ತಂತ್ರಜ್ಞಾನದ ಯುಕ್ತ ಬಳಕೆ

ಶ್ರೀ ಶ್ರೀಮದ್‌‍ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ ಕೆಲವು ಶಿಷ್ಯರ ನಡುವೆ ಷಿಕಾಗೋದಲ್ಲಿ, ಜುಲೈ 1975ರಲ್ಲಿ ನಡೆದ ಸಂವಾದ.

ಶಿಷ್ಯ : ಪಾಶ್ಚಿಮಾತ್ಯ ವಿಶ್ವವು ಆಧ್ಯಾತ್ಮಿಕವಾಗಿ ಕುರುಡಾಗಿದೆ ಮತ್ತು ಭಾರತವು ತಾಂತ್ರಿಕವಾಗಿ ಊನ, ದುರ್ಬಲ. ಆದರೆ ಅವರಿಬ್ಬರೂ ತಮ್ಮ ಸಂಪನ್ಮೂಲಗಳನ್ನು ಕೂಡಿಸಿದರೆ ಭಾರತ ಮತ್ತು ಪಶ್ಚಿಮ ಇಬ್ಬರಿಗೂ ಪ್ರಯೋಜನವಾಗುತ್ತದೆ ಎಂದು ಈ ಮೊದಲು ನೀವು ಹೇಳುತ್ತಿದ್ದಿರಿ.

ಶ್ರೀಲ ಪ್ರಭುಪಾದ : ಹೌದು. ಅಂಧನಾದ ಪಾಶ್ಚಿಮಾತ್ಯ ಲೋಕವು ಹೆಳವನಾದ ಭಾರತವನ್ನು ತನ್ನ ಹೆಗಲಮೇಲಿರಿಸಿಕೊಂಡರೆ, ಆಗ ಹೆಳವನು ಆಧ್ಯಾತ್ಮಿಕವಾಗಿ ಮಾರ್ಗವನ್ನು ತೋರಬಹುದು ಮತ್ತು ಅಂಧನು ಅದನ್ನು ಪಡೆಯಬಹುದು. ಅಮೆರಿಕ ಮತ್ತು ಭಾರತವು ತಮ್ಮ ತಾಂತ್ರಿಕ ಮತ್ತು ಆಧ್ಯಾತ್ಮಿಕ ಸಂಪನ್ನೂಲಗಳನ್ನು ಒಟ್ಟುಗೂಡಿಸಿದರೆ, ಈ ಸಂಯೋಜನೆಯು ವಿಶ್ವಾದ್ಯಂತ ಪರಿಪೂರ್ಣ ನೆಮ್ಮದಿ ಮತ್ತು ಅಭಿವೃದ್ಧಿಯನ್ನು ಸಾಧಿಸಬಹುದು.

ಅಮೆರಿಕನ್ನರು ಅದೆಷ್ಟು ಕುರುಡರು! ಅವರು ಮಾನವ ರೂಪದ ಜನ್ಮವನ್ನು ಪಡೆದಿದ್ದಾರೆ. ಅದೆಂತಹ ಬುದ್ಧಿವಂತ ಜನ್ಮ! ಆದರೂ ಅವರು ಅದನ್ನು ಸರೋವರದ ಮೇಲೆ ಮೋಟಾರ್‌‍ ಬೋಟ್‌‍ ಓಡಿಸಲು ಬಳಸುತ್ತಿದ್ದಾರೆ. ನೋಡಿದಿರಾ? ಒಬ್ಬ ಮಾನವ ಜೀವಿಯು ತನ್ನ ದಿವ್ಯ ಪ್ರಜ್ಞೆಯನ್ನು ಮರಳಿ ಪಡೆಯಲು ಪ್ರತಿ ಕ್ಷಣವನ್ನೂ ಬಳಸಿಕೊಳ್ಳಬೇಕು. ಒಂದು ಕ್ಷಣವೂ ವ್ಯರ್ಥವಾಗಬಾರದು. ಆದರೆ ಈ ಜನರು ಕಾಲಹರಣಕ್ಕೆ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.

