತ್ತು ತೃಪ್ತಿಯ ಅಂತಹ ಭ್ರಮೆಯು ಕೆಳ ವರ್ಗದ ಪ್ರಾಣಿಗಳಲ್ಲಿ ಸಾಮಾನ್ಯ. ಉದಾಹರಣೆಗೆ, ಪಶು ಮತ್ತು ಕೋಳಿಗಳ ಮಾಲೀಕನು ಅವುಗಳನ್ನು ವಧಿಸಲೆಂದೇ ಆಹಾರ ಪೂರೈಸಿದರೂ ಅವು ಸಂತೃಪ್ತವಾಗಿ ಹುಲ್ಲು ಮತ್ತು ಕಾಳುಗಳನ್ನು ತಿನ್ನುತ್ತವೆ. ಆದರೆ ಮಾನವ ಜೀವಿಯು ಸಂಕಟವಾಗುವುದನ್ನು ಸಹಿಸಿಕೊಳ್ಳುವುದಿಲ್ಲ. ಅವನು ಪ್ರತಿಭಟಿಸುತ್ತಾನೆ ಅಥವಾ ಪರಿಹಾರ ಹುಡುಕುತ್ತಾನೆ.
ನೋವನ್ನು ಕುರಿತು ಚಿಂತಿಸುವುದಲ್ಲ, ಇಂದ್ರಿಯ ಸುಖವನ್ನು ಅನುಭವಿಸುತ್ತ ಹೋಗುವುದೇ ಪರಿಹಾರ ಎಂದು ಭೋಗವಾದಿಗಳು ಹೇಳುತ್ತಾರೆ. ಆದರೆ ದುರದೃಷ್ಟವಶಾತ್ ಪ್ರತಿಯೊಂದು ಹೆಜ್ಜೆಯಲ್ಲಿಯೂ ಅವರ ಸುಖಕ್ಕೆ ಅಡಚಣೆ ಉಂಟಾಗುತ್ತದೆ. ತಿನ್ನಲು ಸ್ವಾದಿಷ್ಟವಾದ ಆಹಾರವಿರಬಹುದು. ಆದರೆ ಅದಕ್ಕೆ ಮರಳು ಬೆರೆಸಿದ್ದರೆ ಆ ತಿನಿಸನ್ನು ಆನಂದಿಸುವುದು ಸಾಧ್ಯವಿಲ್ಲ. ಆ ತಿನಿಸಿನ ರುಚಿ ಹಾಗೇ ಇದ್ದರೂ ಮರಳು ಹಲ್ಲುಗಳಲ್ಲಿ ಅಂಟಿಕೊಂಡು ಆನಂದವನ್ನು ತಡೆಯುತ್ತದೆ. ಅದೇ ರೀತಿ ಭೌತಿಕ ಲೋಕದ ಎಲ್ಲ ಸುಖವನ್ನೂ ಲೌಕಿಕ ಜೀವನದ ನೋವುಗಳು ತಡೆಯುತ್ತವೆ. ಆದರೆ ಎಲ್ಲ ಸಂಕಷ್ಟಗಳಿದ್ದರೂ ವ್ಯಕ್ತಿಯು ಲೌಕಿಕ ಸುಖವನ್ನು ಅನುಭವಿಸಲು, ಮರಳು ಮಿಶ್ರಿತ ಸಿಹಿ ತಿನಿಸನ್ನು ತಿನ್ನಲು ನಿರ್ಧರಿಸಿದ್ದರೆ ಆಗಲೂ ಕೂಡ ಅದು ಸಾಧ್ಯವಿಲ್ಲ. ಯಾರಿಗೂ ಇಲ್ಲೇ ಇರಲು ಅವಕಾಶವಿಲ್ಲ. ಇಲ್ಲೇ ಮನೆ ಮಾಡಿ ಕೊಂಡು ಸುಖವಾಗಿರಲು ನಮಗೆ ಇಷ್ಟವಿದ್ದರೂ ಸಾವು ನಮ್ಮನ್ನು ಇಲ್ಲಿಂದ ಓಡಿಸುತ್ತದೆ. ಇದಕ್ಕೆ ಯಾವುದೇ ವಿನಾಯಿತಿಗಳಿಲ್ಲ. ಪ್ರತಿಯೊಬ್ಬರೂ ನಿರ್ಗಮಿಸುವುದು ಕಡ್ಡಾಯ.
