ಕೃಷ್ಣಪ್ರಜ್ಞೆ ಎಂದರೆ ನಮ್ಮ ಮನಸ್ಸಿಗೆ ತತ್‌ಕ್ಷಣ ಬರುವುದು ಮಹಾಭಾರತದ ನೀಲಮೇಘಶ್ಯಾಮ. ಇನ್ನು ಕೆಲವರ ಅಂತಃಚಕ್ಷುವಿನಲ್ಲಿ ಭಗವದ್ಗೀತೆಯ ಉಪದೇಶದ ಚಿತ್ರವೂ ಮೂಡಬಹುದು. ಆದರೆ ಅಷ್ಟಕ್ಕೆ ನಮ್ಮನ್ನು ಸೀಮಿತಗೊಳಿಸಿಕೊಂಡರೆ ನಮ್ಮ ಕೃಷ್ಣಪ್ರಜ್ಞೆಗೆ ಅನ್ಯಾಯ ಮಾಡಿಕೊಂಡಂತೆ.

ಒಂದು ಹೋಲಿಕೆ ಕೊಡಬಹುದಾದರೆ, ಇದು ಬಿಸಿಲಿನಲ್ಲಿ ಕೇವಲ ಸೂರ್ಯನನ್ನು ಅಥವಾ ಪೌರ್ಣಮಿಯಲ್ಲಿ ಕೇವಲ ಚಂದ್ರನನ್ನು ನೋಡಿ ಅದರ ಇಡೀ ಸೌಂದರ್ಯದ ಅನುಭವ ಪಡೆದೆವೆಂದು ಕೊಂಡಂತೆ ಸೂರ್ಯಚಂದ್ರ ಕಿರಣಗಳಿಂದ ಶೋಭಾಯಮಾನವಾಗದ ವಸ್ತುವಾವುದು?
ಆದರೆ ಸೂರ್ಯನೆಂದರೆ, ಚಂದ್ರನೆಂದರೆ ಅದು ಕೇವಲ ಕಿರಣವಲ್ಲ ಅಥವಾ ಅದರ ಹಿಂದಿನ ಭೌತಿಕಾಯ ಮಾತ್ರವಲ್ಲ; ಅದೆಲ್ಲದರ ಹಿಂದಿನ, ಮಾತಿನಲ್ಲಿ ವಿವರಿಸಲಾಗದ ಒಂದು ಚೈತನ್ಯ. ವಿಶ್ವವೆಲ್ಲ ಅಣುವಲ್ಲ, ಪರಮಾಣುವಲ್ಲ. ಕಣವಲ್ಲ ಕೇವಲ ಕಂಪನಗಳು ಎನ್ನುವ ಭೌತಶಾಸ್ತ್ರಜ್ಞರು, ಯಾವುದರ ಕಂಪನಗಳು? ಎಂದು ಕೇಳಿದರೆ ನಿರುತ್ತರರಾಗುತ್ತಾರೆ.
ಏಕೆಂದರೆ ಮಾನವಪ್ರಜ್ಞೆ ಎಂದಿಗೂ ಸೀಮಿತ; ಆದರೆ ಕೃಷ್ಣಪ್ರಜ್ಞೆಯು ಎಲ್ಲವನ್ನೂ ಒಳಗೊಂಡಿರುವುದೂ ಹೌದು; ಎಲ್ಲದಕ್ಕೂ ಅತೀತವಾದುದೂ ಹೌದು. ಅದನ್ನು ಗ್ರಹಿಸಬಯಸುವವರಿಗೆ ಮಹಾಭಾರತದ, ಭಗವದ್ಗೀತೆಯ ಶ್ರೀಕೃಷ್ಣನ ಬಗ್ಗೆ ಅರಿವು ಒಂದು ಸೋಪಾನವಿದ್ದಂತೆ.
ಇದನ್ನರಿತಾಗ ಕೃಷ್ಣಪ್ರಜ್ಞೆಯೆಂಬುದು ಕೇವಲ ಒಂದು ದೇಶ, ಒಂದು ಧರ್ಮ, ಒಂದು ಮತಕ್ಕೆ ಸೀಮಿತವಾಗದೆ ಸರ್ವಕಾಲಕ್ಕೂ ಸರ್ವದೇಶಕ್ಕೂ ಅನ್ವಯವಾಗುವಂತಹದ್ದು ಎಂಬುದು ಮನದಟ್ಟಾಗುತ್ತದೆ.
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯರಾದ ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಮೂಲ ಕೃತಿಯನ್ನನುಸರಿಸಿ ಆರ್.ಎಲ್.ಅಂತರಾಮಯ್ಯ ಅವರು ತಿಳಿಗನ್ನಡದಲ್ಲಿ ಅನುವಾದಿಸಿರುವ, “ಕೃಷ್ಣಪ್ರಜ್ಞೆ: ಅನುಪಮ ಉಡುಗೊರೆ” ಕೃತಿಯನ್ನು ಅಧ್ಯಯನ ಮಾಡಿದ ಯಾರಿಗೆ ಆದರೂ ತತ್‌ಕ್ಷಣಕ್ಕೆ ಮನಸ್ಸಿನಲ್ಲಿ ಮೂಡುವ ವಿಚಾರ ಇದು.