ನಿಜ, ಅಮೆರಿಕನ್ನರು ಅತ್ಯುತ್ತಮ ತಾಂತ್ರಿಕ ಪ್ರಗತಿಯಿಂದ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಮಾಡುತ್ತಿರುವುದು ಕುರುಡು. ನೀವು ಒಳ್ಳೆಯ ಚಾಲಕರಾಗಿರಬಹುದು. ಆದರೆ ನೀವು ಅಂಧರಾಗಿದ್ದರೆ ಹೇಗೆ ವಾಹನವನ್ನು ಚಲಿಸುವಿರಿ? ನೀವು ಅಪಘಾತ ಮಾಡುವಿರಷ್ಟೆ. ಆದುದರಿಂದ ಅಮೆರಿಕದ ಜನರು ಆಧ್ಯಾತ್ಮಿಕವಾಗಿ ತಮ್ಮ ಕಣ್ಣನ್ನು ತೆರೆಯಬೇಕು. ಅದರಿಂದ ಅವರ ಉತ್ತಮ ಚಾಲನೆಯ ಸಾಮರ್ಥ್ಯವು ಸದ್ಬಳಕೆಯಾಗುತ್ತದೆ. ಈಗ ಅವರು ಸೂಕ್ಷ್ಮ ದರ್ಶಕ ಯಂತ್ರದ ಮೂಲಕ ನೋಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ತಮ್ಮದೇ ಆಧ್ಯಾತ್ಮಿಕ ಪರಿಚಯದ ಬಗೆಗೆ ಅಂಧರಾಗಿರುವವರೆಗೂ ಅವರು ಏನನ್ನು ತಾನೇ ನೋಡುತ್ತಾರೆ? ಅವರ ಬಳಿ ಸೂಕ್ಷ್ಮ ದರ್ಶಕ ಯಂತ್ರಗಳು ಅಥವಾ ಈ ಯಂತ್ರ ಅಥವಾ ಆ ಯಂತ್ರ ಇರಬಹುದು. ಆದರೆ ಅವರು ಕುರುಡರು. ಅದು ಅವರಿಗೆ ಗೊತ್ತಿಲ್ಲ.

ಶಿಷ್ಯ : ಬಹಳಷ್ಟು ಅಮೆರಿಕನ್ನರು ಆತ್ಮ ಸಾಕ್ಷಾತ್ಕಾರಕ್ಕಿಂತ ಕುಟುಂಬವನ್ನು ಬೆಳೆಸುವುದರಲ್ಲಿಯೇ ಹೆಚ್ಚು ಆಸಕ್ತರಾಗಿರುವಂತೆ ಕಾಣುತ್ತದೆ.