ಆದುದರಿಂದ ಮಾನವ ಜೀವನದ ಸೌಲಭ್ಯಗಳಿಂದ ವ್ಯಕ್ತಿಯು ತನ್ನ ನೋವುಗಳಿಗೆ ಅಂತಿಮ ಪರಿಹಾರ ಕಂಡುಕೊಳ್ಳಬೇಕು. ಆದರೂ ನೋವನ್ನು ತಡೆಯುವುದು ಸಾಧ್ಯವೇ ಇಲ್ಲ ಎಂದು ಯಾರಾದರೂ ಆಕ್ಷೇಪಿಸಬಹುದು. ಖ್ಯಾತ ಚಿತ್ರ ಕಲಾವಿದ ವ್ಯಾನ್ ಗೋ ಒಮ್ಮೆ ಪತ್ರವೊಂದರಲ್ಲಿ ಬರೆದಿದ್ದರು, “ನೋವು ಶಾಶ್ವತ.” ನಾವು ಇಲ್ಲಿ ವಿವರಿಸುವಂತೆ ಸಮಸ್ಯೆಗೆ ಪರಿಹಾರ ನಮ್ಮ ಕೈಯಲ್ಲೇ ಇದೆ. ಅದಕ್ಕಾಗಿ ನಾವು ಸಮಸ್ಯೆ ನಿವಾರಣೆಗೆ ಕೈಹಾಕಬೇಕು ಮತ್ತು ಸೂಕ್ತವಾದ ಶಿಕ್ಷಣವನ್ನು ಪಡೆಯಬೇಕು.
ಗಣ್ಯರಿಂದ ಭ್ರಮ ನಿರಸನ
ಶ್ರೇಷ್ಠ ಲೇಖಕರ, ವಿಜ್ಞಾನಿಗಳ ಮತ್ತು ಕಲಾವಿದರ ಕೃತಿ ಅಥವಾ ಕಾರ್ಯಗಳನ್ನು ನಾವು ಪರಿಶೀಲಿಸಿದರೆ, ಈ ಸಂಕಷ್ಟಗಳನ್ನು ಗೆಲ್ಲಲು ನಮಗೆ ಅವರು ಸಹಾಯ ಮಾಡುತ್ತಾರೆ ಎಂದು ನಾವು ಯೋಚಿಸಬೇಕು. ಆದರೆ ನಾವು ನಮ್ಮ ಶ್ರೇಷ್ಠ ಚಿಂತಕರನ್ನು ವಿಚಾರಿಸುತ್ತಿದ್ದಂತೆಯೇ ಅವರ ಬಳಿ ಪರಿಹಾರವಿಲ್ಲ ಎನ್ನುವುದನ್ನು ನಾವು ಕಂಡುಕೊಳ್ಳುತ್ತೇವೆ. ಸೊಕ್ರೆಟೀಸ್, ಶೇಕ್ಸ್‌ಪಿಯರ್, ಫ್ರಾಯ್ಡ್ ಅಥವಾ ಇತ್ತೀಚಿನ ನೊಬೆಲ್ ಬಹುಮಾನಿತರು ತಮ್ಮ ಕ್ಷೇತ್ರಗಳಲ್ಲಿ ದಿಗ್ಗಜರಾಗಿರಬಹುದು, ಆದರೆ ಅವರ ಕೃತಿಗಳನ್ನು ಓದುವುದರಿಂದ ಯಾರನ್ನೂ ವೃದ್ಧಾಪ್ಯ ಅಥವಾ ಸಾವಿನಿಂದ ಮುಕ್ತಗೊಳಿಸುವುದು ಸಾಧ್ಯವಿಲ್ಲ. ನಿಜ, ಭವಿಷ್ಯದಲ್ಲಿ ತಾವೇನು ಮಾಡಬಹುದೆನ್ನುವುದಕ್ಕೆ ವಿಜ್ಞಾನಿಗಳು ಪ್ರಸಿದ್ಧರು. ವೃದ್ಧಾಪ್ಯ ತಜ್ಞರೆಂದು ಕರೆಯಲ್ಪಡುವವರು ವೃದ್ಧಾಪ್ಯ ಮತ್ತು ಸಾವನ್ನು ಹೇಗೆ ತಡೆಯಬಹುದು ಎನ್ನುವುದನ್ನು ಕಂಡುಹಿಡಿಯುವ ಸಮೀಪದಲ್ಲಿದ್ದೇವೆ, ಅಂಚಿನಲ್ಲಿದ್ದೇವೆ ಎಂದು ಪ್ರಕಟಿಸುತ್ತಾರೆ. ಆದರೆ ನ್ಯೂಸ್‌ವೀಕ್‌ನ ವರದಿಯ ಪ್ರಕಾರ “ಅವರು ಯೌವನದ ಪರಮರ್ವನ್ನು ಹೋಲುವ ಯಾವುದನ್ನೂ ಕೂಡ ಇನ್ನೂ ಕಂಡುಹಿಡಿದಿಲ್ಲ.” ಏನೇ ಆಗಲಿ, ಯಾರಾದರೂ ಸಾಹಸಿ ವಿಜ್ಞಾನಿಯು ನಮ್ಮನ್ನು ನಮ್ಮ ಸಮಸ್ಯೆಗಳಿಂದ ಪಾರುಮಾಡಿದರೂ ಹುಟ್ಟು, ಸಾವು, ವೃದ್ಧಾಪ್ಯ ಮತ್ತು ರೋಗಗಳ ಸಂಕಷ್ಟಗಳಿಗೆ ಪರಿಹಾರವೇ ಇಲ್ಲ. ಯಾರಿಗೂ ಅದು ಬೇಕಾಗಿಲ್ಲ. ಆದರೆ ಯಾರೂ ಕೂಡ ಅದರಿಂದ ಮುಕ್ತರಲ್ಲ.
