ಆತ್ಮನ್ ಭಾವಯಸೇ ತಾನಿ ನ ಪರಾಭಾವಯನ್ ಸ್ವಯಮ್ ।
ಆತ್ಮ ಶಕ್ತಿಮವಷ್ಟಭ್ಯ ಊರ್ಣನಾಭಿರಿವಾಕ್ಲಮಃ ॥
ಜೇಡರ ಹುಳು ಹೇಗೆ ಸುಲಭವಾಗಿ ತನ್ನ ಬಲೆಯಿಂದಲೇ ಜಾಲವನ್ನು ನಿರ್ಮಿಸುವುದೋ ಮತ್ತು ಇತರರಿಂದ ಪರಾಭವಗೊಳ್ಳದೆ ತನ್ನ ಸೃಷ್ಟಿಶಕ್ತಿಯನ್ನು ಹೇಗೆ ಪ್ರಕಟಿಸುವುದೋ ಹಾಗೆ ನೀನು ಬೇರೊಬ್ಬರ ನೆರವಿಲ್ಲದೆ ಸ್ವಯಂ ಶಕ್ತಿಯಿಂದ ಸೃಷ್ಟಿಕಾರ್ಯ ಮಾಡುತ್ತೀಯೆ.
ಭಾಗವತ, 2.5.5

ಮಾನವ ರೂಪದಲ್ಲಿ ಬ್ರಹ್ಮನ್ ಅಥವಾ ಪರಮ ಸತ್ಯ ಏನೆಂದು ವಿಚಾರಿಸಿರಿ. ಬ್ರಹ್ಮ ಜಿಜ್ಞಾಸೆ ಕುರಿತ ಈ ವಿಷಯದ ಬಗೆಗೆ ಶ್ರೀಮದ್ ಭಾಗವತದಲ್ಲಿ ತುಂಬ ಚೆನ್ನಾಗಿ ವಿವರಿಸಲಾಗಿದೆ. ಇಡೀ ವಿಶ್ವವನ್ನು ಆಳುತ್ತಿದ್ದ ಪರೀಕ್ಷಿತನು ಆದರ್ಶ ಮಹಾರಾಜ. ಅದು ಏನಾಯಿತೆಂದರೆ ಏಳು ದಿನಗಳೊಳಗೆ ದೇಹ ತ್ಯಾಗ ಮಾಡುವಂತೆ ಅವನು ಶಪಿಸಲ್ಪಟ್ಟಿದ್ದ. ಅವನು ಈ ಶಾಪಕ್ಕೆ ಪ್ರತಿಯಾಗಿ ಕ್ರಮ ರೂಪಿಸಿಕೊಳ್ಳಬಹುದಿತ್ತು. ಆದರೆ ಅವನು ಶಾಪವನ್ನು ಸ್ವೀಕರಿಸಿ ಸಾವಿಗೆ ಸಿದ್ಧತೆ ಮಾಡಿಕೊಳ್ಳಲು ನಿರ್ಧರಿಸಿದ. ಅವನು ಸಂತರನ್ನು ಭೇಟಿಯಾಗಿ ಈ ಬಗೆಗೆ ವಿಚಾರಿಸಿದ. ಸಾವಿಗೆ ಸಿದ್ಧತೆ ನಡೆಸಲು, ಆತ್ಮ ಸಾಕ್ಷಾತ್ಕಾರ ಪಡೆಯಲು, ಏಳು ದಿನ ತೀರಾ ಕಡಮೆಯಾಯಿತೆಂದು ಅವರೆಲ್ಲ ಆತಂಕ ವ್ಯಕ್ತಪಡಿಸಿದರು. ಆತ್ಮ ವಿದ್ಯೆ ಅಥವಾ ಬ್ರಹ್ಮ ವಿದ್ಯೆಯನ್ನು ಅರ್ಥಮಾಡಿಕೊಳ್ಳಲೆಂದೇ ಮಾನವ ಜೀವನ ಇರುವುದು.