ಶ್ರೀಲ ಪ್ರಭುಪಾದ : ಕೃಷ್ಣಪ್ರಜ್ಞೆಗೆ ಕೌಟುಂಬಿಕ ಜೀವನದಿಂದ ಯಾವುದೇ ರೀತಿಯಲ್ಲಿಯೂ ಅಡಚಣೆಯುಂಟಾಗುವುದಿಲ್ಲ. ಅಹೈತುಕಿ ಅಪ್ರತಿಹತ. ನೀವು ನಿಷ್ಠಾವಂತರಾಗಿದ್ದರೆ ಭಗವತ್‌‍ ಪ್ರಜ್ಞೆಗೆ ಯಾವುದರಿಂದಲೂ ಪ್ರತಿರೋಧವು ಸಾಧ್ಯವಾಗದು. ಯಾವುದೇ ಸಂದರ್ಭದಲ್ಲಿಯೂ ನೀವು ತೊಡಗಿಕೊಂಡಿರಬಹುದು. ನಿಮ್ಮದೇ ರೀತಿಯಲ್ಲಿ ನೀವು ಕೃಷ್ಣಪ್ರಜ್ಞೆಯನ್ನು ಕಾರ್ಯಗತಗೊಳಿಸಬಹುದು – ಪ್ರಾಣೈರ್‌‍ ಅರ್ಥೈರ್‌‍ ದಿಯಾ ವಾಚಾ – ನಿಮ್ಮ ಬದುಕಿನಿಂದ, ನಿಮ್ಮ ಹಣದಿಂದ, ನಿಮ್ಮ ಬುದ್ಧಿಯಿಂದ ಮತ್ತು ನಿಮ್ಮ ಮಾತಿನಿಂದ. ಆದುದರಿಂದ, ನೀವು ಗೃಹಸ್ಥರಾಗಲು ಬಯಸಿದರೆ, ನಿಮಗೆ ದಿನದ 24 ಗಂಟೆಗಳನ್ನು ವಿನಿಯೋಗಿಸಲು ಸಾಧ್ಯವಾಗದಿದ್ದರೆ, ಹಣ ಸಂಪಾದಿಸಿ ಮತ್ತು ಕೃಷ್ಣಪ್ರಜ್ಞೆಯನ್ನು ಹರಡಲು ಅದನ್ನು ಬಳಸಿ. ನಿಮಗೆ ಹಣ ಸಂಪಾದಿಸಲು ಸಾಧ್ಯವಾಗಿದ್ದರೆ, ನಿಮ್ಮ ಬುದ್ಧಿಯನ್ನು ಉಪಯೋಗಿಸಿ. ಮಾಡಲು ಎಷ್ಟೊಂದು ಬೌದ್ಧಿಕ ಕೆಲಸಗಳಿವೆ – ಪ್ರಕಟಣೆ, ಸಂಶೋಧನೆ ಇತ್ಯಾದಿ. ಅದನ್ನು ಮಾಡಲು ಸಾಧ್ಯವಾಗದಿದ್ದರೆ ಕೃಷ್ಣನನ್ನು ಕುರಿತು ಜನರಿಗೆ ತಿಳಿಸಲು ನಿಮ್ಮ ಮಾತುಗಳನ್ನು ಬಳಸಿ. ನೀವು ಎಲ್ಲೇ ಇದ್ದರೂ, ಯಾರಿಗಾದರೂ ಸರಿ ಸುಮ್ಮನೆ ಹೇಳಿ ಬಿಡಿ, “ಕೃಷ್ಣನು ದೇವೋತ್ತಮ ಪರಮ ಪುರುಷ. ಕೃಷ್ಣನಿಗೆ ನಿಮ್ಮ ಪ್ರಣಾಮಗಳನ್ನು ಸಲ್ಲಿಸಿ.” ಮುಗಿಯಿತಪ್ಪ.

ಆದುದರಿಂದ ಅವಕಾಶಗಳಿಗೆಲ್ಲಿ ಕೊರತೆ? ಯಾವುದೇ ಸ್ಥಾನದಿಂದ ನೀವು ಕೃಷ್ಣನಿಗೆ ಸೇವೆ ಸಲ್ಲಿಸಬಹುದು, ನಿಮಗೆ ಸೇವೆ ಸಲ್ಲಿಸುವ ಮನಸ್ಸಿದ್ದರೆ. ಆದರೆ ನಿಮ್ಮ ಸೇವೆಯಲ್ಲಿ ಕೃಷ್ಣನನ್ನು ತೊಡಗಿಸಿಕೊಳ್ಳಬೇಕೆಂಬ ಬಯಕೆ ನಿಮಗಿದ್ದರೆ, ಅದು ಪ್ರಮಾದ, ಅವಿವೇಕ. ಜನರು ಚರ್ಚ್‌‍ ಗೆ ಹೋಗಿ ಕೇಳಿಕೊಳ್ಳುತ್ತಾರೆ, “ದೇವರೇ, ನಮಗೆ ಸೇವೆ ಮಾಡು, ನಮಗೆ ನಮ್ಮ ನಿತ್ಯದ ಆಹಾರ ಕೊಡು.”