ಈ ಭೌತಿಕ ಲೋಕದಲ್ಲಿ ಹುಟ್ಟಿರುವ ಎಲ್ಲರೂ ನಾಲ್ಕು ಮೂಲ ಅಪರಿಪೂರ್ಣತೆಗಳಿಗೆ ಒಳಪಟ್ಟಿರುವುದರಿಂದ ಮಾನವ ಕುಲದ ಶ್ರೇಷ್ಠ ವಿಜ್ಞಾನಿಗಳು ಮತ್ತು ತತ್ತ್ವಜ್ಞಾನಿಗಳೂ ಕೂಡ ಬದುಕಿನ ಸಮಸ್ಯೆಗಳನ್ನು ಪರಿಹರಿಸುವುದು ಸಾಧ್ಯವಿಲ್ಲ. ಮೊದಲನೆಯದಾಗಿ ನಾವು ತಪ್ಪು ಮಾಡುವ ಪ್ರವೃತ್ತಿ ಹೊಂದಿದ್ದೇವೆ. “ತಪ್ಪೆಸಗುವುದು ಮಾನವ ಸಹಜ.” ಭಾರತದಲ್ಲಿ, ಉದಾಹರಣೆಗೆ, ಗಾಂಧೀಜಿಯವರು ಶ್ರೇಷ್ಠ ವ್ಯಕ್ತಿಯಾಗಿದ್ದರು. ಆದರೆ ಅವರೂ ಕೂಡ ತಪ್ಪುಗಳನ್ನು ಮಾಡಿದರು. ಅವರು ಹತ್ಯೆಗೀಡಾದ ಸಭೆಗೆ ಬರುವ ಕೆಲವೇ ನಿಮಿಷಗಳ ಮುನ್ನ ಅವರ ಆಪ್ತರು ಹೋಗುವುದು ಬೇಡ ಎಂದು ಸಲಹೆ ಮಾಡಿದರು. ಆದರೆ ಅವರು ಪಟ್ಟು ಹಿಡಿದರು. ಮತ್ತೊಂದು ಅಪರಿಪೂರ್ಣತೆ ಎಂದರೆ ಒಂದಕ್ಕೊಂದನ್ನು ತಪ್ಪಾಗಿ ತಿಳಿದು ಭ್ರಮೆಯ ಸೆಳೆತಕ್ಕೆ ಸಿಲುಕುತ್ತೇವೆ. ನಾವು ಮೋಸ, ವಂಚನೆ ಮಾಡುವ ಪ್ರವೃತ್ತಿ ಉಳ್ಳವರಾಗಿರುವುದರಿಂದ ಅದೂ ಒಂದು ಅಪರಿಪೂರ್ಣತೆ. ಉದಾಹರಣೆಗೆ, ಕೆಲವು ಬಾರಿ ನಾನು ತಪ್ಪು ಮಾಡುತ್ತೇನೆ ಮತ್ತು ಕೆಲವು ಬಾರಿ ಭ್ರಮಾಧೀನನಾಗುತ್ತೇನೆ ಎನ್ನುವುದನ್ನು ನಾನು ಒಪ್ಪಿಕೊಳ್ಳಬೇಕು. ಆದರೂ ನಾನು ನಿಜವೆಂದು ಹೇಳುತ್ತ ಪುಸ್ತಕವನ್ನು ಬರೆದರೆ ಅದು ವಂಚನೆಯಲ್ಲವೇ? ಅಷ್ಟೊಂದು ಅಪರಿಪೂರ್ಣರಾಗಿರುವವರು ಶಿಕ್ಷಕರೆಂದು ಹೇಗೆ ಹೇಳಿಕೊಳ್ಳುತ್ತಾರೆ? ನಮಗೆ ಸೀಮಿತವಾದ ಇಂದ್ರಿಯಗಳಿರುವುದು ಮತ್ತೊಂದು ಅಪರಿಪೂರ್ಣತೆ. ನಮ್ಮ ಸೀಮಿತ ಕಿವಿಗಳಿಂದ ನಾವು ನಿರ್ದಿಷ್ಟ ಧ್ವನಿ ಪ್ರಮಾಣವನ್ನು ಮಾತ್ರ ಕೇಳುತ್ತೇವೆ. ನಮ್ಮ ಕಣ್ಣುಗಳಿಂದ ನಾವು ಆಕಾಶದಲ್ಲಿನ ಬೃಹತ್ ಸೂರ್ಯನನ್ನು ರೂಪಾಯಿ ನಾಣ್ಯಕ್ಕಿಂತ ದೊಡ್ಡದಲ್ಲವೆಂದು ವೀಕ್ಷಿಸುತ್ತೇವೆ. ಪ್ರತಿಯೊಬ್ಬರ ಮೇಲೆಯೂ ಹೇರಿರುವ ಲೌಕಿಕ ಪ್ರಕೃತಿಯ ಈ ನಿರ್ಬಂಧಗಳು ಮಾನವನಿಗೆ ಅವನ ಜ್ಞಾನವನ್ನು ಸೀಮಿತಗೊಳಿಸಿವೆ.
ಪರಿಪೂರ್ಣ ಜ್ಞಾನ
ಆದರೆ ನೋವಿನಿಂದ ನಮ್ಮನ್ನು ಮುಕ್ತಗೊಳಿಸುವ ಪರಿಪೂರ್ಣ ಜ್ಞಾನವು ಪರಿಪೂರ್ಣ ಮೂಲದಿಂದ ನಮಗೆ ಲಭ್ಯವಿದೆ. ಅಪರಿಪೂರ್ಣ ಬದ್ಧಜೀವಿಗಳು ನುಡಿಯುವ ಜ್ಞಾನಕ್ಕಿಂತ ಭಗವಂತನ ನುಡಿಯು ಪರಿಪೂರ್ಣ ಮತ್ತು ದೋಷಮುಕ್ತ. ಅಲ್ಲಿ ಪರಮ ಜ್ಞಾನಿ ಇದ್ದಾನೆ. ಮಾನವ ಕುಲವನ್ನು ಕುರಿತಂತೆ ಅವನ ಉದ್ದೇಶಗಳು ಪ್ರೀತಿಯುತ. ಪರಮ ಸೃಷ್ಟಿಕರ್ತನಾಗಿ ಅವನು ನೋವಿನಿಂದ ಪರಮ ಮುಕ್ತಿಗೆ ಜ್ಞಾನವನ್ನು ನೀಡುತ್ತಾನೆ.
ಪರಮ ದೇವರು ಎನ್ನುವುದಿಲ್ಲ ಎಂದು ನಾಸ್ತಿಕರು ವಾದಿಸುತ್ತಾರೆ. ಆದರೆ ವಿಶ್ವ, ಗ್ರಹಗಳು ಮತ್ತು ಮಾನವ ಜೀವಿಗಳ ಬೃಹತ್ ಬ್ರಹ್ಮಾಂಡವು ಹೇಗೆ ಅಸ್ತಿತ್ವಕ್ಕೆ ಬಂದವು ಎನ್ನುವುದನ್ನು ವಿವರಿಸಲು ಅವರಿಗೆ ಸಾಧ್ಯವಿಲ್ಲ. ಪುಣ್ಯಜೀವಿಗಳು ಭಗವಂತನು ಸೃಷ್ಟಿಕರ್ತ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ನಾಸ್ತಿಕರು ಊಹಿಸುತ್ತಾರೆ. ಏನೆಂದು? ಸ್ವಾಭಾವಿಕ ದಹನ ಕ್ರಿಯೆ, ಆಕಸ್ಮಿಕ ರಾಸಾಯನಿಕ ಮತ್ತು ಲೈಂಗಿಕ ಸಂಯೋಜನೆಗಳು, ಅಂಧ ವಿಕಸನ ಇತ್ಯಾದಿಗಳ ಮೂಲಕ ಎಲ್ಲವೂ ಸ್ವಯಂ ಸೃಷ್ಟಿಗೊಂಡಿವೆ ಎಂದು ನಾಸ್ತಿಕರು ಊಹಿಸುತ್ತಾರೆ. ಈ ವಿವರಣೆಗಳು ಮಧ್ಯಾಂತರ ಕಾರಣಗಳನ್ನಷ್ಟೇ ಗುರುತಿಸುತ್ತವೆ. ಎಲ್ಲ ಕಾರಣಗಳ ಕಾರಣನಾದ ಭಗವಂತನ ಅಸ್ತಿತ್ವವನ್ನು ಕುರಿತಂತೆ ಯಾರೂ ನಿರಾಕರಿಸುವುದಿಲ್ಲ.