ಆ ಸಭೆಗೆ ಶುಕದೇವ ಗೋಸ್ವಾಮಿ ಅವರು ಪ್ರವೇಶಿಸುವವರೆಗೆ ಆ ಸಂತರಾರಿಗೂ ಪರೀಕ್ಷಿತ ಮಹಾರಾಜನ ಪ್ರಶ್ನೆಗೆ ಸೂಕ್ತ ಉತ್ತರ ನೀಡಲಾಗಲಿಲ್ಲ. ಅಲ್ಲಿ ನೆರೆದಿದ್ದ ಸಂತರೆಲ್ಲರೂ ಶುಕದೇವ ಗೋಸ್ವಾಮಿ ಅವರನ್ನು ಶ್ರೇಷ್ಠ ಅಲೌಕಿಕವಾದಿಗಳೆಂದು ಪರಿಗಣಿಸಿದ್ದರು. ತನ್ನ ಪ್ರಶ್ನೆಗೆ ಸರಿಯಾದ ಉತ್ತರ ಪಡೆಯಲು ತವಕದಿಂದ ಇದ್ದ ಪರೀಕ್ಷಿತನು ಅದೇ ವಿಷಯವನ್ನು ಶುಕದೇವ ಗೋಸ್ವಾಮಿ ಅವರಲ್ಲಿಯೂ ಪ್ರಸ್ತಾಪಿಸಿದ. ಅವರು ಆ ಪ್ರಶ್ನೆಗೆ ಉತ್ತರಿಸಲಾರಂಭಿಸಿದಾಗ, ಒಂದರಿಂದ ಮತ್ತೊಂದು ಪ್ರಶ್ನೆ ಉದ್ಭವಿಸಿತು. ಕೊನೆಗೆ ಅದು ಅವರು ಇಡೀ ಭಾಗವತದ ಬಗೆಗೆ ಮಾತನಾಡಲು ಕಾರಣವಾಯಿತು.

ಶುಕದೇವ ಗೋಸ್ವಾಮಿ ಅವರು ಭಾಗವತದಲ್ಲಿ ನಿರೂಪಿಸಿರುವಂತೆ ಆತ್ಮದ ಬಗೆಗೆ ಚರ್ಚಿಸುವುದೇ ಈ ಸಂವಾದದ ಉದ್ದೇಶವಾಗಿದೆ. ಸಾಮಾನ್ಯವಾಗಿ ಎಲ್ಲರೂ ಸ್ವಯಂ ಎಂದರೆ `ನಾನು,’ ವೈಯಕ್ತಿಕ ಎಂದು ಭಾವಿಸುತ್ತಾರೆ. ಆದರೆ ಇಲ್ಲಿ ನಿಜವಾದ ಸ್ವಯಂ ಆತ್ಮ ಎಂದರೆ ಕೃಷ್ಣ ಎಂದು ವಿವರಿಸಲಾಗಿದೆ. ಆದುದರಿಂದ ಭಾಗವತವನ್ನು ಕೃಷ್ಣ ಸಂಹಿತೆ ಎಂದು ಕರೆಯುತ್ತಾರೆ, ಪೂರ್ಣವಾಗಿ ಕೃಷ್ಣನನ್ನು ಕುರಿತು ಹೇಳುವುದು. ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಆದುದರಿಂದ ಶುಕದೇವ ಗೋಸ್ವಾಮಿ ಅವರು ಹಿನ್ನೆಲೆಯನ್ನು ಸ್ಥಾಪಿಸಿದ್ದಾರೆ. ಭಗವದ್ಗೀತೆ ಮತ್ತು ಭಾಗವತದ ಕರ್ತೃ ವ್ಯಾಸದೇವ ಅವರು ವಾಸ್ತವ ವಿಷಯಗಳನ್ನು ವಿಸ್ತರಿಸುವ ಮುನ್ನ ಧರ್ಮ ಗ್ರಂಥಗಳ ಸ್ಥಾನವನ್ನು ದೃಢಪಡಿಸುತ್ತಾರೆ. ಕೃಷ್ಣನು ಭಗವದ್ಗೀತೆ ಕುರಿತು ಮಾತನಾಡುವ ಮುನ್ನವೇ, ಆತ್ಮ ಜ್ಞಾನವನ್ನು ಪಡೆಯಲು ಅರ್ಜುನ ಅರ್ಹ ವ್ಯಕ್ತಿ ಎಂದು ಸಾರಲಾಗಿದೆ. ಏಕೆಂದರೆ, ಅವನು ದೇವೋತ್ತಮ ಪರಮ ಪುರುಷನ ಭಕ್ತಿ ಸೇವೆಯಲ್ಲಿ ನಿರತನಾಗಿದ್ದ. ಅದೇ ರೀತಿ ಪರೀಕ್ಷಿತ ಮಹಾರಾಜನು ಭಾಗವತವನ್ನು ಕೇಳುವ ಮುನ್ನ ಅವನೇ ಶುಕದೇವ ಗೋಸ್ವಾಮಿ ಅವರಿಂದ ಕೃಷ್ಣನ ಬಗೆಗೆ ಕೇಳಲು ಅರ್ಹ ಎಂದು ಸ್ಪಷ್ಟಪಡಿಸಲಾಗಿತ್ತು.