ಒಬ್ಬನು ಬಹುದೊಡ್ಡ ತತ್ತ್ವಶಾಸ್ತ್ರಜ್ಞನಾಗಿರಬಹುದು, ದೊಡ್ಡ ವಿಜ್ಞಾನಿಯಾಗಿರಬಹುದು. ಆದರೆ ಮಾಯೆಯೆಂಬ ದೆವ್ವವು ಕಾಡತೊಡಗಿದಾಗ, ಅವನು ಯಾವುದೇ ಸಿದ್ಧಾಂತವನ್ನು ಮಂಡಿಸಿದರೂ, ಏನನ್ನೇ ಹೇಳಿದರೂ ಅದು ಹೆಚ್ಚು ಕಡಮೆ ಅರ್ಥರಹಿತ ಅವಿವೇಕವಾಗಿರುತ್ತದೆ.” ಎಂಬ ಮಾತುಗಳಿಂದ ಹೆಚ್ಚು ಕಮ್ಮಿ ಆರಂಭವಾಗುವ ಕೃತಿಯು, “ಮೂರ್ಖರಿಗೆ ಮತ್ತು ಮಂದಗತಿಗಳಿಗೆ ನಾನು ಪ್ರಕಟವಾಗುವುದಿಲ್ಲ.
ಅವರ ಪಾಲಿಗೆ ನನ್ನ ಮಿಥ್ಯಾ ರಚನ ಶಕ್ತಿಯಾದ ಮಾಯೆಯಿಂದ ಆವೃತವಾಗಿರುತ್ತೇನೆ. ಹಾಗಾಗಿ ಭ್ರಮೆಯಲ್ಲಿರುವ ಜಗತ್ತು ಜನನ ಮರಣಗಳಿಲ್ಲದ ನನ್ನನ್ನು ಅರಿಯಲಾರರು.” ಎಂಬ ಗೀತಾ ವಾಕ್ಯವನ್ನೇ ಕೊನೆ ಕೊನೆಯಲ್ಲಿ ಉಲ್ಲೇಖಿಸುತ್ತದೆ.
ಹಾಗಾದರೆ ಇಂತಹ ಕೃಷ್ಣನನ್ನು ಅರಿಯುವುದು ಹೇಗೆ? ಇದಕ್ಕೆ “ಬ್ರಹ್ಮ ಸಂಹಿತೆ” ಯಿಂದ ಉತ್ತರ ಹೇಳುತ್ತಾರೆ: “ಕೃಷ್ಣ ಪ್ರೇಮವನ್ನು ಬೆಳೆಸಿಕೊಂಡಿರುವವರು ತನ್ನ ಹೃದಯದಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ಅವನನ್ನು ನೋಡಬಲ್ಲರು.”
ಇದಿಷ್ಟು ಬರೆದರೆ ಸೂರ್ಯನ ಪ್ರತಿಬಿಂಬವನ್ನು ಒಂದು ಸಣ್ಣ ಕನ್ನಡಿಯಲ್ಲಿ ನೋಡಿದಂತೆ. ವಾಸ್ತವವಾಗಿ ಇಡೀ ಕೃತಿಯು ಇವತ್ತಿನ ವಿಜ್ಞಾನದ ತತ್ತ್ವಜ್ಞಾನದ ಹಲವಾರು ಪ್ರಮೇಯಗಳಿಗೆ ಸಿದ್ಧಾಂತಗಳಿಗೆ, ನಿಯಮಗಳಿಗೆ ತಳುಕು ಹಾಕಿ ನೋಡಬಹುದಾದ, ವಿಶ್ಲೇಷಿಸಿ ವಿಸ್ತೃತಗೊಳಿಸಬಹುದಾದ ಅಸಂಖ್ಯಾತ ತತ್ತ್ವಗಳನ್ನು ಹಲವಾರು ನಿದರ್ಶನಗಳ ಮೂಲಕ, ಕಿರುಕತೆಗಳ ಮೂಲಕ, ಉಪಮಾನಗಳ ಮೂಲಕ ತುಂಬ ಸರಳವಾಗಿ, ಸ್ವಾರಸ್ಯಕರವಾಗಿ ಓದಿಸಿಕೊಂಡು ಹೋಗಬಲ್ಲ ಅಮೂಲ್ಯ ಗುಣವನ್ನು ಹೊಂದಿದೆ. ಒಂದೇ ಮಾತಿನಲ್ಲಿ ಹೇಳಬಹುದಾದರೆ ಇದು “ಸಕಲ ವೇದಾಂತ ಸಾರ.”
ಮತ್ತೆ ಕೃತಿಯ ಮಾತಗಳನ್ನೇ ಹೇಳುವುದಾದರೆ “ಇದು ಸೂರ್ಯೋದಯದ ಉಡುಗೊರೆ ಇದ್ದ ಹಾಗೆ. ರಾತ್ರಿಯೆಲ್ಲ ಕತ್ತಲೆ ಇರುತ್ತದೆ, ಆದರೆ ಮುಂಜಾನೆ ಸೂರ್ಯನು ಉದಿಸಿದೊಡನೆಯೇ ಮಿಲಿಯಗಟ್ಟಲೆ ಮೈಲುಗಳುದ್ದಕ್ಕೆ ಹರಡಿಕೊಂಡಿದ್ದ ಕತ್ತಲೆಯು ಒಮ್ಮೆಲೆ ತೊಡೆದು ಹೋಗುತ್ತದೆ. ಹಾಗೆಯೇ ನಮ್ಮ ಹೃದಯದಗಳಲ್ಲಿ ಕೃಷ್ಣನೆಂಬ ಸೂರ್ಯನು ಉದಿಸುವ ಹಾಗೆ ಮಾಡಿಕೊಂಡರೆ ನಮ್ಮ ಸಕಲ ಸಮಸ್ಯೆಗಳೂ ತಾವಾಗಿ ಪರಿಹಾರವಾಗಿ ಬಿಡುತ್ತವೆ.






Leave a Reply