ಬ್ರಹ್ಮಾಂಡವು ಅದ್ಭುತ ನಿರ್ವಹಣೆ, ಶಿಲ್ಪ ನೈಪುಣ್ಯ (ಎಂಜಿನ್ ಕಾರ್ಯ) ಮತ್ತು ಕಲಾವಂತಿಕೆಯನ್ನು ಪ್ರದರ್ಶಿಸುತ್ತದೆ. ಪ್ರಕೃತಿಯ ಈ ಬೃಹತ್ ವ್ಯವಹಾರದ ಹಿಂದೆ ವಿಪರೀತ ದೊಡ್ಡ ಮಿದುಳು ಅಥವಾ ಬುದ್ಧಿ ಇದೆ. ಮಗುವು ಆಕಾಶದಲ್ಲಿ ಗಗನನೌಕೆಯು ಸುತ್ತುತ್ತಿರುವುದನ್ನು ನೋಡುತ್ತದೆ ಎಂದುಕೊಳ್ಳಿ. ಅದು ಯಾವುದೇ ನಿರ್ಬಂಧವಿಲ್ಲದೆ ಆಕಸ್ಮಿಕವಾಗಿ ಸುತ್ತುತ್ತಿದೆ ಎಂದು ಅವನು ಭಾವಿಸುತ್ತಾನೆ. ಆದರೆ ಬುದ್ಧಿವಂತ ವಿಜ್ಞಾನಿಗಳು ಮತ್ತು ತಂತ್ರಜ್ಞರ ತಂಡವು ಅದನ್ನು ನಿಯಂತ್ರಿಸುತ್ತದೆ ಎನ್ನುವುದು ಹಿರಿಯರಿಗೆ ಗೊತ್ತು. ಹಾಗಾದರೆ ನಾವು ಗ್ರಹಗಳೆಂದು ಕರೆಯುವ ಈ ಬೃಹತ್ ಗಗನನೌಕೆಗಳು ಆಕಾಶದಲ್ಲಿ ಸರಿಯಾದ ಕಕ್ಷೆಯಲ್ಲಿ ಸ್ವಯಂ ಚಾಲಿತವಾಗಿ ಹಾರಾಡುತ್ತಿವೆ ಎಂದು ತಿಳಿವಳಿಕೆ ಇಲ್ಲದ ಮಕ್ಕಳಂತೆ ನಾವು ಏಕೆ ಊಹಿಸಿಕೊಳ್ಳಬೇಕು? ಅದೂ ಅಲ್ಲದೆ ಅದರ ಹಿಂದೆ ಯಾವುದೇ ಬುದ್ಧಿ ಇಲ್ಲವೆಂದು? ನಮ್ಮ ವಿಜ್ಞಾನಿಗಳು ಬ್ರಹ್ಮಾಂಡದ ಕಾರ್ಯ ರೂಪವನ್ನು ವೀಕ್ಷಿಸಬಹುದು ಮತ್ತು ಹೇಗೆ ಗುರುತ್ವಾಕರ್ಷಣೆ ನಿಯಮವು ಗ್ರಹಗಳನ್ನು ಕಕ್ಷೆಯಲ್ಲಿ ಇಟ್ಟಿವೆ ಎನ್ನುವುದನ್ನು ವಿವರಿಸಬಹುದು. ಆದರೆ ವಿಷಯವನ್ನು ಸುಮ್ಮನೆ ವೀಕ್ಷಿಸುವುದರಿಂದ ಮತ್ತು ಅದನ್ನು ಗುರುತ್ವಾಕರ್ಷಣೆ ನಿಯಮ ಎಂದು ಪಟ್ಟಿ ಮಾಡುವುದು ನಿಜವಾದ ವಿವರಣೆಯಾಗುವುದಿಲ್ಲ. ಅಥವಾ ಯಾವುದೇ ರೀತಿಯಲ್ಲಿಯೂ ಅದು