ಈ ಜ್ಞಾನವನ್ನು ಪಡೆಯಲು ವ್ಯಕ್ತಿ ಸ್ವಯಂ ಸಿದ್ಧನಾಗಬೇಕು. ಆದುದರಿಂದಲೇ ವೃತ್ತಿಪರ ಎನಿಸಿಕೊಳ್ಳುವವರಿಂದ ಅಷ್ಟೊಂದು ಅವ್ಯವಸ್ಥೆ ಸೃಷ್ಟಿಯಾಗಿರುವುದು. ಅವರು ಭಗವದ್ಗೀತೆಗೆ ಎಲ್ಲ ರೀತಿಯ ವ್ಯಾಖ್ಯಾನ ನೀಡುತ್ತಾರೆ. ಕೃಷ್ಣನು ಅರ್ಜುನನಿಗೆ ವಾಸ್ತವವಾಗಿ ಹೇಳಿದ್ದೇನು ಎಂಬುವುದನ್ನು ಅವರು ವಿವರಿಸುವುದಿಲ್ಲ. ಅವರು ತಮ್ಮ ಪ್ರೇಕ್ಷಕರನ್ನು ರಂಜಿಸಬಲ್ಲರು, ಆದರೆ ಅವರು ಕೃಷ್ಣನ ಅರಿವು ಉಂಟುಮಾಡಲಾರರು.

ಆದುದರಿಂದ ಇಂತಹ ವಿಷಯಗಳನ್ನು ಭಕ್ತರ ಸಂಗಡ ಕೇಳಲು ಕಾತರದಿಂದ ಇರಬೇಕು. ಇದಕ್ಕಾಗಿ ನೀವು ಪರಿಶುದ್ಧ ಭಕ್ತರ ಬಳಿಗೆ ಹೋಗಬೇಕು. ಶುಕದೇವ ಗೋಸ್ವಾಮಿ ಅವರು ಇದಕ್ಕೆ ಅರ್ಹರು, ಏಕೆಂದರೆ ಅವರು ಇದನ್ನು ವ್ಯಾಸದೇವರಿಂದ ಕೇಳಿದರು. ವ್ಯಾಸದೇವ ಇದನ್ನು ನಾರದರಿಂದ ಕೇಳಿದ್ದರಿಂದ ಇದನ್ನು ಬೋಧಿಸಲು ಅವರು ಅರ್ಹ. ಬ್ರಹ್ಮನಿಂದ ಕೇಳಿದ್ದರಿಂದ ನಾರದ ಅರ್ಹ. ಬ್ರಹ್ಮ ಇದನ್ನು ನೇರವಾಗಿ ಭಗವಂತನಿಂದಲೇ ಕೇಳಿದ. ನಾವೀಗ ಪರಮ ಸತ್ಯ ಏನೆಂದು ಕೇಳೋಣ. ತತ್‌ಕ್ಷಣ ನೀಡಿದ ಉತ್ತರವೆಂದರೆ, ಜನ್ಮಾದಿ ಅಸ್ಯ ಯತೋ – ಪ್ರತಿಯೊಂದಕ್ಕೂ ಪರಮ ಸತ್ಯವೇ ಅಂತಿಮ. ಮೂಲ. ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, ಪ್ರತಿಯೊಂದರ ಅಂತಿಮ ಮೂಲ ನಾನೇ, ನನ್ನಿಂದಲೇ ಎಲ್ಲವೂ ಹೊರಹೊಮ್ಮುತ್ತದೆ ಮತ್ತಃ ಸರ್ವಂ ಪ್ರವರ್ತತೇ. ಪರಮ ಸತ್ಯವನ್ನು ಬ್ರಹ್ಮನ್ ಎಂದು ಧ್ಯಾನಿಸುವುದು ಸಾಯುತ್ತಿರುವ ವ್ಯಕ್ತಿಯ ಪ್ರಥಮ ಕರ್ತವ್ಯ ಎಂದು ಶುಕದೇವ ಗೋಸ್ವಾಮಿ ಅವರು ವಿವರಿಸುತ್ತಾರೆ. ಇದನ್ನು ಕೇಳಿದ ಪರೀಕ್ಷಿತ ಮಹಾರಾಜನಿಗೆ ಭಗವಂತನು ತನ್ನ ವೈಯಕ್ತಿಕ ಶಕ್ತಿಗಳಿಂದ ಈ ಎಲ್ಲ ಐಹಿಕ ವಿಶ್ವಗಳನ್ನು ಹೇಗೆ ಸೃಷ್ಟಿಸಿದ ಎಂಬುದನ್ನು ತಿಳಿಯಬೇಕೆನಿಸುತ್ತದೆ.
ಪ್ರಾರ್ಥನೆಯಲ್ಲಿ ಸುಳಿವು
ಶುಕದೇವ ಗೋಸ್ವಾಮಿಯವರು ದೇವೋತ್ತಮ ಶ್ರೀ ಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಲು ಆರಂಭಿಸಿದರು. ಶ್ರೀ ಕೃಷ್ಣನು ಯಾವ ರೀತಿ ಸೃಷ್ಟಿಸುತ್ತಾನೆಂದರೆ ಅವನು ಹಿನ್ನೆಲೆಯಲ್ಲಿಯೇ ಉಳಿದು ತನ್ನ ಪ್ರತಿನಿಗಳ ಮೂಲಕ ಸೃಷ್ಟಿಸುತ್ತಾನೆಂಬ ಸುಳಿವನ್ನು ಅವರು ಈ ಪ್ರಾರ್ಥನೆಯಲ್ಲಿ ನೀಡಿದ್ದಾರೆ. ನಾರದರು ಬ್ರಹ್ಮನನ್ನು ಇದೇ ರೀತಿಯ ಪ್ರಶ್ನೆಗಳನ್ನು ಕೇಳಿದ ಉದಾಹರಣೆ ನೀಡುವ ಮೂಲಕ ಶುಕದೇವ ಗೋಸ್ವಾಮಿ ಅವರು ಮೊದಲು ಸೃಷ್ಟಿಯ ವಿಧಾನವನ್ನು ವಿವರಿಸಿದ್ದಾರೆ. ಏಕೆಂದರೆ, ಬ್ರಹ್ಮನು ಮೊದಲ ಜೀವ ಸೃಷ್ಟಿ ಮತ್ತು ಅವನು ಇಡೀ ಜಗತ್ತನ್ನು ಸೃಷ್ಟಿಸಿದ ಎಂಬುವುದು ಜನರಿಗೆ ತಿಳಿದಿದೆ. ಈ ಮೇಲಿನ ಶ್ಲೋಕವು ನಾರದರು ಬ್ರಹ್ಮನಿಗೆ ಕೇಳಿದ ಪ್ರಶ್ನೆ. ಜೇಡವು ತನ್ನ ಜಾಲವನ್ನು ಸೃಷ್ಟಿಸುತ್ತದೆ ಮತ್ತು ಸೃಷ್ಟಿಯ ತನ್ನ ಶಕ್ತಿಯನ್ನು ಪ್ರಕಟಿಸುತ್ತದೆ. ಅದೇ ರೀತಿ, ಅವನದೇ ಶಕ್ತಿ ಬಳಸಿ ಅವನು ಎಲ್ಲವನ್ನೂ ಸೃಷ್ಟಿಸುತ್ತಾನೆಂದು ಕಾಣುತ್ತದೆ ಎಂದು ನಾರದರು ಬ್ರಹ್ಮನಿಗೆ ಹೇಳುತ್ತಿದ್ದಾರೆ.