ಜನರು ತಮ್ಮ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ವಾಸ್ತವವಾಗಿ ಸಮಸ್ಯೆಗಳೇ ಇಲ್ಲ. ಈಶಾವಾಸ್ಯಂ ಇದಂ ಸರ್ವಂ : ಭಗವಂತನು ಎಲ್ಲವನ್ನೂ ವ್ಯವಸ್ಥೆ ಮಾಡಿದ್ದಾನೆ. ಅವನು ಎಲ್ಲವನ್ನೂ ಪರಿಪೂರ್ಣ ಮತ್ತು ಸಂಪೂರ್ಣ ಮಾಡಿದ್ದಾನೆ. ನೋಡಿ, ಪಕ್ಷಿಗಳಿಗೆ ಎಷ್ಟೊಂದು ಹಣ್ಣುಗಳಿವೆ – ಸಮೃದ್ಧವಾಗಿ ಪೂರೈಸಲಾಗಿದೆ. ಪೂರ್ಣಂ ಇದಂ : ಕೃಷ್ಣನು ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಎಲ್ಲವನ್ನೂ ಪೂರೈಸಿದ್ದಾನೆ. ಆದರೆ ಈ ಮೂರ್ಖರು ಕುರುಡರು – ಅವರು ಇದನ್ನು ನೋಡುವುದಿಲ್ಲ. ಅವರು “ಹೊಂದಾಣಿಕೆ”ಗೆ ಪ್ರಯತ್ನಿಸುತ್ತಿದ್ದಾರೆ. ಅವರಿಗೆ “ಹೊಂದಾಣಿಕೆ” ಮಾಡಿಕೊಳ್ಳುವ ಅಗತ್ಯವಾದರೂ ಏನಿದೆ? ಈಗಾಗಲೇ ಎಲ್ಲವೂ ಸಾಕಷ್ಟಿದೆ. ಇದು ಜನರು ಕೇವಲ ದುರುಪಯೋಗಪಡಿಸಿಕೊಳ್ಳುತ್ತಿರುವುದು. ಅವರ ಬಳಿ ಈಗಾಗಲೇ ಭೂಮಿ ಇದೆ, ಬುದ್ಧಿ ಇದೆ – ಎಲ್ಲವೂ ಸಾಕಷ್ಟು ಇದೆ.

ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಎಷ್ಟೊಂದು ಭೂಮಿ ಇದೆ – ಪ್ರಕೃತಿಯು ಧಾರಾಳವಾಗಿ ನೀಡಿರುವ ಬೆಳೆಯ ಮೇಲೆ ಅವಲಂಬಿತರಾಗುವ ಬದಲು ಅವರು ಕೊಲ್ಲಲೆಂದೇ ಜಾನುವಾರುಗಳನ್ನು ಬೆಳೆಸುತ್ತಿದ್ದಾರೆ. ಇದು ಅವರ ಬುದ್ಧಿಮತ್ತೆ. ಆರೋಗ್ಯಕ್ಕೆ ಹಾನಿಕರ ಎನ್ನುವುದು ತಿಳಿದಿದ್ದರೂ ಕೂಡ ಜನರು ಕಾಫಿ, ಚಹಾ ಮತ್ತು ತಂಬಾಕನ್ನು ಬೆಳೆಯುತ್ತಿದ್ದಾರೆ. ವಿಶ್ವದ ಕೆಲವು ಭಾಗಗಳಲ್ಲಿ ಜನರು ಆಹಾರ ಧಾನ್ಯಕ್ಕಾಗಿ ಹಾತೊರೆಯುತ್ತ ಸಾಯುತ್ತಿದ್ದಾರೆ, ಆದರೂ ಇತರ ಭಾಗಗಳಲ್ಲಿ ಜನರು ದುರಂತ ಮತ್ತು ಸಾವನ್ನಷ್ಟೇ ತರುವ ತಂಬಾಕನ್ನು ಬೆಳೆಯುತ್ತಿದ್ದಾರೆ. ಇದು ಅವರ ಬುದ್ಧಿಮತ್ತೆ. ಸಮಸ್ಯೆ ಏನೆಂದರೆ, ಈ ಜನ್ಮ ಇರುವುದು ಭಗವಂತನನ್ನು ಅರ್ಥಮಾಡಿಕೊಳ್ಳಲೆಂದು ಎನ್ನುವುದು ಈ ಮೂರ್ಖರಿಗೆ ಗೊತ್ತಿಲ್ಲ. ಯಾರನ್ನಾದರೂ ಕೇಳಿ ನೋಡಿ. ಯಾರಿಗೂ ತಿಳಿಯದು. ಅವರು ಅಂತಹ ಮೂರ್ಖರು. ಅವರು ಶ್ವಾನಗಳಿಗಾಗಿ ಎಷ್ಟೊಂದು ಕಾಳಜಿ ವಹಿಸುತ್ತಿರುವುದನ್ನು ನೀವು ನೋಡಿಲ್ಲವೇ? ಅವರು ಅಂಧರು – ತಾವು ಭಗವತ್‌‍ ಪ್ರಜ್ಞೆಯವರೇ ಅಥವಾ ಶ್ವಾನಪ್ರಜ್ಞೆಯವರೇ ಎನ್ನುವುದು ಅವರಿಗೆ ಗೊತ್ತಿಲ್ಲ. ನಾಯಿಯು ನಾಲ್ಕು ಕಾಲುಗಳಿಂದ ಓಡುತ್ತದೆ. ಆದರೆ ನಾಲ್ಕು ಚಕ್ರಗಳ ಕಾರಿನಲ್ಲಿ ಓಡುವ ಜನರು ತಾವು ಪ್ರಗತಿ ಸಾಧಿಸಿದ್ದೇವೆ ಎಂದು ಭಾವಿಸುತ್ತಾರೆ. ತಾವು ನಾಗರಿಕರಾಗಿದ್ದೇವೆ ಎಂದು ಅವರು ಭಾವಿಸುತ್ತಾರೆ. ಆದರೆ ಅವರ ವ್ಯವಹಾರವು ಓಡುವುದಾಗಿದೆ. ಅಷ್ಟೆ.