ಗ್ರಹಗಳು ಗಗನದಲ್ಲಿ ತೇಲುವುದಕ್ಕೆ ಸಾಧ್ಯವಾಗುವ ಮತ್ತು ಗ್ರಹಿಸಲಾಗದ ದೈವೀ ಶಕ್ತಿಯನ್ನು ಕುರಿತಂತೆ ಸಮಾನಾರ್ಥಕವಾಗುವುದೂ ಇಲ್ಲ. ದಿಟವಾಗಿ, ಬ್ರಹ್ಮಾಂಡದಲ್ಲಿ ನಿಯಮಗಳನ್ನು ವೀಕ್ಷಿಸುವುದು ಎಂದರೆ ಅವುಗಳ ಹಿಂದೆ ನಿಯಮ ಸೃಷ್ಟಿಸಿದವನೂ ಇದ್ದಾನೆ ಎಂದು ಅರ್ಥ. ಹೀಗೆ ದೇವರಲ್ಲಿ – ಪರಮ ನಿಯಾಮಕ, ಪರಮ ಜ್ಞಾನದ ಅಸ್ತಿತ್ವದಲ್ಲಿ ನಂಬಿಕೆ ಪ್ರಾರಂಭವಾಗುತ್ತದೆ. ಅವನೊಬ್ಬನೇ ಸಂಕಷ್ಟದಿಂದ ಪಾರಾಗುವ ಆತ್ಯಂತಿಕ ಜ್ಞಾನವನ್ನು ನೀಡಬಲ್ಲನು.
ಭಗವಂತನ ಮಾತುಗಳಾದ (ಅಪೌರುಷೇಯ) ಧರ್ಮಗ್ರಂಥಗಳಲ್ಲಿ ಅವನ ಅಲೌಕಿಕ ಸ್ವರೂಪವನ್ನು ನಿರೂಪಿಸಲಾಗಿದೆ. ಮೂಲ ಧರ್ಮಗ್ರಂಥವನ್ನು ವೇದ (ವೇದ ಎಂದರೆ ಜ್ಞಾನ) ಎಂದು ಕರೆಯುತ್ತಾರೆ. ಭಗವಂತನು ಲೌಕಿಕ ಲೋಕದ ನೋವುಗಳಿಂದ ಮುಕ್ತರಾಗುವುದು ಹೇಗೆ ಎನ್ನುವುದನ್ನು ಎಲ್ಲ ಜೀವಿಗಳ ಉಪಯೋಗಕ್ಕಾಗಿ ಅರುಹಿದ್ದಾನೆ ಮತ್ತು ಗುರು ಪರಂಪರೆಯ ಆಧ್ಯಾತ್ಮಿಕ ಗುರುಗಳು ಅದನ್ನು ನಮಗೆ ತಿಳಿಯಪಡಿಸಿದ್ದಾರೆ. ಅಂತಹ ಜ್ಞಾನವನ್ನು ಅಪೌರುಷೇಯ ಎನ್ನುತ್ತಾರೆ. ಅಂದರೆ ಅದು ಈ ಲೋಕದ ಅಪರಿಪೂರ್ಣ ವ್ಯಕ್ತಿಗಳಿಂದಲ್ಲ, ದೋಷವಿಲ್ಲದ ಭಗವಂತನಿಂದ ಬರುತ್ತದೆ ಎಂದು ಅರ್ಥ. ಪರಮ ನಿಯಂತ್ರಕ, ಪ್ರತಿಯೊಂದೂ ಯಾರಿಂದ ಹೊರಹೊಮ್ಮುತ್ತದೋ ಆ ಬುದ್ಧಿಜೀವಿಯನ್ನು ವೈದಿಕ ಸಾಹಿತ್ಯದಲ್ಲಿ ಕೃಷ್ಣ ಎನ್ನುತ್ತಾರೆ. ಕೃಷ್ಣ ಎಂದರೆ “ಸರ್ವಾಕರ್ಷಕ” ಎಂದು ಅರ್ಥ.