ಬ್ರಹ್ಮನು ಬೇರಾರನ್ನೋ ಧ್ಯಾನಿಸುತ್ತಿದ್ದಾನೆಂದು ನಾರದರಿಗೆ ಗೊತ್ತು. ಆದುದರಿಂದ ಅವರ ಪ್ರಶ್ನೆ ಒಂದು ರೀತಿಯಲ್ಲಿ “ನೀನು ಪೂಜಿಸುತ್ತಿರುವ ಆ ಬೇರಾರೋ ಯಾರು” ಎಂದು ಕೇಳುವುದಾಗಿದೆ. ಈ ಅಂತಿಮ ಮೂಲದ ಪ್ರಶ್ನೆಯನ್ನು ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾಗಿದೆ. ಜನರಿಗೆ ತಮ್ಮ ದೇಹದ ತತ್‌ಕ್ಷಣದ ಅಗತ್ಯಗಳ ಬಗೆಗೆ ಆಸಕ್ತಿ, ಅವರು ಆತ್ಮ ಜಿಜ್ಞಾಸೆ ಮಾಡುವುದಿಲ್ಲ, ಬ್ರಹ್ಮ ಜಿಜ್ಞಾಸೆ ಅಲ್ಲಿ ಇಲ್ಲ. ಅವರು ಈ ಲೌಕಿಕ ಜಗತ್ತಿನ ಒಂದು ದೇಹದಿಂದ ಮತ್ತೊಂದು ದೇಹದತ್ತ ಅಲೆದಾಡುತ್ತಿದ್ದಾರೆ ಮತ್ತು ಜನ್ಮ, ವೃದ್ಧಾಪ್ಯ, ರೋಗ, ಸಾವು, ಪುನಃ ಜನ್ಮ ಇದನ್ನೆಲ್ಲ ಅನುಭವಿಸುತ್ತಿದ್ದಾರೆ. ಆತ್ಮದ ಸ್ವಭಾವ – ಆತ್ಮ ವಿದ್ಯಾ ಬ್ರಹ್ಮ ಜಿಜ್ಞಾಸ – ಕುರಿತಂತೆ ವಿಚಾರಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅವಕಾಶ ಮಾನವ ಜೀವಿಗಳಿಗೆ ಮಾತ್ರವಿದೆ. ಕೃಷ್ಣನು ಗೀತೆಯ ಒಂದು ಶ್ಲೋಕದಲ್ಲಿ ಇದನ್ನು ಪರಿಸಮಾಪ್ತಗೊಳಿಸುತ್ತಾನೆ :
ನಾಸತೋ ವಿದ್ಯತೇ ಭಾವೋ ನಾ ಭಾವೋ ವಿದ್ಯತೇ ಸತಃ ।
ಉಭಯೋರಪಿ ದೃಷ್ಟೋ ಅಂತಸ್ತ್ವ ಅನಯೋಸತತ್ತ್ವ ದರ್ಶಿಭಿಃ ॥
ಆತ್ಮವು ಶಾಶ್ವತ ಮತ್ತು ವಸ್ತುವು ತಾತ್ಕಾಲಿಕ ಎಂಬ ಅಂಶವನ್ನು ಸತ್ಯಾನ್ವೇಷಕರು ಸ್ಪಷ್ಟಪಡಿಸಿದ್ದಾರೆ. ಜನರು ಇಂದ್ರಿಯ ಲೋಲುಪತೆಯಲ್ಲಿ ಮಗ್ನರಾಗಿದ್ದಾರೆ. ಆಧ್ಯಾತ್ಮಿಕ ವಿಷಯವು ವೇದಾಂತ ಸೂತ್ರದ ಆರಂಭ – ಅಥಾತೋ ಬ್ರಹ್ಮ ಜಿಜ್ಞಾಸಾ. ಭಾಗವತವು ಜನ್ಮಾದಿ ಅಸ್ಯ ಯತೋ – ಅಂತಿಮವಾಗಿ ಪರಮ ಸತ್ಯವೇ ಎಲ್ಲದರ ಮೂಲ ಎಂದು ಪ್ರಾರಂಭವಾಗುತ್ತದೆ.