ಶಿಷ್ಯ : ಓಡುವ ಉದ್ದೇಶವು ಅದೇ – ತಿನ್ನುವುದು, ಮಲಗುವುದು, ಸಂಭೋಗಿಸುವುದು ಮತ್ತು ರಕ್ಷಿಸಿಕೊಳ್ಳುವುದು.

ಶ್ರೀಲ ಪ್ರಭುಪಾದ : ಉದ್ದೇಶವು ಶ್ವಾನದಂತೆಯೇ ಆಗಿದ್ದರೆ ಕಾರಿನಲ್ಲಿ ಓಡುವುದರ ಪ್ರಯೋಜನವಾದರೂ ಏನು? ನಿಜ, ನೀವು ಕೃಷ್ಣಪ್ರಜ್ಞೆಯೊಂದಿಗೆ ಜನರ ಬಳಿಗೆ ಹೋಗಲು ಕಾರನ್ನು ಬಳಸಬಹುದು. ನೀವು ಎಲ್ಲವನ್ನೂ ಕೃಷ್ಣನಿಗಾಗಿ ಬಳಸಬಹದು. ಅದನ್ನೇ ನಾವು ಬೋಧಿಸುವುದು. ಒಂದು ಒಳ್ಳೆಯ ಕಾರು ಇದ್ದರೆ, ನಾನು ಅದನ್ನು ಏಕೆ ಖಂಡಿಸಲಿ? ಅದನ್ನು ಕೃಷ್ಣನಿಗಾಗಿ ಬಳಸಿ – ಆಗ ಅದು ಸರಿ. ಅದನ್ನು “ಬಿಟ್ಟುಬಿಡಿ” ಎಂದು ನಾವು ಹೇಳುವುದಿಲ್ಲ. ಭಗವಂತನು ನೀಡಿರುವ ಬುದ್ಧಿಯಿಂದ ನೀವು ಏನನ್ನಾದರೂ ಉತ್ಪಾದಿಸಿದ್ದರೆ, ನೀವು ಅದನ್ನು ಭಗವಂತನಿಗಾಗಿ ಬಳಸಿದರೆ ಅದು ಸರಿ. ಆದರೆ ನೀವು ಕೃಷ್ಣನಿಗಲ್ಲದೆ ಬೇರೆ ಉದ್ದೇಶಕ್ಕಾಗಿ ಬಳಸಿದರೆ ಅದು ತಪ್ಪು.

ಈ ಲೇಖನ ಶೇರ್ ಮಾಡಿ