ದೇಹದಾಚೆಗಿನ ವಿದ್ಯೆ
ಅಲೌಕಿಕ ಜ್ಞಾನದಲ್ಲಿ ಮೊದಲ ಹೆಜ್ಜೆಯನ್ನು ಇಡಲು ವ್ಯಕ್ತಿಯು ತಾನು ದೇಹವಲ್ಲ, ಆಧ್ಯಾತ್ಮಿಕ ಆತ್ಮ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಆದಾಗ್ಯೂ ಬಹಳಷ್ಟು ದೊಡ್ಡ ವಿದ್ವಾಂಸರು, ತತ್ತ್ವಜ್ಞಾನಿಗಳು ಮತ್ತು ರಾಜಕೀಯ ನಾಯಕರು ಈ ಮೊದಲ ಹೆಜ್ಜೆಯನ್ನೂ ಇರಿಸಿಲ್ಲ. ಅವರು ನಿಜವಾದ ಶಿಕ್ಷಣದ ಅಆಇಈಯನ್ನೇ ಕರಗತ ಮಾಡಿಕೊಂಡಿಲ್ಲ. ಬದಲಿಗೆ, ತಾವು ತಮ್ಮ ದೇಹಗಳೆಂದು ಯೋಚಿಸುತ್ತ ಅವರು ತಮ್ಮ ಕುಟುಂಬ, ಕುಲ, ರಾಷ್ಟ್ರಗಳು ಇತ್ಯಾದಿಯೊಂದಿಗೆ ಗುರುತಿಸಿಕೊಳ್ಳುತ್ತಾರೆ. ದೈಹಿಕ ಪ್ರಜ್ಞೆಯಲ್ಲಿರುವ ವ್ಯಕ್ತಿಯು `ನಾನು ಬಿಳಿಯ’, `ನಾನು ಅಮೆರಿಕದವ’. `ನಾನು ಕರಿಯ’, `ನಾನು ಕ್ರಿಶ್ಚಿಯನ್’, `ನಾನು ಮಾನವ’ ಇತ್ಯಾದಿ. ಆದರೂ ಕೆಲವೇ ವರ್ಷಗಳಲ್ಲಿ ದೇಹದ ಅಂತ್ಯದೊಂದಿಗೆ ಅಂತಹ ಉಪಾಧಿಗಳು ಮಾಯವಾಗಿಬಿಡುತ್ತವೆ.
ವೈದಿಕ ಸಾಹಿತ್ಯದ ಪ್ರಕಾರ, ಭಗವಂತನೊಂದಿಗೆ ಪ್ರೀತಿಯ ಬಾಂಧವ್ಯದಲ್ಲಿರುವ ಶಾಶ್ವತ ಆತ್ಮ, ನಿಜವಾದ ಆತ್ಮವು ದೇಹವು ಅಂತ್ಯಗೊಂಡಾಗ ಸಾಯುವುದಿಲ್ಲ ಅಥವಾ ದೇಹವು ವೃದ್ಧಾಪ್ಯವನ್ನು ಪಡೆದಾಗ ಅದು ವೃದ್ಧನಾಗುವುದಿಲ್ಲ. ಅವನನ್ನು ಕತ್ತರಿಸಲಾಗದು ಅಥವಾ ಅವನನ್ನು ಕೊಲ್ಲಲಾಗದು. ಅವನು ಯಾವಾಗಲೂ ಸಂತೋಷಭರಿತ. ವ್ಯಕ್ತಿಯು ಇದನ್ನು ಅರ್ಥಮಾಡಿಕೊಂಡರೆ, ಅವನು ನೋವಿನ ದೀರ್ಘ ಇತಿಹಾಸದಿಂದ ಮುಕ್ತನಾಗಬಹುದು. ಆದರೆ ಈ ಅಧ್ಯಯನವನ್ನು ಕೈಗೊಳ್ಳದಿದ್ದರೆ, ಅವನು ತನ್ನ ದೈಹಿಕ ಗುರುತಿನಿಂದ ಏನೇ ಮಾಡಿದರೂ ಅದು ಸಾವಿನ ಸಮಯದಲ್ಲಿ ಸೋಲನ್ನು ಅನುಭವಿಸುತ್ತದೆ.
ಆದುದರಿಂದ ಮಾನವ ಶಿಕ್ಷಣವು ನಮ್ಮನ್ನು ಉದ್ಯೋಗಕ್ಕೆ ಸಿದ್ಧ ಮಾಡುವುದಷ್ಟೇ ಅಲ್ಲ, ಅಥವಾ ಶ್ರೇಷ್ಠ ಚಿಂತಕರ ಅಪರಿಪೂರ್ಣ ಅಭಿಪ್ರಾಯಗಳನ್ನು ಕುರಿತು ಊಹಿಸುವುದೂ ಅಲ್ಲ. ಬದಲಿಗೆ, ಅದು ಬದುಕಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಮಗೆ ಸಹಾಯ ಮಾಡಬೇಕು. ಪ್ರತಿಯೊಬ್ಬರೂ ವೃದ್ಧಾಪ್ಯ, ಸಾವು ಮತ್ತು ರೋಗದ ಕಠಿಣ ಶಿಕ್ಷೆಗೆ ಗುರಿಯಾಗುವ ಭೌತಿಕ ಲೋಕವೆಂಬ ಜೈಲಿನಿಂದ ತನ್ನನ್ನು ಬಿಡುಗಡೆ ಮಾಡಿಕೊಳ್ಳುವವರೆಗೂ ಮಾನವ ಜೀವಿಯು ಅತೃಪ್ತನಾಗಿರಬೇಕು. ಜೈಲಿನೊಳಗೆ ಲಾಭದಾಯಕ ಉದ್ಯೋಗದಲ್ಲಿರುವುದು, ಸೆರೆಮನೆ ವಾಸವನ್ನು ಸಾಧ್ಯವಾದಷ್ಟೂ ಹೆಚ್ಚಾಗಿ ಆನಂದಿಸುವುದು ಅಥವಾ ಜೈಲಿನಿಂದ ಹೊರಬರುವ ಆಶಯಗಳನ್ನು ಬಿಟ್ಟು ಆನಂದಕ್ಕಾಗಿಯೇ ಪುಸ್ತಕಗಳನ್ನು ಓದುವುದು ಮತ್ತು ಬರೆಯುವುದರಲ್ಲಿ ತೊಡಗುವುದು ಸ್ವಾತಂತ್ರ್ಯ ಪ್ರೇಮಿಯ ನಿಜವಾದ ಗುಣವಾಗುವುದಿಲ್ಲ. ನಮ್ಮ ಮೂಲ ಗುಣಗಳಂತೆ ನಾವು ಪ್ರತಿಯೊಬ್ಬರೂ ಲೌಕಿಕ ಪ್ರಕೃತಿಯು ನಮ್ಮ ಮೇಲೆ ಹೇರಿರುವ ನೋವನ್ನು ಮುಕ್ತಗೊಳಿಸಿಕೊಳ್ಳಲೆಂದೇ ಇರುವುದು.
ಭೌತಿಕ ಲೋಕದಲ್ಲಿ ನಮ್ಮ ಬಂಧನವು ಪರಮ ನಿಯಂತ್ರಕ ಕೃಷ್ಣನ ವ್ಯಾಪ್ತಿಯಲ್ಲಿಯೇ ಇದ್ದರೂ ನಮ್ಮ ನೋವಿಗೆ ಅವನನ್ನು ದೂಷಿಸಲಾಗದು. ನಾವು ನಮ್ಮ ಅಜ್ಞಾನದಿಂದ ಇದನ್ನು ತಂದುಕೊಂಡಿದ್ದೇವೆ. ನಾವು ಭೌತಿಕ ಲೋಕಕ್ಕೆ ಸೇರಿದವರು ಎಂದು ಯೋಚಿಸುವುದರಿಂದ ನಮ್ಮ ಆಧ್ಯಾತ್ಮಿಕ ಗುಣಸ್ವಭಾವವನ್ನು ಮರೆತಿದ್ದೇವೆ. ತಾತ್ಕಾಲಿಕ ಕರ್ಮಗಳಲ್ಲಿ ಮಗ್ನರಾಗಿ ನಾವು ಕೃಷ್ಣನನ್ನು ಮರೆತಿದ್ದರೂ ಅವನು ನಮ್ಮನ್ನು ಮರೆತಿಲ್ಲ. ಭಗವದ್ಧಾಮಕ್ಕೆ ಹಿಂದಿರುಗುವ ಮಾರ್ಗವನ್ನು ನೀಡಲು, ದೈವಪ್ರಜ್ಞೆಯ ಬದುಕು, ಶಾಶ್ವತ ಜೀವನ, ಆನಂದ ಮತ್ತು ಜ್ಞಾನವನ್ನು ಉಪದೇಶ ಹಾಗೂ ಉದಾಹರಣೆಯ ಮೂಲಕ ಬೋಧಿಸಲು ಅವನು ತನ್ನ ಆಪ್ತ ಪ್ರತಿನಿಧಿ, ಆಧ್ಯಾತ್ಮಿಕ ಗುರುಗಳನ್ನು ಕಳುಹಿಸಿಕೊಡುತ್ತಾನೆ.