ರಸವತ್ತಾದ ಭಾಗವತ
ವೇದಾಂತ ಸೂತ್ರವನ್ನು ವಿವರಿಸಲು ವ್ಯಾಸದೇವ ಭಾಗವತವನ್ನು ರಸವತ್ತಾಗಿ ಬರೆದರು, ಪಿಬತ ಭಾಗವತಂ ರಸಂ ಆಲಯಂ. ಈ ಭಾಗವತದಲ್ಲಿ ಸತ್ಯ, ಪೂರ್ಣವಾಗಿ ಅಮೃತವಿದೆ. ಈ ಅಮೃತವು ದೇವೋತ್ತಮ ಪರಮ ಪುರುಷನ ಲೀಲೆ. ಇದು ವೇದಾಂತ ಸೂತ್ರದಲ್ಲಿ ಇಲ್ಲ. ಆದುದರಿಂದ ವೇದಾಂತ ಸೂತ್ರದಲ್ಲಿ ಕೃಷ್ಣನ ಬಗೆಗೆ ಸತ್ಯವಿದೆ, ಆದರೆ ಅದು ತುಂಬ ನೀರಸ. ಹೀಗಾಗಿ ಆರಂಭದಲ್ಲೇ ವ್ಯಾಸದೇವ ಹೇಳುತ್ತಾರೆ, ಮರದ ಸತ್ತ್ವವು ಬೀಜದಲ್ಲಿದೆ. ಆದರೆ ಬೀಜವು ಮರದ ರಸ ಭಾಗವಲ್ಲ. ಮಾವಿನ ಮರವನ್ನು ಬೆಳೆಸಿದ ಮೇಲೆ ಅದರ ಬೀಜ ದೊರೆತರೆ ಯಾರೂ ಸಂತೃಪ್ತರಾಗುವುದಿಲ್ಲ. ಮರದ ಅತ್ಯಂತ ಸವಿಯ ಭಾಗವೆಂದರೆ ರಸ ತುಂಬಿದ ಸಿಹಿಯಾದ ಮಾವಿನ ಹಣ್ಣು.
ಬದ್ಧಾತ್ಮಗಳಷ್ಟೇ ಅಲ್ಲ, ಮುಕ್ತ ಆತ್ಮಗಳೂ ಕೂಡ ಶ್ರೀ ಕೃಷ್ಣನ ಬಗೆಗೆ ಕೇಳುವುದನ್ನು ಆಸ್ವಾದಿಸುತ್ತಾರೆ. ಮಾನವ ಜೀವಿಯ ಎಲ್ಲ ವರ್ಗಗಳೂ ಭಾಗವತವನ್ನು ಆಸ್ವಾದಿಸಬಹುದು. ಆದರೆ, ಇದಾವುದೂ ಕರ್ಣಾನಂದ ಕೊಡುವ ಕತೆಯಲ್ಲ. ಏಕೆಂದರೆ ಮಹಾಭಾರತದಲ್ಲಿಯೂ ಒಳ್ಳೆಯ ಕತೆಗಳಿವೆ, ಆದರೆ ಅವು ಭಾಗವತದಲ್ಲಿ ನಿರೂಪಿತವಾಗಿರುವಂತೆ ಪರಮ ಸತ್ಯವನ್ನು ನಿರೂಪಿಸಿಲ್ಲ. ಭಾಗವತವು ವಿವಿಧ ಸ್ಕಂಧಗಳ ಮೂಲಕ ವಿಷಯವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುತ್ತ ಹೋಗುತ್ತದೆ. 10ನೇ ಸ್ಕಂಧದವರೆಗೂ ಹಾಗೆ ಮುಂದುವರಿಯುತ್ತದೆ. 10ನೇ ಸ್ಕಂಧವು ಕೃಷ್ಣನ ಲೀಲೆಗಳ ವರ್ಣನೆಗೆ ಮೀಸಲಾಗಿದೆ. ಮೊದಲ ಒಂಬತ್ತು ಸ್ಕಂಧಗಳನ್ನು ಆಸ್ವಾದಿಸದೆಯೇ ನೀವು 10ನೇ ಸ್ಕಂಧವನ್ನು ಆನಂದಿಸಲಾರಿರಿ.

ಶುಕದೇವ ಗೋಸ್ವಾಮಿ ಮೊದಲು ಕೃಷ್ಣ ಯಾರೆಂದು ವಿವರಿಸುತ್ತ ಅವನ ಲೀಲೆಗಳನ್ನು ಆಸ್ವಾದಿಸಲು ಓದುಗರನ್ನು ಸಿದ್ಧಪಡಿಸುತ್ತಾರೆ. ಇಲ್ಲವಾದರೆ ಕೃಷ್ಣ ಒಬ್ಬ ಸಾಮಾನ್ಯ ಎಂದು ಜನರು ಭಾವಿಸಿಯಾರು. ಈಗ ನಮಗೆ ಪ್ರಸ್ತುತವಾಗಿರುವ ಈ ವಿಶ್ವವನ್ನು ಕೃಷ್ಣನು ಹೇಗೆ ಸೃಷ್ಟಿಸಿದ ಎಂಬುವುದರ ಮೂಲಕ ಅವನನ್ನು ಅರ್ಥ ಮಾಡಿಕೊಳ್ಳಲು ಮೊದಲ ಒಂಬತ್ತು ಸ್ಕಂಧಗಳು ವಿವರಿಸುತ್ತವೆ. ಅನಂತರ, ಕ್ರಮೇಣ ಅವನು ಹೇಗೆ ನಿರ್ವಹಿಸುತ್ತಾನೆ, ಹೇಗೆ ನಾಶ ಪಡಿಸುತ್ತಾನೆ ಎಂದು ವಿಷಯವನ್ನು ಅಭಿವೃದ್ಧಿಪಡಿಸಲಾಗಿದೆ. ವಿಶ್ವವನ್ನು ಸಂರಕ್ಷಿಸುವ ಸಂದರ್ಭದಲ್ಲಿ ಕೃಷ್ಣನು ವಿವಿಧ ರೂಪಗಳನ್ನು ತಾಳುತ್ತಾನೆ ಮತ್ತು ವಿವಿಧ ಲೀಲೆಗಳನ್ನು ತೋರುತ್ತಾನೆ ಎಂಬುವುದನ್ನು ಮೊದಲ 9 ಸ್ಕಂಧಗಳು ವರ್ಣಿಸುತ್ತವೆ. ಕೃಷ್ಣನಾಗಿ ಅವತರಿಸಿದಾಗ ಅವನು ಸೃಷ್ಟಿ, ಸಂರಕ್ಷಣೆ ಅಥವಾ ನಾಶಕ್ಕಾಗಿ ಬರುವುದಿಲ್ಲ. ಅವನು ಬರುವುದು ಬೇರೆಯ ಉದ್ದೇಶಕ್ಕಾಗಿ. ಅದನ್ನು 10ನೇ ಸ್ಕಂಧದಲ್ಲಿ ವಿವರಿಸಲಾಗಿದೆ. ಅವನ ಧಾಮಕ್ಕೆ ಹೋಗಲು ನಮ್ಮನ್ನು ಆಕರ್ಷಿಸಲು ಅವನು ಬರುತ್ತಾನೆ, ಧಾಮ್ನಾ ಸ್ವೇನ ಸದಾ ನಿರಸ್ತ ಕುಹಕಂ ಸತ್ಯಂ ಪರಂ ೕಮಹಿ – ಅದು ಈ ಲೌಕಿಕ ಜಗತ್ತಿಗೆ ಸಂಪೂರ್ಣ ಅಲೌಕಿಕ. ಮತ್ತು ಅಲ್ಲಿ ಅವನು ಶಾಶ್ವತವಾಗಿ ತನ್ನ ಭಕ್ತರ ಜೊತೆ ಲೀಲೆಯಲ್ಲಿ ತೊಡಗಿರುತ್ತಾನೆ ಮತ್ತು ತನ್ನ ಬಳಿ ಬಾ ಎಂದು ಕೃಷ್ಣ ಹೇಳುತ್ತಾರೆ. ಭಗವದ್ಗೀತೆಯಲ್ಲಿ ಕೂಡ ಕೃಷ್ಣ ಅದನ್ನೇ ಹೇಳಿದ್ದಾನೆ. ಆದರೆ ಭಾಗವತದಲ್ಲಿ ಕೃಷ್ಣನು, ಅಥವಾ ವ್ಯಾಸದೇವರು ಆ ಆನಂದದ ರೀತಿಯನ್ನು ನೀಡಿ ಆಹ್ವಾನಿಸುತ್ತಾನೆ. ಭಗವದ್ಗೀತೆಯಲ್ಲಿ ಆ ಆನಂದ ಏನೆಂಬುದನ್ನು ತಾತಿ್ತ್ವಕವಾಗಿ ವಿವರಿಸಿದ್ದರೆ ಭಾಗವತದಲ್ಲಿ ಅವನು ಕೃಷ್ಣನ ಧಾಮದಲ್ಲಿ ಭಕ್ತರು ಅನುಭವಿಸುತ್ತಿರುವ ಆನಂದದ ಸವಿಯ ಮಾದರಿಯನ್ನು ನೀಡುತ್ತಾರೆ.

ಕೃಷ್ಣನೇ ಸೃಷ್ಟಿಕರ್ತ, ಬ್ರಹ್ಮನಲ್ಲ ಎಂಬುದು ನಮಗೆ ಸ್ಪಷ್ಟವಾಗಿದೆ. ಮತ್ತು ಪರೀಕ್ಷಿತ ಮಹಾರಾಜನಿಗೆ ಆದಂತೆ ನಾವು ಕೃಷ್ಣನಲ್ಲಿ ಹೆಚ್ಚು ಆಸಕ್ತರಾಗಿದ್ದೇವೆ. ಉಳಿದೆಲ್ಲ ವೈದಿಕ ಧರ್ಮ ಗ್ರಂಥಗಳಲ್ಲಿ ಜನರ ಗಮನವನ್ನು ಮುಖ್ಯ ವಿಷಯದಿಂದ ಬೇರೆಡೆಗೆ ಸೆಳೆಯಲಾಗಿದೆ. ವೈದಿಕ ಸಾಹಿತ್ಯಗಳಲ್ಲಿ ವಿಷಯವು ಆತ್ಮ. ಏಕೆಂದರೆ ಅದರಲ್ಲಿ ನಮ್ಮ ಸಾಕ್ಷಾತ್ಕಾರಕ್ಕೆ ಸತ್ತ್ವವಿದೆ. ಭಾಗವತ ಅಥವಾ ಭಗವದ್ಗೀತೆ ಆತ್ಮದಿಂದ ತನ್ನ ದಿಕ್ಕು ಬದಲಿಸುವುದಿಲ್ಲ. ಭಗವದ್ಗೀತೆಯಲ್ಲಿ ಅರ್ಜುನ ಮತ್ತು ಭಾಗವತದಲ್ಲಿ ಪರೀಕ್ಷಿತ ಆತ್ಮದ ಬಗೆಗೆ ತಿಳಿಯಬಯಸಿದ್ದಾರೆ. ಮತ್ತು ಆ ಆತ್ಮ ಕೃಷ್ಣನೇ. ಆದುದರಿಂದ ಅವರು ಕೃಷ್ಣನ ಬಗೆಗೆ ತಿಳಿಯಬಯಸುತ್ತಾರೆ.